ಕಲೆ, ಮನುಷ್ಯನ ಸೃಜನಶೀಲ ಮನಸ್ಸಿನ ಅತ್ಯಂತ ಅಪೂರ್ವವಾದ ರೂಪ. ಭೈರಪ್ಪನವರು ಸಂಗೀತ, ಚಿತ್ರಕಲೆ, ನೃತ್ಯವನ್ನು ಆರಾಧಿಸಿದ ಸಾಹಿತಿ. ಅವರಲ್ಲಿ ಕಲೆಯ ಬಗೆಗೆ ಅಪಾರವಾದ ರುಚಿಯಿತ್ತು. ಜಲಪಾತ, ಸಾರ್ಥ ಮೊದಲಾದ ಕಾದಂಬರಿಗಳಲ್ಲಿ ಅದು ನಿಚ್ಚಳವಾಗಿ ನಿರೂಪಿತವಾಗಿತ್ತು. ಕಲೆ ಹೇಗೆ ಅವರ ಪ್ರೀತಿಯ ದೌರ್ಬಲ್ಯವಾಗಿತ್ತೋ ಹಾಗೇ ಮನುಷ್ಯನ ತ್ಯಾಗ, ನಿಸ್ವಾರ್ಥತೆ ಅವರನ್ನು ಬಲವಾಗಿ ಸೆಳೆಯುತ್ತಿತ್ತು ಎಂದು ಕಾಣುತ್ತದೆ. ಅಂಥ ಪಾತ್ರಗಳನ್ನು ಅವರು ಅದ್ಭುತವಾಗಿ ಚಿತ್ರಿಸುತ್ತಿದ್ದರು. ಮಂದ್ರದ ರಾಮಕುಮಾರಿ, ಸಾರ್ಥದ ಚಂದ್ರಿಕೆ, ವಂಶವೃಕ್ಷದ ಶ್ರೋತ್ರಿಗಳು, ಪರ್ವದ ಕುಂತಿ ಈ ಎಲ್ಲ ಪಾತ್ರಗಳು ಅದನ್ನು ಪುಷ್ಟಿಕರಿಸುತ್ತವೆ.
ಇಂದು ತೀರಿಕೊಂಡ ಹಿರಿಯ ಸಾಹಿತಿ, ಜನಪ್ರಿಯ ಕಾದಂಬರಿಕಾರ ಎಸ್.‌ ಎಲ್.‌ ಭೈರಪ್ಪನವರ ಬರಹಗಳ ಕುರಿತು ದೀಪಾ ಫಡ್ಕೆ ಬರಹ

ಎಸ್ ಎಲ್ ಭೈರಪ್ಪ ಅವರನ್ನು ಮೊದಲ ಬಾರಿಗೆ ನೋಡಿದ್ದು ಕನಕಪುರ ಸಾಹಿತ್ಯ ಸಮ್ಮೇಳನದಲ್ಲಿ. ಸಾಹಿತ್ಯದ ವಿದ್ಯಾರ್ಥಿಯಲ್ಲದ ನನಗೆ ಅದು ಹೊಸ ಅನುಭವ. ಅಲ್ಲಿ ಮೊದಲ ಬಾರಿಗೆ ನಾನು ಅವರ ಪ್ರಖರ ಮತ್ತು ನಿಷ್ಠೂರ ಮಾತುಗಳನ್ನು ಕೇಳಿದ್ದು. ನಂತರ ಸಾಹಿತ್ಯಲೋಕದ ಅನೇಕ ವಾದವಿವಾದಗಳಲ್ಲಿ ಎಸ್ ಎಲ್ ಭೈರಪ್ಪನವರ ಮಾತು ಬರಹ ಎಲ್ಲ ಕೇಳುವಾಗ ಅದೇ ಸಿದ್ಧಾಂತದ ಸ್ಪಷ್ಟತೆ ಮತ್ತು ನಿಷ್ಠೂರವಾದ ನಿಲುವನ್ನು ಕಂಡುಕೊಂಡೆ ಬಂದಿದ್ದೇನೆ. ಕನ್ನಡದ ಅತ್ಯಂತ ಜನಪ್ರಿಯ ಕಾದಂಬರಿಕಾರ, ಅತ್ಯಂತ ಹೆಚ್ಚು ಭಾರತೀಯ ಭಾಷೆಗಳಿಗೆ ಅನುವಾದ ಕಂಡ ಕನ್ನಡದ ಕಾದಂಬರಿಕಾರ, ಆಳವಾದ ಅಧ್ಯಯನ ನಡೆಸಿ ಹೊಸ ವಿಷಯಗಳನ್ನು ಅಷ್ಟೇ ಪ್ರಬುದ್ಧತೆ ಮತ್ತು ವಾಸ್ತವದ ಹೂರಣದೊಂದಿಗೆ ನೀಡಿದ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರ ನಿರ್ಗಮನದಿಂದ ನಿಜಕ್ಕೂ ಕನ್ನಡ ಕಾದಂಬರಿಲೋಕದ ಒಂದು ಘನವಾದ ಪರ್ವ ಅಂತ್ಯ ಕಂಡಿದೆ.

ಕಾದಂಬರಿಲೋಕ ತೆರೆದಿಡುವುದೇ ಮನುಷ್ಯ ಸಂಬಂಧಗಳನ್ನು. ಕನ್ನಡದಲ್ಲಿ ಅತ್ಯಂತ ಹೆಚ್ಚು ಕಾದಂಬರಿಗಳನ್ನು ಬರೆದವರಲ್ಲಿ ಅನಕೃ, ಶಿವರಾಮ ಕಾರಂತರು, ಎಸ್ ಎಲ್ ಭೈರಪ್ಪನವರು ಹೀಗೆ ಇನ್ನೂ ಕೆಲವರನ್ನು ಹೆಸರಿಸಬಹುದು. ಶಿವರಾಮ ಕಾರಂತರು ತಮ್ಮ ಕಾದಂಬರಿಗಳಲ್ಲಿ ಮನುಷ್ಯನ ಜೀವನವನ್ನು ತಮ್ಮ ನಿರಂತರ ಓಡಾಟದ ಫಲದಿಂದ ಗಳಿಸಿದ ಅನುಭವಗಳ ಮೂಲಕ ನಿರೂಪಿಸಿದರೆ ಭೈರಪ್ಪನವರು ನಿರಂತರ ಅಧ್ಯಯನದ ಫಲವನ್ನು ಅಂದ್ರೆ ಮನುಷ್ಯನ ಜೀವನದ ಘಟನೆಗಳನ್ನು ಯಾವುದಾದರೊಂದು ವಿಷಯವನ್ನು ಕೇಂದ್ರವಾಗಿರಿಸಿಕೊಂಡು ಅದರ ಸುತ್ತ ಕಥನವನ್ನು ಹೆಣೆಯುತ್ತಿದ್ದರು. ಪರ್ವ ಕಾದಂಬರಿಯನ್ನು ಮೆಚ್ಚದ ಓದುಗರೇ ಇಲ್ಲವೇನೋ! ಮಹಾಭಾರತ ಕತೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿ ತಂದು ತೋರಿದವರು ಎಸ್ ಎಲ್ ಭೈರಪ್ಪನವರು. ಅದಕ್ಕಾಗಿ ಭೈರಪ್ಪನವರು ಅನೇಕ ವಿರೋಧವನ್ನು ಎದುರಿಸಬೇಕಾಯಿತು. ಪುರಾಣದಲ್ಲಿ ಹುದುಗಿರುವ ಅದರ ಕುತೂಹಲದ ಮಿತ್ ಅನ್ನು ಒಡೆದರು ಎನ್ನುವ ಮಾತನ್ನು ಕೇಳಿದರೂ ಪರ್ವದ ನಿರೂಪಣೆಯನ್ನು ಮೆಚ್ಚದವರೇ ಇಲ್ಲವೇನೊ! ಸ್ತ್ರೀ ವಿರೋಧಿ ಎನ್ನುವ ಹಣೆಪಟ್ಟಿಯನ್ನು ಪಡೆದುಕೊಂಡಿದ್ದ ಭೈರಪ್ಪನವರು ಪರ್ವ ಕಾದಂಬರಿಯಲ್ಲಿ ಕುಂತಿ ಮತ್ತು ದ್ರೌಪದಿಯ ಪಾತ್ರಗಳನ್ನು ನಿರೂಪಿಸಿದಂತೇ ಪ್ರಾಯಶಃ ಯಾವ ಸ್ತ್ರೀಗೂ ಚಿತ್ರಿಸಲು ಸಾಧ್ಯವಿಲ್ಲವೇನೋ ಎನ್ನುವಂತೇ ಕುಂತಿಯನ್ನು ನಿರೂಪಿಸಿದರು. ದ್ರೌಪದಿಯ ನೋವನ್ನು ಚಿತ್ರಿಸಿದ ರೀತಿಯಂತೂ ಅನನ್ಯವಾದುದು. ಕನ್ನಡ ಸಾಹಿತ್ಯ ಲೋಕದಲ್ಲಿ ಇನ್ನೊಂದು ಪರ್ವ ಬರಲು ಅಸಾಧ್ಯವೆನ್ನುವಂತೆ ಪರ್ವ ಇಂದಿಗೂ ಶಾಶ್ವತವಾದ ಮನ್ನಣೆ ಗಳಿಸಿದೆ.

ಸುಕೃತಿ ಎನ್ನುವ ಕನ್ನಡದ ಪುಸ್ತಕ ಬಳಗವು ಕೆಲವು ವರ್ಷಗಳ ಹಿಂದೆ ಭೈರಪ್ಪನವರ ಕಾದಂಬರಿಗಳ ಅವಲೋಕನವನ್ನು ಅನೇಕ ಲೇಖಕರಿಂದ ನಡೆಸಿತ್ತು. ಅದರಲ್ಲಿ ನಾನು ವಂಶವೃಕ್ಷ ಕಾದಂಬರಿಯ ಬಗ್ಗೆ ಮಾತಾಡಿದ್ದೆ. ಭೈರಪ್ಪನವರಿಗೆ ಸನಾತನ ಅಥವಾ ಭಾರತೀಯ ಎನ್ನುವ ಜೀವನಶೈಲಿಯ ಬಗ್ಗೆ ಅಪಾರ ಮತ್ತು ಅನನ್ಯವಾದ ನಂಬುಗೆ. ಆ ಕಾದಂಬರಿಯಲ್ಲಿಯೂ ಅವರು ಶ್ರೋತ್ರಿಗಳ ಪಾತ್ರದ ಮೂಲಕ ಅದನ್ನು ಹೇಳಿದ್ದರು. ಭೈರಪ್ಪನವರ ಕಾದಂಬರಿಗಳನ್ನು ಓದಿದ ಪ್ರಕಾರ ಅವರಿಗೆ ಭಾರತೀಯ ಮತ್ತು ಸನಾತನ ಎನ್ನುವ ಶ್ರದ್ಧೆಯ ಬದುಕೇ ಉತ್ಕೃಷ್ಟವಾದುದು. ಅದು ಅಧ್ಯಾತ್ಮದಿಂದ ಬೇರೆಯಾದುದಲ್ಲ. ಅಂದರೆ ಅಧ್ಯಾತ್ಮ ಎನ್ನುವುದು ಬೇರೆಯೇ ಆದ ವಿಷಯವಲ್ಲ, ಅದು ಅಪ್ಪಟ ಭಾರತೀಯ ಎನಿಸಿದ ಸನಾತನವಾದ ಜೀವನಶೈಲಿಯೇ ಅದು ಎನ್ನುವಂತೇ ಅರ್ಥ ಬರುವ ನಿರೂಪಣೆಯನ್ನು ಕಾಣಬಹುದು. ಆದರೆ ಅದರಲ್ಲಿ ಹೆಣ್ಣಿಗೆ ಕೆಲವು ನಿಬಂಧನೆಗಳಿರುವುದನ್ನು ಅವರು ಒಪ್ಪಿಕೊಂಡೇ ಅದನ್ನು ಹೇಳಿಕೊಂಡು ಹೋಗಿರುವುದನ್ನು ಗಮನಿಸಬಹುದು.

ಇಷ್ಟು ಸಮಯದಲ್ಲಿ ಅವರ ಕಾದಂಬರಿಗಳನ್ನು ಅವರ ಮಾತುಗಳನ್ನು ಲೇಖನಗಳನ್ನು ನೋಡುವಾಗ ನಾನು ಗಮನಿಸಿದ್ದು ಅವರ ವಿಚಾರಗಳ ಸ್ಪಷ್ಟತೆ ಮತ್ತು ನಿಷ್ಠೂರತೆ. ಅವರ ಎಲ್ಲ ಮಾತುಗಳನ್ನು ಒಪ್ಪದೇ ಹೋಗಬಹುದು ಆದರೆ ಅವರ ಅನುಭವಗಳ ವೈವಿಧ್ಯತೆ ಮತ್ತು ವಿಸ್ತಾರತೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. `ಮಂದ್ರ’- ಮನುಷ್ಯನ ಲಾಲಸೆಯನ್ನು ಸಂಗೀತ ಕಲಾವಿದನೊಬ್ಬನ ಪಾತ್ರದ ಮೂಲಕ ತೆರೆದಿಟ್ಟ ಕಾದಂಬರಿ. ಅದು ಓದುಗ ವಲಯದಲ್ಲಿ, ಸಾಹಿತ್ಯಲೋಕದಲ್ಲಿ ಮೂಡಿಸಿದ್ದ ಸಂಚಲನ ಸೋಜಿಗ ಮೂಡಿಸುತ್ತದೆ. ಸಂಗೀತವನ್ನೂ, ನಾಟ್ಯದ ಹೆಜ್ಜೆಗಳ ಲಯವನ್ನೂ ಅಕ್ಷರಕ್ಕಿಳಿಸಬಹುದು ಎನ್ನುವುದಕ್ಕೆ ಅದ್ಭುತ ಸಾಕ್ಷಿಯಾಗಿ ಉಳಿದಿದೆ ಈ ಕಾದಂಬರಿ. ಸಂಗೀತಲೋಕದ ಅನೇಕ ಸುಪ್ರಸಿದ್ಧ ಕಲಾವಿದರ ವಿರೋಧವೂ ಈ ಕಾದಂಬರಿ ಎದುರಿಸಬೇಕಾಯಿತು. ಏಕೆಂದರೆ ಸಂಗೀತ ಕಲಾವಿದನ ತೀರದ ಕಾಮ ಮತ್ತು ನೃತ್ಯಗಾತಿಯೊಬ್ಬಳ ತೀರದ ಬಯಕೆಗಳ ನಿರೂಪಣೆಯಿದ್ದ ಮಂದ್ರ ಅದರ ನಿಷ್ಠೂರ ನಿರೂಪಣೆಗೆ ದೂಷಣೆ ಕೇಳಿದಂತೇ ಕಾದಂಬರಿಯಲ್ಲಿ ಸಂಗೀತದ ನೃತ್ಯದ ಬಗೆಗಿನ ನಿರೂಪಣೆಗೆ ಬೆರಗನ್ನೂ ಮೂಡಿಸಿತ್ತು. ಬಹುಶಃ ಅತೀಯಾದ ಮೆಚ್ಚುಗೆಯನ್ನು ಮತ್ತಷ್ಟೇ ವಿರೋಧವನ್ನು ನೋಡಿದ ಈ ಕಾಲದ ಕಾದಂಬರಿಕಾರ ಇದ್ದರೆ ಅದು ಭೈರಪ್ಪನವರೇ ಎನ್ನಬಹುದೇನೊ. ಅತೀ ಹೆಚ್ಚು ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಮಹಾರಾಷ್ಟ್ರದಲ್ಲಿ ಮರಾಠಿ ಕಾದಂಬರಿಕಾರ ಕನ್ನಡದಲ್ಲಿ ಬರೆಯುತ್ತಾರೆ ಎನ್ನುವಷ್ಟೂ ಜನಮನ್ನಣೆ ಪಡೆದಿದ್ದ ಭೈರಪ್ಪನವರು ತಮ್ಮದೇ ನೆಲದಲ್ಲಿ ಅಷ್ಟೇ ವಿರೋಧವನ್ನೂ ನೋಡಿದ್ದರು. ಸಂಗೀತ, ನೃತ್ಯ ಎನ್ನುವ ಗಂಧರ್ವ ವಿದ್ಯೆಗಳು ಕಲೆಯಾಗಿ ಅವುಗಳು ಅದ್ಭುತವೇ ಆಗಿದ್ದರೂ ಅವುಗಳನ್ನು ತಮ್ಮದಾಗಿಸುವ ಮನುಷ್ಯ ಮಾತ್ರ ತನ್ನ ಮನುಷ್ಯ ಸಹಜ ಬಯಕೆಗಳಿಂದ ಮುಕ್ತನಾಗಲಾರ, ಕಲೆ ಮತ್ತು ಕಲಾವಿದನ ಸಂಬಂಧ, ಕಲಾಸೃಷ್ಟಿ ಮತ್ತು ವಾಸ್ತವದ ಬದುಕಿನ ನಡುವೆ ಆಗುವ ಗುದ್ದಾಟ ಮಂದ್ರದಲ್ಲಿ ನಿರೂಪಿತವಾದ ರೀತಿ ಕಲೆಯನ್ನೂ ಕಲಾವಿದನನ್ನೂ ಹೊಸದೇ ಆದ ಬೆಳಕಿನಲ್ಲಿ ಇಟ್ಟು ತೋರಿತ್ತು, ಅಲ್ಲದೇ ಕಲೆಯ ಔನ್ನತ್ಯ, ಕಲಾವಿದನ ವೈಯಕ್ತಿಕ ಬದುಕಿನಲ್ಲಿ ಪ್ರತಿಫಲಿಸುವುದಿಲ್ಲ ಎನ್ನುವುದನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಳಿದ ಕಾದಂಬರಿ ಮಂದ್ರ. ಹಾಗೆಯೇ ಅವರ ಉಳಿದ ಒಂದೊಂದು ಕಾದಂಬರಿಯೂ ಮನುಷ್ಯ ಬದುಕಿನ ಒಂದೊಂದು ಲೋಕವನ್ನೇ ತೆರೆದಿಟ್ಟಿದೆ.

ಕಲೆ, ಮನುಷ್ಯನ ಸೃಜನಶೀಲ ಮನಸ್ಸಿನ ಅತ್ಯಂತ ಅಪೂರ್ವವಾದ ರೂಪ. ಭೈರಪ್ಪನವರು ಸಂಗೀತ, ಚಿತ್ರಕಲೆ, ನೃತ್ಯವನ್ನು ಆರಾಧಿಸಿದ ಸಾಹಿತಿ. ಅವರಲ್ಲಿ ಕಲೆಯ ಬಗೆಗೆ ಅಪಾರವಾದ ರುಚಿಯಿತ್ತು. ಜಲಪಾತ, ಸಾರ್ಥ ಮೊದಲಾದ ಕಾದಂಬರಿಗಳಲ್ಲಿ ಅದು ನಿಚ್ಚಳವಾಗಿ ನಿರೂಪಿತವಾಗಿತ್ತು. ಕಲೆ ಹೇಗೆ ಅವರ ಪ್ರೀತಿಯ ದೌರ್ಬಲ್ಯವಾಗಿತ್ತೋ ಹಾಗೇ ಮನುಷ್ಯನ ತ್ಯಾಗ, ನಿಸ್ವಾರ್ಥತೆ ಅವರನ್ನು ಬಲವಾಗಿ ಸೆಳೆಯುತ್ತಿತ್ತು ಎಂದು ಕಾಣುತ್ತದೆ. ಅಂಥ ಪಾತ್ರಗಳನ್ನು ಅವರು ಅದ್ಭುತವಾಗಿ ಚಿತ್ರಿಸುತ್ತಿದ್ದರು. ಮಂದ್ರದ ರಾಮಕುಮಾರಿ, ಸಾರ್ಥದ ಚಂದ್ರಿಕೆ, ವಂಶವೃಕ್ಷದ ಶ್ರೋತ್ರಿಗಳು, ಪರ್ವದ ಕುಂತಿ ಈ ಎಲ್ಲ ಪಾತ್ರಗಳು ಅದನ್ನು ಪುಷ್ಟಿಕರಿಸುತ್ತವೆ. ಭೈರಪ್ಪನವರ ಇನ್ನೊಂದು ವಿಶೇಷತೆಯೆಂದರೆ ಅವರು ಮನಸ್ಸಿಟ್ಟ ಸಿದ್ಧಾಂತಕ್ಕೆ ಕೊನೆಯವರೆಗೂ ಬದ್ಧರಾಗಿ ಬದುಕಿದ್ದು.

ಕೆಲವು ಜೀವಗಳು ಅವರು ನಮಗೆ ಆಪ್ತವೇ ಆಗಿರಬೇಕೆಂದು ಇಲ್ಲ. ಅವರೊಂದಿಗೆ ನಿರಂತರ ಸಂಪರ್ಕವಾಗಲಿ ಮಾತುಕತೆಯ ಮೂಲಕ ಸಂಪರ್ಕ ಇರಬೇಕೆಂದೂ ಇಲ್ಲ. ಅದ್ಯಾವುದೂ ಇಲ್ಲದೆಯೂ, ಒಂದಷ್ಟು ಅವರ ವಿಚಾರಗಳೆಡೆಗೆ ಅಸಮ್ಮತಿಯ ಜೊತೆಗೂ ಅವರು ನಮ್ಮ ಭಾವಕೋಶದಲ್ಲಿ ಅತ್ಯಂತ ಗೌರವದ ಸ್ಥಾನ ಪಡೆದಿರುತ್ತಾರೆ. ಭೈರಪ್ಪನವರು ಅಂಥವರಲ್ಲಿ ಒಬ್ಬರು. ಇಷ್ಟು ವರ್ಷಗಳಲ್ಲಿ ಅವರನ್ನು ಒಂದೆರಡು ಬಾರಿ ಭೇಟಿ ಆಗುವ ಅವಕಾಶವೂ ಆಗಿತ್ತು. ಅದು 2018 ಇರಬೇಕು, ಮೈಸೂರು ಸಂಸ್ಕಾರ ಭಾರತಿ, ಭೈರಪ್ಪನವರ ಕಾದಂಬರಿಗಳ ಅವಲೋಕನ ಕಾರ್ಯಕ್ರಮವನ್ನು ಮಾಡಿತ್ತು. ಅದರಲ್ಲಿ ನಾನು ನನ್ನ ಬಹು ಇಷ್ಟದ ಕಾದಂಬರಿ ಪರ್ವದ ಬಗ್ಗೆ ಮಾತಾಡಿದ್ದೆ. ಅದೇ ಹೊತ್ತಿನಲ್ಲಿ ಅವರ ಮನೆಗೆ ಹೋಗುವ ಸಂದರ್ಭವೂ ಒದಗಿ ಬಂದಿತ್ತು. ಕತೆಗಾರ ಪ್ರೇಮಶೇಖರ, ಗೆಳತಿ ಅನುರಾಧಾ ಜೊತೆಗೆ ಅಕ್ಕ ಕೃಪಾ ಫಡ್ಕೆಯೂ ನನ್ನೊಂದಿಗೆ ಬಂದಿದ್ದಳು. ನೃತ್ಯಗಾತಿ ಅಕ್ಕನನ್ನು ಮೊದಲೇ ಪರಿಚಯವಿದ್ದ ಭೈರಪ್ಪನವರು ನಮ್ಮಿಬ್ಬರ ಅಡ್ಡಹೆಸರನ್ನು ಪ್ರಸ್ತಾಪಿಸಿ ಚಿತ್ಪಾವನರ ಬಗ್ಗೆ ಅತ್ಯಂತ ಗೌರವದಿಂದ ಮಾತಾಡಿದ್ದರು. ಅಲ್ಲದೇ `ನೀವು ಚಿತ್ಪಾವನರು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯವರು. ನಿಮಗೆ ರಾಷ್ಟ್ರೀಯತೆಯ ಅರಿವು ಬಹಳ ಇದೆ’ ಎನ್ನುವ ಇನ್ನೂ ಹಲವಾರು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಈ ಇಷ್ಟು ವರ್ಷಗಳಲ್ಲಿ ಟಿವಿ ನಿರೂಪಕಿಯಾಗಿ ನೂರಾರು ಸಾಹಿತಿ, ವಿದ್ವಾಂಸರು, ಕಲಾವಿದರನ್ನು ಸಂದರ್ಶಿಸಿದ ಹಿನ್ನೆಲೆಯ ಅನುಭವದಿಂದ ನೋಡುವಾಗ ಎಸ್ ಎಲ್ ಭೈರಪ್ಪನವರು ತೀರಾ ಸ್ನೇಹಮಯಿಯಂತೇ ಕಾಣದಿದ್ದರೂ ಅವರೊಳಗೆ ಮಗುವಿನಂಥ ಕುತೂಹಲದ ಮುಗ್ಧ ಭಾವವೊಂದು ಜಾಗೃತವಿತ್ತು ಎಂದೇ ಕಂಡಿತ್ತು.

ತನ್ನ ಹುಟ್ಟೂರಿನಲ್ಲಿ ಇದ್ದಾಗ ಬಾಲ್ಯದುದ್ದಕ್ಕೂ ಅನೇಕ ಅವಮಾನಗಳನ್ನು ಸಾವುನೋವುಗಳನ್ನೇ ಕಂಡು ಬೆಳೆದಿದ್ದ ಈ ಅಪರೂಪದ ಕಾದಂಬರಿಕಾರ ತನ್ನ ವೃದ್ಧಾಪ್ಯದಲ್ಲಿ ಅದೇ ಹುಟ್ಟೂರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಅದೆಷ್ಟು ಶ್ರಮ ಪಟ್ಟರು ಮತ್ತು ಅದರಲ್ಲಿ ಯಶಸ್ವಿಯೂ ಆದರು ಎನ್ನುವುದನ್ನು ನೋಡುವಾಗ ಕಲೆ, ಸಾಹಿತ್ಯದ ನಿಜವಾದ ಔನ್ಯತ್ಯವನ್ನು ಅರಿತ ಸಾಹಿತಿಗಳಲ್ಲಿ ಭೈರಪ್ಪನವರು ಮೊದಲ ಸಾಲಿನಲ್ಲಿಯೇ ಕಾಣುತ್ತಾರೆ. ಪರ್ವ ಮುಗಿಯಿತು. ಕಾದಂಬರಿಭಾರತ ನಿಜಕ್ಕೂ ಬಡವಾಯಿತು.