Friday, August 29, 2025

ಲಿಂಗನಮಕ್ಕಿ ಅಣೆಕಟ್ಟು - ಶೋಭಾ ಸೋಮಯಾಜಿ

 29 August 2025

ನಿನ್ನೆ ಅಚಾನಕ್ಕಾಗಿ ಲಿಂಗನಮಕ್ಕಿ ಅಣೆಕಟ್ಟನ್ನು ದರ್ಶಿಸುವ ಅವಕಾಶ ಸಿಕ್ಕಿತು. ಹನ್ನೊಂದೂ ಗೇಟುಗಳನ್ನು ತೆಗೆದಿದ್ದಾರೆ ಎಂದು ಗೊತ್ತಾದ ತಕ್ಷಣ ಕಾರ್ಗಲ್ ನ ನಮ್ಮ ಪಾಲಕರಾದ ಹಾಗೂ ವೃತ್ತಿಯಲ್ಲಿ ವರದಿಗಾರರಾದ ಶ್ರೀ ರಾಧಾಕೃಷ್ಣ ಅವರಿಗೆ ಫೋನಾಯಿಸಿ “ಪಾಸ್” ಕೊಡಿಸಲು ಆಗುತ್ತದೆಯಾ” ಎಂದು ಕೇಳಿದಾಗ ಅವರು ಎರಡು ಮಾತನಾಡದೆ ಖುದ್ದಾಗಿ ಜೋಗಕ್ಕೆ ಹೋಗಿ ನಮಗೆಲ್ಲ ಪಾಸ್ ವ್ಯವಸ್ಥೆ ಮಾಡಿದ್ದಲ್ಲದೆ ಅವರ ಪತ್ನಿಯ ಜೊತೆಗೂಡಿ ನಮ್ಮೊಡನೆ ಲಿಂಗನಮಕ್ಕಿಗೆ ಬಂದದ್ದು ಅವರ ಆತಿಥ್ಯಕ್ಕೆ ಉತ್ತಮ ನಿದರ್ಶನವಲ್ಲದೆ ಮತ್ತೇನು?


ರಾಧಾಕೃಷ್ಣ ದಂಪತಿಗಳೊಡನೆ ವಿಭಾ, ಮೇದಿನಿ, ನಾನು, ಅನಿರುದ್ಧ, ಕಿಟ್ಟಣ್ಣ, ಸುಶೀಲಕ್ಕ ಹಾಗೂ ಮಂಜು - ಇಷ್ಟು ಜನರು ಲಿಂಗನಮಕ್ಕಿ ಅಣೆಕಟ್ಟಿಗೆ ಹೋದ ತಕ್ಷಣ ಅಲ್ಲಿ ಮಂಜು ಮುಸುಕಿದ ವಾತಾವರಣದಲ್ಲಿ ಬಲ ಭಾಗದಲ್ಲಿ ಕಾಣುತ್ತಿದ್ದ ವಿಶಾಲವಾದ ನೀರಿನ ಹರವು ಬೇರೆಯ‌ದೇ ಲೋಕದ ದರ್ಶನ ಮಾಡಿಸಿತು. “ಕೆಳಗೆ ನೀರು ಬೀಳುವಲ್ಲಿ ಹೋಗಿ ನೋಡಿದರೆ ಚೆನ್ನಾಗಿರುತ್ತದೆ” ಎಂದು ರಾಧಾಕೃಷ್ಣ ಅವರು ಹೇಳಿದ್ದೇ ನಮ್ಮ ಕಾರುಗಳು ಹಸಿರಿನ ಗರ್ಭವನ್ನು ಸೀಳಿದಂತಿದ್ದ ರಸ್ತೆಯಲ್ಲಿ ಸಾಗಿ ಕೆಳಗೆ ಹೋದಾಗ ಅಲ್ಲಿ ಕಂಡಿದ್ದು ರುದ್ರ ರಮಣೀಯ ದೃಶ್ಯ. ಎದೆ ನಡುಗಿಸುವ ರಭಸದಲ್ಲಿ ನೊರೆ ನೊರೆಯಾದ ಜಲರಾಶಿ ಕೆಳಗೆ ಬಿದ್ದು ಮಗುಚಿ ಮೋಡದ ಹನಿಯೋಪಾದಿಯಲ್ಲಿ ಅಷ್ಟೇ ರಭಸದಲ್ಲಿ ಮೇಲೆ ಬಂದು ಹಾರುತ್ತಿದ್ದುದನ್ನು ನೋಡಲು ಎಂಟೆದೆ ಬೇಕು. ಅದರ ರಭಸ, ಅದರ ಭೋರ್ಗರೆತ, ಅದರ ಅದಮ್ಯ ಶಕ್ತಿಯನ್ನು ಬಣ್ಣಿಸುವುದು ಕಷ್ಟ. ಅದರ ಮೊದಲ ನೋಟ ಅಧೀರಗೊಳಿಸಿದರೂ ನಂತರದಲ್ಲಿ ಅದು ತನ್ನೆಡೆಗೆ ನಮ್ಮನ್ನು ಸೆಳೆಯುತ್ತಿದ್ದಂತೆ ಅನಿಸುತ್ತಿತ್ತು. ಕಬ್ಬಿಣದ ಬೇಲಿಯಾಚೆ ಗಾಳಿಗೆ ಆಗಾಗ್ಗೆ ಬಂದು ರಭಸವಾಗಿ ಹೊಡೆಯುತ್ತಿದ್ದ ನೀರ ಹನಿಗಳಲ್ಲಿ ನಾವು ಮಿಂದೆದ್ದು ಆನಂದಿಸಿದೆವು. ಅದು ‘ರಪಕ್ಕನೆ’ ಬಂದು ಹೊಡೆಯುವಾಗ ಉಸಿರು ಕಟ್ಟುವುದರ ಜೊತೆಗೆ ಎದೆ ಝಲ್ಲೆನಿಸುತ್ತಿತ್ತು. ಒಂಟಿಯಾಗಿ ಅಲ್ಲಿಗೆ ಹೋಗಲು ನನ್ನಂತವರಿಗೆ ಧೈರ್ಯ ಸಾಲದೇನೊ ಅಂತನಿಸಿದ್ದು ನಿಜ. 

ಎಂತಹ ವಿಚಿತ್ರ ನೋಡಿ! ಒಂದು ಭಾಗದಲ್ಲಿ ನೀರನ್ನು ರಭಸವಾಗಿ ಚಿಮ್ಮಿಸುವ ಅಣೆಕಟ್ಟು ತನ್ನ ಇನ್ನೊಂದು ಭಾಗದಲ್ಲಿ ಶಾಂತ, ಸ್ನಿಗ್ಧವಾದ ಅಪಾರ ಜಲರಾಶಿಯನ್ನು ತಡೆದು ನಿಲ್ಲಿಸಿದೆ. ನಾವೂ ಹಾಗೆ ತಾನೆ? ಮನಸ್ಸಿನೊಳಗೆ ರಭಸವಾಗಿ  ನೂರೆಂಟು ಆಲೋಚನೆಗಳನ್ನು ಹರಿಯಬಿಟ್ಟು ಹೊರ ಜಗತ್ತಿಗೆ ಸಂದರ್ಭೋಚಿತವಾಗಿ “ಜರಡಿ ಮಾಡಿ ಶೋಧಿಸಿದ” ಭಾವನೆಗಳನ್ನು ಮಾತ್ರ ಪ್ರಕಟ ಪಡಿಸುತ್ತೇವಲ್ಲವೆ? ಹಾಗಾದರೆ ನಾವು ನಮ್ಮ ಭಾವನೆಗಳಿಗೆ ಲಗಾಮು ಹಿಡಿಯುವ ಅಣೆಕಟ್ಟಿನ ಪಾತ್ರ ವಹಿಸುತ್ತೇವೆಯೆ?

ಅದೇನೆ ಇರಲಿ, ಲಿಂಗನಮಕ್ಕಿ ಅಣೆಕಟ್ಟಿನ ಭೇಟಿ, ಅಲ್ಲಿನ ಅನುಭವ ನಮ್ಮ ಬದುಕಿನ ಸ್ಮರಣೀಯ ಅನುಭವಗಳಲ್ಲಿ ಸೇರಿ ಒಂದಾದ ಧನ್ಯತಾ ಭಾವ ನಮ್ಮೆಲ್ಲರಲ್ಲಿದೆ. 


30/8/2025

No comments:

Post a Comment