ಭಾನುವಾರ, ಜನವರಿ 19, 2025
ವಿನಾಯಕ ದೇವಸ್ಥಾನ, ಅರ್. ಟಿ. ನಗರ, ಬೆಂಗಳೂರು.
ಶಿವರಾಮ ಕಾರಂತ ವೇದಿಕೆಯ 32 ನೇ ವಾರ್ಶಿಕೊತ್ಸವವು ಶ್ರೀ ಜಯಂತ ಕಾಯ್ಕಿಣಿ ಅವರ ಸಾಹಿತ್ಯದ ಕುರಿತು ಮಾತುಕತೆಯೊಂದಿಗೆ ಸಂಪನ್ನ ಗೊಂಡಿತು.
ಮುಖ್ಯ ಅತಿಥಿಗಳಾಗಿ ಶ್ರೀ ಜಯಂತ್ ಕಾಯ್ಕಿಣಿ, ಮತ್ತು ಮಾತುಕತೆಯಲ್ಲಿ ಶ್ರೀ ಸಚ್ಚಿದಾನಂದ ಹೆಗಡೆ, ಕತೆಗಾರ, ಅಂಕಣಕಾರ, ಮತ್ತು ಸಿಂಧು ರಾವ್ ಟಿ, ಲೇಖಕಿ , ಅವರು ಹಾಜರಿದ್ದು ಕಾರ್ಯಕ್ರಮವನ್ನು ಚಂದಗಾಣಿಸಿದರು.
ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರ ಮನವಿ:
ನಮಸ್ತೆ, ಈ ತಿಂಗಳ 19 ರಂದು ನಮ್ಮ ವೇದಿಕೆ 32 ನೇ ವಾರ್ಷಿಕೋತ್ಸವ ಆಚರಿಸುತ್ತಿದೆ. ಇದರ ಅಂಗವಾಗಿ ಕಾರಂತರನ್ನು ಅಪಾರವಾಗಿ ಮೆಚ್ಚಿ ಓದಿ ತನ್ನದೇ ಆದ ಅಪರೂಪದ ಕಥಾಶೈಲಿಯನ್ನು ಕನ್ನಡ ಓದುಗರಿಗೆ ಪರಿಚಯಿಸಿದ ಕನ್ನಡದ ಅನನ್ಯ ಕತೆಗಾರ ಜಯಂತ ಕಾಯ್ಕಿಣಿ ಅವರ ಸಾಹಿತ್ಯದ ಮಾತುಕತೆ ನಡೆಯಲಿದೆ. ಸಂವಾದವೂ ನಡೆಯಲಿದೆ. ನಂತರ ಮಕ್ಕಳ ತಂಡದ ಯಕ್ಷಗಾನ. ನೀವಿದ್ದರೆ ಅದರ ಸೊಗಸು ಇನ್ನೂ ಹೆಚ್ಚು. ಬನ್ನಿ ನಮ್ಮೊಂದಿಗೆ ಇರಿ. ಒಂದಷ್ಟು ಕತೆಯ ಕತೆ ಕೇಳೊಣ.
ಕಾರ್ಯದರ್ಶಿಯವರ ವರದಿ:
ಎಲ್ಲರಿಗೂ ನಮಸ್ಕಾರ.
ಶಿವರಾಮ ಕಾರಂತ ವೇದಿಕೆಯ 32 ನೇಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯದ ಕುರಿತು ಮಾತು -ಕತೆ ಕಾರ್ಯಕ್ರಮ, ಒಂದು ವರದಿ
ಮೊದಲಿಗೆ ಅತ್ಯಂತ ಮಧುರವಾದ ಪ್ರಾರ್ಥನೆಯನ್ನು ಸೊಗಸಾಗಿ ಹಾಡಿದರು. ಹಾಗೆ ಕುಮಾರಿ ಪ್ರಣತಿಯವರಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು.
ನಂತರ ಎಲ್ಲರನ್ನೂ ಸ್ವಾಗತಿಸಿದ ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರಾದ ಡಾ. ದೀಪಾ ಫಡ್ಕೆ ಅವರು ತಮ್ಮ ಪ್ರಾಸ್ತಾವಕ ನುಡಿಯಲ್ಲಿ ಮಾತಾಡುತ್ತಾ ಕಾಯ್ಕಿಣಿ ಅವರ ಸಾಹಿತ್ಯದ ವಿಶೇಷತೆಯನ್ನು ಅತ್ಯಂತ ಕಡಿಮೆ ಮಾತಿನಲ್ಲಿ ಸಮರ್ಪಕವಾಗಿ ಹೇಳಿ, ಎಲ್ಲರನ್ನೂ ಸ್ವಾಗತಿಸಿದರು. ಶಿಖರ ಪ್ರತಿಭೆ ಮತ್ತು ಸಾಗರ ಪ್ರತಿಭೆ ಹೀಗೆ ಕಾಯ್ಕಿಣಿಯವರ ಪ್ರತಿಭೆಯ ಬಗ್ಗೆ ಹೇಳುತ್ತಾ ಎಲ್ಲರ ಗಮನವನ್ನ ಸೆಳೆದರು.
ಆನಂತರ ಕಾರ್ಯಕ್ರಮದ ಮಾತುಕತೆಯಲ್ಲಿ ಮೊದಲು ಜಯಂತ ಕಾಯ್ಕಿಣಿ ಅವರ ಗದ್ಯ ಸಾಹಿತ್ಯದ ಬಗ್ಗೆ ಮಾತಾಡಿದ ಕತೆಗಾರ ಶ್ರೀ ಸಚ್ಚಿದಾನಂದ ಹೆಗಡೆ ಅವರು ಕಾಯ್ಕಿಣಿ ಅವರ ಪ್ರಬಂಧಗಳು, ನುಡಿ ನೋಟಗಳ ಒಳಗೆ ಹುದುಗಿದ್ದ ಅಂತಃಕರಣ, ಸೃಷ್ಟಿಶೀಲತೆಯ ಸೊಗಸನ್ನು ಕುರಿತು ತುಂಬಾ ಸುಂದರ ಒಳನೋಟಗಳನ್ನು ನೀಡಿದರು. ಕಾಯ್ಕಿಣಿಯವರ ಬರಹದ ಆಂತರ್ಯದ ಸೌಂದರ್ಯವನ್ನು ತಮ್ಮ ಮಾತುಗಳಲ್ಲಿ ಒಂದೊಂದಾಗಿ ವಿವರಿಸುತ್ತಾ ಹೋದರು. ಪ್ರತಿ ಮಾತುಗಳು ಕೂಡ ಮಳೆಯ ಹನಿ ಹನಿಗಳೂ ನದಿಯಾಗಿ ಹರಿಯವಂತೆ ಭಾಸವಾಗುತ್ತಿತ್ತು. ಕಾಯ್ಕಿಣಿಯವರ ಬರಹವನ್ನ ಪುಸ್ತಕಗಳೇ ಮಾತನಾಡುವವೋ ಎನ್ನುವಂತೆ ತೋರಿ ಬಂದವು. ಮತ್ತು ಯಾವುದೇ ಒಂದು ಏರಿಳಿತಗಳಿಲ್ಲದೇ ಒಂದೇ ಸಮನೆ ನಿರರ್ಗಳ ಮಾತುಗಳನ್ನು ತಂಗಾಳಿ ಬೀಸುವಷ್ಟೇ ಸರಾಗವಾಗಿ ಕಾಯ್ಕಿಣಿಯವರ ಗದ್ಯ ಸಾಹಿತ್ಯವನ್ನು ಕುರಿತು ಹೇಳಿದರು.ಕಳೆದ ೪೦ -೫೦ ವರ್ಷಗಳಲ್ಲಿ "ಭಾರತ ಕಂಡ ಸೃಜನಶೀಲ ಲೇಖಕ ಜಯಂತ ಕಾಯ್ಕಿಣಿಯವರ ಬರಹವು ” ನಮ್ಮ ಸಣ್ಣತನ ನೋಡಿ ನಾವೇ ನಗುವಂತೆ ಮಾಡುವಂತವು. ಇಂತ ಒಂದು ಕಲೆಗಾರಿಕೆ ಅವರ ಕಥೆಗಳಲ್ಲಿವೆ. ಎಂದು ಕಥೆಗಾರ ಸಚ್ಚಿದಾನಂದ ಹೆಗಡೆ ಮಾತನಾಡಿದರು .
ಎರಡನೇಯದಾಗಿ, ಕನ್ನಡದಲ್ಲಿ ಈ ಹೊತ್ತಿನ ಹಿರಿಯ ಕತೆಗಾರರಲ್ಲಿ ಮಹತ್ವದ ಕತೆಗಾರರು ಜಯಂತ ಕಾಯ್ಕಿಣಿ ಅವರು. ಅವರ ಕತೆಗಳ ಓದೇ ಒಂದು ಅದ್ಭುತ ಲೋಕ ಅದನ್ನು ಬಹಳ ಸೊಗಸಾಗಿ ವಿವರಿಸಿದ ಲೇಖಕಿ ಸಿಂಧು ರಾವ್ ಟಿ .ಅವರು ಮಾತನಾಡಿದರು. ಕಾಯ್ಕಿಣಿಯವರ ಹಲವಾರು ಪುಸ್ತಕಗಳ ಬಗ್ಗೆ ಹೇಳುತ್ತಾ ಅನಾರ್ಕಲಿಯ ಸೇಫ್ಟಿಪಿನ್ ಬಗ್ಗೆ ಚಂದದ ನುಡಿಗಳನ್ನ ಹೇಳಿದರು. ಈ ಪುಸ್ತಕವು ನಮ್ಮೊಳಗೆ ಇರುವ ಒಳ್ಳೆಯತನವನ್ನು ಪ್ರೇರೇಪಿಸುತ್ತದೆ. ಸಣ್ಣ ಸಣ್ಣ ಚಂದದ ಉಪಮೆಗಳ ಮೂಲಕ ತೆರೆದುಕೊಳ್ಳುವ ಜಯಂತ ಕಾಯ್ಕಿಣಿಯವರ ಬರಹಗಳು ಪ್ರತಿಯೊಬ್ಬ ಓದುಗನ ಹೃದಯವನ್ನು ಹುಡುಕಿ ಕೊಳ್ಳುವಂತೆ ಮಾಡುತ್ತದೆ , ನಾವು ಕಂಡ ಅತ್ಯಂತ ಅದ್ಭುತ ಬರಹಗಾರಲ್ಲಿ ಕಾಯ್ಕಿಣಿಯವರೇ ಮುಂಚೂಣಿಯ ಲೇಖಕರು,ಕವಿ,ಸಾಹಿತಿಗಳು, ಮಧುರವಾದ ಹಾಡುಗಳ ರಚನೆಕಾರ. ಎಂದು ಹೇಳಿದರು.
ಜಯಂತ್ ಕಾಯ್ಕಿಣಿ ಅವರ ಸಾಹಿತ್ಯದ ಕುರಿತು ಮಾತು -ಕತೆ ಕಾರ್ಯಕ್ರಮ,ಒಂದು ಅತ್ಯಂತ ಸುಮಧುರ ಸಂಜೆಯನ್ನು ನಮ್ಮ ನೆನಪಿನ ಮೊಗಸಾಲೆಯನ್ನು ಅಲಂಕೃತವಾಗುವಂತೆ ಮಾಡಿತು. ಅದಕ್ಕಾಗಿ ನಾವು ಜಯಂತ್ ಕಾಯ್ಕಿಣಿ ಅವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇವೆ. ಮೊದಲಿನಿಂದ ಹಿಡಿದು ಕಾರ್ಯಕ್ರಮದ ಅಷ್ಟು ಹೊತ್ತು ನಮ್ಮೊಂದಿಗೆ ಇದ್ದು ಎಲ್ಲರ ಮಾತುಗಳನ್ನು ಸಮಾಧಾನದಿಂದ ಕೇಳಿ ಸಂವಾದದಲ್ಲಿ ಭಾಗಿಯಾದ ಕಾರ್ಯಕ್ರಮ ದ ಕೇಂದ್ರ ಬಿಂದು ಕವಿ, ಕತೆಗಾರ ಜಯಂತ ಕಾಯ್ಕಿಣಿ ಅವರಿಗೆ ಅತ್ಯಂತ ಧನ್ಯತೆಯಿಂದ ಧನ್ಯವಾದಗಳನ್ನು ಅರ್ಪಿಸಿದೆವು. ಈ ಕಾರ್ಯಕ್ರಮಕ್ಕೆ ನಮ್ಮ ವೇದಿಕೆಯ ಗೌರವಧ್ಯಕ್ಷರಾದ ಶ್ರೀ ವಿಜಯ ಶಂಕರ ಅವರು ಕೂಡ ಉಪಸ್ಥಿತರಿದ್ದರು.
ಇದಾದ ಬಳಿಕ ಕಾರ್ಯಕ್ರಮಕ್ಕೆ ಬಂದಿದ್ದ ಹಲವಾರು ಜನ ತಮ್ಮ ತಮ್ಮ ಸಂವಾದವನ್ನ ಪ್ರಶ್ನೆಗಳ ರೂಪದಲ್ಲಿ ಕಾಯ್ಕಿಣಿಯವರಿಗೆ ಕೇಳಿದರು.ಎಲ್ಲರಿಗೂ ಸಮಾಧಾನದಿಂದ ಕಾಯ್ಕಿಣಿಯವರು ಅತ್ಯಂತ ಸರಳವಾಗಿ ಉತ್ತರಿಸಿದರು. ಹೊಸ ಲೇಖಕರು ತಾವು ಬರೆದ ಕೃತಿಗಳ ಬಗ್ಗೆ ಹೇಳುವುದಕ್ಕಿಂತ ,ಅವರಿಗೆ ಸಿಕ್ಕ ಪ್ರಶಸ್ತಿಗಳ ಬಗ್ಗೆಯೇ ಹೇಳುತ್ತಾರೆ. ಎಂದು ವಿಷಾದಿಸುತ್ತಲೇ ತಮ್ಮ ಮಾತುಗಳನ್ನು ಮುಂದುವರಿಸಿದರು. ಈಗ ಪ್ರಶಸ್ತಿಗಳೇ ಚಿಲ್ಲರೆಯಾಗಿವೆ. ಓದುವರಿಗಿಂತ ಹೆಚ್ಚು ಲೇಖಕರಿದ್ದಾರೆ. ಲೇಖಕರಿಗಿಂತ ಹೆಚ್ಚು ಪ್ರಶಸ್ತಿಗಳಿವೆ ಎಂಬುವ ಕಳವಳ ಕಾಯ್ಕಿಣಿಯವರದಾಗಿತ್ತು.
”ಭಾಷೆ ಎಂಬುದು ಸಾಮಾಜಿಕವಾದದ್ದು. ಪ್ರತಿ ಊರಲ್ಲಿ ಸಾಹಿತ್ಯಾಸಕ್ತರು ಇದ್ದಾರೆ. ಬೆಂಗಳೂರಿನಲ್ಲಿ ಎನೋ ಎಲ್ಲವೂ ನಡೆಯುತ್ತಿದೆ, ಎಂದು ಊರುಗಳಲ್ಲಿ ಇರುವವರು ಭ್ರಮೆಯಲ್ಲಿ ಇರಬಾರದು, ಅವರು ಇರುವ ಊರಲ್ಲೇ ನಡೀತಾ ಇರೋದು ಅವರಿಗೆ ಮನವರಿಕೆ ಮಾಡಿ ಕೊಡಬೇಕಾಗಿದೆ. ಅಲ್ಲಿಯ ವಿಶೇಷಗಳನ್ನೇ ಬರೆಯಿರಿ ಎಂದು ಹೇಳಬೇಕಾಗಿದೆ ಎಂದರು. ನನ್ನ ಕಥೆಗಳಲ್ಲಿ ಪರಿವರ್ತನೆ ಇರುತ್ತದೆ.ಆ ಕ್ಷಣದ ಅನುಭವ ಇರುತ್ತದೆ. ಬರೆಯುವಾಗ ಹೊಸತು ಸಿಗಬೇಕು ಅದಕ್ಕೆ ನಾನು ಸದಾ ತೆರೆದ ಮನಸ್ಸಿನಿಂದ ಇರುತ್ತೇನೆ” ಎಂದರು.
”ಕರ್ನಾಟಕದಲ್ಲಿ ದಿನಕ್ಕೊಂದು ಹೊಸ ಪುಸ್ತಕ ಪ್ರಕಟವಾಗುತ್ತಿದೆ. ತುಂಬಾ ಶಬ್ಧವಾಗುತ್ತಿದೆ , ನಿಶ್ಯಬ್ಧ ಇಲ್ಲವಾಗಿದೆ. ನಾಲ್ಕೈದು ವರ್ಷಗಳು ಪುಸ್ತಕ ನಿಲ್ಲಿಸಿ.ಎಲ್ಲರೂ ಪುಸ್ತಕ ಓದುವಂತಾಗಬೇಕು ಎಂದು ವ್ಯಂಗ್ಯದ ಮಾತುಗಳಲ್ಲಿ ವಿಷಯದ ಗಂಭೀರತೆಯನ್ನು ನೆರೆದಿದ್ದ ಸಾಹಿತ್ಯಾಸಕ್ತರಿಗೆ ಮನದಟ್ಟು ಮಾಡಿಕೊಟ್ಟರು. ಸಾಹಿತ್ಯದ ಪುಸ್ತಕ ಯಾಕೆ ಓದಬೇಕು? ಎಂದು ಪ್ರಶ್ನಸಿದ ಅವರು ಪದವಿ ಓದಲು ಪಠ್ಯಗಳು ಇವೆ. ಪರೀಕ್ಷೆಗಳಿವೆ.ಆದರೆ ಸಾಹಿತ್ಯದ ಪುಸ್ತಕಗಳು ಓದಿದರೆ ಜೀವನದಲ್ಲಿ ಎದುರಾಗುವ ನಾನಾ ಸಮಸ್ಯೆಗಳನ್ನು ,ಪರೀಕ್ಷೆಗಳನ್ನು ಗೆಲ್ಲಬಹುದು. ನನಗೆ ವೈಯಕ್ತಿಕವಾಗಿ ಶಕ್ತಿ ಬಂದದ್ದೆ ಪುಸ್ತಕಗಳನ್ನು ಓದಿ” ಎಂದು ಹೇಳಿದರು. ತಮಗೆ ಬಂದ ಶಾಲು ,ಪೇಟ, ವಾಟ್ಸಾಪ್ ಡಿ.ಪಿ ಮಾಡುವ ದುರವಸ್ಥೆ ನಮ್ಮ ಸಾಹಿತಿಗಳಿಗೆ ಬಂದಿದೆ. ಸನ್ಮಾನ ಮಾಡಿದ್ದನ್ನು ಸಾಹಿತಿಗಳೇ ಡಿ ಪಿ ಮಾಡಿದರೆ ಏನೋ ತಪ್ಪಾಗಿದೆ ಎಂದೇ ಅರ್ಥ. ಸಾಹಿತಿಗಳಿಗೆ ಆದ ಸನ್ಮಾನದ ಫೋಟೋಗಳನ್ನು ಬೇರೆಯವರು ಡಿ.ಪಿ ಮಾಡುವಂತಾಗಬೇಕು. ಬದುಕನ್ನು ಅರ್ಥ ಮಾಡಿಕೊಳ್ಳಲು ನಾವು ಮಾಡಿ ಕೊಂಡ ಕಿಟಕಿಗಳೆ ಕಥೆಗಳು,ಓದಿಕೊಂಡವರು ಎಂಬ ಹೊಸ ತಲೆಮಾರಿನವರು ನಮ್ಮೆದುರು ಸಿಗುತ್ತಾರೆ.ಅವರೆಲ್ಲಾ ಹೆಚ್ಚು ಪುಸ್ತಕ ಓದಬೇಕು. ಡ್ರೈವಿಂಗ್ ಕಲಿತ ಹಾಗೆಯೇ ಪುಸ್ತಕ ಓದುವುದು. ಸಾಮಾಜಿಕ ಮಾಧ್ಯಮದಿಂದಾಗಿ ಸಾಹಿತ್ಯ ಪುಸ್ತಕ ಓದಲು ವಿಶಾಲವಾದ ಜಾಗವೇ ಇಲ್ಲವಾಗಿದೆ. ” ಎಂದು ಕಾಯ್ಕಿಣಿಯವರು ವಿಷಾದ ವ್ಯಕ್ತ ಪಡಿಸಿದರು.
ಅತ್ಯಂತ ಚಂದದ ನಿರೂಪಣೆಯನ್ನು ಮಾಡಿದ ಶೈಲಸುತೆ ರಂಜಿತಾ, ನಿರೂಪಕಿ ಹಾಗೂ ತಾಳಮದ್ದಳೆ ಕಲಾವಿದೆ ಅವರಿಗೆ. ಮತ್ತು ಈ ಸಭಾಂಗಣವನ್ನು ಒದಗಿಸಿ ಕೊಟ್ಟ ಶ್ರೀ ವಿನಾಯಕ ದೇವಸ್ಥಾನದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರಿಗೂ , ಕಡೆಯದಾಗಿ ಶಿವರಾಮ ಕಾರಂತ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರಿಗೂ ಬಹಳ ಮುಖ್ಯವಾಗಿ ನಮ್ಮ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ನಿಮ್ಮೆಲ್ಲರಿಗೂ ಕಾರಂತ ವೇದಿಕೆಯ ಪರವಾಗಿ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಲಾಯಿತು . ಮುಂದಿನ ಕಾರ್ಯಕ್ರಮವಾದ ವೀರ ಅಭಿಮನ್ಯು ಯಕ್ಷೇಶ್ವರಿ ಯಕ್ಷಗಾನ ತಂಡ ಬೆಂಗಳೂರು ಇವರಿಗೂ ಧನ್ಯವಾದಗಳನ್ನು ಹೇಳುತ್ತಾ ಕಾರ್ಯಕ್ರಮ ಮುಕ್ತಾಯವಾಯಿತು.
ಧನ್ಯವಾದಗಳು.
ಮಂಜುಳಾ ಭಾರ್ಗವಿ
(ಕಾರ್ಯದರ್ಶಿ )
ಪತ್ರಿಕೆಗಳಲ್ಲಿ ಬಂದ ವರದಿ:
ಹೊಸ ದಿಗಂತ |
ಉದಯಕಾಲ ಪತ್ರಿಕೆ |
ವಿಶ್ವವಾಣಿ |
ವಿಜಯ ಕರ್ನಾಟಕ |
ಯಕ್ಷಗಾನ ಪ್ರಸಂಗ " ವೀರ ಅಭಿಮನ್ಯು" ಕಥಾ ಪ್ರಸಂಗವನ್ನು ಯಕ್ತೆಶ್ವರಿ ಯಕ್ಷಗಾನ, ಬೆಂಗಳೂರು ತಂಡದವರು ಸಂಪನ್ನ ಗೊಳಿಸಿದರು.
No comments:
Post a Comment