Wednesday, September 30, 2020

HAPPY BIRTHDAY - SHUBHA

 Tuesday, 29th September 2020

"CHIGURU" - Chikkalasandra, Bengaluru.









Birthdays are only reminder for all of us that we are older by one more year.




Daughter Shubha grew one more year today, and we went to their house to spend some time to celebrate one more happy occasion.




Mom, Rishi, Kavitha and myself went to their house in the evening with a home made cake.





After the cake cutting, we have Biryani prepared by Shubha and spent some time playing card game "Bluff".

Returned home by 12 midnight.

Written on Thursday, 1st October 2020


Friday, September 25, 2020

ಶ್ರದ್ಧಾಂಜಲಿ - ಎಸ್. ಪಿ. ಬಾಲಸುಬ್ರಮಣ್ಯಂ

 ಶುಕ್ರವಾರ, ಸಪ್ಟಂಬರ 25, 2020 

ಸ್ವರ ಮಾಂತ್ರಿಕ, ಖ್ಯಾತ ಗಾಯಕ, ಗಾನ ಗಂದರ್ವ, ಪದ್ಮ ಭೂಷಣ ಶ್ರೀ ಎಸ್.ಪಿ. ಬಾಲಸುಬ್ರಮಣ್ಯಂ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.


ನಮ್ಮ ಎಸ್ಪಿಬಿ ಎಂದರೆ ಮಾತುಗಳನ್ನು ಹುಡುಕುವುದು ಕಷ್ಟಕರ. ಎಸ್ಪಿಬಿ ಎಂದರೆ ಅದೇ ಒಂದು ಭಾವ. ಎಸ್ಪಿಬಿ ಅಂದರೆ ಸಂಗೀತ. ಎಸ್ಪಿಬಿ ಅಂದರೆ ಅದೊಂದು ಮೇರುಶಿಖರ. ಅದೊಂದು ಸೌಜನ್ಯ, ಸ್ನೇಹ, ಸಂಗೀತ, ಸಂಸ್ಕೃತಿ, ಸರ್ವ ಸದ್ಗುಣಗಳ ಮಹತ್ಸಂಗಮ. ಅವರಿದ್ದ ಕಾಲದಲ್ಲಿರುವ ನಾವೇ ಧನ್ಯರು. ಇಂದು ಅವರಿಲ್ಲ ಅಂದರೆ ಮನಸ್ಸಿಗೆ ಕಷ್ಟವಾಗುತ್ತಿದೆ. ಅವರು ಹಲವು ದಿನಗಳಿಂದ ಕೃತಕ ಉಸಿರಾಟದಲ್ಲಿದ್ದರು ಎಂದಾಗ ಈ ಜೀವಕ್ಕೆ ಬಂಧನದಿಂದ ಬಿಡುಗಡೆ ಬೇಕಿತ್ತಲ್ಲವೆ ಎನಿಸುತ್ತಿತ್ತು. ಪಂಜರದಿಂದ ಹಕ್ಕಿ ಇಂದು ಸ್ವತಂತ್ರವಾಯಿತು. ನಮ್ಮೊಡನಿದ್ದ ಏನನ್ನೋ ಕೂಡಾ ಆ ಹಕ್ಕಿ ತೆಗೆದುಕೊಂಡು ಹೋಯಿತು ಎಂಬುದು ಸುಳ್ಳಲ್ಲ.

ಎಸ್.ಪಿ. ಬಿ. ಯವರು ಹಾಡಿದ ಕೊನೆಯ ಹಾಡು: (ಜಯಂತ್ ಕಾಯ್ಕಿಣಿ ವಿರಚಿತ)


ಭಕ್ತಿ ಗೀತೆ, ಭಾವ ಗೀತೆ, ಚಿತ್ರ ಗೀತೆ, ಶಾಸ್ತ್ರಿಯ ಗಾಯನದ ಯಾವುದೇ ಪ್ರಾಕಾರದ ಗೀತೆ ಹಾಡಿದರೂ ಭಾವ ತುಂಬಿ ಹಾಡಬಲ್ಲ, ಕೇಳುಗರನ್ನು ಮಂತ್ರ ಮುಗ್ಧರಾಗಿ ಮಾಡುತಿದ್ದ  ಎಸ್.ಪಿ.ಬಿ ಇನ್ನಿಲ್ಲ ಎನ್ನುವುದು ಬಹಳ ನೋವಿನ ಸಂಗತಿ. ಸುಮಾರು 16 ಭಾಷೆಗಳಲ್ಲಿ ಸಹಸ್ರಾರು ಹಾಡುಗಳನ್ನು ಹಾಡಿದ ಮಾಂತ್ರಿಕನಿಗೆ ಭಾವಪೂರ್ಣ ಶದ್ಧಾಂಜಲಿ.





ಓಂ ಶಾಂತಿ, ಓಂ ಸದ್ಗತಿ.....

ಬರೆದಿರುವುದು 26/9/2020 




Monday, September 21, 2020

ಶೋಭಾಳ ಬರಹಗಳು - ಭಾಗ 5 (ನೆನಪುಗಳು)

 ಮುಂದುವರಿದ ಭಾಗ 6 


ಶೋಭಾ, (3/9/1966) ಅಣ್ಣನ ಮಗಳು, ಸಾಗರ ಹೊಂಗಿರಣ ಸಂಸ್ಥೆಯ  ಸಂಸ್ಥಾಪಕಿ, ಪ್ರಾಂಶುಪಾಲೆ, ಗ್ರಹ ಬಂಧನದ (lockdown) ಈ ಸಮಯದಲ್ಲಿ ಹಲವಾರು ಲೇಖನಗಳನ್ನು ಬರದು ಬಾಲ್ಯ, ತನ್ನ ಹಿರಿಯರು, ಪರಿಸರ, ಜೀವನದ ಅನುಭವ ಇತ್ಯಾದಿ ವಿಷಯಗಳನ್ನು ಸುಂದರವಾಗಿ, ಅರ್ಥಪೂರ್ಣವಾಗಿ ಬರೆದು ಫೆಸ್ಬುಕ್ , ಇನ್ಸ್ಟಗ್ರಾಂ ಖಾತೆಗಳಲ್ಲಿ ಹಂಚಿ ಕೊಂಡಿರುತ್ತಾಳೆ. ಅವಳ ಬರವಣಿಗೆಯ ವೈಖರಿ, ವಿಷಯಗಳ ನಿರೂಪಣೆ ಮನ ಮುಟ್ಟುವಂತಿದ್ದು ನೆನಪಿಗೋಸ್ಕರ ಇಲ್ಲಿ ಇರಿಸಿಕೊಂಡಿದ್ದೇನೆ.


187.ಪರಿಸರ - ತೆಂಗಿನ ಮರ (29/10/2020)


ತೆಂಗಿನಮರ ಹೆಚ್ಚಾಗಿ ಎಲ್ಲರೂ ನೋಡಿರುವ ವೃಕ್ಷ. ಅದರ ಬಹುಮುಖಿ ಉಪಯೋಗದಿಂದಾಗಿ ನಮ್ಮ ಹಿರಿಯರು ಇದಕ್ಕೆ ಕಲ್ಪವೃಕ್ಷ ಎಂದು ಕರೆದಿದ್ದಾರೆ. ಕರಾವಳಿಯವಳಾದ ನನಗೆ ಅತ್ಯಂತ ಪರಿಚಿತ ಮರವಿದು. ಕರಾವಳಿ ಹಾಗೂ ಮಲೆನಾಡಿನ ಎಲ್ಲೆಡೆ ತೆಂಗು ಕಂಗೊಳಿಸುತ್ತಿರುತ್ತದೆ. ಅಜ್ಜಯ್ಯನ ಮನೆಯ ತೋಟದಲ್ಲೂ ಸುಮಾರು ಎಂಟ್ಹತ್ತು ತೆಂಗಿನಮರಗಳಿವೆ.
ಇದು ನೇರವಾಗಿ ಎತ್ತರಕ್ಕೆ ಬೆಳೆಯುವ ಮರ. ಕೊಂಬೆಗಳಿರುವುದಿಲ್ಲ. ಗರಿಗಳಿರುತ್ತವೆ. ಗರಿ ಹೊಂದಿದ ಎಲೆಗಳು ಹಸ್ತಾಕಾರದಲ್ಲಿರುತ್ತವೆ. ಇವುಗಳು ಮರದ ಮೇಲಿನ ತುದಿಯಲ್ಲಿರುತ್ತವೆ. ಇವುಗಳು ಹದಿನೈದರಿಂದ ಇಪ್ಪತ್ತು ಅಡಿ ಉದ್ದವಿರುತ್ತವೆ. ಮರ ತಿಂಗಳಿಗೊಂದು ಹೊಸ ಗರಿ ಬಿಡುತ್ತದೆ. ಒಣಗಿದ ಗರಿ ಮರದಿಂದ ಉದುರಿ ಬೀಳುತ್ತದೆ. ಹೈಬ್ರೀಡ್ ಅಲ್ಲದ ತೆಂಗಿನಮರ ಏಳೆಂಟು ವರ್ಷಕ್ಕೆ ಫಲ ಕೊಡುತ್ತದೆ. ಹೈಬ್ರೀಡ್ ಮರ ಮೂರ್ನಾಲ್ಕು ವರ್ಷಗಳಲ್ಲಿ ಫಲ ಕೊಡುತ್ತದೆ. ತೆಂಗಿನ ಹೂವನ್ನು ಹೊಂಬಾಳೆ ಎಂದು ಕರೆಯುತ್ತಾರೆ. ಈ ಹೊಂಬಾಳೆ ಗೊಂಚಲು ಗೊಂಚಲಾಗಿ ಬಿಡುತ್ತದೆ. ತೆಂಗಿನ ಮರದ ಪ್ರತಿಯೊಂದು ಭಾಗವೂ ಬಹಳ ಉಪಯೋಗಕಾರಿ.
ನಾವು ಚಿಕ್ಕವರಿದ್ದಾಗ ಅಪ್ಪ ನಮಗೆಲ್ಲ ತೆಂಗಿನ ಗರಿಯಿಂದ ಆಟದ ಸಾಮಾನು ಮಾಡಿಕೊಡುತ್ತಿದ್ದರು. ಅದರ ಚಂಡಪಾಳೆಗೆ ಹಿಡಿಕಡ್ಡಿ ಚುಚ್ಚಿ ತಿರುಗಿಸಿದಾಗ ಕಟಕಟ ಶಬ್ದ ಮಾಡುತ್ತಿದ್ದ ಆಟಿಕೆಯನ್ನೂ ಅಪ್ಪ ಮಾಡಿಕೊಡುತ್ತಿದ್ದರು. ನಾಲಿಗೆಯಲ್ಲಿ ಅಗ್ರ ಆಗಿದ್ದಾಗ ಚಂಡಪಾಳೆ ಕಚ್ಚಿ ತಿಂದು ಉಗಿದರೆ ಅಗ್ರ ಕಡಿಮೆಯಾಗುತ್ತಿದ್ದ ನೆನಪು. ಹೊಂಬಾಳೆಯಿಂದ ಮಾಡಿದ ಬಾಣಂತಿ ಔಷಧಿ ಬಹಳ ರುಚಿಯಾಗಿರುತ್ತದೆಂದು ತಿಂದವರು ಹೇಳುತ್ತಾರೆ.
ತೆಂಗಿನಮರ ಸುಮಾರು ಎಂಭತ್ತು ವರ್ಷ ಬದುಕುತ್ತದೆ. ನನ್ನಮ್ಮನಿಗೆ ಬೇಸಿಗೆಯಲ್ಲಿ ತೆಂಗಿನ ಮರಕ್ಕೆ ಬುಡ ಮಾಡಿಸುವುದೇ ಒಂದು ಸಂಭ್ರಮದ (🤔) ವಿಷಯ. ಚೆನ್ನಾಗಿ ನೀರು ಗೊಬ್ಬರ ಕೊಟ್ಟರೆ ಒಳ್ಳೆಯ ಫಸಲು ಬರುತ್ತದೆಂದು ಅವಳ ಪ್ರಯತ್ನ. ತೆಂಗಿನಕಾಯಿ ಬಿಟ್ಟಾಗ ಕಾಯಿ ಕೊಯ್ಯಲು ಜನ ಇಲ್ಲ ಎಂಬುವುದು ಅಮ್ಮನ ತಲೆಬಿಸಿ. ಏಕೆಂದರೆ ತೆಂಗಿನಮರ ಹತ್ತಲು ಎಲ್ಲರಿಂದಲೂ ಸಾಧ್ಯವಿಲ್ಲ. ತೆಂಗಿನಮರ ಹತ್ತಿ ಕಾಯಿ ಕೊಯ್ಯುವುದು ಒಂದು ಕೌಶಲ. ಕೆಲವರು ತೆಂಗಿನ ಮರದ ಕಾಂಡದ ಮೇಲೆ ಕಾಲಿಟ್ಟು ಹತ್ತಲಾಗುವಂತೆ ಸಣ್ಣ ಕಚ್ಚು ಮಾಡಿ ಮರ ಹತ್ತಲು ಸುಲಭವಾಗುವಂತೆ ಮಾಡಿಕೊಳ್ಳುತ್ತಾರೆ. ಆದರೂ ತೆಂಗಿನಮರ ಹತ್ತುವುದು ಸುಲಭದ ಮಾತಲ್ಲ.

ತೆಂಗಿನ ಮರ ಎಷ್ಟು ಉಪಯುಕ್ತವೋ ಕೆಲವಷ್ಟು ಬಾಧಕಗಳನ್ನು ಹೊಂದಿದೆ. ಅದರ ಬುಡದಲ್ಲಿ ಯಾವುದೇ ವಾಹನ ನಿಲ್ಲಿಸಿದರೆ ಒಣ ಹೆಡೆ ಅಥವಾ ಒಣ ಕಾಯಿ ಬಿದ್ದು ವಾಹನ ಝಕಂ ಆಗುವ ಸಾಧ್ಯತೆ ಇದೆ. ಯಾವುದೇ ವಸ್ತುವಿನ ಸಾಧಕ ಬಾಧಕಗಳ ಬಗ್ಗೆ ಸಂಪೂರ್ಣ ಅರಿವಿದ್ದಾಗ ಮಾತ್ರ ಅದರ ಸೂಕ್ತ ಪ್ರಯೋಜನ ಪಡೆಯಲು ಸಾಧ್ಯ. ಅಹುದಲ್ಲವೇ?


186. ಪರಿಸರ - ಬೂದು ಗುಂಬಳ ಕಾಯಿ (28/10/2020)


ಈ ಬಾರಿ ನಮ್ಮ ಕೈತೋಟದಲ್ಲಿ ಐದಾರು ಬೂದುಗುಂಬಳಕಾಯಿಗಳು ಬಿಟ್ಟಿವೆ. ಆ ಬಳ್ಳಿ ಪೇರಳೆ ಮರಕ್ಕೆ ಹಬ್ಬಿ ಕಾಯಿ ಬಿಟ್ಟ ಕಾರಣ ಪೇರಳೆ ಮರವೇ ಕುಂಬಳಕಾಯಿ ಬಿಟ್ಟಂತೆ ತೋರುತ್ತದೆ! ಏನೇ ಇರಲಿ ಆ ಬಳ್ಳಿಯಿಂದ ನಮಗೆ ಐದಾರು ಕುಂಬಳಕಾಯಿ ಸಿಕ್ಕಿರುವುದು ಖುಷಿಯ ವಿಷಯ😌
ಬೂದುಗುಂಬಳ ಎಂದ ಕೂಡಲೆ ನೆನಪಾಗುವುದು ಅಮ್ಮ ಮಾಡುತ್ತಿದ್ದ ಕೂಷ್ಮಾಂಡ ಹಲ್ವಾ. ನಾವು ಕುಂದಾಪುರದಲ್ಲಿ ಇದ್ದಾಗ ನಮ್ಮ ಕೈ ತೋಟದಲ್ಲಿ ಭಾರೀ ಗಾತ್ರದ ಬೂದುಗುಂಬಳವೊಂದು ಬಿಟ್ಟಿತ್ತು. ಅದನ್ನು ನೋಡಿ ನನ್ನ ಅಮ್ಮನಿಗೆ ಹಲ್ವಾ ಮಾಡುವ ಮನಸ್ಸಾಯಿತು. ಆಗೆಲ್ಲ ಕುಂಬಳಕಾಯಿ ತುಂಡು ಮಾಡುವ ಮೊದಲು ಗಂಡಸರು ಅದಕ್ಕೆ ಚಾಕು ಹಾಕಬೇಕೆಂದು ಶಾಸ್ತ್ರವಿತ್ತು. ಅಪ್ಪ ಅದಕ್ಕೆ ಚಾಕು ಹಾಕಿದ ಮೇಲೆ ಅಮ್ಮ ಮೆಟ್ಟುಕತ್ತಿಯಲ್ಲಿ ಅದನ್ನು ತುಂಡರಿಸಿ ನಮಗೆಲ್ಲ ತುರಿಯಲು ಕೊಟ್ಟಳು. ಅದನ್ನು ನಾವು(ಇನ್ನೊಮ್ಮೆ ಕೂಷ್ಮಾಂಡ ಹಲ್ವ ಬೇಡ ಅನಿಸುವಷ್ಟು) ಕಷ್ಟಪಟ್ಟು ತುರಿದು ಕೊಟ್ಟ ಮೇಲೆ ಒಂದು ದೊಡ್ಡ ಪಾತ್ರೆಗೆ ಹಾಕಿ ಕಟ್ಟಿಗೆ ಒಲೆಯ ಮೇಲೆ ಬೇಯಲಿಟ್ಟಳು. ಅದರ ನೀರು ಆರಿ ಹೋಗುವಷ್ಟು ಬೇಯುವಾಗ ಮಧ್ಯಾಹ್ನ ದಾಟಿತ್ತು. ನಂತರ ಅದಕ್ಕೆ ಸಕ್ಕರೆ, ತುಪ್ಪ ಹಾಕಿ ಮಗುಚಿ ಹಲ್ವಾ ತಯಾರಾಗುವಾಗ ಸಾಯಂಕಾಲವಾಗಿತ್ತು. ಹಲ್ವಾ ಬಹಳ ರುಚಿಯಾಗಿತ್ತು. ಹಲ್ವಾ ತಿನ್ನುವಾಗ ಅದರ ಹಿಂದಿನ "ಕಷ್ಟಕರ" ಶ್ರಮವೆಲ್ಲ ಮರೆತು ಹೋಗಿ ಬಿಟ್ಟಿತ್ತು. ಅದರ ಫಲವೇ ಮಾರನೆ ದಿನವಾಗುವಾಗ ಹಲ್ವಾ ಚೂರು ಉಳಿಯದಂತೆ ಖಾಲಿಯಾದದ್ದು 😀
ಪ್ರತಿಬಾರಿ ಅಮ್ಮ ಕೂಷ್ಮಾಂಡ ಹಲ್ವಾ ಮಾಡುವಾಗ ಅದು ಭಾರಿ ಕಷ್ಟದ ಕೆಲಸ ಎಂದು ನನಗನಿಸುತ್ತಿತ್ತು. ಏಕೆಂದರೆ ಅವಳು ಅದನ್ನು ಬಹಳ ಶಾಸ್ತ್ರೋಕ್ತವಾಗಿ ಮಾಡುತ್ತಿದ್ದಳು. ಅಡುಗೆಯಲ್ಲಿ ಅವಳು ಯಾವತ್ತಿಗೂ ಶಾರ್ಟ್ ಕಟ್ ಮಾರ್ಗ ಹಿಡಿದವಳೇ ಅಲ್ಲ. ನಾನಾದರೋ ಅವಳ ಉಲ್ಟಾ. ಸುಲಭ ಮಾರ್ಗದಲ್ಲಿ ಅಡುಗೆ ಮಾಡುವ ದಾರಿಯನ್ನು ಹುಡುಕುವವಳು. ಹೀಗಾಗಿ ನಾನು ಹಲ್ವಾ ಮಾಡಲು ಪ್ರಾರಂಭಿಸಿದಾಗ(ಕುಂಬಳಕಾಯಿಯ ಎಕ್ಸೆಸ್ ನೀರನ್ನು ಮೊದಲೇ ತೆಗೆದು ಬಿಡುತ್ತಿದ್ದೆ) ಅದು ಅಷ್ಟು ಕಷ್ಟಕರವಲ್ಲವೆಂದು ವೇದ್ಯವಾಯಿತು. ಅಮ್ಮ ಇಡೀ ದಿನ ವ್ಯಯಿಸಿ ಮಾಡುತ್ತಿದ್ದ ಹಲ್ವಾವನ್ನು ನಾನೊಂದೆರಡು ಗಂಟೆಯೊಳಗೆ ಮಾಡಿ ಮುಗಿಸುತ್ತಿದ್ದೆ. ಅಮ್ಮ ಮಾಡುತ್ತಿದ್ದಷ್ಟು ರುಚಿ ಇರದಿದ್ದರೂ ಕೂಷ್ಮಾಂಡ ಹಲ್ವಾ "ಹೌದು" ಎಂದು ಒಪ್ಪಿಕೊಳ್ಳುವ ರುಚಿ ಅದಕ್ಕಿರುತ್ತಿತ್ತು🤭
ಕುಂಬಳಕಾಯಿಯಿಂದ ಬಹಳ ರೀತಿಯ ಖಾದ್ಯಗಳನ್ನು ಮಾಡಬಹುದು. ಕುಂಬಳಕಾಯಿಯ ಸಾಂಬಾರ್, ಮಜ್ಜಿಗೆಹುಳಿ, ಅದರ ತಿರುಳಿನ ಗೊಜ್ಜು, ತಂಬುಳಿ ಎಲ್ಲಾ ರುಚಿಕರ ಹಾಗೂ ಆರೋಗ್ಯಕರ. ಅದು ಔಷಧೀಯ ಗುಣಗಳನ್ನು ಹೊಂದಿದೆ ಕೂಡಾ. ಹಲ್ವಾ ಅಲ್ಲದೆ ಅದರಲ್ಲಿ ಇನ್ನೂ ಹಲವು ಬಗೆಯ ಸಿಹಿತಿಂಡಿಗಳನ್ನು ಮಾಡುತ್ತಾರೆ. ಎಲ್ಲವೂ ಬಲುರುಚಿ. ವಾಹನ ಪೂಜೆಗೆ ಬೂದುಗುಂಬಳ ಬೇಕೇ ಬೇಕು. ಹೀಗೆ ಬೂದುಗುಂಬಳ ಎಲ್ಲಾ ಕಡೆ ಸಲ್ಲುವ ತರಕಾರಿ.
ನಮ್ಮ ಕೈತೋಟದಲ್ಲಿ ಪ್ರಪ್ರಥಮ ಬಾರಿಗೆ ಬೂದುಗುಂಬಳ ಬೆಳೆದ ಖುಷಿಯಲ್ಲಿ ಈ ಲೇಖನ😀


185. ನೆನಪುಗಳು - ಬೆರ್ಚಪ್ಪ /ಬೆದರು ಗೊಂಬೆ (27/10/2020 )


ಬೆರ್ಚಪ್ಪ ಎನ್ನುವುದು ನನ್ನ ಬಾಲ್ಯದ ದಿನಗಳ ಪರಿಚಿತ ಮುಖ/ಪದ. ಇದಕ್ಕೆ ಬೆದರುಗೊಂಬೆ ಎಂದೂ ಹೇಳುತ್ತಾರೆ. ಆದರೆ ಬೆರ್ಚಪ್ಪ ಎನ್ನುವ ಪದಕ್ಕೆ ಕನೆಕ್ಟ್ ಆದಷ್ಟು ನನಗೆ ಬೆದರುಗೊಂಬೆಗೆ ಕನೆಕ್ಟ್ ಆಗೋದು ಕಷ್ಟ. ಹೆಸರಲ್ಲೇನಿದೆ ಎಂದು ಅನಿಸಬಹುದು. ಆದರೆ ಬಹಳ ಪರಿಚಿತ ಪದ ಯಾವಾಗಲೂ ಆಪ್ತವಾಗಿ ಕಾಣುತ್ತದೆ. ಹಾಗೆಯೇ ಬೆರ್ಚಪ್ಪ ಕೂಡಾ!
ಗದ್ದೆಯಲ್ಲಿ ಫಸಲು ಕೈಗೆ ಬರುವಾಗ, ತೆನೆ ತುಂಬಿ ಬಾಗಿ ಬಳಕುವಾಗ ಒಣಹುಲ್ಲು, ಹಳೆ ಬಟ್ಟೆ, ಹಳೆ ಟೋಪಿ ಅಥವಾ ಟವೆಲ್ ಉಪಯೋಗಿಸಿ ಬೆರ್ಚಪ್ಪನೆಂಬ ಆಕೃತಿಯನ್ನು ತಯಾರುಗೊಳಿಸಿ ಒಂದು ಕೋಲಿಗೆ ಎತ್ತರದಲ್ಲಿ ಕಟ್ಟುತ್ತಾರೆ. ಬೆರ್ಚುವುದು ಎಂದರೆ ಬೆದರಿಸುವುದು ಎಂದರ್ಥ. ಪ್ರಾಣಿ ಪಕ್ಷಿಗಳಿಂದ ಬೆಳೆಯನ್ನು ರಕ್ಷಿಸುವುದಕ್ಕಾಗಿ ಬೆರ್ಚಪ್ಪನನ್ನು ಬಳಸುತ್ತಾರೆ. ಇಂಗ್ಲಿಷ್ ನಲ್ಲಿ ಇದಕ್ಕೆ ಸ್ಕೇರ್ ಕ್ರೋ ಎಂದೆನ್ನುತ್ತಾರೆ.
ನಾವು ಶಾಲೆಗೆ ಗದ್ದೆ ಬದುವಿನ ಮೇಲೆ ನಡೆದುಕೊಂಡು ಹೋಗುವಾಗ ಗದ್ದೆಗಳಲ್ಲಿ ಇಂತಹ ಹಲವಾರು ಬೆರ್ಚಪ್ಪಗಳ ದರ್ಶನವಾಗುತ್ತಿತ್ತು. ಆ ಬೆರ್ಚಪ್ಪಗಳ ವೈವಿಧ್ಯತೆಯನ್ನು ನೋಡುವುದರಲ್ಲಿ ಒಂದು ಖುಷಿ ಸಿಗುತ್ತಿತ್ತು. ಒಂದು ಉದ್ದದ ಕೋಲಿಗೆ ಇನ್ನೊಂದು ಸಣ್ಣ ಕೋಲನ್ನು ಅಡ್ಡಡ್ಡವಾಗಿ ಕಟ್ಟಿ ಅದಕ್ಕೆ ಹಳೆ ಅಂಗಿ, ಇಜಾರವನ್ನು ತೊಡಿಸಿ ಅದರೊಳಗೆ ಒಣಹುಲ್ಲು ತುಂಬಿಸಿ ಬೆರ್ಚಪ್ಪನನ್ನು ಮಾಡುವಾಗ ನಾವು ಬಾಯಿ ಬಿಟ್ಟುಕೊಂಡು ನೋಡಿದ್ದೂ ಇದೆ. ಬೆಳದಿಂಗಳ ರಾತ್ರಿಯಲ್ಲಿ ಬೆರ್ಚಪ್ಪನನ್ನು ನೋಡಿ ಹೆದರಿದ್ದೂ ಇದೆ. ಜೋರಾದ ಗಾಳಿಗೆ ಅದು ತೊನೆದಾಡಿದಾಗ ಯಾವಾಗ ಅದು ಅಡ್ಡಾಗಬಹುದು ಎಂದು ಕಾದಿದ್ದೂ ಇದೆ. ಮುಸ್ಸಂಜೆಯಲ್ಲಿ ಒಬ್ಬೊಬ್ಬರೇ ಬರುವಾಗ ಬೆಳಿಗ್ಗೆ ಮನೆ ಬಿಡುವಾಗ ಇಲ್ಲದಿದ್ದ ನಂತರದಲ್ಲಿ ಗದ್ದೆಯಲ್ಲಿ ನಿಲ್ಲಿಸಲ್ಪಟ್ಟಿದ್ದ ಬೆರ್ಚಪ್ಪನನ್ನು ಕಂಡು ಹಠಾತ್ತನೆ ಹೆದರಿದ್ಧೂ ಇದೆ.

ಈಗಲೂ ಕೂಡ ಎಲ್ಲಿಗಾದರೂ ಪಯಣಿಸುವಾಗ ಗದ್ದೆಯಲ್ಲಿ ನಿಲ್ಲಿಸಿರುವ ಬೆರ್ಚಪ್ಪನನ್ನು ಕಂಡಾಗ ಮನಸ್ಸು ಅದರೆಡೆಗೆ ಸೆಳೆಯಲ್ಪಡುತ್ತದೆ. ಸಿನಿಮಾದಲ್ಲೂ ಬೆರ್ಚಪ್ಪನನ್ನು ಕಂಡರೆ ಹಿಂದಿನದ್ದೆಲ್ಲ ನೆನಪಾಗಿ ಖುಷಿಯಾಗುತ್ತದೆ. ಬಾಲ್ಯದ ಅನುಭವಗಳನ್ನು ನಾವು ಮರೆತಿದ್ದೇವೆ ಎಂದು ಭಾವಿಸಿದರೂ ಕೆಲಕೆಲವು ದೃಶ್ಯಗಳು, ಅನುಭವಗಳು, ಸಂಬಂಧಗಳು ಅವುಗಳು ಜೀವಂತವಾಗಿರುವುದನ್ನು ತೋರಿಸಿ ಕೊಡುತ್ತವೆ. ಮನದಾಳದಲ್ಲೆಲ್ಲೋ ಹುದುಗಿರುವ ನೆನಪುಗಳು "ನಾವಿನ್ನೂ ಮರೆಯಾಗಿಲ್ಲ" ಎಂದು ತೋರಿಸುವುದು ನಮ್ಮೆಲ್ಲರ ಅನುಭವಕ್ಕೆ ಬಂದಿರುವ ವಿಷಯಗಳೇ. ಅವುಗಳನ್ನು ಮೆಲುಕು ಹಾಕುವುದರಲ್ಲಿ ಸಿಗುವ ಮಜಾನೇ ಬೇರೆ ಅಲ್ವೆ?!


184. ನೆನಪುಗಳು - ಇಸ್ತ್ರಿ ಪೆಟ್ಟಿಗೆ (26/10/2020)


ಇಸ್ತ್ರಿ ಪೆಟ್ಟಿಗೆ ಎಂದ ಕೂಡಲೆ ನೆನಪಾಗುವುದು ನಾನು ಚಿಕ್ಕವಳಿದ್ದಾಗ ನೋಡಿದ ಕೆಂಡ ಹಾಕಿ ಉಪಯೋಗಿಸುತ್ತಿದ್ದ ಹೆಣಭಾರದ ಕಬ್ಬಿಣದ ಇಸ್ತ್ರಿ ಪೆಟ್ಟಿಗೆ. ಅದಕ್ಕೆ ಮರದ ಹ್ಯಾಂಡಲ್ ಇರುತ್ತಿತ್ತು. ಮಕ್ಕಳು ಅದನ್ನು ಎತ್ತಲಾಗದಷ್ಟು ಭಾರವಿರುತ್ತಿತ್ತದು.
ಮನೆಯಲ್ಲಿದ್ದ ನಮ್ಮೆಲ್ಲರ ಬಟ್ಟೆಯನ್ನು ಅಪ್ಪ ಅಥವಾ ಅಮ್ಮ ಅಂತಹ ಇಸ್ತ್ರಿ ಪೆಟ್ಟಿಗೆಯನ್ನು ಬಳಸಿ ಇಸ್ತ್ರಿ ಮಾಡುತ್ತಿದ್ದರು. ಬಚ್ಙಲು ಒಲೆಯ ಇದ್ದಿಲನ್ನು ಶೇಖರಿಸಿಟ್ಟು ಇಸ್ತ್ರಿ ಮಾಡುವ ಸಮಯದಲ್ಲಿ ಕೆಂಡ ಮಾಡಿಕೊಂಡು ಇಸ್ತ್ರಿ ಪೆಟ್ಟಿಗೆಯೊಳಗೆ ಹಾಕಿ ಇಸ್ತ್ರಿ ಮಾಡುವ ಆ ಕೆಲಸವನ್ನು ಸೋಜಿಗದಿಂದ ನೋಡುವುದಷ್ಟೆ ಮಕ್ಕಳಾಗಿದ್ದ ನಮ್ಮ ಕೆಲಸವಾಗಿತ್ತು. ಶಿವಮೊಗ್ಗದಲ್ಲಿ ದೊಡ್ಡಪ್ಪನ ಮನೆಯಲ್ಲಿ ನಾನಿದ್ದಾಗ ಅವರ ಮನೆಯ ಬಳಿ ಎರಡು ದೊಡ್ಡ ಚಕ್ರದ ಮೇಲೊಂದು ಹಲಗೆ ಹಾಕಿ ಬೆಡ್ ಶೀಟ್ ಹಾಕಿ ಕೆಂಡದ ಇಸ್ತ್ರಿ ಪೆಟ್ಟಿಗೆಯಿಂದ ಇಸ್ತ್ರಿ ಮಾಡಿಕೊಡಲು ಬರುತ್ತಿದ್ದ ಒಬ್ಬಾತನ ಮಸುಕು ಮಸುಕು ನೆನಪಿದೆ. ಒಂದು ಏರಿಯಾದ ಜನರ ಬಟ್ಟೆ ಇಸ್ತ್ರಿ ಮಾಡಿ ಮುಗಿದ ಮೇಲೆ ಅವನು ಗಾಡಿ ತಳ್ಳಿಕೊಂಡು ಇನ್ನೊಂದು ಏರಿಯಾಕ್ಕೆ ಹೋಗುತ್ತಿದ್ದ. ಒಂದು ರೀತಿಯ ಮೊಬೈಲ್ ಇಸ್ತ್ರಿ ಸರ್ವಿಸ್ ಅವನದಾಗಿತ್ತು 😌
ಇಲೆಕ್ಟ್ರಿಕ್ ಇಸ್ತ್ರಿ ಪೆಟ್ಟಿಗೆ ಬಂದ ಮೇಲೆ, ನಾನು ಸುಮಾರು ಹೈಸ್ಕೂಲ್ ನಲ್ಲಿ ಇದ್ದಾಗ, ನನ್ನಮ್ಮ ಮನೆಮಂದಿಯ ಬಟ್ಟೆಯನ್ನೆಲ್ಲಾ ನನ್ನ ಮುಂದಿಟ್ಟು ಇಸ್ತ್ರಿ ಮಾಡಿಸುತ್ತಿದ್ದಳು. ಕೆಲಸ ಮಾಡಲು ಸೋಂಬೇರಿಯಾಗಿದ್ದ ನಾನು ಒಟ್ರಾಶಿ ಇಸ್ತ್ರಿ ಮಾಡಿ ಅಪ್ಪನ ಪ್ಯಾಂಟ್ ಶರ್ಟ್ ನ ಕ್ರೀಸ್ ಸರಿಯಾಗದಿದ್ದಾಗ ಪುನಃ ಪುನಃ ಇಸ್ತ್ರಿ ಮಾಡಿದ ಸಂದರ್ಭಗಳು ಬಹಳಷ್ಟಿವೆ. ಆ ಸಮಯದಲ್ಲಿ ವಾಕರಿಕೆ ಬರುವಷ್ಟು ಇಸ್ತ್ರಿ ಮಾಡಿದ್ದ ಕಾರಣ ನನಗೆ ಇಸ್ತ್ರಿ ಮಾಡುವ ಬಗ್ಗೆ ಹೇವರಿಕೆಯಾಗಿ ಎಷ್ಟೋ ಕಾಲ ಇಸ್ತ್ರಿ ಮಾಡಿದ ಬಟ್ಟೆ ಧರಿಸುವ ಗೋಜಿಗೇ ಹೋಗಿರಲಿಲ್ಲ. ಈಗಲೂ ಅಷ್ಟೇ ನನ್ನ ಹೆಚ್ಚಿನ ಬಟ್ಟೆಗಳು ಧರಿಸಿದ ಮೇಲೆ ನನ್ನ ಮೈಶಾಖಕ್ಕೆ ಇಸ್ತ್ರಿಯಾಗಿ ಬಿಟ್ಟಿರುತ್ತವೆ. ಈಗಲೂ ಕೂಡಾ ನಮ್ಮ ಶಂಕರಮ್ಮ ಮನಸ್ಸು ಮಾಡಿ ಇಸ್ತ್ರಿ ಮಾಡಿದರೆ ಮಾತ್ರ ನನ್ನ ಬಟ್ಟೆಗಳು ಇಸ್ತ್ರಿ ಪೆಟ್ಟಿಗೆಯ ಮುಖ ನೋಡಿದ ಖುಷಿ ಕಾಣುತ್ತವೆ. ಇಲ್ಲದಿದ್ದರೆ ದುಃಖದಿಂದ ಸುಕ್ಕಾಗಿ ಮಲಗಿರುತ್ತವೆ😀

ಇಸ್ತ್ರಿ ಮಾಡಿದ ಬಟ್ಟೆಗಳು ನೋಡಲು ನೀಟ್. ಅಂತಹ ಬಟ್ಟೆಗಳನ್ನು ಕಬೋರ್ಡ್ ನಲ್ಲಿ ಇಡಲು ಜಾಗವೂ ಕಡಿಮೆ ಸಾಕು. ಇಸ್ತ್ರಿ ಮಾಡಿದ ಬಟ್ಟೆಗಳನ್ನು ಧರಿಸಿದಾಗ ಆ ವ್ಯಕ್ತಿಯ ವ್ಯಕ್ತಿತ್ವ ಧೀಮಂತವಾಗಿ ಕಾಣುತ್ತದೆ. ಅಂತಹವರು ಶಿಸ್ತಿನ ಸಿಪಾಯಿಗಳಾಗಿ ಕಾಣುತ್ತಾರೆ. ಇಸ್ತ್ರಿ ಮಾಡಿದ ಬಟ್ಟೆಗಳು ಧರಿಸಿದ ವ್ಯಕ್ತಿಗೆ ಶೋಭೆ ನೀಡುತ್ತವೆ. ಹಳೆಯ ಬಟ್ಟೆ ಕೂಡಾ ಹೊಸದಾಗಿ ಕಂಡು ಲಕಲಕಿಸುತ್ತದೆ. ಹೀಗಾಗಿ ಇಸ್ತ್ರಿ ಮಾಡಿದ ಬಟ್ಟೆಗಳನ್ನು ಧರಿಸುವುದು ನಾಗರಿಕ ಸಮಾಜದ ಸಭ್ಯ ನಾಗರಿಕರ ಲಕ್ಷಣ🤔 ಅದೇ ಸತ್ಯವೆಂದಾದರೆ ನಮ್ಮಂತವರ ಕತೆ ಏನು?


183. ಪರಿಸರ - ತೆಂಗಿನ ಕಾಯಿಯ ಖಾದ್ಯ (25/10/2020)


ಕರಾವಳಿ ಹಾಗೂ ಮಲೆನಾಡಿನಲ್ಲಿ ಅಡುಗೆಗೆ ತೆಂಗಿನಕಾಯಿಯ ಉಪಯೋಗ ಸರ್ವೇ ಸಾಮಾನ್ಯ. ಬೆಳಗಿನ ತಿಂಡಿಗಾಗಲಿ, ಮಧ್ಯಾಹ್ನದ ಊಟಕ್ಕಾಗಲಿ, ಯಾವುದೇ ವಿಶೇಷ ಅಡುಗೆಗಾಗಲಿ ತೆಂಗಿನಕಾಯಿಯ ಬಳಕೆ ಮಾಡಿಯೇ ಮಾಡುತ್ತಾರೆ.
ತೆಂಗಿನಕಾಯಿಯನ್ನು ಒಡೆಯುವುದೇ ಒಂದು ಕಲೆ. ನಾನು ಅಡುಗೆ ಮಾಡಲು ಶುರು ಮಾಡಿ ಮೂವತ್ತು ವರ್ಷಕ್ಕೂ ಮೇಲಾದರೂ ನನಗಿನ್ನೂ ಕಾಯಿ ಒಡೆಯುವುದು ಒಂದು ಸವಾಲೇ ಸೈ. ನಾನು ಕಾಯಿ ಒಡೆಯುವಾಗ ಕಡೆ ಪಕ್ಷ ಏಳೆಂಟು ಪೆಟ್ಟು ಹೊಡೆಯಬೇಕು. ಕಾಯಿ ಒಡೆಯಬೇಕಾದರೆ ಯಾವುದೋ ಒಂದು ಆಂಗಲ್ ನಲ್ಲಿ ಹಿಡಿದು ಹೊಡೆದರೆ ಅದು ಸುಲಭವಾಗಿ ಒಡೆಯುತ್ತದೆ. ಆ ಸರಿಯಾದ ಆಂಗಲ್ ಯಾವುದೆಂದು ಈವರೆಗೂ ನನ್ನ ತಲೆಗೆ ಹೊಳೆದಿಲ್ಲ. ಕಾಯಿಯನ್ನು ಒಡೆದಾಗ ಸಿಗುವ ಅದರೊಳಗಿರುವ ಸ್ವಲ್ಪವೇ ಸ್ವಲ್ಪ ನೀರು ಬಹಳ ರುಚಿಯಾಗಿ ಅಮೃತದಂತಿರುತ್ತದೆ.
ಕಾಯಿಯನ್ನು ಹೆರಮಣೆಯಲ್ಲಿ ತುರಿಯಲು ಕಲಿಯಲು ಸ್ವಲ್ಪ ಸಮಯ ಹಿಡಿಯುತ್ತದೆ. ಮೊದಲಿಗೆ ಒಡೆದ ಕಾಯಿಯ ಮೇಲಿನ ಅಗಲವಾದ ಭಾಗದಿಂದ ತುರಿಯಲು ಪ್ರಾರಂಭಿಸಿ ಒಳಗಿನ ಭಾಗಕ್ಕೆ ಬರಬೇಕು. ಈ ಕೌಶಲ್ಯವನ್ನು ಕಲಿಯಲು ಸ್ವಲ್ಪ ತಾಳ್ಮೆ ಬೇಕು. ಕಲಿತ ಮೇಲೆ ಅದೇನು ಬ್ರಹ್ಮ ವಿದ್ಯೆ ಅಂತ ಅನಿಸುವುದಿಲ್ಲ. ನನ್ನ ಗಂಡನ ಮನೆಯಲ್ಲಿ ಹಬ್ಬ ಹರಿದಿನಗಳಲ್ಲಿ, ವಿಶೇಷ ಕಾರ್ಯಕ್ರಮಗಳಿದ್ದಾಗ, ಕಾಯಿ ಹೋಳಿಗೆ ಮಾಡುವಾಗ ಕಾಯಿ ತುರಿದೂ ತುರಿದೂ ಕೈ ಸೋಲುತ್ತಿತ್ತು. ಕಾಯಿ ತುರಿಯುವಾಗಲೂ ಅಷ್ಟೇ ಮನಸ್ಸು ಎಲ್ಲೆಲ್ಲೋ ಹರಿದಾಡಲು ಶುರು ಮಾಡಿದರೆ ಹೆರಮಣೆಗೆ ಕಾಯಿಯ ಬದಲು ಕೈ ಹೋಗುತ್ತದೆ. ಅದರ ನೋವನ್ನು ಅನುಭವಿಸಿದವರೇ ಬಲ್ಲರು😅
ತೆಂಗಿನಕಾಯಿಯನ್ನು ಬಳಸದೇ ಮಾಡುವ ಖಾದ್ಯಗಳು ಬಹಳ ಕಡಿಮೆ. ಇಡ್ಲಿ, ದೋಸೆ, ತಾಲಿಪಟ್ಟು ಮಾಡಿದಾಗ ತೆಂಗಿನಕಾಯಿಯ ಚಟ್ನಿ ಅದರೊಟ್ಟಿಗೆ ಒಳ್ಳೆಯ ಕಾಂಬಿನೇಷನ್ ಆಗುತ್ತದೆ. ಹೀರೆಕಾಯಿ ದೋಸೆ ಹಿಟ್ಟನ್ನು ಹಾಗೂ ಪತ್ರೊಡೆ ಹಿಟ್ಟನ್ನು ತಯಾರಿಸಲು ತೆಂಗಿನಕಾಯಿಯ ಅಗತ್ಯವಿದ್ದೇ ಇದೆ. ಹಾಗೆಯೇ ಕೊಚ್ಚಕ್ಕಿಗಿಡ್ಡೆಗೆ, ಇಡಿ ಗೋಧಿಯನ್ನು ಅಕ್ಕಿಯೊಟ್ಟಿಗೆ ಬೆರೆಸಿ ಮಾಡುವ ದೋಸೆಗೆ, ಕಾಯಿ ಸಾಸಿವೆಯ ಚಿತ್ರಾನ್ನಕ್ಕೆ, ಉಪ್ಪಿಟ್ಟು ಅವಲಕ್ಕಿಗೆ.....ಹೀಗೇ ಬೆಳಗಿನ ಎಲ್ಲಾ ರೀತಿಯ ತಿಂಡಿಗಳಿಗೆ ತೆಂಗಿನಕಾಯಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸುತ್ತಾರೆ. ಅಡುಗೆ ಸಂಬಂಧಿ ಮಾಡುವ ಸಾಂಬಾರು, ತಂಬುಳಿ, ಗೊಜ್ಜು, ಪಲ್ಯ ಹೀಗೆ ವಿವಿಧ ಖಾದ್ಯಗಳಿಗೆ ತೆಂಗಿನಕಾಯಿಯ ಬಳಕೆಯಾಗುತ್ತದೆ.

ತೆಂಗಿನಕಾಯಿಯಿಂದ ಮಾಡುವ ಬರ್ಫಿ, ಕಾಯಿ ಹೋಳಿಗೆ, ಹಾಲುಬಾಯಿ, ಎಲೆಯಪ್ಪ, ಕಾಯಿ ವಡೆ, ತೆಂಗಿನ ಹಾಲು ಬಳಸಿ ಮಾಡುವ ಪಾಯಸ, ಸಿಹಿ ಕಾಯಿಹಾಲು ಹಾಗೂ ಅಮೃತಫಲ ಎಲ್ಲವೂ ಬಹಳ ರುಚಿಕರ. ಅಡುಗೆಯಲ್ಲಿ ತೆಂಗಿನಕಾಯಿಯ ಬಳಕೆ ಖಾದ್ಯಗಳಿಗೆ ವಿಶಿಷ್ಟ ರುಚಿಯನ್ನು ನೀಡುತ್ತದೆ. ಅಡುಗೆಯ ರುಚಿಯ ಹೆಚ್ಚಳಕ್ಕೆ ತೆಂಗಿನಕಾಯಿಯ ಬಳಕೆ ಸೂಕ್ತ. ಬರೀ ರುಚಿಗಾಗಿ ಮಾತ್ರವಲ್ಲ; ಉತ್ತಮ ಆರೋಗ್ಯದ ದೃಷ್ಟಿಯಿಂದ ಕೂಡಾ ತೆಂಗಿನಕಾಯಿಯನ್ನು ಬಳಸುವುದು ಸ್ವಾಗತಾರ್ಹ🙏


182. ಪರಿಸರ - ತೆಂಗಿನ ಕಾಯಿ (24/10/2020)

ಕರಾವಳಿ ಪ್ರದೇಶ ಅಂದ ಕೂಡಲೇ ನನ್ನ ಕಣ್ಣ ಮುಂದೆ ಬರುವುದು ತೆಂಗಿನಮರಗಳು. ಕರಾವಳಿಯಲ್ಲಿ ತೆಂಗಿನಮರವಿಲ್ಲದ ಮನೆಗಳೇ ಇಲ್ಲವೇನೋ? ಹಳ್ಳಿಯ ಮನೆಯಾದರೆ ಎಂಟ್ಹತ್ತು ಮರಗಳಂತೂ ಇರುವುದು ಗ್ಯಾರಂಟಿ. ಸಣ್ಣ ಪೇಟೆಯ ಮನೆಗಳಾದರೆ ಕನಿಷ್ಠ ಎರಡು ಮರಗಳಿದ್ದೇ ಇರುತ್ತವೆ. ನನಗಂತೂ ತೆಂಗಿನಕಾಯಿ ಬಳಸದೆ ಮಾಡುವ ಅಡುಗೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ತೆಂಗಿನ ಮರದ ಪ್ರತಿಯೊಂದು ಭಾಗವನ್ನು ನ್ಯಾಯೋಚಿತವಾಗಿ ಉಪಯೋಗಿಸುವವರು ಕರಾವಳಿಯವರೇ ಸೈ ಏನೋ?!

ನನಗಿನ್ನೂ ನೆನಪಿರುವ ಹಾಗೆ ನನ್ನ ಮದುವೆಯ ತನಕ ನಮ್ಮ ಅಜ್ಜಯ್ಯನ ಮನೆ ಹಾಲ್ ಓಪನ್ ಆಗಿಯೇ ಇತ್ತು. ನನ್ನ ಮದುವೆಯ ಸಮಯದಲ್ಲಿ ಆ ಹಾಲಿಗೆ ದಳಿ/ತಳಿ ಹಾಕಿಸಿ ಒಳಗೈ ಮಾಡಿದ್ದು. ಅಲ್ಲಿಯವರೆಗೆ ಮಳೆಗಾಲದಲ್ಲಿ ನೀರು ಒಳಗೆ ರಾಚದ ಹಾಗೆ ತಡೆಯಲು ಮಡಲನ್ನು ಉಪಯೋಗಿಸುತ್ತಿದ್ದೆವು. ಹತ್ತಿರದಲ್ಲಿರುವ ಶೇಡಿಕೆರೆಯಲ್ಲಿ ಒಣ ತೆಂಗಿನ ಗರಿಗಳನ್ನು ನೆನೆಸಿಟ್ಟು ತದನಂತರದಲ್ಲಿ ನೆಂದು ಮೆತ್ತಗಾದ ಗರಿಗಳನ್ನು ಮನೆಗೆ ತಂದು ಅದನ್ನು ನೇಯ್ದು ನನ್ನ ಸೋದರತ್ತೆ ಮಡಲನ್ನಾಗಿಸುತ್ತಿದ್ದರು. ಆ ತೆಂಗಿನ ಉದ್ದನೆಯ ಎಲೆಗಳನ್ನು ಬಿಚ್ಚಿ ಒಂದರೊಳಗೊಂದು ಜಡೆಯಂತೆ ಹೆಣೆದು ಮಡಲಾಗಿಸುವ ಪ್ರಕ್ರಿಯೆಯೇ ಚೆಂದ. ಅದೊಂದು ಸುಂದರವಾದ ಕಲೆಯೇ ಸೈ!
ಹಾಗೆಯೇ ಹೆಚ್ಚಿನ ತೆಂಗಿನಗರಿಗಳ ಎಲೆಗಳನ್ನು ಹೆರೆದು ಕಡ್ಡಿಯಿಂದ ಪ್ರತ್ಯೇಕಿಸಿ ಹಿಡಿಸುಡಿ/ಕಡ್ಡಿ ಪೊರಕೆಯನ್ನು ಮಾಡುವುದು ಕೂಡಾ ಆಸಕ್ತದಾಯಕವಾದದ್ದು. ಆ ಕಡ್ಡಿಗಳನ್ನು ಅಗತ್ಯವಿದ್ದಷ್ಟು ಒಟ್ಟುಗೂಡಿಸಿ ಪ್ರಮಾಣಬದ್ಧವಾಗಿ ಇರಿಸಿ ಹುರಿಹಗ್ಗದಿಂದ ಕಟ್ಟಿ ಹಿಡಿಸುಡಿಯನ್ನು ರೆಡಿ ಮಾಡುತ್ತಾರೆ. ತೆಂಗಿನ ಕಡ್ಡಿಯ ಹಿಡಿಯನ್ನು ಬಳಸಿದವರಿಗೆ ಬೇರೆ ಯಾವುದೇ ರೀತಿಯ ಪೊರಕೆ ಬಳಸಲು ಹಿತವೆನಿಸುವುದಿಲ್ಲ.
ತೆಂಗಿನಕಾಯಿಯ ಉಪಯೋಗದ ಬಗ್ಗೆ ಒಂದು ಪ್ರತ್ಯೇಕ ಲೇಖನ ಬರೆಯುವಷ್ಟು ವಿಷಯ ಸಿಗುತ್ತದೆ. ತೆಂಗಿನ ಎಣ್ಣೆಯನ್ನು ಒಮ್ಮೆ ಅಡುಗೆಗೆ ಬಳಸಿದವರು ನಂತರದಲ್ಲಿ ಬೇರ್ಯಾವ ಎಣ್ಣೆಯನ್ನು ಬಳಸಲು ಮನಸ್ಸು ಮಾಡುವುದಿಲ್ಲ. ಅಷ್ಟು ರುಚಿ ಮತ್ತು ಪರಿಮಳ ಅದಕ್ಕೆ. ತೆಂಗಿನಕಾಯಿಯ ಜುಟ್ಟು ಪಾತ್ರೆ ತೊಳೆಯಲು ಉಪಯುಕ್ತ. ತೆಂಗಿನ ಗೆರಟೆ ಕಲಾವಿದರ ಕೈಗೆ ಸಿಕ್ಕಿದರೆ ವಿವಿಧ ಕಲಾಕೃತಿಯಾಗುತ್ತದೆ. ನಮ್ಮಂತವರ ಕೈಗೆ ಸಿಕ್ಕರೆ ಬಿಸಿನೀರಿನ ಒಲೆಗೆ ಆಹಾರವಾಗುತ್ತದೆ 🤭 ತೆಂಗಿನ ಹೆಡೆ ಬಿಸಿನೀರು/ಅಡುಗೆ ಮಾಡಲು ಒಳ್ಳೆಯ ಇಂಧನ. ತೆಂಗಿನಕಾಯಿಯ ಸಿಪ್ಪೆಯನ್ನು ಹುರಿಹಗ್ಗ ತಯಾರಿಸಲು ಹಾಗೂ ಒಲೆಗೆ ಇಂಧನವಾಗಿ ಬಳಸುತ್ತಾರೆ. ಎಳನೀರಿನ/ಬೊಂಡದ ಬಗೆಗಂತೂ ನಾನು ಏನನ್ನೂ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲವಲ್ಲ? ನನಗೆ ಎಳನೀರಿನ ಜೊತೆಜೊತೆಗೆ ಅದರೊಳಗಿರುವ ತೆಳುಗಂಜಿ ಬಹಳ ಇಷ್ಟ. ಬೊಂಡ ಎಂದಾಗ ನಮ್ಮ ಕುಟುಂಬದ ಸ್ನೇಹಿತ ರಮೇಶನ ನೆನಪಾಗುತ್ತದೆ. ಒಮ್ಮೆ ಅವನ ಹತ್ತಿರ "ಬೊಂಡ ತಾರೋ" ಎಂದರೆ ಅವನು ಬೋಂಡ ತಂದು ಕೊಟ್ಟಿದ್ದ🤭
ಇಷ್ಟೆಲ್ಲಾ ಉಪಯೋಗಕ್ಕೆ ಬರುವ ತೆಂಗಿನ ಮರವನ್ನು ನಮ್ಮ ಹಿರಿಯರು ಕಲ್ಪವೃಕ್ಷವೆಂದು ಪರಿಗಣಿಸಿದ್ದು ನೂರಕ್ಕೆ ನೂರು ಸರಿಯಾದದ್ದೇ ಸೈ🌝


181.ನೆನಪುಗಳು - ಸ್ನೇಹಿತೆ ಜೂಲಿಎಟ್  ಮನೆ (23/10/2020)


ಈಗ್ಗ್ಯೆ ಮೂರು ತಿಂಗಳ ಹಿಂದೆ ಊರಿಗೆ ಹೋಗಿ ಬರುವಾಗ ಹಾಲಾಡಿ ಶಂಕರನಾರಾಯಣದ ಆಸುಪಾಸಿನ ಹಳ್ಳಿಯೊಂದರ ಅಂಗಡಿಯ ಮುಂಗಟ್ಟಿನಲ್ಲಿ ಬಿದಿರಿನ ಗೊಬ್ಬರದ ಬುಟ್ಟಿಗಳು, ಗೆರಸಿ/ಮೊರ, ಭತ್ತದ ಗಳಗೆಗಳು....ಹೀಗೆ ಹತ್ತು ಹಲವಾರು ರೀತಿಯ ವಸ್ತುಗಳನ್ನು ನೋಡಿದೆ. ಅವೆಲ್ಲವೂ ಹಿಂದೆ ಉಪಯೋಗದಲ್ಲಿದ್ದ ಕೃಷಿ ಸಂಬಂಧಿ ವಸ್ತುಗಳು. ಅವುಗಳು ಹಳ್ಳಿಯ ಪ್ರತಿ ಮನೆಗಳಲ್ಲೂ ಅನಿವಾರ್ಯವಾಗಿ ಇರಲೇಬೇಕಾಗಿದ್ದ ವಸ್ತುಗಳಾಗಿದ್ದವು.
ಅವುಗಳನ್ನು ನೋಡಿದ ತಕ್ಷಣ ನನಗೆ ನೆನಪಾದದ್ದು ನನ್ನ ಫ್ರೆಂಡ್ ಜ್ಯೂಲಿಯೆಟ್ ಳ ತವರುಮನೆ. ನಾನು ಕಾಸಾನ್ ಹಿತ್ತಲಿನಲ್ಲಿದ್ದ ಅವಳ ಮನೆಗೆ ರೆಗ್ಯುಲರ್ ಆಗಿ ಹೋಗುತ್ತಿದ್ದ ಕಾಲವದು. ಅವರು ಸ್ವತಃ ಕೃಷಿ ಮಾಡುವ ಕುಟುಂಬದ ಹಿನ್ನೆಲೆಯವರು. ಹೀಗಾಗಿ ಕೃಷಿ ಸಂಬಂಧಿ ವಸ್ತುಗಳು ನಮ್ಮ ಮನೆಗಿಂತ ಅವರ ಮನೆಯಲ್ಲಿ ಜಾಸ್ತಿ ಇದ್ದವು. ಅವರು ಕೋಳಿಯನ್ನು ಕೂಡಾ ಸಾಕುತ್ತಿದ್ದರು. ಕೋಳಿಗಳನ್ನು ಕೂಡಿ ಹಾಕುವ ಬಿದಿರಿನ ಗೂಡುಗಳನ್ನು ಅವರ ಮನೆಯಲ್ಲಿ ನೋಡಿದ ನೆನಪು ಮಸುಕು ಮಸುಕಾಗಿದೆ.
ಅವರ ಮನೆಯಲ್ಲಿ ಅವಳ ಅಮ್ಮನೊಟ್ಟಿಗೆ ನಾನು ಕತೆ ಹೊಡೆಯುತ್ತಾ ಕುಳಿತುಕೊಳ್ಳುತ್ತಿದ್ದದ್ದು ನನ್ನ ಸವಿ ನೆನಪಿನ ಭಾಗದಲ್ಲೊಂದು. ಅವಳಮ್ಮನೂ ಒಳ್ಳೆಯ ಕತೆಗಾರ್ತಿ. ಕೆಲಸ ಮಾಡುತ್ತಾ ಮಾಡುತ್ತಾ ನನ್ನ ಜೊತೆಯಲ್ಲಿ ಕತೆ ಹೊಡೆಯುತ್ತಿದ್ದರು. ಅವರು ಸುಮ್ಮನೆ ಕುಳಿತು ಕಾಲಹರಣ ಮಾಡಿದ್ದನ್ನು ನಾನು ನೋಡಿದ ನೆನಪಿಲ್ಲ. ಏನಾದ್ರೂ ಮಾಡ್ತಾನೆ ಇರುತ್ತಿದ್ದರು.
ನಮ್ಮ ಮನೆಯಲ್ಲಿ ಕೇವಲ ಶಾಕಾಹಾರಿ ಅಡುಗೆಯನ್ನು ನೋಡಿದ್ದ ನನಗೆ ಜೂಲಿಯ ಅಮ್ಮ ಅಡುಗೆಗಾಗಿ ಮೀನನ್ನು ಕತ್ತರಿಸಿ ಕ್ಲೀನ್ ಮಾಡುವುದು, ಅದರ ಮಸಾಲೆಯನ್ನು ರುಬ್ಬುವ ಕಲ್ಲಿನಲ್ಲಿ ನುಣ್ಣಗೆ ರುಬ್ಬುವುದು, ಕಟ್ಟಿಗೆ ಒಲೆಯಲ್ಲಿ ಮಣ್ಣಿನ ಗಡಿಗೆ ಇಟ್ಟು ಅಡುಗೆ ತಯಾರಿಸುವುದೆಲ್ಲವೂ ಬಹಳ ಕುತೂಹಲಕಾರಿಯಾಗಿತ್ತು. ಅವರು ಮೀನನ್ನು ಅಡುಗೆಗೆ ಸಿದ್ಧಗೊಳಿಸುವಾಗ ಬೆಕ್ಕೊಂದು ಪಕ್ಕದಲ್ಲಿ ಕುಳಿತು ಅವರು ಎಸೆಯುತ್ತಿದ್ದ ಮೀನಿನ ಬೇಡದ ಭಾಗಗಳನ್ನು ಗಬಕ್ಕನೆ ತಿನ್ನುತ್ತಿದ್ದ ದೃಶ್ಯ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅವರು ಮೀನನ್ನು ರೆಡಿ ಮಾಡುವಾಗ ಅಂಗಳದಲ್ಲಿ ಯಾವುದಾದರೊಂದು ತೆಂಗಿನ ಮರದ ಬುಡದ ನೆರಳಲ್ಲಿ ಮೆಟ್ಟುಕತ್ತಿಯ ಮೇಲೆ ಕುಳಿತು ಕೆಲಸ ಮಾಡುತ್ತಿದ್ದರು. ಅಲ್ಲಿನ ಮರಳು ಮಿಶ್ರಿತ ನೆಲ, ಸುತ್ತಲೂ ಓಡಾಡುವ ಕೋಳಿಗಳು, ಮಡಲು ನೇಯಲು ಹದ ಮಾಡಿಟ್ಟ ತೆಂಗಿನ ಗರಿಗಳು...ಹೀಗೇ ಜೀವಂತಿಕೆಯಿಂದ ಕೂಡಿದ್ದ ಅವರ ಮನೆಯಂಗಳ ನನ್ನ ನೆನಪಿನಲ್ಲಿದೆ.

ಈಗ ಅಂತಹ ಅಪ್ಪಟ ಕೃಷಿಯಾಧಾರಿತ ಕುಟುಂಬಗಳು ಸಿಗುವುದು ಕಡಿಮೆ. ಹಾಗೆಯೇ ನಾನು ಅಂಗಡಿಯಲ್ಲಿ ಅಂದು ಕಂಡ ಕೃಷಿ ಸಂಬಂಧಿ ವಸ್ತುಗಳ ಉಪಯೋಗವೂ ಕಡಿಮೆ. ಪ್ರಾಯಶಃ ಇನ್ನು ಸ್ವಲ್ಪ ಕಾಲ ಸರಿದರೆ ಅದನ್ನು ತಯಾರಿಸುವವರು ಕೂಡಾ ಸಿಗಲಿಕ್ಕಿಲ್ಲ. ಅವೆಲ್ಲ ಹಳೆಯ ಮನೆಯ ಹಳೆಯ ವಸ್ತುಗಳಾಗಿ ಮನೆಯ ಮೂಲೆಯಲ್ಲೆಲ್ಲೋ ಶೇಖರಿಸಲ್ಪಟ್ಟಿರುತ್ತವೆಯೇನೊ?


180.ಪರಿಸರ - ಹೂತೋಟ (22/10/2020)


ನನಗೆ ಹೂತೋಟ ಬೆಳೆಸುವ ಕೌಶಲ್ಯ ಇಲ್ಲದಿದ್ದರೂ ಹೂ ಗಿಡಗಳನ್ನು ಪ್ರೀತಿಸುವ, ನೋಡಿ ಆನಂದಿಸುವ ಮನಸ್ಥಿತಿ ಇದೆ. ಬೇರೆ ಬೇರೆ ಕಡೆ ಹೋದಾಗ ಸಿಗುವ ವಿಭಿನ್ನವಾದ ಹೂ ಗಿಡಗಳನ್ನು/ಬೀಜಗಳನ್ನು ಒಟ್ಟು ಮಾಡಿ ತರುವ ಅಭ್ಯಾಸವೂ ಇದೆ. ನಮ್ಮ ಶಂಕರಿ ಕೂಡಾ ಹೂ ಗಿಡಗಳನ್ನು ಒಟ್ಟು ಮಾಡುವುದರಲ್ಲಿ ಜಾಣೆ. ಹೀಗಾಗಿ ಶಂಕರಿ ಬೆಳೆಸಿರುವ ನಮ್ಮ ಹೂದೋಟದಲ್ಲಿ ವೈವಿಧ್ಯಮಯವಾದ ಹೂಗಿಡಗಳಿವೆ. ಆ ವರ್ಣಮಯ ಹೂವುಗಳನ್ನು ನೋಡುವಾಗ ಮನಸ್ಸಿಗಾಗುವ ಆನಂದ ಅಷ್ಟಿಷ್ಟಲ್ಲ.
ನಾನು ಇಷ್ಟ ಪಡುವ ಕರವೀರ ಅಥವಾ ಕಾಡು ಕಣಗಿಲೆ ಹೂವು ನಮ್ಮ ಹೂದೋಟದಲ್ಲಿ/ಕ್ಯಾಂಪಸ್ಸಿನಲ್ಲಿ ಇದೆ. ಸುಮಾರು ಹತ್ತು ಅಡಿ ಎತ್ತರದ ಚೂಪನೆಯ ಎಲೆಗಳುಳ್ಳ ಈ ಗಿಡದಲ್ಲಿ ಬಿಳಿ, ಹಳದಿ, ಕಾವಿ ಬಣ್ಣದ ಹೂವುಗಳು ಬಿಡುತ್ತವೆ. ಗಂಟೆಯಂತಹ ಆಕಾರವುಳ್ಳ ಸೌಮ್ಯ ಸುಗಂಧದ ಕರವೀರದ ಹೂವು ಐದು ಎಸಳುಗಳನ್ನು ಹೊಂದಿದೆ. ವರ್ಷದ ಸದಾ ಕಾಲ ಈ ಗಿಡದಲ್ಲಿ ಹೂವಾಗುತ್ತದೆ. ಹೂವು ಅಥವಾ ಎಲೆಯನ್ನು ಕೊಯ್ದಾಗ ಬಿಳಿ ಬಣ್ಣದ ಸೊನೆ ಈ ಗಿಡದಿಂದ ಹೊರ ಬರುತ್ತದೆ.
ನಮ್ಮ ಕ್ಯಾಂಪಸ್ಸಿನಲ್ಲಿ ಬಿಳಿ ಮತ್ತು ಕಾವಿ ಬಣ್ಣದ ಹೂ ಬಿಡುವ ಮೂರ್ನಾಲ್ಕು ಗಿಡಗಳಿವೆ. ಹಳದಿ ಬಣ್ಣದ ಹೂ ಬಿಡುವ ಕರವೀರದ ಗಿಡವನ್ನು ಬೆಳೆಸಬೇಕಾಗಿದೆ. ವರ್ಷಪೂರ್ತಿ ಹೂ ಬಿಡುವ ಈ ಗಿಡದಲ್ಲಿ ಕಾಯಿಗಳಾದಾಗ ಅವು ದೋಣಿ ಆಕಾರದಲ್ಲಿ ಇರುತ್ತವೆ. ಕರವೀರದ ಗಿಡಗಳನ್ನು ಕ್ಯಾಂಪಸ್ಸಿನಲ್ಲಿ ಬೆಳೆಸಲೇಬೇಕು ಎನ್ನುವ ಆಕಾಂಕ್ಷೆ ಇದ್ದ ನಾನು ಆ ಮೂರ್ನಾಲ್ಕು ಗಿಡಗಳು ಬೆಳೆದದ್ದನ್ನು ಕಂಡಾಗ ತುಂಬಾ ಖುಷಿ ಪಟ್ಟೆ.

ನಮ್ಮ ಇಷ್ಟದ ವಸ್ತುಗಳು ನಮ್ಮ ಕಣ್ಣ ಮುಂದೆ ಬೆಳೆದು ಫಲ ಕೊಟ್ಟಾಗ ಸಿಗುವ ತೃಪ್ತಿ ಅಸದಳವಾದುದು. ಅದು ಒಂದು ಗಿಡವಾಗಿರಬಹುದು ಇಲ್ಲವೇ ಹಿಡಿದ ಕೈಂಕರ್ಯವಿರಬಹುದು. ಕೆಲಸದ ಫಲಪ್ರದತೆ ಯಾವಾಗಲೂ ಮನಸ್ಸಿಗೆ ಹಿತವಾದ ಭಾವನೆಯನ್ನು ಉಂಟು ಮಾಡುತ್ತದೆ. ನಮ್ಮ ಕ್ಯಾಂಪಸ್ಸಿನಲ್ಲಿ ಬೆಳೆದಿರುವ ಕರವೀರದ ಗಿಡಗಳು ಕೂಡಾ ಅಂತಹುದೇ ಮುದವನ್ನು ನನಗೆ ಕೊಟ್ಟಿವೆ😌


179. ಪರಿಸರ - ನೀರು  (21/10/2020)


ನಾನು ಕರಾವಳಿಯವಳಾದ ಕಾರಣ ನೀರಿನ ತಾಪತ್ರಯ ನನಗೆ ಗೊತ್ತೇ ಇರಲಿಲ್ಲ. ನೀರಿನ ಕೊರತೆಯ ಬಗ್ಗೆ ಅಲ್ಲಲ್ಲಿ ಓದಿದ್ದು ಬಿಟ್ಟರೆ ನನಗೆ ವೈಯಕ್ತಿಕವಾಗಿ ಅದರ ಅನುಭವ ಆಗಿರಲಿಲ್ಲ. ಕರಾವಳಿಯಲ್ಲಿ ಮಳೆಗಾಲದಲ್ಲಿ 'ಹುಚ್ಚು ಮಳೆ ಹೆಚ್ಚು ನೀರು' ಕಂಡ ಅನುಭವವೇ ನನಗಿದ್ದದ್ದು. ಆದಾಗ್ಯೂ ನಾನ್ಯಾವತ್ತೂ ನೀರನ್ನು ಪೋಲು ಮಾಡುತ್ತಿರಲಿಲ್ಲ. ಅಗತ್ಯವಿದ್ದಷ್ಟೇ ಬಳಸುತ್ತಿದ್ದೆ. ಹೀಗಿದ್ದ ನನ್ನಲ್ಲಿ ನೀರಿನ ಮಹತ್ವದ ಬಗ್ಗೆ ಇನ್ನಷ್ಟು ಅರಿವನ್ನು ಮೂಡಿಸಿದ್ದು ನವೋದಯದ ನನ್ನ ಬದುಕು.
1989ರಲ್ಲಿ ಬಾಳೆಹೊನ್ನೂರಿನ ನವೋದಯದಲ್ಲಿ ನಾನು ಹೋಗಿ ಕೆಲಸಕ್ಕೆ ಸೇರಿದಾಗ ಒಳ್ಳೆಯ ಮಳೆಗಾಲ. ಎಲ್ಲಿ ನೋಡಿದರಲ್ಲಿ ನೀರೇ ನೀರು. ಆದರೆ ಬಳಸಲು ಯೋಗ್ಯವಾದ ನೀರೇ ಇರಲಿಲ್ಲ. ಮಳೆಯಿಂದಾಗಿ ಕರೆಂಟ್ ಇರುತ್ತಿರಲಿಲ್ಲ. ಕರೆಂಟ್ ಇದ್ದಾಗ ವೋಲ್ಟೇಜ್ ಇರುತ್ತಿರಲಿಲ್ಲ. ಹೀಗಾಗಿ ಬೋರ್ ವೆಲ್ ನಿಂದ ನೀರೆತ್ತಲು ಕರೆಂಟ್ ಪಂಪಿಗೆ ಆಗುತ್ತಿರಲಿಲ್ಲ. ನಮಗೆ ನೀರು ಬೇಕೆಂದರೆ ಮಳೆನೀರೇ ಗತಿಯಾಗಿತ್ತು. ಮಳೆ ಬರುವಾಗ ಗೋಡೆಗೆ ದಪ್ಪನೆಯ ಕಾರ್ಡ್ ಅಥವಾ ಮದುವೆ ಆಮಂತ್ರಣ ಪತ್ರಿಕೆಯನ್ನು ಒತ್ತಿ ಇಟ್ಟು ಅದರ ಕೆಳಗೊಂದು ಬಕೆಟ್ ಇಟ್ಟು ಮಳೆನೀರನ್ನು ಸಂಗ್ರಹಿಸಿ ನಮ್ಮೆಲ್ಲ ಕೆಲಸಕ್ಕೂ ಬಳಸುತ್ತಿದ್ದೆವು. ಮಳೆ ಇಲ್ಲದಾಗ ಹತ್ತಿರದ ಗೌಡರ ಮನೆಗೆ ಹೋಗಿ ಬಾವಿಯಿಂದ ನೀರನ್ನು ಸೇದಿ ಬಳಸುತ್ತಿದ್ದೆವು. ನಟ್ಟನಡು ರಾತ್ರಿಯಲ್ಲಿ ವೋಲ್ಟೇಜ್ ಬಂದಾಗ ಪಂಪ್ ಆನ್ ಆಗಿ ನೀರು ಸಿಗುತ್ತಿತ್ತು. ಆ ಅಪರಾತ್ರಿಯಲ್ಲಿ ಕಡು ಚಳಿಯಲ್ಲಿ ನಮ್ಮ ಸ್ನಾನದ ಕಾರ್ಯಕ್ರಮ ಸಾಗುತ್ತಿತ್ತು. ಸ್ನಾನ ಮಾಡುವಾಗ ಮೈ ಕೊರೆಯುತ್ತಿದ್ದ ಚಳಿಯನ್ನು ಕಡಿಮೆ ಮಾಡಿಕೊಳ್ಳಲು ಉತ್ತಮವಾದ ಸಂಗೀತ ನಮ್ಮಗಳ ಬಾಯಿಂದ ಹೊರಹೊಮ್ಮುತ್ತಿತ್ತು.
ಇಂತಹ ನೀರಿನ ತತ್ವಾರವಿದ್ದಾಗ ಅಗತ್ಯದ ಕೆಲಸದ ಬಳಕೆಗಾಗಿ ಡ್ರಮ್ ಗಳಲ್ಲಿ ನೀರನ್ನು ತುಂಬಿಸಿ ಇಟ್ಟಿರುತ್ತಿದ್ದರು. ಹಾಗೇ ನೀರು ತುಂಬಿಸಿ ಇಟ್ಟಿಟ್ಟು ಆ ಓಪನ್ ಡ್ರಮ್ ಗಳಲ್ಲಿ ಕೆಲವೊಮ್ಮೆ ಪುಟ್ಟ ಹುಳುಗಳಾಗುತ್ತಿದ್ದವು. ಆದರೂ ಹುಳುಗಳನ್ನು ಬದಿಗೆ ಸರಿಸಿ ಎಷ್ಟೋ ಬಾರಿ ಆ ನೀರನ್ನೇ ಬಳಸಿದ್ದಿದೆ. ಪ್ರಾಯಶಃ ಆ ಸಮಯದಲ್ಲಿ "ಜೀವನದಲ್ಲಿ ಏನು ಮುಖ್ಯ" ಎಂದು ಕೇಳಿದ್ದರೆ ನಿದ್ದೆಯಲ್ಲೂ ನಾವು 'ನೀರು' ಎನ್ನುವ ಉತ್ತರ ಕೊಡುವಷ್ಟು ನೀರು ಪ್ರಶಸ್ತವಾಗಿ ಕಂಡಿತ್ತು ಆಗ. ಈಗಲೂ ಕೂಡ ನನಗೆ ಯಾರಾದರೂ ಅನಾವಶ್ಯಕವಾಗಿ ನೀರನ್ನು ಪೋಲು ಮಾಡಿದರೆ ಮೈ ಉರಿಯುತ್ತದೆ🤔

ಕಾಲಕಾಲಕ್ಕೆ ಮಳೆ ಸರಿಯಾಗಿ ಆಗುತ್ತಿದ್ದ ಆ ಕಾಲದಲ್ಲೂ ಶುದ್ಧ ಮಲೆನಾಡಿನ ಅಂತಹ ಸ್ಥಳದಲ್ಲಿ ನೀರಿನ ತೀವ್ರ ಕೊರತೆಯ ಅನುಭವ ನನಗಾದದ್ದು ನನ್ನ ಜೀವನದ ಅಮೂಲ್ಯವಾದ ಪಾಠ. ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಬದುಕುವ, ಎಂತಹ ಸನ್ನಿವೇಶವನ್ನೂ ನಿರ್ವಹಿಸುವ ತಾಕತ್ತು ನನಗೆ ದೊರೆತಿದ್ದು ನವೋದಯದ ವೃತ್ತಿ ಬದುಕಿನ ಆ ಮೊದಲ ದಿನಗಳಲ್ಲಿ. ಅಲ್ಲಿನ ನೀರಿನ ಕೊರತೆ ಎನ್ನುವುದು ನಮಗೆ ಸುಲಭವಾಗಿ ದೊರೆಯುವ ಪ್ರತಿಯೊಂದರ ಮೌಲ್ಯವನ್ನು ಅರಿತುಕೊಳ್ಳುವಂತೆ ಮಾಡಿತು. ಪ್ರತಿ ವಸ್ತುವಿನ ಮೌಲ್ಯ ಹಾಗೂ ಅಪಮೌಲ್ಯ ಎನ್ನುವುದು ಆ ವಸ್ತುವಿನ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ ಎನ್ನುವುದರ ಅರಿವಿನೊಂದಿಗೆ ನಾನು ಜೀವನವನ್ನು ನೋಡುವ ದೃಷ್ಟಿಕೋನ ಬದಲಾದದ್ದು ಆಗಲೇ ಎಂದರೆ ತಪ್ಪಿಲ್ಲ.


178. ನೆನಪುಗಳು - ಚಗಟೆ/ಚೊಗಟೆ ಸೊಪ್ಪು  ತಂಬುಳಿ (20/10/2020)


ನನ್ನ ತವರೂರಿನಲ್ಲಿ ಇಲ್ಲವೇ ಗಂಡನ ಮನೆ ಕಡೆ ಊಟಕ್ಕೆ ತಂಬುಳಿ ಇದ್ದೇ ಇರುತ್ತದೆ. ಅದಕ್ಕಾಗಿ ದಿನಕ್ಕೊಂದು ಸೊಪ್ಪಿನ ಹುಡುಕಾಟ ನಡೆಯುತ್ತಿರುತ್ತದೆ. ನಮ್ಮ ಸುತ್ತಲೂ ಲಭ್ಯವಿರುವ ಹೆಚ್ಚಿನ ಸೊಪ್ಪುಗಳಲ್ಲಿ ಗೊಜ್ಜು ಮತ್ತು ತಂಬುಳಿಯನ್ನು ಆರಾಮಾಗಿ ಮಾಡಬಹುದು. ತಂಬುಳಿ ಮತ್ತು ಗೊಜ್ಜು ಮಾಡಲು ಸೂಕ್ತವಾದ ಒಂದು ಸೊಪ್ಪು ಚಗಟೆ/ಚೊಗಟೆ ಸೊಪ್ಪು.
ದುಂಡನೆಯ/ಸ್ವಲ್ಪ ಬಾದಾಮಿ ಆಕಾರದ ಎಲೆ ಹೊಂದಿರುವ ಸುಮಾರು ಅರ್ಧ ಅಡಿ ಎತ್ತರದ ಈ ಗಿಡ ಮಳೆಗಾಲದಲ್ಲಿ ಎಲ್ಲಾ ಕಡೆಯೂ ಬೆಳೆಯುತ್ತದೆ. ಅದರ ಕುಡಿಯನ್ನು ಕಿತ್ತು ತೊಳೆದು ಬಾಣಲೆಯಲ್ಲಿ ತುಪ್ಪ ಹಾಕಿ ಜೀರಿಗೆ, ನಾಲ್ಕೈದು ಕಾಳುಮೆಣಸಿನ ಜೊತೆ ಹುರಿದು ಸ್ವಲ್ಪ ಕಾಯಿತುರಿ ಸೇರಿಸಿ ನುಣ್ಣಗೆ ರುಬ್ಬಿ ಮಜ್ಜಿಗೆಯ ಜೊತೆ ಉಪ್ಪು, ಬೆಲ್ಲ ಸೇರಿಸಿ ಹದ ಮಾಡಿದರೆ ತಂಪನೆಯ ಕಂಪಿನ ತಂಬುಳಿ ಸಿದ್ಧ. ಅನ್ನಕ್ಕೆ ತಂಬುಳಿ ಹಾಕಿಕೊಂಡು ಉಂಡವನೇ ಬಲ್ಲ ಈ ತಂಬುಳಿ ಊಟದ ಸುಖ! ಹಾಗೆಯೇ ಒಣಮೆಣಸಿನ ಜೊತೆ ಚಗಟೆ ಸೊಪ್ಪನ್ನು ಹುರಿದು ಉಪ್ಪು, ಹುಳಿ, ತೆಂಗಿನತುರಿ ಜೊತೆ ರುಬ್ಬಿದರೆ ಕಮ್ಮನೆಯ ಗೊಜ್ಜು ಸಿದ್ಧ.
ನನಗೆ ಹೊಸ ರುಚಿ ಪ್ರಯೋಗ ಮಾಡುವುದೆಂದರೆ ಇಷ್ಟ. ಫೇಸ್ಬುಕ್ನಲ್ಲಿ ಚಗಟೆ ಸೊಪ್ಪಿನ ಪತ್ರೊಡೆಯ ರೆಸಿಪಿ ನೋಡಿ ಈಗ ಒಂದೆರಡು ತಿಂಗಳ ಕೆಳಗೆ ಅದನ್ನು ಮಾಡಿ ನಮ್ಮ ಮನೆಯಲ್ಲಿ ಯಾರೂ ತಿನ್ನದೆ ಮಾಡಿದ ತಪ್ಪಿಗೆ ನಾನೊಂದಿಷ್ಟು ತಿಂದು ಅಂತೂ ಇಂತೂ ಖಾಲಿ ಮಾಡಿದ್ದೆ. ಸ್ವಲ್ಪ ಪ್ರಮಾಣದಲ್ಲಿ ಮಾಡಿದ್ದ ಕಾರಣ ಬಚಾವಾದೆ😀
ಈಗ ಚಗಟೆಯ ಕೋಡುಗಳು ಒಣಗಿ ಬೀಜ ಉದುರುವ ಸಮಯ. ಅದನ್ನು ನೋಡಿದಾಗ ನನ್ನ ಅಮ್ಮನ ಅಮ್ಮ ಸರಸ್ವತಮ್ಮ ಒಣಗಿದ ಚಗಟೆ ಕೋಡಿನಲ್ಲಿರುವ ಬೀಜಗಳನ್ನು ಹದವಾಗಿ ಹುರಿದು ಪುಡಿ ಮಾಡಿಟ್ಟುಕೊಂಡು ಕಾಫಿಯ ರೀತಿ ಬಳಸುತ್ತಿದ್ದ ನೆನಪು ನನಗಾಗುತ್ತದೆ. ನಾವು ಕುಂದಾಪುರದಲ್ಲಿ ಇದ್ದಾಗ ನಾನು ನಮ್ಮ ಮನೆಯ ತೋಟದಲ್ಲಿ ಬೆಳೆಯುತ್ತಿದ್ದ ಚಗಟೆ ಕೋಡನ್ನು ಕಿತ್ತು ನನ್ನ ದೊಡ್ಡನಿಗೆ ತಂದು ಕೊಡುತ್ತಿದ್ದ ನೆನಪಿದೆ. ಈಗ ದಿನಾ ಸಂಜೆ ನಮ್ಮ ಕ್ಯಾಂಪಸ್ಸಿನಲ್ಲಿ ವಾಕ್ ಮಾಡುವಾಗ ಅಲ್ಲಲ್ಲಿ ಹುಟ್ಟಿ ಬೆಳೆದಿರುವ ಚಗಟೆ ಗಿಡಗಳು ನನ್ನ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತಿವೆ.

ನೋಡಲು ಸುಂದರವಾದ ಗಿಡಗಳವು. ಬೆಳೆದು ದೊಡ್ಡದಾದಾಗ ಆ ಗಿಡಗಳಲ್ಲಿ ಹಳದಿ ಬಣ್ಣದ ಹೂವುಗಳಾಗುತ್ತವೆ. ತದನಂತರದಲ್ಲಿ ಮೂರ್ನಾಲ್ಕು ಇಂಚಿನ ತೆಳ್ಳನೆಯ ಕೋಡುಗಳಾಗುತ್ತವೆ. ಆ ಕೋಡಿನೊಳಗೆ ಎಂಟ್ಹತ್ತು ಪುಟಾಣಿ ಬೀಜಗಳಿರುತ್ತವೆ. ಔಷಧೀಯ ಗುಣವುಳ್ಳ ಈ ಗಿಡ ಎಲ್ಲಾ ರೀತಿಯಲ್ಲೂ ಆಹಾರವಾಗಿ ಬಳಕೆಯಾಗಲು ಯೋಗ್ಯ!

178. ಪರಿಸರ - ಶಂಖ ಪುಷ್ಪ 


ನನಗೆ ನೋಡಲು ಇಷ್ಟವಾಗುವ ಇನ್ನೊಂದು ಹೂವೆಂದರೆ ಶಂಖಪುಷ್ಪ. ಹೂವಿನ ಎಸಳುಗಳು ಮಡಚಿಕೊಂಡು ಶಂಖದ ಆಕಾರದಲ್ಲಿ ಇರುವ ಇದಕ್ಕೆ ಶಂಖಪುಷ್ಪ ಎಂದೆನ್ನುತ್ತಾರೆ.
ಬಳ್ಳಿಯಲ್ಲಿ ಅರಳುವ ಈ ಹೂವುಗಳಲ್ಲಿ ಎರಡು ವಿಧ. ಒಂದು ಸಿಂಗಲ್ ಹಾಗೂ ಇನ್ನೊಂದು ಡಬ್ಬಲ್ ಎಸಳಿನ ಶಂಖಪುಷ್ಪ. ಇದರಲ್ಲಿ ಬಿಳಿ, ಕಡು ನೀಲಿ, ತೆಳು ನೀಲಿ, ನೇರಳೆ ಬಣ್ಣದ ಹೂವುಗಳಿರುತ್ತವೆ. ವರ್ಷದ ಎಲ್ಲಾ ಕಾಲವೂ ಈ ಬಳ್ಳಿ ಹೂ ಬಿಡುತ್ತದೆ. ಶಂಖಪುಷ್ಪ ದೇವರ ಪೂಜೆಗೆ ಯೋಗ್ಯ. ತುಂಬಾ ಡೆಲಿಕೇಟ್ ಆಗಿರುವ ಕಾರಣ ಮುಡಿಯಲು ಸೂಕ್ತವಲ್ಲ. ಹೂ ಉದುರಿದ ಮೇಲೆ ನಾಲ್ಕೈದು ಬೀಜಗಳಿರುವ ಬೀನ್ಸ್ ತರಹದ ಕೋಡು ಬಿಡುತ್ತದೆ. ಆ ಬೀಜಗಳಿಂದ ಹೊಸ ಗಿಡ ಹುಟ್ಟುತ್ತದೆ.
ನಮ್ಮ ಮನೆಯಲ್ಲಿ ಬಿಳಿ, ನೀಲಿ ಬಣ್ಣದ ಡಬಲ್ ಎಸಳಿನ ಶಂಖಪುಷ್ಪ ಹಾಗೂ ನೇರಳೆ ಬಣ್ಣದ ಸಿಂಗಲ್ ಎಸಳಿನ ಶಂಖಪುಷ್ಪಗಳ ಬಳ್ಳಿಗಳಿವೆ. ಯಾವುದೇ ಹೂವಿನ ಗಿಡ ಹಾಗೂ ಹೂವಿನ ಬೀಜಗಳನ್ನು ನಾನು ಎಲ್ಲಿ ಹೋದರೂ ತಂದು ಕೊಡುತ್ತೇನೆ. ಅದನ್ನು ನೆಟ್ಟು ಬೆಳೆಸುವ ಕೆಲಸ ಶಂಕರಿಯದ್ದು. ಅವಳದನ್ನು ಖುಷಿಯಿಂದ ಹಾಗೂ ಪ್ರೀತಿಯಿಂದ ಮಾಡುತ್ತಾಳೆ.
ಶಂಖಪುಷ್ಪ ಔಷಧೀಯ ಗುಣಗಳಿರುವ ಬಳ್ಳಿ. ಈ ಬಳ್ಳಿಯ ಪ್ರತಿ ಭಾಗದಿಂದಲೂ ಔಷಧಿ ಮಾಡಬಹುದು. ಅದರ ಬೇರು, ಕಾಂಡ, ಎಲೆ, ಹೂವು, ಬೀಜ ಹೀಗೆ ಪ್ರತಿಯೊಂದು ಭಾಗವೂ ಔಷಧೀಯ ಗುಣವನ್ನು ಹೊಂದಿವೆ. ಹೀಗಾಗಿ ಇದು ಎಲ್ಲಾ ರೀತಿಯಲ್ಲೂ ಶ್ರೇಷ್ಠವಾದ ಗಿಡ.

ಈ ಬಳ್ಳಿ ಯಾವಾಗಲೂ ಹಸಿರಾಗಿರುತ್ತದೆ. ಇದರ ಬಗ್ಗೆ ವಿಶೇಷ ಕಾಳಜಿ ತೋರಿಸಬೇಕಾದ ಅಗತ್ಯವಿಲ್ಲ. ಸದಾ ಕಾಲ ಈ ಬಳ್ಳಿ ಹೂವುಗಳಿಂದ ತುಂಬಿಕೊಂಡು ಮನಸ್ಸಿಗೆ ಖುಷಿ ಕೊಡುತ್ತದೆ. ನನಗೆ ಯಾವಾಗಲೂ ಇಂತಹ ಸ್ಥಳೀಯ ಗಿಡಗಳ ಬಗ್ಗೆ ಒಲವು ಜಾಸ್ತಿ. ಅವುಗಳೊಡನೆ ಸಹಜವಾದ ಆಪ್ತತೆ ಮೂಡುತ್ತದೆ. ಅವುಗಳು ತಮ್ಮ ಪಾಡಿಗೆ ತಾವು ಬೆಳೆಯುವ ಕಾರಣ ಅವುಗಳ ಬೆಳವಣಿಗೆ ಹಾಗೂ ಪೋಷಣೆಯ ಬಗೆಗಿನ ನಮ್ಮ ಜವಾಬ್ದಾರಿ ಕಡಿಮೆ ಇರುತ್ತದೆ. ಚೆಂದದ ಹೂವುಗಳನ್ನು ಕೊಡುತ್ತಾ ನಮ್ಮಿಂದ ವಿಶೇಷ ಕಾಳಜಿ ನಿರೀಕ್ಷಿಸದೆ ನಿಸ್ಪೃಹವಾಗಿ ತನ್ನ ಕೆಲಸವನ್ನು ಮಾಡುವ ಶಂಖಪುಷ್ಪದಂತಹ ಸ್ಥಳೀಯ ಗಿಡಬಳ್ಳಿಗಳನ್ನು ಬೆಳೆಯುವ ಮನಸು ಮಾಡೋಣವಲ್ಲವೆ?

177. ಪರಿಸರ -ಹೂವುಗಳು 


ಕನಕಾಂಬರ ಅಥವಾ ಅಬ್ಬಲಿಗೆ ನನ್ನ ಬಾಲ್ಯದ ದಿನಗಳ ನೆನಪಿನ ಬುತ್ತಿಯಲ್ಲಿರುವ ಹೂವು. ಇದು ಪೊದೆ ಜಾತಿಯ ಸಸ್ಯದಲ್ಲಿ ಬೆಳೆಯುವ ಪಂಖಾಕಾರದ ಹೂವು. ಈ ಗಿಡ ಸುಮಾರು ಒಂದು ಮೀಟರ್ ಎತ್ತರ ಬೆಳೆದು ಮೊನಚಾದ ಎಲೆಗಳನ್ನು ಹೊಂದಿರುತ್ತದೆ. ಹೂವುಗಳು ಕದಿರ ಗೊಂಚಲಲ್ಲಿ ಬೆಳೆಯುತ್ತವೆ. ಅವುಗಳಲ್ಲಿ ಕೇಸರಿ, ಹಳದಿ ಮಿಶ್ರಿತ ಕೇಸರಿ, ಹಳದಿ, ಹಸಿರು ಬಣ್ಣದ ಹೂವುಗಳಾಗುತ್ತವೆ. ಅವುಗಳಲ್ಲಿ ಸ್ವಲ್ಪ ಪುಟಾಣಿ ವೆರೈಟಿಯ ಕೇಸರಿ ಬಣ್ಣದ ಕನಕಾಂಬರಕ್ಕೆ ಬೇಡಿಕೆ ಜಾಸ್ತಿ.
ಅಜ್ಜಯ್ಯ ಹಾಗೂ ಆನಮ್ಮನ ಮನೆಯಂಗಳದ ದರೆಯಲ್ಲಿ/ ಬೇಲಿಯಲ್ಲಿ ಅಬ್ಬಲಿಗೆ ಗಿಡಗಳು ಕಾಟು ಗಿಡದ ರೀತಿ ಬೆಳೆಯುತ್ತಿದ್ದದ್ದು ನನಗಿನ್ನೂ ನೆನಪಿದೆ. ಅಬ್ಬಲಿಗೆಯ ಮೊಗ್ಗುಗಳನ್ನು ಕೊಯ್ದು ಬಾಳೆನಾರಿನಲ್ಲಿ ಹೂವಿನ ಮಾಲೆಯನ್ನು ಕಟ್ಟುತ್ತಿದ್ದದ್ದೂ ನೆನಪಿದೆ. ಅರಳಿದ ಹೂವುಗಳಿಗಿಂತ ಮೊಗ್ಗುಗಳನ್ನು ಕೊಯ್ದು ಹೂಮಾಲೆ ಕಟ್ಟಿದರೆ ಚೆಂದ. ಭಾರವಿಲ್ಲದ ಕಾರಣ ಅಬ್ಬಲಿಗೆ ಮುಡಿಯಲಿಕ್ಕೂ ಆರಾಮು. ನಾವೆಲ್ಲ ಆ ದಿನಗಳಲ್ಲಿ ಹಗಲು ಅಬ್ಬಲಿಗೆ ದಂಡೆ ಮುಡಿದರೆ ಸಂಜೆ ಸಂಜೆ ಮಲ್ಲಿಗೆ ಹೂವು ಮುಡಿಯುತ್ತಿದ್ದೆವು.
ನನಗಿನ್ನೂ ನಾನು ಪ್ರಥಮ ಬಾರಿ ಹಸಿರು ಅಬ್ಬಲಿಗೆ ನೋಡಿ ಆಶ್ಚರ್ಯಪಟ್ಟಿದ್ದು ನೆನಪಿದೆ. ಯಾವುದೋ ನೆಂಟರ ಮನೆಯಲ್ಲಿ ಹಸಿರು ಅಬ್ಬಲಿಗೆಯನ್ನು ನೋಡಿ ಅವರ ಹತ್ತಿರ ಕಾಡಿಬೇಡಿ ಒಂದು ಪುಟಾಣಿ ಗಿಡ ಹಾಗೂ ಅದರ ಬೀಜಗಳನ್ನು ತಂದು ಗಿಡ ನೆಟ್ಟು ಹೂ ಬಿಟ್ಟಾಗ ನೋಡಿ ಖುಷಿ ಪಟ್ಟ ಕ್ಷಣಗಳ ನೆನಪಿದೆ. ಏನೇ ಅಪರೂಪವಾದದ್ದನ್ನು ಕಂಡಾಗ ಮನಸ್ಸು ಆ ಕಡೆಗೆ ಸೆಳೆಯುವುದು ಸಹಜ ತಾನೇ? ನಂತರದಲ್ಲಿ ಅದು ಬಹುರೂಪದ್ದಾದಾಗ ಅದರ ಬಗ್ಗೆ ವಿಶೇಷ ಮೋಹ ಉಳಿದಿರುವುದಿಲ್ಲ. ಹಸಿರು ಅಬ್ಬಲಿಗೆಯನ್ನು ಕಂಡಾಗ ನನಗಾದ ಅನುಭವ ಅದೇ!
ನಮ್ಮ ಹೊಂಗಿರಣ ಕ್ಯಾಂಪಸ್ಸಿನಲ್ಲಿ ಕನಕಾಂಬರ ಗಿಡವಿದೆ‌. ಅದರ ಹೂವುಗಳನ್ನು ಕೊಯ್ದು ಹೂಮಾಲೆ ಕಟ್ಟಿ ಮುಡಿಯುವವಳು ನಮ್ಮ ಗೌರಮ್ಮ. ಅವಳಿಗೆ ತಲೆಯ ಮೇಲೆ ಹೂವಿಲ್ಲದಿದ್ದರೆ ನಿದ್ರೆ ಬರುವುದಿಲ್ಲ. ಅಷ್ಟು ಹೂವಿನ ಮೋಹ ಅವಳದ್ದು!
ನಾನು ಸಾಗರದ ಕಡೆ ಕನಕಾಂಬರವನ್ನು ಕಂಡಿದ್ದು ಕಡಿಮೆ. ನಮ್ಮೂರಲ್ಲಿ ಮಲ್ಲಿಗೆ ಬಿಟ್ಟರೆ ಅತಿ ಹೆಚ್ಚು ಬಳಸಲ್ಪಡುವ ಹೂವು ಅಬ್ಬಲಿಗೆ/ಕನಕಾಂಬರ. ಅದು ಬೇಗ ಬಾಡದ ಕಾರಣ ನೋಡಲಿಕ್ಕೆ ಹಾಗೂ ಉಪಯೋಗಿಸಲಿಕ್ಕೆ ಬಹಳ ಯೋಗ್ಯವೆಂದೆನಿಸುತ್ತದೆ.

ಅದನ್ನು ಕೊಯ್ದಾಗ ಅದರ ಬುಡವನ್ನು ಹೀರಿದರೆ ಒಳ್ಳೆಯ ಮಕರಂದ ಇರುತ್ತದೆ. ನಾವು ಚಿಕ್ಕವರಾಗಿದ್ದಾಗ ಮಕರಂದಕ್ಕಾಗಿ ಕೂಡಾ ಕನಕಾಂಬರ ಹೂವನ್ನು ಕೊಯ್ದು ಖುಷಿಪಡುತ್ತಿತ್ತು. ಒಂದು ಸಾಧಾರಣ ಹೂವು ಕಣ್ಣಿಗೆ ತಂಪನ್ನಿತ್ತು,... ಮುಡಿಗೆ ಅಂದವನ್ನಿತ್ತು,....ಬಾಯಿಗೆ ಸಿಹಿಯನ್ನಿತ್ತು... ಹೇಗೆಲ್ಲಾ ಉಪಯೋಗಕಾರಿಯಾಗುತ್ತದಲ್ಲವೆ?


176. ಪೇರಳೆ ಹಣ್ಣು 


ಪೇರಳೆ ನನ್ನ ಇಷ್ಟದ ಹಣ್ಣು. ಆದರೆ ಅದು ತುಂಬಾ ಹಣ್ಣಾಗಿದ್ದರೆ ನನಗೆ ಇಷ್ಟವಾಗುವುದಿಲ್ಲ. ಸ್ವಲ್ಪ ದೋರೆಗಾಯಿ ಇದ್ದರೆ ಬಹಳ ಇಷ್ಟ. ಪೇರಳೆ ನೋಡಿದ ತಕ್ಷಣ ನನ್ನ ಬಾಯಿಯಲ್ಲಿ ನನಗರಿವಿಲ್ಲದೆ ನೀರೂರುತ್ತದೆ. ಪ್ರಯಾಣ ಮಾಡುವಾಗ ದೂರದಲ್ಲೆಲ್ಲೋ ಪೇರಳೆ ನೋಡಿದರೂ ನನಗರಿವಿಲ್ಲದಂತೆ ನನ್ನ ಮನಸ್ಸು ಪೇರಳೆ ಗಾಡಿಯೊಳಗೆ ತೂರಿಕೊಂಡು ಬಿಡುತ್ತದೆ. ಕುಡುಕರಿಗೆ ಆವರ ಬ್ರ್ಯಾಂಡ್ ಎಣ್ಣೆ ನೋಡಿದಾಗ ಮನಸ್ಸು ಬ್ಯಾಲೆನ್ಸ್ ತಪ್ಪುವ ಹಾಗೆ ನನಗೆ ಪೇರಳೆ ನೋಡಿದಾಗ ಮನಸ್ಸು ಮರ್ಕಟವಾಗುತ್ತದೆ. ಅದನ್ನು ತಿನ್ನಲೇಬೇಕೆಂಬ ಅಪ್ರತಿರೋಧ್ಯವಾದ ತೀವ್ರ ಅಪೇಕ್ಷೆ ಹುಟ್ಟುತ್ತದೆ.
ಪೇರಳೆ ತಿಂದ ತಕ್ಷಣ ನನಗೆ ಗಂಟಲು ನೋವು ಹಾಗೂ ಕೆಮ್ಮಿನ ತೊಂದರೆ ಬಾಧಿಸುತ್ತದೆ. ಮಳೆಗಾಲದ ಪೇರಳೆ ತಿಂದರಂತೂ ಡಾಕ್ಟರ್ ಭೇಟಿ ಖಚಿತ. ಪೇರಳೆ ಕಣ್ಣ ಮುಂದೆ ಇದ್ದು ತಿನ್ನಲಾಗದಿದ್ದಾಗ ಒಂದು ರೀತಿಯ ಸ್ಮಶಾನ ವೈರಾಗ್ಯ ನನ್ನನ್ನು ಆವರಿಸುತ್ತದೆ. ಬದುಕು ಅರ್ಥಹೀನ ಎಂದೆನಿಸಿ ಬಿಡುತ್ತದೆ. ಕೈಗೆ ಬಂದದ್ದು ಬಾಯಿಗೆ ಬರುವುದಿಲ್ಲವಲ್ಲ ಎನ್ನುವ ಖೇದ ಆವರಿಸುತ್ತದೆ. ಒಂದು ವೇಳೆ ಎಲ್ಲರ ಕಣ್ಣು ತಪ್ಪಿಸಿ ಪೇರಳೆ ತಿಂದರೂ ಆರೋಗ್ಯ ಕೈ ಕೊಟ್ಟು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆಗಳೂ ಇವೆ.
ನಾನು ಇತ್ತೀಚೆನ ವರ್ಷಗಳಲ್ಲಿ ಧೈರ್ಯವಾಗಿ ಮನಪೂರ್ವಕವಾಗಿ ಪೇರಳೆ ತಿಂದದ್ದು ನಾನು ನನ್ನ ಮಕ್ಕಳೊಡನೆ ಧರ್ಮಶಾಲಾಕ್ಕೆ ಹೋದಾಗ. ನಾವು ಉಳಿದುಕೊಂಡಿದ್ದ ಸ್ಥಳದಲ್ಲಿ ರಾಶಿ ರಾಶಿ ಪೇರಳೆ ಬಿಟ್ಟಿತ್ತು. ನಾನಲ್ಲಿ ಗಿಡದಿಂದ ಫ್ರೆಶ್ ಆಗಿ ಕಿತ್ತು ತಿಂದ ಪೇರಳೆಗಳೌಗೆ ಲೆಕ್ಕವೇ ಇಲ್ಲ. ಅಲ್ಲಿನ ವಾಯುಗುಣಕ್ಕೋ ಏನೋ ಅಲ್ಲಿ ಪೇರಳೆ ತಿಂದಾಗ ನನಗೆ ಆರೋಗ್ಯದ ಸಮಸ್ಯೆ ಉಂಟಾಗಲಿಲ್ಲ. ಅಲ್ಲಿನ ಪೇರಳೆ ಕೊಬ್ಬರಿಯ ರೀತಿ ಕುರುಕುರು ಅನ್ನುತ್ತಿತ್ತು. ಒಳ್ಳೆಯ ಕ್ರಿಸ್ಪಿ ಪೇರಳೆ ಅದಾಗಿತ್ತು. ಬೀಜವೂ ಕಡಿಮೆ ಇತ್ತು.

ನಮ್ಮ ಮನೆಯ ಸುತ್ತ ಐದಾರು ಪೇರಳೆ ಮರಗಳಿದ್ದಾವೆ. ಅದರಲ್ಲಿ ನಾಲ್ಕು ವೆರೈಟಿಯ ಮರಗಳಿದ್ದಾವೆ. ಚಂದ್ರ ಪೇರಳೆ, ಬೀಟ್ರೂಟ್ ಪೇರಳೆ, ಕಸಿ ಪೇರಳೆ ಹಾಗೂ ರೆಗ್ಯುಲರ್ ಪೇರಳೆ. ಮಕ್ಕಳಿದ್ದಾಗ ಮಕ್ಕಳಿಂದಾಗಿ ಇಲ್ಲವೇ ಮಂಗಗಳಿಂದಾಗಿ ನಮಗೆ ಪೇರಳೆಗಳು ತಿನ್ನಲು ಸಿಗುವುದೇ ಕಷ್ಟ. ನಮಗಲ್ಲದಿದ್ದರೆ ಮಂಗಗಳಿಗಾದರೂ ಆಹಾರ ಸಿಗುತ್ತದೆಂದು ಮನಸ್ಸಿಗೆ ಸಮಾಧಾನ ಮಾಡಿಕೊಳ್ಳುವುದಷ್ಟೇ ನಮ್ಮ ಮುಂದಿರುವ ದಾರಿ. ಇಂತೀ ಪೇರಳೆ ಕಥಾನಕ😁


175.ನೆನಪು  - ಬಾಲ್ಯದ ಆಟಗಳು 


ನಾನು ಚಿಕ್ಕವಳಿದ್ದಾಗ ಬಹಳಷ್ಟು ಒಳಾಂಗಣ ಆಟಗಳನ್ನು ಆಡುತ್ತಿದ್ದ ನೆನಪಿದೆ. ಅವೆಲ್ಲ ಹಳ್ಳಿಯ ಆಟಗಳು. ನನಗೆ ತುಂಬಾ ಚೆನ್ನಾಗಿ ನೆನಪಿರುವ ನಾನಾಡುತ್ತಿದ್ದ ಆಟಗಳು ಚನ್ನೆಮಣೆ ಮತ್ತು ಎತ್ತುಗಲ್ಲು. ಹುಣಿಸೆ ಬೀಜಗಳನ್ನು ಉಪಯೋಗಿಸಿ ಆಡುತ್ತಿದ್ದ ಚನ್ನೆಮಣೆ ಆಟಕ್ಕೆ ಅದರದ್ದೇ ಆದ ಆಟದ ಮಣೆಯ ಅಗತ್ಯವಿದೆ. ಆ ಮಣೆ ಇಲ್ಲದಿದ್ದರೆ ಆಟವಾಡಲು ಆಗುವುದಿಲ್ಲ. ಎತ್ತುಗಲ್ಲು ಆಟಕ್ಕೆ ಅಂತಹ ಯಾವುದೇ ವಿಶೇಷ ವಸ್ತುಗಳ ಅಗತ್ಯವಿಲ್ಲ. ಗಜ್ಜುಗ ಅಥವಾ ನಯವಾದ ಕಲ್ಲುಗಳನ್ನು ಉಪಯೋಗಿಸಿ ಎಲ್ಲೆಂದರಲ್ಲಿ ಕುಳಿತು ಆಡಬಹುದಾದ ಆಟ ಎತ್ತುಗಲ್ಲು.
ಐದು ಕಲ್ಲು ಅಥವಾ ಗಜ್ಜುಗಗಳನ್ನು ಉಪಯೋಗಿಸಿ ಅವುಗಳನ್ನು ಬೇರೆ ಬೇರೆ ಸಂಖ್ಯೆಗಳ ಕಾಂಬಿನೇಶನ್ ನಲ್ಲಿ ಮೇಲೆ ಹಾರಿಸಿ ಕೆಳಗೆ ಬರುವಾಗ ನೆಲಕ್ಕೆ ಬೀಳದಂತೆ ಹಿಡಿಯುವ ಆಟ ಎತ್ತುಗಲ್ಲು. ಕಲ್ಲುಗಳನ್ನು ಉಪಯೋಗಿಸಿ ಆಡಿದರೆ ಬೆರಳುಗಳು ಗಟ್ಟಿಯಾಗಬಹುದಾದ ಕಾರಣ ಗಜ್ಜುಗಗಳನ್ನು ಬಳಸುವುದು ಒಳ್ಳೆಯದು.
ಬೂದು ಬಣ್ಣದ ನಯವಾದ ಹಾಗೂ ಹಗುರವಾದ ಬೀಜ ಗಜ್ಜುಗ. ಮುಳ್ಳಿನ ಹೊರತೊಗಟೆಯ ಕಾಯಿಯೊಳಗೆ ಇರುವ ಎರಡು ಮೂರು ಬೀಜಗಳೇ ಗಜ್ಜುಗ. ಅವು ಔಷಧೀಯ ಗುಣವನ್ನೂ ಹೊಂದಿವೆ. ನಮಗೆಲ್ಲ ಮಾತ್ರ ಅವು ಆಟವಾಡಲು ಬಳಸುವ ಕಾಯಿಗಳಷ್ಟೇ! ಚಿಕ್ಕವರಿದ್ದಾಗ ಯಾರ ಬಳಿ ಹೆಚ್ಚು ಗಜ್ಜುಗಗಳು ಇರುತ್ತಿದ್ದವೋ ಅವರು ಎಲ್ಲರಿಗಿಂತ ದೊಡ್ಡ ಜನ ಎಂದು ನಾವು ಪರಿಗಣಿಸುತ್ತಿತ್ತು. ಗೋಲಿ, ಗಜ್ಜುಗ, ಹುಣಿಸೆಬೀಜಗಳ ಸಂಖ್ಯೆಯ ಮೇಲೆ ನಮ್ಮ ನಮ್ಮ ಸ್ನೇಹಿತರ ಬೆಲೆ ಹೆಚ್ಚು ಕಡಿಮೆ ಆಗುತ್ತಿತ್ತು. ಗಜ್ಜುಗದ ಇನ್ನೊಂದು ವಿಶೇಷವೇನೆಂದರೆ ಯಾರನ್ನಾದರು ಗೋಳು ಹೊಯ್ಕೋ ಬೇಕೆಂದರೆ ಗಜ್ಜುಗವನ್ನು ಕಲ್ಲಿಗೆ ತಿಕ್ಕಿ ಅವರ ಮೈಯ್ಯ ಯಾವುದಾದರೂ ಭಾಗಕ್ಕೆ ಇಡುತ್ತಿತ್ತು. ಆಗ ಆ ಜಾಗ ಸ್ವಲ್ಪ ಸುಡುತ್ತಿತ್ತು. ಹಾಗೆ ಸುಡಿಸಿಕೊಂಡವರು ನಾಲ್ಕೈದು ದಿವಸಗಳ ಕಾಲ ನಮ್ಮ ಹತ್ತಿರ ಮಾತನಾಡುತ್ತಿರಲಿಲ್ಲ. ನಾವೂ ಕೂಡಾ ಬೇರೆಯವರ ಹತ್ತಿರ ಸುಡಿಸಿಕೊಂಡವರೇ!?

ನಾನು ದೊಡ್ಡವಳಾದ ಮೇಲೂ ಎಷ್ಟೋ ಕಾಲ ಗಜ್ಜುಗ, ಗುಲಗುಂಜಿ, ಚನ್ನೆಕಾಯಿಗಳು ನನ್ನ ದಾಸ್ತಾನಿನಲ್ಲಿ ಇದ್ದವು. ಕಾಲಕ್ರಮೇಣ ಬದುಕಿನ ಧಾವಂತದಲ್ಲಿ ಅವುಗಳು ನನ್ನ ನೆನಪಿನಿಂದ ಮರೆಯಾದವು. ಈಗ ಎಲ್ಲವನ್ನೂ ಒಮ್ಮೆ ಹಿಂದಿರುಗಿ ನೋಡಿ ನೆನಪಿಸಿಕೊಳ್ಳುವಾಗ ಎಲ್ಲವೂ ಒಂದೊಂದಾಗಿ ಮೇಲೆದ್ದು ಪುಟಿಯುತ್ತವೆ. ಆದರೆ ಅವುಗಳನ್ನು ಹೊಂದುವ, ಆಡುವ ಉತ್ಸಾಹ ಮಾತ್ರ ಈಗ ಇಲ್ಲದಾಗಿದೆ ಎಂದರೆ ತಪ್ಪಿಲ್ಲ. ಕಳೆದುಕೊಂಡ ಆ ಉತ್ಸಾಹವನ್ನು ಪಡೆದುಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ!?


174. ಸಿನೆಮಾ - ಉಸ್ತಾದ್ ಹೋಟೆಲ್ 


ನಿನ್ನೆ ಸಂಜೆ ದುಲ್ಕರ್ ಸಲ್ಮಾನ್, ನಿತ್ಯಾ ಮೆನನ್, ತಿಲಕನ್ ನಟಿಸಿದ 2012ರಲ್ಲಿ ತಯಾರಾದ "ಉಸ್ತಾದ್ ಹೋಟೆಲ್" ಎಂಬ ಮಲಯಾಳಂ ಸಿನೆಮಾ ನೋಡಿದೆ. ಸಿನೆಮಾದ ಕೊನೆಯ ಭಾಗ ಹಾಗೂ ಸಿನೆಮಾದ ಕಥೆಯ ಎಳೆ ತೆಗೆದುಕೊಂಡು ಹೋದ ರೀತಿ, ನಟನೆ ಬಹಳ ಇಷ್ಟವಾಯಿತು. ಫೈವ್ ಸ್ಟಾರ್ ಹೋಟೆಲ್ ನಲ್ಲಿ ಮುಖ್ಯ ಅಡುಗೆಯವನಾಗಬೇಕೆಂಬ ಕನಸು ಹೊತ್ತ ಮೊಮ್ಮಗನಿಗೆ ಅಡುಗೆ ಮಾಡುವುದೆಂದರೇನು, ಅದರಲ್ಲಿ ಮಸಾಲೆಗೆ ಹೊರತಾಗಿ ಏನೇನು ಇರಬೇಕು, ಅಡುಗೆ ಬಡಿಸುವಾಗ ಯಾವ ಮನಸ್ಥಿತಿ ಇರಬೇಕು ಎನ್ನುವ ಜೀವನ ಪಾಠವನ್ನು ಪುಟ್ಟ ಹೋಟೆಲ್ ನಡೆಸುವ ಅಜ್ಜ ಕಲಿಸುವುದೇ ಇಡೀ ಸಿನೆಮಾದ ಕಥೆ.
ನನಗೆ ಯಾವಾಗಲೂ ಎಲ್ಲಿಗೆ ಹೋದರೂ ಅಂತಹ ಪುಟ್ಟ ಪುಟ್ಟ ಹೋಟೆಲುಗಳಿಗೆ ಹೋಗುವುದೆಂದರೆ ಇಷ್ಟ. ಅಂತಹ ಹೋಟೆಲುಗಳಲ್ಲಿ ಆಹಾರ ಪೂರೈಕೆ ಕೇವಲ ಒಂದು ಬಿಸಿನೆಸ್ ಆಗಿರದೆ ಪ್ರೀತಿಯ ಕಾಯಕವಾಗಿರುತ್ತದೆ. ಅಂತಹ ಹೋಟೆಲುಗಳಲ್ಲಿ ಮನುಷ್ಯ ಮನುಷ್ಯರ ನಡುವಣ ಸಂಬಂಧ ಬೆಸೆದುಕೊಳ್ಳುತ್ತದೆ. ನಾವು ಅವರಿಗೆ ಕೇವಲ ಒಬ್ಬ ಕಸ್ಟಮರ್ ಆಗಿರದೇ ಹಸಿದು ಬಂದ ಯಾತ್ರಿಗಳಾಗಿರುತ್ತೇವೆ.
ಒಮ್ಮೆ ನಾನು ನನ್ನ ಮಗಳು ಕಾರಿನಲ್ಲಿ ಬೆಂಗಳೂರಿಗೆ ಹೋಗುವಾಗ ತಿಪಟೂರಿನ ಮುಂದೆಲ್ಲೋ ಒಂದು ದೊಡ್ಡ ಮರದ ಕೆಳಗೆ ಇದ್ದ ಟೀ ಅಂಗಡಿಯಲ್ಲಿ ಟೀ ಕುಡಿದೆವು. ಸುಮಾರು ಅರವತ್ತೈದರ ಆಸುಪಾಸಿನ ವ್ಯಕ್ತಿಯೊಬ್ಬರು ಒಳ್ಳೆಯ ಟೀ ಮಾಡಿಕೊಟ್ಟರು. ತದನಂತರದಲ್ಲಿ ಮಾತನಾಡುತ್ತಾ ಬೆಂಗಳೂರಿನಲ್ಲಿ ಒಳ್ಳೆಯ ಕೆಲಸದಲ್ಲಿರುವ ಅವರ ಮಗಳಿಗೆ 'ಗಂಡು ಹುಡುಕಿ ಕೊಡಿ' ಎಂದು ಕೇಳಿದರು. ನಾನ್ಯಾರೆಂದು ಅವರಿಗೆ ಗೊತ್ತಿರಲಿಲ್ಲ. ಅವರ ಮಗಳಿಗೆ ಮದುವೆ ಮಾಡಬೇಕಾಗಿದ್ದ ಅವರ ತಲೆಬಿಸಿಯನ್ನು ಹೇಳಿಕೊಂಡಾಗ ಕೇಳುವ ವ್ಯಕ್ತಿಯೊಬ್ಬರು ಅವರಿಗೆ ಬೇಕಿತ್ತು. ನಾನು ಆ ಕೆಲಸವನ್ನು ನಿರ್ವಹಿಸೆದನಷ್ಟೇ! ಇದು ಗೂಡು ಹೋಟೆಲುಗಳಲ್ಲಿ ಕಾಣುವ ಮಾನವೀಯ ಸಂಬಂಧಗಳ ಎಳೆ!

ಉಸ್ತಾದ್ ಹೋಟೆಲ್ ಸಿನೆಮಾದಲ್ಲಿ ಆ ಅಜ್ಜ ಹೋಟೆಲನ್ನು ಒಂದು ವ್ಯಾಪಾರ ಎಂದು ಪರಿಗಣಿಸದೆ ಮನುಷ್ಯ ಸಂಬಂಧಗಳನ್ನು ಬೆಸೆಯುವ ಕೆಲಸವಾಗಿ ಪರಿಗಣಿಸಿರುತ್ತಾನೆ. ಊಟದ/ಖಾದ್ಯದ ವಿಶೇಷ ರುಚಿಗೆ ಅಗತ್ಯವಿರುವ ಪ್ರೀತಿ ಎನ್ನುವ ಮಸಾಲೆಯ ಬಗ್ಗೆ ಮೊಮ್ಮಗನಿಗೆ ಅರಿವು ಮೂಡಿಸುತ್ತಾನೆ. ಹಸಿದವರಿಗೆ ಆಹಾರದ ಅಗತ್ಯವಿರುವ ಚಿತ್ರಣ ಮೊಮ್ಮಗನಿಗೆ ಸಿಗುವ ಹಾಗೆ ಮಾಡುತ್ತಾನೆ. ಅಂತಹ ಕೆಲಸದಿಂದ ಸಿಗುವ ಕೃತಾರ್ಥ ಭಾವದ ಅನುಭವ ಸಿಗುವ ಹಾಗೆ ಮಾಡುತ್ತಾನೆ. ಕೆಲಸದಲ್ಲಿ ಇರಬೇಕಾದ ಶೃದ್ಧೆಯ ಪ್ರಾಮುಖ್ಯತೆಯನ್ನು ತಿಳಿಯುವಂತೆ ಮಾಡುತ್ತಾನೆ. ಯಾವುದೇ ಕೆಲಸವನ್ನು ಮೇಲುಕೀಳೆಂದು ಪರಿಗಣಿಸದೆ ಎಲ್ಲಾ ರೀತಿಯ ಕೆಲಸಗಳನ್ನು ಅರಿತು ಮಾಡಬೇಕಾದ ಅಗತ್ಯತೆಯ ಅರಿವು ಮೂಡಿಸುತ್ತಾನೆ. ಹಾಗೆಯೇ ಯಾವುದಕ್ಕೂ ಅಂಟಿಕೊಳ್ಳದೆ "ಕಾಯಾ ವಾಚಾ ಮನಸಾ" ಎನ್ನುವ ಮನೋವೃತ್ತಿಯಿಂದ ಕೆಲಸವನ್ನು ಮಾಡಬೇಕೆನ್ನುವುದಕ್ಕೆ ತಾನೇ ಉದಾಹರಣೆಯಾಗುತ್ತಾನೆ. ಇಡೀ ಸಿನೆಮಾದಲ್ಲಿ ಸ್ಪಂದಿಸುವ ಮನಸ್ಥಿತಿಯನ್ನು ಕಟ್ಟುವ ಪ್ರಯತ್ನವಿದೆ. ಒಂದು ರೀತಿಯಲ್ಲಿ ಮನಸ್ಸಿನಾಳವನ್ನು ಕಲಕುವ ಸಿನೆಮಾವದು!


173. ನೆನಪುಗಳು - ಅನುಭವ 


1989ರಲ್ಲಿ ಬಾಳೆಹೊನ್ನೂರಿನ ನವೋದಯ ಸೇರಿದ ನಾನು 1991ರಲ್ಲಿ ಗಾಜನೂರಿನ ನವೋದಯಕ್ಕೆ ವರ್ಗಾವಣೆ ಪಡೆದು ಬಂದೆ. ಅದು ನವೋದಯದ ಪ್ರಾರಂಭದ ವರ್ಷಗಳಾದ ಕಾರಣ ಎಲ್ಲೂ ಉಳಿಕೆಯ ವ್ಯವಸ್ಥೆಯಾಗಲಿ ಅಥವಾ ಇನ್ನುಳಿದ ವ್ಯವಸ್ಥೆಗಳಾಗಲಿ ತೃಪ್ತಿಕರವಾಗಿರಲಿಲ್ಲ. ಬಾಳೆಹೊನ್ನೂರಿನಲ್ಲಾಗಿದ್ದರೆ ಕ್ಯಾಂಪಸ್ಸಿನಲ್ಲಿಯೇ ಉಳಿಯುತ್ತಿದ್ದದ್ದು. ಆದರೆ ಗಾಜನೂರಿನಲ್ಲಿ ನಾವೊಂದಿಷ್ಟು ಟೀಚರ್ಸ್ ವಿದ್ಯಾಪೀಠದಲ್ಲಿ ಉಳಿಯುತ್ತಿದ್ದೆವು. ಅಲ್ಲಿಂದ ನವೋದಯದ ಕ್ಯಾಂಪಸ್ಸಿಗೆ ಒಂದು ಕಿಮೀ ಗಿಂತಲೂ ದೂರ ನಡೆಯಬೇಕಿತ್ತು.
ವಿದ್ಯಾಪೀಠದಲ್ಲಿ ಮೇಲೆ ಹೆಂಚಿನ ಮಾಡು ಕೆಳಗೆ ಸಿಮೆಂಟ್ ನೆಲವಿದ್ದ ಹಾಲಿನಲ್ಲಿ ಬಾಗಿಲು, ಕಿಟಕಿಗಳು ಈಗಲೋ ಆಗಲೋ ಉದುರಿ ಹೋಗುವ ಸ್ಥಿತಿಯಲ್ಲಿದ್ದ ಕಟ್ಟಡದಲ್ಲಿ ನನ್ನಂತೆಯೇ ಕೆಲವು ಟೀಚರ್ಸ್ ಗಳ ಉಳಿಕೆ. ಕಟ್ಟಡದಿಂದ ಸ್ವಲ್ಪ ದೂರದಲ್ಲಿದ್ದ ಕಾಮನ್ ಬಾತ್ ರೂಂ ಹಾಗೂ ಯಾವಾಗಲೂ ಉಕ್ಕಿ ಹರಿಯುತ್ತಿದ್ದ ಟಾಯಿಲೆಟ್ ಗಳು. ನೀರನ್ನು ಸುಮಾರು ದೂರದಲ್ಲಿದ್ದ ಛಾನೆಲ್ ನಿಂದ ತರಬೇಕಿತ್ತು. ಯಾವುದೇ ಸೌಲಭ್ಯಗಳಿಲ್ಲದ ಅಲ್ಲಿನ ಬದುಕು ಮುಖ್ಯವಾಗಿ ಟಾಯಿಲೆಟ್ ಗಳು ಒಂದು ರೀತಿಯಲ್ಲಿ ನರಕ ಸದೃಶವಾಗಿತ್ತು.
ನನ್ನ ಸಹಶಿಕ್ಷಕರೋರ್ವರು ಕೊಟ್ಟ ಒಂದು ಬಿದಿರಿನ ಮಂಚದಿಂದಾಗಿ ನನ್ನ ಮಲಗುವಿಕೆಯ ಸಮಸ್ಯೆ ಪರಿಹಾರವಾಗಿತ್ತು. ಇಲ್ಲವಾದಲ್ಲಿ ಯಾವಾಗಲೂ ನೀರು ಚಿಮ್ಮುತ್ತಿದ್ದ ನೆಲದ ಮೇಲೆ ಹಾಸಿಗೆ ಹಾಕಿಕೊಂಡು ಮಲಗಬೇಕಿತ್ತು. ರಾತ್ರಿ ಮಲಗಿ ಕಣ್ಣಿಗೆ ನಿದ್ರೆ ಹಿಡಿಯುವಾಗ ಮೈಮೇಲೆಲ್ಲಾ ಏನೋ ಹರಿದಾಡಿದ ಹಾಗಾಗುತ್ತಿತ್ತು. ಕಣ್ಣು ತೆರೆಯಲು ಹೆದರಿಕೆ. ಒಂದು ದಿನ ಧೈರ್ಯವಾಗಿ ಕಣ್ಣು ತೆರೆದು ನೋಡಿದರೆ ಮೈಮೇಲೆಲ್ಲಾ ಮೂಗಿಲಿಗಳ ಓಡಾಟ ಕಂಡಿತು. ಹೀಗೆ ಅಲ್ಲಿರುವಷ್ಟು ದಿನವೂ ಆ ಅಭದ್ರತೆಯ ವಾತಾವರಣದಲ್ಲಿ ನೆಮ್ಮದಿಯ ನಿದ್ದೆ ಕಾಣದೆ ಜೀವವನ್ನು ಕೈಯಲ್ಲಿ ಹಿಡಿದು ಕಳೆದದ್ದು ನನ್ನ ಜೀವನದ ಎಂದೂ ಮರೆಯಲಾಗದ ಘಟ್ಟ.

ಹಾಗೆಯೇ ರಾತ್ರಿ ಸ್ಟಡಿ ಡ್ಯೂಟಿ ಇದ್ದಾಗ ಆನೆ, ಕಾಡುಕೋಣ ಹಾಗೂ ಇನ್ನಿತರ ಕಾಡುಪ್ರಾಣಿಗಳು ಯಥೇಚ್ಛವಾಗಿದ್ದ ದಾರಿದೀಪವಿಲ್ಲದ ಕಾಡು ದಾರಿಯಲ್ಲಿ ನಡೆದುಕೊಂಡು ಹೋಗಿ ಡ್ಯೂಟಿ ಮಾಡಿ ಬರಬೇಕಿತ್ತು. ನಾವು ಕ್ಯಾಂಪಸ್ಸಿನಿಂದ ದೂರವಿದ್ದೇವೆ ಎಂದು ನಮಗೆ ಡ್ಯೂಟಿಗಳೇನು ಕಡಿಮೆ ಆಗುತ್ತಿರಲಿಲ್ಲ. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದಿದ್ದ ನನಗೆ ನವೋದಯದ ಪ್ರಾರಂಭಿಕ ವರ್ಷಗಳ ಜೀವನ ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಬದುಕುವುದನ್ನು ಕಲಿಸಿತು. ಆ ಎಲ್ಲಾ ಅನುಭವಗಳು ನನ್ನನ್ನು ಗಟ್ಟಿಗೊಳಿಸಿದವು. ಬಂದ ಕಷ್ಟಗಳನ್ನು/ಸವಾಲುಗಳನ್ನು ಎದುರಿಸಿ ಬದುಕಿದರೆ ನಮ್ಮ ವ್ಯಕ್ತಿತ್ವ ಸದೃಢವಾಗಿ ರೂಪುಗೊಳ್ಳುತ್ತದೆ ಎನ್ನುವುದು ನಾನು ನನ್ನ ಬದುಕಿನಲ್ಲಿ ಕಂಡುಕೊಂಡ ಸತ್ಯ!


172. ನೆನಪುಗಳು - ಅಜ್ಜಯ್ಯನ ಮನೆ ಕುತ್ತಟ್ಟ (Storage space)


ಅಜ್ಜಯ್ಯನ ಮನೆಯ ವಿಶೇಷತೆಯೆಂದರೆ ಅಲ್ಲಲ್ಲಿ ಇರುವ ಸ್ಟೋರೇಜ್ ಸ್ಪೇಸ್. ಅಚ್ಚ ಕನ್ನಡದಲ್ಲಿ ಹೇಳುವುದಾದರೆ ಅಟ್ಟಗಳು. ನಮ್ಮ ಪಡಸಾಲೆಯ ಬಲಪಕ್ಕದಲ್ಲಿರುವ ಸ್ಟೋರ್ ರೂಮಿನ ಒಳಗಡೆಯೊಂದು ಪುಟಾಣಿ ಅಕ್ಕಿಕೋಣೆಯಿದೆ. ಹಾಗೆಯೇ ಜಗುಲಿಯ ಬಲಪಕ್ಕದಲ್ಲಿನ ಉಪ್ಪರಿಗೆ ಮೆಟ್ಟಿಲುಗಳ ಕೆಳಗೊಂದು ಚಿಮಣಿ ಎಣ್ಣೆ ಇಡುವ ಇನ್ನೊಂದು ಸಣ್ಣ ಸ್ಟೋರೇಜ್ ಜಾಗವಿದೆ. ಎಲ್ಲಕ್ಕಿಂತ ದೊಡ್ಡದಿರುವುದು ಹಾಗೂ ವಿಶಾಲವಾಗಿರುವುದು ಉಪ್ಪರಿಗೆಯ ಮೆಟ್ಟಿಲು ಹತ್ತುವಾಗ ಸುಮಾರು ಏಳನೇ ಮೆಟ್ಟಿಲ ಹತ್ತಿರ ಎಡ ಭಾಗದಲ್ಲಿರುವ ಕುತ್ತಟ್ಟ.
ಆ ಹೆಸರೇ ಒಂದು ರೀತಿಯ ಕುತೂಹಲ ಹುಟ್ಟಿಸುವಂತಹುದು. ಅದಕ್ಕೆ ಏಕೆ ಕುತ್ತಟ್ಟ ಅಂತ ಕರೆಯುತ್ತಾರೆಂದು ನಮಗ್ಯಾರಿಗೂ ಗೊತ್ತಿಲ್ಲ.
ಆ ಕುತ್ತಟ್ಟ ಸುಮಾರು ಮುವ್ವತ್ತು ಅಡಿ ಉದ್ದ ಹಾಗೂ ಎಂಟ್ಹತ್ತು ಅಡಿ ಅಗಲವಿರುವ ಉಪ್ಪರಿಗೆಯ ಕೋಣೆಯ ಮಾಡು ಇಳಿದಿರುವ ಕಡೆಯಲ್ಲಿರುವ ಅಟ್ಟ.‌ ಮೆಟ್ಟಿಲಿನಿಂದ ಆ ಕುತ್ತಟ್ಟದ ಒಳಗೆ ಹೋಗುವುದು ನನ್ನಂತಹ ದೊಡ್ಡ ಜೀವದವರಿಗೆ ಕಷ್ಟ. ಏಕೆಂದರೆ ಅದನ್ನು ಪ್ರವೇಶಿಸುವ ದ್ವಾರ ಓಬವ್ವನ ಕಿಂಡಿಯ ಹಾಗಿದೆ😁 ಒಳಗೆ ಹೋದ ಮೇಲೆ ನೆಟ್ಟಗೆ ನಿಂತರೆ ಮಾಡು ತಲೆಗೆ ಹೊಡೆಯುತ್ತದೆ. ಹೀಗಾಗಿ ನೆಟ್ಟಗೆ ನಿಲ್ಲುವ ಪ್ರಮೇಯವೇ ಇಲ್ಲ. ನಮ್ಮ ಮನೆಯ ಹಿತ್ತಾಳೆಯ ಪಾತ್ರೆ ಪರಡಿ, ಬೇಡದ ವಸ್ತುಗಳು, ಹಿಡಿಸುಡಿ.... ಇನ್ನೂ ಹಳೆಯಪಳೆಯ ವಸ್ತುಗಳನ್ನು ದಾಸ್ತಾನು ಮಾಡುವ ಜಾಗ ಆ ಕುತ್ತಟ್ಟ. ಹಳೆಯ ವಸ್ತುಗಳನ್ನು ಪರಿಶೋಧಿಸಬೇಕೆಂದರೆ ನಾವು ದಾಳಿ ಮಾಡಬಹುದಾದ ಸ್ಥಳ ಆ ಕುತ್ತಟ್ಟ.
ನಾವು ಚಿಕ್ಕವರಿದ್ದಾಗ ಕಣ್ಣಾಮುಚ್ಚಾಲೆ ಆಟವಾಡುವಾಗ ಅಡಗಿಸಿಕೊಳ್ಳಲು ಉತ್ತಮವಾದ ಜಾಗ ಆ ಕುತ್ತಟ್ಟವಾಗಿತ್ತು. ಆ ಕುತ್ತಟ್ಟದಿಂದ ಹೊರ ಬರುವಾಗ ನಮ್ಮೆಲ್ಲರ ಮೈಮುಖ ಸಾಲ್ಯದ ಬಲೆಯಿಂದ ಆವೃತವಾಗಿರುತ್ತಿತ್ತು. ನಮಗೆ ಅದರ ಬಗೆಗೆಲ್ಲ ತಲೆಬಿಸಿಯೇ ಇರುತ್ತಿರಲಿಲ್ಲ. ಮೈಮುಖಕ್ಕೆ ಹತ್ತಿದ ಬಲೆ ಒರೆಸಿಕೊಂಡು ನಾವು ಪುನಃ ಆಟಕ್ಕೆ ರೆಡಿಯಾಗುತ್ತಿತ್ತು. ನನ್ನಪ್ಪ ಹಳೆಯ ಕಸ್ತೂರಿ ಪುಸ್ತಕಗಳನ್ನು ಹೊಲಿದು ಬಂಡಲ್ ಕಟ್ಟಿ ಕುತ್ತಟ್ಟದಲ್ಲಿ ಇರಿಸಿರುತ್ತಿದ್ದರು. ಆ ಪುಸ್ತಕಗಳನ್ನು ತೆಗೆದುಕೊಳ್ಳಲು ನಾವು ಕುತ್ತಟ್ಟಕ್ಕೆ ನುಗ್ಗುತ್ತಿತ್ತು. ಆ ಕುತ್ತಟ್ಟ ಎಲ್ಲಾ ರೀತಿಯ ವಸ್ತುಗಳಿಗೆ ಆಸರೆ ನೀಡಿ ವಿವಿಧ ವಸ್ತುಗಳ ಭಂಡಾರವೇ ಆಗಿತ್ತು. ಹೀಗಾಗಿ ನಮಗೆಲ್ಲಾ ಆ ಕುತ್ತಟ್ಟ ಬರೀ ಒಂದು ಅಟ್ಟವಾಗಿರದೆ ಅಲ್ಲಾವುದ್ದೀನನ ಅದ್ಭುತ ದೀಪದ ಹಾಗೆ ಕಾಣುತ್ತಿತ್ತು. ಏಕೆಂದರೆ ನಮಗೆ ಬೇಕಾಗಿರುವ ವಸ್ತುಗಳೆಲ್ಲ ಅಲ್ಲಿ ಸಿಗುತ್ತಿದ್ದವು.

ಈಗ ಕುತ್ತಟ್ಟದಲ್ಲಿ ಹಳೆಯ ಸಾಮಾನುಗಳೆಲ್ಲ ಇಲ್ಲವಾಗಿ ರಟ್ಟಿನ ಡಬ್ಬಗಳೇ ಹೆಚ್ಚಾಗಿ ಕಾಣಸಿಗುತ್ತವೆ. ನಮ್ಮೆಲ್ಲರ ಜೀವನ ಕ್ರಮದ ಬದಲಾವಣೆ ಎನ್ನುವುದು ಕುತ್ತಟ್ಟದಲ್ಲಿ ಸೇರಿಸಿಡುವ ವಸ್ತುಗಳಲ್ಲೂ ಬದಲಾವಣೆ ತಂದಿದೆ. ಆದರೆ ಈಗಲೂ ಕೂಡ ಆ ಕುತ್ತಟ್ಟ ನಮ್ಮೆಲ್ಲರ " ಸೆಂಟರ್ ಆಫ್ ಅಟ್ರಾಕ್ಷನ್" ಆಗಿಯೇ ಉಳಿದಿರುವುದು ಕುತ್ತಟ್ಟದ ಗಟ್ಟಿತನದ ಪ್ರತೀಕ ಎಂದರೆ ಉತ್ಪ್ರೇಕ್ಷೆಯಾಗದೇನೋ?!


171. ನೆನಪುಗಳು - ಉಪ್ಪರಿಗೆ ಮೆಟ್ಟಿಲುಗಳು 


ಅಜ್ಜಯ್ಯನ ಮನೆಯ ಉಪ್ಪರಿಗೆಗೆ ಹೋಗುವ ಮೆಟ್ಟಿಲುಗಳು ನಮಗೆ ಬರೀ ಮೆಟ್ಟಿಲುಗಳಲ್ಲ. ಸುಮಾರು ಹದಿನೈದು ಮೆಟ್ಟಿಲುಗಳಿರುವ ಆ ದಾರಿ ಬರೀ ಉಪ್ಪರಿಗೆಗೆ ಹೋಗುವ ರಹದಾರಿಯಲ್ಲ. ಅವುಗಳು ನಮ್ಮೆಲ್ಲರ ಪಾಲಿಗೆ ಮೆಟ್ಟಿಲುಗಳಿಗಿಂತ ಹೆಚ್ಚಿನದಾಗಿವೆ!
ಸುಮಾರು ಎರಡೂವರೆ ಅಡಿ ಅಗಲವಿರುವ ಆ ಮೆಟ್ಟಿಲಿನ ಪ್ರಾರಂಭಿಕ ಐದು ಮೆಟ್ಟಿಲುಗಳು ನಮಗೆಲ್ಲ ಕೂರುವ ಪಾವಟಿಗೆಗಳು. ಮನೆಯಲ್ಲಿ ನಾವೆಲ್ಲರೂ ಸೇರಿದಾಗ ಬುಡದ ಆ ಮೆಟ್ಟಿಲುಗಳಲ್ಲಿ ಒಬ್ಬರಿಗೊಬ್ಬರು ಅಂಟಿಕೊಂಡು ಕೂರುವುದೇ ಚೆಂದ. ಅದರಲ್ಲಿ ಹಾಗೆ ಕುಳಿತು ಬಹಳಷ್ಟು ಫೋಟೊಗಳನ್ನು ಕೂಡಾ ತೆಗೆದು ಆನಂದಿಸಿದ್ದಿದೆ.
ನಾನು ಚಿಕ್ಕವಳಿದ್ದಾಗ ಆ ಮೆಟ್ಟಿಲಿನ ಆಚೀಚೆ ಗೋಡೆಗಳಿಗೆ ಕಾಲೊತ್ತಿಕೊಂಡು ಸರ್ಕಸ್ ಮಾಡುತ್ತಾ ಉಪ್ಪರಿಗೆಗೆ ಹೋಗುತ್ತಿದ್ದದ್ದೇ ಜಾಸ್ತಿ. ಸಾಬೀತಿನಲ್ಲಿ ಮೆಟ್ಟಿಲುಗಳನ್ನು ಹತ್ತಿಕೊಂಡು ಮೇಲೆ ಹೋಗುತ್ತಿದ್ದದ್ದು ಕಡಿಮೆ. ಆ ರೀತಿ ಸರ್ಕಸ್ ಮಾಡುತ್ತಿದ್ದದ್ದು ಒಂದು ರೀತಿಯ ಥ್ರಿಲ್ ಕೊಡುತ್ತಿತ್ತು. ಆ ರೀತಿ ಧೈರ್ಯವಾಗಿ ಸರ್ಕಸ್ ಮಾಡಲು ಕಾರಣ ಆ ಮೆಟ್ಟಿಲುಗಳು ಯಾವಾಗಲೂ ಕೊಡುತ್ತಿದ್ದ ಸೇಫ್ ಫೀಲಿಂಗ್ಸ್ .
ಆ ಮೆಟ್ಟಿಲುಗಳಿಗೆ ಲೈಟಿಗಾಗಿ ಟೂ ವೇ ಸ್ವಿಚ್ ಇದೆ. ಕೆಳಗಿನ ಹಾಲಿನಲ್ಲಿ ಮೆಟ್ಟಿಲುಗಳಿಗೆದುರಾಗಿ ಇಟ್ಟಿರುವ ಖುರ್ಚಿಯಲ್ಲಿ ಕುಳಿತು ಲೈಟಿನ ಬೆಳಕಿನಲ್ಲಿ ಆ ಮೆಟ್ಟಿಲುಗಳಲ್ಲಿ ಯಾರಾದರೂ ಹತ್ತಿ ಇಳಿಯುವುದನ್ನು ನೋಡುವುದೇ ಚೆಂದ. ಲೈಟ್ ಹಾಕಿದಾಗ ಆ ಮೆಟ್ಟಿಲುಗಳಿಗೆ ಒಂದು ರೀತಿಯ ಡೆಪ್ತ್ ಸಿಗುತ್ತದೆ.
ಹೆಚ್ಚಿನ ಹಳೆಯ ಮನೆಗಳಲ್ಲಿ ಮನೆಯ ಮೂಲೆಯಲ್ಲೆಲ್ಲೋ ಉಪ್ಪರಿಗೆಗೆ ಹೋಗುವ ಮೆಟ್ಟಿಲುಗಳು ಇರುತ್ತವೆ. ಆದರೆ ನಮ್ಮ ಅಜ್ಜಯ್ಯನ ಮನೆಯಲ್ಲಿ ಹಾಲಿಗೆದುರಾಗಿಯೇ ಆ ಮೆಟ್ಟಿಲುಗಳಿರುವುದು ಏರುವಿಕೆಗೆ ಹೊಸ ಅರ್ಥವನ್ನು ಕೊಟ್ಟಂತಿದೆ. ಮನೆಗೆ ಬಂದ ಪುಟ್ಟ ಮಕ್ಕಳಿಗಂತೂ ಅದೊಂದು ಒಳ್ಳೆಯ ಆಟದ ಜಾಗವಾಗಿ ಕಾಣುತ್ತದೆ. ಆ ಮೆಟ್ಟಿಲುಗಳನ್ನು ಹತ್ತಿಳಿಯುವ ಅವರ ಸಂಭ್ರಮ ನೋಡಿ ಆನಂದಿಸುವಂತಿರುತ್ತದೆ.
ಆ ಮೆಟ್ಟಿಲುಗಳನ್ನು ಏರುತ್ತಿರುವಂತೆ ಎಡ ಪಕ್ಕದಲ್ಲಿ ಒಂದು ಕುತ್ತಟ್ಟವಿದೆ. ಅದಕ್ಕೆ ಅದರದೇ ಆದ ವೈಶಿಷ್ಟ್ಯತೆಯಿದೆ. ಹದಿನೈದು ಮೆಟ್ಟಿಲುಗಳನ್ನು ಪೂರ್ತಿ ಏರಿದ ಮೇಲೆ ಎಡಬಲದಲ್ಲೆರಡೂ ಕಡೆ ಎರಡು ಕೋಣೆಗಳಿವೆ. ಮೇಲೇರುತ್ತಿದ್ದಂತೆ ಮೆಟ್ಟಿಲುಗಳ ಎದುರಿಗೆ ಒಂದು ವಿಶಾಲವಾದ ಟಾಯಿಲೆಟ್ ಕಂ ಬಾತ್ ರೂಂ ಇದೆ. ಮೇಲಿರುವ ಎರಡೂ ಕೋಣೆಗಳು ಮರದ ಮುಚ್ಚಿಗೆಯ ಕೋಣೆಗಳು. ಪುಟ್ಟ ಪುಟ್ಟ ಮರದ ಕಿಟಕಿಗಳಿರುವ ವಿಶಾಲವಾದ ಕೋಣೆಗಳವು.

ನಮಗೆಲ್ಲ ಉಪ್ಪರಿಗೆಗೆ ಹೋಗುವ ಆ ಮೆಟ್ಟಿಲುಗಳ ಬಗ್ಗೆ ಒಂದು ರೀತಿಯ ಆಪ್ತ ಭಾವನೆಯಿದೆ. ನಮ್ಮ ಮನೆಯ ಎಷ್ಟೆಷ್ಟೋ ಖುಷಿಯ/ಒತ್ತಡದ ಘಟನೆಗಳಿಗೆ ಆ ಮೆಟ್ಟಿಲುಗಳು ಸಾಕ್ಷಿಯಾಗಿವೆ. ಸಿಮೆಂಟಿನ ಆ ಹದಿನೈದು ಮೆಟ್ಟಿಲುಗಳು ಪ್ರತಿನಿತ್ಯ ನಮ್ಮ ಕಾಲ್ತುಳಿತಕ್ಕೆ ಸಿಕ್ಕಿದರೂ ಇನ್ನೂ ತಮ್ಮ ಹೊಳಪನ್ನು ಉಳಿಸಿಕೊಂಡು ತಮ್ಮ ನಿಸ್ಪೃಹ ಸೇವೆ ಕೊಡುತ್ತಿವೆ😌


170. ನೆನಪುಗಳು - ಗಡಿಯಾರ 


ನಮ್ಮ ಮನೆಯಲ್ಲಿ ಇರುವುದು ಒಂದೇ ಒಂದು ಗೋಡೆ ಗಡಿಯಾರ. ಅದೂ ಕನ್ನಡದ ಅಂಕಿಗಳ ಗೋಡೆ ಗಡಿಯಾರ. 1993ರಲ್ಲಿ ಕುಂದಾಪುರದಲ್ಲಿ ನಡೆದ ದಕ್ಷಿಣ ಕನ್ನಡ ಆರನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಖರೀದಿಸಿ ನನ್ನಪ್ಪ ನನಗೆ ತಂದುಕೊಟ್ಟ ಗಡಿಯಾರವದು. ಸುಮಾರು ಇಪ್ಪತ್ತೇಳು ವರ್ಷವಾಯಿತದಕ್ಕೆ. ಇವತ್ತಿನವರೆಗೂ ಯಾವಾಗಲೂ ಸರಿಯಾದ ಸಮಯವನ್ನೇ ತೋರಿಸಿದ ಕ್ರೆಡಿಟ್ ಅನ್ನು ಆ ಗಡಿಯಾರಕ್ಕೆ ಕೊಡಬಹುದು.
ಎಷ್ಟೋ ಜನ ಆ ಗಡಿಯಾರವನ್ನು ಬದಲಿಸಲು ಹೇಳಿದರೂ ನಾನದನ್ನು ಬದಲಾಯಿಸುವ ಮನಸ್ಸು ಮಾಡಿಲ್ಲ. ಅದಕ್ಕೆ ಎರಡು ಕಾರಣಗಳಿವೆ. ಒಂದನೆಯದಾಗಿ ಅದು ನನ್ನ ಅಪ್ಪನಿಂದ ಕೊಡಲ್ಪಟ್ಟಿದ್ದು. ಎರಡನೆಯದಾಗಿ ಅದು ಕನ್ನಡದ ಗಡಿಯಾರ! ಅಷ್ಟಕ್ಕೂ ಮುಖ್ಯವಾಗಿ ಸಮಯವನ್ನು ಸರಿಯಾಗಿ ತೋರಿಸುವ ಕೆಲಸ ಅದು ತಪ್ಪದೇ ಮಾಡುತ್ತಿದೆ. ಇನ್ನೇನು ಕಾರಣ ಬೇಕು ಹೇಳಿ ಅದನ್ನು ಉಳಿಸಿಕೊಳ್ಳಲು!
ಆ ಗಡಿಯಾರ ನನ್ನ ಬದುಕಿನ ಒಳ್ಳೆಯ ಕ್ಷಣಗಳನ್ನು ನೋಡಿದೆ. ಹಾಗೆಯೇ ನನ್ನ ಅತೀ ಒತ್ತಡದ ಕ್ಷಣಗಳನ್ನೂ ವೀಕ್ಷಿಸಿದೆ. ನನ್ನ ಬದುಕಿನ ಏಳುಬೀಳುಗಳ ಮೂಕಸಾಕ್ಷಿಯಾಗಿ ಅದು ನನ್ನೊಂದಿಗಿದೆ. ಬದುಕು ಹೇಗೇ ಸಾಗಲಿ ಸಮಯ ಮಾತ್ರ ತನ್ನ ಪಾಡಿಗೆ ತಾನು ಸಾಗುತ್ತಿರುತ್ತದೆ ಎನ್ನುವುದಕ್ಕೆ ಸೂಕ್ತ ಉದಾಹರಣೆ ಆ ಗಡಿಯಾರ.
ಗಡಿಯಾರ ಅಂದ ತಕ್ಷಣ ಸಾಲಿಕೇರಿಯ ಅಜ್ಜಯ್ಯನ ಮನೆಯಲ್ಲಿದ್ದ ಢಣ್ ಢಣ್ ಎಂದು ಘಂಟೆ ಬಾರಿಸುವ ಗಡಿಯಾರದ ನೆನಪಾಗುತ್ತದೆ. ನಾವೆಲ್ಲ ರಜೆಗೆ ಊರಿಗೆ ಹೋದಾಗ ಓಪನ್ ಜಗಲಿಯಲ್ಲಿ ಮಲಗುತ್ತಿದ್ದ ಕಾರಣ ಬೆಳ್ಳಂಬೆಳಿಗ್ಗೆ ಅಮ್ಮನ ಸುಪ್ರಭಾತದ ಜೊತೆಗೆ ಆ ಗಡಿಯಾರದ ಢಣಗುಟ್ಟುವಿಕೆಯೂ ನಮ್ಮ ನಿದ್ದೆಯನ್ನು ಹಾಳು ಮಾಡುತ್ತಿದ್ದದ್ದೂ ಕೂಡಾ ನೆನಪಾಗುತ್ತದೆ. ಅದಕ್ಕೆ ವಾರಕ್ಕೊಮ್ಮೆ ಕೀ ಕೊಡಬೇಕಿತ್ತು. ಇಲ್ಲದಿದ್ದರೆ ಅದು ಕೆಲಸ ಮಾಡುತ್ತಿರಲಿಲ್ಲ. ಕಾಲಕ್ರಮೇಣ ಅದು ಹಾಳಾಗಿ ಮೂಲೆಗುಂಪಾಯಿತು. ಈಗ ಆ ಜಾಗದಲ್ಲಿ ಅಷ್ಟೇ ದೊಡ್ಡದಾದ ಆದರೆ ಢಣಗುಡದ ಗೋಡೆ ಗಡಿಯಾರವಿದೆ.

ಮಾರುಕಟ್ಟೆಯಲ್ಲಿ ಎಂತಹುದೇ ಗಡಿಯಾರ ಸಿಗಲಿ. ಬೇರೆ ಬೇರೆ ಕಡೆ ಎಂತಹುದೇ ವೈಶಿಷ್ಟ್ಯಪೂರ್ಣ ಗಡಿಯಾರವಿರಲಿ. ನನಗೆ ಮಾತ್ರ ನನ್ನಪ್ಪ ಕೊಟ್ಟ ಕನ್ನಡದ ಗಡಿಯಾರವೇ ಶ್ರೇಷ್ಠ😌


169.ನೆನಪುಗಳು - ತರಕಾರಿ ಕಟ್ಟುವ ಕೋಲು 


ಕಳೆದ ಸಲ ಊರಿಗೆ ಹೋದಾಗ ಜಗಲಿಯಲ್ಲಿದ್ದ ಕಬ್ಬಿಣದ ತೊಟ್ಟಿಲಲ್ಲಿ ಪವಡಿಸಿ ಮನೆಯ ಮುಚ್ಚಿಗೆ ನೋಡುತ್ತಿದ್ದೆ. ಆಗ ಕಣ್ಣಿಗೆ ಬಿದ್ದದ್ದು ಅಲ್ಲಿ ಕಟ್ಟಿದ್ದ ಬಿದಿರು ಕೋಲು. ಈಗ ಉಳಿದಿರುವುದು ಒಂದೇ ಕೋಲಾಗಿದ್ದರೂ ಹಿಂದೆ ಆ ಮುಚ್ಚಿಗೆಯ ಎರಡೂ ಕಡೆ ಉದ್ದಕ್ಕೆ ಬಿದಿರು ಕೋಲುಗಳನ್ನು ಕಟ್ಟಿ ಅದರಲ್ಲಿ ಬಣ್ಣದ ಸೌತೆ, ಬೂದು ಕುಂಬಳಕಾಯಿ, ಕಾಶಿ ಕುಂಬಳಕಾಯಿಗಳನ್ನು ಕಟ್ಟಿ ಇಡುತ್ತಿದ್ದರು. ಆ ತರಕಾರಿಗಳೆಲ್ಲ ಮಳೆಗಾಲದ ಅಡುಗೆಗೆ ಉಪಯೋಗಿಸಲ್ಪಡುತ್ತಿದ್ದವು. ಅವುಗಳೆಲ್ಲ ನಮ್ಮ ಮನೆಯ ಮುಂದಿನ ಗದ್ದೆಯಲ್ಲಿ ಅಜ್ಜಯ್ಯನ ಕೃಷಿಯ ಫಲಶ್ರುತಿ.
ಅಜ್ಜಯ್ಯ ಹೆಚ್ಚಾಗಿ ಸೌತೆ, ಕುಂಬಳ, ಹೀರೆ, ಅಲಸಂದೆ, ಪಡವಲ, ಬೀನ್ಸ್ ಬಳ್ಳಿಗಳನ್ನು ಬೆಳೆಸುತ್ತಿದ್ದರು. ಹಾಗೆಯೇ ಟೊಮೇಟೊ, ಬೆಂಡೆಕಾಯಿಗಳನ್ನು ಬೆಳೆಸುತ್ತಿದ್ದರು. ಅವುಗಳನ್ನು ಸಾಲಿಕೇರಿಯ ರಘುರಾಂ ಪೈಗಳ ಅಂಗಡಿಗೆ ಮಾರುತ್ತಿದ್ದರೂ ಕೂಡಾ. ಮಕ್ಕಳಾಗಿದ್ದ ನಾವೆಲ್ಲಾ ಮಧ್ಯಾಹ್ನ ಅಜ್ಜಯ್ಯ ನಿದ್ರಿಸಿರುವಾಗ ಗದ್ದೆಗೆ ಲಗ್ಗೆ ಇಟ್ಟು ಹಣ್ಣಾದ ಟೊಮೇಟೊ, ಎಳೆ ಅಲಸಂದೆಯನ್ನು ಧ್ವಂಸ ಮಾಡಿ ಬಿಡುತ್ತಿತ್ತು. ಅಲ್ಲದೆ ಇನ್ನೂ ಹಸಿರಾಗಿರುತ್ತಿದ್ದ ಬಣ್ಣದ ಸೌತೆಕಾಯಿಯನ್ನು ಅಡುಗೆ ಮನೆಗೆ ತಂದು ಅದನ್ನು ಹೆಚ್ಚಿ ತಿರುಳಿನ ಕಹಿ ತೆಗೆದು ಬೆಲ್ಲ ಹಾಕಿ ಮೆಲ್ಲುತ್ತಿತ್ತು. ಅಜ್ಜಯ್ಯ ನಿದ್ದೆಯಿಂದೆದ್ದು ಕಾಫಿ ಕುಡಿದು ಗದ್ದೆಗೆ ಹೋಗಿ ಗಿಡದಲ್ಲಿ ಮಾಯವಾಗಿದ್ದ ತರಕಾರಿಗಳನ್ನು ಗಮನಿಸಿ ನಮಗೆಲ್ಲ ಬೈಗುಳ ಸಮಾರಾಧನೆ ಮಾಡುತ್ತಿದ್ದರು. ನಾವು ಹಸಿ ತರಕಾರಿಗಳನ್ನು ತಿನ್ನುವಾಗ ಅಜ್ಜಯ್ಯನ ಶ್ರಮವನ್ನು ಪರಿಗಣಿಸುತ್ತಿರಲಿಲ್ಲ. ನಮಗೆ ಬಾಯಾಡಲು ಏನಾದ್ರೂ ಸಿಕ್ಕಿದರೆ ಸಾಕೆಂಬ ಆಸೆಯಷ್ಟೇ ಇರುತ್ತಿತ್ತು. ಈಗ ಯೋಚಿಸಿದಾಗ ಕಷ್ಟಪಟ್ಟು ತರಕಾರಿ ಬೆಳೆಯುತ್ತಿದ್ದ ಅಜ್ಜಯ್ಯನ ಕಿರಿಕಿರಿ ಅರ್ಥವಾಗುತ್ತದೆ.
ಅಜ್ಜಯ್ಯ ಯಾವತ್ತೂ ತಾಜಾ ತರಕಾರಿಯನ್ನು ಅಡುಗೆಗೆ ಉಪಯೋಗಿಸಲು ಬಿಡುತ್ತಿರಲಿಲ್ಲ. ಆ ಬಿದಿರಿನ ಕೋಲಿಗೆ ಕಟ್ಟಿರುತ್ತಿದ್ದ ತರಕಾರಿಗಳು ಸ್ವಲ್ಪ ಕೊಳೆಯಲು ಶುರುವಾದ ಮೇಲಷ್ಟೇ ಅವನ್ನು ಅಡುಗೆಗೆ ಬಳಸಲು ಅಜ್ಜಯ್ಯ ಬಿಡುತ್ತಿದ್ದದ್ದು. ಅವರು ತೆಗೆದುಕೊಡದೆ ಮನೆಯವರ್ಯಾರೂ ಆ ತರಕಾರಿಗಳನ್ನು ತೆಗೆಯುವಂತಿರಲಿಲ್ಲ. ಅಂತೂ ಇಂತೂ ವರ್ಷದ ಆರೇಳು ತಿಂಗಳು ಅವೇ ಸೌತೆ, ಕುಂಬಳ ಸಾಂಬಾರು ತಿನ್ನುವುದು ನಮಗೆ ರೂಢಿಯಾಗಿತ್ತು.

ನಾವೇ ಬೆಳೆದ ತರಕಾರಿಯನ್ನು ತಿನ್ನುವ ಖುಷಿಯೇ ಬೇರೆ. ಈ ಸಲದ ಕೋವಿಡ್ ನ ದೀರ್ಘ ರಜೆಯಲ್ಲಿ ನಮ್ಮ ಶಂಕ್ರಮ್ಮನ ಕಿಚನ್ ಗಾರ್ಡನ್ ಕೂಡಾ ಜೋರಾಗಿ ಸಾಗಿ ನಮ್ಮದೇ ಅಲಸಂದೆ, ಕುಂಬಳ, ಬೀನ್ಸ್, ಹಸಿಮೆಣಸು, ಮೂಲಂಗಿ ತಿನ್ನುವ ಅವಕಾಶ ಸಿಕ್ಕಿತು. ಆದರೆ ಈಗ ಗಿಡದ ತುಂಬಾ ಅಲಸಂದೆ ನೇಲುತ್ತಿದ್ದರೂ ಹಸಿ ಅಲಸಂದೆಯನ್ನು ಕಚಕಚನೆ ತಿನ್ನಬೇಕೆಂಬ ಹಂಬಲವಿಲ್ಲ. ಬಾಲ್ಯದ ಮೋಜಿನ ಬುದ್ಧಿ ಮಾಯವಾಗಿ ಹುಟ್ಟಿರುವ ಪ್ರಬುದ್ಧತೆ ತರಕಾರಿಗಳನ್ನು ಹುಡುಕಿ ತಿನ್ನುವ ಚೋದ್ಯ ಬುದ್ಧಿಯನ್ನು ಇಲ್ಲವಾಗಿಸಿದೆ. ಅಜ್ಜಯ್ಯ ಬೆಳೆಸುತ್ತಿದ್ದ ತರಕಾರಿಯನ್ನು ತಿಂದಿದ್ದು ಬಿಟ್ಟರೆ ನಂತರ ಕೊಂಡು ತಂದ ತರಕಾರಿಯನ್ನು ತಿಂದಿದ್ದು ಹೆಚ್ಚು. ಬಿದಿರಿನ ಕೋಲಿಗೆ ತರಕಾರಿ ಕಟ್ಟಿಟ್ಟು ಬಳಸುವ ಮನೆಗಳು ಈಗ ಬೆರಳೆಣಿಕೆಯಷ್ಟು ಇರಬಹುದು. ದುಡ್ಡು ಕೊಟ್ಟರೆ ಸುಲಭವಾಗಿ ಸಿಗುವ ವಿವಿಧ ತರಕಾರಿಗಳು ಇರುವಾಗ ಶೇಖರಿಸಿಟ್ಟು ತಿನ್ನುವ ಕಷ್ಟ ಯಾರಿಗೆ ಬೇಕು ಹೇಳಿ?


168.ನೆನಪುಗಳು - ತುಳು ಭಾಷೆ 


ನನ್ನ ಮಾತೃಭಾಷೆ ತುಳು. ನನ್ನ ಅಮ್ಮ ತುಳು ಬೆಲ್ಟ್ ನವಳು ಹಾಗೂ ಅಪ್ಪ ಕನ್ನಡ ಬೆಲ್ಟ್ ನವರು. ಮನೆಯಲ್ಲಿ ಅಮ್ಮನ ಜೊತೆ ತುಳು ಹಾಗೂ ಅಪ್ಪನ ಜೊತೆ ಅಚ್ಚ ಕನ್ನಡದ ಬಳಕೆ. ನನ್ನ ಮದುವೆಯಾದ ಮೇಲೆ ನಾನು ಊರಿಗೆ ಹೋಗುವುದು ಅಪರೂಪವಾಗುತ್ತಾ ತುಳು ಭಾಷೆಯ ಬಳಕೆಯೂ ಭಾರೀ ಅಪರೂಪವಾಯ್ತು. ಭಾಷೆಯ ಮೇಲೆ ಹಿಡಿತ ಹೋಗುತ್ತಾ ಬಂದ ಕಾರಣ ಊರಿಗೆ ಹೋದಾಗ ಅಮ್ಮನ ಹತ್ತಿರ ಕನ್ನಡದ ಬಳಕೆಯೇ ಹೆಚ್ಚಾಗಿ ತುಳು ಭಾಷೆ ಎನ್ನುವುದು ಬಹಳ ದೂರದ್ದಾಯಿತು. ನಾನು ನನ್ನ ಮಕ್ಕಳಿಗೆ ತುಳು ಕಲಿಸಬಹುದಿತ್ತು. ಆದರೆ ಕಲಿಸಲಿಲ್ಲ. ಇದರ ನನ್ನ ಮಕ್ಕಳಿಬ್ಬರಿಗೂ ನನ್ನ ಬಗ್ಗೆ ಅಸಮಾಧಾನವಿದೆ.
ನನ್ನ ಅಮ್ಮನ ಅಣ್ಣ, ತಮ್ಮಂದಿರು, ತಂಗಿಯಂದಿರು ಕಟ್ಟಾ ತುಳು ಭಾಷೆಯನ್ನು ಬಳಸುವವರು. ಮನೆಯಲ್ಲಿ ತಪ್ಪಿಯೂ ಕನ್ನಡ ಮಾತನಾಡದವರು. ಯಾವುದೇ ಕಡೆಯ ಸೊಸೆ/ಅಳಿಯ ಬಂದರೂ ಅವರಿಗೆ ತುಳು ಭಾಷೆ ಕಲಿಸಿಯೇ ಬಿಡುವವರು. ಅಂತಹ ತುಳು ಭಾಷಾ ಅಭಿಮಾನಿಗಳವರೆಲ್ಲರೂ!
ನಾನು ನನ್ನ ಅಮ್ಮನ ಕಡೆಯ ಯಾವುದಾದರೂ ಕಾರ್ಯಕ್ರಮಗಳಿಗೆ ಹೋಗಿ ಅವರೆಲ್ಲರ ನಡುವೆ ಸಿಕ್ಕಿ ಹಾಕಿಕೊಂಡರೆ ಫಜೀತಿಯೋ ಫಜೀತಿ. ತುಳುವಿನಲ್ಲಿ ಪ್ರಾರಂಭವಾಗುವ ನನ್ನ ಮಾತು ನಿಧಾನವಾಗಿ ಕನ್ನಡಕ್ಕೆ ತಿರುಗಿ ಅವರೆಲ್ಲರ ಬಳಿ ಎಷ್ಟೋ ಬಾರಿ ಬೈಸಿಕೊಂಡದ್ದಿದೆ. ಆದರೆ ಒಂದು ಸಮಾಧಾನದ ವಿಷಯವೇನೆಂದರೆ ತುಳುವಿನಲ್ಲಿ ಫ್ಲುಯೆನ್ಸಿ ಇಲ್ಲ ಎನ್ನುವುದು ಬಿಟ್ಟರೆ ಭಾಷೆ ಮರೆತು ಹೋಗಿಲ್ಲ ಎನ್ನುವುದು.
ನಿನ್ನೆ ಸಂಜೆ ನನ್ನಮ್ಮನ ತಮ್ಮ, ಅತ್ತಿಗೆಯಂದಿರು, ತಂಗಿಯಂದಿರೊಡನೆ ಅಪರೂಪಕ್ಕೆ ಫೋನಾಯಿಸಿ ಮಾತನಾಡಿದೆ. ತುಳುವಿನಲ್ಲಿ ಮಾತನಾಡಿದೆ. ಮಧ್ಯದಲ್ಲಿ ಪದಗಳ ಬಳಕೆ ತಪ್ಪಾದರೂ ಸುಧಾರಿಸಿಕೊಂಡು ಮಾತನಾಡಿದೆ. ಕೊಟ್ಟ ಕೊನೆಗೆ ದೊಡ್ಡ ಚಿಕ್ಕಮ್ಮನ ಹತ್ತಿರ ಮಾತನಾಡುವಾಗ ಕನ್ನಡಕ್ಕೆ ಶರಣಾದೆ. ಎಷ್ಟೋ ವರ್ಷಗಳ ನಂತರ ಮಾತೃಭಾಷೆಯಲ್ಲಿ ಬಹಳಷ್ಟು ಹೊತ್ತು ಸಂವಹನ ನಡೆಸಿದ ಖುಷಿ ಸಿಕ್ಕಿತು. ಅಪರೂಪದ ನನ್ನ ಫೋನಿನ ಕರೆ ಅವರಿಗೂ ಖುಷಿ ಕೊಟ್ಟಿತು.
ಭಾಷೆಯ ಬಳಕೆ ತಪ್ಪಿ ಹೋದರೆ ಅದರಲ್ಲಿ ಆಪ್ತ ಸಂವಾದ ಕಷ್ಟ ಎನಿಸಿ ಬಿಡುತ್ತದೆ. ಆ ಭಾಷೆ ನಮ್ಮದಲ್ಲ ಎಂದೆನಿಸಿ ಬಿಡುತ್ತದೆ. ಆ ಭಾಷೆ 'ನಮ್ಮದು' ಎಂದೆನಿಸಿದಾಗ ಮಾತ್ರ ಅದರ ಬಳಕೆ ಸುಲಭಸಾಧ್ಯವಾಗುತ್ತದೆ. ಭಾಷೆಯನ್ನು ಬಳಸಿದಷ್ಟು ಅದರ ಮೇಲಿನ ನಮ್ಮ ಹಿಡಿತ ಗಟ್ಟಿಯಾಗುತ್ತಾ ಭಾಷೆ ನಮ್ಮದಾಗುತ್ತದೆ. ಮಾತನಾಡುವಾಗ ಆತ್ಮವಿಶ್ವಾಸ ಕಂಡು ಬರುತ್ತದೆ. ಇಲ್ಲವಾದರೆ ನಾನು ತುಳುವನ್ನು ಬಳಸುವಾಗ ಆಗುವ ಒದ್ದಾಟ ಎಲ್ಲರದ್ದೂ ಆಗಿ ಬಿಡುತ್ತದೆ.
ಇನ್ನೊಬ್ಬರೊಡನೆ ಕನೆಕ್ಟ್ ಆಗುವುದಕ್ಕೆ ಭಾಷೆ ಸಹಾಯಕ. ಭಾಷೆಯಿಲ್ಲದೆ ಸಂವಹನ ಕಷ್ಟಸಾಧ್ಯ! ಕಲಿತ ಭಾಷೆಯನ್ನು ಮರೆಯದೆ ಹೊಸ ಭಾಷೆಯನ್ನು ಕಲಿಯುವ ಸಂದರ್ಭ ಸಿಕ್ಕಾಗ ಕಲಿತು ಹಲವು ಭಾಷೆಗಳನ್ನು ಉಪಯೋಗಿಸುವುದರ ಬಗ್ಗೆ ಒಲವು ತೋರಿಸುವುದು ಸ್ವಾಗತಾರ್ಹ ವಿಷಯ ಎನ್ನುವುದು ನನ್ನ ಅನಿಸಿಕೆ.


167. ನೆನಪುಗಳು - ಹುಲಿ ವೇಷ 


ನಿನ್ನೆ ಫೇಸ್ಬುಕ್ ನೋಡುವಾಗ ಅದರಲ್ಲಿದ್ದ ಹುಲಿವೇಷದ ಬಗೆಗಿನ ಒಂದು ಸಣ್ಣ ಡಾಕ್ಯುಮೆಂಟರಿ ಕಣ್ಣಿಗೆ ಬಿತ್ತು. ನೋಡಿ ಖುಷಿ ಪಟ್ಟೆ. ನನಗೆ ಮೊದಲಿನಿಂದಲೂ ಹುಲಿವೇಷ ಅಂದರೆ ವಿಚಿತ್ರ ಆಕರ್ಷಣೆ. ಅದರ ಹಲಗೆ/ತಮಟೆಯ ಸದ್ದು ಕೇಳಿದರೆ ಮೈ ರೋಮಾಂಚನಗೊಳ್ಳುತ್ತದೆ. ನನಗರಿವಿಲ್ಲದೆ ಹುಲಿವೇಷ ನನ್ನನ್ನು ಆವರಿಸಿಕೊಂಡು ಬಿಡುತ್ತದೆ. ಕುಣಿಯುವ ಫೋರ್ಸ್ ನನ್ನೊಳಗೆದ್ದು ಪುಟಿದೇಳುತ್ತದೆ.
ಹುಲಿವೇಷದ ಮುಖ್ಯ ಆಕರ್ಷಣೆಯೇ ಅದರ ದೇಹವರ್ಣಿಕೆ ಹಾಗೂ ವಾದನದ ಧ್ವನಿ. ಬರೀ ಒಂದು ಒಳಚಡ್ಡಿ ಧರಿಸಿದ ಕಲಾವಿದನ ಇಡೀ ಮೈಯನ್ನು ಆಯಿಲ್ ಪೇಂಟ್ ನಿಂದ ಹಳದಿ/ಕೇಸರಿ/ಬಿಳಿ/ಕಪ್ಪು ಬಣ್ಣಗಳ ಮಿಶ್ರಣದಿಂದ ಥೇಟ್ ಹುಲಿಯ ಮೈ ತರಹ ಪೇಂಟ್ ಮಾಡಲಾಗುತ್ತದೆ. ತಲೆಗೆ ಒಂದು ಬಿಗಿಯಾದ ಟೊಪ್ಪಿಗೆ ಧರಿಸಿರುತ್ತಾರೆ. ಅದಕ್ಕೂ ಕೂಡ ಹುಲಿಯ ಬಣ್ಣವನ್ನು ಹಚ್ಚಲಾಗುತ್ತದೆ. ಅದಕ್ಕೆ ಕಿವಿಯನ್ನು ಫಿಕ್ಸ್ ಮಾಡಲಾಗುತ್ತದೆ. ಬಾಲವನ್ನು ಬಟ್ಟೆಯಿಂದ ಮಾಡಿರುತ್ತಾರೆ. ಹೀಗೆ ಬಣ್ಣಧಾರಿಯಾದ ಕಲಾವಿದರ ತಂಡ ಮುಖ್ಯ ರಸ್ತೆಗಳಲ್ಲಿ, ಮನೆಮನೆಯ ಮುಂದೆ ಪ್ರದರ್ಶನ ನೀಡುತ್ತದೆ. ಕೆಲವು ತಂಡಗಳಲ್ಲಿ ಮರಿ ಹುಲಿಯೂ ಇರುತ್ತದೆ. ಅದೊಂದು ಸ್ಪೆಷಲ್ ಅಟ್ರಾಕ್ಷನ್ ಆಗಿರುತ್ತದೆ. ಹುಲಿಕುಣಿತ ಬಹಳ ಎನರ್ಜಿ ಡಿಮಾಂಡಿಂಗ್ ಕಲೆ. ಹೊರಾಂಗಣ ಕುಣಿತ ಆಗಿರುವ ಕಾರಣ ಅದು ಮೈಯ್ಯ ನೀರಿನಂಶ ತೆಗೆದು ಬಿಡುತ್ತದೆ. ಕೆಲವರು ಬಾಯಿ ಪಸೆ ಆರದಿರಲು ಬಾಯಿಯಲ್ಲಿ ನಿಂಬೆಹಣ್ಣನ್ನು ಇಟ್ಟುಕೊಂಡು ಕುಣಿಯುತ್ತಾರೆ ಕೂಡಾ. ತಾಳಬದ್ಧವಾಗಿ, ಎನರ್ಜೆಟಿಕ್ ಆಗಿ ಕುಣಿಯುವ ಅವರ ಕುಣಿತದ ಪರಿ ಬಣ್ಣನೆಗೆ ಮೀರಿದ್ದು.
ಈಗ್ಗ್ಯೆ ನಾಲ್ಕೈದು ವರ್ಷಗಳ ಹಿಂದೆ ನಮ್ಮಲ್ಲಿನ ಹೊಂಗಿರಣೋತ್ಸವಕ್ಕೆ ನಮ್ಮ ರಾಜನ ಮೂಲಕ ಉಡುಪಿ ಕಡೆಯ ಹುಲಿವೇಷದ ತಂಡವನ್ನು ಕರೆಸಿದ್ದೆವು. ಮಧ್ಯಾಹ್ನ ಎರಡು ಗಂಟೆಯಿಂದ ಐದು ಗಂಟೆಯವರೆಗೆ ಅವರ ಹುಲಿಕುಣಿತದ ಪ್ರದರ್ಶನ ಸ್ಟೇಜ್ ಹಾಗೂ ಓಪನ್ ಗ್ರೌಂಡಿನಲ್ಲಿ ಇದ್ದಿತ್ತು. ಹಿಂದಿನ ದಿನದವರೆಗೆ ಜ್ವರದಿಂದ ಬಳಲುತ್ತಿದ್ದ ನಾನು ಹುಲಿವೇಷ ನೋಡಿದ್ದೇ ಎಲ್ಲವನ್ನು ಮರೆತು ಅವರೊಡನೆ ಮನದಣಿಯೆ ಕುಣಿದೆ. ಆ ದಿನ ನಮ್ಮಲ್ಲೆಲ್ಲರೂ ಹುಲಿಕುಣಿತ ಕುಣಿದವರೇ! ಕುಣಿತದ ಹುಚ್ಚು ಹಿಡಿಸುವ ಹಾಗೂ ಕುಣಿಯುವಂತೆ ಮಾಡುವ ಅಂತಹ ಶಕ್ತಿ ಆ ಕಲೆಗಿದೆ.

ಹುಲಿವೇಷ ನನ್ನ ಬಾಲ್ಯ ಕಾಲದಿಂದಲೂ ನನ್ನನ್ನು ಸದಾ ಆಕರ್ಷಿಸಿದ ಕಲೆ/ಕುಣಿತ. ನಾನು ಎಲ್ಲೇ ಇದ್ದರೂ ನನಗರಿವಿಲ್ಲದೆ ಹುಲಿವೇಷದೊಡನೆ ಕನೆಕ್ಟ್ ಆಗಿ ಬಿಡುತ್ತೇನೆ. ಊರು ಬಿಟ್ಟು ಮೂವತ್ತು ವರ್ಷಗಳ ಮೇಲಾದರೂ ಹುಲಿವೇಷದ ಬಗೆಗಿನ ಮೋಹ ನನ್ನಲ್ಲಿ ಎಳ್ಳಷ್ಟೂ ಕಡಿಮೆಯಾಗಿಲ್ಲ ಎನ್ನುವುದು ಆ ಕುಣಿತ ನನ್ನ ಮೇಲೆ ಮಾಡಿರುವ ಪ್ರಭಾವವನ್ನು ಸೂಚಿಸುತ್ತದೆ. ನನ್ನ ಪ್ರಕಾರ ಎಲ್ಲೆಡೆಯೂ, ಎಲ್ಲಾ ಕಾಲಕ್ಕೂ ಸಲ್ಲುವ ಕಲೆ ನಮ್ಮೀ ಹುಲಿವೇಷ🙏


166. ನೆನಪುಗಳು - ಊಟದ ಮೇಜು 


ಸಾಲಿಕೇರಿಯ ನಮ್ಮ ಮನೆಯಲ್ಲಿರುವ ಊಟದ ಟೇಬಲ್ ಗೆ ಅದರದ್ದೇ ಆದ ಹಿಸ್ಟರಿ ಇದೆ. ಸುಮಾರು ನಲವತ್ತು ವರ್ಷ ಹಳೆಯ ಆ ಟೇಬಲನ್ನು ಸಾಗುವಾನಿ ಮರದಿಂದ ಮಾಡಲಾಗಿದ್ದು ಅದರ ಮೇಲೆ ಬಿಳಿ ಸನ್ ಮೈಕಾ ಹಾಕಲಾಗಿದೆ. ನನ್ನ ಅಮ್ಮನ ಮೇಜವಾನಿಕೆಯಲ್ಲಿ ಆ ಟೇಬಲ್ ಇನ್ನೂ ತನ್ನ "ಹೊಸತನ"ವನ್ನು ಕಳೆದುಕೊಂಡಿಲ್ಲ. ಅದರೊಡನೆ ಸಾಗುವಾನಿ ಮರದ ನಾಲ್ಕು ಕುರ್ಚಿಗಳು ಅಷ್ಟೇ ಸುಸ್ಥಿತಿಯಲ್ಲಿವೆ.
ನಮ್ಮ ಊಟದ ಮನೆಯ ಬಲಮಗ್ಗುಲಿಗೆ ಅಡುಗೆಮನೆಯಿದೆ. ಎಡ ಮಗ್ಗುಲಿಗೆ ಬಾವಿಕಟ್ಟೆಗೆ ಹೋಗುವ ಕಟ್ಟೆ/ಚಿಟ್ಟೆ ಇದೆ. ಮೈನ್ ಹಾಲಿನ ಎಡ ಭಾಗದಲ್ಲಿರುವ ಊಟದ ಹಾಲನ್ನು ಒಂದು ಪ್ಲೈವುಡ್ನಿಂದ ಅರ್ಧ ಮುಚ್ಚಲಾಗಿದೆ. ಅಡಿಗೆ ಮನೆಯಲ್ಲಿ ತಯಾರಾಗುವ ಬಿಸಿಬಿಸಿ ತಿಂಡಿಯನ್ನು ತಿನ್ನುತ್ತಾ/ಊಟವನ್ನು ಮಾಡುತ್ತಾ ಕಥೆ ಹೊಡೆಯಲು ನಮ್ಮ ಊಟದ ಟೇಬಲ್ ಒಂದು ಪ್ರಶಸ್ತ ಜಾಗ!
ಆ ಊಟದ ಟೇಬಲ್ ಹಲವಾರು ದಿಗ್ಗಜರನ್ನು ಕಂಡಿದೆ. ಶಿವರಾಮ ಕಾರಂತರಿಂದ ಹಿಡಿದು ಜಯಂತ ಕಾಯ್ಕಿಣಿ ಯಂತಹ ಕನ್ನಡ ಸಾಹಿತ್ಯ ಲೋಕದ ಅನೇಕ ಸಾಹಿತ್ಯ ಶಿರೋಮಣಿಗಳು ನಮ್ಮ ಆ ಹಳೆಯ ಟೇಬಲ್ ಮೇಲೆ ಊಟ ಮಾಡಿದ್ದಾರೆ. ನಮ್ಮ ಎಲ್ಲಾ ಸಂಬಂಧಿಕರು, ಮಿತ್ರರು ಆ ಟೇಬಲ್ಲಿನ ಮೇಲೆ ಊಟ ಮಾಡಿದವರೇ. ಎಲ್ಲರನ್ನು ಸಮಾನವಾಗಿ ಸ್ವೀಕರಿಸಿ ಆದರಿಸಿ ಉಪಚರಿಸಿದ ಟೇಬಲ್ ನಮ್ಮದು!
ಆ ಟೇಬಲ್ ಬರೀ ಊಟಕ್ಕೆ ಮಾತ್ರ ಉಪಯೋಗಿಸಲ್ಪಡುವುದಿಲ್ಲ. ನನ್ನ ಅಮ್ಮನ ಅಕ್ಕಿ, ಬೇಳೆ ಶುದ್ಧೀಕರಿಸುವ ಜಾಗ ಆ ಟೇಬಲ್. ಅಮ್ಮ ಬೆಳ್ಳಂಬೆಳಗ್ಗೆ ತರಕಾರಿ ಹೆಚ್ಚುವ ಜಾಗ ಆ ಟೇಬಲ್. ಕೆಸುವಿನ ಎಲೆಗೆ ಹಿಟ್ಟು ಹಚ್ಚಿ ಪತ್ರೊಡೆಯಾಗಿಸುವ ಜಾಗ ಆ ಟೇಬಲ್. ನನ್ನ ಅತ್ತಿಗೆಯ ಬರವಣಿಗೆಯ ರಂಗಮಂಚ ಆ ಟೇಬಲ್. ನಾವು ಊಟ ಮಾಡಿ ಗಂಟೆಗಟ್ಟಲೆ ಹರಟೆ ಹೊಡೆಯುವ ಜಾಗ ಆ ಟೇಬಲ್. ಆ ಟೇಬಲ್ ನಮ್ಮ ಮನೆಯ ಹಲವಾರು ಘನ ಕಾರ್ಯಗಳಿಗೆ ಸಾಕ್ಷೀಭೂತವಾಗಿದೆ ಎಂದರೆ ತಪ್ಪಲ್ಲ.
ಆ ಟೇಬಲ್ಲಿನ ಎಡಭಾಗದಲ್ಲಿ ಕೈ ಇಡಲು ಹಿಡಿಕೆ ಇರುವ ಒಂದು ದೊಡ್ಡ ಕುರ್ಚಿ ಇದೆ. ಅಪ್ಪ ಬದುಕಿದ್ದಾಗ ಆ ಕುರ್ಚಿಯಲ್ಲೇ ಕುಳಿತು ಊಟ ಮಾಡುತ್ತಿದ್ದರು. ತದನಂತರದಲ್ಲಿ ನನ್ನಣ್ಣ ಕೂರುತ್ತಿದ್ದ. ನಾವೆಲ್ಲ ಊರಿಗೆ ಹೋದಾಗ ಯಾರು ಮೊದಲಿಗೆ ಊಟಕ್ಕೆ ಕೂರುತ್ತಾರೊ ಅವರು ಹೆಚ್ಚಾಗಿ ಆ ಕುರ್ಚಿಯನ್ನು ಆಕ್ರಮಿಸುತ್ತಾರೆ. ಉಳಿದವರು ಬಾಕಿ ಕುರ್ಚಿಯಲ್ಲಿ ಕೂತು ಉಣ್ಣುತ್ತಾರೆ.

ಹೊಸ ಹೊಸ ತರಹದ ಟೇಬಲ್ ಗಳು ಮಾರುಕಟ್ಟೆಯಲ್ಲಿ ಈಗ ಲಭ್ಯವಿದ್ದರೂ ನಮಗೆ ಯಾವತ್ತೂ ಕೂಡಾ ಆ ಊಟದ ಟೇಬಲನ್ನು ಬದಲಾಯಿಸಬೇಕೆಂದು ಅನ್ನಿಸಲೇ ಇಲ್ಲ. ಅಂತಹ ಸೆಳೆತ, ಪ್ರೀತಿ ಆ ಊಟದ ಟೇಬಲ್ ಬಗ್ಗೆ. ಏನೇ ಅಂದರೂ old is gold ತಾನೇ?!


165. ನೆನಪುಗಳು -ಗೋಡೆಯಲ್ಲಿನ ಶೋಕೇಸ್ 


ಅಮ್ಮನ ಕೋಣೆಯ ಗೋಡೆಯಲ್ಲಿ ಷೋಕೇಸಿನ ತರಹದ ಒಂದು ಕನ್ನಡಿ ಕಪಾಟು ಇದೆ. ಮೂರು/ಎರಡೂವರೆ ಅಡಿಯ ಆ ಕಪಾಟಿನಲ್ಲಿ ನಾಲ್ಕು ಅರೆಗಳಿವೆ. ಆ ಕಪಾಟು ಅಮ್ಮನ ದಾಸ್ತಾನು ಮಳಿಗೆ.
ಮೇಲಿನ ಅರೆಯಲ್ಲಿ ಅಮ್ಮ ಯಾವಾಗಲೂ ಒಳ್ಳೆಯ ಪ್ಲಾಸ್ಟಿಕ್ ಕವರ್ ಗಳು, ಗಿಫ್ಟ್ ಆಗಿ ಬಂದ ದೇವರ ಪ್ರತಿಮೆಗಳನ್ನು ಇಟ್ಟಿರುತ್ತಾಳೆ. ಎರಡನೆಯ ಅರೆಯಲ್ಲಿ ನಮ್ಮ ಹಳೆಯ ಫ್ಯಾಮಿಲಿ ಫೋಟೊ, ಫ್ರೇಮ್ ಹಾಕಿದ ಕೆಲವು ಫೋಟೊಗಳನ್ನು ಹಾಗೂ ಅದರೊಟ್ಟಿಗೆ ಅವಳ ಸ್ನೋ, ಪೌಡರ್, ಕಾಡಿಗೆಯನ್ನು, ಕೆಲವು ಪ್ಲಾಸ್ಟಿಕ್ ಡಬ್ಬಿಗಳನ್ನು ಇಟ್ಟಿರುತ್ತಾಳೆ. ಮೂರನೇ ಅರೆಯಲ್ಲಿ ಅವಳ ಮಾತ್ರೆ ಡಬ್ಬಗಳು, ನೋವಿನ ಎಣ್ಣೆ ಬಾಟಲಿಗಳು... ಇತ್ಯಾದಿಗಳನ್ನು ಇಟ್ಟಿರುತ್ತಾಳೆ. ಕೊನೆಯ ಅರೆ ಸ್ವಲ್ಪ ಡಂಪಿಂಗ್ ಪ್ಲೇಸ್.
ಊರಿಗೆ ಹೋದಾಗ ಸೀರೆ ಉಡುವಾಗ ಪಿನ್ನು ಸಿಗದಿದ್ದರೆ ಸೀದಾ ಕೈ ಹೋಗುವುದು ಆ ಕನ್ನಡಿ ಕಪಾಟಿಗೆ. ಸ್ಟಿಕ್ಕರ್ ಬೇಕಾದರೆ ಜಾಲಾಡುವುದು ಆ ಕನ್ನಡಿ ಕಪಾಟನ್ನೇ! ಮೈ ಬೆವರಿ ವಾಸನೆ ಅನಿಸಿದರೆ ಅಮ್ಮನಿಗೆ ಚಿಕ್ಕಮ್ಮ ಕೊಟ್ಟಿರುವ ಸೆಂಟ್ ಬಾಟಲನ್ನು ಅದೇ ಕನ್ನಡಿ ಕಪಾಟಿನಿಂದ ತೆಗೆದು ಸಿಂಪಡಿಸಿಕೊಳ್ಳುತ್ತೇವೆ. ತಲೆನೋವೆಂದರೆ ಅಮೃತಾಂಜನ ಸಿಗುವುದು ಆ ಕನ್ನಡಿ ಕಪಾಟಿನಲ್ಲಿಯೆ. ಅರ್ಜೆಂಟಾಗಿ ಒಂದು ಒಳ್ಳೆಯ ಪ್ಲಾಸ್ಟಿಕ್ ಕವರ್ ಬೇಕಂದ್ರೆ ನಾವು ಹುಡುಕುವುದು ಆ ಕನ್ನಡಿ ಕಪಾಟಿನಲ್ಲಿಯೆ. ಗ್ಯಾಸ್ಟ್ರಿಕ್ ಆದರೆ ಗುಗ್ಗುಳ ಸಿಗುವುದು ಆ ಕನ್ನಡಿ ಕಪಾಟಿನಲ್ಲಿಯೆ.
ಅಷ್ಟು ಸಣ್ಣ ಕನ್ನಡಿ ಕಪಾಟಿನಲ್ಲಿ ಏನುಂಟು ಏನಿಲ್ಲ ಎನ್ನುವುದಕ್ಕೆ ಉತ್ತರ ಸಿಗುವುದಿಲ್ಲ. ಅದೊಂದು ಎಲ್ಲಾ ವಸ್ತುಗಳಿರುವ ಭಂಡಾರ. ಇಂತಹ ಕನ್ನಡಿ ಕಪಾಟುಗಳು ಹಲವರ ಮನೆಗಳಲ್ಲಿ ಅಮ್ಮಂದಿರ ಶೇಖರಣೆ ಜಾಗವಾಗಿ ಇದ್ದಿರಬಹುದು. ಅದೊಂದು ಭಾವನಾತ್ಮಕ ಗೂಡು ಕೂಡಾ ಆಗಿರಬಹುದು. ಹಳೆಯ ವಸ್ತುಗಳ, ಅಗತ್ಯ ವಸ್ತುಗಳ ಶೇಖರಣೆಯ ಇಂತಹ ಕನ್ನಡಿ ಕಪಾಟುಗಳನ್ನು ಕೆದಕಿದಾಗ ಅವುಗಳು ನಮ್ಮ ಮುಂದೆ ಬಹಳಷ್ಟು ಕಥೆಗಳನ್ನು ಬಿಚ್ಚಿಡಬಹುದೇನೊ?
ಹಿಂದಿನ ಪ್ರತಿಯೊಂದು ಮನೆಯಲ್ಲೂ ಇಂತಹ ಆಪ್ತ ಸ್ಥಳಗಳನ್ನು ಕಾಣಬಹುದು. ಆ ಜಾಗ ನಮಗೆ ವ್ಯಕ್ತಿಗಳನ್ನು ನೆನಪಿಸುತ್ತವೆ; ಘಟನೆಗಳನ್ನು ನೆನಪಿಸುತ್ತವೆ. ಕೆಲವು ವಸ್ತುಗಳು ಕೂಡಾ ಅಂತಹ ಕನೆಕ್ಷನ್ ಕಟ್ಟಿ ಕೊಡುತ್ತವೆ. ಅವುಗಳನ್ನು ನೋಡಿದ ಕೂಡಲೆ ನೆನಪುಗಳ ಸರಮಾಲೆ ಬಿಚ್ಚಿಕೊಳ್ಳುತ್ತದೆ. ಉದಾಹರಣೆಗೆ, ಅಜ್ಜಯ್ಯನ ಮನೆಯಲ್ಲಿದ್ದ ಈಸೀಛೇರ್. ಅದು ನೆನಪುಗಳನ್ನು ಟ್ರಿಗರ್ ಮಾಡುವ ಅಂತಹ ಒಂದು ವಸ್ತು. ಆ ಛೇರ್ ನೋಡಿದ ಕೂಡಲೆ ಅಜ್ಜಯ್ಯನ ಜನಿವಾರದ ಕೆಲಸ, ಆ ಛೇರ್ ನಲ್ಲಿ ಕುಳಿತುಕೊಳ್ಳಲು ಮಕ್ಕಳಾಗಿದ್ದ ನಮ್ಮ ನಡುವಿನ ಸ್ಪರ್ಧೆ, ಅದರ ಕೋಲು ತೆಗೆದಿಟ್ಟು ಕೂರುವವರು ಬೀಳುವ ಹಾಗೆ ಮಾಡುತ್ತಿದ್ದ ನಮ್ಮ ಪುಂಡಾಟಿಕೆ... ಹೀಗೆ ಹಲವಾರು ಘಟನೆಗಳು ನೆನಪಿನಾಳದಿಂದ ಪುಟಿದೇಳುತ್ಣವೆ.
ಮನದ ಮೂಲೆಯಲ್ಲೆಲ್ಲೋ ತಣ್ಣಗೆ ಮಲಗಿದ್ದು ಅಗತ್ಯವಿದ್ದಾಗ ಪುಟಿದೆದ್ದು ಬರುವ ನೆನಪುಗಳಿಗೆ ನನ್ನ ಪ್ರೀತಿಯ ನಮನ🙏


164. ಪರಿಸರ - ಕಂಬಳಿ ಹುಳು 


ಕಂಬಳಿ ಹುಳು ಎಲ್ಲರಿಗೂ ಪರಿಚಿತ ಕೀಟ. ಒಂದು ಸಲ ಕಂಬಳಿಹುಳುವಿನ ಹತ್ತಿರ ಮುಟ್ಟಿಸಿಕೊಂಡವರು ಜನ್ಮಜಾತ ಅದನ್ನು ಮರೆಯುವುದಿಲ್ಲ. ಅಂತಹ "ಟಚ್" ಅದರದ್ದು🤩 ಪುಟಾಣಿ ಆಕಾರದಿಂದ ಮಧ್ಯಮ ಗಾತ್ರದವರೆಗಿನ ಕಂಬಳಿ ಹುಳುಗಳನ್ನು ನಾವು ಎಲ್ಲೆಂದರಲ್ಲಿ ನೋಡಿರುತ್ತೇವೆ. ವಿವಿಧ ಬಣ್ಣಗಳ ಕಂಬಳಿ ಹುಳುಗಳನ್ನು ಕೂಡಾ ಕಂಡಿರುತ್ತೇವೆ. ಅದರ ವಿಶೇಷತೆಯನ್ನು ಗಮನಿಸುವುದರಲ್ಲಿ ಸೋತಿರುತ್ತೇವಷ್ಟೇ?! ನಮ್ಮಲ್ಲಿ ಸುಮಾರು ಮಳೆಗಾಲ ಮುಗಿದು ಚಳಿಗಾಲ ಪ್ರಾರಂಭವಾಗುವಾಗ ಕಂಬಳಿಹುಳದ ಹಾವಳಿ ಪ್ರಾರಂಭವಾಗುತ್ತದೆ. ಪ್ರಾಯಶಃ ಈಗ ಕಂಬಳಿಹುಳ ತನ್ನ ಕಾರುಬಾರನ್ನು ತೋರಿಸತೊಡಗುವ ಸರಿಯಾದ ಕಾಲ ಎಂದು ಕಾಣುತ್ತದೆ. ಹೆಚ್ಚಾಗಿ ಮರಗಿಡಗಳ ಎಲೆಯನ್ನು ತಿನ್ನುವ ಕಂಬಳಿಹುಳಗಳು ಸಸ್ಯಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಆ ಹುಳುಗಳ ಮೈಮೇಲೆ ಕಂಬಳಿಯಂಥ ಕವಚ ಇರುವುದು ಸರ್ವೇ ಸಾಮಾನ್ಯ. ಅಂತಹ ಕವಚ ಇಲ್ಲದ ಕಂಬಳಿ ಹುಳುಗಳು ಕೂಡಾ ಇರುತ್ತವೆ. ಆ ಕಂಬಳಿಯ ಕವಚದ ರೋಮ ತಾಗಿದಾಗ ತಾಗಿಸಿಕೊಂಡವರು ಮೈ ತುರಿಕೆಯಲ್ಲಿ ನರ್ತಿಸತೊಡಗುತ್ತಾರೆ. ಅಂತಹ ಕುಣಿಸುವ ಶಕ್ತಿ ಆ ಪುಟ್ಟ ಹುಳಕ್ಕಿದೆ😆
ಕಂಬಳಿಹುಳದೊಡನೆಯ ವಿಭಿನ್ನ ಅನುಭವಗಳು ನಮಗಿವೆ. ಅವುಗಳಲ್ಲೊಂದು ಆ ಹುಳುಗಳ ದಿಢೀರ್ ಉದ್ಭವ! ನಮ್ಮಲ್ಲಿ ಮೊದಲೆಲ್ಲ ರಾತ್ರಿ ಬೆಳಗಾಗುವುದರೊಳಗೆ ಹೆಂಚಿನ ಮಾಡಿದ್ದ ತರಗತಿಯ ಕೋಣೆಗಳಲ್ಲಿ ಕಂಬಳಿ ಹುಳುಗಳು ಉದ್ಭವಿಸಿ ಬಿಡುತ್ತಿದ್ದವು. ಇನ್ನೂ ಮರಿಗಳಾಗಿರುತ್ತಿದ್ದುದರಿಂದ ಕಣ್ಣಿಗೆ ಅಷ್ಟು ಗೋಚರಿಸುತ್ತಿರಲಿಲ್ಲ. ಮಕ್ಕಳು ಮೈ ತುರಿಸಿಕೊಳ್ಳತೊಡಗಿದಾಗಲೇ ನಮಗೆ ಅವುಗಳ ಉಪಸ್ಥಿತಿಯ ಅರಿವಾಗುತ್ತಿದ್ದದ್ದು. ನಂತರ ಅವುಗಳನ್ನು ನಿವಾರಿಸುವುದೇ ದೊಡ್ಡ ಸವಾಲಾಗುತ್ತಿತ್ತು. ಅದಕ್ಕಾಗಿ ಹತ್ತಾರು ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೆವು. ಕಟ್ಟಡಗಳಿಗೆ ತಾಗಿಕೊಂಡಿರುವ ಮರದ ರೆಂಬೆಗಳು ಅದರ ವಾಹಕವೆಂದು ಗೊತ್ತಾದ ಮೇಲೆ ತರಗತಿಯ ಹತ್ತಿರದ ಮರಗಳ ರೆಂಬೆಗಳನ್ನು ಮಾಡಿಗೆ ತಾಗದಂತೆ ಸವರಿಸಿ ಬಿಡುತ್ತಿದ್ದೇವೆ. ಹೀಗಾಗಿ ಕಂಬಳಿಹುಳದ ಸಮಸ್ಯೆ ಈಗ ಅಷ್ಟಾಗಿ ಕಾಣಬರುತ್ತಿಲ್ಲ.
ಚಿಕ್ಕವಳಿದ್ದಾಗ "ಮರ ಪ್ರೇಮಿ"ಯಾಗಿದ್ದ ನಾನು ಕಂಬಳಿ ಹುಳವನ್ನು ಮುಟ್ಟಿ ಮೈ ತುರಿಸಿಕೊಳ್ಳುತ್ತಾ ಮನೆಗೆ ಹೋಗಿ ಅಮ್ಮನತ್ರ ಬೈಸಿಕೊಳ್ಳುವುದು ಸಾಮಾನ್ಯವಾಗಿತ್ತು. ನಂತರದಲ್ಲಿ ಕಂಬಳಿಯಲ್ಲಿ ಆ ಜಾಗವನ್ನು ತಿಕ್ಕಿ ಅಮ್ಮ ತುರಿಕೆಯನ್ನು ಕಡಿಮೆ ಮಾಡುತ್ತಿದ್ದದ್ದು ನೆನಪಿದೆ. ಕಂಬಳಿ ಹುಳು ಮುಟ್ಟಿದ ಜಾಗದಲ್ಲಿ ತುರಿಸಿ ತುರಿಸಿ ದದ್ದಾದದ್ದು ನೆನಪಿದೆ. ಅದರ ಮುಳ್ಳಿನಂತಹ ರೋಮ ಮೈಗೆ ಅಂಟಿಕೊಂಡಿದ್ದರೆ ತುರಿಕೆ ಹೋಗುವುದೇ ಇಲ್ಲ. ಅದನ್ನು ತೆಗೆಯಲು ಸೂಕ್ತ ಸಾಧನ ಕಂಬಳಿಯೊಂದೇ.
ಮುಟ್ಟಿಸಿಕೊಂಡರೆ ತುರಿಕೆಯನ್ನುಂಟು ಮಾಡುವ ಕಂಬಳಿ ಹುಳು ದೂರದಿಂದ ನೋಡಲು ಸುಂದರ. ಅದರ ಚಲನೆ ಬಹಳ ಆಕರ್ಷಕವಾಗಿರುತ್ತದೆ. ಚಿಟ್ಟೆಯಾಗಿ ಮಾರ್ಪಾಡಾಗುವ ಅದರ ಕ್ರಿಯಾತ್ಮಕತೆ ಪ್ರಶಂಸನೀಯವಾದದ್ದು. ಸೊಪ್ಪನ್ನು ತಿಂದು ತಿಂದು ಕೋಶಾವಸ್ಥೆಗೆ ಹೋಗಿ ತದನಂತರದಲ್ಲಿ ಚಿಟ್ಟೆ ಅಥವಾ ಪತಂಗವಾಗಿ ಅದು ಮಾರ್ಪಡಾಗುವುದೇ ಪ್ರಕೃತಿಯ ಅಸೀಮವಾದ ಅದ್ಭುತಗಳಲ್ಲೊಂದು.
ಕಂಬಳಿಹುಳದಂತಹ ಅನೇಕ ಜೀವಜಂತುಗಳ ಹಂದರವಾಗಿರುವ ನಮ್ಮೀ ಸೃಷ್ಟಿಯ ಬಗೆಗಿನ ನಮ್ಮ ಅರಿವಿನ ವಿಸ್ತಾರತೆಯನ್ನು ಹೆಚ್ಚಿಸಿಕೊಂಡು ಅವುಗಳೊಡನೆ ಸಹಜೀವನ ನಡೆಸುವುದು ಸಹ್ಯವಲ್ಲವೆ?

163. ನೆನಪುಗಳು - ದಿರಿಸು.


ನಾನು ಹೈಸ್ಕೂಲ್ ಹಾಗೂ ಪಿಯುಸಿ ಓದುವಾಗ ನಮ್ಮ ಕಡೆ ಪ್ರಚಲಿತದಲ್ಲಿದ್ದ ಹುಡುಗಿಯರ ದಿರಿಸು ಉದ್ದ ಲಂಗ - ರವಿಕೆ, ಮ್ಯಾಕ್ಸಿ, ಫುಲ್ ಮಿಡಿ, ಹಾಫ್ ಮಿಡಿ. ಚೂಡಿದಾರದ ಪ್ರವೇಶ ಪಿಯುಸಿ ಮುಗಿಯುವ ಹೊತ್ತಿಗೆ ಆಯಿತು.
ನನ್ನ ಪ್ರೀತಿಯ ದಿರಿಸು ಮಿಡಿ ಆಗಿತ್ತು. ನನ್ನ ಹತ್ತಿರ ಫ್ರಾಕ್/ಫುಲ್ ಮಿಡಿಯೂ ಇತ್ತು ಹಾಗೂ ಹಾಫ್ ಮಿಡಿಯೂ ಇತ್ತು. ನನ್ನ ಚಿಕ್ಕಪ್ಪ ಆಫ್ರಿಕಾದಿಂದ ತರುತ್ತಿದ್ದ ಬಟ್ಟೆಯಲ್ಲಿ ಮಿಡಿ ಹೊಲಿಸಿದರೆ ಅದು ಫೇಡೂ ಆಗುತ್ತಿರಲಿಲ್ಲ, ಲಡ್ಡೂ ಆಗುತ್ತಿರಲಿಲ್ಲ. ಅಂತಹ ಒಳ್ಳೆಯ ಬಟ್ಟೆ ಅದಾಗಿತ್ತು. ನಾನಂತೂ ಏಳೆಂಟು ವರ್ಷ ಆ ದಿರಿಸುಗಳನ್ನು ಉಪಯೋಗಿಸಿದ್ದಿದೆ. ನಂತರವೂ ಅದು ಹಾಳಾಗದಿದ್ದಾಗ ಅಮ್ಮ ಅದನ್ನು ಬಳಸುವವರಿಗೆ ಕೊಡುತ್ತಿದ್ದಳು. ನನಗಿನ್ನೂ ನನ್ನ ಬಳಿ ಹಲವಾರು ವರ್ಷಗಳಿದ್ದ ಕಂದು ಬಣ್ಣದ ದೊಡ್ಡ ಹೂವಿನ ಡಿಸೈನ್ ಇದ್ದ ಮಿಡಿ ಹಾಗೂ ಸಣ್ಣ ಸಣ್ಣ ಹೂವುಗಳಿದ್ದ ಗಾಢ ಬಣ್ಣಗಳ ಮಿಕ್ಸ್ ಇದ್ದ ಹಾಫ್ ಮಿಡಿಯ ನೆನಪು ಇನ್ನೂ ಇದೆ. ಉಷಕ್ಕ ಅಮೆರಿಕೆಗೆ ಹೋದ ಮೇಲೆ ಊರಿಗೆ ಬರುವಾಗ ಅವಳೂ ಚೆಂದದ ಬಟ್ಟೆ ತಂದು ಕೊಡುತ್ತಿದ್ದಳು.
ಅಪ್ಪನ ಹಳೆಯ ಬೆಲ್ ಬಾಟಮ್ ಪ್ಯಾಂಟನ್ನು ಟೈಲರಿಗೆ ಕೊಟ್ಟು ಹಾಫ್ ಮಿಡಿ ಹೊಲಿಸಿಕೊಳ್ಳುತ್ತಿದ್ದೆ. ಅದಕ್ಕೆ ಮ್ಯಾಚಿಂಗ್ ಟಾಪ್ ವ್ಯವಸ್ಥೆ ಮಾಡಿಕೊಳ್ಳುವುದೇ ರಗಳೆಯ ಕೆಲಸ. ಆದರೂ ಶ್ರಮ ಪಟ್ಟಾದರೂ ಅದಕ್ಕೊಂದು ಸೂಕ್ತ ಟಾಪ್ ವ್ಯವಸ್ಥೆ ಮಾಡಿಕೊಂಡು ಬಿಡುತ್ತಿದ್ದೆ. ಕೆಲವೊಮ್ಮೆ ಅಪ್ಪನ ಶರ್ಟ್ ಆಲ್ಟರ್ ಆಗಿ ನನ್ನ ಟಾಪ್ ಆದದ್ದೂ ಇದೆ. ಹೀಗೆ ಸೆಟ್ ಮಾಡಿಕೊಳ್ಳುತ್ತಿದ್ದ ಬಟ್ಟೆಯನ್ನು ಏನೂ ಬೇಜಾರಿಲ್ಲದೆ ವರ್ಷಗಟ್ಟಲೆ ಧರಿಸುತ್ತಿದ್ದದ್ದು ನನ್ನ ಸಮಕಾಲೀನರೆಲ್ಲರೂ ಮಾಡುತ್ತಿದ್ದ ಕೆಲಸವೇ! ಅಮ್ಮನ ಸೀರೆಗಳನ್ನೂ ಬಿಡುತ್ತಿರಲಿಲ್ಲ. ಅವು ಒಂದೇ ಉದ್ದಲಂಗ ಆಗುತ್ತಿದ್ದವು, ಇಲ್ಲವೇ ಮ್ಯಾಕ್ಸಿ ಆಗುತ್ತಿದ್ದವು. ಆಯ್ಕೆಗಳು ಬಹಳ ಇಲ್ಲದ ಕಾರಣ ಇದ್ದ ಬಟ್ಟೆಯಲ್ಲೇ ಖುಷಿ ಪಡುತ್ತಿದ್ದ ಕಾಲವದು.
ನನಗಿನ್ನೂ ನಾನು ಪಿಯುಸಿ ಮುಗಿಸುವ ಹೊತ್ತಿಗೆ ಹೊಲಿಸಿದ ಮೊದಲ ಚೂಡಿದಾರದ ನೆನಪಿದೆ. ಸ್ವಲ್ಪ ಪಿಂಕ್ ಹಾಗೂ ಆರೆಂಜ್ ಬಣ್ಣಗಳ ಮಿಶ್ರಣದ ಸಣ್ಣ ಹೂವಿನ ಟಾಪ್ ಅನ್ನು ನೆಹರು ಕಾಲರ್ ಇಟ್ಟು ಮುಕ್ಕಾಲು ತೋಳು ಮಾಡಿ ಬ್ರಹ್ಮಾವರದ ಟೈಲರ್ ಹತ್ತಿರ ಹೊಲಿಸಿದ್ದೆ. ಅದೇ ಬಣ್ಣದ ಪ್ಲೇನ್ ಬಟ್ಟೆಯಲ್ಲಿ ಬಾಟಮ್ ಹೊಲಿಸಿದ್ದೆ. ಅದನ್ನು ಧರಿಸಿ ಖುಷಿ ಪಟ್ಟಿದ್ದೆ. ನಂತರದಲ್ಲಿ ಹತ್ತು ಹಲವಾರು ಮಿಡಿಗಳು, ಚೂಡಿದಾರಗಳು ಬಂದು ಹೋದರೂ ಆ 'ಮೊದಲ' ಡ್ರೆಸ್ ಗಳನ್ನು ಮರೆಯಲಾಗುವುದೇ ಇಲ್ಲ. ಗೆರೆಗೆರೆಯ ಕಂದು ಕ್ರೀಂ ಬಣ್ಣದ ನನ್ನ ಹಾಫ್ ಸ್ಲೀವ್ ಟೀ ಶರ್ಟ್, ಉದ್ದಲಂಗದ ಕಡು ಹಸಿರಿನ ರವಿಕೆ, ಕ್ರೀಂ ಬಣ್ಣದ ಕಾಟನ್ ಟಾಪ್ ಇವೆಲ್ಲವೂ ಭೌತಿಕವಾಗಿ ಇಲ್ಲವಾದರೂ ನನ್ನ ನೆನಪಿನಲ್ಲಿ ಇನ್ನೂ ಹಸಿಯಾಗಿರುವುದು ಕೆಲವೊಮ್ಮೆ ಆಶ್ಚರ್ಯ ಹುಟ್ಟಿಸುತ್ತದೆ.
ಇವೆಲ್ಲ ಮರೆತುಹೋದ ವಿಷಯಗಳು. ಆದರೆ ಬರೆಯಲು ಕೂತಾಗ ಮನಸ್ಸಿನ ಒಳಗಿನಿಂದೆಲ್ಲೋ 'ನಾವಿದ್ದೇವೆ' ಎಂದು ಮೇಲೆದ್ದು ಬರುತ್ತವೆ. ಪ್ರಾಯಶಃ ಈ ಮರೆವಿನ ಕಾಯಿಲೆಯವರಿಗೆ ವರ್ತಮಾನದ ಘಟನೆಗಳು ಮರೆತು ಹಳೆಯ ಘಟನೆಗಳು ನೆನಪಾಗುವುದು ಹೀಗೆಯೇ ಏನೋ?
ಆದರೂ ಈ ಹಳೆಯದನ್ನು ಮೆಲುಕು ಹಾಕುವುದು ಕಳೆದು ಹೋದ ಬಾಲ್ಯದ ಹಾಗೂ ಯೌವ್ವನದ ದಿನಗಳನ್ನು ನೆನಪಿಸಿ ಮನಸ್ಸನ್ನು ಹಸಿಯಾಗಿಸುವುದಂತೂ ನಿಜ ತಾನೆ?


162. ನೆನಪುಗಳು - ಉಪ್ಪಿನಕಾಯಿ.


ಉಪ್ಪಿನಕಾಯಿ ಅಂದ ತಕ್ಷಣ ನೆನಪಾಗುವುದು ಸಾಗರ ಕಡೆಯ ಅಪ್ಪೆಮಿಡಿ ಉಪ್ಪಿನಕಾಯಿ. ಅದರ ರುಚಿಗೆ ಹೋಲಿಸಲು ಪರ್ಯಾಯವಾದದ್ದು ಯಾವುದೂ ಇಲ್ಲ. ಅಂತಹ ರುಚಿ ಆ ಅಪ್ಪೆಮಿಡಿ ಉಪ್ಪಿನಕಾಯಿಗೆ! ಅದಕ್ಕಿರುವ ವಿಶಿಷ್ಟ ಪರಿಮಳ ಅದರ ರುಚಿಯನ್ನು ದ್ವಿಗುಣಗೊಳಿಸುತ್ತದೆ ಎಂದರೆ ತಪ್ಪಿಲ್ಲ.
ನಮ್ಮ ಊರಿನಲ್ಲಿ ಉಪ್ಪಿನಕಾಯಿ ಮಾಡುವ ವಿಧಾನಕ್ಕೂ ಸಾಗರದ ಕಡೆ ಉಪ್ಪಿನಕಾಯಿ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ನಮ್ಮ ಕಡೆ ಸಾಸಿವೆ, ಒಣಮೆಣಸನ್ನು ಹಸಿಯಾಗಿ ರುಬ್ಬಿ ದಪ್ಪನೆಯ ರಸ ಮಾಡಿ ಉಪ್ಪಿನಕಾಯಿ ಮಾಡಿದರೆ ಸಾಗರದ ಕಡೆ ಅವುಗಳ ಪುಡಿಯನ್ನು ಬಳಸಿ ಸ್ವಲ್ಪ ನೀರಾದ ರಸ ಮಾಡ್ತಾರೆ. ನಮ್ಮ ಕಡೆಯಲ್ಲಿ ಸ್ವಲ್ಪ ದೊಡ್ಡ ಸೈಜಿನ ಮಾವಿನಮಿಡಿಯನ್ನು ಉಪ್ಪಿನಕಾಯಿಗೆ ಬಳಸಿದರೆ ಸಾಗರದ ಕಡೆ ಪುಟಾಣಿ ಮಿಡಿಯನ್ನು ಬಳಸುತ್ತಾರೆ. ಹೀಗಾಗಿ ನಮ್ಮ ಕಡೆಯ ಮಾವಿನ ಮಿಡಿ ಉಪ್ಪಿನಕಾಯಿ ತಿನ್ನುವಾಗ ಅದರೊಳಗೆ "ಕೋಗಿಲೆ/ಕೋಂಗಳೆ" ಸಿಗುತ್ತದೆ. ಚಿಕ್ಕವಳಿರುವಾಗ ನನಗೆ ಅದನ್ನು ತಿನ್ನುವುದೆಂದರೆ ಬಹಳ ಇಷ್ಟವಾಗಿತ್ತು. ಅಪ್ಪ ಬಿಟ್ಟಿರುತ್ತಿದ್ದ ಕೋಂಗಳೆಯನ್ನು ನಾನೇ ತಿನ್ನುತ್ತಿದ್ದೆ. ಅದಕ್ಕೆ ಒಂದು ರೀತಿಯ ಒಗರು ಒಗರಾದ ಸ್ವಲ್ಪ ಕಹಿ - ಉಪ್ಪಾದ ರುಚಿ ಇರುತ್ತಿತ್ತು. ಸಾಗರದ ಕಡೆಯ ಮಾವಿನಮಿಡಿ ಪುಟ್ಟಕ್ಕಿರುವ ಕಾರಣ ಕೋಂಗಳೆ ಪ್ರತ್ಯೇಕವಾಗಿ ಸಿಗುವುದಿಲ್ಲ.
ಕೆಳಮನೆಯಿಂದ ಧಾರಾಳವಾಗಿ ಉಪ್ಪಿನಕಾಯಿ ಸಿಗುತ್ತಿದ್ದ ಕಾರಣ ನಾನು ಬಹಳ ವರ್ಷ ಉಪ್ಪಿನಕಾಯಿ ಮಾಡುವ ಶ್ರಮ ತೆಗೆದುಕೊಳ್ಳಲೇ ಇಲ್ಲ. ಅಲ್ಲದೇ ನಾನು ಪ್ರತಿನಿತ್ಯದ ಊಟಕ್ಕೆ ಉಪ್ಪಿನಕಾಯಿ ಬಳಸುವವಳಲ್ಲದ ಕಾರಣ ಉಪ್ಪಿನಕಾಯಿ ಮಾಡುವ ಅನಿವಾರ್ಯತೆ ಉಂಟಾಗಲಿಲ್ಲ. ಆದರೆ ನನಗೆ ಐವತ್ತು ವರ್ಷ ಸಂದ ಮೇಲೆ ವಿವಿಧ ರೀತಿಯ ಉಪ್ಪಿನಕಾಯಿಯ ಪ್ರಯೋಗ ಮಾಡತೊಡಗಿದೆ. ಅದರಲ್ಲಿ ನೈಪುಣ್ಯತೆ ಇಲ್ಲದಿದ್ದರೂ ಏನೋ ಒಂದು ಹೊಸತನ್ನು ಮಾಡುತ್ತಿದ್ದೇನೆ ಅನ್ನುವ ತೃಪ್ತಿ ನನಗಿದೆ. ನನ್ನ ಉಪ್ಪಿನಕಾಯಿಯ ಪ್ರಯೋಗಗಳಿಗೆ ಬಲಿಪಶುಗಳು(ನನ್ನನ್ನೂ ಸೇರಿ) ಬಹಳಷ್ಟು ಜನರಿದ್ದಾರೆ ಎನ್ನುವುದು ಖುಷಿ ಕೊಡುವ ವಿಷಯ😁
ಉಪ್ಪಿನಕಾಯಿ ರಸ, ಕೊಬ್ಬರಿ ಎಣ್ಣೆಯನ್ನು ಅನ್ನಕ್ಕೆ ಸೇರಿಸಿ ಚೆನ್ನಾಗಿ ಕಲಸಿ ತಿನ್ನುವ ಸುಖ ತಿಂದವನೇ ಬಲ್ಲ. ಹಿಂದೆ ರಜಾ ದಿನಗಳಲ್ಲಿ ಮಕ್ಕಳೆಲ್ಲ ಮನೆಯಲ್ಲಿದ್ದು ಮನೆ ತುಂಬಾ ಜನವಿದ್ದಾಗ ಸಂಜೆಯ ಬಾಯಿತೊಡು ಕಳೆಯಲು ಈ ಉಪ್ಪಿನಕಾಯಿ ಕಲಸಿದ ಅನ್ನಕ್ಕೆ ಬಹಳ ಡಿಮಾಂಡ್ ಇರುತ್ತಿತ್ತು. ಅದರೊಡನೆ ಒಂದು ತುಂಡು ಹಸಿ ಈರುಳ್ಳಿ ಇದ್ದರಂತೂ ಸ್ವರ್ಗಕ್ಕೆ ಕಿಚ್ಚು ಹಚ್ಚಿದ ಅನುಭವ. ಈ ಉಪ್ಪಿನಕಾಯಿ ಮಹಾತ್ಮೆ ಹೇಳುತ್ತಾ ಹೋದರೆ ಅದೊಂದು ಮುಗಿಯದ ಅಧ್ಯಾಯವಾಗುತ್ತದೆ. ಇದನ್ನು ಓದುತ್ತಿರುವ ಎಲ್ಲರಿಗೂ ಈಗಾಗಲೇ ಬಾಯಿಯಲ್ಲಿ ನೀರು ಬಂದಿರಬಹುದೆನ್ನುವುದು ನಿಜ ತಾನೆ?!

161.ನೆನಪುಗಳು -  ಬಿಸ್ಕಟ್ 


ನಿನ್ನೆ ಫೇಸ್ಬುಕ್ ನಲ್ಲಿ ಪ್ರಾಣಿಗಳ ಆಕಾರದ ಪುಟಾಣಿ ಬಿಸ್ಕತ್ ಗಳನ್ನು ನೋಡಿದೆ. ಆ ಚಿತ್ರ ನೋಡಿದ ತಕ್ಷಣ ಮನಸ್ಸು ನಲವತ್ತು ನಲವತ್ತೈದು ವರ್ಷ ಹಿಂದಕ್ಕೆ ಹೋಯಿತು. ಆಗೆಲ್ಲ ಈಗಿನಂತೆ ಆಕರ್ಷಕವಾದ ಪ್ಯಾಕೆಟ್ ಗಳಲ್ಲಿ ತಿಂಡಿ ತಿನಿಸುಗಳು ಬರುತ್ತಿರಲಿಲ್ಲ. ಏನಂದ್ರೂ ಆಗ ಅಂಗಡಿಯಲ್ಲಿನ ಗಾಜಿನ ಭರಣಿಯೊಳಗೆ ತಿನಿಸುಗಳನ್ನು ಇರಿಸಲಾಗುತ್ತಿತ್ತು. ನಮಗೆ ಬೇಕಾದುದನ್ನು ಐದ್ಹತ್ತು ಪೈಸೆಗೆ ಖರೀದಿಸುತ್ತಿದ್ದೆವು. ಅಂಗಡಿಗೆ ಹೋಗಿ ಗಾಜಿನ ಜಾರ್ ಒಳಗಿನ ತಿನಿಸುಗಳನ್ನು ನೋಡುವಾಗ ಬಾಯಲ್ಲಿ ನೀರೂರುತ್ತಿತ್ತು. ನಮ್ಮ ಬಳಿ ಲಿಮಿಟೆಡ್ ದುಡ್ಡು ಇರುತ್ತಿದ್ದ ಕಾರಣ ಯಾವುದನ್ನು ಖರೀದಿಸಬೇಕೆಂಬ ಆಯ್ಕೆ ನಮ್ಮದಾಗಿತ್ತು.
ಆ ಪ್ರಾಣಿಗಳ ಆಕಾರದ ಪುಟಾಣಿ ಬಿಸ್ಕತ್ತುಗಳು ಬಂದಾಗ ನಮ್ಮ ಖುಷಿಗೆ ಪಾರವೇ ಇರಲಿಲ್ಲ. ಮಕ್ಕಳ ಮನಸ್ಸೇ ಹಾಗೆ. ಏನೇ ಹೊಸದು ಬಂದರೂ ಅದು ಅವರಿಗೊಂದು ಥ್ರಿಲ್ಲಿಂಗ್ ಅನುಭವ ತಾನೆ? ಯಾರಿಗೆ ಯಾವ ಪ್ರಾಣಿ ಬಂದಿದೆ ಎಂದು ನೋಡಿ ಒಂದೇ ರೀತಿಯ ಪ್ರಾಣಿಗಳು ಬಂದಿದ್ದಲ್ಲಿ ಪರಸ್ಪರ ಬದಲಾಯಿಸಿಕೊಂಡು ಆ ಬಿಸ್ಕತ್ತುಗಳನ್ನು ತಿನ್ನುವ ಆನಂದವೇ ಬೇರೆ! ಪುಟಾಣಿಗಳಾಗಿದ್ದ ನಮಗೆ ಆ ಪ್ರಾಣಿ ಬಿಸ್ಕತ್ ಹೊಸ ಪ್ರಪಂಚವನ್ನೇ ಸೃಷ್ಟಿಸಿತ್ತು.
ಅದೇ ರೀತಿಯ ಪುಟಾಣಿ ಪ್ರಾಣಿ ಗೊಂಬೆಗಳು ಬಿನಾಕ ಟೂಥ್ ಪೇಸ್ಟ್ ಜೊತೆಗೆ ಬರುತ್ತಿದ್ದವು. ಆಗಿನ ಕಾಲದಲ್ಲಿ ಅದೊಂದು ಪ್ರಖ್ಯಾತ ಟೂಥ್ ಪೇಸ್ಟ್ ಆಗಿತ್ತು. ದೊಡ್ಡ ದೊಡ್ಡ ಸಿನೆಮಾ ನಟಿಯರು ಅದರ ಜಾಹಿರಾತಿನ ರೂಪದರ್ಶಿಗಳಾಗಿದ್ದರು. ನಮಗೆ ಜಾಹಿರಾತಿಗಿಂತ ಮುಖ್ಯವಾದದ್ದು ಅದರೊಡನೆ ಬರುತ್ತಿದ್ದ ಪ್ಲಾಸ್ಟಿಕ್ ನ ಆ ಪುಟಾಣಿ ಪ್ರಾಣಿ ಗೊಂಬೆಗಳು. ಆ ಗೊಂಬೆಗಳನ್ನು ಒಟ್ಟು ಮಾಡಿಟ್ಟುಕೊಳ್ಳುವುದು ಒಂದು ಆಟವಾಗಿತ್ತು. ಚಿಕ್ಕವಳಿರುವಾಗ ನನ್ನ ಹತ್ತಿರ ಅಂತಹ ಗೊಂಬೆಗಳ ದೊಡ್ಡ ಸ್ಟಾಕೇ ಇದ್ದಿತ್ತು.

ಈಗಲೂ ಪ್ರಾಣಿಗಳ ಪುಟಾಣಿ ಬಿಸ್ಕತ್ ಸಿಗುತ್ತದೆಂದು ನನಗೆ ನಿನ್ನೆಯೇ ಗೊತ್ತಾಗಿದ್ದು. ಆಗಿನಂತೆ ಈಗ ಅವುಗಳನ್ನು ತಿನ್ನಬೇಕು ಅನ್ನುವ ಮನಸ್ಥಿತಿಯೇನು ಇಲ್ಲ. ಕಂಡದ್ದನ್ನೆಲ್ಲ ತಿನ್ನಬೇಕೆನ್ನುವ ಹಾಗೂ ತಿಂದು ಜೀರ್ಣಿಸಿಕೊಳ್ಳುತ್ತೇನೆನ್ನುವ ವಯೋಮಾನವನ್ನು ನಾನೀಗ ಮೀರಿರುವ ಕಾರಣ ಅವುಗಳನ್ನು ನೋಡಿ ಖುಷಿ ಪಡುತ್ತೇನಷ್ಟೆ! ಆದರೂ ಯಾವುದೋ ಸಿದ್ಧ ಕವರ್ ಒಳಗೆ ಅಡಗಿಕೊಂಡಿರುವ ಬಿಸ್ಕತ್ತುಗಳಿಗಿಂತ ಗಾಜಿನ ಜಾಡಿಯಲ್ಲಿ ಕಣ್ಣಿಗೆ ಕಾಣುವಂತೆ ಇಟ್ಟಿರುತ್ತಿದ್ದ ಆ ಪುಟಾಣಿ ಬಿಸ್ಕತ್ತುಗಳೇ ಹೆಚ್ಚು ಆಪ್ತವೆನಿಸುತ್ತವೆ, ಅಲ್ಲವೆ?


160.ನೆನಪುಗಳು - ಖಾಯಿಲೆ 


ನನಗೆ ಕಾಯಿಲೆ ಬರುವುದು ಬಹಳ ಕಡಿಮೆ. ಬಂದರೆ ದೊಡ್ಡದಾಗಿಯೇ ಏನಾದ್ರೂ ಬಂದಿರುತ್ತದೆ. ಇಲ್ಲದಿದ್ದರೆ ಒತ್ತಡ ಜಾಸ್ತಿ ಆದಾಗ ಜ್ವರದ ಲಕ್ಷಣಗಳು ಕಂಡು ಬಂದು ದೇಹ ವಿಶ್ರಾಂತಿಯನ್ನು ಬಯಸುತ್ತದೆ.
ಜ್ವರ ಅಂದ ತಕ್ಷಣ ನೆನಪಾಗುವುದು ನನ್ನ ದೊಡ್ಡಮ್ಮ ಮಾಡುತ್ತಿದ್ದ ಪಥ್ಯೋಪಚಾರ. ದೊಡ್ಡ ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ ಗಂಜಿ ಮಾಡಿ "ಇಷ್ಟು ತಿನ್ಕ್ ಮಗಾ" ಅಂತ ಅವರು ಪ್ರೀತಿಯಿಂದ ಬಡಿಸಿ ತಿನ್ನುವ ಹಾಗೆ ಮಾಡುತ್ತಿದ್ದ ರೀತಿ ಮರೆಯಲಾಗದ್ದು. ಅವರು ಕಾಯಿಲೆ ಆದವರಿಗೆ ಪಥ್ಯದ ಊಟ ತಿನಿಸುವುದರಲ್ಲಿ ನಿಸ್ಸೀಮರಾಗಿದ್ದರು. ಅಂತಹ ಪ್ರೀತಿಯ ಒತ್ತಾಸೆ ಅವರದ್ದು.
ನನ್ನ ಅಮ್ಮ ಯಾವತ್ತೂ "ಅಷ್ಟು ತಿನ್ನು - ಇಷ್ಟು ತಿನ್ನು" ಅಂತ ಒತ್ತಾಯ ಮಾಡಿದವಳಲ್ಲ. ಹುಷಾರಿಲ್ಲದಿದ್ದಾಗ ಹೊತ್ತು ಹೊತ್ತಿಗೆ ಊಟ ಬಡಿಸುತ್ತಿದ್ದಳಷ್ಟೇ! ಪದೇ ಪದೇ ಬಂದು ನೋಡಿ ಎಬ್ಬಿಸಿ ತೊಂದರೆ ಕೊಡುತ್ತಿರಲಿಲ್ಲ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡುತ್ತಿದ್ದಳು.
ನಮ್ಮ ಕೆಳಮನೆ ತುಂಬಿದ ಕುಟುಂಬವಾಗಿದ್ದ ಕಾರಣ ಮನೆಯಲ್ಲಿ ಯಾರಾದರೂ ಹುಷಾರಿಲ್ಲದೆ ಮಲಗಿದರೆ ಐದು ನಿಮಿಷಕ್ಕೊಮ್ಮೆ ಒಬ್ಬರು ಬಂದು "ಆಸರಿಗೆ ಬೇಕಾ?" ಅಂತ ಕೇಳಿ ಉಪಚರಿಸುತ್ತಿದ್ದರು. ಅವರ ಉಪಚಾರದಲ್ಲಿ ಕಾಯಿಲೆಯಾದವರಿಗೆ ನಿದ್ರಿಸಲೇ ಆಗುತ್ತಿರಲಿಲ್ಲ😌 ಕಷಾಯ, ಗಂಜಿ, ಎಳನೀರು, ಬೇರೆ ಬೇರೆ ಸಾಮಗ್ರಿಗಳ ಹಣಿಗಳು, ಲೇಹ ಅಂತ ಉಪಚಾರವೇ ಉಪಚಾರ. ಆ ಕಾಲದಲ್ಲಿ ಸದಾ ಚಳಿಯಿರುತ್ತಿದ್ದ ಕಾರಣ ಮಲೆನಾಡಿನಲ್ಲಿ ಜ್ವರ ಬಂದಾಗ ಹೊದ್ದು ಮಲಗಲು ಚೆನ್ನಾಗಾಗುತ್ತಿತ್ತು. ಜ್ವರಕ್ಕೆ ಒಳ್ಳೆಯ ಔಷಧಿ ಎಂದರೆ ವಿಶ್ರಾಂತಿ ಮತ್ತು ನಿದ್ರೆ.
ನನಗೆ ಹುಷಾರಿಲ್ಲದಿದ್ದಾಗ ಪದೇ ಪದೇ ಯಾರಾದರೂ ವಿಚಾರಿಸಿ ಧೃತಿಗೆಡಿಸಿದರೆ ಕಿರಿಕಿರಿಯಾಗುತ್ತದೆ. ನಾನಾಗಲಿ ನನ್ನ ಮಕ್ಕಳಾಗಲಿ ಸಣ್ಣ ಪುಟ್ಟ ಜ್ವರಕ್ಕೆಲ್ಲ ವೈದ್ಯರ ಬಳಿ ಹೋಗುವವರಲ್ಲ. ವಿಪರೀತ ತಾಪವಿದ್ದಾಗಷ್ಟೇ ವೈದ್ಯರ ಭೇಟಿ. ಇಲ್ಲವಾದಲ್ಲಿ ಕಷಾಯ, ಗಂಜಿ, ವಿಶ್ರಾಂತಿ ಎಂದು ಸ್ವ ಕಾಳಜಿಯಿಂದ ಜ್ವರವನ್ನು ಗುಣಮಾಡಿಕೊಳ್ಳುವ ಪ್ರವೃತ್ತಿ ನಮ್ಮದು.

ಈಗಿನ ಪ್ರಸ್ತುತ ಕಾಲಘಟ್ಟದಲ್ಲಿ ಆರೋಗ್ಯದಲ್ಲಿ ಸಣ್ಣ ಏರುಪೇರಾದರೂ ಆತಂಕ. ಕೆಲವೊಮ್ಮೆ ಈ ಆತಂಕದ ಭೂತವೇ ದೊಡ್ಡ ಕಾಯಿಲೆಯಾಗಿ ಪೀಡಿಸುವುದಂತು ಸತ್ಯ ತಾನೇ? ಎಲ್ಲರು ಉತ್ತಮ ಆರೋಗ್ಯವನ್ನು ಹೊಂದಿರಲಿ ಎನ್ನುವ ಆಶಯ ನನ್ನದು ಹಾಗೂ ನಮ್ಮೆಲ್ಲರದ್ದು.

159.ನೆನಪುಗಳು -  ಆಟೋ ಗ್ರಾಫ್ 


ನಮ್ಮ ಜಮಾನದಲ್ಲಿ ಹತ್ತನೇ ತರಗತಿ ಹಾಗೂ ಪಿಯುಸಿ ಮುಗಿಸಿ ಹೋಗುವಾಗ ಪ್ರಚಲಿತದಲ್ಲಿದ್ದದ್ದು ಸ್ನೇಹಿತರಿಂದ, ಕ್ಲಾಸ್ ಮೇಟ್ಸ್ ಗಳಿಂದ ಆಟೋಗ್ರಾಫ್ ತೆಗೆದುಕೊಳ್ಳುವುದು. ನಾವು ಕೂಡಾ ಬೇರೆಯವರ ಆಟೋಗ್ರಾಫ್ ನಲ್ಲಿ ಬರೆಯುತ್ತಿದ್ದೆವು. ವಿಭಿನ್ನವಾದ ಆಟೋಗ್ರಾಫ್ ಪುಸ್ತಕ ಖರೀದಿಯಲ್ಲಿ ನಮ್ಮೊಳಗೆ ಪೈಪೋಟಿ ಇರುತ್ತಿತ್ತು. ಆಟೋಗ್ರಾಫ್ ನಲ್ಲಿ ಫ್ರೆಂಡ್ಸ್ ಹತ್ತಿರ ಬರೆಸುವ ಮೊದಲು ಟೀಚರ್ಸ್ ಹತ್ತಿರ ಬರೆಸುತ್ತಿದ್ದೆವು. ಇದನ್ನು ಫ್ರೆಂಡ್ಸ್ ಗಳ ಆತ್ಮೀಯ ಬರಹದ ಗೌಪ್ಯತೆ ಕಾಪಾಡಲು ಮಾಡಲಾಗುತ್ತಿತ್ತು.
ಇನ್ನೊಂದು ವಿಶೇಷವೇನೆಂದರೆ ಆಟೋಗ್ರಾಫ್ ನಲ್ಲಿ ಎಲ್ಲರೂ ತಪ್ಪಿಲ್ಲದೆ ಬರೆಯುವ ಪ್ರಯತ್ನ ಮಾಡುತ್ತಿದ್ದರು. ಪರೀಕ್ಷೆ ಹಾಗೂ ನೋಟ್ ಬುಕ್ಕಿನಲ್ಲಿ ತಪ್ಪು ತಪ್ಪಾಗಿ ಬರೆಯುತ್ತಿದ್ದವರು ಕೂಡಾ ಆಟೋಗ್ರಾಫ್ ನಲ್ಲಿ ತಪ್ಪಿಲ್ಲದೆ ಬರೆಯುತ್ತಿದ್ದರು. ತಪ್ಪಿಲ್ಲದೆ ಬರೆಯುವುದು ಎಲ್ಲರಿಗೆ ಪ್ರೆಸ್ಟೀಜ್ ವಿಷಯವಾಗಿತ್ತು. ಆಟೋಗ್ರಾಫ್ ನಲ್ಲಿ ಕಾವ್ಯಮಯವಾಗಿ ಬರೆಯುವುದು ಇನ್ನೊಂದು ಕಲೆಯಾಗಿತ್ತು. ಕವಿಯಲ್ಲದವರು ಕೂಡಾ ಕವಿಯಾಗುತ್ತಿದ್ದರು. ಪ್ರಾಸ ಶಬ್ದಗಳ ಬಳಕೆ ಆಟೋಗ್ರಾಫ್ ನಲ್ಲಿ ಬಹಳವಿರುತ್ತಿತ್ತು. ಆ ಆಟೋಗ್ರಾಫ್ ನಲ್ಲಿ ಸ್ಟಿಕ್ಕರ್ ಗಳನ್ನು ಕೂಡಾ ಅಂಟಿಸುತ್ತಿದ್ದೆವು. ಬಣ್ಣ ಬಣ್ಣದ ಶಾಯಿಗಳಲ್ಲಿ ಬರೆಯುತ್ತಿದ್ದೆವು. ಹೊಸ ಹೊಸ ಡಿಸೈನ್ ಗಳಲ್ಲಿ ಬರೆಯುತ್ತಿದ್ದೆವು. ನನ್ನ ಬಳಿ ಹತ್ತನೇ ತರಗತಿಯ ಹಾಗೂ ಪಿಯುಸಿಯಲ್ಲಿನ ಆಟೋಗ್ರಾಫ್ ಪುಸ್ತಕಗಳು ಇನ್ನೂ ಇವೆ. ಅವುಗಳಲ್ಲಿನ ಕೆಲವು ಸಾಲುಗಳು ಹೀಗಿವೆ.
ಕೆರೆಯ ನೀರು ಬತ್ತುವುದು. ಮುಡಿದ ಹೂವು ಬಾಡುವುದು. ಹಣೆಯ ಕುಂಕುಮ ಕರಗುವುದು. ಆದರೆ ನನ್ನ ನಿನ್ನ ಸ್ನೇಹ ಎಲ್ಲಿಯೂ ಹೋಗದು.
God loves a cheerful giver
Flower wants water
Earth needs dew, but I want only a binaca smile from you.
ಪ್ರಕೃತಿಯು ತನ್ನ ಕರ್ತವ್ಯದಂತೆ ಪ್ರಪಂಚವನ್ನು ಸೃಷ್ಟಿಸಿತ್ತು. ಪ್ರಕಾಶವನ್ನು ತುಂಬಿ ರಾಗವನ್ನಿಕ್ಕಿ "ಶೋಭಾ" ಎಂದು ಹೆಸರಿಸಿ ನಕ್ಕಿತ್ತು. ಸುಗುಣ ಸಂಪನ್ನಳಾಗಿ ಬಾಳೆಂದು ನನ್ನ ಮನ ಹರಸಿತ್ತು.

ಈಗ ಆ ಆಟೋಗ್ರಾಫ್ ಬರಹಗಳನ್ನು ನೋಡಿದಾಗ ಆಗ ನಮ್ಮೆಲ್ಲರಲ್ಲಿದ್ದ ಮುಗ್ಧತೆ, ಜೀವನವನ್ನು ನಾವು ಕಾಣುತ್ತಿದ್ದ ರೀತಿಯ ದರ್ಶನವಾಗುತ್ತದೆ. ಆಗ ನಮ್ಮೊಳಗಿದ್ದ ಸರಳ ಸುಂದರ ಬದುಕಿನ ಕಲ್ಪನೆ ಕಾಣಸಿಗುತ್ತದೆ. ಆದರೆ ಬದುಕು ನಾವು ಎಣಿಸಿಕೊಂಡಂತೆ ಇರುವುದಿಲ್ಲ ಎನ್ನುವ ಸತ್ಯ ದರ್ಶನ ಒಬ್ಬೊಬ್ಬರ ಬದುಕಿನಲ್ಲಿ ಒಂದೊಂದು ಘಟ್ಟದಲ್ಲಾಗುತ್ತದಲ್ಲವೆ? ಆದರೂ ಯಾವುದರ ಅರಿವಿಲ್ಲದೆ, ಯಾವುದೇ ಎಗ್ಗಿಲ್ಲದೆ ಬದುಕಿದ ಆ ಶಾಲಾ ದಿನಗಳು ನಿಜಕ್ಕೂ ಅವಿಸ್ಮರಣೀಯ ಹಾಗೂ ಅತ್ಯಮೂಲ್ಯ ಎನ್ನುವುದು ಎಲ್ಲರೂ ಒಪ್ಪಿಕೊಳ್ಳುವ ವಿಷಯವಲ್ಲವೆ?!


158. ನೆನಪುಗಳು - ಹೊರಾಂಗಣ ಆಟಗಳು 


ನನಗೆ ಚಿಕ್ಕಂದಿನಿಂದಲೂ ಹೊರಾಂಗಣ ಆಟವೆಂದರೆ ಇಷ್ಟ. ಹೆಬ್ರಿಯಲ್ಲಿದ್ದಾಗ ಲಗೋರಿ, ಚಿನ್ನಿದಾಂಡು, ಮರಕೋತಿ ಆಟವನ್ನು ಮನಸೋ ಇಚ್ಛೆ ಆಡಿದವಳು ನಾನು. ಶಿವಮೊಗ್ಗದಲ್ಲಿ ದೊಡ್ಡಪ್ಪನ ವಠಾರದ ಮನೆಯಲ್ಲಿದ್ದ ಎರಡು ವರ್ಷ ಅಲ್ಲಿ ಜಾಗವಿಲ್ಲದ ಕಾರಣ ಹೊರಾಂಗಣ ಆಟಕ್ಕೆ ಬ್ರೇಕ್ ಬಿದ್ದಿತ್ತು. ಅಲ್ಲಿನ ಶಾಲೆಯಲ್ಲೂ ಕೂಡ ಆಟಕ್ಕೆ ಅಷ್ಟು ಪ್ರೋತ್ಸಾಹ ಸಿಕ್ಕಿರಲಿಲ್ಲ. ಕುಂದಾಪುರದಲ್ಲಿದ್ದ ನಾಲ್ಕೈದು ವರ್ಷ ತೋಟದ ಮನೆಯಲ್ಲಿದ್ದ ಕಾರಣ ಪುನಃ ಹೊರಾಂಗಣ ಆಟಕ್ಕೆ ಪುಷ್ಟಿ ಸಿಕ್ಕಿತ್ತು. ಶಾಲೆಯಲ್ಲಿ ಥ್ರೋ ಬಾಲ್ ಆಟದಲ್ಲಿ ಒಳ್ಳೆಯ ತರಬೇತಿ ಸಿಕ್ಕಿ ಶಾಲಾ ಟೀಮ್ ನಲ್ಲಿ ನಾನೊಬ್ಬ ಸಮರ್ಥ ಆಟಗಾರಳಾಗಿದ್ದೆ. ಬರೀ ಸರ್ವಿಸ್ ನಿಂದ ನಮ್ಮ ಟೀಮಿಗೆ ಗೆಲುವು ದಕ್ಕುವಂತೆ ಮಾಡುತ್ತಿದ್ದೆ. ಟೀಮಿನಲ್ಲಿರುವ ಎಲ್ಲರೂ ತಂಡದ ಗೆಲುವಿಗಾಗಿ ಒಗ್ಗೂಡಿ ಆಡುವಾಗಿನ ಟೀಮ್ ಸ್ಪಿರಿಟ್ ಖುಷಿ ಕೊಡುತ್ತಿತ್ತು. ಸ್ಪೋರ್ಟ್ಸ್ ನಲ್ಲೂ ಆಸಕ್ತಿಯಿಂದ ತೊಡಗಿಕೊಳ್ಳುತ್ತಿದ್ದೆ. ಆಟದಲ್ಲಿನ ನನ್ನ ತೊಡಗಿಕೊಳ್ಳುವಿಕೆ ನನಗೆ ಅರಿವಿಲ್ಲದೆ ನನ್ನಲ್ಲಿ ಹಲವಾರು ಜೀವನ ಕೌಶಲ್ಯಗಳನ್ನು ಬೆಳೆಸಿ ಪೋಷಿಸಿತು.
ಪಿಯುಸಿಯಲ್ಲಿ ಒಂದು ಚೂರೂ ಬಿಸಿಲು ಹಾಳು ಮಾಡದೆ ಆಟ ಆಡುತ್ತಿದ್ದದ್ದು ನನಗಿನ್ನೂ ನೆನಪಿದೆ. ಮಧ್ಯಾಹ್ನ ಊಟದ ಬ್ರೇಕ್ ನಲ್ಲಿ ಊಟವನ್ನೂ ನೆಟ್ಟಗೆ ಮಾಡದೆ ನಾವು ಥ್ರೋ ಬಾಲ್ ಆಡುತ್ತಿದ್ದ ನೆನಪು ಇನ್ನೂ ಹಸಿಯಾಗಿದೆ. ಯಾವುದೇ ಪೀರಿಯಡ್ ಫ್ರೀ ಇದ್ದರೂ ಪೀಟಿ ಮಾಸ್ಟರ್ ಗೆ ದಮ್ಮಯ್ಯ ಹೊಡೆದು ಆಟ ಆಡುತ್ತಿದ್ದದ್ದು ಕ್ರೇಜ್ ಅಲ್ಲದೆ ಮತ್ತೇನು! ಆಗ ಶಾಲೆ ಬಿಟ್ಟ ಮೇಲೂ ಒಂದು ಗಂಟೆ ಆಡಿಯೇ ಮನೆಗೆ ಹೋಗುತ್ತಿದ್ದದ್ದು. ಆಟವಾಡಿದ ಮೇಲೆ ಸುಮಾರು ಮೂರು ಕಿಮೀ ನಡೆದುಕೊಂಡು ಮನೆಗೆ ಹೋಗಬೇಕಿತ್ತು. ಹಾಗಿದ್ದರೂ ಕೂಡ ಆಟವಾಡದಿರಲು ಮನಸ್ಸಾಗುತ್ತಿರಲಿಲ್ಲ. ಡಿಗ್ರಿ ಮಾಡುವಾಗಲೂ ನನ್ನ ಆಟದ ಹುಚ್ಚಿನಿಂದಾಗಿ ನಾನು ಕಾಲೇಜು ಟೀಮ್ ನಲ್ಲಿದ್ದೆ. ಅಂತರ ಕಾಲೇಜು ಥ್ರೋ ಬಾಲ್ ಪಂದ್ಯಾವಳಿಯಲ್ಲೂ ಭಾಗವಹಿಸಿದ ನೆನಪಿದೆ. ಬಿ.ಎಡ್. ಮಾಡುವಾಗಲೂ ಆಡಲು ಗ್ರೌಂಡಿಗೆ ಧಾವಿಸುತ್ತಿದ್ದ ಮೊದಲ ವ್ಯಕ್ತಿ ನಾನಾಗಿದ್ದೆ. ಬಿ.ಎಡ್. ಮಾಡುವಾಗ ನಾನು ಒಳಾಂಗಣ ಆಟವಾದ ಟೇಬಲ್ ಟೆನ್ನಿಸ್ ಅನ್ನು ಹೊಸದಾಗಿ ಕಲಿತೆ. ನವೋದಯದ ನನ್ನ ಮೊದಲ ವರ್ಷಗಳಲ್ಲಿ ನಾನು ಮಕ್ಕಳೊಡನೆ ತುಂಬಾ ಆಡುತ್ತಿದ್ದೆ. ಹೊಂಗಿರಣದ ಪ್ರಾರಂಭದ ದಿನಗಳಲ್ಲೂ ನಾನು ಮಕ್ಕಳೊಡನೆ, ಶಿಕ್ಷಕರೊಡನೆ ಆಡುತ್ತಿದ್ದೆ. ಈಗಲೂ ಆಡುವ ಹುಮ್ಮಸ್ಸು ಮನಸ್ಸಿಗಿದೆ. ಆದರೆ ಮನಸ್ಸಿಗಿರುವ ತಾಕತ್ತು ದೇಹಕ್ಕಿಲ್ಲದ ಕಾರಣ ತಣ್ಣಗಿರುತ್ತೇನೆ☺️
ಈಗಿನ ಹೆಚ್ಚಿನ ಮಕ್ಕಳು ಹೊರಾಂಗಣ ಆಟದ ಖುಷಿಯನ್ನೇ ಅರಿತಿಲ್ಲ. ಬಿಸಿಲಲ್ಲಿ ಕರಟುತ್ತಾ ಮಳೆಯಲ್ಲಿ ನೆನೆಯುತ್ತಾ ಮೈಕೈ ಮಣ್ಣು ಮಾಡಿಕೊಂಡು ಆಡುವ ಸುಖವೇ ಸುಖ! ಅದನ್ನು ಮಾತುಗಳಲ್ಲಿ ಬಣ್ಣಿಸಲು ಆಗುವುದಿಲ್ಲ. ಅನುಭವಿಸಿಯೇ ತಿಳಿದುಕೊಳ್ಳಬೇಕು. ಪ್ರಾಯಶಃ ಅಂತಹ ಖುಷಿಯ ಕ್ಷಣಗಳೇ ನಮ್ಮಲ್ಲಿ ಇನ್ನೂ ಜೀವನೋತ್ಸಾಹವನ್ನು ಉಳಿಸಿವೆ ಎಂದರೆ ಅತಿಶಯೋಕ್ತಿಯಾಗದು ತಾನೇ?


157. ಪರಿಸರ - ಜಾಹಿರಾತು 

ದಿನಂಪ್ರತಿ ಬರೆಯುವುದನ್ನು ನಿಲ್ಲಿಸಬೇಕೆಂದು ನಿರ್ಧರಿಸಿದ್ದೆ. ಆದರೆ ಮನಸ್ಸು ಕೇಳದೆ ನಿನ್ನೆ ಬೆಳಿಗ್ಗೆ ಎದ್ದವಳು ಪುನಃ ಬರೆದೆ. ಮನಸ್ಸು ಹಗುರಾಯಿತು. ಕೆಲವೊಮ್ಮೆ ಬರೆಯಲಿಕ್ಕೆ ವಿಷಯಗಳು ಉಳಿದೇ ಇಲ್ಲ ಎಂದೆನಿಸುತ್ತದೆ. ಕೆಲವೊಮ್ಮೆ ವಿಷಯಗಳು ನಾ ಮುಂದು ತಾ ಮುಂದು ಎಂದು ಬರತೊಡಗುತ್ತವೆ. ಎಲ್ಲವೂ ಆ ಕ್ಷಣದ ಮನಸ್ಥಿತಿಯೆಂದು ನಗೆಯೂ ಬರುತ್ತದೆ.
ಸಾಗರದಲ್ಲಿ More Super Market ಆಗಿದೆ. ಅಶೋಕ್, ರೇಖಾ, ನಾನು, ವಿಭಾ ಈಗ್ಗ್ಯೆ ಹದಿನೈದು ದಿನಗಳ ಹಿಂದೆ ಅಲ್ಲಿಗೆ ಪ್ರಥಮ ಬಾರಿಗೆ ಹೋಗಿತ್ತು. ಹೊಸ ಅಂಗಡಿ, ಸಾಗರಕ್ಕೆ ಹೊಸದಾದ ವಸ್ತುಗಳು... ಇವನ್ನೆಲ್ಲ ನೋಡಿ ನಾನು ಎಕ್ಸೈಟ್ ಆಗಿದ್ದೆ. ಎಕ್ಸೈಟ್ ಆದಾಗ ನಾನು ಸ್ವಲ್ಪ ಕೂಗಿ ಮಾತನಾಡುತ್ತೇನೆ. ನನ್ನ ಮಗಳು ನನಗೆ ಲಗಾಮು ಹಾಕಿ "ಅಮ್ಮ, ನಿಧಾನ ಮಾತನಾಡಮ್ಮ" ಅಂತ ಕಂಟ್ರೋಲ್ ಮಾಡುತ್ತಿದ್ದಳು. ಹೀಗೆ ನನ್ನನ್ನು ನಾನು ನಿಯಂತ್ರಿಸಿಕೊಂಡು ಎಲ್ಲವನ್ನೂ ನೋಡುತ್ತಾ ಬರುವಾಗ ಕಂಡದ್ದು ವಿಕೋ ಟರ್ಮರಿಕ್ ಆಯುರ್ವೇದಿಕ್ ಕ್ರೀಮ್. ಝಗ್ಗನೆ ಪುನಃ ಉಮೇದು ಏರಿ ನನಗೆ ಅಗತ್ಯ ಇಲ್ಲದಿದ್ದರೂ ಒಂದು ಸಣ್ಣ ಕ್ರೀಂ ಖರೀದಿಸಿದೆ. ನಾನು ಯೂಶುವಲಿ ಕ್ರೀಂ ಹಾಗೂ ಪೌಡರ್ ಅನ್ನು ಬಳಸುವುದು ಕಡಿಮೆ. ಆದರೂ ಇರಲಿ ಅಂತ ಒಂದು ಕ್ರೀಂ ಖರೀದಿಸಿದೆ. ಅದರ ಪರಿಮಳ ನನಗೆ ಇಷ್ಟ. ಮನೆಗೆ ಬಂದ ಮೇಲೆ ಎಲ್ಲರೂ ಒಂದು ರೌಂಡ್ ಆ ಕ್ರೀಂ ಹಚ್ಚಿಕೊಂಡು ಖುಷಿ ಪಟ್ಟದ್ದೂ ಆಯಿತು.
ಆ ಕ್ರೀಂ ಅನ್ನು ನೋಡಿದ ಕೂಡಲೆ ನನ್ನ ನೆನಪಿಗೆ ಬಂದದ್ದು ಅದರ ಜಾಹಿರಾತು...
ವಿಕೊ ಟರ್ಮರಿಕ್ ನಹಿ ಕಾಸ್ಮೆಟಿಕ್
ವಿಕೊ ಟರ್ಮರಿಕ್ ಆಯುರ್ವೇದಿಕ್ ಕ್ರೀಮ್
ಘೀಲ್ ಮುಹಾಸೋಂಕೊ ಝಡ್ ಸೆ ಮಿಟಾಯೆ
ಹಲದಿ ಔರ್ ಚಂದನ್ ಕಾ ಗುಣ್ ಇಸ್ಮೆ ಸಮಾಯೆ
ತ್ವಚಾಕೆ ರಕ್ಷಾ ಕರೆ ಆಯುರ್ವೇದಿಕ್ ಕ್ರೀಮ್
ವಿಕೊ ಟರ್ಮರಿಕ್ ಆಯುರ್ವೇದಿಕ್ ಕ್ರೀಮ್
ಇದಕ್ಕೆ ಸಂಬಂಧಪಟ್ಟ ಇನ್ನೊಂದು ಅಡ್ವರ್ಟೈಸ್ ಮೆಂಟ್ ಅಂದರೆ ಒಂದು ಮದುವೆಯ ಹೆಣ್ಣನ್ನು ಅಲಂಕರಿಸುವ ದೃಶ್ಯ - "ಮುದ್ದು ಮುದ್ದಿನಲಿ ಬೆಳೆದಳೂ..." ಎಂಬ ಹಾಡಿನೊಂದಿಗೆ ಪ್ರಾರಂಭವಾಗುವ ಸುಮಾರು ಒಂದು ನಿಮಿಷದ ವೀಡಿಯೋವದು. ಡಿ ಡಿ ನ್ಯಾಶನಲ್ ಛಾನೆಲ್ ನಲ್ಲಿ ಬರುತ್ತಿದ್ದ ಕೆಲವೇ ಕೆಲವು ಜಾಹಿರಾತುಗಳಲ್ಲಿ ಇದೂ ಒಂದಾಗಿತ್ತು. ಇನ್ನೊಂದು ಜಾಹಿರಾತು "ವಿಕೋ ವಜ್ರದಂತಿ ಟೂಥ್ ಪೇಸ್ಟ್ ಮತ್ತು ಟೂಥ್ ಪೌಡರ್" ನದ್ದು. ಆ ಒಂದು ಕ್ರೀಂ ನಿಂದ ಹಳೆಯ ಜಾಹಿರಾತುಗಳೆಲ್ಲ ನೆನಪಾಗಲು ಶುರುವಾದವು.
ಇನ್ನೊಂದು ಜಾಹಿರಾತು ಬೋರ್ನ್ ವಿಟಾದ್ದು. "ಒಳ್ಳೆದು ಒಳ್ಳೆದು ಎಲ್ಲರಿಗೆ. ಕುಡಿಯಿರಿ ನಮ್ಮ ಬೋರ್ನ್ ವೀಟಾ. ರುಚಿಕರ ಶುಚಿಕರ ಬೋರ್ನ್ ವೀಟಾ". ಎಷ್ಟು ಸರಳ ಹಾಗೂ ಎಷ್ಟು ನೇರವಾಗಿದ್ದ ಜಾಹಿರಾತುಗಳವು!
ಈಗಂತೂ ಬಿಡಿ ಜಾಹಿರಾತುಗಳದ್ದೇ ಕಾರುಬಾರು. ಜಾಹಿರಾತಿನವರ ಅದ್ಭುತ ಸೃಜನಶೀಲತೆಯನ್ನು ನಾವು ಜಾಹಿರಾತಿನ ಪ್ರಪಂಚದಲ್ಲಿ ನೋಡಬಹುದು ಎಂದರೆ ಸುಳ್ಳಲ್ಲ. ಈ ಜಾಹಿರಾತುಗಳು ನಮ್ಮ ಮುಂದೆ ನಮ್ಮದಲ್ಲದ ಪ್ರಪಂಚವನ್ನು ಸೃಷ್ಟಿಸಿ ಉತ್ಪನ್ನವನ್ನು ನಮ್ಮದಾಗಿಸಿಕೊಳ್ಳಲು ಪ್ರಚೋದಿಸುತ್ತವೆ. ನಾವು ಅದರಿಂದ ಆಕರ್ಷಿತರಾಗಿ ಅಗತ್ಯವಿಲ್ಲದಿದ್ದರೂ ಖರೀದಿಸಿ ಒಳ್ಳೆಯ ಬಳಕೆದಾರರಾಗುತ್ತೇವೆ, ಅಲ್ಲವೆ?

ಅಂಗಡಿಯಲ್ಲಿ ಕಂಡ ಕ್ರೀಂ ಒಂದು ನನ್ನೊಳಗೆ ಹುದುಗಿದ್ದ ಎಷ್ಟೆಲ್ಲಾ ನೆನಪುಗಳನ್ನು ಹೊರತಂದಿತಲ್ಲಾ ಅಂತ ಆಶ್ಚರ್ಯವಾಗುತ್ತದೆ!


157. ನೆನಪುಗಳು - ಬಾಲ್ ಪಾಯಿಂಟ್ ಪೆನ್ 


ನಾನು ಪ್ರಪ್ರಥಮವಾಗಿ ಪೆನ್ನು ಹಿಡಿದದ್ದು ಐದನೇ ತರಗತಿಯಲ್ಲಿ. ಅದೊಂದು ಬಾಲ್ ಪಾಯಿಂಟ್ ಪೆನ್. ಅದರಲ್ಲಿ ಬರೆಯುವಾಗ ನನಗಾದ ಖುಷಿಯನ್ನು ಶಬ್ದಗಳಲ್ಲಿ ಬಣ್ಣಿಸಲು ಆಗುವುದಿಲ್ಲ. ಈಗಲೂ ಅಷ್ಟೇ ಏನಾದ್ರೂ ಹೊಸಬಗೆಯ ವಸ್ತು ಸಿಕ್ಕಿದರೆ ನನ್ನೊಳಗೆ ಒಂದು ರೀತಿಯ ಸಡಗರದ, ಸಂಭ್ರಮದ ಭಾವ ಉದಿಸುತ್ತದೆ. ಆಗಂತೂ ಹತ್ತು ವರ್ಷದವಳಾಗಿದ್ದ ನನಗೆ ಚಂದ್ರಲೋಕವನ್ನೇ ಜಯಿಸಿದ ಭಾವ. ಸ್ವಲ್ಪ ಕಾಲ ಆ ಪೆನ್ನು ನನ್ನ ದೊಡ್ಡ ಆಸ್ತಿಯಾಗಿತ್ತು. ಆಗೆಲ್ಲ ಶಾಯಿ ಖಾಲಿಯಾದಾಗ ಇನ್ನೊಂದು ರಿಫಿಲ್ ಅನ್ನು ಬಳಸುತ್ತಿದ್ದೆವು. ಈಗಿನಂತೆ ಯೂಸ್ ಅಂಡ್ ಥ್ರೋ ಅಲ್ಲದ ಪೆನ್ನುಗಳವು. ಖಾಲಿಯಾದ ರಿಫಿಲ್ ಅನ್ನು ನಾವು ಸೋಪಿನ ಗುಳ್ಳೆ ಮಾಡಿ ಊದುವ ಆಟಕ್ಕೆ ಬಳಸುತ್ತಿದ್ದೆವು.
ಸ್ವಲ್ಪ ದೊಡ್ಡ ತರಗತಿಗೆ ಹೋದ ಮೇಲೆ ಇಂಕ್ ಪೆನ್ನನ್ನು ಬಳಸಲು ಪ್ರಾರಂಭಿಸಿದೆವು. ಕೆಲವೊಮ್ಮೆ ಪೆನ್ನಿಗೆ ಶಾಯಿ ತುಂಬಿಸುವಾಗ ಬಟ್ಟೆ ಮೇಲೆಲ್ಲಾ ಚೆಲ್ಲಿಕೊಂಡು ಅಮ್ಮನ ಹತ್ತಿರ ಹೊಡೆಸಿಕೊಂಡದ್ದಿದೆ. ಪೆನ್ನು ಲೀಕ್ ಆಗಿ ಬಾಕ್ಸ್ ಎಲ್ಲಾ ರಾಡಿಯಾದದ್ದಿದೆ. ಬರೆಯುವಾಗ ಪೆನ್ನು ಹಿಡಿದ ಕೈ ಬೆರಳೆಲ್ಲ ಶಾಯಿಮಯ ಆದದ್ದಿದೆ. ಪುಸ್ತಕದ ಹಾಳೆ ಹಳೆಯದಾಗಿದ್ದಾಗ ಅದು ಶಾಯಿ ಕುಡಿದದ್ದಿದೆ. ಪೆನ್ನು ಸರಿಯಾಗಿ ಬರೆಯದಿದ್ದಾಗ ಹಲ್ಲಿನಿಂದ ನಿಬ್ಬನ್ನು ಎಳೆಯುವ ಭರದಲ್ಲಿ ಬಾಯಿಯೆಲ್ಲ ಶಾಯಿ ಮಾಡಿಕೊಂಡದ್ದಿದೆ. ನಾವು ಪೇಪರ್ ಮೇಲೆ ಶಾಯಿ ಕೊಡವಿ ಆ ಪೇಪರನ್ನು ಮಡಚಿ ವಿವಿಧ ಆಕಾರದ ಚಿತ್ರಗಳಾಗುವಂತೆ ಮಾಡಿದ್ದಿದೆ. ಅಪ್ಪನ ಶೇವಿಂಗ್ ಬ್ಲೇಡಿನಿಂದ ನಿಬ್ ರಿಪೇರಿ ಮಾಡಿ ಪೆನ್ನನ್ನು ನಾವೇ ಸರಿಪಡಿಸಿಕೊಂಡಿದ್ದಿದೆ.
ಆಗೆಲ್ಲ ಬಾಲ್ ಪಾಯಿಂಟ್ ಪೆನ್ ಅಂದರೆ ರೆನೋಲ್ಡ್ಸ್ ಪೆನ್ ಹಾಗೂ ಒಳ್ಳೆಯ ಇಂಕ್ ಪೆನ್ ಅಂದರೆ ಹೀರೊ ಪೆನ್ ಅಂತ ಪ್ರಚಲಿತವಾಗಿತ್ತು. ಹೀರೊ ಪೆನ್ನಿನ ನಿಬ್ಬಿಗೂ ರೆಗ್ಯುಲರ್ ಪೆನ್ನಿನ ನಿಬ್ಬಿಗೂ ಬಹಳ ವ್ಯತ್ಯಾಸವಿತ್ತು. ಹೀರೊ ಪೆನ್ನಿಗೆ ಇಂಕ್ ಹಾಕುವ ರೀತಿ ಹಾಗೂ ರೆಗ್ಯುಲರ್ ಪೆನ್ನಿಗೆ ಇಂಕ್ ಹಾಕುವ ರೀತಿ ಬೇರೆಯಾಗಿತ್ತು. ನಾನು ಎರಡೂ ರೀತಿಯ ಪೆನ್ನುಗಳನ್ನು ಬಳಸಿದ್ದೇನೆ. ನನ್ನ ಹತ್ತಿರ ಫೌಂಟನ್ ಪೆನ್ನು ಕೂಡಾ ಇತ್ತು. ನನಗೆ ಈಗಲೂ ಕೂಡಾ ಬಾಲ್ ಪೆನ್ನಿಗಿಂತ ಇಂಕ್ ಪೆನ್ ಇಷ್ಟ. ಆದರೆ ಅದನ್ನು ಇಟ್ಟುಕೊಂಡು ನಿರ್ವಹಿಸುವುದು ರಗಳೆಯ ಕೆಲಸವಾದ ಕಾರಣ ಬಾಲ್ ಪೆನ್ನಿಗೆ ಶರಣು ಹೋಗಿದ್ದೇನಷ್ಟೇ!
ನನ್ನ ಅಪ್ಪ ಮತ್ತು ಅಣ್ಣನ ಅಕ್ಷರ ಬಹಳ ಚೆನ್ನಾಗಿತ್ತು. ಕಲಾತ್ಮಕವಾಗಿ ಅವರಿಬ್ಬರೂ ಬರೆಯುತ್ತಿದ್ದರು. ಅಪ್ಪನ ಅಕ್ಷರ ಅಣ್ಣನ ಅಕ್ಷರಕ್ಕಿಂತ ಒಂದು ಕೈ ಮೇಲಿತ್ತು. ಅಣ್ಣ ಸ್ಪೆಷಲ್ ಎಫೆಕ್ಟ್ ಕೊಡಲು ಪೆನ್ನಿನ ನಿಬ್ಬನ್ನು ಉಲ್ಟಾ ಹಿಡಿದು ಬರೆಯುತ್ತಿದ್ದ ಇಲ್ಲವೇ ನಿಬ್ಬನ್ನು ಸ್ವಲ್ಪ ಕತ್ತರಿಸಿ ಬರೆಯತ್ತಿದ್ದ. ಅವರ ಅಕ್ಷರದಷ್ಟೇ ಅವರಿಬ್ಬರ ಬರವಣಿಗೆಯ ಶೈಲಿಯು ಸುಂದರವಾಗಿತ್ತು ಹಾಗೂ ಆಪ್ತವಾಗಿತ್ತು.
ನಾನೀಗಲೂ ಕೂಡಾ ಪೆನ್ನನ್ನು ಬೇಕಾಬಿಟ್ಟಿ ಉಪಯೋಗಿಸದೇ ಅದರ ಸದ್ಬಳಕೆ ಮಾಡುತ್ತೇನೆ. ನನಗೆ ಬಂದ ಯಾವುದೇ ಆಲೋಚನೆಗಳನ್ನು ನನಗೆ ಬರೆದಿಡುವುದೆಂದರೆ ಬಹಳ ಇಷ್ಟ. ಈ ಮೊಬೈಲ್ ಹಾಗೂ ಕಂಪ್ಯೂಟರ್ ಗಳನ್ನು ಬಳಸಲು ಪ್ರಾರಂಭಿಸುವ ಮೊದಲು ಪುಟಗಟ್ಟಲೆ ಬರೆದು ರಾಶಿ ಹಾಕುತ್ತಿದ್ದೆ! ಹೀಗಾಗಿ ಪೆನ್ನನ್ನು ಜಾಸ್ತಿಯಾಗಿ ಬಳಸಿದ ಕ್ರೆಡಿಟ್ ಅನ್ನು ನಾನು ತೆಗೆದುಕೊಳ್ಳಬಯಸುತ್ತೇನೆ😄

156..ಪರಿಸರ - ಅಚ್ಚ ಕನ್ಯೆ ಫಾಲ್ಸ್ (26/9/2020)

ಕಳೆದ ಭಾನುವಾರ ನಾವು ಹತ್ತು ಜನ ಎರಡು ಕಾರಿನಲ್ಲಿ ಅಚ್ಚ ಕನ್ಯೆ ಫಾಲ್ಸ್ ಗೆ ಹೋಗಿದ್ದೆವು. ಕೆಲವು ದಿನಗಳ ಹಿಂದೆ ಪಂಡಿತರು ಫೇಸ್ಬುಕ್ನಲ್ಲಿ ಹಾಕಿದ್ದ ಫಾಲ್ಸ್ ನ ಫೋಟೊ ನೋಡಿ ಆಕರ್ಷಿತಳಾಗಿ ಅವರ ಹತ್ತಿರ ಅದರ ವಿವರಣೆ ತೆಗೆದುಕೊಂಡು ಅಲ್ಲಿಗೆ ಹೋಗುವ ನಿರ್ಧಾರ ತಗೊಂಡಿದ್ದದ್ದು.

ಹುಂಚದಕಟ್ಟೆಯಿಂದ ಹತ್ಹದಿನೈದು ಕಿಮೀ ದೂರದಲ್ಲಿರುವ ಈ ಫಾಲ್ಸ್ ಅರಳಸುರಳಿಯಿಂದ ಸುಮಾರು ಎರಡು ಕಿಮೀ ದೂರದಲ್ಲಿದೆ. ಅರಳಸುರಳಿಯಿಂದ ಫಾಲ್ಸ್ ನ ತನಕ ರಸ್ತೆ ಅಷ್ಟು ಚೆನ್ನಾಗಿಲ್ಲ. ಕಾರ್ ಪಾರ್ಕ್ ಮಾಡಿದ ನಂತರ ಸ್ವಲ್ಪ ಸರ್ಕಸ್ ಮಾಡಿಕೊಂಡು ಅರ್ಧ ಕಿಮೀ ದೂರ ಸಾಗಿದರೆ ಫಾಲ್ಸ್ ನ ಬುಡಕ್ಕೆ ಹೋಗಬಹುದು. ಅದು ಸುಮಾರು ಹದಿನೈದು ಅಡಿ ಎತ್ತರದಿಂದ ಬೀಳುವ ಸಣ್ಣ ಫಾಲ್ಸ್. ಮಳೆ ಇಲ್ಲದಿದ್ದಲ್ಲಿ ಬೆಳ್ಳಗೆ ನೊರೆಯಂತಿರುವ ಚೆಂದದ ಫಾಲ್ಸ್.
ನಾವು ಹೋಗುವ ಹಿಂದಿನ ದಿನದ ರಾತ್ರಿಯಿಂದ ಎಡೆಬಿಡದೆ ಹೊಡೆದ ಮಳೆಯಿಂದಾಗಿ ಫಾಲ್ಸ್ ತನ್ನ ಬಿಳಿ ಬಣ್ಣ ಕಳೆದುಕೊಂಡು ರಭಸವಾಗಿ ಹರಿಯುವ ಕೆಸರುಮಯ ಕೆಂಪು ಫಾಲ್ಸ್ ಆಗಿ ಪರಿವರ್ತಿತವಾಗಿತ್ತು. ನಾವು ಹೋದಾಗಲೂ ಮಳೆ ಜೋರಾಗಿ ಹೊಡೆಯುತ್ತಿದ್ದ ಕಾರಣ ನಾವು ಇಳಿದು ಫಾಲ್ಸ್ ನ ಹತ್ತಿರ ಹೋಗಿದ್ದೇ ಒಂದು ಸಾಹಸವಾಗಿತ್ತು. ದೊಡ್ಡ ಮರವೊಂದು ಅಡ್ಡ ಬಿದ್ದಿದ್ದ ಕಾರಣ ಹಾಗೂ ನೀರು ರಭಸವಾಗಿ ಹರಿಯುತ್ತಿದ್ದ ಕಾರಣ ನಾವು ನೀರಿಗೆ ಇಳಿಯುವ ಧೈರ್ಯ ಮಾಡಲಿಲ್ಲ. ದೂರದಿಂದಲೇ ಫಾಲ್ಸ್ ಅನ್ನು ನೋಡಿ ಪುನಃ ಗುರುಟಾಡುತ್ತ ಮೇಲೆ ಬಂದು ರಸ್ತೆಯ ಇನ್ನೊಂದು ದಿಕ್ಕಿನಲ್ಲಿ ಸ್ವಲ್ಪ ನಡೆದುಕೊಂಡು ನದಿಯ ಅಗಲವಾದ ಹರವು ಇದ್ದಲ್ಲಿಗೆ ಹೋಗಿ ಅಲ್ಲೊಂದಿಷ್ಟು ನೀರಾಟವಾಡಿ ತದನಂತರ ಹಿಂದಿರುಗಿದೆವು. ಇದರ ಮಧ್ಯೆ ಅಲ್ಲಿ ಧಾರಾಳವಾಗಿ ಇದ್ದ ಇಂಬಳಗಳು ನಮ್ಮ ಪಾದಗಳನ್ನು ಮುತ್ತಿಕ್ಕಿದ್ದವು. ಇಂಬಳದ ಹೆದರಿಕೆಯಿದ್ದ ನಮಗೆಲ್ಲ ಅವುಗಳಿಂದ ಕಳಚಿಕೊಳ್ಳುವುದೇ ಹರಸಾಹಸವಾಗಿತ್ತು. ತದನಂತರ ಶರಾವತಿಯ ಉಗಮ ಸ್ಥಾನವಾದ ಅಂಬುತೀರ್ಥಕ್ಕೂ ಭೇಟಿ ನೀಡಿ ನಾವು ಮಾಡಿಕೊಂಡು ಬಂದಿದ್ದ ಆಹಾರವನ್ನು ದಾರಿಯಲ್ಲಿ ಸೇವಿಸಿ ಮನೆಯ ದಾರಿ ಹಿಡಿದೆವು.
ನಾವು ಕಲ್ಪಿಸಿಕೊಂಡು ಹೋಗಿದ್ದ ಅಚ್ಚ ಕನ್ಯೆ ಫಾಲ್ಸ್ ಗೂ ಅಲ್ಲಿ ಆ ದಿನ ಕಂಡ ಫಾಲ್ಸ್ ಗೂ ಅಜಗಜಾಂತರ ವ್ಯತ್ಯಾಸವಿತ್ತು. ಮನಃಪೂರ್ವಕವಾಗಿ ನೀರಾಟವಾಡಬೇಕೆಂಬ ನಮ್ಮ ಉದ್ದೇಶ ನೆರವೇರದೆ ನಿರಾಸೆಯಾಗಿತ್ತು. ಆದರೆ ಜಿಟಿಜಿಟಿ ಮಳೆಯಲ್ಲಿನ ಪಯಣ, ಫಾಲ್ಸ್ ನ ಜಾಗ, ಸುತ್ತಮುತ್ತಲಿನ ಹಸಿರು ಮನವನ್ನು ತಣಿಸಿದ್ದಂತೂ ನಿಜ. ನೀರಾಟವಾಡಬೇಕೆಂಬ ಆಸೆಯಿದ್ದರೆ ಜಡಿಮಳೆಯಲ್ಲಿ ಯಾವುದೇ ಫಾಲ್ಸ್ ಗೆ ಹೋಗಬಾರದೆಂಬ ಅನುಭವಪೂರ್ವಕ ಕಲಿಕೆ ಅಂದು ಆಯಿತು ಅಂದರೆ ಸುಳ್ಳಲ್ಲ. ಏನೇ ಆಗಲಿ ಆ ಭಾನುವಾರದ ಹೊರತಿರುಗಾಟ ಕೆಲಸದ ಏಕತಾನತೆಯನ್ನು ಹೋಗಲಾಡಿಸಿ ಮನಸ್ಸನ್ನು ಹಗುರಗೊಳಿಸಿದ್ದಂತೂ ನಿಜ!


155.ನೆನಪುಗಳು - ಮಳೆ ನೆರೆ (25 /9/2020 )


ಮೊನ್ನೆ ಅಭಿಗೆ ಫೋನ್ ಮಾಡಿದಾಗ ಊರಲ್ಲಿ ಮಳೆಯಿಂದ ಆದ ಹಾವಳಿಯ ಬಗ್ಗೆ ಹೇಳಿದಳು. ಎಲ್ಲಾ ಕಡೆ ನೆರೆ ಬಂದಿದ್ದು, ಅವಳು ಶಾಲೆಗೆ ಹೋಗುವ ಗದ್ದೆಯಲ್ಲಿನ ರಸ್ತೆ ಒಂದು ಕಡೆ ಮಳೆ ನೀರಿಗೆ ಸಂಪೂರ್ಣವಾಗಿ ಹಾಳಾದ ಬಗ್ಗೆ, ಆರೂರಿನ ಅಜ್ಜನ ಮನೆಯ ಮೆಟ್ಟಿಲ ತನಕ ನೆರೆ ನೀರು ಬಂದ ಬಗ್ಗೆ ಸವಿಸ್ತಾರವಾಗಿ ಹೇಳಿದಳು.
ನಾನು ಕಾಲೇಜಿಗೆ ಹೋಗುವವರೆಗೆ ಮಳೆಗಾಲದಲ್ಲಿ ನಮ್ಮ ಮನೆಯ ಸುತ್ತಲಿನ ಗದ್ದೆಗಳಲ್ಲಿ ನೆರೆಯ ನೀರು ತುಂಬಿಕೊಳ್ಳುವುದು, ಉಪ್ಪೂರಿನ ಆಸುಪಾಸು ಎಲ್ಲಾ ಕಡೆ ನೀರು ನಿಲ್ಲುವುದು, ಆರೂರಿನ ಅಜ್ಜನ ಮನೆಗೆ ದೋಣಿಯಲ್ಲಿ ಹೋಗುವುದು ಸರ್ವೇ ಸಾಮಾನ್ಯ ಸಂಗತಿಯಾಗಿತ್ತು. ಹಾಗೆ ಜೋರಾದ ಮಳೆ ಬಂದಾಗ ನಾನು ಗದ್ದೆಯಲ್ಲಿ ನಡಕೊಂಡು ಶಾಲೆಗೆ ಹೋಗಲಾಗುತ್ತಿರಲಿಲ್ಲ. ಮುಖ್ಯ ರಸ್ತೆಯಲ್ಲಿ ಹೋಗಬೇಕಿತ್ತು. ಸ್ವಲ್ಪ ನೆರೆ ಗಿರೆ ಬಂದು ನಿಂತ ನೀರಿಗೆ ಕ್ಯಾರೇ ಎನ್ನದೆ ನಾನು ಮತ್ತು ಜೂಲಿ ಗದ್ದೆಯ ಬದುವಿನ ಮೇಲೆ ನಡಕೊಂಡು ಹೋಗುತ್ತಿದ್ದೆವು. ಇಂತಹುದೇ ಒಂದು ಸಂದರ್ಭದಲ್ಲಿ ಜೂಲಿ ಗದ್ದೆಯ ಬದುವಿನಿಂದ ನೀರಿಗೆ ಬಿದ್ದು ಪೂರ್ತಿ ಒದ್ದೆಯಾಗಿದ್ದಳು. ನಾನು ಬದುವಿನ ಮೇಲೆ ನಿಂತು ಹೊಟ್ಟೆ ಹಿಡಿದುಕೊಂಡು ನಕ್ಕಿದ್ದೆ. ನಂತರ ಆ ಒದ್ದೆ ಬಟ್ಟೆಯಲ್ಲೇ ಅವಳು ಶಾಲೆಗೆ ಬಂದಿದ್ದಳು. ಮುಖ್ಯ ರಸ್ತೆಯಲ್ಲಿ ಹೋಗುವಾಗ ರಸ್ತೆಯ ಪಕ್ಕದಲ್ಲಿ ಒಂದು ಮದಗ ಇತ್ತು. ಜೋರು ಮಳೆಗಾಲದಲ್ಲಿ ಅದು ತುಂಬಿ ರಸ್ತೆಯ ಸಮಕ್ಕೆ ಬರುತ್ತಿತ್ತು. ಒಂದು ಸಲ ಗಾಳಿ ಮಳೆಗೆ ಮೊದಲೇ ಅರ್ಧ ಒದ್ದೆಯಾಗಿದ್ದ ನಾವು ಆ ಮದಗದಲ್ಲಿ ಇಳಿದು ಇನ್ನಷ್ಟು ಒದ್ದೆಯಾಗಿ ಶಾಲೆಗೆ ಹೋಗಿ ಪ್ರಿನ್ಸಿಪಾಲರ ಹತ್ತಿರ ರಜೆ ಕೇಳಿ ಸರಿಯಾಗಿ ಬೈಸಿಕೊಂಡಿತ್ತು.
ನೆರೆ ಬಂದಾಗ ಆರೂರಿಗೆ ಹೋಗುವುದೆಂದರೆ ನಮಗೆಲ್ಲ ಬಹಳ ಇಷ್ಟದ ವಿಷಯವಾಗಿತ್ತು. ಶಾಲೆಯ ಗುಡ್ಡ ಇಳಿದು ದೋಣಿ ಹತ್ತಿ ಅಜ್ಜನ ಮನೆಗೆ ಹೋಗಬೇಕಿತ್ತು. ಆ ದೋಣಿ ಸವಾರಿ, ಎಲ್ಲೆಂದರಲ್ಲಿ ಕಾಣುವ ನೀರಿನ ವಿಸ್ತಾರತೆ ಬಹಳ ಖುಷಿ ಕೊಡುತ್ತಿತ್ತು. ಒಮ್ಮೆ ಅಜ್ಜನ ಮನೆಯ ಹಾಲ್ ಒಳಗೂ ನೀರು ಬಂದಿದ್ದ ನೆನಪು ನನಗಿದೆ.
ಮಳೆಗಾಲದಲ್ಲಿ ಸುತ್ತಮುತ್ತಲಿನ ಗದ್ದೆಯಲ್ಲಿ ನೀರು ತುಂಬಿ ಕೊಂಡಾಗ ನಮ್ಮ ಮನೆ ಬಾವಿಯಲ್ಲಿ ನೀರು ನಾವು ಬಗ್ಗಿ ಕೊಡಪಾನದಲ್ಲಿ ಎತ್ತುವಷ್ಟು ಮೇಲೆ ಬರುತ್ತಿತ್ತು. ಈ ನೆರೆ ಎಂದೂ ನಮ್ಮಲ್ಲಿ ಆತಂಕವನ್ನು ಹುಟ್ಟಿಸುತ್ತಿರಲಿಲ್ಲ. ಬೆಳೆದ ಬೆಳೆಗೆ ಸ್ವಲ್ಪ ಹಾನಿ ಮಾಡಿ ಒಂದೆರಡು ದಿನಗಳಲ್ಲಿ ನೀರು ಇಳಿಯುತ್ತಿತ್ತು. ಆಗಿನ ರೈತರಿಗೆ ಅದರ ಅರಿವಿದ್ದ ಕಾರಣ ಯಾರು ಕೂಡಾ ಅದನ್ನು ದೊಡ್ಡ ವಿಷಯ ಮಾಡಿಕೊಂಡು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎನ್ನುವ ಮನಸ್ಥಿತಿ ಆಗಿನ ಜನರಲ್ಲಿತ್ತು. ಇದ್ದುದರಲ್ಲಿ ತೃಪ್ತಿ ಪಡುವ ಗುಣವಿತ್ತು‌. ನೆರೆ ಇಳಿಯುವುದನ್ನೇ ಕಾದು ಮುಂದಿನ ಕೆಲಸಕ್ಕೆ ಕಾರ್ಯಪ್ರವೃತ್ತರಾಗುತ್ತಿದ್ದರು. ಹೀಗಾಗಿ ನೆರೆ ಎನ್ನುವುದು ಆಗ ಪ್ರಕೃತಿಯ ಸಹಜ ಕ್ರಿಯೆಯಾಗಿ ಪರಿಗಣಿಸಲ್ಪಟ್ಟಿತ್ತು.

ನನ್ನ ಬಾಲ್ಯ ಎಂತಹ ಸಮೃದ್ಧ ಅನುಭವಗಳನ್ನು ನನಗೆ ಕೊಟ್ಟಿದೆ ಎನ್ನುವುದು ನಾನೀಗ ಬರೆಯುವಾಗ ಅನಿಸುತ್ತದೆ. ಹಳ್ಳಿ, ಗದ್ದೆ, ಮಳೆ, ಬೇಸಾಯ, ಕಾಡು ಹಣ್ಣುಗಳು, ಸ್ನೇಹಿತರು, ಕಸಿನ್ಸ್, ಹಬ್ಬ-ಹರಿದಿನಗಳು, ಚೇಷ್ಟೆಗಳು ..ಒಂದೇ..ಎರಡೇ...ಸಾಲು ಸಾಲು! ಧನ್ಯೋಸ್ಮಿ.

154. ನೆನಪುಗಳು - ಬಾಲಿ ನಾಯಿ (24/9/2020)


ಬಾಲಿ ಇನ್ನಿಲ್ಲ ಎಂದು ಒಪ್ಪಿಕೊಳ್ಳಲಿಕ್ಕೆ ಕಷ್ಟವಾಗುತ್ತದೆ. ನಿನ್ನೆ ಬೆಳಿಗ್ಗೆ ತನ್ನ ಗೂಡಿನಲ್ಲಿ ತಣ್ಣಗೆ ಮಲಗಿದ್ದ ಬಾಲಿಯನ್ನು ನೋಡಿ ಶಂಕರಿ ಮತ್ತು ಅಜಯ್ ವಿಷಯವನ್ನು ನನಗೆ ಅರುಹಿದರು. ಅದರ ಜೀವಂತ ರೂಪದ ನೆನಪು ಮಾತ್ರ ನನ್ನಲ್ಲಿರಲಿ ಎಂದು ನಾನು ಅದರ ಕಳೇಬರವನ್ನು ನೋಡಲಿಲ್ಲ. ನಂತರದಲ್ಲಿ ಗುಂಡಿ ತೋಡಿ ಅದನ್ನು ಹುಗಿದು ಒಂದು ಗಿಡ ನೆಡುವ ಜವಾಬ್ದಾರಿಯನ್ನು ಅಜಯ್ ನಿರ್ವಹಿಸಿದ.
ಐದು ವರ್ಷ ಪ್ರಾಯದ ಬಾಲಿ ಕಳೆದ ಐದಾರು ತಿಂಗಳುಗಳಿಂದ ನಿಧಾನ ಗತಿಯಲ್ಲಿ ಸಿಂಕ್ ಆಗುತ್ತಿತ್ತು. ಅದರ ಲಿವರ್ ವೀಕ್ ಆಗುತ್ತಿದೆ ಎಂದು ಡಾಕ್ಟರ್ ಹೇಳಿದ್ದರು ಹಾಗೂ ಚಿಕಿತ್ಸೆ ನೀಡಿದ್ದರು. ಅದು ಡಲ್ ಆಗಿರುತ್ತಿತ್ತು. ದಿನಾ ಬೆಳಿಗ್ಗೆ ನಾನು ಅಡುಗೆ ಮಾಡುವಾಗ ಕಿಟಕಿಯ ಹತ್ತಿರ ಬಂದು ನಾನು ಕೊಡುತ್ತಿದ್ದ ತಿನಿಸನ್ನು ತಿಂದುಕೊಂಡು ಹೋಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ನನ್ನ ಮತ್ತು ಬಾಲಿಯ ಸಂಬಂಧ ಅಷ್ಟೇ ಆಗಿತ್ತು. ಪ್ರತಿದಿನ ಅದನ್ನು "ಏನು ಬಾಲಿ?" ಅಂತ ವಿಚಾರಿಸುತ್ತಿದ್ದೆ. ಆಗೀಗ ತಲೆ ಮುಟ್ಟಿ ಮುದ್ದಿಸುತ್ತಿದ್ದೆ.
ನಮ್ಮ ರಾಟ್ವೀಲರ್ ಬುಜ್ಜಿ ನಮ್ಮಲ್ಲಿದ್ದ ಜಾನಿ ಎನ್ನುವ ಬಿಳಿ ಲ್ಯಾಬ್ರಡಾರ್ ನಾಯಿಗೆ ಕ್ರಾಸ್ ಆಗಿ ಹುಟ್ಟಿದ ಶೇಕಡಾ 90 ಲ್ಯಾಬ್ರಡಾರ್ ಆಂಶವಿದ್ದ ಕರಡಿಯಂತಹ ಕಪ್ಪು ನಾಯಿಯಾಗಿತ್ತು ನಮ್ಮ ಬಾಲಿ. ಬುಜ್ಜಿ ಮೊತ್ತ ಮೊದಲ ಬಾರಿಗೆ ಹಾಕಿದ ಏಕೈಕ ಮರಿಯದು. ಹುಟ್ಟಿದ ಇಪ್ಪತ್ತು ದಿನಗಳಿಗೆಲ್ಲ ಸುಮಾರು ಮೂರು ತಿಂಗಳ ಮರಿಯೇನೋ ಎನ್ನುವಷ್ಟು ಗಾತ್ರದಲ್ಲಿ ಅದರ ಬೆಳವಣಿಗೆ ಆಗಿತ್ತು. ಅದರ ಭಾರವನ್ನು ಅದಕ್ಕೇ ಹೊರಲಾಗದಷ್ಟು ಅದು ಬೆಳೆದಿತ್ತು. ನಮ್ಮ ಕ್ಯಾಂಪಸ್ಸಿನಲ್ಲಿ ಅದನ್ನು ಮುದ್ದು ಮಾಡದವರೇ ಇರಲಿಲ್ಲ. ಅಷ್ಟು ಮುದ್ದಾಗಿದ್ದ ಮರಿಯಾಗಿತ್ತದು. ಎಲ್ಲರ ಮುದ್ದು ಜಾಸ್ತಿಯಾಗಿ ಅದು ಗಾತ್ರದಲ್ಲಿ ಬೆಳೆದರೂ ಬುದ್ಧಿಯಲ್ಲಿ ಮಗುವಿನಂತೆಯೇ ಇತ್ತು. ಅದು ನಮ್ಮೆದುರು ಕುಳಿತು ನಮ್ಮೆಡೆಗೆ ನೋಡುತ್ತಿದ್ದ ಅದರ ಮುಗ್ಧ ನೋಟವನ್ನು ಮರೆಯಲಿಕ್ಕೇ ಆಗುವುದಿಲ್ಲ‌.
ಭಾರೀ ಗಾತ್ರದ ಬಾರಿಯ ಆಕಾರವನ್ನು ನೋಡಿ ಹೆದರುತ್ತಿದ್ದವರೇ ಹೆಚ್ಚಿದ್ದರು. ಅದಕ್ಕೆ ಪ್ರೀತಿ ಉಕ್ಕಿದಾಗ ಎದುರಿಗಿದ್ದವರ ಮೇಲೆ ಮುದ್ದಿನಿಂದ ಹಾರುವ ಅಭ್ಯಾಸವಿತ್ತು. ಅದರ ಬುದ್ಧಿ ಗೊತ್ತಿಲ್ಲದವರು ಅದನ್ನು ತಪ್ಪರ್ಥ ಮಾಡಿಕೊಂಡು ಹೆದರುತ್ತಿದ್ದರು. ಕೆಲವೊಮ್ಮೆ ಅದು ಮೈಮೇಲೆ ಹಾರಿದಾಗ ಅದರ ಭಾರ ತಡೆದುಕೊಳ್ಳಲಾಗದೆ ನಾವು ಬ್ಯಾಲೆನ್ಸ್ ತಪ್ಪಿ ಬೀಳುತ್ತಿದ್ದಿದ್ದಂತೂ ನಿಜ. ಅದೇ ಕಾರಣಕ್ಕಾಗಿ ನಾನು ಅದನ್ನು ಮುಟ್ಟಿ ಮುದ್ದಿಸುವುದನ್ನು ನಿಲ್ಲಿಸಿಬಿಟ್ಟದ್ದು. ಅದರ ಮೇಲೆ ಎಷ್ಟೇ ಪ್ರೀತಿ ಇದ್ದರೂ ಅದರ ಪ್ರೀತಿಯ ಭಾರ ಸಹಿಸಲಾಗದೆ ಅದರೊಡನೆ ಬಾಯಿಮಾತಿನ ಪ್ರೀತಿಗೆ ಇಳಿದವಳು ನಾನು.

ನನ್ನ ಪ್ರೀತಿಯ ಹಲವಾರು ನಾಯಿಗಳನ್ನು ಕಳಕೊಂಡ ನೋವಿಗೆ ಇದೂ ಒಂದು ಸೇರಿಕೊಂಡಿತಷ್ಟೇ! ನರಳಿ ಸಾಯಲಿಲ್ಲವಲ್ಲ ಎನ್ನುವ ಸಮಾಧಾನ ನಮದೆಲ್ಲರದ್ದು. ಬಾಲಿ ಇನ್ನು ಒಂದು ನೆನಪು ಮಾತ್ರ!

153. ನೆನಪುಗಳು - ಕಪ್ಪು ಬಿಳುಪು ಟಿವಿ 


ನಾನು ಪ್ರಥಮ ಡಿಗ್ರಿಯನ್ನು ಶಿವಮೊಗ್ಗದಲ್ಲಿ ಮಾಡುತ್ತಿದ್ದ ಸಮಯ. ಪ್ರಾಯಶಃ ೧೯೮೪ನೇ ಇಸವಿ. ಹೊಸಮನೆ ಎಕ್ಸ್ಟೆನ್ಶ್ನಿನ ಬಾಡಿಗೆ ಮನೆಯಲ್ಲಿ ಅಪ್ಪ, ಅಮ್ಮ, ನಾನು, ನನ್ನ ತಂಗಿ ಇದ್ದೆವು. ಆಣ್ಣ ಊರಿನಲ್ಲಿ ಅಜ್ಜಯ್ಯನ ಮನೆಯಲ್ಲಿದ್ದ.
ಆ ವರ್ಷ ನಮ್ಮ ಮನೆಗೆ ಕಪ್ಪು ಬಿಳುಪಿನ ಟಿವಿಯನ್ನು ಅಪ್ಪ ತಂದಿದ್ದರು. ನಮಗೆಲ್ಲ ಖುಷಿಯೋ ಖುಷಿ. ಮಧ್ಯಮ ಗಾತ್ರದ ಟಿವಿಯದು. ಅದರ ಆಂಟೆನಾ ಮಾತ್ರ ಭಾರಿ ಗಾತ್ರದ್ದು. ಆಂಟೆನಾವನ್ನು ನಮ್ಮ ಮನೆಯ ಟೆರೇಸ್ ನ ಮೇಲೆ ತೆಗೆದುಕೊಂಡು ಹೋದದ್ದೇ ಒಂದು ಸಾಹಸ! ತದನಂತರದಲ್ಲಿ ಅದನ್ನು ಅಲ್ಲಿ ಸರಿಯಾದ ದಿಕ್ಕಿನಲ್ಲಿ ಇರಿಸಿ ಮನೆಯೊಳಗಿದ್ದ ಟಿವಿಯೊಳಗೆ ದೃಶ್ಯಗಳು ಬರುತ್ತವೋ ಎಂದು ನೋಡುತ್ತಾ ಆಂಟೆನಾವನ್ನು ಸರಿಯಾಗಿ ಸೆಟ್ ಮಾಡುವುದು ಒಂದು ಮಜವಾದ ಸಂಗತಿಯಾಗಿತ್ತು. ಟಿವಿಯ ಹತ್ತಿರ ಒಬ್ಬರು, ಮನೆಯ ಟೆರೇಸಿಗೆ ಹೋಗುವ ಮೆಟ್ಟಿಲಿನ ಹತ್ತಿರ ಒಬ್ಬರು ಹಾಗೂ ಮೇಲೆ ಆಂಟೆನಾದ ಹತ್ತಿರ ಒಬ್ಬರು ನಿಂತು ಪರಸ್ಪರ ಸಂದೇಶ ರವಾನೆ ಮಾಡುವ ದೃಶ್ಯ ಸೊಗಸಾಗಿತ್ತು. ಅಂತೂ ಇಂತೂ ಒಂದೆರಡು ಗಂಟೆಗಳ ಇಂತಹ ಸರ್ಕಸ್ಸಿನ ನಂತರ ಟಿವಿ ಸೆಟ್ ಆಗಿತ್ತು. ಮತ್ತೇನಾದರೂ ಗಾಳಿ ಮಳೆ ಬಂದರೆ ಟಿವಿ ಆಂಟೆನಾ ತಿರುಗಿ ಪುನಃ ಅದನ್ನು ಸೆಟ್ ಮಾಡುವ ಸರ್ಕಸ್ ಮಾಡಬೇಕಿತ್ತು. ಈ ಆಂಟೆನಾ ಸೆಟ್ಟಿಂಗ್ ಅನ್ನುವುದು ಆ ಇಡೀ ವಠಾರಕ್ಕೆ ಯಾರ ಮನೆ ಟಿವಿ ಏನಾಗಿದೆ ಎಂಬುದನ್ನು ತೆರೆದಿಟ್ಟ ಸತ್ಯವಾಗಿ ತೋರಿಸುತ್ತಿತ್ತು.
ನಮ್ಮ ಮನೆಯಲ್ಲಿ ಯಾವತ್ತೂ ನಾವೇ ಟಿವಿ ನೋಡಿದ್ದು ಅಂತ ಇಲ್ಲ. ಆ ಬೀದಿಯ ನಮ್ಮ ಓರಗೆಯವರೆಲ್ಲ ನಮ್ಮ ಮನೆಗೆ ಲಗ್ಗೆ ಹಾಕಿ ಎಲ್ಲರೂ ಒಟ್ಟಿಗೆ ಸೇರಿ ಟಿವಿ ನೋಡುತ್ತಿದ್ದ ಆ ದಿನಗಳ ಸೊಗಸೇ ಬೇರೆ. ಆಗ ಬರುತ್ತಿದ್ದದ್ದು ಬರೀ ಡಿಡಿ ನ್ಯಾಶನಲ್ ಮಾತ್ರ. ವಾರಕ್ಕೊಮ್ಮೆ ಮಾತ್ರ ಸಿನೆಮಾ ಬರುತ್ತಿತ್ತು. ಅದಕ್ಕೆ ನಾವೆಲ್ಲ ಚಾತಕ ಪಕ್ಷಿಯಂತೆ ಕಾಯುತ್ತಿತ್ತು. ಕ್ರಿಕೆಟ್ ಇದ್ದಾಗ ನಮಗೆ ಸಿನೆಮಾ ನೋಡುವ ಅವಕಾಶ ಸಿಗುತ್ತಿರಲಿಲ್ಲ. ನನ್ನ ಅಪ್ಪನೊಡನೆ ಕೆಲವಾರು ಸ್ನೇಹಿತರು ಸೇರಿ ನಮ್ಮ ಮನೆಯಲ್ಲಿ ಕ್ರಿಕೆಟ್ ನೋಡುತ್ತಿದ್ದರು. ನಾವು ಆಗ ನಮ್ಮ ಸಿನೆಮಾ ನೋಡುವ ಕಾರ್ಯಕ್ರಮವನ್ನು ತ್ಯಾಗ ಮಾಡಬೇಕಾದ ಅನಿವಾರ್ಯತೆ ಬರುತ್ತಿತ್ತು😞

ಅರ್ಥವಾಗಲಿ ಬಿಡಲಿ ಆ ಕಪ್ಪು ಬಿಳುಪು ಟಿವಿಯಲ್ಲಿ ಬರುತ್ತಿದ್ದ ಹೆಚ್ಚಿನ ಕಾರ್ಯಕ್ರಮಗಳನ್ನು ನಾವು ಬಿಡುವಿನ ವೇಳೆಯಲ್ಲಿ ನೋಡುತ್ತಿದ್ದೆವು. ಯಾವ ಯಾವ ಕಾರ್ಯಕ್ರಮ ಬರುತ್ತಿತ್ತು ಎನ್ನುವ ಸರಿಯಾದ ನೆನಪು ಈಗ ನನಗಿಲ್ಲ. ಆದರೆ ನಾವೆಲ್ಲರೂ ಒಟ್ಟಿಗೆ ಸೇರಿ ಟಿವಿ ನೋಡುತ್ತಿದ್ದ ಖುಷಿಯ ಕ್ಷಣಗಳ ನೆನಪಿದೆ. ನಂತರದಲ್ಲಿ ನಮ್ಮಪ್ಪನಿಗೆ ಊರಿಗೆ ವರ್ಗಾವಣೆಯಾದದ್ದು, ಕಾಲಕ್ರಮೇಣ ಬಣ್ಣದ ಟಿವಿ ಬಂದಿದ್ದು ಇವೆಲ್ಲವೂ ಕಾಲದ ಸಾಗುವಿಕೆಯೊಂದಿಗೆ ಆದ ಬದಲಾವಣೆಗಳು. ಬದಲಾವಣೆಗಳು ಎಷ್ಟಾಗಿವೆಯೆಂದರೆ ಈಗಿನ ಆಂಡ್ರಾಯ್ಡ್ ಟಿವಿಗಳಲ್ಲಿ ಬರುವ ಸಾಲುಸಾಲು ಛಾನೆಲ್ ಗಳು ನಮ್ಮಲ್ಲಿ ಯಾವಾಗ ಯಾವುದನ್ನು ನೋಡಬೇಕು ಅನ್ನುವ ಕನ್ಫ್ಯೂಷನ್ ಹುಟ್ಟು ಹಾಕಿ ಯಾವುದನ್ನೂ ಹಿಡಿದು ಪೂರ್ಣವಾಗಿ ನೋಡದ ಅತಂತ್ರ ಮನಸ್ಥಿತಿಯನ್ನು ನಮ್ಮೊಳಗೆ ಹುಟ್ಟು ಹಾಕಿವೆ. ಈಗಿನ ಕಾರ್ಯಕ್ರಮಗಳ ಆಯ್ಕೆಗಳ ಹೊಡೆತದಲ್ಲಿ ಹಿಂದೆ ಕಪ್ಪು ಬಿಳುಪು ಟಿವಿಯ ಕಾಲದಲ್ಲಿ ಸೀಮಿತ ಕಾರ್ಯಕ್ರಮಗಳನ್ನು ಬಾಯಿಬಿಟ್ಟುಕೊಂಡು ನೋಡುವಾಗ ಸಿಗುತ್ತಿದ್ದ ಮಜಾ ಸಿಗದಿರುವುದು ಖೇದಕರ ಸಂಗತಿಯಲ್ಲವೆ?


152. ನೆನಪುಗಳು - ದಾಸವಾಳ ಗಿಡ 


ಕೆಳಮನೆಯ ಅಂಗಳದಲ್ಲಿ ದಾಸವಾಳದ ಗಿಡವೊಂದಿದೆ. ಅಗಲವಾಗಿ ಹರಡಿರುವ ಕೆಂಪು ದಾಸವಾಳದ ಗಿಡ. ಬುಡದಿಂದ ಹಲವಾರು ಟೊಂಗೆಗಳು ಐದಡಿಗೂ ಮೀರಿ ಎತ್ತರಕ್ಕೆ ಬೆಳೆದು ತದನಂತರ ಹತ್ತಡಿಗೂ ಅಗಲವಾಗಿ ಹರಡಿರುವ ಗಿಡವದು. ನಮ್ಮ ಮನೆಯಲ್ಲಿ ನಡೆಯುವ ಪ್ರತಿದಿನದ ದೇವರ ಪೂಜೆಗೆ ಅಗತ್ಯವಿರುವಷ್ಟು ಹೂವನ್ನು ಆ ಗಿಡ ಒದಗಿಸುತ್ತದೆ. ಗಿಡದ ಮೇಲ್ಮೇಲಿನ ಹೆರೆಯಲ್ಲಿ ಬಿಡುವ ಹೂವನ್ನು ಕೊಯ್ಯಲು ಒಂದು ದೋಟಿಯನ್ನು ಆ ಗಿಡಕ್ಕೆ ಯಾವಾಗಲೂ ಸಿಕ್ಕಿಸಿ ಇಟ್ಟಿರುತ್ತಾರೆ.
ನಮ್ಮ ಮಾವ ಈ ಊರಿಗೆ ಬಂದಾಗ ನೆಟ್ಟ ಗಿಡವಿರಬಹುದದು. ಅಂದರೆ ಸುಮಾರು ಐವತ್ತು ವರ್ಷಗಳಿಗೂ ಮೀರಿದ ವಯಸ್ಸಿನ ಗಿಡವದು. ಅದಿನ್ನೂ ಹೂ ಬಿಡುವ ತನ್ನ ಕಾಯಕವನ್ನು ಮುಂದುವರಿಸಿಕೊಂಡು ಬರುತ್ತಿರುವುದು ಮೆಚ್ಚಲೇ ಬೇಕಾದ ವಿಷಯ. ಆ ಗಿಡ ನಮ್ಮ ಮನೆಯ ಮುಖ್ಯದ್ವಾರದ ಎದುರೇ ಇರುವ ಕಾರಣ ಎಲ್ಲವನ್ನೂ - ಎಲ್ಲರನ್ನೂ ನೋಡುತ್ತಾ ನಮ್ಮ ಮನೆಯ ಏಳುಬೀಳುಗಳಿಗೆ ಮೂಕ ಸಾಕ್ಷಿಯಾಗಿ ನಿಂತಿದೆ ಅಂದರೆ ಸುಳ್ಳಲ್ಲ!
ಮನೆಗೆ ಯಾರು ಬಂದರೂ ಎಲ್ಲರನ್ನೂ ತನ್ನತ್ತ ಒಮ್ಮೆ ನೋಡುವಂತೆ ಮಾಡುತ್ತದೆ ನಮ್ಮೀ ದಾಸವಾಳದ ಗಿಡ. ಬಹಳ ವರ್ಷಗಳ ಹಿಂದೆ ಒಂದು ಕಾಳಿಂಗ ಸರ್ಪ ಆ ಗಿಡದಲ್ಲಿ ಸೇರಿಕೊಂಡು ಮನೆಯವರನ್ನು ಇಡೀ ದಿನ ಗೋಳು ಹೊಯ್ಕೊಂಡಿತ್ತು. ಆ ದಿನ ನಮ್ಮ ಮನೆಯಲ್ಲಿ ಕವಿದ ಆತಂಕದ ವಾತಾವರಣ ನನಗಿನ್ನೂ ನೆನಪಿದೆ. ಆ ನಂತರದ ಕೆಲವು ದಿನ ಹೂ ಕೊಯ್ಯುವವರು ಗಿಡವನ್ನು ಸರಿಯಾಗಿ ಪರಿಶೀಲಿಸಿ ಹೂ ಕೊಯ್ಯುತ್ತಿದ್ದರು. ಆ ಗಿಡ ಬರೀ ಹೂ ಕೊಡುವ ಜಾಗವಲ್ಲದೆ ವಾಹನ ನಿಲ್ಲಿಸುವ ತಾಣವೂ ಆಗಿದೆ. ಆ ಗಿಡದ ಕೆಳಗೆ ನಮ್ಮ ಮನೆಯ ಒಂದಿಲ್ಲೊಂದು ವಾಹನ ಯಾವಾಗಲೂ ನಿಂತಿರುತ್ತದೆ. ಒಂದು ರೀತಿಯಲ್ಲಿ ಅದು ಬರೀ ಗಿಡವಾಗಿ ನಮ್ಮ ಅಂಗಳದಲ್ಲಿ ಇರದೇ ನಮ್ಮೆಲ್ಲರ ಬದುಕಿನ ಭಾಗವಾಗಿ ಅಲ್ಲಿ ಸ್ಥಾಪಿತವಾಗಿದೆ ಅಂದರೆ ಅತಿಶಯೋಕ್ತಿಯಲ್ಲ!

ನಾನು ಪಿಯುಸಿಯಲ್ಲಿದ್ದಾಗ ಅಜ್ಜಯ್ಯನ ಮನೆಯ ಅಂಗಳದಲ್ಲಿ ನೆಟ್ಟಿದ್ದ ಗೊಂಚಲು ಗುಲಾಬಿ ಗಿಡವೊಂದು ಕಳೆದ ವರ್ಷದ ತನಕ ಹೂ ಬಿಡುತ್ತಿದ್ದದ್ದು ನನಗೆ ಖುಷಿ ಕೊಟ್ಟ ವಿಷಯ. ನಾನು ಊರಿಗೆ ಹೋದಾಗ ಒಮ್ಮೆಯಾದರೂ ಆ ಗಿಡದತ್ತ ಕಣ್ಣು ಹಾಯಿಸುತ್ತಿದ್ದೆ. ಅದನ್ನು ನೆಟ್ಟು ಒಂದೆರಡು ವರ್ಷಗಳ ಕಾಲ ಅದು ಹೂ ಬಿಡದಿದ್ದಾಗ ನನಗಾಗಿದ್ದ ಆತಂಕ ಅಷ್ಟಿಷ್ಟಲ್ಲ. ಅದರ ಕಡ್ಡಿಯನ್ನು ಊರಿ ಆ ಕಡ್ಡಿಯ ತುದಿಗೆ ಸೆಗಣಿ ಹಚ್ಚಿ ಆ ಕಡ್ಡಿಯಲ್ಲಿ ಚಿಗುರೊಡೆದಾಗ ಪ್ರಪಂಚವನ್ನೇ ಗೆದ್ದಷ್ಟು ಖುಷಿಯಾಗಿ ಕುಣಿದದ್ದು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ. ಅದು ಮೊತ್ತ ಮೊದಲಿಗೆ ಹೂ ಬಿಟ್ಟಾಗ ಇನ್ನಷ್ಟು ಸಂತೋಷವಾಗಿತ್ತು. ಹೀಗೆ ನಾವು ನೆಟ್ಟ ಗಿಡಗಳು ಹೂವನ್ನೋ/ಫಲವನ್ನೋ ಕೊಡುವುದನ್ನು ನೋಡುವುದರಲ್ಲಿ ಏನೋ ಅನಿರ್ವಚನೀಯ ಆನಂದವಿರುತ್ತದೆ. ಪ್ರತಿ ಗಿಡದ ನೆಡುವಿಕೆ, ಬೆಳವಣಿಗೆ, ಫಲ ಕೊಡುವಿಕೆ, ಉಳಿಯುವಿಕೆ ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಮನಸ್ಸಿನ ಮೇಲೆ ತನ್ನದೇ ಆದ ಸಾತ್ವಿಕ ಪ್ರಭಾವವನ್ನು ಬೀರಿಯೇ ಬೀರುತ್ತದೆಂದು ನನ್ನ ಅನುಭವ. ಹೀಗೆ ಪ್ರಕೃತಿಯೊಡಗಿನ ನಮ್ಮ ಒಡನಾಟ ನಮ್ಮನ್ನು ಸಕ್ರಿಯವಾಗಿ ಸಶಕ್ತವಾಗಿ ಇಡುತ್ತದೆ ಎಂದರೆ ಸುಳ್ಳಲ್ಲ ತಾನೆ?


151. ನೆನಪುಗಳು - ಜಟಕಾ ಬಂಡಿ 


ನಾನು ಮೂರನೆಯ ತರಗತಿಯಿಂದ ಆರನೆಯ ತರಗತಿಯವರೆಗೆ ಶಿವಮೊಗ್ಗದಲ್ಲಿ ನನ್ನ ದೊಡ್ಡಪ್ಪನ ಮನೆಯಲ್ಲಿದ್ದು ಓದಿದ್ದು. ಆಗ ನನ್ನ ಅಪ್ಪ ಕೇರಳದಲ್ಲಿ ಕೆಲಸ ಮಾಡುತ್ತಿದ್ದರು. ಶಿವಮೊಗ್ಗದ ಆ ಅವಧಿಯ ನನ್ನ ಇರುವಿಕೆಯ ಅಚ್ಚಳಿಯದ ನೆನಪುಗಳಲ್ಲಿ ಒಂದು ನಾವು ಮಾಡುತ್ತಿದ್ದ ಜಟಕಾ ಬಂಡಿ ಪ್ರಯಾಣ. ಆಗೆಲ್ಲ ಈಗಿನಂತೆ ಆಟೋರಿಕ್ಷಾ ಇರಲಿಲ್ಲ. ಎಲ್ಲಿಗಾದರೂ ಹೋಗಬೇಕಾದರೆ ಒಂದೋ ನಡೆದುಕೊಂಡು ಹೋಗಬೇಕಿತ್ತು ಇಲ್ಲವೇ ಜಟಕಾ ಬಂಡಿ/ಟಾಂಗಾದಲ್ಲಿ ಹೋಗಬೇಕಿತ್ತು.
ನನಗೋ ಟಾಂಗಾದಲ್ಲಿ ಹೋಗುವುದೆಂದರೆ ಭಾರಿ ಖುಷಿ. ಆ ಬಂಡಿಯಲ್ಲೇನೂ ವಿಶೇಷವಿರಲಿಲ್ಲ. ಒಂದು ಮರದ ಹಲಗೆಯನ್ನು ಎರಡು ದೊಡ್ಡ ಚಕ್ರದ ನಡುವಿರುವ ಆಕ್ಸೆಲ್ ಮೇಲೆ ಇಟ್ಟು ಸಿಸ್ಟಮ್ಯಾಟಿಕ್ ಆಗಿ ಜೋಡಿಸಿಟ್ಟಿರುತ್ತಿದ್ದರು. ಆ ಹಲಗೆಯ ಮೇಲೆ ಒಂದು ಟಾರ್ಪಾಲನ್ನು ಮಾಡಿನ ರೀತಿ ಮುಚ್ಚಿರುತ್ತಿದ್ದರು. ಗಾಡಿಯ ಮುಂಭಾಗಕ್ಕೆ ಕುದುರೆಯನ್ನು ಕಟ್ಟಿರುತ್ತಿದ್ದರು. ಪ್ರಯಾಣಿಕರು ಹಿಂಭಾಗದಿಂದ ಮೆಟ್ಟಿಲಿನ ತರಹದ ಫೂಟ್ ರೆಸ್ಟ್ ಮೇಲೆ ಕಾಲಿಟ್ಟು ಬಂಡಿಯ ಒಳಗ ಹೋಗಿ ಕೂರಬೇಕಿತ್ತು. ಇಬ್ಬರು ಹೆಚ್ಚೆಂದರೆ ಮೂವರು ಕೂರಬಹುದಿತ್ತು. ನಂತರದಲ್ಲಿ ಆ ಬಂಡಿ ಧಡಕ್ ಬಡಕ್ ಎಂದು ಸಾಗುವಾಗ ನಮ್ಮ ಬೆನ್ನು ಮೂಳೆ ನೆಟ್ಟಗಾಗುತ್ತಿತ್ತು. ಇಳಿಯುವಾಗಲೂ ಕಸರತ್ತು ಮಾಡಿ ಇಳಿಯಬೇಕಿತ್ತು. ನಮ್ಮಂತಹ ಮಕ್ಕಳಿಗೆ ಅದೊಂದು ರೀತಿಯ ಥ್ರಿಲ್ಲಿಂಗ್ ಎಕ್ಸ್ಪೀರಿಯೆನ್ಸ್ ಕೊಡುತ್ತಿತ್ತು. ನಂತರದ ವರ್ಷಗಳಲ್ಲಿ ಅದು ಮರೆತು ಹೋದ ಆಧ್ಯಾಯವಾಯಿತು. ಏಕೆಂದರೆ ನಮ್ಮೂರ ಕಡೆ ಟಾಂಗಾ ಇರಲಿಲ್ಲ!
ಈಗ್ಗ್ಯೆ ಐದಾರು ವರ್ಷಗಳ ಹಿಂದೆ ನಾನು ಹಾಗೂ ಅಭಿ ಲಕ್ನೋ ಗೆ ಹೋದಾಗ ಅಲ್ಲಿ ಟಾಂಗಾ ಹತ್ತುವ ಅವಕಾಶ ಸಿಕ್ಕಿತು. ಸಿ ಎಂ ಎಸ್ ಶಾಲೆಯ ದೊಡ್ಡ ಆವರಣವನ್ನು ಟಾಂಗಾದಲ್ಲಿ ಸುತ್ತುವ ಅವಕಾಶ ಸಿಕ್ಕಿತು. ಆ ಟಾಂಗಾದ ಹಿಂದೆ ಇಬ್ಬರು ಕುಳಿತುಕೊಳ್ಳಲು ಆಗುವಂತಹ ಬೆಂಚಿನಾಕಾರದ ಸೀಟ್ ಇತ್ತು. ನಾವಿಬ್ಬರು ಗಮ್ಮತ್ತಿನಿಂದ ಸುಮಾರು ಹತ್ತಿಪ್ಪತ್ತು ನಿಮಿಷ ಟಾಂಗಾದಲ್ಲಿ ತಿರುಗಾಡಿದೆವು. ಹಳೆಯ ನೆನಪುಗಳನ್ನು ಬಡಿದೆಬ್ಬಿಸುವ ಅನುಭವ ಅದಾಗಿತ್ತು.
ಹಿಂದೆಲ್ಲ ಟಾಂಗಾ ನಡೆಸುತ್ತಿದ್ದವರು ತಮ್ಮ ಕುದುರೆಗಳನ್ನು ಚೆನ್ನಾಗಿ ಪ್ರೀತಿಯಿಂದ ಜೋಪಾನವಾಗಿ ಪೋಷಿಸುತ್ತಿದ್ದರು. ಟಾಂಗಾದ ಕುದುರೆಗಳು ಆರೋಗ್ಯಕರವಾಗಿ ಫಳಫಳನೆ ಹೊಳೆಯುತ್ತಿದ್ದವು. ಮಾಲೀಕನ ಮತ್ತು ಕುದುರೆಯ ಬಾಂಧವ್ಯ ಹೇಗಿರುತ್ತಿತ್ತೆಂದರೆ ಮಾಲೀಕನ ಕೈಯಲ್ಲಿರುತ್ತಿದ್ದ ಚಾಟಿಗೆ ಅವು ಕೆಲಸ ಕೊಡದಿರುವಂತೆ ಅವನ ನಿರ್ದೇಶನಗಳನ್ನು ಪಾಲಿಸುತ್ತಿದ್ದವು. ಟಾಂಗಾ ಹೊಡೆಯುವುದು ಒಂದು ಜೀವನೋಪಾಯದ ದಾರಿಯಾಗಿದ್ದರೂ ಮಾಲೀಕನ ಮತ್ತು ಕುದುರೆಯ ನಡುವೆ ವ್ಯವಹಾರಕ್ಕೂ ಮೀರಿದ ಭಾವನಾತ್ಮಕ ಸಂಬಂಧವಿರುತ್ತಿತ್ತು ಎಂಬುವುದು ಸತ್ಯದ ವಿಷಯವಾಗಿತ್ತು. ಪ್ರಾಯಶಃ ನನ್ನ ಸಮಕಾಲೀನರು ಪ್ರಾಣಿ ಅವಲಂಬಿತ ಟಾಂಗಾ, ಎತ್ತಿನ ಗಾಡಿಗಳನ್ನೂ ನೋಡಿದ್ದಾರೆ ಹಾಗೂ ಅತ್ಯಾಧುನಿಕ ವಾಹನಗಳನ್ನೂ ನೋಡಿದ್ದಾರೆ. ಅದಕ್ಕೆ ತಕ್ಕಂತೆ ಸಾಮಾಜಿಕ ಜೀವನದಲ್ಲಾದ ಬದಲಾವಣೆಗಳನ್ನು ನೋಡುವ ಅವಕಾಶವೂ ನಮಗೆ ಸಿಕ್ಕಿದೆ. ಆದರೂ ಜಟಕಾ ಬಂಡಿಯ ಕುಲುಕಿಸುವ ಪಯಣ ಅದರದ್ದೇ ಆದ ಪ್ರಭಾವಶಾಲಿ ನೆನಪುಗಳನ್ನು ಇನ್ನೂ ನನ್ನಂತವರ ಒಳಗಿಟ್ಟಿದೆ!