July 25, 2025
ನಾನು ಕರಾವಳಿಯವಳಾದರೂ ಮಲೆನಾಡಿನವಳಾಗಿ ಮೂರು ದಶಕಗಳು ಕಳೆದವು. ಕರಾವಳಿಯ ಸೊಗಡನ್ನು ಉಳಿಸಿಕೊಂಡು ಮಲೆನಾಡಿನ ಜೀವನವನ್ನು ಸವಿಯುತ್ತಿರುವ ಕೆಲವು ವ್ಯಕ್ತಿಗಳಲ್ಲಿ ನಾನೂ ಒಬ್ಬಳು. ನಾನು ಎಂತಹವಳೆಂದರೆ “ರೋಮ್ ನಲ್ಲಿ ರೋಮನ್ ನಂತೆ” ಇರುವವಳು. ಈಗ ಹೆಚ್ಚು ಕಡಿಮೆ ಪೂರ್ತಿಯಾಗಿ ಮಲೆನಾಡಿಗಳಾಗಿದ್ದೇನೆಂದರೆ ತಪ್ಪಿಲ್ಲ.
ಮಲೆನಾಡೆಂದರೆ ಮರೆಯಲು ಆಗದೇ ಇರುವಂತಹುದು ಹನಿ ಕಡಿಯದೇ ಸುರಿಯುವ ಮಳೆ! ಇಲ್ಲಿ ಮಳೆಗಾಲವೆಂದರೆ ಸೂರ್ಯ ದೇವರ ದರ್ಶನ ಅಪರೂಪವಾಗಿ ಸಿಗುವಂತಹುದು. ಚುಮುಚುಮು ಚಳಿಯಲ್ಲಿ ಮನೆಯಲ್ಲಿ ಕಿಟಕಿಯ ಬಳಿ ಕುಳಿತು ಕುರುಕುಲು ತಿಂಡಿಯೊಡನೆ ಬಿಸಿ ಬಿಸಿ ಪಾನೀಯ ಸವಿಯುವ ಭಾಗ್ಯ ನಮ್ಮಂತಹ ಮಲೆನಾಡಿಗರಿಗೆ ಸಿಕ್ಕಿರುವುದು ಪುಣ್ಯವಲ್ಲದೆ ಮತ್ತೇನು!?
ಆದರೆ ಪುಣ್ಯಫಲ ಜಾಸ್ತಿಯಾಗಿ ಸಂತಸ ಪಡುವ ಸ್ಥಿತಿ ನಮ್ಮದಲ್ಲ. ಮಳೆಗಾಲವೆಂದರೆ ಮಳೆಯ ಮುದದೊಡನೆ ಸವಾಲಾಗಿ ಬರುವುದೇ ಒಣಗದೆ ಹಸಿ ವಾಸನೆಯೊಡನೆ ನಮ್ಮನ್ನು ದಣಿಸುವ ಬಟ್ಟೆಗಳ ಸಾಲು! ಹತ್ತು ಹದಿನೈದು ದಿನಗಳಾದರೂ ಸರಿಯಾಗಿ ಒಣಗದೆ ಇನ್ನೂ ತಣ್ಣಗೇ ಉಳಿಯುವ ಬಟ್ಟೆಗಳು ನಮಗೆ ಕಿರಿಕಿರಿ ಕೊಡುವುದಂತೂ ಸತ್ಯ. ಅದರಲ್ಲೂ ಒಳವಸ್ತ್ರಗಳು ಸರಿಯಾಗಿ ಒಣಗದೇ ಹಸಿಹಸಿಯಾಗಿ ಉಳಿದು ನಮ್ಮನ್ನು ಕಾಡಿಸುವಾಗ ಅವುಗಳನ್ನು ಧರಿಸುವುದೇ ಅಸಹನೀಯ ಎಂದೆನಿಸುತ್ತದೆ. ಹಸಿಹಸಿ ಚಡ್ಡಿಯನ್ನು ಹಾಕುವ ಅನುಭವವನ್ನು ನೀವೇ ಒಮ್ಮೆ ಊಹಿಸಿಕೊಳ್ಳಿ?!
ನಾನು ಮದುವೆಯಾಗಿ ಬಂದ ಹೊಸದರಲ್ಲಿ ರಜಾಕಾಲದಲ್ಲಿ ಮನೆ ತುಂಬಾ ಜನರಿದ್ದ ಕಾಲದಲ್ಲಿ ಒಳ ಉಡುಪನ್ನು ಒಣಗಿಸಿಕೊಳ್ಳುವುದು ಒಂದು ಸಾಹಸವೇ ಆಗಿತ್ತು. ಬಚ್ಚಲು ಒಲೆಯ ಹತ್ತಿರ ಒಳ ಉಡುಪನ್ನು ಹಿಡಿದು ಒಣಗಿಸಿಕೊಳ್ಳುವ ಅವ್ಯಾಹತ ಪ್ರಯತ್ನ ನಡೆಯುತ್ತಿತ್ತು. ಕೆಲವೊಮ್ಮೆ ಬಿಸಿಬಿಸಿ ಸ್ನಾನದ ಹಂಡೆಯೂ ಚಡ್ಡಿ ಒಣಗಿಸುವ ಪ್ರಶಸ್ತ ಜಾಗವಾಗಿ ಮಾರ್ಪಾಡಾಗುತ್ತಿತ್ತು. ಮೊನ್ನೆ ನನ್ನ ಆತ್ಮೀಯರೊಬ್ಬರು ಅವರ ಪರಿಚಿತರ ಮನೆಯಲ್ಲಿ ಬಚ್ಚಲು ಒಲೆಯ ಪೈಪಿಗೆ ತಾಗಿ ಹಗ್ಗ ಕಟ್ಟಿ ಚಡ್ಡಿ ಒಣಗಿಸುತ್ತಿದ್ದ ಬಗ್ಗೆ ಹೇಳಿದರು. ಹರಟೆ ಹೊಡೆಯಲು ಇದೊಂದು ರೋಚಕ ವಿಷಯವೇ ಸರಿ. ಇಂತಹ ಸರಳ ಸಮಸ್ಯೆಯನ್ನು ಸಂಕೀರ್ಣ ವಿಷಯವಾಗಿ ರಸವತ್ತಾಗಿ ಗಂಟೆಗಟ್ಟಲೆ ಮಾತನಾಡಲು ಸಾಧ್ಯ ತಾನೆ? ಇದು ಸರಳ ಸಮಸ್ಯೆಯಾದರೂ ಸರಿಯಾಗಿ ಒಣಗದೇ ಇರುವ ಒಳ ಉಡುಪನ್ನು ಧರಿಸಲು ಸಾಧ್ಯವಾಗದಿರುವುದು ಬದುಕನ್ನು ದುಸ್ತರಗೊಳಿಸುತ್ತದೆಯಲ್ಲವೆ? ಈಗಲೂ ಕೂಡಾ ಮಳೆಗಾಲ ಬಂತೆಂದರೆ ಮಲೆನಾಡಿಗರಿಗೆ ಒಳ ಉಡುಪನ್ನು ಒಣಗಿಸಿ ಬಳಸುವುದು ಒಂದು ಸವಾಲಾಗಿ ಉಳಿದಿರಬಹುದು!!! ಹೌದಾದರೆ ನನ್ನೊಡನೆ ಜೈ ಜೈ ಮಳೆರಾಯ ಎಂದು ದನಿಗೂಡಿಸಿ
Posted 27/7/2025
No comments:
Post a Comment