Tuesday, July 22, 2025

‘ವೃಕ್ಷ ಮೋಹ’ - ಶೋಭಾ ಸೋಮಯಾಜಿ

 July 21, 2025

ನಮ್ಮ ಕಾಲೇಜಿನ ಗ್ರೌಂಡ್ ನ ಮಧ್ಯದಲ್ಲೊಂದು ಪುಟ್ಟದೊಂದು ಮಾವಿನಮರವಿದೆ. ಅದನ್ನು ಯಾವುದೋ ಒಂದು ಸಂದರ್ಭದಲ್ಲಿ ನಮ್ಮ ಯಾವುದೋ ಮಗು ನೆಟ್ಟಿದ್ದಿರಬಹುದು. ಯಾಕೆಂದರೆ ನಮಗೊಂದಿಷ್ಟು ಜನಕ್ಕೆ ‘ವೃಕ್ಷ ಮೋಹ’ ಇರುವ ಕಾರಣ ಸೂಕ್ತ ಜಾಗ ಕಂಡಲ್ಲೆಲ್ಲ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ನಮ್ಮಲ್ಲಿ ಆಗುತ್ತಿರುತ್ತದೆ. ಆ ಗಿಡ ನೆಟ್ಟ ಘಳಿಗೆಯೇ ಸರಿ ಇಲ್ಲವೇನೋ? ಅದು ಚಿಗುರಿ ಒಂದೆರಡಡಿ ಬೆಳೆದಾಗ ಹಲವಾರು ಸಲ ಕಟ್ಟಡ ನಿರ್ಮಾಣದ ಸಾಮಾನು ಸರಂಜಾಮುಗಳನ್ನು ತರುವ ವಾಹನಗಳು ಅದರ ಮೇಲೇ ಸವಾರಿ ಮಾಡಿ ಅದನ್ನು ನೆಲಸಮ ಮಾಡಿದ್ದವು. ಛೇ! ಆ ಗಿಡ ಹಾಳಾಯಿತಲ್ಲಾ ಎಂದು ನಾವು ಚಿಂತಿಸುತ್ತಿರುವಾಗಲೇ ಅದು ಪುನಃ ಚಿಗುರ ತೊಡಗುತ್ತಿತ್ತು. ನಾವು ಗ್ರೌಂಡಿನ ಮಧ್ಯೆ ನಡಿಗೆಗೆ ಪೇವರ್ಸ್ ಹಾಕಿದ ಮೇಲೆ ಅಲ್ಲಿ ವಾಹನ ಸಂಚಾರ ಆಗದೇ ಇದ್ದ ಕಾರಣ ಕಳೆದ ಒಂದೆರಡು ವರ್ಷಗಳಲ್ಲಿ ಅದು ಚೆನ್ನಾಗಿ ಬೆಳೆದು ಸುಮಾರು ಆರಡಿಗೂ ಮೀರಿದ ಎತ್ತರ ಹಾಗೂ ಮೂರ್ನಾಲ್ಕಡಿಗೂ ಮೀರಿದ ಅಗಲಕ್ಕೆ ವಿಸ್ತರಿಸಿ ಎಲ್ಲರ ಕಣ್ಮನ ಸೆಳೆಯುವಂತೆ ಹುಲುಸಾಗಿ ಬೆಳೆದು ಮನಸ್ಸಿಗೆ ಹರುಷ ತಂದಿತ್ತು. ಇನ್ನಾದರೂ ಅದು ನಿರುಮ್ಮಳವಾಗಿ ಬೆಳೆಯುವ ಸಾಧ್ಯತೆ ಇದೆಯಲ್ಲ ಎಂದು ಯೋಚಿಸಿ ಖುಷಿಯಾಯಿತು. 


ಅಯ್ಯೋ! ಅದರ ದುರಂತದ ಬದುಕು ಮರುಕಳಿಸಿತು! ಈಗ್ಯೆ ಒಂದೂವರೆ ತಿಂಗಳ ಹಿಂದೆ ಬಿರುಮಳೆಯಲ್ಲಿ, ಬೀಸುಗಾಳಿಯ ಮಧ್ಯೆ ಸಿಡಿಲಿನ ಹೊಡೆತಕ್ಕೆ ಅದರ ರೆಂಬೆ ಕೊಂಬೆಗಳು ಛಿದ್ರಗೊಂಡು ಮರದಿಂದ ಬೇರ್ಪಟ್ಟು ಪುನಃ ಆ ಮರದ ಮೂರಡಿ ಕಾಂಡ ಮಾತ್ರ ಬೋಳು ಬೋಳಾಗಿ ಉಳಿಯಿತು. ಇನ್ನು ಆ ಮರದ ಕಥೆ ಮುಗಿದೇ ಹೋಯಿತು ಎಂದು ನಾವೆಲ್ಲ ತೀರ್ಮಾನಿಸಿದೆವು. ಶೋಕಾಚರಣೆಯೂ ನಡೆಯಿತು! ಆಶ್ಚರ್ಯಕರವಾಗಿ ಹದಿನೈದು ದಿನಗಳಲ್ಲಿ ಅದು ಚಿಗುರೊಡೆಯತೊಡಗಿತು. ಆ ಕಾಂಡದ ಆಚೀಚೆ ಕಂದು-ಕೆಂಪು ಬಣ್ಣದ ಎಳೆಯ ಎಲೆಗಳು ಕಾಣಿಸಿದಾಗ ಆ ಮರದ “ಧೀ ಶಕ್ತಿ”ಯ ಬಗ್ಗೆ ಹೆಮ್ಮೆ ಎನಿಸಿತು. ಆ ಮರ “ಎಂತಹ ಕಷ್ಟಗಳು ಬಂದರೂ ನಾನು ಅದನ್ನು ಎದುರಿಸಿ ಬದುಕಿಯೇ ಬದುಕುತ್ತೇನೆ” ಎಂಬ ಮನಸ್ಥಿತಿ ಹೊಂದಿ ಹೋರಾಡಿ ಪುನಃ ಬದುಕಿನತ್ತ ಕೈ ಚಾಚುತ್ತಿರುವುದನ್ನು ಕಂಡು ಅದಕ್ಕೆ ತಲೆಬಾಗಿ ನಮಿಸುವಂತಹ ಭಕ್ತಿಪೂರ್ವಕ ಗೌರವ ಹುಟ್ಟಿದ್ದಂತೂ ನಿಜ!

ನಾವು ನಿಸರ್ಗವನ್ನು ಗಮನಿಸುತ್ತಿದ್ದರೆ ಇಂತಹ ಎಷ್ಟೋ ಸಂಗತಿಗಳು ನಮಗೆ ಬದುಕಿನ ದೊಡ್ಡ ಪಾಠಗಳನ್ನು ಅರುಹುವುದನ್ನು ಕಾಣಬಹುದಲ್ವೆ? “ಬರೀ ಮನುಷ್ಯ ಮಾತ್ರ ಹೋರಾಟಗಾರನಲ್ಲ; ಕ್ರಿಯಾಶೀಲನಲ್ಲ. ಅದಕ್ಕೂ ಮೀರಿದ ಶಕ್ತಿ ತನ್ನಲ್ಲೂ ಇದೆ” ಎನ್ನುವ ಸಂದೇಶವನ್ನು ಕೊಡುತ್ತಿರುವ ನಮ್ಮ ಮಾವಿನ ಮರದ ಬಗ್ಗೆ ಹೆಚ್ಚಿಗೆ ಹೇಳಲು ನನ್ನಲ್ಲಿ ಪದಗಳಿಲ್ಲ. ಇನ್ನಾದರೂ ಆ ಮರ ಸಮೃದ್ಧವಾಗಿ ಬೆಳೆಯಲಿ. ಯಾವುದೇ ತೊಂದರೆಗಳು ಅದನ್ನು ಬಾಧಿಸದಿರಲಿ ಎಂದು ನಾನು ಹೃನ್ಮನದಿಂದ ಪ್ರಾರ್ಥಿಸುತ್ತೇನೆ. ನೀವೂ ನನ್ನ ಜೊತೆಗೆ ದನಿಗೂಡಿಸುತ್ತೀರಲ್ಲವೆ?


Posted 23/7/2025

No comments:

Post a Comment