ಜುಲೈ 20, 2022 , ಉಡುಪಿ
ಜಿ. ರಾಜಶೇಖರ - ಶ್ರದ್ಧಾಂಜಲಿ
ಎಡ ಪಂಥೀಯ ಚಿಂತಕರು, ವಿಚಾರವಾದಿ, ಬುದ್ಧಿ ಜೀವಿಗಳು, ಖ್ಯಾತ ವಿಮರ್ಶಕರು
ಜಿ. ರಾಜಶೇಖರ್ (75) ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಜುಲೈ 20 ರ (2022)ರಾತ್ರಿ ನಿಧನರಾದರು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ*
ಅಭಿಲಾಷ ಎಸ್., ಅವಳ ನುಡಿ ನಮನ :
We lost Him...
ಇದೇನೂ ಅನಿರೀಕ್ಷಿತವಾದ ಸುದ್ದಿಯಾಗಿರಲಿಲ್ಲ. ಆದರೂ ಕುಟುಂಬದ ಆಪ್ತರೊಬ್ಬರನ್ನು ಕಳೆದುಕೊಂಡಂತ ಸಂಕಟ! ತೀವ್ರ ತಳಮಳ!
ಮುವ್ವತ್ತು ವರ್ಷಗಳ ಕೆಳಗೆ ರಾಜಶೇಖರ್ ಎಂಬ "ಚಿಂತನೆ" ಯ ಜತೆಗಿನ ಒಡನಾಟ ಪ್ರಾರಂಭವಾಗಿತ್ತು. ನನ್ನ ಗಂಡ ಶ್ರೀಕಾಂತ ಸೋಮಯಾಜಿಯವರಿಗೆ ತುಂಬ ಆಪ್ತರಾಗಿದ್ದವರು ರಾಜಶೇಖರ್. ಹೆಚ್ಚೂ ಕಡಿಮೆ ದಿನವೂ ಕಾಲೇಜು ಮುಗಿಸಿ LIC ಗೆ, ಮತ್ತೆ ಉಡುಪಿ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ ರಾಜಶೇಖರರೊಂದಿಗೆ ಒಂದಷ್ಟು ಹೊತ್ತು ಕಳೆದು ಬರುತ್ತಿದ್ದ ಶ್ರೀಕಾಂತರ ಬಾಯಲ್ಲಿ ದಿನವೂ ರಾಜಶೇಖರರ ಜೊತೆಗಿನ ಚರ್ಚೆಯ ಮಾತು, ಅವರ ಯೋಚನೆ, ಚಿಂತನೆ..ಎಲ್ಲವನ್ನೂ ಕೇಳುತ್ತಾ ಕೇಳುತ್ತಾ ನನ್ನ ಪ್ರಜ್ಞೆಯೊಳಗೂ ಅವರು ಸಹಜವಾಗೇ ಇಳಿದಿದ್ದರು. ಸಾರ್ವಜನಿಕ ವಲಯದಲ್ಲಿ ಯಾವುದಾದರೂ ವಿದ್ಯಮಾನ ಘಟಿಸಿದಾಗಲೋ, ಮುಖ್ಯ ಲೇಖಕರ ಯಾವುದೋ ಪುಸ್ತಕ ಚರ್ಚೆಯಲ್ಲಿದ್ದಾಗಲೋ " ಇದಕ್ಕೆ ರಾಜಶೇಖರರ ಅಭಿಪ್ರಾಯ ಏನಿದ್ದಿರಬಹುದು?" ಎಂದು ತಿಳಿಯುವ ತವಕ ಇರುತ್ತಿತ್ತು.
ಅವರ ಬರೆಹಗಳು, ಭಾಷಣಗಳು ನನ್ನ ಅರಿವನ್ನು ವಿಸ್ತರಿಸಿದ್ದು, ಸಂವೇದನೆಯನ್ನು ರೂಪಿಸಿದ್ದು ಮಾತ್ರವಲ್ಲ ಅವರೊಂದಿಗೆ ಒಂದೆರಡು ಧರಣಿಗೆ ಕುಳಿತುಕೊಂಡ ಸಂದರ್ಭಗಳೂ ಕಲಿಸಿದ ಪಾಠ ಸಾಕಷ್ಟಿದೆ. ಪತ್ರಿಕೆಯಲ್ಲಿ ಪುಟ್ಟ ಬರೆಹ ಪ್ರಕಟವಾದಾಗಲೂ ಅದು ಚೆನ್ನಾಗಿದೆ ಅಂತನ್ನಿಸಿದರೆ, ಕರೆ ಮಾಡಿ ಮಾತಾಡುತ್ತಿದ್ದರು. ಸರಿ ಕಾಣದ್ದನ್ನು ಮುಲಾಜಿಲ್ಲದೆ ವಿಮರ್ಶಿಸುತ್ತಿದ್ದರು!
ಇಷ್ಟೇ ಅಲ್ಲ!
ಸಿಕ್ಕಿದಾಗ ಒಮ್ಮೆಯೂ ಬಾಯ್ಬಿಟ್ಟು ನಗದ, ಮೂರು ವಾಕ್ಯಗಳಿಗಿಂತ ಹೆಚ್ಚು ಮಾತಾಡದ ರಾಜಶೇಖರರ ಜತೆ ಭಾವನಾತ್ಮಕ ಬಾಂಧವ್ಯವೂ ಬೆಳೆದಿದ್ದರೆ ಅದು ಅವರು "ಅಪೂರ್ವ ಅಪ್ಪಟ ಮನುಷ್ಯ" ನಾಗಿದ್ದ ಕಾರಣಕ್ಕೆ.
ಅವರ ಬೌದ್ಧಿಕತೆಗೆ ಸರಿಸಾಟಿಯಾಗಿ ಅವರ ಭಾವ ಸೂಕ್ಷ್ಮಗಳೂ ಎಚ್ಚರಿರುತ್ತಿದ್ದವು. ಎಲ್ಲ ಇಸಮ್ ಗಳನ್ನೂ ಮೀರಿದ, ಮನುಷ್ಯರೆಲ್ಲರ ಬಗೆಗಿನ ಅವರ ನಿಷ್ಕಲ್ಮಶ ಪ್ರೀತಿಯೇ ಅವರ ಸ್ಥಾಯೀ ಭಾವವಾಗಿತ್ತು. ಸಂದರ್ಭೋಚಿತ ಸಿಟ್ಟು,ಕೋಪ, ರೋಷ ಎಲ್ಲವೂ ಇತ್ತು , ಆದರೆ ಒಂದು ಕ್ಷಣವೂ ಯಾರನ್ನೂ ಅವರು ದ್ವೇಷಿಸಿರುವ ಸಾಧ್ಯತೆಯಿಲ್ಲ. ಅವರಲ್ಲಿ ಪ್ರತಿರೋಧವಿತ್ತೇ ಹೊರತು ವೈಷಮ್ಯವಿರಲಿಲ್ಲ. ನಾಡಿನ ಚಿಂತಕರಲ್ಕೇ ಅಗ್ರಗಣ್ಯರೆನಿಸಿಕೊಂಡಿದ್ದರೂ "ನನಗಿಂತ ಮಿಗಿಲಿಲ್ಲ" ಎಂಬ ಅಹಂ, ಕೊಂಚವೂ ಇರಲಿಲ್ಲ. ನಿಷ್ಠುರಿಯಾಗಿದ್ದರೇ ಹೊರತು ಕುಹಕವಿರಲಿಲ್ಲ!! ಆಡಿದಂತೆ ನಡೆದ ಧೀಮಂತ,
"ಕಾಳಜಿ" ಎಂಬುದಕ್ಕೆ ಮೂರ್ತ ರೂಪ!
ನನ್ನ ಅತ್ಯಂತ ನೋವಿನ ಗಳಿಗೆಯಲ್ಲಿ ಅವರ ಮೌನ ಸಾಂತ್ವನ ನೀಡಿದ ಶಕ್ತಿ ಅಪಾರ! ಶ್ರೀಕಾಂತನ ನೆನಪಿನ ಸಂಗೀತ ಕಾರ್ಯಕ್ರಮಕ್ಕೆ ವ್ರತವೆಂಬಂತೆ ಪ್ರತೀ ವರ್ಷವೂ ಬಂದು, ಒಂದು ಸಂಜೆ ನಮ್ಮೊಡನಿರುತ್ತಿದ್ದರು. ಶ್ರೀಕಾಂತನ ತಾಯಿ, ಮಕ್ಕಳನ್ನು ಪ್ರೀತಿ, ಕಾಳಜಿಯಿಂದ ವಿಚಾರಿಸಿಕೊಳ್ಳುತ್ತಿದ್ದರು!
ಇಂದು ಅವರನ್ನು ಕೊನೆಯ ಬಾರಿ ನೋಡಿದಾಗ ಉಕ್ಕಿ ಬಂದ ಭಾವವಿಷ್ಟೇ.." We lost him!!'
ಮಹಾಬಲೇಶ್ವರ ರಾವ್ , ಉಡುಪಿ
ನನ್ನ ಅಣ್ಣ,ಗುರು,ಮಾರ್ಗದರ್ಶಕ,ಆಪ್ತ ಸಮಾಲೋಚಕ ನಾಡಿನ ಗಣ್ಯ ಚಿಂತಕ,ಹೋರಾಟಗಾರ ಇನ್ನಿಲ್ಲ.ಕಳೆದ ಒಂದು ತಿಂಗಳಿನಿಂದ ಅವರು ನಡೆಸಿದ ಸಾವು ಬದುಕಿನ ಹೋರಾಟ ನಿನ್ನೆ ರಾತ್ರಿ ಕೊನೆಯಾಯಿತು.ಕಾರ್ಲ್ ಮಾರ್ಕ್ಸ್ ತೀರಿಕೊಂಡಾಗ ಆತನ ಒಡನಾಡಿ ಹೇಳಿದ ಮಾತು ರಾಜಶೇಖರ್,ನಮ್ಮ ' ರಾಜಿ'ಗೂ ಅನ್ವಯಿಸುತ್ತದೆ."The great man has ceased to think".
ಶ್ರೀನಿವಾಸ ಜೋಕಟ್ಟೆ ಮುಂಬಯಿ
1946 ರ ಎ.4 ರಂದು ಬ್ರಹ್ಮಾವರ ಸಮೀಪದ ಬೈಕಾಡಿಯಲ್ಲಿ ಹುಟ್ಟಿದ ಜಿ.ರಾಜಶೇಖರರು ಆರಂಭದಲ್ಲಿ ಶಿಕ್ಷಕರಾಗಿದ್ದರು.ನಂತರ ಎಲ್ ಐ ಸಿ ಗೆ ಸೇರಿ ಕೊನೆಯವರೆಗೂ ಯಾವುದೇ ಭಡ್ತಿಗೆ ಇಚ್ಚಿಸದೆ ನಿವೃತ್ತಿ ತನಕವೂ ಇಲ್ಲೇ ಇದ್ದವರು.ಎಪ್ಪತ್ತರ ದಶಕದಲ್ಲಿ ಬೀದಿ ಹೋರಾಟಗಳಲ್ಲೆಲ್ಲ ಜಿ.ರಾಜಶೇಖರ ಇದ್ದೇ ಇರುತ್ತಿದ್ದರು. ನಾಡಿನ ಪತ್ರಿಕೆಗಳಲ್ಲಿ ಸಮಕಾಲೀನ ವಿದ್ಯಮಾನಗಳ ನೂರಾರು ಲೇಖನಗಳನ್ನು ಬರೆದರೂ ಇವರು ಪುಸ್ತಕ ಪ್ರಕಟಿಸಿದ್ದು ಬಹಳ ಕಡಿಮೆ. ಹಾಗಿದ್ದೂ ಇವರ ಕಾಗೋಡು ಸತ್ಯಾಗ್ರಹ, ಪರಿಸರ ಮತ್ತು ಸಮಾಜವಾದ, ಕೋಮುವಾದದ ಕರಾಳ ಮುಖಗಳು…..ಇಂತಹ ಕೃತಿಗಳು ಸಾಕಷ್ಟು ಚರ್ಚೆ ಎಬ್ಬಿಸಿವೆ.
ತಿರು ಶ್ರೀಧರ್ ಅವರ ನುಡಿ ನಮನ
ಜಿ. ರಾಜಶೇಖರ್ ನಮನ
Respects to departed soul scholar and writer G. Rajashekhar
ಕನ್ನಡ ಸಾಹಿತ್ಯಲೋಕದ ಪ್ರಖ್ಯಾತ ವಿಮರ್ಶಕರಾದ ಜಿ. ರಾಜಶೇಖರ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಜಿ. ರಾಜಶೇಖರ ಅವರು ಸಾಹಿತ್ಯ-ಸಮಾಜ-ರಾಜಕಾರಣ ಕುರಿತಂತೆ ಹಾಗೂ ಕೋಮುವಾದವೂ ಸೇರಿದಂತೆ ಸಮಕಾಲೀನ ತುರ್ತಿನ ವಿದ್ಯಮಾನಗಳ ಬಗ್ಗೆ ನಿರಂತರವಾಗಿ ಬರೆಯತ್ತ ಬಂದಿದ್ದರು.
ಜಿ . ರಾಜಶೇಖರ ಸಂಘಟನೆಯೊಳಗಿದ್ದೇ ಸೊವಿಯತ್ ರಷ್ಯಾದಲ್ಲಿ ಕಮ್ಯುನಿಷ್ಟರಿಂದಾದ ನರಮೇಧವನ್ನು ಅತ್ಯುಗ್ರ ಮಾತುಗಳಲ್ಲಿ ಖಂಡಿಸಿದವರು . ಅಡಿಗರ ಕಾವ್ಯದ ಪ್ರತಿಗಾಮಿತನವನ್ನು ತಿರಸ್ಕರಿಸುತ್ತಲೇ ಅದರ ಹೊರತಾದ ಕಾವ್ಯದ ನಿಜವಾದ ಸತ್ವವನ್ನು ತೋರಿಸಿಕೊಟ್ಟವರು. ಅವರ ಬಗ್ಗೆ ಪಿ. ಲಂಕೇಶ್ “ನಮ್ಮ ರಾಜಶೇಖರ ಎಷ್ಟು ಒಳ್ಳೆಯ ವಿಚಾರವಂತ . ನಿಷ್ಟುರತೆ ಮತ್ತು ಬದುಕಿನ ಬಗ್ಗೆ ಪ್ರೀತಿಯನ್ನು ಇಟ್ಟುಕೊಂಡ ಆತ ಶ್ರೇಷ್ಠ ಚಿಂತನಕಾರ ಎನ್ನುವುದು ನನಗೆ ಹೆಮ್ಮೆಯನ್ನುಂಟು ಮಾಡಿದೆ" ಎನ್ನುತ್ತಿದ್ದರು.
ಸಮಕಾಲೀನ ಕನ್ನಡದ ಪ್ರಮುಖ ವಿಮರ್ಶಕ- ಚಿಂತಕರೆಂದು ಮನ್ನಣೆ ಗಳಿಸಿರುವ ರಾಜಶೇಖರ ಅವರು ಎಡಪಂಥೀಯ ಧೋರಣೆಯನ್ನು ನಿಷ್ಠುರ ಆತ್ಮವಿಮರ್ಶೆಯೊಂದಿಗೆ ಕಸಿ ಮಾಡಿದವರು. ಕಾಗೋಡು ಸತ್ಯಾಗ್ರಹ, ಪರಿಸರ ಮತ್ತು ಸಮಾಜವಾದ, ಬರ್ಟೊಲ್ಟ್ ಬ್ರೆಕ್ಟ್ ಪರಿಚಯ, ದಾರು ಪ್ರತಿಮ ನ ಪೂಜಿವೇ (ಅನುವಾದ), ಕೋಮುವಾದದ ಕರಾಳ ಮುಖಗಳು, ಹರ್ಷಮಂದರ್ ಬರಹಗಳು (ಸಹಲೇಖಕ: ಕೆ. ಫಣಿರಾಜ್), ಬಹುವಚನ ಭಾರತ ಮಂತಾದವು ಅವರ ಪ್ರಕಟಿತ ಕೃತಿಗಳಲ್ಲಿ ಸೇರಿವೆ.
ರಾಜಶೇಖರ ಅವರು ತಮ್ಮ ‘ಬಹುವಚನ ಭಾರತ’ ಕೃತಿಗೆ “ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ 2015ರ ಸಾಲಿನಲ್ಲಿ ಪ್ರಕಟಿಸಿದ್ದ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದರು.
ರಾಜಶೇಖರ ಅವರಿಗೆ 75 ತುಂಬಿದ ನೆನಪಿಗಾಗಿ ಪಟ್ಟಾಭಿರಾಮ ಸೋಮಯಾಜಿ ಅವರ ಸಂಪಾದಕತ್ವದಲ್ಲಿ ಅಭಿನಂದನಾ ಗ್ರಂಥವನ್ನು ಹೊರತರಲಾಗಿತ್ತು.
ಜಿ ರಾಜಶೇಖರ ಅವರು 2022ರ ಜುಲೈ 20ರಂದು ಈ ಲೋಕವನ್ನಗಲಿದರು.
(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
ಸಂಕಲನ, 23/7/2022
No comments:
Post a Comment