Tuesday, Sept. 2, 2025
ನಾನೀಗಾಗಲೇ ಸೊಗಸಾದ ವೃದ್ಧಾಪ್ಯಕ್ಕೆ ಕಾಲಿಟ್ಟಾಗಿದೆ. ನಾಳೆ ನಾನು ಐವತ್ತೊಂಬತ್ತನ್ನು ದಾಟಿ ಅರವತ್ತಕ್ಕೆ ಅಡಿ ಇಡುವುದು ಒಂದು ಹೊಸ ಮೆಟ್ಟಿಲು. ಇನ್ನೊಂದು ವರ್ಷದಲ್ಲಿ ಹಿರಿಯ ನಾಗರಿಕಳಾಗುವುದು ನನಗೆ ದೊರೆಯುವ ಪ್ರಮೋಷನ್
ಯೌವ್ವನಕ್ಕೆ, ಮಧ್ಯವಯಸ್ಸಿಗೆ, ವೃದ್ಧಾಪ್ಯಕ್ಕೆ ಕಾಲಿಡುವುದು….ಹೀಗೆ ಬದುಕಿನ ಬೇರೆ ಬೇರೆ ಘಟ್ಟಗಳಿಗೆ ಕಾಲಿಡುವುದು ಒಂದು ಸಹಜ ಪ್ರಕ್ರಿಯೆಯಾದರೂ ಅದಕ್ಕೊಂದು ಮಾರ್ಗ ಸೂಚಿ… ಸೋಶಿಯಲ್ ಮೀಡಿಯಾ ಪೇಜ್ ಇರುವುದು ಈಗಿನ ಟ್ರೆಂಡ್ ಆಗಿದೆ. ಅದರಲ್ಲೂ “ಸೊಗಸಾದ ರೀತಿಯಲ್ಲಿ ವೃದ್ಧಾಪ್ಯಕ್ಕೆ ಅಡಿ ಇಡುವುದು ಹೇಗೆ” ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಮಾಹಿತಿ ಸಿಗುತ್ತದೆ. ಅದಕ್ಕಾಗಿಯೇ ಮೀಸಲಾಗಿಡಲಾಗಿರುವ ಪೇಜಸ್ ಗಳಿವೆ. ಈಗಿನ ಬದುಕಿನ ಕ್ರಮದಲ್ಲಿ ಅಂತಹ ಮಾಹಿತಿಭರಿತ ಪೇಜಸ್/ಜಾಲತಾಣಗಳ ಅಗತ್ಯವಿದೆಯೇನೊ?
ಪತ್ರಿಕೆ ಹಾಗೂ ಜಾಲತಾಣಗಳನ್ನು ನೋಡಿದಾಗ ಬಹಳಷ್ಟು ಜನರಲ್ಲಿ ವಯಸ್ಸಾಗುವುದರ ಬಗ್ಗೆ ಹೆದರಿಕೆ ಇರುತ್ತದೆ ಎಂಬ ವಿಷಯ ತಿಳಿದು ಬರುತ್ತದೆ. ಯಾಕೀ ಹೆದರಿಕೆ? ದೈಹಿಕ ಶಕ್ತಿ ಕುಂದುವುದು, ಪರಾವಲಂಬನೆ ಹೆಚ್ಚುವುದು, ದೇಹದ ಸಮತೋಲನ ತಪ್ಪುವುದು, ಕಣ್ಣಿನ ಕಾಂತಿ ಕುಂಠಿತವಾಗುವುದು, ಆರೋಗ್ಯದಲ್ಲಿ ಏರುಪೇರಾಗುವುದು, ಮಾನಸಿಕ ಕ್ಷಮತೆ ಕುಸಿಯುವುದು…ಹೀಗೆಲ್ಲಾ ಆಗುವ ಪ್ರಮೇಯಗಳಿದ್ದರೂ “age is just a number” ಎಂದು ಪರಿಗಣಿಸಿದರೆ ನಾವು ಧೈರ್ಯಗೆಡುವ ಅಗತ್ಯವಿಲ್ಲವೇನೊ?
ನನಗಂತೂ ನನ್ನ ವಯಸ್ಸನ್ನು ಒಪ್ಪಿಕೊಳ್ಳುವುದರ ಬಗ್ಗೆ ಯಾವತ್ತೂ ಕಿರಿಕಿರಿ ಅನಿಸಿದ್ದಿಲ್ಲ. ನಾನು ಬೇಡಬೇಡವೆಂದರೂ ವಯಸ್ಸೇನು ನಿಲ್ಲದ ಕಾರಣ ಅದನ್ನು ಸಹಜವಾಗಿ ಸ್ವೀಕರಿಸುವುದರಲ್ಲಿ ಅರ್ಥವಿದೆ. ವಯಸ್ಸು ಹೆಚ್ಚಾದಂತೆ ನಮಗೆ ಸಿಗುವ ಗೌರವವೂ ಹೆಚ್ಚುತ್ತದೆ ಎನ್ನುವುದನ್ನು ಗಮನಿಸಿದರೆ ವಯಸ್ಸಾಗುವುದನ್ನು ಒಪ್ಪಿಕೊಳ್ಳುವುದರಲ್ಲಿ ಸುಖವಿದೆ.
ನನಗೆ ವಯಸ್ಸಾಗುತ್ತಿದೆ ಎಂದು ನನಗೆ ಅನಿಸಿದ್ದು ನಾನು ಮೆಟ್ಟಿಲುಗಳನ್ನು ಹತ್ತಿ ಇಳಿಯುವ ವೇಗದಲ್ಲಿ. ಹರೆಯದಲ್ಲಿ ಎರಡೆರೆಡು ಮೆಟ್ಟಿಲುಗಳನ್ನು ಒಟ್ಟಿಗೇ ಚುರುಕಾಗಿ ಹತ್ತುತ್ತಿದ್ದ ನಾನು ಈಗ ಒಂದೊಂದು ಮೆಟ್ಟಿಲುಗಳನ್ನು ಹತ್ತಿಳಿಯುವಾಗಲೂ ಮೈಯೆಲ್ಲಾ ಕಣ್ಣಾಗಿರುತ್ತೇನೆ. ಏದುಸಿರು ಬರುತ್ತಿರುತ್ತದೆ. ಇನ್ನೊಂದು ಮುಖ್ಯ ಬದಲಾವಣೆಯನ್ನು ನಾನು ಗಮನಿಸಿದ್ದು ಕಣ್ಣಿನ ಶಕ್ತಿಗುಂದುವಿಕೆಯಲ್ಲಿ. ಹರೆಯದ ಅರಳುಗಣ್ಣುಗಳು ವಯಸ್ಸಾಗುತ್ತಿದ್ದಂತೆ ಇಳಿಗಣ್ಣಾಗಿರುವುದು ಸ್ವಲ್ಪ ಕಿರಿಕಿರಿ ಉಂಟು ಮಾಡುವ ವಿಷಯವೇ ಸರಿ!? ಚಿಮ್ಮನೆ ಚಿಮ್ಮಿ ನಡೆಯುವ ನಡಿಗೆಯು ಭಾರವಾಗಿ ಕಾಲೆಳೆಯುತ್ತಾ ನಡೆಯುವಂತಾಗಿರುವುದು ಇನ್ನೊಂದು ಪ್ರಮುಖ ಬದಲಾವಣೆ. ಕೆಲಸ ಮಾಡುವಾಗಿನ ಚುರುಕುತನ ಕಡಿಮೆಯಾಗಿರುವುದು ಮತ್ತೊಂದು ಬದಲಾವಣೆ. ತಲೆಕೂದಲು ಹಣ್ಣಾಗಿರುವುದು ಬಲು ದೊಡ್ಡ ಬದಲಾವಣೆ. ಚರ್ಮ ಸುಕ್ಕಾಗಿ ಮಬ್ಬಾಗುತ್ತಿರುವುದು ಮಗದೊಂದು ಬದಲಾವಣೆ. “ಬದಲಾವಣೆ ಜಗದ ನಿಯಮ” ಎನ್ನುವ ಸಾರ್ವಕಾಲಿಕ ಸತ್ಯವನ್ನು ಒಪ್ಪಿಕೊಂಡಾಗ ವಾಸ್ತವತೆಯನ್ನು ಸ್ವೀಕರಿಸುವುದು ಸುಲಭವಾಗುತ್ತದೆ. ದೇಹಕ್ಕೂ - ಮನಸ್ಸಿಗೂ ಇರುವ 'ಅಂತರ'ವನ್ನು ಆಧ್ಯಾತ್ಮ ಎಂಬ 'ಸಂಕ'ದಿಂದ ಜೋಡಿಸಿದರೆ ಬಾಕಿ ಉಳಿದ ಜೀವನ ಸುಖಕರವಾಗಿರುತ್ತದೆ ಎನ್ನುವ ನಿರೀಕ್ಷೆಯಲ್ಲಿ ಅರವತ್ತರ ಹರೆಯಕ್ಕೆ ಕಾಲಿಡ ಹೊರಟಿದ್ದೇನೆ
Posted 3 / 9 2025
Comments:









No comments:
Post a Comment