Sunday, October 5, 2025

ಸುಖ - ದುಖ : ಶೋಭಾ ಸೋಮಯಾಜಿ

2/10/2025

Favebook Post


 ನಾನು ಮೂಲತಃ ಖುಷಿಯಿಂದಿರುವ ವ್ಯಕ್ತಿ; ಆಶಾವಾದಿ. ಜೀವನದಲ್ಲಿ ಬಹಳಷ್ಟು ‘ಆಪ್ತರನ್ನು’ ಕಳೆದುಕೊಂಡರೂ ಅದನ್ನು ಸಕಾರಾತ್ಮಕವಾಗಿ ಪರಿಗಣಿಸಿ ಜೀವನವನ್ನು ಅದು ಬಂದಂತೆ ಸ್ವೀಕರಿಸಿದವಳು. ಹಾಗಾದರೆ ನನಗೆ ದುಃಖವೇ ಆಗುವುದಿಲ್ಲವೆ ಎಂಬ ಪ್ರಶ್ನೆ ಮನಸ್ಸಿಗೆ ಬರಬಹುದು. ನನಗೂ ದುಃಖವಾಗುತ್ತದೆ; ಅದು ಬೇರೆ ಬೇರೆ ರೀತಿಯಲ್ಲಿ ಬಾಧಿಸುತ್ತದೆ ಕೂಡಾ. ಆದರೆ ದುಃಖದ ಮಜಲಿನಿಂದ ಹೊರಬರುವ ಪ್ರಯತ್ನವನ್ನು ನಾನು ಪ್ರಜ್ಞಾಪೂರ್ವಕವಾಗಿ ಮಾಡುತ್ತೇನೆ. ಆಗಷ್ಟೇ ನಾವು ಸುಖೀ ಪ್ರಪಂಚಕ್ಕೆ ಕಾಲಿಡಲು ಸಾಧ್ಯ!

ಸುಖವೆಂದರೆ ಆನಂದ, ತೃಪ್ತಿ ಹಾಗೂ ಸಂತೋಷದ ಒಂದು ಭಾವನೆಯಾಗಿದೆ. ಇಂದ್ರಿಯಗಳ ಮೂಲಕ ಅನುಭವಿಸುವ ಸುಖ ಇಂದ್ರಿಯ ಸುಖವಾದರೆ, ಮನಸ್ಸು - ಬುದ್ಧಿಗಳ ಮೂಲಕ ಆಂತರ್ಯಕ್ಕೆ ಸಿಗುವ ಸುಖ ಆಂತರಿಕ ಸುಖ. ಸುಖ ಎನ್ನುವ ಭಾವ ಸಂದರ್ಭಕ್ಕನುಗುಣವಾಗಿ ಪ್ರತಿಯೊಬ್ಬರ ಮನಸ್ಥಿತಿಯನ್ನು ಅವಲಂಬಿಸಿ ಅನುಭವಕ್ಕೆ ಬರುತ್ತದೆ. ಯಾವುದೋ ಒಂದು ಸಂದರ್ಭ ಒಬ್ಬರಿಗೆ ಹಿತವಾಗಿದ್ದರೆ ಇನ್ನೊಬ್ಬರಿಗೆ ಅಹಿತವೆನಿಸಬಹುದು. ಅದು ಅವರವರ ಭಾವಕ್ಕೆ ಬಿಟ್ಟದ್ದು. ಸುಖದ ಮಜಲಿನಲ್ಲಿದ್ದಾಗ ಪ್ರಪಂಚ ಸದಾ ಸುಂದರವಾಗಿ ಕಾಣುತ್ತದೆ. ಕೆಲಸ ಮಾಡುವ ಹುಮ್ಮಸ್ಸು ಹೆಚ್ಚಿರುತ್ತದೆ.
ಹಾಗೆಯೇ ದುಃಖವು ಯಾರನ್ನಾದರೂ ಅಥವಾ ಮುಖ್ಯವಾದದ್ದನ್ನು ಕಳೆದುಕೊಂಡಾಗ ಉಂಟಾಗುವ ಪ್ರತಿಕ್ರಿಯೆಯಾಗಿದೆ ಅಥವಾ ಭಾವವಾಗಿದೆ. ಬರೀ ‘ಸಾವು’ ಮಾತ್ರ ದುಃಖವನ್ನುಂಟು ಮಾಡುವುದಿಲ್ಲ. ಅತಿ ಆಪ್ತರು ಕಾರಣವಿಲ್ಲದೆ ದೂರ ಸರಿದಾಗ, ನಮ್ಮವರೇ ಅನಿಸಿಕೊಂಡವರು ‘ಬ್ರೂಟಸ್’ ಆದಾಗ ಕೂಡಾ ದುಃಖ ಕಾಡುತ್ತದೆ.
ಘಟನಾಧಾರಿತವಾಗಿ ದುಃಖವು ಪ್ರತಿಯೊಬ್ಬರ ಮೇಲೂ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುವ ಒಂದು ಪ್ರಕ್ರಿಯೆಯಾಗಿದೆ. ಇದು ಮನಸ್ಸಿಗೆ ಆಯಾಸ ಮತ್ತು ಭಾವನಾತ್ಮಕವಾಗಿ ಬಳಲಿಕೆಯನ್ನುಂಟು ಮಾಡುತ್ತದೆ. ಇದು ಸರಳ ಕೆಲಸಗಳನ್ನು ಮಾಡಲೂ ಅಥವಾ ಮನೆಯಿಂದ ಹೊರಗೆ ಹೋಗಲೂ ಆಗದಂತಹ ಮನಸ್ಥಿತಿಯನ್ನು ಹುಟ್ಟಿಸುತ್ತದೆ. ಜೀವನದ ಬಗ್ಗೆ ನಿರಾಸಕ್ತಿ ಹುಟ್ಟಿಸುತ್ತದೆ.
ದುಃಖವನ್ನು ದುಃಖಿತರು ಬೇರೆ ಬೇರೆ ರೀತಿಯಲ್ಲಿ ನಿರ್ವಹಿಸುತ್ತಾರೆ. ಕೆಲವು ಜನರು ಹೆಚ್ಚು ಸಕ್ರಿಯರಾಗುವ ಮೂಲಕ ದುಃಖವನ್ನು ನಿಭಾಯಿಸುತ್ತಾರೆ. ಕೆಲವರು ಮನೆಯ ಒಂದು ಮೂಲೆ ಹಿಡಿದು ‘ಖಿನ್ನತೆ’ಗೆ ವಾಲುತ್ತಾರೆ. ದುಃಖಕ್ಕೆ ಯಾವುದೇ ನಿರ್ದಿಷ್ಟ ಮಾದರಿಯಿಲ್ಲ. ಅದು ವಿಭಿನ್ನ ವ್ಯಕ್ತಿಗಳಲ್ಲಿ ವಿಭಿನ್ನವಾಗಿ ವ್ಯಕ್ತವಾಗುತ್ತದೆ. ಕೆಲವು ಜನರು ತಮ್ಮ ಭಾವನೆಗಳನ್ನು ವೈಯಕ್ತಿಕವಾಗಿ ಮತ್ತು ಕೆಲವರು ಸಾರ್ವಜನಿಕವಾಗಿ ವ್ಯಕ್ತಪಡಿಸಲು ಇಷ್ಟಪಡುತ್ತಾರೆ. ಆದರೆ ಇನ್ನು ಕೆಲವರು ತಮ್ಮ ಭಾವನೆಗಳನ್ನು ಖಾಸಗಿಯಾಗಿಡಲು ಇಷ್ಟಪಡುತ್ತಾರೆ. ಕೆಲವರು ತಿನ್ನುವುದನ್ನು ಕಡಿಮೆ ಮಾಡುತ್ತಾರೆ. ಇನ್ನು ಕೆಲವರು ಸಿಕ್ಕಾಪಟ್ಟೆ ತಿನ್ನತೊಡಗುತ್ತಾರೆ. ನಿದ್ರಾದೇವಿ ಕೆಲವರಿಂದ ದೂರ ಸರಿದರೆ ಇನ್ನು ಕೆಲವರನ್ನು ಆವರಿಸಿ ಬಿಡುತ್ತಾಳೆ.
ದುಃಖವಾದಾಗ ತೀವ್ರವಾದ ಮನೋಬಾಧೆಗಳು ನಮ್ಮನ್ನು ಕಾಡಬಹುದು. ಇದು ತುಂಬಾ ಕಷ್ಟಕರವೆನಿಸಬಹುದು, ಬೇರೆ ಯಾವುದರ ಬಗ್ಗೆಯೂ ಯೋಚಿಸುವುದು ಅಸಾಧ್ಯವೆನಿಸಬಹುದು. ಕೆಲವು ಜನರಿಗೆ ಈ ಭಾವನೆಗಳನ್ನು ಅಥವಾ ಆಲೋಚನೆಗಳನ್ನು ನಿಭಾಯಿಸುವುದು ತುಂಬಾ ಕಷ್ಟಕರವಾಗಬಹುದು. ಭಾವನೆಗಳು ನೋವಿನಿಂದ ಕೂಡಿರಬಹುದು, ನಿರಂತರವಾಗಿರಬಹುದು ಅಥವಾ ಅತಿಯಾಗಿರಬಹುದು. ದುಃಖವು ಅಲೆಗಳಂತೆ ಬರಬಹುದು, ಸ್ವಲ್ಪ ಸಮಯದ ನಂತರ ತೀವ್ರತೆಯಲ್ಲಿ ಮಸುಕಾಗಿ ಮತ್ತೆ ಬರಬಹುದು. ದುಃಖದ ಬಾಧಿಸುವಿಕೆಗೆ ಇಂತಹುದೇ ಒಂದು ರೂಪವಿಲ್ಲ.
ನಾವು ಸುಖ ದುಃಖದ ಯಾವುದೇ ಭಾವದಲ್ಲಿರಲಿ ಬದುಕು ಎಲ್ಲೂ ನಿಲ್ಲದೆ ಪ್ರತಿನಿತ್ಯ ಸಾಗುತ್ತಿರುತ್ತದೆ. ನಮ್ಮಲ್ಲಿರುವ ಭಾವನೆಗಳನ್ನು ನಿರ್ವಹಿಸುವುದು ಅನಿವಾರ್ಯ. ಭಾವನೆಗಳನ್ನು ಅನ್ವೇಷಿಸುವುದು ಮತ್ತು ವ್ಯಕ್ತಪಡಿಸುವುದು ದುಃಖದ ಒಂದು ಭಾಗವಾಗಬಹುದು. ಸಂಗೀತವನ್ನು ಕೇಳುವುದು ಅಥವಾ ಬರೆಯುವುದು ಸಹಾಯ ಮಾಡುತ್ತದೆ. ಏಕಾಂಗಿಯಾಗಿ ಕಳೆಯುವ ಸಮಯವು ನಮ್ಮ ಭಾವನೆಗಳೊಂದಿಗೆ ಸಂಪರ್ಕ ಸಾಧಿಸಲು ನಮಗೆ ಅನುವು ಮಾಡಿಕೊಡುತ್ತದೆ. ಆಪ್ತ ಸಮಾಲೋಚನೆ ಹಾಗೂ ಆಪ್ತರೊಡನೆ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವುದು ದುಃಖವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ. ಸಕಾರಾತ್ಮಕ ಮನೋಭಾವ, ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಿಕೆ, ಓದು, ತಿರುಗಾಟ, ಧ್ಯಾನ, ಆಪ್ತರೊಂದಿಗಿನ ಒಡನಾಟ ನಮ್ಮನ್ನು ದುಃಖದಿಂದ ಹೊರತಂದು ಸುಖೀ ಬದುಕಿನತ್ತ ಒಯ್ಯಲು ಸಹಕರಿಸುತ್ತದೆ.

Posted 5/10/2025

No comments:

Post a Comment