Sunday, November 16, 2025

ಕನ್ನಡ ರಾಜ್ಯೋತ್ಸವ 2025 - ಶಿವರಾಮ ಕಾರಂತ ವೇದಿಕೆ

 ಭಾನುವಾರ, ನವಂಬರ್ 16, 2025 

ತರಳಬಾಳು ಕೇಂದ್ರ, ಮಿನಿ ಹಾಲ್, ಆರ್. ಟಿ. ನಗರ, ಬೆಂಗಳೂರು. 

ಶಿವರಾಮ ಕಾರಂತ ವೇದಿಕೆಯ ರಾಜ್ಯೋತ್ಸವ ಕಾರ್ಯಕ್ರಮ ಅತಿಥಿ ಗಳಿಂದ ಕನ್ನಡದ ಬಗ್ಗೆ ಭಾಷಣ, ನೃತ್ಯ, ಹಾಡುಗಳಿಂದ ಸಂಪನ್ನ ಗೊಂಡಿತು. 



ನಮಸ್ಕಾರ, 

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಒಂದಷ್ಟು ಕನ್ನಡದ ಬಗ್ಗೆ ಮಾತುಕತೆ.
 ಕನ್ನಡ ಕಲಿಕೆಯ ಸವಾಲುಗಳು ಇದರ ಬಗ್ಗೆ ಮತ್ತು ಕನ್ನಡ ಪ್ರೀತಿಯ ಕುರಿತು ಅತಿಥಿಗಳು ಮಾತಾಡುತ್ತಾರೆ. ಬನ್ನಿ



ಕಾರ್ಯಕ್ರಮವು ನಾಡಗೀತೆಯೊಂದಿಗೆ ಪ್ರಾರಂಭವಾಗಿ, ಕಾರ್ಯದರ್ಶಿ ಮಂಜುಳ ಭಾರ್ಗವಿ ಅವರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು . ವೇದಿಕೆಯ ಉಪಾಧ್ಯಕ್ಷ ವೀರಶೇಖರ ಸ್ವಾಮಿಯವರು ಅತಿಥಿಗಳನ್ನು, ಸಾಭಿಕರನ್ನು ಸ್ವಾಗತಿಸಿದರು. 


ವೇದಿಕೆಯ ಅಧ್ಯಕ್ಷೆ ಡಾ. ದೀಪಾ ಫಡ್ಕೆ ಅವರು ಕನ್ನಡ  ಭಾಷೆ, ಕಲಿಕೆ, ಬಳಕೆಯ  ಬಗ್ಗೆ  ಪ್ರಾಸ್ತಾವಿಕ ನುಡಿಗಳನ್ನು ಆಡಿದರು. 


ಕುಮಾರಿ ಅನ್ವಿತ ಅವಳಿಂದ ಒಂದು ಕನ್ನಡ ಹಾಡಿಗೆ ಸುಂದರವಾದ ನೃತ್ಯ ಪ್ರದರ್ಶನವನ್ನು ಮಾಡಿದಳು. 


ಶ್ರೀಮತಿ ಸಂಧ್ಯಾ ಹೆಗಡೆ ದೊಡ್ಡಹೊಂಡ 

ಶ್ರೀ  ಡುಂಡಿ ರಾಜ್ 

ಶ್ರೀ ಚಿದಂಬರ ಕೋಟೆ ಅವರು ಎರಡು ಕನ್ನಡ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. 



ಸಂಧ್ಯಾ ಹೆಗಡೆ ಅವರು ಕನ್ನಡ ಭಾಷೆ, ಕಲಿಕೆ, ಸವಾಲುಗಳು  ಬಗ್ಗೆ ದೀರ್ಘವಾಗಿ ಭಾಷಣ ಮಾಡಿದರು. 
ಹಾಸ್ಯ ಕವಿ, ನಾಟಕ ಗಾರ ಡುಂಡಿ ರಾಜ್ ಅವರು ತಮ್ಮ ಹನಿ ಕವನಗಳು , ಚುಟುಕುಗಳ ಮೂಲಕ ಸಾಭಿಕರನ್ನು ನಗೆ ಗಡಲಲ್ಲಿ ತೇಲಿಸಿದರು. 




ಶ್ರೀಮತಿ ಚೇತನ ಹೆಗಡೆ ಅವರು ಧನ್ಯವಾದ ಸಮರ್ಪಿಸಿದರು. 
ಕಾರ್ಯದರ್ಶಿ ಶ್ರೀಮತಿ ಮಂಜುಳ ಭಾರ್ಗವಿ ಅವರು ಕಾರ್ಯಕ್ರಮವನ್ನು ಅಚ್ಚ ಕಟ್ಟಾಗಿ ನಿರೂಪಣೆ ಮಾಡಿದರು. 




ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರಿಂದ ವರದಿ:

ನಮಸ್ಕಾರ, ಎಲ್ಲರಿಗೂ. 🙏
ಈ ತಿಂಗಳ ಅಂದರೆ ನವೆಂಬರ್  16 ಭಾನುವಾರ. ಸಂಜೆ ನಾಲ್ಕಕ್ಕೆ ನಮ್ಮ ವೇದಿಕೆಯ ವತಿಯಿಂದ, ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಬಹಳ ಚಂದವಾಗಿ ನೆರವೇರಿತು. ಅದರ  ಕುರಿತು ಒಂದು ವರದಿ.

ಸಂಜೆ ನಾಲ್ಕು ಗಂಟೆ ಹದಿನೈದು ನಿಮಿಷಕ್ಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭವಾಯಿತು. 

ನಮ್ಮ ಕಸ್ತೂರಿ ಕನ್ನಡದ ಕಂಪು ಮತ್ತು ಶಿವರಾಮ ಕಾರಂತ ವೇದಿಕೆಯ ಕಾರ್ಯ ವೈಖರಿಗಳನ್ನು  ಕಲೆ ಹಾಕುತ್ತ ಮಾತಿಗೆ ತೊಡಗಿದೆ. ಮೊದಲಿಗೆ ಕಾರ್ಯಕ್ರಮವನ್ನು ನಾಡಗೀತೆಯ ಮೂಲಕ ಶುಭಾರಂಭ ಮಾಡಿದೆವು. ನಾಡಗೀತೆಯ ಧ್ವನಿಮುದ್ರಣ ದ ಜೊತೆಗೆ ನಾವೆಲ್ಲರೂ ಹಾಡುತ್ತಾ ತಾಯಿ ಭುವನೇಶ್ವರಿ ಗೆ ನಮನಗಳನ್ನು ಸಲ್ಲಿಸಿದೆವು.
ನಂತರ, ಕನ್ನಡದ ಕವಿಗಳು ತಾಯಿ ಭುವನೇಶ್ವರಿ ಯ ಕೀರ್ತಿಯನ್ನು ನೂರಾರು ಹಾಡುಗಳನ್ನು ರಚಿಸುವ ಮೂಲಕ ಅವಳನ್ನು ಸ್ತುತಿಸಿದ್ದಾರೆ. ಅಂತಹ ಒಂದು ಹಾಡಿಗೆ ಮೌಂಟ್ ಕಾರ್ಮೆಲ್ ವಿದ್ಯಾರ್ಥಿನಿ ಕುಮಾರಿ ಅನ್ವಿತಾಳಿಂದ ಕನ್ನಡಾಂಬೆಗೆ ನೃತ್ಯ ನಮನವನ್ನು ಸಲ್ಲಿಸಲಾಯಿತು.

ಸಭಾ ಕಾರ್ಯಕ್ರಮವನ್ನು ಆರಂಭಿಸುತ್ತಾ,ಶಿವರಾಮ ಕಾರಂತ ವೇದಿಕೆ ಮೂರು ದಶಕಗಳಿಂದ  ಕನ್ನಡದ ಕಾರ್ಯಕ್ರಮ ಗಳನ್ನು ಮಾಡುತ್ತಾ ಕನ್ನಡದ ಹಣತೆ ಹಚ್ಚಿಕೊಂಡು ಬಂದಿದೆ. ಇಂದಿನ ಕಾರ್ಯಕ್ರಮ ಕೂಡ ಮತ್ತೊಂದು ಹಣತೆಯೇ ಎಂದು ಹೇಳುತ್ತಾ

ವೇದಿಕೆಗೆ  ಮುಖ್ಯ ಅತಿಥಿಗಳು ಶ್ರೀ ಡುಂಡಿರಾಜ್ ಸರ್ ಅವರು , ಕನ್ನಡ ಕಲಿಕೆಯ ಸವಾಲು ಇದರ ಬಗ್ಗೆ ಉಪನ್ಯಾಸ ನೀಡಲಿರುವ ಸಂಧ್ಯಾ ಹೆಗಡೆ ದೊಡ್ಡ ಹೊಂಡ ಮತ್ತು ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರಾದ ದೀಪಾ ಫಡ್ಕೆಯವರು ವೇದಿಕೆಯನ್ನು ಅಲಂಕರಿಸ ಬೇಕಾಗಿ ಕೋರಿಕೊಳ್ಳಲಾಯಿತು.

ಕಾರ್ಯಕ್ರಮ ದ ಮೊದಲ ಭಾಗವಾದ ಸ್ವಾಗತ ಕೋರುವಿಕೆಯು ನಮ್ಮ ಶಿವರಾಮ ಕಾರಂತ ವೇದಿಕೆಯ ಉಪಾಧ್ಯಕ್ಷರಾದ, ಶ್ರೀ ವೀರಶೇಖರ ಸ್ವಾಮಿ ಸರ್ ರವರಿಂದ ಬಹಳ ಅಚ್ಚುಕಟ್ಟಾಗಿ ಮಾಡಲಾಯಿತು. ಹಾಗೆ ಪ್ರಾಸ್ತಾವಿಕ ನುಡಿಗಳನ್ನಾಡುವುದಕ್ಕೆ, ನಮ್ಮ ವೇದಿಕೆಯ ಅಧ್ಯಕ್ಷರಾದ  ಡಾ.ದೀಪಾ ಫಡ್ಕೆ ಅವರನ್ನು ಕೇಳಿಕೊಳ್ಳಲಾಯಿತು.   ದೀಪಾ ಫಡ್ಕೆ ಅವರು ಕನ್ನಡ ದ ಪ್ರಸ್ತುತ ಪರಿಸ್ಥಿತಿಗಳ ಬಗ್ಗೆ ಮಾತನಾಡಿ ಇಂದಿನ ಪೀಳಿಗೆ ಕನ್ನಡ ಮಾತನಾಡುವ, ಬರೆಯುವ ಓದುವ ಪ್ರಕ್ರಿಯೆ ಯಲಿ ಕಂಡು ಬರುವ ಸವಾಲುಗಳನ್ನು ಕುರಿತು ಮಾತನಾಡಿ ಇದರ ಬಗ್ಗೆ ಉಪನ್ಯಾಸ ಏರ್ಪಡಿಸಿ ಅದರ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎನ್ನುತ್ತಾ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಬಹಳ ಚಂದದ ಪ್ರಾಸ್ತವಿಕ ಮತ್ತು ಸ್ವಾಗತವನ್ನಾಲಿಸಿದ ನಾವುಗಳು, ಅತಿಥಿಗಳ ಭಾಷಣ ಆಲಿಸಲು ಸಿದ್ದರಾದೆವು. 

ಭಾಷೆಯ ವಿಷಯ ಪ್ರಸ್ತಾಪ ಆದಾಗ ಎಲ್ಲಾ ಕನ್ನಡ ಭಾಷೆಯ ವಿದ್ವಾಂಸರ ಅತಿ ದೊಡ್ಡ ಆತಂಕ ಕನ್ನಡ ಭಾಷೆಗಿರುವ ಅಳಿವು ಉಳಿವಿನ ಬಗ್ಗೆ. ಇದರಲ್ಲಿ ಮಕ್ಕಳ ಕಲಿಕೆಯ ಸವಾಲೂ ತುಂಬಾ ದೊಡ್ಡದೇ. ಇದರ ಕುರಿತು ಮಾತಾಡುತ್ತಾರೆ ಡಾ.ಸಂಧ್ಯಾ ಹೆಗಡೆ ದೊಡ್ಡ ಹೊಂಡ. ಸಂಧ್ಯಾ ಅವರ ಸಣ್ಣ ಪರಿಚಯ ಮಾಡುವುದಾದರೆ 

 ಸಂಧ್ಯಾರವರು ಏನ್. ಎಂ. ಕೆ. ಆರ್. ವಿ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು
ಸಂಧ್ಯಾ ಹೆಗಡೆ ದೊಡ್ಡಹೊಂಡ ರವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ದೊಡ್ಡಹೊಂಡದವರು. ಸಂತೆಗುಳಿ.ಅರೆ ಅಂಗಡಿಯಲ್ಲಿ ಪ್ರಾಥಮಿಕ ಶಿಕ್ಷಣದ ನಂತರ, ಹೊನ್ನವರ ಧಾರವಾಡಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದ್ದು, ಶಂಕರ ಮೊಕಾಶಿ ಪುಣೆಕರ್ ರವರ, ಗಂಗವ್ವ ಗಂಗಾಮಯಿ ಕೃತಿಯ ಮೇಲೆ, ಸಂಪ್ರಬಂಧ ರಚಿಸಿದ್ದಾರೆ. " ಆಧುನಿಕ ಕನ್ನಡ ಸಾಹಿತ್ಯ ಮೀಮಾಂಸೆ. ಕಾವ್ಯ "ಸಂಶೋಧನಾ ಮಹಾಪ್ರಬಂಧವನ್ನು ಕರ್ನಾಟಕ ವಿಶ್ವ ವಿದ್ಯಾಲಯಕ್ಕೆಸಲ್ಲಿಸಿ ಪಿ. ಎಚ್. ಡಿ. ಪಡೆದಿದ್ದಾರೆ.

ಕಥೆ, ಕವನ, ವಿಮರ್ಶೆ, ಸಂಶೋಧನ ಲೇಖನಗಳನ್ನು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ನಾವು ಕಾಣಬಹುದು.' ಪೂರ್ಣದೆಡೆಗೆ, ಅರಿವಿನೆಡೆಗೆ, ಕನಸು, ಸಂಪಾದಿತ ಕೃತಿಗಳು.' ಗುಲಾಬಿ ಕಚ್ಚಿನ ಬಳೆಗಳು' ಕಥಾ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಲೇಖಕ ಚೊಚ್ಚಲ ಕೃತಿ ಸಹಾಯ ಧನ, ಕನ್ನಡ ಸಾಹಿತ್ಯ ಪರಿಷತ್ತು ನೀಡುವ, ಮಲ್ಲಿಕಾ ದತ್ತಿ ಪ್ರಶಸ್ತಿ, ಕೆ. ಎಸ್. ನ. ಟ್ರಸ್ಟ್ ನ ಅಧ್ಯಯನ ಪುರಸ್ಕಾರ ಸಂಧಿವೆ. ಸದ್ಯ ಏನ್. ಎಂ. ಕೆ. ಆರ್. ವಿ ಮಹಿಳಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಓದು, ಚೆಸ್, ಸಂಗೀತ, ಇವು ಸಂಧ್ಯಾ ಹೆಗಡೆ ಅವರ ನೆಚ್ಚಿನ ಹವ್ಯಾಸಗಳಾಗಿವೆ. 

ಸಂಧ್ಯಾ ರವರು ಕನ್ನಡ ಭಾಷಾಭಿಮಾನದ  ಬಗ್ಗೆ,  ಕನ್ನಡ ಭಾಷೆಯ ಅಳಿವು ಉಳಿವುಗಳ ಬಗ್ಗೆ ನಾಗರಿಕರಾಗಿ ನಾವು ಕೈಗೊಳ್ಳಬಹುದಾದ ಕ್ರಮಗಳು, ಮಕ್ಕಳ ಮನಸ್ಥಿತಿಯಲ್ಲಿ ಒಂದು ಭಾಷೆ ಹೇಗೆ ಸ್ಥಾನ ಗಳಿಸಬಲ್ಲದು,? ಮತ್ತು ತಂದೆ ತಾಯಿಗಳಾಗಿ ಮಕ್ಕಳಿಗೆ ಭಾಷೆಗಳ ವಿಷಯದಲ್ಲಿ ಹೇಗೆ ಸಹಾಯಕರಾಗಿ ನಿಲ್ಲಬಹುದು, ಶಿಕ್ಷಕರಾಗಿ ಮಕ್ಕಳಲ್ಲಿ ಹೇಗೆ ಕನ್ನಡ ಭಾಷೆಯ ಸಸಿಯನ್ನು ನೆಟ್ಟು, ಅದನ್ನು ಪೋಷಿಸಿ ಸಮಾಜಕ್ಕೆ ಒಳ್ಳೆಯ ಫಲಗಳನ್ನು ಕೊಡುವಂತ ಹೆಮ್ಮರಗಳನ್ನಾಗಿಸುವುದು, ಈ ಎಲ್ಲಾ ವಿಷಯಗಳ ಬಗ್ಗೆ ಬಹಳ ಚಂದದ,ತಾರ್ಕಿಕ,  ವಿಷಯಗಳನ್ನು ಚರ್ಚೆ ಮಾಡುತ್ತಾ, ಇಂದಿನ ಕನ್ನಡ ಕಲಿಕೆಯಲ್ಲಿ ತಲೆದೋರಿರುವ ಬಿಕ್ಕಟ್ಟುಗಳ ಬಗ್ಗೆ ವಿವರಿಸುತ್ತಾ ಅತ್ಯಂತ ಗಂಭೀರವಾಗಿ ಎಳೆ ಎಳೆಯಾಗಿ ಸಭೆಯ ಮುoದಿಟ್ಟರು. ನಿಜಕ್ಕೂ ಮತ್ತೊಂದು ಸಭೆಯಲ್ಲಿ ಈ ವಿಷಯದ ಬಗ್ಗೆ ಮತ್ತಷ್ಟು ಚರ್ಚೆಗಳಾಗಲಿ ಎನ್ನುವ ಬಯಕೆಯನ್ನು ಹೊತ್ತು, ಅತ್ಯಂತ ಗಹನ ವಿಚಾರಗಳನ್ನು ಹಂಚಿದ ಸoಧ್ಯಾ ಮೇಡಂ ರವರಿಗೆ ಹೃದಯದ ಅಂತರಾಳದಿಂದ  ಧನ್ಯವಾದಗಳು.

ನಂತರ ಶ್ರೀ ಚಿದಂಬರ ಕೋಟೆಯವರ ಕಂಠಸಿರಿಯಲ್ಲಿ ಕಾವೇರಿಗೆ ಕಾಲುಂಗುರ ತೊಡಿಸಿ ಮತ್ತು ಕನ್ನಡ ನಾಡಿನ ಜೀವನದಿ ಈ ಕಾವೇರಿ ಎಂಬ ಹಾಡುಗಳನ್ನು ಕೇಳಿ ಬಹಳ ಆನಂದ ತುಂದಿಲರಾದೆವು. ನಿಜಕ್ಕೂ ಅವರ ಸಂಗೀತದ ಪಯಣ ಬಹಳ ಹೆಮ್ಮೆಯಿಂದ ಸಾಗುವ ದೋಣಿಯoತಾಗಲಿ. ಎಂದು ಸಭೆಯ ಪರವಾಗಿ ಹಾರೈಕೆಗಳು.
ಮುಂದೆ ಮಾತನಾಡಿದ ಕವಿ ನಾಟಕಕಾರ ಶ್ರೀ ಡುಂಡಿರಾಜ್ ಅವರು  ಹಾಸ್ಯ ದ ಮೂಲಕ ಕನ್ನಡ ಪ್ರೀತಿಯನ್ನು ಉಳಿಸುವ ಬೆಳೆಸುವ ಬಗ್ಗೆ ತಮ್ಮ ಎಂದಿನ ಶೈಲಿಯಲ್ಲಿ ಮಾತಾಡಿದರು.....
. ದುಂಡಿರಾಜ್ ರವರ ಮಾತುಗಳೆಂದರೆ ಕೇಳಬೇಕೇ? ನಗೆಗಡಲಲ್ಲಿ ತೇಲುತ್ತಾ ಸಾಗಿದ ಸಭೆಗೆ ಸಮಯ ಹೋಗಿದ್ದೆ ತಿಳಿಯಲಿಲ್ಲ. ಹೊಟ್ಟೆಯ ಹಸಿವಿಗೆ ಊಟವಿದೆ, ಸಾಹಿತ್ಯದ ಹಸಿವಿಗೆ ನಮ್ಮ ಶಿವರಾಮ ಕಾರಂತರ ವೇದಿಕೆಯಿದೆ ಎನ್ನುವ ಮಾತು ನೆನಪಾಗದೆ ಇರಲಿಲ್ಲ. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರ ಮುಖದಲ್ಲಿ ಅತ್ಯಂತ ಸೊಗಸಾದ ಮಂದಹಾಸದ ನವಿರು ಎದ್ದು ಕಾಣುತಿತ್ತು.   ಕೊನೆಯದಾಗಿ ಚೇತನಾ ಹೆಗಡೆಯವರು ಭಾವ ತುಂಬಿದ ಪದಗಳಿಂದ ಕೂಡಿದ ಧನ್ಯವಾದ ಸಮರ್ಪಣೆಯೊಂದಿಗೆ, ಅತಿಥಿಗಳನ್ನು ಸನ್ಮಾನಿಸಲಾಯಿತು.ಒಂದು ಅತ್ಯಂತ ತಣ್ಣನೆಯ ಸವಿ ಸಂಜೆಗೆ ಕಾರಣರಾದ ಎಲ್ಲರಿಗೂ ವಂದಿಸುತ್ತಾ..


ಬರೆದಿರುವುದು 17/11/2025 

























No comments:

Post a Comment