Sunday, April 11, 2021

"ಪಾ. ವೆಂ. ಸ್ಮೃತಿ" - ಶಿವರಾಮ ಕಾರಂತ ವೇದಿಕೆ

 ಭಾನುವಾರ ,ದಿನಾಂಕ 11 ಏಪ್ರಿಲ್ 2021 

ಗೂಗಲ್ ಮೀಟ್ ವರ್ತುವಲ್ ಕಾರ್ಯಕ್ರಮ 





ಡಾ. ವಿಜಯ ಲಕ್ಷ್ಮಿ ಬಾಳೆಕುಂದ್ರಿ 

ಅದೊಂದು ಉನ್ನತ ಮಟ್ಟದ ಸಾಹಿತ್ಯಿಕ ಕಾರ್ಯಕ್ರಮ. ಪಾಡಿಗಾರು ವೆಂಕಟ್ ರಾಜ್ ಆಚಾರ್ಯರ ನೆನಪಿಸಿ ಕೊಂಡು "ಪಾ.ವೆಂ. ಸ್ಮೃತಿ" ಎಂಬ ಸುಮಾರು ಎರಡು ಗಂಟೆಯ ವರ್ತುವಲ್ ಕಾರ್ಯಕ್ರಮ.


ಸುಮಾರು 40 ಸಾಹಿತ್ಯಾಭಿಮಾನಿಗಳು, ಪಾ ವೆಂ ಅವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಪಾ ವೆಂ ಅವರ ಮೊಮ್ಮಗಳು ಶ್ರೀಮತಿ ಛಾಯಾ ಉಪಾಧ್ಯ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ಜ್ಯೋತಿ ಉಪಾಧ್ಯ ಅವರು ಮಾಡಿದ್ದರು.


ಮಾಯಾ ಮತ್ತು ಶಾಲಿನಿಯವರಿಂದ ಪ್ರಾರ್ಥನೆಯಾದ ಬಳಿಕ, ಶ್ರೀ. ವೀರಶೇಖರ ಸ್ವಾಮಿಯವರು ಶಿವರಾಮಕಾರಂತ ವೇದಿಕೆಯ ಪರವಾಗಿ ಎಲ್ಲರಿಗೂ ಸ್ವಾಗತ ಕೋರಿದರು.

ವೀರಶೇಖರ ಸ್ವಾಮಿ 

ಕಾರ್ಯಕ್ರಮದ  ಉದ್ಘಾಟಕರಾಗಿ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು "ಪಾ.ವೆಂ" ಅವರ ಸಾಹಿತ್ಯಿಕ, ಮಾನವೀಯ ಬದುಕು, ಅವರೊಡನೆ ಕಳೆದ ದಿನಗಳು, ಅವರ ಉನ್ನತ ಮಟ್ಟದ ಆದರ್ಶ, ಬಗ್ಗೆ ಸುಮಾರು 40 ನಿಮಿಷಗಳ ಕಾಲ ಭಾಷಣ ಮಾಡಿದರು.ಶಿವರಾಮ ಕಾರಂತರು, ಬನ್ನಂಜೆ ಗೋವಿಂದಾಚಾರ್ಯರು ಇವರುಗಲೊಡನೆ ಒಡನಾಟದ ಬಗ್ಗೆಯೂ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ. ರೋಹಿತ್ ಚಕ್ರತೀರ್ಥ (ವಾಗ್ಮಿ, ಅಂಕಣ ಬರಹಗಾರರು) ಅವರು ಪಾ ವೆಂ ಅವರ ಪಾ. ವೆಂ. ಅವರ ಕೃತಿಗಳು, ಸಾಹಿತ್ಯದಲ್ಲಿ ಅವರ ಆಸಕ್ತಿ, ಪತ್ರಿಕೋದ್ಯಮದಲ್ಲಿ ಅವರ ಕಾರ್ಯ ನಿರ್ವಹಣೆ, ಬಗ್ಗೆ ವಿಸ್ತಾರವಾಗಿ ಸುಮಾರು 45 ನಿಮಿಷಗಳ ಕಾಲ ಮಾತನಾಡಿದರು.


ಕಾರ್ಯಾಧ್ಯಕ್ಷರಾದ ಶ್ರೀ ಪಾ. ಚಂದ್ರಶೇಖರ ಚಡಗ ಅವರು ಶಿವರಾಮ ಕಾರಂತ ವೇದಿಕೆಯು ಕಳೆದ 27 ವರ್ಷಗಳಿಂದ ನಡೆದು ಬಂದ ಹಾದಿ, ಆಶೋತ್ತರಗಳು, ಅರ್ಥಿಕ ಸಮಸ್ಯೆ ಗಳ ಬಗ್ಗೆ ಮಾತನಾಡಿದರು.

ಸಹ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಅವರು ಕಾರ್ಯಕ್ರಮದ ಯಸಸ್ಸಿಗೆ ಶ್ರಮಿಸಿದ ಎಲ್ಲರಿಗೆ ವಂದನಾರ್ಪಣೆ ಗೈದರು.

"ಸಾಹಿತ್ಯಿಕ ಸಂಜೆ"

ದಿನಾಂಕ 11-04-2021 ಭಾನುವಾರ ಸಂಜೆ 4.30 ಕ್ಕೆ ರಂದು ಶಿವರಾಮ ಕಾರಂತ ವೇದಿಕೆ (ರಿ), ಆರ್ ಟಿ.ನಗರ ಹಾಗೂ ಪಾ.ವೆಂ. ಆಚಾರ್ಯರ ಬಂಧು ಬಳಗದವರು ,.ವತಿಯಿಂದ "ಪಾ‌.ವೆಂ.ಸ್ಮೃತಿ" ಶೀರ್ಷಿಕೆ ಯಲ್ಲಿ ಕನ್ನಡ ಸಾಹಿತ್ಯ ಕೃಷಿಯ ಮೂಲಕ ಅಜರಾಮರರಾಗಿರುವ ಪಾ‌.ವೆ. ಆಚಾರ್ಯ ಇವರ ಸಾಹಿತ್ಯಕ ಚಿಂತನಗಳ ಮಂಥನ ನಮ್ಮ ವೇದಿಕೆಯ ಗೂಗಲ್ ವರ್ಚುವಲ್ ಸಭೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಪಾ.ವೆ.ಸ್ಮೃತಿ ಕಾರ್ಯಕ್ರಮದ 

 ಉದ್ಘಾಟಕರು: 

 ಡಾ. ವಿಜಯಲಕ್ಷ್ಮೀ  ಬಾಳೆಕುಂದ್ರಿ ರವರು

ವೃತ್ತಿಯಲ್ಲಿ ವೈದ್ಯೆ, ಪ್ರವೃತ್ತಿಯಲ್ಲಿ ಸಾಹಿತಿ, ವಾಗ್ಮಿ, ಶ್ರೇಷ್ಠ ಬರಹಗಾರ್ತಿ.

 ಮುಖ್ಯ ಅತಿಥಿಗಳು: 

 ಶ್ರೀ ರೋಹಿತ್ ಚಕ್ರತೀರ್ಥರವರು 

ವಾಗ್ಮಿಗಳು ಮತ್ತು ಅಂಕಣ ಬರಹಗಾರರು

ವೇದಿಕೆಯ ಸಭೆಯಲ್ಲಿ ಪಾ.ವೆಂರವರ  ಇಷ್ಟದೇವರು ಕೃಷ್ಣನ ನೆನೆದು ಪ್ರಾರ್ಥನೆಯ ಮೂಲಕ ಶುಭಾರಂಭವಾಯಿತು ಹಾಗೂ ಕಾರ್ಯಕ್ರಮದ ಮಧ್ಯದಲ್ಲಿ ಪಾ.ವೆಂ ರವರ ಕವನ "ಬಯಕೆಯ ಬೆನ್ನು ಹತ್ತಿ"  ಕೇಳುಗರು ಸಂಗೀತ ಕಛೇರಿಯಲ್ಲಿ ಕುಳಿತ ಆಹ್ಲಾದಿಸಿದ ಅನುಭವಕ್ಕೆ ಸಾಕ್ಷಿಯಾಯಿತು ವೇದಿಕೆ, ಈ ರಸಾನುಭವ ಉಣಿಸಿದವರು ಅವರ ಮೊಮ್ಮಕ್ಕಳಾದ ಮಾಯಾ ಕೆ ಮತ್ತು ಶಾಲಿನಿಯವರು. 

ಸಭೆಯ ಆರಂಭ, ಪ್ರಸ್ತಾವಿಕ ನುಡಿಗಳು, ಪಾ.ವೆಂ ರವರ ಪರಿಚಯ, ಗಣ್ಯರ ಪರಿಚಯ ಜವಾಬ್ದಾರಿಗಳೊಂದಿಗೆ ಅಚ್ಚುಕಟ್ಟಾದ  ನಿರೂಪಣೆ ಮಾಡಿದರು ಪಾ.ವೆಂ ಕುಟುಂಬದ ದಿಂದ ಶೀಮತಿ ಜ್ಯೋತಿ ಉಪಾಧ್ಯಾಯ ರವರು. 

ವೇದಿಕೆಯ ಪರವಾಗಿ ಉಪಾಧ್ಯಕ್ಷರಾದ  ಶ್ರೀ ವೀರಶೇಖರಸ್ವಾಮಿರವರು ಸ್ವಾಗತ ಭಾಷಣ ಮಾಡಿದರು.

ವೇದಿಕೆಯ ಸಂಸ್ಥಾಪಕರು ಪ್ರಸ್ತುತ ಕಾರ್ಯಾಧ್ಯಕ್ಷರಾದ ಶ್ರೀ ಪಾ. ಚಂದ್ರಶೇಖರ ಚಡಗರವರು ವೇದಿಕೆ ಬೆಳೆದು ಬಂದ ಹಾದಿ ಪ್ರಸ್ತುತ ಸವಾಲುಗಳು, ಕಾರ್ಯಕ್ರಮದಲ್ಲಿ ಪಾ.ವೆಂ ಕುರಿತು ಗಣ್ಯರ ಅದ್ಭುತ ವಿಷಯ ಮಂಥನದ ಪರವಾಗಿ ಸಂತಸ ಹಂಚಿಕೊಂಡರು.

ನಮ್ಮ ವೇದಿಕೆಯ ಗೂಗಲ್ ವರ್ಚುವಲ್ ಸಭೆಯ ಯಶಸ್ಸಿನ ಈ ಗುಟ್ಟು, ಖಜಾಂಚಿ ಗಳಾದ ಶ್ರೀ ಜಯರಾಮ್ ಸೋಮಯಾಜಿರವರು. ಕಾರ್ಯಕ್ರಮ ಆಯೋಜನೆಯ ನಂತರದ   ಗೂಗಲ್ ಮೀಟ್  ಎಲ್ಲಾ ತಾಂತ್ರಿಕ ಹಾಗು ವಿಷಯ ಪಸರಣ ಸ್ಥರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಎಲೆಮರೆ ಕಾಯಿಯಂತೆ ಇರುವುದು ಇವರ ಸ್ವಭಾವ.

 ಶಿವರಾಮ ಕಾರಂತ ವೇದಿಕೆ ಪಾ.ವೆಂ ಕುಟುಂಬ ಮತ್ತು ಅವರ  ಬಂಧುಬಳಗದವರಿಗೆ  ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ. ಕಾರಣ ಶಿವರಾಮ ಕಾರಂತರ ಸಮಕಾಲೀನರಾದ

ಪಾ.ವೆಂ ರವರ  ನೆನೆಯುವ ಕಾರ್ಯಕ್ರಮ "ಪಾ.ವೆಂ ಸ್ಮೃತಿ"    ನಮ್ಮ ಶಿವರಾಮ ಕಾರಂತ ವೇದಿಕೆಯಲ್ಲಿಯೇ ನಡೆಯಬೇಕು ಎನ್ನುವ ಅವರ ಅಭಿಲಾಷೆಗೆ ಹಾಗೂ ಕೈಜೋಡಿಸಿ ಯಶಸ್ಸುಗೊಳಿಸಿದ್ದಕ್ಕೆ.

ವೇದಿಕೆಯ ಉಪಕಾರ್ಯದರ್ಶಿ ಶಶಿಕಲಾ ಆರ್ ವಂದನಾರ್ಪಣೆ ಸಲ್ಲಿಸಿದರು

ಆತ್ಮೀಯ ಸಾಹಿತ್ಯ ಬಂಧುಗಳೇ ಕಾರ್ಯಕ್ರಮದಲ್ಲಿ ಉದ್ಘಾಟಕರ ಹಾಗು ಮುಖ್ಯ ಅತಿಥಿಗಳು ಮಾಡಿದ ಭಾಷಣದ ವಿವರಗಳನ್ನು ಮುಂದೆ ಹಂಚಿಕೊಳ್ಳೋಣ ಎನ್ನುತ್ತಾ ವೇದಿಕೆ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತದೆ.

ಶಶಿಕಲಾ ಅವರು ಬರೆದಿರುವ ಮುಂದಿನ ಭಾಗ:

15.02.1915ರಲ್ಲಿ ಕುಂಜಿಬೆಟ್ಟು ಹಳ್ಳಿ, ಉಡುಪಿ ಇಲ್ಲಿ ಜನನ. ಲಂಗೂಲಾಚಾರ್ಯ, ಪಾ.ವೆ. ಆಚಾರ್ಯ, ರಾಧಾಕೃಷ್ಣ ಕಾವ್ಯನಾಮ . ಇವರು  ಪತ್ರಕರ್ತ, ಲೇಖಕ, ಕವಿ, ಚಿಂತಕ, ಮಾರ್ಗದರ್ಶಿಕರಾಗಿ ಕಾದಂಬರಿ, ಕವನ, ಪ್ರಬಂಧಗಳು ಲೇಖನಗಳು, ವೈಜ್ಞಾನಿಕ ಲೇಖನಗಳನ್ನು ಬರೆದಿದ್ದಾರೆ. ಬಿ.ಡಿ.ಗೋಯಾಂಕಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಆಕಾಡಮಿ ವಜ್ರ ಮಹೋತ್ಸವ ಪ್ರಶಸ್ತಿ ಪುರಸ್ಕೃತರು.

ಪಾ.ವೆ.ಸ್ಮೃತಿ ಕಾರ್ಯಕ್ರಮದ 

 


ಉದ್ಘಾಟಕರಾಗಿ ಮಾತನಾಡಿದ, ಡಾ. ವಿಜಯಲಕ್ಷ್ಮೀ  ಬಾಳೆಕುಂದ್ರಿ ರವರು ವೇದಿಕೆಯ ಸ್ಮರಣೀಯ ಕಾರ್ಯಕ್ರಮದ ಆಯೋಜನೆಗೆ ವೇದಿಕೆಗೆ ಗೌರವ ಅರ್ಪಸಿ, ಪಾ.ವೆಂ ರವರ ಬಗ್ಗೆ ಮಾನಾಡುವುದು ಪ್ರೀತಿಯ ವಿಷಯ, ಅವರ ಮಗಳು ಸುಕನ್ಯಾ ರವರಿಗೆ ಅಭಾರಿಯಾಗಿರುವೆ. ವೈದ್ಯ  ವೃತ್ತಿಯ ನನಗೂ ಪಾವೆಂರವರಿಗೂ ಎಲ್ಲಿಯ ಸಂಬಂಧ ಎನ್ನುತ್ತಾ? ಋಣಾನುಬಂಧ!. 1975 ರಲ್ಲಿ ಪಿಜಿ ವಿದ್ಯಾರ್ಥಿ ಯಾಗಿ ಡ್ಯೂಟಿಯಲ್ಲಿದ್ದೆ. 60 ವರ್ಷದ ಹಿರಿಯರಿಗೆ ತುರ್ತು ಚಿಕಿತ್ಸೆಗೆ ಬಂದಿರುವ ವಿಷಯ ತಿಳಿದು ಧಾವಿಸಿ  ಬಂದೆ,ನೋಡಿದಾಗ ರಕ್ತ ವಾಂತಿಆಗುತ್ತಿತ್ತು. ಹೊಟ್ಟೆ ರಕ್ತ ಸ್ರಾವ, ಅವರ ನಾಡಿ, ಬಿಪಿ ಸಾಮಾನ್ಯ ಮಟ್ಟಕ್ಕೆ ತರೋದೇ ಕಷ್ಟವಾಗಿತ್ತು.  ವೈದ್ಯರಾದ ಡಾ.ಸದಾಶಿವ ಅಂಚೆ ರವರು ಪಾ‌.ವೆಂ ಬಂದಿದ್ದಾರೆ ಅಂತ ಓಡಿ ಬಂದರು.ವಿಚಾರಿಸಲು ಕಸ್ತೂರಿ ಆರಂಭ ಮಾಡಿದವರು ಗೊತ್ತಾಯಿತು.ಆಗ Reader digest ಇದೆ ಅಂತ ಸಹ ನನಗೆ ಗೊತ್ತಿರಲಿಲ್ಲ. ಚಿಕಿತ್ಸೆ ಕೊಡುತ್ತಾ ಗೊತ್ತಾಯಿತು. ರೂಪ ಚಿಕ್ಕದು, ಕೆಲಸ ದೈತ್ಯ. ಮಾನಸಿಕ ಒತ್ತಡ ಹೆಚ್ಚಾಗಿ, ಆಸ್ಮಾ ಕಾಯಿಲೆ ಬಂದಿತ್ತು.. ಅದಕ್ಕೆ ಕೊಡುವ ಸ್ಟಿರಾಯ್ಡ್ ಗಳು ಕಾಂಪ್ಲಿಕೇಷನ್ ಆಗಿ ಗ್ಯಾಸ್ಟ್ರಾಯಿಕ್ ತಿರುಗಿ ಎರಡು ಮುರು ದಿನ 20 ರಿಂದ 23 ಬಾಟೆಲ್ ರಕ್ತ ಕೊಟ್ಟರು. ರಕ್ತ ಸ್ರಾವ.ನಿಲ್ಲಲೇ ಇಲ್ಲ. ಹೊಟ್ಟೆ ಕತ್ತರಿಸಿ ತೆಗೆದು ಅವರ ಜೀವ ಉಹಿಸಬೇಕಾಯಿತು. 22 ಬಾಟಲ್  ರಕ್ತ ಕೊಡುವಾಗ  ಸ್ವತಃ ನಾನೇ ಪಕ್ಕದಲ್ಲಿಯೇ ಕುಳಿತುಕೊಳ್ಳುತ್ತಿದ್ದೆ. 23ನೇ ಬಾಟಲ್ ರಕ್ತ  ಬೇರೆ ಡಾಕ್ಟರು ಮಿಸ್ ಮ್ಯಾಚ್ ಕೊಟ್ಟ ಕಾರಣ ತೊಂದರೆ ಅನುಭವಿಸಿದರು. ಅವರಿಗೆ ನನ್ನ  ಮೇಲೆಯೇ ಹೆಚ್ಚು ನಂಬಿಕೆ , ನನ್ನನ್ನು ತನ್ನ ಮಗಳಂತೆಯೇ ನೋಡಿಕೊಂಡರು. 

ಮುಂದೆ ಗರ್ಭಿಣಿಯಾದಾಗ ಅಮ್ಮ (ಪಾ.ವೆ. ಪತ್ನಿ) ನನ್ನ ಮೊದಲ ಬಾಣಂತನ ಮಾಡಿದರು. ಅವರ ಮನೆಯ ಹಿತ್ತಾಳೆಯ ತೊಟ್ಟಿಲಲ್ಲಿ ನನ್ನ ಮಗಳು ಸ್ಫೂರ್ತಿ ಮಲಗಿದ್ದಳು. ಗರ್ಭಿಣಿ ಯಾಗಿದ್ದಾಗ ಅವರ ಮನೆಗೆ ಊಟಕ್ಕೆ ಕರೆದರು. ಮೃಷ್ಟಾನ್ನ ಭೋಜನ. ಅವರ ಮನೆಯಲ್ಲಿ ಲಕ್ಷ್ಮಿ, ಸರಸ್ವತಿ, ಅನ್ನಪೂರ್ಣ ಒಟ್ಟಾಗಿ ನೋಡಿದೆ. ಅಷ್ಟು ರುಚಿಯಾದ ಊಟ, ನಂತರ ತಟ್ಟೆ ತುಂಬ ಹಣ್ಣು ಇಟ್ಟು ಕೊಡಲು ಬಂದಾಗ, ನನ್ನ ಪತಿ ಇವರ ಅತಿಥ್ಯಕ್ಕೆ ಸಂಕೋಚ ಕಂಡು ಹಾಸ್ಯ ಚಟಾಕಿ ಹಾರಿಸಿದ್ದರು. " ಸಂಕೋಚ ಪಡಬೇಡ, ನನ್ನ ಹೆಂಡತಿ ಗರ್ಭಿಣಿ ಯಾದರೆ ನೀವೂ ವಾಪಸ್ಸು ಕೊಡಿ" ಅಂತ. ಇವರ ಭಾಮೈಧನ ಜನಾರ್ಧನ ರವರ ಧಾರವಾಡ ಮನೆಗೆ ಊಟಕ್ಕೆ ಹೋಗಿದ್ದು, ಊಟದಲ್ಲಿನ ಅದ್ಭುತ ತಿಳಿಸಾರು. ಮಾರನೆಯ ದಿನವೇ ಹೆರಿಗೆ. 13 ದಿನ ಬಾಣಂತನ ಊಟ, ಪತಿಯವರು ಊಟದ ರುಚಿಗೆ ಮಾರುಹೋದದ್ದು, 13 ದಿನ ಅಷ್ಟನೇ ಸೂತಕ ಅಂತ ಹೇಳಿದ ಮಾತು ನೆನೆದರು. 

ಹೃದಯವಂತಿಕೆ, ಉತ್ತಮ ಉತೃಷ್ಟ ಮನುಷ್ಯತ್ವ. ವಿನಯದ ಜೊತೆಗೆ ಮಾನವೀಯತೆ, ಪಾ.ವೆಂ.ಗುಣಗಳನ್ನು ಯುವಪೀಳಿಗೆ ಕಲಿಯಬೇಕು. ಗಣಿತದಲ್ಲಿ 100% ಪ್ರಾವೀಣ್ಯತೆ. ನಮ್ಮಿಬ್ಬರಿಗೂ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಅವರು ಅಧ್ಯಯನಶೀಲರು, ನನಗೆ ಪಠ್ಯಪುಸ್ತಕ ಅಪ್ಟೇ ಗೊತ್ತಿತ್ತು. ಅವರು ನನ್ನ  ಪತಿಗೆ ನೀವೂ ಬರೆಯಿರಿ ಅಂದರು, ನನಗೆ ಹೇಳಲಿಲ್ಲ. ನಾನು ನನ್ನ ತಂದೆಯವರು ಹೇಳಿದಂತೆ  ಕನ್ನಡದಲ್ಲಿ ಬರೆಯಲು ಶುರುಮಾಡಿದೆ. ಆದರೆ ಅಷ್ಟೊತ್ತಿಗೆ ಪಾ.ವಂ. ಇರಲಿಲ್ಲ, ಇದು ನೋವಿನ ಸಂಗತಿ.

ಪಾ.ವಂ. ಬೆನ್ನೆಲುಬಾಗಿ ಅವರ ಪತ್ನಿ ಲಕ್ಷ್ಮಿಯವರ ಪಾತ್ರ ನೆನೆದರು. ಗಂಡ ಹೆಂಡತಿ ಅರ್ಧನಾರೀಶ್ವರರಾಗಿದ್ದರೆ. ಮನೆ ನಂದಗೋಕುಲ. "ಅಮ್ಮನವರ ಗಂಡ" ಹಾಸ್ಯ ಲೇಖನ ಬರೆದಿದ್ದರು. ಈ ಪದ ಎಲ್ಲಿಂದ ಬಂತು ಅಂತ ಹುಡುಕುತ್ತಾ ಕೈಲಾಸಂ ನಾಟಕದಿಂದ ಎಂದು ಹುಡುಕಿದರು. ಪಾ.ವೆಂ ತಮ್ಮ ಧರ್ಮಪತ್ನಿಗೂ ಮಹತ್ವ ಕೊಟ್ಟಿದ್ದರು. ಶಿವ ಪಾರ್ವತಿ ತರಹ ಇದ್ದರು. ಶಿವನಿಗೆ ಐದು ಮುಖ. ಪಾ‌ವೆಂ ರವರು ಬರಹಕ್ಕೂ ಐದು ಮುಖ ಅಂದರೆ ಕವನ, ಕತೆಗಳು, ಕಾದಂಬರಿ, ವೈಜ್ಞಾನಿಕ ಲೇಖನಗಳು, ತತ್ವಶಾಸ್ತ್ರ ಹೀಗೆ. 

"ಕಸ್ತೂರಿ" ಡೈಜೆಸ್ಟ್ ಅದ್ಭುತ ಪದಗಳ ಜೋಡಣೆ. ನಾಗಾಭರಣ ರವರು 50ರಿಂದ 60 ಕಸ್ತೂರಿ ಶೇಖರಿಸಿಟ್ಟಿದ್ದರಂತೆ. ಕಾರಣ ಅವರು ಕಾದಂಬರಿಯ ಮೇಲೆ ಬರೆಯುವ ಸಾರಾಂಶ ಓದಿದರೆ ಸಾಕು ಇಡೀ ಕಾದಂಬರಿ ಓದಿದ ಹಾಗಾಗುತ್ತೆ ಅಂದಿದ್ದರು ಅನ್ನುತ್ತಾ, ಕಸ್ತೂರಿ ವಿಶ್ವಕೋಶ, ಪಿಎಚ್ ಡಿ ಗೆ ಮಾದರಿಯಾಗಬಹುದು. ಪತ್ರಕರ್ತರಿಗೆ ತತ್ವಜ್ಞಾನ ಮುಖ್ಯ. ಈ ತಿಳುವಳಿಕೆ ತಪ್ಪುದಾರಿಗೆ ಹೋಗಲು ಬಿಡುವುದಿಲ್ಲ. ಪಾ.ವೆಂ ರವರಿಗೆ ಆ ಜ್ಞಾನ ಬಹಳ ವಿತ್ತು. ಆದರೆ ಇಂದಿನ ಸುಮಾರು ಪತ್ರಕರ್ತರಿಗೆ ತತ್ವಜ್ಞಾನ ದ ಅರಿವು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

"ಕೆಲಸ ಆಗಬೇಕಾದರೆ ಕತ್ತೆ ಕಾಲು ಹಿಡಿಯಬೇಕು" ಇದು ಎಲ್ಲಿಂದ ಹುಟ್ಟಿತು ಅಂತ ಹುಡುಕಾಟ ಮಾಡಿ, ಕೃಷ್ಣ ಹುಟ್ಟಿದಾಗ, ತಲೆ ಮೇಲೆ ಬುಟ್ಟಿಯಲ್ಲಿ ಕೃಷ್ಣ, ಸಮೇತ ವಸುದೇವ ಯಮುನ ನದಿ ದಾಟುವಾಗ  ಕತ್ತೆಗಳು ಜೋರಾಗಿ ಕಿರಚಿಕೊಳ್ಳುವುದಾಗಿ ಹೆದರಿಸಿದಾಗ, ಕತ್ತೆಗಳಿಗೆ ನಮಸ್ಕಾರ ಮಾಡಿದರಂತೆ. ಆಗಿನಿಂದ ಈ ನಾಣ್ಣುಡಿ ಬಂತು ಅಂತ ಹೇಳಿದ್ದಾರೆ. ಶಬ್ಧ ಬ್ರಹ್ಮ, ಪತ್ರಿಕಾ ಧರ್ಮ ಪಾಲಿಸಿದವರು. ಮಂಕುತಿಮ್ಮನ ಕಗ್ಗವನ್ನು ಹಾಸ್ಯವಾಗಿ ಬರೆದವರು. 2ಬಾರಿ ಸೀರಿಯಸ್ ಆಗಿ ಸಾವಿನಿಂದ ಹೊರಬಂದವರು. ಪಾಂಡಿತ್ಯದ ಜೊತೆಗೆ ಉತ್ತಮ ಗುಣದವರು.  ಪಾ.ವೆಂ ಕುಟುಂಬದವರಿಗೆ ಶುಭ ಹಾರೈಸುತ್ತಾ, ವಿಷಯಾಧಾರಿತ ಸಂಬಂಧಗಳ ಮೆಲುಕು, ಹತ್ತು ಸಾವಿನ ಪುಟಗಳ ಬರಹದ ಸರಸ್ವತಿ ಪುತ್ರನ ಪತ್ರಿಕಾ ಧರ್ಮದ ವಿಷಯಗಳ ಸರಮಾಲೆ ಪೋಣಿಸಿ ಎಲ್ಲರಿಗೂ ನಗನಗುತ್ತಲೇ ಅರ್ಥ ಮಾಡಿಸಿ  ಭಾಷಣ ಮುಕ್ತಾಯಗೊಳಿಸಿದರು🙏

~~~~~~

ಮುಖ್ಯ ಅತಿಥಿಗಳಾಗಿ

 ಶ್ರೀ ರೋಹಿತ್ ಚಕ್ರತೀರ್ಥರವರು 

ರೋಹಿತ್ ಚಕ್ರತೀರ್ಥ 

ವಾಗ್ಮಿಗಳು ಮತ್ತು ಅಂಕಣ ಬರಹಗಾರರು ಮಾತನಾಡುತ್ತಾ,  ಇವರ ಸಂಬಂಧ ನನಗೆ 2015ರ ಜನ್ಮಶತಮಾನೋತ್ಸವದಲ್ಲಿ ಆಯಿತು. ಅವರು ಕೆಲವು ಕಾಲ ಶಿಕ್ಷಕ ವೃತ್ತಿ ಮಾಡಿದ್ದ ಶಾಲೆಯ ವಿದ್ಯಾರ್ಥಿ ನಾನು. ಪಾ.ವೆಂ ಎಷ್ಟು ಖ್ಯಾತಿಗೆ ಹೇರಿದ್ದರು! ಅವರ ನಿಧನದ ನಂತರ ಅಷ್ಟೇ ಬೇಗ ಸಮಾಜ ಮರೆಯಿತು. ಅವರು ಬೌದ್ಧಿಕವಾಗಿ ಇಲ್ಲದಿದ್ದರೂ ಜೀವಂತವಾಗಿರಬೇಕಿದ್ದರೆ ರಾಜಕೀಯದವರ ಇಚ್ಛಾಶಕ್ತಿ ಇರಬೇಕಿತ್ತು. ಅವರ ಕುಟುಂಬಕ್ಕೆ ಅಂತಹ ಸಂಬಂಧ ಇರದ ಕಾರಣ ಎಲ್ಲಾ ಮರೆತುಬಿಟ್ಟರು.

ವಿದೇಶಿ ಭಾಷೆಯ ಕಾದಂಬರಿಗಳು ಕನ್ನಡಕ್ಕೆ ಅನುವಾದ , ಶಬ್ಧಭಂಡಾರವನ್ನು ಬೆಳೆಸಿದವರು. ಅವರು ಸಾರಾಂಶ ರೂಪದಲ್ಲಿ ಕೊಡುತ್ತಿದ್ದ ಲೇಖನಗಳಿಂದ ಎಲ್ಲರಿಗೂ ಹತ್ತಿರವಾಗಿದ್ದರು. ನನ್ನದು ಅವರೊಂದಿಗೆ ಅಲೌಕಿಕ, ಅಮೂರ್ತ ಸಂಬಂಧ. 

ಪದಾರ್ಥ ಚಿಂತಾಮಣಿ ಅಂಕಣ‌ .

ಶಬ್ಧದ ಬೆನ್ನು ಹತ್ತಿ ಅರ್ಥ ನೋಡುವುದು ಹೇಗೆ? ಶಬ್ದಗಳನ್ನು ಅದರ ಅರ್ಥ ಗಳನ್ನು ಹೇಗೆ ತೆಗೆಯಬೇಕು? ಕೃತಿಗಳನ್ನು ಹೇಗೆ ನೋಡಬೇಕು? ಎಂಬುದನ್ನು ಮಾಡಿ ತೋರಿಸಿದರು. 

ಸಂಸ್ಕೃತದ ಸುಭಾಷಿತಗಳನ್ನು ಕನ್ನಡದ ಜಾಯಮಾನಕ್ಕೆ ಒಗ್ಗುವ ರೀತಿ ತಂದು ಚಮತ್ಕಾರ ಮಾಡಿದರು.  ಅವರದು ಬಡತನದ ಬದುಕು. "ಬಲುಗುಣವಿದ್ದರೆ ಒಂದು ಸಾವಿರ ಬಡತನ" ,ಬಡತನವೇ ನನಗೀಗ ನಿನಗಾಗಿ ಚಿಂತೆ ಎನ್ನುತ್ತಾ ಬಡತನವನ್ನೇ ಹಾಸ್ಯ ಮಾಡಿಕೊಂಡವರು.

ಕಗ್ಗ ಮಾದರಿಯಲ್ಲಿ ಪೆಂಗೋಪದೇಶ ಬರೆದರು. ಎಂದು ಕೆಳಗಿನ ಪದ್ಯ ಉಚ್ಚರಿಸಿದರು

ಬದುಕು ಖಟರಾ -ಬಸ್ಸು; ವಿಧಿಯದರ ಡ್ರೈವರನು

ಕುಡಿದು ಹೊಡೆಯುತ್ತಾನೆ ಎರಡು ಕಾಣುತ್ತ

ಗಟರವೋ ಮರವೊ ಸಂಕವೊ ಟ್ರಕ್ಕೊ ಗೋಡೆಯೊ

ಮಡಿದವನಿಗಾವುದೇನೊ ಎಲವೊ ಪೆಂಗೇ

ಅವರು ಶಿಕ್ಷಕರಾಗಿ ಕೆಲವು ಕಾಲ ಪಾಠ ಮಾಡಿದ ಶಾಲೆಯ ವಿದ್ಯಾರ್ಥಿ ನಾನು. ಪಾವೆಂ ಹೇಳುತ್ತಿದ್ದರು ನಾನು ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡಿದೆ. ಆದರೆ ಒಂದೇ ಒಂದು ಕ್ಷೇತ್ರದಲ್ಲಿ ಸಾಫಲ್ಯ ದೊರೆಯಲಿಲ್ಲ. ಅದುವೇ ಶಿಕ್ಷಕ ವೃತ್ತಿ.

ಇವರಿಗೆ ಗಣಿತದಲ್ಲಿ ನೂರಕ್ಕೆ ನೂರರಷ್ಟು ಪ್ರಾವೀಣ್ಯತೆ ಇತ್ತು. ನಂಬರ್ ಗಳ ಬಗ್ಗೆ ಹೆಚ್ಚು ಪ್ರೀತಿ. ದೊಡ್ಡ ಸಂಸ್ಥೆಗಳ ಲೆಕ್ಕಿಗರಾಗಿ ಲಾಭಕ್ಕೆ ತಂದರು. ದುರಂತವೆಂದರೆ ಅವರ ಬದುಕಿನ ಲೆಕ್ಕ ಮೇಲೆತ್ತಲಾಗಲಿಲ್ಲ. 

ಕೃತಿಗಳ ಬಗ್ಗೆ ಮಾತನಾಡುತ್ತಾ, ಅರವತ್ತು ಎಪ್ಪತ್ತರ ದಶಕದಲ್ಲಿ 'ಮತ, ಧರ್ಮ" ಇವುಗಳ ಬಳಕೆಯಿದ್ದ ಕಾಲ, ಹೇಗೆ ಬಂತೆಂದು ಅರ್ಥ ಹುಡುಕಿದವರು.

"ಕಾಲ ಮತ್ತು ಸಮಯ"  ಇವುಗಳ ಅರ್ಥ ವ್ಯತ್ಯಾಸ  ಹುಡುಕಿದವರು. 

ವಾಸನಾ  ಇವರು ಬರೆದ ನೀಳ್ಗತೆ 

ನಾಲ್ಕು ಹರಟೆಗಳ ಸಂಗ್ರಹ, 2 ಕವನಸಂಗ್ರಹಗಳು,

"ಬೈಯ ಮಲ್ಲಿಗೆ" ತುಳು ಭಾಷೆಯಲ್ಲಿ ಅವರ ಕವನಸಂಗ್ರಹ.

ಸ್ವತಂತ್ರ ಭಾರತ - ರಾಜಕೀಯ ವಿಶ್ಲೇಷಣೆ,ರಶಿಯಾದ ರಾಜ್ಯಕ್ರಾಂತಿ - ರಾಜಕೀಯ ವಿಶ್ಲೇಷಣೆ,

ಪದಾರ್ಥ ಚಿಂತಾಮಣಿ,ಸುಭಾಷಿತ ಚಮತ್ಕಾರ ಶಬ್ದಗಳ ಬಗ್ಗೆ ಶಬ್ಧಾ ಶಬ್ಧ ವಿವೇಕ, ನೆನಪಿನ್ನು ಕೃತಿ ಇತ್ಯಾದಿ ಬರಹಗಳು.

ರವಿ ಬೆಳಗರೆರವರು "ಪಾವೆಂ ಹೇಳಿದ ಕಥೆ' ಎಂದು ಪಾವೆಂ ಹೆಸರಿನಲ್ಲಿ ಬರೆದರು. ಅವರ ಸೌಮ್ಯ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು. 

ವಿಜ್ಞಾನ, ಸಾಹಿತ್ಯ, ವಿಜ್ಞಾನ ವಿಸ್ಮಯ,ಜಗತ್ ವಿಖ್ಯಾತರು, ಹೊಸಗನ್ನಡದ ಹಿರಿಯರು,  ಹೀಗೆ ಕಸ್ತೂರಿಯಲ್ಲಿ ಸಂದರ್ಭಾನುಸಾರ ಬರೆದ ಲೇಖನಗಳನ್ನು ಬರೆಯುತ್ತಿದ್ದರು. ಪಾವೆಂ ರವರು ಮುಟ್ಟದ ವಿಷಯವಿಲ್ಲ. ಕಸ್ತೂರಿ ಆಯಾ ಕಾಲದಲ್ಲಿ ಜನರಿಗೆ ಏನು ಬೇಕು ಅದು ಕೊಡ್ತಾ ಹೋಯ್ತು. ಪ್ರಸಕ್ತ ಜಗತ್ತಿನ ಅವಿಷ್ಕಾರಗಳನ್ನು, ವಿಜ್ಞಾನ  ಸಂಶೋಧನೆ ಬರೆಯಲು ವಿಜ್ಞಾನ ಅಂಕಣ ಬರೆದರು.

ಅವರು ದಿನಕ್ಕೆ 15-20 ಲೇಖನಗಳನ್ನು ಓದಬೇಕಿತ್ತು. ಅದು ಸುಲಭದ ಕೆಲಸ ಅಲ್ಲ.

ಆಸ್ಪಿರಿಯಂ ಬಗ್ಗೆ  ಬರೆಯುತ್ತಾರೆ. 

"ಬೆಕ್ಕು ಎಷ್ಟು ಜಾಣ ಪ್ರಾಣಿ" ಬಗ್ಗೆ ಲೇಖನ ಬರೆದರು.

ಮಂಗಳ ಅಂಗಳ - ಮಾನವನ ಮಂಗಳ ಯಾತ್ರೆ - 40 ವರ್ಷಗಳ ಹಿಂದೆಯೇ ಬರೆದಿದ್ದಾರೆ.

ಚಂದ್ರನ ಮೇಲೆ ಮಾನವನ ವಾಸ ಸಾಧ್ಯವೇ? ಹೀಗೆ ಲೋಕಲ್, ಜಾಗತಿಕ, ವ್ಯಕ್ತಿತ್ವ ಪರಿಚಯ  ಅನ್ನದೆ ಯಾವುದೇ ಚಿಕ್ಕ ವಿಷಯ ಬಿಡುತ್ತಿರಲಿಲ್ಲ. 

ಅನೇಕ ಲೇಖಕರನ್ನು ಬೆಳೆಸಿದರು. ಕಸ್ತೂರಿ ಅರವತ್ತು ಸಾವಿರ ಪ್ರತಿಗಳು ಮಾರಾಟವಾಗುತ್ತಿದ್ದವು. 400 ಲೇಖನಗಳು ಬರುತ್ತಿದ್ದವು. ಅಷ್ಟೂ ಪ್ರತಿದಿನ ಓದಿ ,ತಿದ್ದಿ , ಪರಿಷ್ಕರಣೆ ಮಾಡುವುದು ಎಷ್ಟು ಕಷ್ಟ. ಅದನ್ನು ಪಾವೆಂ ಮಾಡುತ್ತಿದ್ದರು. ಕೆಲವು ಬಾರಿ ಲೇಖನ rewrite ಮಾಡಿ ಅವರ ಹೆಸರಿನಲ್ಲಿಯೇ ಪ್ರಕಟಿಸಿ ಲೇಖಕರಿಗೆ ಉಪಕಾರ ಮಾಡುತ್ತಿದ್ದರು. ಕಸ್ತೂರಿ ಆಫೀಸಿಗೆ ಬೆಳಿಗ್ಗೆ 8 ಗಂಟೆಗೆ ಹೋಗಿ ರಾತ್ರಿ 8 ಗಂಟೆಯವರಿಗೆ ಕೆಲಸ ಮಾಡಿ ಬರುತ್ತಿದ್ದರು‌.  ಹೀಗೆ ಓದುಗರನ್ನು, ಬರಹಗಾರರನ್ನು ಬೆಳೆಸಿದರು. ಕನ್ನಡದಲ್ಲಿ ಜ್ಞಾನದ ದಿಗಂತ ವಿಸ್ತರಿಸಿದರು.  ವಿಸ್ಮಯ ಮತ್ತು ಅನುಮಾನ ಎರಡೂ ಬೆಳೆಸಿಕೊಂಡವರು.  ಎರಡೂ ಗುಣಗಳು ಮೇಳೈಸಿದಾಗ ಮಾತ್ರ ವಿಜ್ಞಾನ. ತೇಜಸ್ವಿಯವರು ವಿಸ್ಮಯ ದಿಂದ ಬರೆದರು, ಅವರಿಗೆ ಅನುಮಾನ ಕಡಿಮೆ.  ಮತ್ತೆ ಕೆಲವರು ಕೇವಲ ಅನುಮಾನ ಇಟ್ಟುಕೊಂಡವರು. 

ಇವರ ವ್ಯಕ್ತಿತ್ವದ ಬಗ್ಗೆ ಇವರ ಪತ್ನಿ ಲೇಖನ ಬರೆದಿದ್ದಾರೆ.

ಒಂದು ಬಾರಿ ಇವರ ಪತ್ನಿ "ಸ್ವಲ್ಪ ಲೈಟ್ ಆರಿಸಿ" ಅಂದರೆ "ಸ್ವಲ್ಪ"  ಪದ ಎಲ್ಲಿಂದ ಬಂತು ಅಂತ ಜಾಲಾಡಿ ಕೊನೆಗೆ ಇಂಗ್ಲಿಷ್ ನ please ನಿಂದ  ಆದ ಪದ ಎಂದು ಸಂಶೋಧಿಸಿದರು

ಇವರೊಡನೆ ದೂರ ಪ್ರಯಾಣದ ಫಜೀತಿ ಅನುಭವಿಸಿದ ಪತ್ನಿಯ  ಇದರ ಬಗ್ಗೆ ಸ್ವಾರಸ್ಯವಾಗಿ ಮಾತನಾಡಿದರು. 

ಹೀಗೆ ಕನ್ನಡದಲ್ಲಿ ಜ್ಞಾನ ದಿಗಂತ ವಿಸ್ತರಿಸಿದ ಮೇರುವ್ಯಕ್ತಿ  ಪಾವೆಂ ರವರ ಅಗಾಧ ಸಾಹಿತ್ಯ ಪ್ರಪಂಚವನ್ನು ತಮ್ಮದೇ ಮಾತುಗಳಲ್ಲಿ ಸಭೆಯ ಮುಖ್ಯ ಭಾಷಣಕಾರರಾಗಿ ನಮಗೆ ಕಟ್ಟಿಕೊಟ್ಟರು.







No comments:

Post a Comment