Saturday, September 5, 2020

ಪದ್ಮನಾಭ ಸೋಮಯಾಜಿ (ಅಣ್ಣಯ್ಯ)

ಅಭಿಲಾಷ ಅವಳ ಸುಂದರವಾದ ಲೇಖನ:
ಸಪ್ಟಂಬರ 5, 2020 




ಮೊನ್ನೆಯ ದಿನ ನನ್ನ ಮಾವ ಬಿ.ಪಿ.ಸೋಮಯಾಜಿಯವರು ಹುಟ್ಟಿದ ದಿನ. ಅಪ್ಪನನ್ನು ಪ್ರೀತಿಯಿಂದ ನೆನೆದು ಅವರ ಮಗಳು ಶೋಭ ಚೆಂದದ ಬರೆಹವನ್ನು ಬರೆದಿದ್ದಾಳೆ. ಅವಳು ಹೀಗೆ " ಅಪ್ಪ" ಎಂದು ಬಾಯಗಲಿಸುವಾಗೆಲ್ಲ ನನಗೂ ಸಣ್ಣಗೆ ಹೊಟ್ಟೆ ಕಿಚ್ಚಾಗಿ ಬಿಡುತ್ತದೆ! ಏಕೆಂದರೆ ನಾನು ಹದಿನೆಂಟರ ವಯಸ್ಸಿಗೆಲ್ಲಾ ಮದುವೆಯಾಗಿ ನನ್ನ ಅತ್ಯಂತ ಪ್ರೀತಿಯ "ಅಪ್ಪಯ್ಯ" ನಿಂದ ದೂರ ಉಳಿಯುವಂತಾದಾಗ, ತಂದೆ ತಾಯಿಯರ ಸಾಲಿನಲ್ಲಿ ಅಂತದ್ದೇ ಇನ್ನೊಂದು ಆಪ್ತ ಜೀವವಾಗಿ ನನ್ನ ಬದುಕಲ್ಲಿ ಅರಳಿದವರು ನನ್ನ ಈ "ಮಾವ". ಅವರ ಅಕ್ಕರೆ ನನ್ನ ಮಗುತನವನ್ನು ಪೋಷಿಸಿದರೆ, ಅವರು ಕೊಡುತ್ತಿದ್ದ democratic space ನಿಂದಾಗಿ ವಯಸ್ಸು, ಅನುಭವ, ಕೌಟುಂಬಿಕ ಮುಲಾಜು - ಇಂತಹ ಅನೇಕ ಗೋಡೆಗಳನ್ನು ದಾಟಿ ಅಪೂರ್ವವೆನಿಸುವ ಸ್ನೇಹ ಸಂಬಂಧವೊಂದು ನನಗೆ ಅವರೊಡನೆ ಏರ್ಪಟ್ಟಿತ್ತು. ನಾಟಕ, ವಿಚಾರ ಸಂಕಿರಣಗಳೆಂದು ಅನೇಕ ಕಡೆ ನಾವು ಜೊತೆಯಾಗಿ ಹೋಗುತ್ತಿದ್ದೆವು. ಗಂಡನ ತಂದೆಯೊಂದಿಗೆ ಇಷ್ಟೆಲ್ಲ ಸಲಿಗೆ ಸಾಧ್ಯವೇ ಎಂದು ನೋಡಿದವರೆಲ್ಲ ಕಣ್ಲರಳಿಸುವಂತಿತ್ತು ನಮ್ಮ ಬಾಂಧವ್ಯ!
ಚಿತ್ರಕಲಾ ಶಿಕ್ಷಕರಾಗಿ ತಮ್ಮ ವೃತ್ತಿ ಆರಂಭಿಸಿ ಮುಂದೆ ಜೀವವಿಮಾ ನಿಗಮದ ಅಧಿಕಾರಿಯಾಗಿ ನಿವೃತ್ತರಾದವರು ಅವರು. ಅವರ ಬರೆಹಗಳಲ್ಲಿನ ಅಕ್ಷರಗಳ ಪೋಣಿಸುವಿಕೆಯೇ ಒಂದು ಕಲಾಕೃತಿಯಂತಿರುತ್ತಿತ್ತು. ಅದೇಕೋ ವೃತ್ತಿ ಬದಲಾದಾಗಲೇ ಚಿತ್ರ ಬಿಡಿಸುವ ಅಭ್ಯಾಸವನ್ನೂ ಅವರು ಕೈಬಿಟ್ಟರು. ಆದರೆ ಕಲಾಸ್ವಾದನೆ ಮಾತ್ರ ಅವರ ಬದುಕಿನುದ್ದಕ್ಕೂ ಅವರ ತೀವ್ರವಾದ ಒಲವಾಗಿತ್ತು.
ಅವರಿದ್ದಲ್ಲಿ ಉತ್ಸಾಹ ಕುಣಿಯುತ್ತಿರುತ್ತಿತ್ತು! ಕುಶಾಲು ಸಶಬ್ದ ನಗು! ಮಾತಿಲ್ಲದ ಮೌನ‌ ಅವರಿಗೆ ಒಗ್ಗುತ್ತಿರಲಿಲ್ಲ. ಆಗೆಲ್ಲ ಕೈಯ್ಯಲ್ಲೊಂದು ಪುಸ್ತಕವೋ ಪತ್ರಿಕೆಯೋ ಬೇಕಿರುತ್ತಿತ್ತು!
ಪ್ರಯೋಗಶೀಲತೆ ಅವರ ಹುಟ್ಟು ಗುಣ. ಶಿಕ್ಷಕರಾಗಿದ್ದಾಗ ಶಾಲೆಯಲ್ಲಿ ಹೊಸತರದ ನಾಟಕವಾಡಿಸುತ್ತಿದ್ದರಂತೆ, ವಿದ್ಯುತ್ತೇ ಇಲ್ಲದ ಆ ಕಾಲದಲ್ಲಿ ರಂಗದ ಮೇಲೆ ಬೆಳಕಿನ ಪ್ರಯೋಗ ಮಾಡಿದ್ದರಂತೆ! ತನಗೆ ಬೇಕಾದ ಕೊಳಲನ್ನು ತಾನೇ ಮಾಡಿ ನುಡಿಸಲು ತಾನೇ ಕಲಿತವರು. ಅವರೇ ಖುದ್ದಾಗಿ ಮಾಡಿದ ಮೇಜು ಇಂದಿಗೂ ನಮ್ಮ ಮನೆಯಲ್ಲಿದೆ. ರಸ್ತೆಗಳೇ ಇಲ್ಲದ ದಾರಿಯಲ್ಲಿ ನಮ್ಮತ್ತೆಗೆ ಸೈಕಲ್ ಸವಾರಿ ಮಾಡಿಸುತ್ತಿದ್ದರು, ಜನ ಸೈಕಲ್ಲನ್ನು ಮಾತ್ರ ಕಂಡಿದ್ದ ಕಾಲಕ್ಕೆ ಬುಲೆಟ್ನಲ್ಲಿ ಊರು ಸುತ್ತಿ “ ಗುಡು ಗುಡು ಮಾಮ” ಅಂತ ಕರೆಸಿಕೊಂಡರು.
ದೇವಸ್ಥಾನದ ಅರ್ಚಕರ ಮಗನಾಗಿದ್ದರೂ ಜಡ್ಡುಕಟ್ಟಿದ ನಂಬಿಕೆಗಳಿಗೆ ಅವರು ಬಹಳ‌ ದೂರ. ಶ್ರಮದಿಂದ ಬದುಕು ಕಟ್ಟಿಕೊಂಡು ಎಲ್ಲ ಸಾಂಪ್ರದಾಯಕತೆಯನ್ನು ಮೀರಿ ಬದುಕುತ್ತಿದ್ದರು. ಸಾಹಿತ್ಯ,ಸಂಗೀತ ,ರಾಜಕೀಯ - ಹೀಗೆ ಅವರಿಗೆ ಎಲ್ಲ ವಿಷಯಗಳ ಬಗೆಗೂ ಆಸಕ್ತಿಯಿದ್ದು ಪ್ರಗತಿಗಾಮೀ ಚಿಂತನೆಯಿಂದಾಗಿ ತನ್ನ ಓರಗೆಯವರಿಗಿಂತ ಎಷ್ಟೋ ಭಿನ್ನವಾಗಿ ಯೋಚಿಸುತ್ತಿದ್ದರು ಮತ್ತು ಜೊತೆಯವರನ್ನೆಲ್ಲಾ ವೈಚಾರಿಕತೆಗೆ ಅಣಿಗೊಳಿಸುತ್ತಿದ್ದರು.
ಎಂತಾ ಸಂಕಷ್ಟದ ಸಮಯದಲ್ಲೂ " ಅಯ್ಯೋ" ಎಂದು ಉದ್ಗರಿಸಿದವರಲ್ಲ. " ಕಷ್ಟ ಮನುಷ್ಯನಿಗಲ್ಲದೇ ಮರಕ್ಕೆ ಬರುತ್ತದೆಯೇ" ಎಂದು ಅಸಹನೀಯ ಪರಿಸ್ಥಿತಿಯನ್ನೂ ಒಪ್ಪಿಕೊಂಡು ಎದುರಿಸುವ ಸ್ಥೈರ್ಯವನ್ನು ನನಗೆ ಕಲಿಸಿದವರು ಅವರು. ಆತಂಕದ ಪರಿಸ್ಥಿತಿ ಬಂದಾಗ ಅದರಿಂದ ಒದಗಬಹುದಾದ ಅತ್ಯಂತ ಕೆಟ್ಟ ಪರಿಣಾಮವನ್ನು ಊಹಿಸಿಕೊಂಡು ಅದನ್ನು ಎದುರಿಸಲು ನಮ್ಮ‌ ಮನಸ್ಸನ್ನು ಸಿದ್ಧಪಡಿಸಿಕೊಂಡರೆ ನಂತರ ಬರುವ ಎಲ್ಲಾ ತರದ ಕಷ್ಟಗಳೂ ನಾವಂದುಕೊಂಡದ್ದಕ್ಕಿಂತ ಸುಲಭವಾಗೇ ಕಾಣುತ್ತದೆ ಎನ್ನುವುದು ಅವರು ನನಗೆ ಹೇಳಿದ ಇನ್ನೊಂದು ಜೀವನ ಪಾಠ.
ಈ ಪ್ರಪಂಚದಲ್ಲಿ ಯಾರ ಬಗೆಗಾಗಲೀ ಯಾವುದರ ಬಗೆಗಾಗಲೀ ಅವರು ದೂರುತ್ತಿದ್ದದ್ದನ್ನ ನಾನು ಎಂದೂ ನೋಡಿಲ್ಲ.ಇನ್ನೊಬ್ಬರ ಬಗೆಗೆ ಒಮ್ಮೆಯೂ ಹಗುರವಾಗಿ ಮಾತಾಡಿದವರೇ ಅಲ್ಲ ! ಈ ವಿಚಾರದಲ್ಲಿ ನಮ್ಮ‌ ಮಾವನಿಗೆ ಸಾಟಿಯಾದವರನ್ನು ನಾನು ಇದುವರೆಗೆ ಕಂಡಿದ್ದಿಲ್ಲ. ಎಲ್ಲರ ಬಗೆಗೆ ಗೌರವ ಮತ್ತು unconditional ಪ್ರೀತಿ ಅವರಿಗಿತ್ತು. ಅವರ ಕಣ್ಣಲ್ಲಿ ಅತೃಪ್ತಿಯ ಒಂದು ಸಣ್ಣ ಗೆರೆಯೂ ಎಂದಿಗೂ ಇದ್ದಿರಲಿಲ್ಲ.
ಮಕ್ಕಳ ಬಗೆಗೆ ಅತೀವ ಮೋಹ. ಆದರೆ ತನ್ನ ಪ್ರೀತಿ ಅವರ ಬೆಳವಣಿಗೆಯನ್ನು ಕಟ್ಟಿಹಾಕದಂತೆ ನೋಡಿಕೊಳ್ಳುವ ಎಚ್ಚರವೂ ಅವರಿಗಿತ್ತು. ಯಾವುದೋ ವಸ್ತುವನ್ನು ಮಕ್ಕಳು ಬಾವಿಗೆ ಎಸೆದರು ಎಂದು ಗೊತ್ತಾಗಿ ಅವರನ್ನು ಬಾವಿಗೇ ಇಳಿಸಿ ಮೇಲೆ ತರಿಸಿದ್ದರಂತೆ! ಮಕ್ಕಳ ಸಾಹಸೀ ಗುಣಕ್ಕೆ ಅವರದ್ದು ಯಾವಾಗಲೂ ಪ್ರೋತ್ಸಾಹವೇ! ಮಕ್ಕಳಿಂದ ದೂರಾಗಬೇಕಾದ ಸಂದರ್ಭ ಬಂದಾಗಲೂ ಖುಶಿ ಖುಶಿಯಾಗೇ ಇರುತ್ತಿದ್ದ ಅವರ “detached attachment” ನನಗೊಂದು ವಿಸ್ಮಯವಾಗಿ ಕಾಣುತ್ತಿತ್ತು. ತನ್ನ ವಿಚಾರಗಳನ್ನು ಮಕ್ಕಳ ಮೇಲಾಗಲೀ ಈ ಸೊಸೆಯ ಮೇಲಾಗಲೀ ಎಂದೂ ಹೇರಿದವರಲ್ಲ, ನಮ್ಮ‌ ಸ್ವಂತಿಕೆಯನ್ನು ಖುಶಿಯಿಂದ ಗೌರವಿಸುತ್ತಿದ್ದರು. ಕಟ್ಟುನಿಟ್ಟಿನ ಮನೆಯ ಯಜಮಾನ ಅವರಾಗಿರದೆ ಅವರವರ ಸ್ವಾತಂತ್ರ್ಯವನ್ನು ಅವರವರಿಗೆ ಕೊಡುತ್ತಿದ್ದರು. ಆದರೆ ಸರಿಯಲ್ಲವೆನಿಸದ್ದನ್ನು ಮನವರಿಕೆ ಮಾಡಿಸಲು ಗಂಟೆಗಟ್ಟಲೆ ತಿಳಿಹೇಳುತ್ತಿದ್ದರು, ಪತ್ರಗಳನ್ನು ಬರೆಯುತ್ತಿದ್ದರು.
ನಮ್ಮ‌ಮಾವನ ಜೀವನೋತ್ಸಾಹ ಎಷ್ಟಿತ್ತೆಂದರೆ ಈ ಬದುಕು ನಮಗೆ ದೊರೆತ ಒಂದು ಅಪೂರ್ವ ಅವಕಾಶ ಎಂಬಂತೆ‌ ಒಂದು ಕ್ಷಣಕ್ಕೂ ಕೊರಗದೆ ಉಲ್ಲಾಸವನ್ನೇ ಜೀವಿಸುತ್ತಿದ್ದರು. ಹಾಗೆಂದು ಸಾವನ್ನೂ ಬಹುಕಾಲದ ಸ್ನೇಹಿತನಂತೆ ಇನ್ನೇನು ಸಿಕ್ಕುವವನಿದ್ದಾನೆ ಎಂಬಂತ ಮಾತಿನ ಪಟಾಕಿ ಹಾರಿಸುತ್ತಿದ್ದರು. ಅರವತ್ತರ ನಂತರ ಪ್ರತೀ ವರ್ಷವೂ ತನಗೆ ಸಿಕ್ಕಿದ ಬೋನಸ್ ಇಯರ್ ಅಂತ ಸಂಭ್ರಮದಿಂದ ಹೇಳಿಕೊಳ್ಳುತ್ತಿದ್ದರು. ಇನ್ನೂ ನೆನಪಿದೆ, ಆ ದಿನ ಅವರು ಮಿದುಳುಸ್ರಾವವಾಗಿ ಒಂದೇ ಸಮನೆ ವಾಂತಿ ಮಾಡಿಕೊಳ್ಳುತ್ತಿದ್ದರು, ನನ್ನನ್ನ ಕೂಗಿ ಕರೆದು “ಅಭೀ.. Beautiful experience! ಎಲ್ಲವೂ ..ಭೂಮಿ ಆಕಾಶ ..ಸುತ್ತಲಿನ ಎಲ್ಲವೂ ಸುತ್ತುತ್ತಿವೆ…ಇದೆಂತಾ ಚೆಂದ!” ಎಂದು ತೊದಲುತ್ತಾ ಪ್ರಜ್ಞಾಶೂನ್ಯರಾಗಿದ್ದರು. ಕೊನೆಗಾಲದವರೆಗೂ positive spirit ನ್ನೇ ಉಸಿರಾಡಿ ಸಾವಿನ ಸೌಂದರ್ಯವನ್ನೂ ಆಸ್ವಾದಿಸಿದ ನಮ್ಮ ಮಾವ ನನ್ನ‌ ಬದುಕಿಗೆ ದೊಡ್ಡ ಸ್ಫೂರ್ತಿ!

No comments:

Post a Comment