Thursday, August 7, 2025

PANCHAKAJJAYA PURAANA - SHOBHA ARTICLE

6th August 2025 


ಪಂಚಕಜ್ಜಾಯದ ಬಗ್ಗೆ ಗೊತ್ತಿಲ್ಲದೆ ಇರುವವರು ಯಾರೂ ಇಲ್ಲವೇನೊ? ಎಲ್ಲಾ ಪೂಜೆ ಪುನಸ್ಕಾರಗಳಿಗೆ ಪಂಚಕಜ್ಜಾಯವನ್ನು ತಯಾರಿಸಿಯೆ ತಯಾರಿಸುತ್ತಾರೆ. ಹೆಚ್ಚಿನ ದೇವಸ್ಥಾನಗಳಲ್ಲಿ ಪಂಚಕಜ್ಜಾಯ ಪ್ರಸಾದದ ರೂಪದಲ್ಲಿ (ದುಡ್ಡು ಕೊಟ್ಟು ಕೊಂಡುಕೊಳ್ಳುವ ಪ್ರಸಾದ) ದೊರೆಯುತ್ತದೆ. ಒಟ್ಟಿನಲ್ಲಿ ಪಂಚಕಜ್ಜಾಯ ಶುಭ ಕಾರ್ಯಗಳ ಮುಖ್ಯವಾದ ಭಕ್ಷ್ಯಗಳಲ್ಲಿ ಒಂದು.


ಚಿಕ್ಕವಳಿರುವಾಗ ನನಗೆ ಪುಟಾಣಿಯಿಂದ(ಹುರಿಗಡಲೆ) ಮಾಡಿದ ಪಂಚಕಜ್ಜಾಯ ಬಹಳ ಇಷ್ಟವಾಗುತ್ತಿತ್ತು. ಅದನ್ನು ಅಂಗೈಯಲ್ಲಿ ಹಾಕಿಕೊಂಡು ನಾಲಿಗೆಯಿಂದ ನೆಕ್ಕಿ ನೆಕ್ಕಿ ತಿನ್ನುವುದರಲ್ಲಿರುವ ಮಜಾ ತಿಳಿಯದವರಾರು? ಕೆಲವೊಮ್ಮೆ ನಮ್ಮ ಬಾಯಿ ಅಂಗೈ ಹತ್ತಿರ ಹೋದಾಗ ಅಪ್ಪಿತಪ್ಪಿ ಜೋರಾದ ಉಸಿರಾಟ ನಡೆದರೆ ಇಡೀ ಮುಖದ ತುಂಬಾ ಪುಟಾಣಿಯ ಪಂಚಕಜ್ಜಾಯ ಮೆತ್ತಿಕೊಳ್ಳುತ್ತಿತ್ತು. ಕೆಲವೊಮ್ಮೆ ಮೂಗಿನೊಳಗೂ ಹೊಕ್ಕು ತನ್ನ ಪ್ರತಾಪ ತೋರಿಸುತ್ತಿತ್ತು. ಮುಖಮೂತಿಯೆಲ್ಲಾ ಆ ಪಂಚಕಜ್ಜಾಯ ಮೆತ್ತಿಕೊಂಡಾಗ ಪರಸ್ಪರ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿ ಚುಡಾಯಿಸುವುದು ಒಂದು ಖುಷಿಯ ವಿಷಯವಾಗಿತ್ತು.

ಬಾಳೆಹಣ್ಣು, ಕಾಯಿತುರಿ, ತುಪ್ಪ, ಬೆಲ್ಲ, ಚಿಟಿಕೆ ಉಪ್ಪು ಹಾಕಿ ಕಿವುಚಿ ಅದಕ್ಕೆ ತೆಳು ಅವಲಕ್ಕಿ ಅಥವಾ ಅರಳನ್ನು ಸೇರಿಸಿ ಮಾಡುವ ಪಂಚಕಜ್ಜಾಯ ನನಗೆ ಬಹಳ ಇಷ್ಟ. ಅದಕ್ಕೊಂದು ವಿಚಿತ್ರವಾದ ಮೃದುತ್ವ ಹಾಗೂ ವಿಶೇಷ ರುಚಿ ಇರುತ್ತದೆ. ಎಷ್ಟು ತಿಂದರೂ ಅಜೀರ್ಣವಾಗುವುದಿಲ್ಲ.

ಇನ್ನೊಂದು ಪಂಚಕಜ್ಜಾಯ ಕೆಂಪು ಕಡಲೆಯನ್ನು ಹುರಿದು, ಪುಡಿ ಮಾಡಿ ಬೆಲ್ಲದ ಪಾಕದಲ್ಲಿ ಸೇರಿಸಿ, ಗೊಟಾಯಿಸಿ, ಒಂದು ಮಟ್ಟದ ಅಂಟು ಬಂದಾಗ ಗೊಟಾಯಿಸುವುದನ್ನು ನಿಲ್ಲಿಸಿದಲ್ಲಿ ಕಡಲೆ ಪಂಚಕಜ್ಜಾಯ ರೆಡಿ. ಅದು ಕೂಡಾ ಬಹಳ ರುಚಿಯಾದುದು. ಕೆಲವು ದೇವಸ್ಥಾನಗಳಲ್ಲಿ ಇದರೊಂದಿಗೆ ಕೊಬ್ಬರಿ, ಎಳ್ಳು….ಹೀಗೇ ಇತರೆ ಸಾಮಗ್ರಿಗಳನ್ನು ಬಳಸಿ ವಿಶೇಷವಾದ ಪಂಚಕಜ್ಜಾಯ ಮಾಡುತ್ತಾರೆ.

ಪಂಚಕಜ್ಜಾಯದಲ್ಲಿ ಇನ್ನೂ ಬಹಳಷ್ಟು ವಿಧಗಳಿದ್ದಾವೆ. ನನಗೆ ಗೊತ್ತಿರುವ ಮುಖ್ಯವಾದ ವಿಧಗಳ ಬಗ್ಗೆ ನಾನಿಲ್ಲಿ ಬರೆದಿದ್ದೇನೆ. ಚಿಕ್ಕವರಿದ್ದಾಗ ಹಬ್ಬ, ಹರಿದಿನಗಳಲ್ಲಿ ಇತರೆ ಸಿಸಿತಿಂಡಿಗಳಿದ್ದರೂ ಪೂಜೆ ಮುಗಿದ ತಕ್ಷಣವೇ ಹಂಚುತ್ತಿದ್ದ ಪಂಚಕಜ್ಜಾಯವನ್ನು ನಾವು ಬೇಡಿ ಬೇಡಿ ತಿನ್ನುತ್ತಿದ್ದೆವು. ಹೊಟ್ಟೆ ಹಸಿದಿರುತ್ತಿದ್ದ ಕಾರಣ ಪಂಚಕಜ್ಜಾಯ ಪರಮ ಶ್ರೇಷ್ಠ ಎಂದೆನಿಸುತ್ತಿತ್ತೇನೊ? ಪುಟಾಣಿ ಪಂಚಕಜ್ಜಾಯವನ್ನು ಅತಿಯಾಗಿ ತಿಂದಾಗ ಪುಡಿ ರೂಪದ ಪಂಚಕಜ್ಜಾಯ ನೀರಾಗಿ ಬೇಧಿಯ ರೂಪದಲ್ಲಿ ಹೊರ ಬಂದ ಘಟನೆಗಳೂ ಇವೆ. ಅದ್ಯಾವುದಕ್ಕೂ ಹೆದರದೆ ಪಂಚಕಜ್ಜಾಯ ಖರ್ಚಾಗುವ ತನಕ ಅದನ್ನು ತಿಂದು ತೇಗುತ್ತಿದ್ದದ್ದು ನಮ್ಮ ಜೀರ್ಣಶಕ್ತಿಯ ತಾಕತ್ತೇನೊ?

ಈಗೆಲ್ಲಾ ಬಗೆಬಗೆಯ ಸಿಹಿತಿನಿಸುಗಳಿವೆ. ಅವುಗಳ ಮುಂದೆ ನಮ್ಮ ಪಾಪದ ಪಂಚಕಜ್ಜಾಯ ನಗಣ್ಯವಾಗಿ ಕಾಣಬಹುದು. ಆದರೆ ನಮ್ಮ ಜಮಾನದವರಿಗೆ ಇಂದಿಗೂ ಪಂಚಕಜ್ಜಾಯವೇ ಪರಮ ಶ್ರೇಷ್ಠವಾಗಿರಬಹುದು ಎಂದು ನಾನು ತುಂಬು ವಿಶ್ವಾಸದಿಂದ ಹೇಳಬಲ್ಲೆ!

Posted 7/8/2025

No comments:

Post a Comment