Sunday, November 10, 2024

ಕನ್ನಡ ರಾಜ್ಯೋತ್ಸವ 2024 - ಶಿವರಾಮ ಕಾರಂತ ವೇದಿಕೆ.

 ಭಾನುವಾರ, ನವಂಬರ 10, 2024,  ಬೆಳಿಗ್ಗೆ 10 ಗಂಟೆಗೆ 

ವಿನಾಯಕ ದೇವಸ್ತಾನ, ಅರ್. ಟಿ. ನಗರ, ಬೆಂಗಳೂರು.

ಕನ್ನಡ ರಾಜ್ಯೋತ್ಸವ 2024

ಶಿವರಾಮ ಕಾರಂತ ವೇದಿಕೆ, ವಿನಾಯಕ ದೇವಸ್ತಾನ, ಮಂಥನ, ಇವರ ಜಂಟಿ ಆಶ್ರಯದಲ್ಲಿ ರಾಜ್ಯೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಸಂಪನ್ನ ಗೊಂಡಿತು.

ಶ್ರೀ ಬೈರಮಂಗಲ ರಾಮೇ ಗೌಡ 

ದೀಪ ಬೆಳಗುವಿಕೆ 

ಅರ್.ಟಿ. ನಗರ ಮಹಿಳೆಯರಿಂದ ನಾಡ ಗೀತೆ, ದೀಪ ಬೆಳಗುವಿಕೆ, ವೀರಶೇಖರ ಸ್ವಾಮಿ ಅವರಿಂದ ಸ್ವಾಗತ, ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷೆ ಡಾ. ದೀಪಾ ಫಡ್ಕೆ ಅವರಿಂದ ಪ್ರಸ್ತಾವಿಕ ಭಾಷಣ, ನಂತರ ಮುಖ್ಯ ಅತಿಥಿ ಶ್ರೀ ಬೈರಮಂಗಳ ರಾಮೇ ಗೌಡರಿಂದ ಉದ್ಘಾಟನಾ ಭಾಷಣ ನೆರವೇರಿತು.

ನಾಡ ಗೀತೆ 

ಅಧ್ಯಕ್ಷೆ ಡಾ ದೀಪಾ ಫಡ್ಕೆ 



ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ತಮ್ಮ ಭಾಷಣದಲ್ಲಿ ಕನ್ನಡ ಬಗ್ಗೆ ಕನ್ನಡಿಗರ ತಿರಸ್ಕಾರ, ಕನ್ನಡವನ್ನು ಬಳಸಿ, ಬೆಳೆಸಿ, ಉಳಿಸುವುದರ ಬಗ್ಗೆ ಸೊಗಸಾಗಿ  ಮಾತನಾಡಿದರು.


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳಿಂದ ನೃತ್ಯ, ಹಾಗೂ ಹಾಡಿನ ಕಾರ್ಯಕ್ರಮ ಚೆನ್ನಾಗಿ ನಡೆಯಿತು.




ನಾಲ್ಕು ಜನ ಗಣ್ಯರಿಗೆ - ಶ್ರೀ ಚಂದ್ರಶೇಖರ ಚಡಗ, ಶ್ರೀ ಭೋಜಪ್ಪ, ಶ್ರೀ ಲಕ್ಷ್ಮಿ ನಾರಾಯಣ್. ಶ್ರೀ ರಿಜಿ ಮೊಯಿನುದ್ದೀನ್ ಇವರಿಗೆ ವಿವಿಧ ಕ್ಷೇತ್ರಗಳಲ್ಲಿ , ಸಮಾಜಕ್ಕೆ ಕೊಡುಗೆಗಾಗಿ ಸನ್ಮಾನಿಸಲಾಯಿತು.

ಹಿರಿಯರಿಗೆ ಗೌರವ ಸನ್ಮಾನ 


ಶ್ರೀಯುತ ವೀರಶೇಖರ ಸ್ವಾಮಿಯವರ ನೇತ್ರತ್ವದಲ್ಲಿ ಕಾರ್ಯಕ್ರಮವು ಸುಗಮವಾಗಿ, ಅಚ್ಚುಕಟ್ಟಾಗಿ ನೆರವೇರಿತು.

ಪ್ರಜಾವಾಣಿ, 11/11/2024

ವಿಶ್ವವಾಣಿ

ಅವರಿಗೆ ಎಲ್ಲರ ಪರವಾಗಿ ಹಾರ್ದಿಕ ಅಭಿನಂದನೆಗಳು.


Nalini, Satybhama, Bhuvaneshwari

ವಿನಾಯಕ ದೇವಸ್ಥಾನದಿಂದ ಪ್ರಸಾದ (ಮೊಸರನ್ನ, ಪುಳಿಯೋಗರೆ, ಕೇಸರಿಬಾತ್ ) ವಿತರಣೆಯಾದ ನಂತರ ಕಾರ್ಯಕ್ರಮ ಮುಕ್ತಾಯವಾಯಿತು.

ವರದಿ :ಮಂಜುಳಾಭಾರ್ಗವಿ ( ಕಾರ್ಯದರ್ಶಿ.ಶಿವರಾಮ ಕಾರಂತ ವೇದಿಕೆ )

ಎಲ್ಲರಿಗೂ ನಮಸ್ಕಾರ... ತರಳಬಾಳು ಶಿವರಾಮ ಕಾರಂತ ವೇದಿಕೆ. ಹಾಗೂ ಶ್ರೀ ವಿನಾಯಕ ದೇವಸ್ಥಾನ ಸಮಿತಿ ಮತ್ತು ಮಂಥನ ಇವರ ಸಹಯೋಗದಲ್ಲಿ ನಡೆದ 69 ನೇ ಕನ್ನಡ ರಾಜ್ಯೋತ್ಸವದ ಒಂದು ವರದಿ.
ಶಿವರಾಮ ಕಾರಂತ ವೇದಿಕೆಯು  ಶ್ರೀ ಚಂದ್ರಶೇಖರ ಚಡಗರವರ ಪ್ರೀತಿಯ ಕನಸು. ಸುಮಾರು ಮೂವತ್ತು ವರ್ಷಗಳಿಂದ ಹಲವಾರು ಸುಪ್ರಸಿದ್ದ ಕವಿ, ಸಾಹಿತಿ, ಮಹೋದಯರನ್ನು ಸಭೆಗೆ ಕರೆಸಿ, ಅತ್ಯುನ್ನತ ಉಪನ್ಯಾಸಗಳನ್ನು ಹಾಗೂ ಸಾಹಿತ್ಯ ಚಟುವಟಿಕೆಗಳನ್ನು ನಡೆಸಿ ಕೊಡುತ್ತಾ ಬಂದಿದೆ. ಹಾಗೆ ಈ ದಿನ ರಾಜ್ಯೋತ್ಸವದ ಅಂಗವಾಗಿ ನಮ್ಮ ಬಿ. ಎಂ. ಶ್ರೀ ಪ್ರತಿಷ್ಠಾನದ ಅಧ್ಯಕ್ಷರು, ಸಾಹಿತ್ಯ ಪ್ರಿಯರೂ ಆದ ಡಾ.ಶ್ರೀ ಭೈರಮಂಗಲ ರಾಮೇಗೌಡರು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲು ಆಗಮಿಸಿ, ಕಾರ್ಯಕ್ರಮದ ಕಡೆಯ ಘಟ್ಟದವರೆಗೂ ನಮ್ಮ ಜೊತೆಯಲ್ಲಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲು ತಮ್ಮ ಕೈ ಜೋಡಿಸಿದ್ದು ನಿಜಕ್ಕೂ ನಮ್ಮ ಅದೃಷ್ಟವೇ ಸರಿ. ಕಾರ್ಯಕ್ರಮ ನಾಡಗೀತೆಯೊಂದಿಗೆ ಪ್ರಾರಂಭವಾಗಿ,ಶಿವರಾಮ ಕಾರಂತರ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಡಾ. ದೀಪಾ ಫಡ್ಕೆ ಯವರು ಹಾಗೂ ವೇದಿಕೆಯ ಪದಾಧಿಕಾರಿಗಳು ಉಪಾಧ್ಯಕ್ಷರು, ಕೋಶಧಿಕಾರಿಗಳು, ಕಾರ್ಯದರ್ಶಿಗಳನ್ನು ಒಳಗೊಂಡಂತೆ, ಭೈರಮಂಗಲ ರಾಮೇಗೌಡರ ನೇತೃತ್ವದಲ್ಲಿ ದೀಪ ಬೆಳಗುವ ಕಾರ್ಯ ಸರಾಗವಾಗಿ ಜರುಗಿತು.. ಹಲವು ಶಾಲಾ ಮಕ್ಕಳು ಮತ್ತು ಅಲ್ಲಿನ ಸ್ಥಳೀಯರು ಅದಕ್ಕೆ ಸಾಕ್ಷಿಯಾದದ್ದು ಕಾರ್ಯಕ್ರಮಕ್ಕೆ ಮೆರುಗು ತಂದು ಕೊಟ್ಟಿತ್ತು.ಮೊದಲಿಗೆ ಪ್ರಾಸ್ತಾವಿಕ ನುಡಿಗಳೊಂದಿಗೆ, ಸ್ವಾಗತ ಭಾಷಣವನ್ನು ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷೆ  ಡಾ. ದೀಪಾ ಫಡ್ಕೆ ಅವರು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದರು.ತಮ್ಮ ರಸವತ್ತಾದ ಮಾತುಗಳ ಮೂಲಕ, ಕನ್ನಡ ಭಾಷೆಯನ್ನು ಇನ್ನಷ್ಟು ಮೇರು ಮಟ್ಟಕ್ಕೆ ಕೊಂಡೊಯ್ಯುವ ಬಗ್ಗೆ, ಹಾಗೂ ತಮ್ಮ ಗ್ರಾಮೀಣ ಬದುಕಿನಲ್ಲಿ ಕನ್ನಡದ ಮಹತ್ವ, ಕನ್ನಡ ಭಾಷೆಯ ಉಳಿವಿಗಾಗಿ ಸಾರ್ವಜನಿಕರಾಗಿ, ಕರ್ನಾಟಕದ ಪ್ರಜೆಗಳಾಗಿ ನಾವೆಲ್ಲರೂ ಮಾಡಲೇ ಬೇಕಾದ ಕೆಲವು ಆದ್ಯ ಕರ್ತವ್ಯಗಳ ಬಗ್ಗೆ ನೆರೆದಿದ್ದ ಜನರನ್ನು ಎಚ್ಚರಿಸಿದರು. ಅಷ್ಟೇ ಅಲ್ಲದೆ ತಾವು ವಾಸ ಮಾಡುತ್ತಿರುವ ಸ್ಥಳದ ಬಗ್ಗೆ ಅತ್ಯಂತ ಸ್ವಾರಸ್ಯಕರವಾದ ಮಾತುಗಳನ್ನು ಹೇಳುತ್ತಾ, ಹಿರಿಯ ಸಾಹಿತಿಗಳಾದ ಪುರುಷೋತ್ತಮ ಬಿಳಿಮಲೆ ಅವರ ಕೆಲವು ಮಾತುಗಳನ್ನು ನೆನಪಿಸಿ ಕೊಳ್ಳುತ್ತಾ, ಕನ್ನಡ ಭಾಷೆಯನ್ನು,ಬೆಳೆಸುವ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿಯನ್ನು ತಿಳಿಸಿದರು. ನಂತರ ಬಿ. ಎಂ. ಶ್ರೀ. ಪ್ರತಿಷ್ಠಾನದ ಅಧ್ಯಕ್ಷರ ನುಡಿಗಳಿಗಾಗಿ ಕಾದು ಕುಳಿತಿದ್ದ ಜನರನ್ನು ನಿರಾಸೆಗೊಳಿಸದಂತೆ, ತಮ್ಮ ವಾಕ್ಚಾತುರ್ಯದಿಂದ ಕನ್ನಡದ ಸೊಬಗನ್ನು ಮತ್ತಷ್ಟು ಸುಂದರವಾಗಿಸಿದರು. ಕನ್ನಡ ಭಾಷಿಕರೆಂದೇ ಕರೆಸಿಕೊಂಡವರು, ಕನ್ನಡಮ್ಮನಿಗೆ ಮಾಡುತ್ತಿರುವ ಭಾಷಾ ನಿರ್ಲಕ್ಷ, ಪರಭಾಷೆಯನ್ನು ಪರೋಕ್ಷವಾಗಿ ನಾವು ಬೆಳೆಸುತ್ತಿರುವ ಪರಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಹಲವಾರು ಜನಾಂಗದ ಜನರು ಇಲ್ಲಿಗೆ ಬರುತ್ತಾರೆ, ತಮ್ಮ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಾ ನಮ್ಮ ಗ್ರಹಿಕೆಗೂ ಮೀರಿ,ತಮ್ಮ ಜೀವನಗಳನ್ನು ಕಟ್ಟಿ ಕೊಂಡು ತಮ್ಮ ಸ್ವಂತ ಹಳ್ಳಿ, ಊರುಗಳಿಗೆ ತೆರಳುತ್ತಾರೆ, ಭಾರತ ಒಂದು ಒಕ್ಕೂಟ ರಾಷ್ಟವಾದ ಕಾರಣ ವಲಸಿಗರನ್ನು ನಮ್ಮ ಕರ್ನಾಟಕಕ್ಕೆ ಬಾರದಂತೆ ತಡೆಯುವುದು ಅತ್ಯಂತ ಕಷ್ಟಕರ ಪರಿಸ್ಥಿತಿ, ಎಂದು ತಮ್ಮ ನಿರಾಸೆಯನ್ನು ಹೊರ ಹಾಕಿದರು.ಅಷ್ಟೇ ಅಲ್ಲದೆ ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಹವಾಮಾನ, ಇಲ್ಲಿನ ಭೌಗೋಳಿಕ ವ್ಯವಸ್ಥೆ ಎಲ್ಲವೂ ಅನೇಕರನ್ನು ಆಕರ್ಷಿಸಿದೆ.ಇದರಿಂದ ಅನೇಕ ವಲಸಿಗರು ಬೆಂಗಳೂರನ್ನು ಆಯ್ಕೆ ಮಾಡಿ ಕೊಂಡಿದ್ದಾರೆ. ಮತ್ತು ಇದು ಯಾವುದೊ ಒಂದು ಕಾರಣಕ್ಕೆ ಇಷ್ಟವಾಗಿ, ಹಲವಾರು ವರ್ಷಗಳ ಕಾಲ ಜನ ಇಲ್ಲೇ ವಾಸ ಇದ್ದರೂ ಕೂಡ, ಕನ್ನಡವನ್ನು ಕಲಿಯದೇ ಒಂದು ರೀತಿಯ ಅಸಡ್ಡೆ ತೋರುತ್ತಿದ್ದಾರೆ.ನಮ್ಮ ಜನರು ಯಾರ್ಯಾರು ಯಾವ ಭಾಷೆಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೋ ಆಯಾ ಭಾಷೆಗಳಲ್ಲಿಯೇ ಇಲ್ಲಿನ ಸ್ಥಳೀಯರು ಉತ್ತರ ಕೊಡುತ್ತಿದ್ದಾರೆ ಎಂಬ ಕಳವಳವನ್ನು ವ್ಯಕ್ತಪಡಿಸಿದರು. ಕನ್ನಡವನ್ನು ಉಳಿಸಿ, ಬೆಳೆಸುವ, ನಿಟ್ಟಿನಲ್ಲಿ ನಮ್ಮ ಜವಾಬ್ದಾರಿಯು ಅತ್ಯಂತ ಅನಿವಾರ್ಯವಾಗಿದೆ, ಇದು ಪ್ರತಿಯೊಂದು ಮನೆ ಮನೆಯ ಭಾಷೆಯಾಗಬೇಕೆ ಹೊರತು ವರ್ಷಕ್ಕೊಮ್ಮೆ ವೇದಿಕೆಗಳಲ್ಲಿ ಮಾಡುವ ಭಾಷಣಗಳಾಗಬಾರದು ಎನ್ನುವುದನ್ನು ಅತ್ಯಂತ ಸರಳವಾಗಿಯೂ, ಹಾಗೂ ಅತ್ಯಂತ ವಿನಯವಾಗಿಯೂ, ಪರೋಕ್ಷವಾಗಿ ಹೇಳಿದರು.ಸಾಮಾನ್ಯವಾಗಿ ಭಾಷಣಗಳೆoದರೆನೇ ಜನರು ಕಿವಿಗೊಟ್ಟು ಕೇಳದ ಈ ಕಾಲದಲ್ಲಿ, ನೆರೆದಿದ್ದ ಪ್ರತಿಯೊಬ್ಬರೂ ಒಂದೊಂದು ಮಾತುಗಳನ್ನು ಚಾಚುತಪ್ಪದೆ ಕೇಳಿಸಿ ಕೊಳ್ಳುತ್ತಿದ್ದುದ್ದು ಅವರ, ಮಾತಿನ ಶೈಲಿ, ಸ್ವಾರಸ್ಯಕರ ಘಟನೆಗಳ ಕುರಿತು, ಮಾಡಿದ ಪದಬಳಕೆ ಇವೆಲ್ಲವನ್ನು ಸಾಕ್ಷೀಕರಿಸುತ್ತಿದ್ದವು. ಸಭೆಗೆ ಶೋಭೆ ತರುವಂತಾ ನುಡಿಗಳಿಂದ ಎಲ್ಲರನ್ನು ಮೂಕ ವಿಸ್ಮಿತರನ್ನಾಗಿಸಿದ್ದವು. ಇದಾದ ನಂತರ ಹಲವಾರು ಮಕ್ಕಳ ನೃತ್ಯ ಹಾಗೂ ಕಲಾವಿದರ ಹಾಡುಗಳು ಕಾರ್ಯಕ್ರಮಕ್ಕೆ ಮುಡಿಸಿದ ಗರಿಗಳoತಿದ್ದವು. ಕಾರ್ಯಕ್ರಮದ ನಡುವೆ ಕನ್ನಡಾಂಬೆಯ ಹಾಡುಗಳಿಗೆ ಎಲ್ಲರ ದನಿಗೂಡಿದವು.ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದ ಸಮಾಧಾನ ಎಲ್ಲರ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಶ್ರೀ ವೀರಶೇಖರ ಸ್ವಾಮಿ (ಉಪಾಧ್ಯಕ್ಷ) - ವರದಿ 

ಕಾರ್ಯಕ್ರಮ ಮುಗಿದ ನಂತರ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು

Posted 14/11/2024


No comments:

Post a Comment