Saturday, August 2, 2025

ದೇವರ ದೀಪ ಹಚ್ಚುವುದು - ಶೋಭಾ ಸೋಮಯಾಜಿ

August 2, 2025 

ದೇವರ ದೀಪ ಹಚ್ಚುವುದು ಒಂದು ಸರಳವಾದ ಕೆಲಸ. ದೀಪಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ, ಬತ್ತಿಯನ್ನು ಅದರೊಳಗಿನ ಜಿಡ್ಡಿನಲ್ಲಿ ನೆನೆಸಿ, ಕಡ್ಡಿ ಗೀರಿ, ಆ ಬತ್ತಿ ಬೆಂಕಿಯನ್ನು ತನ್ನ ತುದಿಯೊಂದರಲ್ಲಿ ಇಟ್ಟುಕೊಂಡು ಉರಿಯುವಂತೆ ಮಾಡಿದರಾಯಿತು. ಅಷ್ಟೇ!

ಇವತ್ತು ಬೆಳಿಗ್ಗೆ ದೇವರ ದೀಪ ಹಚ್ಚುವಾಗ ನನಗೇಕೋ ಆ ದೀಪ ಹಚ್ಚುವ ಪ್ರಕ್ರಿಯೆಯ ಬಗ್ಗೆ ಬರೆಯಬೇಕೆಂದೆನಿಸಿತು. ಸುಮಾರು ಒಂದೈದು ನಿಮಿಷ ನಡೆಯುವ ಆ ಪ್ರಕ್ರಿಯೆ ಒಂದು ‘ದಿವ್ಯ ಘಳಿಗೆ’ ಎಂದೆನಿಸಿತು. ದೇವರ ಗೂಡಿನೊಳಗಿರುವ ಉರಿಯುವ ದೀಪ ಮತ್ತು ನನ್ನೊಳಗೆ ಏನೋ ಅವಿನಾಭಾವ ಸಂಬಂಧ ಉದಿಸಿದಂತೆನಿಸಿತು. 

ನಾನು ದೇವರಿಗೆ ದೀಪ ಹಚ್ಚಲು ಪ್ರಾರಂಭಿಸಿ ಏಳೆಂಟು ವರ್ಷಗಳಾದವಷ್ಟೆ. ಮನೆಯಲ್ಲಿ ದೇವರ ಗೂಡಿನ ಅಗತ್ಯವೇ ಇಲ್ಲವೆಂದು ವಾದಿಸಿದವಳು ನಾನು. ಹಾಗೆಂದು ನಾನೇನು ನಾಸ್ತಿಕಳಲ್ಲ. ನಮ್ಮನ್ನೆಲ್ಲ ಪೊರೆಯುವ ಒಂದು ಅತೀಂದ್ರಿಯ ಅಥವಾ ಅಲೌಕಿಕ ಶಕ್ತಿ ಇದೆ ಎಂಬ ನಂಬಿಕೆ ನನಗೆ ಮೊದಲಿನಿಂದಲೂ ಇತ್ತು(ಎಷ್ಟೆಂದರೂ ದೇವಸ್ಥಾನದ ಅರ್ಚಕರ ಮನೆಯವಳಲ್ಲವೇ ನಾನು!) ಆದರೆ ಪೂಜೆ ಪುನಸ್ಕಾರಗಳಲ್ಲಿ ಎಳ್ಳಷ್ಟೂ ನಂಬಿಕೆ ಇಲ್ಲದವಳು ನಾನಾಗಿದ್ದೆ. ಭಕ್ತಿ ಭಾವ ಮನಸ್ಸಿನಲ್ಲಿರಬೇಕೇ ಹೊರತು ಬಾಹ್ಯ ಆಚರಣೆಗಳಲ್ಲಲ್ಲ ಎಂಬುವುದು ನನ್ನ ನಿಲುವಾಗಿತ್ತು. ಈಗಲೂ ಕೂಡಾ ಪೂಜೆ ನಡೆಯುವಲ್ಲಿ ನಾನಿದ್ದರೆ ‘ನಾನಲ್ಲಿ ಸಲ್ಲದವಳು’ ಎಂದೆನಿಸಿ ಬಿಡುತ್ತದೆ. ಆ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸಹ್ಯವೆನಿಸುವುದಿಲ್ಲ. ಇದಲ್ಲದೇ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಜನಜಂಗುಳಿ ಇದ್ದರೆ ನನ್ನಲ್ಲಿರುವ ಅಲ್ಪ ಸ್ವಲ್ಪ ಭಕ್ತಿಯೂ ಮಾಯವಾಗಿ ಬಿಡುತ್ತದೆ. 

ದೇವರ ಹಾಗೂ ನಮ್ಮ ನಡುವಣ ನಂಟು ವೈಯಕ್ತಿಕ ಮಟ್ಟದಲ್ಲಿ ಇದ್ದರೆ ಚೆಂದವಲ್ಲವೆ? ಆ ಅಲೌಕಿಕ ಶಕ್ತಿಯೊಡನೆ ನನ್ನದೇ ಆದ ಒಂದು ವೈಯಕ್ತಿಕ ಅನುಬಂಧವಿರಬೇಕು ಎನ್ನುವ ನಿಲುವು ನನ್ನದು. ಅದು ನನ್ನೊಳಗಿನ ಒಂದು ‘ಭಾವ’ವಾಗಿರಬೇಕೇ ಹೊರತು ಪ್ರದರ್ಶನದ ವಿಷಯವಾಗಿರಬಾರದು ಎಂಬುವುದು ನನ್ನ ಅಂಬೋಣ. 

ಅಂತಹ ಮನೋಧರ್ಮದ ನನ್ನಲ್ಲೂ ಹಲವು ಬದಲಾವಣೆಗಳಾದವು. ಬದುಕಿನ ಏರುಪೇರುಗಳು, ಒತ್ತಡಗಳು, ಸವಾಲುಗಳು, ಹತಾಶೆಗಳು ನನ್ನನ್ನು ದೇವರ ಗೂಡಿನ ಮುಂದೆ ಕುಳಿತು ಜಪತಪದಲ್ಲಿ ತೊಡಗುವಂತೆ ಮಾಡಿದವು. ನಾನು ದೇವರ ದೀಪ ಹಚ್ಚಿ ಒಂದಿಷ್ಟು ಸ್ತೋತ್ರಗಳನ್ನು ಹೇಳುತ್ತಾ ನನ್ನೊಳಗಣ ನೆಮ್ಮದಿಗೆ ದಾರಿ ಹುಡುಕ ಹೊರಟಿದ್ದು ನನಗೇ ಪರಮಾಶ್ಚರ್ಯ ಉಂಟು ಮಾಡಿರುವ ವಿಷಯ! ಇಂತಹ ಬದಲಾವಣೆಯಿಂದ ನನಗೆ ಲಾಭವಾದದ್ದೇ ಜಾಸ್ತಿ. ಬೆಳಗಿನ ಆ ಒಂದಷ್ಟು ಹೊತ್ತು ನಾನು ನನಗಾಗಿ ಮೀಸಲಿಡುವ “ನನ್ನದೇ ಸಮಯ”ವಾಗಿರುತ್ತದೆ. ಆ “ನನ್ನ ಸಮಯದಲ್ಲಿ” ಪರಿಹಾರ ಸಿಗದ ಎಷ್ಟೋ ಸಮಸ್ಯೆಗಳ ಬಗ್ಗೆ “ಶಾಂತವಾದ ಮನಸ್ಸಿನಿಂದ” ಯೋಚಿಸಿ ದಡ ಮುಟ್ಟುವ ದಾರಿ ಸಿಗುತ್ತದೆ. ಅಂದರೆ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ ವಿಚಾರ ಮಾಡಲು ಅದು ಪ್ರಶಸ್ತ ಸಮಯವಾಗಿರುತ್ತದೆ. ಇಲ್ಲೂ ನಾನು “ಸ್ವಾರ್ಥ ಭಾವ”ದಿಂದಲೇ ನನ್ನ ಸಮಯವನ್ನು ಪೂಜೆಗೆ ಮೀಸಲಿಡುವುದು ಕೆಲವೊಮ್ಮೆ ನನ್ನಲ್ಲಿ ಅಪರಾಧಿ ಭಾವವನ್ನು ಮೂಡಿಸುತ್ತದೆ. ಅದೇನೇ ಇರಲಿ, ನನ್ನ ಚಿಂತನೆಯಲ್ಲಾದ ಬದಲಾವಣೆ ಎನ್ನುವುದು ಬೆಳಗಿನ “ಅಷ್ಟು ಹೊತ್ತು” ಸಮರ್ಪಕವಾಗಿ ಬಳಕೆ ಆಗಿ ಗೂಡಿನೊಳಗೆ ದೇವರ ದೀಪ ಬೆಳಗಿದಂತೆ ನನ್ನ ಮನಸ್ಸಿನ ಗೂಡಿನೊಳಗೆ ಶಾಂತಿಯ ದೀಪ ಬೆಳಗಲು ಕಾರಣವಾಗಿದೆ ಎಂದರೆ ತಪ್ಪಿಲ್ಲ!?

Posted 3/8/2025


No comments:

Post a Comment