Wednesday, October 2, 2024

ಮೈಸೂರು ಸ್ಯಾಂಡಲ್ ಸೋಪ್

 28 September 2024


ಮೈಸೂರು ಸ್ಯಾಂಡಲ್ ಸೋಪ್ ಎಲ್ಲರಿಗೂ ಪರಿಚಿತ. ನನಗೂ ಕೂಡಾ ಬಹಳ ಪರಿಚಿತವದು! ನಾನು ಚಿಕ್ಕವಳಿದ್ದಾಗಿನಿಂದ ನನ್ನ ದುಡಿಮೆ ಪ್ರಾರಂಭವಾಗುವ ತನಕ ನಮ್ಮ ಅಪ್ಪ ಮನೆಗೆ ತರುತ್ತಿದ್ದ ಸೋಪ್ “ಮೈಸೂರು ಸ್ಯಾಂಡಲ್”. ಚಿಕ್ಕವಳಿದ್ದಾಗ ಅದರ ಪರಿಮಳ ನನಗೆ ಬಹಳ ಇಷ್ಟವಾಗಿತ್ತು. ಆದರೆ ದೊಡ್ಡವಳಾಗುತ್ತಾ ಹೊರಪ್ರಪಂಚ ನೋಡಲು ಪ್ರಾರಂಭಿಸಿದಾಗ ಬೇರೆ ಬೇರೆ ಸೋಪುಗಳತ್ತ ಮನಸ್ಸು ವಾಲುತ್ತಿತ್ತು. ಆಗ ಬಹಳ ಚಾಲ್ತಿಯಲ್ಲಿದ್ದ ಸೋಪ್ “ಲಕ್ಸ್” ಆಗಿತ್ತು. ಅದು ವಿಭಿನ್ನ ಬಣ್ಣಗಳಲ್ಲಿ ದೊರಕುತ್ತಿತ್ತು ಕೂಡಾ. ಮೈಸೂರು ಸ್ಯಾಂಡಲ್ ಸೋಪಿಗಿಂತ ಚೀಪ್ ರೇಟಿನಲ್ಲಿ ಅದು ಲಭ್ಯವಿತ್ತು. ಆದರೆ ನನ್ನ ಅಪ್ಪ ಮನೆಗೆ ತರುತ್ತಿದ್ದ ಸೋಪ್ ಮೈಸೂರು ಸ್ಯಾಂಡಲ್ ಮಾತ್ರವಾಗಿತ್ತು. ಚಿಕ್ಕವಳಿದ್ದ ನನಗೆ ಅದರ ದರ, ಮೌಲ್ಯಗಳ ಅರಿವಿರಲಿಲ್ಲ. ಒಂದೇ ರೀತಿಯ ಸೋಪ್ ಬಳಸಿ ಬೋರ್ ಆಗುತ್ತಿತ್ತು. ಜೊತೆಗೆ ಪುಸ್ತಕಗಳಲ್ಲಿ ಬರುವ ಬೇರೆ ಸೋಪುಗಳ ಜಾಹಿರಾತುಗಳ ಪ್ರಭಾವ ನನ್ನ ಮೇಲೆ ಆಗಿ ಬೇರೆ ಸೋಪುಗಳತ್ತ ಮನ ವಾಲುತ್ತಿತ್ತು. ಅಂತೂ ಇಂತೂ ಬಹಳ ರಗಳೆ ಮಾಡಿ ಬೇರೆ ಸೋಪನ್ನು ತಂದು ಬಳಸತೊಡಗಿದಾಗ ಮೈಸೂರು ಸ್ಯಾಂಡಲ್ ಸೋಪಿನ ಮೌಲ್ಯದ ಅರಿವಾಯಿತು! ಉತ್ತಮ ತ್ವಚೆ ಉಳಿಸಿಕೊಳ್ಳಲು ಉತ್ತಮ ಸಾಬೂನಿನ ಬಳಕೆ ಅಗತ್ಯ ಎಂಬ ವಿಷಯ ಮನವರಿಕೆಯಾಯಿತು.

ಆದರೂ ನಾನು ದುಡಿಯತೊಡಗಿದ ಮೇಲೆ ಮಾಡಿದ ಮೊದಲ ಕೆಲಸವೆಂದರೆ ಮಾರುಕಟ್ಟೆಯಲ್ಲಿ ಬರುವ ಹೊಸ ಹೊಸ ಸೋಪುಗಳನ್ನು ಖರೀದಿಸುವುದು; ಒಂದೆರಡು ಸಲ ಬಳಸಿ ಇಷ್ಟವಾಗದಿದ್ದಾಗ ಅದನ್ನು ಬಟ್ಟೆ ತೊಳೆಯಲು ಬಳಸುವುದು😉 ಹೊಸ ಹೊಸ ಸೋಪುಗಳ ಬಳಕೆಯ ಆಸೆ ಮುಗಿದಾದ ಮೇಲೆ ನಾನು ಪುನಃ ಬಳಸತೊಡಗಿದ್ದು ಮೈಸೂರು ಸ್ಯಾಂಡಲ್ ಸೋಪನ್ನೇ! ಮಕ್ಕಳು ಹುಟ್ಟಿದ ನಂತರದಲ್ಲಿ ತಜ್ಞ ವೈದ್ಯರ ಸಲಹೆಯ ಮೇರೆಗೆ ಮನೆಮಂದಿಯೆಲ್ಲಾ ಸಿಂಥಾಲ್ ಓಲ್ಡ್ ಸೋಪನ್ನು ಬಳಸತೊಡಗಿದೆವು. ಆದರೂ ಈಗ ಅಂಗಡಿಗೆ ಹೋದಾಗ ಹಳೆಯ ನೆನಪಿಗಾಗಿ ಒಮ್ಮೊಮ್ಮೆ ಒಂದೊಂದು ಚಂದ್ರಿಕಾ ಸೋಪು, ಹಮಾಮ್ ಹಾಗೂ ಮೈಸೂರು ಸ್ಯಾಂಡಲ್ ಸೋಪನ್ನು ತಂದು ಆಗೀಗ ಬಳಸುತ್ತೇನೆ. ಅದನ್ನು ಲೇಪಿಸಿ ಸ್ನಾನಿಸಿದಾಗ ಅದರ ಪರಿಮಳದ ಜೊತೆ ಜೊತೆಗೆ ಹಳೆಯ ದಿನಗಳ ನೆನಪುಗಳು ಧಾಳಿ ಮಾಡುತ್ತವೆ. ಆ ನಾಸ್ಟಾಲ್ಜಿಕ್ ಫೀಲಿಂಗ್ ಮನಸ್ಸಿಗೆ ಮುದ ನೀಡುವುದಂತೂ ನಿಜ! 

No comments:

Post a Comment