ಗುರುವಾರ, 13 ನವಂಬರ, 2025
ಕಾರವಾರ - ಶೋಭಾ ಲೇಖನ
ಕಾರವಾರದ ಕಡಲತೀರದಿಂದ ಸುಮಾರು ನಾಲ್ಕು ಕಿಮೀ ದೂರದಲ್ಲಿರುವ ಕೂರ್ಮದ(ಆಮೆಯ) ಆಕಾರದಲ್ಲಿ ಇರುವ ಕೂರ್ಮಗಡ ದ್ವೀಪವು ಪೋರ್ಚುಗೀಸರ ಅಧೀನದಲ್ಲಿ ಇದ್ದು ಸ್ವಾತಂತ್ರ್ಯಾನಂತರದಲ್ಲಿ ಅದೊಂದು ಖಾಸಗಿ ದ್ವೀಪವಾಗಿ ಉಳಿದುಕೊಂಡಿತು. ಇದನ್ನು ಪೋರ್ಚುಗೀಸರು ಸಿಂಟಕೋರ್ ದ್ವೀಪ ಅಂದರೆ ಆಮೆಯ ಆಕಾರದ ದ್ವೀಪ ಎಂದು ಕರೆದರು. ಇದು ಸುಮಾರು ಮೂವತ್ತೆರಡು ಎಕರೆ ವಿಸ್ತೀರ್ಣ ಹೊಂದಿದ್ದು ಈಗ “ಲಿಟಲ್ ಅರ್ಥ್” ಎನ್ನುವ ಕಂಪೆನಿಯವರು ಇಲ್ಲಿ ಇಪ್ನತ್ಮೂರು ಕಾಟೇಜ್ ಗಳುಳ್ಳ ರೆಸಾರ್ಟ್ ಅನ್ನು ನಡೆಸುತ್ತಿದ್ದಾರೆ. ಈ ದ್ವೀಪವನ್ನು ಕರಮ್ ಧಾರಾ ಎಂದು ಹಾಗೂ ಇಲ್ಲಿ ನರಸಿಂಹ ದೇವರ ಗುಡಿ ಇರುವುದರಿಂದ ನರಸಿಂಹ ಗಡ ಎಂದೂ ಕರೆಯುತ್ತಾರೆ.
ಕಾಳಿ ನದಿಯ ಸೇತುವೆಯ ಬಳಿಯಿಂದ ಫೆರ್ರಿಯೊಂದರಲ್ಲಿ ನಮ್ಮನ್ನು ಸಿಂಟಕೋರ್ ರೆಸಾರ್ಟ್ ನವರು ಕರೆದೊಯ್ಯುತ್ತಾರೆ. ಇದೊಂದು ಕಲ್ಲು ಬಂಡೆಗಳಿಂದ ಕೂಡಿದ ಹಸಿರಿನಿಂದ ಕಂಗೊಳಿಸುವ ದ್ವೀಪವಾಗಿದ್ದು ರೆಸಾರ್ಟ್ ನವರು ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಭಂಗ ಬಾರದಂತೆ ತಮ್ಮ ಕಟ್ಟಡಗಳನ್ನು ಕಟ್ಟಿದ್ದಾರೆ. ಪ್ರಕೃತಿ ಸೌಂದರ್ಯವನ್ನು ಸವಿಯ ಬಯಸುವವರಿಗೆ ಹಾಗೂ ಜಲ ಸಾಹಸ ಮಾಡುವವರಿಗೆ ಇದೊಂದು ಉತ್ತಮ ಆಯ್ಕೆ. ಜೀವ ವೈವಿಧ್ಯ ಇಲ್ಲಿದೆ ಹಾಗೂ ಡಾಲ್ಫಿನ್ ಗಳು ಕೂಡಾ ಕಾಣ ಸಿಗುತ್ತವೆ.
ನಾನು ಹಾಗೂ ನನ್ನ ಮಗಳು ಅಲ್ಲಿಗೆ ಹೋದಾಗ ಅಲ್ಲಿನ ಶಾಂತತೆ, ಸಮುದ್ರದ ಅಸೀಮ ನೋಟ, ಅಲ್ಲಿನ ವ್ಯವಸ್ಥೆ ಎಲ್ಲವೂ ಖುಷಿ ಕೊಟ್ಟಿತು. ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಸಾಯಂಕಾಲ ಈಜುತ್ತಾ - ಆಟವಾಡುತ್ತಾ - ಕಾಫಿ ಕುಡಿಯುತ್ತಾ ನೋಡಿದ ಸೂರ್ಯಾಸ್ತ ನೆನಪಿನಲ್ಲಿ ಉಳಿಯುವಂತಹುದು. ಸಮುದ್ರಮುಖಿ ಕಾಟೇಜಿನ ಸಿಟ್ ಔಟ್ ನಲ್ಲಿ ಕುಳಿತು ಸುತ್ತಲೂ ಕಾಣುವ ಸಮುದ್ರವನ್ನು ನೋಡುವುದೇ ಕಣ್ಣಿಗೆ ಹಬ್ಬ. ವಿವರಿಸಲು ಬಹಳ ಇಲ್ಲ; ಆದರೆ ಅಲ್ಲಿನ ಪ್ರಶಾಂತತೆ ಹಾಗೂ ಭೌಗೋಳಿಕತೆ ಪದಕ್ಕೂ ಮೀರಿದ ಭಾವವನ್ನು ನೀಡುತ್ತದೆ. ಸ್ವಲ್ಪ ದುಬಾರಿ ಎನಿಸಿದರೂ ಜೀವನದಲ್ಲಿ ಒಮ್ಮೆ ಹೋಗಿ ಉಳಿದು ಬರಲು ಹೇಳಿ ಮಾಡಿಸಿದ ಜಾಗವಿದು!

No comments:
Post a Comment