ಶೋಭಾ, (3/9/1966) ಅಣ್ಣನ ಮಗಳು, ಸಾಗರ ಹೊಂಗಿರಣ ಸಂಸ್ಥೆಯ ಸಂಸ್ಥಾಪಕಿ, ಪ್ರಾಂಶುಪಾಲೆ, ಗ್ರಹ ಬಂಧನದ (lockdown) ಈ ಸಮಯದಲ್ಲಿ ಹಲವಾರು ಲೇಖನಗಳನ್ನು ಬರದು ಬಾಲ್ಯ, ತನ್ನ ಹಿರಿಯರು, ಪರಿಸರ, ಜೀವನದ ಅನುಭವ ಇತ್ಯಾದಿ ವಿಷಯಗಳನ್ನು ಸುಂದರವಾಗಿ, ಅರ್ಥಪೂರ್ಣವಾಗಿ ಬರೆದು ಫೆಸ್ಬುಕ್ , ಇನ್ಸ್ಟಗ್ರಾಂ ಖಾತೆಗಳಲ್ಲಿ ಹಂಚಿ ಕೊಂಡಿರುತ್ತಾಳೆ. ಅವಳ ಬರವಣಿಗೆಯ ವೈಖರಿ, ವಿಷಯಗಳ ನಿರೂಪಣೆ ಮನ ಮುಟ್ಟುವಂತಿದ್ದು ನೆನಪಿಗೋಸ್ಕರ ಇಲ್ಲಿ ಇರಿಸಿಕೊಂಡಿದ್ದೇನೆ.
287.ನೆನಪುಗಳು (26/9/2021)
ಫೇಸ್ಬುಕ್ ಪೇಜ್ ಸ್ಕ್ರಾಲ್ ಮಾಡುವಾಗ ನಾವು ಬಾಲ್ಯದಲ್ಲಿ ಹುಡುಗಾಟಿಕೆಗೆ ಮಾಡುತ್ತಿದ್ದ ಕೆಲವು ಕೀಟಲೆಗಳ ಫೋಟೊಗಳು ಕಂಡವು. ಆ ಚಿತ್ರಗಳಿಗೆ ನಾನು ನನ್ನರಿವಿಲ್ಲದೆ ಕ್ಷಣಮಾತ್ರದಲ್ಲಿ ಕನೆಕ್ಟ್ ಆಗಿ ಬಿಟ್ಟೆ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ನನ್ನ ಬಾಲ್ಯ ಕಾಲದ ಪೌರುಷಗಳು ಗರಗರನೆ ತಿರುಗಿ ಕಣ್ಣ ಮುಂದೆ ಬಂದವು. ಆ ಚಿತ್ರಗಳೇ ಭಾಷೆಗೂ ಮೀರಿದ ಭಾವವನ್ನು ನೀಡುತ್ತವೆಯಾದರೂ ಅವುಗಳ ಬಗ್ಗೆ ಒಂದೆರಡು ಸಾಲುಗಳನ್ನು ಬರೆಯುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.
ದೊಡ್ಡ ಹಲ್ಲು ಹಾಗೂ ಸಣ್ಣ ಹಲ್ಲು ಇರುವ ಬಾಚಣಿಗೆಯ ಹಲ್ಲುಗಳನ್ನು ಎಳೆದು ಇನ್ನಷ್ಟು ಅಗಲ ಮಾಡುವುದು, ಹೇನು ಹಣಿಗೆಗೆ ಟ್ರೇಸಿಂಗ್ ಪೇಪರ್ ಇಟ್ಟು ಅದರ ಬಳಿ ಬಾಯಿ ಇಟ್ಟು ಕೂಗಿದಾಗ ಅದರಿಂದ ಬರುವ ವಿಚಿತ್ರ ಶಬ್ದ, ತಿರುಗುತ್ತಿರುವ ಟೇಬಲ್ ಫ್ಯಾನ್ ಹತ್ತಿರ ಬಾಯಿಯಿಟ್ಟು ಕೂಗಿದಾಗ ಅಲ್ಲಾಗುವ ಕಂಪಿತ ಶಬ್ದ, ನಲ್ಲಿ ನೀರು ಬಿಟ್ಟು ಕೊಂಡು ನಮ್ಮ ಹೆಬ್ಬೆರಳು ಹಾಗೂ ತೋರು ಬೆರಳು ಸೇರಿಸಿ ಉಂಟಾಗುವ ವೃತ್ತಾಕಾರದ ನಡುವೆ ಆ ನೀರು ಬೀಳುವುದನ್ನು ನೋಡುವುದು, ಪೇರಿಸಿಟ್ಟ ಪ್ಲಾಸ್ಟಿಕ್ ಕುರ್ಚಿಗಳ ತುತ್ತ ತುದಿಯಲ್ಲಿ ಕೂರುವುದು, ಪ್ಲಾಸ್ಟಿಕ್ ಕ್ಲಿಪ್ ನಿಂದ ಎರಡೂ ತುಟಿಗಳನ್ನು ಸೇರಿಸಿ ಮುಚ್ಚುವುದು, ಸಣ್ಣ ಸೂಜಿಯನ್ನು ಕೈ ಬೆರಳ ಚರ್ಮದೊಳಗೆ ಹೊಗಿಸಿ ಹೊರ ತರುವುದು, ಯಾವುದೇ ಸ್ಟೀಲಿನ ಕಂಬಿಗಳು ಕಂಡರೂ ಅದಕ್ಕೆ ಕೋಲಿನಿಂದ ಹೊಡೆಯುತ್ತಾ ನಾದ ಬರಿಸುವುದು….. ಹೀಗೇ ಒಂದೇ ಎರಡೇ ಇಂತಹ ಹಲವಾರು ಕೀಟಲೆಗಳನ್ನು ಮಾಡುತ್ತಿದ್ದೆವು. ಇಂತಹ ಕೀಟಲೆಗಳಿಂದ ಹಲವಾರು ಸಲ ಫಜೀತಿಗೆ ಒಳಗಾಗಿದ್ದೂ ಇದೆ.
ಇನ್ನೊಂದು ಮರೆಯಲಾರದ ಕೀಟಲೆ ಎಂದರೆ ನಮ್ಮ ಪ್ರೀತಿ ಪಾತ್ರರನ್ನು ನೆನೆದು ಯೂನಿಫಾರ್ಮ್ ಸ್ಕರ್ಟಿನ(ದಪ್ಪನೆಯ ಒರಟು ಬಟ್ಟೆ ಬೇಕಾದ ಕಾರಣ)ತುದಿಯಿಂದ ಭ್ರೂಮಧ್ಯೆ ಗಸಗಸನೆ ತಿಕ್ಕುವುದು. ಅದರಿಂದ ನಮ್ಮ ಪ್ರೀತಿ ಪಾತ್ರರಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ. ನಾನಾಗ ಆರೇಳನೇ ತರಗತಿಯಲ್ಲಿದ್ದ ನೆನಪು. ಹಾಗೇ ತಿಕ್ಕಿಕೊಂಡು ಹಣೆಯ ನಡುವೆ ದೊಡ್ಡ ಗಾಯವಾಗಿ ಗುಣವಾಗಲು ಬಹಳ ದಿನಗಳೇ ಹಿಡಿದವು. ಇದರಿಂದಾಗಿ ನನ್ನ ಪ್ರೀತಿಪಾತ್ರರಿಂದ ನನ್ನ ಬೆನ್ನಿಗೆ ನಾಲ್ಕು ಗುಡ್ದಾಂ ಬಿತ್ತು ಕೂಡಾ
ಹೀಗೆ ನೆನಪು ಮಾಡಿಕೊಳ್ಳುತ್ತಾ ಹೋದರೆ ಇಂತಹ ಅಮಾಯಕ ಕೀಟಲೆಗಳು ಬಹಳಷ್ಟು ಸಂಖ್ಯೆಯಲ್ಲಿ ಕಣ್ಣ ಮುಂದೆ ಹಾದು ಹೋಗುತ್ತವೆ. ನಮ್ಮ ಕೀಟಲೆಗಳ ಪರಿಣಾಮ ಏನಾಗಬಹುದೆಂಬ ವಿಚಾರವನ್ನು ಮಾಡದೆ ನಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿದ್ದ ಆ ಸುಖ ಎಲ್ಲಿ ಹೋಯಿತು ಎಂದು ಈಗ ಹುಡುಕುವಂತಾಗಿದೆ. ಹೀಗಾಗಿ ಬಾಲ್ಯದ ಅಂತಹ ಅನುಭವಗಳು ಬೆಲೆಕಟ್ಟಲಾಗದ ನೆನಪುಗಳ ಕಣಜವಾಗಿ ಉಳಿದು ಬಿಡಲು ಸಾಧ್ಯವಾಗಿದೆಯೇನೋ?!
286. "ಚಾಪ್ ಸ್ಟಿಕ್ಸ್" ಸಿನಿಮಾ (5/7/2021)
ಅಮಾಯಕತೆ ಎನ್ನುವುದು ಕೆಲವರ ಜನ್ಮಜಾತ ಗುಣವಿರಬೇಕು. ಕೇಳಿದ್ದನ್ನು, ನೋಡಿದ್ದನ್ನು, ಹೇಳಿದ್ದನ್ನು ಯಾವುದೇ ರೀತಿಯ ಮರು ಆಲೋಚನೆ ಮಾಡದೆ ಯಥಾವತ್ತಾಗಿ ನಂಬುವುದು ಅಮಾಯಕತೆಯ ಮುಖ್ಯ ಲಕ್ಷಣ
ಬೆಳೆದ ವಾತಾವರಣ, ಬೆಳೆಸಿದ ರೀತಿ, ಚತುರ ಜನರ ಒಡನಾಟ ಇಲ್ಲದಿರುವುದು ಅಮಾಯಕ ಸ್ವಭಾವದ ರೂಪುಗೊಳ್ಳುವಿಕೆಗೆ ಕಾರಣವಿರಬಹುದು. ಈಗಂತೂ ಪಾಲಕರ "ಹೆಲಿಕಾಪ್ಟರ್ ಪಾಲಕತ್ವ" ಹಾಗೂ ಮಕ್ಕಳಿಗೆ ಸಿಗುತ್ತಿರುವ ಆರಾಮದಾಯಕ ಬದುಕು ಅವರನ್ನು ಅಮಾಯಕರನ್ನಾಗಿಸುತ್ತಿರುವುದರಲ್ಲಿ ಅನುಮಾನವೇ ಇಲ್ಲ. ಅಮಾಯಕರಾಗಿರುವುದು ತಪ್ಪು ಎಂದು ನಾನೇನು ಹೇಳುತ್ತಿಲ್ಲ. ಆದರೆ ತಮ್ಮ ಅಮಾಯಕತೆಯಿಂದಾಗಿ ಇತರರಿಂದ ಮೋಸಗೊಂಡು ನಂತರದಲ್ಲಿ ಅನುಭವಿಸುವ ಮಾನಸಿಕ ನೋವು ಬಹಳ ಅಸಹನೀಯ ಹಾಗೆಂದು ಕೆಲವೊಮ್ಮೆ ಅಮಾಯಕತೆ ವರವಾಗಿ ಪರಿಣಮಿಸುವುದೂ ಇದೆ. ಏಕೆಂದರೆ ಈ ಸ್ವಭಾವ ಕೆಲವೊಮ್ಮೆ ಅಸೀಮ ಧೈರ್ಯವನ್ನು ಕೊಡುತ್ತದೆ. ಆಗ ಅಸಾಧ್ಯವಾದುದನ್ನು ಮಾಡುವ ಅವಕಾಶ ದೊರೆಯುತ್ತದೆ (ಪರಿಣಾಮದ ಅರಿವಿದ್ದಾಗ ಮಾತ್ರ ಭಯ ತಾನೇ!?)
ಈ ಅಮಾಯಕತೆಯ ಬಗ್ಗೆ ಬರೆಯುವಾಗ ಕೆಲವು ತಿಂಗಳುಗಳ ಹಿಂದೆ ನಾನು ನೋಡಿದ "ಚಾಪ್ ಸ್ಟಿಕ್ಸ್" ಸಿನಿಮಾದ ನೆನಪಾಗುತ್ತದೆ. ಅದರಲ್ಲಿನ ನಾಯಕಿ ಅಮಾಯಕತೆಯೇ ಮೂರ್ತಿವೆತ್ತಂತ ಹುಡುಗಿ. ಅದೆಂತಹ ಅಮಾಯಕ ಹುಡುಗಿ ಅವಳೆಂದರೆ ಮುಂಬೈಯ ಮಹಾಲಕ್ಷ್ಮಿ ದೇವಸ್ಥಾನದ ಜನಜಂಗುಳಿಯಲ್ಲಿ ತನ್ನ ಹೊಚ್ಚ ಹೊಸ ಕಾರನ್ನು ಪಾರ್ಕ್ ಮಾಡಲಾಗದಾಗ ಯಾರೋ ಅಪರಿಚಿತ ವ್ಯಕ್ತಿಯ ಬಳಿ ಪಾರ್ಕ್ ಮಾಡಲು ಕೊಟ್ಟು ಬಿಡುತ್ತಾಳೆ. ದೇವಸ್ಥಾನದಿಂದ ಹೊರಬಂದಾಗ ತನ್ನ ಕಾರು ಅಲ್ಲೆಲ್ಲೂ ಇರದಿದ್ದಾಗ ಕಳುವಾದದ್ದು ಅರಿವಾಗಿ ಪೋಲಿಸ್ ಸ್ಟೇಷನ್ ನಲ್ಲಿ ದೂರು ಕೊಟ್ಟಾಗ ಅವರ 'ನಾಲ್ಕೈದು ದಿವಸಗಳಲ್ಲಿ ಕಾರನ್ನು ಹುಡುಕಿ ಕೊಡಬಹುದು' ಎಂಬ ಮಾತನ್ನು ಪೂರ್ತಿ ನಂಬಿ ಬಿಡುವ ಅವಳ ಸ್ವಭಾವದಲ್ಲಿ ನಮ್ಮ ಸುರಕ್ಷಾ ಪದ್ಧತಿಯ ಬಗ್ಗೆ ಅವಳ ಅಕಳಂಕ ನಂಬಿಕೆಯ ದರ್ಶನವಾಗುತ್ತದೆ. ತದನಂತರದಲ್ಲಿ ಯಾವುದೋ ಅಪರಿಚಿತನ ಸಲಹೆಯ ಮೇರೆಗೆ ಆರ್ಟಿಸ್ಟ್ ಎನ್ನುವ ಬೀಗಗಳ್ಳನ ಭೇಟಿ ಮಾಡಿ, ಅವನನ್ನೂ ಅಯಾಚಿತವಾಗಿ ನಂಬಿ, ಅವನು ಕರೆದುಕೊಂಡು ಹೋಗುವ ಕಳ್ಳಕಾಕರ ಸ್ಥಳಗಳಿಗೆಲ್ಲಾ ಯಾವುದೇ ಅಳುಕಿಲ್ಲದೆ ಹೋಗುತ್ತಾಳೆ. ಅವಳಿಗಲ್ಲಿ ಬದುಕಿನ ಇನ್ನೊಂದು ಮುಖದ ಪರಿಚಯ ಮಾಡಿಕೊಳ್ಳುವ ಅವಕಾಶವಾಗುತ್ತದೆ. ಆ ಬೀಗಗಳ್ಳನೂ ಕೂಡಾ ಅವಳ ಸ್ವಭಾವ ಮೆಚ್ಚಿ ಅವಳೊಡನೆ ಒಳ್ಳೆಯದಾಗಿ ನಡೆದುಕೊಳ್ಳುತ್ತಾನೆ. ಹೀಗಾಗಿ ಕೊನೆಗೂ ಅವಳು ಆ ಬೀಗಗಳ್ಳನ ಸಹಾಯದಿಂದ ತನ್ನ ಕಾರನ್ನು ಹಿಂದಿರುಗಿ ಪಡೆಯುವಲ್ಲಿ ಯಶಸ್ವಿಯಾಗುತ್ತಾಳೆ. ಅವಳ ಅಮಾಯಕತೆ ಅವಳನ್ನಿಲ್ಲಿ ಕಾಪಾಡುವ ಚಿತ್ರಣ ನಮಗೆ ಕಾಣಸಿಗುತ್ತದೆ.
ಯಾವುದೇ ರೀತಿಯ ಸ್ವಭಾವ ಸರಿಯೋ ತಪ್ಪೋ ಎಂಬುದು ಚರ್ಚಾಸ್ಪದ ವಿಷಯ. ಸ್ವಭಾವ ಯಾವುದೇ ಇದ್ದರೂ ಕೂಡ ಅದರ ಬಗ್ಗೆ ಅರಿವಿದ್ದು ಎಚ್ಚರಿಕೆಯಿಂದ ಇದ್ದಲ್ಲಿ ನಮ್ಮ ಬದುಕಿನಲ್ಲಿ ಮೋಸಕ್ಕೆ ಒಳಪಡುವ ಸಂದರ್ಭಗಳನ್ನು ಕಡಿಮೆ ಮಾಡಿಕೊಳ್ಳಬಹುದೇನೋ
ಅದೇನೇ ಇರಲಿ. ಹಿಂದಿಯ "ಚಾಪ್ ಸ್ಟಿಕ್ಸ್" ಸಿನಿಮಾವನ್ನು ಮರೆಯದೇ ನೋಡಿ. ಚಿತ್ರದಲ್ಲಿರುವ ಉತ್ತಮ ಕಥೆ,
ಅದರ ಬೆಳವಣಿಗೆ ಹಾಗೂ ಚಿತ್ರಣ, ಉತ್ತಮ ನಟನೆ, ಲಘು ಹಾಸ್ಯ ಮನಸ್ಸಿಗೆ ಖುಷಿ ಕೊಡುತ್ತದೆ. ಒಂದು ಧನಾತ್ಮಕ ಚಿಂತನೆಯನ್ನು ಈ ಚಿತ್ರದಲ್ಲಿ ನಮಗೆ ಕಾಣಸಿಗುತ್ತದೆ
285. ಅನಿಸಿಕೆಗಳು (30/5/2021)
ಮೊನ್ನೆ ಸಂಜೆ ನನ್ನಮ್ಮ ಯೂ ಟ್ಯೂಬಿನಲ್ಲಿ 1965ರ ಸಿನಿಮಾ "ಬೆಟ್ಟದ ಹುಲಿ"ಯಲ್ಲಿ ಪಿ.ಬಿ. ಶ್ರೀನಿವಾಸ್ ಹಾಡಿದ "ಆಡುತಿರುವ ಮೋಡಗಳೇ, ಹಾರುತಿರುವ ಹಕ್ಕಿಗಳೇ, ಯಾರ ಹಂಗೂ ನಿಮಗಿಲ್ಲ, ನಿಮ್ಮ ಭಾಗ್ಯ ನಮಗಿಲ್ಲ" ಎನ್ನುವ ಹಾಡು ಕೇಳುತ್ತಿದ್ದಳು. ಆಗಿನ ನನ್ನ ಮನಸ್ಥಿತಿಗೆ ಆ ಹಾಡು ಬಹಳ ಅರ್ಥಗರ್ಭಿತವಾಗಿದೆ ಎಂದೆನಿಸಿತು. ಮಾನವನ ಹೊರತಾಗಿ ಪ್ರಕೃತಿಯಲ್ಲಿರುವ ಪ್ರತಿಯೊಂದು ವಸ್ತುಗಳೂ ಎಷ್ಟೊಂದು ಆರಾಮವಾಗಿ ಇದ್ದಾವಲ್ಲ ಅಂತ ಸಣ್ಣಗೆ ಹೊಟ್ಟೆಯುರಿಯಿತು ಕೂಡಾ
ಎಷ್ಟೋ ದಿನಗಳಿಂದ ನಾನು ವಾಕ್ ಮಾಡುವಾಗ ಮರದ ಮೇಲೆ ಕೂತಿರುವ ಹಾಗೂ ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳನ್ನು ನೋಡುವಾಗ, ನಮ್ಮ ಮನೆಯ ಐದು ನಾಯಿ ಹಾಗೂ ಎರಡು ಬೆಕ್ಕುಗಳನ್ನು ನೋಡುವಾಗ ಅವುಗಳಲ್ಲಿ ನಮ್ಮೊಳಗೆ ಹುಟ್ಟುವ ಸಂಕೀರ್ಣ ಭಾವನೆಗಳು, ಗೊಂದಲಗಳು, ದುಃಖ-ದುಮ್ಮಾನಗಳು ಇಲ್ಲವೇನೋ ಎಂಬ ಪ್ರಶ್ನೆ ಹುಟ್ಟುತ್ತಿತ್ತು. ಅವುಗಳೊಳಗೆ ನಾನು ಮೇಲು - ಅವರು ಕೀಳು ಎನ್ನುವ ಆಲೋಚನೆ ಬರುವುದಿಲ್ಲವೇ? ಅವನು ಗಂಡು - ಇವಳು ಹೆಣ್ಣು ಎನ್ನುವ ತಾರತಮ್ಯ ಭಾವವಿರುತ್ತದೆಯೇ? ಹೆಣ್ಣು ಪ್ರಾಣಿಯ ಇರಸರಿಕೆ ಹೀಗೆಯೇ ಇರಬೇಕು ಎನ್ನುವ ಕಟ್ಟುಪಾಡುಗಳಿವೆಯೇ? ಹೀಗೆ ಪ್ರಶ್ನೆಯ ಮೇಲೆ ಪ್ರಶ್ನೆ ಹುಟ್ಟಿಕೊಳ್ಳುತ್ತಿತ್ತು. ಉತ್ತರ ನನ್ನಲ್ಲಿರಲಿಲ್ಲ. ನಾನಷ್ಟು ಪ್ರಾಜ್ಞಳಲ್ಲ!
ನನಗೆ ಪ್ರಾಣಿ ಪ್ರಪಂಚ ಹತ್ತಿರದಿಂದ ಗೊತ್ತಿರುವುದು ನಮ್ಮ ಮನೆಯ ಬೆಕ್ಕು - ನಾಯಿಗಳಿಂದ. ಎಂತಹ ನಿರ್ವಾಜ್ಯ ಪ್ರೀತಿ ಅವುಗಳದ್ದು. ನಮ್ಮ ಬಗೆಗೆ ಮಾತ್ರವಲ್ಲದೆ ಅವುಗಳ ನಡುವೆ ಕೂಡಾ ಎಂತಹ ಬಾಂಧವ್ಯ! ಗಂಡು ಹೆಣ್ಣೆಂಬ ಭೇದವಿಲ್ಲದೆ ಅವು ಆರಾಮವಾಗಿ ಸುತ್ತಾಡುತ್ತವೆ - ಆಟವಾಡುತ್ತವೆ - ಕಚ್ಚಾಡುತ್ತವೆ. ಏನೇ ಮಾಡಿಕೊಂಡರೂ ನಂತರದಲ್ಲಿ "ನಾವು ಒಂದೇ" ಎಂಬ ಭಾವದಲ್ಲಿ ಒಟ್ಟಾಗಿರುತ್ತವೆ. No baggages?!
ನಾನು ವಾಕಿಂಗ್ ಮಾಡುವ ಜಾಗದ ಹತ್ತಿರವಿರುವ ಮರಗಳ ಗುಂಪಿನಲ್ಲಿ ಹಲವಾರು ಜಾತಿಯ ಹಕ್ಕಿಗಳು ಇರುತ್ತವೆ. ಅವು ವಿವಿಧ ರೀತಿಯ ಧ್ವನಿಯಲ್ಲಿ ಗದ್ದಲ ಮಾಡುತ್ತಿರುತ್ತವೆ. ಆರಾಮವಾಗಿ ಅತ್ತಿಂದಿತ್ತ ಇತ್ತಿಂದತ್ತ ಹಾರಾಡುತ್ತಿರುತ್ತವೆ. ಅವುಗಳ ಇರಸರಿಕೆ ನೋಡಿದಾಗ ನನಗೇಕೆ ಹಾಗಿರಲು ಸಾಧ್ಯವಾಗುತ್ತಿಲ್ಲ? ಜವಾಬ್ದಾರಿಗಳ ಭಾರದಿಂದ ಹೊರಬರಲು ನಾನ್ಯಾಕೆ ಪ್ರಯತ್ನಿಸುತ್ತಿಲ್ಲ? ವೃತ್ತಿಯ, ಬದುಕಿನ ಐಹಿಕ ಒತ್ತಡ ಕಡಿಮೆ ಮಾಡಿಕೊಂಡರೂ ನನ್ನೊಳಗಿರುವ ಅಗತ್ಯ-ಅನಗತ್ಯ ಯೋಚನೆಗಳಿಂದ ಮುಕ್ತವಾಗುವುದು ಹೇಗೆ? ನಮ್ಮ ಬದುಕಿನ ಕ್ರಮಕ್ಕೂ, ಪ್ರಾಣಿಗಳ ಜೀವನ ಕ್ರಮಕ್ಕೂ ಹೋಲಿಕೆ ಸರಿಯೆ? ನಮ್ಮ ಹಾಗೂ ಅವುಗಳ ಯೋಚನಾ ಕ್ರಮದಲ್ಲಿ ಭಿನ್ನತೆ ಇಲ್ಲವೆ? ನಾವು ಅವುಗಳಿಗಿಂತ ಮೇಲೇ? ಹಾಗಿದ್ದಲ್ಲಿ ಯಾವ ವಿಷಯದಲ್ಲಿ ನಾವು ಪ್ರಾಣಿಗಳಿಗಿಂತ ಉತ್ಕೃಷ್ಟರು? ನಾವು ಚಿಂತನೆ ಮಾಡಬಲ್ಲೆವು, ಭಾವನೆಗಳನ್ನು ಅಭಿವ್ಯಕ್ತಿ ಪಡಿಸಬಲ್ಲೆವು ಎನ್ನುವುದೇ ನಮ್ಮ ಉತ್ಕೃಷ್ಟತೆಯ ಸಂಕೇತವೆ? ನಾಯಿ-ಬೆಕ್ಕುಗಳ ಭಾವನೆಗಳ ವ್ಯಕ್ತಪಡಿಸುವಿಕೆಯನ್ನು ನಾನು ಕಂಡಿದ್ದೇನೆ ಹಾಗೂ ಅನುಭವ ಪಡೆದುಕೊಂಡಿದ್ದೇನೆ ಕೂಡಾ. ಹಾಗಾದರೆ ಅವುಗಳಿಗಿಂತ ನಾವು ಶ್ರೇಷ್ಠರೆಂದುಕೊಳ್ಳುವುದು ನಮ್ಮ ಕಲ್ಪನೆಯೆ?
ಅದೇನೇ ಇರಲಿ ಆ ಪ್ರಾಣಿ ಪಕ್ಷಿಗಳ ಸ್ವಚ್ಛಂದ, ಸ್ವತಂತ್ರವಾದ ಬದುಕನ್ನು ನೋಡಿದಾಗ ನಾನು ಆ ಪ್ರಾಣಿಯಾಗಿದ್ದಿದ್ದರೆ ಎಂದು ಕೆಲವೊಮ್ಮೆ ಆನಿಸುವುದುಂಟು! ನಿಮಗೂ ಹಾಗೆ ಅನ್ನಿಸಿದ್ದಿದೆಯೆ?
284. ಕೊರೋನ ಸಂಕಟ
"ಪ್ರತಿದಿನವೂ ಯಾರ ರೋಗವೂ ಉಲ್ಬಣಿಸದಿರಲೆಂದು ದೇವರಲ್ಲಿ ಬೇಡಿಕೊಂಡರೂ, ವಿವಿಧ ರೀತಿಯ ಇತರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ನಡುವೆ ಹಠಾತ್ತನೆ ಯಾರದಾದರೂ ಪರಿಸ್ಥಿತಿ ಗಂಭೀರವಾದರೆ, ಮನೆಯವರು “ಮತ್ತೇನೂ ಮಾಡಲು ಸಾಧ್ಯವೇ ಇಲ್ಲವೇ” ಎಂದು ದೈನ್ಯದಿಂದ ಕೇಳುವಾಗ ಕರುಳು ಕಿತ್ತು ಬರುತ್ತಿತ್ತು.. ಯಾರದೋ ತಾಯಿ, ತಂದೆ, ಹೆಂಡತಿ, ಗಂಡ, ಮಗು – ಮನೆಯಲ್ಲಿ ಕಾಯುತ್ತಿದ್ದರೆ ಸಾವಿನ ಸುದ್ದಿಯನ್ನು ನಿರ್ಲಿಪ್ತತೆಯಿಂದ ತಿಳಿಸುವುದಾದರೂ ಹೇಗೆ?..........."
ಈ ರೀತಿ ವೈದ್ಯಳಾದ ನನ್ನ ಸೊಸೆ ಐಶ್ವರ್ಯ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮೊನ್ನೆಯಷ್ಟೇ ಕೋವಿಡ್ ಡ್ಯೂಟಿ ಮುಗಿಸಿ ಬಂದ ನಂತರ ತನ್ನ ತಳಮಳವನ್ನು ವರ್ಡ್ ಪ್ರೆಸ್ ನ ತನ್ನ ಬ್ಲಾಗಿನಲ್ಲಿ ಬರೆದಿದ್ದಾಳೆ. ವೃತ್ತಿಯಲ್ಲಿ ವೈದ್ಯಳಾದರೂ ಪ್ರವೃತ್ತಿಯಲ್ಲಿ ಬರಹಗಾರ್ತಿ ಅವಳು. ಹೀಗಾಗಿ ಕೋವಿಡ್ ಡ್ಯೂಟಿ ಮಾಡುವ ಪ್ರತೀ ವೈದ್ಯಕೀಯ ಸಿಬ್ಬಂದಿಯ ಒತ್ತಡ, ಜವಾಬ್ದಾರಿ, ಶ್ರಮ, ಆತಂಕವನ್ನು ಹಾಗೂ ರೋಗಿಗಳ ಒದ್ದಾಟ, ಅವರ ಕುಟುಂಬದವರ ತೊಳಲಾಟವನ್ನು ಚೆನ್ನಾಗಿ ಕಣ್ಣಿಗೆ ಕಟ್ಟುವಂತೆ ಬರೆದಿದ್ದಾಳೆ. ಎಲ್ಲೂ ಉತ್ಪ್ರೇಕ್ಷೆ ಮಾಡದೆ ಅಲ್ಲಿನ ಚಿತ್ರಣವನ್ನು ಹಸಿಹಸಿಯಾಗಿ ನಮ್ಮ ಮುಂದಿಟ್ಟಿದ್ದಾಳೆ.
ಇದೇ ವೇಳೆಗೆ ನಮ್ಮ ಕುಟುಂಬ ಮಿತ್ರರಾದ ಗೀತಾಂಜಲಿ ಪಬ್ಲಿಕೇಶನ್ ನ ಮೋಹನ್ ಜೊತೆ ಮಾತನಾಡುವ ಪ್ರಸಂಗ ಬಂದಿತು. ಈಗ್ಗ್ಯೆ ಹತ್ತ್ಹನ್ನೆರಡು ದಿವಸಗಳ ಹಿಂದೆ ಕೋವಿಡ್ ನಿಂದ ತನ್ನ ತಂದೆಯನ್ನು ಅವರು ಕಳಕೊಂಡಿದ್ದರು. ಸಾಯುವ ಮೊದಲು ಇಪ್ಪತ್ತೊಂದು ದಿನಗಳ ಕಾಲ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅವರ ತಂದೆ ಚಿಕಿತ್ಸೆ ಪಡೆದಿದ್ದರು. ಮೋಹನ್ ಅವರು ಆ ಆಸ್ಪತ್ರೆಯ ಪ್ರತಿಯೊಬ್ಬ ಸಿಬ್ಬಂದಿಯ ನಿಸ್ಪೃಹ ಸೇವೆಯ ಬಗ್ಗೆ ಮನದುಂಬಿ ಶ್ಲಾಘಿಸಿದರು. ವೈದ್ಯರ ತಂಡ, ನರ್ಸ್ ಗಳ ತಂಡ, ಸ್ವಚ್ಛತಾ ಸಿಬ್ಬಂದಿಯ ತಂಡ ಹಾಗೂ ಕೊನೆಯಲ್ಲಿ ಶವವನ್ನು ಪ್ಯಾಕ್ ಮಾಡುವವರು ಕೂಡಾ ಎಷ್ಟು ಕಾಳಜಿಯಿಂದ ಹಾಗೂ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದರು ಎನ್ನುವ ಚಿತ್ರಣ ಕೊಟ್ಟರು. ಹಾಗೆಯೇ ಆ ಇಪ್ಪತ್ತೊಂದು ದಿನಗಳಲ್ಲಿ ಅವರ ಕಣ್ಮುಂದೆ ತಟಕ್ಕನೆ ಸತ್ತ, ಒದ್ದಾಡಿ ಸತ್ತ, ಅನಾಥರಾಗಿ ಸತ್ತವರ ಬಗ್ಗೆ ಹೃದಯತುಂಬಿ ಮಾತನಾಡಿದರು. "ಬದುಕೆಂದರೆ ಇಷ್ಟೇನೇ" ಎನ್ನುವ ವೈರಾಗ್ಯ ಮನಸ್ಥಿತಿಗೆ ಒಯ್ಯುವ ವಾತಾವರಣ ಕೋವಿಡ್ ವಾರ್ಡಿನದ್ದು ಎಂದು ಅವರೊಡನೆಯ ಮಾತುಕತೆಯಲ್ಲಿ ಅರಿವಾಯಿತು.
ನಾವು ಫ್ರಂಟ್ ಲೈನ್ ವಾರಿಯರ್ಸ್ ಆಗದಿದ್ದಿರಬಹುದು. ಆದರೆ ಜವಾಬ್ದಾರಿಯಿಂದ ವರ್ತಿಸಿ ನಮ್ಮ ಮಿತಿಯೊಳಗೇ ಇದ್ದರೆ ಕೋವಿಡ್ ಅನ್ನು ನಿಯಂತ್ರಣದಲ್ಲಿಡಲು ನಾವು ಸಹಾಯ ಮಾಡಿದಂತಾಗುತ್ತದೆ. ಇದೂ ಕೂಡ ದೊಡ್ಡ ಕೆಲಸವೇ!
ನಾವು ಹೊರಗಡೆ ಹೋಗುವ ಅನಿವಾರ್ಯ ಪ್ರಸಂಗ ಬಂದಾಗ ಮಾಸ್ಕ್ ಹಾಕಿಕೊಂಡು ಹೋಗಿ ಬರುವುದು ಸೂಕ್ತ. ಹಾಗೆಯೇ ಸ್ಯಾನಿಟೈಸರ್ ನ ಬಳಕೆ ಕೂಡಾ ಸ್ವಾಗತಾರ್ಹ. ಸಾಮಾಜಿಕ ಅಂತರ ಪಾಲಿಸುವುದು ಯೋಗ್ಯ. ನಾವು ಇದನ್ನೆಲ್ಲ ಸರಿಯಾಗಿ ಪಾಲಿಸಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿದರೆ ನನ್ನ ಸೊಸೆಯಂತೆ ವೈದ್ಯಕೀಯ ವೃತ್ತಿಯಲ್ಲಿರುವವರು, ರಕ್ಷಣಾ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಕೋವಿಡ್ ನಿಯಂತ್ರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ನೆಮ್ಮದಿಯ ಬದುಕನ್ನು ಬದುಕಬಹುದು. ನಾವೂ ಬದುಕೋಣ; ಇತರರನ್ನು ಬದುಕಲು ಬಿಡೋಣ. ಅಲ್ಲವೆ?
283.ನಾನು ಭಾನು ಬಸ್: (19/5/2021)
ನಾನು ಭಾನು ಬಸ್. ಹೊಂಗಿರಣದಲ್ಲಿ ಕಳೆದ ಹತ್ಹನ್ನೆರಡು ವರ್ಷಗಳಿಂದ ಇದ್ದೇನೆ. ನನ್ನ ಮಾಡೆಲ್ ಬದಲಾದರೂ ಹೆಸರು ಅದೇ ಉಳಿದಿದೆ. ನಾನೆಂದರೆ ಹೊಂಗಿರಣದ ಮಕ್ಕಳಿಗೆ ಬಹಳ ಅಂಟು. ನಾನು ಹೊಂಗಿರಣದಲ್ಲಿರುವ ದೊಡ್ಡ ಬಸ್. ನನ್ನೊಳಗೆ ಸುಮಾರು ಎಪ್ಪತ್ತೆಂಬತ್ತು ಮಕ್ಕಳು ಆರಾಮವಾಗಿ ಕೂರುವಷ್ಟು ದೊಡ್ಡದಿದ್ದೇನೆ ನಾನು
ನಾನು ಸಾಗರದ ಮೇನ್ ರೋಡಿನಲ್ಲಿರುವ ಮಕ್ಕಳನ್ನು ಹತ್ತಿಸಿಕೊಂಡು ಬರುತ್ತೇನೆ. ಪುಟ್ಟ- ದೊಡ್ಡ ಮಕ್ಕಳೆಲ್ಲಾ ನನ್ನ ಮೆಟ್ಟಿಲೇರಿ ಒಳಗೆ ಬರುವಾಗ ತಮ್ಮ ಸ್ವಂತ ಬಸ್ ಏನೋ ಅನ್ನುವ ಅಭಿಮಾನದಲ್ಲಿ ಹತ್ತಿ ಬರುತ್ತಾರೆ. ಅವರ ಪ್ರೀತಿ-ಅಭಿಮಾನ ಕಂಡು ನನಗೆ ಹೆಮ್ಮೆ ಎನಿಸುತ್ತದೆ. ಬಸ್ಸಿನ ಒಳ ಬಂದ ಮಕ್ಕಳು ಪ್ರೀತಿಯಿಂದ, ಖುಷಿಯಿಂದ ತಮ್ಮ ಸೀಟುಗಳಲ್ಲಿ ಆಸೀನರಾಗುತ್ತಾರೆ. ತಮ್ಮ ಸ್ನೇಹಿತರಿಗೆ ವಿಶ್ ಮಾಡುತ್ತಾರೆ. ಅಲ್ಲಲ್ಲೇ ತಮ್ಮ ಸ್ನೇಹಿತರೊಂದಿಗೆ ಮಾತನಾಡುತ್ತಾ, ನಗುತ್ತಾ ಬಸ್ಸಿನೊಳಗೆ ಗಲಗುಟ್ಟ ತೊಡಗುತ್ತಾರೆ. ಆ ಮಕ್ಕಳ ಪಿಸುಮಾತು, ಅವರ ಓಡಾಟ ನನಗೆ ಮುದ ನೀಡುತ್ತದೆ. ನಿರ್ಜೀವಿಯಾದ ನಾನು ಜೀವ ಪಡೆದಂತಾಗುತ್ತದೆ.
ಆದರೀಗ ಕೋವಿಡ್ ಪಿಡುಗಿನಿಂದಾಗಿ ಶಾಲೆ ನಡೆಯುತ್ತಿಲ್ಲ. ಮಕ್ಕಳು ಶಾಲೆಗೆ ಬರುತ್ತಿಲ್ಲ. ಉಳಿದ ಬಸ್ಸುಗಳಂತೆ ನನಗೂ ಕೆಲಸವಿಲ್ಲ. ನನ್ನನ್ನು ಉಳಿದ ಬಸ್ಸುಗಳೊಡನೆ ಬಸ್ ಶೆಲ್ಟರ್ ನಲ್ಲಿ ನನ್ನ ಮುಖವನ್ನು ಮುಖ್ಯ ರಸ್ತೆಯ ಕಡೆಗೆ ತಿರುಗಿಸಿ ಸುಮ್ಮನೆ ನಿಲ್ಲಿಸಿದ್ದಾರೆ. ರಸ್ತೆಯಲ್ಲಿ ಓಡಾಡುವ ಸಣ್ಣ ಪುಟ್ಟ ವಾಹನಗಳ ಧ್ವನಿ ಕೇಳಿದಾಗ ನನಗೂ ರಸ್ತೆಗಿಳಿದು ಶಾಲೆಯ ಮಕ್ಕಳನ್ನು ನನ್ನೊಳಗೆ ತುಂಬಿಕೊಂಡು ಬರಬೇಕೆನ್ನಿಸುತ್ತದೆ. ಪ್ರಾಯಶಃ ಕಳೆದ ವರ್ಷದಂತೆ ಈ ವರ್ಷವೂ ಎಷ್ಟು ತಿಂಗಳುಗಳ ಕಾಲ ಕೆಲಸವಿಲ್ಲದೆ, ಮಕ್ಕಳ ಧ್ವನಿ ಕೇಳದೆ ಹೀಗೇ ಹತಾಶ ಸ್ಥಿತಿಯಲ್ಲಿ ನಿಲ್ಲಬೇಕೋ? 'ಭಾನು ಬಸ್ಸು, ಭಾನು ಬಸ್ಸು" ಎಂದು ಕೂಗುತ್ತಾ ನನ್ನೆಡೆಗೆ ಓಡಿ ಬರುತ್ತಿದ್ದ ಮಕ್ಕಳ ಚಿತ್ರ ನನ್ನ ಕಣ್ಣ ಮುಂದೆ ಬರುತ್ತಿರುತ್ತದೆ. ಅವರನ್ನು ನೋಡಬೇಕು, ಅವರು ನನ್ನನ್ನು ಹತ್ತಿ ನನ್ನ ಸೀಟುಗಳ ಮೇಲೆ ಕೂರಬೇಕು ಎಂಬ ಮಹದಾಸೆಯಾಗುತ್ತಿದೆ. ವಾಹನ ಪೂಜೆಯ ಸಂದರ್ಭದಲ್ಲಿ ಭರ್ಜರಿ ಅಲಂಕಾರ ಮಾಡಿಕೊಂಡು ಹಾಸ್ಟೆಲ್ ಮಕ್ಕಳನ್ನೆಲ್ಲ ಹತ್ತಿಸಿಕೊಂಡು ಗರ್ವದಿಂದ ಊರು ಸುತ್ತುತ್ತಿದ್ದ ನೆನಪಾಗುತ್ತಿದೆ. ಯಾವುದೇ ಹೊರ ಸಂಚಾರ ಇದ್ದರೂ ಮಕ್ಕಳ ಜೊತೆಗೆ ಊಟದ ಪರಿಕರಗಳನ್ನು ಹಾಕಿಕೊಂಡು ಅವರನ್ನು ಕೊಂಡೊಯ್ಯುತ್ತಿದ್ದ ನೆನಪಾಗುತ್ತಿದೆ. ಹೀಗೆ ಸುಮ್ಮನೆ ನಿಲ್ಲಲಾರೆ; ಪುನಃ ಚಲಿಸಬೇಕು ಎನ್ನುವ ಪ್ರಬಲ ಬಯಕೆಯಾಗುತ್ತಿದೆ. ಅದಿನ್ನು ಸಾಕಾರಗೊಳ್ಳಲು ಎಷ್ಟು ತಿಂಗಳು ಕಾಯಬೇಕೇನೊ? ಕೋವಿಡ್ ಪಿಡುಗು ಕೊನೆಗೊಂಡು ಪುನಃ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಬಹಳ ಬೇಗ ಪ್ರಾರಂಭವಾಗಲಿ ಎಂದು ನೀವೆಲ್ಲ ಹಾರೈಸಿ ಎಂದು ಆಶಿಸುವ,
ನಿಮ್ಮೆಲ್ಲರ ಭಾನು
282. ದಿನದ ದಿನಚರಿ - ಬದುಕು (16/5/2021)
ಪ್ರತಿದಿನ ಬೆಳಿಗ್ಗೆ ಸೂರ್ಯ ಹುಟ್ಟುತ್ತಾನೆ ಹಾಗೂ ಸಾಯಂಕಾಲ ಮುಳುಗುತ್ತಾನೆ. ಯಾವುದೇ ಬೇಸರವಿಲ್ಲದೆ ಸೂರ್ಯ ಪ್ರತಿದಿನ ತನ್ನ ಕೆಲಸವನ್ನು ನಿಷ್ಕಲ್ಮಶ ಮನಸ್ಸಿನಿಂದ ಮಾಡುತ್ತಾನೆ. ಆ ಸ್ಥಿರ, ಸ್ನಿಗ್ಧ, ನಿಯಮಿತ, ತಡೆರಹಿತ, ಬೇಸರವಿಲ್ಲದೆ ಸಾಗುವ ದಿನಚರಿ ರೂಢಿಸಿಕೊಳ್ಳಲು ನಮ್ಮಿಂದ ಸಾಧ್ಯವೇ?
ಸಾಯಂಕಾಲ ವಾಕಿಂಗ್ ಮಾಡುವಾಗ ಈ ದಿನಚರಿಯ ಬಗ್ಗೆ ಮನಸ್ಸು ಯೋಚಿಸತೊಡಗಿತು. ಆಗ ಪ್ರತಿದಿನದ ದಿನಚರಿ(daily routine) ಒಮ್ಮೆ ಕಣ್ಣ ಮುಂದೆ ಬಂದು ಹೋಯಿತು. ಕೋವಿಡ್ ನಿಂದಾಗಿ ವೃತ್ತಿ ಪರ ನಿಗದಿತ ಕೆಲಸಗಳು, ದಿನಂಪ್ರತಿಯ ಸವಾಲುಗಳು ಇಲ್ಲದೇ ಇದ್ದರೂ ಒಂದು ರೀತಿಯಲ್ಲಿ ನಮ್ಮನ್ನು ನಾವು ಒಂದು ದಿನಚರಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಪ್ರಪಂಚದಲ್ಲಿ ಏನೇ ಬದಲಾವಣೆಯಾದರೂ ನಾವು ನಮ್ಮ- ನಮ್ಮ ದಿನಚರಿಯನ್ನು ಅದಕ್ಕೆ ತಕ್ಕಂತೆ ಹೊಂದಿಸಿಕೊಳ್ಳುತ್ತೇವೆ. ಈ ರೀತಿಯ ನಮ್ಮ ಅಡಾಪ್ಟೆಬಿಲಿಟಿಯನ್ನು ಹೇಗೆ ಪರಿಗಣಿಸುವುದೆಂದೇ ಗೊತ್ತಾಗದೆ ಗೊಂದಲದಲ್ಲಿ ಬಿದ್ದೆ
ಡೈಲಿ ರುಟೀನ್ ಬಗ್ಗೆ ಬಹಳ ಪ್ರಶ್ನೆಗಳು ನನ್ನೊಳಗೆ ಹುಟ್ಞತೊಡಗಿದವು. ದಿನದ ದಿನಚರಿ ಎಂದರೆ "ಉ-ಮ-ಹೇ" ಅಷ್ಟೇ ಅಲ್ಲದೆ ಅದರ ನಡುನಡುವೆ ನಾವು ಸೆಟ್ ಮಾಡಿರುವ ನಮ್ಮ ವೃತ್ತಿ ಸಂಬಂಧಿ ಕೆಲಸಗಳು, ನಮ್ಮ ವೈಯಕ್ತಿಕ ಕೆಲಸಗಳು, ನಮ್ಮ ಹವ್ಯಾಸಗಳು ಅಷ್ಟು ಮಾತ್ರಾನೇ ಎಂಬ ಪ್ರಶ್ನೆ ಹುಟ್ಟಿಕೊಂಡಿತು. ನಮ್ಮ ನಮ್ಮ ಬದುಕಿಗೆ ನಾವೊಂದು ಬೌಂಡರಿ ಹಾಕಿಕೊಂಡು ಬದುಕುತ್ತಿದ್ದೇವೋ ಎಂದೆನಿಸಿತು! ನಾವು ನಮ್ಮ ದಿನಚರಿಯ ವರ್ತುಲದೊಳಗೆ ಸಿಕ್ಕಿಕೊಂಡು ಹೊರ ಬರಲಾರದೆ ತೊಳಲಾಡುತ್ತಿದ್ದೇವೋ? ದಿನಚರಿಯ ಏಕತಾನತೆಯನ್ನು ಹೋಗಲಾಡಿಸಲು ಆಗೀಗ ಸೃಜನಶೀಲ ಆಲೋಚನೆಗಳು/ಕೆಲಸಗಳನ್ನು ಮಾಡುತ್ತಿದ್ದರೂ ಪುನಃ ಅದಕ್ಕೊಂದು ರುಟೀನ್ ಮಾಡಿಕೊಳ್ಳುತ್ತೇವೋ? ಹೀಗೆ ಯೋಚನೆಗಳು ಒಂದರ ಹಿಂದೊಂದರಂತೆ ಬಂದು ನನ್ನನ್ನು ಕಂಗಾಲುಗೊಳಿಸತೊಡಗಿದವು. ತನ್ನ ದಿನಂಪ್ರತಿಯ ಕೆಲಸವನ್ನು ಯಾವುದೇ ಸಿಗ್ಗಿಗೆ ಸಿಕ್ಕಿಹಾಕಿಕೊಳ್ಳದೆ ಮಾಡುವ ಸೂರ್ಯ ದೇವನ ಬಗ್ಗೆ ಅಭಿಮಾನ ಮೂಡಿತು ಆದರೆ ನಾವ್ಯಾಕೆ ಎಲ್ಲವನ್ನೂ ಕ್ಲಿಷ್ಟಗೊಳಿಸಿಕೊಳ್ಳುತ್ತೇವೆ? ಎಲ್ಲದಕ್ಕೂ ನಿರ್ಧಿಷ್ಟ ಸಮಯದ ಪರಿಧಿ ಏಕೆ ನಿಗದಿ ಪಡಿಸುತ್ತೇವೆ? ಇದಕ್ಕೆ ಸಮಂಜಸವಾದ ಉತ್ತರ ಸಿಗುವುದು/ಹುಡುಕುವುದು ಕಷ್ಟ ಎಂದೆನಿಸಿತು. ಹಾಗಾದರೆ ಬದುಕೆಂದರೆ ಒಂದು ಬಗೆಯ ದಿನಚರಿಯೊಳಗಿನ ಪಯಣವೋ ಅಥವಾ ಅದರೊಳಗಿದ್ದು ನಾವು ಕಂಡು ಕೊಳ್ಳುವ ಸತ್ಯವೋ? ಅಂದರೆ ನಮ್ಮ ಬದುಕು ನಡೆಯಲು ದಿನಚರಿ ಬೇಡವೇ? ಅಥವಾ ದಿನಚರಿಯನ್ನು ಚಾಚೂ ತಪ್ಪದೆ ಪಾಲಿಸುವುದಷ್ಟೇ ಬದುಕಾಗಬಾರದೆ? ನನ್ನೊಳಗೆ ಉದ್ಭವಿಸಿದ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ. ನಿಮ್ಮಲ್ಲಿದೆಯೇ?
281. ಸಿನೆಮಾ -* ನೋಮ್ಯಡ್ ಲ್ಯಾಂಡ್* (14/5/2021)
ನನ್ನ ಬಾಲ್ಯ ಕಾಲದಲ್ಲಿ ಸಿನಿಮಾ ನೋಡುವುದು ನನಗೆ ಇಷ್ಟದ ವಿಷಯವಾಗಿತ್ತು. ಮಾರನೇ ದಿನ ಪರೀಕ್ಷೆ ಇದ್ದರೂ ಹಿಂದಿನ ದಿನ ಟಾಕೀಸಿಗೆ ಅಪ್ಪನೊಟ್ಟಿಗೆ ಹೋಗಿ ಸಿನಿಮಾ ನೋಡುತ್ತಿದ್ದವಳು ನಾನು. ಅಂತಹ ಸಿನಿಮಾ ಮೋಹಿ! ನಂತರದ ವರ್ಷಗಳಲ್ಲಿ ಬದುಕಿನ ಬಂಡಿಯನ್ನು ಓಡಿಸುತ್ತಾ ಸಿನಿಮಾ ನೋಡುವ ಮನಸ್ಸು ಹಾಗೂ ಸಮಯ ಒದಗಿ ಬರಲಿಲ್ಲ. ಈ ಕೋವಿಡ್ ಬ್ರೇಕ್ ಎನ್ನುವುದು ಮನೆಯಲ್ಲಿಯೇ ಕುಳಿತು ಸಿನಿಮಾ ನೋಡುವ ಅವಕಾಶ ಕಲ್ಪಿಸಿದೆ
ನಾನು ವಿಮರ್ಶಕ ದೃಷ್ಟಿಯಿಂದ ಸಿನಿಮಾ ನೋಡುವವಳಲ್ಲ. ಬದಲಿಗೆ ಅಲ್ಲಿನ ಪಾತ್ರಗಳು, ಪರಿಸ್ಥಿತಿಗಳನ್ನು ನನ್ನ ಸುತ್ತಲಿನ ಬದುಕಿಗೆ ರಿಲೇಟ್ ಮಾಡುತ್ತೇನೆ. ಅದನ್ನು ಉದ್ದೇಶಪೂರ್ವಕವಾಗಿ ಮಾಡುವುದಲ್ಲ; ಅದು ಸಹಜವಾಗಿ ಆಗುವುದಷ್ಟೇ!
ಮೊನ್ನೆ * ನೋಮ್ಯಡ್ ಲ್ಯಾಂಡ್* ಸಿನಿಮಾ ನೋಡಿದೆ. ಆರ್ಥಿಕ ಹಿಂಜರಿತದ ಸಮಯದಲ್ಲಿ ಅಮೆರಿಕಾದ ಕೆಲವು ದೊಡ್ಡ ವಾಣಿಜ್ಯ ಸಾಮ್ರಾಜ್ಯಗಳು ಮುಳುಗಿ ಜನಜೀವನದ ಮೇಲಾದ ದುಷ್ಪರಿಣಾಮವನ್ನು ಹಾಗೂ ಅತಂತ್ರ ಜೀವನವನ್ನು ನಡೆಸುವ ಒಂದು ಅಲೆಮಾರಿ ಜನರ ಬಗ್ಗೆ ಸಿನಿಮಾದ ನಾಯಕಿ ಫರ್ನ್ ಮೂಲಕ ತೋರಿಸುವ ಪ್ರಯತ್ನ ಚಿತ್ರದ ನಿರ್ದೇಶಕಿ ಪರಿಣಾಮಕಾರಿಯಾಗಿ ಮಾಡಿದ್ದಾರೆ.
ಆ ಸಿನಿಮಾವನ್ನು ನೋಡಿದಾಗ ನನ್ನ ಕಣ್ಣ ಮುಂದೆ ಬಂದಿದ್ದು ಈಗಿನ ಪಿಡುಗು ಕೊರೋನ ಸೃಷ್ಟಿಸಿರುವ ಅಯೋಮಯ ಪರಿಸ್ಥಿತಿ. ಆರ್ಥಿಕ ಹಿಂಜರಿತಕ್ಕಿಂತ ಹೆಚ್ಚಿನ ದುಷ್ಪರಿಣಾಮವನ್ನು ಕೊರೋನ ಮಾಡುತ್ತಿದೆ ಎನ್ನುವುದು ಎಲ್ಲರೂ ಒಪ್ಪುವ ವಿಷಯ. ಇದು ಕೇವಲ ಆರ್ಥಿಕವಾಗಿ ನಮ್ಮ ಬಲವನ್ನು ಕುಂಠಿತಗೊಳಿಸುತ್ತಿರುವುದಲ್ಲದೆ ಮಾನಸಿಕ ಸ್ಥೈರ್ಯವನ್ನೂ ಕಸಿಯುತ್ತಿದೆ. 'ನಾನು' ನಾಳೆ ಇರುತ್ತೇನೋ ಇಲ್ಲವೋ ಎನ್ನುವ ಅಭದ್ರತೆಯಲ್ಲಿ ನಾವೆಲ್ಲರೂ ಬದುಕುವ ಹಾಗಾಗಿದೆ. ಎಲ್ಲವೂ ಬರಡಾಗಿ, ಒಗಟಾಗಿ, ಸವಾಲಾಗಿ ಕಾಣುತ್ತಿದೆ.
ನೊಮ್ಯಾಡ್ ಲ್ಯಾಂಡ್ ಸಿನಿಮಾದಲ್ಲಿ ಒಂದು ಕಾಲದಲ್ಲಿ ವಿಜೃಂಭಿಸಿದ್ದ ಎಂಪಾಯರ್ ಸಾಮ್ರಾಜ್ಯ ಖಾಲಿಯಾಗಿ ಬಿಕೋ ಎನ್ನುತ್ತಿರುವುದನ್ನು ತೋರಿಸುವಾಗ ನಮ್ಮಲ್ಲಿನ ಎಷ್ಟೋ ವಿದ್ಯಾಸಂಸ್ಥೆಗಳು, ವಾಣಿಜ್ಯ ಸ್ಥಾವರಗಳು ಅದೇ ರೀತಿಯಲ್ಲಿ ಖಾಲಿಯಾಗಿ, ಚಟುವಟಿಕಾ ರಹಿತವಾಗಿ ಬಣಗುಟ್ಟುವುದನ್ನು ನೋಡಿದ ಅನುಭವವಾಗುತ್ತದೆ. ಒಂದು ಸಾಮ್ರಾಜ್ಯ ಕಟ್ಟುವುದು ಕಷ್ಟ. ಆದರೆ ಅದನ್ನು ನಿರ್ಮೂಲಗೊಳಿಸುವುದು ಕ್ಷಣ ಮಾತ್ರದ ಕೆಲಸ. ಆದರೆ ಎಂತಹ ಸಮಯದಲ್ಲೂ ಧೃತಿಗೆಡದೆ ಮುನ್ನಡೆಯುವುದು, ಮುನ್ನಡೆಸುವುದು ಮನುಷ್ಯ ಸಾಧ್ಯ ಕೆಲಸ ಎನ್ನುವ ಸತ್ಯವನ್ನು ಆ ಸಿನಿಮಾದಲ್ಲಿ ಕಾಣಬಹುದು. ಯಾವುದೇ ನಿಟ್ಟಿನಲ್ಲೂ ಹತಾಶೆಗೊಳಗಾಗದೆ ಬಂದದ್ದನ್ನು ಎದುರಿಸಿ, ಬದುಕುವ ರೀತಿಯನ್ನು ಪ್ರೀತಿಸಿದರೆ ಜೀವನ ಸುಂದರವಾಗಿರುತ್ತದೆ ಎನ್ನುವುದನ್ನೂ ನಾವಿಲ್ಲಿ ನೋಡಬಹುದು.
ಪರಿಸ್ಥಿತಿ ಎಂತಹುದೇ ವಿಕೋಪಕ್ಕೆ ಹೋದರೂ ಮಾನವೀಯತೆ, ಮನುಷ್ಯತ್ವ ನಮ್ಮನ್ನು ಸದಾ ಕಾಪಾಡುತ್ತದೆ ಎನ್ನುವ ಆಶಾಭಾವ ಆ ಸಿನಿಮಾದಲ್ಲಿ ಕಂಡು ಬರುತ್ತದೆ. ಅಂತಹ ಆಶಾದಾಯಕ ಕೆಲಸವನ್ನು ಬಹಳಷ್ಟು ಜನ ಮಾಡುತ್ತಿರುವುದನ್ನು ನಾವೀಗ ನೋಡುತ್ತಿದ್ದೇವೆ ಕೂಡಾ. ಬದುಕನ್ನು ಅದು ಬಂದಂತೆ ಸ್ವೀಕರಿಸಿ ತನ್ನಿಚ್ಛೆಯಂತೆ ಸ್ವತಂತ್ರವಾಗಿ ಬದುಕುವ ಫರ್ನ್ ಮೂಲಕ ಜೀವನದ ಸೂಕ್ಷ್ಮತೆಯನ್ನು ತೋರಿಸುವ ಈ ಸಿನಿಮಾ ಎಲ್ಲರೂ ನೋಡಲೇ ಬೇಕಾದ ಸಿನಿಮಾ!
280. ಸಿನೆಮಾ - *ಕುಛ್ ಭೀಗೆ ಅಲ್ಫಾಝ್* (9/5/2021)
*ಕುಛ್ ಭೀಗೆ ಅಲ್ಫಾಝ್* ಸಿನಿಮಾ ನೋಡಿದೆ. ಖುಷಿಯಾಯಿತು. ನಿಧಾನಗತಿಯಲ್ಲಿ ಸಾಗುವ ಸಿನಿಮಾ. ಮನಸ್ಸಿಗೆ ಹಿತವೆನಿಸುವ ಹಿನ್ನೆಲೆ ಸಂಗೀತ. ಆಪ್ತವೆನಿಸುವ ಸಂಭಾಷಣೆ. ಒಟ್ಟಿನಲ್ಲಿ ಒಂದು ಒಳ್ಳೆಯ ಸಿನಿಮಾ!
ಈಗಿನ ಸೋಶಿಯಲ್ ಮೀಡಿಯಾದ 'ವೈರಲ್' ಆಗುವ ಕಂಟೆಂಟ್ ಹಾಗೂ ಚಿತ್ರಗಳನ್ನು ಸೃಷ್ಟಿಸುವ ಕಂಪೆನಿಯಲ್ಲಿ ಕೆಲಸ ಮಾಡುವ ನಾಯಕಿ ಒಂದೆಡೆಯಾದರೆ ಎಫ್ ಎಂ ನ ಹೆಸರಾಂತ ಆರ್ ಜೆ ಆದರೆ ಜನರಿಂದ, ಖ್ಯಾತಿಯಿಂದ ದೂರವಿರುವ ನಾಯಕ ಇನ್ನೊಂದೆಡೆ. ಅವರವರ ಕಾರ್ಯ ಭೂಮಿಕೆಯ ಚಿತ್ರಣವನ್ನು ನಿರ್ದೇಶಕ ಸುಂದರವಾಗಿ, ಮನಸ್ಸಿಗೆ ಮುಟ್ಟುವಂತೆ ಚಿತ್ರಿಸಿದ್ದಾರೆ. ಅವರವರ ಕಾರ್ಯರಂಗದಲ್ಲಿ ಅವರು ಎದುರಿಸುವ ಸವಾಲುಗಳು, ಅವರೊಳಗಣ ಸಂಘರ್ಷವನ್ನು ನಾವಿಲ್ಲಿ ನೋಡಬಹುದು.
ಸಿನಿಮಾ ನೋಡಿ ನಾನರಿತುಕೊಂಡದ್ದಿಷ್ಟು - ಭಾವನಾತ್ಮಕ ವ್ಯಕ್ತಿಯಾದ ನಾಯಕ ಅಷ್ಟೇ ಭಾವುಕನಾಗಿ ತನ್ನ ವೃತ್ತಿಯಲ್ಲಿ ತೊಡಗಿಕೊಂಡು ತಾನಾಡುವ ಮಾತುಗಳನ್ನು ತನ್ನ ಮನದೊಳಗಿಂದ ಬಂದ ಮಾತುಗಳಂತೆ ಆಡುವುದು, ಅದು ಕೇಳುವ ಜನರ ಮನ ತಟ್ಟುವುದು , ಕೇಳುಗರು ಅದು ತಮಗಾಗಿಯೇ ಆಡಿದ ಮಾತುಗಳೇನೋ ಎಂದು ಅದಕ್ಕೆ ರಿಲೇಟ್ ಮಾಡಿಕೊಳ್ಳುವುದೆಲ್ಲವೂ *ಭಾವನಾತ್ಮಕತೆ* ಎನ್ನುವುದು ಎಲ್ಲರನ್ನೂ ಬಿಗಿಯಾಗಿ ಬಂಧಿಸುವ ಭಾವ ಎನ್ನುವುದನ್ನು ಹಾಗೆಯೇ ತನ್ನೆಲ್ಲಾ ಹೊರಗಣ ಅನುಭವವನ್ನು ಹಂಚಿಕೊಳ್ಳುವ ಆದರೆ ತನ್ನ ಮನದೊಳಗಣ ಶಬ್ದವಿಹೀನ ಆಲೋಚನೆಗಳನ್ನು ಯಾರಲ್ಲೂ ಹಂಚಿಕೊಳ್ಳಲಾರದೆ ತೊಳಲಾಡುವ ನಾಯಕಿ ನಮ್ಮಲ್ಲಿ ಬಹಳಷ್ಟು ಜನರ ದ್ಯೋತಕವೇನೋ ಎಂದು ಅನಿಸಿದ್ದೂ ಹೌದು! ಅವಳು ಹುಡುಗಾಟಿಕೆ ಸ್ವಭಾವದವಳಾಗಿ ಕಂಡರೂ ಅವಳೊಳಗಿನ ವಿಚಾರವಂತಿಕೆ, ಕ್ಲಿಷ್ಟಕರವಲ್ಲದ ಜೀವನ ದೃಷ್ಟಿಕೋನ, ಯಾವುದೇ ಮುಖವಾಡವಿಲ್ಲದ ಸ್ವಚ್ಛಂದ ಬದುಕು, ನೇರ ನಡೆನುಡಿ ಎಲ್ಲವೂ ಈಗಿನ ಮಿಲೀನಿಯಲ್ ಜನರೇಶನ್ ನ ಒಂದು ಸ್ಯಾಂಪಲ್ ಎಂದರೆ ತಪ್ಪಾಗಲಾರದು. ಎಲ್ಲೂ ಹತಾಶಳಾಗದೆ, ಸೋತೆ ಎಂದೆನಿಸುವಾಗ ಮತ್ತೆ ಪುಟಿದೇಳುವ ಪ್ರಯತ್ನ ಮಾಡುವ ಆಕೆಯ ಪಾತ್ರ ನಮ್ಮೆಲ್ಲರೊಳಗೂ ಸದಾ ಇಟ್ಟುಕೊಳ್ಳಬೇಕಾದ ಜೀವಂತಿಕೆಯ ಅಗತ್ಯವನ್ನು ಸೂಚಿಸುತ್ತದೆ.
ಹಾಗೆಯೇ ಹೆಚ್ಚಿನವರ ಬದುಕಿನ ಧೋರಣೆಗಳ ವಿರೋಧಾಭಾಸವನ್ನೂ ನಾವಿಲ್ಲಿ ದರ್ಶಿಸಬಹುದು. ವಸ್ತು - ವಿಚಾರ ನನ್ನದೆಂದು ಅಂಟಿಕೊಂಡಿರದಿದ್ದರೂ ಮತ್ತ್ಯಾರೋ ಅದರ ಕ್ರೆಡಿಟ್ ತೆಗೆದುಕೊಳ್ಳುವಾಗ ನಮ್ಮೊಳಗಾಗುವ ಅಸಹಾಯಕತೆಯನ್ನೂ ನಾವಿಲ್ಲಿ ನೋಡಬಹುದು.
ಬರುವ ಕೆಲವೇ ಕೆಲವು ಪಾತ್ರಗಳು ಬಹಳಷ್ಟು ಸಾಮಾಜಿಕ ಸತ್ಯಗಳನ್ನು ನಮ್ಮ ಮುಂದೆ ಅನಾವರಣಗೊಳಿಸುತ್ತವೆ. ಈ ಸಿನಿಮಾವನ್ನು ನೋಡಿದಾಗ, ಅದರಲ್ಲಿರುವ ಅರ್ಥಪೂರ್ಣವಾದ ಮಾತುಗಳನ್ನು (ಅಲ್ಫಾಝ್) ಕೇಳಿದಾಗಷ್ಟೇ ಈ ಸಿನಿಮಾದ ಸ್ವಾದ ಸಿಗುವುದು.
ಎಲ್ಲವೂ ಹದವಾಗಿ ಬೆರೆತಿರುವ ಇಂತಹ ಸಿನಿಮಾಗಳು ಅಪರೂಪ. ನೋಡಿ ಮುಗಿದ ಮೇಲೂ ಅದರ ಹ್ಯಾಂಗ್ ಓವರ್ ಉಳಿಯುವ ಸಿನಿಮಾವಿದು!
279. ಅನುಭವ - ಮೆಟ್ಟಿಲುಗಳು (5/5/2021)
ನನ್ನ ಆಫೀಸ್ ಫರ್ಸ್ಟ್ ಫ್ಲೋರ್ ನಲ್ಲಿ ಇರುವುದು. ನನಗೆ ಮೆಟ್ಟಿಲು ಹತ್ತಿ ಇಳಿಯುವುದು ಸ್ವಲ್ಪ ಕಷ್ಟದ ಕೆಲಸ. ದೇಹದ ತೂಕ ಹಾಗೂ ಅದನ್ನು ಹೊರಬೇಕಾದ ಪುಟ್ಟ ಪಾದಗಳ ನೋವು ನನ್ನ ಮೆಟ್ಟಿಲು ಹತ್ತಿಳಿಯುವ ಕೆಲಸಕ್ಕೆ ಯಾವಾಗಲೂ ಸವಾಲನ್ನು ಒಡ್ಡುತ್ತಿರುತ್ತವೆ. ಆದರೂ ಹತ್ತಲೇ ಬೇಕಾದ ಅನಿವಾರ್ಯತೆ ಎನ್ನುವುದು ನನ್ನನ್ನು ಮೆಟ್ಟಿಲು ಹತ್ತುವ ಕೆಲಸಕ್ಕೆ ಪ್ರೇರೆಪಿಸುತ್ತದೆ!
ನಿನ್ನೆ ಆಫೀಸಿಗೆ ಹೋಗುವಾಗ ನಾನು ಹತ್ತಬೇಕಾದ ಮೆಟ್ಟಿಲುಗಳ ಮುಂದೆ ನಿಂತೆ. ಹತ್ತಬೇಕಾದ ಮೆಟ್ಟಿಲುಗಳು ಅಂದವಾಗಿ ಕಂಡವು. ಸ್ವಲ್ಪ ಹೊತ್ತು ಅವುಗಳನ್ನು ನೋಡಿ ಒಂದು ಫೋಟೊ ತೆಗೆದೆ. ಮೆಟ್ಟಿಲುಗಳನ್ನು ಲೆಕ್ಕ ಮಾಡುತ್ತಾ ಹತ್ತಿದೆ. ಬರೋಬ್ಬರಿ ಹದಿನೈದು ಮೆಟ್ಟಿಲುಗಳು. ನಿಧಾನವಾಗಿ ಹೆಜ್ಜೆಯೂರುತ್ತಾ ಒಂದೊಂದೇ ಮೆಟ್ಟಿಲುಗಳನ್ನು ಹತ್ತಿದೆ(ಅನಿವಾರ್ಯ ಕೂಡಾ!). ಆ ಕಟ್ಟಡವನ್ನು ಕಟ್ಟುವಾಗ ಮೆಟ್ಟಿಲುಗಳ ರಚನೆಯ ಬಗ್ಗೆ ಮೇಸ್ತ್ರಿಯೊಟ್ಟಿಗೆ ನಡೆಸಿದ ಮಾತುಕತೆ ನೆನಪಾಯಿತು. ಬಹಳಷ್ಟು ಮಾತುಕತೆಯ ನಂತರ ಕಟ್ಟಿದ ಮೆಟ್ಟಿಲುಗಳವು. ಹೀಗಾಗಿ ಸುಸೂತ್ರವಾಗಿವೆ
ನಾನು ಬಹಳಷ್ಟು ಕಡೆಗಳಲ್ಲಿ, ಬಹಳಷ್ಟು ಕಟ್ಟಡಗಳಲ್ಲಿ ಮೆಟ್ಟಿಲುಗಳನ್ನು ಹತ್ತಿದ್ದೇನೆ. ಕೆಲವೊಂದು ಕಡೆ ಮೆಟ್ಟಿಲುಗಳ ರಚನೆ ಸರಿಯಾಗಿ ಹತ್ತಲು ಆರಾಮಾಗಿರುತ್ತದೆ. ಕೆಲವು ಕಡೆ ಮೆಟ್ಟಿಲುಗಳನ್ನು ಹತ್ತುವುದೆಂದರೆ ಕಡಿದಾದ ಗುಡ್ಡ ಹತ್ತಿದ ಅನುಭವವಾಗುತ್ತದೆ. ಅಷ್ಟು ಅವೈಜ್ಞಾನಿಕವಾಗಿ ಕಟ್ಟಿದ ಮೆಟ್ಟಿಲುಗಳನ್ನು ಹತ್ತುವಾಗ ನಮಗೆ ಏದುಸಿರು ಬಂದು ಜೀವ ಹೋದಂತಾಗುತ್ತದೆ.
ಮೆಟ್ಟಿಲುಗಳಿಗೆ ಒಂದು ವಿಶೇಷ ಗುಣವಿದೆ. ಅವುಗಳನ್ನು ಹತ್ತಲು ನಾವು ತಯಾರಿದ್ದರೆ ನಮ್ಮನ್ನು ಅವುಗಳು ಎತ್ತರೆತ್ತರಕ್ಕೆ ಕೊಂಡೊಯ್ಯುತ್ತವೆ. ಆದರೆ ಹಾವು ಏಣಿಯ ಆಟದಂತೆ ಹಾಗೆಯೇ ನಮ್ಮನ್ನು ಕೆಳಗಿಳಿಸುವ ಸಾಮರ್ಥ್ಯವೂ ಮೆಟ್ಟಿಲುಗಳಿಗಿದೆ ಎಷ್ಟು ಹತ್ತಬೇಕು ಹಾಗೂ ಯಾವಾಗ/ಹೇಗೆ ಇಳಿಯಬೇಕು ಎನ್ನುವ ಸೂಕ್ಷ್ಮತೆ ನಮ್ಮಲ್ಲಿರಬೇಕಷ್ಟೇ!
ಮೆಟ್ಟಿಲುಗಳ ನಡುವೆ ಎಷ್ಟು ಅಂತರವಿರಬೇಕು ಹಾಗೂ ಮೆಟ್ಟಿಲುಗಳನ್ನು ಯಾವ ಕೋನದಿಂದ ಪ್ರಾರಂಭಿಸಬೇಕು ಎನ್ನುವುದು ಒಂದು ಲೆಕ್ಕಾಚಾರ. ಪ್ರತಿಯೊಂದು ರಚನೆಗೂ ಒಂದು ಲೆಕ್ಕಾಚಾರ ಇದ್ದೇ ಇರುತ್ತದೆ. ಯಾವುದೇ ಒಂದು ರಚನಾಕಾರ್ಯ ಎನ್ನುವುದು ಬಾಳೆಹಣ್ಣನ್ನು ಗುಳುಂ ಎಂದು ಸ್ವಾಹ ಮಾಡಿದಷ್ಟು ಸುಲಭವಲ್ಲ. ಅದಕ್ಕೆ ಸರಿಯಾದ ಯೋಜನೆ, ಯೋಚನೆ, ಸೂಕ್ತ ವ್ಯಕ್ತಿಗಳ ಆಯ್ಕೆ ಹಾಗೂ ಕೆಲಸದ ಮೇಲುಸ್ತುವಾರಿ ಎಲ್ಲವೂ ಮುಖ್ಯ. ಸ್ವಲ್ಪ ಬೇಜವಾಬ್ದಾರಿ ಮಾಡಿದರೂ ದೊಡ್ಡ ಹಾನಿಯಾಗುವ ಸಾಧ್ಯತೆ ಇರುತ್ತದೆ. ಯಾವುದೇ ರೀತಿಯಲ್ಲೂ ಮೈಮರೆಯದೆ ಸದಾಕಾಲ ಜಾಗರೂಕತೆಯಿಂದಿದ್ದರೆ ರಚನೆಯ ಕೆಲಸ ಸುಂದರವಾಗಿ ನಮ್ಮೆಣಿಕೆಯಂತೆ ಮೂಡಿ ಬರುತ್ತದೆ.
ಹೊಂಗಿರಣವನ್ನು ಒಂದು ಕ್ಯಾಂಪಸ್ಸಾಗಿ ರೂಪಿಸುವ ಹಂತದಲ್ಲಿ ನಮ್ಮ ಅಜಾಗರೂಕತೆಯಿಂದ ಆದ ಹಾನಿ, ಜಾಗರೂಕತೆಯಿಂದಿದ್ದಾಗ ಆದ ಸಂರಚನೆ ಎಲ್ಲವೂ ಒಮ್ಮೆ ನನ್ನ ಮನಃಪಟಲದಲ್ಲಿ ಮೂಡಿ ಮರೆಯಾದದ್ದಂತೂ ನಿಜ
278. "ದ ಗ್ರೇಟ್ ಇಂಡಿಯನ್ ಕಿಚನ್" - ಸಿನೆಮಾ (2/5/2021)
ನಿನ್ನೆ ಮಲಯಾಳಂ ಸಿನಿಮಾ "ದ ಗ್ರೇಟ್ ಇಂಡಿಯನ್ ಕಿಚನ್" ನೋಡಿದೆ. ಭಾರತೀಯ ಮಹಿಳೆ ತನಗರಿವಿಲ್ಲದೆ ಹೇಗೆ "ಅಡುಗೆ ಮನೆ" ಎಂಬ ಸಾಮ್ರಾಜ್ಯದೊಳಗೆ ಸಿಲುಕಿ ಕಳೆದು ಹೋಗುತ್ತಾಳೆ ಎನ್ನುವ ಸಹಜ, ಸುಂದರ ಚಿತ್ರಣವನ್ನು ನಿರ್ದೇಶಕ ಸರಳವಾಗಿ ನೀಡಿದ್ದಾರೆ. ನಮಗರಿವಿಲ್ಲದೆ ನಮ್ಮೊಳಗನ್ನು ಕೆದಕುವ ಕೆಲಸ ಆ ಸಿನಿಮಾ ಮಾಡುತ್ತದೆ ಎಂದು ನನ್ನ ಅನಿಸಿಕೆ.
ಸುಂದರವಾದ ಮನೆ, ಶಿಕ್ಷಿತ ಜನ, ಸುಭದ್ರವಾದ ಆದರೆ ಏಕತಾನತೆಯ ಬದುಕು, ಹೆಣ್ಣಿನ ಭಾವಾಭಿವ್ಯಕ್ತಿಗೆ ಅವಕಾಶವಿಲ್ಲದ ಪಿತೃ ಪ್ರಧಾನ ಸಮಾಜ, ಸಾಂಪ್ರದಾಯಿಕ ಮನೆಗಳಲ್ಲಿ ಅನುಸರಿಸುವ ಗೊಡ್ಡು ಸಂಪ್ರದಾಯಗಳು....ಈ ಎಲ್ಲವೂ ಹೆಚ್ಚಿನ ಮಾತುಗಳಿಲ್ಲದೆ ಆ ಸಿನಿಮಾದಲ್ಲಿ ಮನ "ತಟ್ಟುವಂತೆ" ಚಿತ್ರಿತವಾಗಿದೆ.
ಪ್ರತಿ ಹೆಣ್ಣು ತನ್ನ ಪ್ರತಿಭೆ, ಆಸಕ್ತಿ, ಆಸೆಗಳನ್ನು ಬದಿಗೊತ್ತಿ ತನ್ನ ಕುಟುಂಬಕ್ಕಾಗಿ ತನ್ನನ್ನು ತಾನು ತೇಯ್ದುಕೊಳ್ಳುವ ರೀತಿಯನ್ನು ಮನದಾಳಕ್ಕೆ ಇಳಿಯುವಂತೆ ಚಿತ್ರಿಸಲಾಗಿದೆ. ಹೆಣ್ಣು ತ್ಯಾಗಮಯಿ ಅನ್ನುವುದಕ್ಕಿಂತ ಪರಿಸ್ಥಿತಿಯ ಕೈಗೊಂಬೆಯಾಗಿ ಆಡಿಸಲ್ಪಡುತ್ತಾ ವಿರೋಧದ ಧ್ವನಿ ಎತ್ತಲಾಗದಷ್ಟು ತನ್ನ ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಮುಳುಗಿ ಹೋಗಿ ತನ್ನ ಬದುಕೇ ಇಷ್ಟು ಎನ್ನುವುದನ್ನು ಒಪ್ಪಿಕೊಳ್ಳುತ್ತಾ "ದಿನ ಸಾಗಿಸುವುದ"ನ್ನು ಈ ಸಿನಿಮಾದಲ್ಲಿ ನೋಡಬಹುದಾಗಿದೆ.
ಪ್ರತಿ ಸ್ತ್ರೀ ತಾನು "ಉಪಯೋಗಿಸಲ್ಪಟ್ಟೆ" ಎಂದೆನಿಸಿದಾಗಲೂ ವಿರೋಧದ ಧ್ವನಿಯನ್ನು ಎತ್ತಲಾಗದೆ ಹತಾಶಳಾಗುವುದು ಹಾಗೂ ಇದಿಷ್ಟೇ ತನ್ನ ಬದುಕು ಎಂದು ಒಪ್ಪಿಕೊಂಡು ಸ್ಥಿತಪ್ರಜ್ಞತೆಯಿಂದ ಬದುಕು ಸಾಗಿಸುವುದು ಎನ್ನುವುದು ಒಂದು ವರ್ಗವಾದರೆ ಕುಟುಂಬದ ಬಗೆಗಿನ ಒಲವು, ಸ್ತ್ರೀವಾದಿ ನಿಲುವು, ಒಬ್ಬ ವ್ಯಕ್ತಿಯಾಗಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವ ತುಡಿತ ಈ ಎಲ್ಲವುದರ ಘರ್ಷಣೆಗೆ ಒಳಪಟ್ಟು ತಾನು ಸಿಕ್ಕಿಹಾಕಿಕೊಂಡಿರುವ ವರ್ತುಲದಿಂದ ಹೊರಬರಬೇಕೆಂದರೂ ಹೊರಬರಲಾಗದೆ ಚಡಪಡಿಸುವುದು ಇನ್ನೊಂದು ವರ್ಗ. ಈ ಎಲ್ಲವುದರ ಸಮ್ಮಿಶ್ರಣವನ್ನು ನಾವಿಲ್ಲಿ ನೋಡುತ್ತೇವೆ. ಕಥಾನಾಯಕಿ ಹೊರಬಂದು ಬದುಕು ಕಟ್ಟಿಕೊಂಡಳಾದರೂ ಆ ವರ್ತುಲದೊಳಗೆ ಇನ್ನೊಬ್ಬಳು ಸಹಜವಾಗಿ ಸಿಕ್ಕಿ ಹಾಕಿಕೊಳ್ಳುತ್ತಿರುವ ದೃಶ್ಯದೊಂದಿಗೆ ಸಿನಿಮಾ ಮುಗಿಯುವುದನ್ನು ನೋಡಿದಾಗ ಇದು ನಮ್ಮ ಜಮಾನದ ಪ್ರತಿ ಸ್ತ್ರೀಯ ಕಥೆ ಎಂದೆನಿಸಿ ಮನಸ್ಸು ವಿಚಾರಗಳ ಘರ್ಷಣೆಯಿಂದ ಕದಡಿದ ನೀರಂತಾದದ್ದು ನಿಜ!
277 . ಅಪ್ಪನ ಕಪ್ಪು ಅಂಬಾಸಿಡರ್ ಕಾರು.(12/4/2021)
ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿರುವ ವಸ್ತು/ವಿಷಯಗಳಲ್ಲಿ ಒಂದೆಂದರೆ ನನ್ನ ಅಪ್ಪನ ಬಳಿ ಇದ್ದ ಕಪ್ಪು ಬಣ್ಣದ ಅಂಬಾಸಿಡರ್ ಕಾರ್. ಅದರ ಮಿರಿಮಿರಿ ಮಿಂಚುತ್ತಿದ್ದ ಕಪ್ಪು ಬಣ್ಣ ಇನ್ನೂ ನನ್ನೊಳಗೆ 'ಹಸಿ'ಯಾಗಿದೆ
ಇದು ಸುಮಾರು ಐವತ್ತು ವರ್ಷಗಳ ಹಳೆಯ ಕಥೆ. ನನ್ನಪ್ಪ ಆಗ ಎಲ್ಐಸಿ ಅಭಿವೃದ್ಧಿ ಅಧಿಕಾರಿ ಆಗಿದ್ದರು. ಅವರ ಸೇವಾಸ್ಥಳ ಹೆಬ್ರಿಯಾಗಿತ್ತು. ನನ್ನಪ್ಪನ ಕೆಲಸ ತಿರುಗಾಟದ ಕೆಲಸವಾಗಿದ್ದರಿಂದ ಅವರು ತಮ್ಮ ಬುಲೆಟ್ ನಲ್ಲಿ ಸದಾಕಾಲ ಸಂಚಾರದಲ್ಲಿರುತ್ತಿದ್ದರು. ಅದರ ಗುಡುಗುಡು ಸದ್ದೇ ಬಹಳ ರೋಮಾಂಚಕ. ಬುಲೆಟಿನಲ್ಲಿ ಸುತ್ತಿ ದಣಿದ ಅಪ್ಪ ಕಾರನ್ನು ಖರೀದಿಸುವ ಮನಸ್ಸು ಮಾಡಿದಾಗ ನಮ್ಮ ಮನೆಗೆ ಬಂದದ್ದು ಕಪ್ಪನೆಯ ಚೆಂದದ ಅಂಬಾಸಿಡರ್ ಕಾರು!
ನನ್ನಪ್ಪ ಅದನ್ನು ಸರಿಯಾಗಿ ಬಳಸುತ್ತಿದ್ದರಲ್ಲದೆ ಅದನ್ನು ಬಹಳ ಚೆನ್ನಾಗಿ ಇಟ್ಟುಕೊಂಡಿದ್ದರು. ಕಾರನ್ನು ತೊಳೆಯುವ ಕೆಲಸ ಪ್ರತಿನಿತ್ಯದ ಅವರ ಕೆಲಸಗಳಲ್ಲೊಂದಾಗಿತ್ತು. ಬಹಳ ಶಾಸ್ತ್ರೋಕ್ತವಾಗಿ ಕಾರನ್ನು ತೊಳೆಯುತ್ತಿದ್ದರು. ಬಹಳ ಶ್ರದ್ಧೆಯಿಂದ ಅದರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು. ಹೀಗಾಗಿ ಆರು ಸೀಟರ್ ಗಳ ಆ ಕಾರಿನಲ್ಲಿ ಹತ್ತು ಜನಗಳಿಗಿಂತ ಹೆಚ್ಚು ಜನ ಕುಳಿತು ತಿರುಗಾಡುತ್ತಿದ್ದರೂ ಅದು ಒಳ್ಳೆಯ ರೀತಿಯಲ್ಲಿ ನಮ್ಮನ್ನೆಲ್ಲ ಸ್ವೀಕರಿಸಿ ತಿರುಗಾಡಿಸುವ ಸೇವೆ ನೀಡುತ್ತಿತ್ತು. ನಮ್ಮ ಕುಟುಂಬದಲ್ಲಿ ಅದರಲ್ಲಿ ಕುಳಿತು ತಿರುಗದವರೇ ಇರಲಿಲ್ಲ. ನನ್ನಪ್ಪನೂ ಕೂಡಾ ಯಾರು ಮನೆಗೆ ಬಂದರೂ ತಮ್ಮ ಕಾರಿನಲ್ಲಿ ಎಲ್ಲಾ ಕಡೆ ಸುತ್ತಾಡಿಸುತ್ತಿದ್ದರು. ಆ ಸುತ್ತಿನ ನನಗೂ ಸಲ್ಲುತ್ತಿತ್ತು. ಯಾಕೆಂದರೆ ತಿರುಗಾಡಲು ಹೋಗುವಾಗ ನಾನ್ಯಾವಾಗಲೂ ಅಪ್ಪನ ಬಾಲ ಬಿಡಿ
ನಾನು ಪುಟ್ಟವಳಿದ್ದಾಗ ಆ ಕಾರಿನಲ್ಲಿ ತಿರುಗುವಾಗ ಡ್ರೈವ್ ಮಾಡುತ್ತಿದ್ದ ಅಪ್ಪನ ಪಕ್ಕದಲ್ಲಿ ನಿಂತೇ ಪಯಣಿಸುತ್ತಿದ್ದೆ. ನಾನು ಸುಮಾರು ಐದಾರು ವರ್ಷದವಳಿದ್ದಾಗ ನಮ್ಮ ಆ ಕಾರಿನಲ್ಲಿ ಮೈಸೂರಿಗೆ ಹೋಗಿದ್ದೆವು. ಊರಿನಿಂದ ಮೈಸೂರಿನವರೆಗೆ ನಾನು ಅಪ್ಪನ ಪಕ್ಕ ನಿಂತೇ ಪಯಣಿಸಿದ್ದೆ ಎಂದು ಅಪ್ಪ ಯಾವಾಗಲೂ ಹೆಮ್ಮೆಯಿಂದ ಹೇಳುತ್ತಿದ್ದರು.
ಅಕ್ಟೋಬರ 1971 |
ಹತ್ತಾರು ವರ್ಷಗಳ ಕಾಲ ಬಳಸಿದ ಆ ಕಾರನ್ನು ನಂತರದಲ್ಲಿ ನನ್ನಪ್ಪ ಅವರ ಕಾರ್ಕಳದ ಸ್ನೇಹಿತರೊಬ್ಬರಿಗೆ ಮಾರಿದರು. ಅವರು ಕೂಡಾ ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿದರು. ಆ ಕಾರಿನ ಬಗ್ಗೆ ನಮಗೆ ಎಷ್ಟು ಒಲವು ಇತ್ತೆಂದರೆ ಅಪ್ಪ ಇರುವಷ್ಟು ಕಾಲ ನಾವು ಕಾರ್ಕಳದ ಮೇಲೆ ಎಲ್ಲಿಗಾದರೂ ಹೋಗುವಾಗ ಅಪ್ಪನ ಸ್ನೇಹಿತರ ಮನೆಗೆ ಹೋಗಿ ಅವರೊಡನೆ ಮಾತನಾಡಿ ಆ ಕಾರನ್ನು ನೋಡಿಕೊಂಡು ಹೋಗುತ್ತಿದ್ದೆವು. ಅಪ್ಪನ ಸ್ನೇಹಿತರಿಗೆ ಆ ಕಾರ್ ಖರೀದಿಸಿದ ಮೇಲೆ ಅದೃಷ್ಟ ಖುಲಾಯಿಸಿದ ಕಾರಣ ಅವರು ಆ ಕಾರು ಹಳೆಯದಾದ ಮೇಲೂ ಮಾರದೆ ಅದನ್ನು ಒಂದು ಶೋ ಪೀಸ್ ಆಗಿ ಇಟ್ಟಿದ್ದರು. ನಂತರದಲ್ಲಿ ಕಾರಿಗೇನಾಯಿತೋ ಎನ್ನುವ ವಿಷಯ ನನಗೆ ಗೊತ್ತಿಲ್ಲ. ಈವರೆಗೆ ಹತ್ತು ಹಲವಾರು ಕಾರುಗಳಲ್ಲಿ ಕುಳಿತು ತಿರುಗಿದ್ದರೂ ಆ ಕಪ್ಪು ಅಂಬಾಸಿಡರ್ ಅನ್ನು ಮರೆಯಲಾಗುವುದೇ ಇಲ್ಲ!
276. ಹೊಂಗಿರಣ ನೆನಪುಗಳು (16/4/2021 )
ಏಪ್ರಿಲ್ ತಿಂಗಳ ಮಳೆ ಗುಡುಗು ಸಿಡಿಲಿನ ಜೊತೆ ಹೊಡೆಯುವಾಗ ಹೊಂಗಿರಣದ ಪ್ರಾರಂಭದ ವರ್ಷಗಳಲ್ಲಿ ಸುರಿಯುತ್ತಿದ್ದ ಜಿರಾಪತಿ ಮಳೆಯ ನೆನಪಾಗುತ್ತದೆ. 2004 ಹೊಂಗಿರಣ ಕ್ಯಾಂಪಸ್ ಅಸ್ತಿತ್ವಕ್ಕೆ ಬಂದ ವರ್ಷ. ಆಗೆಲ್ಲಾ ವರ್ಷಕ್ಕೆ ಆರು ತಿಂಗಳು ಮಳೆಯಾಗುತ್ತಿದ್ದ ಕಾಲ. ಕ್ಯಾಂಪಸ್ಸಿನೊಳಗೆ ಇನ್ನೂ ಸರಿಯಾದ ಕಾಲ್ದಾರಿ/ರಸ್ತೆ ಇರದಿದ್ದ ಕಾಲವದು. ಇದ್ದ ಕೆಲವೇ ಕೆಲವು ಕಟ್ಟಡಗಳಿಗೆ ಬಹಳಷ್ಟು ಅಂತರವಿತ್ತು. ಮಳೆಗಾಲದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದೆಂದರೆ ಹರಸಾಹಸ ಬಹಳ ಅಂಟು ಹಾಗೂ ಜಾರು ಮಣ್ಣಿನ ನೆಲವಾಗಿದ್ದ ಕಾರಣ ಹೆಜ್ಜೆಗಳನ್ನು ಜಾಗ್ರತೆಯಲ್ಲಿಡಬೇಕಿತ್ತು. ಇಲ್ಲವಾದರೆ ಅಯಾಚಿತವಾಗಿ ಸ್ಕೇಟಿಂಗ್ ಮಾಡಿದಂತೆ ಆಗುತ್ತಿತ್ತು. ನಾನು ನಡೆಯುವಾಗ ಜಾರಿ ಬಿದ್ದಿದ್ದಕ್ಕೆ ಲೆಕ್ಕವಿಲ್ಲ.
ಪ್ರಾರಂಭದಲ್ಲಿ ಇದ್ದ ಆರು ಎಕರೆ ಜಾಗದಲ್ಲಿ ಒಂದು ಮೂಲೆಯಲ್ಲಿ ಒಂದು ಕಟ್ಟಡವಿದ್ದರೆ ಇನ್ನೊಂದು ಮೂಲೆಯಲ್ಲಿ ಮತ್ತೊಂದು ಕಟ್ಟಡವಿತ್ತು. ಬಿರಬಿರನೆ ನಡೆದರೆ ಶಾಲೆಯ ಮುಖ್ಯ ಕಟ್ಟಡದಿಂದ ಮೆಸ್ಸಿಗೆ ಎರಡ್ಮೂರು ನಿಮಿಷ ಸಾಕಾಗುತ್ತಿತ್ತು. ಆದರೆ ಮಳೆಗಾಲದಲ್ಲಿ ಆ ದೂರ ಕ್ರಮಿಸಲು ಆರೇಳು ನಿಮಿಷಕ್ಕೂ ಹೆಚ್ಚಿನ ಸಮಯ ಬೇಕಿತ್ತು. ಎಷ್ಟೇ ಜಾಗರೂಕತೆಯಿಂದ ನಡೆದರೂ ಜಾರುವುದು ಸರ್ವೇಸಾಮಾನ್ಯವಾಗಿತ್ತು. ಮಕ್ಕಳಿಗಂತೂ ಹಾಗೆ ಜಾರುತ್ತಾ ಸಾಗುವುದೇ ಒಂದು ಆಟವಾಗಿತ್ತು. ಕೆಲವೊಮ್ಮೆ ಚಪ್ಪಲಿಗೆ ಒಂದೊಂದು ಇಂಚು ಮಣ್ಣು ಅಂಟಿ ಕಾಲೆತ್ತಿಡುವುದೇ ಕಷ್ಟಕರವಾಗುತ್ತಿತ್ತು.
ಆದರೂ ಮಳೆಗಾಲದ ಮಜವೇ ವಿಚಿತ್ರ. ಭೋರಿಡುತ್ತಾ ಹೊಯ್ಯುವ ಹುಚ್ಚು ಮಳೆಯನ್ನು ಒಂದೆಡೆ ಕುಳಿತು ನೋಡುತ್ತಾ ಆಸ್ವಾದಿಸುವುದೇ ಚಂದ. ಒಂದು ಕೊಡೆ ಹಿಡಿದುಕೊಂಡು ಹೊರ ಹೋಗುವುದು ಕಷ್ಟ ಎಂದೆನಿಸಿದರೂ ಅಲ್ಲಲ್ಲಿ ಒದ್ದೆಯಾಗುತ್ತಾ ಸಾಗುವುದು ಕೂಡಾ ಹಿತಕರವೇ ಆಗಿತ್ತು. ಆದರೆ ಅಂಟು ಮಣ್ಣು, ಜಾರುವ ನೆಲ ಮಾತ್ರ ಸ್ವಲ್ಪ ರಗಳೆ ಕೊಡುವ ವಿಷಯವಾಗಿತ್ತು.
ಅಂತೂ ಇಂತೂ ನಮ್ಮ ನೆಲದ ಜಾರುವಿಕೆಗೆ ಈಗ್ಗೆ ಏಳೆಂಟು ವರ್ಷಗಳ ಹಿಂದೆ ರಸ್ತೆಗೆ ಮೆಟಲಿಂಗ್ ಮಾಡಿ ಇತಿಶ್ರೀ ಹಾಡಲಾಯಿತು. ಈಗ ಜಾರಬೇಕೆಂದರೂ ಜಾರುವ ಛಾನ್ಸ್ ಇಲ್ಲ. ಆದರೂ ಹೊರಗೆ ಹುಚ್ಚು ಮಳೆ ಸುರಿಯುವಾಗ ಒಮ್ಮೊಮ್ಮೆ ಆಗ ಇದ್ದ ರಸ್ತೆ, ಅದರಲ್ಲಿ ಜಾರುತ್ತಿದ್ದದ್ದು - ಬೀಳುತ್ತಿದ್ದದ್ದು ನೆನಪಾಗುತ್ತಿರುತ್ತದೆ. ಜಾರಿದ ನಂತರ ಕೆಸರು ಮಣ್ಣಿನೊಂದಿಗೆ ಏಳುತ್ತಿದ್ದದ್ದೂ ನೆನಪಾಗುತ್ತದೆ. ಜಾರಿಕೆ ಇದ್ದಲ್ಲಿ ಜಾರುವುದು ಸಹಜ. ಆದರೆ ಜಾರಿದ ಮೇಲೆ ಎದ್ದೇಳುವುದು ಅಷ್ಟೇ ಮುಖ್ಯ ತಾನೇ!
275. ನೆನಪುಗಳು - ಅಜ್ಜಯ್ಯನ ಮನೆ ಊಟದ ಎಲೆ,(26/4/2021 )
ನನ್ನ ಅಜ್ಜಯ್ಯನ ಊಟದ ಎಲೆಯ ಬಗ್ಗೆ ಬರೆಯದಿದ್ದರೆ ಅವರ ಬಗೆಗಿನ ಮಾಹಿತಿ ಅಪೂರ್ಣವಾಗಿ ಉಳಿದು ಬಿಡುತ್ತದೆ ಎಂದರೆ ಸುಳ್ಳಲ್ಲ.
ನನ್ನ ನೆನಪಿನಲ್ಲಿ ಇರುವ ಅಜ್ಜಯ್ಯ ಅವರ 80ರ ಹರಯದಲ್ಲಿದ್ದವರು. ಆ ಪ್ರಾಯದಲ್ಲಿಯೂ ಅಜ್ಜಯ್ಯನಿಗೆ ಪ್ರತಿನಿತ್ಯ ಅವರದ್ದೇ ಆದ ನಿಗದಿತ ವೇಳಾಪಟ್ಟಿ ಇತ್ತು. ಅವರ ವೇಳಾಪಟ್ಟಿಯಲ್ಲಿ ಇದ್ದ ಒಂದು ಮುಖ್ಯ ಕೆಲಸ ಅವರು ಊಟಕ್ಕೆ ತಯಾರಿಸುವ ಎಲೆಯದ್ದಾಗಿತ್ತು. ಹನ್ನೆರಡು ಗಂಟೆಯ ಹೊತ್ತಿಗೆ ಸ್ನಾನಕ್ಕೆ ಹೊರಡುವ ಮೊದಲು ಮೂಲೆಯಲ್ಲಿ ಇಟ್ಟಿರುತ್ತಿದ್ದ ಇನ್ನೂ ಹಸಿತನ ಉಳಿಸಿಕೊಂಡಿರುತ್ತಿದ್ದ ಬಾಳೆದಿಂಡಿನ ಒಂದು ಕವಚದಂತಹ ಹಾಳೆಯನ್ನು ತೆಗೆದು, ಅದನ್ನು ಕೈಬೆರಳುಗಳ ಮೂಲಕ ಅಳೆದು, ಸುಮಾರು ಎರಡು ಅಡಿಯಷ್ಟು ಉದ್ದಕ್ಕೆ ಕತ್ತರಿಸಿ, ಅದರ ಮಧ್ಯೆ ಸೀಳಿ, ನಂತರದಲ್ಲಿ ಅದನ್ನು ಕವುಚಿ ಹಾಕಿ ಅದರ ಒಂದು ತುದಿಯನ್ನು ಕಾಲು ಬೆರಳುಗಳಲ್ಲಿ ಒತ್ತಿ ಹಿಡಿದು ಚಾಕುವನ್ನು ಅದರ ಮೇಲೆ ಅಡ್ಡವಾಗಿಟ್ಟು ಒತ್ತಿ ಮುಂದೂಡುತ್ತಾ ಅದರೊಳಗಿನ ನಾರು ಹಾಗೂ ನೀರಿನಂಶವನ್ನು ಹೊರ ತೆಗೆದು ತದನಂತರದಲ್ಲಿ ಆ ಎರಡೂ ತುಂಡುಗಳನ್ನು ಒಂದರ ಪಕ್ಕ ಒಂದಿಟ್ಟು ಜೋಡಿಸಿ ಹಿಡಿಕಡ್ಡಿಯಿಂದ ಚುಚ್ಚಿ ಒಂದು ಊಟದ ಎಲೆಯಾಗಿ ಪರಿವರ್ತಿಸುತ್ತಿದ್ದರು. ಅದರ ಮೇಲ್ಭಾಗ ನೈಸ್ ಆಗಿ ಚೆನ್ನಾಗಿ ಇರುತ್ತಿತ್ತು. ಅಜ್ಜಯ್ಯ ಯಾವಾಗಲೂ ಆ ಎಲೆಯಲ್ಲೇ ಊಟ ಮಾಡುತ್ತಿದ್ದರು. ಬಾಳೆದಿಂಡು ಖರ್ಚಾಗುತ್ತಿದ್ದಂತೆ ಯಾರದಾದರೂ ಮನೆಯಿಂದ ಬಾಳೆದಿಂಡನ್ನು ಒಟ್ಟು ಮಾಡಿ ಹೊತ್ತು ತರುತ್ತಿದ್ದರು. ಬಾಳೆದಿಂಡು ಹಳೆಯದಾದ ಹಾಗೇ ಒಣಗಿ ತನ್ನ ಬಣ್ಣವನ್ನು ತಿಳಿಹಸಿರಿನಿಂದ ಕಂದು ಬಣ್ಣವಾಗಿ ಬದಲಾಯಿಸಿಕೊಳ್ಳುತ್ತಿತ್ತು. ಆದರೂ ಅಜ್ಜಯ್ಯ ಅದನ್ನು ಧಿಕ್ಕರಿಸಿ ಎಸೆಯದೇ ಬಳಸುತ್ತಿದ್ದರು
ಅಜ್ಜಯ್ಯ, ರವಿ |
ಅದರಲ್ಲಿ ಉಣ್ಣುವುದರಿಂದ ಆಗುತ್ತಿದ್ದ ಆರೋಗ್ಯ ಲಾಭಗಳ ಅರಿವು ನನಗಿಲ್ಲ. ಆದರೆ ಒಂದೂ ದಿನ ತಪ್ಪದೆ ಅಜ್ಜಯ್ಯ ಆ ಬಾಳೆದಿಂಡಿನ ಹಾಳೆಯನ್ನು ಕೆರಪಿ ತಾದಾತ್ಮ್ಯತೆಯಿಂದ ಊಟದ ಎಲೆಯನ್ನು ತಯಾರಿಸಿಕೊಳ್ಳುತ್ತಿದ್ದ ಆ ದೃಶ್ಯವಂತೂ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಒಮ್ಮೆ ನಾನು ಉತ್ಸಾಹ ತೋರಿಸಿ ಬಾಳೆದಿಂಡಿನ ಎಲೆ ಮಾಡಲಿಕ್ಕೆ ಹೋಗಿ ಆ ಹಾಳೆಯನ್ನು ಹರಿದು ಹಾಕಿದ್ದೆ. ಆ ಕೆರಪುವ ಕೆಲಸಕ್ಕೂ ಒಂದು ನಿಗದಿತ ಫೋರ್ಸ್ ಹಾಕಬೇಕೆಂದು ನನಗಾಗ ಗೊತ್ತಾಯಿತು. ಯಾವುದೇ ಕೆಲಸವನ್ನು ಇನ್ನೊಬ್ಬರು ಮಾಡುವುದನ್ನು ನೋಡುವಾಗ ಸುಲಭ ಎಂದೆನಿಸುತ್ತದೆ. ಆದರೆ ನಾವು ಅದನ್ನು ಮಾಡ ಹೊರಟಾಗ ಆ ಕೆಲಸದ ಸಂಕೀರ್ಣತೆಯ ಅರಿವಾಗುತ್ತದೆ. ಹೌದಲ್ಲವೆ?!
No comments:
Post a Comment