Saturday, July 24, 2021

"ಶ್ರೀಗುರುಪೂರ್ಣಿಮಾ ಮಹತ್ವ"

ಶನಿವಾರ. 24 ಜುಲೈ 2021 

 "ಶ್ರೀಗುರುಪೂರ್ಣಿಮಾ ಮಹತ್ವ"

"ಸದಾಶಿವಸಮಾರಂಭ

ಶಂಕರಾಚಾರ್ಯ  ಮಧ್ಯಮಾ |

ಅಸ್ಮದಾಚಾರ್ಯ ಪರ್ಯಂತಾಂ

ವಂದೇ ಗುರುಪರಂಪರಾಮ್ ||"

"ವಂದೇಗುರೂಣಾಂ ಚರಣಾರವಿಂದೆ 

ಸಂದರ್ಶಿತಸ್ವಾತ್ಮಸುಖಾವಬೋಧೇ |

ಜನಸ್ಯ ಯೇ ಜಾಂಗಲಿಕಾಯ ಮಾನೇ

ಸಂಸಾರ ಹಾಲಾಹಲ ಮೋಹಶಾಂತ್ಯೈ ||

ಮನುಷ್ಯನಿಗೆ ಮೊಟ್ಟಮೊದಲ "ಗುರು" ತಾಯಿ, ನನ್ತರ ತಂದೆ, ಇವರಿಬ್ಬರನ್ನೂ ಮೀರಿಸಿದವನು ಸದ್ವಿದ್ಯೆಯನ್ನು ಬೋಧಿಸುವ ಸಾಮರ್ಥ್ಯವುಳ್ಳ "ಶ್ರೀಸದ್ಗುರು". ಹಾಗಾಗೇ

"ಮಾತೃದೇವೋ ಭವ"

"ಪಿತೃದೇವೋ ಭವ"

"ಆಚಾರ್ಯ ದೇವೋ ಭವ"

ಎಂದು ನಮ್ಮ ಆರ್ಷಪರಂಪರೆ ಘಂಟಾಘೋಷವಾಗಿ ಸಾರುತ್ತಿದೆ.

ಸಕಲಸೃಷ್ಟಿಯ ಮೊಟ್ಟಮೊದಲ "ಗುರು" ಅಂದರೆ ಅವನೇ ಶ್ರೀಮನ್ನಾರಾಯಣ ಹಾಗಾಗೇ

 "ಶ್ರೀಕೃಷ್ಣಂ ವನ್ದೇ ಜಗದ್ಗುರುಮ್"  ಎಂದರು.

ಆಷಾಢ ಶುದ್ಧಪೂರ್ಣಿಮಾ ಶ್ರೀಮದ್ವೇವ್ಯಾಸರ ಅವತಾರಮಂಗಳದ ಶುಭದಿನ. ಅದೂವರೆಗೆ ಅಪಾರವಾಗಿದ್ದ ವೇದರಾಶಿಯನ್ನು ಋಕ್, ಯಜುಸ್, ಸಾಮ ಹಾಗೂ ಅಥರ್ವವೆಂದು ವಿಂಗಡಿಸಿದ ಮಹಾನುಭಾವರು ಇವರಾದ್ದರಿಂದ "ಶ್ರೀಕೃಷ್ಣದ್ವೈಪಾಯನ" ಎಂದು ಜನ್ಮನಾಮದಿಂದ ಶೋಭಿಸುತ್ತಿದ್ದ ಇವರನ್ನು "ಶ್ರೀಮದ್ವೇದವ್ಯಾಸ" ಎಂದು ಗೌರವಪೂರ್ವಕವಾಗಿ ಇಂದಿಗೂ ಸ್ಮರಿಸುತ್ತದೆ ನಮ್ಮ ಪರಂಪರೆ.

"ಗುರು" ಅನ್ನೋದು ವ್ಯಕ್ತಿ ಅಲ್ಲ ಅದೊಂದು "ತತ್ತ್ವ -- ಶಕ್ತಿ". ಅದು ಯಾವಾಗ ಎಲ್ಲಿ ಬೇಕಾದರೂ ತನ್ನನ್ನು ತಾನು ಪ್ರಕಟಪಡಿಸಿಕೊಳ್ಳಬಹುದು.

ಸಾಮಾನ್ಯವಾಗಿ ನಾವು ವಿದ್ಯೆಕಲಿಸಿದವರೆಲ್ಲರನ್ನೂ "ಗುರು -- ಗುರುಗಳು" ಎಂದು ಕರೆಯುತ್ತೇವೆ. 

ಆದರೆ ವೈದಿಕ ಪರಂಪರೆಯ ವಿದ್ಯೆಯ ಭಾಗವನ್ನು ಅಂದರೆ ವೇದದ ಭಾಗವಾದ ಮಂತ್ರಗಳನ್ನು ಕಲಿಸುವವರನ್ನು  "ಅಧ್ಯಾಪಕ" ಎಂದೂ

ವೇದಾಂಗಗಳಾದ "ಶಿಕ್ಷಾ - ವ್ಯಾಕರಣ - ಛಂದಸ್ಸು - ಜ್ಯೌತಿಷ - ನಿರುಕ್ತ - ಕಲ್ಪ" ಇವುಗಳಲ್ಲಿ ಯಾವುದಾದರೂ ಒಂದನ್ನು ಬೋಧಿಸುವವರನ್ನು "ಉಪಾಧ್ಯಾಯ" ಎಂದೂ

ಯಾರು ಪರಂಪರಾಗತವಾಗಿ ಬಂದಿರುವ ಆರ್ಷವಿದ್ಯೆಯನ್ನು ಬ್ರಹ್ಮಸಾಕ್ಷಾತ್ಕಾರ ಹೊಂದಿದ ಗುರುಮುಖೇನ ಸ್ವಲ್ಪವೂ ವಿಕಾರವಿಲ್ಲದೇ ತಾನು ಕಟ್ಟುನಿಟ್ಟಾಗಿ ಅಧ್ಯಯನ ಮಾಡಿ ಅದು ವಿಧಿಸುವ ನಿಯಮಗಳನ್ನು ಪರಿಪಾಲಿಸುತ್ತಾ ಅಷ್ಟೇ ದಕ್ಷತೆಯಿಂದ, ಅತ್ಯಂತ ಶುಚಿಯಾಗಿ, ಕಟ್ಟುನಿಟ್ಟಾಗಿ ನಿಯಮೇನ ಪರಿಪಾಲಿಸುವ ಶಿಷ್ಯನಿ(ರಿ)ಗೂ ಅತ್ಯಂತ ವಾತ್ಸಲ್ಯವಂತನಾಗಿ ಬೋಧಿಸುವ ಸಾಮರ್ಥ್ಯವುಳ್ಳವನನ್ನು "ಆಚಾರ್ಯ" ಎಂದೂ ಕರೆಯಲಾಗುತ್ತದೆ. ಹಾಗೂ 

ಒಬ್ಬ ಸಾಧಕನಿಗೆ ಅವನ ನಿಜಸ್ವರೂಪವನ್ನ ಅಂದರೆ ~ ಆತ್ಮಸಾಕ್ಷಾತ್ಕಾರ ಮಾಡಿಕೊಡುವ ಸಾಮರ್ಥ್ಯ ಇರುವ ಮಹಾತ್ಮನೊಬ್ಬನೇ ನಿಜವಾದ "ಗುರು - ಶ್ರೀಸದ್ಗುರು - ಪರಮಗುರು" ಎಂದು ಕರೆಯಲ್ಪಡಬೇಕಾದವನು.

ಗುರುಪೂರ್ಣಿಮೆಯ ಈ ಶುಭದಿನದಂದು ಅಂತಹ ಪರಮಗುರುವನ್ನು ಸ್ಮರಿಸುತ್ತಾ ನಮ್ಮೆಲ್ಲರ ಬಾಳಲ್ಲೂ ಅಂತಹ ದಯಾಮಯನಾದ ಶ್ರೀಸದ್ಗುರುವಿನ ಸಾನ್ನಿಧ್ಯ ಸಿಗುವಂತಾಗಲೀ ಎಂದು ಪ್ರಾಮಾಣಿಕವಾಗಿ ಪ್ರಾರ್ಥಿಸೋಣ.

"ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ"

"ಶ್ರೀಸದ್ಗುರು ಚರಣಾರವಿಂದಯೋಃ ಸಮರ್ಪಣಂ ಭವತು"


ಶುಭಮಸ್ತು.


No comments:

Post a Comment