Showing posts with label AUTOBIOGRAPHY. Show all posts
Showing posts with label AUTOBIOGRAPHY. Show all posts

Thursday, May 30, 2024

ನನ್ನ ದೈನಂದಿನ ಯೋಗಾಭ್ಯಾಸ ದಿನಚರಿ.

ದೈನಂದಿನ ಯೋಗಾಭ್ಯಾಸ ದಿನಚರಿ.

ಬೆಳಿಗ್ಗೆ ಸುಮಾರಾಗಿ 4 ಗಂಟೆಯ ಹೊತ್ತಿಗೆ ಎದ್ದು, ಜಲಪಾನ ಮಾಡಿ, ಐದು ನಿಮಿಷದ ನಿಂತು ಮಾಡುವ ಯೋಗ ಮಾಡಿ, ಕಂಪ್ಯೂಟರ್ ನ್ನು ಪ್ರಾರಂಭಿಸಿ, ಕೆಲ ಹೊತ್ತು ಯೂ ಟ್ಯೂಬ್ ನಲ್ಲಿ ರಾಜಕೀಯ ವಿದ್ಯಮಾನಗಳನ್ನು ವೀಕ್ಷಿಸಿ , ನನ್ನ ವೈಯುಕ್ತಿಕ ಬ್ಲಾಗ್ ನ್ನು ಬರೆಯುವುದು, ಅಥವಾ ಹಿಂದಿನ ಬ್ಲಾಗನ್ನು ನೋಡುವುದು.


ಸುಮಾರು 6 ಗಂಟೆಗೆ ಮೇಲಿನ ಮಹಡಿಯಲ್ಲಿ ಯೋಗಾಭ್ಯಾಸ ಪ್ರಾರಂಭ 

1. ಯೋಗ ಪ್ರಾರ್ಥನೆ.:

ಯೋಗೇನ ಚಿತ್ತಸ್ಯಪದೇನವಾಚಂ, ಮಲಂ ಶರೀರಸ್ಯಚವೈದ್ಯಕೇನ

ಯೋಪಾಕರೋತ್ತಂ ಪ್ರವರಮ್ಮುನೀನಂ, ಪತಂಜಲಿಂ ಪ್ರಾಂಜಲಿರಣತೋ

2. ಐದು ಬಿಮಿಷ ಕಾಲದ ಕಾಲಿನ ಬಲಕ್ಕೆ, ರಕ್ತ ಸಂಚಾರಕ್ಕೆ ವ್ರುಕ್ಷಾಸನ ಇತ್ಯಾದಿ.


3. ಬೆನ್ನಿನ ಮೇಲೆ ಮಲಗಿ ಕೆಲವು ವ್ಯಾಯಾಮಗಳು.

4. ಹೊಟ್ಟೆಯ ಮೇಲೆ ಮಲಗಿ ಕೆಲವು ಆಸನಗಳು..... ಅದ್ವಾಸನ, ಸ್ಪಿಂಕ್ಸ್ ಆಸನ, ಅರ್ಧ ಶಲಭಾಸನ, ಸರ್ಪಾಸನ, ದೆಶಿಕಾಸನ, .....

5. ಪ್ರಾಣಾಯಾಮ: - ಉಜ್ಜಯಿ, ಕಪಾಳ ಬಾದಿ, ಬಸ್ತ್ರಿಕಾ, ನಾಡಿ ಶುದ್ದಿ (ಆಲೊಂ ವಿಲೊಂ), ಭ್ರಮರಿ...

6. ಕೈ, ಭುಜ, ನರಗಳ ಬಲಕ್ಕೆ ವ್ಯಾಯಾಮ...


ಸುಮಾರು ಒಂದು ಗಂಟೆಯ ಯೋಗಾಭ್ಯಾಸದ ನಂತರ ಶವಾಸನದಲ್ಲಿ ವಿಶ್ರಾಂತಿ ಯೊಂದಿಗೆ ಮುಕ್ತಾಯಗೊಳ್ಳುತ್ತದೆ.....

ಓಂ ಶ್ರೀ ಗುರುಭ್ಯೋ ನಮಃ 

Posted 31/5/2024




Friday, July 21, 2023

ME - JAYARAMA SOMAYAJI

 The year was 1968

I was in III B.Sc, at M G M College, Udupi. I had taken M.P.C. ( Maths, Physics, Chemistry) option.

Sri Chittaranjana Hegde, Ex-Secretary of Old Students Union, had sent the following from his records.

It took my memories back to my college days, going in the cycle, meeting Prof. B V Achar, teaching Maths with kumkum between his eyebrows, and a wasti (Panche) and a white shirt always,

Prof, U L Achar, Physics head of the department, K Ramadas, teaching optics in Physics, and U R Achar, also teaching Physics.

BIRTHI HOUSE,SALEKERI, BRAHMAVAR
with My amma... that time 1950

Present Birthi House

We were staying at Kamath's compound in the upstairs of the house with Ramachandra Somayaji, Ramachandra Aithal, Jayarama Shetty, Padmanabha Sahasra, I remember.

1968 -  RANK LIST

Vinoda Pai Karkala                     PUC         VII
Vedaraja Narayan Kadekar       PUC          IX
Meera Chandra Pal                     B Sc            I
Jayaram Somayaji                       B Sc.           VI
Perampalli Narayan Bhat           B Sc.          VII
G V Vani                                       B Sc           VIII

When results came, I was surprised that I secured III Rank in the Mysore University.


In the M G M College website, the above  is published.


Unfortunately, I have no contact of any of my classmates, who secured rank with me.


Prof. K S Haridasa Bhat (ಕು,ಶಿ. ಹರಿದಾಸ ಭಟ್ಟ) was the Principal.

I remember once, I made a speech in the assembly/function that college fees was high, for which The Prncipal was angry and called me to his office, quairied who was the brain behind the issue.


Founded in 1949, MGM is one of the largest and most respected colleges in Karnataka. Ours is a diverse learning community. 

Our motto is Sathwath Sanjayathe Jnanam. It means : From virtue springs knowledge - Bhagavadgeetha. The Githaic motto of MGM College proclaims that knowledge is a sublime goal to be pursued as a culmination of the moral endeavour of man. Knowledge bereft of virtue is equivalent to ignorance.True knowledge comes from understanding the essence of existence. Honest introspection, passionate learning are the cornerstones for acquiring true knowledge.

Posted 22/7/2023





Thursday, May 25, 2023

ಬಿರ್ತಿಮನೆ, ಸಾಲಿಕೆರಿ - ನೆನಪುಗಳು

 ಬಾಲ್ಯದ ನೆನಪುಗಳು 

ನಾನು, ಅಮ್ಮ 

ಕಾವೇರಿ, ನನ್ನ ಅಮ್ಮ 

ಸುಮಾರು 1949 - 50 ರ ಸಮಯ, ಹಳೆಯ ಮನೆ, ಹುಲ್ಲಿನ ಮನೆ, ಎರಡು ಭಾಗ, 

ಮಧ್ಯ ಅಂಗಳ, ಬದಿಯಲ್ಲಿ ಚಾವಡಿ, ಉಪ್ಪರಿಗೆ ಇರುವ ಮನೆ, ಎದುರಲ್ಲಿ ಹಟ್ಟಿ, ದನ ಕರುಗಳು....


1972 ರಲ್ಲಿ ಅಗ್ರಜ ಪದ್ಮನಾಭ ಸೋಮಯಾಜಿ ಅವರು ಕಟ್ಟಿಸಿದ ಈಗಿನ ಮನೆ....


ಮನೆಯ ಆಗಿನ / ಈಗಿನ ಬಾವಿ....

ಮಳೆಗಾಲದ ಸಮಯದಲ್ಲಿ ಅಪ್ಪಯ್ಯ ಅಂಗಳದಲ್ಲಿ ತರಕಾರಿಗಳನ್ನು ಬೆಳೆಸುವವರು.... ಜಗಲಿಯ ಹತ್ತಿರ ಮಳೆಯನ್ನು ತಡೆಯಲು  ತಟ್ಟಿ ಕಟ್ಟುವರು.....


ಅಪ್ಪಯ್ಯ, ಅಕ್ಕಂದಿರು... ಭಾಗೀರಥಿ, ವನಜಾಕ್ಷಿ, ನಾಗವೇಣಿ, ಕಾಶಿ 

ಹಲವಾರು ವರ್ಷಗಳಿಂದ ಸಾಲಿಕೇರಿ ಶ್ರೀ ದುರ್ಗಾಪರಮೇಶ್ವರಿ ವೀರಭದ್ರ ದೇವಸ್ಥಾನದಲ್ಲಿ ಅರ್ಚಕರು...  ಹಬ್ಬದ ಸಮಯದಲ್ಲಿ ಭಕ್ತಾದಿಗಳಿಂದ ನೈವೇದ್ಯಕ್ಕೆ ಬರುವ ತೆಂಗಿನ ಕಾಯಿ ಒಡೆಯುವಿಕೆ....ಕುಡಿ ಕಾಸು ದಕ್ಷಿಣೆ...

ಬೆಂಡೆ ಕಾಯಿ, ಅಲಸಂಡೆ ಚಪ್ಪರ ದಲ್ಲಿ, , ಹರಿವೆ ಸೊಪ್ಪು, 


ಮನೆಯ ಪರಿಸರ 

ಈಗಿನ ಮನೆಯಲ್ಲಿ ಅತ್ತಿಗೆ ಲೀಲಾ ಸೋಮಯಾಜಿ, ಮನೆಯ ಚಾವಡಿ....

Posted  25/5/2023



Wednesday, November 11, 2020

AUTOBIOGRAPHY (8) - LIFE AT DUBAI

ಆತ್ಮ ಚರಿತ್ರೆ - 8 - ದುಬೈ ಜೀವನ 1987 
1987 ರ ಸಪ್ಟಂಬರ ತಿಂಗಳಲ್ಲಿ ನಳಿನಿ ರವಿಕಾಂತ ರೊಂದಿಗೆ  ದುಬೈಗೆ ವಾಪಸ್ಸು ಬಂದದ್ದಾಯಿತು.
ಊರಲ್ಲಿ ಆಗಲೇ ನಳಿನಿಯ ಬಿ.ಎಡ್. ಕಾಲೇಜು, ರವಿಯ ಯು.ಕೆ.ಜಿ. ಕ್ಲಾಸುಗಳು ಮುಗಿದು ರಜೆಯೂ ಪ್ರಾರಂಭವಾಗಿತ್ತು. ಅವರಿಗೆ ದುಬೈಗೆ ಪ್ರವೇಶಿಸಲು ಇಮಿಗ್ರೇಷನ್ ನಿಂದ ವೀಸಾ ಪಡೆಯಬೇಕಾಗಿತ್ತು. ಅದನ್ನು ಸ್ವಲ್ಪ ಪ್ರಯತ್ನ ಪಟ್ಟು ಪಡೆದದ್ದಾಯಿತು. ಅವರಿಗೆ ವಿಮಾನದ ಟಿಕೆಟನ್ನು ಪಡೆದು ಮಂಗಳೂರು, ಬೊಂಬಾಯಿಯ ಮೂಲಕ ದುಬೈಯನ್ನು ಸೇರಿದ್ದಾಯಿತು. ಇನ್ನೂ ಮನೆಯ ಹುಡುಕಾಟ. ಸ್ಸ್ವಲ್ಪ ಸಮಯ ಪ್ರಸಾದ್ ಅವರ ಮನೆಯಲ್ಲಿ ಉಳಿದು, ಹತ್ತಿರದ ಸತ್ವ (Satwa) ದಲ್ಲಿ ಒಂದು ಬೆಡ್ ರೂಮಿನ ಫ್ಲಾಟ್ ನ್ನು ಬಾಡಿಗೆಗೆ ಪಡೆದದ್ದಾಯಿತು. (ಬಾಡಿಗೆ ದಿರ್ ಹಾಮ್ಸ್ ವರ್ಷಕ್ಕೆ 12000   (ಆಗ 1 Dirham = Rs 12.50 ).


ಮನೆಗೆ ಬೇಕಾದ ಸಾಮಾನುಗಳು ಖರೀದಿಸಿ ಬದುಕು ಪ್ರಾರಂಭವಾಯಿತು. ರವಿ ಯನ್ನು ನಾನು ಕೆಲಸ ಮಾಡುತ್ತಿರುವ ಶಾಲೆ ಅವರ್ ಓನ್ ಇಂಗ್ಲಿಷ್  ಹೈಸ್ಕೂಲ್ (Our Own English High School , Dubai ) ನಲ್ಲಿ ಒಂದನೇ ತರಗತಿಗೆ ಸೇರಿಸಿ ಅವನಿಗೂ ಮಧ್ಯಾಹ್ನ್ನದ ಪಾಳಿಯಲ್ಲಿ (Afternoon Shift) ಕ್ಲಾಸುಗಳು ಪ್ರಾರಂಭವಾಗಿ ಒಟ್ಟಿಗೆ ಶಾಲೆಯ ಬಸ್ಸಿನಲ್ಲಿ ಹೋಗುವಂತಾಯಿತು.
ಹೀಗೆಯೇ ದಿನಗಳು, ವಾರಗಳು ಕಳೆಯುತ್ತವೆ. ನಳಿನಿಯು ಕೆಲಸಕ್ಕಾಗಿ ಹುಡುಕುತ್ತಾಳೆ. ನೈಜಿರಿಯಾದ  ಸ್ನೇಹಿತ ದೊರೈರಾಜ್ ಅವರು ದುಬೈ ಯಲ್ಲಿ ಹೊಸ ಶಾಲೆಯನ್ನು ಶುರು ಮಾಡಿ, ಅದರಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡಲು ಆಹ್ವಾನಿಸುತ್ತಾರೆ. ಅದು ಬಡ್ಸ್ ಪಬ್ಲಿಕ್ ಶಾಲೆ (Buds Public School), ಅದು ಬೆಳಿಗ್ಗೆಯ ಪಾಳಿಯ ಶಾಲೆ. ಅಲ್ಲಿಯ ಪ್ರೈಮರಿ ವಿಭಾಗದಲ್ಲಿ ಅಧ್ಯಾಪಕಿಯಾಗಿ ಕೆಲಸ ಪ್ರಾರಂಬಿಸಿದ್ದೂ ಆಯಿತು. ಶಾಲೆಯು ಮನೆಯಿಂದ ಸುಮಾರು 5 ಕಿ.ಮೀ. ದೂರ, ಕೆಲವೊಮ್ಮೆ ಶಾಲೆ ಬಸ್ಸಿನಲ್ಲಿ, ಕೆಲವೊಮ್ಮೆ ಕಾರಿನಲ್ಲಿ ಬಿಟ್ಟು ಬರಬೇಕಾಗಿತ್ತು.

ದುಬೈ ಕರ್ನಾಟಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಾರಂಬಿಸಿದೆವು. ಬಿ ಜಿ. ಮೋಹನದಾಸ್ ಅವರು ಅಧ್ಯಕ್ಷರಾಗಿದ್ದ ಕಾಲ. ವರ್ಷಕ್ಕೆ ನಾಲ್ಕಾರು ಕಾರ್ಯಕ್ರಮ. ಅಲ್ಲಿಯೂ ಜನರಲ್ಲಿ ಭಿನ್ನಾಬಿಪ್ರಾಯ.
ಬೆಂಗಳೂರಿನ ಡಾ ಮೋಹನ್ ಅವರು ಬರ್ ದುಬೈ ಯಲ್ಲಿ  ಕ್ಲಿನಿಕ್ ತೆರೆದು ಪ್ರಾಕ್ಟಿಸ್ ಮಾಡುತ್ತಿರುವ ಸಮಯ. ಅವರೂ ಸ್ನೇಹಿತರಾಗಿ, ದುಬೈ ಕರ್ನಾಟಕ ಸಂಘದ ಅಧ್ಯಕ್ಷರು ಆಗಿ, ನನ್ನನ್ನೂ ಪ್ರಧಾನ ಕಾರ್ಯದರ್ಶಿ ಯನ್ನಾಗಿ ಸಮಿತಿಯು ನಿರ್ಧಾರ ಮಾಡಿತು. 

ಶಾಲೆಯ ಕೆಲಸ ಮಧ್ಯಾಹ್ನ, ಬೆಳಿಗ್ಗೆ ಒಂದೆರಡು ಕಡೆ ಟ್ಯುಶನ್, ಸಂಜೆ ಮನೆಗೆ.... ಹೀಗೆ ದಿನಗಳೂ, ವಾರಗಳು, ತಿನಗಳುಗಳು ಕಳೆಯುತ್ತಾ ಇದ್ದೆವು. 

ಮುಂದುವರಿಯುವುದು.....





Saturday, August 8, 2020

AUTOBIOGRAPHY - 7 ( LIFE JOURNEY) - DUBAI

ಆತ್ಮ ಚರಿತ್ರೆ - ಬದುಕಿನ ಪಯಣ (7) - ದುಬೈ 1986 
1986 ಜುಲೈ ತಿಂಗಳಲ್ಲಿ ನೈಜಿರಯಾದಿಂದ ಊರಿಗೆ ಬಂದು, ಕೆಲಕಾಲ ರಜೆಯನ್ನು ಕಳೆದು, ರವಿಕಾಂತ ನನ್ನು  ಬ್ರಹ್ಮಾವರದ   ಲಿಟಲ್ ರಾಕ್ (Little Rock Indian School ) ಶಾಲೆಯ  ಯು.ಕೆ.ಜಿ. (UKG) ಕ್ಲಾಸಿಗೆ ಸೇರಿಸಿ, ನಳಿನಿಯು ಉಡುಪಿಯಲ್ಲಿಯ ಒಂದು ವರ್ಷ ಕಲಿಕೆಯ  B Ed ಕಾಲೇಜಿಗೆ ಸೇರಿದ್ದಾಯಿತು. ಮನೆಯಿಂದ ಅವರಿಗೆ ಶಾಲೆ, ಕಾಲೇಜಿಗೆ ಬಸ್ಸಿನಲ್ಲಿ ಹೋಗುವ ವ್ಯವಸ್ತೆ.


ಒಂಟಿಯಾಗಿ ಸಪ್ಟಂಬರ ಮೊದಲ ವಾರದಲ್ಲಿ ಬೊಂಬಾಯಿ ನಗರಕ್ಕೆ ಬಂದು ಅಲ್ಲಿಂದ  ದುಬೈ ನಗರಕ್ಕೆ ಬಂದದ್ದಾಯಿತು. ಶಾಲೆಯಿಂದ ವ್ಯವಸ್ತೆ ಮಾಡಿದ ಒಂದು ದೊಡ್ಡ ಮನೆ (Villa) ಯಲ್ಲಿ ಇತರ ನಾಲ್ಕಾರು ಶಾಲೆಯ ಅಧ್ಯಾಪಕರುಗಳೊಡನೆ ವಾಸ. ಅದು ಅಲ್ ಶಾಬ್ ಎಂಬ ಕಾಲೋನಿಯಲ್ಲಿ. ಹೋಟೆಲಿನಲ್ಲಿ ಊಟ, ಶಾಲೆಯ ಬಸ್ಸಿನಲ್ಲಿ ಇತರ ಅಧ್ಯಾಪಕರುಗಲೊಡನೆ ಶಾಲೆಗೆ ಹೋಗಿ ಬರುವ ವ್ಯವಸ್ತೆ. ಮಧ್ಯಾಹ್ನದ ಪಾಳಿಯಲ್ಲಿ ಕೆಲಸವಾದ್ದರಿಂದ, ತಡವಾಗಿ ಊಟ ಮಾಡಿ 1 ಗಂಟೆಗೆ ಶಾಲೆಗೆ ಸೇರಿ 6 ಗಂಟೆಯ ವರೆಗೆ ಶಾಲೆಯಲ್ಲಿ, ಮತ್ತೆ ಬಸ್ಸಿನಲ್ಲಿ ಮನೆಗೆ.
ಮನೆಯಲ್ಲಿ ಇತರ ಅಧ್ಯಾಪಕರು - ಪರಮಜಿತ್ ಕಾಲ್ರ, ಆತ್ಮಿಯನಾದ ಸರದಾರ್ಜಿ ರೂಮ್ ಮೇಟ್ (Room Mate). ಅವನು ಪೇಟ ಕಟ್ತುವವನು. ಅವನನ್ನು ಬೆಳಿಗ್ಗೆ ಬೇಗ ಎಬ್ಬಿಸಿ, ನಂತರ ವಾಕಿಂಗ್ (walking) ಅಥವಾ ವ್ಯಾಯಾಮ ಮಾಡಲು ಹೇಳಬೇಕು. ಅವನು ಪೇಟ ಕಟ್ಟಿದ್ದರಿಂದ ಎದ್ದೊಡನೆ ಏನೂ ಮಾಡಬೇಕೆಂದು ತಿಳಿಯದು.☺
ಇತರ ಅಧ್ಯಾಪಕರು ಪ್ರಸಾದ್, ಒಬ್ಬ ಸಾಬಿ, ಇನ್ನಿತರರ ಹೆಸರು ನೆನಪಾಗದು.

ವಾಚಮನ್ ಜಾವೇದ್ 
ಓ.ಎಲ್. ಹೆಂಡರ್ಸನ್ ಪ್ರಾಂಶುಪಾಲ ರಾಗಿದ್ದ ಕಾಲ. ಕೆ.ಬಿ. ರಿಖಾರಿ, ಸುನಿಲ್ ಜೋಸೆಫ್, ಸೂಪರ್ವೈಸರ್,  ಕಾಶ್ಮೀರದ ಡಾ. ಫರುಕ್ ವಾಸಿಲ್ ಉಪ ಪ್ರಾಂಶು ಪಾಲ. ಮೈಸೂರಿನ ಗೋವಿಂದ ಪ್ರಸಾದ ಅವರು ಅದೇ ಶಾಲೆಯಲ್ಲಿ ಗಣಿತ (Maths)) ಅಧ್ಯಾಪಕ ರಾಗಿದ್ದರು. ಅವರ ಹೆಂಡತಿ ನಾಗಮಣಿ ಅವರು ಸಹಾ ಪ್ರೈಮರಿ ವಿಭಾಗದಲ್ಲಿ ಅಧ್ಯಾಪಕಿ ಯಾಗಿದ್ದರು. ನಾನು  ಹತ್ತು, ಹನ್ನೊಂದು, ಹನ್ನೆರಡು  ಕ್ಲಾಸಿನ ಮಕ್ಕಳಿಗೆ ವಿಜ್ಞಾನ, ಭೌತ ಶಾಸ್ತ್ರದ ಭೋದನೆ. ಹುಡುಗರಿಗೆ ಮಧ್ಯಾಹ್ನದ ನಂತರದ (Afternoon shift) ಕ್ಲಾಸುಗಳು  ಆದ್ದರಿಂದ ಒಂದು ಗಂಟೆಗೆ, ಪಾಠ. ಪ್ರವಚನ ಶುರು ಆಗಿ ಆರು ಗಂಟೆಯ ವರೆಗೆ ಭೋದನೆ. ನಂತರ ವಾಪಸ್ಸು ಶಾಲೆಯ ಬಸ್ಸಿನಲ್ಲಿ ಮನೆಗೆ. ಊಟಕ್ಕೆ ಹೆಚ್ಚಾಗಿ ಹೊರಗೆ ಹೋಟೆಲಿನಲ್ಲಿ.
ದುಬೈ ಯಲ್ಲಿ ಡ್ರೈವಿಂಗ್ ಲೈಸನ್ಸ್ (Driving Licence) ಪಡೆಯಲು ಜನರು ಹರಸಾಹಸ ಪಡುತ್ತಾರೆ. ಭಾರತದಲ್ಲಿ ಹಲವಾರು ವರ್ಷ ಕಾರೋ/ಬಸ್ಸೋ ಚಾಲನೆ ಮಾಡಿದವರೂ ಕೆಲವು ಬಾರಿ ಅನುತ್ತೀರ್ಣರಾಗುತ್ತಾರೆ. ಟೆಸ್ಟ್ (Test) ಗೆ ದಿನಾಂಕ ಪಡೆಯಲು ಕೆಲವು ವಾರಗಳೇ ಕಾಯಬೇಕಾಗಿತ್ತು. ಟೆಸ್ಟ್ ನಲ್ಲಿ ಐದು ಭಾಗ ಗಳಿವೆ.  1. Garage Parking, 2. side parking, 3. Hill test  4. Signal Test  5. Road Test (ಅತ್ಯಂತ ಕಠಿಣ ವಾದ ಪರೀಕ್ಷೆ)
ಮೊದಲ ಬಾರಿ ಹೋದಾಗ ಮೂರನೇ ಟೆಸ್ಟಿನಲ್ಲಿ (Hill Test ) ಫೇಲ್ ಆಗಿದ್ದೆ. ಎರಡನೇ ಬಾರಿ ಹೋದಾಗ ಎಲ್ಲಾ test ಗಳಲ್ಲಿ ಒಮ್ಮೆಲೇ ಪಾಸಾಗಿದ್ದೆ. ಅಲ್ಲಿ ಎಲ್ಲರಿಗೂ ಅದೊಂದು ಬಹಳ ಆಶ್ಚರ್ಯದ ಸುದ್ದಿ. ಅಷ್ಟು ಬೇಗನೆ ನಿಮಗೆ ಲೈಸೆನ್ಸ್ ಸಿಕ್ಕಿತಾ? ಡ್ರೈವಿಂಗ್ ಲೈಸೆನ್ಸ ಸಹಾ ಆಯ್ತು.
ಹೀಗೆ ಎರಡು/ಮೂರು ತಿಂಗಳಾದ ನಂತರ ಒಂದು second hand  ಕಾರನ್ನೂ ಖರಿದಿಸಿಯಾಯ್ತು. ಸುಮ್ಮನೆ ಅಲ್ಲಿ ಇಲ್ಲಿ ತಿರುಗಾಡಲು. ನೈಜೇರಿಯಾ ದಲ್ಲಿ ಇದ್ದಂತೆ ದುಬೈಯಲ್ಲಿ ಕಾರು ಚಾಲನೆ ಮಾಡುವುದು ರಸ್ತೆಯ ಬಲಭಾಗದಲ್ಲಿ.ಅದು ಅಭ್ಯಾಸ ಬಲದಿಂದ ಕೂಡಲೇ ಅನುಭವಕ್ಕೆ ಬರುತ್ತದೆ.
ಸಮಯ ಕಳೆಯಲು ಅಂಥಹ ಹವ್ಯಾಸ ಏನೂ ಇದ್ದಿರಲಿಲ್ಲ. ಪ್ರಸಾದ್ ಅವರ ಮನೆಗೆ ಆಗಾಗ ಭೇಟಿ. ಅವರೊಂದಿಗೆ ಕೆಲವೊಮ್ಮೆ ಸತ್ಸಂಗಕ್ಕೆ ಹಾಜರಿ. ಇತರ ಸ್ನೇಹಿತರುಗಳ ಭೇಟಿ. ಪ್ರಥಮವಾಗಿ ಭೇಟಿಯಾದವರಲ್ಲಿ ಜಗದೀಶ್ ಶೆಟ್ಟಿ, ಪಿ.ಎಸ.ರಾವ್, ಡಾ. ಮೋಹನ್, ಪ್ರಭಾಕರ ಉಪಾಧ್ಯ.
ಊರಲ್ಲಿ ನಳಿನಿ ಬಿ.ಎಡ್. ಕಾಲೇಜು, ರವಿ little rock ಶಾಲೆ. 1986 ರ ದಶಂಬರ ರಜೆಗೆ 10 ದಿನಗಳಿಗೆ ಊರಿಗೆ ಹೋಗಿ ಬಂದಾಯ್ತು. ಪುನ ಶಾಲೆಯ ಎಂದಿನಂತೆ ಕಾಯಕ.
1987 ರ ಜುಲೈ ತಿಂಗಳಲ್ಲಿ ಊರಿಗೆ ಹೋಗುವ ಹೋಗುವ ಸಂಭ್ರಮ.

ಮುಂದುವರಿಯುವುದು ....ಭಾಗ 8


Sunday, August 2, 2020

AUTOBIOGRAPHY (6) - LIFE JOURNEY - GUYUK

ಆತ್ಮ ಚರಿತ್ರೆ (6) - ಗುಯುಕ್, ನೈಜಿರಿಯಾ, (1983 - 86)

ಸುಮಾರು 37 ವರ್ಷಗಳ ಹಿಂದಿನ ಮಾತು. ಗುಯುಕ್ ಮೇಲ್ಕಂಡಂತೆ ಇದ್ದಿರಲಿಲ್ಲ. ಟಾರ್ ರಸ್ತೆ, ಲೈಟ್ ಕಂಬಗಳು ಇಲ್ಲ. ಇದು ಈಗ ಇಂಟರ್ನೆಟ್ ನಿಂದ ತೆಗೆದು ಹಾಕಿದ ಫೋಟೋ.
ನೈಜಿರಿಯಾದ ಗುಯುಕ್ ಎಂಬ ಸ್ಥಳ, ಒಂದು ಸಣ್ಣ ಹಳ್ಳಿ. ರಾಜಧಾನಿ ಯೋಲ ದಿಂದ ಸುಮಾರು 120 ಕಿ.ಮೀ. ದೂರ. ವಿದ್ಯುತ್ ಇನ್ನೂ ಬಂದಿರಲಿಲ್ಲ. ನೀರು ಸರಬರಾಜು ಇತ್ತು. ಅದರೂ ಸಹ ಒಮ್ಮೊಮ್ಮೆ ಕಾರಿನಲ್ಲಿ ದೂರ ಹೋಗಿ ಜೆರಿಕೆನ್  (jerrycan) ನಲ್ಲಿ ನೀರು ತರುವ ಸಂದರ್ಭ ಸಹಾ ಬರುತಿತ್ತು. ಅಲ್ಲಿಯ ಹತ್ತಿರದ ಇನ್ನೂ ಪ್ರಾರಂಭ ವಾಗಿರದ ಸರಕಾರಿ  ಸೆಕೆಂಡರಿ ಶಾಲೆ, ಬಂಜಿರಾಂ (Government Secondary School. Banjitram) ನಲ್ಲಿ ಅಧ್ಯಾಪಕನಾಗಿ  ವರ್ಗಾವಣೆ ( transfer) ಆಗಿತ್ತು.
ಶಾಲೆಯ ಅಧ್ಯಾಪಕರುಗಳು.
ಅನಿವಾರ್ಯವಾಗಿ ಅಲ್ಲಿಗೆ ಹೋಗಲೇ ಬೇಕಾಗಿತ್ತು. ನಿಧಾನವಾಗಿ ಹಳ್ಳಿಯ ಜೀವನಕ್ಕೆ ಹೊಂದಿ ಕೊಂಡೆವು.
ಪೇಟೆಯ ಮುಖ್ಯ ರಸ್ತೆಯ ಬಳಿಯಲ್ಲಿ ಒಂದು ಮನೆಯನ್ನೂ ನನಗೆ ನೀಡಲಾಗಿತ್ತು. ಒಂದು ಸಣ್ಣ sitting ಕೋಣೆ, ಪಕ್ಕದಲ್ಲಿ ಮಲಗುವ ಕೋಣೆ, ಹಿಂದೆ ಪಾಗಾರ ಇರುವ ಅಂಗಳ, ಪಕ್ಕದಲ್ಲಿ ಅಡಿಗೆಮನೆ, ಊಟದ ಮನೆ, ಬಚ್ಚಲು ಮನೆ.
ಅಲ್ಲಿ ವಿದ್ಯುತ್ ಇಲ್ಲದ ಕಾರಣ ಸೀಮೆ ಎಣ್ಣೆಯ (Kerosine) ಫ್ರಿಡ್ಜ್ (Fridge) ನ್ನು ಉಪಯೋಗಿಸುತ್ತಿದೆವು. ರಸ್ತೆಯ ಎದುರು ಭಾಗ ಪೋಸ್ಟ್ ಆಫಿಸ್ ಕಟ್ಟಡ, ಮನೆಯ ಪಕ್ಕದಲ್ಲಿ ಬಾರ್ ಮತ್ತು ರೆಸ್ಟೋರೆಂಟ್.
ಬಂಜಿರಾಂ ನಲ್ಲಿ ಇನ್ನೂ ಶಾಲೆಯ ಕಟ್ಟಡಗಳು ಆಗದ ಕಾರಣ ಗುಯುಕ್ ನ ಎಲಿಮೆಂಟರಿ ಶಾಲೆಯಲ್ಲಿ ಕ್ಲಾಸುಗಳು ನಡೆಯುತ್ತಿದ್ದವು. ಮರದ ಕೆಳಗೆ ಸ್ಟಾಫ್ ರೂಮ್ (Staffroom). ಯೊಂಗೋ ಎಂಬ ನೈಜಿರಿಯಾದ ಪ್ರಜೆ ಪ್ರಿನ್ಸಿಪಾಲ.  ಶಾಲೆಯ ಸಮಯದಲ್ಲಿ ಅವನು ಕುಡಿದು ಬರುವವನು. ಹಲವು ದಿನಗಳ ದಿನಗಳ ಕಾಲ ಗೈರು ಹಾಜರಿ.
ಗುಯುಕ್ಹ ಹಳ್ಳಿಯಲ್ಲಿ ಅಂತಹಾ ಅಂಗಡಿ ಗಳೇನೂ ಇಲ್ಲ. ವಾರದ ಸಂತೆ. ಚೆನ್ನಾಗಿರುವ ಬೆಣ್ಣೆ ಲಭ್ಯ. ಅಲ್ಲಿಯ ಜನರಿಗೆ ನಮ್ಮನ್ನು ನೋಡುವುದೇ ಸಂಭ್ರಮ. "ಬಟುರೆ" (Foreigner) ನೋಡು, ಬಟುರೆ ನಡೆದುಕೊಂಡು ಹೋಗುತ್ತಾ ಇದೆ.... ಅಚ್ಚರಿ.
ಹವುಸ (Hausa) ಅಲ್ಲಿಯ ಭಾಷೆ. ಒಬ್ಬರನ್ನೊಬ್ಬರು ನೋಡಿದೊಡನೆ greetings ಬಹಳ ಮುಖ್ಯ. ಸನ್ನು  ಮಾಲಂ (ನಮಸ್ಕಾರ), ಬ ಬ ಕಾವ್ (ಹೇಗಿದ್ದೀರ), ಯಾಯ ಗಿಡ (ಮನೆಯಲ್ಲಿ ಹೇಗಿದ್ದಾರೆ), ಹೆಂಡತಿ ಹೇಗಿದ್ದಾರೆ, ಮಕ್ಕಳು ಹೇಗಿದ್ದಾರೆ, ವಾತಾವರಣ ಹೇಗಿದೆ, ಇತ್ಯಾದಿ ಇತ್ಯಾದಿ.. ನಾಗೊಡೆ (ಧನ್ಯವಾದ) ಅಲ್ಲ(ದೇವರು).
ಜೋಸ್ ಪಾಯ್ ಕಟ್ ಎನ್ನುವ ಕೇರಳದವನು  ಅಲ್ಲಿಯೇ ಹತ್ತಿರದ ಇನ್ನೊಂದು ಶಾಲೆಯ ಅಧ್ಯಾಪಕ, ಹೆಂಡತಿ ಮಕ್ಕಳೊಡನೆ ಗುಯುಕ್ ನಲ್ಲಿ ವಾಸವಾಗಿದ್ದ. ಅವನು ರಜೆಯಲ್ಲಿ ಊರಿಗೆ ಹೋಗಿ ಬರುವಾಗ  ಬಹಳಷ್ಟು ಸಿನೆಮಾ ವಿಡಿಯೋ ಕ್ಯಾಸೆಟ್ ತರುವವನು. ಆಗ ವಿಸಿಪಿ ( VCP) ಎಂಬ ವೀಡಿಯೊ ಪ್ಲೇಯರ್ ಮೆರೆಯುತಿದ್ದ ಕಾಲ.  ನಾನು ಒಂದು ಸಣ್ಣ ಜೆನರೆಟರ್  (Generator) ಖರೀದಿಸಿದ್ದು, ಸಾಯಂಕಾಲ ಒಟ್ಟಿಗೆ ಮಲಯಾಳಂ ಸಿನೆಮಾಗಳನ್ನು ನೋಡು ತಿದ್ದೆವು.



ರವಿಯ ಹುಟ್ಟಿದ ದಿನದ ಸಂಭ್ರಮ 
ರವಿಯು ಆಗ ಮೂರು ವರ್ಷದ ಬಾಲಕನಿರಬೇಕು. ಮನೆಯ ಎದುರಿಗೆ ಇದ್ದ ಪೋಸ್ಟ್ ಆಫೀಸಿಗೆ ರಸ್ತೆಯನ್ನು ದಾಟಿ, ನಮಗೆ ಅರಿವಿಲ್ಲದಂತೆ ಹೋಗಿದ್ದ. ಅಲ್ಲಿ "ಬುನೆಕ್" ಇದೆ ಎಂದು ಅವನ ಮಾತು.  ಇಂದಿಗೂ ಆ ಬುನೆಕ್ ಏನು ಎಂದು ತಿಳಿದಿಲ್ಲ.
ಒಮ್ಮೆ ರವಿಯ ಹುಟ್ಟಿದ ದಿನವನ್ನು ಹಲವಾರು ಯೋಲದ ಸ್ನೇಹಿತರೊಡನೆ ಸೇರಿ ಆಚರಿಸಿದ್ದೆವು. ಮಕ್ಕಳಿಗೆ ಆಟ, ಹಾಡು, ನೃತ್ಯ, ಅಮ್ಮನೇ ತಯಾರಿಸಿದ ಭರ್ಜರಿ ಊಟ. ಸ್ನೇಹಿತ ಕುಟುಂಬ ದವರೊಡನೆ ಹೊರ ಸಂಚಾರಕ್ಕೆ (picnic) ಒಂದು ಕಾರಣವಾಗಿತ್ತು.
ಹೊರ ಸಂಚಾರ 
ನೆನಪಿರುವ ಹೆಸರುಗಳು ಕರುಣಾಮೂರ್ತಿ, ಸುಂದರೆಸನ್, ಪುನಿತವೆಲ್, ಗೋಪಾಲ್ ರಾಜ್. ಗೋವಿಂದ್ ಪ್ರಸಾದ್
ಒಮ್ಮೆ ಸುಮಾರು ಹತ್ತು ಕುಟುಂಬ ದವರೊಡನೆ ಅಲ್ಲಿಯೇ ಹತ್ತಿರವಿರುವ ದೋಣಿ ಸಂಚಾರಕ್ಕೆ ಹೋಗಿದ್ದ ನೆನಪು.
ಒಮ್ಮೆ 1984/85 ರ ವರ್ಷ ಇರಬಹುದು. ಉತ್ತರ ನೈಜಿರಿಯಾ ದಲ್ಲಿ "ಬೋಕೋ ಹರಾಮ್" ಎಂಬ ಮುಸ್ಲಿಂ ಉಗ್ರ ಸಂಘಟನೆಯ ಅಬ್ಬರ.  ಅವರ ಧ್ಯೇಯ : ಸಾಕಷ್ಟು ಜನರನ್ನು ಕೊಂದು ಅಲ್ಲಾಹು  ದೇವರಿಗೆ ಹತ್ತಿರವಾಗುವುದು. ಮೈದುಗುರಿಯಲ್ಲಿ ಇವರ ಚಟುವಟಿಗೆ ಜೋರಾಗಿದ್ದು ಕೇಳಿ ಬರುತಿತ್ತು. ಗುಯುಕ್ ನಲ್ಲಿ ಒಂದು ಸಂಜೆ ಸುದ್ದಿ ಬಂತು. ರಾತ್ರಿ ಉಗ್ರ ಸಂಘಟನೆಯ ಜನರು ದಾಳಿ  (attack) ಮಾಡಲಿರುವರು ಎಂದು. ರಾತೋರಾತ್ರಿ ಕಾರಿನಲ್ಲಿ ಹೊರಟು, ಸುಮಾರು 130 ಕಿ.ಮೀ. ದೂರದ ಬಿಯು ಎಂಬ ಜಾಗಕ್ಕೆ ಹೋಗಿ ಅಲ್ಲಿಯ ಶಾಲೆಯಲ್ಲಿ ಕೆಲಸ ಮಾಡುತಿದ್ದ ಬೆಂಗಳೂರಿನ ನಾರಾಯಣ ಮೂರ್ತಿ ಯವರ ಮನೆ ಸೇರಿ "ಬದುಕಿದೆಯಾ ಬಡ ಜೀವ" ಎಂದು ರಾತ್ರಿ ಕಳೆದೆವು.
ನಾರಾಯಣ ಮೂರ್ತಿ ಪರಿವಾರದೊಡನೆ (ಬಿಯು)
ಮರು ದಿನ ವಾಪಸು ಗುಯುಕ್ ಗೆ ಬಂದು ಸೇರಿದೆವು.  ಅಂತಹ ದಾಳಿ ಏನೂ ನಡೆದಿಲ್ಲ ಎಂದು ಆಮೇಲೆ ತಿಳಿಯಿತು. ಅದೊಂದು ಮರೆಯಲಾಗದ ಘಟನೆ.
1986 ರ ಸಮಯ, ಗುಯುಕ್ ಸಹ  ಬೇಸರ  (boring) ಆಗುತಿತ್ತು. ಬೇರೆ ಕಡೆಗೆ ಕೆಲಸಕ್ಕೆ ಹೋಗುವ ಯೋಚನೆ. ಇದೇ ಸಮಯ ಸ್ನೇಹಿತ ಗೋವಿಂದ್ ಪ್ರಸಾದ್ ಅವರು ದುಬೈಯ ಅವರ್ ಓನ್ (OurOwn English High School)) (ಶಾಲೆಯ ಹೆಸರು) ಶಾಲೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತಿದ್ದರು. ಅವರ ಶಿಫಾರಸಿನಿಂದ  ನಾನೂ ಕೆಲಸಕ್ಕೆ ಅರ್ಜಿಯನ್ನು ಕಳುಹಿಸಿ ಅದು ಮಂಜೂರು ಆಗಿತ್ತು. ಓ.ಎಲ್.ಹೆಂಡರ್ಸನ್ ಅವರು ಪ್ರಾಂಶುಪಾಲ ರಾಗಿದ್ದರು.
ಜುಲೈ 1986, ಗುಯುಕ್ ನೈಜಿರಿಯಾ ಬಿಡುವ ಸಮಯ, ಸರಕಾರಕ್ಕೆ ರಾಜೀನಾಮೆ ಕಳುಹಿಸಿ, ಪಡೆಯಬಹುದಾದ ಲಾಭ (Benefit) ಗಳನ್ನೂ , ಹಿಂದಿರುಗಲು ವಿಮಾನ ಟಿಕೆಟ್ಟನ್ನು ಪಡೆದು, ಜೆದ್ದಾ (Jeddah Saudi Arabia) ಮಾರ್ಗವಾಗಿ ಊರನ್ನು (ಬಿರ್ತಿ, ಸಾಲಿಕೇರಿ, ಉಡುಪಿಯ  ಹತ್ತಿರ) ಸೇರಿದೆವು. ನಳಿನಿಯು ಒಂದು ವರ್ಷದ  ಬಿ.ಎಡ್.(B.Ed.) ಕಲಿಯಲು ಉಡುಪಿಯಲ್ಲಿ ಕಾಲೇಜಿಗೆ  ಸೇರಿದ್ದಾಯಿತು. ರವಿಯನ್ನು  ಬ್ರಹ್ಮಾವರದ ಲಿಟಲ್ ರಾಕ್ (Little Rock) ಶಾಲೆಯ  ಯು.ಕೆಜಿ. (UKG) ಕ್ಲಾಸಿಗೆ ಸೇರಿಸಿದ್ದಾಯಿತು.
ನಮ್ಮ ಮುಂದಿನ ಪಯಣ ಒಂಟಿಯಾಗಿ ದುಬೈಗೆ .  ಸಪ್ಟಂಬರ್ (1986) ದಲ್ಲಿ ಅವರ್  ಓನ್ ಶಾಲೆಯಲ್ಲಿ ಮುಂದಿನ ಕಾಯಕ ಪ್ರಾರಂಭ.

ಮುಂದುವರಿಯುವುದು. ಭಾಗ - 7 


Sunday, July 26, 2020

AUTOBIOGRAPHY (5) - LIFE JOURNEY -YOLA

ಆತ್ಮ ಚರಿತ್ರೆ - ಭಾಗ 5 - (1980 - 1986 )
ಯೋಲ, (ರಾಜಧಾನಿ) ಗೊಂಗೊಲ ರಾಜ್ಯ, ನೈಜಿರಿಯಾ 
ಬಾಂಜುಲ್ ನಗರದ ಶಾಲೆ, ಅಲ್ಲಿಯ ಸಂಬಳ ಹಾಗೂ ಜೀವನ ಬಹಳ ಅತೃಪ್ತಿ ಯಾಗಿತ್ತು. ಪದಕನ್ನಾಯ ಪರಿವಾರವೂ ಅಲ್ಲೇ ಇದ್ದರೂ ಮುಂದುವರಿಸಲು ಮನಸ್ಸು ಕೇಳಲಿಲ್ಲ.  ಹತ್ತು ತಿಂಗಳೊಳಗೆ ಅಲ್ಲಿಯ ಕೆಲಸಕ್ಕೆ ರಾಜೀನಾಮೆ ಇತ್ತು ಪುನ ನೈಜೆರಿಯಾದ ಕಡೆಗೆ ಪಯಣ.
ನೈಜಿರಿಯಾದ ಗೊಂಗೊಲ ರಾಜ್ಯದ ರಾಜಧಾನಿ ಯೋಲ ನಗರಕ್ಕೆ ವಿಸಿಟ್  ವಿಸಾದಲ್ಲಿ ಬಂದು  ಅಲ್ಲಿಯ ಶಿಕ್ಷಣ ಸಚಿವಾಲಯದಲ್ಲಿ ಇಂಟರ್ ವ್ಯೂ ಗೆ ಹಾಜರಾಗಿ ಕೆಲಸವನ್ನೂ ಪಡೆದದ್ದಾಯಿತು. ಅದು ಜುಲೈ 1980 ರ ಸಮಯ.
ಆಗ ಶಾಲೆಗಳಿಗೆ ರಜಾ ಕಾಲವಾದ್ದರಿಂದ ಊರಿಗೆ ಹೋಗುವ ಸಂಭ್ರಮ. ಆಗೋಸ್ಟ್ ತಿಂಗಳಲ್ಲಿ ಊರಿಗೆ ಬಂದದ್ದಾಯಿತು.
ಹೆಬ್ರಿಯಲ್ಲಿ ಮಗಳು ಶುಭಾಲೊಡನೆ ಕೆಲದಿನಗಳು ಕಳೆದದ್ದೂ ಆಯಿತು.
ನಳಿನಿ 11/09/1980





ಸಪ್ಟಂಬರ 11, 1980 ಉಡುಪಿ ಪುತ್ತಿಗೆ ಮಠ 
ಪದ್ಮನಾಭ ಅಣ್ಣಯ್ಯ ನವರ ಮರು ಮದುವೆಯ ಪ್ರಸ್ತಾಪ. ಉದ್ಯಾವರದಲ್ಲಿ ದೊಡ್ಡಮ್ಮನ ಮನೆಯಲ್ಲಿ ಇದ್ದ, ಮಾಧವ  ರಾವ್ ಬಡೆಕಿಲ್ಲಾಯರ ಮಗಳು ನಳಿನಿಯನ್ನು ನೋಡಿ ಒಪ್ಪಿದ್ದಾಯಿತು. ಸಪ್ಟಂಬರ 11, 1980, ರಂದು ಉಡುಪಿಯ ಪುತ್ತಿಗೆ ಮಠದಲ್ಲಿ ಮದುವೆಯೂ ನಡೆದು ಹೋಯಿತು.
ನಂತರ ಅವಳ ಪಾಸ್ಪೋರ್ಟ್, ವೀಸಾ ಇತ್ಯಾದಿಗಳಿಗೆ ಓಡಾಟ, ಆಗ ಪಾರ್ಲಿಮೆಂಟ್ ಸದಸ್ಯರಾಗಿದ್ದ ಆಸ್ಕರ್ ಫಾರ್ನಂದೆಸ್ ಅವರೊಡನೆ ಪಾಸ್ಪೋರ್ಟ್ ಅರ್ಜಿಗೆ ಸಹಿ ಪಡೆದು ಪಾಸ್ಪೋರ್ಟ್ ಕಚೇರಿಗೆ ಕಳುಹಿಸಲಾಯಿತು.
ಇತ್ತ ನಾನು ಪುನಃ ನೈಜೆರಿಯಾದ, ಗೊಂಗೊಲ ರಾಜ್ಯದ  ಯೋಲ ನಗರಕ್ಕೆ ಬಂದು ಸಚಿವಾಲಯಕ್ಕೆ ರಿಪೋರ್ಟ್ ಮಾಡಿ, ಯೋಲದಲ್ಲಿ ಇರುವ ಹೈಸ್ಕೂಲ್, ಜನರಲ್ ಮುರ್ತಾಲ ಮೊಹಮದ್ ಕಾಲೇಜು  (General Murtala Mohammed College), ಭೌತಶಾಸ್ತ್ರದ ಅಧ್ಯಾಪಕನಾಗಿ ಪೋಸ್ಟಿಂಗ್ ಆಯಿತು. (ಜನರಲ್ ಮುರ್ತಾಲ ಮೊಹಮ್ಮದ್ ಅವರು ಕೆಲ ಸಮಯದ ಹಿಂದೆ ನೈಜೇರಿಯಾ ದೇಶದ ಸೈನಿಕರ ದಂಗೆಯಲ್ಲಿ (Military Coup) ಹತನಾಗಿದ್ದ.)
ಯೋಲದಲ್ಲಿ ಕೆಲಸ ಸಿಕ್ಕಿರುವುದು ನನ್ನ ಅದೃಸ್ಥ (Lucky) ಯಾಕೆಂದರೆ ರಾಜ್ಯದ ಹಲವಾರು ಭಾಗದ ಶಾಲೆಗಳಲ್ಲಿ ನೀರು, ವಿದ್ಯುತ್ ಅಭಾವ, ದೂರ ದೂರದ ಸ್ಥಳಗಳಿಗೆ ಸರಿಯಾದ ರಸ್ತೆಗಳೂ ಇರದ ಜಾಗಗಳು ಇದೆ.  ಕೆಲದಿನಗಳ ನಂತರ ಕಾಲೇಜಿನ ಆವರಣದಲ್ಲಿ ಒಂದು ಮನೆಯನ್ನೂ ನನಗೆ ನೀಡಲಾಯಿತು. ಅದು ಮರಗಳ ಮಧ್ಯ ಇರುವ, ಹಕ್ಕಿಗಳ ಚಿಲಿಪಿಲಿ ರಾಗ ಇರುವ prefabricated ಎರಡು ಕೋಣೆಯ  ಅಚ್ಚು ಕಟ್ಟಾದ ಮನೆ. ಹೀಗೆ ಕಾಲೇಜಿನಲ್ಲಿ ಭೋದನೆಯ ಕೆಲಸವೂ ಪ್ರಾರಂಭವಾಯಿತು.
ಯೋಲ ಕುಟೀರ 
ಇನ್ನು ಮಡದಿ ನಳಿನಿಯ ನೈಜಿರಿಯಗೆ ಬರುವ ಕಾತರ. ನಾಲ್ಕು ತಿಂಗಳ ನಂತರ ಜನವರಿ 29, 1981, ಅವಳು ಬೊಂಬಾಯಿ ಯಿಂದ ನೈರೋಬಿ, ಲಾಗೊಸ್ ಬಂದಾಗಿತ್ತು. ಅವಳನ್ನು ವಿದೇಶಕ್ಕೆ (foreign) ಗೆ ಕಳುಹಿಸಿಕೊಡಲು  ಪದ್ಮನಾಭ ಅಣ್ಣಯ್ಯ ಅವರ ಕಾರಿನಲ್ಲಿ ಊರಿಂದ ಒಂದು ದಂಡೇ ಬೊಂಬಾಯಿಗೆ ಬಂದಿತ್ತು. ಅವಳು ಪ್ರಥಮವಾಗಿ ವಿಮಾನದಲ್ಲಿ, ಅದೂ ಹೊರದೇಶಕ್ಕೆ ಪ್ರಯಾಣಿಸುವ ಸಂದರ್ಭ. ಕಾಣದ ಊರಿಗೆ ಅವಳನ್ನು ಒಂಟಿಯಾಗಿ ಕಳುಹಿಸಿ ಕೊಡುವುದನ್ನು ಅಣ್ಣಯ್ಯ ಬಹಳ ಬೇಸರಿಸಿ ಕೊಂಡಿದ್ದರು.
ಆಗ ನೈಜಿರಿಯಾದ ರಾಜಧಾನಿ (Capital) ಲಾಗೊಸ್ ಆಗಿತ್ತು. ಕೆಲ ವರ್ಷಗಳ ನಂತರ ಅದು ದೇಶದ ಮಧ್ಯ ಭಾಗದ ಅಭುಜ (Abhuja) ಎಂಬ ನಗರಕ್ಕೆ ಸ್ತಲಾಂತರ ವಾಯಿತು. ಲಾಗೊಸ್ ನಲ್ಲಿ ಸ್ನೇಹಿತ ರಾಮಚಂದ್ರ ಅವರು ವಿಮಾನ ನಿಲ್ದಾಣದಿಂದ ಅವರ ಮನೆಗೆ ಕರೆದು ಕೊಂಡು ಹೋಗಿ, ನಾನೂ ಅದೇ ದಿನ ಯೋಲದಿಂದ ವಿಮಾನದಲ್ಲಿ ಲಾಗೊಸ್ ಗೆ ಹೋಗಿ ಅವಳನ್ನು ಸೇರಿಕೊಂಡೆ. ನಂತರ ಒಟ್ಟಿಗೆ ವಿಮಾನದಲ್ಲಿ ಯೋಲ ಕ್ಕೆ ಬಂದು ಶಾಲೆಯಲ್ಲಿಯ ನಮ್ಮ ಕುಟಿರವನ್ನು ಸೇರಿದೆವು.

ಅದಾಗಲೇ ಸರಕಾರದ ವತಿಯಿಂದ ಸಾಲ ಪಡೆದುಕೊಂಡು ಇನ್ನೊಂದು ವೋಕ್ಸ್ ವಾಗನ್ (Volkswagen Beetle) ಬೀಟಲ್ ಕಾರೊಂದನ್ನು ಖರೀದಿಸಿಯಾಗಿತ್ತು. (Registration No. GG 9250 Y) GG ಅಂದರೆ ಗೊಂಗೊಲ ರಾಜ್ಯ, Y ಅಂದರೆ ಯೋಲ. ಅದೇ ಸಮಯಕ್ಕೆ Maths Professor ಸುಂದರೇಶನ್ ಅವರು ಸಹ ಯೋಲ ಪೋಲಿಟೆಕ್ನಿಕ್  (Yola Polytechnic) ಕಾಲೇಜಿನಲ್ಲಿ ಲೆಕ್ಚರರ್ (Lecturer) ಆಗಿ ಸೇರಿ ಅವರ ಕುಟುಂಬವೂ ಅಲ್ಲಿಯೇ ಮನೆ ಮಾಡಿದ್ದರು.
ರವಿ - ಬಾಲ್ಯ 
ಭಾರತೀಯರು ಅಲ್ಲಿ ಬಹಳಷ್ಟು ಮಂದಿ ಇದ್ದಿರಲಿಲ್ಲ. ಅಲ್ಲಿ ಕೆಲಸ ಮಾಡುತ್ತಿರುವ ಶ್ರೀಲಂಕಾದ ಪ್ರಜೆಗಳು ಸಹ ಆತ್ಮೀಯ ರಾಗಿರುತಿದ್ದರು. ಟೆಲಿಫೋನ್, ಮೊಬೈಲ್, ಇಂಟರ್ನೆಟ್ (Internet) ಯಾವುದೂ ಆವಿಷ್ಕಾರ ಆಗಿರದ ಕಾಲವಾಗಿತ್ತು.
ಹೀಗೆಯೇ ಕಾರಿನಲ್ಲಿ ಅಲ್ಲಿ, ಇಲ್ಲಿ ಸುತ್ತಾಟ, ಸ್ನೇಹಿತರೊಡನೆ ಹೊರಸಂಚಾರ (Picnic), ಬರ್ತ್ ಡೇ ಪಾರ್ಟಿ (Birthday Party) ಇತ್ಯಾದಿಗಳು. ತಿಂಗಳುಗಳು ಕಳೆಯಿತು, ನಳಿನಿಯು  ಗರ್ಭಿಣಿ. ಊರಿಗೆ ಹೋಗುವ ಯೋಚನೆ ಮಾಡಿಲ್ಲ. ಅಲ್ಲಿಯೇ ಸರಕಾರಿ ಆಸ್ಪತ್ರೆಯಲ್ಲಿ ಇರುವ ಡಾ. ಮಹಾಪಾತ್ರ ಸ್ನೇಹಿತ ವರ್ಗ ದಲ್ಲಿ ಇರುವವರಾದುದರಿಂದ ಯೋಲದಲ್ಲಿಯೇ ಇರುವ ನಿರ್ಧಾರ. ಪ್ರೇಮ ಸುಂದರೇಶನ್ ಅವರು ಅಮ್ಮನ ಸ್ಥಾನದಲ್ಲಿದ್ದು ಸಹಕರಿಸು ತಿದ್ದರು.

ಸ್ನೇಹ ಕೂಟ, ಯೋಲ 
ಜನವರಿ 6 , 1982, ಬೆಳಿಗ್ಗೆ  ಪುತ್ರನ ಜನನ. ಅವನು ರವಿಕಾಂತ ಎಂದು ಆಮೇಲೆ ಹೆಸರಿಸಿದೆವು. ಹಿಂದಿನ  ದಿನದ ರಾತ್ರಿ ನಳಿನಿಯು ಬಹಳಷ್ಟು ಪ್ರಸವ ವೇದನೆಯನ್ನು ಅನುಭವಿಸಿ, ರಾತ್ರಿಯಿಡೀ ಪ್ರೇಮಕ್ಕ ಹತ್ತಿರದಲ್ಲಿ ಇದ್ದು ಸಹಕರಿಸುತಿದ್ದರು. ಬೆಳಿಗ್ಗೆ ಸಿಸೇರಿಯನ್ ಅಪರೇಷನ್ ಮೂಲಕ ರವಿಯ ಜನನವಾಯಿತು. ಆತ್ಮಿಯ ಸ್ನೇಹಿತರಾಗಿದ್ದ ಜೂಡಿ ಮತ್ತು ಜಾಕೊಬ್ ಪ್ರಥಮವಾಗಿ ಸಂಭ್ರಮಿಸಿದವರು. ಈಗ ಹಲವಾರು ವರ್ಷಗಳಿಂದ ಜಾಕೊಬ್ ಅವರು ಕೇರಳದ ಅಲೆಪ್ಪಿ ನಗರದಲ್ಲಿ ನೆಲೆಸಿ, Exchange ಕಂಪೆನಿ ನಡೆಸುತ್ತಿರುವರು. ಇತ್ತೀಚಿಗೆ ನಾವು ಅಲ್ಲಿಗೆ ಭೇಟಿಗೆ ಹೋಗಿದ್ದೆವು.

ಪಾರ್ಟಿ 
ಕೆಲ ದಿನಗಳ ನಂತರ ತಾಯಿ ಮಗುವನ್ನು ಮನೆಗೆ ಕರೆದು ಕೊಂಡು ಬರಲಾಯಿತು. ಕೆಲ ದಿನಗಳ ಕಾಲ ಅಲ್ಲೇ ಹತ್ತಿರದಲ್ಲೇ ಇದ್ದ ಬೆಂಗಳೂರಿನ ಪ್ರೊಫೆಸರ್ ಪಂಡಿತ್ (ಯೋಲ ಪಾಲಿಟೆಕ್ನಿಕ್ ನಲ್ಲಿ ಕೆಲಸ ಮಾಡುತಿದ್ದರು) ಅವರ ಪತ್ನಿ ಪದ್ಮ ಅವರು ಮನೆಗೆ ಕಾಲ್ನಡಿಗೆಯಲ್ಲಿ ಬಂದು ಮಗುವಿಗೆ ಸ್ನಾನ ಮಾಡಿಸಿ ಹೋಗುತಿದ್ದರು.


ರವಿಯು ಆರೋಗ್ಯದಿಂದ ಬೆಳೆಯುತ್ತಿರುವುದರಿಂದ ದಿನಗಳು ಬಹಳ ಬೇಗ ಕಳೆಯುತಿದ್ದವು. ಸ್ನೇಹಿತರ ಮನೆಗಳಿಗೆ ಭೇಟಿ, ಹೊರಸಂಚಾರ (picnic), ಹೀಗೆ ಕಾಲ ಕಳೆಯುತ್ತಿತ್ತು.
ಗಣತಂತ್ರ ದಿವಸ, ಸಾಂಸ್ಕೃತಿಕ ಕಾರ್ಯಕ್ರಮ ,ಯೋಲ 
ಅಲ್ಲ್ಲಿಯ ಶಾಲೆಗಳಿಗೆ ಜುಲೈ - ಆಗೋಸ್ಟ್ ಬೇಸಿಗೆ ರಜೆ. ಎರಡು ವರ್ಷಕ್ಕೊಮ್ಮೆ ಸರಕಾರದಿಂದ ಊರಿಗೆ ಹೋಗಿ ಬರಲು ವಿಮಾನದ ಟಿಕೆಟನ್ನು ಕೊಡುತ್ತಿರುವರು, ಹಾಗೇ  1982 ರ ಜುಲೈ ತಿಂಗಳ ರಜೆಗೆ ಊರಿಗೆ ಹೋಗುವ ಮುನ್ನ ಲಂಡನ್ ನಲ್ಲಿ ಕೆಲವು ದಿನ ಇದ್ದು, ಅಲ್ಲಿಯ ಪ್ರೇಕ್ಷಣಿಯ ಸ್ತಳಗಳನ್ನು ನೋಡಿ ಬೊಂಬಾಯಿ ಹಾದಿಯಾಗಿ ಊರಿಗೆ ತೆರಳಿದೆವು.

ರವಿ  ನಾಮಕರಣ, ಬಿರ್ತಿ, ಸಾಲಿಕೇರಿ  2/10/1982 


ಲಂಡನ್ ಭೇಟಿ 
ಹಾಗೆಯೇ ಸಪ್ಟಂಬರ ತಿಂಗಳಲ್ಲಿ ವಾಪಸ್ಸು ನೈಜೆರಿಯಾದ ಯೋಲ ಪೇಟೆಗೆ ತೆರಳಿ , ಪುನ ಭೋದನೆಯ ಕಾಯಕ ಪ್ರಾರಂಭವಾಯಿತು. ಅಲ್ಲಿರುವ ಭಾರತೀಯರೊಡನೆ ಒಮ್ಮೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡಿದ್ದ ನೆನಪು. ಅದು ಗಣತಂತ್ರ ಸಂಭ್ರಮಾಚರಣೆ ಇರಬೇಕು. ಹಾಡುಗಳು, ನೃತ್ಯ, ಫಲಾಹಾರ ಇತ್ಯಾದಿ.
1983 ರ ಜುಲೈ ತಿಂಗಳಲ್ಲಿ ಯೋಲದಿಂದ ಸುಮಾರು 120 ಕಿ.ಮೀ. ದೂರದ ಗುಯುಕ್ ಎಂಬ ಹಳ್ಳಿಯ ಶಾಲೆಗೆ ವರ್ಗಾವಣೆ ಆಯಿತು.

ಮುಂದುವರಿಯುದು....... ಭಾಗ 6

Monday, July 20, 2020

AUTOBIOGRAPHY (4) - LIFE JOURNEY

ಮಂಗಳವಾರ, ಜುಲೈ,14. 2020
ಬಿರ್ತಿಮನೆ, ಬೆಂಗಳೂರು.

ಆತ್ಮ ಚರಿತ್ರೆ - (4): ಗೊಂಬೆ - ನೈಜಿರಿಯಾ  ( 1974 - 79) ಬದುಕಿನ ಪಯಣ 
ಈ ವಿಭಾಗದ ಆತ್ಮ ವ್ರತ್ತಾಂತ ಬರೆಯಲು ಅತ್ಯಂತ ದುಃಖವಾಗುತ್ತಿದೆ. ಕಾರಣ- ಜೀವನದ ಮರೆಯಲಾಗದ ದುರ್ಘಟನೆ.
ಉತ್ತರ ಪೂರ್ವ ನೈಜಿರಿಯಾದ, ಮೈದುಗುರಿಯಿಂದ ಗೊಂಬೆ ಎಂಬ ಸಣ್ಣ ಪೇಟೆಯಲ್ಲಿಯ ಶಾಲೆಯಲ್ಲಿ ಅಧ್ಯಾಪಕನಾಗಿ 1974 ಫೆಬ್ರವರಿ ತಿಂಗಳಲ್ಲಿ ಸೇರಿದ್ದಾಯಿತು.  ಶಿಕ್ಷಣ ಇಲಾಖೆಯಿಂದ ಸಾಲ ಪಡೆದು ಹೊಸ ವೋಕ್ಸ್ ವಾಗನ್ ಬೀಟಲ್


Registration No. NEA 1471

(Volkswagen Beetle) ಕಾರಿನಲ್ಲಿ 250 ಕಿ,ಮೀ. ದೂರದ ಗೊಂಬೆಗೆ ಹೊಸ ಕಾರಿನಲ್ಲಿ ಸ್ವತಃ  ಡ್ರೈವ್ ಮಾಡಿಕೊಂಡು ಬಂದ ಅನುಭವ. ಅಲ್ಲಿ ಜಿ. ಶ್ರೀರಾಮುಲು ಎಂಬವರ ಪ್ರಥಮ ಭೇಟಿ. ಅವರು ಆಂಧ್ರ ಪ್ರದೇಶದವರು, ಹೆಂಡತಿ, ಎರಡು ಮಕ್ಕಳೊಡನೆ ಗೊಂಬೆಯಲ್ಲಿ ವಾಸವಾಗಿದ್ದು ಅದೇ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು.
ಪೇಟೆಯಲ್ಲಿ ಮೂರು ಬೆಡ್ ರೂಮಿನ ಪೀತೋಕರಣ ಸಹಿತದ ಮನೆಯೊಂದು ನನಗೆ ಕೊಡಲಾಗಿತ್ತು. ಅದು ಶಾಲೆಯಿಂದ ಸುಮಾರು 4 ಕಿಲೋಮೀಟರು ದೂರದ ಮನೆ. ಬೆಳಿಗ್ಗೆ 8 ಗಂಟೆಗೆ ಶಾಲೆಗೆ ತೆರಳಿ ದಿನದ ಭೋಧನೆ ಕಾರ್ಯವನ್ನು ಮುಗಿಸಿ, ಮಧ್ಯಾಹ್ನ 2 ಗಂಟೆಗೆ ಮನೆ, ಊಟ ತಯಾರಿ. ಅಲ್ಲಿ ಭಾರತೀಯ ಸಸ್ಯಾಹಾರಿ ಹೋಟೆಲ್ ಯಾವುದೂ ಇಲ್ಲ. ಸಂಜೆ ಹೊತ್ತು ಗೊಂಬೆ  ಕ್ಲಬ್ ನಲ್ಲಿ ಲಾನ್ ಟೆನ್ನಿಸ್, ಸ್ನೂಕರ್ ಆಟದಲ್ಲಿ ಸಮಯ ಕಳೆಯುವಿಕೆ.  
ಜುಲೈ-ಆಗೋಸ್ಟ್ ಸಮಯ ಎರಡು ತಿಂಗಳ ರಜ  ಸಮಯ, ಈ  ಬಾರಿಯ (1974) ರಜೆಯನ್ನು ನೈಜೆರಿಯಾದ ಇತರ ಪೇಟೆ ಗಳಿಗೆ ಕಾರಿನಲ್ಲಿ ಸುತ್ತಾಟ. ಅಲ್ಲಿಯ ಪೇಟೆಗಳು ಬಹಳಷ್ಟು ದೂರ ದೂರ. 200, 300. 400 ಕ್ಕೂ ಹೆಚ್ಚಿನ ಕಿಲೋಮೀಟರ್ ದೂರ. ಬಿಯು, ಬವುಚಿ, ಕಾನೋ, ಜೋಸ್, ಯೋಲ, ಇತ್ಯಾದಿ ನಗರಗಳು. ಅಲ್ಲಿ ಭಾರತೀಯ, ಶ್ರೀಲಂಕಾ, ಸ್ನೇಹಿತರುಗಳ ಮನೆಯಲ್ಲಿ ಊಟ, ವಸತಿ. ಸಪ್ಟಂಬರ ತಿಂಗಳಲ್ಲಿ ಶಾಲೆ ಪುನಃ ಪ್ರಾರಂಭವಾಗಿದ್ದು ಭೋಧನೆಯ ಕಾಯಕ ಮುಂದುವರಿಯುವಿಕೆ.
1975 ರ ಜುಲೈ ತಿಂಗಳಲ್ಲಿ ರಜೆಗೆ ಊರಿಗೆ ಹೋಗುವ ಸಂಭ್ರಮ , ಸರಕಾರದಿಂದ ವಿಮಾನದ ಟಿಕೆಟ್ ಗೆ ಅರ್ಜಿ ಕಳುಹಿಸಿ, ಮಂಜೂರಾತಿ ಆಗಿ, ಟಿಕೆಟ್ ಪಡೆದದ್ದೂ ಆಯಿತು. ಜುಲೈ ತಿಂಗಳಲ್ಲಿ ಕಾನೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ. (ಗೊಂಬೆ ಯಿಂದ ಸುಮಾರು 600 ಕಿ,ಮೀ ದೂರ. )  ಅಲ್ಲಿಂದ ನೈಜಿರಿಯಾ ಏರ್ ವೇಸ್ (Nigeria Airways) ನಲ್ಲಿ  ಇಟಲಿಯ ರೋಮ್  ನಗರಕ್ಕೆ ಐದು ಗಂಟೆಯ ವಿಮಾನ ಪ್ರಯಾಣ. ಅಲ್ಲಿ ಕೆಲವು ಗಂಟೆಗಳ ಕಾಲ ಇದ್ದು, ಇನ್ನೂ 6 ಗಂಟೆಯ ಪ್ರಯಾಣ ಭಾರತದ ಬೊಂಬಾಯಿ ನಗರಕ್ಕೆ. ನಂತರ ನಿಲ್ದಾಣದಲ್ಲಿದ್ದು ಇಂಡಿಯನ್ ಏರ್ ಲೈನ್ಸ್ ನಲ್ಲಿ ಮಂಗಳೂರಿಗೆ ಪ್ರಯಾಣ. ಅಗ್ರಜ ಪದ್ಮನಾಭ ಅವರು ಕಾರಿನಲ್ಲಿ ಬಜಪೆ ನಿಲ್ದಾಣಕ್ಕೆ ಬಂದು, ಅವರೊಡನೆ ಮನೆ (ಬಿರ್ತಿ) ಗೆ. ಅವರಿಗೂ ಆಗ ಅದು ಹೆಮ್ಮೆಯ ವಿಷಯ - "ನನ್ನ ತಮ್ಮ ವಿದೇಶದಿಂದ ಬರುತಿದ್ದಾನೆ" ಸಂಭ್ರಮ.
"ಮದುವೆ" - ಏನೋ ಕಾತರ, ಕಳವಳ,  ಅಣ್ಣನ ಬಲವಂತ, ಹುಡುಗಿ ನೋಡಬೇಕು, ಈರ್ವರಿಗೂ ಒಪ್ಪಿಗೆ ಯಾಗಬೇಕು ... ಮುಂದುವರಿಸಿದರೂ ಸಮಸ್ಯೆ ಅದೇ.... ಹೆಚ್ಚು ಸಮಯ ಕಳೆಯದಯೇ ಹೆಬ್ರಿ ವಾಸುದೇವ ಆಚಾರ್ಯರ ತಂಗಿ ಗೀತಾಬಾಲಿ ಯನ್ನು ಒಪ್ಪಿ ಮದುವೆಯೂ ಆಗೋಸ್ಟ್ 31 ರಂದು ಹೆಬ್ರಿ  ದೇವಸ್ತಾನದ ಕಲ್ಯಾಣ ಮಂದಿರದಲ್ಲಿ ನಡೆದು ಹೋಯಿತು.
ನಂತರ ಮದರಾಸಿಗೆ ಎಲ್ಲೊ ಫೀವರ್ ಜ್ವರದ ಚುಚ್ಚುಮದ್ದು, ದೆಹಲಿಗೆ ನೈಜಿರಿಯಾದ ವೀಸಾ ಪಡೆದುಕೊಂಡು ಬಂದು ವಾಪಸ್ಸು ಗೊಂಬೆಗೆ ಪಯಣ.
ಅಲ್ಲಿಯ ಬದುಕು ಮುಂದುವರಿಕೆ, ರಜೆಯಲ್ಲಿ ಕಾರಿನಲ್ಲಿ ಸಾಕಸ್ತು ನೈಜಿರಿಯಾ ಸುತ್ತಾಟ, ಜೋಸ್, ಮಕುರ್ಡಿ, ಇಬಾದನ್, ಲಾಗೊಸ್(ರಾಜಧಾನಿ), ಜಾರಿಯಾ, ಇತ್ಯಾದಿ ದೂರ ದೂರ ಊರುಗಳು, ಪೇಟೆಗಳು. ರಾಜಧಾನಿ ಲಾಗೊಸ್ ನಗರದಲ್ಲಿ ಪೆಲತ್ತುರು ಡಾ ಅನಂತ್ ಆಚಾರ್ಯರ ಭೇಟಿ,  10 ದಿನಗಳ  ರಜೆಯಲ್ಲಿ 4000 ಕಿ.ಮೀ.ಕಾರಿನಲ್ಲಿ ಸುತ್ತಾಟ.  ವಾಪಸ್ಸು ಬಂದ  ನಂತರ ಗೀತಾಳಿಗೆ ಅದೇ ಶಾಲೆಯಲ್ಲಿ ಅಧ್ಯಾಪಕಿಯಾಗಿ ಸರಕಾರದಿಂದ ನೇಮಕ.

1977 ರ ಬೇಸಗೆ ರಜೆಗೆ ಊರಿಗೆ ಹೋಗುವ ತಯಾರಿ, ಆವಳು ಗರ್ಭಿಣಿ, ಕಾನೋ ಅಂತರ ರಾಷ್ರಿಯ ವಿಮಾನ ನಿಲ್ದಾಣದಿಂದ ಹೊರಟು ರೋಮ್ ನಗರ, ಬೊಂಬಾಯಿಗೆ ಬಂದು ಅಲ್ಲಿಂದ ಮಂಗಳೂರಿಗೆ ವಿಮಾನ. ಪದ್ಮನಾಭ ಅಣ್ಣಯ್ಯ ಮನೆಯವರು, ಹೆಬ್ರಿಯಿಂದ ಕೆಲವರನ್ನು ಕರೆದುಕೊಂಡು ಬಜಪೆ ನಿಲ್ದಾಣಕ್ಕೆ ಬಂದಿದ್ದ ನೆನಪು. ನಾವು ಕೊನೆಯದಾಗಿ ವಿಮಾನದಿಂದ ಇಳಿದದ್ದು ಕಾದು ಕಾದು ಅವರಿಗೆಲ್ಲಾ ನಿರಾಸೆ, ಕಾತುರ. ಕೊನೆಗೂ ಬಂದ್ರು, ಬಂದ್ರು... ಬಂದಿದ್ದಾಯಿತು.
ತದನಂತರ ಬಿರ್ತಿಗೆ ಬಂದು ಅವಳನ್ನು ಹೆಬ್ರಿಯಲ್ಲಿ ಬಿಟ್ಟು  ಸ್ವಲ್ಪ ದಿನಗಳ ನಂತರ ಒಂಟಿಯಾಗಿ ವಾಪಸ್ಸು ನೈಜಿರಿಯಾ ದೇಶಕ್ಕೆ ಪಯಣ  ಸಪ್ಟಂಬರ 29, 1977 ರಂದು ಹೆಬ್ರಿಯಲ್ಲಿ ಮಗಳ ಜನನ, ಶುಭಾ ಅವಳ ಹೆಸರು.
ಸುಮಾರು ನಾಲ್ಕು ತಿಂಗಳ ನಂತರ ಜನವರಿ 1978, ಆವಳು ಶುಭಾಳೋಡನೆ ಗೊಂಬೆ, ನೈಜಿರಿಯಾ ದೇಶಕ್ಕೆ ಪಯಣ.
ಹೀಗೆಯೇ ದಿನಗಳು ಕಳೆದವು. ಶುಭಾಳನ್ನು ನೋಡಿಕೊಳ್ಳಲು ನೈಜಿರಿಯಾದ ಪ್ರಜೆ  ಅಜ್ಜಿಯೊಬ್ಬಳನ್ನು  ನೇಮಕ ಮಾಡಿಕೊಂಡದ್ದು ಆಯಿತು. ಒಳ್ಳೆಯ ಅಜ್ಜಿ.
ಸಪ್ಟಂಬರ 1978, ಶುಭಾಳಿಗೆ ಒಂದು ವರ್ಷದ ಸಂಭ್ರಮ, ಅಲ್ಲಿಯ ಸುಮಾರು 30 ಭಾರತೀಯ ಕುಟುಂಬಗಳೊಂದಿಗೆ ಹುಟ್ಟು ಹಬ್ಬದ ಸಂಭ್ರಮಾಚರಣೆ. ಸುಂದರೇಶನ್, ರಾಮಚಂದ್ರ, ಗೋಸ್ವಾಮಿ, ಉಷಾ ಬೋಪಯ್ಯ, ಪರಮೇಶ್ವರಪ್ಪ ಹೀಗೆ ಕೆಲವರ ನೆನಪು. ಅಲ್ಲಿಯ ಭಾರತೀಯ, ಶ್ರೀಲಂಕಾ ಸ್ನೇಹಿತರುಗಳಿಗೆ ಒಟ್ಟು ಸೇರುವ ಒಂದು ಅವಕಾಶವಾಗಿತ್ತು.
ನವಂಬರ 1978 ದುರಂತ ... ಗೀತಾಳಿಗೆ ಆರೋಗ್ಯದಲ್ಲಿ ಏರುಪೇರು. ತಲೆನೋವು,  ಶುಭಾಳನ್ನು ಸುಂದರೇಶನ್ ಅವರ ಮನೆಯಲ್ಲಿ ಬಿಟ್ಟು 150 ಕಿ.ಮೀ. ದೂರದ ಬವುಚಿ ಆಸ್ಪತ್ರೆಗೆ ತಪಾಸಣೆಗೆ, ಅಲ್ಲಿಯ ವೈದ್ಯರ ಸಲಹೆಯ ಮೇರೆಗೆ, ಅವಳನ್ನು 1000 ಕಿ.ಮೀ. ದೂರದ ಇಬಾದನ್ ಎಂಬ ನಗರಕ್ಕೆ ಸ್ನೇಹಿತರ ಕಂಪೆನಿಯ ಚಿಕ್ಕ ವಿಮಾನದಲ್ಲಿ ವೈದ್ಯರೊಬ್ಬರೊಡನೆ ಪಯಣ, ಆಸ್ಪತ್ರೆಗೆ ದಾಖಲು. ಅಲ್ಲಿಯ ಕೊಡಗಿನ ಒಬ್ಬ ವೈದ್ಯರ ಆಶ್ವಾಸನೆ, ಮರುದಿನ ಅವಳಿಗೆ ಮಿದುಳಿನ ಆಪರೇಶನ್. ಅಲ್ಲಿಯ ಒಬ್ಬ ಶ್ರೀಲಂಕ ಸ್ನೇಹಿತ, ಆಶ್ಲೆ ಎಂಬವರ ಮನೆಯಲ್ಲಿ ನಾನಿದ್ದು, ನವಂಬರ 9, 1978, ಬೆಳಿಗ್ಗೆ ಪುನಃ ಆಸ್ಪತ್ರೆಗೆ ತಲುಪುವಾಗ ಆವಳು ನನ್ನಗಲಿ ಇಹಲೋಕವನ್ನು ತ್ಯಜಿಸಿಯಾಗಿತ್ತು.
NEW NIGERIAN NEWSPAPER 20/11/1978
ಅದೊಂದು ನನ್ನ ಬದುಕಿನ ಅತ್ಯಂತ ದುರದೃಷ್ಟಕರವಾದ ಘಟನೆ. ಒಂಟಿಯಾಗಿ ದಿಕ್ಕು ತೋಚದವನಾಗಿದ್ದೆ. ಮುಂದೆ ಏನು ಮಾಡುವುದು? ಯಾವುದೂ ತಿಳಿಯುತ್ತಿರಲಿಲ್ಲ. ಅಲ್ಲಿಯ ಭಾರತೀಯ ಸಮುದಾಯದವರು, ಶ್ರೀಲಂಕಾದ ಸ್ನೇಹಿತರು, ಅಲ್ಲಿಯೇ ಹತ್ತಿರವಿದ್ದ ಹಿರಿಯಡಕದ ಡಾ. ಆಚಾರ್ಯರು, ಇವರ ಸಹಕಾರದಿಂದ ಅವಳ ಕೊನೆಯ ಕಾರ್ಯವನ್ನು ಮುಗಿಸಿಯಾಯ್ತು.
ಮುಂದೇನು? ಇಬಾದನ್ ನಗರದಿಂದ ಒಂಟಿಯಾಗಿ ವಿಮಾನದಲ್ಲಿ  ಜೋಸ್ ನಗರವನ್ನು ತಲುಪಿ ಕಾರಿನಲ್ಲಿ ಅಲ್ಲಿಂದ ಬವುಚಿ ನಗರ ನಂತರ ನಾನಿದ್ದ ಸ್ಥಳ ಗೊಂಬೆಗೆ ತಲುಪಿದ್ದಾಯಿತು. ಮಗಳು ಶುಭಾ 14 ತಿಂಗಳ ಬಾಲೆ, ಇನ್ನು ನಡೆಯುತ್ತಾ ಇರಲಿಲ್ಲ, ಅಮ್ಮನನ್ನು ಹುಡುಕುವ ಕಣ್ಣುಗಳು, ಸಾಂತ್ವನ ಪಡಿಸದಿರುವಂಥ ಸನ್ನಿವೇಶ. ಸುಂದರೇಶ್ ಅವರ ಹೆಂಡತಿ ಪ್ರೇಮ, ಮಕ್ಕಳು ಪ್ರಿಯ, ಉಷಾ ಚೆನ್ನಾಗಿ ನೋಡಿಕೊಂಡಿದ್ದರು. ಅವಳನ್ನು ಕೂಡಿಕೊಂಡು  ಭಣ ಗುಟ್ಟುತ್ತಿರುವ ಮನೆಯನ್ನು ಸೇರಿದ್ದಾಯಿತು.
ಶಾಲೆಯ ಕ್ವಾರ್ಟರ್ಸ್ ಮನೆಯೆಲ್ಲಿ ಎಲ್ಲವು ಭಣ ಭಣ. ಶಾಲಾ ಅಧ್ಯಾಪಕರುಗಳು, ಸ್ನೇಹಿತರುಗಳು ಬಂದು ಸಾಂತ್ವನ ಮಾಡಿದ್ದೂ ಆಯಿತು. ಮನಸಿನಲ್ಲಿ ದುಗುಡ, ದುಮ್ಮಾನ, ಯಾಕೆ ಹೀಗಾಯಿತು? ಊರಲ್ಲಿ ವಿಷಯ ಹೇಗೆ ತಿಳಿಸಲಿ?
ಶುಭಾಳನ್ನು ನೋಡಿಕೊಳ್ಳುವ ಅಜ್ಜಿಯನ್ನು ಇಟ್ಟುಕೊಂಡು ಒಂದು ತಿಂಗಳು ಕಳೆದು ರಜೆಗೆ ಅರ್ಜಿಯನ್ನು ಕಳುಹಿಸಿ, ಅದು ಮಂಜುರಾತಿಯಾಗಿ ಊರಿಗೆ ಹೋಗುವ ತಯಾರಿ ನಡೆಯಿತು.
ಭಾರವಾದ ಮನಸ್ಸಿನಿಂದ ಶುಭಾಳನ್ನು ನೋಡಿಕೊಂಡು 600 ಕಿ.ಮೀ. ದೂರದ ಕಾನೋ ವಿಮಾನ ನಿಲ್ದಾಣ ತಲುಪಿ ರೋಮ್ ನಗರಕ್ಕೆ ತಲುಪಿದ್ದಾಯಿತು. ನಂತರ ಅಲ್ಲಿಂದ ಬೊಂಬಾಯಿ ತಲುಪಿ, ನಂತರ ಮಂಗಳೂರಿಗೆ ವಿಮಾನದಲ್ಲಿ ಪಯಣ. ಇನ್ನೂ ನಡೆಯಲು ಪ್ರಾರಂಬಿಸಿರದ ಮಗುವನ್ನು ನೋಡಿಕೊಂಡು ಮನೆಗೆ ಸುರಕ್ಷಿತವಾಗಿ ತಲುಪಿದ್ದೂ ಆಯಿತು. ಮಗಳಿಗೆ ನಾನೊಬ್ಬನೇ ಆಸರೆ. ಇತರರು ಅಪರಿಚಿತರು.
ನಂತರ ಹಲವಾರು ದಿನಗಳನ್ನು ಹೆಬ್ರಿಯಲ್ಲಿ ಕಳೆದು, ಅವಳನ್ನು ಹೊಸ ಪರಿಸರಕ್ಕೆ, ವಾತಾವರಣಕ್ಕೆ ಹೊಂದುವಂತೆ ಮಾಡಿ  ಅಗಲುವಿಕೆಯನ್ನು ಸಹಿಸಿಕೊಂಡು ಒಂದೆರಡು ತಿಂಗಳು ಕಳೆದದ್ದಾಯಿತು.
ಮಾರ್ಚ್ ತಿಂಗಳಲ್ಲಿ ಪುನಃ ನೈಜಿರಿಯಾದ ಗೊಂಬೆಗೆ ತೆರಳಿ  ಕೆಲಸಕ್ಕೆ ಹಾಜರು. ಮಡದಿ, ಮಗುವಿಲ್ಲದ ಒಂಟಿ ಜೀವನ. ಮನಸಿನಲ್ಲಿ ಒಂದೇ ಯೋಚನೆ. ಯಾಕೆ ಹೀಗಾಯಿತು? ಅದೇ ಸ್ತಳದಲ್ಲಿ ಮುಂದುವರಿಯಲು ಮನಸ್ಸು ಕೇಳದಾಯಿತು.

ಬಾಂಜುಲ್, ದಿ. ಗ್ಯಾಂಬಿಯಾ, ಪಶ್ಚಿಮ ಆಫ್ರಿಕಾ. 1979 - 80 
ಒಂದೆರಡು ತಿಂಗಳಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಆಫ್ರಿಕ ಖಂಡದ ಇನ್ನೊಂದು ಸಣ್ಣ ದೇಶ  ದಿ ಗ್ಯಾಂಬಿಯಾ (The Gambia) ಗೆ ತೆರಳಿ ಅಲ್ಲಿಯ ರಾಜಧಾನಿ ಬಾಂಜುಲ್ (Banjul)  ನಗರದಲ್ಲಿ ಗ್ಯಾಂಬಿಯಾ ಮುಸ್ಲಿಂ ಹೈಸ್ಕೂಲ್  (Gambia Muslim High School) ನಲ್ಲಿ 1979 ರ ಸಪ್ಟಂಬರ ತಿಂಗಳಲ್ಲಿ ಅಧ್ಯಾಪಕನಾಗಿ  ಸೇರಿದ್ದಾಯಿತು.



ದಿ ಗ್ಯಾಂಬಿಯಾ, ಸೆನೆಗಲ್ ದೇಶ ಸುತ್ತುವರಿದ, ಒಂದು ಸಣ್ಣ ದೇಶ. ಗ್ಯಾಂಬಿಯಾ ನದಿಯ ಸುತ್ತ ಸಮತಟ್ಟಾದ ಸ್ಥಳ ವಿರುವ ಜಾಗ. ಸುಮಾರು 25 - 50 ಕಿ.ಮೀ.ಅಗಲ, 300 ಕಿ,ಮೀ. ಉದ್ದ. ಮಧ್ಯದಲ್ಲಿ ನದಿ.



ಅಲ್ಲಿಯೂ ಒಂಟಿ ಜೀವನ, ವಾರಾಂತ್ಯ, ರಜೆಯಲ್ಲಿ ಬೀಚ್ ನೆ ಕಡೆಗೆ ತೆರಳಿ ಸಮಯ ಕಳೆಯುವುದು. ಬಾಂಜುಲ್ ಒಂದು ಸಣ್ಣ ನಗರ, ಅಲ್ಲಿನ ರಾಷ್ಟ್ರಪತಿ ಒಮ್ಮೆ ಶಾಲೆಗೆ ಬಂದಾಗ ಭೆಟ್ಟಿ ಯಾದದ್ದೂ ಇದೆ. ಸಂಬಳವೂ ಕಡಿಮೆ. ಪುನಃ ನೈಜಿರಯಾಕ್ಕೆ ಹೋಗುವ ಅಸೆ.

ಮುಂದುವರಿಯುವುದು.....ಭಾಗ 5 ...







Saturday, July 11, 2020

AUTOBIOGRAPHY (3) - LIFE JOURNEY(ವೃತ್ತಿ ಜೀವನ)

ಬಯೋಗ್ರಫಿ - 3 - ವೃತ್ತಿ ಜೀವನ, ಬದುಕಿನ ಪಯಣ 
ಶುಕ್ರವಾರ, ಜುಲೈ 10, 2020

ಎಲ್ಲಿಂದ ಪ್ರಾರಂಭಿಸಲಿ...?
1. ಲೆಕ್ಚರರ್ - ಮಣಿಪಾಲ ಇಂಜಿನಿಯರಿಂಗ್ ಕಾಲೇಜು, ಮಣಿಪಾಲ 
ಸುರತ್ಕಲ್ ಇಂಜಿನಿಯರಿಂಗ್ ಕಾಲೇಜಿನ ಎಮ್.ಟೆಕ್.ಅಭ್ಯಾಸವನ್ನು ಮೂರು ತಿಂಗಳಿಗೆ ಬಿಟ್ಟು, 1970 ರ ಅಕ್ಟೋಬರ ತಿಂಗಳಲ್ಲಿ ಮಣಿಪಾಲ ಇಂಜಿನಿಯರಿಂಗ್ ಕಾಲೇಜಿಗೆ (Manipal Engineering College) ಭೌತಶಾಸ್ತ್ರದ ಉಪನ್ಯಾಸಕನಾಗಿ (Physics Lecturer) ಸೇರಿದ್ದು ಆಯಿತು.

ಅದು ಪ್ರಥಮ ವರ್ಷದ, ಪ್ರಥಮ ಸೆಮಿಸ್ಟರ್ ನ ಇಂಜಿನಿಯರಿಂಗ್ ವಿಧ್ಯಾರ್ಥಿಗಳಿಗೆ ಭೌತಶಾಸ್ತ್ರದ ಭೋಧನೆ. ಸುಮಾರು 70-80 ವಿಧ್ಯಾರ್ಥಿ ಗಳಿರುವ ಕ್ಲಾಸಿನಲ್ಲಿ ಹಲವಾರು ಆಸಕ್ತಿ ಇಲ್ಲದೆ ಕುಳಿತಿರುವವರು, ಕೆಲವರು ಕೀಟಲೆ ಮಾಡಲೆಂದೇ ಕುಳಿತಿರುವವರು. ಕೆಲವೊಮ್ಮೆ ಅವರನ್ನು ನಿಭಾಯಿದುವುದೇ ಕಷ್ಟ ವಾದರೂ ಮುಂದುವರಿಸಿಕೊಂಡು ಒಂದು ಗಂಟೆಯ ಭೋಧನೆಯನ್ನು ಮಾಡುತಿದ್ದೆ. ಶ್ರೀ.ಕೆ. ಮೋಹನ ಪೈ (ವಿಭಾಗದ ಮುಖ್ಯಸ್ಥ), ಐ. ನಾರಾಯಣ ಅವರು  ಸಹೋದ್ಯೋಗಿ ಗಳಗಿದ್ದರು. ಬಿ. ವಿ.ಕೃಷ್ಣಮೂರ್ತಿ ಅವರು ಪ್ರಾಂಶುಪಾಲ ರಾಗಿದ್ದ ನೆನಪು.

ಇದೇ ಸಮಯದಲ್ಲಿ ವಿದೇಶಕ್ಕೆ ಹೋಗಿ ಕೆಲಸ ಮಾಡುವ ಹಂಬಲ, ಅಸೆ ಸುರುವಾಯ್ತು. ಆಫ್ರಿಕ, ಅಮೇರಿಕ, ಆಸ್ಟ್ರೇಲಿಯ, ಇಂಗ್ಲಂಡ್ ಮುಂತಾದ ದೇಶಗಳಿಗೆ, ಕೆಲಸ ಹುಡುಕುವುದು, ಅರ್ಜಿ ಕಳುಹಿಸುವುದು ನಿರಂತರವಾಗಿ ನಡೆಯುತ್ತಿತ್ತು. ಈಗಿದ್ದಂತೆ ಆಗ ಇಮೈಲ್, ಇಂಟರ್ನೆಟ್ ಸೌಲಭ್ಯಗಳು ಇರಲಿಲ್ಲ. ಅಂಚೆ ಮೂಲಕ ಅರ್ಜಿ ಕಳುಹಿಸುವುದು, ಉತ್ತರಕ್ಕಾಗಿ ಕಾಯುವುದು. ಇದೇ, ಸಮಯದಲ್ಲಿ ಪದ್ಮನಾಭ ಅಣ್ಣನ ಸ್ನೇಹಿತರೊಬ್ಬರು, ಶ್ರೀ ನಾರಾಯಣ ಪದಕಣ್ಣಾಯರು, ಆಫ್ರಿಕ ಖಂಡದ ಸಿಯಾರ ಲಿಯೋನ್ ಎಂಬ ದೇಶದ ರಾಜಧಾನಿ  ಫ್ರಿಟೌನ್ ಎಂಬಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿರುವುದು ತಿಳಿದು, ಅವರು ರಜೆಯಲ್ಲಿ ಬಂದಿರುವುದರಿಂದ ಮಂಗಳೂರಿಗೆ ಹೋಗಿ ಅವರನ್ನು ಭೇಟಿ ಮಾಡಿ, ಅರ್ಜಿಯೊಂದನ್ನು ಕೊಟ್ಟು ಬಂದಿದ್ದಾಯಿತು. ಅವರು ವಾಪಸ್ಸು ಹೋದ ನಂತರ ಅದಕ್ಕೆ ಪುಷ್ಟಿ ಕೊಡುವುದಾಗಿ ತಿಳಿಸಿದ್ದು ಸಂತಸವಾಯಿತು.

2. ಮೆತೊದಿಸ್ಟ್ ಗರ್ಲ್ಸ್ ಹೈ ಸ್ಕೂಲ್, ಫ್ರಿ ಟೌನ್ (Methodist Girls High school, Freetown, Sierra Leone))
ಸುಮಾರು ಜುಲೈ 1971 ರ ಸಮಯದಲ್ಲಿ ಅಲ್ಲಿನ ಮೆತಡಿಸ್ಟ್ ಗರ್ಲ್ಸ್ ಹೈಸ್ಕೂಲ್ (Methodist Girls High School, Freetown) ನಲ್ಲಿ ಭೌತಶಾಸ್ತ್ರದ ಅಧ್ಯಾಪಕ ಕೆಲಸಕ್ಕೆ ಸೇರಲು ಕಾಗದವು ಬಂತು. ಖುಷಿಯೋ, ಖುಶಿ. ವಿದೇಶಕ್ಕೆ ಹೋಗುವ ಸಂಭ್ರಮ, ಕಾತುರ. ಇನ್ನು ಹೊರ ದೇಶಕ್ಕೆ ಹೋಗುವ ತಯಾರಿ, ಪಾಸ್ ಪೋರ್ಟ್,ವೀಸಾ , ವಿಮಾನದ ಟಿಕೆಟ್, ಆರೋಗ್ಯದ ಕಾರ್ಡ್, ಇತ್ಯಾದಿ, ಇತ್ಯಾದಿ. ಕಾಲೇಜಿಗೆ ಹೋಗುವ ಕೆಲಸ ಮುಂದುವರಿಯುತ್ತಾ ಇತ್ತು. ಒಂದೆರಡು ತಿಂಗಳಲ್ಲಿ ಪಾಸ್ ಪೋರ್ಟ್ ಸಿಕ್ಕಿಯೂ ಆಯಿತು.
ಫ್ರೀ ಟೌನ್ ನಲ್ಲಿ ಕೆಲಸಕ್ಕೆ ಸೇರುವ ಪತ್ರದೊಂದಿಗೆ, ದೆಹಲಿಯ ಸಿಯಾರ ಲಿಯೋನ್ ಎಂಬಸ್ಸಿಗೆ (High Commission) ತೆರಳಿ ವೀಸಾ ಅರ್ಜಿಯನ್ನು ಕೊಟ್ಟು ಆಯಿತು. ಅವರಿಗೆ ಫ್ರಿ ಟೌನ್ ನಿಂದ confirmation ಬರುವ ವರೆಗೆ ಕಾಯಬೇಕು ಎಂದು ತಿಳಿಸಿದರು. ಹಾಗೆ ದೆಹಲಿಯಿಂದ ವಾಪಸ್ಸು ಬಂದು ಕಾಲೇಜಿನ ಕೆಲಸ ಮುಂದುವರಿಸಿ, ದಿನಾ ವೀಸಾ ಕ್ಕಾಗಿ ಕಾಯಬೇಕಾಯಿತು. ಆಗಸ್ಟ್, ಸೆಪ್ಟೆಂಬರ, ಅಕ್ಟೋಬರ ತಿಂಗಳುಗಳು ಕಳೆಯುತ್ತಿತ್ತು.  ಇಂಜಿನಿಯರಿಂಗ್ ಕಾಲೇಜಿಗೆ ರಾಜೀನಾಮೆ ಕೊಟ್ಟು, ಅಲ್ಲಿಂದ ಹೊರ ಬಂದೂ ಆಯಿತು.
 ವಿದೇಶ ಪ್ರಯಾಣ, ಆಫ್ರಿಕಾದ ಸಿಯಾರ ಲಿಯೋನ್ ದೇಶದ ಫ್ರಿಟೌನ್ :
ಅಂತೂ ಅಕ್ಟೋಬರ 15 ರ ಸುಮಾರಿಗೆ ವೀಸಾ ಬಂತು. ಮಂಗಳೂರಿನಿಂದ, ಬೊಂಬಾಯಿ, ಇಜಿಪ್ಟಿನ ಕೈರೋ, ನೈಜಿರಿಯಾದ ಲಾಗೊಸ್ ನಂತರ ಫ್ರಿ ಟೌನ್ .... ವಿಮಾನದ ಪಯಣ.

ಸೀತಾರಾಮ ಅಣ್ಣಯ್ಯ, ಅಪ್ಪಯ್ಯ, ನಾನು,ಶೋಭಾ, ಪದ್ಮನಾಭ ಅಣ್ಣಯ್ಯ, ಲೀಲ ಅತ್ತಿಗೆ, ಶ್ರೀಕಾಂತ, ಸುರೇಶ.
ಉಡುಪಿಯ ಗುರುಕೃಪ ಸ್ಟುಡಿಯೋದ ಮುಂಭಾಗ 

ಪ್ರಥಮವಾಗಿ ವಿದೇಶಕ್ಕೆ ಹೋಗುವ ಸಂಭ್ರಮ. ಅಣ್ಣನ ಅಂಬಾಸಡರ್ ಕಾರಿನಲ್ಲಿ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಪ್ರಯಾಣ. ದಾರಿಯಲ್ಲಿ ಕಟಿಲಿನ ದೇವಸ್ಥಾನಕ್ಕೆ ಭೇಟಿ, ದೇವರ ದರ್ಶನ, ಮತ್ತೆ ವಿಮಾನ ನಿಲ್ದಾಣ.
ಮಧ್ಯಾಹ್ನ 2 ಗಂಟೆಗೆ ಇಂಡಿಯನ್ ಏರ್ಲೈನ್ಸ್ ವಿಮಾನ ಬಂದು, ಎಲ್ಲರಿಗೆ ಬೈ ಬೈ ಹೇಳಿ, ಪ್ರಥಮವಾಗಿ ವಿದೇಶಕ್ಕೆ ಹೋಗುವ ಪ್ರಾರಂಭ. ಬೊಂಬಾಯಿ ವಿಮಾನ ನಿಲ್ದಾಣ ಸೇರಿ, ಮುಂದಿನ ಪ್ರಯಾಣ ಕೈರೋಗೆ, ಮಧ್ಯರಾತ್ರಿಯ ವರೆಗೆ ಕಾದು,ವಿದೇಶಕ್ಕೆ ಹೋಗುವ ಕ್ರಮಗಳನೆಲ್ಲ, ಪಾಸ್ಪೋರ್ಟ್, ಎಮಿಗ್ರೆಶನ್ ಚೆಕ್, ವೀಸಾ ಚೆಕ್, ಸೆಕ್ಯುರಿಟಿ ಎಲ್ಲ ಮುಗಿಸಿ ಅಂತರ ರಾಷ್ಟೀಯ ವಿಮಾನ ಏರಿದ್ದೂ ಆಯಿತು. ಮೂರು ಗಂಟೆಯ ಪಯಣ ಕೈರೋ ಗೆ, ಅಲ್ಲಿ ಎರಡು ಗಂಟೆಗಳ ಕಾಲ ಕಾದು, ನೈಜಿರಿಯಾದ ರಾಜಧಾನಿ ಲಾಗೊಸ್ ಗೆ ಇನ್ನೊಂದು ವಿಮಾನದಲ್ಲಿ ಪ್ರಯಾಣ. ಅಲ್ಲಿಂದ ಫ್ರಿ ಟೌನ್ ನಗರಕ್ಕೆ ಮಾರನೇ ದಿನ ವಿಮಾನ ಇದ್ದುದರಿಂದ ರಾತ್ರಿ ಹೋಟೆಲಿನಲ್ಲಿ ಇರುವಿಕೆ. ಮಾರನೇ ದಿನ ಬೆಳಿಗ್ಗೆಯ ನೈಜಿರಿಯಾ ಏರ್ ವೇಸ್ ನಲ್ಲಿ ಪಶ್ಚಿಮ ಆಫ್ರಿಕಾದ (West Africa) ಘಾನಾ, ಐವರಿ ಕೋಸ್ಟ್,ದೇಶಗಳನ್ನು ದಾಟಿ ಸಿಯಾರ ಲಿಯೋನ್ ನ ರಾಜಧಾನಿ ಫ್ರಿ ಟೌನ್ ತಲುಪಿದ್ದಾಯಿತು. ಅದಾಗಲೇ ಪದಕನ್ನಾಯರು, ಅವರ ಪತ್ನಿ (ವಸಂತಿ), ಮಕ್ಕಳು (ಶಮ, ಕಿಶನ್) ಅವರೊಡನೆ ಶಾಲೆಯ ಆವರಣದಲ್ಲಿ ವಾಸವಗಿದ್ದರಿಂದ ಅವರ ಮನೆಗೆ ಹೋದದ್ದೂ ಆಯಿತು. ಕೆಲ ದಿನಗಳ ನಂತರ, ಬೇರೊಂದು ಕ್ವಾರ್ಟರ್ಸ್ ಸಿಕ್ಕಿ ಅಲ್ಲಿಯ ವಾಸ ಪ್ರಾರಂಭವಾಯಿತು.
ಶಾಲೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಪಾಠಗಳು. ಹೈಸ್ಕೂಲ್ ಹೆಣ್ಣು ಮಕ್ಕಳು, ಸಿಯಾರ ಲಿಯೋನ್ ಪ್ರಜೆಗಳು, ಆಫ್ರಿಕಾದ ಕಪ್ಪು ಬಣ್ಣ, ಹೊಸತರಲ್ಲಿ ಎಲ್ಲವೂ ಭಿನ್ನವಾಗಿ ಕಂಡಿತು. ಸ್ವಲ್ಪ ಸಮಯದ ನಂತರ ಅದು ಅಭ್ಯಾಸವಾಯಿತು. ವಾರಾಂತ್ಯದಲ್ಲಿ ಅಲ್ಲಿ, ಇಲ್ಲಿ ತಿರುಗಾಟ, ಪೇಟೆ ಫ್ರೀಟೌನ್ ಒಂದು ಸಣ್ಣ ಜಾಗ, ಒಂದು ಸೆಕೆಂಡ್ ಹ್ಯಾಂಡ್ ಮೋಟಾರ್ ಸೈಕಲನ್ನು ಕೊಂಡದ್ದಾಯಿತು. ಪೇಟೆಯಲ್ಲಿ ಅದನ್ನು ನಿಲ್ಲಿಸಿ ಒಂದು ಗ್ರಂಥಾಲಯಕ್ಕೆ ಹೋಗಿ ವಾಪಸ್ಸು ಬರುವಾಗ ಅದು ಕಾಣೆಯಾಗಿತ್ತು. ನಂತರ ಅದರ ಸುದ್ದಿಯೇ ಸಿಕ್ಕಿಲ್ಲ.


ಶ್ರೀಲಂಕಾದವರಾದ ರಂಜಿತ್ ಕುಟ್ಟಪಿಟಿಯ, ಕಂದವೇಲು  ಸ್ನೇಹಿತರಾಗಿದ್ದರು. ಅಂದು ವರ್ಷದ ನಂತರ ಒಂದು ಸಣ್ಣ ಸೆಕೆಂಡ್ ಹ್ಯಾಂಡ್ ಮಿನಿ ಕಾರೊಂದನ್ನು ಖರೀದಿಸಿ ಅದರಲ್ಲಿ ಡ್ರೈವಿಂಗ್ ಅಭ್ಯಾಸ ಪ್ರಾರಂಬಿಸಿ ಲೈಸೆನ್ಸ್ ಪಡಕೊಂಡಿದ್ದೂ ಆಯಿತು.
ಒಂದು ನೂರು ಕಿಲೋಮೀಟರು ದೂರದ "ಬೊ" ಎಂಬ ಸಣ್ಣ ಸ್ತಳಕ್ಕೆ ಕೆಲವರು ಬಾರಿ ಹೋದ ನೆನಪು.ಭಾರತೀಯ ಹೋಟೆಲ್ಲುಗಳು ಎಲ್ಲೂ ಇರದು.
1973 ರ ಜುಲೈ/ಆಗೋಸ್ಟ್ ಸಮಯದಲ್ಲಿ ನೈಜಿರಿಯಾ ದೇಶದ  ಸರಕಾರಿ ಶಾಲೆಗಳಿಗೆ ಅಧ್ಯಾಪಕರುಗಳು ಬೇಕೆಂಬ ಸುದ್ದಿಯಿಂದ ಅಲ್ಲಿಯ ಶಿಕ್ಷಣ ವಿಭಾಗಕ್ಕೆ ಅರ್ಜಿಯನ್ನು ಕಳುಹಿಸಿ, ಅಲ್ಲಿಯ ಹೈಕಮಿಷನ್ ನಲ್ಲಿ ಇಂಟರ್ವ್ಯೂ ನಡೆದು, ಆಯ್ಕೆಯೂ ಆಯಿತು. ಎಮ್. ಜಿ. ಎಚ್.ಎಸ್.ಗೆ ರಾಜೀನಾಮೆ ಇತ್ತು, 1974 ಜನವರಿಯಲ್ಲಿ ಊರಿಗೆ ಬಂದು, ಫೆಬ್ರವರಿ ತಿಂಗಳಲ್ಲಿ ಪುನಃ ನೈಜಿರಿಯಾ ದೇಶದ ಮೈದುಗುರಿ ಎಂಬ ಸ್ಥಳಕ್ಕೆ ಹೋಗಿ, ಒಂದು ತಿಂಗಳು ಹೋಟೆಲಿನಲ್ಲಿ ಇದ್ದು ಕಾದು, ಅಲ್ಲಿಂದ 250 ಕಿ.ಮಿ.ದೂರದ ಗೊಂಬೆ ಎಂಬ ಸಣ್ಣ ಪೇಟೆಯಲ್ಲಿಯ Doma Government Secondary School, ಭೌತಶಾಸ್ತ್ರದ ಅಧ್ಯಾಪಕನಾಗಿ ಕೆಲಸ ಪ್ರಾರಂಭಿಸಿದ್ದಾಯಿತು.

ಮುಂದುವರಿಯುವುದು.... ಭಾಗ 4.............

Wednesday, July 8, 2020

AUTOBIOGRAPHY (2) - ಕಾಲೇಜು ದಿನಗಳು

ಬಿರ್ತಿಮನೆ , ಬೆಂಗಳೂರು.
ಶುಕ್ರವಾರ, ಜುಲೈ 3, 2020
ಆತ್ಮ ಚರಿತ್ರೆ - ಭಾಗ 2 - ಕಾಲೇಜು ದಿನಗಳು.
ಎಮ್.ಜಿ.ಎಮ್. ಕಾಲೇಜು, ಉಡುಪಿ. ( 1964 - 68 )
ನನ್ನ ಬಯೋಗ್ರಫಿಯನ್ನು ರವಿಯ ಸಲಹೆಯಂತೆ  ಕನ್ನಡದಲ್ಲಿ ಬರೆಯುವ ಪ್ರಯತ್ನವನ್ನು ಮಾಡುತಿದ್ದೇನೆ.
1964 ರಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದು, ಪ್ರಥಮ ದರ್ಜೆಯಲ್ಲಿ, ದಿಸ್ತಿoಕ್ಶನ್ , ಪಾಸಾದ ನಂತರ ಕಾಲೇಜು ಸೇರುವ ಸಂದರ್ಭ. ಅ ಕಾಲದಲ್ಲಿ ಬ್ರಹ್ಮಾವರದಲ್ಲಿ ಮುಂದಿನ ಅಭ್ಯಾಸಕ್ಕೆ ಅವಕಾಶ ಇಲ್ಲದ ಕಾರಣ, 12 ಕಿಲೋಮೀಟರು ದೂರದ ಉಡುಪಿಯಲ್ಲಿಯ ಎಮ್.ಜಿ.ಎಮ್. ಕಾಲೇಜಿಗೆ ಪಿ. ಯು.ಸಿ.ವಿಜ್ಞಾನ ವಿಭಾಗಕ್ಕೆ ಸೇರಿದ್ದಾಯಿತು.
ಎಮ್.ಜಿ.ಎಮ್.ಕಾಲೇಜು, ಉಡುಪಿ 
ಶ್ರೀಯುತ ಕು.ಶಿ.ಹರಿದಾಸ ಭಟ್ಟರು ಕಾಲೇಜಿನ  ಪ್ರಾಂಶುಪಾಲರಾಗಿದ್ದ ಸಮಯ. ಅಂಥಹ ಪಟ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವಿರಲಿಲ್ಲ , ಕಾರಣ- ಸಂಜೆ ಕಾಲೇಜು ಕ್ಲಾಸುಗಳು ಮುಗಿದೊಡನೆ 12 ಕಿಲೋಮೀಟರು ದೂರದ ಬಿರ್ತಿ ಸಾಲಿಕೆರಿ ಯಲ್ಲಿ ಇರುವ ಮನೆಗೆ ಹೋಗುವ ಅವಸರ.  ಸುಮಾರು ಒಂದು ಗಂಟೆಯ ಕಾಲ ಸೈಕಲಿನಲ್ಲಿ ಏರು ಇಳಿತಗಳನ್ನು ಅನುಭವಿಸಿ ಮನೆಗೆ ಸೇರಬೇಕು. ಕೆಲವೊಮ್ಮೆ ದಾರಿಯಲ್ಲಿ ಅಂಬಾಗಿಲಿನ ಹತ್ತಿರದ ಬಾಬಿ ಅಕ್ಕನ ಮನೆ ಮಾಯಗುಂಡಿ ಯಲ್ಲಿ ಉಳಿದದ್ದೂ ಇದೆ. ಮಧ್ಯಾಹ್ನದ ಹೊತ್ತು ಉಡುಪಿಯ ಕೃಷ್ಣ ಮಠದ ಭೋಜಲ ಶಾಲೆಯಲ್ಲಿ ಊಟ.
ಕೆಲ ಸಮಯದ ನಂತರ ಅಣ್ಣನ ಸೈಕಲ್ ಸಹ ಸಿಕ್ಕಿತು. ಅದನ್ನು ಉಪಯೋಗಿಸಿ, ಬೆಳೆಗ್ಗೆ 12 ಕಿಲೋಮೀಟರು ತುಳಿದು ಕಾಲೇಜಿಗೆ ಸೇರುವುದು. ಸ್ವಲ್ಪ ಆಯಾಸ ಇದ್ದರೂ, ಪಾಠಗಳತ್ತ ಗಮನ. ಮಧ್ಯಾನ್ನ ಕೃಷ್ಣ ಮಠದ ಭೋಜನಶಾಲೆಗೆ ಊಟಕ್ಕೆ, ಪುನ 2 ಗಂಟೆಗೆ ಕಾಲೇಜಿಗೆ ವಾಪಸ್ಸು.ಸಂಜೆ 5 ಗಂಟೆಗೆ ಪುನ: ವಾಪಸ್ಸು ಬಿರ್ತಿಗೆ ಸೈಕಲಿನಲ್ಲಿ.
ಪಿ ಯು ಸಿ ಪರೀಕ್ಷೆಯೂ ಮುಗಿದು, ಫಲಿತಾಂಶ ಬಂದು ಪ್ರಥಮ ದರ್ಜೆಯಲ್ಲಿ ಪಾಸಾಯಿತು.
1965 ಜೂನ್, ಪುನ: ಬಿ ಎಸ್.ಸಿ ಕ್ಲಾಸುಗಳಿಗೆ ಸೇರುವ ಅವಸರ, ಸೇರಿದ್ದಾಯಿತು, ಎಮ್.ಪಿ.ಸಿ ವಿಭಾಗ, ಅಂದರೆ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ , ಮುಖ್ಯವಾದ ವಿಷಯಗಳು. (Maths, Physics, Chemistry)


ಎಡದಿಂದ ಬಲಕ್ಕೆ ಕುಳಿತವರು: 1. ಕಾಣುವುದಿಲ್ಲ, 2. ಶ್ರೀಪತಿ ಆಚಾರ್ಯ 3. ತಂತ್ರಿಯವರು 4. ಕು.ಶಿ ಹರಿದಾಸ ಭಟ್ (ಪ್ರಾಂಶುಪಾಲರು) 5. ಎಸ್. ರಾಮದಾಸ್ 6. ಯು. ಎಲ್. ಆಚಾರ್ 7. ಬಿ.ವಿ.ಆಚಾರ್ಯ 8. ಐತಾಳರು 
ಮೂರು ವರ್ಷದ ಪಾಠಗಳು, ಪ್ರಥಮ ವರ್ಷ ಕಾಲೇಜು ಪರೀಕ್ಷೆ, ಮುಖ್ಯ ವಿಷಯಗಳೊಡನೆ ಇಂಗ್ಲಿಷ್, ಹಿಂದಿ ಮತ್ತು ಸಮಾಜಶಾಸ್ತ್ರ (Sociology). ಕೃಷ್ಣಪ್ಪ ಎಂಬವರು ಅದ್ಭುತವಾದ ಇಂಗ್ಲಿಷ್ ಲೆಕ್ಚರರ್, ಐತಾಳರು ಪಾಪದ ಹಿಂದಿ ಲೆಕ್ಚರರ್ ಹಾಗೂ ಸಮಾಜಶಾಸ್ತ್ರ ಮಧ್ಯಾನ್ನ ಹೊತ್ತಿನ ನಿದ್ದೆ ಬರುವ ಸಮಯದ ಪಾಠ.
ಎರಡನೇ ವರ್ಷದಲ್ಲಿ ಬರೇ ಮೂರು ವಿಷಯಗಳು. ಗಣಿತ - ತಂತ್ರಿಯವರು, ಬೋರ್ಡಿಗೆ ತಿರುಗಿ ಲೆಕ್ಕವನ್ನು ಬರೆಯುತ್ತಾ ಇರುವವರು, ಕೆ. ಹರಿದಾಸ ಭಟ್ ಮತ್ತು ರಾಘವೇಂದ್ರ ಆಚಾರ್ ಭೌತಶಾಸ್ತ್ರದ ಪಾಠ ಮಾಡುವವರು. ಆಲ್ವಿನ್ ಡಿಸೋಜ, ರಸಾಯನಶಾಸ್ತ ಪಾಠ ಗಳನ್ನು ಮಾಡಿದ ನೆನಪು. ಸುಮಾರು 50 ವರ್ಷಗಳ ಹಿಂದಿನ ನೆನಪು. ವರ್ಷಾಂತ್ಯದ ಪರೀಕ್ಷೆಯಲ್ಲಿ ಒಳ್ಳೆಯ ಮಾರ್ಕುಗಳನ್ನು ಪಡೆದದ್ದು ಆಯಿತು.
ಮೂರನೆ ವರ್ಷ ಕೇವಲ ಎಅರದು ವಿಷಯಗಳು-  ಗಣಿತ - ಬ್ರಹ್ಮಾವರದ ಶ್ರೀ ಬಿ.ವಿ. ಆಚಾರ್ಯರು Maths Professor ಆಗಿದ್ದರು, ಹಾಗೂ ಉಡುಪಿಯ ಶ್ರೀ ಯು. ಎಲ್. ಆಚಾರ್ಯರು ಮತ್ತು ಕೆ. ರಾಮದಾಸ್ ಭೌತ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.
ಗಣಿತ (Maths) ವು ನನ್ನ ನೆಚ್ಚಿನ ವಿಷಯವಾಗಿತ್ತು. ಹೆಚ್ಚಿನ ಸಮಯವನ್ನು ಅದರಲ್ಲೇ ಕಳೆಯುತ್ತಿದ್ದೆ.
ಕಳೆದ ಎರಡು ವರ್ಷಗಳಿಂದ ಮನೆಗೆ ದಿನಾಗಲು ಹೋಗಿಬರಲು ಕಷ್ಟವಗುತ್ತ ಇರುವುದರಿಂದ ಉಡುಪಿಯ ಹತ್ತಿರದ ಕಲ್ಸಂಕ ಶನೈಯವರ ಮನೆಯ ಉಪ್ಪರಿಗೆಯಲ್ಲಿ ರೂಮೊಂದರಲ್ಲಿ ಐದು ಜನ ಸ್ನೇಹಿತರೊಡನೆ ವಾಸವಾಗಿರುತಿದ್ದೆವು.
ರಾಮಚಂದ್ರ ಸೋಮಯಾಜಿ, ರಾಮಚಂದ್ರ ಐತಾಳ, ಪದ್ಮನಾಭ ಸಹಸ್ರ, ಜಯರಾಮ ಶೆಟ್ಟಿ ಇವರುಗಳು. ಅದೊಂದು ಅದ್ಭುತ ಅನುಭವ. ಸ್ಟೋವ್ ನಲ್ಲಿ ಅಡಿಗೆಯನ್ನೂ ಮಾಡಿಕೊಂಡು ಊಟವನ್ನು ಮಾಡುತಿದ್ದೆವು.
ಜಯರಾಮ ಸೋಮಯಾಜಿ, ಜಯರಾಮ ಶೆಟ್ಟಿ, ರಾಮಚಂದ್ರ ಸೋಮಯಾಜಿ, ಪದ್ಮನಾಭ ಸಹಸ್ರ, ರಾಮಚಂದ್ರ ಐತಾಳ.
ಸುಮಾರು 50 ವರ್ಷಗಳ ನಂತರ , ಕಳೆದ ಅಕ್ಟೋಬರ್ ತಿಂಗಳಲ್ಲಿ, ಆಗಿನ ಗೆಳೆಯರಾಗಿದ್ದ ಹಳೆಯ  ಬೆಂಗಳೂರಿನಲ್ಲಿ ಭೇಟಿಯಾಗಿದ್ದೆವು. ಅಂದಿನ ಕಾಲೇಜಿನ ದಿನಗಳನ್ನು ಬಹಳಷ್ಟು ಮೆಲುಕು ಹಾಕಿ ಸುಮಾರು 2-3 ಗಂಟೆಗಳ ಕಾಲ ಒಟ್ಟಿಗೆ ಕಳೆದೆವು. ಅದೊಂದು ಅಪರೂಪದ, ಅವಿಸ್ಮರಣಿಯದ  ಕೂಡುವಿಕೆ (Get-together). ಯು.ಬಿ. ಸಿಟಿಯ ಹೋಟೆಲೊಂದರಲ್ಲಿ ಮಧ್ಯಾಹ್ನದ ಊಟವನ್ನು ಜತೆಯಲ್ಲಿ ಮಾಡಿದೆವು. ಜಯರಾಮ ಶೆಟ್ತಿಯು ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋ (San Fransisco) ದಲ್ಲಿ ಮಕ್ಕಳು ಮೊಮ್ಮಕ್ಕಳೊಡನೆ ನೆಲೆಸಿ ನಿವ್ರುತ್ತಿಯಗಿದ್ದಾನೆ. ರಾಮಚಂದ್ರ ಸೋಮಯಜಿಯು ಬೆಂಗಳೂರಿನಲ್ಲಿಯೂ, ಪದ್ಮನಾಭ ಸಹಸ್ರ ಊರು (ಸಾಸ್ತಾನ-ಗುಂಡ್ಮಿ) ನಲ್ಲಿಯೂ, ರಾಮಚಂದ್ರ ಐತಾಳ ಉಡುಪಿಯಲ್ಲಿ ನೆಲೆಸಿ ನಿವೃತ್ತ ಜೀವನವನ್ನು ಕಳೆಯುತಿದ್ದಾರೆ.


ನಿವೃತ್ತರಾಗಿರುವ ಸ್ನೇಹಿತರ ಮಡದಿಯರೊಂದಿಗೆ ಅಂದಿನ ಸಮಾಗಮನವಗಿತ್ತು.
1968 ಮಾರ್ಚ್ ತಿಂಗಳಲ್ಲಿ  ಮೂರನೇ ವರ್ಷದ ಪರೀಕ್ಷೆಯೂ ಮುಗಿದು, ಫಲಿತಾಂಶ ಬಂದೂ ಆಯಿತು. ನಿರೀಕ್ಷೆಗೂ ಮೀರಿದಂತೆ ಪ್ರಥಮ ದರ್ಜೆಯಲ್ಲಿ ಪಾಸಾಗಿ, ಯುನಿವೆರ್ಸಿಟಿ ಯಲ್ಲಿ ಆರನೇ ರ್ಯಾಂಕ್  ಬಂದಿದ್ದು ಎಲ್ಲರಿಗೆ ಖುಷಿ  ಕೊಟ್ಟಿತು.


ಕಾಲೇಜಿನ ಫಲಕದಲ್ಲಿ ರಾರಾಜಿಸುತ್ತಿರುವ ರ್ಯಾಂಕ್ ಲಿಸ್ಟ್.
ಮಾನಸ ಗಂಗೋತ್ರಿ, ಮೈಸೂರು. (1968 - 70)
ಮುಂದಿನ ಅಭ್ಯಾಸಕ್ಕೆ, ಅಣ್ಣ ಪದ್ಮನಾಭ ಅವರ ಸಲಹೆಯಂತೆ ಮೈಸೂರು ಯುನಿವೆರ್ಸಿಟಿ  "ಮಾನಸ ಗಂಗೋತ್ರಿ", ಭೌತ ಶಾಸ್ತ್ರ ವಿಭಾಗದ ಎರಡು ವರ್ಷದ  ಎಮ್.ಎಸ್.ಸಿ. ಪದವಿಗೆ  ಸೇರಿದ್ದಾಯಿತು. ಬೆಂಗಳೂರಿನ  ಪ್ರತಿಷ್ಟಿತ Indian Institute of Science ಗೆ ಮೂರು ವರ್ಷದ  ಬಿ ಟೆಕ್. ಕರೆ ಬಂದಿದ್ದರೂ, ಅದನ್ನು ನಿರಾಕರಿಸಿ ಮೈಸೂರಿನಲ್ಲಿ ಸೇರಿದ್ದಾಯಿತು.


ಭೌತ ಶಾಸ್ತ್ರ ವಿಭಾಗಕ್ಕೆ ಪ್ರೊ.ಎಸ್. ಚಂದ್ರಶೇಕರ್ ಮುಖ್ಯಸ್ತರಾ ಗಿದ್ದರು. ಪ್ರೊ. ನಂಜುಂಡಯ್ಯ ಅವರು Nuclear Physics ವಿಭಾಗಕ್ಕೆ ಮುಖ್ಯಸ್ಥರಾಗಿದ್ದರು. ಅದ್ಭುತವಾಗಿ Mathematical Physics ಲೆಕ್ಚರ್ ಮಾಡುತಿದ್ದ ಪ್ರೊ ಕೆ. ಏನ್ ಶ್ರೀನಿವಾಸ ರಾವ್ ಅವರು ಮರೆಯಲಾರದಂತ ವ್ಯಕ್ತಿಯಾಗಿದ್ದರು.


ಮೈಸೂರು ಪೇಟೆಯ ಸಜ್ಜನ ರಾವ್ ರಸ್ತೆಯ ಒಂದು ಮನೆಯ ಕೋಣೆಯಲ್ಲಿ ವಾಸ, ವೈದ್ಯಕೀಯ ಶಿಕ್ಷಣ ಓದುತ್ತಿರುವ ಪೆಲತ್ತುರು (ಹಿರಿಯಡಕದ ಹತ್ತಿರದ ಊರು) ಅನಂತ ಆಚಾರ್ಯ ಅವರು room mate. ಹೋಟೆಲಿನಲ್ಲಿ ಊಟ. ರಜೆಯಲ್ಲಿ ಊರಿಗೆ ತೆರಳಿ ಅಲ್ಲಿ ದಿನ ಕಳೆಯುವಿಕೆ. ಹೀಗೆ ಎರಡು ವರ್ಷಗಳ ಅಭ್ಯಾಸ ಮುಗಿದು 1970 ಏಪ್ರಿಲ್ ತಿಂಗಳಲ್ಲಿ ಪರೀಕ್ಷೆ ಮುಗಿದು ಜೂನ್ ತಿಂಗಳಲ್ಲಿ ಫಲಿತಾಂಶ ಬಂದಿತು. ಪ್ರಥಮ ದರ್ಜೆಯಲ್ಲಿ ಪಾಸಾಗಿ ಯೂನಿವರ್ಸಿಟಿ ಯಲ್ಲಿ ಮೂರನೇ ರಾಂಕ್ ಬಂದಿದ್ದು ಸಂತಸವಾಯಿತು.



ಮುಂದೇನು? ಕೆಲಸ, ವೃತ್ತಿ, ಅಭ್ಯಾಸ ಮುಂದುವರಿಸುವುದೋ ಎಂಬ ಗೊಂದಲ....ಆಗ Karanataka Regional Engineering College, Surathkal, ಎರಡು ವರ್ಷದ ಎಮ್.ಟೆಕ್ . (M. Tech), ಭೌತ ಶಾಸ್ತ್ರದ ವಿಭಾಗಕ್ಕೆ ಜುಲೈ ತಿಂಗಳಲ್ಲಿ ಒಲ್ಲದ ಮನಸ್ಸಿನಿಂದ ಸೇರಿದ್ದಾಯಿತು. ಅಲ್ಲಿಯ ಹಾಸ್ಟೆಲಿನಲ್ಲಿ ವಾಸ, ವಾರಕ್ಕೊಮ್ಮೆ ಮನೆಗೆ. ಪಾಠಗಳು ಅಷ್ಟೊಂದು ಹಿತಕರವಾಗಿರಲಿಲ್ಲ. ಇದೇ ಸಮಯದಲ್ಲಿ ಕೆಲಸಕ್ಕೆ ಹುಡುಕಾಟ. ಸುಮಾರು ಅಕ್ಟೋಬರ್ ತಿಂಗಳಿನ ಸಮಯದಲ್ಲಿ ಆಗ ಮಣಿಪಾಲ ಎಂಜಿನಿಯರಿಂಗ್ ಕಾಲೇಜಿನಲ್ಲಿ  (now Manipal Institute of Technology) ಉಪನ್ಯಾಸಕ (Lecturer) ಕೆಲಸಕ್ಕೆ ಕರೆ ಬಂದು ಇಂಟರ್ವ್ಯೂಗೆ ತೆರಳಿ, ಭೌತಶಾಸ್ತ್ರ ವಿಭಾಗದ ಲೆಕ್ಚರರ್ ಆಗಿ ಅಕ್ಟೋಬರ್ ತಿಂಗಳಲ್ಲಿ ಕೆಲಸಕ್ಕೆ ಸೇರಿದ್ದೂ ಆಯಿತು.

ಮುಂದುವರಿಯುವುದು..... ಭಾಗ 3- ವೃತ್ತಿ ಜೀವನ, ಬದುಕಿನ ಪಯಣ....