ಶನಿವಾರ, 26 ಅಕ್ಟೋಬರ್, 2024
ವಿನಾಯಕ ದೇವಸ್ಥಾನ ಸಭಾಂಗಣ, ಅರ್. ಟಿ. ನಗರ, ಬೆಂಗಳೂರು.
|
ಎಚ್.ಎಸ್. ರಾಘವೇಂದ್ರ ರಾವ್ |
ಕೋಟ ಶಿವರಾಮ ಕಾರಂತರ 123 ನೇ ಹುಟ್ಟುಹಬ್ಬವು, ಶಿವರಾಮ ಕಾರಂತ ವೇದಿಕೆಯಿಂದ, ಎಚ್.ಎಸ. ರಾಘವೇಂದ್ರ ರಾವ್ ಇವರ ಉಪನ್ಯಾಸದಿಂದ ಸಂಪನ್ನ ಗೊಂಡಿತು.
ಕುಮಾರಿ ಭುವಿ ಅವರಿಂದ ಪ್ರಾರ್ಥನೆ ಯಾದ ನಂತರ ವೇದಿಕೆಯ ಅಧ್ಯಕ್ಷೆ ಶ್ರೀಮತಿ ದೀಪಾ ಫಡ್ಕೆ ಅವರಿಂದ ಪ್ರಾಸ್ತಾವಿಕ ನುಡಿ ಮತ್ತು ಸ್ವಾಗತ ಭಾಷಣ ಮಾಡಿದರು.
|
ಶ್ರೀಮತಿ ಮಂಜುಳಾ ಭಾರ್ಗವಿ |
ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರು ಅತಿಥಿಗಳ ಪರಿಚಯವನ್ನು ಮಾಡಿದರು.ನಂತರ ಅತಿಥಿ ರಾಘವೇಂದ್ರ ರಾವ್ ಅವರು " ಶಿವರಾಮ ಕಾರಂತ ಮತ್ತು ನಿರಂಜನ ಕಾದಂಬರಿಯೆಂಬ ಕನ್ನಡಿಯಲ್ಲಿ" ವಿಷಯವಾಗಿ ವಿಸ್ತಾರವಾಗಿ ಉಪನ್ಯಾಸವನ್ನು ಮಂಡಿಸಿದರು.
ಕಾರಂತರ ಕಾದಂಬರಿಗಳು ಹಾಗೂ ನಿರಂಜನ ಅವರ ಕಾದಂಬರಿ ಗಳಲ್ಲಿಯ ವಿಶೇಷಗಳು, ವ್ಯತ್ಯಾಸವನ್ನು ವಿಮರ್ಶಿಸಿದರು.
ವೇದಿಕೆಯ ಸಹ ಕಾರ್ಯದರ್ಶಿ ಶ್ರೀ ಸುಧೀಂದ್ರ ಅವರ ಧನ್ಯವಾದ ಸಮರ್ಪನೆಯೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.
ಶ್ರೀ ಸುಧೀಂದ್ರ
ಕಾರ್ಯಕ್ರಮದ ವರದಿ - ಶ್ರೀಮತಿ ಮಂಜುಳಾ ಭಾರ್ಗವಿ......
ಶಿವರಾಮ ಕಾರಂತ ವೇದಿಕೆ (ರಿ)
ರವೀಂದ್ರನಾಥ ಟಾಗೋರ್ ನಗರ,
ಬೆಂಗಳೂರು-560032.
ಶಿವರಾಮ ಕಾರಂತ ವೇದಿಕೆ ಆರ್.ಟಿ ನಗರ ಬೆಂಗಳೂರು-32
ಎಲ್ಲರಿಗೂ ನಮಸ್ಕಾರ.......
”ಕಾರಂತರ ಜನ್ಮ ದಿನ ಮತ್ತು ನಿರಂಜನ ಸ್ಮರಣೆ” ಒಂದು ವರದಿ.
ವಿಷಯ: ಶಿವರಾಮ ಕಾರಂತ ಮತ್ತು ನಿರಂಜನ - ” ಕಾದಂಬರಿಯೆಂಬ ಕನ್ನಡಿಯಲ್ಲಿ” ಈ ವಿಷಯದ ಕುರಿತು ಉಪನ್ಯಾಸ ಮಂಡನೆಯ ಒಂದು ವರದಿ , ಅತಿಥಿಗಳಾಗಿ ನಮ್ಮೊಂದಿದ್ದವರು ಎಚ್. ಎಸ್ ರಾಘವೇಂದ್ರ ರಾವ್ ಹಿರಿಯ ವಿಮರ್ಶಕರು .
ಮೊದಲಿಗೆ ಅತಿಥಿಗಳಾದ ಎಚ್. ಎಸ್ ರಾಘವೇಂದ್ರ ರಾವ್ ಅವರನ್ನು ಮತ್ತು ವೇದಿಕೆಯ ಅಧ್ಯಕ್ಷರಾದ ಡಾ. ದೀಪಾ ಫಡ್ಕೆಯವರನ್ನು ವೇದಿಕೆಗೆ ಆಹ್ವಾನಿಸಲಾಯಿತು. ನಂತರ ಕೆನ್ ಶ್ರೀ ಶಾಲೆಯ ಆರನೆ ತರಗತಿಯ ವಿದ್ಯಾರ್ಥಿನಿ ಕುಮಾರಿ ಭುವಿ ಅವರಿಂದ ಸುಶ್ರಾವ್ಯವಾದ ಭಾವಗೀತೆ ”ತೂಗು ಮಂಚದಲ್ಲಿ ಕೂತು” ಹಾಡಲಾಯಿತು.ತದ ನಂತರ ವೇದಿಕೆಯ ಪರವಾಗಿ ಕುಮಾರಿ ಭುವಿಗೆ ಒಂದು ಪುಟ್ಟ ಕಾಣಿಕೆಯನ್ನು ನೀಡಲಾಯಿತು. ನಂತರ ಎಂದಿನಂತೆ ಅಧ್ಯಕ್ಷರಿಂದ ಪ್ರಾಸ್ತಾವಿಕ ನುಡಿ ಮತ್ತು ಸ್ವಾಗತ ಭಾಷಣ, ಚಿಕ್ಕದಾಗಿ ಮತ್ತು ಅತಿ ಚೊಕ್ಕವಾಗಿ ಮಾಡಿ ಮುಗಿಸಿದರು.
ಅತಿಥಿಗಳ ಕಿರುಪರಿಚಯ
ಡಾ. ಎಚ್. ಎಸ್. ರಾಘವೇಂದ್ರರಾವ್, ಕನ್ನಡ ಭಾಷೆಯಲ್ಲಿ ಬರೆಯುತ್ತಿರುವ ಹೆಸರಾಂತ ವಿಮರ್ಶಕರು, ಕಥೆಗಾರ ಮತ್ತು ಅನುವಾದಕರು. 'ಬೆಂಗಳೂರಿನ ನ್ಯಾಷನಲ್ ಕಾಲೇಜಿ'ನಲ್ಲಿ ೩೬ ವರ್ಷಗಳ ಕಾಲ ಉಪನ್ಯಾಸಕರಾಗಿದ್ದು, 'ಹಂಪಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದು, ನಿವೃತ್ತಿಯ ನಂತರ, ಸಂಪೂರ್ಣವಾಗಿ ಓದು-ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇವರ ವಿಮರ್ಶಾ ಕೃತಿಗಳು.
1.ವಿಶ್ಲೇಷಣೆ
2. ನಿಲುವು
3. ಪ್ರಗತಿಶೀಲತೆ
4. ಹಾಡೆ ಹಾದಿಯ ತೋರಿತು
5. ತರು ತಳೆದ ಪುಷ್ಟ
6. ನಮಸ್ಕಾರ
7. ಸಂಗಡ
8. ಕಣ್ಣ ಹನಿಗಳೆ ಕಾಣಿಕೆ
9. ಚಕ್ರವರ್ತಿಯ ಬಟ್ಟೆಗಳು
10. ನೀರಿಗೆ ಮೂಡಿದ ಆಕಾರ
11. ನಿಜವು ತೋರದಲ್ಲ.
ಮತ್ತು ಇವರ ಅನುವಾದಿತ ಕೃತಿಗಳು.
1. ಬಾಲ ಮೇಧಾವಿ (ಜರ್ಮನಿ ಕಥೆಗಳು)
2. ಶಿಕ್ಷಣ ಮತ್ತು ಜೀವನ(ಜೆ.ಕೃಷ್ಣಮೂರ್ತಿ ಕೃತಿ)
3. ಸಂಸ್ಕ್ರತಿ ಸಂಗತಿ (ಜಿಡ್ಡು ಕೃಷ್ಣಮೂರ್ತಿ)
4. ಪ್ರೀತಿಸುವುದೆಂದರೆ(ಆರ್ಟ್ ಆಫ್ ಲವಿಂಗ್- ಎರಿಕ್ ಫ್ರಾಂ)
5. ಇರುವೆಗಳು ಮತ್ತು ಇತರ ಕಥೆಗಳು - ಗೋಪೀನಾಥ ಮೊಹಾಂತಿ,ಒರಿಯಾ ಕಥೆಗಳು
6. ಕಲೆಯಲ್ಲಿ ಮಾನವತಾವಾದ( ಸ್ವೇತಾ ಸ್ಲೋವಾಕ್ ರೋರಿಕ್- ಕೃತಿ).
7. ಮಂಜಿನ ಶಿವಾಲಯಕ್ಕೆ (ಲೈನರ್ ಮರಿಯಾ ರಿಲ್ಕನ ಕೆಲವು ಕವಿತೆಗಳು)
8. ಕಪ್ಪು ಕವಿತೆ (ಆಫ್ರಿಕನ್ ಕವಿತೆಗಳು)
9. ಮಂಜು ಮಣ್ಣು ಮೌನ (ಟೆಡ್ ಕೂಸರ್ ಕವಿತೆಗಳು)
10. ಹತ್ತು ದಿಕ್ಕಿನ ಬೆಳಕು ( ವೈಚಾರಿಕ ಪ್ರಬಂಧಗಳು)
11. ಪ್ಲೇಗ್ (ಆಲ್ಬರ್ಟ್ ಕಮೂನ ಕಾದಂಬರಿ)
ಪ್ರಶಸ್ತಿಗಳು
1. 'ಜನ ಗಣ ಮನ ಪ್ರವಾಸ ಕಥನ'ಕ್ಕೆ 'ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ'
2. 'ವಿಶ್ಲೇಷಣೆ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ
3. ಎಲ್. ಬಸವರಾಜು ಪ್ರಶಸ್ತಿ [೨]
4. ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ [೩]
5. ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ
6. ವರ್ಧಮಾನ ಪ್ರಶಸ್ತಿ
7. ರಾಜ್ಯೋತ್ಸವ ಪ್ರಶಸ್ತಿ
8. ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
9. ಬರಗೂರು ರಾಮಚಂದ್ರಪ್ಪ ಪ್ರಶಸ್ತಿ
ಆದಾದ ಮೇಲೆ ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದ ಕಾದಂಬರಿಯೆಂಬ ಕನ್ನಡಿಯಲ್ಲಿ ವಿಷಯದ ಕುರಿತು ಎಚ್. ಎಸ್ ರಾಘವೇಂದ್ರ ರಾವ್ ರವರು ತಮ್ಮ ಮಾತುಗಳನ್ನು ಆರಂಭಿಸಿದರು. ಮೊದಲಿಗೆ ಅವರು ತಡವಾಗಿ ಬಂದದ್ದಕ್ಕೆ ವೇದಿಕೆಯನ್ನು ಕುರಿತು ಕ್ಷಮೆ ಕೇಳಿ , ಹಿರಿತನದ ಧ್ಯೋತಕ ಎಂಬಂತೆ ” ತುಂಬಿದ ಕೊಡ ತುಳುಕುವುದಿಲ್ಲ” ಎಂಬುದನ್ನು ಮತ್ತೊಮ್ಮೆ ಋಜು ಮಾಡಿದರು. ನಂತರ ವೇದಿಕೆಯನ್ನು ಕುರಿತು, ವೇದಿಕೆಯ ಸಂಸ್ಥಾಪಕರಾದ ಚಂದ್ರಶೇಖರ ಚಡಗರವರೇ ಎಂದು ಸಂಬೋಧಿಸುತ್ತಾ ಮಾತಿಗಿಳಿದರು. ಅನೇಕ ವರ್ಷಗಳಿಂದ ಅವರು ಉಪನ್ಯಾಸಗಳನ್ನು ಮಾಡಿರುವ ಕಾರಣ, ವಿಮರ್ಶೆಯ ಬಗ್ಗೆ ಕೆಲವು ನಿರೀಕ್ಷಿತ ಸಾಹಿತ್ಯದ ಸಂಧರ್ಭಗಳನ್ನು ಉದಾಹರಣೆ ಕೊಡುತ್ತಾ, ವಿಮರ್ಶೆ ಎಂಬುದು ಅಥವಾ ಸಾಹಿತ್ಯ ಎಂಬುದು ”ಹೊಟ್ಟೆಗೆ ಅನ್ನ ತಿನ್ನೋ ಪ್ರತಿಯೊಬ್ಬರಿಗೂ ಅರ್ಥ ಆಗೋ ರೀತಿಯಲ್ಲಿ ಬರೆಯಬೇಕು ”ಎಂಬುದನ್ನು ಅತಿ ಸೂಕ್ಷ್ಮವಾಗಿ ಹೇಳಿದರು. ಓದುವ ಪ್ರತಿಯೊಬ್ಬರೂ ಕೂಡ ವಿಮರ್ಶಕರೇ ”. ಹೀಗೆ ನಾವು ಓದುವಾಗ ಆಗುವ ನಮ್ಮ ಅನುಭವಗಳಷ್ಟೇ ನಮಗೆ ಆ ಓದಿನ ಬಗ್ಗೆ ದಕ್ಕಿಸಿಕೊಡುವ ಸತ್ಯಾಂಶಗಳು , ಮತ್ತು ವಿಮರ್ಶೆಗಳನ್ನು ಓದುವಾಗ ಆಗುವ ಅನೇಕ ಜ್ಞಾನದ ಲಾಭಗಳನ್ನು ನಮ್ಮ ಅನುಭವದಲ್ಲಿ, ನಾವಷ್ಟೆ ಹಿಡಿದಿಡಲು ಸಾಧ್ಯ ,ಬೇರೆಯವರ ಅನುಭವವನ್ನು ನಮ್ಮ ಅನುಭವವನ್ನಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಕಾರಂತರ ಚೋಮನದುಡಿ ಓದಿದಾಗ ಆಗುವ ಅನುಭವವನ್ನು ಹಂಚಿಕೊಳ್ಳುತ್ತಾ, ಕುವೆಂಪುರವರ ಒಳಗಣ್ಣಲ್ಲಿ ಕಂಡ ಮಲೆನಾಡಿನ ಬಗ್ಗೆಯೂ, ಕಾರಂತರ ಅನುಭವದ ಕಡಲಿನ ಬಗ್ಗೆಯೂ, ಬೇಂದ್ರೆಯವರ ಬೆಳಗಿನ ಅಚ್ಚರಿಗಳ ಬಗ್ಗೆಯೂ, ಇರುವ ವ್ಯತ್ಯಾಸಗಳನ್ನು ಅತ್ಯಂತ ಸೊಗಸಾದ ತಮ್ಮ ಮಾತುಗಳಿಂದ ವಿವರಿಸಿದರು. ಕಾರಂತರು ಮತ್ತು ನಿರಂಜನರವರು ಸಾಹಿತ್ಯಿಕ ಪಯಣದಲ್ಲಿ ಅವರು ಕಲಿತದ್ದಕ್ಕಿಂತ ಹೆಚ್ಚಾಗಿ, ಈ ಲೋಕವೆಂಬ ವಿಶ್ವವಿದ್ಯಾಲಯದಿಂದ ಕಲಿತದ್ದೆ ಹೆಚ್ಚು, ಹಾಗೆ ಇವರಿಬ್ಬರೂ ಕಲಿತದ್ದನ್ನು ಹಂಚಿಕೊಳ್ಳುವ ಗುಣ ಇಬ್ಬರಲ್ಲೂ ಸಹವಾಗಿ ಇತ್ತು. ನಿರಂಜನರವರು ಸಾಹಿತ್ಯದ ವಲಯದಲ್ಲಿ ಲೇಖಕನಗಳನ್ನು ಸಂಗ್ರಹಿಸಲು ಲೇಖಕಕರ ಮಂಡಲಿ. ಸಂಪಾದಕರ ಮಂಡಲಿ ,ಅನುವಾದಕರು, ಹೀಗೆ ಟೀಮ್ ಗಳಾಗಿ ಕೆಲಸ ಮಾಡುವುದನ್ನು ಜನಗಳಿಗಳಲ್ಲಿ ಹುರಿದುಂಬಿಸಿದರೆ, ಕಾರಂತರು ಒನ್ ಮ್ಯಾನ್ (ಕಿಂಗ್) ಆರ್ಮಿ ಎಂಬಂತೆ ಇದ್ದರು. ಪ್ರತಿಯೊಂದು ಕೆಲಸಗಳಲ್ಲಿಯೂ, ವಿಚಾರಗಳ ಬಗ್ಗೆಯೂ ಕಾರಂತರು ತಾವೇ ಸ್ವತಃ ಸ್ಪಷ್ಟ ನಿಲುವುಗಳನ್ನು ಹೊಂದಿದ್ದರು. ” ಆಡು ಮುಟ್ಟದ ಸೊಪ್ಪಿಲ್ಲ” ಎಂಬ ಗಾದೆ ಮಾತನ್ನು, ಕಾರಂತರು ಕೆಲಸ ಮಾಡದ ಸಾಹಿತ್ಯ ಕ್ಷೇತ್ರಗಳಿಲ್ಲ ಎಂದು ಪರೋಕ್ಷವಾಗಿ ಹೇಳಿದ ಆ ಮಾತುಗಳು, ನಡೆದಾಡುವ ವಿಶ್ವಕೋಶ ಎಂಬ ಕಾರಂತರ ಮುಡಿಗೆ ಮತ್ತೊಮ್ಮೆ ಕಿರೀಟವಿಟ್ಟಂತೆ ಇದ್ದವು . ವಿಮರ್ಶೆಗಳನ್ನು ಓದುವುದು ಅತ್ಯಂತ ಕಷ್ಟದ ಕೆಲಸ. ಆದರೆ ಆ ಕೆಲಸ ಮಾಡುತ್ತಾ ಮಾಡುತ್ತಾ, ಓದುತ್ತಾ, ಓದುತ್ತಾ ಕಷ್ಟ ಆದರು ಇಷ್ಟ ಆಗತ್ತೆ ಎಂಬ ಮಾರ್ಮಿಕ ಅರ್ಥವನ್ನು ತಿಳಿಸಿಕೊಟ್ಟರು. ಮತ್ತು ಇಲ್ಲಿ ಕೃತಿ ಮುಖ್ಯನೋ ಅಥವಾ ಕೃತಿಕಾರ ಮುಖ್ಯನೋ , ಎಂಬ ಪ್ರಶ್ನೆಗೆ ಅತ್ಯಂತ ಸಮಂಜಸವಾದ ಉತ್ತರ ಕೊಡುತ್ತಾ, ಹಿರಿಯ ತಲೆಮಾರಿನ ಕವಿಗಳು ಇಂದು ನಮ್ಮೊಂದಿಗಿಲ್ಲದಿದ್ದರೂ ಕೂಡ , ನಾವು ಅವರುಗಳನ್ನೆಲ್ಲಾ ನಮ್ಮ ಸಾಹಿತ್ಯದ ಮೂಲಕ, ನಮ್ಮ ಕಲಿಯುವಿಕೆಯ ಮೂಲಕ ಈಗಲೂ ಅವರೆಲ್ಲಾ ಜೀವಂತವಾಗಿರುವುದರ ಬಗ್ಗೆ ಹೇಳಿ, ಜನಪದರು ಎಲ್ಲೂ ತಮ್ಮ ಹೆಸರುಗಳನ್ನು ಮುದ್ರಿಸದೇ ಈಗಲೂ ಜನಮಾನಸದಲ್ಲಿ ಜನಪದ ಸಾಹಿತ್ಯ ಉಳಿದುಕೊಂಡಿರುವುದರ ಬಗ್ಗೆ ಹೇಳಿ, ಉತ್ತರವನ್ನು ತಮ್ಮ ತಮ್ಮ ಅನುಭವಗಳಲ್ಲೇ ಹುಡುಕಿ ಕೊಳ್ಳುವ ವಾಸ್ತವ ಸತ್ಯವೊಂದನ್ನು ಬಿಚ್ಚಿಟ್ಟರು. ಒಬ್ಬ ಕವಿ ಅಥವಾ ಲೇಖಕ ತನ್ನ ಇಪ್ಪತೈದನೇ ವಯಸ್ಸಿನಲ್ಲಿ ಬರೆದ ಹಾಗೆ ನಲವತ್ತೈದರಲ್ಲಿ ಬರೆಯಲಾರ , ಹಾಗೆ ನಲವತ್ತೈದರಲ್ಲಿ ಬರೆದ ಬರಹದಂತೆ ಅರವತ್ತೈದರಲ್ಲಿ ಬರೆಯಲಾರ , ಆದರೂ ಕಾರಂತರ ಬರಹಗಳು ಮಾತ್ರ ಸರ್ವಾಕಾಲಕ್ಕೂ ಸತ್ಯವಾಗಿರುವ ಬಗ್ಗೆ ವಿವರಿಸುತ್ತಾ, ಒಂದು ಕವಿತೆ ಅಥವ ವಿಮರ್ಶೆ ಓದಿದ ಪ್ರತಿಯೊಬ್ಬರ ದೃಷ್ಟಿಯಲ್ಲಿಯೂ ಒಂದೊಂದು ಅರ್ಥದಲ್ಲಿ ಚಿತ್ರಿತವಾಗುವ ಅನುಭವಗಳ ವೈಚಿತ್ರ್ಯವನ್ನು ಕಟ್ಟಿ ಕೊಟ್ಟರು. ಒಟ್ಟಾರೆ ತನ್ನ ಅನುಭವದಿಂದ ತಿಳಿದ ಸತ್ಯ ಮಾತ್ರ ಸತ್ಯ ಆಗಲಿಕ್ಕೆ ಸಾಧ್ಯ ಎಂಬ ಸತ್ಯವನ್ನೂ ತಿಳಿಸಿ ಕೊಟ್ಟರು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬರೆಯುತ್ತಿರುವ ಬರಹಗಾರನ್ನು ಹೆಸರಿಸುತ್ತಾ ,ರಕ್ತ ಮಾಂಸದ ಮನುಷ್ಯ ಇಲ್ಲದಿದ್ದರೂ ಕೂಡ ಆತನ ಬರಹಗಳು ನಿರಂತರವಾಗಿ ಇರುವುದನ್ನು ಅನುಮೋದಿಸಿದರು. ಮನುಷ್ಯ ತನ್ನ ಬದುಕಿನ ನಂತರವೂ ಕೂಡ ಜೀವಿಸಬೇಕೆಂದು ಅಂದು ಕೊಳ್ಳುವುದಾದರೆ ಅದು ಕೇವಲ ಅವರ ಬರಹದಿಂದ ಮಾತ್ರ ಸಾಧ್ಯ.ಹೀಗೆ ಹೇಳುವಾಗ ಕೆಲವು ಜ್ಞಾನಪೀಠ ಪ್ರಶಸ್ತಿ ವಿಜೇತರನ್ನೂ ಕೂಡ ನೆನೆದರು.ಜೊತೆಗೆ ಲಂಕೇಶ್ ರ ಹೆಸರನ್ನೂ ಕೂಡ ನೆನೆದು, ವಂಶವೃಕ್ಷದ ಭೈರಪ್ಪನವರಿಗೂ ಆವರಣದ ಭೈರಪ್ಪನವರಿಗೂ ಬಹಳ ಬದಲಾವಣೆ ಇದೆ. ಬರವಣಿಗೆಯ ರೀತಿ, ವಸ್ತು, ಭಾಷೆ ಮತ್ತು ಕಥೆ, ಕವನ, ನಾಟಕ, ಲೇಖನ,ವಿಮರ್ಶೆ, ಹೀಗೆ ಬರಹಗಳಲ್ಲಿನ ವ್ಯತ್ಯಾಸ ಬರಹದಲ್ಲಿನ ಬದಲಾವಣೆ ಕಾಲಕ್ಕೆ ಹಿಡಿದ ಕನ್ನಡಿಗಳು ಎಂದು ಹೇಳುತ್ತಾರೆ. ಈ ಮಧ್ಯೆ ಜಿ.ಎಸ್. ಶಿವರುದ್ರಪ್ಪನವರ ಮಾತು ಸಾಹಿತ್ಯ ಜೀವನದ ಪ್ರತಿಬಿಂಬ, ಹಾಗು ಕಹಿಬಿಂಬ ಎಂಬ ಮಾತನ್ನು ಹೇಳಿದರು. ಕಾರಂತರ ಮೈ ಮನಗಳ ಸುಳಿಯಲ್ಲಿ,ಹಾಗು ಸರಸಮ್ಮನ ಸಮಾಧಿ, ಮರಳಿ ಮಣ್ಣಿಗೆ ,ಚೋಮನ ದುಡಿ ಈ ಪುಸ್ತಕಗಳ ನಡುವಿನ ಕಥಾ ವಸ್ತುಗಳ ಬಗ್ಗೆ ಹೇಳುತ್ತಾ, ಕಟ್ಟುವೆವು ನಾವು ಹೊಸ ನಾಡೊಂದನು ಹೊಸ ಬೀಡೊಂದನ್ನು, ಎಂಬ ಗೋಪಾಲ ಕೃಷ್ಣ ಅಡಿಗರನ್ನೂ ಕೂಡ ನೆನೆಯುತ್ತಾರೆ. ಅಡಿಕೆ ಕದ್ದವರನ್ನ ಅಪರಾಧಿ ಎಂದ ಜನ ಆನೆ ಕದ್ದವರನ್ನ ಏನೂ ಹೇಳಲೇ ಇಲ್ಲ. ಎಂಬ ಪ್ರಶ್ನೆಯನ್ನು ಬದಲಾಗುತ್ತಿರುವ ಸಮಾಜದ ಮುಂದಿಡುತ್ತಾರೆ. ಕಾರಂತರ ಅನುಭವ ಮತ್ತು ನಿರಂಜನರವರ ನಡುವಣ ಇದ್ದ ಸಾಹಿತ್ಯಿಕ ಮತ್ತು ಭೌತಿಕ ಸಾಮ್ಯತೆಗಳ ಕುರಿತು, ತಮ್ಮ ಅನುಭವಗಳನ್ನೂ ಅತ್ಯಂತ ಸರಳ ಭಾಷೆಯಲ್ಲಿ ಸರಳ ಮಾತುಗಳಲ್ಲಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿ ಕೊಟ್ಟರು. ನಂತರ ವೇದಿಕೆಯ ಪರವಾಗಿ ಅವರನ್ನು ತುಂಬು ಹೃದಯದಿಂದ ಗೌರವಿಸಲಾಯಿತು. ಕಡೆಯದಾಗಿ ನಮ್ಮ ವೇದಿಕೆಯ ಸಹ ಕಾರ್ಯದರ್ಶಿ ಸುಧೀಂದ್ರ ಅವರಿಂದ ವಂದನಾರ್ಪಣೆ ಮಾಡಲಾಯಿತು. ------ ಮಂಜುಳಾಭಾರ್ಗವಿ..
ಈ ಕೆಳಗಿನ ಫೇಸ್ ಬುಕ್ ಲಿಂಕ್ ನಲ್ಲಿ ಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಬಹುದು :
https://www.facebook.com/100085636043383/videos/1483484695701548/
Posted 28/10/2024