Friday, October 31, 2025

ARATHI GHATIKAR - SHRADDHANJALI

Friday, 31st October 2025

A shoking and unbelivable news that ARATHI  GHATIKAR,  an acquiantance, well wisher, passed away.



Many comman friends expressing shock and sadness  in the social media about Arathi passing away.

We attended her son's wedding about three years ago, and she was happy that we went to the wedding.


We also attended her book release in 2014 "HANI HANI CHITTARA"




In one of the function, Arathi with common friends.


Jayashree Deshpande, expressing her pain.....

ಇದು ಎದೆಯ ಹಣತೆ‌!
ಅಂದೊಮ್ಮೆ ಎತ್ತಿಕೊಂಡರೆ ಕುಲುಕುಲು ನಗುತ್ತಿತ್ತು ಮಗು, ಕೆನ್ನೆಯಲ್ಲಿ ಗುಳಿ ಬೀಳಿಸಿ! ಹೌದು ಅದು ಆರತಿ- ಆರತಿ ಘಟಿಕಾರ್ ಎಂಬ ಚೆಲುವಿನ ಹುಡುಗಿಗೆ ನಾನು ಚಿಕ್ಕಮ್ಮ.
ಪುಟ್ಟ‌ ಹುಡುಗಿಯಾಗಿದ್ದಾಗ ಚಿನಕುರುಳಿಯಂಥ ಮಾತಿನ‌ ಮೋಡಿಯಲ್ಲಿ ಎಲ್ಲರನ್ನು ತೇಲಿಸಿದವಳು...
ಅಪ್ರತಿಮ ಹಾಸ್ಯಪ್ರಜ್ಞೆ ದೇವರಿತ್ತ ವರವಾಗಿತ್ತವಳಿಗೆ. ಮೆಲುಮಾತು,ಮಂದಸ್ಮಿತೆ. ಲೇಖಕಿ, ಸ್ನೇಹಿತೆಯರ ಅತಿ ದೊಡ್ಡ ಬಳಗ ಸಿರಿ!
ಏನವಸರವಾಗಿತ್ತು ಕಂದ ನಿನಗೆ ನಮ್ಮನ್ನೆಲ್ಲ ಹೀಗೆ ಬಿಟ್ಟು ಅರಿಯದ ತಾಣಕ್ಕೆ ಪಯಣಿಸಲು...‌😭
ಈ ಸಂಕಟಕ್ಕೆ ನಮ್ಮನ್ನೆಲ್ಲ ನೂಕಲು.ಅದಾವ ವಿಧಿಬರೆಹ ನಿನ್ನ ಹೆಸರನ್ನು ಹಿಡಿದು ಕೆಳಗಿಳಿಯಿತೋ?
ಪತಿ, ಸುತರು, ತುಂಬುಕುಟುಂಬ... ಅಮ್ಮ,ಅಕ್ಕ,ತಂಗಿ,ನಾನು ನೀವು ಆತ್ಮೀಯರು ಇನ್ನೀಸು ಸಮೃದ್ಧ ಬಳಗವನ್ನು‌ ಕ್ಷಣದಲ್ಲಿ ಅಗಲಿಸಿತಲ್ಲ.
ಕರುಣೆಯಿಲ್ಲ ದೈವಕ್ಕೆ!😟
"ಗಿಳಿಯು ಪಂಜರದೊಳಿಲ್ಲ
ಶ್ರೀ ರಾಮ ಬರಿದೆ ಪಂಜರವಾಯ್ತಲ್ಲ,
ರಾಮ ರಾಮ ಎಂಬ ಗಿಳಿಯು
ಕೋಮಲ ಕಾಯದ ಗಿಳಿಯು
ಸಾಮಜಪೋಷಕ ತಾನು
ಪ್ರೇಮದಿ ಸಾಕಿದ ಗಿಳಿಯು
ಅಂಗೈಯಲಾಡುವ ಗಿಳಿಯು
ಮುಂಗೈಯ ಮೇಲಿನ ಗಿಳಿಯು...
ಗಿಳಿಯು ಪಂಜರದೊಳಿಲ್ಲ" 😟😭
ಅವನಾಟದ ಗೆರೆಗಳ ಬಲ್ಲವರೇ ನಾವು ಹುಲುಮಾನವರು?
ಹೋಗಿ ಬಾ ಆರತಿ.🙏

Thiru Sridhar, in his Facebook post, wrote Arthi's profile and accomplishments

ಅಗಲಿದ ಆರತಿ ಘಟಿಕಾರ್
Sad to know the demise of fun loving writer and Great friend Arathi Ghatikar 
🌷🙏🌷
ವಿನೋದ ಸಾಹಿತ್ಯ ಸೃಜನೆಗೆ ಹೆಸರಾಗಿರುವ ಆಪ್ತ ಲೇಖಕಿ ಮತ್ತು ನನ್ನ ಆತ್ಮೀಯ ಸಹೋದರಿಯಂತಿದ್ದ ಗೆಳತಿಆರತಿ ಘಟಿಕಾರ್ ನಿಧನರಾಗಿದ್ದಾರೆ ಎಂದು ತಿಳಿದು ದುಃಖವಾಗಿದೆ.
ಆರತಿ ಅವರು "ಎಲ್ಲಾದರು ಇರು, ಎಂಥಾದರು ಇರು ಎಂದೆಂದಿಗು ನೀ ಕನ್ನಡವಾಗಿರು” ಎಂಬುದನ್ನು ಅಕ್ಷರಶಃ ಅಳವಡಸಿಕೊಂಡು, ನಲಿವಿನ ಮನೋಭಾವದಲ್ಲಿ ಬದುಕನ್ನು ಕಂಡು, ಅದನ್ನು ಓದುಗರು ಆಪ್ತವಾಗಿ ಸವಿಯುವ ಹಾಗೆ ಹಾಸ್ಯದ ಮೆರುಗಿನಲ್ಲಿ ಬರೆಯುತ್ತಾ ಬಂದಿದ್ದವರು. ಅರಾಬ್ ರಾಷ್ಟ್ರದಲ್ಲಿದ್ದಾಗ, ಅಮೆರಿಕಕ್ಕೆ ಹೋದಾಗ ಮತ್ತು ಕನ್ನಡ ನೆಲದಲ್ಲಿದ್ದಾಗ ಹೀಗೆ ಎಲ್ಲಿದ್ದರೂ 'ಕನ್ನಡ ಎನೆ ಕುಣಿದಾಡುತ್ತಾ' ನಲಿವಿನಿಂದ ಆರತಿಯಾಗಿ ಹೊರಹೊಮ್ಮಿತ್ತು ಆರತಿ ಘಟಿಕಾರರ ಲೇಖನಿ.
ಆರತಿ ಘಟಿಕಾರ್ ಮೂಲತಃ ಬೆಳಗಾವಿ ಜಿಲ್ಲೆಯವರು. ಅವರು ಹುಟ್ಟಿದ ದಿನ ಏಪ್ರಿಲ್ 21. ಆರತಿ ಅವರದ್ದು ಸಾಹಿತ್ಯ ಮತ್ತು ಸಂಗೀತಲೋಕದಲ್ಲಿ ಅಪಾರ ಆಸಕ್ತಿ ಮತ್ತು ಸಾಧನೆಗಳ ಕುಟುಂಬ. ಆರತಿ ಅವರ ತಂದೆ ಇತ್ತೀಚೆಗೆ ನಿಧನರಾದ ಮಧುಕರ್ ಸರ್ನೋಬತ್ ಹಿಂದೂಸ್ಥಾನಿ ಸಂಗೀತ ಮತ್ತು ಸಾಹಿತ್ಯಾರಾಧಕರು. ತಾಯಿ ಸುಧಾ ಸರ್ನೋಬತ್ Sudha Sarnobat ಪ್ರಸಿದ್ಧ ಹಾಸ್ಯ ಲೇಖಕಿ. ಚಿಕ್ಕಮ್ಮ ಜಯಶ್ರೀ ದೇಶಪಾಂಡೆ Jayashree Deshpande ಪ್ರಸಿದ್ಧ ಬರಹಗಾರ್ತಿ. ಸಹೋದರಿ ಅಂಜಲಿ Anjali Halliyal ಭವ್ಯ ಗಾಯಕಿ. ಹೀಗೆ ಅವರದ್ದು ಪ್ರತಿಭಾನ್ವಿತ ಸಂಗೀತ - ಸಾಹಿತ್ಯ - ಸಾಂಸ್ಕೃತಿಕ ನೆಲೆಗಳ ಕುಟುಂಬ.
ಆರತಿ ಅವರು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಡಿಪ್ಲೋಮಾ ಪದವೀಧರೆ. ಅವರು ಹಲವಾರು ವರ್ಷ ದುಬೈ ವಾಸಿಯಾಗಿದ್ದು ಇತ್ತೀಚಿನ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರಿಗೆ ಮೊದಲಿಂದಲೂ ಸಾಹಿತ್ಯವೆಂದರೆ ಆಸಕ್ತಿ. ಅಮ್ಮ ಸುಧಾ ಸರನೋಬತ್ ಅವರ ಹಾಸ್ಯ ಲೇಖನಗಳು ಸುಧಾ, ಪ್ರಜಾಮತ, ತರಂಗ ಮತ್ತು ಇತರ ಕನ್ನಡ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾದಾಗ ಇವರಿಗೆ ಬಹಳ ಹೆಮ್ಮೆ ಅನಿಸುತಿತ್ತು. ಹಾಗಾಗಿ ಮನೆಯಲ್ಲಿ ಸಾಹಿತ್ಯದ ವಾತಾವರಣದ ಕಂಪು ಇವರ ಬೆಳೆಯುತ್ತಿದ್ದ ಮನಸ್ಸಿಗೆ ಚೇತೋಹಾರಿಯಾಗಿ ಪ್ರಭಾವ ಬೀರಿದ್ದಷ್ಟೇ ಅಲ್ಲದೆ, ಇವರಲ್ಲೂ ಸಾಹಿತ್ಯ ಅಭಿರುಚಿ ಮೂಡಿ ಬರವಣಿಗೆಗೆ ಸಾಕಷ್ಟು ಪ್ರೋತ್ಸಾಹ ದೊರಕಿತ್ತು. ಮುಂದೆ ಇವರಿಗೆ ವಿನೋದ ಕ್ಷೇತ್ರದಲ್ಲೇ ಹೆಚ್ಚಿನ ಆಸಕ್ತಿ ಮೊಳೆಯಿತು. ಪ್ರಾರಂಭದ ದಿನಗಳಿಂದಲೇ ಪ್ರಸಿದ್ಧ ಕವಿ ಡುಂಡಿರಾಜರ ಹನಿಗವನಗಳು ಇವರಿಗೆ ಪ್ರೇರಣೆಯಾಗಿ, ಹನಿಗವನಗಳಿಂದಲೇ ಇವರ ಬರವಣಿಗೆಯ ಪಯಣ ಆರಂಭಗೊಂಡಿತು.
ಆರತಿ ಅವರಿಗೆ, ತಮ್ಮನ್ನು ಕಚಗುಳಿಯಿಟ್ಟು ಕೆಣಕಿದ ಸುತ್ತಮುತ್ತಲಿನ ಸನ್ನಿವೇಶಗಳೇ ವಸ್ತುವಾದವು. ಹಾಸ್ಯ ಬರಹಗಾರರಿಗೆ ವರವಾದ, ಸವಾಲೆನಿಸುವ ಸಮಸ್ಯೆಗಳೊಂದಿನ ತಿಣುಕಾಡುವಿಕೆಯನ್ನೂ ಹಾಸ್ಯ ಮನೋಭಾವದಿಂದ ಕಾಣುವ ಪರಿ ಅವರಲ್ಲಿ ಬಲಗೊಳ್ಳುತ್ತ ಸಾಗಿತು. ಜೊತೆಗೆ ಸ್ವಂತ ಬದುಕಿನಲ್ಲಿ ಕಾಣುವ ಅಂಕು - ಡೊಂಕುಗಳನ್ನು ಗಮನಿಸಿಕೊಂಡು ನಿಸ್ಸಂಕೋಚವಾಗಿ ನಗುವ ಮನಸು ಕೂಡಾ ಮೂಡತೊಡಗಿ ಹಾಸ್ಯ ಪ್ರಜ್ಞೆ ತಾನೇ ತಾನಾಗಿ ಅರಳತೊಡಗಿತ್ತು. ಹೀಗೆ ಮೂಡಿದ ಅವರ ಲಘು ಪ್ರಬಂಧಗಳು , ಹನಿಗವನಗಳು, ಭಾವನಾತ್ಮಕವಾಗಿ ಅರಳಿದ ಕವನಗಳು, ಹಾಗೂ ಪುಟ್ಟ ಕಥೆಗಳು ಕನ್ನಡದ ಎಲ್ಲ ಪ್ರಮುಖ ನಿಯತಕಾಲಿಕಗಳಲ್ಲಿ ಮೂಡಿಬಂದಿವೆ.
ಆರತಿ ಅವರ 'ಹನಿ ಹನಿ ಚಿತ್ತಾರ', 'ಭಾವದ ಹಕ್ಕಿ' ಎಂಬ ಹನಿಗವನ ಸಂಕಲನಗಳು, 'ಮಾತ್ರೆ ದೇವೋ ಭವ' ಎಂಬ ಪ್ರಥಮ ಹಾಸ್ಯ ಸಂಕಲನ ಮತ್ತು 'ವಠಾರ ಮೀಮಾಂಸೆ' ಎಂಬ ಲಲಿತ ಪ್ರಬಂಧ ಸಂಕಲನಗಳು ಪ್ರಕಟಗೊಂಡಿವೆ.
ಆರತಿ ಅವರ 'ವಠಾರ ಮೀಮಾಂಸೆ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ನಿಧಿ ಪ್ರಶಸ್ತಿ ಸಂದಿತ್ತು. ಅವರ ಪ್ರಥಮ ಹಾಸ್ಯ ಸಂಕಲನ 'ಮಾತ್ರೆ ದೇವೋ ಭವ' ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಹಾಸ್ಯ ಸಾಹಿತ್ಯ್ಯಕ್ಕೆ ಸಲ್ಲುವ ನುಗ್ಗೆಹಳ್ಳಿ ಪಂಕಜ ಪ್ರಶಸ್ತಿ ಸಂದಿತ್ತು. 'ಭಾವದ ಹಕ್ಕಿ' ಹನಿಗವನ ಸಂಕಲನಕ್ಕೆ ಬೆಳಗಾವಿ ಜಿಲ್ಲಾ ಸಾಹಿತ್ಯ ದತ್ತಿನಿಧಿ ಪ್ರಶಸ್ತಿ ಸಂದಿತ್ತು. ಅಮೀನಗಡ್ ಸಾಹಿತ್ಯ ಸಂಘದ ವತಿಯಿಂದ ಬಿಡುಗಡೆಯಾದ 'ಭಾವ ದುಂಧುಬಿ' ಕವನ ಸಂಕಲನದಲ್ಲಿ ಆರತಿ ಅವರ 'ಪುಟ್ಟ ನೀಲಿ ನಕ್ಷತ್ರ' ಹಾಗೂ 'ಕಪ್ಪು ಹಲಗೆ' ಕವನಗಳು ಸೇರ್ಪಡೆಗೊಂಡಿದ್ದು 'ಕಪ್ಪು ಹಲಗೆ' ಕವನಕ್ಕೆ ಪ್ರಥಮ ಬಹುಮಾನ ಸಂದಿತ್ತು.
ಆರತಿ ಅವರು 2015ರಲ್ಲಿ ಶಾರ್ಜಾದಲ್ಲಿ ನಡೆದ 12ನೆ ವಿಶ್ವ ಸಂಸ್ಕೃತಿ ಸಮ್ಮೇಳನದಲ್ಲಿ ಕವಿ ಬಿ. ಆರ್. ಲಕ್ಷ್ಮಣ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಹನಿಗವನ ಗೋಷ್ಠಿಯಲ್ಲಿ ಹಾಗೂ 2016ರಲ್ಲಿ ತುಮಕೂರಿನಲ್ಲಿ ‘ನಗೆ ಮುಗುಳು’ ಪತ್ರಿಕೆಯ ರಾಜ್ಯ ಮಟ್ಟದ ಹಾಸ್ಯ ಸಮ್ಮೇಳನದ ಕವಿ ಗೋಷ್ಠಿಯಲ್ಲಿ ಪ್ರೊ. ಅ. ರಾ. ಮಿತ್ರ ಅವರ ಅಧ್ಯಕ್ಷತೆಯಲ್ಲಿ ಹನಿಗವನ ವಾಚಿಸಿದ್ದರು. ದುಬೈನಲ್ಲಿ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ 2ನೇ ಮಧ್ಯಪ್ರಾಚ್ಯ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಜರಗನಹಳ್ಳಿ ಶಿವಶಂಕರ ಅವರ ಅಧ್ಯಕ್ಷತೆಯಲ್ಲಿ ನಡೆದ ಕವನ ಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದರು. ಅಬುಧಾಬಿ ಕರ್ನಾಟಕ ಸಂಘದವರು ಏರ್ಪಡಿಸಿದ್ದ 'ಕರ್ನಾಟಕ ರಾಜ್ಯೋತ್ಸವ' ಹಾಗು 2019 ಫೆಬ್ರುವರಿಯಲ್ಲಿ ಅಬುಧಾಬಿಯಲ್ಲಿ ಜರುಗಿದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಹನಿಗವನ ಗೋಷ್ಠಿಯಲ್ಲಿ ಭಾಗವಹಿಸಿದ್ದರು. 2018 ಮತ್ತು 2019ರ ವಿಶ್ವ ವಿಖ್ಯಾತ ಮೈಸೂರು ದಸರಾ ವಿನೋದಗೋಷ್ಠಿಯಲ್ಲಿ ಖ್ಯಾತ ಸಾಹಿತಿಗಳಾದ ಸುಬ್ಬರಾಯ ಚೊಕ್ಕಾಡಿ, ಬಿ. ಆರ್. ಲಕ್ಷ್ಮಣರಾವ್, ಡುಂಡಿರಾಜ್, ಭುವನೇಶ್ವರಿ ಹೆಗಡೆ, ಅಣಕು ರಾಮನಾಥ್ ಅವರುಗಳೂ ಸೇರಿದಂತೆ ಅನೇಕ ಪ್ರಸಿದ್ಧರ ಜೊತೆ ವೇದಿಕೆ ಹಂಚಿಕೊಂಡು ಹನಿಗವನ ವಾಚನ ಮಾಡಿದ್ದರು
ಆರತಿ ಘಟಿಕಾರ್ ಅವರದ್ದು ಸದಾ ಕಲಿಕೆಯ ಸೂಕ್ಷ್ಮತೆಯಿಂದ, ಲೋಕವನ್ನು ಬೆರಗು ಕಂಗಳ ಹಾಸ್ಯಭಾವದಿಂದ ನೋಡುವ ಮನೋಭಾವ. ಅವರ ನಲಿವಿನ ಬರಹಗಳು ಓದುಗರಿಗೆ ನಿರಂತರವಾಗಿ ಬರುತ್ತಿರುತ್ತದೆ ಎಂದು ಆಶಿಸಿದ್ದ ನಮಗೆ ಹೀಗೆ ಅನುರೀಕ್ಷಿತವಾಗಿ ಅವರ ಅಗಲಿಕೆಯ ಸುದ್ದಿ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆರತಿ ಅವರದು ಸರಳ, ಸಜ್ಜನಿಕೆಯ, ಪ್ರತಿಭಾನ್ವಿತ, ಆತ್ಮೀಯ ವ್ಯಕ್ತಿತ್ವ.
ಇತ್ತೀಚೆಗೆ ತಾನೇ ಮಧುಕರ್ ಸರ್ನೋಬತ್ ಅವರನ್ನು ಕಳೆದುಕೊಂಡ ಸುಧಾ ಸರ್ನೋಬತ್ ಮತ್ತು ಕುಟುಂಬಕ್ಕೆ ಆರತಿ ಅವರ ಅಗಲಿಕೆ ತುಂಬಲಾರದ ನಷ್ಟ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ. ನಮಸ್ಕಾರ. 

ಭಗವಂತನು ಅವಳ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ. 
ಓಂ ಶಾಂತಿ.

Posted 31/10/2025











No comments:

Post a Comment