Friday, November 13, 2026

RELATIONSHIP - ಸಂಬಂಧಗಳು

 Saturday, 14th November 2026

ಸಂಬಂಧಗಳು ಉಳಿಯುವುದು ರಕ್ತಸಂಬಂಧದಿಂದಲ್ಲ, ಮನಸ್ಸಿನ ಸಂಬಂಧದಿಂದ...

ಕೆಲವೊಮ್ಮೆ ಯೋಚಿಸುತ್ತೇನೆ... ಒಂದೇ ಕುಟುಂಬದಲ್ಲಿ ಹುಟ್ಟಿ, ಒಂದೇ ಮನೆಯಲ್ಲಿ ಬೆಳೆದು, ಒಂದೇ ತಟ್ಟೆಯಲ್ಲಿ ಊಟ ಮಾಡಿ, ಬಾಲ್ಯದ ಅದೆಷ್ಟೋ ಸುಂದರ ನೆನಪುಗಳನ್ನು ಹಂಚಿಕೊಂಡವರು ಮುಂದೆ ಏಕೆ ಇಷ್ಟೊಂದು ದೂರವಾಗುತ್ತಾರೆ ಎಂದು!

ಒಂದು ಕಾಲದಲ್ಲಿ ಒಬ್ಬರಿಗೊಬ್ಬರು ಹೇಳಿಕೊಳ್ಳದೆ ಏನನ್ನೂ ಮಾಡದವರು, ಇಂದು ಮಾತನಾಡಲು ಕೂಡ ಕಾರಣ ಹುಡುಕುವ ಪರಿಸ್ಥಿತಿ ಬಂದುಬಿಡುತ್ತದೆ. ಕಾಲ ಬದಲಾಗುತ್ತದೆ, ಜೀವನದ ಜವಾಬ್ದಾರಿಗಳು ಹೆಚ್ಚಾಗುತ್ತವೆ, ಪ್ರತಿಯೊಬ್ಬರೂ ತಮ್ಮದೇ ಆದ ಬದುಕಿನಲ್ಲಿ ಮುಳುಗಿಹೋಗುತ್ತಾರೆ. ಆದರೆ ಅದರ ನಡುವೆ ಸಂಬಂಧಗಳ ಆತ್ಮೀಯತೆ ಮಾತ್ರ ಏಕೆ ಕಳೆದುಹೋಗಬೇಕು?

ನನ್ನ ಪ್ರಕಾರ ಸಂಬಂಧಗಳು ಒಂದು ಮನೆಯ ಅಂಗಳದಲ್ಲಿರುವ ಗಿಡಗಳಿದ್ದಂತೆ. ಗಿಡಕ್ಕೆ ನೀರು ಹಾಕುವವರು ಒಬ್ಬರೇ ಆಗಿದ್ದರೆ ಎಷ್ಟು ದಿನ ಅದು ಹಸಿರಾಗಿ ಉಳಿಯಲು ಸಾಧ್ಯ? ಒಬ್ಬರು ಪ್ರೀತಿಯಿಂದ ನೀರು ಹಾಕುತ್ತಿದ್ದರೆ, ಮತ್ತೊಬ್ಬರು ಅದನ್ನು ನಿರ್ಲಕ್ಷಿಸಿದರೆ ಆ ಗಿಡ ಹೇಗೆ ಬೆಳೆಯಲು ಸಾಧ್ಯ?

ಸಂಬಂಧಗಳೂ ಹಾಗೆಯೇ. ಒಬ್ಬರು ಕರೆ ಮಾಡಬೇಕು, ಒಬ್ಬರೇ ಮಾತನಾಡಬೇಕು, ಒಬ್ಬರೇ ಹಬ್ಬಕ್ಕೆ ಕರೆಯಬೇಕು, ಒಬ್ಬರೇ ಎಲ್ಲರನ್ನೂ ಒಟ್ಟಿಗೆ ಸೇರಿಸಬೇಕು ಎಂದಾದರೆ ಅದು ಸಂಬಂಧ ಉಳಿಸುವ ಪ್ರಯತ್ನಕ್ಕಿಂತಲೂ ಒಂದು ರೀತಿಯ ಅನಿವಾರ್ಯತೆಯಾಗಿಬಿಡುತ್ತದೆ.

ಎಲ್ಲರಿಗೂ ಸ್ವಾಭಿಮಾನವಿರುತ್ತದೆ, ನೋವಿರುತ್ತದೆ, ನಿರೀಕ್ಷೆಗಳಿರುತ್ತವೆ. ಆದರೆ ಸಂಬಂಧಗಳ ವಿಷಯ ಬಂದಾಗ ಕೆಲವೊಮ್ಮೆ ನಮ್ಮ ಅಹಂಕಾರಕ್ಕಿಂತ ಆತ್ಮೀಯತೆ ದೊಡ್ಡದಾಗಬೇಕು. ಸಣ್ಣಪುಟ್ಟ ತಪ್ಪುಗಳನ್ನು ಮರೆತು, ಒಂದು ಹೆಜ್ಜೆ ಮುಂದೆ ಬಂದು ಮಾತನಾಡುವ ಮನಸ್ಸು ಇರಬೇಕು.

ಇಂದಿನ ಸಂಬಂಧಗಳು ಕೇವಲ ಸಮಾರಂಭಗಳಲ್ಲಿ ಒಟ್ಟಿಗೆ ನಿಂತು ಫೋಟೋ ತೆಗೆಸಿಕೊಂಡು, ಅದನ್ನು ಸ್ಟೇಟಸ್‌ನಲ್ಲಿ ಹಾಕಿಕೊಳ್ಳುವುದಕ್ಕಷ್ಟೇ ಸೀಮಿತವಾಗಿವೆಯೇ? ಫೋಟೋದಲ್ಲಿ ಎಲ್ಲರೂ ನಗುತ್ತಿರುತ್ತಾರೆ, ಒಟ್ಟಾಗಿರುವಂತೆ ಕಾಣುತ್ತಾರೆ. ಆದರೆ ಆ ಫೋಟೋದಾಚೆಗೂ ಅದೇ ಆತ್ಮೀಯತೆ, ಪ್ರೀತಿ ಮತ್ತು ಕಾಳಜಿ ಉಳಿದಿದೆಯೇ ಎಂಬ ಪ್ರಶ್ನೆ ಕಾಡುತ್ತದೆ. ಫೋಟೋದಲ್ಲಿ ಜೊತೆಯಾಗಿರುವುದಕ್ಕಿಂತ, ಬದುಕಿನ ಕಷ್ಟ-ಸುಖಗಳಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿರುವುದೇ ನಿಜವಾದ ಸಂಬಂಧವಲ್ಲವೇ?

ಇಂದು ಅನೇಕ ಕುಟುಂಬಗಳಲ್ಲಿ ಸಂಬಂಧಗಳು ಸಂಪೂರ್ಣವಾಗಿ ಮುರಿದುಹೋಗಿಲ್ಲ. ಆದರೆ ಮೊದಲಿನ ಆತ್ಮೀಯತೆಯೂ ಉಳಿದಿಲ್ಲ. ಮದುವೆ, ಮುಂಜಿ, ಶ್ರಾದ್ಧ, ಹಬ್ಬ ಹರಿದಿನಗಳಂತಹ ಸಮಾರಂಭಗಳಲ್ಲಿ ಮುಖಾಮುಖಿಯಾಗುತ್ತಾರೆ. ನಾಲ್ಕು ಮಾತು ಮಾತನಾಡುತ್ತಾರೆ, ಫೋಟೋ ತೆಗೆಸಿಕೊಳ್ಳುತ್ತಾರೆ, ಮತ್ತೆ ತಮ್ಮ ತಮ್ಮ ಬದುಕಿಗೆ ಹಿಂದಿರುಗುತ್ತಾರೆ.

ಹೊರಗಿನಿಂದ ನೋಡಿದವರಿಗೆ ಎಲ್ಲವೂ ಚೆನ್ನಾಗಿಯೇ ಕಾಣಬಹುದು. ಆದರೆ ಆ ಕುಟುಂಬದ ಒಳಗಿನ ದೂರ, ಮನಸ್ಸಿನಲ್ಲಿರುವ ನೋವು, ಹೇಳಲಾಗದ ಅಸಮಾಧಾನಗಳು ಯಾರಿಗೂ ಕಾಣಿಸುವುದಿಲ್ಲ.

ಕೆಲವೊಮ್ಮೆ ಸಂಬಂಧಗಳಲ್ಲಿ ಒಬ್ಬರು ಎಷ್ಟೇ ನೋವಾದರೂ ಎಲ್ಲರೂ ಒಟ್ಟಾಗಿರಲಿ ಎಂದು ಪ್ರಯತ್ನಿಸುತ್ತಾರೆ. ಯಾರಿಗಾದರೂ ಬೇಸರವಾಗಬಾರದೆಂದು ತಮ್ಮ ಮಾತುಗಳನ್ನು ನುಂಗಿಕೊಳ್ಳುತ್ತಾರೆ. ಹಬ್ಬಕ್ಕೆ ಕರೆಯುತ್ತಾರೆ, ವಿಚಾರಿಸುತ್ತಾರೆ, ತಪ್ಪು ತಿಳಿವಳಿಕೆಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ. ಆದರೆ ಅವರ ಪ್ರಯತ್ನಕ್ಕೆ ಎದುರಿನಿಂದ ಅದೇ ರೀತಿಯ ಪ್ರೀತಿ ಸಿಗದಿದ್ದಾಗ ನಿಧಾನವಾಗಿ ಅವರ ಮನಸ್ಸೂ ಸುಸ್ತಾಗುತ್ತದೆ.

ಒಂದು ದಿನ ಅವರೂ ಸುಮ್ಮನಾಗುತ್ತಾರೆ. ಆಗ ಮಾತ್ರ ಕೆಲವರಿಗೆ ಆ ವ್ಯಕ್ತಿಯ ಬೆಲೆ ಅರ್ಥವಾಗುತ್ತದೆ. ಏಕೆಂದರೆ ಯಾವಾಗಲೂ ಸಂಪರ್ಕದಲ್ಲಿದ್ದವರು ಒಂದು ದಿನ ಸಂಪರ್ಕ ಕಡಿತಗೊಳಿಸಿದಾಗಲೇ ಅವರ ಪ್ರಯತ್ನದ ಮಹತ್ವ ತಿಳಿಯುವುದು.

ಇಲ್ಲಿ ಒಂದು ಮಾತು ನೆನಪಿಡಬೇಕು. ಸಂಬಂಧ ಉಳಿಸಿಕೊಳ್ಳುವುದು ಎಂದರೆ ಎಲ್ಲವನ್ನೂ ಸಹಿಸಿಕೊಂಡು ಅವಮಾನಕ್ಕೆ ತಲೆಬಾಗುವುದಲ್ಲ. ಪರಸ್ಪರ ಗೌರವ, ಪ್ರೀತಿ ಮತ್ತು ಕಾಳಜಿ ಇರುವಲ್ಲಿ ಮಾತ್ರ ಸಂಬಂಧಕ್ಕೆ ನಿಜವಾದ ಅರ್ಥವಿರುತ್ತದೆ.

ಅಣ್ಣ-ತಮ್ಮಂದಿರಾಗಲಿ, ಅಕ್ಕ-ತಂಗಿಯರಾಗಲಿ, ಗಂಡ-ಹೆಂಡತಿಯಾಗಲಿ, ಬಂಧುಗಳಾಗಲಿ... ಯಾರೂ ಶಾಶ್ವತವಾಗಿ ನಮ್ಮ ಜೊತೆಯಲ್ಲಿರುತ್ತಾರೆ ಎಂಬ ಖಾತರಿ ಇಲ್ಲ. ಬದುಕು ಬಹಳ ಚಿಕ್ಕದು. ನಾಳೆ ಏನಾಗುತ್ತದೆ ಎಂಬುದೂ ಯಾರಿಗೂ ಗೊತ್ತಿಲ್ಲ.

ಹಾಗಿರುವಾಗ ನಮ್ಮವರ ಜೊತೆಯೇ ಮಾತಿನ ಅಂತರ, ಮನಸ್ಸಿನ ಅಂತರ, ಅಹಂಕಾರದ ಗೋಡೆಗಳನ್ನು ಕಟ್ಟಿಕೊಂಡು ಬದುಕುವುದರಲ್ಲಿ ಏನರ್ಥ?

ಒಂದು ಕುಟುಂಬವನ್ನು ಒಟ್ಟಾಗಿ ಇಡುವುದು ಒಂದೇ ರಕ್ತಸಂಬಂಧವಲ್ಲ; ಪರಸ್ಪರರ ಬಗ್ಗೆ ಇರುವ ಕಾಳಜಿ, ಸಮಯ ಕೊಡುವ ಮನಸ್ಸು, ತಪ್ಪುಗಳನ್ನು ಕ್ಷಮಿಸುವ ಗುಣ ಮತ್ತು ಒಬ್ಬರನ್ನೊಬ್ಬರು ಕಳೆದುಕೊಳ್ಳಬಾರದೆಂಬ ಪ್ರೀತಿಯೂ ಹೌದು.

ಸಂಬಂಧಗಳನ್ನು ಕಡಿದುಕೊಳ್ಳಲು ಒಂದು ಕ್ಷಣ ಸಾಕು. ಆದರೆ ಮತ್ತೆ ಮೊದಲಿನ ಆತ್ಮೀಯತೆಯನ್ನು ತಂದುಕೊಳ್ಳಲು ಕೆಲವೊಮ್ಮೆ ಇಡೀ ಜೀವನವೇ ಸಾಲುವುದಿಲ್ಲ.

ಹಾಗಾಗಿ ಸಂಬಂಧಗಳು ನಮ್ಮ ಕೈಯಲ್ಲಿರುವಾಗಲೇ ಅವುಗಳ ಬೆಲೆ ತಿಳಿಯೋಣ. ಯಾರು ಮೊದಲು ಮಾತನಾಡಿದರು, ಯಾರು ಮೊದಲು ಬಂದರು ಎಂಬ ಲೆಕ್ಕಾಚಾರ ಬಿಟ್ಟು, ನಮ್ಮವರು ಎಂಬ ಭಾವನೆಗೆ ಸ್ವಲ್ಪವಾದರೂ ಬೆಲೆ ಕೊಡೋಣ.

ಏಕೆಂದರೆ ಕೊನೆಗೆ ಬದುಕಿನಲ್ಲಿ ನಾವು ಕೂಡಿಡುವ ಆಸ್ತಿ, ಹಣ, ಅಂತಸ್ತಿಗಿಂತಲೂ ಕಷ್ಟದ ಸಮಯದಲ್ಲಿ ನಮ್ಮನ್ನು ಪ್ರೀತಿಯಿಂದ ವಿಚಾರಿಸುವ ನಾಲ್ಕು ಸಂಬಂಧಗಳೇ ನಿಜವಾದ ಸಂಪತ್ತು.

ಸಂಬಂಧಗಳನ್ನು ಉಳಿಸಿಕೊಳ್ಳಲು ಎಲ್ಲರೂ ಪರಿಪೂರ್ಣರಾಗಿರಬೇಕಿಲ್ಲ. ಆದರೆ ಎಲ್ಲರ ಮನಸ್ಸಿನಲ್ಲೂ ಸ್ವಲ್ಪವಾದರೂ ಪ್ರೀತಿ ಮತ್ತು ಪರಸ್ಪರರನ್ನು ಕಳೆದುಕೊಳ್ಳಬಾರದೆಂಬ ಭಾವನೆ ಇರಬೇಕು.


✍️ಎಲ್ಲೋ ಓದಿದ್ದು, ಮನಸ್ಸಿಗೆ ತಟ್ಟಿದ್ದು

God Bless


Posted 14/11/2026


No comments:

Post a Comment