Wednesday, September 3, 2025

ಪದ್ಮನಾಭ ಸೋಮಯಾಜಿ

 Wednesday, 3rd September 2025

ಪದ್ಮನಾಭ ಸೋಮಯಾಜಿ 

ನಾಳೆ ನನ್ನ ಅಪ್ಪನ ಹುಟ್ಟಿದ ಹಬ್ಬ. ಅವರು ಬದುಕಿದ್ದಿದ್ದರೆ ಅವರಿಗೆ ತೊಂಬತ್ತೆಂಟು ವರ್ಷ ಆಗಿರುತ್ತಿತ್ತು. ಅವರು ತಮ್ಮ ಅರವತ್ತೇಳನೆ ವಯಸ್ಸಿಗೇ ಕಾಲವಶರಾದರು.

ಒಟ್ಟು ಕುಟುಂಬದ ಎಲ್ಲರ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡಿದ್ದ ಅಪ್ಪನಿಗೆ ಅವರ ಇಪ್ಪತ್ತೆಂಟನೆ ವಯಸ್ಸಿಗೆ ಕೂದಲು ಬಿಳಿಯಾಗತೊಡಗಿತ್ತು. ಕರಿ ಬಣ್ಣದ ಬಳಕೆ ಆಗಲೇ ಶುರು ಮಾಡಿದ್ದರು. ಗೋಧಿವರ್ಣದ ಅಪ್ಪನ ಮೈ ಬಣ್ಣ ಅವರ ಜವಾಬ್ದಾರಿ ಹಾಗೂ ತಿರುಗಾಟದ ಕೆಲಸದಿಂದಾಗಿ ಹರೆಯದಲ್ಲೇ ಬಣ್ಣ ಕಳೆದುಕೊಂಡಿತ್ತು. ಇಷ್ಟಿದ್ದೂ ಅವರಲ್ಲಿ ನಾನು ಸದಾ ಕಂಡಿದ್ದು ಅಪಾರ ಜೀವನೋತ್ಸಾಹ. ಮಕ್ಕಳಲ್ಲಿ ಮಕ್ಕಳಾಗಿರುತ್ತಿದ್ದ ಅವರ ಮಗುತನ. ಎಂದಿಗೂ ಸಿಡುಕದ ಅವರ ಶಾಂತಭಾವ.

ವೆಂಕಟರಮಣ ಸೋಮಯಾಜಿ ಕುಟುಂಬ (ಸೆಪ್ಟಂಬರ್ 1980)

ತಮಗಾಗುತ್ತಿದ್ದ ವಯಸ್ಸನ್ನು ಸಹಜವಾಗಿ ಸ್ವೀಕರಿಸಿ ವಯೋಸಹಜವಾದ ಪ್ರೌಢತೆಯಲ್ಲಿ ಎಲ್ಲವನ್ನು - ಎಲ್ಲರನ್ನು ನಿಭಾಯಿಸುತ್ತಿದ್ದವರು ನನ್ನಪ್ಪ. ಅವರು ನಿವೃತ್ತರಾದ ಮೇಲೆ ನಾನು ಅವರೊಡನೆ ಜಗಳ ಮಾಡಿ ತಲೆಕೂದಲಿಗೆ ಬಣ್ಣ ಹಾಕುವುದನ್ನು ಬಿಡಿಸಿದ್ದೆ. ಬಿಳಿಕೂದಲಿನಿಂದಾಗಿ ಎದ್ದು ಕಾಣುತ್ತಿದ್ದ ವಯಸ್ಸಿನ ಪ್ರಭಾವವನ್ನು ಕೂಡಾ ನನ್ನಪ್ಪ ಸಹಜವಾಗಿ ಸ್ವೀಕರಿಸಿ ಆನಂದಿಸಿದವರೆ! ಬದುಕನ್ನು ಅದು ಬಂದಂತೆ ಸ್ವೀಕರಿಸಿ ಅದರಲ್ಲೇ ಸಕಾರಾತ್ಮಕತೆಯ ಅಂಶವನ್ನು ಕಂಡು ಖುಷಿಯಿಂದ ಬದುಕುವುದನ್ನು ತೋರಿಸಿಕೊಟ್ಟವರು ನನ್ನಪ್ಪ. ಅವರು ಬೋಧಿಸಿದಕ್ಕಿಂತ ನಮಗೆ ‘ತಿಳಿಸಬೇಕಾದ ಅಂಶಗಳನ್ನು’ ತಾವು ಬದುಕಿ ತೋರಿಸಿದ್ದೇ ಜಾಸ್ತಿ. 

ನನ್ನಪ್ಪ ಒಂದು ರೀತಿಯಲ್ಲಿ ಅಜಾತಶತ್ರು. ಎಲ್ಲರನ್ನೂ ಸಂಭಾಳಿಸಿಕೊಂಡು/ಸಹಿಸಿಕೊಂಡು ಹೋಗುತ್ತಿದ್ದ ಅವರನ್ನು ಎಲ್ಲಾ ಇಷ್ಟಪಡುವವರೇ ಆಗಿದ್ದರು. ಬಿ.ಪಿ.ಸೋಮಯಾಜಿ ಎಂದರೆ ಎಲ್ಲರೂ ಪ್ರೀತಿಯಿಂದ ಬರಮಾಡಿಕೊಂಡು ಆದರಿಸುತ್ತಿದ್ದ ವ್ಯಕ್ತಿಯಾಗಿದ್ದರು. ಅವರ ಮಗಳು ನಾನೆಂಬ ಹೆಮ್ಮೆ ಯಾವಾಗಲೂ ನನ್ನಲ್ಲಿದೆ. ಅವರಿಂದ ಪಡಕೊಂಡ ಹಲವಾರು ಉತ್ತಮ ಗುಣಗಳೇ ನನ್ನ ಆಸ್ತಿ ಎಂದು ನಾನು ಅಭಿಮಾನದಿಂದ ಹೇಳಬಲ್ಲೆ


ರವಿ (ದುಬೈ ಅಕ್ಟೋಬರ್ 1989)

Posted 4/9/2025

No comments:

Post a Comment