Monday, November 10, 2025

ಕಾರ್ಕಳ ಗೋಮಟೇಶ್ವರ

 Monday, 10th November 2025


ಈಗ್ಗ್ಯೆ ಎರಡು ವಾರಗಳ ಕೆಳಗೆ ನಾನು ಮತ್ತು ನನ್ನ ಮಗಳು ವಿಭಾ ಆಗುಂಬೆಯ ಮಾರ್ಗವಾಗಿ ವಿಟ್ಲದೆಡೆಗೆ ಪಯಣಿಸಿದ್ದೆವು. ಆಗುಂಬೆ ಘಾಟಿಯಲ್ಲಿ ಪಯಣಿಸಿದಾಗಲೆಲ್ಲ ನನಗೆ ಹಳೆಯ ನೆನಪುಗಳು ಉಕ್ಕಿ ಬರುತ್ತವೆ. ಹೆಬ್ರಿಯಲ್ಲಿ ಹುಟ್ಟಿ ಸುಮಾರು ಒಂಬತ್ತು ವರ್ಷವಾಗುವವರೆಗೆ ಅಲ್ಲಿಯೇ ಬೆಳೆದ ನನಗೆ ಅದು ನನ್ನ ಸಮೃದ್ಧ ಬಾಲ್ಯದ ನೆನಪಿನ ಭಂಡಾರವಾಗಿದೆ. ಹೆಬ್ರಿಯ ಗೆಳೆಯ - ಗೆಳತಿಯರು, ಆನಮ್ಮ, ಆಂಟಿ, ಅವರ ಅಸೀಮ ಪ್ರೀತಿ, ಸೀತಾನದಿ ದನದ ಜಾತ್ರೆ, ಅಲ್ಲಿಂದ ತರುತ್ತಿದ್ದ ಹಾಲಿನಲ್ಲಿ ಅಮ್ಮ ಮಾಡುತ್ತಿದ್ದ ರುಚಿಕರ ದೂದ್ ಪೇಡಾ, ಮನೆಗೆ ನೆಂಟರು ಬಂದಾಗಲೆಲ್ಲ ಅಪ್ಪನ ಕರಿ ಅಂಬಾಸಿಡರ್ ಕಾರಿನಲ್ಲಿ ಎಂಟ್ಹತ್ತು ಜನ ಆಗುಂಬೆಯ ವ್ಯೂ ಪಾಯಿಂಟ್ ಗೆ ಭೇಟಿ ನೀಡುತ್ತಿದ್ದದ್ದು, ನಂತರದಲ್ಲಿ ಕಾರ್ಕಳದ ಗೊಮ್ಮಟನನ್ನು ನೋಡಲು ಹೋಗುತ್ತಿದ್ದದ್ದು, “ಹನುಮಂತ ಗರುಡ, ಎನ್ನ ಸುದ್ದಿಗ್ ಬರಡ” ಎಂದು ನನ್ನನ್ನು ರೇಗಿಸುತ್ತಿದ್ದ ಅಪ್ಪನ ಸ್ನೇಹಿತರಾದ ಮುದ್ರಾಡಿಯ ಅಜಿಲರ ಮನೆ…ಹೀಗೆ ಒಂದೇ ಎರಡೇ ಹತ್ತು ಹಲವಾರು ನೆನಪುಗಳು ಸಾಗರದ ಅಲೆಯೋಪಾದಿಯಾಗಿ ನನ್ನನ್ನು ಆವರಿಸುತ್ತವೆ.


ಈ ಎಲ್ಲಾ ನೆನಪುಗಳೊಡನೆ ಪಯಣ ಮುಂದುವರೆಸಿ ಗೊಮ್ಮಟನ ಗುಡ್ಡದ ತಳಭಾಗಕ್ಕೆ ಹೋಗಿ ಕಾರು ನಿಲ್ಲಿಸಿ ಮೇಲೆ ನೋಡಿದಾಗ ‘ಚಿಕ್ಕವಳಿದ್ದಾಗ ಪದೇ ಪದೇ ಭೇಟಿ ನೀಡುತ್ತಿದ್ದ ಜಾಗಕ್ಕೆ ಐವತ್ತು ವರ್ಷಗಳ ನಂತರ ಬರುವಂತಾಯಿತಲ್ಲಾ” ಎಂದು ಒಂದರೆಘಳಿಗೆ ಖೇದವೆನಿಸಿತು. ಆ ಐವತ್ತು ವರ್ಷಗಳ ಅಂತರದಲ್ಲಿ ಹಗುರ ಹೆಜ್ಜೆಗಳಲ್ಲಿ ಪಟಪಟನೆ ಮೆಟ್ಟಿಲೇರುತ್ತಿದ್ದ ಪುಟ್ಟ ಶೋಭಾ ಮಾರ್ಪಾಟಾಗಿ ಭಾರವಾದ ಹೆಜ್ಜೆಗಳನ್ನಿಡುತ್ತಾ, ನಡುನಡುವೆ "ನಡು"ವನ್ನು ನೇರಗೊಳಿಸುತ್ತಾ ಸಾಗುವ ವಯಸ್ಸಾದ ಶೋಭಾ ಗುಡ್ಡವೇರಲು ಸನ್ನದ್ಧಳಾದಳು🙄 ನಡು ಮಧ್ಯಾಹ್ನದ ಬಿಸಿಲು ಬಹಳ ಖಾರವಿದ್ದರೂ ಗುಡ್ಡ ಹತ್ತಲು ಕಷ್ಟವಾಗಲಿಲ್ಲ. ಅಲ್ಲಲ್ಲಿ ನಿಂತು ಫೋಟೊ ತೆಗೆಯುತ್ತಾ, ದಣಿವು ನಿವಾರಿಸಿಕೊಳ್ಳುತ್ತಾ ಗುಡ್ಡವನ್ನೇರಿ ಗೊಮ್ಮಟನ ಪದತಲದಲ್ಲಿ ನಿಂತಾಗ ಪುಟ್ಟವಳಿದ್ದಾಗ ನನಗೆ “ನಿನ್ನ ಗಂಡ ಕೆ.ಜಿ.ರಾವ್” ಎಂದು ನನ್ನ ಚಿಕ್ಕಪ್ಪ ರೇಗಿಸುತ್ತಿದ್ದದ್ದು ನೆನಪಾಯಿತು. ಕಾಕತಾಳೀಯವಾಗಿಯೋ ಏನೋ ನಂತರದಲ್ಲಿ ಕೆ.ಜಿ.ರಾವ್ ಬದಲು ಕೆ.ಜಿ.ರವೀಂದ್ರ ನನ್ನ ಬಾಳಸಂಗಾತಿಯಾದ😄

ಆ ಗೊಮ್ಮಟ ಆಗಲೂ ಹಾಗೇ ಇದ್ದ; ಈಗಲೂ ಹಾಗೆಯೇ ಇದ್ದಾನೆ. ನೋಡುವ ನನ್ನ ದೃಷ್ಟಿಕೋನ ಮಾತ್ರ ಬದಲಾಗಿದೆ. ಚಿಕ್ಕವಳಿದ್ದಾಗ ನಾನು ಗೊಮ್ಮಟನನ್ನು ನೋಡುವಾಗ ‘ಇವನ್ಯಾವ ಬೃಹತ್ ಮನುಷ್ಯ “ ಎಂದು ಆಶ್ಚರ್ಯವಾಗುತ್ತಿತ್ತು. ಈಗ ನೋಡಿದಾಗ ಹಾಗೇನೂ ಅನಿಸದೆ ಅದೊಂದು ಬೃಹತ್ತಾದ ಸುಂದರ ಕಲಾಕೃತಿಯಾಗಿ ಕಂಡಿತಷ್ಟೇ! 

ಮಗುವಾಗಿದ್ದಾಗ ನಮಗಿರುವ ಮುಗ್ಧತೆ ತುಂಬಿದ ಆಶ್ಚರ್ಯದ ಭಾವಕ್ಕೂ, ಕಂಡದ್ದನ್ನೆಲ್ಲಾ ಕಣ್ಣರಳಿಸಿ ನೋಡುವ ಕೌತುಕಕ್ಕೂ, ಜೀವನದ ಹಲವು ವಸಂತಗಳನ್ನು ಕಳೆದು ನಂತರ ಒಂದು ಕಲಾಕೃತಿಯನ್ನು ನೋಡುವಾಗ ಹುಟ್ಟುವ ಬರಡಾದ ನಮ್ಮ ವಿಮರ್ಶಾತ್ಮಕ ದೃಷ್ಟಿಕೋನಕ್ಕೂ  ಎಂತಹ ಬದಲಾವಣೆಯಯ್ಯಾ ಎಂದೆನಿಸಿತು!? ಏಕೋ ಏನೋ ಆ ಬಾಲ್ಯದ ಮುಗ್ಧ ಭಾವವೇ ಚೆಂದ ಎಂದೆನಿಸಿದ್ದು ಸುಳ್ಳಲ್ಲ.


Posted  11/11/2025 

No comments:

Post a Comment