ಜನವರಿ 17, 2022
ಶೋಭಾಳ ಬರಹಗಳು (ನೆನಪುಗಳು)
ನಾನು ಪಿಯುಸಿ ಯ ಎರಡು ವರ್ಷಗಳನ್ನು ಅಜ್ಜಯ್ಯನ ಮನೆಯಲ್ಲಿದ್ದು ಕಲಿತದ್ದು. ಆಗ ಆ ಮನೆಯಲ್ಲಿ ಇದ್ದದ್ದು ಅಜ್ಜಯ್ಯ, ನಾಗವೇಣಿಯತ್ತೆ, ಅವರ ಇಬ್ಬರು ಮಕ್ಕಳಾದ ನಾಗರಾಜ, ನಟರಾಜ, ಕಾಶತ್ತೆ, ನನ್ನಣ್ಣ ಶ್ರೀಕಾಂತ ಹಾಗೂ ನಾನು. ನನ್ನ ಅಜ್ಜಯ್ಯ ಹಳೆಯ ಕಾಲದವರಾದ ಕಾರಣ ಮನೆಯಲ್ಲಿ ಸೀಮಿತ ರೀತಿಯ ಅಡುಗೆ - ಬೆಳಗಿನ ತಿಂಡಿಗೆ ಇಡ್ಲಿ, ದೋಸೆ, ಅವಲಕ್ಕಿ… ಹೀಗೆ ಕೆಲವು ಆಯ್ದ ತಿಂಡಿಗಳು, ಮಧ್ಯಾಹ್ನಕ್ಕೆ ಕೊಚ್ಚಕ್ಕಿ ಅನ್ನ, ಸಾಂಬಾರು ಅಥವಾ ಸಾರು, ತಂಬುಳಿ, ಗೊಜ್ಜು, ಪಲ್ಯ ಇವುಗಳಲ್ಲಿ ಯಾವುದಾದರೊಂದು ಮತ್ತು ನೀರು ಮಜ್ಜಿಗೆ. ಬೆಳಗಿನ ತಿಂಡಿ ಉಳಿದರೆ ಅದೇ ಸಂಜೆಯ ತಿಂಡಿ. ಇಲ್ಲದಿದ್ದರೆ ಬೇರೇನು ತಿಂಡಿ ಮಾಡುತ್ತಿರಲಿಲ್ಲ. ರಾತ್ರಿಗೆ ಮಧ್ಯಾಹ್ನ ಮಾಡಿದ ಉಳಿದ ಅಡುಗೆ. ಶ್ರಾದ್ಧ ಹಾಗೂ ಹಬ್ಬದ ದಿನಗಳಲ್ಲಿ ಪಾಯಸ, ವಡೆ ಇಂತಹ ವಿಶೇಷ ತಿನಿಸುಗಳು ಲಭ್ಯ
ರಾತ್ರಿ ಉಂಡು ಉಳಿದ ಕೊಚ್ಚಕ್ಕಿ ಅನ್ನವನ್ನು ನೀರಿಗೆ ಹಾಕಿಡುತ್ತಿದ್ದರು. ಅದನ್ನು ಹೆಚ್ಚಾಗಿ ಕಾಶತ್ತೆ ಉಣ್ಣುತ್ತಿದ್ದರು. ಇಲ್ಲವೇ ನಾವು ಅದನ್ನು ನೀರಿನಿಂದ ಹಿಂಡಿ ತೆಗೆದು ಮಜ್ಜಿಗೆಯಲ್ಲಿ ಕಲೆಸಿ, ಒಂದು ತುಂಡು ಉಪ್ಪಿನಕಾಯಿ ಅದರ ಮೇಲಿರಿಸಿ ಶಾಲೆಗೆ ಮಧ್ಯಾಹ್ನದ ಬುತ್ತಿ ಮಾಡಿಕೊಂಡು ಒಯ್ಯುತ್ತಿದ್ದೆವು.
ಈ ನೀರಿನಲ್ಲಿ ಹಾಕಿಟ್ಟ ಕೊಚ್ಚಕ್ಕಿ ಅನ್ನಕ್ಕೆ ಅಡಗಾಯಿ ಉಪ್ಪಿನಕಾಯಿ ಸೇರಿಸಿ ಮೇಲೊಂದಿಷ್ಟು ಕೊಬ್ಬರಿ ಎಣ್ಣೆ ಹಾಕಿಕೊಂಡು ತಿಂದರೆ ಮಹದಾನಂದ. ಬೇರೆ ಉಪ್ಪಿನಕಾಯಿ ಅಷ್ಟಾಗಿ ಈ ಅನ್ನಕ್ಕೆ ಸೆಟ್ ಆಗುತ್ತಿರಲಿಲ್ಲ. ಏಕೆಂದರೆ ಅಡಗಾಯಿ ಉಪ್ಪಿನಕಾಯಿಗೆ ಅದರದ್ದೇ ಆದ ವಿಶಿಷ್ಟ ಸ್ವಾದವಿದೆ. ಗೊರಟಾದ ಹುಳಿ ಮಾವಿನಕಾಯಿಯನ್ನು ತೆಳ್ಳಗೆ ಕತ್ತರಿಸಿ ಕುದಿಯುತ್ತಿರುವ ಉಪ್ಪು ನೀರಿನಲ್ಲಿ ಒಂದರೆಘಳಿಗೆ ಕುದಿಸಬೇಕು. ಮಸಾಲೆಗೆ ಅಗತ್ಯ ಇರುವಷ್ಟು ಮೆಂತೆ ಹಾಗೂ ಒಣ ಮೆಣಸನ್ನು ಹುರಿದು ಪುಡಿ ಮಾಡಿಕೊಂಡು ತಣಿದ ಉಪ್ಪು ನೀರಿಗೆ ಹಾಕಿ ಬೆರೆಸಬೇಕು. ಅದರ ಮೇಲೊಂದಿಷ್ಟು ಇಂಗನ್ನು ಹಾಕಬೇಕು. ಈ ಉಪ್ಪಿನಕಾಯಿಯನ್ನು ಬಹಳ ದಿನಗಳ ಕಾಲ ಇಡಲು ಬರುವುದಿಲ್ಲ. ಆದಷ್ಟು ಬೇಗನೆ ಖಾಲಿ ಮಾಡಬೇಕು. ಮೆಂತೆಯ ಘಮವಿರುವ ಅಡಗಾಯಿ ಉಪ್ಪಿನಕಾಯಿಯನ್ನು ಕೊಚ್ಚಕ್ಕಿಯ ತಂಗುಳಿಗೆ ಕಲೆಸಿ ತಿಂದರೆ ಸ್ವರ್ಗ ಸುಖ ಸಿಗುತ್ತಿತ್ತು.
ಆ ದಿನಗಳೇ ಹಾಗೆ. ಇದ್ದದ್ದರಲ್ಲೇ ಏನಾದರೂ ದೊಂಬರಾಟ ಮಾಡಿ ಹೊಸ ರುಚಿ ಭರಿಸಿಕೊಂಡು ತಿನ್ನುತ್ತಿದ್ದೆವು. ಈಗಿನಂತೆ ಚಿತ್ರ ವಿಚಿತ್ರ ತಿಂಡಿಗಳು ಗೊತ್ತೇ ಇರಲಿಲ್ಲ. ಹೀಗಾಗಿ ನನ್ನ ಜಮಾನದವರು ಹೋಟೆಲಿಗೆ ಹೋದರೆ ತಿನ್ನುವುದು ಅದೇ ಮಸಾಲೆ ದೋಸೆಯನ್ನು! ನನ್ನ ಮಗಳು ನನಗೆ ತಮಾಷೆ ಮಾಡುತ್ತಾಳೆ, " ಅಮ್ಮ, ಮನೆಯಲ್ಲಿ ಯಾವಾಗಲೂ ಮಾಡುವ ಬೆಳಗಿನ ತಿಂಡಿ ದೋಸೆ. ಹೋಟೆಲ್ಲಿಗೆ ಬಂದು ನೀನು ಆರ್ಡರ್ ಕೊಡುವುದು ದೋಸೆಗೇ. ಬೇರೇನಾದರೂ ತಿನ್ನಬಹುದಲ್ಲಾ?" ಆದರೆ ಅಭ್ಯಾಸ ಬಲದಿಂದ ಪುನಃ ಪುನಃ ನಾನು ಆರ್ಡರ್ ಕೊಡುವುದು ಅದೇ ಮಸಾಲೆ ದೋಸೆಗೆ ಈಗಿನ ಪಿಜ್ಜಾ, ಬರ್ಗರ್ ತಿಂದರೆ ಸಿಗುವ ಅನುಭವಕ್ಕೂ ಮಸಾಲೆದೋಸೆ, ಉಪ್ಪಿನಕಾಯಿ ಅನ್ನ ತಿನ್ನುವ ಅನುಭವಕ್ಕೂ ಅಜಗಜಾಂತರ ವ್ಯತ್ಯಾಸ. ಉಪ್ಪಿನಕಾಯಿ ಅನ್ನ ಮನೆಯೊಳಗಿನ ಎಲ್ಲರಿಗೂ ದೊರಕುವ ಸಿದ್ಧ ವಸ್ತು. ನನ್ನ ಜಮಾನದವರಿಗೆ ಸಿಗುವ ಉಪ್ಪಿನಕಾಯಿ ಅನ್ನದೊಟ್ಟಿಗಿನ ಅಪ್ಯಾಯಭಾವವನ್ನು ಆರ್ಡರ್ ಕೊಟ್ಟು ಎಲ್ಲಿಂದಲೋ ತರಿಸುವ ಪಿಜ್ಜಾ, ಬರ್ಗರ್ ಕೊಡಲು ಸಾಧ್ಯವೇ?
ಪ್ರತಿಕ್ರಿಯೆಗಳು:
ನಳಿನಿ ಸೋಮಯಾಜಿ
ಖಂಡಿತಾ ಒಪ್ಪುವೆ ಶೋಭ. ಉಪ್ಪಿನ ಕಾಯಿ ಕೊಬ್ಬರಿ ಎಣ್ಣೆ ಅತಿ ಶ್ರೇಷ್ಠ.ನಾವೂ ಮಸಾಲೆ ದೋಸೆಗೆ ಜೈ..
ಅನ್ನಪೂರ್ಣ ದೊಂಗ್ರೆ ಬಾಪಟ್
ಖಂಡಿತ ಹೌದು.... ಕುಚುಲಕ್ಕಿ ಗಂಜಿ, ಅದರಮೆಲೊಂದು ಚಮಚ ಕೊಬ್ಬರಿ ಎಣ್ಣೆ, ಅದರ ಜೊತೆಗೆ ಮಾವಿನ ಮಿಡಿ ಉಪ್ಪಿನಕಾಯಿ, ಕಲೆಸಿ ತಿಂದರೆ ಆಹಾ....
ಶುಭ ಶೇಷು:
Even my daughters complain the same thing when we visit the hotel
ಜಯರಾಮ ಸೋಮಯಾಜಿ :
ಅಜ್ಜಯ್ಯನ ಮನೆ, ಬಿರ್ತಿ ಸಾಲಿಕೇರಿಯ ಕಳೆದ ದಿನಗಳು, ನೆನಪುಗಳು....
ಪುಷ್ಕರಿಣಿ ಗುರ್ಜರ್:
ನಾವು ಪ್ರತಿದಿನ ರಾತ್ರಿ ಕುಚ್ಚಿಲಕ್ಕಿ ಗಂಜಿ ಊಟ ಮಾಡ್ತೀವಿ.ನಾವು ಬಿಸಿ ಗಂಜಿಯನ್ನು ಉಪ್ಪಿನಕಾಯಿ ಹಾಗೂ ತುಪ್ಪ,ಉಪ್ಪಿನ ಜೊತೆ ಸವಿಯುತ್ತೇವೆ.ಮಾವಿನ ಕಾಯಿ ಚಟ್ನಿ,ಕೊಬ್ಬರಿಎಣ್ಣೆಯಲ್ಲಿ ಕರಿದ ಸಂಡಿಗೆ, ಬಾಳಕದ ಮೆಣಸು ಅಥವಾ ಉಪ್ಪುನೀರಿನಲ್ಲಿ ಹಾಕಿಟ್ಟ ಮಾವಿನಕಾಯಿಯಿಂದ ತಯಾರಿಸಿದ ಮಜ್ಜಿಗೆ ಗೊಜ್ಜಿನ ಜೊತೆ ಗಂಜಿ ಉಂಡರೆ ....ಸ್ವರ್ಗಕ್ಕೆ ಮೂರೇ ಗೇಣು.
ಸುಜಯ ನಾಯಕ್
ಆಹ್ ಬಾಯಲ್ಲಿ ನೀರು ಬಂತು
ಜಯಲಕ್ಷ್ಮಿ ಭಟ್:
ನೀನು ಬರೆದದ್ದನ್ನು ಓದಿ ನನಗೂ ನೆನಪಾಯಿತು ಶೋಭಾ ಎಸ್ಟು ಹಳೆಯ ಕತೆ ಅಲ್ವಾ?
No comments:
Post a Comment