ಭಾನುವಾರ, 26 ಡಿಸೆಂಬರ 2021
ತರಳಬಾಳು ಗ್ರಂಥಾಲಯ, ಅರ್.ಟಿ.ನಗರ , ಬೆಂಗಳೂರು.
ಕುವೆಂಪು ಸ್ಮರಣೆ, ಒಂದು ಸಾಹಿತ್ಯಿಕ ಕಾರ್ಯಕ್ರಮ.
ರಾಷ್ಟ್ರ, ರಾಜ್ಯ ಕಂಡ, ಕನ್ನಡದ ಮಹಾನ್ ಸಾಹಿತಿ, ವಿಮರ್ಶಕ, ರಾಷ್ಟ್ರ ಕವಿ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ, (ಕುವೆಂಪು), (29/12/1904 - 11/11/1994) ಅವರ ಸ್ಮರಣೆಯ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಟಿ,ಎಸ್,ನಾಗಾಭರಣ, ಖ್ಯಾತ ಸಿನೆಮಾ ನಿರ್ದೇಶಕ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಇವರು ಮಾಡಿ, ಕುವೆಂಪು ಅವರ ಸಾಧನೆಯನ್ನು ಸ್ಮರಿಸಿದರು.
ಪ್ರಾರ್ಥನೆಯದ ನಂತರ, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಶ್ರೀಮತಿ ಶಶಿಕಲಾ ಅವರು ನಿರೂಪಣೆಯನ್ನು ಮಾಡಿ, ಶ್ರೀಮತಿ ದೀಪ ಫಡ್ಕೆ ಅವರು ಅತಿಥಿಗಳ ಪರಿಚಯ, ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.
ಶ್ರೀಮತಿ ದೀಪಾ ಫಡ್ಕೆ |
ಮುಖ್ಯ ಉಪನ್ಯಾಸಕಾರರಾಗಿ ಖ್ಯಾತ ವಿಮರ್ಶಕ, ಲೇಖಕ, ಶ್ರೀ ಎಸ್.ಅರ್. ವಿಜಯಶಂಕರ್ ಅವರು ಸುಮಾರು 50 ನಿಮಿಷಗಳ ಕಾಲ ಕುವೆಂಪು ಅವರ ಕೃತಿ, ವಿಚಾರ, ಭಾವನೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿ, ರಾಷ್ಟ್ರ ಕಂಡ ಅತ್ಯಂತ ಮೇಧಾವಿ, ಕನ್ನಡದ ಒಬ್ಬ ಮಹಾನ್ ಕಾದಂಬರಿಕಾರ, ನಾಟಕಕಾರ ಎಂದೂ ಬಣ್ಣಿಸಿದರು.
ಶ್ರೀ ಟಿ.ಎಸ್. ನಾಗಾಭರಣ |
ಶ್ರೀ ಎಸ್.ಅರ್. ವಿಜಯಶಂಕರ್ |
ಜ್ಞಾನ ಪೀಠ ಪ್ರಶಸ್ತಿ ವಿಜೇತರಾದ ಕುವೆಂಪು ಅವರ ಕೃತಿಗಳಲ್ಲಿ ಶ್ರೀ ರಾಮಾಯಣ ದರ್ಶನಂ, ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು, ಮುಖ್ಯವಾದವುಗಳು.
ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರು ಡಾ.ನಿರ್ಮಲ ಪ್ರಭು ಅವರು ಕುವೆಂಪು ಅವರ ಬಗ್ಗೆ ನಾಲ್ಕು ಮಾತುಗಳನ್ನು ಆಡಿದರು.
ವೇದಿಕೆಯ ಉಪಾಧ್ಯಕ್ಷ ಶ್ರೀ ವೀರಶೇಖರ ಸ್ವಾಮಿಯವರು ಕಾರ್ಯಕ್ರಮಕ್ಕೆ ಬಂದಿರುವ ಅತಿಥಿಗಳಿಗೆ, ಕನ್ನಡ ಮನಸುಗಳಿಗೆ,ಹಾಗೂ ಕಾರಂತ ವೇದಿಕೆಯನ್ನು 28 ವರ್ಷಗಳ ಹಿಂದೆ ಸ್ಥಾಪಿಸಿ, ನಿರಂತರವಾಗಿ ಶ್ರಮಿಸಿದ ಶ್ರೀ ಪಾ ಚಂದ್ರಶೇಖರ ಚಡಗರಿಗೆ ಧನ್ಯವಾದ ಸಮರ್ಪಿಸಿದರು.
ಶ್ರೀಮತಿ ಶಶಿಕಲಾ ಅವರ ನಿರೂಪಣೆ |
ಶ್ರೀ ಚಿದಂಬರ ಕೋಟೆಯವರು ತಮ್ಮ ಸುಮಧುರ ಕಂಠದಿಂದ "ಓ ನನ್ನ ಚೇತನ..." ಹಾಡನ್ನು ಸುಶ್ರಾವ್ಯವಾಗಿ ಹಾಡಿದರು.
ಬರೆದಿರುವುದು ಸೋಮವಾರ, 27 ಡಿಸೆಂಬರ 2021
ವೇದಿಕೆಯ ಪರವಾಗಿ
ಶಶಿಕಲಾ ಆರ್
ಸಹ ಕಾರ್ಯದರ್ಶಿ
ಶಿವರಾಮ ಕಾರಂತ ವೇದಿಕೆ
ಕುವೆಂಪು ಸ್ಮರಣೆ
ನಾಡಗೀತೆ ರಚಿಸಿದ ಮಹಾನ್ ಕವಿ. ಕನ್ನಡದ ಡಿಂಡಿಮವನ್ನ ಕನ್ನಡಿಗರಿಗೆ ಬಿಂಬಿಸಿದ ಮಹಾನ್ ಚೇತನ. ಶ್ರೀ ರಾಮಾಯಣ ದರ್ಶನಂ ಮೂಲಕ ಕಾವ್ಯಲೋಕದಲ್ಲಿ ಹೊಸ ಅಲೆ ಬೀಸಿದಂತಹ ಅಧಮ್ಯ ಕವಿ. 20ನೇ ಶತಮಾನ ಕಂಡ ಕನ್ನಡ ಸಾಹಿತ್ಯದ ದೈತ್ಯ ಪ್ರತಿಭೆ. ಬೇಂದ್ರೆಯವರಿಂದ "ಯುಗದ ಕವಿ ಜಗದ ಕವಿ" ಎನಿಸಿಕೊಂಡ. ವಿಶ್ವಮಾನವ ಸಂದೇಶ ನೀಡಿದ. ಕುವೆಂಪು ಕಾವ್ಯನಾಮದಲ್ಲಿ ಶಾಶ್ವತರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು.
117ನೇ ಹುಟ್ಟು ಹಬ್ಬದ ನಮನಗಳು.
ಶಿವರಾಮ ಕಾರಂತ ವೇದಿಕೆ(ರಿ), .ಆರ್. ಟಿ.ನಗರ
ಇಲ್ಲಿ ದಿನಾಂಕ 26.12.2021, ಭಾನುವಾರ, ಸಂಜೆ 4.00 ಗೆ ರಾಷ್ಟ್ರಕವಿ ಕುವೆಂಪುರವರ ಹುಟ್ಟು ಹಬ್ಬದ ಪ್ರಯುಕ್ತ ಕುವೆಂಪು ಸ್ಮರಣೆ ಕಾರ್ಯವನ್ನು ಹಮ್ಮಿಕೊಂಡಿತ್ತು
ವೇದಿಕೆಯ ಸಂಸ್ಥಾಪಕರು, ಪ್ರಸ್ತುತ ಕ್ರಿಯಾಶೀಲ ಕಾರ್ಯಧ್ಯಕ್ಷರಾದ ಶ್ರೀ ಪಾ.ಚಂದ್ರಶೇಖರ ಚಡಗ ರವರ ಮಾರ್ಗದರ್ಶನದಲ್ಲಿ ನಡೆಯುವ ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಟಿ.ಎಸ್ ನಾಗಾಭರಣ ರವರು, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ಎಸ್.ಆರ್.ವಿಜಯಶಂಕರ್ , ಖ್ಯಾತ ವಿಮರ್ಶಕರು ಇವರನ್ನು ಆಹ್ವಾನಿಸಲಾಗಿದೆ.
"ಮನುಜ ಪಥ ವಿಶ್ವಪಥ" ಸಂದೇಶ ನೀಡಿದ, ಮುಗಿಲೆತ್ತರಕ್ಕೆ ಏರಿದ ಕವಿ ಕುವೆಂಪು. ನಮ್ಮ ವೇದಿಕೆಯ "ಕುವೆಂಪು ಸ್ಮರಣೆ" ಕಾರ್ಯಕ್ರಮದಲ್ಲಿ , ಶ್ರೀ ಟಿ.ಎಸ್ ನಾಗಾಭರಣ ರವರು, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ , ಇವರ ಉದ್ಘಾಟನಾ ಭಾಷಣದ ತುಣುಕುಗಳು.👇
ಆತ್ಮೀಯ ಕನ್ನಡ ಮನಸುಗಳೇ, ನನಗೆ ಇವತ್ತು ಸುದಿನ, ಕಾರಣ, ಹಿಂದೆ ಏನೇನೋ ಮಾಡಿರುತ್ತೇವೆ. ಆದರೆ ಅದು ಮಾಡಿದ್ದು ಸರಿಯೇ, ಆ ಕ್ರಮ ಸರಿ ಇದೆಯೇ, ಆ ಆಶಯ ಫಲಿಸಿದೆಯೇ ಎಂಬುದನ್ನು ತಿಳಿಯಲು ಮತ್ತೆ ಹಿಂದಕ್ಕೆ ತಿರುಗಿ ನೋಡಿ, ಏನನ್ನು ಅಭ್ಯಾಸ ಮಾಡಿದ್ದೆವೋ ಅದನ್ನು ಇನ್ನೊಮ್ಮೆ ನಮ್ಮ ಸ್ಮೃತಿ ಪಟಲದಿಂದ ಹೊರತಂದು, ಇವತ್ತಿನ ಪ್ರಸ್ತುತಿಯಲ್ಲಿ ಜ್ಞಾಪಿಸಿಕೊಳ್ಳಬೇಕಾಗುತ್ತದೆ. ಆ ದೃಷ್ಟಿಯಲ್ಲಿ ಈ ಸಮಾರಂಭ ನನಗೆ ಸಣ್ಣ ಸಹಾಯಕವಾಯಿತು. "ಕಾನೂನು ಹೆಗ್ಗಡತಿ" ಕಾದಂಬರಿಯ ಬಗ್ಗೆ ಬಹಳ ಕನಸು ಕಂಡದ್ದು ನಾನು ಸಿನಿಮಾ ನಿರ್ದೇಶಕ ನಾದಾಗ. ಕುವೆಂಪುರವರ ಕಾದಂಬರಿ ಮತ್ತು ನಾಟಕಗಳನ್ನು, ಕಾರಂತರ ಕಾದಂಬರಿಗಳನ್ನು, ಮಾಸ್ತಿಯವರ ಸಣ್ಣ ಕಥೆಗಳನ್ನು ಹೀಗೆ ಸಾಹಿತ್ಯ ಪ್ರಪಂಚದ ಕೆಲವು ದಿಗ್ಗಜರನ್ನಾದರೂ ನಮ್ಮ ದೃಶ್ಯ ಪರಿಕಲ್ಪನೆಗೆ ತೆಗೆದುಕೊಂಡು ಬರಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ ಬಹಳಷ್ಟು ಜನಕ್ಕೆ ಸಾಧ್ಯ ಆಗುತ್ತೆ ಮತ್ತು ಸಾಧ್ಯವಾಗುವುದಿಲ್ಲ. ಸಾಧ್ಯ ಆದಾಗ ಮಾತ್ರ ಅದರ ಜವಾಬ್ದಾರಿ ಬಹಳ ದೊಡ್ಡದಾಗಿರುತ್ತದೆ. ಏಕೆಂದರೆ
ಬಹಳಷ್ಟು ಜನಕ್ಕೆ ಆ ಕೃತಿ, ಆ ಪುಸ್ತಕಕಾರನ ವ್ಯಕ್ತಿ ಮತ್ತು ವ್ಯಕ್ತಿತ್ವದ ಜೊತೆಯಲ್ಲಿಯೇ ಮತ್ತೊಂದು ಕೃತಿಯನ್ನು ಕಟ್ಟಿಕೊಡುವ ಕೆಲಸವನ್ನು ಹಮ್ಮಿಕೊಂಡಾಗ ಆ ಸೃಜನಶೀಲ ಕ್ರಿಯೆ ಎಷ್ಟರಮಟ್ಟಿಗೆ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ನಾಟುತ್ತೆ, ಗಾಢವಾದ ಏನನ್ನು ಪಡೆದುಕೊಳ್ಳುತ್ತೆ ಎನ್ನುವುದು ಮುಖ್ಯವಾಗುತ್ತೆ. ಈ ಪ್ರಯೋಗದಲ್ಲಿ ಸಾಕಷ್ಟು ಜನಕ್ಕೆ ಆ ರೀತಿಯ ಧಿಕ್ಕಾರಗಳನ್ನು ನಾವು ಹೇಳಿದ್ದೇವೆ. ಪಾಪ ಪುಟ್ಟಣ್ಣ ಕಣಗಾಲ್ ರವರನ್ನು ತಾರಾಸು ಹೇಳಿದ ಮಾತನ್ನು ಹೇಳಲು ಇಷ್ಟಪಡುವುದಿಲ್ಲ. ಹಾಗೆಯೇ ಆರ್ ಕೆ ನಾರಾಯಣ್ ಗೈಡ್ ಸಿನಿಮಾ ಬಂದಾಗ ಮಿಸ್ ಗೈಡೆಡ್ ಗೈಡ್ ಅಂತ ಹೇಳಿದ್ದು. ಈ ಎಲ್ಲಾ ಸೂಕ್ಷ್ಮಗಳನ್ನು ನಾವು ಗಮನಿಸಿದಾಗ ಅದು ಕಾದಂಬರಿಯಾಗಲೀ, ನಾಟಕವಾಗಲಿ ಒಂದು ಪ್ರಕಾರದದಿಂದ ಇನ್ನೊಂದು ಪ್ರಕಾರಕ್ಕೆ ಬರುವಾಗ ಅದು ತೆಗೆದುಕೊಳ್ಳುವ ಬದಲಾವಣೆ ಏನಿದೆ ಆ ಬದಲಾವಣೆಯಲ್ಲಿ ಅದು ಎಷ್ಟರ ಮಟ್ಟಿಗೆ ಸಫಲವಾಗಿದೆ ಎಂಬುದನ್ನೇ ನಾವು ಗಮನಿಸಬೇಕಾಗಿದೆ. ಆ ದಿಸೆಯಲ್ಲಿ ಇವತ್ತು ನೀವು ಕಾನೂರು ಹೆಗ್ಗಡತಿಯನ್ನು ನೋಡ್ತಾ ಇದ್ದೀರಿ. ನನಗೆ ಬಹಳ ಕನಸು ಕಂಡಿದ್ದರಲ್ಲಿ ಅದು ಒಂದು. ಸುಮಾರು ಒಂದುವಾರ ಕಾಲ ಹಗಲು ರಾತ್ರಿಯೆನ್ನದೆ ಕೂತು ಓದಿ ಆಹಾ ಎಂತಹ ಪಾತ್ರಗಳು, ಇವುಗಳನ್ನು ಪರಿಭಾವಿಸುವುದು ಹೇಗೆ? ಅವುಗಳನ್ನು ದೃಶ್ಯಿಸುವುದು ಹೇಗೆ? ಅಂತ ಅನೇಕ ಕನಸುಗಳನ್ನು ಕಂಡವನು. ಆದರೆ ಅದು ನನ್ನ ಕೈಗೆ ಸಿಗಲಿಲ್ಲ. ನನ್ನ ಗುರುಗಳಾದ ಕಾರ್ನಾಡ್ ಕೈಯಲ್ಲಿ ಸಿಕ್ತು. ಸಿನಿಮಾದಲ್ಲಿ ಕಾರ್ನಾಡ್ ರವರು ನನ್ನ ಗುರುಗಳು. ಅವರ ಕೈ ಕೆಳಗೆ ನಾನು ನನ್ನ ಸಿನಿಮಾ ಪ್ರಾರಂಭ ಮಾಡಿದ್ದು. ಅವರ ಎಲ್ಲಾ ಸಿನಿಮಾಗಳಿಗೆ ಗೋಧೂಳಿ,ತಬ್ಬಲಿ ನೀನಾದೆ ಮಗನೆ, ಒಂದಾನೊಂದು ಕಾಲದಲ್ಲಿ... ಈ ಎಲ್ಲಾ ಚಿತ್ರಗಳಿಗೂ ಸಹಾಯಕ ನಿರ್ದೇಶಕ ನಾಗಿ ಕೆಲಸ ಮಾಡಿದೆ. ಸಿನಿಮಾದಲ್ಲಿ ಮೊದಲನೇ ಹೆಜ್ಜೆಗಳನ್ನು ನಾನು ಗುರುತಿಸುತ್ತಿದ್ದಾಗ ಅವರಿಂದ ಕಲಿತದ್ದು ಬಹಳಷ್ಟು. ಅವರೇ ಮಾಡ್ತಾರೆ ಅಂದಾಗ ನನಗೆ ದೊಡ್ಡಮಟ್ಟದ ನಿರೀಕ್ಷೆ ಇತ್ತು. ಹಾಗೆಯೇ ಅದರ ನಿರ್ಮಾಪಕರು ನನಗೆ ಬಹಳ ಆತ್ಮೀಯರು. ಆವತ್ತೊಂದಿನ ಮುಂದಿನ ಸಿನಿಮಾ ನಿನ್ನದೇ ಅಂತ ಹೇಳಿದರು. ನಾನು ಕಾಯ್ತಾ ಇದ್ದೆ. ಮತ್ತೆ ಒಂದು ಸಿನಿಮಾ ಸ್ಟಾರ್ಟ್ ಮಾಡಿದರು, ಏನು ಗುರುಗಳೇ ನನ್ನ ಕರೀತೀರಿ ಅಂತ ಹೇಳಿದ್ರಿ ಅಂತ ಕೇಳಿದೆ, ಅದಾದ ಮೇಲೆ ನೀನು ಬಾರಪ್ಪ ಅಂದರು. ಹೀಗಾಗಿ ಪ್ರತಿಸಲ ಒಂದು ವರ್ಷ, ಎರಡು ವರ್ಷ ನನ್ನ ಮುಂದಕ್ಕೆ ಹಾಕ್ತಾ ಇದ್ದರು. ಕೊನೆಗೆ ಅವರು ಸಿನಿಮಾ ಮಾಡೋದು ನಿಲ್ಲಿಸಿದೀನಿ ಅಂತ ಹೇಳಿದ ಮೇಲೆ ನಾನು ಕೇಳೋಕೆ ಹೋಗಲಿಲ್ಲ. ಆದರೆ ಅವರೊಡನೆ ಮಾಡಿದ ಸಿನಿಮಾ "ಮತದಾನ" ಅದರ ಹಕ್ಕನ್ನು ಎಸ್.ಎಲ್.ಭೈರಪ್ಪನವರ ಹತ್ತಿರ ನಾನು ಪಡೆದದ್ದು ನಾನು. ಅವರು ಇನ್ನೊಬ್ಬರಿಗೆ ಮಾತು ಕೊಟ್ಟರೆಂದು ಅವರು ಹೇಳಿದ ಹಾಗೆ ಕೊಟ್ಟದ್ದಾಯಿತು. ಸಿನಿಮಾ ಆದಮೇಲೆ ಎಲ್ಲೋ ಸಿಕ್ಕಾಗ, ನೀನು ಮಾಡಿದ್ದರೆ ಚೆನ್ನಾಗಿರುತ್ತಿತ್ತೇನೋ ಅಂದಾಗ ಅದೇ ಸಾಕು ಅಂದುಕೊಂಡು ನಾನು ಅತ್ಮತೃಪ್ತಿ ಪಡೆದುಕೊಂಡೆ. ಹೀಗೆ ಸಿನಿಮಾ ಮತ್ತು ಸಾಹಿತ್ಯ ಅದರದೇ ಆದ ಬೇರೆ ಬೇರೆ ವಿಭಾಗವಾಗಿ ತನ್ನನ್ನು ತಾನು ಸಾಬೀತು ಪಡಿಸುತ್ತಾ ಹೋಗುತ್ತದೆ. ಅಂತಹ ಸೃಷ್ಟ್ಯ ಹೊಸ ಬೇರುಗಳನ್ನು ಹುಡುಕುವಾಗ ನಮ್ಮ ನಿಜವಾದಂತಹ ಶಕ್ತಿ ಗೋಚರವಾಗುತ್ತದೆ. ನೀವು ಸಿನಿಮಾ ನೋಡಿ ಅದರ ನಂತರ ಅನಿಸಿಕೆ ವ್ಯಕ್ತವಾಗುತ್ತೆ.
ಇಷ್ಟಂತು ಸತ್ಯ ನಾವು
ಬಹುಮುಖ್ಯವಾಗಿ ಕುವೆಂಪುರವರ ಕಾನೂರು ಹೆಗ್ಗಡತಿ ಮಹಾ ಕಾದಂಬರಿಗೆ ಇದೇ ಡಿಸೆಂಬರ್ 16 ನೇ ತಾರೀಖಿಗೆ ಅಂದರೆ 88 ವರ್ಷ. ಖುಷಿಯಾಗುತ್ತದೆ. ಇತ್ತೀಚೆಗೆ ಸಾಕಷ್ಟು ತಂತ್ರಜ್ಞಾನದ ಬಳಕೆಯನ್ನು ನೋಡಿದಾಗ ತಂತ್ರಾಂಶಗಳು,ಇ-ಬುಕ್ ಇರಬಹುದು, ಬೇರೆ ಬೇರೆ ರೀತಿಯ ತಂತ್ರಾಂಶಗಳಿರಬಹುದು, ಎಷ್ಟರಮಟ್ಟಿಗೆ ಸಫಲವಾಗಿದೆ, ಸಫಲವಾಗಿರಬಹುದು. ಆದರೆ ನಾವು ಓದುವ ಪರಿ ಹೇಗಿತ್ತು? ಅಂದರೆ ಪುಸ್ತಕದ ರೂಪದಲ್ಲಿತ್ತು. ಆ ಪುಸ್ತಕ ವಾಸನೆ, ಅನುಭವ, ಪುಟದಲ್ಲಿ ಮಾರ್ಕು ಮಾಡುವ ಆ ಅನುಭವ ಈ ಹೈಪ್ಯಾಡು ಮೊಬೈಲ್ ಗಳಲ್ಲಿ ಸಿಗಲ್ಲ. ಯಂತ್ರಗಳ ಜೊತೆ ಮಾತಾಡ್ತಾ ಇದ್ದೇವೆ ಅನ್ನಿಸುತ್ತದೆಯೇ ಹೊರತು, ಒಂದು ರೀತಿಯ ಆತ್ಮೀಯತೆಯನ್ನು ತಂದುಕೊಡುತ್ತಿದ್ದ ಪುಸ್ತಕಗಳೊಂದಿಗಿನ ನಮ್ಮ ಸಂಬಂಧ ಇದೆಯಲ್ಲ ಆ ಅಕ್ಷರ ರೂಪಗಳನ್ನು ಈಗ ಯಾಂತ್ರಿಕ ಯಂತ್ರ ರೂಪದಲ್ಲಿ ನೋಡ್ತಾ ಇದ್ದೇವೆ. ಅದು ದೊಡ್ಡ ಮಟ್ಟದ ಅಭಿವೃದ್ಧಿ ಅಂತ ಒಪ್ಪುವುದಾದರೂ ಅಷ್ಟರಮಟ್ಟಿಗೆ ಬದುಕನ್ನು ಬಹಳ
ಸಾಂಸ್ಕೃತಿಕ ಲೋಕಕ್ಕೆ ಬೇಕಾದಂತಹ ಮಾನವೀಯ ಸಂಬಂಧ ಏನಿತ್ತು ಅದು ನಿಧಾನವಾಗಿ ಯಾಂತ್ರಿಕ ಸಂಬಂಧಗಳಾಗ್ತಾ ಹೋಗ್ತಾ ಇದೆ. ನಮಗೆ ಗೊತ್ತಿಲ್ಲದ್ದನ್ನು ಇವತ್ತು ನಮ್ಮ ಮಕ್ಕಳು ಇದನ್ನು ಸರಿ ಮಾಡಿ ಕೊಡ್ತಾರೆ ಅಷ್ಟರಮಟ್ಟಿಗೆ ಇವತ್ತು ಬದುಕನ್ನು ನಾವು ಯಂತ್ರಗಳ ಜೊತೆ ಸ್ವೀಕರಿಸಿದ್ದೇವೆ.
ಹಾಗಾಗಿ 88ನೇ ವರ್ಷದಲ್ಲಿ (ಕಾನೂನು ಹೆಗ್ಗಡತಿ) ನಾವು ಗೌರಯುತ ವಾಖ್ಯಾನಗೊಳಿಸುವುದಾದರೆ, ಮತ್ತೆ ಮನನ ಮಾಡಿಕೊಳ್ಳಲು ಹೋಗಬಹುದಾದ ಹಿಂದಿನ ಜಾಡನ್ನು, ಹಿಂದಿನ ಓದನ್ನು, ಹಿಂದಿನ ಆವತ್ತಿನ ಸ್ಮರಣೆಯನ್ನು ನಾವು ಇವತ್ತು ಹೀಗೆ ಮಾಡ್ತಾ ಇದ್ದೇವೆ. ಪ್ರತಿ ಮನುಷ್ಯನ ಒಂದು ಪ್ರಯೋಗ, ಪ್ರತಿದಿವಸ ಅದೇ ನಾಟಕ ಮಾಡುತ್ತಿರಬಹುದು, ಅದೇ ಪಾತ್ರ ಮಾಡುತ್ತಿರಬಹುದು. ನೋಡುತ್ತಿರುವ ಪ್ರೇಕ್ಷಕರ ಜೊತೆಗೆ ಸಂವಾದದ ಹಾಗೆ, ಮಾಡ್ತಾ ಇರುವ ವ್ಯಕ್ತಿಯ ಆವತ್ತಿನ ಭಾವನೆಗಳ ಜೊತೆ ಹೊಸ ತಿಳಿವುಗಳನ್ನು ಕಟ್ಟಿಕೊಡುತ್ತದೆ. ಹಾಗಾಗಿ ಇವತ್ತು ಆ ಸಿನಿಮಾ ನೋಡಿದಾಗ ಇನ್ನೊಂದು ರೀತಿಯ ಅನುಭವ ತೆರೆದುಕೊಳ್ಳುತ್ತದೆ. ಕುವೆಂಪುರವರು ತಮ್ಮ ನೆನಪಿನ ದೋಣಿಯಲ್ಲಿ ದಾಖಲಿಸಿರುವ17-9-1933 ನೆನಪಿನಲ್ಲಿ ಹೀಗೆ ಹೇಳುತ್ತಾರೆ. "ನಾನು ಕಾದಂಬರಿಯ ವಸ್ತುಗಳನ್ನು ಪರಿಗಣಿಸಿದ್ದೇನೆ. ಆಗೆಲ್ಲ ಅದನ್ನೇ ಕುರಿತು ಆಲೋಚಿಸಿದೆ , ಕೇವಲ ಎರಡೇ ದಿನದಲ್ಲಿ ಅಂದರೆ 19.9.1933. ಕಾದಂಬರಿ ಬೆಳವಣಿಗೆ ಆಗಿತು, ಆನಂತರ ಸುಮಾರು ನಾಲ್ಕು ವರ್ಷಗಳ ನಂತರ 1937 ರಲ್ಲಿ ಕಾದಂಬರಿ ಗ್ರಂಥ ಕಂಡಿತು". ಸುಮಾರು ನಾಲ್ಕು ವರ್ಷ, ಇಂತಹ ಅದ್ಭುತವಾದಂತಹ ಬರೀ ಕಾದಂಬರಿ ಅಂತ ಹೇಳಿದರೆ ತಪ್ಪಾಗುತ್ತದೋ ಏನೋ ಬೃಹತ್ ಎನ್ನುವ ಪದಕ್ಕೆ ಸಮೀಕರಣಿಸಿಕೊಳ್ಳುವ ಹಾಗೆ ಎಷ್ಟೊಂದು ಪಾತ್ರಗಳು, ಎಷ್ಟೊಂದು ಸನ್ನಿವೇಶಗಳು, ಎಷ್ಟೊಂದು ವರ್ಣನೆ ಇವೆಲ್ಲವುಗಳನ್ನು ಗಮನಿಸಿದಾಗ ನಮಗೆ ಆ ಬೃಹತ್ ಎನ್ನುವುದರ ಅರ್ಥ ಆಗ್ತಾ ಹೋಗುತ್ತದೆ. ತಮ್ಮದೇ ಆದ ಸತತ ನಾಲ್ಕು ವರ್ಷಗಳ ಕಾಲ ತಪಸ್ಸಿನೊಡನೆ ಮುಂದೆ ಇಳಿಯುತ್ತಾರೆ.
ಅವರ ಗುರುಗಳು ವೆಂಕಣ್ಣಯ್ಯನವರು ಹೇಳಿದ ಹಾಗೆ ಅವರು ಅವರನ್ನು ಹೇಗೆ ಪ್ರೇರೇಪಿಸಿದರು ಅನ್ನುವುದಕ್ಕೆ ಒಂದು ದಿನ ಕುಕ್ಕರ ಹಳ್ಳಿ ಕೆರೆಯಲ್ಲಿ ಇಬ್ಬರೂ ನಡೆದುಕೊಂಡು ಹೋಗ್ತಾ ಇರಬೇಕಾದರೆ "ನೋಡಪ್ಪಾ ಅದೇನು ಭಾವಗೀತೆ, ಸಣ್ಣಕಥೆ, ನಾಟಕ ಬರೆದಂತೆ ಅಥವಾ ಸಾಧಾರಣ ಕಾದಂಬರಿ ಬರೆದಂತೆ ಅಲ್ಲ ಈ ಮಹಾಕಾದಂಬರಿಗೆ ಇಂಗ್ಲೀಷ್ ನಲ್ಲಿ ಪೇಟ್ರಲ್ ನಾವೆಲ್ ಅನ್ನುತ್ತಾರೆ. ಅದರ ಪಾತ್ರ ಸಂಖ್ಯೆ ವಿವರತೆ ಅದರ ನಿಲುವು ರೂಪಿಸುವ ವಿಸ್ತಾರ, ಅದರ ಭಯಂಕರ ವೈವಿಧ್ಯಮಯ, ಆಲೋಚಿಸಿದರೆ ಮೈ ಜುಮ್ಮೆನ್ನುತ್ತದೆ. ಅವುಗಳನ್ನೆಲ್ಲಾ ಹಂಗೇ ಎಣೆದಂತೆ, ನಿಲುವು ಹೊಂದಾಣಿಕೆ ಬಂದವರಂತೆ, ಕಲ್ಪನೆಗೆ ಹಿಡಿದಿಟ್ಟುಕೊಂಡು ಸಾವಿರಾರು ಪುಟ ನಡೆಸಲು ಸಾಧ್ಯವೇ?" ಎಂದರಂತೆ, ಆಗ ಕುವೆಂಪು "ನಾನು ಬರೆಯುವ ಕಾದಂಬರಿ ಉತ್ತರಕುಮಾರನ ರಣಸಾಹಸವಾಗುವುದಷ್ಟೇ ಎಂದು ನಕ್ಕು ಹೇಳಿದ್ದರಂತೆ". ಆದರೆ ಶಿಷ್ಯನ ಸಾಮರ್ಥ್ಯದಲ್ಲಿ ವೆಂಕಣ್ಣಯ್ಯನವರಿಗೆ ಶಂಕೆ ಎಂದೂ ಇರಲಿಲ್ಲ. ಅವರು ಹೀಗೆ ಹೇಳಿದರು "ನೋಡಿ ಕಾದಂಬರಿಗೆ ಅವಶ್ಯಕವಾದ ಕೆಲವು ಶಕ್ತಿಗಳು ನಿಮ್ಮಲ್ಲಿ ಆಗಲೇ ಪ್ರಕಟಗೊಂಡು ಸಾರ್ಥಕವಾಗಿದೆ. ಕಥಂ, ಸಂವಾದ ಮತ್ತು ವರ್ಣನೆ ಮೂರು ಶಕ್ತಿಗಳು ನಿಮ್ಮಲ್ಲಿಯೇ ಇವೆ. ಸಣ್ಣಕಥೆ ಬರೆದಿದ್ದೀರಿ, ನಾಟಕ ಬರೆದಿದ್ದೀರಿ, ಮಲೆನಾಡಿನ ಚಿತ್ರಗಳಿಗೆ ಬಣ್ಣ ವ್ಯಕ್ತಗೊಂಡಿದೆ. ನೀವು ಹೆದರಬೇಕಾಗಿಲ್ಲ ಇನ್ನೊಬ್ಬರಲ್ಲಿ ಹೇಳುತ್ತಾ, ಕೇಳುತ್ತಾ ಹೋಗುವ ಬದಲು ನೀವೇ ಒಂದು ಕೈ ನೋಡಿಬಿಡಿ".
ಹೀಗೆ ಮೊದಲು ಹುಟ್ಟಿದ್ದೇ "ಕಾದಂಬರಿಯ ಗೆಳತಿ, ಮಲೆನಾಡಿನ ಮೂಲೆಯಲ್ಲಿ, ಕಾನೂನು ಸುಬ್ಬಮ್ಮ ಹೆಗ್ಗಡತಿ ಕೊನೆಯಲ್ಲಿ ನಿಂತದ್ದು ಕಾನೂರು ಹೆಗ್ಗಡತಿ".
ಹೇಗೆ ಒಂದು ತಪಸ್ಸು ಇಡೀ ಸಮಷ್ಠಿಯನ್ನು ಕೇವಲ ಆ ವ್ಯಕ್ತಿಯ ಜೊತೆಗಷ್ಟಲ್ಲ ಆ ವ್ಯಕ್ತಿತ್ವದ ಜೊತೆಯಲ್ಲಿ ಸಮೀಕರಿಸುತ್ತೆ. ಓದುಗರು ಯಾರೇ ಇರಲಿ, ಸಿನಿಮಾ ನೋಡುವವರು ಯಾರೇ ಇರಲಿ, ಅವರ ಕೃತಿಗಳನ್ನು ಗ್ರಹಿಕೆಗೆ ಮೀರಿ ಹೃದಯದಲ್ಲಿ ಬಚ್ಚಿಟ್ಟುಕೊಂಡು, ಒಂದು ರೀತಿಯಲ್ಲಿ ಆಹ್ವಾನಿಸಿಕೊಂಡು ಅದನ್ನು ಸದಾಕಾಲ ಸ್ಮರಿಸಿಕೊಳ್ಳುವಂತಹ ತನ್ನದೇ ಆದ ಭಾವಕೋಶವನ್ನು ಅದು ನಿರ್ಮಾಣ ಮಾಡಿದೆ. ಇವತ್ತು ಯಾರೇ ಆಗಲಿ ಒಮ್ಮೆ ಆ ಪಾತ್ರಗಳನ್ನು ಓದಿರೋರು, ಆ ಪಾತ್ರಗಳ ವಿವರಣೆ, ಚಟುವಟಿಕೆಗಳನ್ನು ಗಮನಿಸಿದರೆ ಸಾಕು ಇಡೀ ಪರಿಸರ ಕಣ್ಣಮುಂದೆ ಬರುತ್ತದೆ. ಎಷ್ಟೋ ಸಲ ಇವತ್ತಿನ ಕಾಲಘಟ್ಟದಲ್ಲಿ ನಮ್ಮ ಹುಡುಗರಿಗೆ ನಮ್ಮ ಮಕ್ಕಳಿಗೆ ಮಲೆನಾಡಿನ ಪರಿಸರ ಖಂಡಿತ ಸಿಗಲು ಸಾಧ್ಯವಿಲ್ಲ. ಆದರೆ ಆ ವರ್ಣನೆ ಮತ್ತು ಆ ಓದಿನ ಮೂಲಕ ಅದನ್ನ ಮತ್ತೆ ಪಡೆದುಕೊಳ್ಳಲು ಸಾಧ್ಯತೆಗಳು ಇದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ಮಕ್ಕಳಲ್ಲಿ ಏನಾದರೂ ಮಾಡಿ ಅವರಿಗೆ ಹುಟ್ಟುವ ದೃಶ್ಯ ಕಲ್ಪನೆಗಳಲ್ಲೇ ನಾವು ಅವರನ್ನ ಈ ಕಾದಂಬರಿಯ ಪರಿಸರಕ್ಕೆ ಅವರನ್ನು ಕರೆತರಬೇಕಾಗಿದೆ.
ಆ ದೃಷ್ಟಿಯಲ್ಲಿ ಕೂಡ ಕುವೆಂಪುರವರು ಹೇಳಿರುವ ಒಂದು ಮಾತನ್ನು ಮತ್ತೆ ಹೇಳುತ್ತಾ "ಕಲೆ ಹಡೆದ ಕಲ್ಪನೆಯ ಕತ್ತಲೆಯು ಕೆಡ........ಕಾದಂಬರಿಯ ಗುಟ್ಟು, ಗುಟ್ಟೆಲ್ಲಾ ರಟ್ಟು". "ಈ ಯುಗದ ಕವಿಗೆ ಜಗದ ಕವಿಗೆ ಶ್ರೀ ರಾಮಾಯಣ ದರ್ಶನಂ ನಿಂದಲೇ ಕೈಮುಗಿದ ಕವಿಗೆ ನಮಿಸೋಣ" ಇದು ಬೇಂದ್ರೆಯವರ ಮಾತು. ಮಲೆನಾಡಿನ ಸೌಂದರ್ಯಕ್ಕೆ..... ಮರುಳಾಗಿದ್ದ ಕವಿಗೆ ದ.ರಾ ಬೇಂದ್ರೆಯವರು ನುಡಿಗಳೊಂದಿಗೆ ನಾನು ಅವರಿಗೆ ನಮಿಸುತ್ತಾ, ನಾನು ನಿಮ್ಮನ್ನು ಈ ದೃಶ್ಯ ಕಾವ್ಯಕ್ಕೆ ಆದರದಿಂದ ಅಲಿಸಿದ್ದಕ್ಕೆ ನಮಸ್ಕಾರ ಹೇಳಿ ಮಾತು ಮುಗಿಸುತ್ತೇನೆ.
*******💐
(ಇದೇ ವೇದಿಕೆಯ ಅತಿಥಿಗಳ ಭಾಷಣವನ್ನು ಅಕ್ಷರ ರೂಪಕ್ಕೆ ಇಳಿಸುವ ಪ್ರಯತ್ನ ಮುಂದುವರೆಯಲಿದೆ)
ಎಲ್ಲರಿಗೂ
2022 ಇಸವಿಯ ಶುಭಾಶಯಗಳು 💐💐💐
ಶಿವರಾಮ ಕಾರಂತ ವೇದಿಕೆ (ರಿ)
ಆರ್.ಟಿ.ನಗರ, ದಿ:26.12.2021 ರಂದು ನಡೆದ " ಕುವೆಂಪು ಸ್ಮರಣೆ" ಕಾರ್ಯಕ್ರಮ. ಮುಂದುವರೆದ ಭಾಗವಾಗಿ
ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಎಸ್ ಆರ್ ವಿಜಯಶಂಕರ್ ಸರ್ ಅವರು ನೀಡಿದ ಉಪನ್ಯಾಸವನ್ನು ಅಕ್ಷರಗಳಿಸುವ ಪ್ರಯತ್ನ ನನ್ನ ಕಡೆಯಿಂದ.
ಈ ಕಾರ್ಯಕ್ರಮದಲ್ಲಿ
ಶ್ರೀಮತಿ ಸುಜಾತಾ ನಾರಾಯಣ ಸ್ವಾಮಿ ಮತ್ತು ಶ್ರೀಮತಿ ಭಾನುಮತಿ ರವರಿಂದ ಪ್ರಾರ್ಥನೆ.
ಶ್ರೀಮತಿ ದೀಪಾ ಪಡ್ಕೆಯವರಿಂದ ಸ್ವಾಗತ ಭಾಷಣ ಮತ್ತು ಪ್ರಾಸ್ತಾವಿಕ ನುಡಿ.
ಶ್ರೀ ವೀರಶೇಖರ ಸ್ವಾಮಿಯವರಿಂದ ವಂದನಾರ್ಪಣೆ.
ಶ್ರೀಮತಿ ಶಶಿಕಲಾ ರವರಿಂದ ನಿರೂಪಣೆ
ಶ್ರೀ ಚಿದಾನಂದ ಕೋಟೆಯವರಿಂದ ಓ ನನ್ನ ಚೇತನ- ಗಾಯನ
ವೇದಿಕೆಯ ಅಧ್ಯಕ್ಷತೆ ಶ್ರೀಮತಿ ನಿರ್ಮಲಾ ಪ್ರಭು
ಉಪನ್ಯಾಸ:
ಎಸ್ ಆರ್ ವಿಜಯಶಂಕರ್ ಸರ್
ಎಲ್ಲರಿಗೂ ನಮಸ್ಕಾರ ತಿಳಿಸುತ್ತಾ, ದೂರದರ್ಶನದಲ್ಲಿ ಮೊದಲ ವಾರ್ತಾ ವಾಚಕಿ ಶ್ರೀಮತಿ ಕೃಷ್ಣಾ ಗಲಗಲಿ ಮೇಡಂ ಕಾರ್ಯಕ್ರಮದಲ್ಲಿರುವ ಬಗ್ಗೆ, ಆವತ್ತಿನ ಕಾಲಕ್ಕೆ ಇದ್ದ ಏಕೈಕ ದೂರದರ್ಶನದಲ್ಲಿ ಅವರು ಓದುತ್ತಿದ್ದ ವಾರ್ತೆಗಳ ನೆನೆಯುತ್ತಾ, ಸಂತಸ ವ್ಯಕ್ತಪಡಿಸಿದರು.
ಚಡಗರವರು ಕಾರ್ಯಕ್ರಮಕ್ಕೆ ಕರೆದಾಗ ಎರಡು ರೀತಿಯಲ್ಲಿ ಖುಷಿಯಾಯಿತು. ಒಂದು ನಾನು ಮತ್ತು ನಾಗಾಭರಣ ರವರು ಸಮಾನ ಸ್ನೇಹಿತರಾಗಿದ್ದರೂ, ಕ್ಷೇತ್ರಗಳು ಬೇರೆಯಾದ್ದ ಕಾರಣ ಸತತ ಬೇಟಿ ಆಗಲು ಆಗುತ್ತಿರಲಿಲ್ಲ. ಈಗ ಬೇಟಿಯಾಗಬಹುದು ಅನ್ನುವುದು. ಮತ್ತೊಂದು ಕುವೆಂಪುರವರ ರವರ ಬಗ್ಗೆ ಅಧ್ಯಯನ ಮಾಡುತ್ತಿರುವ ಸಮಯದಲ್ಲಿ ವೇದಿಕೆಯ ಕಾರ್ಯಕ್ರಮಕ್ಕೆ ಆಹ್ವಾನ ಸಿಕ್ಕಿದ್ದು ಒಂಥರಾ co-insident ಅನ್ನಿಸುತ್ತಿದೆ.
ಸಾಹಿತ್ಯ ಬಹಳ ಅವ್ಯಕ್ತ ದಲ್ಲಿರುತ್ತದೆ. ಕುವೆಂಪುರವರನ್ನು ನಾವು ನಮ್ಮ ಸ್ವರೂಪದಲ್ಲಿ ಹೇಗೆ ಬೇಕಾದರೂ ನೋಡಿಕೊಳ್ಳಬಹುದು. ಕಣ್ಣಿಗೆ ಕಾಣುವ ಮತ್ತು ಮನಸ್ಸಿನ ಕಣ್ಣಿಗೆ ಕಾಣುವ ಈ ವ್ಯತ್ಯಾಸ ಇವು ಕುವೆಂಪುರವರಿಗೆ ಯಾವತ್ತೋ ಬಂದಿತ್ತು. "ಅನಂತದಿಂದ ದಿಗಂತದಿಂದ..... ಮೋಡ " .. ಅವರ ಕವನದ ಸಾಲುಗಳಲ್ಲಿ ಮೋಡಗಳಿಂದ ನೋಡಿ ಕಲಿಯುವುದು ಈ ಭಾವ ಪ್ರಪಂಚದಲ್ಲಿರುವ ಶಕ್ತಿ. ಈ ಭಾವ ಪ್ರಪಂಚದಲ್ಲಿ ಇಡೀ ಜಗತ್ತಿನ ಪ್ರಪಂಚವನ್ನು ನಾನು ಹಿಡಿಯಬಲ್ಲೆ.ಈ ಭಾವವೇ ಇಡೀ ಭಾರತವನ್ನು ಒಂದು ಮಾಡಿದೆ .ನಮ್ಮ ಸ್ವಾತಂತ್ರ್ಯ ಹೋರಾಟ ಒಂದು ಭಾವಸ್ಥಿತಿಯಲ್ಲಿ ನಮ್ಮ ಮನಸ್ಸಿನಲ್ಲಿತ್ತು.
ಚಡಗರವರು ವೇದಿಕೆಗೆ ಆಹ್ವಾನಿಸಿದಾಗ, ಸಾಹಿತ್ಯ ಪರಿಷತ್ ನನಗೆ "ಜೀವನ ಮೌಲ್ಯಗಳು" ವಿಷಯದ ಮೇಲೆ ಒಂದು ಅಸೈನ್ ಮೆಂಟ್ ಮಾಡಿ ಕೊಡಲು ಕೇಳಿದ್ದರು, ಅದನ್ನು ಮಾಡ್ತಾ ಇದ್ದೆ. ನವ್ಯ ಸಾಹಿತಿಗಳ ಬಗ್ಗೆ ಬರೆಯಬೇಕಾದರೆ ಕುವೆಂಪುರವರ ಅಧ್ಯಯನ ಮಾಡದೆ ಬರೆಯಲು ಸಾಧ್ಯವಿಲ್ಲ
ಕಾಡುವ ಮತ್ತು ನೋಡುವ ವ್ಯತ್ಯಾಸಗಳನ್ನು ಹೇಳುವುದಕ್ಕೆ ಕುವೆಂಪುರವರ "ನೆನಪಿನ ದೋಣಿಯಲಿ"ಯಿಂದ ಉದಾಹರಣೆ ತೆಗೆದುಕೊಳ್ಳಬೇಕಾಯಾತು.
1929 ರಲ್ಲಿ ರಾಮಕೃಷ್ಣ ಆಶ್ವಮದಲ್ಲಿದ್ದಾಗ ಕುವೆಂಪುರವರು, ಸನ್ಯಾಸಿ ಆಗ್ತೀನಿ ಅಂತ ಹೋದವರಿಗೆ ಗಂಗಾನದಿ ನೋಡಿ ವಿವರಿಸಿ ಬರೀತಾರೆ, ಅಯ್ಯೋ ದೇವರೆ, (ಆ ಕೊಳಕುಗಳನ್ನು, ಕೊಳೆತ ಹೆಣಗಳನ್ನು) ವಿವರಿಸಿದರೆ ಊಟ ಸೇರುವುದಿಲ್ಲ. ಅಷ್ಟು ಹಿಂಸೆ ಆಗೋ ಹಾಗೆ ವಿವರಿಸಿದ್ದಾರೆ. ಅದು ಸತ್ಯ! ನದಿಯಲ್ಲಿ ಮುಳುಗುವುದು ಇರಲಿ, ಪ್ರೋಕ್ಷಣೆ ಮಾಡಿಕೊಳ್ಳಲು ನನ್ನಿಂದ ಸಾದ್ಯವಿಲ್ಲ ಅಂದುಬಿಟ್ಟರು.
ಅದೇ ಕುವೆಂಪು ಮನೆಗೆ ಹೋದ ಮೇಲೆ "ಈ ಪಾವನ ಗಂಗೆಯಲ್ಲಿ ಮಿಂದು ಬಾ" ಅಂತ ಬರೀತಾರೆ. ಅಂದರೆ ಮನಸ್ಸಿನಲ್ಲಿ ಕಾಣುವ ಗಂಗೆ ಬೇರೆ. ಕಣ್ಣಿಗೆ ಕಾಣುವ ಗಂಗೆ ಬೇರೆ. ಇಂದು ನಮ್ಮ ಆಧುನಿಕ ಸಾಹಿತ್ಯ ಕಣ್ಣಿಗೆ ಕಾಣುವುದನ್ನು ಮಾತ್ರ ಚಿತ್ರಿಸಿದಾಗ, ಮನಸ್ಸಿಗೆ ಕಾಣುವ ಗಂಗೆ ಏನು? ಈ ವ್ಯತ್ಯಾಸ ಗಳನ್ನು ಹೇಗೆ ಗ್ರಹಿಸಬೇಕಾಯಿತು ಅಂತ ಹೇಳುವ ಸಮಸ್ಯೆ. ಇದು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎದುರಾಯಿತು. ಮನಸ್ಸಿಗೆ ಕಾಣುವುದೇ ಮುಖ್ಯ ಅನ್ನಿಸಿತ್ತು. ಏಕೆಂದರೆ ನಾವು ಬ್ರಿಟಿಷ್ ರ ವಿರುದ್ದ ಹೋರಾಡಬೇಕಾಗಿತ್ತು. ಅಂಥ ಸಂದರ್ಭದಲ್ಲಿ ಕುವೆಂಪುರವರು ಹೇಳಿದ ಒಂದು ಮಾತು "ಎಲ್ಲಾ ದೊಡ್ಡವರ ಹೃದಯದಲ್ಲಿ ನಿತ್ಯವಾಗಿ ಕಿಶೋರ(ಮುಗ್ಧತೆ) ನಿದ್ದಾನೆ, ಅದು ನಿದ್ರಿಸುತ್ತಿದೆ. ಆ ಮುಗ್ಧತೆಯೇ ಮನಸ್ಸು. ಅದು ಮಕ್ಕಳ ಸಂಘದಿ ಎಚ್ಚರಗೊಳ್ಳಲಿ ಆನಂದದಿ ಆ ದಿವ್ಯ ಶಿಶು. ಆ ಆನಂದದ ಆ ದಿವ್ಯ ಶಿಶು ನಮ್ಮ ಹೃದಯದಲ್ಲಿದೆ. ಅದು ಎಚ್ಚರಗೊಳ್ಳಬೇಕಾಗಿದೆ".
ಕುವೆಂಪುರವರ "ಕಂಸಶಿಲೆ" ಇದು ಹೆಚ್ಚು ಚರ್ಚೆ ಆಗದೇ ಇರುವಂತಹದು. ಈಗಂತೂ ಕ್ಯಾಸೆಟ್ ಗಳು, ಇಂಟರ್ ನೆಟ್ ಗಳು ಬಂದ ಮೇಲೆ ಆಗಿರುವ ದೊಡ್ಡ ದೋಷ ಏನೆಂದರೆ ಹಾಕಿದ್ದನ್ನೇ ಕೇಳೋದು, ಕೇಳಿದ್ದನ್ನೇ ಮಾತನಾಡುವುದು.
ನಾನು ಇಲ್ಲಿ ಲೈಬ್ರರಿಗೆ ಬಂದು ಚಡಗರವರಿಂದ ಎಷ್ಟೊಂದು ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಓದುತ್ತೇನೆ. ನಾಗಾಭರಣ ಸರ್ ಕಡೆ ತಿರುಗಿ, "ತೊರವೇ ರಾಮಾಯಣ ಪ್ರಿಂಟ್ ಪ್ರತಿಗಳು ಸಿಗುತ್ತಿಲ್ಲ ಸರ್, ದಯವಿಟ್ಟು ಪ್ರಿಂಟ್ ಮಾಡಿಸಿ," ಅದು ಈ ಲೈಬ್ರರಿಯಲ್ಲಿ ಇದೆ. ನಾನು ಚಡಗರವರಿಂದ ತೆಗೆದುಕೊಂಡು ಹೋಗಿದ್ದೆ. ಜೆರಾಕ್ಸ್ ಮಾಡಿಸಿಕೊಳ್ಳಬೇಕು ಅಂದಾಗ ಚಡಗರವರು, ಕೊರೋನಾ ಕಾರಣ ಲೈಬ್ರರಿ ಓಪನ್ ಆಗ್ತಾ ಇಲ್ಲ . ಇನ್ನೂ ಸ್ವಲ್ಪ ದಿವಸ ಇಟ್ಟುಕೊಳ್ಳಿ ಅಂತ ಹೇಳಿದರು.
ಇವತ್ತು ಇಂಟರ್ ನೆಟ್ ಬೇಕು. ಆದರೆ ಪುಸ್ತಕ ಓದುವುದು, ಮುಟ್ಟುವುದು, feel ಮಾಡುವುದು, ಒಡನಾಡುವುದು ಆ ಸಂಪರ್ಕವೇ ಬೇರೆ. ಅದನ್ನು ಹೇಳಲಿಕ್ಕೆ ಆಗುವುದಿಲ್ಲ. ಕುವೆಂಪುರವರ ಕಂಸಶಿಲೆಯಲ್ಲಿ ಕಂಸ 7 ಶಿಶುಗಳನ್ನು ಒಂದು ಶಿಲೆಗೆ ಹೊಡೆದು ಕೊಲ್ಲುತ್ತಾನೆ. 8ನೇ ಶಿಶು ಅವನನ್ನೇ ಕೊಂದಿತು. ಆ ಅದರ್ಶದ ಕನಸುಗಳನ್ನು ನಮ್ಮ ಮನಸ್ಸಿನಲ್ಲಿ ಯಾವ ಶಿಲೆಗೆ ಹೊಡೆದು ಕೊಳ್ಳುತ್ತೇವೆ? "ನೀನೊಬ್ಬನೇ ಅಲ್ಲ ಸಾಗಿ......." ಕವನದ ಸಾಲುಗಳ ಉಚ್ಛರಿಸುತ್ತಾ ಹೊಂಗನಿಸಿನ ಆದರ್ಶದ ಶಿಶುಗಳನ್ನು ಹೊಡೆದು ಚೂರು ಚೂರು ಮಾಡುತ್ತಿದ್ದೇವೆ. ನಮ್ಮ ಮನಸ್ಸಿನಲ್ಲಿ ನಾವು ಮಾಡುತ್ತಿರುವುದು ಏನೆಂದರೆ ಹೊಂಗನಸಿನ ಆದರ್ಶದ ಆ ಶಿಶುಗಳನ್ನು ನಾವು ನಮ್ಮ ಹೃದಯದ ಕಂಸ ಶಿಲೆಗೆ ಹೊಡೆದು ಕೊಲ್ತಾ ಇದ್ದೇವೆ, ಅದು ಬೇಡ. ನಮಗೆ ಬೇಕಾಗಿದ್ದು ಆ ರಕ್ಷಣೆಯಲ್ಲಿ ಅದರ್ಶವನ್ನು ಕಾಪಾಡುವ ಬೆಳೆಸುವ ಅಂದ.
ಕುವೆಂಪುರವರನ್ನು ಬೇಂದ್ರೆಯವರು ಜಗದ ಕವಿ, ಯುಗದ ಕವಿ ಎಂದಿರುವರು. 1934ರಲ್ಲಿ ಅವರು 'ಕಲಾಸುಂದರಿ' ಬರೆದರು. ಇದರಲ್ಲಿ "ನಾನು" ಎಂಬ ಕವನ ಇದೆ..ನಾನು ಯಾರು? ಎಂಬುದು ನಿರಂತರವಾಗಿ ಕವಿಗಳನ್ನು ಕಾಡಿರುವ ಅಂಶ. ನಾನು ಯಾರು ಎಂದು ತಿಳಿಯುವುದು ಬೇಂದ್ರೆಯವರಿಗೆ, ಕುವೆಂಪುರವರಿಗೆ,.ಪುತಿನ ನವರಿಗೆ ಬಹಳ ಮುಖ್ಯವಾಗಿತ್ತು. ಈ ಭಾವ ಪ್ರಪಂಚದಲ್ಲಿ ಈ ಲೋಕ ಪ್ರಪಂಚವನ್ನು ಹಿಡಿಯಬಲ್ಲೆ, ಆಡಿಸಬಲ್ಲೆ ಅಂತ ಹೇಳುವ ವಿಶ್ವಾಸ, ಆ ಕಾಲದ ಕವಿಗಳಿಗಿತ್ತು. ಆ ವಿಶ್ವದ ಒಳನುಡಿಗಳಾಗಬೇಕಾದರೆ ನನಗೂ ವಿಶ್ವಕ್ಕೂ ಇರುವ ಸಂಬಂಧವೇನು? ಈ ನಿರಂತರವಾಗದ ವಿಚಾರ ವಸ್ತು ಅವರ ಕಾಡಿರಬಹುದು.
ಮೇಜರ್ ಮತ್ತು ಮೈನರ್ ಕವಿಗಳಿಗೆ ಇರುವ ವ್ಯತ್ಯಾಸ ಏನೆಂದರೆ ಮೇಜರ್ ಆದ ಕವಿ ತತ್ವಕ್ಕೆ ಹೆದರುವುದಿಲ್ಲ. ತತ್ವ ಅವನ ಜೀವಾಳ. ತತ್ವಕ್ಕೆ ಬದ್ಧರಾಗಿರುತ್ತಾರೆ. ಎತ್ತಿ ಹಿಡಿಯುತ್ತಾರೆ. ಮೈನರ್ ಕವಿ ವಿಮರ್ಶೆ ಗಳಲ್ಲಿ ಸಂತೋಷಪಡುತ್ತಾನೆ.
ಒಂದು ತತ್ವವನ್ನು ಒಂದು ಶಬ್ದದಿಂದ ಅಲ್ಲದೆ ಬೇರೆ ಯಾವುದರಿಂದ ವಿವರಿಸಿದರೂ ಅರ್ಥ ವಾಗುವುದಿಲ್ಲ. ತತ್ವಕ್ಕೂ ಕಾವ್ಯಕ್ಕೂ ವ್ಯತ್ಯಾಸ ವೇನೆಂದರೆ ತತ್ವ ಜೀವನದ ವಿವರಗಳನ್ನು ಬಯಸುವುದಿಲ್ಲ. ತತ್ವದ ಅಸ್ತಿತ್ವ ನನ್ನ ಜೀವನದಲ್ಲಿ ಇದೆ , ತತ್ವವೇ ಜೀವಾಳ ಎಂದು ಕವಿ ತಿಳಿಯುತ್ತಾನೆ.
ವಿಜ್ಞಾನ ಮತ್ತು ಕಲೆ ಬೇರೆಯದಾ! "ವಿಜ್ಞಾನದಿಂದ ಬರೆಯುವ ಅರಿವು ವಿಶ್ವಸೌಂದರ್ಯದ ವಿಸ್ತರಣೆಯಾದೀತು" ಅಂತ ತೇಜಸ್ವಿಯವರು ಕುವೆಂಪುರವರ ಬಗ್ಗೆ ಬರೆಯುತ್ತಾ ಹೇಳುತ್ತಾರೆ. ವಿಜ್ಞಾನ ದಿಂದ ಬರುವ ಅರಿವು ವಿಶ್ವಸೌಂದರ್ಯದ ವಿಸ್ತರಣೆ- ಈ ಅರಿವು ಮತ್ತು ಚಿಂತನೆಯನ್ನು ಜೀವನ ಸೌಂದರ್ಯಕ್ಕಿಂತ ಬೇರೆಯಲ್ಲ ಎಂದು ತಿಳಿದವರು ಕುವೆಂಪು. ಅವರಿಗೆ ಅಧ್ಯಾತ್ಮ ಅಂದರೆ ವಸ್ತುವಿನ ನಿಜವಾದ ನೆಲೆಯನ್ನು ಅರಿಯುವುದು.
ಮೂಲವಿಜ್ಞಾನದ ಮೂಲಕ ಒಂದು ವಸ್ತುವಿನ ಸತ್ಯದ ಸಾಲು ಅಂದರೆ ಬ್ರಹ್ಮ, ಪರಮಸ್ಥಾನವನ್ನು ತಿಳಿಯುವುದು. ಈ ಎರಡರಲ್ಲೂ ಕುವೆಂಪುರವರಿಗೆ ವಿಶ್ವಾಸವಿದೆ.
ತತ್ವವು ಕುವೆಂಪುರವರ ತಳಹದಿ, ಅವರು ಕವಿಯಾದ್ಧರಿಂದ ಪ್ರತಿ ಹಂತದ ಜೀವನದ ವಿವರಗಳನ್ನು ಗ್ರಹಿಸುವುದು ಮತ್ತು ಆ ಮೂಲಕ ತತ್ವವನ್ನು ಸೂಚಿಸುವುದು ಅವರ ಸ್ವರೂಪ ವಾಗಿತ್ತು.
ನೀವು ಪಕ್ಷಿಕಾಶಿ ಯಲ್ಲಿ ರಸವಶನಾಗುವ "ದೇವರು ರುಜು ಮಾಡಿದನು.....ಕವಿ ಅದ ನೋಡಿದನು" ಇಲ್ಲಿ ತತ್ವ ಮತ್ತು ಭಾವ ಹೇಗಿರುತ್ತದೆ ನೋಡಿ, ಚಿತ್ರ ರೂಪ (ಆಗಸ, ಬೆಟ್ಟ) ಇಲ್ಲಿ ಹಿನ್ನಲೆಯಾಗಿದೆ.
ದೇವರು ಸಹಿ(ರುಜು) ಮಾಡಿದ್ದು ಯಾಕೆ? ದೇವರಿಗೆ ಬೇರೆ ಕೆಲಸವಿಲ್ಲವಾ! ಪೇಪರ್ ನಲ್ಲಿ ಸಹಿ ಹಾಕೋಕೆ Practice ಮಾಡ್ತಾ ಇದ್ದನಾ? ಅಲಂಕಾರಕ್ಕೆ ಹೇಳಿದರೋ ಎನ್ನುತ್ತಾ ತತ್ವ ಮತ್ತು ವಿವರಗಳು ಒಂದಕ್ಕೊಂದು ಸೇರಿಕೊಳ್ಳುವುದು ಹೀಗೆ. ನದಿಗಳು ಇಂತಿತ್ತು. ವನಗಳು ಇಂತಿತ್ತು. ಬಾನು ನೀಲಿಯ ನಡುವೆ
"ಅನಂತದಿಂ.. ದಿಗಂತದಿಂ....." ವಾಚಿಸುತ್ತಾ ಆಕಾಶ ಮತ್ತು ಪರ್ವತ ಕುವೆಂಪುರವರಿಗೆ ಯಾವಾಗಲೂ ನಿರಂತರವಾಗಿ ನೆನಪಿಗೆ ಬರುವಂತಹದು.ಇದು ಜಗದ ಅಚ್ಚರಿ. ಈ ಅಚ್ಚರಿ ಇಲ್ಲಾಂದರೆ ನಿಮ್ಮ ಮನಸ್ಸಿನ ಮಗು ಸಾಯುತ್ತದೆ. ಈ ಅಚ್ಚರಿ ಇಲ್ಲಾಂದರೆ ನಿಮ್ಮ ಹೃದಯ ಕಂಸಶಿಲೆಯಾಗುತ್ತದೆ. ನಿಮ್ಮ ಹೃದಯ ಕಂಸಶಿಲೆ ಯಾಗಬಾರದು ಅನ್ನುವುದಿದ್ದರೆ ಈ ಅಚ್ಚರಿ ಬೇಕು. ಈ ಬೆರಗು ಉಳಿಯಬೇಕು. ಒಂದು ಕಪ್ಪೆ ಹಾರಿದರೆ ಮಗು ನೋಡಿ ಅಚ್ಚರಿ ಪಡುತ್ತದೆ. ದೇವರು ಮಾಡಿದ ರುಜು ಬಹಳ ಮುಖ್ಯವಾದುದು ಮತ್ತು ನಿತ್ಯ. ಕವಿ ಈ ಒಪ್ಪಂದಕ್ಕೆ ಅನ್ನುತ್ತಿದ್ದಾರಲ್ಲ ಇದರಿಂದ ನಿತ್ಯದ ವಿವರ ಅನಿತ್ಯದ ಸತ್ಯ ಎರಡನ್ನೂ ಆ ಕವಿ ಹಿಡಿಯುತ್ತಾರೆ. ಅದು ಅವರ ಮಹಾಪ್ರತಿಭೆ. ಕುವೆಂಪು ಹೇಳಿದ್ದು ನಮ್ಮ ಭಾವಪ್ರಪಂಚಕ್ಕೆ ಹಾಕಿಕೊಂಡರೆ ಆಗ ಕುವೆಂಪು ಜೀವಂತವಾಗಿ ನಮ್ಮಲ್ಲಿ ಉಳಿಯುತ್ತಾರೆ.
ಅಲ್ಲಿಂದ 'ಅನಿಕೇತನ ತತ್ವ' ಇದು ಮನೆಯಿಲ್ಲದ ಅಥವಾ ಬೌಂಡರಿಗಳಿಲ್ಲದೇ ಅಲ್ಲ. ಈ ಜಗತ್ತು ಒಂದು ಅಂತ ತಿಳಿಯುವ ಭಾವಕ್ಕೆ ಜಾತಿ ಒಂದು ಅಂತ. ತಿಳಿಯುವ ಭಾವಕ್ಕೆ ಜಾತಿ ಇರುವುದಿಲ್ಲ, ಧರ್ಮ ಇರುವುದಿಲ್ಲ. ಮಾಸ್ತಿಯವರ "ನೀರು ಮೂಲದಲ್ಲಿ ಚಿನ್ನ, ಅದು ಕೊಳಕಾಗಿ ನೆಲಕ್ಕೆ ಬಿದ್ದಾಗ" ಉದಾರಿಸುತ್ತಾ ಅನಿಕೇತನ ತತ್ವ, ಒಂದು ಭಾವಪ್ರಪಂಚದ ಭಾಗ. ನೀವು ಒಂದು ಕೋಟೆಯನ್ನು ಹಾಕಿಕೊಂಡರೆ ಏನಾಗುತ್ತೀರಿ. ಒಂದು ಧರ್ಮ, ಜಾತಿ, ಒಂದು ದೇಶ, ಒಂದು ಪ್ರಾಂತೀಯ ಭಾಷೆಯ ಭಾಗವಾಗುತ್ತೀರಿ, ಅದು ಆಗಬಾರದು. ಮನಸ್ಸಿನ ಭಾವದಲ್ಲಿ. ಅನಿಕೇತನ ತತ್ವವನ್ನು ಮೊದಲಿಗೆ ಪಡೆಯುವಂತಹದು,.ಈ ಸೂಕ್ಷ್ಮತೆಯನ್ನು ದೊಡ್ಡ ಲೇಖಕರು ಕಳೆದುಕೊಳ್ಳುವುದಿಲ್ಲ.
ಕುವೆಂಪು ಎರಡನೇ ಮಹಾಯುದ್ಧದ ಹಿಂಸೆ ಇಟ್ಟುಕೊಂಡು ಕಾದಂಬರಿ ಬರೆಯಬೇಕು ಎನ್ನುವುದು ಅವರಿಗೆ ಆಗಲಿಲ್ಲ, ಅದೇ ಸಮಯದಲ್ಲಿ ಅವರು. "ಶ್ರೀರಾಮಾಯಣ ದರ್ಶನಂ" ಬರೆಯುತ್ತಿದ್ದರು."ಕಾನೂರು ಹೆಗ್ಗಡತಿ" ಹಿನ್ನಲೆ ಬಗ್ಗೆ ಮಾತನಾಡುತ್ತ ನವೋದಯದ ಪ್ರಭಾವವನ್ನು ನಾಲ್ವರು ಎಲ್ಲರ ಮೇಲೆ ಬೀರಿದ್ದಾರೆ. ಈ ನಾಲ್ವರೂ ಭಾರತೀಯರು. ಅವರು ಯಾರೆಂದರೆ
1. ಕಾವ್ಯ ಮತ್ತು ಸಾಹಿತ್ಯ ಚಿಂತನೆಯಲ್ಲಿ ರವೀಂದ್ರನಾಥ ಟಾಗೂರ್
2.ಪುನರುತ್ಥಾನ ನೆಲೆಯಲ್ಲಿ ಧಾರ್ಮಿಕ ಚಿಂತನೆಯಲ್ಲಿ ಸ್ವಾಮಿ ವಿವೇಕಾನಂದರು
3. ಆಧ್ಯಾತ್ಮದ ನೆಲೆಯಲ್ಲಿ ಮಹರ್ಷಿ ಅರವಿಂದರು.
4. ಸೌಂದರ್ಯದ (ವಿಮಾಂಸೆ) ನೆಲೆಯಲ್ಲಿ ಅನಂತ ಕುಮಾರಸ್ವಾಮಿ
ಕುವೆಂಪು ಮತ್ತು ಬೇಂದ್ರೆಯವರ ಮೇಲೆ ಅರವಿಂದರು ಹೆಚ್ಚಿನ ಪ್ರಭಾವವನ್ನು ಬೀರಿದ್ದಾರೆ. ಅರವಿಂದರ ತತ್ವ ಏನೆಂದರೆ 'ವಿಕಾಸ ತತ್ವ'. ಈ ಆತ್ಮದ ವಿವಿಧ ನೆಲೆಗಳಲ್ಲಿ ವಿಕಾಸವಾಗಬಲ್ಲದು. ಅದಕ್ಕೆ ಕಾನೂರು ಹೆಗ್ಗಡತಿಯಲ್ಲಿ ಬಾಡು ಹರಿಯುತ್ತಿದ್ದ ಸೋಮಯ್ಯ, ಪೂವಯ್ಯ ನಿಂದ ಬದಲಾದದ್ದು, ಪೂವಯ್ಯನು ಗೌತಮ ಬುದ್ಧನ ಪ್ರಭಾವದಿದ ಮತ್ತೂ ಎತ್ತರಕ್ಕೇರಿದ್ದು ಇದನ್ನು ವಿವರವಾಗಿ.ವಿವರಿಸುತ್ತಾ ಮನಸ್ಸಿನ, ಭಾವದ ವಿಕಾಸ. ವಿಕಾಸತತ್ವವು ಸಣ್ಣದನ್ನು ಹೇಗೆ ಕಡೆಗಣಿಸುವುದಿಲ್ಲ ಎಂದು ವಿವರಿಸಿದರು.
ತಾವು ಮಲೆಗಳಲ್ಲಿ ಮದುಮಗಳು ಕಾದಂಬರಿ ಮೇಲೆ 30ಪುಟಗಳ ಒಂದು ಲೇಖನ ಬರೆದದ್ದು, ಆ ಪುಸ್ತಕ ಈ ಲೈಬ್ರರಿಯಲ್ಲಿಯೂ ಇದೆ. ಪುಸ್ತಕ ಬಿಡುಗಡೆ ಯಲ್ಲಿ ಮರಳುಸಿದ್ಧಪ್ಪನವರು ಇವರ ಕಡೆ ತಿರುಗಿ "ಈ ಬೀದಿ ಬೆಕ್ಕು ಎಲ್ಲಿತ್ತು ಮಾರಾಯ? ನಾನು ಹನ್ನೊಂದು ವರ್ಷ ಪಾಠ ಮಾಡಿದ್ದೇನೆ. ಆ ಬೆಕ್ಕು ಎಲ್ಲಿತ್ತು" ಅಂದರು. ಇದು ಎರಡು ಸಲ ಆ ಲೇಖನದಲ್ಲಿ ಬರುತ್ತದೆ. ಒಂದು ಸಲ ಒಂದೂವರೆ ವಾಕ್ಯ. ಎರಡನೇ ಸಲ ಅರ್ಧ ವಾಕ್ಯ. ಗೌಡರ ಜಾತಿಯಲ್ಲಿ ಹೆಣ್ಣು ಆರಿಸಿಕೊಂಡು ಹೋಗಿ ಮದುವೆ ಆಗುವ ಸಂದರ್ಭ ಜಾಸ್ತಿ.. ಮದುವೆ ದಿಬ್ಬಣ ಬಂದು ಕೂತಿದೆ. ಚಿನ್ನಮ್ಮ ಅಲ್ಲಿಂದ ಓಡಿಹೋಗಬೇಕು. ಆ ಒದ್ದಾಟದ ಸಂದರ್ಭದಲ್ಲಿ ಮಾಡಿನ ಸೊಂದಿಯಿಂದ ಅವಳ ಮುದ್ದಿನ ಬೆಕ್ಕು ಒಳಗೆ ಬಂದು ಅವಳ ಮೈಯ ಸವರುವುದು. "ಯಾರು ಗತಿ ಇಲ್ಲದಿದ್ದರೂ ಈ ಬೆಕ್ಕಾದರೂ ಒಂದು ಗತಿಯಾಯಿತಲ್ಲ, ತೀರಿಹೋದ ಅಮ್ಮನೇ ಈ ಬೆಕ್ಕಿನ ರೀತಿಯಲ್ಲಿ ಬಂದಳೋ"ಎಂದು ಭಾವಿಸುವ ಪ್ರಸಂಗವನ್ನು ವಿವರವಾಗಿ ವಿವರಿಸಿದರು.
ತೀರಿಹೋದ ಬ್ರಾಹ್ಮಣ, ಶೋಕದ ಮನೆಯಲ್ಲಿ, ಅವರ ಚಿಕ್ಕ ಮಗು (1 ವರ್ಷ) ಮೆಲ್ಲಗೆ ಒಂದು ಸಣ್ಣ ಕಟ್ಟಿಗೆ ಹಿಡಿದುಕೊಂಡು ಓಡಾಡುತ್ತಾ ಅವಳ ಮುಗ್ಧ ಮಾತು ಇಡೀ ಮನೆಯಲ್ಲಿ ಆ ಸಾವಿನ ಹೆದರಿಕೆಯಿಲ್ಲೂ ಒಂದು ನಗು ಬಂದು ಬಿಡುತ್ತದೆ. ಒಂದು ಮನೋಹರವಾದಂತಹ, ಒಂದು ಸಂತೋಷ ಉಕ್ಕಿ ಹರಿಯುತ್ತೆ .ಆ ಮಗುವೊಂದು ಸಣ್ಣ ಕಡ್ಡಿ ಹಿಡಿದುಕೊಂಡು ಓಡೋಡುವಂತಹದು ಇಡೀ ಜಗತ್ತನ್ನು ಹೇಳುವ ವ್ಯಾಸರಿಗೆ ಕಾಣುತ್ತೆ.
ಶೇಕ್ಸ್ಪಿಯರ್ ನ ಮ್ಯಾಕ್ ಬೆತ್ ಅಷ್ಟು ದೊಡ್ಡ ಚಕ್ರವರ್ತಿ, ಅರಮನೆ, ಅದ್ಭುತ ಸೋಫಾಗಳು, ಕುರ್ಚಿಗಳು ಹೀಗೆ ಎಲ್ಲವೂ ಇದೆ. ಶೇಕ್ಸ್ಪಿಯರ್ ಕಣ್ಣಿಗೆ ಒಂದು ಸಣ್ಣ ಗುಬ್ಬಿ ಗೂಡು ಕಾಣಿಸಿತಂತೆ ಹೀಗೆ ಯಾರ ಕಣ್ಣಿಗೂ ಕಾಣದಿರುವುದು ಕುವೆಂಪುರವರಿಗೆ ಕಂಡಿತ್ತು.
ತತ್ವ ಮತ್ತು ವಿಚಾರವು ಕುವೆಂಪುರವರ
ಶ್ರೀರಾಮಾಯಣ ದರ್ಶನಂ , ಮಾಸ್ತಿಯವರ ಶ್ರೀರಾಮ ಪಟ್ಟಾಭಿಷೇಕದಲ್ಲಿ ಬೇರೆ ಬೇರೆಯಾಗಿ ವ್ಯಕ್ತವಾಗಿದೆ.
ಅಲ್ಲಿ ಕುವೆಂಪು ಸೀತೆಯ ಬಗ್ಗೆ ಒಂದು ಮಾತು ಹೇಳುತ್ತಾರೆ .
"ಅವಳು ಯಾವ ಪಾದಕ್ಕೆ ಕಣ್ಮಿಣಿಯಾಗಿ.... " ಇದರ ಬಗ್ಗೆ ಮಾತನಾಡುತ್ತಾ ನಾನು ಕನ್ನಡದಲ್ಲಿ ಓದಿರುವ ಹತ್ತು ಹದಿನೈದು ರಾಮಾಯಣಗಳು ಮತ್ತು ಸಂಸ್ಕೃತ ರಾಮಾಯಣದಲ್ಲಿ ಎಲ್ಲೂ ಈ ಮಾತು ಕೇಳಿರಲಿಲ್ಲ.
ಕಲ್ಲಾಗಿದ್ದ ಅಹಲ್ಯೆಯನ್ನು ಯಾವ ಪಾದ ಮುಟ್ಟಿ ವಿಮೋಚನೆ ಮಾಡಿತ್ತೋ, ಆ ಪಾದಕ್ಕೆ , ಅದೇ ಅಪವಾದವನ್ನು ಹೊತ್ತ ಸೀತೆ ಕಣ್ಣೀರು ಹಾಕಿದ್ದು! ಎಂತಹ ಒಂದು ಮಾತು ನೋಡಿ, ಒಂದು ಹೆಣ್ಣು ಹೃದಯವನ್ನು ಅರಿತುಕೊಳ್ಳದಂತಹ ಕಿಲುಬು ಹಿಡಿದಂತಹ ನಿರ್ಧಾರ ( ಆ ಪಾತ್ರಗಳ ಸನ್ನಿವೇಶ ವಿವರಿಸುತ್ತಾ) ನೀನು ಯಾರನ್ನೋ ಬಯಸಿದ್ದೀಯಾ ಅಂತ ಹೇಳುವ ಅಪವಾದವನ್ನು ಹೊತ್ತ ಅಹಲ್ಯೆಯನ್ನು ಯಾವ ಪಾದವು ವಿಮೋಚನೆ ಮಾಡಿತೋ, ಆ ಪಾದಕ್ಕೆ ಕಣ್ಣೀರು ಹಾಕ್ತಾ ಇದ್ದಾಳೆ,ಆದೇ ಅಪವಾದವನ್ನು ಹೊತ್ತಿರುವ ಅವನ ಸಂಗಾತಿ, ಇದು ಕುವೆಂಪು. ಇದರ ತತ್ವವು ಭಾವದ ಪರವೂ ಅಲ್ಲ, ಸೀತೆಯ ಪರವೂ ಅಲ್ಲ. ಇದರ ಅರ್ಥ ಮನಸ್ಸಿನ ಭಾವ ಪ್ರಪಂಚದಲ್ಲಿ ಲೋಕದ ಸತ್ಯವನ್ನು ಅರಿಯುವುದು. ಇದು ಕುವೆಂಪುರವರ ಪ್ರಪಂಚ, ಶಕ್ತಿ, ವಿಶ್ವಾಸ. ಇದು ಎಲ್ಲಿಯವರೆಗೂ ಈ ಲೋಕಕ್ಕೆ, ಈ ಭಾಷೆಗೆ, ಈ ಓದುವ ಜನಕ್ಕೆ ಅರ್ಥವಾಗುತ್ತೋ ಅಲ್ಲಿಯವರೆಗೆ ಕುವೆಂಪು ನಿತ್ಯ ನಿರಂತರವಾಗಿ ನಮ್ಮ ಜೊತೆ ಇರುತ್ತಾರೆ .
ನಮಸ್ಕಾರ🙏
ಸುದೀರ್ಘ ಆಳವಾದ ಅಧ್ಯಯನಾ ಗ್ರಹಿಕೆಯ ಚಿಂತನೆ ಒಳಪದರಗಳಿಂದ ಬಂದ ವಿಮರ್ಶಾತ್ಮಕ ಉಪನ್ಯಾಸ. ಅದನ್ನು ಅಕ್ಷರಗಳಲ್ಲಿ ಕಟ್ಟುವುದು ನನ್ನಂತವರಿಗೆ ಅಸಾಧ್ಯ. (ಸಣ್ಣ ಪ್ರಯತ್ನವೆಂದು ಭಾವಿಸುವುದು)
ಧನ್ಯವಾದಗಳು🙏
ವೇದಿಕೆಯ ಪರವಾಗಿ
ಶಶಿಕಲಾ ಆರ್
ಸಹ ಕಾರ್ಯದರ್ಶಿ
No comments:
Post a Comment