Tuesday, December 7, 2021

ಜೋಕಾಲಿ - ಉಯ್ಯಾಲೆ

 ದಶಂಬರ 6, 2021 

ಜೋಕಾಲಿ (ಶೋಭಾಳ ಬರಹಗಳು)

ನನ್ನ ಬಾಲ್ಯದ ವ್ಯಾಮೋಹಗಳಲ್ಲಿ ಜೋಕಾಲಿಯಾಟವೂ ಒಂದು! ಈಗಲೂ ಕೂಡಾ ಜೋಕಾಲಿ ಕಂಡಲ್ಲಿ ಆಡುವ ಮನಸ್ಸಾಗುತ್ತದೆ. ಜೋಕಾಲಿಯಾಟವೇ ಅಂತಹುದು. ಅದರಲ್ಲಿ ಕುಳಿತು ಜೀಕುತ್ತಾ ಇದ್ದರೆ ಯಾವುದೋ ಮಾಯಾ ಲೋಕದಲ್ಲಿ ವಿಹರಿಸುವಂತಹ ಅನುಭವ!

ಹಿಂದೆಲ್ಲಾ ಅಜ್ಜಯ್ಯನ ಮನೆಯ ತಗಡಿನ ಚಪ್ಪರದಲ್ಲಿ ಮಾಡಿನ ಜಂತಿಗೆ ದಪ್ಪನೆಯ ಹಗ್ಗ ಕಟ್ಟಿ ನಮಗಾಗಿ ಒಂದು ಜೋಕಾಲಿ ಕಟ್ಟುತ್ತಿದ್ದರು. ಅದರಲ್ಲಿ ನಮ್ಮದು ಸರದಿ ಪ್ರಕಾರ ಆಟವೋ ಆಟ☺️ ನಂತರದಲ್ಲಿ ಆ ಜಾಗದಲ್ಲಿ ಒಂದು ಬೆತ್ತದ ಜೋಕಾಲಿ ಕಟ್ಟಿದ್ದು ಅದು ಈಗಲೂ ಇದ್ದು ಸ್ವಲ್ಪ ಶಿಥಿಲಾವಸ್ಥೆಯಲ್ಲಿದೆ. ಆದರೂ ಅಲ್ಲಿಗೆ ಹೋದಾಗ ಅದರಲ್ಲಿ ಕೂರುವುದನ್ನು ನಾವ್ಯಾರೂ ಬಿಡುವುದಿಲ್ಲ😀
ಹಗ್ಗದ ಜೋಕಾಲಿ ಇದ್ದಾಗ ನಮ್ಮ ಅಂಡೂರುವ ಜಾಗದಲ್ಲಿ ದಪ್ಪನೆಯ ಗೋಣಿಯನ್ನು ಇಡುತ್ತಿದ್ದರು. ಹೀಗಾಗಿ ಅಂಡು ನೋವು ಬರುವ ಪ್ರಮೇಯ ಕಡಿಮೆ ಇತ್ತು. ಜೀಕಿಕೊಂಡು ಅಥವಾ ಇನ್ನೊಬ್ಬರ ಹತ್ತಿರ ದೂಕಿಸಿಕೊಂಡು ನಮ್ಮ ಕಾಲು ಮಾಡನ್ನು ಮುಟ್ಟುವಷ್ಟು ಜೋರಾಗಿ ಆ ಜೋಕಾಲಿಯಲ್ಲಿ ಆಡುತ್ತಿದ್ದೆವು. ಮತ್ತು ಜೋಕಾಲಿ ತೂಗುವುದು ಪೂರ್ತಿ ನಿಲ್ಲುವ ಮೊದಲೇ ಅದರಿಂದ ಹಾರಿ ಭಾರೀ ಸಾಹಸ ಮಾಡಿದ ದೊಡ್ಡಸ್ತಿಕೆಯಲ್ಲಿ ಬ್ಯಾಲೆನ್ಸ್ ಮಾಡಿ ಬೀಳದೆ ನಿಲ್ಲುತ್ತಿದ್ದೆವು🙃
ಮನೆಯ ಹೊರಗೆ ಮರದ ಗೆಲ್ಲಿಗೆ ಕಟ್ಟಿದ ಜೋಕಾಲಿಯಲ್ಲಿ ಆಡುವುದು ಬಹಳ ಚೆಂದ! ಹೊರಗಿನ ಗಾಳಿಯ ಜೊತೆಗೆ ಜೋಕಾಲಿ ತೂಗುವಾಗ ಬರುವ ಗಾಳಿ ಸೇರಿ ಒಂದು ರೀತಿಯ ಸ್ವರ್ಗ ಸುಖದ ಅನುಭವ! ಅದರಲ್ಲೂ ಉದ್ದಲಂಗ ಧರಿಸಿ ಕುಳಿತು ಜೋಕಾಲಿಯಲ್ಲಿ ಆಡುವಾಗ ಗಾಳಿ ಲಂಗದೊಳಗೆ ತುಂಬಿಕೊಂಡು ಲಂಗ ಉಬ್ಬಿಕೊಂಡ ಹಾಗೆ ಕಾಣುವ ದೃಶ್ಯ ಬಹಳ ಸೊಗಸು. ಲಂಗ ದಾವಣಿ ಧರಿಸಿ ಜೋಕಾಲಿಯಲ್ಲಿ ಆಡುವಾಗ ದಾವಣಿಯ ಸೆರಗು ಗಾಳಿಯಲ್ಲಿ ಹಾರಿ ವಿಚಿತ್ರ ವಿನ್ಯಾಸ ಪಡೆಯುವುದು ಮುದ ಕೊಡುವ ವಿಷಯ🤗
ಮರದ ಗೆಲ್ಲಿಗೆ ಕಟ್ಟಿರುವ ಜೋಕಾಲಿಯಲ್ಲಿ ನಾವೆಲ್ಲ ಜೋಕಾಲಿ ಮಗುಚಿ ಬೀಳುವ ಹಾಗಾಗುವಷ್ಟು ಜೋರಾಗಿ ಬಹಳೆತ್ತರದವರೆಗೆ ಜೀಕಿ ಆಡುತ್ತಿದ್ದೆವು. ಆಗ ಸಿಗುತ್ತಿದ್ದ ಆನಂದ ಪದಗಳಲ್ಲಿ ವಿವರಿಸಲಾಗದ್ದು! ಈಗಲೂ ಅದನ್ನೆಲ್ಲ ನೆನಪಿಸಿಕೊಂಡರೆ ಮನಸ್ಸು ಖುಷಿಯಿಂದ ತೇಲುತ್ತದೆ. 
ಈಗೀಗ ನನಗೆ ಎಲ್ಲಾ ಜೋಕಾಲಿಯಲ್ಲಿ ಕುಳಿತು ತೂಗಿ ಆಡಲಾಗುವುದಿಲ್ಲ. ವಯೋ ಸಹಜವಾಗಿ ತಲೆ ತಿರುಗುತ್ತದೆ. ಆದರೆ ನನ್ನ ಸ್ನೇಹಿತರಾದ ವಿಟ್ಲದ ಕುಮಾರ್-ತ್ರಿವೇಣಿಯವರ ಮನೆಯ ಹಾಲ್ ನಲ್ಲಿರುವ ಚೈನಿನಲ್ಲಿ ಮನೆಯ ಸೀಲಿಂಗಿಗೆ ಜೋಡಿಸಿರುವ ಮರದ ಹಲಗೆಯ ಜೋಕಾಲಿ ನನಗೆ ಹಿತ ಕೊಡುತ್ತದೆ. ಅದರಲ್ಲಿ ಮಲಗಿ ಯಾರಾದರೂ ತೂಗುತ್ತಿದ್ದರೆ ತೊಟ್ಟಿಲಲ್ಲಿ ಮಲಗಿದಂತೆನಿಸುತ್ತದೆ. ಸುಖ ನಿದ್ದೆ ಬರುತ್ತದೆ. ನಾನವರ ಮನೆಗೆ ಹೋದಾಗ ಮೊಟ್ಟ ಮೊದಲಿಗೆ ಮಾಡುವ ಕೆಲಸ ಆ ಜೋಕಾಲಿಯಲ್ಲಿ ಕಾಲು ಚಾಚಿ ಕುಳಿತು ಜೀಕುವುದು.
ಅವರಿಬ್ಬರೊಡನೆ ಶಿಕ್ಷಣ ಸಂಬಂಧಿ ವಿಷಯ ಮಾತನಾಡುತ್ತಾ ಆ ಜೋಕಾಲಿಯಲ್ಲಿ ಜೀಕುತ್ತಾ ಕುಳಿತರೆ 'ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ' ಎನ್ನುವ ಸರ್ವಜ್ಞೋಕ್ತಿ ನೆನಪಾಗುತ್ತದೆ.
ಜೋಕಾಲಿಯ ಬಗ್ಗೆ ಬರೆಯುತ್ತಾ ಹೋದರೆ ನನ್ನ ಅನುಭವದ ಖೋಲಿ ಖಾಲಿಯಾಗುವುದೇ ಇಲ್ಲವೇನೊ?  ಜೋಕಾಲಿಯೊಟ್ಟಿಗಿನ ಭಾವನಾತ್ಮಕ ಬಂಧ ಅನೂಹ್ಯವಾದದ್ದು ತಾನೇ?!


ಮನೆಯಲ್ಲಿ ಜೋಕಾಲಿ:
ಬಿರ್ತಿಮನೆ, ಬೆಂಗಳೂರು

No comments:

Post a Comment