Wednesday, January 28, 2026

JOJO THE PET - SHOBHA SOMAYAJI

 Wednesday, January 28, 2026

JOJO

ಬೋಜೋ ಬಗ್ಗೆ ಶೃದ್ಧಾಂಜಲಿಯ ಬರಹ ಬರೆಯುವ ಸಮಯ ಇಷ್ಟು ಬೇಗ ಬರುತ್ತದೆಯೆಂದು ನಾನೆಂದೂ ಭಾವಿಸಿರಲಿಲ್ಲ. ಬೋಜೋ ನಮ್ಮ ಕ್ಯಾಂಪಸ್ ನ ಸುಂದರ, ಸದೃಢ, ಹೀರೋ ಮೆಟೀರಿಯಲ್ ಹೊಂದಿದ ವ್ಯಕ್ತಿತ್ವ ಉಳ್ಳವನಾಗಿದ್ದ. ಅವನ ನಡೆ ಚೆಂದ; ಅವನ ನೋಟ ಚೆಂದ; ಅವನ ಸೂಕ್ಷ್ಮ ಸ್ವಭಾವ ಅಂದ. ನಮ್ಮ ಯಾರದ್ದೇ ಮುಖಭಾವ ಬದಲಾದರೂ, ಮಾತಿನ ಟೋನ್ ಬದಲಾದರೂ ಅವನಿಗೆ ಕೂಡಲೇ ಗೊತ್ತಾಗುತ್ತಿತ್ತು. ಧ್ವನಿ ಏರಿಸಿ ವಾರ್ನ್ ಮಾಡುವ ಅಗತ್ಯ ಇರಲಿಲ್ಲ. ಒಂದು ರೀತಿಯಲ್ಲಿ ‘ಮರ್ಯಾದಾ ಪುರುಷೋತ್ತಮ’ನ ಗುಣ ಹೊಂದಿದವನಾಗಿದ್ದ. ನನ್ನ ಆಫೀಸಿನಲ್ಲಿ ಅವನ ಜಾಗ ನನ್ನ ಟೇಬಲ್ ಕೆಳಗೆ, ನನ್ನ ಪದತಲದಲ್ಲಾಗಿತ್ತು. ಒಮ್ಮೆಯಂತೂ ಅವನು ನನ್ನ ಆಫೀಸಿನಲ್ಲಿ ಇರುವುದು ನನಗೆ ಮರೆತು ಹೋಗಿ ಬಾಗಿಲು ಹಾಕಿಕೊಂಡು ಊಟಕ್ಕೆ ಬಂದುಬಿಟ್ಟಿದ್ದೆ. ಹಿಂದಿರುಗಿ ಹೋದಾಗ ಅವನು ನನ್ನ ಕುರ್ಚಿಯ ಮೆಲೆ ಆರಾಮಾಗಿ ಮಲಗಿದ್ದ. ನಾನು ನನ್ನ ಆಫೀಸಿನವರಿಗೆ ಆ ‘ಹೊಸ ಪ್ರಿನ್ಸಿಪಾಲ್’ ಅನ್ನು ತೋರಿಸಿ ನಕ್ಕಿದ್ದೆ. ನನ್ನನ್ನು ನೋಡಿದವನು ಕುರ್ಚಿಯಿಂದಿಳಿದು ಹೊರ ಹೋಗಿದ್ದ.


ನಮ್ಮ ಸುಕ್ಕುವಿನ ಮರಿಯಾಗಿದ್ದ ಬೋಜೋ ‘ಸ್ವಚ್ಛ ಭಾರತ್’ ಪ್ರಣಾಳಿಕೆಯ ಅಪರಾವತಾರವಾಗಿದ್ದ. ಅವನು ಪುಟ್ಟ ಮರಿ ಇದ್ದಾಗ ನನ್ನ ಮಗಳು ವಿಭಾಳೊಡನೆ ಮಲಗುತ್ತಿದ್ದ. ಒಂದು ಸಲವೂ ಹಾಸಿಗೆಯಲ್ಲಿ ಮೂತ್ರ ಮಾಡಿದವನಲ್ಲ. ಅಷ್ಟು ಶಿಸ್ತಿನ ಸಿಪಾಯಿ. ಅವನ ಶಿಸ್ತಿನ ನಡವಳಿಕೆಯನ್ನು ಅವನ ನಡಿಗೆಯಲ್ಲಿ ಕಾಣಬಹುದಿತ್ತು. ಒಂದು ರೀತಿಯಲ್ಲಿ ಗೌರವ ಕೊಡುವಂತಿದ್ದ ವ್ಯಕ್ತಿತ್ವ ಅವನದ್ದು. 

ಕಲ್ಲಿನಲ್ಲಿ ಕೆತ್ತಿದ ಗ್ರೀಕ್ ಶಿಲ್ಪದಂತಹ ಮೈಕಟ್ಟು ಅವನದ್ದು. ಹದವಾದ ಎತ್ತರದ ಅವನನ್ನು ನೋಡುವುದೇ ಒಂದು ಖುಷಿ. ತುಂಬಾ ತೀಕ್ಷ್ಣ ಕಣ್ಣುಗಳು ಅವನವು. ಅವನು ಮಂಗ ದ್ವೇಷಿ! ಮಂಗಗಳನ್ನು ಕಂಡಾಗ ಅವನ ಓಡುವಿಕೆಯ ವೇಗ ತೀವ್ರಗೊಳ್ಳುತ್ತಿತ್ತು. ಚಿಗರೆ ಮರಿಯಂತೆ ಓಡುತ್ತಿದ್ದ. ಒಮ್ಮೆಯಂತೂ ಮಂಗವೊಂದರೊಡನೆ ಜಗಳವಾಡಿ ಅವನ ಅರ್ಧ ಮುಖ ಹರಿದು ಹೋಗಿತ್ತು. ಡಾಕ್ಟರ್ ಹತ್ತಿರ ಕರೆದೊಯ್ದು, ಹರಿದ ಮುಖವನ್ನು ಹೊಲಿದು, ಬಾಲಣ್ಣ - ಶಂಕರಿಯವರ ಸೇವೆಯಿಂದ ಅವನು ಮೊದಲಿನಂತಾದದ್ದು ಎಲ್ಲರಿಗೂ ಸಮಾಧಾನ ತಂದಿತ್ತು. 

ಅವನು ಕ್ಯಾಂಪಸ್ಸಿನ ನಾಯಕನಾಗಿದ್ದ. ಅವನಿದ್ದರೆ ಎಲ್ಲರಿಗೂ ಒಂದು ರೀತಿಯ ಧೈರ್ಯ. ಕೇವಲ ಮೂರು ವರ್ಷಗಳಲ್ಲಿ ಅವನು ನಮ್ಮನ್ನೆಲ್ಲಾ ತೊರೆದು ಹೋಗಿಬಿಡುತ್ತಾನೆ ಎಂದು ನಾವ್ಯಾರೂ ಕನಸುಮನಸಿನಲ್ಲೂ ಯೋಚಿಸಿರಲಿಲ್ಲ. ಗ್ಯಾಸ್ ಸಿಲಿಂಡರ್ ತರುವ ಗಾಡಿಯ ಚಾಲಕ ನೋಡನೋಡುತ್ತಿದ್ದಂತೆ ಬೋಜೋನ ಮೇಲೆ ಗಾಡಿ ಹಾಯಿಸಿ ಅವನ ಅಂತ್ಯಕ್ಕೆ ಕಾರಣವಾದದ್ದು ಮರೆಯಲಾರದ ನೋವನ್ನು ನಮ್ಮೆಲ್ಲರಿಗೂ ಕೊಟ್ಟಿದೆ. ಎಲ್ಲೇ ಇರಲಿ, ಹೇಗೇ ಇರಲಿ, ಬೋಜೋನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ನಮ್ಮೆಲ್ಲರ ಪ್ರಾರ್ಥನೆ 🙏

Posted 29/1/2026


No comments:

Post a Comment