Wednesday, October 23, 2024

SHOBHA ARTICLES - ಸುಕ್ರುಂಡೆ

 ಶ್ರಾದ್ಧ ಊಟ - ಸುಕ್ರುಂಡೆ 

20/10/2024


ನನ್ನ ತಂಗಿ ಶೈಲಳ ಅತ್ತೆ ತೀರಿಕೊಂಡು ಇವತ್ತು ಬೆಂಗಳೂರಿನ ವೈದಿಕ ಮಂದಿರದಲ್ಲಿ ಅವರ ಹನ್ನೆರಡನೆಯ ದಿನದ ಕಾರ್ಯಕ್ರಮ ಇತ್ತು. ಮಧ್ಯಾಹ್ನದ ಊಟದ ವ್ಯವಸ್ಥೆಯೂ ಅಲ್ಲಿ ಇತ್ತು. ಮುಖ್ಯ ಕಾರ್ಯಕ್ರಮ ನಾಳೆ ಹಾಗೂ ನಾಡಿದ್ದು ಇದ್ದ ಕಾರಣ ಇಂದಿನ ಊಟ ಸರಳವಾಗಿತ್ತು. ಊಟಕ್ಕೆ ಅನ್ನ ತಂಬುಳಿ, ತೊವ್ವೆ, ಸಾರು, ಸಾಂಬಾರ್, ಚಟ್ನಿ, ಮುದ್ದುಳಿಯ ಜೊತೆಗೆ ೆಯಸುಂಬರಿ, ಚಟ್ನಿ, ಎರಡು ರೀತಿಯ ಪಲ್ಯ, ಮಜ್ಜಿಗೆ, ಪಾಯಸ, ವಡೆ, ಸುಕ್ರುಂಡೆ ಇದ್ದವು. ಊಟದ ರುಚಿಯ ಬಗ್ಗೆ ಎರಡು ಮಾತಿಲ್ಲ. ಟಿಪಿಕಲ್ ಸೌತ್ ಕೆನರಾದ ರುಚಿ ಇರುವ ರುಚಿ ರುಚಿಯಾದ ಊಟ!

ಈ ಊಟದಲ್ಲಿ ನನಗೆ ವಿಶೇಷ ಖುಷಿ ಕೊಟ್ಟಿದ್ದು ನಾನು ಬಹಳ ವರ್ಷಗಳ ನಂತರ ತಿಂದ ಸುಕ್ರುಂಡೆ. ಅದನ್ನು ನೋಡಿದಾಗಲೆಲ್ಲಾ ನನಗೆ ನಾನು ಚಿಕ್ಕವಳಿದ್ದಾಗ ನಾವೆಲ್ಲರೂ ಹೇಳುತ್ತಿದ್ದ “ಮಾಣಿ, ಮಾಣಿ ಉಂಡೆಯಾ? ಸುಕ್ರುಂಡೆ ತಿಂದೆಯಾ? ನಾನಲ್ಲ ಅಪ್ಪಯ್ಯ, ಆಚೆಮನೆ ಕುಪ್ಪಯ್ಯ” ತಮಾಷೆಯ ಹಾಡು(?) ನೆನಪಿಗೆ ಬರುತ್ತದೆ. ಇಂದಿನ ಊಟದ ಸುಕ್ರುಂಡೆ ಬಹಳ ರುಚಿಕರವಾಗಿತ್ತು. ನಾನು ಮುಲಾಜಿಲ್ಲದೆ ಎರಡು ಸುಕ್ರುಂಡೆಗಳನ್ನು ಆಸ್ವಾದಿಸುತ್ತಾ ತಿಂದೆ. ಅದನ್ನು ತಿಂದು ಈಗಾಗಲೇ ಎರಡು ಗಂಟೆ ಕಳೆದಿದ್ದರೂ ನನ್ನ ಬಾಯಿಯಲ್ಲಿ ಅದರ ರುಚಿ ಇನ್ನೂ ಇದೆ. ಹದವಾದ ಸಿಹಿ ಇರುವ ತಿನಿಸದು. ಗೋಳಿಬಜೆಯ ಹೋಲಿಕೆ ಇರುವ ಸುಕ್ರುಂಡೆ ರುಚಿಯಲ್ಲಿ ವಿಶಿಷ್ಟವಾದುದು. ಅದರ ರುಚಿ ಅದನ್ನು ತಿಂದವರೇ ಬಲ್ಲರು!
ಸುಕ್ರುಂಡೆ ಮಾಡಲು ಬೇಕಾಗುವ ಸಾಮಗ್ರಿಗಳು ಅಕ್ಕಿ, ಕಾಯಿ, ಬೆಲ್ಲ, ಉಪ್ಪು, ಅರಿಶಿನ ಪುಡಿ, ಎಣ್ಣೆ. ಒಂದೆರಡು ಗಂಟೆ ನೆನೆಸಿಟ್ಟ ತಿಂಡಿ ಅಕ್ಕಿಯನ್ನು ನೀರನ್ನು ತೆಗೆದು ಸ್ವಲ್ಪವೇ ಉಪ್ಪು ಹಾಗೂ ಅರಿಶಿನ ಪುಡಿ ಹಾಕಿ ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು. ನಂತರದಲ್ಲಿ ಅಗತ್ಯದ ಪ್ರಮಾಣದ ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಕಾಯಿಸಿ ಎಳೆ ಪಾಕ ಬಂದಾಗ ತುರಿದಿಟ್ಟ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಗೊಟಾಯಿಸಬೇಕು. ಅದು ಚೆನ್ನಾಗಿ ಅಂಟು ಅಂಟಾದಾಗ ಏಲಕ್ಕಿಯನ್ನು ಸೇರಿಸಿ ಬದಿಗಿಟ್ಟುಕೊಳ್ಳಬೇಕು. ತಣಿದ ನಂತರ ಆ ಕಾಯಿ ತುರಿಯನ್ನು ಉಂಡೆ ಮಾಡಿಟ್ಟುಕೊಳ್ಳಬೇಕು. ನಂತರದಲ್ಲಿ ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಕಾದಾಗ ಉಂಡೆ ಮಾಡಿಟ್ಟುಕೊಂಡ ಕಾಯಿಯನ್ನು ರುಬ್ಬಿಟ್ಟುಕೊಂಡ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಮೂರ್ನಾಲ್ಕು ನಿಮಿಷ ಕಾಯಿಸಿದರೆ ಬಿಸಿ ಬಿಸಿ ಸುಕ್ರುಂಡೆ ತಿನ್ನಲು ರೆಡಿಯಾಗುವುದು! ಸುಕ್ರುಂಡೆ ತಿನ್ನಲು ಬಯಸುವವರು ಈ ರೆಸಿಪಿಯನ್ನು ಪ್ರಯತ್ನಿಸಿ. ನಿಮ್ಮ ಪ್ರಯತ್ನ ಯಶಸ್ವಿಯಾದರೆ ಅದರ ಅನುಭವವನ್ನು ಹಂಚಿಕೊಳ್ಳಿ

ಹಳ್ಳಿ ಜೀವನ - ನಗರ ಜೀವನ

ಇವತ್ತು ಬೆಳಗಾದದ್ದು ವಾಹನಗಳ ಓಡಾಟದ ಸದ್ದು ಹಾಗೂ ಅವುಗಳ ಹಾರ್ನ್ ಗಳ ಸದ್ದು ಕೇಳಿ. ಪ್ರತಿದಿನ ನನ್ನ ಬೆಳಗಾಗುವುದು ಹಕ್ಕಿಗಳ ಚಿಲಿಪಿಲಿ ರವದೊಂದಿಗೆ. ಅದೊಂದು ಹಿತವಾದ ಅನುಭವ! ಬೆಳಿಗ್ಗೆ ಎಚ್ಚರವಾಗಿ ಹಾಸಿಗೆಯ ಮೇಲೆ ಹಾಗೆಯೇ ಮೈಚಾಚಿಕೊಂಡು ಹೊರಗಿನ ಆ ನೈಸರ್ಗಿಕ ಶಬ್ದಗಳಿಗೆ ಕಿವಿಯೊಡ್ಡಿದಾಗ ಒಂದು ರೀತಿಯ ಅನಿರ್ವಚನೀಯ ಖುಷಿ ದೊರೆಯುವುದಂತೂ ನಿಜ!  ಅಂತಹ ಖುಷಿಯ ಅನುಭವ ಮರೆಸಲೆಂದೇ ಇವತ್ತಿನ ಬೆಳಗಿನ ಅನೈಸರ್ಗಿಕ ಶಬ್ದಗಳು ಮನಸ್ಸನ್ನು ತಟ್ಟದೆ ಕೇವಲ ಕಿವಿಯನ್ನು ತಟ್ಟಿ ನನ್ನೊಳಗೆ ಶಬ್ದ ಮಾಲಿನ್ಯವನ್ನು ಸೃಷ್ಟಿಸಿಯೇ ಬಿಟ್ಟಿತು. ‘ರೋಮ್ ನಲ್ಲಿ ರೋಮನ್ನನಂತಿರು” ಎನ್ನುವ ನಾಣ್ಣುಡಿಯಂತೆ ನಗರಕ್ಕೆ ಬಂದ ಮೇಲೆ ನಗರವಾಸಿಯಂತಿರುವುದು ಸೂಕ್ತ?!
ಸೂರ್ಯ ಮೇಲೆ ಮೇಲೆ ಬಂದಂತೆ ಹಕ್ಕಿಗಳ ಕಲರವ ಕಡಿಮೆಯಾದರೆ ಮನುಷ್ಯ ಸೃಷ್ಟಿಸುವ ಶಬ್ದಗಳು ಸೂರ್ಯನ ಮೇಲೇರುವಿಕೆಯ ಜೊತೆ ಜೊತೆಗೆ ಏರತೊಡಗುತ್ತವೆ. ಒಂದು ವಾಹನದ ಶಬ್ದ ಹತ್ತಾಗಿ…ನೂರಾಗಿ…ಅದರೊಡನೆ ಬೇರೆ ಬೇರೆ ಶಬ್ದಗಳು ಸೇರಿ ಅದರದ್ದೇ “ಶಬ್ದಲೋಕ” ಸೃಷ್ಟಿಯಾಗುತ್ತದೆ. ಈ ಶಬ್ದಮಯ ವಾತಾವರಣ ಅಸಹನೀಯತೆಯನ್ನು ಉಂಟು ಮಾಡುತ್ತದೆ. ಇದು ರೂಢಿಯಾದರೆ ಶಬ್ದವಿಲ್ಲದ ಮೌನಯುತ ಸ್ಥಬ್ಧೀಕೃತ ವಾತಾವರಣದಲ್ಲಿ ಬಹಳ ಸಮಯ ಕಳೆಯುವುದು ಕೂಡಾ ಕಷ್ಟವೇ! ಎಲ್ಲವೂ ಹಿತಮಿತವಾಗಿ ಇದ್ದಾಗ ಮಾತ್ರ ಬದುಕು ಸಹ್ಯ.
ನಗರ ಜೀವನದಲ್ಲೇ ವ್ಯಸ್ತರಾದವರಿಗೆ ಈ ಸದ್ದುಗದ್ದಲಗಳು ಅಂತಹ ರಗಳೆ ನೀಡಲಾರದೇನೊ? ಆದರೆ ಹಳ್ಳಿಯ ಪ್ರಶಾಂತತೆಯಲ್ಲಿ ಮುಳುಗೆದ್ದವರಿಗೆ ನಗರದ ಸತತ ಗದ್ದಲ ಕಿರಿಕಿರಿಯೆನಿಸುವುದರಲ್ಲಿ ತಪ್ಪೇನಿಲ್ಲವಲ್ಲ? 
ನಗರದ ಶಬ್ದಗಳಲ್ಲಿ ಒಂದು ನಿರಂತರತೆ ಇರುತ್ತದೆ; ಏಕತಾನತೆ ಇರುತ್ತದೆ. ಶಬ್ದರಹಿತ ಕ್ಷಣಗಳು ಸಿಗುವುದೇ ಕಷ್ಟ. ಆ ಶಬ್ದದ ಜಗತ್ತು ರೂಢಿಯಾದರೆ ಶಬ್ದವಿಲ್ಲದೆ ಇರುವುದೇ ಕಷ್ಟವೇನೊ? ಆದರೂ ಒಂದರೆಘಳಿಗೆ ಪ್ರಶಾಂತ ವಾತಾವರಣ ಬೇಕೆನಿಸಿದಾಗ ಅದು ಸಿಗುವುದು ಸ್ವಲ್ಪ ಕಷ್ಟವೇ ಸರಿ. ಪ್ರಾಯಶಃ ಆ ಶಬ್ದಗಳನ್ನು ಕೇಳಿ ಕೇಳಿ ಕಿವಿ ನಿರೋಧಕತೆ ಪಡೆದಿದ್ದರೆ ಆ ಪ್ರಶಾಂತತೆ ಸಿಗಬಹುದೇನೊ? 
ಒಟ್ಟಿನಲ್ಲಿ ಶಬ್ದ - ದನಿ - ಸದ್ದು - ಗದ್ದಲದಿಂದ ಕೂಡಿರುವ ಈ ಜಗತ್ತಿನಲ್ಲಿ ಬದುಕುತ್ತಿರುವ ನಾವು ನೀವೆಲ್ಲ ಇನ್ನಷ್ಟು ಶಬ್ದ ಮಾಲಿನ್ಯವಾಗದಂತೆ ಮಾಡಲು ಎಷ್ಟು ಶಕ್ತರು ಎಂದು ಯೋಚಿಸುವುದು ಒಳ್ಳೆಯದಲ್ಲವೆ?

ರೈಲು ಪ್ರಯಾಣ - ವೈವಿಧ್ಯಮಯವಾದ ಬ್ಯಾಗುಗಳು


ಇವತ್ತು ಬೆಂಗಳೂರಿಗೆ ಬೆಳಗಿನ ರೈಲಿನಲ್ಲಿ ಪ್ರಯಾಣಿಸುವ ಸಮಯದಲ್ಲಿ ನಾನು ಕುಳಿತಿದ್ದ ರೈಲು ಬೋಗಿಯನ್ನು ಗಮನಿಸುವಾಗ ನನ್ನ ಗಮನ ಸೆಳೆದದ್ದು ರ್ಯಾಕಿನಲ್ಲಿ ಇರುವ ವೈವಿಧ್ಯಮಯವಾದ ಬ್ಯಾಗುಗಳು! ವಿವಿಧ ಬಣ್ಣದ, ವಿವಿಧ ಆಕಾರದ, ವಿವಿಧ ಗಾತ್ರದ ಬ್ಯಾಗುಗಳವು! ಬ್ಯಾಗುಗಳನ್ನು ರ್ಯಾಕುಗಳ ಮೇಲೆ ಒಂದಕ್ಕೊಂದು ಅಂಟಿದಂತೆ ಇಡಲಾಗಿದೆ. ಅವೆಲ್ಲವೂ ಪರಸ್ಪರ ಪರಿಚಯವಿಲ್ಲದವಾದರೂ ಪಯಣದುದ್ದಕ್ಕೂ ಅಂಟಿಕೊಂಡೇ ಇರಬೇಕು! ನಿರ್ಜೀವಿಗಳೇನೋ ನಿಜ!? ಒಂದು ವೇಳೆ ಜೀವವಿದ್ದಿದ್ದರೆ ಪರಿಚಯವಿರದ ಇನ್ನೊಂದು ಬ್ಯಾಗಿನ ಜೊತೆಗೆ ಅಂಟಿಕೊಂಡಿರಬೇಕಾದ ಪರಿಸ್ಥಿತಿಯಲ್ಲಿ ಅವುಗಳೊಳಗಿನ ಭಾವ ಏನಿರಬಹುದು?
ನಾವು ಒಂಟಿ ಪಯಣ ಮಾಡುವಾಗ “ದೇವ್ರೇ, ಪಕ್ಕದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ಸಜ್ಜನರಾಗಿರಲಿ” ಎಂದು ಪ್ರಾರ್ಥಿಸುತ್ತೇವೆ ತಾನೆ? ಪಯಣದಲ್ಲಿ ಅಷ್ಟೇನು ಅಂಟಿ ಕುಳಿತುಕೊಳ್ಳುವ ಪ್ರಮೇಯ ಇರುವುದಿಲ್ಲ. ಆದರೂ ಕೂಡ ಪಯಣದ ಕಾಲದ  ಅಪರಿಚಿತ ವ್ಯಕ್ತಿಯ ಒಡನಾಟ ನಮಗೆ ಸಹ್ಯವೆನಿಸದೇ ಇರುವುದು ಜಾಸ್ತಿ. ನಮ್ಮೊಳಗಿನ ‘ಮಡಿ’ಯ ಭಾವ ನಿಧಾನವಾಗಿ ತಲೆ ಹೊರ ಹಾಕಿ ಮನಸ್ಸಿಗೆ ಕಿರಿಕಿರಿ ಮಾಡುತ್ತದೆ. ಪಾಪ! ನಮ್ಮ ಬ್ಯಾಗುಗಳಾದರೋ ನಾವಿಟ್ಟ ಜಾಗದಲ್ಲಿ ಪ್ರತಿಷ್ಠಾಪನೆಯಾಗಿ ಇನ್ನೊಂದು ಬ್ಯಾಗಿಗೆ ಅಂಟಿಕೊಂಡು ಮೌನವಾಗಿ ಕುಳಿತಿರುತ್ತವೆ. ಆಗ ಅವುಗಳಿಗಾಗುವ ಕಿರಿಕಿರಿಯನ್ನು ಅವು ಹೇಗೆ/ಯಾರಿಗೆ ಹೇಳಿಕೊಳ್ಳುವುದು? ಇರಲಿ ಬಿಡಿ. ಅವರವರ ಪಾಡು ಅವರವರಿಗೆ!
ಈ ಬ್ಯಾಗುಗಳನ್ನು ಕಂಡುಹಿಡಿದವರು ಯಾರಿರಬಹುದು? ಬಟ್ಟೆಯ ಬ್ಯಾಗಿನಿಂದ ಹಿಡಿದು ಸಾವಿರಾರು ರುಪಾಯಿಗಳ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಬ್ಯಾಗುಗಳು ಲಭ್ಯವಿವೆ. ನಮ್ಮ ಅಗತ್ಯಕ್ಕೆ ತಕ್ಕಂತೆ ನಾವದನ್ನು ಬಳಸುತ್ತೇವಷ್ಟೆ. ಬ್ಯಾಗುಗಳು ಎಂತಹವೇ ಆದರೂ ಕಡೆಗೂ ಅದರಲ್ಲಿ ನಾವು ತುಂಬಿಸುವುದು ನಮ್ಮ ಪಯಣ ಕಾಲದ ಉಡುಪುಗಳನ್ನು ಹಾಗೂ ಅಗತ್ಯದ ವಸ್ತುಗಳನ್ನು ತಾನೆ? ಹೀಗಿದ್ದರೂ ಬ್ಯಾಗುಗಳು ಭದ್ರವಾಗಿದ್ದಷ್ಟು ನಮಗೆ ನೆಮ್ಮದಿ ಜಾಸ್ತಿ. ಅವುಗಳ ಒಳಗೆ ಇರುವ ಏನನ್ನೂ ಕಳೆದುಕೊಳ್ಳಲಾರದ ಮನಸ್ಥಿತಿಯಲ್ಲಿ ನಾವಿರುತ್ತೇವೆ. ಅದಲ್ಲದೆ ನಮ್ಮ ಪಯಣಕ್ಕೆ ಆ ಬಟ್ಟೆಗಳು ಹಾಗೂ ಸರಕುಗಳು ಬೇಕೇ ಬೇಕಲ್ಲವೆ?!
ಬ್ಯಾಗುಗಳು ಪಯಣದ ಕಾಲದ ನಮ್ಮ ಸಂಗಾತಿಗಳು. ಅವುಗಳಿಲ್ಲದೆ ನಮ್ಮ ಪಯಣವಿಲ್ಲ. ನಮ್ಮ ಅಗತ್ಯದ ವಸ್ತುಗಳನ್ನು ತುರುಕಿ ಒಯ್ಯಲು ಬ್ಯಾಗುಗಳೇ ಇಲ್ಲದಿದ್ದರೆ ಹೇಗಿರುತ್ತದೆ ಎಂದು ಎಲ್ಲರೂ ಒಮ್ಮೆ ಯೋಚಿಸಿದರೆ ಬ್ಯಾಗುಗಳ ಮಹತ್ವ ಗೊತ್ತಾಗುತ್ತದೆಯಲ್ಲವೆ?

Posted 23/10/2024

No comments:

Post a Comment