ಭಾನುವಾರ, 30 ಜನವರಿ 2022 ,
ಬಾಳೆ ಹಣ್ಣು
ನಮ್ಮಲ್ಲಿ ಕಲಿತು ಈಗ ಜರ್ಮನಿಯಲ್ಲಿ ಕೆಲಸ ಮಾಡುತ್ತಿರುವ ಬಾಲಚಂದ್ರ ಇವತ್ತು ಬಂದಿದ್ದ. ನಿಟ್ಟೂರಿನ ಕಡು ಮೂಲೆಯ ಹಳ್ಳಿಯೊಂದರ ಬಾಲು ಜ್ವಲಂತವಾದ ಸೃಜನಶೀಲತೆ ಇದ್ದ ಅಪರೂಪದ ವಿದ್ಯಾರ್ಥಿಯಾಗಿದ್ದ. ಅವನೊಡನೆ ಗಂಟೆಗಟ್ಟಲೆ ಮಾತನಾಡಿ ಅವನನ್ನು ಬಿಡಲು ಈಚಲುಕೊಪ್ಪದ ಅವನ ಚಿಕ್ಕಮ್ಮನ ಮನೆಗೆ ಹೋದಾಗ ಅವರು ರಾಶಿಗಟ್ಟಲೆ ಪಚ್ಚಬಾಳೆಹಣ್ಣು ಕೊಟ್ಟರು. ಅವರ ಮಕ್ಕಳಿಬ್ಬರೂ ನಮ್ಮ ಹಳೆಯ ಸ್ಟೂಡೆಂಟ್ಸ್ ಆಗಿದ್ದ ಕಾರಣ ಅವರೊಡನೆ ಹಳೆಯ ಒಡನಾಟವಿತ್ತು.
ಪಚ್ಚಬಾಳೆಹಣ್ಣು ನನ್ನನ್ನು ಮಗದೊಮ್ಮೆ ನನ್ನ ಬಾಲ್ಯ ಕಾಲಕ್ಕೆ ಕೊಂಡೊಯ್ಯಿತು. ನಮಗಾಗ ಗೊತ್ತಿದ್ದದ್ದು ಎರಡು ವಿಧದ ಬಾಳೆಹಣ್ಣು - ಮೈಸೂರು ಬಾಳೆ ಹಾಗೂ ಪಚ್ಚಬಾಳೆ. ನಮ್ಮ ಅಪ್ಪ ಅದಕ್ಕೆ ಕ್ಯಾವಂಡಿಶ್ ಬಾಳೆಹಣ್ಣು ಅಂತ ಹೇಳುತ್ತಿದ್ದರು. ಅವರಿಗೆ ಮಲಬದ್ಧತೆ ಇದ್ದ ಕಾರಣ ಬಾಳೆಹಣ್ಣು ನಮ್ಮಲ್ಲಿ ಸದಾ ಇರುತ್ತಿತ್ತು.
ಮೈಸೂರು ಬಾಳೆಹಣ್ಣು ಹುಳಿಯಾಗಿರುತ್ತಿದ್ದ ಕಾರಣ ನಮಗದು ಅಷ್ಟು ಇಷ್ಟ ಇರಲಿಲ್ಲ. ಆದರೆ ಮೈಸೂರು ಬಾಳೆಹಣ್ಣಿನಿಂದ ಅಮ್ಮ ಮಾಡುತ್ತಿದ್ದ ಬಾಳೆಹಣ್ಣು ದೋಸೆ ಬಲು ರುಚಿ. ದೋಸೆ ಹಿಟ್ಟಿನ ಉಪ್ಪು ಮತ್ತು ಖಾರದೊಂದಿಗೆ ಮೈಸೂರು ಬಾಳೆಹಣ್ಣಿನ ಹುಳಿ-ಸಿಹಿ ರುಚಿ ಸೇರಿದಾಗ ಅದಕ್ಕೊಂದು ವಿಚಿತ್ರ ರುಚಿ ಸಿಗುತ್ತಿತ್ತು. ಅದನ್ನು ತಿಂದವರೇ ಬಲ್ಲರು
ಸಿಪ್ಪೆಯ ಮೇಲೆ ಚುಕ್ಕಿ ಬಂದಿರುವ ಪಚ್ಚಬಾಳೆಹಣ್ಣು ತಿನ್ನಲು ಬಲು ರುಚಿ. ಕೆಲವೊಮ್ಮೆ ಅಪ್ಪನಿಗೆ ತಿನ್ನಲು ಒಂದು ಹಣ್ಣೂ ಉಳಿಸದೆ ನಾವೇ ಎಲ್ಲವನ್ನೂ ಗುಳುಂಮಾಯಸ್ವಾಹಾ ಮಾಡಿದ ದಿನಗಳೂ ಇದ್ದವು.
ಆಗ ಘಟ್ಟದ ಮೇಲಿನ ಊರುಗಳಲ್ಲಿ ಸಿಗುತ್ತಿದ್ದ ಪಚ್ಚಬಾಳೆಹಣ್ಣಿಗೆ ಇದ್ದ ರುಚಿ ನಮ್ಮೂರಿನ ಪಚ್ಚಬಾಳೆಹಣ್ಣಿಗೆ ಇರುತ್ತಿರಲಿಲ್ಲ. ಹೀಗಾಗಿ ಶಿವಮೊಗ್ಗದ ದೊಡ್ಡಪ್ಪನ ಮನೆಗೆ ಹೋದಾಗ ಸರಿಯಾಗಿ ಪಚ್ಚ ಬಾಳೆಹಣ್ಣು ಹೊಡೆಯುತ್ತಿದ್ದೆವು.
ಮೈಸೂರಿನ ಚಿಕ್ಕಮ್ಮನ ಮನೆಗೆ ಹೋದಾಗ ತಿಂದ ನಂಜನಗೂಡಿನ ರಸಬಾಳೆಯ ರುಚಿ ಇನ್ನೂ ನೆನಪಿದೆ. ಹಿಟ್ಟಿಟ್ಟಾಗಿ ಇರುವ ಆ ಬಾಳೆಹಣ್ಣಿನ ರುಚಿ ಇನ್ನೂ ನನ್ನ ನಾಲಗೆಯ ಮೇಲಿದೆ. ಸಾಗರದಲ್ಲಿ ನಾನು ರೆಗ್ಯುಲರ್ ಆಗಿ ಬಾಳೆಹಣ್ಣು ಖರೀದಿಸುವ ಬಾಳೆಹಣ್ಣಿನ ಮಂಡಿಯವರು ನಾನು ಖರೀದಿಸಲು ಹೋದಾಗ ರಸಬಾಳೆ ಇದ್ದಾಗ ತಪ್ಪದೇ ತಿಳಿಸುತ್ತಾರೆ.
ಈಗಂತೂ ಪುಟ್ಟ ಬಾಳೆಹಣ್ಣು, ಏಲಕ್ಕಿ ಬಾಳೆಹಣ್ಣು, ನೇಂದ್ರ ಬಾಳೆಹಣ್ಣು, ಕರಿ ಬಾಳೆಹಣ್ಣು…. ಇನ್ನೂ ಏನೇನೋ ಬಾಳೆಹಣ್ಣುಗಳು ದೊರೆಯುತ್ತವೆ. ಬಾಳೆಹಣ್ಣು ದೋಸೆ ಮಾಡುವ ಸಂದರ್ಭದಲ್ಲಿ ನಾನು ಖರೀದಿಸುವುದು ಪಚ್ಚಬಾಳೆಹಣ್ಣನ್ನು. ಉಳಿದಂತೆ ನಾನು ಖರೀದಿಸುವುದು ಪುಟ್ಟ ಬಾಳೆಹಣ್ಣನ್ನು. ಪಚ್ಚಬಾಳೆಹಣ್ಣು ಬಲು ಬೇಗ ಹಣ್ಣಾಗಿ ಹಾಳಾಗುವುದರಿಂದ ಬೇಗನೇ ಹಾಳಾಗದ ಪುಟ್ಟ ಬಾಳೆಗೆ ಆದ್ಯತೆ ಅಷ್ಟೇ
ಬಾಳೆಹಣ್ಣು ತುಂಬಾ ಹಣ್ಣಾಗಿ ಮೆತ್ತಗಾದರೆ ಎಸೆಯಬೇಡಿ. ಅದರಿಂದ ಮಾಡಿದ ಹಲ್ವ ಬಲು ರುಚಿ!
No comments:
Post a Comment