May 25, 2021
ಏಕಾಂತ ಮತ್ತು ಒಂಟಿತನ
LONELINESS (ಒಂಟಿತನ) |
ಏಕಾಂತ ಮತ್ತು ಒಂಟಿತನ ಈ ಎರಡೂ ಶಬ್ದಗಳು ಸಮಾನಾರ್ಥವನ್ನು ಕೊಡುವಂತೆ ಕಂಡರೂ ಭಾವಾರ್ಥಗಳು ಭಿನ್ನವಾಗಿವೆ. ಇವು ಪರಸ್ಪರ ಎಂದೂ ಎದುರುಬದುರಾಗದ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವುಗಳ ಬಗ್ಗೆ ಒಂದು ಸೂಕ್ಷ್ಮ ಅವಲೋಕನ.
SECLUSION (ಏಕಾಂತ) |
ಏಕಾಂತ ನಾವು ಬಯಸಿ ಸೃಷ್ಟಿಸಿಕೊಳ್ಳುವಂತದ್ದು. ಒಂಟಿತನ ನಾವು ಬಯಸದೇ ಸಂದರ್ಭದ ಪರಿಣಾಮವಾಗಿ ಬರುವಂತದ್ದು.
ಆಧ್ಯಾತ್ಮಿಕ ಸೆಳೆತದಿಂದ ಉಂಟಾಗುವುದು ಏಕಾಂತ, ಲೌಕಿಕದಲ್ಲಿನ ದುಃಖ, ನೋವು, ನಿರಾಸೆ, ತಿರಸ್ಕಾರಗಳಿಂದ ಉಂಟಾಗುವುದು ಒಂಟಿತನ.
ಏಕಾಂತ ಅವಶ್ಯಕತೆ, ಒಂಟಿತನ ಅನಿವಾರ್ಯತೆ.
ಏಕಾಂತ ಇಷ್ಟ, ಒಂಟಿತನ ಕಷ್ಟ
ಏಕಾಂತ ಸಹನೀಯ, ಒಂಟಿತನ ಅಸಹನೀಯ
ಜನರ ಜಂಜಾಟದಿಂದ ನಾವೇ ದೂರ ಇರೋದು ಏಕಾಂತ. ಜನರೇ ನಮ್ಮನ್ನು ದೂರವಿಟ್ಟಾಗ ಕಾಡುವುದು ಒಂಟಿತನ.
ಏಕಾಂತದಿಂದ ಮನಸ್ಸು ಏಕಾಗ್ರತೆ ಹೊಂದುವುದು. ಒಂಟಿತನದಿಂದ ಮನಸ್ಸು ವಿಚಲಿತಗೊಳ್ಳುವುದು.
ಏಕಾಂತದಿಂದ ಮನಸ್ಸಿಗೆ ಆತ್ಮವಿಶ್ವಾಸ, ಶಾಂತಿ, ನೆಮ್ಮದಿ, ಸಂತೋಷ. ಒಂಟಿತನದಿಂದ ಅಸಹಾಯಕತೆ, ಹತಾಶೆ, ಸಿಟ್ಟು.
ಏಕಾಂತ ನಮ್ಮ ಜೊತೆಗೆ ನಾವೇ ವಿಹರಿಸುವ ಸಮಯ. ಒಂಟಿತನ ತನಗೆ ಒದಗಿದ ಈ ಸ್ಥಿತಿಗೆ ಕಾರಣರಾದವರ ಬಗ್ಗೆ ಚಿಂತಿಸುವ ಸಮಯ.
ಏಕಾಂತ ಪ್ರಬುದ್ಧತೆಯ ಲಕ್ಷಣ, ಒಂಟಿತನ ತನಗೊದಗಿದ ಪ್ರಾರಬ್ಧ.
ಏಕಾಂತ ಪಾರಮಾರ್ಥಿಕ, ಒಂಟಿತನ ಪ್ರಾಪಂಚಿಕ.
ಏಕಾಂತದಿಂದ ಪ್ರಸನ್ನತೆ, ಒಂಟಿತನದಿಂದ ಖಿನ್ನತೆ.
ಏಕಾಂತದಿಂದ ನಮ್ಮ ಆಂತರ್ಯದಲ್ಲಿ ಅಡಗಿರುವ ದಿವ್ಯಶಕ್ತಿಯ ಅರಿವಿನ ಮೆರಗು, ಒಂಟಿತನದಿಂದ ನಮ್ಮೊಳಗೆ ಬರೀ ಕೊರಗು.
ಏಕಾಂತ ಯಾವುದೇ ರೀತಿಯ ಆಲೋಚನೆಗಳನ್ನು ಬದಿಗಿಟ್ಟು ಶಾಂತ ಸ್ಥಿತಿಯಲ್ಲಿ ಇರುವುದು, ಒಂಟಿತನ ಮನಸ್ಸಿನಲ್ಲಿ ನಾನಾ ವಿಧದ ಆಲೋಚನೆಗಳನ್ನು ಮಾಡುತ್ತಾ ನೆಮ್ಮದಿ ಇಲ್ಲದೆ ಆಶಾಂತಿ ಹೊಂದುವುದು.
ಏಕಾಂತ ತನ್ನ ತಾನರಿತುಕೊಳ್ಳುವಲ್ಲಿ ಪ್ರಭಾವ, ಒಂಟಿತನ ಇನ್ನೊಬ್ಬರ ಉಪಸ್ಥಿತಿಯ ಅಭಾವ.
ಒಬ್ಬ ಜ್ಞಾನಿ ಮಾತ್ರ ಏಕಾಂತವನ್ನು ಆನಂದದಿಂದ ಅನುಭವಿಸಬಲ್ಲ, ಅಜ್ಞಾನಿಗೆ ಒಂಟಿತನವೆಂಬುದು ದುಃಖಕಾರಕ.
ಒಬ್ಬ ಜ್ಞಾನಾಪೇಕ್ಷಿತನಿಗೆ ಏಕಾಂತವೆಂಬುದು ವರ, ಅದೇ ಅಜ್ಞಾನಿಗೆ ಒಂಟಿತನವೆಂಬುದು ಶಾಪ.
ಒಬ್ಬ ಅಧ್ಯಯನಶೀಲನಿಗೆ ಏಕಾಂತವೆಂಬುದು ರಕ್ಷೆ, ಸಾಮಾನ್ಯನಿಗೆ ಅದು ಒಂಟಿತನದ ಶಿಕ್ಷೆ.
ಏಕಾಂತ ವ್ಯಕ್ತಿಯನ್ನು ಆತ್ಮೋನ್ನತಿಯ ಶಿಖರಕ್ಕೆ ಏರಿಸಿದರೆ, ಒಂಟಿತನ ಅವನನ್ನು ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟು ಪ್ರಪಾತಕ್ಕೆ ನೂಕಬಹುದು.
ಏಕಾಂತ ಪರಮಾತ್ಮನೊಡನೆಯ ಆತ್ಮೀಯತೆಯ ಅನುಸಂಧಾನ, ಮತ್ತೊಬ್ಬರೊಂದಿಗೆ ಹೊಂದಿಕೊಳ್ಳಲಾಗದ ಆತ್ಮೀಯತೆಯ ಕೊರತೆಯೇ ಒಂಟಿತನ.
ಏಕಾಂತ ಧರ್ಮ, ಒಂಟಿತನ ಕರ್ಮ.
ಏಕಾಂತದಿಂದ ಭಾವನೆಗಳ ಹತೋಟಿ, ಸ್ಥಿತಪ್ರಜ್ಞತೆ, ನಿರ್ಲಿಪ್ತ ಸ್ಥಿತಿ. ಒಂಟಿತನದಲ್ಲಿ ಭಾವನೆಗಳ ತಾಕಲಾಟ, ಉದ್ವಿಗ್ನ ಸ್ಥಿತಿ.
ಏಕಾಂತ ಸದಾ ಸಂತೃಪ್ತ ಸ್ಥಿತಿ, ಒಂಟಿತನ ಅತೃಪ್ತ ಸ್ಥಿತಿ.
ಏಕಾಂತದಿಂದ ಆತ್ಮಸ್ಥೈರ್ಯ, ಆತ್ಮ ವಿಶ್ವಾಸ, ಒಂಟಿತನದಿಂದ ಕೀಳಿರಿಮೆ, ತನ್ನಲ್ಲಿ ತನಗೆ ಅವಿಶ್ವಾಸ.
ಏಕಾಂತ ಭಗವದ್ ಚಿಂತನ, ಒಂಟಿತನ ಭವದ ಚಿಂತೆ.
ಏಕಾಂತವಾಸಿಗೆ ತಾನಿರುವ ಗುಡಿಸಲೇ ಅರಮನೆ. ಒಂಟಿಗೆ ಅರಮನೆಯೇ ಸೆರೆಮನೆ.
ಏಕಾಂತದಲ್ಲಿ ಪರಮಾತ್ಮನ ಸಾನಿಧ್ಯದ ಹಂಬಲ, ಒಂಟಿತನದಲ್ಲಿ ಸಂಗಾತಿಯ ಸಾಂಗತ್ಯದ ಬಯಕೆ.
ಎಲ್ಲರೊಳಗೆ ನಾವಿದ್ದು ನಮ್ಮೊಳಗೆ ಯಾರು ಇಲ್ಲದಂತಿರುವುದು ಏಕಾಂತ. ನಮ್ಮವರೆನಿಸಿಕೊಂಡವರು ದೈಹಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ ಮಾನಸಿಕವಾಗಿ ನೆನಪುಗಳಾಗಿ ಕಾಡುವುದೇ ಒಂಟಿತನ.
ಏಕಾಂತ ಆನಂದಮಯ, ಒಂಟಿತನ ವೇದನಾಮಯ.
ಏಕಾಂತದಿಂದ ಜ್ಞಾನ ಪ್ರಾಪ್ತಿ. ಒಂಟಿತನಕ್ಕೆ ಕಾರಣವೇ ಅಜ್ಞಾನ.
ಏಕಾಂತದಿಂದ ಮನಸ್ಸು ಪ್ರಶಾಂತ, ಒಂಟಿತನದಲ್ಲಿ ಅಶಾಂತ.
ಏಕಾಂತದಲ್ಲಿ ಚಿಂತನೆ, ಒಂಟಿತನದಲ್ಲಿ ಚಿಂತೆ.
ಏಕಾಂತ ನಿರ್ಭಯವುಳ್ಳದ್ದು, ಒಂಟಿತನದಿಂದ ಭಯ.
ಏಕಾಂತ ಸಕಾರಾತ್ಮಕ, ಒಂಟಿತನ ನಕಾರಾತ್ಮಕ.
Whatsapp Forwarded.
No comments:
Post a Comment