Monday, 26th January 2026
ದಿನಾಂಕ ಜನವರಿ 23, 2026ರಂದು ನನ್ನ ಮಗನ ಮಗುವಿಗೆ ನಾನು ಅಧಿಕೃತ ಅಜ್ಜಿಯಾದೆ.
ನಾನು ಮದುವೆಯಾಗಿ ಸೇರಿದ ಮನೆ ಕೂಡು ಕುಟುಂಬದ ಮನೆ. ನನ್ನ ಗಂಡ ರವಿ ಆ ಮನೆಯ ಕೊನೆಯ ಸಂಜಾತ. ಹೀಗಾಗಿ ಅವನಿಗೂ ಅವನ ಹಿರಿಯ ಅಣ್ಣ - ಅಕ್ಕಂದಿರಿಗೂ ಸುಮಾರು ಹದಿನೈದು ಇಪ್ಪತ್ತು ವರ್ಷಗಳ ಅಂತರ. ನನ್ನ ಎರಡನೆಯ ಅತ್ತಿಗೆಯ ಮಗಳು ಹೆತ್ತಾಗ ನನಗೆ ಮೂವತ್ತರ ಆಸುಪಾಸಿನ ವಯಸ್ಸು. ನಾನು ಆ ವಯಸ್ಸಿನಲ್ಲಿಯೇ ಅಜ್ಜಿಯ ಪಟ್ಟವನ್ನೇರಿದ್ದೆ! ನಂತರದಲ್ಲಿ ರವಿಯ ಉಳಿದ ಅಣ್ಣ - ಅಕ್ಕಂದಿರ ಮಕ್ಕಳು ಮದುವೆಯಾಗಿ ಪಾಲಕರಾದಾಗ ನಾನು ಅಜ್ಜಿಯ ಸ್ಥಾನದಲ್ಲಿ ಬಡ್ತಿ ಪಡೆಯುತ್ತಾ ಹೋದೆ. ಈಗ ನನ್ನ ಮಗನ ಹೆಂಡತಿ ಹೆತ್ತಾಗ ನಾನು ‘ಅಧಿಕೃತ’ವಾಗಿ ಅಜ್ಜಿಯಾದೆ ಅಂದರೆ ಸರಿ ತಾನೆ!?
ಪುಟ್ಟ ಮಕ್ಕಳೆಂದರೆ ಸಹಜವಾಗಿ ನನ್ನೊಳಗಿಂದ ಒಲುಮೆ ಉಕ್ಕಿ ಹರಿಯುತ್ತದೆ. ಮಕ್ಕಳೊಡನೆ ಮಕ್ಕಳಾಗುವ ಖುಷಿ ಅನುಭವಿಸಿದವರೇ ಬಲ್ಲರು! ಅದರಲ್ಲೂ ಆಗ ತಾನೆ ಹುಟ್ಟಿದ ಮಗುವಿನ ಮೈಯ್ಯ ಬಿಸುಪಂತೂ ಅನಿರ್ವಚನೀಯ ಅನುಭವವನ್ನು ಕೊಡುವಂತಹುದು. ನನ್ನ ಮೊಮ್ಮಗಳು ಹುಟ್ಟಿದ ಒಂದೂವರೆ ತಾಸಿನ ನಂತರ ಬಟ್ಟೆಯಲ್ಲಿ ಸುತ್ತಿ ರೂಮಿಗೆ ತಂದಾಗ ಅದರ ಬರಿ ಮೈಯ್ಯ ಬಿಸುಪನ್ನು ಆಸ್ವಾದಿಸುವ ಅವಕಾಶ ತಪ್ಪಿ ಹೋದದ್ದಕ್ಕೆ ಒಂದರೆಗಳಿಗೆ ಬೇಸರವಾದದ್ದಂತೂ ಸತ್ಯ. ಆದರೆ ನನಗೆ ಬಹಳ ಕೆಮ್ಮು ಬಾಧಿಸುತ್ತಿದ್ದ ಕಾರಣ ಮೊಮ್ಮಗಳನ್ನು ನಾನು ಎತ್ತಿಕೊಳ್ಳುವುದು ಎಷ್ಟು ಸಮಂಜಸ ಎಂದು ನನ್ನೊಳಗೆ ತಾಕಲಾಟವಾದದ್ದೂ ನಿಜ! ಆದರೂ ಮಗುವಿನ ಮೇಲಿನ ಮೋಹ - ಸೆಳೆತ ನನ್ನನ್ನು ಮಗುವನ್ನು ಸ್ವಲ್ಪ ಹೊತ್ತು ಎತ್ತಿಕೊಳ್ಳುವಂತೆ ಮಾಡಿ ಬಿಟ್ಟಿತು. ನನ್ನ ಕೆಮ್ಮಿನಿಂದ ಬಾಣಂತಿ ಹಾಗೂ ಮಗುವಿಗೆ ತೊಂದರೆ ಆಗದೆ ಇರಲಿ ಎಂದು ಮನದಲ್ಲೇ ಪ್ರಾರ್ಥಿಸುತ್ತಾ ಅಪರಾಧಿ ಪ್ರಜ್ಞೆಯಲ್ಲೇ ಮಗು - ಬಾಣಂತಿಯೊಡನೆ ಸ್ವಲ್ಪ ಹೊತ್ತು ಸಮಯ ಕಳೆದೆ. ಅದೃಷ್ಟವಶಾತ್ ನನ್ನ ಕೆಮ್ಮು ಅವರಿಗೆ ಬಾಧೆ ತರದೇ ಇದ್ದದ್ದು ನನ್ನ ಮನಸ್ಸಿಗೆ ಸಮಾಧಾನ ನೀಡಿತು.
ಈ ಎಲ್ಲಾ ಕಲಸುಮೇಲೋಗರದ ಮನಸ್ಥಿತಿಯಲ್ಲಿ ನನ್ನ ‘ಅಜ್ಜಿ’ತನದ ತಾಜಾ ಭಾವನೆಯನ್ನು ಅನುಭವಿಸಲು ಆಗದಿರುವುದು ನನಗೆ ನಂತರದಲ್ಲಿ ಅರಿವಾಯಿತು. ಎಲ್ಲವನ್ನೂ ಅನುಭವಿಸಲು ಯೋಗ ಇರಬೇಕು ಎನ್ನುವ ಬಲ್ಲವರು ಹೇಳಿದ ಮಾತು ಸತ್ಯವೆಂದು ಅನುಭವಕ್ಕೆ ಬಂದಿತು. ಅದೇನೆ ಇರಲಿ; ನಮ್ಮ ಮನೆಗೊಂದು ಹೊಸ ಸದಸ್ಯೆಯ ಆಗಮನವಾಗಿದೆ. ಅದು ನಮಗೆಲ್ಲರಿಗೂ ಖುಷಿ ತಂದ ವಿಷಯವಾಗಿದೆ. ಅಜ್ಜಿಯ ಪಾತ್ರ ನಿರ್ವಹಿಸಲು ಮುಂಬರುವ ದಿನಗಳು ನನ್ನ ಮುಂದಿವೆ ಎನ್ನುವುದು ಸಮಾಧಾನದ ಭಾವ ಕೊಟ್ಟಿದೆ. ಅವಳು ಒಳ್ಳೆಯ ಆಯುರಾರೋಗ್ಯ ಪಡೆದು ಸಂತಸದ ಸಮೃದ್ಧ ಬದುಕನ್ನು ಬಾಳಲಿ ಎಂದು ಮನಃಪೂರ್ವಕವಾಗಿ ಹಾರೈಸುವುದನ್ನು ಬಿಟ್ಟರೆ ನನ್ನಲ್ಲಿ ಅದಕ್ಕಿಂತ ಕೊಡಲು ಹೆಚ್ಚಿನದೇನು ಇಲ್ಲ. ಅಷ್ಟು ಸಾಕಲ್ಲವೆ??
Posted 27/1/2026

No comments:
Post a Comment