Sunday, September 21, 2025

ದಾದಾಭಾಯಿ ನವರೋಜಿ - ದ್ವಿ ಶತಮಾನೋತ್ಸವ

 ಭಾನುವಾರ,  ಸಪ್ಟೆಂಬರ್ 21, 2025 

ತರಳಬಾಳು ಕೇಂದ್ರ ಮಿನಿ ಹಾಲ್, ಆರ್. ಟಿ. ನಗರ, ಬೆಂಗಳೂರು. 






ಭಾರತದ ರಾಸ್ತ್ರೀಯತೆಯ  ಹರಿಕಾರ "ದಾದಾಭಾಯಿ ನವರೋಜಿ" ( 3/9/1825 - 30/6/1917) ಅವರ ದ್ವಿಶತಮಾನೋತ್ಸವದ ಸ್ಮರಣೆಯು ಶಿವರಾಮ ಕಾರಂತ ವೇದಿಕೆಯಲ್ಲಿ ಸಂಪನ್ನಗೊಂಡಿತು. 



ನಮ್ಮೊಂದಿಗೆ ಇದ್ದ ಅತಿಥಿಗಳು ನವರೋಜಿಯವರ ಜೀವನ, ಸಾಧನೆಗಳ ಕುರಿತು ವಿಸ್ತಾರವಾಗಿ ಮಾತನಾಡಿದರು.   ರಮ್ಯಾ ಶ್ರೀ ಅವರಿಂದ ಪ್ರಾರ್ಥನೆಯಾದ ನಂತರ ವೇದಿಕೆಯ ಅಧ್ಯಕ್ಷೆ ಡಾ ದೀಪಾ ಫಡ್ಕೆ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿ ಎಲ್ಲರನ್ನೂ ಸ್ವಾಗತಿಸಿದರು. 
ರಮ್ಯಾಶ್ರೀ - ಪ್ರಾರ್ಥನೆ 


ಪ್ರಾಸ್ತಾವಿಕ ನುಡಿ, ಸ್ವಾಗತ -ದೀಪಾ ಫಡ್ಕೆ 

ಶ್ರೀ ರಮೇಶ್ ಗೋಟ, ಲೇಖಕರು, ಶಿವರಾಮ ಕಾರಂತ ವೇದಿಕೆಯ ಸದಸ್ಯರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದವರು, ಅಲ್ಪ ಕಾಲದ ಅನಾರೋಗ್ಯದಿಂದ ಬಳಲಿ ಸೆಪ್ಟೆಂಬರ್ 15 ಸೋಮವಾರ
ನಮ್ಮನ್ನಗಲಿದ್ದಾರೆ. 
ಶ್ರೀ ರಮೇಶ್ ಗೋಟ 
ಶ್ರದ್ಧಾಂಜಲಿ 

ಕನ್ನಡ ಸಾಹಿತ್ಯದ ಒಳ್ಳೆಯ ಓದುಗರಾಗಿದ್ದ ಶ್ರೀ ರಮೇಶ್ ಗೋಟ ಅವರು ಲೇಖಕರೂ ಆಗಿದ್ದರು. ಅವರ ಕಾದಂಬರಿ ಒಂದು ಕರ್ಮವೀರ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. ನಮ್ಮ ವೇದಿಕೆಯ ಎಲ್ಲಾ ಕಾರ್ಯಕ್ರಮಗಳಿಗೆ ತಪ್ಪದೆ ಭಾಗವಹಿಸುತ್ತಿದ್ದ ರಮೇಶ್ ಗೋಟ ಅವರು ಮೃದು ಮಾತಿನ ಸಜ್ಜನ ವ್ಯಕ್ತಿಯಾಗಿದ್ದರು. ವೇದಿಕೆ ಅವರಿಗೆ ಗೌರವಪೂರ್ವಕವಾಗಿ ಶ್ರದ್ಧಾಂಜಲಿ ಸಲ್ಲಿಸುತ್ತಿದೆ.

ನುಡಿ ನಮನ - ಚಂದ್ರಶೇಖರ ಚಡಗ 

ವೇದಿಕೆಯ ಸಂಸ್ಥಾಪಕರಾದ ಶ್ರೀ ಚಂದ್ರಶೇಖರ ಚಡಗ ಅವರು ನಮ್ಮನ್ನು ಆಗಲಿದ ರಮೇಶ್ ಗೋಟ ಅವರಿಗೆ ನುಡಿ ನಮನವನ್ನು ಸಲ್ಲಿಸಿದರು



ವೇದಿಕೆಯ ಖಜಾಂಚಿ ಶ್ರೀ ಜಯರಾಮ ಸೋಮಾಯಾಜಿಯವರು ಅತಿಥಿಗಳಿಗೆ ಗೌರವ ಸಮಾರ್ಪಣೆಯನ್ನು ಮಾಡಿದರು. 
ಶ್ರೀಮತಿ ಸಂಧ್ಯಾ ಮಂಜುನಾಥ್  ಅವರು ಕಾರ್ಯಕ್ರಮದ ನಿರ್ವಾಹಣೆಯನ್ನು ಅಚ್ಚುಕಟ್ಟಾಗಿ ಮಾಡಿದರು. 

Girija Shastry (ಗಿರಿಜಾ ಶಾಸ್ತಿ)  - Report

ದಾದಾಭಾಯಿ ನವರೋಜಿ: ದ್ವಿಶತಮಾನೋತ್ಸವ .
ಕೆ.ಸತ್ಯನಾರಾಯಣರ ಬರಲಿರುವ 'ದಾದಾಭಾಯಿ ನವರೋಜಿ ( ಜೀವನ ಚರಿತ್ರೆ- ಸಂದರ್ಭ )' ಪುಸ್ತಕದ ಬಗೆಗೆ ಶಿವರಾಮ ಕಾರಂತ ವೇದಿಕೆಯ ಮೂಲಕ ಒಂದು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅದರ ಅಧ್ಯಕ್ಷರಾದ ದೀಪಾ ಫಡ್ಕೆ ನನಗೆ ಫೋನ್ ಮತ್ತು ಫೇಸ್ ಬುಕ್ ಮುಖಾಂತರ ಪರಿಚಯವಿದ್ದರು. ನಿನ್ನೆ ಪ್ರತ್ಯಕ್ಷ ಭೇಟಿಯಾದರು. ಖುಷಿಯ ಕ್ಷಣಗಳು! ಅವರ ಅಡ್ಡಹೆಸರಿಗೆ ಮರಾಠಿಯ 'ವಾಸನೆ' ಬೇರೇ ಅಂಟಿಕೊಂಡಿದೆ. ಹಿಂದೊಮ್ಮೆ ಫೋನ್ ಮೂಲಕ ಮಾತನಾಡುವಾಗ 'ಚಿತ್ಪಾವನ' ಮೂಲದ ಪಂಡಿತಾ ರಮಾಬಾಯಿ ನಿಮಗೇನಾದರೂ ನೆಂಟರೆ?ಎಂದು ಕೇಳಿದ್ದೆ. ಸರಿ , ನಮ್ಮ ಮುಂಬಯಿ ಹಳಹಳಿಕೆಗೆ ಇನ್ನೇನು ಬೇಕು? ಹೀಗಾಗಿ ಅವರನ್ನು ಪ್ರತ್ಯಕ್ಷ ಕಂಡ ಸಂದರ್ಭಕ್ಕೆ ಒಂದು ಹೊಸ ಉಮೇದಿತ್ತು. ಶಿವರಾಮ ಕಾರಂತ ವೇದಿಕೆಯನ್ನು ಕಟ್ಟಿಕೊಂಡು ಬಹಳ ಕ್ರಿಯಾಶೀಲ ಚಟುವಟಿಕೆಗಳಲ್ಲಿ ದೀಪಾ ತೊಡಗಿಕೊಂಡಿದ್ದಾರೆ. ಅಲ್ಲದೇ ಅನೇಕ ಸಾಮಾಜಿಕ ಅಭಿವೃದ್ಧಿ ಕಾರ್ಯಗಳಲ್ಲೂ ನಿರತರಾಗಿದ್ದಾರೆ.
ಈ ಕಾರ್ಯಕ್ರಮಕ್ಕೆ ಲೇಖಕರಾದ ಕೆ. ಸತ್ಯನಾರಾಯಣ, ಕೆ. ರಘುನಾಥ್ ಮತ್ತು ಸುಧೀಂದ್ರ ಬುದ್ಯ ಅವರು ಭಾಷಣಕಾರರಾಗಿ ಆಗಮಿಸಿದ್ದರು.
ದಾದಾಭಾಯಿ ನವರೋಜಿಯವರ ದ್ವಿಶತಮಾನೋತ್ಸವ ಸಂದರ್ಭವಿದು. ಅವರು ಹುಟ್ಟಿದ್ದು ೪/೯/೧೮೨೫ ರಂದು. ಆದರೆ ನಮಗೆ ಅದರ ನೆನಪೇ ಇಲ್ಲ. ಅವರ ಬಗ್ಗೆ ಇರುವ ನಮ್ಮ ಈ ಅವಜ್ಞೆ ವಿಷಾದಕರ.
'ರಿಲೇ ರೇಸ್ ' ಪರಿಕಲ್ಪನೆಯಲ್ಲಿ ದಾದಾಭಾಯಿ ನವರೋಜಿಯವರ ರಾಷ್ಟ್ರೀಯ ಆಂದೋಳನದ ಕಾರ್ಯಸ್ವರೂಪವನ್ನು ಸುಧೀಂದ್ರ ಅವರು ವಿವರಿಸುತ್ತಾ ರಿಲೇ ರೇಸ್ ನಲ್ಲಿ ಒಂದು ಕೈಯಿಂದ ಇನ್ನೊಂದು ಕೈಯಿಗೆ ಬ್ಯಾಟ್ ದಾಟುವಾಗ, ಸಹಜವಾಗಿಯೇ ದಾಟಿಸುವವನು ದಣಿದಿರುತ್ತಾನೆ, ಹೊಸದಾಗಿ ಓಟ ಶುರುಮಾಡುವವನಿಗೆ ಹೆಚ್ಚಿನ ಕಸುವು ಇರುತ್ತದೆ. ಹೀಗೆ ಗುರಿ ಮುಟ್ಟುವಾಗ ಓಡಿದವರು ಮಾತ್ರ ಕಣ್ಣಿಗೆ ಕಾಣುತ್ತಾರೆ. ಚರಿತ್ರೆಯಲ್ಲಿ ದಾಖಲಾಗುತ್ತಾರೆ. ಅದರ ಹಿಂದೆ ಓಡಿ ದಣಿದವರು ಕಾಣುವುದಿಲ್ಲ. ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುವುದಿಲ್ಲ. ಸ್ವಾತಂತ್ರ್ಯ ಚಳವಳಿಗೆ ಬುನಾದಿಯನ್ನು ಹಾಕಿದವರೇ ದಾದಾಭಾಯಿ ನವರೋಜಿಯವರು. ಗಾಂಧೀಜಿಯ ಗುರುಗಳಾದ ಗೋಖಲೆಯವರಿಗೂ ಅವರು ಗುರುಗಳು. ಆದರೆ ಅವರನ್ನು ನಾವು ಮರೆತಿದ್ದೇವೆ. ಎಂದು ಅಭಿಪ್ರಾಯ ಪಟ್ಟರು.
ರಘುನಾಥ್ ಅವರು ಕೆ.ಸತ್ಯನಾರಾಯಣ ಅವರ ಒಟ್ಟು ಸಾಹಿತ್ಯದ ಅನನ್ಯತೆಯನ್ನು ಹಂಚಿಕೊಂಡರು. ಜೊತೆಗೆ ಅವರ ಬರಲಿರುವ 'ದಾದಾಭಾಯಿ ನವರೋಜಿ'ಕೃತಿಯ ವೈಶಿಷ್ಟ್ಯಗಳನ್ನು ಹೇಳುತ್ತಾ, ನವರೋಜಿಯವರು ವಸಾಹತುಷಾಹಿ ಆಡಳಿತದ ಕರಾಳ ಪ್ರಭಾವವನ್ನು ಗುರುತಿಸಿದವರಲ್ಲಿ ಮೊದಲಿಗರು. ಭಾರತದ ಬಡತನಕ್ಕೆ ಬ್ರಿಟಿಷರೇ ಕಾರಣರು ಎಂದ ನವರೋಜಿಯವರು ಸ್ಥಳೀಯ ಆಡಳಿತದ ಬಗೆಗೆ ಒತ್ತುಕೊಟ್ಟುದನ್ನು ಹಾಗೂ ಅವರ ಪಾನ ನಿರೋಧ ಚಡವಟಿಕೆಗಳ ಕಾರ್ಯ ರೂಪಗಳನ್ನೂ ವಿವರಿಸಿದರು.
ಆನಂತರ ಕೆ. ಸತ್ಯನಾರಾಯಣ ಅವರು ತಮ್ಮ ಕೃತಿಯ ಉದ್ದೇಶವನ್ನು ಹೇಳುತ್ತಾ, ನಮ್ಮ ದೇಶದ ಸಂಪನ್ಮೂಲಗಳು ಹೊರಗೆ ಹೋಗುವುದರ ಬಗ್ಗೆ ಅವರಿಗೆ ಇದ್ದ ವಿರೋಧವನ್ನು ತಿಳಿಸಿದುದೇ ಅಲ್ಲದೇ, ಸ್ತ್ರೀ ಶಿಕ್ಷಣದ ಬಗ್ಗೆ ಇದ್ದ ಅವರ ಒಲವು, ಬಂಗಾಳ ವಿಭಜನೆಯ ಅವರ ವಿರೋಧ, ಅವರ ಜಾತ್ಯತೀತ ದೃಷ್ಟಿ ಇವುಗಳನ್ನು ವಿವರಿಸಿದರು.
ಅವರು ಅಲ್ಪಸಂಖ್ಯಾತ ಪಾರ್ಸಿ ಜನಾಂಗಕ್ಕೆ ಸೇರಿದ್ದುದೂ ಅವರ ಬಗೆಗಿನ ನಮ್ಮ ಈ ಅವಜ್ಞೆಗೆ ಕಾರಣವಿರಬಹುದು. ಎಂದೂ ಅಭಿಪ್ರಾಯ ಪಟ್ಟರು.
ಆನಂತರ ನಡೆದ ಸಂವಾದದಲ್ಲಿ ಕೆಲ ಸಭಿಕರು ಭಾಗಿಯಾದರು.
ಮುಂಬಯಿಯಲ್ಲಿ ಎಲ್ಫಿನ್ ಸ್ಟನ್ ಕಾಲೇಜಿನ ಮುಂದೆ ನೂರಾರು ಬಾರಿ ನಾನು ಸುಳಿದಾಡಿದ್ದರೂ ದಾದಾಭಾಯಿ ನವರೋಜಿಯವರಿಗೆ ಆ ಕಾಲೇಜಿನೊಡನೆ ಇದ್ದ ಸಂಬಂಧಗಳೇ ಆಗಲಿ, ಸ್ವಾತಂತ್ರ್ಯ ಚಳವಳಿಯಲ್ಲಿನ ಅವರ ಪಾತ್ರವೇ ಆಗಲಿ ಇಷ್ಟು ವಿಷದವಾಗಿ ನನಗೆ ತಿಳಿದಿರಲಿಲ್ಲ. ಮುಂಬಯಿ ಹೃದಯ ಭಾಗದಲ್ಲಿರುವ ವಿ.ಟಿ. ಸ್ಟೇಷನ್ ಮುಂದಿರುವ ದೊಡ್ಡ ರಸ್ತೆಗೆ D.N. Road ಎಂದೇ ಹೆಸರು. ಇದರ ಮಹತ್ವ ಆಗ ತಲೆಗೆ ಹತ್ತಿರಲಿಲ್ಲ.
ಈ ಕಾರ್ಯಕ್ರಮ ಕೆ. ಸತ್ಯನಾರಾಯಣ ಅವರ ಪುಸ್ತಕದ ಮೂಲಕ ಇಂತಹ ಒಂದು ಸಂವಾದ ಏರ್ಪಡಿಸಿ ದಾದಾಭಾಯಿ ನವರೋಜಿಯವರ ವ್ಯಕ್ತಿತ್ವದ ಮೇಲೆ ಹೊಸಬೆಳಕನ್ನು ಚೆಲ್ಲಿದ, ದೀಪಾಫಡ್ಕೆಯವರ ಈ ಕಾರ್ಯ ಶ್ಲಾಘನೀಯ.
ಕಾರ್ಯಕ್ರಮದ ಪ್ರಾರಂಭಕ್ಕೆ ದೀಪಾ ಫಡ್ಕೆಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿ ಕೊನೆಗೆ ಧನ್ಯವಾದ ಅರ್ಪಿಸಿದರು.
ನಿರೂಪಣೆಯನ್ನು ಸಂಧ್ಯಾ ಮಂಜುನಾಥ್ ಅವರು ಸೊಗಸಾಗಿ ಮಾಡಿದರು
ಈ ಸಂದರ್ಭಕ್ಕೆ ತಕ್ಕುದಾದ ನಾಡಗೀತೆಯನ್ನು ರಮ್ಯಶ್ರಿ ಹಾಡಿದರು.
ಕಾರಂತವೇದಿಕೆಯ ಪದಾಧಿಕಾರಿಗಳೂ ಹಾಗೂ ಸ್ನೇಹಿತರಾದ ಗಿರಿಧರ ಕಾರ್ಕಳ ಅವರೂ ಉಪಸ್ಥಿತರಿದ್ದರು
ಸಂಜೆ ಸಮಯ


ಉದಯ ಕಾಲ



ಧನ್ಯವಾದಗಳು.....

Posted  22/9/2025 











 


No comments:

Post a Comment