Saturday, May 10, 2025

ಅಮ್ಮನಾಗಿ ‘ನಾನು’ - MOTHER'S DAY

 Saturday, 10th May 2025


ನಾಳೆ ತಾಯಿಯಂದಿರ ದಿನ. ಇಷ್ಟು ವರ್ಷಗಳ ಕಾಲ ನನ್ನ ಅಂತರಂಗವನ್ನು ಯಾವಾಗಲೂ ಕುಕ್ಕಿ ಕೇಳಲ್ಪಡುತ್ತಿದ್ದ ಪ್ರಶ್ನೆ “ನನ್ನ ಮಕ್ಕಳಿಗೆ ನಾನು ಅಮ್ಮನಾಗಿ ಎಷ್ಟು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ್ದೇನೆ?” ಎನ್ನುವುದಾಗಿತ್ತು. ನನ್ನೊಳಗೆ ತುಂಬಾ ಗೊಂದಲ ಮೂಡಿಸುತ್ತಿದ್ದ ಪ್ರಶ್ನೆ ಇದಾಗಿತ್ತು. ಏಕೆಂದರೆ ತಾಯಿಯ ಪಾತ್ರ ನಿರ್ವಹಿಸುವಾಗ “ಹೀಗೇ ವರ್ತಿಸಬೇಕು/ಹೀಗೇ ನಿಭಾಯಿಸಬೇಕು” ಎನ್ನುವ ನಿರ್ದೇಶನ ಇರುವುದಿಲ್ಲವಲ್ಲ! ತನ್ನ ಮನಸ್ಸಿಗೆ ತಿಳಿದಂತೆ ಪ್ರತೀ ತಾಯಿಯು ವರ್ತಿಸುತ್ತಾಳೆ/ತಾಯಿಯಾಗಿ ನಡೆದುಕೊಳ್ಳುತ್ತಾಳೆ. ಪ್ರಪಂಚದಲ್ಲಿ ಎಲ್ಲಿ ಹುಡುಕಿದರೂ ಒಂದೇ ರೀತಿಯಲ್ಲಿ ಮಕ್ಕಳನ್ನು ಬೆಳೆಸಿದವರು ಅಥವಾ ತಾಯಿಯ ಪಾತ್ರವನ್ನು ನಿಭಾಯಿಸಿದವರು ಸಿಗುವುದಿಲ್ಲವೇನೊ?!


ಪ್ರಾಯಶಃ ಪ್ರತೀ ತಾಯಿಯೂ ತಾನು ಬದುಕಿನಲ್ಲಿ ಪಡೆದುಕೊಳ್ಳದೇ ಇರುವುದನ್ನು ಅಥವಾ ತಾನು ಭಾವನಾತ್ಮಕವಾಗಿ ಬಯಸಿದ್ದನ್ನು ತನ್ನ ಮಕ್ಕಳಿಗೆ ಕೊಡುವ ಪ್ರಯತ್ನ ಮಾಡುತ್ತಾಳೇನೊ? ನಾನಂತು ಹಾಗೆಯೇ ಮಾಡಿದ್ದೇನೆ ಎನ್ನುವುದು ನನ್ನ ತಾಯ್ತನದ ನಿರ್ವಹಣೆಯ ಸತ್ಯ. ನನ್ನ ಮಕ್ಕಳಿಗೆ ಹೀಗೇ ಇರಬೇಕೆಂಬ ಯಾವುದೇ ಒತ್ತಡ ತರದೆ ತಾಯಿಯಾಗಿ ನನ್ನಿಂದಾದಷ್ಟು ಅಕ್ಕರೆಯ ಬಿಸುಪನ್ನು ನೀಡಿದ ತೃಪ್ತಿ ನನಗಿದೆ. ನನ್ನ ಮಕ್ಕಳಿಗೆ ನಾನು ಒಳ್ಳೆಯ ಸ್ನೇಹಿತೆಯಾಗಿರುವ ಖುಷಿ ನನಗಿದೆ. ನನ್ನ ಮಕ್ಕಳಿಬ್ಬರ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಹಲವಾರು ವಿಷಯಗಳ, ಘಟನೆಗಳ ಹಾಗೂ ಪರಿಸರದ ಪ್ರಭಾವದ ಜೊತೆಗೆ ‘ನನ್ನ ಮಾತಿಗಿಂತ ನನ್ನ ಕೃತಿಯ ಪ್ರಭಾವ’ ಹೆಚ್ಚು ಬೀರಿದೆ ಎನ್ನುವುದರ ಬಗ್ಗೆ ನನಗೆ ಸಂತಸವಿದೆ. ಇಬ್ಬರೂ ತಮ್ಮದೇ ಆದ ಸ್ವತಂತ್ರ ಪ್ರಬುದ್ಧ ದೃಷ್ಟಿಕೋನವನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಬದುಕನ್ನು ಕಟ್ಟಿಕೊಳ್ಳುತ್ತಿರುವ ಬಗ್ಗೆ ನನಗೆ ಹೆಮ್ಮೆ ಇದೆ. 

ಇಷ್ಟು ಕಾಲ ನನ್ನನ್ನು ಕಾಡಿದ ಪ್ರಶ್ನೆ ಇನ್ನು ಮುಂದೆ ಅಷ್ಟಾಗಿ ಬಾಧಿಸದಿರಬಹುದು ಎಂಬ ಆಶಾಭಾವದೊಂದಿಗೆ…


Posted 11/5/2025

No comments:

Post a Comment