Wednesday, July 27, 2022

BREATHING EXERCISE (ಪ್ರಾಣಾಯಾಮ)

 * ಚಿತ್ತ ಸಮಸ್ಥಿತಿಗೆ ಪ್ರಾಣಾಯಾಮ *


ಅನೈಚ್ಛಿಕವಾದ ಉಸಿರಾಟವನ್ನು ನಮ್ಮ ಇಚ್ಛೆಗೊಳಪಡಿಸಿ ಹತೋಟಿಗೆ ತರುವುದೇ ಪ್ರಾಣಾಯಾಮ. ಮನಸ್ಸಿನ ಚಂಚಲತೆ, ಗೊಂದಲ ನಿವಾರಿಸುವ ಕ್ರಮಬದ್ಧ ಉಪಾಯ ಇದು.

ಪ್ರಾಣಾಯಾಮ ಎಂದರೇನು? ಮತ್ತು ಪ್ರಯೋಜನಗಳೇನು?

ಪ್ರಾಣ ಶಕ್ತಿ ಎಂದರೆ ದೇಹದಲ್ಲಿ ಅಡಗಿರುವ ಸೂಕ್ಷ್ಮ ಜೀವಶಕ್ತಿ (ಆಯಾಮ = ವಿಸ್ತರಿಸುವುದು, ಪ್ರಾಣ =ಪ್ರಾಣವಾಯು, ಉಚ್ಚಾಸ ಮತ್ತು ನಿಶ್ವಾಸ). ಉಸಿರಾಟದ ಮೇಲೆ ಹಿಡಿತ ತರುವುದೇ ಪ್ರಾಣಾಯಾಮ (ಗಮನ ಪೂರ್ವಕ ಉಸಿರಾಟ).ಉಸಿರಿನ ಮೂಲಕ ಪಂಚ ಪ್ರಾಣಗಳ ಹಾಗೂ ಮನಸ್ಸಿನ ಹತೋಟಿಯನ್ನು ಸಾಧಿಸುವುದೇ ಪ್ರಾಣಾಯಾಮ.ಇದು ಉಸಿರನ್ನು ಸಕ್ರಮಗೊಳಿಸುವುದೇ ಆಗಿರುತ್ತದೆ. 

ಅಷ್ಟಾಂಗ ಯೋಗದ ನಾಲ್ಕನೇ ಮೆಟ್ಟಿಲೇ ಪ್ರಾಣಯಾಮ. ಪ್ರಾಣಕ್ಕೆ ಹೊಸ ಒಂದು ಆಯಾಮವೇ ಪ್ರಾಣಯಾಮ.ಈ ಪ್ರಾಣಾಯಾಮವು ಉಸಿರಾಟದ ಮೇಲೆ ಹಿಡಿತವುಂಟು ಮಾಡುವುದಲ್ಲದೆ, ಸಕ್ರಮಗೊಳಿಸಿ  ಶ್ವಾಸಕೋಶದ ಮತ್ತು ನರಮಂಡಲದ ಸಾಮರ್ಥ್ಯವನ್ನು ಹೆಚ್ಚಿಸುವುದು. ನಾಡಿ ಶುದ್ಧಿಯಾಗಿ ಮನಸ್ಸಿನ ಚಂಚಲತೆ ಇಲ್ಲದಾಗಿ ಅದು ಶಾಂತವಾಗುವುದು. ಸಂಯಮ ಉಂಟಾಗುವುದು, ವೈಜ್ಞಾನಿಕವಾಗಿ ಹೇಳುವುದಾದರೆ ನಮ್ಮ ಪ್ರಾಣಮಯ ಕೋಶದ ಶುದ್ಧೀಕರಣವಾಗಿ ಅದು ಸಶಕ್ತವಾಗುವುದು. 

ಪ್ರಾಣಾಯಾಮದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವು ಶ್ವಾಶಕೋಶಕ್ಕೆ ಒದಗುತ್ತದೆ. ಹಾಗೆಯೇ ಅಷ್ಟೇ ಪ್ರಮಾಣದಲ್ಲಿ ನಿಶ್ವಾಸವು ಅಂಗಾರಾಮ್ಲ ಮತ್ತು ತ್ಯಾಜ್ಯಗಳಾದ ಕಶ್ಮಲಗಳನ್ನು ಹೊರ ಹಾಕುತ್ತದೆ.ಮಾನವನು ಸಾಮಾನ್ಯ ಉಸಿರಾಟದಿಂದ 500 ಕ್ಯೂಬಿಕ್ ಸೆಂ. ಮೀ ಗಾಳಿಯನ್ನು ತೆಗೆದುಕೊಳ್ಳುತ್ತಾನೆ.ಆದರೆ ಪ್ರಾಣಾಯಾಮದಲ್ಲಿ ಸುಮಾರು 3000-4000 ಕ್ಯೂಬಿಕ್ ಸೆಂ.ಮೀ ಗಾಳಿ ತೆಗೆದುಕೊಳ್ಳುತ್ತಾನೆ. ಸರಿಯಾಗಿ ಪ್ರಾಣಾಯಾಮ ಅಭ್ಯಾಸ ಮಾಡಿಕೊಂಡರೆ ಆಯುಸ್ಸು ಹೆಚ್ಚಿಸಿಕೊಳ್ಳಬಹುದು.

ಅನೈಚ್ಛಿಕವಾದ ಉಸಿರಾಟವನ್ನು ನಮ್ಮ ಇಚ್ಛೆಗೊಳಪಡಿಸಿ ಹತೋಟಿಗೆ ತರುವುದೇ ಪ್ರಾಣಾಯಾಮ. ಪತಂಜಲಿ ಋಷಿಯು ಮನಸ್ಸಿನ ಚಂಚಲತೆ, ಗೊಂದಲಗಳನ್ನು ನಿವಾರಿಸುವ ಕ್ರಮಬದ್ಧ ಉಪಾಯವೇ ಪ್ರಾಣಯಾಮ ಎಂದು ಹೇಳುತ್ತಾರೆ. (ಅವರೇ ಯೋಗದಲ್ಲಿ 8 ಅಂಗಗಳನ್ನು ನಿರ್ದೇಶಿಸಿ, ಅದಕ್ಕೊಂದು ವೈಜ್ಞಾನಿಕ ಚೌಕಟ್ಟು ಹಾಕಿದ ಮೊದಲಿಗರು)

ಶ್ವಾಸ ಹೆಚ್ಚೆಂದರೆ ಪ್ರಾಣವಾಹಕ ಎಂದು ಹೇಳಬಹುದು.ಪ್ರಾಣವು ಸೂಕ್ಷ್ಮ ಚೈತನ್ಯ.ಪ್ರಾಣಶಕ್ತಿಯು ನಾಡಿಗಳ ಮೂಲಕ ಸಂಚಾರಮಾಡುವುದು ಎಂದು ಯೋಗಿಗಳ ಹೇಳಿಕೆ. ಪ್ರಾಣ ಶಕ್ತಿಯ ಸಂಚಾರ ಸಮರ್ಪಕವಾದಾಗ ಎಲ್ಲಾ ಕ್ರಿಯೆಗಳು ಹದವಾಗುವುವು. ದೇಹದ ಎಲ್ಲಾ ಚಲನವಲನಗಳೂ ಐದು ವಿಧ ಪ್ರಾಣವಾಯುಗಳಿಂದ ಮತ್ತು  ಐದು ಉಪ ಪ್ರಾಣ ವಾಯುಗಳಿಂದ (ಪಂಚ ಉಪಪ್ರಾಣಗಳು)  ನಿಯಂತ್ರಿಸಲ್ಪಡುತ್ತದೆ ಎಂಬುದು ಯೋಗಿಗಳ ಅಭಿಪ್ರಾಯ. ಈ ಪಂಚ ಪ್ರಾಣಗಳು ಪ್ರಾನ, ಅಪಾನ, ಸಮಾನ, ಉದಾನ ಮತ್ತು ವ್ಯಾನ ಆಗಿದೆ. ದೇಹದ ಎಲ್ಲಾ ಚಟುವಟಿಕೆಗಳನ್ನು ಈ ಪಂಚ ಪ್ರಾಣಗಳು ಮತ್ತು ಪಂಚ ಉಪ ಪ್ರಾಣಗಳು ನಿಯಂತ್ರಿಸುತ್ತವೆ.

ಪ್ರಯೋಜನಗಳು: ಪ್ರಾಣ ವಾಯುವು  ಶ್ವಾಸಕೋಶಕ್ಕೆ ಸೇರಿ ಹೃದಯ ಭಾಗದಲ್ಲಿ ಚಲಿಸಿ ಆಮ್ಲಜನಕ ಪೂರೈಕೆ ಮಾಡಿ ಉಸಿರಾಟವನ್ನು ನಿಯಂತ್ರಿಸುತ್ತದೆ. ಆಹಾರ ಸ್ವೀಕಾರ  ರಕ್ತ ಮತ್ತು ನಾಡಿ ಶುದ್ಧೀಕರಣ ಮಾಡುತ್ತದೆ.ಅಪಾನ ವಾಯು ಗುದದ ಭಾಗದಲ್ಲಿದ್ದು ಹೊಟ್ಟೆಯ ಕೆಳಗಿನ ಸ್ಥಳದಲ್ಲಿ ಚಲಿಸಿ ಮಲಮೂತ್ರಕ್ಕೆ ಸಂಬಂಧಿಸಿದ ಕಶ್ಮಲಗಳನ್ನು ಹೊರ ಹಾಕುತ್ತದೆ. ನಿಶ್ವಾಸವೂ ಅಪಾನವಾಯುವಾಗಿದೆ.

‘ಸಮಾನ’ ವಾಯುವು ನಾಭಿ(ಹೊಕ್ಕುಳು) ಪ್ರದೇಶದಲ್ಲಿದ್ದು ಜಠರಕ್ಕೆ ಸಂಬಂಧಪಟ್ಟ ಜೀರ್ಣಕ್ರಿಯೆಗಳನ್ನೂ, ರಕ್ತ ಪರಿಚಲನೆಯನ್ನೂ ಅಂಗಗಳ ಕಾರ್ಯವನ್ನೂ ಸರಿಪಡಿಸುತ್ತದೆ.‘ಉದಾನ’ ವಾಯುವು ಕಂಠ ಪ್ರದೇಶದಲ್ಲಿ ಚಲಿಸಿ ಗಂಟಲಿನ ಧ್ವನಿಯನ್ನು ನಿಯಂತ್ರಿಸುತ್ತದೆ ಮತ್ತು ಜೀರ್ಣಾಂಗ ವ್ಯೆಹದ ಹತೋಟಿಯನ್ನು ಹೊಂದಿದೆ. ದೇಹಕ್ಕೆ ಚೈತನ್ಯ ನೀಡುತ್ತದೆ.

‘ವ್ಯಾನ’ ವಾಯುವು ಇಡೀ ಶರೀರದಲ್ಲಿ ಸಂಚರಿಸುತ್ತಾ ಆಹಾರ, ಗಾಳಿಗಳಿಂದ ಒದಗಿದ ಶಕ್ತಿಯನ್ನು ರಕ್ತನಾಳಗಳ ಮತ್ತು ನರಗಳ ಮೂಲಕ ಇಡೀ ದೇಹಕ್ಕೆ ವಿತರಿಸುತ್ತೆ. ದೇಹವು ಕೊಳೆಯದಂತೆ ಮಾಡುವುದು.

ಪ್ರಾಣಯಾಮದ ಮಂತ್ರ ಈ ರೀತಿ ಇದೆ.

ಪ್ರಾಣಸ್ಯೇದಂ ವಶೇ ಸರ್ವಂ ತ್ರಿದಿವೇಯತ್ ಪ್ರತಿಷ್ಠಿತಮ್‌

ಮಾತೇವ ಪುತ್ರಾನ್ ರಕ್ಷಸ್ವ, ಶ್ರೀಶ್ಚ ಪ್ರಜ್ಞಾಂಶ್ವ ವಿಧೇಹಿನ ಇತಿ

-ಅಂದರೆ ಮೂರು ಲೋಕದಲ್ಲಿ ಇರುವ ಎಲ್ಲವೂ ಪ್ರಾಣದ ನಿಯಂತ್ರಣದಲ್ಲಿದೆ. ಪ್ರಾಣವೇ, ತಾಯಿ ಮಕ್ಕಳನ್ನು ಪಾಲನೆ ಮಾಡುವಂತೆ, ನಮ್ಮನ್ನು ಪಾಲಿಸು ಮತ್ತು ಜ್ಞಾನವನ್ನು ಸಂಪತ್ತನ್ನು ನಮಗೆ ನೀಡು.

ನಾವು ಬದುಕಿರಲು ಉಸಿರಾಟ ಅಗತ್ಯ

* ಪ್ರಾಣಯಾಮದಿಂದ ದೋಷಪೂರ್ಣ ಉಸಿರಾಟ ಸಮರ್ಪಕವಾಗುವುದು.

* ಇಂದ್ರಿಯಗಳ ಹತೋಟಿ (ನಿಗ್ರಹ) ಸಾಧಿಸಿ, ಏಕಾಗ್ರತೆ ಹೊಂದಬಹದು.

* ಪ್ರಾಣಯಾಮದಿಂದ ಮನಸ್ಸು ಶುದ್ಧಗೊಳ್ಳುತ್ತದೆ. ಮನಸ್ಸಿನ ಚಂಚಲತೆ ನಿವಾರಣೆಯಾಗುವುದು. ನಮ್ಮ ಪ್ರಾಣಮಯ ಕೋಶವು ಶುದ್ಧಗೊಳ್ಳುವುದು. ಮನಸ್ಸು ಸ್ಥಿರಗೊಳ್ಳುವುದು. ಶಾಂತವಾಗುವುದು, ಏಕಾಗ್ರಗೊಳ್ಳುವುದು, ಉಸಿರನ್ನು ಸಕ್ರಮಗೊಳಿಸುವುದು.

* ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುವುದು.

* ಉಸಿರಾಟ ಕ್ರಮದಲ್ಲಿದ್ದರೆ ಹೃದಯವು ಶಾಂತವಾಗುತ್ತದೆ ಮತ್ತು ಆಯಾಸವಾಗದಂತೆ ನೋಡಿಕೊಳ್ಳುತ್ತದೆ.

* ಪ್ರಾಣಯಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ  ಶ್ವಾಸಕೋಶಕ್ಕೆ  ಹೋಗುತ್ತದೆ.ಎಚ್ಚರವಿರುವಾಗ ಮೂಗಿನ ಬಲಹೊಳ್ಳೆಯಲ್ಲೂ ನಿದ್ರಿಸುವಾಗ ಮೂಗಿನ ಎಡ ಹೊಳ್ಳೆಯ ಮೂಲಕವೂ ಉಸಿರಾಡುತ್ತೇವೆ.ಮೂಗಿನ ಬಲಹೊಳ್ಳೆ ಸೂರ್ಯ ನಾಡಿ,  ಎಡಹೊಳ್ಳೆ ಚಂದ್ರ ನಾಡಿ. ಮೂಗಿನ ಎಡಹೊಳ್ಳೆಯಲ್ಲಿ ಉಸಿರಾಡಿದಾಗ ದೇಹವು ತಂಪಾಗುತ್ತದೆ. ಬಲ ಹೊಳ್ಳೆಯಲ್ಲಿ ಉಸಿರಾಡಿದರೆ ಶರೀರ ಬಿಸಿಯೇರುವುದು.   ಪ್ರಾಣಯಾಮ ಶಿಸ್ತುಬದ್ಧವಾಗಿ ಕ್ರಮವತ್ತಾಗಿ ದಿನ ನಿತ್ಯ ಅಭ್ಯಾಸ ಮಾಡುವುದರಿಂದ  ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಿ, ಅಸ್ತಮಾ, ಅಲರ್ಜಿ ಸಮಸ್ಯೆ ನಿವಾರಣೆಯಾಗುವುದು. ರಕ್ತದೊತ್ತಡ ನಿಯಂತ್ರಣದಲ್ಲಿರುವುದು. 

ನಾವು ನಿತ್ಯವೂ ನಿರಂತರವಾಗಿ ಅನೈಚ್ಛಿಕವಾಗಿ ಉಸಿರಾಟ ನಡೆಯುತ್ತಲೇ ಇರುವುದನ್ನು ಅನುಭವಿಸುತ್ತೇವೆ. ಪ್ರಾಣ (ಜೀವ) ಹೋದಾಗ ಉಸಿರಾಟ ನಿಲ್ಲುವುದು.  (ಉಸಿರಾಟ ನಿಂತು ಮರಣ ಹೊಂದುವುದು ಅಲ್ಲ) ಉಸಿರಾಟ, ಸ್ಪಂದನ ಮತ್ತು ಕ್ರಿಯೆಗಳು ಬದುಕಿರುವುದರ ಸಂಕೇತವಾಗಿದೆ.

ನಮ್ಮ ಹಿರಿಯರು, ಜ್ಞಾನಿಗಳ ಪ್ರಕಾರ, ನಾವು ಹೆಚ್ಚಿನವರು ಸಮರ್ಪಕವಾಗಿ ಉಸಿರಾಡುವುದಿಲ್ಲ. ವಾಯು ಮೂಗಿನ ಮೂಲಕ ಅದರಷ್ಟಕ್ಕೇ ಬಂದು  ಹೋಗುವುದು. ಅದರ ನಿಯಂತ್ರಣದಿಂದಾಗಿ (ಐಚ್ಛಿಕಕ್ಕೆ ಒಳಪಡಿಸಿದರೆ) ಯೋಗಿಗಳಂತೆ ದೀರ್ಘಾಯುಸ್ಸನ್ನು ಹೊಂದಬಹುದು.

ಆರೋಗ್ಯವಂತರ ಉಸಿರಾಟ ಈ ರೀತಿ ಇರಬೇಕು ಎಂದು ಜ್ಞಾನಿಗಳು ಹೇಳುತ್ತಾರೆ.

* 4 ಸೆಕೆಂಡುಗಳಿಗೆ ಒಂದು ಉಸಿರಾಟ  

* ನಿಮಿಷಕ್ಕೆ 15-20 ಬಾರಿ ಉಸಿರಾಟ

* ಗಂಟೆಗೆ 900 ಬಾರಿ ಉಸಿರಾಟ

* ದಿನಕ್ಕೆ 21,600 ಬಾರಿ ಉಸಿರಾಟ

* ವರ್ಷಕ್ಕೆ 78,84,000 ಬಾರಿ ಉಸಿರಾಟ

ಮಾನವ ಜೀವಿತ ಅವಧಿಯು 100 ವರ್ಷ ಎಂದು ಹಿರಿಯರು ಹೇಳುತ್ತಾರೆ. ಈ ನೂರು ವರ್ಷಕ್ಕೆ 78,84,00,000 ಬಾರಿ ಉಸಿರಾಟ ಜರುಗುವುದು. ಈ ಪ್ರಮಾಣ ಕಡಿಮೆ ಆದಾಗ ಆಯಸ್ಸು ಹೆಚ್ಚುವುದು. ಗುರುಮುಖೇನವೇ ಪ್ರಾಣಾಯಾಮ ಕಲಿಯಬೇಕು.  

 ನಮ್ಮ ಚಿತ್ತವು (ಮನಸ್ಸು, ಬುದ್ಧಿ, ಅಹಂಕಾರ) ಒಂದು ರಥವೆಂದೆಣಿಸಿದರೆ ಪ್ರಾಣ ಮತ್ತು ಬಯಕೆಗಳು ಎರಡು ಪ್ರಬಲ ಕುದುರೆಗಳು. ಪ್ರಾಣ(ಉಸಿರು)ವನ್ನು ಹತೋಟಿಯಲ್ಲಿಟ್ಟಾಗ ಇಂದ್ರಿಯಗಳು (ಬಯಕೆಗಳು) ನಿಯಂತ್ರಣಕ್ಕೆ ಬರುತ್ತವೆ.ಆಗ ಮನಸ್ಸು ಸ್ಥಿರ ಹಾಗೂ ಶಾಂತವಾಗುತ್ತದೆ. 

ಅನೈಚ್ಛಿಕವಾಗಿ ಜರಗುವ ಉಸಿರಾಟವನ್ನು ಐಚ್ಛಿಕವಾಗಿ ಮಾಡಿ ಹತೋಟಿಯಲ್ಲಿಟ್ಟು ನಿಧಾನವಾಗಿ ಉಸಿರಾಡಿದರೆ ದೀರ್ಘಾಯುಸ್ಸನ್ನು ಗಳಿಸಬಹುದು. ಪ್ರಾಚೀನ ಋಷಿ ಮುನಿಗಳ ದೀರ್ಘಾಯುಸ್ಸಿನ ರಹಸ್ಯವಿದೇ ಆಗಿದೆ.ನಿಮಿಷವೊಂದಕ್ಕೆ ಕೇವಲ 5 ಬಾರಿ ಉಸಿರಾಡುವ ಆಮೆ 150ಕ್ಕೂ ಹೆಚ್ಚು ವರ್ಷ ಬದುಕಬಹದು. ಕಪ್ಪೆ ದ್ವಿಚರ (ಜಲಚರ, ಭೂಚರ) ಉಸಿರಾಡದೇ ಹಲವು ವರ್ಷ ನೆಲದಡಿಯಲ್ಲಿ ಬದುಕಬಲ್ಲದು. 

ಪ್ರಾಣಾಯಾಮ ಅಭ್ಯಾಸಕ್ಕೆ ನಿಯಮಗಳು:- 

* ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಬೇಕು. ಆಹಾರ ಸೇವಿಸಿದ 2-3 ಗಂಟೆಯ ಅನಂತರ ಅಭ್ಯಾಸ ಮಾಡಬೇಕು. ಕನಿಷ್ಠ ಉಡುಪು ಧರಿಸಿ, ದೇಹವನ್ನು ವಾತಾವರಣಕ್ಕೆ ತೆರೆದಿರಬೇಕು.

* ಸ್ಥಿರತೆ  ಕಾಪಾಡಲು ಸದಾ ಕಂಪಿಸುವ ಭೂಸ್ಪರ್ಶವಾಗದಂತೆ ಚಾಪೆ ಅಥವಾ ಜಮಖಾನ ಹಾಸಿದ ನೆಲದ ಮೇಲೆ, ಶುದ್ಧ ಪರಿಸರದಲ್ಲಿ ಅಭ್ಯಾಸ ಮಾಡಬೇಕು.

* ಅವಸರದಲ್ಲಿ ಪ್ರಾಣಾಯಾಮ ಅಭ್ಯಾಸ ಮಾಡಬಾರದು.

*ಪ್ರಾಣಯಾಮಕ್ಕೆ ಕುಳಿತಾಗ ಬೆನ್ನು ಹುರಿಯು ನೇರವಾಗಿ  ನೆಲಕ್ಕೆ ಲಂಬವಾಗಿರಲು ಬೆನ್ನು, ಕುತ್ತಿಗೆ, ಶಿರಸ್ಸು ನೇರವಾಗಿರಬೇಕು. ದೇಹ ಸಡಿಲಗೊಂಡಿರಬೇಕು. ಮುಖದಲ್ಲಿ ಪ್ರಸನ್ನತೆ ಇರಬೇಕು, ಹಾಯಾಗಿ ಅಭ್ಯಾಸ ಮಾಡಬೇಕು.

* ಪ್ರಾಣಯಾಮದಲ್ಲಿ ನಿರಂತರವಾಗಿ, ನಿಶ್ಯಬ್ದವಾಗಿ, ನಿಧಾನವಾಗಿ ಉಸಿರನ್ನು ತೆಗೆದುಕೊಂಡು (ಪೂರಕ) ಹಾಗೇ ನಿರಂತರವಾಗಿ, ನಿಶ್ಯಬ್ದವಾಗಿ ನಿಧಾನವಾಗಿ ಉಸಿರನ್ನು ಹೊರಕ್ಕೆ ಬಿಡಬೇಕು (ರೇಚಕ).

* ಅಭ್ಯಾಸ ಮಾಡುವಾಗ ಉಸಿರನ್ನು ಹಿಡಿದು ನಿಲ್ಲಿಸಬಾರದು. 

* ಕೊನೆಯಲ್ಲಿ ಶವಾಸನ ಮಾಡಬೇಕು. 

* ಪ್ರಾಣಯಾಮ ಕಲಿಯುವ ಮುಂಚೆ ಯಾವುದಾದರೂ ಒಂದು ಭಂಗಿಯಲ್ಲಿ ತುಂಬಾ ಹೊತ್ತು ನೋವಿಲ್ಲದೆ (ಸುಖಾಸನ/ಪದ್ಮಾಸನ ಇತ್ಯಾದಿ) ಕುಳಿತುಕೊಳ್ಳಲು ಅಭ್ಯಾಸ ಇರಬೇಕು.

* ಪ್ರಾಣಾಯಾಮಕ್ಕೆ ಸೂಕ್ತವಾದ ಭಂಗಿ ಸುಖಾಸನ/ಸ್ವಸ್ತಿಕಾಸನ/ಪದ್ಮಾಸನ/ವಜ್ರಾಸನ/ ವೀರಾಸನ/ ಸಿದ್ಧಾಸನ ಆಗಿರುತ್ತದೆ. ಆದ್ದರಿಂದ ಪ್ರಾಣಾಯಾಮಕ್ಕೆ ಮೊದಲು ಅಭ್ಯಾಸಿಯು ಕಡ್ಡಾಯವಾಗಿ ಕೆಲವು ಆಸನಗಳನ್ನು ಕಲಿತಿರಲೇ ಬೇಕು. ಪ್ರಾಣಾಯಾಮ  ಮಾಡುವಾಗ ನೋವಿನ ಅನುಭವ ಬಂದರೆ, ಪ್ರಾಣಾಯಾಮದ ಪ್ರಯೋಜನ ದೊರಕಲಾರದು. ಪ್ರಾಣಯಾಮದಲ್ಲಿ ಪೂರಕ, ಕುಂಭಕ, ರೇಚಕಗಳ ಅಭ್ಯಾಸ ಸಮರ್ಪಕವಾಗಿರಬೇಕು.

* ಪೂರಕ: ಉಸಿರನ್ನು (ಗಾಳಿಯನ್ನು) ಒಳಗೆ ತೆಗೆದುಕೊಳ್ಳುವುದರ ಜೊತೆಗೆ  ವಾತಾವರಣದಲ್ಲಿರುವ ಚೈತನ್ಯವನ್ನು ಹೀರಿಕೊಳ್ಳುವ ಕ್ರಮವಾಗಿದೆ. (ಲೀಟರ್‌ಗಟ್ಟಲೆ ಆಮ್ಲಜನಕ ತೆಗೆದುಕೊಳ್ಳುವುದು) 

* ಕುಂಭಕ: ಒಳಗೆ ತೆಗೆದುಕೊಂಡ ಉಸಿರನ್ನು ತಡೆದು ಹಿಡಿದುಕೊಳ್ಳುವುದು. (ಆರಂಭಿಕರು ಮಾಡಲೇಬಾರದು. ಮರಳಿ ಉಸಿರಾಡಲಾಗದಿದ್ದರೆ ಏನೂ ಮಾಡುವಂತಿಲ್ಲ! ಎಚ್ಚರ) 

* ರೇಚಕ:ಉಸಿರನ್ನು ಪೂರ್ತಿಯಾಗಿ ಹೊರಕ್ಕೆ ಬಿಡುವುದು(ಲೀಟರ್‌ಗಟ್ಟಲೆ ಕಾರ್ಬನ್ ಡೈ  ಆಕ್ಸೈ ಡ್ ಹೊರಕ್ಕೆ ಹಾಕುವುದು). 

ಪ್ರಾಣಾಯಾಮದಲ್ಲಿ ಹಲವು ವಿಧಗಳಿವೆ

ವಿಭಾಗೀಯ ಪ್ರಾಣಯಾಮ,ಸುಖ ಪ್ರಾಣಯಾಮ.ಬಾಹ್ಯ ಕುಂಭಕ (ನಿಶ್ವಾಸದ ಬಳಿಕ ಸ್ವಲ್ಪ ಕಾಲ ಉಚ್ವಾಸ ಮಾಡದಿರುವುದು),ಅಂತರ ಕುಂಭಕ (ಉಚ್ವಾಸದ ನಂತರ ಸ್ವಲ್ಪ ಕಾಲ ನಿಶ್ವಾಸ ಮಾಡದಿರುವುದು),ಸುಖ ಪ್ರಾಣಾಯಾಮ ಯಾ ಸರಳ ಪ್ರಾಣಯಾಮ.ನಾಡೀ ಶುದ್ಧಿ (ನಾಡೀ ಶೋಧನ) ಪ್ರಾಣಯಾಮ. ಸೂರ್ಯಾನು ಲೋಮ, ಚಂದ್ರಾನುಲೋಮ, ಸಿತ್ಕಾರೀ, ಶೀತಲೀ, ಸದಂತ, ಉಜ್ಜಯೀ, ಭ್ರಮರೀ, ಭಸ್ತ್ರಿಕಾ.

ಮೇಲಿನ ಪ್ರಾಣಾಯಾಮಗಳನ್ನು ಯೋಗ ಗುರುಗಳ ಮೂಲಕವೇ ಕಲಿಯಬೇಕು.

ಮಾಹಿತಿಯ ಮೂಲ:- ಪ್ರಜಾವಾಣಿ.

No comments:

Post a Comment