ಜೂಲೈ 10, 2025
ನೀಲಗಿರಿ ತಪ್ಪಲಿನ ಕೊಡನಾಡಿ
ನಾನು ಪ್ರಕೃತಿ ಪ್ರೇಮಿ. ಪ್ರಕೃತಿಯ ಪ್ರತಿಯೊಂದು ವಿದ್ಯಮಾನ ನನ್ನಲ್ಲಿ ಸಂಚಲನ ಮೂಡಿಸುತ್ತದೆ. ಸೂರ್ಯೋದಯ ಹಾಗೂ ಸೂರ್ಯಾಸ್ತವಂತೂ ನನ್ನನ್ನು ನಾನೇ ಮರೆಯುವಂತೆ ಮಾಡುವ ಘಳಿಗೆಗಳು. ಕರಾವಳಿಯವಳಾದ ನನಗೆ ಸಮುದ್ರ ತೀರದ ಸೂರ್ಯಾಸ್ತದ ದೃಶ್ಯ ಚಿರಪರಿಚಿತ. ಈಗ ಸಾಗರ ವಾಸಿಯಾದ ನಾನು ಅಮಟೆಕೊಪ್ಪದ ನಮ್ಮ ಹೊಂಗಿರಣ ಕ್ಯಾಂಪಸ್ ನ ಸೂರ್ಯಾಸ್ತವನ್ನು ಸದಾ ಸವಿಯುವ ಭಾಗ್ಯ ಹೊಂದಿರುವವಳು. ಹಿನ್ನೀರಿನ ತಟದಲ್ಲಿ ಕಾಣುವ ಸೂರ್ಯಾಸ್ತವಂತೂ ನಯನ ಮನೋಹರವಾದುದು. ನನಗೆ ಬೆಳಗು ಬೇಗ ಆಗುವ ಕಾರಣ ಪ್ರತಿದಿನ ಸೂರ್ಯೋದಯವನ್ನು ನನ್ನ ಅಡುಗೆಮನೆಯ ಕಿಟಕಿಯಿಂದ ನೋಡುವ ಸೌಭಾಗ್ಯ ನನಗಿದೆ. ಆದರೆ ಕಳೆದ ವಾರದ ನನ್ನ ತಿರುಗಾಟದಲ್ಲಿ ನೀಲಗಿರಿ ತಪ್ಪಲಿನ ಕೊಡನಾಡಿನಲ್ಲಿ ನಾನು ಕಂಡ ಸೂರ್ಯೋದಯ ಸಮ್ಮೋಹಕವಾಗಿತ್ತು. ನಾವು ಉಳಿದುಕೊಂಡಿದ್ದ ರೆಸಾರ್ಟ್ ಒಂದು ಬೆಟ್ಟದ ತುದಿಯಲ್ಲಿದ್ದು ನಾವಿದ್ದ ಕೊಠಡಿಯ ಗಾಜಿನ ಕಿಟಕಿಯಿಂದ ನಾವು ಕುಳಿತಲ್ಲೇ ಕುಳಿತು ಸೂರ್ಯೋದಯದ ಸದೃಶತೆಯನ್ನು ನೋಡುವ ಅವಕಾಶ ನನಗೆ ಸಿಕ್ಕಿದ್ದು ಒಂದು ಅವಿಸ್ಮರಣೀಯ ಅನುಭವ!
ಬೆಳಗಿನ ಐದು ಕಾಲರ ಸಮಯವದು. ಅಲ್ಲಿಯವರೆಗೆ ಕತ್ತಲ ಮುಸುಕಿನಲ್ಲಿ ಕಾಣದಾಗಿದ್ದ ಪರ್ವತದ ಸಾಲುಗಳು ಕೆಂಪಗಾಗುತ್ತಿದ್ದ ಆಗಸದ ಬೆಳಕಿನಲ್ಲಿ ಕಣ್ಣಿಗೆ ಗೋಚರಿಸತೊಡಗಿದವು. ನಾನು ಬಿಟ್ಟ ಕಣ್ಣು ಬಿಡದಂತೆ ಆ ಬೆಳಕಿನ ಬದಲಾವಣೆಯ ಹಿನ್ನೆಲೆಯಲ್ಲಿ ಕಂಡ ನಿಸರ್ಗದ ರೂಪಾಂತರವನ್ನು ನೋಡುತ್ತಿದ್ದೆ. ಇತ್ತ ನಾನಿದ್ದ ಕೊಠಡಿಯ ಕೋಣೆಯ ಗಾಜಿನ ಕಿಟಕಿಗೆ ಆತು ನಿಂತಿದ್ದ ನಾನು. ಅತ್ತ ಅನತಿ ದೂರದಲ್ಲಿ ಕಣಿವೆಯ ನಡುವೆ ಏಕಾಂಗಿಯಾಗಿ ನಿಂತಿದ್ದ ಚೂಪನೆಯ ಬಂಡೆ. ಸುತ್ತಲೂ ಇಳಿಜಾರಿನ ಬೆಟ್ಟ ಗುಡ್ಡಗಳು. ದೂರದಲ್ಲಿ ಪದರ ಪದರವಾಗಿ ಕಾಣುವ ಪರ್ವತದ ಸಾಲುಗಳು. ಅದೊಂದು ಮಾಂತ್ರಿಕ ಕ್ಷಣ. ಕೆಂಪಚ್ಛಾದಿತ ಆಗಸದ ನಸು ಬೆಳಕಿನಲ್ಲಿ ಕಾಣಲೋ ಬೇಡವೋ ಎಂಬಂತೆ ಕಾಣುತ್ತಿದ್ದ ಈ ಎಲ್ಲವುಗಳು ನನ್ನನ್ನು ಯಾವುದೋ ಮಾಯಾಜಾಲದಲ್ಲಿ ಸಿಕ್ಕಿಸಿದ್ದು ಸುಳ್ಳಲ್ಲ. ಒಂದರೆಗಳಿಗೆ ದೃಷ್ಟಿ ಆಚೀಚೆ ಸರಿದರೆ ಎದುರಿಗೆ ಕಾಣುವ ದೃಶ್ಯ ಕಣ್ತಪ್ಪಿ ಹೋಗಬಹುದೆಂಬ ಹಪಹಪಿಕೆ ನನ್ನದು. ಒಂದು ರೀತಿಯ ಧ್ಯಾನಸ್ಥ ಸ್ಥಿತಿಯಲ್ಲಿ ಆಗಸದಲ್ಲಿ ಆಗುತ್ತಿದ್ದ ಬಣ್ಣದ ಛಾಯೆಯ ಪರಿವರ್ತನೆ ಹಾಗೂ ಅದರಿಂದ ಸುತ್ತಲಿನ ಪ್ರಕೃತಿಯ ದೃಶ್ಯಾವಳಿಯಲ್ಲಿ ಆಗುತ್ತಿದ್ದ ಬದಲಾವಣೆಯನ್ನು ನೋಡುತ್ತಾ ನೋಡುತ್ತಾ ನಾನು ನನ್ನನ್ನೇ ಮರೆತು ಬಿಟ್ಟಿದ್ದೆ. ಒಂದು ರೀತಿಯಲ್ಲಿ ನಾನಲ್ಲಿ ಕಳೆದು ಹೋಗಿದ್ದೆ ಎಂದರೂ ತಪ್ಪಾಗಲಾರದು. ಕ್ಷಣಕ್ಷಣಕ್ಕೂ ನನ್ನ ಸುತ್ತಲೂ ಆಗುತ್ತಿದ್ದ ಬದಲಾವಣೆಯನ್ನು ನಾನು ಅಚಲವಾಗಿ ನೋಡುತ್ತಿದ್ದೆ. ಆ ಘಳಿಗೆಯಲ್ಲಿ ದೈಹಿಕವಾಗಿ ನನ್ನಲ್ಲಿ ಯಾವ ಬದಲಾವಣೆ ಕಾಣದಿದ್ದರೂ ಮಾನಸಿಕವಾಗಿ ನಾನು ಪ್ರಕೃತಿಯ ದೃಶ್ಯದ ವಿಸ್ತರಿಕೆಯ ಜೊತೆಗೆ ವಿಕಸಿತಗೊಳ್ಳುತ್ತಿದ್ದೆ.
ಆಗ ನನ್ನೊಳಗೆ ಉದಿಸಿದ್ದು ನಾನು, ಆ ಕೆಂಪನೆಯ ಆಗಸ ಹಾಗೂ ಆಗಸಕ್ಕೆ ಮೊಗವೆತ್ತಿ ನಿಂತಿದ್ದ ಚೂಪನೆಯ ಒಂಟಿ ಬೆಟ್ಟದ ಜೊತೆಗೆ ತಾದಾತ್ಮ್ಯತೆ ಹೊಂದಿರುವಂತಹ ಭಾವ. ಬದಲಾವಣೆ ಜಗದ ನಿಯಮ; ಅದನ್ನು ಸ್ವೀಕರಿಸಿ ಮುಂದೆ ಸಾಗುವುದು ಬದುಕಿನ ವಾಸ್ತವತೆ ಎನ್ನುವ ಸಂದೇಶವನ್ನು ಆ ಘಳಿಗೆ ಕೊಡುತ್ತಿದೆಯೋ ಎನ್ನುವ ಆಲೋಚನೆ ನನ್ನೊಳಗೆ ಫಕ್ಕನೆ ಬಂದು ಇಣುಕಿದ್ದು ನಿಜ. ಆ ಘಳಿಗೆಯಲ್ಲಿ ಮನದೊಳಗಿನ ವಿಚಾರ ಸರಣಿ ಪುಂಖಾನುಪುಂಖವಾಗಿ ಸಾಗಿ ನನ್ನನ್ನು ಆಗೀಗ ವಾಸ್ತವತೆಯ ಕಡೆಗೆ ಎಳೆದು ರಗಳೆ ಮಾಡಿದ್ದು ನನಗೆ ಸ್ವಲ್ಪ ಕಿರಿಕಿರಿ ಕೊಟ್ಟರೂ ಅದನ್ನು ಮೀರಿ ನಾನು ಪುನಃ ಸೂರ್ಯೋದಯದ ಸೌಂದರ್ಯವನ್ನು ನೋಡುತ್ತ ವಿಸ್ಮೃತಿಗೆ ಜಾರಿದ್ದು ರೋಚಕವಾದದ್ದು!
ಕವಿಯ ಉಕ್ತಿಯಂತೆ “ಸೂರ್ಯೋದಯ, ಚಂದ್ರೋದಯ ದೇವರ ದಯೆ ಕಾಣೋ” ಎಂಬುವುದನ್ನು ನನ್ನ ಮಟ್ಟಿಗೆ ಸತ್ಯವಾಗಿಸಿದ್ದು ಅಂದಿನ ಸೂರ್ಯೋದಯ. ಅದನ್ನು ನೋಡಿ ಅನುಭವಿಸಿದಲ್ಲಿ ಮಾತ್ರ ಅದರ ಸೌಂದರ್ಯದ ಸಾಕಾರತೆ ಕಾಣುತ್ತದೆ. ಇಲ್ಲವಾದರೆ ಅದು ಕೇವಲ ಪದಗುಚ್ಛವಾಗಿ, ವಿವರಣಾತ್ಮಕವಾಗಿ ಉಳಿದು ಬಿಡುತ್ತದೆ. ಅವಕಾಶ ಸಿಕ್ಕಾಗ ಇಂತಹ ಅನುಭವ ಪಡೆಯುವುದರಲ್ಲಿ ಜೀವನದ ಸಾಫಲ್ಯತೆ ಇದೆಯಲ್ಲವೆ?
Posted 12/7/2025
No comments:
Post a Comment