Showing posts with label SHOBHA ARTICLES. Show all posts
Showing posts with label SHOBHA ARTICLES. Show all posts

Friday, September 4, 2026

HAPPY BIRTHDAY SHOBHA - 60

 Thursday, September 3, 2026

ಶೋಭಾ 

ಇವತ್ತು ನನಗೆ ಅರವತ್ತು ತುಂಬಿತು. ನನ್ನ ಪ್ರಾಂಶುಪಾಲ ಪದವಿಯಿಂದ ನಿವೃತ್ತಿ ಕೂಡಾ ತಗೊಳ್ಳುತ್ತಿರುವ ಕಾರಣ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿಗಳಿಗೆಲ್ಲರಿಗೂ ನಾನೇ ಒಳ್ಳೆಯ ಊಟ ಹಾಕಿಸಬೇಕೆನ್ನುವ ಯೋಚನೆ ಬಂದಾಗ ನಮ್ಮ ಟ್ರಸ್ಟಿಗಳು ಸಂಸ್ಥೆಯ ವತಿಯಿಂದ ಊಟ ಹಾಕಿಸುವುದಾಗಿ ತೀರ್ಮಾನಿಸಿ ಇವತ್ತು ನೀಚಡಿ ಪ್ರಕಾಶ ಭಟ್ಟರ ಕೈಚಳಕದ ರುಚಿಕರ ಊಟದ ವ್ಯವಸ್ಥೆ ಮಾಡಲಾಯಿತು. ಹುಟ್ಟು ಹಬ್ಬದ ಆಚರಣೆಯ ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲದ ನಾನು ಅಸೆಂಬ್ಲಿಗೆ ಬರಬೇಕೆಂದು ಒತ್ತಾಯ ಬಂದರೂ  ನಿರಾಸಕ್ತಿ ತೋರಿಸಿ ಅಸೆಂಬ್ಲಿಗೆ ಹೋಗಲಿಲ್ಲ. ನಂತರದಲ್ಲಿ ನನ್ನ ಯೂಶುವಲ್ ಟೈಮ್ ನಲ್ಲಿ ಶಾಲೆಯ ಕಡೆಗೆ ಹೋದೆ. ಅಲ್ಲಿ ನನಗಾಗಿ ಅನೇಕ ಅಚ್ಚರಿಗಳು ಒಂದರ ಮೇಲೊಂದರಂತೆ ಕಾಯುತ್ತಿದ್ದವು. ಸೆಕ್ಷನ್ ವೈಸ್ ಟೀಚರ್ಸ್ ಬಂದು ನನಗೆ ವಿಶ್ ಮಾಡಿ, ಗಿಫ್ಟ್ ಕೊಟ್ಟರು. ಕ್ಲಾಸ್ ವೈಸ್ ಮಕ್ಕಳ ರೆಪ್ರೆಸೆಂಟೆಟಿವ್ ಗಳು ಬಂದು ಅವರೇ ಕೈಯ್ಯಾರೆ ಮಾಡಿದ, ಅವರ ಭಾವನಾತ್ಮಕ ಬರಹಗಳಿಂದ ತುಂಬಿದ ಬಣ್ಣ ಬಣ್ಣದ ಗ್ರೀಟಿಂಗ್ಸ್ ಗಳನ್ನು ಕೊಟ್ಟರು. ಆ ಪುಟ್ಟ ಪುಟ್ಟ ಬರಹಗಳನ್ನು ಹಾಗೂ ಸಾಲುಗಳನ್ನು ಓದಿದಾಗ “ಮಕ್ಕಳು ನಮ್ಮನ್ನು ಇಷ್ಟೆಲ್ಲಾ ಗಮನಿಸಿ  ಅಸೆಸ್ ಮಾಡ್ತಾರಾ” ಅಂತ ಆಶ್ಚರ್ಯ ಆಯಿತು. ಮನತಟ್ಟುವ ಪ್ರಾಮಾಣಿಕ ಸಾಲುಗಳು ಅವರದಾಗಿದ್ದವು. ಅವರ ಮುಗ್ಧ ಭಾವನೆಗಳು ನನ್ನ ಮನಸ್ಸನ್ನು ಬಹಳ ತಟ್ಟಿದವು. ನಾನು ಬಹಳ ಭಾವಪರವಶಳಾದೆ. ಇಂಗ್ಲಿಷ್ ನಲ್ಲಿ ಹೇಳ್ತಾರಲ್ವಾ overwhelming ಅಂತ ಹಾಗೆ! ನಾನು ಇವು ಯಾವನ್ನೂ ನಿರೀಕ್ಷಿಸಿರಲಿಲ್ಲ. ಹೀಗಾಗಿ ಎಲ್ಲರೂ ತೋರಿಸಿದ ನಿಷ್ಕಪಟ ಪ್ರೀತಿಯನ್ನು ಜೀರ್ಣಿಸಿಕೊಳ್ಳುವುದು ಕಷ್ಟವೆಂದೆನಿಸಿತು.

ಮಧ್ಯಾಹ್ನದ ಊಟದ ಸಮಯದಲ್ಲಿ ಮೆಸ್ ನ ಕಡೆಗೆ ಹೋದಾಗ ಎಲ್ಲರ “ಹ್ಯಾಪಿ ಬರ್ತಡೇ" ಯ ವಿಶ್ ಹಾಗೂ ಕೈಕುಲುಕುವಿಕೆಯಲ್ಲಿ ನಾನು ‘ಕಳೆದು’ ಹೋದೆ ಎನ್ನುವುದು ಸತ್ಯದ ಮಾತು! ನಮ್ಮ ಡ್ರೈವರ್ಸ್ ಆದಿಯಾಗಿ ಎಲ್ಲರಿಂದಲೂ ಉಡುಗೊರೆಗಳು ಹಾಗೂ ಹಾರೈಕೆಗಳು. ಭಾವನೆಗಳು ಉಕ್ಕಿ ಬಂದು ಸುಸ್ತಾದ ಅನುಭವ! ಸಂಜೆ ವಿಭಾ, ಮೇದಿನಿ, ಪುಟ್ಟು, ನಮ್ಮ ಮನೆಯ ಆದ್ಯ - ಆರ್ಯಳ ಜೊತೆ ಮನೆಯಲ್ಲಿ ಕುಣಿದು ಸಂಭ್ರಮಿಸಿದ್ದು ಇವತ್ತಿನ ನನ್ನ ಅರವತ್ತನೇ ಹುಟ್ಟುಹಬ್ಬಕ್ಕೆ ‘ಶುಭ’ ವಿರಾಮವನ್ನು ನೀಡಿತು.(ಮಕ್ಕಳೊಡನೆ ಮಕ್ಕಳಾಗಿರುವುದು ಬಹಳ ರಿಲ್ಯಾಕ್ಸಿಂಗ್ ಅಂತ ನಿಮಗೆ ಗೊತ್ತಾ?) ಇದರ ಮಧ್ಯೆ ಹುಟ್ಟು ಹಬ್ಬದ ಹಾರೈಕೆಯ ಮೆಸೇಜ್ ಗಳು ಹಾಗೂ ಫೋನ್ ಗಳು ಕೂಡಾ ಖುಷಿಯ ಡೋಸ್ ಅನ್ನು ಹೆಚ್ಚಿಸಿದವು ಎಂದು ಹೇಳುವುದರ ಜೊತೆಗೆ ನಾನು ಇಂದು   "ಹಿರಿಯ ನಾಗರಿಕ”ಳ ಪಟ್ಟಕ್ಕೆ ಭಡ್ತಿ ಪಡೆದೆ ಎಂದು ಘೋಷಿಸಲು ಬಯಸುತ್ತೇನೆ!







Posted 4/9/2026

Saturday, August 8, 2026

NAIK DEEPCHAND - VISIT TO HONGIRANA

 Friday, August 7, 2026

Hongirana School of Excellence, Amatekoppa, Sagara

ವತ್ತು ನಮ್ಮ ಶಾಲೆಗೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಹಾಗೂ ಆಪರೇಷನ್ ಪರಾಕ್ರಮದ ವೇಳೆಯ ಬಾಂಬ್ ಸ್ಫೋಟದಲ್ಲಿ ಎರಡೂ ಕಾಲು ಹಾಗೂ ಒಂದು ಕೈಯನ್ನು ಕಳೆದುಕೊಂಡ ಹರ್ಯಾಣದ ಹಿಸಾರ್ ನ ಮಾಜಿ ಯೋಧ ನಾಯಕ್ ದೀಪ್ ಚಂದ್ ಅವರು ಬಂದಿದ್ದರು. ಅಂತಹ ಯೋಧರೊಡನೆಯ ಒಡನಾಟ ಸಿಗುವುದೇ ಅಪರೂಪದ ಅವಕಾಶ. ಸಾಗರದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನನ್ನ ಸ್ನೇಹಿತರಾದ ಸರಸ್ವತಿ ನಾಗರಾಜ್ ಅವರ ಮೂಲಕ ದೀಪ್ ಚಂದ್ ಅವರನ್ನು ನಮ್ಮಲ್ಲಿಗೆ ಕರೆಸುವ ಅವಕಾಶ ಸಿಕ್ಕಿತು. ಶಿವಮೊಗ್ಗದಲ್ಲಿ ಮಲ್ನಾಡ್ ಓಪನ್ ಗ್ರೂಪ್ ನವರು ನಡೆಸುವ “ಗೀತ ಗಾಯನ" ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿರುವ ನಾಯಕ್ ದೀಪ್ ಚಂದ್ ನಮ್ಮ ಶಾಲೆಗೆ ಬಂದು ನಮ್ಮ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ್ದು ನಾವು ಬಯಸದೇ ಬಂದ ಭಾಗ್ಯ!


ಐವತ್ತೊಂದು ವರ್ಷದ ದೀಪ್ ಚಂದ್ ಅವರ ಜೀವನೋತ್ಸಾಹವನ್ನು ನೋಡಿ ನಾವು ಕಲಿಯಬೇಕಾದದ್ದು ಬಹಳಷ್ಟಿದೆ. ತನ್ನ ಇಪ್ಪತ್ತೇಳನೆಯ ವಯಸ್ಸಿನಲ್ಲಿ ಕೈ ಕಾಲುಗಳನ್ನು ಕಳೆದುಕೊಂಡು ಅಂಗವಿಹೀನರಾದ ದೀಪ್ ಚಂದ್ ಎಂದಿಗೂ ಧೃತಿಗೆಡದೆ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಅವರ ಪತ್ನಿ ಸುಶೀಲಾದೇವಿಯವರು ಪತಿಯ ಬೆಂಬಲಕ್ಕೆ ಕಂಕಣ ತೊಟ್ಟು ಸಾತ್ ನೀಡುತ್ತಿದ್ದಾರೆ. ಆ ದಂಪತಿಗಳ ಜೀವನ ಪ್ರೀತಿ ಹಾಗೂ ಪರಸ್ಪರ ಅರ್ಥೈಸಿಕೊಂಡು ನಡೆಸುತ್ತಿರುವ ಬದುಕು ನಮಗೆಲ್ಲಾ ಮಾದರಿಯಾದಂತಹುದು. " ಆದರ್ಶ ಸೈನಿಕ ಪ್ರತಿಷ್ಠಾನ” ಎನ್ನುವ ಸಂಸ್ಥೆ ಸ್ಥಾಪಿಸಿ ಹುತಾತ್ಮ ಸೈನಿಕರ ಕುಟುಂಬಕ್ಕೆ ಸಹಾಯ ಮಾಡುವ ಕೆಲಸವನ್ನು ದೀಪ್ ಚಂದ್ ಅವರು ಮಾಡುತ್ತಿದ್ದಾರೆ. ಅವರ ಬಳಿ ಇರುವ ಕಾರಿನ ಹೊರಮೈಯ್ಯಲ್ಲಿ ಕಾರ್ಗಿಲ್ ಯುದ್ದದ ಕಥಾನಕವನ್ನು ಬರೆಸಿದ್ದಾರೆ. ವಿವಿಧ ಸ್ಥಳಗಳಿಗೆ ಹೋಗಿ ತನ್ನ ಸ್ಫೂರ್ತಿದಾಯಕ ಮಾತುಗಳಿಂದ ಜನರಲ್ಲಿ ಉತ್ತಮ ಕೆಲಸ ಮಾಡಲು ಪ್ರೇರಣೆ ನೀಡುತ್ತಿದ್ದಾರೆ. ತನ್ನ ಅಂಗವೈಕಲ್ಯತೆಯ ಬಗ್ಗೆ ಯಾವತ್ತೂ ಯೋಚಿಸದೆ ಪ್ರತೀ ಕ್ಷಣವೂ ಸಮಾಜಕ್ಕೆ ತಾನೇನು ಕೊಡಬಲ್ಲೆ ಎಂಬ ಪ್ರಯತ್ನದಲ್ಲಿ ತೊಡಗಿಸಿಕೊಂಡಿರುವ ನಾಯಕ್ ದೀಪ್ ಚಂದ್ ಅಂತಹ ವ್ಯಕ್ತಿಗಳು ನಿತ್ಯ ಸ್ಮರಣೀಯರು.

ದೀಪ್ ಚಂದ್ ಅವರು ತನ್ನ ಬದುಕಿನ ಧ್ಯೇಯದ ಬಗ್ಗೆ, ಅದಕ್ಕಾಗಿ ಅವರ ಶ್ರಮದ ಬಗ್ಗೆ, ಕಾರ್ಗಿಲ್ ಯುದ್ಧದಲ್ಲಿನ ತನ್ನ ರೆಜಿಮೆಂಟ್ ನ ಹೋರಾಟದ ಬಗ್ಗೆ, ಸೈನಿಕರು ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಸ್ಪಂದಿಸಿ ಸಹಕರಿಸುವ ಬಗ್ಗೆ, ಯುದ್ಧದ ಆಪತ್ಕಾರಿ ಸಂದರ್ಭದಲ್ಲೂ ಧೈರ್ಯಗುಂದದೆ ಹೋರಾಡುವ ಸೈನಿಕರ ಮಾನಸಿಕ ಕ್ಷಮತೆಯ ಬಗ್ಗೆ ….. ಸುಮಾರು ಅರ್ಧ ತಾಸಿಗೂ ಮೀರಿ ಹಿಂದಿಯಲ್ಲಿ ಮಾತನಾಡಿದರು. ಅಲ್ಲಿದ್ದ ಸಣ್ಣ ಮಕ್ಕಳಿಗೆ ಅವರ ಮಾತು ಸಂಪೂರ್ಣವಾಗಿ ಅರ್ಥವಾಗದಿದ್ದರೂ ಎಲ್ಲಾ ಮಕ್ಕಳು ಕಮಕ್ ಕಿಮಕ್ ಎನ್ನದೆ ಕೂತಿದ್ದರು. ಅವರ ಮಾತಿನ ನಂತರದಲ್ಲಿ ಪ್ರಶ್ನೋತ್ತರ ಕಾರ್ಯಕ್ರಮವಿದ್ದು ನಮ್ಮ ಮಕ್ಕಳು ಬಹಳ ಅರ್ಥಪೂರ್ಣ ಪ್ರಶ್ನೆಗಳನ್ನು ಕೇಳಿದರು. ಒಬ್ಬ ಯೋಧನ ಮೌಲ್ಯ ಎಂತಹುದು ಎನ್ನುವುದು ಇಂದಿನ ಕಾರ್ಯಕ್ರಮದಲ್ಲಿ ಮಕ್ಕಳ ವರ್ತನೆ ನೋಡಿ ಅರಿವಾಯಿತು. ಇಂತಹ ಒಬ್ಬೊಬ್ಬ ಯೋಧರ ಭೇಟಿ ಎನ್ನುವುದು ನಮ್ಮೆಲ್ಲರಲ್ಲಿ ದೇಶಪ್ರೇಮವನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ ಎಂದು ನಾನು ನಿಸ್ಸಂಶಯವಾಗಿ ಹೇಳಬಲ್ಲೆ..

ಇಂದಿನ ದಿನ ನಮ್ಮೆಲ್ಲರ ಮನದಲ್ಲಿ ಅಚ್ಚಳಿಯದೆ ಉಳಿಯುವಂತಹ ದಿನವಲ್ಲವೆ? 

Posted 8/8/2026


Wednesday, July 15, 2026

MAIN VAAPAS AAUNGA - SHOBHA ARTICLE

 ಮಂಗಳವಾರ, ಜುಲೈ 14, 2026 

MAIN VAAPAS AAUNGA



ನಾನು ಹಾಗೂ ನನ್ನ ಮಗಳು ಕಳೆದ ವಾರ ಬೆಂಗಳೂರಿಗೆ ಹೋಗಿ ಮೂರ್ನಾಲ್ಕು ದಿವಸಗಳಿದ್ದು ಬಂದೆವು. ಮುಖ್ಯ ಉದ್ದೇಶ ನಮ್ಮ ಮನೆಯ ಮಗು “ಸರಯೂ" ಜೊತೆಗೆ ಕಾಲ ಕಳೆಯುವುದು; ಅವಳ ಕೇಕೆ, ಕುಸುಗುಟ್ಟುವಿಕೆ, ಹಾಂ ಹೂಂ ಮಾತುಗಳ ನಡುವೆ ಕಳೆದು ಹೋಗುವುದಾಗಿತ್ತು. ಬರೀ ಅಷ್ಟಕ್ಕೆ ನಮ್ಮ ಕೆಲಸ ನಿಲ್ಲದೆ ಅದರ ನಡುವೆ ಒಂದು ಸಿನೆಮಾವನ್ನು ನೋಡಿದ್ದೂ ಆಯಿತು. ಅದು ಇಮ್ತಿಯಾಜ್ ಅಲಿಯ ಹೊಸ ಸಿನೆಮಾ" ಮೇ ವಾಪಾಸ್ ಆವೂಂಗಾ”. ನನ್ನನ್ನು ಗಾಢವಾಗಿ ತಟ್ಟಿದ ಸಿನೆಮಾ ಅದಾಗಿತ್ತು. ಸಿನೆಮಾ ಹಾಲ್ ನಲ್ಲಿ ಇದ್ದವರು ನಲ್ವತ್ತು ಐವತ್ತು ಜನರಿರಬಹುದು. ಸಿನೆಮಾ ಮುಗಿದರೂ ಯಾರೂ ತಮ್ಮ ಸೀಟ್ ಬಿಟ್ಟು ಏಳಲಿಲ್ಲ. ಎಲ್ಲರ ಕಣ್ಣುಗಳಲ್ಲೂ ಕಣ್ಣೀರು ಇಳಿಯುತ್ತಿತ್ತು; ನನ್ನ ಹಾಗೂ ವಿಭಾಳ ಕಣ್ಣುಗಳಲ್ಲೂ ಕೂಡಾ!

ಸ್ವಾತಂತ್ರ್ಯಪೂರ್ವದ ದೇಶ ವಿಭಜನೆಯ ಸಮಯದ ಪ್ರೇಮ ಕಥೆಯದು. ಎಲ್ಲೂ ಯಾವುದರ ವೈಭವೀಕರಣವಿಲ್ಲ. ನಮ್ಮ ಸುತ್ತ ಮುತ್ತ ಸಹಜವಾಗಿ ಕಾಣುವ/ನಡೆಯುವ ರೀತಿಯಲ್ಲಿ ತೆಗೆದ ಚಿತ್ರವದು. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕನೆಕ್ಟ್ ಆಗುವ ಸಿನೆಮಾವದು. ನನಗೆ ಅದರಲ್ಲಿನ ‘ಶುದ್ಧ’ ಪ್ರೀತಿಯ ಭಾವ ಮನ ತಟ್ಟಿತು. ನಾನು ಮೂಲಭೂತವಾಗಿ ಭಾವನಾತ್ಮಕ ವ್ಯಕ್ತಿ. ನನ್ನಲ್ಲಿ ಪ್ರಧಾನವಾಗಿ ಇರುವುದು ಪ್ರೀತಿಯ ಭಾವ. ಹೀಗಾಗಿ ಆ ಸಿನೆಮಾದಲ್ಲಿ ಎಳೆಎಳೆಯಾಗಿ ತೋರಿಸಿದ ಪ್ರೀತಿಯ ಭಾವಬಂಧ ನನ್ನ ಸುಪ್ತ ಮನಸ್ಸನ್ನು ಕಲುಕಿತು ಎಂದರೂ ತಪ್ಪಿಲ್ಲ. ತನ್ನ ಪ್ರೀತಿಯನ್ನು ತನ್ನೊಳಗೇ ಇಟ್ಟುಕೊಂಡು, ಪ್ರಿಯತಮೆಯಿಂದ ದೂರಾದ ನೋವನ್ನು ನುಂಗಿಕೊಂಡು, ತನ್ನವರನ್ನೆಲ್ಲಾ ಕಳೆದುಕೊಂಡು, ತಾನು ಹುಟ್ಟಿ ಬೆಳೆದ ನೆಲದಿಂದ ದೂರಾಗಿ, ನಿರಾಶ್ರಿತನಾಗಿ ಹೊಸ ಜಾಗದಲ್ಲಿ ಹೊಸದಾಗಿ ಯಶಸ್ವಿ ಬದುಕನ್ನು ಕಟ್ಟಿಕೊಂಡು, ಸಾವಿಗೆ ಹತ್ತಿರವಾದರೂ ತನ್ನ ಪ್ರಿಯತಮೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲೋಸುಗ ಈ ಭೌತಿಕ ಜಗತ್ತಿಗೆ ಅಂಟಿಕೊಂಡು, ವಯಸ್ಸು ತೊಂಬತ್ತೈದು ಆಗಿ ಜೀವನ್ಮರಣದ ಅಂಚಿನಲ್ಲಿದ್ದರೂ ಸಾಯಲಾರದೆ ತೊಳಲಾಡುವ ಹಾಗೂ ಕೊನೆಗೂ ಪ್ರೇಮಿಕೆಯ ಭಾವಚಿತ್ರದೆದುರು ತನ್ನ ಮನದ ಮಾತನ್ನು ಅರುಹುತ್ತಾ ಆ ವ್ಯಕ್ತಿ ಪ್ರಾಣ ಬಿಡುವ ಗಳಿಗೆ ಇದೆಯಲ್ಲಾ ಅದು ಎಂತಹ ಕಲ್ಲು ಮನಸ್ಸಿನವರನ್ನೂ ಕರಗಿಸುವಂತಹುದು. ಇದೆಲ್ಲವನ್ನು ಸಹಜವಾಗಿ ತೋರಿಸಿದ ರೀತಿ ಹಾಗೂ ಕಥೆಯ ನಿರೂಪಣೆ ಅದ್ಭುತವಾದದ್ದು. ಪ್ರತಿಯೊಬ್ಬರ ನಟನೆ ಕೂಡಾ ಮನತಟ್ಟುವಂತಹುದು. ಸಂಗೀತ ಆಹ್ಲಾದಕರವಾಗಿ ಮನಸ್ಸಿನ ಒಳಗೆ ಇಳಿಯುವಂತಹುದು. ಸೀನ್ ಬ್ಲಾಕಿಂಗ್ ಹಾಗೂ ಫ್ಲ್ಯಾಶ್ ಬ್ಯಾಕ್ ಟೆಕ್ನಿಕ್ ಅನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲಾಗಿದೆ.

ಪ್ರೀತಿ ಮಾಡುವುದಲ್ಲ; ಅದು ನಮ್ಮೊಳಗೆ ಉದಿಸುವುದು. ಸಾವು ಆಯ್ಕೆಯಲ್ಲ; ಅದು ನಮ್ಮನ್ನು ಹುಡುಕಿಕೊಂಡು ಬಂದಾಗ ಅದನ್ನು ಒಪ್ಪಿಕೊಳ್ಳುವುದು. ಎಂತಹ ಸರಳ ಸತ್ಯಗಳು; ಆದರೆ ಅಷ್ಟೇ ಗಹನವಾದ ವಿಚಾರಗಳಿವು. ಇಂತಹುದನ್ನು ಒಂದು ಸಿನೆಮಾದ ಮೂಲಕ ಅರುಹುವ ಕೆಲಸ ಸುಲಭದ್ದಲ್ಲ. ಆ ಸಿನೆಮಾವನ್ನು ವಿಶ್ಲೇಷಿಸುವ ಸಾಮರ್ಥ್ಯ ನನಗಿಲ್ಲ. ಆದರೆ ನನಗನಿಸಿದ್ದನ್ನು ಬರೆಯುವ ಮನಸ್ಸು ನನಗಿದೆಯಷ್ಟೆ. ಎಲ್ಲರೂ ತಪ್ಪದೇ ಚಿತ್ರಮಂದಿರಕ್ಕೆ ಹೋಗಿ ನೋಡಬೇಕಾದ ಸಿನೆಮಾವದು!

Posted 16/7/2026


Monday, July 6, 2026

ಹಿನ್ನೀರ ಓದುಗರ ಒಂದು ಬೈಠಕ್ - ಶೋಭಾ ಸೋಮಯಾಜಿ

 ಶನಿವಾರ. ಜುಲೈ 4, 2026 


ಇಂದು ಹಿನ್ನೀರ ಓದುಗರ ಒಂದು ಬೈಠಕ್ ಕಿಟ್ಟಣ್ಣನ ಮನೆಯ ಲೈಬ್ರೆರಿಯಲ್ಲಿ ನಡೆಯಿತು. ಬಹಳ ತಿಂಗಳುಗಳ ನಂತರ ನಡೆದ ಬೈಠಕ್ ಇದು. ನಾವೊಂದು ಏಳೆಂಟು ಜನ ಸೇರಿದ್ದೆವು. ವಿಭಾ ಒಂದು ಐಸ್ ಬ್ರೇಕ್ ಆಕ್ಟಿವಿಟಿ ಮಾಡಿಸಿದ ನಂತರ ನಾವು ನಮಗೆ ಬೇಕಾದ ಪುಸ್ತಕದ ಓದಿನಲ್ಲಿ ತೊಡಗಿಕೊಂಡೆವು. ನಾನು ಕಳೆದ ಹೊಂಗಿರಣೋತ್ಸವದಲ್ಲಿ ಖರೀದಿಸಿದ್ದ ಆದರೆ ಇತ್ತೀಚೆಗೆ ಓದಲು ಪ್ರಾರಂಭಿಸಿದ್ದ ಕರ್ಜಗಿಯವರ “ಈಶಾವಾಸ್ಯ ಉಪನಿಷತ್" ಪುಸ್ತಕವನ್ನು ಓದುವುದರಲ್ಲಿ ತೊಡಗಿಕೊಂಡೆ. ನಾನಿನ್ನೂ ಅದರ ಪೀಠಿಕಾ ಭಾಗವನ್ನು ಓದುತ್ತಿದ್ದೇನೆ ಅಷ್ಟೇ! ಪುಸ್ತಕದ ಪೂರ್ಣ ಒಳಗಿನ್ನೂ ಹೋಗಿಲ್ಲ. ಈ ವೇದ, ಅರಣ್ಯಕ, ಉಪನಿಷತ್ ಬಗ್ಗೆ ಓದಿ ಜೀರ್ಣಿಸಿಕೊಳ್ಳುವುದು ನನಗೆ ಸ್ವಲ್ಪ ಕಷ್ಟ. ಒಂದೊಂದು ಸಲ ಕೆಲವು ಭಾಗಗಳನ್ನು ಎರಡೆರಡು ಸಲ ಓದಬೇಕಾದ ಅಗತ್ಯ ನನಗೆ ಬರುತ್ತದೆ. ಆದರೆ ಅಂತಹ ಓದಿನಲ್ಲೂ ಏನೋ ಸುಖವಿದೆ! ಅದರಲ್ಲಿ ಬರೆದಿರುವ ಎಷ್ಟೋ ವಿಷಯಗಳು ಈ ವಯಸ್ಸಿನಲ್ಲಿ ತುಂಬಾ ಕನೆಕ್ಟ್ ಆಗುತ್ತವೆ. ನಮ್ಮೊಳಗಿರುವ ಗೊಂದಲಗಳಿಗೆ ಅಲ್ಲೆಲ್ಲೋ ಉತ್ತರ ಸಿಗುತ್ತದೆ.

ನಮ್ಮ ಸನಾತನ ಪರಂಪರೆಯ ತತ್ವಮಸಿ - ಅಂದರೆ know thyself - ಇದು ಹೇಳುವುದು ಎಷ್ಟು ಸುಲಭವೋ ಸಾಧಿಸುವುದು ಅಷ್ಟೇ ಕಷ್ಟ ಎನ್ನುವ ಅರಿವು ಈ ಪುಸ್ತಕ ಮೂಡಿಸುತ್ತದೆ. ಆ ಪುಸ್ತಕದಲ್ಲೊಂದು ಸಾಲಿದೆ " ಬಹಳಷ್ಟು ಜನ ತೊಳಲಾಟದಲ್ಲೇ ಆಯುಷ್ಯ ನೀಗುತ್ತಾರೆ”. ಎಷ್ಟು ಸತ್ಯದ ಮಾತಲ್ಲವೆ? ಅಲ್ಲಿ ಇನ್ನೂ ಒಂದು ವಿಷಯ ಬರುತ್ತದೆ “ಧರ್ಮದ ಹುಟ್ಟಿಗೆ ಭೀತಿ ಎಷ್ಟು ಕಾರಣವೋ, ಸೃಷ್ಟಿಯು ಮನುಷ್ಯನಲ್ಲಿ ಪ್ರಚೋದಿಸಿದ ಕುತೂಹಲವೂ ಅಷ್ಟೇ ಕಾರಣ”. ಒಪ್ಪುವ ಮಾತು ತಾನೆ? ನನ್ನನ್ನು ತಟ್ಟಿದ ಇನ್ನೊಂದು ಸಾಲೆಂದರೆ" ಸತ್ಯದ ಅನ್ವೇಷಣೆ ವಸ್ತುನಿಷ್ಠವಾದಾಗ ವಿಜ್ಞಾನವಾಯಿತು, ಭಾವನಿಷ್ಠವಾದಾಗ ಸಾಹಿತ್ಯ ಮತ್ತು ಕಲೆಯಾಯಿತು….” ಈ ಪುಸ್ತಕದ ಪೀಠಿಕೆಯಲ್ಲಿ ವೇದದ ಉಗಮ, ವೇದದ ಮೂಲ ಉದ್ದೇಶ, ಜೀವನದ ಅರ್ಥ, ನಾನು ಯಾರು, ನಾನೇಕೆ ಇಲ್ಲಿಗೆ ಬಂದಿದ್ದೇನೆ ಎನ್ನುವಂತಹ ತಾತ್ವಿಕ ವಿಷಯಗಳು, ಸಂಹಿತೆಗಳು, ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳ ಬಗ್ಗೆ ಸರಳವಾದ ವಿವರಣೆ ಇದೆ.

ವೇದೋಪನಿಷತ್ತುಗಳ ಬಗ್ಗೆ ಅಂತಹ ತಿಳುವಳಿಕೆ ಇಲ್ಲದ ನನ್ನಂತಹವರೂ ಸಹಾ ಅವುಗಳ ಕುರಿತು ಅರಿಯುವಂತೆ, ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡಲು ಈ ಕೃತಿ ಸಹಾಯಕವಾಗಿದೆ. ಇದರಲ್ಲಿ ದೃಷ್ಟಾಂತ ಕಥೆಗಳಿವೆ, ಪ್ರಸಂಗ - ಪ್ರಹಸನಗಳಿವೆ. ಇದರಿಂದ ಓದು ಸರಳವಾಗುತ್ತದೆ. ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ಹುಮ್ಮಸ್ಸಿನಲ್ಲಿ ಈ ಪುಸ್ತಕವನ್ನು ಓದಲು ಪ್ರಾರಂಭಿಸಿ ‘ಪ್ರಾಜ್ಞ’ಳಾಗುವ ಪ್ರಯತ್ನ ಮಾಡುತ್ತಿದ್ದೇನೆ. ಇದೊಂದು ಯಶಸ್ವಿ ಓದಾಗಬಹುದಲ್ಲವೆ?          

Posted 6/7/2026 

Sunday, June 28, 2026

“ಭಾವನಾತ್ಮಕ ಕುಸಿತ" - SHOBHA SOMAYAJI

 June 28, 2026

“ಭಾವನಾತ್ಮಕ ಕುಸಿತ"


ನನಗೆ ಪ್ರತಿದಿನ ದಿನಪತ್ರಿಕೆಯ ಅಂಕಣ, ವಾರಪತ್ರಿಕೆಯ ಲೇಖನ ಹಾಗೂ ಫೇಸ್ಬುಕ್ ವಾಲ್ ನಲ್ಲಿ ಬರುವ ಲೇಖನಗಳನ್ನು ಓದುವ ಅಭ್ಯಾಸವಿದೆ. ಮೊನ್ನೆ ಯಾವುದೋ ಲೇಖನ ಓದುವಾಗ “ಭಾವನಾತ್ಮಕ ಕುಸಿತ" ಎನ್ನುವ ಪದ ಪ್ರಯೋಗವನ್ನು ನೋಡಿದೆ. ಆ ಪದ ನನ್ನ ಮನಸ್ಸನ್ನು ತಟ್ಟಿ ಬಿಟ್ಟಿತು. ಎಷ್ಟು ಸರಳ ಪದವದು! ಆದರೆ ಎಷ್ಟು ಭಾವನೆಗಳನ್ನು ವ್ಯಕ್ತಪಡಿಸುತ್ತದೆ.


ಎಷ್ಟೇ " ಗಟ್ಟಿ ಮನಸ್ಸಿನ” ವ್ಯಕ್ತಿಯಾದರೂ ಕೂಡಾ “ಭಾವನಾತ್ಮಕವಾಗಿ" ಒಳಗೊಳಗೆ " ಕಲುಕ” ಪಟ್ಟವರು ಇರದೇ ಇರಲು ಸಾಧ್ಯವಿಲ್ಲ. ಎಂತಹುದೇ ವೃತ್ತಿಪರ ಸವಾಲನ್ನು ಧೈರ್ಯದಿಂದ ಎದುರಿಸಬಹುದು; ಆದರೆ ವೈಯಕ್ತಿಕ ಸಂಬಂಧಗಳನ್ನು ನಿರ್ವಹಿಸುವಾಗ ಎದುರಿಸುವ ಸವಾಲುಗಳು ಎಂತಹವರನ್ನೂ ಅಲುಗಾಡಿಸುತ್ತದೆ. ಅಂತಹ ಸಮಯದಲ್ಲಿ ಸಹಜವಾಗಿ ಪ್ರತಿಯೊಬ್ಬರೂ ಭಾವನಾತ್ಮಕವಾಗಿ ದುರ್ಬಲರಾಗುತ್ತಾರೆ.

ಸಂಬಂಧಗಳ ನಿರ್ವಹಣೆಯ ವಿಷಯ ಬಂದಾಗ ಪ್ರತಿಯೊಬ್ಬರೂ ಭಾವನಾತ್ಮಕ ಒತ್ತಡಕ್ಕೆ ಒಳಗಾಗುತ್ತಾರೆ. ಅನ್ನಲೂ ಆಗದೆ, ಅನುಭವಿಸಲೂ ಆಗದೆ ‘ಬಿಸಿ ತುಪ್ಪವನ್ನು ಗಂಟಲಲ್ಲಿ ಇಟ್ಟುಕೊಂಡಂತೆ’ ಅನಿಸಿಕೆ/ಅಭಿಪ್ರಾಯವನ್ನು ವ್ಯಕ್ತಪಡಿಸಲಾಗದೆ ಹಾಗೆಯೇ ಇಟ್ಟುಕೊಳ್ಳುವ ಸಂಕಷ್ಟಕ್ಕೆ ಒಳಗಾಗುತ್ತಾರೆ. ಪ್ರೀತಿಗೆ ಸರಿಯಾದ ಸ್ಪಂದನೆ ಸಿಗದಿದ್ದಾಗಲೂ ಅದು ಒಳಗಿಂದೊಳಗೆ ಭಾವುಕ ವ್ಯಕ್ತಿಗಳ ಮನಸ್ಸಿನ ತಿಳಿಗೊಳವನ್ನು ಕಲುಕುತ್ತದೆ. ಅಂತಹ ಸಮಯದಲ್ಲಿ ಕಾಣುವುದು ಎಲ್ಲವೂ “ ಕಾಮಾಲೆ ಬಂದವನಿಗೆ ಪ್ರಪಂಚವೆಲ್ಲಾ ಹಳದಿಯಾಗಿ ಕಾಣುವಂತೆ" ನಕಾರಾತ್ಮಕವಾಗಿ ಕಾಣುತ್ತದೆ. ‘ಭಾವನಾತ್ಮಕ ಕುಸಿತ’ ಅಂತಹ ಸಂದರ್ಭದಲ್ಲಿ ಅನುಭವಕ್ಕೆ ಬರುತ್ತದೆ. ಅದು ಮಾನಸಿಕ ಬಳಲುವಿಕೆಯೊಂದಿಗೆ ದೈಹಿಕ ಬಳಲುವಿಕೆಯನ್ನು ಉಂಟು ಮಾಡುತ್ತದೆ. ಯಾವ ಕೆಲಸವನ್ನು ಮಾಡುವ ಉತ್ಸಾಹ ಮೂಡದೆ ನಿರುತ್ಸಾಹ ಕಾಡುತ್ತದೆ. ತಾನು ‘ನಿಷ್ಪ್ರಯೋಜಕ’ ಎನ್ನುವ ಭಾವನೆ ಬರುತ್ತದೆ. ಕೋಪ, ಕಿರಿಕಿರಿಯ ಭಾವಗಳು ಉದಿಸುತ್ತವೆ. ಜಗತ್ತನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ಸಂಬಂಧಗಳ ಸಹ್ಯತೆ ಕಡಿಮೆಯಾಗುತ್ತದೆ. ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ.

ನಾವು ಅದೇ ‘ವಲಯ’ದೊಳಗೆ ಮುಂದುವರಿಯಬಾರದು. ಅದರಿಂದ ಹೊರಬರಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ಪ್ರೀತಿಪಾತ್ರರೊಡನೆ ಹೆಚ್ಚಿನ ಕಾಲ ಕಳೆಯಬೇಕು. ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರ ಒತ್ತಡ ನಿರ್ವಹಣೆಯ ಸಾಮರ್ಥ್ಯ ಬೇರೆ ಬೇರೆ ಇರುವ ಕಾರಣ ಸಮಸ್ಯೆ ತೀವ್ರವಾಗಿದೆ ಎಂದೆನಿಸಿದಾಗ ವೈದ್ಯಕೀಯ ನೆರವು ಪಡೆಯಬೇಕಾಗುತ್ತದೆ. “ಭಾವನಾತ್ಮಕ ಕುಸಿತದ” ಅನುಭವವಾದಾಗ ಧೃತಿಗೆಡದೆ ಅದನ್ನು ನಿರ್ವಹಿಸಬೇಕು. ಬದುಕು ಬಂದಂತೆ ಸ್ವೀಕರಿಸುವುದು ಬುದ್ಧಿವಂತರ ಲಕ್ಷಣವಲ್ಲವೆ?!


Posted 29/6/2026

Saturday, June 13, 2026

Aroma ಮತ್ತು ‘ಪರಿಮಳ’ - ಶೋಭಾ ಸೋಮಯಾಜಿ

 ಜೂನ್ 12, 2026 

Aroma ಮತ್ತು  ‘ಪರಿಮಳ’ 

Aroma ಎನ್ನುವ ಪದದರ್ಥ ‘ಪರಿಮಳ’ ಎಂದು. Aroma ಎನ್ನುವಾಗ ಬರುವ ಭಾವನೆ ‘ಪರಿಮಳ’ ಎಂಬ ಪದ ಬಳಸುವಾಗ ಬರುವುದಿಲ್ಲವೆಂದು ಕೆಲವೊಮ್ಮೆ ನನಗನಿಸುತ್ತದೆ. ಆ ಪದದ ನೆನಪು ನನಗೆ ಏಕಾಯಿತೆಂದರೆ ಇವತ್ತು ನಾನು ಬೆಳಗಿನ ತಿಂಡಿ ಮುಗಿಸಿ, ತದನಂತರದಲ್ಲಿ ಸ್ನಾನ ಮಾಡಿ, ಕೋಣೆಯಿಂದ ಹೊರಗೆ ಬಂದಾಗ ನಾನು ಕೆಲವು ನಿಮಿಷಗಳ ಹಿಂದಷ್ಟೇ ಮಾಡಿ ಮುಗಿಸಿದ ಬಾಳೆಹಣ್ಣಿನ ದೋಸೆಯ ‘ಪರಿಮಳ’ ನನ್ನನ್ನು ಹೊದಿಕೆಯಂತೆ ಒಂದು ಗಳಿಗೆ ಆವರಿಸಿ ಬೆಚ್ಚಗಿನ ಭಾವ ಕೊಟ್ಟಿತು. ಮಗುವೊಂದು ತಾಯಿಯ ಮಡಿಲ ಬಿಸುಪನ್ನು ಅನುಭವಿಸುವ ಆಪ್ಯಾಯಮಾನ ಭಾವ ನನ್ನಲ್ಲಿ ಉದಿಸಿತು.


ನಾವು ರೆಗ್ಯುಲರ್ ಆಗಿ ಬಳಸುವ/ಮಾಡುವ ಆಹಾರದ, ನಮ್ಮ ನಮ್ಮ ಜಾಗದ, ನಾವು ಉಪಯೋಗಿಸುವ ವಸ್ತುಗಳ ವಿಶಿಷ್ಟ ಪರಿಮಳ ಯಾವತ್ತೂ ಕೂಡಾ ನಮ್ಮಲ್ಲಿ “ಸುರಕ್ಷಿತ" ಮನೋಭಾವವನ್ನು ಮೂಡಿಸುತ್ತದೆ ಎನ್ನುವುದು ನನ್ನ ಅನಿಸಿಕೆ. ಅದು ಭಾವನಾತ್ಮಕ ನಂಟನ್ನು ಕೂಡಾ ಸೃಷ್ಟಿಸುತ್ತದೆ ಎನ್ನುವುದು ನನ್ನ ಅನುಭವ. ನಾವು ಅಡುಗೆ ಮಾಡುವಾಗ ಅದು ಹೊಮ್ಮಿಸುವ ‘ಪರಿಮಳ’ ಆ ಹೊತ್ತಿಗೆ ನಮ್ಮ ಅನುಭವಕ್ಕೆ ಬರುವುದಿಲ್ಲ. ಆದರೆ ಮನೆಯ ಹೊರಗೆ ಹೋಗಿ ಮನೆಯೊಳಗೆ ಹೊಕ್ಕಾಗ ನಮ್ಮ ಮೂಗಿಗೆ ಅದರ ಘಮಲು ಹೊಡೆದಾಗ ಏನೋ ಒಂದು ರೀತಿಯ " ಸುಖ”ದ ಭಾವ ಸಿಗುತ್ತದೆ. ನಾಯಿಗಳು ಊರು ತಿರುಗ ಹೊರಟಾಗ ಅಲ್ಲಲ್ಲಿ ಉಚ್ಚಿ ಹಾರಿಸಿ ತಮ್ಮ ಗಡಿಯನ್ನು ಮಾರ್ಕ್ ಮಾಡಿ ವಾಪಾಸ್ ಹಿಂದಿರುಗುವಾಗ ಆ ಜಾಗಗಳನ್ನು ಮೂಸಿ ತಮ್ಮ ಗಡಿಯಲ್ಲಿ ಇದ್ದೇವೆ ಎಂದು ಖಚಿತ ಪಡಿಸಿಕೊಂಡು ಧೈರ್ಯದಿಂದ ತಮ್ಮ ಪಯಣವನ್ನು ಮುಂದುವರಿಸುತ್ತವೆ. ಅದೇ ರೀತಿ ನಮ್ಮ ಮನೆಯೊಳಗೆ ಹೊಕ್ಕಾಗ ನಮ್ಮ ಮೂಗಿಗೆ ಅಡರುವ ಪರಿಚಿತ ‘ಪರಿಮಳ’ ನಮ್ಮೊಳಗೆ ನೆಮ್ಮದಿಯ ಭಾವವನ್ನು ಹುಟ್ಟಿಸುತ್ತದೆ. ಇದು ಬಹಳ ವಿಚಿತ್ರವಲ್ಲವೆ?

ನಾವು ಪರವೂರಿಗೆ ಹೋದಾಗ ನಮಗೆ ಬೇಕಾದಂತಹ ಆಹಾರ ಸಿಗದಿದ್ದಾಗ ಯಾವುದೋ ಮನೆಯ ಒಳಗಿನಿಂದ ನಮ್ಮ ಪರಿಚಿತ ಆಹಾರದ ಪರಿಮಳ ಬಂದಾಗ ನಮಗರಿವಿಲ್ಲದೆ ನಮ್ಮ ಬಾಯಿಯಲ್ಲಿ ನೀರೂರುತ್ತದೆಯಲ್ಲವೆ? ಹಾಗೆಯೇ ನಮ್ಮ ಆಪ್ತರು ಬಳಸುವ ಸುಗಂಧದ್ರವ್ಯದ ಪರಿಮಳ, ಹಸುಗೂಸಿನ ಮೈಯ್ಯ ಪರಿಮಳ, ನಾವು ಬಳಸುವ ಸೋಪಿನ ಪರಿಮಳ, ದೇವರಿಗೆ ಹಚ್ಚುವ ಊದುಬತ್ತಿಯ ಪರಿಮಳ, ಮೂಗಿಗೆ ಅಡರುವ ಸೊಗಸಾದ ಕಾಫಿಯ ಪರಿಮಳ….ಒಂದೇ ಎರಡೇ. ಹೀಗೆ ನಮ್ಮನ್ನು ಆವರಿಸಿರುವ, ನಮಗರಿವಿಲ್ಲದೆ ನಮ್ಮ ಬದುಕಿನ ಭಾಗವಾಗಿರುವ ಹಲವಾರು ಬಗೆಯ ಪರಿಮಳವನ್ನು ನಾವು ಪಟ್ಟಿ ಮಾಡಬಹುದು. ನಮ್ಮ ಕಣ್ಣಿಗೆ ಕಾಣದ “ಪರಿಮಳ” ನಮ್ಮೆಲ್ಲರ ಬದುಕಿನಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ ಎನ್ನುವುದು ಎಲ್ಲರೂ ಒಪ್ಪುವ ಮಾತಲ್ಲವೆ?!

Posted 14/6/2026

Wednesday, June 10, 2026

ವಯಸ್ಸು : ದೇಹ, ಮನಸ್ಸು - ಶೋಭಾ ಸೋಮಯಾಜಿ

 Wednesday, June 10, 2026

ವಯಸ್ಸು ನಿಲ್ಲುವುದಿಲ್ಲ; ವರ್ಷಗಳು ಕಳೆದಂತೆ ವಯಸ್ಸು ನಿಲ್ಲದೆ ಅದರೊಡನೆ ಬೆಳೆಯುತ್ತದೆ. ವಯಸ್ಸು ಬರೀ ಸಂಖ್ಯೆಯಲ್ಲಿ ಹೆಚ್ಚಾಗುವುದಿಲ್ಲ; ಅದರ ಪ್ರಭಾವ ನಮ್ಮ ಪ್ರತೀ ಅವಯವದ ಮೇಲೂ ಕಾಣಿಸುತ್ತದೆ. ಸುಕ್ಕಾದ ಬಣ್ಣಗುಂದಿದ ಚರ್ಮ, ನರೆತ ತಲೆಗೂದಲು, ಕಾಂತಿ ಕಳೆದುಕೊಂಡ ಕಣ್ಣುಗಳು, ವೇಗ ಕಳೆದುಕೊಂಡ ನಡಿಗೆ, ಶಕ್ತಿಗುಂದಿದ ದೇಹ…..ಒಂದೇ ಎರಡೇ. ಮನಸ್ಸು ಇನ್ನೂ ತನ್ನ ಹುರುಪನ್ನು ಉಳಿಸಿಕೊಂಡಿದ್ದರೂ ದೇಹ ಮಾತ್ರ ಕಾಲನ ಕೃಪೆಗೆ ಬಾಗುತ್ತಿರುತ್ತದೆ. ಇಂತಹ ಬದಲಾವಣೆಯನ್ನು ಒಪ್ಪುವುದು ಮನಸ್ಸಿಗೆ ಕಷ್ಟವೆನಿಸುತ್ತದೆ. ಆದರೆ ಅದನ್ನು ಒಪ್ಪಲೇಬೇಕಾದ ಅನಿವಾರ್ಯತೆ ಇರುವುದು ವಾಸ್ತವ ಸತ್ಯ.

ನಾವಿದನ್ನೆಲ್ಲ ಮರೆಯಲು ಸಾಧ್ಯವಾಗುವುದು ಒಂದು ಪುಟ್ಟ ಕಂದನ ಒಡನಾಟದಲ್ಲಿ. ಪುಟ್ಟ ಕಂದನನ್ನು ಹಿಡಿದು ಮುದ್ದಿಸುವಾಗ ವಯಸ್ಸು ನಮ್ಮ ಮೇಲೆ ಮಾಡಿದ ಪ್ರಭಾವದ ಸಂಪೂರ್ಣ ಅರಿವಾಗುತ್ತದೆ. ಮಗುವಿನ ರಸಭರಿತ ಪುಟ್ಟ ಕೈ ಬೆರಳುಗಳು ನಮ್ಮ ಸುಕ್ಕುಗಟ್ಟಿದ ಬೆರಳುಗಳನ್ನು ಹಿಡಿದಾಗ ವಯಸ್ಸಿನ ವ್ಯತ್ಯಾಸ ಸ್ಪಷ್ಟವಾಗಿ ಕಾಣ ಸಿಗುತ್ತದೆ. ಆದರೆ ಆ ಮಗುವಿನೊಡನೆ ಕಳೆಯುವ ಸಮಯ ನಮ್ಮ ವಯಸ್ಸನ್ನು ನಾವು ಮರೆತು ಬಿಡುವಂತೆ ಮಾಡುತ್ತದೆ. ಪುಟ್ಟ ಕಂದ ನಮ್ಮೊಡನೆ ಇರುವ ಭಾವವೇ ಒಂದು ವಿಶಿಷ್ಟ ಅನುಭೂತಿಯನ್ನು ಕೊಡುವಂತಹುದು. ಅದರ ಮೈಯ್ಯ ಬಿಸುಪು ನಮ್ಮ ಬದುಕಿನ ಒತ್ತಡವನ್ನೆಲ್ಲಾ ಕರಗಿಸಿಬಿಡುವಂತಹುದು. ಅದರ ಇನಿದನಿ, ಕೇಕೆಯ ದನಿ ಇಂಪಾದ ಸಂಗೀತವನ್ನು ಕೇಳಿಸಿಕೊಂಡ ಅನುಭವ ಕೊಡುವಂತಹುದು. ಅದರ ಅಳುವಿನ ದನಿ ಹೃದಯವನ್ನು ಕರಗಿಸುವಂತಹುದು. ನಾವು ಕೂಡಾ ಒಂದಾನೊಂದು ಕಾಲದಲ್ಲಿ ಅಮ್ಮನ ಮಡಿಲಲ್ಲಿ, ಮುದ್ದಿಸುವವರ ತೆಕ್ಕೆಯಲ್ಲಿ ಬೆಳೆದು ಬಂದವರೇ ತಾನೆ? ಮಗುವಾಗಿ ನಾವು ಹಿರಿಯರಿಗೆ ಕೊಟ್ಟ ಸುಖವನ್ನು ನಾವೀಗ ಹಿರಿಯರಾಗಿ ಪುಟ್ಟ ಮಗುವಿನಿಂದ ಪಡೆಯುತ್ತಿದ್ದೇವೆ. ‘“ಕಾಲಾಯ ತಸ್ಮೈನಮಃ" ಎನ್ನುವುದು ಸತ್ಯವಲ್ಲವೆ? 'ಕಾಲ'ದ ನಡೆಯನ್ನು ಒಪ್ಪಿಕೊಳ್ಳೋಣ; ಹಾಗೆಯೇ ನಮ್ಮ ವಯಸ್ಸನ್ನು ಒಪ್ಪಿಕೊಂಡು ಸ್ವೀಕರಿಸೋಣ; ಮಕ್ಕಳ ಹೂ ಮನಸ್ಸನ್ನು ಪ್ರೀತಿಸೋಣ. ಅಲ್ಲವೆ?!


Posted 11/6/2026 

Saturday, May 16, 2026

ಮಾವಿನ ಹಣ್ಣಿನ ಬನ್ಸ್ - ಶೋಭಾ ಸೋಮಯಾಜಿ

 ಮೇ 14, 2026 

ಮಾವಿನ ಹಣ್ಣಿನ ಬನ್ಸ್ 

ಈ ವರ್ಷ ನಮ್ಮ ಮನೆಯ ಮುಂದಿನ ಎರಡು ಮಾವಿನಮರಗಳಲ್ಲಿ ಮೊತ್ತ ಮೊದಲ ಮಾವಿನ ಫಸಲು ಬಂದಿತ್ತು. ತುಂಬ ಚೆಂದದ ಹಣ್ಣುಗಳು. ಆದರೆ ಕತ್ತರಿಸಿದರೆ ಕೆಲವು ಹಣ್ಣುಗಳಲ್ಲಿ ಪಿತಪಿತಗುಟ್ಟುವ ಹುಳುಗಳು ಧಾರಾಳವಾಗಿದ್ದವು. ಇಲ್ಲವೇ ಹಣ್ಣುಗಳು ಅರ್ಧ ಭಾಗ ಕಾಯಿ ಮತ್ತರ್ಧ ಭಾಗ ಹಣ್ಣಾಗುತ್ತಿದ್ದವು. ಏನೇ ಆದರೂ ಮಾವಿನ ಹಣ್ಣು ಮಾವಿನ ಹಣ್ಣೇ! ಹೀಗಾಗಿ ಪ್ರತೀ ಹಣ್ಣಿನಲ್ಲಿ ಸಿಕ್ಕಷ್ಟು ಭಾಗವನ್ನು ಬಳಸಿ, ಅದನ್ನು ರೂಪಾಂತರಿಸಿ ಹೊಟ್ಟೆಗೆ ಹೋಗಿಸುವ ಕಾರ್ಯಕ್ರಮ ಈಗ್ಗೆ ಹತ್ತಾರು ದಿನಗಳಿಂದ ನಡೆಯುತ್ತಿದೆ. ನಿನ್ನೆ ನನ್ನ ಮಗಳು ಕಳಿಸಿದ ಮಾವಿನ ಹಣ್ಣಿನ ಬನ್ಸ್ ನ ರೆಸಿಪಿ ನೋಡಿ ಇವತ್ತು ಸಾಯಂಕಾಲ ಮಾವಿನ ಹಣ್ಣಿನ ಬನ್ಸ್ ಮಾಡಿದ್ದಾಯಿತು.


ಬೆಳಿಗ್ಗೆಯೇ ಒಂದು ಮಾವಿನಹಣ್ಣಿನ ತಿರುಳಿಗೆ(ಹುಳವಿಲ್ಲದ😄) ಸ್ವಲ್ಪ ಮೊಸರು, ಬೆಲ್ಲ, ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸಿಯಲ್ಲಿ ಟರ್ ಗುಡಿಸಿ, ಅದಕ್ಕೊಂದಿಷ್ಟು ಜೀರಿಗೆ ಸೇರಿಸಿ, ಗೋಧಿ ಹಿಟ್ಟನ್ನು ಹಾಕಿ ಕಲೆಸಿ(ನಾನು ಸೋಡಾ ಬಳಸುವುದಿಲ್ಲ) ಒಂದು ಪಾತ್ರೆಯಲ್ಲಿ ಮುಚ್ಚಿ ಇಟ್ಟಿದ್ದೆ. ಸಾಯಂಕಾಲದ ಹೊತ್ತಿಗೆ ಅದು ಸ್ವಲ್ಪ ಹುದುಗು ಬಂದಿತ್ತು. ಅದರ ಉಂಡೆಗಳನ್ನು ಮಾಡಿ, ಒಂದು ಪ್ಲಾಸ್ಟಿಕ್ ಕವರಿಗೆ ಎಣ್ಣೆ ಹಚ್ಚಿ ಲಟ್ಟಿಸಿ, ಕಾದ ಎಣ್ಣೆಗೆ ಹಾಕಿದಾಗ ಉಬ್ಬಿದ ಬನ್ಸ್ ರೆಡಿಯಾಗಿ ಹೊರ ಬಂದಿತು! ಇವತ್ತು ಮೋಡದ ಕವಿದ ವಾತಾವರಣದಲ್ಲಿ ಬಿಸಿ ಬಿಸಿ ಬನ್ಸ್ ಅನ್ನು ಚಟ್ನಿಯೊಡನೆ ತಿನ್ನುವಾಗ ಸ್ವರ್ಗಕ್ಕೆ ಮೂರೇ ಗೇಣು ಎಂಬ ಅನುಭವ. 

ನೀವೂ ಮಾವಿನ ಹಣ್ಣಿನ ಬನ್ಸ್ ಮಾಡಿ. ಒಂದು ಒಳ್ಳೆಯ ತಿಂಡಿಯದು. ನನಗಂತೂ ಹೊಸ ಹೊಸ ರೆಸಿಪಿಗಳನ್ನು ಟ್ರೈ ಮಾಡುವುದೆಂದರೆ ಖುಷಿ. ನೀವುಗಳು ಏಕೆ ಮನಸು ಮಾಡಬಾರದು?

Posted , 17/5/2026

Wednesday, May 13, 2026

ಅಂತಾರಾಷ್ಟ್ರೀಯ ತಾಯಂದಿರ ದಿನ. - ಶೋಭಾ ಸೋಮಯಾಜಿ

 ಶನಿವಾರ, ಮೇ 9, 2026


ನಾಳೆ ಅಂತಾರಾಷ್ಟ್ರೀಯ ತಾಯಂದಿರ ದಿನ. ತೊಂಬತ್ತರ ಹರೆಯದ ನನ್ನಮ್ಮ ಆರೋಗ್ಯಯುತವಾಗಿ, ಅವಳ ಕೆಲಸವನ್ನು ಅವಳು ಮಾಡುತ್ತಾ ವಯೋಸಹಜ ಸಣ್ಣ ಪುಟ್ಟ ನೋವನ್ನು ಅನುಭವಿಸುವುದನ್ನು ಹೊರತು ಪಡಿಸಿ ಉತ್ತಮ ಕೇಳುವಿಕೆ, ದೃಷ್ಟಿ, ನಿದ್ರೆ ಹಾಗೂ ಜೀರ್ಣಕ್ರಿಯೆಯನ್ನು ಹೊಂದಿ ಅವಳ ಇಚ್ಛೆಯ ಪ್ರಕಾರ ಬದುಕು ನಡೆಸುತ್ತಿದ್ದಾಳೆ. ಅವಳು ಇವತ್ತಿಗೂ ತಾನು ಹೋಗಿ ಇರುವಲ್ಲಿ ತನ್ನ ಅಧಿಕಾರವನ್ನು ನಡೆಸುವ ಗಟ್ಟಿಗಿತ್ತಿ. ಅವಳ ಗಟ್ಟಿತನ ಅವಳ ಮಕ್ಕಳಾದ ನಮಗ್ಯಾರಿಗೂ ಬಂದಿಲ್ಲವೆಂದೇ ಹೇಳಬಹುದು. ನನ್ನನ್ನು ಹೊತ್ತು, ಹೆತ್ತು, ಕಾಲಕಾಲಕ್ಕೆ ನನ್ನ ದೇಖಾರೇಖಿ ಮಾಡಿದ ಬಗ್ಗೆ ನನ್ನಮ್ಮನ ಬಗ್ಗೆ ಗೌರವ ಹಾಗೂ ಕೃತಜ್ಞತಾ ಭಾವವಿದೆ. ಆದರೆ ನನಗೆ ಮಾನಸಿಕ ಸ್ಥೈರ್ಯ, ಪ್ರೀತಿ, ಒಲುಮೆ ತೋರಿಸಿ ಜೀವನ ಪಾಠವನ್ನು ಕಲಿಸಿದ ನನ್ನಪ್ಪ ನನ್ನ ನಿಜವಾದ ತಾಯಿ. ಅವರ ಬಗ್ಗೆ ನನಗೆ ವಿಶೇಷ ಪ್ರೀತಿ.


ನನ್ನಪ್ಪನ ಜೊತೆಗಿನ ನನ್ನ ಬಾಂಧವ್ಯ ಹಾಗೂ ಅನುಬಂಧವನ್ನು ವಿವರಿಸಲು ನನ್ನಲ್ಲಿ ಪದಗಳೇ ಇಲ್ಲ. ನಾನೊಬ್ಬ ಸಿಂಗಲ್ ಪೇರೆಂಟ್ ಆಗಿ ತಾಯಿ-ತಂದೆಯ ಎರಡೂ ಪಾತ್ರಗಳನ್ನು ನಿರ್ವಹಿಸುವಾಗ ನನಗೆ ಅದರ ನಿರ್ವಹಣೆಯ ಜಟಿಲತೆ ಅನುಭವಕ್ಕೆ ಬಂದಿದೆ. ನನ್ನಪ್ಪ ಪ್ರಾಯಶಃ ಆ ಎರಡೂ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎನ್ನುವುದು ನನ್ನ ಅನಿಸಿಕೆ. ಪುರುಷ ಹಾಗೂ ಸ್ತ್ರೀ ಭಾವ ಎರಡನ್ನೂ ನಿರ್ವಹಿಸುವ ತಾಕತ್ತು ನನ್ನಪ್ಪನಿಗೆ ಇತ್ತು. ತಾಯಂದಿರ ದಿನ ಎಂದಾಕ್ಷಣ ಮೊದಲಿಗೆ ನನ್ನ ಕಣ್ಣ ಮುಂದೆ ಬರುವುದು ನನ್ನಪ್ಪನ ಭಾವಬಿಂಬ! 
ತಾಯಿಯಾಗುವುದು ಒಂದು ಜೈವಿಕ ಪ್ರಕ್ರಿಯೆಯಾದರೆ ತಾಯ್ತನವನ್ನು ಅನುಭವಿಸುವುದು ಮಾನಸಿಕ ಪ್ರಕ್ರಿಯೆ ತಾನೆ? ಪ್ರಾಯಶಃ ನನ್ನಪ್ಪ ಆ ತಾಯ್ತನವನ್ನು ನಿಜಕ್ಕೂ ಅನುಭವಿಸರಬಹುದು ಎಂದು ನನ್ನೆಣಿಕೆ. ತಾಯಿಯ ಬಿಸುಪು, ತ್ಯಾಗ ಭಾವ, ನಿರಪೇಕ್ಷ ಪ್ರೀತಿ, ತಾಳ್ಮೆ, ಮನಬಿಚ್ಚಿ ಮಾತನಾಡುವಿಕೆ, ನೈತಿಕ ಬೆಂಬಲ ಇವೆಲ್ಲವನ್ನೂ ನಾನು ಪಡೆದಿದ್ದು ನನ್ನಪ್ಪನಿಂದ ಎಂದರೆ ಅತಿಶಯೋಕ್ತಿಯಲ್ಲ. ಅಂತಹ ತಾಯಿಯಂಥ ಅಪ್ಪನನ್ನು ಪಡೆದಿದ್ದಕ್ಕೆ ನನಗೆ ಖುಷಿ ಇದೆ. 
ಅಮ್ಮನ ಭಾವದ ಅಪ್ಪನ ಪ್ರೀತಿ ಎಲ್ಲರಿಗೂ ಸಿಗುವುದಿಲ್ಲ. ನನ್ನ ಅಪ್ಪನಿಂದ ದೊರೆತ ಅಂತಹ ಪ್ರೀತಿ ಹಾಗೂ ಬೆಂಬಲ ಇವತ್ತಿನ ‘ನನ್ನೀ ವ್ಯಕ್ತಿತ್ವ ‘ವನ್ನು ರೂಪಿಸಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಎಲ್ಲೂ ಅತಿರೇಕದ ಶಿಸ್ತಿನ ಹೇರಿಕೆ ಇಲ್ಲದೆ, ಹುಡುಗಿಯರು ಹಾಗಿರಬೇಕು - ಹೀಗಿರಬೇಕು ಎನ್ನುವ ಬಿಗುವಿಲ್ಲದೆ, ಅತಿಯಾದ ನಿರೀಕ್ಷೆಯಿಲ್ಲದೆ, ಜವಾಬ್ದಾರಿಯುತ ಸ್ವಾತಂತ್ರ್ಯವನ್ನು ನೀಡಿ ನನ್ನನ್ನು ಬೆಳೆಸಿದ ಕಾರಣದಿಂದ ನಾನು ನಾನಾಗಿ ಬೆಳೆಯಲು ಹಾಗೂ ಸ್ವತಂತ್ರ ಪ್ರವೃತ್ತಿಯನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು ಎನ್ನುವುದು ನನ್ನ ಅನಿಸಿಕೆ. ಇದೆಲ್ಲದರ ಕ್ರೆಡಿಟ್ ನನ್ನಪ್ಪನಿಗೆ ಸಿಗಬೇಕು. ಅಂತಹ ತುಂಬು ವ್ಯಕ್ತಿತ್ವದ, ತಾಯಿಯಂಥ ಮನಸ್ಸಿನ ನನ್ನಪ್ಪನಿಗೆ ತಾಯಂದಿರ ದಿನದ ಪ್ರೀತಿಪೂರ್ವಕ ನಮನಗಳು🙏


Posted 14/5/2026




Tuesday, April 28, 2026

ಮುಕೇಶ್ ಅವರ ಹಾಡು - ಶೋಭಾ ಸೋಮಯಾಜಿ

 ಭಾನುವಾರ, ಏಪ್ರಿಲ್ 26, 2026 


ಇವತ್ತು ಸಂಜೆ ಮುಕೇಶ್ ಅವರ ಹಾಡುಗಳನ್ನು ಕೇಳುತ್ತಿದ್ದೆ. ಎಂತಹ ಭಾವಪೂರ್ಣ ಸಲ್ಲಿಕೆ ಅವರದ್ದು! ಅನುಭವಿಸಿ ಹಾಡುವುದು ಒಂದು ಕಲೆ. ಯಾವುದೇ ಕೆಲಸವನ್ನು ಪ್ರೀತಿಸಿ, ಅನುಭವಿಸಿ, ಪ್ರಾಮಾಣಿಕತೆಯಿಂದ ಮಾಡುವುದು ಒಂದು ಕಲೆ. ಈ ರೀತಿ ‘ಒಳಗೊಂಡು’ ಮಾಡುವ ಕೆಲಸದ ಗುಣಮಟ್ಟ ಯಾವಾಗಲೂ ಉತ್ಕೃಷ್ಟವಾಗಿರುತ್ತದೆ. ಅಂತಹ ಉತ್ಕೃಷ್ಟತೆಯನ್ನು ನಾನು ಮುಕೇಶ್ ಅವರ ಕೆಲವು ಹಾಡುಗಳಲ್ಲಿ ಗಮನಿಸಿ ಆಸ್ವಾದಿಸಿದೆ. 


ಬಹಳ ವರ್ಷಗಳ ಹಿಂದೆ ಶ್ರೀಮತಿ ಪದ್ಮಾ ಸುಬ್ರಹ್ಮಣ್ಯಂ ಅವರ ನೃತ್ಯವನ್ನು ಬಹಳ ಹತ್ತಿರದಿಂದ ನೋಡುವ ಅವಕಾಶ ನನಗೆ ಸಿಕ್ಕಿತ್ತು. ಅವರ ನೃತ್ಯದಷ್ಟೇ ಉತ್ಕೃಷ್ಟತೆ ಅವರ ಹಿಮ್ಮೇಳಕ್ಕಿತ್ತು. ಅದೊಂದು ಅಭೂತಪೂರ್ವವಾದ ಕಾರ್ಯಕ್ರಮವಾಗಿತ್ತು. ಆ ಇಡೀ ತಂಡಕ್ಕೆ ಅವರವರು ಮಾಡುವ ಕೆಲಸದಲ್ಲಿ ತಾದಾತ್ಮ್ಯತೆ ಇತ್ತು ಹಾಗೂ ಅರ್ಪಣಾ ಮನೋಭಾವ ಕೂಡಾ ಇತ್ತು. ಈ ರೀತಿಯ ಮನಸ್ಥಿತಿ ಎಂತಹವರನ್ನೂ ಶ್ರೇಷ್ಠತೆಯತ್ತ ಕೊಂಡೊಯ್ಯುತ್ತದೆ ಎನ್ನುವ ವಿಷಯದಲ್ಲಿ ಅನುಮಾನವೇ ಇಲ್ಲ.

ಇವತ್ತು ದಿನಪತ್ರಿಕೆಯಲ್ಲಿ ಡಾಕ್ಟರ್ ರಾಜ್ ಕುಮಾರ್ ಅವರ ಬಗ್ಗೆ ಒಂದು ಲೇಖನವಿತ್ತು. ಅವರ ಯಾವ ಗುಣಗಳಿಂದಾಗಿ ಅವರು ಎಲ್ಲರೊಳಗೊಂದಾಗಿ ಒಂದು “ಲೆಜೆಂಡ್” ಎಂದು ಪರಿಗಣಿಸಲ್ಪಟ್ಟಿದ್ದಾರೆ ಎಂಬ ಬಗೆಗಿನ ಲೇಖನವದು. ಆ ಲೇಖನದ ವಿಷಯ ಹಾಗೂ ಬರಹ ಎರಡೂ ಮನಮುಟ್ಟುವಂತೆ ಇತ್ತು. ಎಷ್ಟೋ ಜನರಲ್ಲಿ ಅಪ್ರತಿಮ ಪ್ರತಿಭೆ ಇದ್ದರೂ ಅವರೆಲ್ಲರೂ ಎಲ್ಲರ ಮನದಾಳದೊಳಗಿಳಿಯಲು ಆಗದಿರುವುದು ಅವರ ಕೆಲವು ದೌರ್ಬಲ್ಯಗಳಿಂದ ಎನ್ನುವುದು ವಿದಿತವಾದದ್ದು. ಬರೀ ಪ್ರತಿಭೆಯೊಂದಿದ್ದರೆ ಸಾಲದು, ಅದರೊಡನೆ ಕೆಲಸದೊಡನೆಯ ತಾದಾತ್ಮ್ಯತೆ, ಪ್ರಾಮಾಣಿಕ ಪ್ರಯತ್ನ, ಮಾಡಲೇ ಬೇಕೆಂಬ ಉತ್ಕಟ ಭಾವವಿದ್ದಾಗ ಆ ವ್ಯಕ್ತಿ ಅಸಾಮಾನ್ಯನಾಗುವುದು ಖಂಡಿತ.

ಹೀಗಾಗಿ ನಮ್ಮಲ್ಲಿ ಅಸಾಮಾನ್ಯ ಹಾಗೂ ಅದ್ವಿತೀಯ ವ್ಯಕ್ತಿಗಳನ್ನು, ಕಲಾಕೃತಿಗಳನ್ನು, ಕಲಾವಿದರನ್ನು, ಲೇಖಕರನ್ನು, ಕಥೆ-ಕಾದಂಬರಿಗಳನ್ನು, ಸಿನೆಮಾ ಹಾಗೂ ನಾಟಕಗಳನ್ನು ನೋಡಲು ಸಾಧ್ಯವಾಗಿದೆ.

ಇದು ಬರೀ ಕಲೆಗೆ ಸಂಬಂಧಪಟ್ಟ ವಿಷಯವಲ್ಲ. ನಾವು ಪ್ರತಿದಿನ ಮಾಡುವ ಕೆಲಸದಲ್ಲೂ ಇಂತಹ ಅಂಶಗಳನ್ನು ಬಳಸಿದಾಗ ನಾವೂ ನಮ್ಮ ನಮ್ಮ ರಂಗದಲ್ಲಿ ಶ್ರೇಷ್ಠರಾಗಬಹುದು. ಅದು ಅಡುಗೆಯಾಗಿರಬಹುದು, ಪಾಲಕತ್ವವಾಗಿರಬಹುದು, ಮನೆಯ ಹಾಗೂ ನಮ್ಮ ಜೀವನೋಪಾಯದ ಕೆಲಸದ ನಿರ್ವಹಣೆಯಾಗಿರಬಹುದು…. ಇವೆಲ್ಲದರಲ್ಲೂ ನಾವು ಅರ್ಪಣಾ ಮನೋಭಾವದಿಂದ ಪ್ರಾಮಾಣಿಕ ಪ್ರಯತ್ನವನ್ನು ಹಾಕಿದಾಗ ಅದು ನಮ್ಮನ್ನು ಶ್ರೇಷ್ಠರನ್ನಾಗಿಸುವುದರಲ್ಲಿ ಸಂಶಯವಿಲ್ಲ. ಇದು ಶ್ರೇಷ್ಠತೆಯ ವ್ಯಸನವಾಗದಿದ್ದರೆ ನಾವು ಸಹ್ಯ ಹಾಗೂ ಸಭ್ಯ ಬದುಕನ್ನು ಬಾಳಲು ಸಾಧ್ಯ! 


Posted  29/4/2026

Saturday, April 18, 2026

ಪ್ರತಿರೋಧ ಹಾಗೂ ನಿರ್ಲಿಪ್ತತೆ - ಶೋಭಾ ಸೋಮಯಾಜಿ

 Saturday, April 18, 2026


ಖಾಲಿ ಕೂತಿದ್ದೆ. ಈ ರೀತಿ ‘ಖಾಲಿ’ ಕೂರುವುದು ನನ್ನಂತಹ ಮನಸ್ಥಿತಿಯವರಿಗೆ ಕಷ್ಟ. ತಲೆಯಲ್ಲಿ ನೂರೆಂಟು ವಿಚಾರಗಳು ಗಿರಿಗಿಟ್ಟಲೆಯಂತೆ ತಿರುಗುವ ನನ್ನ ತಲೆ ‘ಖಾಲಿ’ ಮಾಡಿಕೊಂಡು ಕೂರುವುದು ನನ್ನ ಪಾಲಿಗೆ ಒಂದು ಸಾಧನೆಯೇ ಸೈ! 


ವಿಶಾಲವಾದ ಆಟದ ಮೈದಾನದಲ್ಲಿ ಮೂರ್ನಾಲ್ಕು ರೌಂಡ್ ವಾಕಿಂಗ್ ಮಾಡಿದೆ. ಒಂದು ಕಟ್ಟೆಯ ಮೇಲೆ ಕುಳಿತು ಒಂದಿಷ್ಟು ಮೊಬೈಲ್ ಸ್ಕ್ರಾಲ್ ಮಾಡಿದೆ. ಇನ್ನೂ ಬೆಳಕು ಸಾಕಷ್ಟು ಇದ್ದ ಕಾರಣ ಸುತ್ತಲೂ ನೋಡುತ್ತಾ ಕುಳಿತೆ. ನಮ್ಮ ನಾಯಿ ಸುಕ್ಕು ತನ್ನ ಬೆನ್ನಿನ ಮೇಲಿದ್ದ ಗಾಯಕ್ಕೆ ಮುತ್ತುತ್ತಿದ್ದ ನೊಣಗಳನ್ನು ಓಡಿಸುವುದರಲ್ಲಿ ಮಗ್ನವಾಗಿತ್ತು. ನಾನು ಅದರ ಹತ್ತಿರ ಹೋಗಿ ಫೋಟೊ ತೆಗೆದರೂ ಅದು ನನ್ನನ್ನು ಗಮನಿಸದೆ, ನನ್ನ ಕರೆಗೆ ಸ್ಪಂದಿಸದೆ ತನ್ನ ಮೈಮೇಲೆ ಬರುತ್ತಿದ್ದ ನೊಣಗಳ ಜೊತೆಗಿನ ಹೋರಾಟದಲ್ಲೇ ಮುಳುಗಿ ಹೋಗಿತ್ತು. ಅದು ನನಗೆ ಸ್ಪಂದಿಸದೇ ಇದ್ದಾಗ ಅದರ ನಿರ್ಲಕ್ಷ್ಯವನ್ನು ತಡೆದುಕೊಳ್ಳಲಾರದೆ ಪುನಃ ಅತ್ತಿತ್ತ ನೋಡತೊಡಗಿದೆ. ಬೇಲಿ ಸಾಲಿನ ಮೇಲೆ ಬೆಳೆದಿದ್ದ ಬಳ್ಳಿಯಲ್ಲಿ ಸುಂದರವಾದ ತಿಳಿ ನೇರಳೆ ಬಣ್ಣದ ಹೂವೊಂದನ್ನು ಕಂಡೆ. ಹತ್ತಿರ ಹೋಗಿ ನೋಡಿದಾಗ ಅದರ ಮೇಲೊಂದು ಚಿಗಳಿ(ಇರುವೆ) ಕಂಡಿತು. ಇರುವೆ ಓಡಾಡುತ್ತಿದ್ದರೂ ಹೂವು ಸುಮ್ಮನಿತ್ತು. ನೊಣದೊಡನೆ ಹೋರಾಡುತ್ತಿದ್ದ ಸುಕ್ಕುವಿನ ಭಾವಾರೋಷ ಆ ಹೂವಲ್ಲಿ ನನಗೆ ಕಾಣಲಿಲ್ಲ. ಒಂದು ರೀತಿಯ ನಿರ್ಲಿಪ್ತ ಭಾವವನ್ನು ಆ ಹೂವಿನಲ್ಲಿ ನಾ ಕಂಡೆ. “ಇರುವೆ, ಕ್ರಿಮಿ, ಕೀಟಗಳು ಏನೇ ತನ್ನ ಮೇಲೆ ಬಂದರೂ ನಾನೇನು ತಲೆಕೆಡಿಸಿಕೊಳ್ಳುವುದಿಲ್ಲ” ಎನ್ನುವ ಮನಸ್ಥಿತಿ ಅದು ಹೊಂದಿದೆಯೇನೊ ಎಂದು ನನಗನಿಸಿತು. ವಿರೋಧಿಸಿದರೆ ಮಾತ್ರ ಹೋರಾಡುವ ಅಗತ್ಯ ಹುಟ್ಟುತ್ತದೆ; ಇರುವುದನ್ನು ಇರುವ ಹಾಗೆ ಸ್ವೀಕರಿಸಿದರೆ ಹೋರಾಟದ ಪ್ರಶ್ನೆಯೇ ಬರುವುದಿಲ್ಲ ಎನ್ನುವ ಬೋಧನೆ ಅದು ಮಾಡುತ್ತಿದೆಯೇನೊ ಎಂದನಿಸಿತು. ಪ್ರತಿರೋಧ ಹಾಗೂ ನಿರ್ಲಿಪ್ತತೆ ಇವೆರಡನ್ನು ದೃಶ್ಯಿಸುವ ಅವಕಾಶ ನನಗೆ ಸಿಕ್ಕಿತು. ಅಥವಾ ಕಂಡ ದೃಶ್ಯಗಳೆರಡಕ್ಕೆ ನನ್ನ ಆಖ್ಯಾಯಿಕೆ ಇದಾಗಿರಬಹುದು. ಎಲ್ಲವೂ ಕಾಣುವುದು  “ಅವರವರ ಭಾವಕ್ಕೆ ತಕ್ಕಂತೆ ತಾನೆ?”


Posted 19/4/2026

Tuesday, March 31, 2026

ಸೀತಾನದಿ - ಶೋಭಾ ಸೋಮಯಾಜಿ

 ಸೋಮವಾರ, 30/3/2026

ನಾನು ಹುಟ್ಟಿದ್ದು ಹಾಗೂ ಒಂಬತ್ತು ವರ್ಷಗಳವರೆಗೆ ಬೆಳೆದಿದ್ದು ಹೆಬ್ರಿಯಲ್ಲಿ ಆದ ಕಾರಣ ನನಗೆ ಸೀತಾನದಿಯೊಂದಿಗೆ ಬಾಲ್ಯ ಕಾಲದಿಂದಲೂ ಬಾಂಧವ್ಯವಿದೆ. ನಮ್ಮ ಮನೆಯ ಮಾಲಿಕರಾದ ಸುಮತಿ ಆಂಟಿಯ ಬಾಲವಾದ ನಾನು ಅವರು ಅವರ ನೆಂಟರ ಮನೆಯಾದ ಸೀತಾನದಿಗೆ ಹೋಗುವಾಗಲೆಲ್ಲ ಅವರ ಮಕ್ಕಳೊಡನೆ ಅವರ ಹಿಂದೆ ಹೋಗುತ್ತಿದ್ದೆ. ರಸ್ತೆಯ ಪಕ್ಕದಲ್ಲಿ ಇದ್ದ ಆ ನೆಂಟರ ಮನೆಯ ಮಗ್ಗುಲಲ್ಲಿ ಸೀತಾನದಿ ಹರಿಯುತ್ತಿತ್ತು. ಅವರ ಮನೆಯ ಬಳಿ ಅದು ಹೆಚ್ಚು ಆಳವಿಲ್ಲದ ಕಾರಣ ನಾವು ಮನಸೋ ಇಚ್ಛೆ ಆ ನದಿಯ ನೀರಿನಲ್ಲಿ ಆಟವಾಡುತ್ತಿದ್ದೆವು. ಅದರೊಡನೆಯ ನನ್ನ ನಂಟು ಎಷ್ಟಿದೆಯೆಂದರೆ ನಾನು ಈಗಲೂ ಆಗುಂಬೆ ಘಾಟಿ ಮುಖಾಂತರ ಊರೆಡೆಗೆ ಹೋಗುವಾಗಲೆಲ್ಲ ರಸ್ತೆಯ ಪಕ್ಕದಲ್ಲಿ ಹರಿಯುವ ಆ ನದಿ ಪ್ರತಿ ಬಾರಿಯೂ ಚುಂಬಕದಂತೆ  ನನ್ನನ್ನು ಸೆಳೆಯುತ್ತದೆ.

ಮಾರ್ಚ್ 28ರಂದು ನಮ್ಮ ಶಾಲಾ ಶಿಕ್ಷಕರ ಔಟಿಂಗ್ ಗೆ ಹೊರಟ ನಾವು ಉಳಿದುಕೊಂಡಿದ್ದು ಸೀತಾನದಿಯ ತೀರದಲ್ಲಿದ್ದ ಇಕ್ಕೊಡ್ಲು ಹೋಂ ಸ್ಟೇ ಯಲ್ಲಿ. ಸಾಯಂಕಾಲ ಐದೂವರೆಗೆ ಅಲ್ಲಿ ತಲುಪಿದ ನಮ್ಮ ತಂಡ ಮೂಗು ಬಾಯಿಯಲ್ಲಿ ಸ್ನ್ಯಾಕ್ಸ್ ತಿಂದು, ಟೀ ಕುಡಿದು ಓಡಿದ್ದು ಆ ನದಿಯೆಡೆಗೆ! ನನಗೆ ಆ ಉರುಳುಗಲ್ಲಿನ ರಾಶಿಯಲ್ಲಿ ಹೆಜ್ಜೆ ಇಡುವುದು ಕಷ್ಟವಾದರೂ ನಮ್ಮವರೆಲ್ಲರ ಸಹಾಯ ಪಡೆದು ಮಹಾನ್ ಸಾಧನೆ ಮಾಡಿದವಳಂತೆ ನೀರಿನೊಳಗೆ ಇಳಿದೇ ಬಿಟ್ಟೆ. ಅರವತ್ತರ ಹೊಸ್ತಿಲಲ್ಲಿ ಇರುವ ನಾನು ಬೇರೆಯವರ ಸಹಾಯ ಪಡೆಯುವುದು ತಪ್ಪಲ್ಲವಲ್ಲವೆ?  ನೀರಿನೊಳಗೆ ಇಳಿದ ಮೇಲೆ ನಾನು ಸರ್ವ ಸ್ವತಂತ್ರಳು; ಒಂದು ರೀತಿಯಲ್ಲಿ ನೀರೊಳಗಿನ ಮೀನಿನಂತೆ !!!

ಹದವಾಗಿ ಬೆಚ್ಚಗಿದ್ದ ಸೀತಾನದಿಯ ನೀರಿನೊಳಗೆ ನಮ್ಮ ತಂಡದವರು ಆಡಿದ್ದೇ ಆಡಿದ್ದು! ನೀರೆರಚಾಟವಂತೂ ಬಹಳ ಮಜವಾಗಿತ್ತು. ಈಜು ಬಲ್ಲವರು ಹೆಚ್ಚಿನ ಜನ ಇಲ್ಲದ ಕಾರಣ ತುಂಬಾ ಆಳವಿದ್ದ ಕಡೆಗೆ ಅವರನ್ನು ಹೋಗಗೊಡಲಿಲ್ಲ. ಈಜು ಬಲ್ಲ ನಾವೊಂದಿಷ್ಟು ಜನ ನದಿಯೊಳಗೆ ಒಂದಿಷ್ಟು ಈಜಿದೆವು. ಒಂದು ಕಡೆ ದಟ್ಟ ಮಳೆಯ ಮೋಡ; ಗುಡುಗು ಸಿಡಿಲಿನ ಅಬ್ಬರಾಟ. ನಂತರದಲ್ಲಿ ಸಣ್ಣಗೆ ಹನಿಗರೆಯತೊಡಗಿದ್ದ ಆ ವಾತಾವರಣದಲ್ಲಿ ನೀರೊಳಗೆ ಇರುವ ಆನಂದವೇ ಬೇರೆ. ಸುಮಾರು ಒಂದು ಗಂಟೆಯ ಕಾಲ ನದಿ ನೀರಿನಲ್ಲಿ ಆಟವಾಡಿ ನಂತರದಲ್ಲಿ ಹೋಂ ಸ್ಟೇ ಯಲ್ಲಿದ್ದ ಈಜುಕೊಳದಲ್ಲಿ ಈಜಾಟವಾಡಿದೆವು.


ಬಹಳ ವರುಷಗಳ ನಂತರ ನಾನು ಸೀತಾನದಿಯ ನೀರಲ್ಲಿ ಆಟವಾಡಿದ್ದು ನನ್ನ ಹಳೆಯ ನೆನಪುಗಳನ್ನು ಕಲುಕಿದಂತಾಯಿತು. ಬಾಲ್ಯದ ನೆನಪುಗಳೇ ಚೆಂದ. ಯಾವುದೇ ಜವಾಬ್ದಾರಿ ಇಲ್ಲದೆ ನಮ್ಮದೇ ಆದ ಜಗತ್ತಿನೊಳಗೆ ನಾವಿರಲು ಸಾಧ್ಯವಾಗುವುದು ನಮ್ಮ ಬಾಲ್ಯಕಾಲದಲ್ಲಿ ಮಾತ್ರವೇನೊ? ಪುನಃ ನಾನು ನನ್ನ ಬಾಲ್ಯಕಾಲಕ್ಕೆ ಹಿಂತಿರುಗಿ ಹೋಗಬಾರದೆ ಎಂದು ಆ ಕ್ಷಣ ಹಂಬಲಿಸಿದೆ.

ಮಾರನೆಯ ದಿನ ಬೆಳಿಗ್ಗೆ ಎದ್ದು ಮತ್ತೊಮ್ಮೆ ಅಲ್ಲಿ ಪ್ರಶಾಂತವಾಗಿ ಹರಿಯುತ್ತಿದ್ದ ಸೀತಾನದಿಯನ್ನು ಸಾದ್ಯಂತವಾಗಿ ಅವಲೋಕಿಸಿದೆ. ರಾತ್ರಿಯ ಮಳೆಯಿಂದ ನದಿಯ ರಭಸವೇನು ಜಾಸ್ತಿಯಾಗಿರಲಿಲ್ಲ. ಅದನ್ನು ಸುತ್ತುವರೆದಿದ್ದ ಹಸಿರು ಸಿರಿಯನ್ನು ನೋಡಿ ಕಣ್ತುಂಬಿಸಿಕೊಂಡೆ. ನನ್ನನ್ನೊಮ್ಮೆ ಪುನಃ ಬಾಲ್ಯಕ್ಕೆ ಕರೆದೊಯ್ದ ಆ ಕ್ಷಣವನ್ನು ಮನಸ್ಸಿನೊಳಗೆ ಭದ್ರಗೊಳಿಸಿದೆ. ನನ್ನೊಳಗಿನ ಭಾವನೆಗಳ ಪರಿವೇ ಇಲ್ಲದೆ ತನ್ನ ಪಾಡಿಗೆ ತಾನು ಹರಿಯುತ್ತಿದ್ದ ಆ ನದಿಗೆ ಮನದೊಳಗೆ ನಮಿಸಿದೆ


Posted  31.3.2026

Thursday, February 19, 2026

ದೋಸೆಯ ಅವಾಂತರ - ಶೋಭಾ ಸೋಮಯಾಜಿ

 Thursday, Feb.20, 2026



ನಿನ್ನೆ ದೋಸೆ ಕಾವಲಿಯೊಡನೆ ನನ್ನ ‘ಉಗ್ರ ಹೋರಾಟ'ವಾಗಿತ್ತು. ಈಗ್ಗ್ಯೆ ನಾಲ್ಕೈದು ವರ್ಷಗಳ ಹಿಂದೆ ಆನ್ಲೈನ್ ನಲ್ಲಿ ಖರೀದಿಸಿದ ಆ ಇಂಡಸ್ ಕಂಪೆನಿಯ ಕಾವಲಿ ಚೆನ್ನಾಗಿಯೇ ಇದೆ. ನಿನ್ನೆ ಅದೇನಾಗಿತ್ತೋ ಏನೋ ಬಹಳ ಅಸಹಕಾರವನ್ನು ತೋರಿಸಿ ನನ್ನ ತಾಳ್ಮೆಯ ಪರೀಕ್ಷೆ ಮಾಡಿತು. ನನ್ನಪ್ಪ ಯಾವಾಗಲೂ “ತಣ್ಣೀರನ್ನಾದರೂ ತಣಿಸಿ ಕುಡಿಯಬೇಕು” ಎಂದು ಸದಾ ತಾಳ್ಮೆಯ ಪಾಠ ಮಾಡುತ್ತಿದ್ದರು. ಅವರ ಅವಿರತ ಪಾಠದಿಂದ ನಾನು ಬೆಳೆಸಿಕೊಂಡಿದ್ದ  ಆ  ‘ಅಲ್ಪ ತಾಳ್ಮೆ’ ನಿನ್ನೆ ಉಪಯೋಗಕ್ಕೆ ಬಂದಿತು

ನಾನು ವಾರದಲ್ಲಿ ಮೂರ್ನಾಲ್ಕು ದಿನ ವಿಧವಿಧದ ದೋಸೆ ಮಾಡುವವಳು. ಯಾರೋ ಕೊಟ್ಟ ಗಳಿತ ಪಚ್ಚಬಾಳೆ ಇದ್ದ ಕಾರಣ ನಿನ್ನೆ ಬಾಳೆಹಣ್ಣು ದೋಸೆ ಮಾಡಿದ್ದೆ. ಹಿಟ್ಟಿನಲ್ಲಿ ಅದ್ದಿ ಅದ್ದಿ ಬಾಳೆಹಣ್ಣಿನ ತೆಳುವಾದ ವರ್ತುಲಾಕಾರದ ತುಂಡನ್ನು ಕಾವಲಿಯ ಮೇಲೆ ಇಟ್ಟು, ಮೇಲೊಂದಿಷ್ಟು ತುಪ್ಪ ಹಾಕಿ, ಮುಚ್ಚಳ ಮುಚ್ಚಿ, ಅದು ಬೆಂದ ಮೇಲೆ ಮಗುಚಿ ಹಾಕಲು ಕಾವಲಿಯಿಂದ ತೆಗೆಯಲು ಹೋದರೆ ‘ಕಾವಲಿಯನ್ನು ಬಿಡುವುದೇ ಇಲ್ಲ’ ಎನ್ನುವ ಅಚಲ ನಿರ್ಧಾರದಿಂದ ಅದು ಕಾವಲಿಗೆ ಅಂಟಿಕೊಂಡೇ ಇತ್ತು. ನನ್ನಲ್ಲಿ ಇರುವ ಅಲ್ಪಸ್ವಲ್ಪ ಬುದ್ಧಿಯನ್ನು, ಶಕ್ತಿಯನ್ನು ಉಪಯೋಗಿಸಿ ದೋಸೆಯನ್ನು ‘ಬಲಾತ್ಕಾರ’ ಪೂರ್ವಕವಾಗಿ ಕಾವಲಿಯಿಂದ ಎಬ್ಬಿಸಿ, ಮಗುಚಿ ಹಾಕಿ ಕಾಯಿಸಿ, ಪುನಃ ಎತ್ತಲು ಹೋದಾಗ ‘ದುಂಡನೆಯ’ ದೋಸೆ ತನ್ನ ರೂಪವನ್ನು ಕಳೆದುಕೊಂಡು ತಿನ್ನುವವರಿಗೆ ಅನುಕೂಲವಾಗಲೆಂದು ಸಣ್ಣ ಸಣ್ಣ ತುಂಡುಗಳಾಗಿ ಕಾವಲಿಯನ್ನು ಬಿಟ್ಟೆದ್ದಿತು. ನಾನೂ ಕೂಡಾ ಅಷ್ಟೇ ‘ಹಠಮಾರಿ’! ಪ್ರತೀ ದೋಸೆಯೊಂದಿಗೆ ಅಂತಹ ‘ಉಗ್ರ’ ಹೋರಾಟ ಮಾಡುತ್ತಲೇ ಎಲ್ಲರಿಗೂ ದೋಸೆ ಮಾಡಿ ಹಾಕಿದೆ. ಪ್ರಾಯಶಃ ಹಿಟ್ಟಿನ ಹದದ ಸಮಸ್ಯೆ ಅಥವಾ ಬಾಳೆಹಣ್ಣು ಗಳಿತದ್ದು ಜಾಸ್ತಿಯಾಗಿ ಈ ಸಮಸ್ಯೆ ಆಗಿರಬಹುದೆಂದು ಭಾವಿಸಿ ಸಮಾಧಾನ ಮಾಡಿಕೊಂಡೆ

ಆದರೆ ಸಾಯಂಕಾಲ ಉದ್ದಿನ ದೋಸೆ ಮಾಡಿದಾಗಲೂ ದೋಸೆ ಕಾವಲಿ ಯಾವುದೇ ಭೇದಭಾವ ಇಲ್ಲದೆ ಬೆಳಗಿನ ಸವಾಲನ್ನೇ ನನ್ನ ಮುಂದೊಡ್ಡಿತು?! ನಾನೂ ಕೂಡಾ ಅದರೊಡನೆ ಹೋರಾಡುತ್ತಲೇ ದೋಸೆ ಮಾಡುತ್ತಾ ಎಬ್ಬಿಸುವಾಗ ತುಂಡು ತುಂಡಾದ ದೋಸೆಯನ್ನೇ ಮಾಡಿ ಎಲ್ಲರಿಗೂ ತಿನ್ನಲು ಕೊಟ್ಟೆ. ನಾವೆಲ್ಲರೂ ಕಾವಲಿಗೆ ಸಡ್ಡು ಹೊಡೆದು ಹೊಟ್ಟೆ ತುಂಬಾ ‘ವಿರೂಪ’ವಾದ ದೋಸೆಯನ್ನು ತಿಂದು ಸಂತೃಪ್ತರಾದೆವು. ದೋಸೆ ಕಾವಲಿಯ ಮೇಲೆ ಗೆಲುವು ಸಾಧಿಸಿದ ವಿಚಿತ್ರ ಖುಷಿ ಇದ್ದರೂ ಈ ‘ಉಗ್ರ’ ಹೋರಾಟದಲ್ಲಿ ನನ್ನ ‘ಕೈ’ಗೆ ನೋವಾಯಿತು ಎನ್ನುವುದು ವಾಸ್ತವದ ವಿಷಯವಾಗಿತ್ತು! ಅಂತೂ ಹೀಗೊಂದು ಉಗ್ರ ಹೋರಾಟದ ವಿಷಯವನ್ನು ಬರೆಯಲು ನಮ್ಮ ಮನೆಯ ದೋಸೆ ಕಾವಲಿ ಪ್ರೇರೇಪಿಸಿತು ಎಂಬಲ್ಲಿ ಈ ಬರಹದ ಮುಕ್ತಾಯ ಮಾಡುತ್ತಿದ್ದೇನೆ


Posted 20/2/2026

Tuesday, February 10, 2026

ಅಲರ್ಜಿಯ ವೃತ್ತಾಂತ! - SHOBHA SOMAYAJI

 Tuesday. February 10, 2026


ನನಗೆ ಅಲರ್ಜಿ ಎಲ್ಲಾ ಆಗುವುದು ಬಹಳ ಕಡಿಮೆ. ಉಳಿದವರಿಗೆ ಆದ ಅಲರ್ಜಿಯನ್ನು ನೋಡಿ ನಾನು ಅನೇಕ ಸಂದರ್ಭಗಳಲ್ಲಿ ಮರುಕ ಪಟ್ಟಿದ್ದು ಇದೆ. 


ಅಲರ್ಜಿಗೆ ಸಡನ್ ಆಗಿ ನನ್ನ ನೆನಪಾಯಿತೋ ಏನೋ? ಬಂದು ನನ್ನನ್ನು ಆವರಿಸಿಯೇ ಬಿಟ್ಟಿತು ನೋಡಿ! ಕಳೆದ ಮಂಗಳವಾರ ಬೆಳಿಗ್ಗೆ ಏಳುವಾಗ ನನ್ನ ಮೂಗು, ತುಟಿಗಳು ಸ್ವಲ್ಪ ಬಿರುಸಾಗಿದ್ದವು ಹಾಗೂ ಅವುಗಳ ಸುತ್ತಲಿನ ಪ್ರದೇಶ ಕೆಂಪಗಾಗಿತ್ತು. ಮೇಲ್ತುಟಿಯ ಒಂದು ಭಾಗ ಸ್ವಲ್ಪ ಊದಿತ್ತು. ಇದೇನಪ್ಪಾ ಎಂದು ನನ್ನ ‘ಅಂದದ’ ಫೋಟೊ ತೆಗೆದು ನನ್ನ ಡಾಕ್ಟರ್ ಸೊಸೆಗೆ ಕಳಿಸಿದೆ. “ಅಲರ್ಜಿಯ ತರಹ ಕಾಣಿಸುತ್ತದೆ; ಒಂದು ಒಕಾಸೆಟ್ ಮಾತ್ರೆ ತಗೊಳ್ಳಿ” ಎಂದು ಅವಳಿಂದ ಸಲಹೆ ಬಂದ ಮೇಲೆ ಮಧ್ಯಾಹ್ನ ಒಂದು ಮಾತ್ರೆ ತೆಗೆದುಕೊಂಡು ರೆಸ್ಟ್ ಮಾಡಿದೆ. ಸಾಯಂಕಾಲ ಸೂರ್ಯಾಸ್ತ ನೋಡಲು ಕಾರಿನಲ್ಲಿ ಒಂದು ಪುಟ್ಟ ತಿರುಗಾಟ ಮಾಡಿಕೊಂಡು ಬಂದ ನಂತರ ಅಲರ್ಜಿ ಹೆಚ್ಚಿದ ಹಾಗೆ ಕಂಡಿತು. ನಾನೇ ಡಾಕ್ಟರ್ ಆಗಿ ಮತ್ತೊಂದು ಮಾತ್ರೆ ತಗೊಂಡು ಮಲಗಿದೆ. ರಾತ್ರಿ ನಿದ್ರೆ ಅಷ್ಟೇನೂ ಹಿತಕರವಾಗಿರಲಿಲ್ಲ. ಮುಖ ತುಂಬಾ ಬಾಧಿಸುತ್ತಿತ್ತು. ಭಾರವೆನಿಸುತ್ತಿದ್ದ ಮುಖವನ್ನು ಹೊತ್ತು ಬೆಳಿಗ್ಗೆ ಎದ್ದ ನಾನು ಮುಖ ಮಾರ್ಜನ ಮಾಡುತ್ತಾ ಕನ್ನಡಿಯಲ್ಲಿ ನೋಡಿಕೊಂಡರೆ ಯಾವುದೋ ‘ಏಲಿಯೆನ್’ ಅನ್ನು ನೋಡಿದ ಹಾಗಾಯಿತು. ನನ್ನ ಗುರುತು ನನಗೇ ಸಿಗದೆ ಕಂಗಾಲಾದೆ. ಕೋಣೆಯಿಂದ ಹೊರ ಬಂದ ನನ್ನ ಗುರುತು ನಮ್ಮ ಶಂಕರಿಗೂ ಸಿಗದಷ್ಟು ಮುಖ-ಮೂತಿ ಊದಿಕೊಂಡಿತ್ತು. ತುಟಿಯಂತೂ ಊದಿ ನೇತಾಡುತ್ತಿತ್ತು. ಮುಖದಲ್ಲಿ ಊದದೇ ಇದ್ದ ಯಾವ ಭಾಗವೂ ಇರಲಿಲ್ಲ. ಯಾರದ್ದೋ ಎಕ್ಸ್ಟ್ರಾ ಮುಖವನ್ನು ನನ್ನ ಮುಖಕ್ಕೆ ಫಿಕ್ಸ್ ಮಾಡಿದ ಹಾಗಾಗಿತ್ತು. ಪುನಃ ಸೊಸೆಗೆ ಫೋಟೊ ಕಳಿಸಿದಾಗ 'ಕೂಡಲೇ ಲೋಕಲ್ ಡಾಕ್ಟರ್ ಹತ್ತಿರ ಹೋಗಿ' ಎಂದು ಹೇಳಿದಳು. ಬೆಳಗಿನ ಹತ್ತೂವರೆಯ ಸುಮಾರಿಗೆ ಸಾಗರದ ಡಾ. ದೀಪಕ್ ಹತ್ತಿರ ಹೋದಾಗ ಅಲರ್ಜಿ ಇಂಜೆಕ್ಷನ್ ಚುಚ್ಚಿ, ಒಂದು ಕೋರ್ಸ್ ಮಾತ್ರೆ ಕೊಟ್ಟರು. ನಂತರದಲ್ಲಿ ಊತ ಸಾಕಷ್ಟು ಇಳಿದರೂ ಅಲರ್ಜಿಯ ‘ಆಫ್ಟರ್ ಇಫೆಕ್ಟ್’ ಜೋರಾಗಿಯೇ ಇತ್ತು. ಮುಖವಂತೂ ಕೆಂಪು ಮೂತಿಯ ಮಂಗನ ತರಹ ಆಗಿತ್ತು. ತದನಂತರದಲ್ಲಿ ಮುಖದಿಂದ ಅಲರ್ಜಿ ಮೈಕೈಗೆಲ್ಲಾ ರವಾನೆ ಆಯ್ತು. ಹಾಗೆ ಮಾಡದಿದ್ದರೆ ಒಂದೇ ದೇಹದ ಉಳಿದ ಭಾಗಗಳಿಗೆ ಬೇಜಾರಾಗಬಹುದೆಂಬ ಯೋಚನೆ ಅಲರ್ಜಿಯದ್ದೋ ಏನೋ? ಅಲ್ಲೆಲ್ಲಾ ಆದದ್ದು ಊತಕ್ಕಿಂತ ಹೆಚ್ಚು ಕೆಂಪು ದದ್ದುಗಳು, ರ್ಯಾಶಸ್ ಹಾಗೂ ಅದರೊಡನೆಯ ಅದ್ಭುತವಾದ ತುರಿಕೆ! ಎಲ್ಲಾದರೂ ಒಂದು ಕಡೆ ಮುಟ್ಟಿದರೆ ತುರಿಸುತ್ತಾ ಇರುವ ಎನ್ನುವ ಭಾವ. ತುರಿಸುವ ಪ್ರಕ್ರಿಯೆ ಎಷ್ಟು ರಗಳೆ ಕೊಡುತ್ತದೋ ಅಷ್ಟೇ ಹಿತವನ್ನೂ ಕೊಡುತ್ತದೆ. ಅಲ್ಲವೆ?!

ಈ ಅಲರ್ಜಿಯ ಕಾಲದಲ್ಲಿ ನಾನೊಂದಿಷ್ಟು ದಣಿದೆ! ನನ್ನ ಸಹಜವಾದ ಮಲಗುವ ಭಂಗಿಯಲ್ಲಿ ಮಲಗಲು ಆಗದಂತಹ ತೊಂದರೆ ಕೊಡುವ ಅಲರ್ಜಿಯು ನನ್ನ ನಿದ್ರಾ ಸುಖವನ್ನೇ ಕೊಂದು ಹಾಕಿ ಬಿಟ್ಟಿದೆ. ಈಗ ಕಡಿಮೆಯಾಗುತ್ತಿರುವಂತೆ ಅನಿಸುತ್ತಿರುವ ಅಲರ್ಜಿ ನನ್ನನ್ನು ಬಿಟ್ಟು ತೊಲಗಿದರೆ ಸಾಕೆಂಬ ಹಂಬಲ ನನ್ನದು. ಅಲರ್ಜಿಯನ್ನು ಅನುಭವಿಸಿದವರಿಗೆ ಇದೆಲ್ಲ ಸುಲಭವಾಗಿ ಅರ್ಥವಾಗುವ ವಿಷಯವಲ್ಲವೆ?

ಹೀಗೊಂದು ಅಲರ್ಜಿಯ ವೃತ್ತಾಂತ!


Posted 11/2/2026


Saturday, February 7, 2026

ಸ್ಮರಿಕಾ - ನೆನಪಿನ ಸೆಲೆಯಲ್ಲಿ

 Saturday, 7th February 2026



ಸ್ಮರಿಕಾ - ನೆನಪಿನ ಸೆಲೆಯಲ್ಲಿ” ಎನ್ನುವ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಕಳೆದ ವರ್ಷ. ಯಾವುದೇ ಸಂಸ್ಥೆ ಪ್ರಗತಿ ಪಥದಲ್ಲಿ ಮೇಲೇರುವಾಗ ತಾನು ಕಾಲಿಟ್ಟ ಘಳಿಗೆ, ಸ್ಥಿತಿ, ಧ್ಯೇಯ…. ಇವುಗಳನ್ನು ಮರೆಯಬಾರದು. ಪ್ರತಿ ಸಂಸ್ಥೆಯ ಹುಟ್ಟು ತುಂಬಾ ಸಾಧಾರಣವಾಗಿ ಸರಳವಾಗಿರುತ್ತದೆ. ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿರುತ್ತದೆ. ಹೊಂಗಿರಣದ ಪ್ರಾರಂಭವೂ ಕೂಡಾ ಪುಟ್ಟ ಹೆಜ್ಜೆಗಳೊಡನೆಯೇ ಆದದ್ದು. ಆ ‘ಪುಟ್ಟ ಹೆಜ್ಜೆ’ಯನ್ನು ಬಲಗೊಳಿಸಲು ನೆರವಾದವರನ್ನು ನೆನಪಿಸಿಕೊಂಡು ಪುನಃ ಒಂದಾಗಿ ಹಳೆಯ ನೆನಪುಗಳನ್ನು ಹಂಚಿಕೊಳ್ಳಲೋಸುಗವೇ ಪ್ರಾರಂಭವಾದದ್ದು 'ಸ್ಮರಿಕಾ'. ಇದರರ್ಥ 'ಸ್ಮರಣಾರ್ಥ' ಎಂದು. ಒಂದರ್ಥದಲ್ಲಿ ನಮ್ಮೊಡನೆ ಇರದವರನ್ನು ಸ್ಮರಿಸುವುದು ಹಾಗೂ ನಮ್ಮೊಡನೆ ಇದ್ದವರು ನೀಡಿದ ಸಹಕಾರವನ್ನು ಸ್ಮರಿಸುವುದು ಎಂದು ಇನ್ನೊಂದು ರೀತಿಯಲ್ಲೂ ಅರ್ಥೈಸಿಕೊಳ್ಳಬಹುದು.


2025ರ ಜನವರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾವು ನಮ್ಮ ಮೊದಲ ಮೂರು ಬ್ಯಾಚುಗಳ, ಸುತ್ತಮುತ್ತಲಿನ ಊರಿನ ಪಾಲಕರನ್ನು ಆಹ್ವಾನಿಸಿದ್ದೆವು. ಪ್ರತಿಯೊಬ್ಬರ ಮನೆಗೆ ಖುದ್ದಾಗಿ ಹೋಗಿ ಕರೆದು ಬಂದಾಗ, ಅವರು ತೋರಿಸಿದ ಪ್ರೀತಿ, ವಿಶ್ವಾಸ ಹಾಗೂ ಹೊಂಗಿರಣದಲ್ಲಿ ಕಲಿತ ಅವರ ಮಕ್ಕಳ ಗಟ್ಟಿಗೊಂಡು ನೆಲೆನಿಂತ ಬದುಕಿನ ಬಗೆಗಿನ ಸಂತೃಪ್ತಿ ಕಂಡು ಮನದುಂಬಿ ಬಂದಿತ್ತು. ಆಮಂತ್ರಿತರೆಲ್ಲರೂ ಬಂದಿದ್ದರು. ನಮ್ಮದೇ ಹಳೆಯ ವಿದ್ಯಾರ್ಥಿ ಸಂವತ್ಸರ ಹಾಗೂ ತಂಡದವರು ನೀಡಿದ ಸಂಗೀತ ಕಾರ್ಯಕ್ರಮ ಆಹ್ಲಾದಕರವಾಗಿತ್ತು. ಒಟ್ಟಿನಲ್ಲಿ ಅದೊಂದು ಸುಂದರವಾದ ಪುನರ್ಮಿಲನದ ಕಾರ್ಯಕ್ರಮವಾಗಿತ್ತು.
ಇಂದು ನಡೆದ ಸ್ಮರಿಕಾ ಕಾರ್ಯಕ್ರಮವನ್ನು ಮೊದಲ ಎಂಟು ಬ್ಯಾಚಿನ ಮಕ್ಕಳು ಹಾಗೂ ಆಗ ನಮ್ಮಲ್ಲಿದ್ದ ಶಿಕ್ಷಕರ ಪುನರ್ಮಿಲನಕ್ಕಾಗಿ ಮೀಸಲಾಗಿಟ್ಟಿದ್ದೆವು. ನವೋದಯದ ನಮ್ಮ ಹಳೆಯ ವಿದ್ಯಾರ್ಥಿ ಹಾಗೂ ನಾಡಿನ ಹೆಸರಾಂತ ಸುಗಮಸಂಗೀತಕಾರನಾದ ಶ್ರೀ ವಿನಯ್ ನಾಡಿಗ್ ನ ಮಧುರ ಸಂಗೀತ ಸುಧೆಯೊಂದಿಗೆ ನಮ್ಮ ಇಂದಿನ ಕಾರ್ಯಕ್ರಮ ಪ್ರಾರಂಭವಾಯಿತು. ಹೇಳಿದ ಸಮಯಕ್ಕೆ ಹಳೆಯ ವಿದ್ಯಾರ್ಥಿಗಳು ಬಾರದಿದ್ದ ಕಾರಣ ನಮ್ಮ ಈಗಿನ ಹಿರಿಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ಸಂಗೀತ ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬರುವಾಗ ಒಬ್ಬೊಬ್ಬರಾಗಿ ಕೆಲವು ಹಳೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬಂದು ನಮ್ಮನ್ನು ಸೇರಿಕೊಂಡರು. ಸಂಗೀತ ಕಾರ್ಯಕ್ರಮ ಮುಗಿದ ನಂತರ ಒಂದು ಗಂಟೆಯ ಕಾಲ ಹಳೆಯ ನೆನಪುಗಳನ್ನು ಮೆಲುಕು ಹಾಕಲಾಯಿತು. ಸಮಯದ ಚಕ್ರ ಒಮ್ಮೆ ಹಿಂದೆ ಹೋಗಿ ಮುಂದೆ ಬಂದಂತಾಯಿತು. ನಮ್ಮ ನಿರೀಕ್ಷೆಯಷ್ಟು ಮಕ್ಕಳು ಬರದಿದ್ದರೂ, ಬಂದವರು ‘ನಿಮ್ಮ ಜೊತೆಗೆ ನಾವಿದ್ದೇವೆ’ ಎನ್ನುವ ಭರವಸೆಯ ಭಾವವನ್ನು ಕೊಟ್ಟರು. ಸರಳ ಸಹಭೋಜನದ ನಂತರ ಅಲ್ಲೇ ಅಷ್ಟಿಷ್ಟು ಮಾತನಾಡಿ ಎಲ್ಲರೂ ತಮ್ಮ ತಮ್ಮ ಗೂಡಿಗೆ ಇನ್ನೊಂದಿಷ್ಟು ನೆನಪುಗಳೊಡನೆ ಹಿಂದಿರುಗಿದರು. ಇಲ್ಲಿ ಉಳಿದ ನಾವು ಅವರೆಲ್ಲರೊಡನೆಯ ಒಡನಾಟದ ಖುಷಿಯನ್ನು ಪಡೆದ ಭಾವದಲ್ಲಿ ಮುಳುಗಿದ್ದೆವು.

Posted 8./2/2026


Friday, February 6, 2026

ಸಾಗರದ ಮಾರಿಜಾತ್ರೆ -

 ಸಾಗರದ ಮಾರಿಜಾತ್ರೆ - ಶೋಭಾ ಸೋಮಯಾಜಿ 

ಜಾತ್ರೆ ಎಂದರೆ ನಾನು ನಾಲ್ಕು ಮಾರು ದೂರ ನಿಲ್ಲುವವಳು. ನನಗೆ ಅತೀ ಜನಸಂದಣಿ, ಅಲ್ಲಿನ ಗಲಾಟೆ, ಗಜಿಬಿಜಿ, ನೂಕುನುಗ್ಗಲು ಇವೆಲ್ಲ ಸಹ್ಯವಲ್ಲ. ಜಾತ್ರೆಯ ಬಿಸಿಯಲ್ಲಿ ದೇವರು ನೋಡಲು ಹೋದರೆ ಇರುವ ಚೂರುಪಾರು ಭಕ್ತಿಯೂ ಗೋತಾ! ಈ ಮನಸ್ಥಿತಿಯಿಂದಾಗಿ ಉಡುಪಿಯವಳೇ ಆದ ನಾನು ಈವರೆಗೆ ಪರ್ಯಾಯ ನೋಡಿಲ್ಲ. ಪ್ರಾಯಶಃ ಚಿಕ್ಕವಳಿದ್ದಾಗ ಅಪ್ಪನ ಜೊತೆಗೆ ಹೋಗಿರಬಹುದು. ಆದರೆ ನೆನಪಿಲ್ಲ.


ಸಾಗರದ ಮಾರಿಜಾತ್ರೆಗೆ ಮಾತ್ರ ನಾನು ತಪ್ಪದೇ ಹೋಗುತ್ತೇನೆ. ಅದರ ಕಾರಣ ನನ್ನ ಮಗಳು. ಅವಳಿಗೆ ಜಾತ್ರೆ ಗುಡ್ಡೆ ಸುತ್ತುವುದು, ಜಯಂಟ್ ವೀಲ್, ಕೊಲಂಬಸ್, ಟೊರ್ರಾಟೊರ್ರಾದಂತಹ ಆಟಗಳನ್ನಾಡುವುದು ಬಹಳ ಇಷ್ಟ. ನಾನು ಅವಳ ಬಾಲದಂತೆ ಹೋಗುವುದಷ್ಟೇ! ಒಟ್ಟಿಗೆ ಜನ ಇದ್ದರೆ ಒಂದಿಷ್ಟು ಗೌಜು ಗದ್ದಲ ಮಾಡಿಕೊಂಡು ತಿರುಗುವುದು ನನ್ನ ಕೆಲಸ. 

ಕಳೆದ ಬಾರಿಯ ಮಾರಿಜಾತ್ರೆಯಲ್ಲಿ ನಾಲ್ಕೈದು ಸಲ ಜಾತ್ರೆಗೆ ಹೋಗಿ ನಾನು ಗಮ್ಮತ್ತು ಮಾಡಿದ್ದೇನೆ. ಈ ಸಲ ಆರೋಗ್ಯದ ಸಮಸ್ಯೆ ಸ್ವಲ್ಪ ಇರುವುದರಿಂದ ಹೋಗಲು ಹಿಂದೆಮುಂದೆ ನೋಡುವ ಹಾಗಾಗಿದೆ. ಆದರೂ ಇವತ್ತು ಡಾಕ್ಟರ್ ಹತ್ತಿರ ಹೋದವಳು ದೇವರನ್ನು ನೋಡಬೇಕೆಂದು ಆ ನುಗ್ಗಲಿನಲ್ಲಿ ಸ್ವಲ್ಪ ದೂರ ಹೋಗಿ ನಂತರದಲ್ಲಿ ‘ಇದು ನನ್ನಿಂದಾಗುವ ಕೆಲಸವಲ್ಲ’ ಎಂದು ನಿರ್ಣಯಿಸಿ ಹಾಗೇ ವಾಪಾಸು ಬಂದೆ. ತಾಲೂಕು ಆಫೀಸಿನ ಬಳಿ ಕೆಲವು ಹೂಕುಂಡ ಹಾಗೂ ಕಪ್ ಸೆಟ್ ತೆಗೆದುಕೊಂಡು ನನ್ನ ಮಗಳೊಡನೆ ಕಾರನ್ನೇರಿ ಮನೆಯತ್ತ ಹಿಂದಿರುಗಿದೆ ಎಂಬಲ್ಲಿ ಇಂದಿನ ನನ್ನ ಜಾತ್ರೆಯ ತಿರುಗಾಟ ಮುಗಿಯಿತು.


Posted 7/2/2026 

Wednesday, January 28, 2026

JOJO THE PET - SHOBHA SOMAYAJI

 Wednesday, January 28, 2026

JOJO

ಬೋಜೋ ಬಗ್ಗೆ ಶೃದ್ಧಾಂಜಲಿಯ ಬರಹ ಬರೆಯುವ ಸಮಯ ಇಷ್ಟು ಬೇಗ ಬರುತ್ತದೆಯೆಂದು ನಾನೆಂದೂ ಭಾವಿಸಿರಲಿಲ್ಲ. ಬೋಜೋ ನಮ್ಮ ಕ್ಯಾಂಪಸ್ ನ ಸುಂದರ, ಸದೃಢ, ಹೀರೋ ಮೆಟೀರಿಯಲ್ ಹೊಂದಿದ ವ್ಯಕ್ತಿತ್ವ ಉಳ್ಳವನಾಗಿದ್ದ. ಅವನ ನಡೆ ಚೆಂದ; ಅವನ ನೋಟ ಚೆಂದ; ಅವನ ಸೂಕ್ಷ್ಮ ಸ್ವಭಾವ ಅಂದ. ನಮ್ಮ ಯಾರದ್ದೇ ಮುಖಭಾವ ಬದಲಾದರೂ, ಮಾತಿನ ಟೋನ್ ಬದಲಾದರೂ ಅವನಿಗೆ ಕೂಡಲೇ ಗೊತ್ತಾಗುತ್ತಿತ್ತು. ಧ್ವನಿ ಏರಿಸಿ ವಾರ್ನ್ ಮಾಡುವ ಅಗತ್ಯ ಇರಲಿಲ್ಲ. ಒಂದು ರೀತಿಯಲ್ಲಿ ‘ಮರ್ಯಾದಾ ಪುರುಷೋತ್ತಮ’ನ ಗುಣ ಹೊಂದಿದವನಾಗಿದ್ದ. ನನ್ನ ಆಫೀಸಿನಲ್ಲಿ ಅವನ ಜಾಗ ನನ್ನ ಟೇಬಲ್ ಕೆಳಗೆ, ನನ್ನ ಪದತಲದಲ್ಲಾಗಿತ್ತು. ಒಮ್ಮೆಯಂತೂ ಅವನು ನನ್ನ ಆಫೀಸಿನಲ್ಲಿ ಇರುವುದು ನನಗೆ ಮರೆತು ಹೋಗಿ ಬಾಗಿಲು ಹಾಕಿಕೊಂಡು ಊಟಕ್ಕೆ ಬಂದುಬಿಟ್ಟಿದ್ದೆ. ಹಿಂದಿರುಗಿ ಹೋದಾಗ ಅವನು ನನ್ನ ಕುರ್ಚಿಯ ಮೆಲೆ ಆರಾಮಾಗಿ ಮಲಗಿದ್ದ. ನಾನು ನನ್ನ ಆಫೀಸಿನವರಿಗೆ ಆ ‘ಹೊಸ ಪ್ರಿನ್ಸಿಪಾಲ್’ ಅನ್ನು ತೋರಿಸಿ ನಕ್ಕಿದ್ದೆ. ನನ್ನನ್ನು ನೋಡಿದವನು ಕುರ್ಚಿಯಿಂದಿಳಿದು ಹೊರ ಹೋಗಿದ್ದ.


ನಮ್ಮ ಸುಕ್ಕುವಿನ ಮರಿಯಾಗಿದ್ದ ಬೋಜೋ ‘ಸ್ವಚ್ಛ ಭಾರತ್’ ಪ್ರಣಾಳಿಕೆಯ ಅಪರಾವತಾರವಾಗಿದ್ದ. ಅವನು ಪುಟ್ಟ ಮರಿ ಇದ್ದಾಗ ನನ್ನ ಮಗಳು ವಿಭಾಳೊಡನೆ ಮಲಗುತ್ತಿದ್ದ. ಒಂದು ಸಲವೂ ಹಾಸಿಗೆಯಲ್ಲಿ ಮೂತ್ರ ಮಾಡಿದವನಲ್ಲ. ಅಷ್ಟು ಶಿಸ್ತಿನ ಸಿಪಾಯಿ. ಅವನ ಶಿಸ್ತಿನ ನಡವಳಿಕೆಯನ್ನು ಅವನ ನಡಿಗೆಯಲ್ಲಿ ಕಾಣಬಹುದಿತ್ತು. ಒಂದು ರೀತಿಯಲ್ಲಿ ಗೌರವ ಕೊಡುವಂತಿದ್ದ ವ್ಯಕ್ತಿತ್ವ ಅವನದ್ದು. 

ಕಲ್ಲಿನಲ್ಲಿ ಕೆತ್ತಿದ ಗ್ರೀಕ್ ಶಿಲ್ಪದಂತಹ ಮೈಕಟ್ಟು ಅವನದ್ದು. ಹದವಾದ ಎತ್ತರದ ಅವನನ್ನು ನೋಡುವುದೇ ಒಂದು ಖುಷಿ. ತುಂಬಾ ತೀಕ್ಷ್ಣ ಕಣ್ಣುಗಳು ಅವನವು. ಅವನು ಮಂಗ ದ್ವೇಷಿ! ಮಂಗಗಳನ್ನು ಕಂಡಾಗ ಅವನ ಓಡುವಿಕೆಯ ವೇಗ ತೀವ್ರಗೊಳ್ಳುತ್ತಿತ್ತು. ಚಿಗರೆ ಮರಿಯಂತೆ ಓಡುತ್ತಿದ್ದ. ಒಮ್ಮೆಯಂತೂ ಮಂಗವೊಂದರೊಡನೆ ಜಗಳವಾಡಿ ಅವನ ಅರ್ಧ ಮುಖ ಹರಿದು ಹೋಗಿತ್ತು. ಡಾಕ್ಟರ್ ಹತ್ತಿರ ಕರೆದೊಯ್ದು, ಹರಿದ ಮುಖವನ್ನು ಹೊಲಿದು, ಬಾಲಣ್ಣ - ಶಂಕರಿಯವರ ಸೇವೆಯಿಂದ ಅವನು ಮೊದಲಿನಂತಾದದ್ದು ಎಲ್ಲರಿಗೂ ಸಮಾಧಾನ ತಂದಿತ್ತು. 

ಅವನು ಕ್ಯಾಂಪಸ್ಸಿನ ನಾಯಕನಾಗಿದ್ದ. ಅವನಿದ್ದರೆ ಎಲ್ಲರಿಗೂ ಒಂದು ರೀತಿಯ ಧೈರ್ಯ. ಕೇವಲ ಮೂರು ವರ್ಷಗಳಲ್ಲಿ ಅವನು ನಮ್ಮನ್ನೆಲ್ಲಾ ತೊರೆದು ಹೋಗಿಬಿಡುತ್ತಾನೆ ಎಂದು ನಾವ್ಯಾರೂ ಕನಸುಮನಸಿನಲ್ಲೂ ಯೋಚಿಸಿರಲಿಲ್ಲ. ಗ್ಯಾಸ್ ಸಿಲಿಂಡರ್ ತರುವ ಗಾಡಿಯ ಚಾಲಕ ನೋಡನೋಡುತ್ತಿದ್ದಂತೆ ಬೋಜೋನ ಮೇಲೆ ಗಾಡಿ ಹಾಯಿಸಿ ಅವನ ಅಂತ್ಯಕ್ಕೆ ಕಾರಣವಾದದ್ದು ಮರೆಯಲಾರದ ನೋವನ್ನು ನಮ್ಮೆಲ್ಲರಿಗೂ ಕೊಟ್ಟಿದೆ. ಎಲ್ಲೇ ಇರಲಿ, ಹೇಗೇ ಇರಲಿ, ಬೋಜೋನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ನಮ್ಮೆಲ್ಲರ ಪ್ರಾರ್ಥನೆ 🙏

Posted 29/1/2026


Monday, January 26, 2026

ನವಜಾತ ಶಿಶು - ಸಂಭ್ರಮ - ಶೋಭಾ ಸೋಮಯಾಜಿ

 Monday, 26th January 2026


ದಿನಾಂಕ ಜನವರಿ 23, 2026ರಂದು ನನ್ನ ಮಗನ ಮಗುವಿಗೆ ನಾನು ಅಧಿಕೃತ ಅಜ್ಜಿಯಾದೆ.

ನಾನು ಮದುವೆಯಾಗಿ ಸೇರಿದ ಮನೆ ಕೂಡು ಕುಟುಂಬದ ಮನೆ. ನನ್ನ ಗಂಡ ರವಿ ಆ ಮನೆಯ ಕೊನೆಯ ಸಂಜಾತ. ಹೀಗಾಗಿ ಅವನಿಗೂ ಅವನ ಹಿರಿಯ ಅಣ್ಣ - ಅಕ್ಕಂದಿರಿಗೂ ಸುಮಾರು ಹದಿನೈದು ಇಪ್ಪತ್ತು ವರ್ಷಗಳ ಅಂತರ. ನನ್ನ ಎರಡನೆಯ ಅತ್ತಿಗೆಯ ಮಗಳು ಹೆತ್ತಾಗ ನನಗೆ ಮೂವತ್ತರ ಆಸುಪಾಸಿನ ವಯಸ್ಸು. ನಾನು ಆ ವಯಸ್ಸಿನಲ್ಲಿಯೇ ಅಜ್ಜಿಯ ಪಟ್ಟವನ್ನೇರಿದ್ದೆ! ನಂತರದಲ್ಲಿ ರವಿಯ ಉಳಿದ ಅಣ್ಣ - ಅಕ್ಕಂದಿರ ಮಕ್ಕಳು ಮದುವೆಯಾಗಿ ಪಾಲಕರಾದಾಗ ನಾನು ಅಜ್ಜಿಯ ಸ್ಥಾನದಲ್ಲಿ ಬಡ್ತಿ ಪಡೆಯುತ್ತಾ ಹೋದೆ. ಈಗ ನನ್ನ ಮಗನ ಹೆಂಡತಿ ಹೆತ್ತಾಗ ನಾನು ‘ಅಧಿಕೃತ’ವಾಗಿ ಅಜ್ಜಿಯಾದೆ ಅಂದರೆ ಸರಿ ತಾನೆ!?

ಪುಟ್ಟ ಮಕ್ಕಳೆಂದರೆ ಸಹಜವಾಗಿ ನನ್ನೊಳಗಿಂದ ಒಲುಮೆ ಉಕ್ಕಿ ಹರಿಯುತ್ತದೆ. ಮಕ್ಕಳೊಡನೆ ಮಕ್ಕಳಾಗುವ ಖುಷಿ ಅನುಭವಿಸಿದವರೇ ಬಲ್ಲರು! ಅದರಲ್ಲೂ ಆಗ ತಾನೆ ಹುಟ್ಟಿದ ಮಗುವಿನ ಮೈಯ್ಯ ಬಿಸುಪಂತೂ ಅನಿರ್ವಚನೀಯ ಅನುಭವವನ್ನು ಕೊಡುವಂತಹುದು. ನನ್ನ ಮೊಮ್ಮಗಳು ಹುಟ್ಟಿದ ಒಂದೂವರೆ ತಾಸಿನ ನಂತರ ಬಟ್ಟೆಯಲ್ಲಿ ಸುತ್ತಿ ರೂಮಿಗೆ ತಂದಾಗ ಅದರ ಬರಿ ಮೈಯ್ಯ ಬಿಸುಪನ್ನು ಆಸ್ವಾದಿಸುವ ಅವಕಾಶ ತಪ್ಪಿ ಹೋದದ್ದಕ್ಕೆ ಒಂದರೆಗಳಿಗೆ ಬೇಸರವಾದದ್ದಂತೂ ಸತ್ಯ. ಆದರೆ ನನಗೆ ಬಹಳ ಕೆಮ್ಮು ಬಾಧಿಸುತ್ತಿದ್ದ ಕಾರಣ ಮೊಮ್ಮಗಳನ್ನು ನಾನು ಎತ್ತಿಕೊಳ್ಳುವುದು ಎಷ್ಟು ಸಮಂಜಸ ಎಂದು ನನ್ನೊಳಗೆ ತಾಕಲಾಟವಾದದ್ದೂ ನಿಜ! ಆದರೂ ಮಗುವಿನ ಮೇಲಿನ ಮೋಹ - ಸೆಳೆತ ನನ್ನನ್ನು ಮಗುವನ್ನು ಸ್ವಲ್ಪ ಹೊತ್ತು ಎತ್ತಿಕೊಳ್ಳುವಂತೆ ಮಾಡಿ ಬಿಟ್ಟಿತು. ನನ್ನ ಕೆಮ್ಮಿನಿಂದ ಬಾಣಂತಿ ಹಾಗೂ ಮಗುವಿಗೆ ತೊಂದರೆ ಆಗದೆ ಇರಲಿ ಎಂದು ಮನದಲ್ಲೇ ಪ್ರಾರ್ಥಿಸುತ್ತಾ ಅಪರಾಧಿ ಪ್ರಜ್ಞೆಯಲ್ಲೇ ಮಗು - ಬಾಣಂತಿಯೊಡನೆ ಸ್ವಲ್ಪ ಹೊತ್ತು ಸಮಯ ಕಳೆದೆ. ಅದೃಷ್ಟವಶಾತ್ ನನ್ನ ಕೆಮ್ಮು ಅವರಿಗೆ ಬಾಧೆ ತರದೇ ಇದ್ದದ್ದು ನನ್ನ ಮನಸ್ಸಿಗೆ ಸಮಾಧಾನ ನೀಡಿತು.

ಈ ಎಲ್ಲಾ ಕಲಸುಮೇಲೋಗರದ ಮನಸ್ಥಿತಿಯಲ್ಲಿ ನನ್ನ ‘ಅಜ್ಜಿ’ತನದ ತಾಜಾ ಭಾವನೆಯನ್ನು ಅನುಭವಿಸಲು ಆಗದಿರುವುದು ನನಗೆ ನಂತರದಲ್ಲಿ ಅರಿವಾಯಿತು. ಎಲ್ಲವನ್ನೂ ಅನುಭವಿಸಲು ಯೋಗ ಇರಬೇಕು ಎನ್ನುವ ಬಲ್ಲವರು ಹೇಳಿದ ಮಾತು ಸತ್ಯವೆಂದು ಅನುಭವಕ್ಕೆ ಬಂದಿತು. ಅದೇನೆ ಇರಲಿ; ನಮ್ಮ ಮನೆಗೊಂದು ಹೊಸ ಸದಸ್ಯೆಯ ಆಗಮನವಾಗಿದೆ. ಅದು ನಮಗೆಲ್ಲರಿಗೂ ಖುಷಿ ತಂದ ವಿಷಯವಾಗಿದೆ. ಅಜ್ಜಿಯ ಪಾತ್ರ ನಿರ್ವಹಿಸಲು ಮುಂಬರುವ ದಿನಗಳು ನನ್ನ ಮುಂದಿವೆ ಎನ್ನುವುದು ಸಮಾಧಾನದ ಭಾವ ಕೊಟ್ಟಿದೆ. ಅವಳು ಒಳ್ಳೆಯ ಆಯುರಾರೋಗ್ಯ ಪಡೆದು ಸಂತಸದ ಸಮೃದ್ಧ ಬದುಕನ್ನು ಬಾಳಲಿ ಎಂದು ಮನಃಪೂರ್ವಕವಾಗಿ ಹಾರೈಸುವುದನ್ನು ಬಿಟ್ಟರೆ ನನ್ನಲ್ಲಿ ಅದಕ್ಕಿಂತ ಕೊಡಲು ಹೆಚ್ಚಿನದೇನು ಇಲ್ಲ. ಅಷ್ಟು ಸಾಕಲ್ಲವೆ??


Posted 27/1/2026

Friday, December 19, 2025

SAROJINI TANTRY - SHRADDHANJALI

 Thursday, Decembr 18, 2025

SAROJINI TANTRY


Beautiful write-up from Shobha Somayaji

ನನ್ನ ಅಮ್ಮನ ದೊಡ್ಡ ತಂಗಿ ಸರೋಜಿನಿ ಚಿಕ್ಕಿ ಸುಮಾರು ಒಂದೂವರೆ ತಿಂಗಳ ಕಾಲ ಆರೋಗ್ಯದ ತೀವ್ರ ಸಮಸ್ಯೆಯಿಂದ ಬಳಲಿ ನಿನ್ನೆ ಮಧ್ಯಾಹ್ನ ತೀರಿಕೊಂಡರು. ಎಂಬತ್ತರ ಹೊಸ್ತಿಲಲ್ಲಿ ಇದ್ದ ಅವರು ಅಷ್ಟು ವಯಸ್ಸಾದಂತೆ ಕಾಣದ ಅವರು ಸದಾ ಉತ್ಸಾಹದ ಚಿಲುಮೆಯಾಗಿದ್ದರು. ಯಾವ ಕಾರ್ಯಕ್ರಮಕ್ಕೆ ಹೋದರೂ ತಮ್ಮ ಗಟ್ಟಿ ಧ್ವನಿ ಹಾಗೂ ನಗುವಿನಿಂದ ಎಲ್ಲರನ್ನೂ ತಟ್ಟಿ ಮಾತನಾಡಿಸಿ ತನ್ನ ಇರುವಿಕೆಯನ್ನು ಸ್ಥಾಪಿಸುತ್ತಿದ್ದರು. ಸದಾ ಶಿಸ್ತಿನ ಉಡುಪು ತೊಟ್ಟು, ಸಿಂಗರಿಸಿಕೊಂಡು ಲವಲವಿಕೆಯಿಂದಿರುತ್ತಿದ್ದ ಅವರು ಅವರ ಮನೆಯ ಜೀವಾಳ. 

ನನ್ನ ಅಮ್ಮನಿಗಿಂತ ಹತ್ತು ವರ್ಷ ಚಿಕ್ಕವರಾಗಿದ್ದ ನನ್ನ ಚಿಕ್ಕಿಗೆ ನನ್ನ ತಂದೆ - ತಾಯಿಯ ಜೊತೆಗೆ ಬಹಳ ಒಡನಾಟ. ಅವರ ಮದುವೆ ಆದ ಮೇಲೂ ನನ್ನ ತಂದೆಯವರು ಅವರಿಗೆ ಕಾಲಕಾಲಕ್ಕೆ ಸಲಹೆ ಸಹಕಾರ ಕೊಟ್ಟು ಅವರ ಕುಟುಂಬದೊಡನೆ ಒಳ್ಳೆಯ ಸಂಬಂಧ ಹೊಂದಿದ್ದರು.

ಶ್ರೀನಿವಾಸ ತಂತ್ರಿಯವರನ್ನು ವಿವಾಹವಾಗಿ ಸುಮಾರು ಅರವತ್ತೆರಡು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ನನ್ನ ಚಿಕ್ಕಿಯದ್ದು ಹೋರಾಟದ ಬದುಕು. ಮೂರು ಮಕ್ಕಳನ್ನು ಬೆಳೆಸುತ್ತಾ ಮೈಸೂರಿನ ಸರಸ್ವತಿಪುರಂ ನಲ್ಲಿ ಒಂದು ಪುಟ್ಟ ಕ್ಯಾಂಟೀನ್ ಅನ್ನು ಸುಮಾರು ಮೂವತ್ತು ವರ್ಷಗಳ ಕಾಲ ನಡೆಸಿ ಉತ್ತಮ ಬದುಕು ಕಟ್ಟಿಕೊಂಡ ಆ ದಂಪತಿಗಳ ಶ್ರಮಕ್ಕೆ ಎಲ್ಲರೂ ತಲೆದೂಗಲೇಬೇಕು. ಅವರು ತಯಾರಿಸಿದ ತಿನಿಸಿಗೆ ಬಹಳ ಬೇಡಿಕೆ ಇತ್ತು. ನನ್ನ ಚಿಕ್ಕಿ ಪ್ರತಿದಿನ ಬೆಳಿಗ್ಗೆ ನಾಲ್ಕಕ್ಕೆ ಎದ್ದು ಕ್ಯಾಂಟೀನಿಗೆ ಬೇಕಾದ ಇಡ್ಲಿ, ಪಲಾವ್ ಇತ್ಯಾದಿ ತಿಂಡಿಗಳನ್ನು ತಯಾರಿಸಿಕೊಟ್ಟರೆ ಚಿಕ್ಕಪ್ಪ ತಮ್ಮ ಸ್ಕೂಟರ್ ನಲ್ಲಿ ಅದನ್ನು ಕ್ಯಾಂಟೀನ್ ಗೆ ಕೊಂಡೊಯ್ದು ಬೆಳಗಿನ ಮಾರಾಟ ಮುಗಿಸಿ ಹನ್ನೊಂದು ಗಂಟೆಯ ಸುಮಾರಿಗೆ ಮನೆಗೆ ಮರಳುತ್ತಿದ್ದರು. ಚಿಕ್ಕಿ ಮನೆಗೆಲಸ ಮುಗಿಸಿ ಸಂಜೆಯ ತಿಂಡಿಗೆ ತಯಾರಿ ಶುರುಮಾಡಿದರೆ ಚಿಕ್ಕಪ್ಪ ಪೇಟೆಗೆ ಹೋಗಿ ಸಾಮಾನು ಸರಂಜಾಮು ತರುತ್ತಿದ್ದರು. ಸಂಜೆಗೂ ಹಲವಾರು ರೀತಿಯ ಸ್ನ್ಯಾಕ್ಸ್ ತಯಾರಿಸಿ ನನ್ನ ಚಿಕ್ಕಿ ಕೊಟ್ಟಾಗ ಚಿಕ್ಕಪ್ಪ ಅದನ್ನು ಕ್ಯಾಂಟೀನ್ ನಲ್ಲಿ ಮಾರಾಟ ಮಾಡಿ ಸಂಜೆ ಏಳರ ಸುಮಾರಿಗೆ ಮನೆಗೆ ಮರಳುತ್ತಿದ್ದರು. ಆ ಸಮಯದಲ್ಲಿ ನನ್ನ ಚಿಕ್ಕಮ್ಮ ಅಲಂಕರಿಸಿಕೊಂಡು ಕೂತಿದ್ದು ಗಂಡ ಬಂದ ಕೂಡಲೇ ಇಬ್ಬರೂ ಹೊರ ತಿರುಗಾಟ ಮಾಡುತ್ತಿದ್ದರು. ಅವರಿಬ್ಬರನ್ನು ನೋಡಿದರೆ ಬೆಳಗ್ಗಿನಿಂದ ಸಂಜೆಯವರೆಗೆ ಬಿಗಿಯಾಗಿ ದುಡಿದು ದಣಿದವರು ಎಂದು ಅನಿಸುತ್ತಲೇ ಇರಲಿಲ್ಲ. 

ನಾವೆಲ್ಲ ಮೈಸೂರಿಗೆ ಹೋಗಿ ಅವರ ಮನೆಯಲ್ಲಿ ವಾರಗಟ್ಟಲೆ ಝಾಂಡಾ ಊರುತ್ತಿದ್ದೆವು. ಚಿಕ್ಕಮ್ಮನ ಕೈಯ್ಯಡುಗೆ ಉಣುವುದೆಂದರೆ ನಮಗೆಲ್ಲ ಇಷ್ಟ. ಬರೀ ನಮಗಲ್ಲ, ಮೈಸೂರಿನಲ್ಲಿ ಸ್ನಾತಕೋತ್ತರ ಪದವಿ ಮಾಡಿದ ನನ್ನೆಲ್ಲಾ ಕಸಿನ್ಸ್ ಅವರ ಮನೆಯ ಖಾಯಂ ಅತಿಥಿಗಳು!



ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆ ನಿಂತ ನನ್ನ ಚಿಕ್ಕಮ್ಮ - ಚಿಕ್ಕಪ್ಪ ನಿಜವಾದ ಅರ್ಥದಲ್ಲಿ ಅವರ ನಿವೃತ್ತ ಬದುಕನ್ನು ಬದುಕತೊಡಗಿದ್ದರು. ಅವರಿಬ್ಬರ ಒಡನಾಟ, ಬದುಕಿನ ಪ್ರೀತಿ ಎಲ್ಲರಿಗೂ ಮಾದರಿಯಾಗಿತ್ತು. ಅವರ ಮೂರೂ ಮಕ್ಕಳು ಸುಂದರವಾಗಿ ಬದುಕು ಕಟ್ಟಿಕೊಂಡಿರುವ ತೃಪ್ತಿ ಚಿಕ್ಕಿಗಿತ್ತು. ಬಹಳ ಸ್ವತಂತ್ರ ಮನೋಭಾವದ ನನ್ನ ಚಿಕ್ಕಿಗೆ ಸ್ವಚ್ಛತೆಯ ಗ್ರಸ್ತತೆ ಇತ್ತು. ಅವರಿಲ್ಲದಿದ್ದರೂ ಅವರ ನೆನಪುಗಳು ನಮ್ಮಲ್ಲಿ ಸದಾ ಹಸಿರಾಗಿರುತ್ತವೆ ಎಂಬುದಂತೂ ನಿಜ. 

Posted 19/12/2025




Thursday, November 13, 2025

ಕಾರವಾರ - ಶೋಭಾ ಲೇಖನ

 ಗುರುವಾರ, 13 ನವಂಬರ, 2025 

ಕಾರವಾರ - ಶೋಭಾ ಲೇಖನ 


ಕಾರವಾರವು ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಒಂದು ಬಂದರು ಪಟ್ಟಣವಾಗಿದೆ. ಪೂರ್ವಕ್ಕೆ ಪಶ್ಚಿಮ ಘಟ್ಟಗಳಿದ್ದು ಕಾರವಾರವು ಕಾಳಿ ನದಿಯ ದಡದಲ್ಲಿದೆ. ಇದರ ಪಶ್ಚಿಮಕ್ಕೆ ಅರೇಬಿಯನ್ ಸಮುದ್ರ ಹರಿಯುತ್ತದೆ. 

1857ರ ಸಿಪಾಯಿ ದಂಗೆಯ ನಂತರದಲ್ಲಿ ಕಾರವಾರ ಪಟ್ಟಣವನ್ನು ಬ್ರಿಟಿಷರು ನಿರ್ಮಿಸಿದರು. ಕಾರವಾರವು ಕಾಡ್-ವಾಡ್ ಪದದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಕೊಂಕಣಿ ಭಾಷೆಯಲ್ಲಿ ಕಾಡ್ ಎಂದರೆ ಕಡೆಯ ಹಾಗೂ ವಾಡ್ ಎಂದರೆ ಸ್ಥಳ ಎಂದರ್ಥ. ಕನ್ನಡದಲ್ಲಿ ‘ ಕೊನೆಯ ನೆರೆಹೊರೆ/ಸ್ಥಳ' ಎಂದರ್ಥವಾಗುತ್ತದೆ. 

ಕಾರವಾರದ ಕಡಲತೀರದಿಂದ ಸುಮಾರು ನಾಲ್ಕು ಕಿಮೀ ದೂರದಲ್ಲಿರುವ ಕೂರ್ಮದ(ಆಮೆಯ) ಆಕಾರದಲ್ಲಿ ಇರುವ ಕೂರ್ಮಗಡ ದ್ವೀಪವು ಪೋರ್ಚುಗೀಸರ ಅಧೀನದಲ್ಲಿ ಇದ್ದು ಸ್ವಾತಂತ್ರ್ಯಾನಂತರದಲ್ಲಿ ಅದೊಂದು ಖಾಸಗಿ ದ್ವೀಪವಾಗಿ ಉಳಿದುಕೊಂಡಿತು. ಇದನ್ನು ಪೋರ್ಚುಗೀಸರು ಸಿಂಟಕೋರ್ ದ್ವೀಪ  ಅಂದರೆ ಆಮೆಯ ಆಕಾರದ ದ್ವೀಪ ಎಂದು ಕರೆದರು. ಇದು ಸುಮಾರು ಮೂವತ್ತೆರಡು ಎಕರೆ ವಿಸ್ತೀರ್ಣ ಹೊಂದಿದ್ದು ಈಗ “ಲಿಟಲ್ ಅರ್ಥ್” ಎನ್ನುವ ಕಂಪೆನಿಯವರು ಇಲ್ಲಿ ಇಪ್ನತ್ಮೂರು ಕಾಟೇಜ್ ಗಳುಳ್ಳ ರೆಸಾರ್ಟ್ ಅನ್ನು ನಡೆಸುತ್ತಿದ್ದಾರೆ. ಈ ದ್ವೀಪವನ್ನು ಕರಮ್ ಧಾರಾ ಎಂದು ಹಾಗೂ ಇಲ್ಲಿ ನರಸಿಂಹ ದೇವರ ಗುಡಿ ಇರುವುದರಿಂದ ನರಸಿಂಹ ಗಡ ಎಂದೂ ಕರೆಯುತ್ತಾರೆ.

ಕಾಳಿ ನದಿಯ ಸೇತುವೆಯ ಬಳಿಯಿಂದ ಫೆರ್ರಿಯೊಂದರಲ್ಲಿ ನಮ್ಮನ್ನು ಸಿಂಟಕೋರ್ ರೆಸಾರ್ಟ್ ನವರು ಕರೆದೊಯ್ಯುತ್ತಾರೆ. ಇದೊಂದು ಕಲ್ಲು ಬಂಡೆಗಳಿಂದ ಕೂಡಿದ ಹಸಿರಿನಿಂದ ಕಂಗೊಳಿಸುವ ದ್ವೀಪವಾಗಿದ್ದು ರೆಸಾರ್ಟ್ ನವರು ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಭಂಗ ಬಾರದಂತೆ ತಮ್ಮ ಕಟ್ಟಡಗಳನ್ನು ಕಟ್ಟಿದ್ದಾರೆ. ಪ್ರಕೃತಿ ಸೌಂದರ್ಯವನ್ನು ಸವಿಯ ಬಯಸುವವರಿಗೆ ಹಾಗೂ ಜಲ ಸಾಹಸ ಮಾಡುವವರಿಗೆ ಇದೊಂದು ಉತ್ತಮ ಆಯ್ಕೆ. ಜೀವ ವೈವಿಧ್ಯ ಇಲ್ಲಿದೆ ಹಾಗೂ ಡಾಲ್ಫಿನ್ ಗಳು ಕೂಡಾ ಕಾಣ ಸಿಗುತ್ತವೆ. 

ನಾನು ಹಾಗೂ ನನ್ನ ಮಗಳು ಅಲ್ಲಿಗೆ ಹೋದಾಗ ಅಲ್ಲಿನ ಶಾಂತತೆ, ಸಮುದ್ರದ ಅಸೀಮ ನೋಟ, ಅಲ್ಲಿನ ವ್ಯವಸ್ಥೆ ಎಲ್ಲವೂ ಖುಷಿ ಕೊಟ್ಟಿತು. ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಸಾಯಂಕಾಲ ಈಜುತ್ತಾ - ಆಟವಾಡುತ್ತಾ - ಕಾಫಿ ಕುಡಿಯುತ್ತಾ ನೋಡಿದ ಸೂರ್ಯಾಸ್ತ ನೆನಪಿನಲ್ಲಿ ಉಳಿಯುವಂತಹುದು. ಸಮುದ್ರಮುಖಿ ಕಾಟೇಜಿನ ಸಿಟ್ ಔಟ್ ನಲ್ಲಿ ಕುಳಿತು ಸುತ್ತಲೂ ಕಾಣುವ ಸಮುದ್ರವನ್ನು ನೋಡುವುದೇ ಕಣ್ಣಿಗೆ ಹಬ್ಬ. ವಿವರಿಸಲು ಬಹಳ ಇಲ್ಲ; ಆದರೆ ಅಲ್ಲಿನ ಪ್ರಶಾಂತತೆ ಹಾಗೂ ಭೌಗೋಳಿಕತೆ ಪದಕ್ಕೂ ಮೀರಿದ ಭಾವವನ್ನು ನೀಡುತ್ತದೆ. ಸ್ವಲ್ಪ ದುಬಾರಿ ಎನಿಸಿದರೂ ಜೀವನದಲ್ಲಿ ಒಮ್ಮೆ ಹೋಗಿ ಉಳಿದು ಬರಲು ಹೇಳಿ ಮಾಡಿಸಿದ ಜಾಗವಿದು!