Showing posts with label RAJYOTSAVA. Show all posts
Showing posts with label RAJYOTSAVA. Show all posts

Sunday, November 16, 2025

ಕನ್ನಡ ರಾಜ್ಯೋತ್ಸವ 2025 - ಶಿವರಾಮ ಕಾರಂತ ವೇದಿಕೆ

 ಭಾನುವಾರ, ನವಂಬರ್ 16, 2025 

ತರಳಬಾಳು ಕೇಂದ್ರ, ಮಿನಿ ಹಾಲ್, ಆರ್. ಟಿ. ನಗರ, ಬೆಂಗಳೂರು. 

ಶಿವರಾಮ ಕಾರಂತ ವೇದಿಕೆಯ ರಾಜ್ಯೋತ್ಸವ ಕಾರ್ಯಕ್ರಮ ಅತಿಥಿ ಗಳಿಂದ ಕನ್ನಡದ ಬಗ್ಗೆ ಭಾಷಣ, ನೃತ್ಯ, ಹಾಡುಗಳಿಂದ ಸಂಪನ್ನ ಗೊಂಡಿತು. 



ನಮಸ್ಕಾರ, 

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಒಂದಷ್ಟು ಕನ್ನಡದ ಬಗ್ಗೆ ಮಾತುಕತೆ.
 ಕನ್ನಡ ಕಲಿಕೆಯ ಸವಾಲುಗಳು ಇದರ ಬಗ್ಗೆ ಮತ್ತು ಕನ್ನಡ ಪ್ರೀತಿಯ ಕುರಿತು ಅತಿಥಿಗಳು ಮಾತಾಡುತ್ತಾರೆ. ಬನ್ನಿ



ಕಾರ್ಯಕ್ರಮವು ನಾಡಗೀತೆಯೊಂದಿಗೆ ಪ್ರಾರಂಭವಾಗಿ, ಕಾರ್ಯದರ್ಶಿ ಮಂಜುಳ ಭಾರ್ಗವಿ ಅವರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು . ವೇದಿಕೆಯ ಉಪಾಧ್ಯಕ್ಷ ವೀರಶೇಖರ ಸ್ವಾಮಿಯವರು ಅತಿಥಿಗಳನ್ನು, ಸಾಭಿಕರನ್ನು ಸ್ವಾಗತಿಸಿದರು. 


ವೇದಿಕೆಯ ಅಧ್ಯಕ್ಷೆ ಡಾ. ದೀಪಾ ಫಡ್ಕೆ ಅವರು ಕನ್ನಡ  ಭಾಷೆ, ಕಲಿಕೆ, ಬಳಕೆಯ  ಬಗ್ಗೆ  ಪ್ರಾಸ್ತಾವಿಕ ನುಡಿಗಳನ್ನು ಆಡಿದರು. 


ಕುಮಾರಿ ಅನ್ವಿತ ಅವಳಿಂದ ಒಂದು ಕನ್ನಡ ಹಾಡಿಗೆ ಸುಂದರವಾದ ನೃತ್ಯ ಪ್ರದರ್ಶನವನ್ನು ಮಾಡಿದಳು. 


ಶ್ರೀಮತಿ ಸಂಧ್ಯಾ ಹೆಗಡೆ ದೊಡ್ಡಹೊಂಡ 

ಶ್ರೀ  ಡುಂಡಿ ರಾಜ್ 

ಶ್ರೀ ಚಿದಂಬರ ಕೋಟೆ ಅವರು ಎರಡು ಕನ್ನಡ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. 



ಸಂಧ್ಯಾ ಹೆಗಡೆ ಅವರು ಕನ್ನಡ ಭಾಷೆ, ಕಲಿಕೆ, ಸವಾಲುಗಳು  ಬಗ್ಗೆ ದೀರ್ಘವಾಗಿ ಭಾಷಣ ಮಾಡಿದರು. 
ಹಾಸ್ಯ ಕವಿ, ನಾಟಕ ಗಾರ ಡುಂಡಿ ರಾಜ್ ಅವರು ತಮ್ಮ ಹನಿ ಕವನಗಳು , ಚುಟುಕುಗಳ ಮೂಲಕ ಸಾಭಿಕರನ್ನು ನಗೆ ಗಡಲಲ್ಲಿ ತೇಲಿಸಿದರು. 




ಶ್ರೀಮತಿ ಚೇತನ ಹೆಗಡೆ ಅವರು ಧನ್ಯವಾದ ಸಮರ್ಪಿಸಿದರು. 
ಕಾರ್ಯದರ್ಶಿ ಶ್ರೀಮತಿ ಮಂಜುಳ ಭಾರ್ಗವಿ ಅವರು ಕಾರ್ಯಕ್ರಮವನ್ನು ಅಚ್ಚ ಕಟ್ಟಾಗಿ ನಿರೂಪಣೆ ಮಾಡಿದರು. 




ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರಿಂದ ವರದಿ:

ನಮಸ್ಕಾರ, ಎಲ್ಲರಿಗೂ. 🙏
ಈ ತಿಂಗಳ ಅಂದರೆ ನವೆಂಬರ್  16 ಭಾನುವಾರ. ಸಂಜೆ ನಾಲ್ಕಕ್ಕೆ ನಮ್ಮ ವೇದಿಕೆಯ ವತಿಯಿಂದ, ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಬಹಳ ಚಂದವಾಗಿ ನೆರವೇರಿತು. ಅದರ  ಕುರಿತು ಒಂದು ವರದಿ.

ಸಂಜೆ ನಾಲ್ಕು ಗಂಟೆ ಹದಿನೈದು ನಿಮಿಷಕ್ಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭವಾಯಿತು. 

ನಮ್ಮ ಕಸ್ತೂರಿ ಕನ್ನಡದ ಕಂಪು ಮತ್ತು ಶಿವರಾಮ ಕಾರಂತ ವೇದಿಕೆಯ ಕಾರ್ಯ ವೈಖರಿಗಳನ್ನು  ಕಲೆ ಹಾಕುತ್ತ ಮಾತಿಗೆ ತೊಡಗಿದೆ. ಮೊದಲಿಗೆ ಕಾರ್ಯಕ್ರಮವನ್ನು ನಾಡಗೀತೆಯ ಮೂಲಕ ಶುಭಾರಂಭ ಮಾಡಿದೆವು. ನಾಡಗೀತೆಯ ಧ್ವನಿಮುದ್ರಣ ದ ಜೊತೆಗೆ ನಾವೆಲ್ಲರೂ ಹಾಡುತ್ತಾ ತಾಯಿ ಭುವನೇಶ್ವರಿ ಗೆ ನಮನಗಳನ್ನು ಸಲ್ಲಿಸಿದೆವು.
ನಂತರ, ಕನ್ನಡದ ಕವಿಗಳು ತಾಯಿ ಭುವನೇಶ್ವರಿ ಯ ಕೀರ್ತಿಯನ್ನು ನೂರಾರು ಹಾಡುಗಳನ್ನು ರಚಿಸುವ ಮೂಲಕ ಅವಳನ್ನು ಸ್ತುತಿಸಿದ್ದಾರೆ. ಅಂತಹ ಒಂದು ಹಾಡಿಗೆ ಮೌಂಟ್ ಕಾರ್ಮೆಲ್ ವಿದ್ಯಾರ್ಥಿನಿ ಕುಮಾರಿ ಅನ್ವಿತಾಳಿಂದ ಕನ್ನಡಾಂಬೆಗೆ ನೃತ್ಯ ನಮನವನ್ನು ಸಲ್ಲಿಸಲಾಯಿತು.

ಸಭಾ ಕಾರ್ಯಕ್ರಮವನ್ನು ಆರಂಭಿಸುತ್ತಾ,ಶಿವರಾಮ ಕಾರಂತ ವೇದಿಕೆ ಮೂರು ದಶಕಗಳಿಂದ  ಕನ್ನಡದ ಕಾರ್ಯಕ್ರಮ ಗಳನ್ನು ಮಾಡುತ್ತಾ ಕನ್ನಡದ ಹಣತೆ ಹಚ್ಚಿಕೊಂಡು ಬಂದಿದೆ. ಇಂದಿನ ಕಾರ್ಯಕ್ರಮ ಕೂಡ ಮತ್ತೊಂದು ಹಣತೆಯೇ ಎಂದು ಹೇಳುತ್ತಾ

ವೇದಿಕೆಗೆ  ಮುಖ್ಯ ಅತಿಥಿಗಳು ಶ್ರೀ ಡುಂಡಿರಾಜ್ ಸರ್ ಅವರು , ಕನ್ನಡ ಕಲಿಕೆಯ ಸವಾಲು ಇದರ ಬಗ್ಗೆ ಉಪನ್ಯಾಸ ನೀಡಲಿರುವ ಸಂಧ್ಯಾ ಹೆಗಡೆ ದೊಡ್ಡ ಹೊಂಡ ಮತ್ತು ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರಾದ ದೀಪಾ ಫಡ್ಕೆಯವರು ವೇದಿಕೆಯನ್ನು ಅಲಂಕರಿಸ ಬೇಕಾಗಿ ಕೋರಿಕೊಳ್ಳಲಾಯಿತು.

ಕಾರ್ಯಕ್ರಮ ದ ಮೊದಲ ಭಾಗವಾದ ಸ್ವಾಗತ ಕೋರುವಿಕೆಯು ನಮ್ಮ ಶಿವರಾಮ ಕಾರಂತ ವೇದಿಕೆಯ ಉಪಾಧ್ಯಕ್ಷರಾದ, ಶ್ರೀ ವೀರಶೇಖರ ಸ್ವಾಮಿ ಸರ್ ರವರಿಂದ ಬಹಳ ಅಚ್ಚುಕಟ್ಟಾಗಿ ಮಾಡಲಾಯಿತು. ಹಾಗೆ ಪ್ರಾಸ್ತಾವಿಕ ನುಡಿಗಳನ್ನಾಡುವುದಕ್ಕೆ, ನಮ್ಮ ವೇದಿಕೆಯ ಅಧ್ಯಕ್ಷರಾದ  ಡಾ.ದೀಪಾ ಫಡ್ಕೆ ಅವರನ್ನು ಕೇಳಿಕೊಳ್ಳಲಾಯಿತು.   ದೀಪಾ ಫಡ್ಕೆ ಅವರು ಕನ್ನಡ ದ ಪ್ರಸ್ತುತ ಪರಿಸ್ಥಿತಿಗಳ ಬಗ್ಗೆ ಮಾತನಾಡಿ ಇಂದಿನ ಪೀಳಿಗೆ ಕನ್ನಡ ಮಾತನಾಡುವ, ಬರೆಯುವ ಓದುವ ಪ್ರಕ್ರಿಯೆ ಯಲಿ ಕಂಡು ಬರುವ ಸವಾಲುಗಳನ್ನು ಕುರಿತು ಮಾತನಾಡಿ ಇದರ ಬಗ್ಗೆ ಉಪನ್ಯಾಸ ಏರ್ಪಡಿಸಿ ಅದರ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎನ್ನುತ್ತಾ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಬಹಳ ಚಂದದ ಪ್ರಾಸ್ತವಿಕ ಮತ್ತು ಸ್ವಾಗತವನ್ನಾಲಿಸಿದ ನಾವುಗಳು, ಅತಿಥಿಗಳ ಭಾಷಣ ಆಲಿಸಲು ಸಿದ್ದರಾದೆವು. 

ಭಾಷೆಯ ವಿಷಯ ಪ್ರಸ್ತಾಪ ಆದಾಗ ಎಲ್ಲಾ ಕನ್ನಡ ಭಾಷೆಯ ವಿದ್ವಾಂಸರ ಅತಿ ದೊಡ್ಡ ಆತಂಕ ಕನ್ನಡ ಭಾಷೆಗಿರುವ ಅಳಿವು ಉಳಿವಿನ ಬಗ್ಗೆ. ಇದರಲ್ಲಿ ಮಕ್ಕಳ ಕಲಿಕೆಯ ಸವಾಲೂ ತುಂಬಾ ದೊಡ್ಡದೇ. ಇದರ ಕುರಿತು ಮಾತಾಡುತ್ತಾರೆ ಡಾ.ಸಂಧ್ಯಾ ಹೆಗಡೆ ದೊಡ್ಡ ಹೊಂಡ. ಸಂಧ್ಯಾ ಅವರ ಸಣ್ಣ ಪರಿಚಯ ಮಾಡುವುದಾದರೆ 

 ಸಂಧ್ಯಾರವರು ಏನ್. ಎಂ. ಕೆ. ಆರ್. ವಿ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು
ಸಂಧ್ಯಾ ಹೆಗಡೆ ದೊಡ್ಡಹೊಂಡ ರವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ದೊಡ್ಡಹೊಂಡದವರು. ಸಂತೆಗುಳಿ.ಅರೆ ಅಂಗಡಿಯಲ್ಲಿ ಪ್ರಾಥಮಿಕ ಶಿಕ್ಷಣದ ನಂತರ, ಹೊನ್ನವರ ಧಾರವಾಡಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದ್ದು, ಶಂಕರ ಮೊಕಾಶಿ ಪುಣೆಕರ್ ರವರ, ಗಂಗವ್ವ ಗಂಗಾಮಯಿ ಕೃತಿಯ ಮೇಲೆ, ಸಂಪ್ರಬಂಧ ರಚಿಸಿದ್ದಾರೆ. " ಆಧುನಿಕ ಕನ್ನಡ ಸಾಹಿತ್ಯ ಮೀಮಾಂಸೆ. ಕಾವ್ಯ "ಸಂಶೋಧನಾ ಮಹಾಪ್ರಬಂಧವನ್ನು ಕರ್ನಾಟಕ ವಿಶ್ವ ವಿದ್ಯಾಲಯಕ್ಕೆಸಲ್ಲಿಸಿ ಪಿ. ಎಚ್. ಡಿ. ಪಡೆದಿದ್ದಾರೆ.

ಕಥೆ, ಕವನ, ವಿಮರ್ಶೆ, ಸಂಶೋಧನ ಲೇಖನಗಳನ್ನು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ನಾವು ಕಾಣಬಹುದು.' ಪೂರ್ಣದೆಡೆಗೆ, ಅರಿವಿನೆಡೆಗೆ, ಕನಸು, ಸಂಪಾದಿತ ಕೃತಿಗಳು.' ಗುಲಾಬಿ ಕಚ್ಚಿನ ಬಳೆಗಳು' ಕಥಾ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಲೇಖಕ ಚೊಚ್ಚಲ ಕೃತಿ ಸಹಾಯ ಧನ, ಕನ್ನಡ ಸಾಹಿತ್ಯ ಪರಿಷತ್ತು ನೀಡುವ, ಮಲ್ಲಿಕಾ ದತ್ತಿ ಪ್ರಶಸ್ತಿ, ಕೆ. ಎಸ್. ನ. ಟ್ರಸ್ಟ್ ನ ಅಧ್ಯಯನ ಪುರಸ್ಕಾರ ಸಂಧಿವೆ. ಸದ್ಯ ಏನ್. ಎಂ. ಕೆ. ಆರ್. ವಿ ಮಹಿಳಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಓದು, ಚೆಸ್, ಸಂಗೀತ, ಇವು ಸಂಧ್ಯಾ ಹೆಗಡೆ ಅವರ ನೆಚ್ಚಿನ ಹವ್ಯಾಸಗಳಾಗಿವೆ. 

ಸಂಧ್ಯಾ ರವರು ಕನ್ನಡ ಭಾಷಾಭಿಮಾನದ  ಬಗ್ಗೆ,  ಕನ್ನಡ ಭಾಷೆಯ ಅಳಿವು ಉಳಿವುಗಳ ಬಗ್ಗೆ ನಾಗರಿಕರಾಗಿ ನಾವು ಕೈಗೊಳ್ಳಬಹುದಾದ ಕ್ರಮಗಳು, ಮಕ್ಕಳ ಮನಸ್ಥಿತಿಯಲ್ಲಿ ಒಂದು ಭಾಷೆ ಹೇಗೆ ಸ್ಥಾನ ಗಳಿಸಬಲ್ಲದು,? ಮತ್ತು ತಂದೆ ತಾಯಿಗಳಾಗಿ ಮಕ್ಕಳಿಗೆ ಭಾಷೆಗಳ ವಿಷಯದಲ್ಲಿ ಹೇಗೆ ಸಹಾಯಕರಾಗಿ ನಿಲ್ಲಬಹುದು, ಶಿಕ್ಷಕರಾಗಿ ಮಕ್ಕಳಲ್ಲಿ ಹೇಗೆ ಕನ್ನಡ ಭಾಷೆಯ ಸಸಿಯನ್ನು ನೆಟ್ಟು, ಅದನ್ನು ಪೋಷಿಸಿ ಸಮಾಜಕ್ಕೆ ಒಳ್ಳೆಯ ಫಲಗಳನ್ನು ಕೊಡುವಂತ ಹೆಮ್ಮರಗಳನ್ನಾಗಿಸುವುದು, ಈ ಎಲ್ಲಾ ವಿಷಯಗಳ ಬಗ್ಗೆ ಬಹಳ ಚಂದದ,ತಾರ್ಕಿಕ,  ವಿಷಯಗಳನ್ನು ಚರ್ಚೆ ಮಾಡುತ್ತಾ, ಇಂದಿನ ಕನ್ನಡ ಕಲಿಕೆಯಲ್ಲಿ ತಲೆದೋರಿರುವ ಬಿಕ್ಕಟ್ಟುಗಳ ಬಗ್ಗೆ ವಿವರಿಸುತ್ತಾ ಅತ್ಯಂತ ಗಂಭೀರವಾಗಿ ಎಳೆ ಎಳೆಯಾಗಿ ಸಭೆಯ ಮುoದಿಟ್ಟರು. ನಿಜಕ್ಕೂ ಮತ್ತೊಂದು ಸಭೆಯಲ್ಲಿ ಈ ವಿಷಯದ ಬಗ್ಗೆ ಮತ್ತಷ್ಟು ಚರ್ಚೆಗಳಾಗಲಿ ಎನ್ನುವ ಬಯಕೆಯನ್ನು ಹೊತ್ತು, ಅತ್ಯಂತ ಗಹನ ವಿಚಾರಗಳನ್ನು ಹಂಚಿದ ಸoಧ್ಯಾ ಮೇಡಂ ರವರಿಗೆ ಹೃದಯದ ಅಂತರಾಳದಿಂದ  ಧನ್ಯವಾದಗಳು.

ನಂತರ ಶ್ರೀ ಚಿದಂಬರ ಕೋಟೆಯವರ ಕಂಠಸಿರಿಯಲ್ಲಿ ಕಾವೇರಿಗೆ ಕಾಲುಂಗುರ ತೊಡಿಸಿ ಮತ್ತು ಕನ್ನಡ ನಾಡಿನ ಜೀವನದಿ ಈ ಕಾವೇರಿ ಎಂಬ ಹಾಡುಗಳನ್ನು ಕೇಳಿ ಬಹಳ ಆನಂದ ತುಂದಿಲರಾದೆವು. ನಿಜಕ್ಕೂ ಅವರ ಸಂಗೀತದ ಪಯಣ ಬಹಳ ಹೆಮ್ಮೆಯಿಂದ ಸಾಗುವ ದೋಣಿಯoತಾಗಲಿ. ಎಂದು ಸಭೆಯ ಪರವಾಗಿ ಹಾರೈಕೆಗಳು.
ಮುಂದೆ ಮಾತನಾಡಿದ ಕವಿ ನಾಟಕಕಾರ ಶ್ರೀ ಡುಂಡಿರಾಜ್ ಅವರು  ಹಾಸ್ಯ ದ ಮೂಲಕ ಕನ್ನಡ ಪ್ರೀತಿಯನ್ನು ಉಳಿಸುವ ಬೆಳೆಸುವ ಬಗ್ಗೆ ತಮ್ಮ ಎಂದಿನ ಶೈಲಿಯಲ್ಲಿ ಮಾತಾಡಿದರು.....
. ದುಂಡಿರಾಜ್ ರವರ ಮಾತುಗಳೆಂದರೆ ಕೇಳಬೇಕೇ? ನಗೆಗಡಲಲ್ಲಿ ತೇಲುತ್ತಾ ಸಾಗಿದ ಸಭೆಗೆ ಸಮಯ ಹೋಗಿದ್ದೆ ತಿಳಿಯಲಿಲ್ಲ. ಹೊಟ್ಟೆಯ ಹಸಿವಿಗೆ ಊಟವಿದೆ, ಸಾಹಿತ್ಯದ ಹಸಿವಿಗೆ ನಮ್ಮ ಶಿವರಾಮ ಕಾರಂತರ ವೇದಿಕೆಯಿದೆ ಎನ್ನುವ ಮಾತು ನೆನಪಾಗದೆ ಇರಲಿಲ್ಲ. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರ ಮುಖದಲ್ಲಿ ಅತ್ಯಂತ ಸೊಗಸಾದ ಮಂದಹಾಸದ ನವಿರು ಎದ್ದು ಕಾಣುತಿತ್ತು.   ಕೊನೆಯದಾಗಿ ಚೇತನಾ ಹೆಗಡೆಯವರು ಭಾವ ತುಂಬಿದ ಪದಗಳಿಂದ ಕೂಡಿದ ಧನ್ಯವಾದ ಸಮರ್ಪಣೆಯೊಂದಿಗೆ, ಅತಿಥಿಗಳನ್ನು ಸನ್ಮಾನಿಸಲಾಯಿತು.ಒಂದು ಅತ್ಯಂತ ತಣ್ಣನೆಯ ಸವಿ ಸಂಜೆಗೆ ಕಾರಣರಾದ ಎಲ್ಲರಿಗೂ ವಂದಿಸುತ್ತಾ..


ಬರೆದಿರುವುದು 17/11/2025 

























Sunday, November 2, 2025

ಕನ್ನಡ ರಾಜ್ಯೋತ್ಸವ 2025

 ಶನಿವಾರ, ನವಂಬರ್ 1, 2025 

ಕುಮಾರ್ ಆರ್ಬಣ ಐ ಲೈಫ್ ಅಪಾರ್ಟ್ಮೆಂಟ್ , ದೇವರಬಿಸನ ಹಳ್ಳಿ, ಬೆಂಗಳೂರು. 

ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ರಶಿ-ಕವಿತಾ ಇರುವ ಅಪಾರ್ಟ್ಮೆಂಟ್ ನ ಆವರಣದಲ್ಲಿ ಆಚರಿಸಿದೆವು. 






ಬೆಳಿಗ್ಗೆ 10 ಗಂಟೆಗೆ ಧ್ವಜಾರೋಹಣದ ನಂತರ ಪುಟ್ಟ ಮಕ್ಕಳಿಂದ ನೃತ್ಯ, ಪುನಃ ಸ್ವಲ್ಪ ದೊಡ್ಡ ಮಕ್ಕಳಿಂದ ನೃತ್ಯ, ಹಾಡುಗಳು ಇತ್ಯಾದಿ ಮನರಂಜನೆ ಕಾರ್ಯಕ್ರಮ ನಡೆಯಿತು. 






ಕಾರ್ಯಕ್ರಮ ಸುಮಾರು 45 ನಿಮಿಷಗಳ ಕಾಲ ನಡೆದು ನಂತರ ಬೆಳಗಿನ ಫಲಾಹಾರದ ವ್ಯವಸ್ತೆ ಯೂ ಇತ್ತು

ಜೈ ಹಿಂದ್,  ಜೈ ಭುವನೇಶ್ವರಿ,.. ಜೈ ಕರ್ನಾಟಕ.. 

ತದ ನಂತರ ನಾವು ಶುಭಳ ಮನೆಗೆ (ಎಚ್ಊ.ಎಸ್. ಆರ್. ಬಡಾವಣೆ ) ಊಟಕ್ಕೆ ಹೋದೆವು. 




Posted 2/11/2025 
 













 















Sunday, November 10, 2024

ಕನ್ನಡ ರಾಜ್ಯೋತ್ಸವ 2024 - ಶಿವರಾಮ ಕಾರಂತ ವೇದಿಕೆ.

 ಭಾನುವಾರ, ನವಂಬರ 10, 2024,  ಬೆಳಿಗ್ಗೆ 10 ಗಂಟೆಗೆ 

ವಿನಾಯಕ ದೇವಸ್ತಾನ, ಅರ್. ಟಿ. ನಗರ, ಬೆಂಗಳೂರು.

ಕನ್ನಡ ರಾಜ್ಯೋತ್ಸವ 2024

ಶಿವರಾಮ ಕಾರಂತ ವೇದಿಕೆ, ವಿನಾಯಕ ದೇವಸ್ತಾನ, ಮಂಥನ, ಇವರ ಜಂಟಿ ಆಶ್ರಯದಲ್ಲಿ ರಾಜ್ಯೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಸಂಪನ್ನ ಗೊಂಡಿತು.

ಶ್ರೀ ಬೈರಮಂಗಲ ರಾಮೇ ಗೌಡ 

ದೀಪ ಬೆಳಗುವಿಕೆ 

ಅರ್.ಟಿ. ನಗರ ಮಹಿಳೆಯರಿಂದ ನಾಡ ಗೀತೆ, ದೀಪ ಬೆಳಗುವಿಕೆ, ವೀರಶೇಖರ ಸ್ವಾಮಿ ಅವರಿಂದ ಸ್ವಾಗತ, ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷೆ ಡಾ. ದೀಪಾ ಫಡ್ಕೆ ಅವರಿಂದ ಪ್ರಸ್ತಾವಿಕ ಭಾಷಣ, ನಂತರ ಮುಖ್ಯ ಅತಿಥಿ ಶ್ರೀ ಬೈರಮಂಗಳ ರಾಮೇ ಗೌಡರಿಂದ ಉದ್ಘಾಟನಾ ಭಾಷಣ ನೆರವೇರಿತು.

ನಾಡ ಗೀತೆ 

ಅಧ್ಯಕ್ಷೆ ಡಾ ದೀಪಾ ಫಡ್ಕೆ 



ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ತಮ್ಮ ಭಾಷಣದಲ್ಲಿ ಕನ್ನಡ ಬಗ್ಗೆ ಕನ್ನಡಿಗರ ತಿರಸ್ಕಾರ, ಕನ್ನಡವನ್ನು ಬಳಸಿ, ಬೆಳೆಸಿ, ಉಳಿಸುವುದರ ಬಗ್ಗೆ ಸೊಗಸಾಗಿ  ಮಾತನಾಡಿದರು.


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳಿಂದ ನೃತ್ಯ, ಹಾಗೂ ಹಾಡಿನ ಕಾರ್ಯಕ್ರಮ ಚೆನ್ನಾಗಿ ನಡೆಯಿತು.




ನಾಲ್ಕು ಜನ ಗಣ್ಯರಿಗೆ - ಶ್ರೀ ಚಂದ್ರಶೇಖರ ಚಡಗ, ಶ್ರೀ ಭೋಜಪ್ಪ, ಶ್ರೀ ಲಕ್ಷ್ಮಿ ನಾರಾಯಣ್. ಶ್ರೀ ರಿಜಿ ಮೊಯಿನುದ್ದೀನ್ ಇವರಿಗೆ ವಿವಿಧ ಕ್ಷೇತ್ರಗಳಲ್ಲಿ , ಸಮಾಜಕ್ಕೆ ಕೊಡುಗೆಗಾಗಿ ಸನ್ಮಾನಿಸಲಾಯಿತು.

ಹಿರಿಯರಿಗೆ ಗೌರವ ಸನ್ಮಾನ 


ಶ್ರೀಯುತ ವೀರಶೇಖರ ಸ್ವಾಮಿಯವರ ನೇತ್ರತ್ವದಲ್ಲಿ ಕಾರ್ಯಕ್ರಮವು ಸುಗಮವಾಗಿ, ಅಚ್ಚುಕಟ್ಟಾಗಿ ನೆರವೇರಿತು.

ಪ್ರಜಾವಾಣಿ, 11/11/2024

ವಿಶ್ವವಾಣಿ

ಅವರಿಗೆ ಎಲ್ಲರ ಪರವಾಗಿ ಹಾರ್ದಿಕ ಅಭಿನಂದನೆಗಳು.


Nalini, Satybhama, Bhuvaneshwari

ವಿನಾಯಕ ದೇವಸ್ಥಾನದಿಂದ ಪ್ರಸಾದ (ಮೊಸರನ್ನ, ಪುಳಿಯೋಗರೆ, ಕೇಸರಿಬಾತ್ ) ವಿತರಣೆಯಾದ ನಂತರ ಕಾರ್ಯಕ್ರಮ ಮುಕ್ತಾಯವಾಯಿತು.

ವರದಿ :ಮಂಜುಳಾಭಾರ್ಗವಿ ( ಕಾರ್ಯದರ್ಶಿ.ಶಿವರಾಮ ಕಾರಂತ ವೇದಿಕೆ )

ಎಲ್ಲರಿಗೂ ನಮಸ್ಕಾರ... ತರಳಬಾಳು ಶಿವರಾಮ ಕಾರಂತ ವೇದಿಕೆ. ಹಾಗೂ ಶ್ರೀ ವಿನಾಯಕ ದೇವಸ್ಥಾನ ಸಮಿತಿ ಮತ್ತು ಮಂಥನ ಇವರ ಸಹಯೋಗದಲ್ಲಿ ನಡೆದ 69 ನೇ ಕನ್ನಡ ರಾಜ್ಯೋತ್ಸವದ ಒಂದು ವರದಿ.
ಶಿವರಾಮ ಕಾರಂತ ವೇದಿಕೆಯು  ಶ್ರೀ ಚಂದ್ರಶೇಖರ ಚಡಗರವರ ಪ್ರೀತಿಯ ಕನಸು. ಸುಮಾರು ಮೂವತ್ತು ವರ್ಷಗಳಿಂದ ಹಲವಾರು ಸುಪ್ರಸಿದ್ದ ಕವಿ, ಸಾಹಿತಿ, ಮಹೋದಯರನ್ನು ಸಭೆಗೆ ಕರೆಸಿ, ಅತ್ಯುನ್ನತ ಉಪನ್ಯಾಸಗಳನ್ನು ಹಾಗೂ ಸಾಹಿತ್ಯ ಚಟುವಟಿಕೆಗಳನ್ನು ನಡೆಸಿ ಕೊಡುತ್ತಾ ಬಂದಿದೆ. ಹಾಗೆ ಈ ದಿನ ರಾಜ್ಯೋತ್ಸವದ ಅಂಗವಾಗಿ ನಮ್ಮ ಬಿ. ಎಂ. ಶ್ರೀ ಪ್ರತಿಷ್ಠಾನದ ಅಧ್ಯಕ್ಷರು, ಸಾಹಿತ್ಯ ಪ್ರಿಯರೂ ಆದ ಡಾ.ಶ್ರೀ ಭೈರಮಂಗಲ ರಾಮೇಗೌಡರು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲು ಆಗಮಿಸಿ, ಕಾರ್ಯಕ್ರಮದ ಕಡೆಯ ಘಟ್ಟದವರೆಗೂ ನಮ್ಮ ಜೊತೆಯಲ್ಲಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲು ತಮ್ಮ ಕೈ ಜೋಡಿಸಿದ್ದು ನಿಜಕ್ಕೂ ನಮ್ಮ ಅದೃಷ್ಟವೇ ಸರಿ. ಕಾರ್ಯಕ್ರಮ ನಾಡಗೀತೆಯೊಂದಿಗೆ ಪ್ರಾರಂಭವಾಗಿ,ಶಿವರಾಮ ಕಾರಂತರ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಡಾ. ದೀಪಾ ಫಡ್ಕೆ ಯವರು ಹಾಗೂ ವೇದಿಕೆಯ ಪದಾಧಿಕಾರಿಗಳು ಉಪಾಧ್ಯಕ್ಷರು, ಕೋಶಧಿಕಾರಿಗಳು, ಕಾರ್ಯದರ್ಶಿಗಳನ್ನು ಒಳಗೊಂಡಂತೆ, ಭೈರಮಂಗಲ ರಾಮೇಗೌಡರ ನೇತೃತ್ವದಲ್ಲಿ ದೀಪ ಬೆಳಗುವ ಕಾರ್ಯ ಸರಾಗವಾಗಿ ಜರುಗಿತು.. ಹಲವು ಶಾಲಾ ಮಕ್ಕಳು ಮತ್ತು ಅಲ್ಲಿನ ಸ್ಥಳೀಯರು ಅದಕ್ಕೆ ಸಾಕ್ಷಿಯಾದದ್ದು ಕಾರ್ಯಕ್ರಮಕ್ಕೆ ಮೆರುಗು ತಂದು ಕೊಟ್ಟಿತ್ತು.ಮೊದಲಿಗೆ ಪ್ರಾಸ್ತಾವಿಕ ನುಡಿಗಳೊಂದಿಗೆ, ಸ್ವಾಗತ ಭಾಷಣವನ್ನು ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷೆ  ಡಾ. ದೀಪಾ ಫಡ್ಕೆ ಅವರು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದರು.ತಮ್ಮ ರಸವತ್ತಾದ ಮಾತುಗಳ ಮೂಲಕ, ಕನ್ನಡ ಭಾಷೆಯನ್ನು ಇನ್ನಷ್ಟು ಮೇರು ಮಟ್ಟಕ್ಕೆ ಕೊಂಡೊಯ್ಯುವ ಬಗ್ಗೆ, ಹಾಗೂ ತಮ್ಮ ಗ್ರಾಮೀಣ ಬದುಕಿನಲ್ಲಿ ಕನ್ನಡದ ಮಹತ್ವ, ಕನ್ನಡ ಭಾಷೆಯ ಉಳಿವಿಗಾಗಿ ಸಾರ್ವಜನಿಕರಾಗಿ, ಕರ್ನಾಟಕದ ಪ್ರಜೆಗಳಾಗಿ ನಾವೆಲ್ಲರೂ ಮಾಡಲೇ ಬೇಕಾದ ಕೆಲವು ಆದ್ಯ ಕರ್ತವ್ಯಗಳ ಬಗ್ಗೆ ನೆರೆದಿದ್ದ ಜನರನ್ನು ಎಚ್ಚರಿಸಿದರು. ಅಷ್ಟೇ ಅಲ್ಲದೆ ತಾವು ವಾಸ ಮಾಡುತ್ತಿರುವ ಸ್ಥಳದ ಬಗ್ಗೆ ಅತ್ಯಂತ ಸ್ವಾರಸ್ಯಕರವಾದ ಮಾತುಗಳನ್ನು ಹೇಳುತ್ತಾ, ಹಿರಿಯ ಸಾಹಿತಿಗಳಾದ ಪುರುಷೋತ್ತಮ ಬಿಳಿಮಲೆ ಅವರ ಕೆಲವು ಮಾತುಗಳನ್ನು ನೆನಪಿಸಿ ಕೊಳ್ಳುತ್ತಾ, ಕನ್ನಡ ಭಾಷೆಯನ್ನು,ಬೆಳೆಸುವ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿಯನ್ನು ತಿಳಿಸಿದರು. ನಂತರ ಬಿ. ಎಂ. ಶ್ರೀ. ಪ್ರತಿಷ್ಠಾನದ ಅಧ್ಯಕ್ಷರ ನುಡಿಗಳಿಗಾಗಿ ಕಾದು ಕುಳಿತಿದ್ದ ಜನರನ್ನು ನಿರಾಸೆಗೊಳಿಸದಂತೆ, ತಮ್ಮ ವಾಕ್ಚಾತುರ್ಯದಿಂದ ಕನ್ನಡದ ಸೊಬಗನ್ನು ಮತ್ತಷ್ಟು ಸುಂದರವಾಗಿಸಿದರು. ಕನ್ನಡ ಭಾಷಿಕರೆಂದೇ ಕರೆಸಿಕೊಂಡವರು, ಕನ್ನಡಮ್ಮನಿಗೆ ಮಾಡುತ್ತಿರುವ ಭಾಷಾ ನಿರ್ಲಕ್ಷ, ಪರಭಾಷೆಯನ್ನು ಪರೋಕ್ಷವಾಗಿ ನಾವು ಬೆಳೆಸುತ್ತಿರುವ ಪರಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಹಲವಾರು ಜನಾಂಗದ ಜನರು ಇಲ್ಲಿಗೆ ಬರುತ್ತಾರೆ, ತಮ್ಮ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಾ ನಮ್ಮ ಗ್ರಹಿಕೆಗೂ ಮೀರಿ,ತಮ್ಮ ಜೀವನಗಳನ್ನು ಕಟ್ಟಿ ಕೊಂಡು ತಮ್ಮ ಸ್ವಂತ ಹಳ್ಳಿ, ಊರುಗಳಿಗೆ ತೆರಳುತ್ತಾರೆ, ಭಾರತ ಒಂದು ಒಕ್ಕೂಟ ರಾಷ್ಟವಾದ ಕಾರಣ ವಲಸಿಗರನ್ನು ನಮ್ಮ ಕರ್ನಾಟಕಕ್ಕೆ ಬಾರದಂತೆ ತಡೆಯುವುದು ಅತ್ಯಂತ ಕಷ್ಟಕರ ಪರಿಸ್ಥಿತಿ, ಎಂದು ತಮ್ಮ ನಿರಾಸೆಯನ್ನು ಹೊರ ಹಾಕಿದರು.ಅಷ್ಟೇ ಅಲ್ಲದೆ ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಹವಾಮಾನ, ಇಲ್ಲಿನ ಭೌಗೋಳಿಕ ವ್ಯವಸ್ಥೆ ಎಲ್ಲವೂ ಅನೇಕರನ್ನು ಆಕರ್ಷಿಸಿದೆ.ಇದರಿಂದ ಅನೇಕ ವಲಸಿಗರು ಬೆಂಗಳೂರನ್ನು ಆಯ್ಕೆ ಮಾಡಿ ಕೊಂಡಿದ್ದಾರೆ. ಮತ್ತು ಇದು ಯಾವುದೊ ಒಂದು ಕಾರಣಕ್ಕೆ ಇಷ್ಟವಾಗಿ, ಹಲವಾರು ವರ್ಷಗಳ ಕಾಲ ಜನ ಇಲ್ಲೇ ವಾಸ ಇದ್ದರೂ ಕೂಡ, ಕನ್ನಡವನ್ನು ಕಲಿಯದೇ ಒಂದು ರೀತಿಯ ಅಸಡ್ಡೆ ತೋರುತ್ತಿದ್ದಾರೆ.ನಮ್ಮ ಜನರು ಯಾರ್ಯಾರು ಯಾವ ಭಾಷೆಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೋ ಆಯಾ ಭಾಷೆಗಳಲ್ಲಿಯೇ ಇಲ್ಲಿನ ಸ್ಥಳೀಯರು ಉತ್ತರ ಕೊಡುತ್ತಿದ್ದಾರೆ ಎಂಬ ಕಳವಳವನ್ನು ವ್ಯಕ್ತಪಡಿಸಿದರು. ಕನ್ನಡವನ್ನು ಉಳಿಸಿ, ಬೆಳೆಸುವ, ನಿಟ್ಟಿನಲ್ಲಿ ನಮ್ಮ ಜವಾಬ್ದಾರಿಯು ಅತ್ಯಂತ ಅನಿವಾರ್ಯವಾಗಿದೆ, ಇದು ಪ್ರತಿಯೊಂದು ಮನೆ ಮನೆಯ ಭಾಷೆಯಾಗಬೇಕೆ ಹೊರತು ವರ್ಷಕ್ಕೊಮ್ಮೆ ವೇದಿಕೆಗಳಲ್ಲಿ ಮಾಡುವ ಭಾಷಣಗಳಾಗಬಾರದು ಎನ್ನುವುದನ್ನು ಅತ್ಯಂತ ಸರಳವಾಗಿಯೂ, ಹಾಗೂ ಅತ್ಯಂತ ವಿನಯವಾಗಿಯೂ, ಪರೋಕ್ಷವಾಗಿ ಹೇಳಿದರು.ಸಾಮಾನ್ಯವಾಗಿ ಭಾಷಣಗಳೆoದರೆನೇ ಜನರು ಕಿವಿಗೊಟ್ಟು ಕೇಳದ ಈ ಕಾಲದಲ್ಲಿ, ನೆರೆದಿದ್ದ ಪ್ರತಿಯೊಬ್ಬರೂ ಒಂದೊಂದು ಮಾತುಗಳನ್ನು ಚಾಚುತಪ್ಪದೆ ಕೇಳಿಸಿ ಕೊಳ್ಳುತ್ತಿದ್ದುದ್ದು ಅವರ, ಮಾತಿನ ಶೈಲಿ, ಸ್ವಾರಸ್ಯಕರ ಘಟನೆಗಳ ಕುರಿತು, ಮಾಡಿದ ಪದಬಳಕೆ ಇವೆಲ್ಲವನ್ನು ಸಾಕ್ಷೀಕರಿಸುತ್ತಿದ್ದವು. ಸಭೆಗೆ ಶೋಭೆ ತರುವಂತಾ ನುಡಿಗಳಿಂದ ಎಲ್ಲರನ್ನು ಮೂಕ ವಿಸ್ಮಿತರನ್ನಾಗಿಸಿದ್ದವು. ಇದಾದ ನಂತರ ಹಲವಾರು ಮಕ್ಕಳ ನೃತ್ಯ ಹಾಗೂ ಕಲಾವಿದರ ಹಾಡುಗಳು ಕಾರ್ಯಕ್ರಮಕ್ಕೆ ಮುಡಿಸಿದ ಗರಿಗಳoತಿದ್ದವು. ಕಾರ್ಯಕ್ರಮದ ನಡುವೆ ಕನ್ನಡಾಂಬೆಯ ಹಾಡುಗಳಿಗೆ ಎಲ್ಲರ ದನಿಗೂಡಿದವು.ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದ ಸಮಾಧಾನ ಎಲ್ಲರ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಶ್ರೀ ವೀರಶೇಖರ ಸ್ವಾಮಿ (ಉಪಾಧ್ಯಕ್ಷ) - ವರದಿ 

ಕಾರ್ಯಕ್ರಮ ಮುಗಿದ ನಂತರ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು

Posted 14/11/2024


Saturday, November 2, 2024

ಕನ್ನಡ ರಾಜ್ಯೋತ್ಸವ - 2024

 ಶುಕ್ರವಾರ, ನವಂಬರ 1, 2024

ಕನ್ನಡ ಭವನ, ಕಾಫೀ ಬೋರ್ಡ್ ಬಡಾವಣೆ, ಕೆಂಪಾಪುರ, ಬೆಂಗಳೂರು.



ಬೆಂಗಳೂರಿನ ಕಾಫಿ ಬೋರ್ಡ್ ಬಡಾವಣೆಯ ಕನ್ನಡ ಭವನದ ಮುಂಬಾಗದಲ್ಲಿ, ಕನ್ನಡ ಸಾಹಿತ್ಯ ಪರಿಷತ್, ಬ್ಯಾಟರಾಯನಪುರ ಘಟಕದ ವತಿಯಿಂದ ಹಾಗೂ ಸ್ಥಳೀಯ ನಾಗರಿಕರ ಸಮ್ಮುಖದಲ್ಲಿ ಬೆಳಿಗ್ಗೆ 8 ಗಂಟೆಗೆ  69ನೇ ಕನ್ನಡ ರಾಜ್ಯೋತ್ಸವವನ್ನು ಧ್ವಜಾರೋಹಣದ ಮೂಲಕ ಆಚರಿಸಲಾಯಿತು.


ಪುಷ್ಪಾರ್ಚನೆ 

ಅಧ್ಯಕ್ಷ ಶ್ರೀಯುತ ರೇಣುಕಾ ಹೆಗಡೆಯವರು ಕಾರ್ಯಕ್ರಮವನ್ನು ನೆರವೇರಿಸಿದರು. ನಂತರ ಅವರು ಮಾತನಾಡುತ್ತ 1956 ನವಂಬರ್ 1 ರಂದು ಭಾಷಾವಾರು ಪ್ರಾಂತಗಳಾಗಿ  ವಿಭಜನೆಗೊಂಡು ಮೈಸೂರು ರಾಜ್ಯ ಎಂದು ಹೆಸರುಗೊಂಡು, 1973 ರಲ್ಲಿ ಕರ್ನಾಟಕ ರಾಜ್ಯ ಎಂದು ಮರು ನಾಮಕರಣ ಮಾಡಲಾಯಿತು.


ಬೆಂಗಳೂರಿನಲ್ಲಿ ಅನ್ಯ ಭಾಷಿಕರು ಬಹಳಷ್ಟು ಸಂಖ್ಯೆಯಲ್ಲಿ ನೆಲೆಸಿರುವುದರಿಂದ, ಕನ್ನಡ ಭಾಷೆಯನ್ನೂ ಕಡೆಗಣಿಸಲಾಗುತ್ತಿದೆ. ಕನ್ನಡವನ್ನು ಉಳಿಸಿ, ಬಳಸಿ, ಬೆಳೆಸಿ, ಕನ್ನಡವನ್ನೇ ಮಾತನಾಡಿ, ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪ್ರತಿಪಾದಿಸಿದರು.

ತಾಯಿ ಭುವನೇಶ್ವರಿಗೆ, ಎಲ್ಲರಿಂದ ಪುಷ್ಪಾರ್ಚನೆಯಾದ ನಂತರ ಕಾರ್ಯಕ್ರಮ ಮುಕ್ತಾಯವಾಯಿತು. 

ಕಾಫಿ ಬೋರ್ಡ್ ಬಡಾವಣೆ 

Posted 2/11/2024

Thursday, November 2, 2023

ಕನ್ನಡ ರಾಜ್ಯೋತ್ಸವ 2023 - ಕಾಫಿ ಬೋರ್ಡ್ ಬಡಾವಣೆ

 ಬುಧವಾರ, ನವಂಬರ್ 1, 2023 

ಕಾಫಿ ಬೋರ್ಡ್ ಬಡಾವಣೆ, ಕೆಂಪಾಪುರ, ಬೆಂಗಳೂರು.




ಈ ಬಾರಿಯ ರಾಜ್ಯೋತ್ಸವದ ಧ್ವಜಾರೋಹಣದ ಕಾರ್ಯಕ್ರಮ, ಕನ್ನಡ ಭವನದ ಸಾರ್ವಜನಿಕ ಗ್ರಂಥಾಲಯದ ಎದುರು ಸಂಪನ್ನ ಗೊಂಡಿತು.



ಬೆಳಿಗ್ಗೆ 8 ಗಂಟೆಗೇ, ಹಲವಾರು ಕನ್ನಡಾಭಿಮಾನಿಗಳು ಗ್ರಂಥಾಲಯದ ಎದುರು ನೆರೆದಿದ್ದು, ಸಂಭ್ರಮದ ವಾತಾರವಣ ನೆಲೆಸಿತ್ತು.




ಕನ್ನಡ ಸಾಹಿತ್ಯ ಪರಿಷತ್ , ಬ್ಯಾಟರಾಯನಪುರ ಘಟಕದ ಅದ್ಯಕ್ಷ ಶ್ರೀ ರೇಣುಕಾ ಹೆಗಡೆಯವರು ಧ್ವಜಾರೋಹಣ ಮಾಡಿ, ಕನ್ನಡ ಧ್ವಜಕ್ಕೆ ಗೌರವ ಸಮರ್ಪಣೆ  ಮಾಡಲಾಯಿತು.


ನಂತರ ನಾಡಗೀತೆ, ಜನಗಣ ಮನ ಹಾಡುಗಳನ್ನು ಸಾಮೂಹಿಕವಾಗಿ ಹಾಡಲಾಯಿತು.

ಕನ್ನಡ ದೇಶ ಭಕ್ತಿ ಗೀತೆಗಳನ್ನು ನುಡಿಸಲಾಯಿತು.


ಇನ್ನೊಮ್ಮೆ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

Posted 2/11/2023