82. ಹೊಂಗಿರಣ - ನೆನಪುಗಳು
ನನಗಿನ್ನೂ ನಾವು ನಮ್ಮದೇ ಜಾಗದಲ್ಲಿ ಕಟ್ಟಡ ಕಟ್ಟಲು ಪ್ರಾರಂಭಿಸಿದ ಆ ದಿನಗಳ ನೆನಪು ಹಸಿಯಾಗಿದೆ. ಕಟ್ಟಡ ಶಿಲಾನ್ಯಾಸವನ್ನು ಶ್ರೀಯುತ ಕೆ.ವಿ. ಸುಬ್ಬಣ್ಣನವರು ಮಾಡಿದರು. ಜೊತೆಗೆ "ಇಡುವ ಪ್ರತೀ ಹೆಜ್ಜೆಯನ್ನು ಆಲೋಚಿಸಿ ಇಡಿ" ಎನ್ನುವ ಕಿವಿ ಮಾತನ್ನು ಕೂಡ ಹೇಳಿದರು.
ಕಟ್ಟಡ ಕಟ್ಟೋಣ ಸುಲಭದ ಕೆಲಸವಲ್ಲ. ನಮ್ಮ ಗಡಿಬಿಡಿಗೆ ಬೇಕಾದ ವೇಗದಲ್ಲಿ ಕಟ್ಟಡ ಕಟ್ಟಿ ಮುಗಿಯುವುದಿಲ್ಲ. ಕೆಲಸಗಾರರು ತಮ್ಮದೇ ಆದ ಓಘದಲ್ಲಿ ಕಟ್ಟುತ್ತಿರುತ್ತಾರೆ. ನಮಗಿರುವ ಅವಸರ ಅವರಿಗಿರುವುದಿಲ್ಲವಲ್ಲ! ಅವರಿಗೆ ಒಟ್ಟಿನಲ್ಲಿ ಅವರ ಕೆಲಸ ಆದರಾಯಿತು. ತೆಗೆದುಕೊಳ್ಳುವ ಸಮಯ ಎಷ್ಟಾದರೂ ಆವರಿಗೇನೂ ತಲೆ ಬಿಸಿ ಇರುವುದಿಲ್ಲ. ನಮಗೆ ಜೂನ್ ತಿಂಗಳು ಪ್ರಾರಂಭವಾಗುವುದರ ಒಳಗೆ ಕಟ್ಟೋಣ ಮುಗಿಸಬೇಕಾದ ಧಾವಂತ ಇತ್ತು. ಎರಡನೇ ಶೈಕ್ಷಣಿಕ ವರ್ಷದ ದಾಖಲಾತಿ ಕೂಡಾ ಮಾಡಲು ಪ್ರಾರಂಭಿಸಿ ಆಗಿತ್ತು. ಏಳನೇ ತರಗತಿಯವರೆಗೆ ಒಂದೊಂದು ಸೆಕ್ಷನ್ ಕ್ಲಾಸ್ ನಡೆಸಲು ಎಂಟು ಕೊಠಡಿಗಳು, ಒಂದು ಆಫೀಸು ರೂಮ್, ಒಂದು ಹಾಸ್ಟೆಲ್ ಕೊಠಡಿ, ಒಂದು ಲೈಬ್ರರಿ ಮತ್ತು ಲ್ಯಾಬ್ ಕೊಠಡಿ... ಹೀಗೆ ಹತ್ತನ್ನೆರಡು ಕೊಠಡಿಗಳ ಅಗತ್ಯವಿತ್ತು. ಪ್ರೈಮರಿಗಂತೂ ನಮ್ಮ ಕಲ್ಪನೆಯ ಅಷ್ಟ ಭುಜಾಕೃತಿಯ ಕೊಠಡಿಗಳು ನಮ್ಮ ಆದ್ಯತೆಯಾಗಿತ್ತು. ಕತ್ತಲಾದರೂ ಕೆಲಸಗಾರರನ್ನು ಹೋಗಬಿಡದೆ ಕೆಲಸ ಮಾಡಿಸುತ್ತಿತ್ತು. ಅಲ್ಲಿ ಅಡುಗೆ ಮಾಡಲು ವ್ಯವಸ್ಥೆ ಇರದಿದ್ದ ಕಾರಣ ಕಟ್ಟಡ ಕಟ್ಟುವ ಜಾಗದಲ್ಲಿಯೇ ಕಲ್ಲುಗಳನ್ನಿಟ್ಟು ರೇಖಾ, ಶಂಕರಿ ಅನ್ನ ಮಾಡಿ ಬಸಿಯುತ್ತಿದ್ದರು. ಕೆಲಸಗಾರರಿಗೂ ಊಟ ಕೊಡಬೇಕಾಗಿದ್ದ ಕಾರಣ ಅಲ್ಲಿಯೇ ಜುಗಾಡ್ ಅಡುಗೆ ಮಾಡಲಾಗುತ್ತಿತ್ತು. ಆಗ ಅದೆಲ್ಲ ಕೆಲವೊಮ್ಮೆ ಕಿರಿಕಿರಿ ಅನಿಸಿದರೂ ಈಗ ಅದರ ಬಗ್ಗೆ ಯೋಚಿಸಿದಾಗ ಥ್ರಿಲ್ ಆಗುತ್ತದೆ. ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಬದುಕನ್ನು ನಡೆಸಿ ಗೆದ್ದು ಬಂದ ಬಗ್ಗೆ ಹೆಮ್ಮೆ ಎನಿಸುತ್ತದೆ.
2004ರ ಜೂನ್ ನಲ್ಲಿ ಅರ್ಧಂಬರ್ಧ ಮುಗಿದ ಕಟ್ಟಡಗಳಲ್ಲಿ ಒಂದು ತಿಂಗಳು ತರಗತಿ ನಡೆಸಿದೆವು. ಜುಲೈ ಹೊತ್ತಿಗೆ ಹಿಡಿದಿದ್ದ ಕಟ್ಟಡ ಕೆಲಸ ಮುಗಿದು ನಾವೆಲ್ಲ ಹೊಂಗಿರಣ ಕ್ಯಾಂಪಸ್ ಗೆ ಶಿಫ್ಟ್ ಆದೆವು.
ಆಗೆಲ್ಲ ಒಂದಿದ್ದರೆ ಒಂದಿಲ್ಲದ ಕಾಲ. ಇನ್ನೂ ಕಚ್ಛಾ ಸ್ಥಿತಿಯಲ್ಲಿದ್ದ ಕ್ಯಾಂಪಸ್. ನಾನು, ರವಿ, ಮಕ್ಕಳು, ಶಂಕರಿ, ಅಡುಗೆಯ ಜಗ್ಗಣ್ಣ, ಕೆಲಸದವರು, ಹನ್ನೆರಡು ಹಾಸ್ಟೆಲ್ ಮಕ್ಕಳು, ಎಂಟ್ಹತ್ತು ಜನ ರೆಸಿಡೆನ್ಶಿಯಲ್ ಟೀಚರ್ಸ್... ಇದು 24/7 ಕ್ಯಾಂಪಸ್ಸಿನಲ್ಲಿ ಇರುತ್ತಿದ್ದ ಜನಸಂಖ್ಯೆ ಉಳಿದಂತೆ ಆ ವರ್ಷ ಒಟ್ಟಿನಲ್ಲಿ 160+ ಮಕ್ಕಳು ಹೊಂಗಿರಣದ ಆಸ್ತಿಯಾಗಿದ್ದರು. ಇರುವ ಸೀಮಿತ ಸೌಲಭ್ಯಗಳಲ್ಲಿ ನಾವೆಲ್ಲರೂ ಖುಷಿಯಾಗಿ ನಮ್ಮ ಕೆಲಸಗಳಲ್ಲಿ ತೊಡಗಿಕೊಂಡದ್ದು, ಮಕ್ಕಳನ್ನು ಮುಕ್ತ ವಾತಾವರಣದಲ್ಲಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಟ್ಟದ್ದು ಎಲ್ಲವು ಒಂದು ಕನಸಿನಲ್ಲಿ ನಡೆದಂತೆ ಅನಿಸುತ್ತಿದೆ. ಮಾಡಲೇ ಬೇಕೆನ್ನುವ ಮನಸ್ಸಿದ್ದಲ್ಲಿ, ಛಲವಿದ್ದಲ್ಲಿ ಆಗಬೇಕಾದ ಕೆಲಸ ಆಗಿಯೇ ಆಗುತ್ತದೆ ಎನ್ನುವುದಕ್ಕೆ ಹೊಂಗಿರಣ ಒಳ್ಳೆಯ ಉದಾಹರಣೆಯಲ್ವೆ?
81. ಹೊಂಗಿರಣ - ನೆನಪುಗಳು
ನಾವು 2003ರಲ್ಲಿ ಕಾಕಾಲ್ ಉಪ್ಪಿನಕಾಯಿ ಫ್ಯಾಕ್ಟರಿಯ ಗೋಡೌನ್ ನಲ್ಲಿ ಶಾಲೆ ಪ್ರಾರಂಭಿಸಿದ್ದೇನೋ ಸರಿ. ನಮ್ಮದೇ ಆದ ಸ್ವಂತ ಜಾಗ ಆಗಬೇಕಿತ್ತು. ಜಾಗದ ಹುಡುಕಾಟ ಅಮಟೆಕೊಪ್ಪದಲ್ಲಿಯೇ ಆಗಬೇಕಿತ್ತು. ಅಲ್ಲೋ ಎಲ್ಲಾ ಕಡೆ ಬರೀ ನೀಲಗಿರಿ ಅಥವಾ ಅಕೇಶಿಯ ಪ್ಲಾಂಟೇಶನ್. ಯಾರೂ ಜಾಗ ಮಾರುವವರಿರಲಿಲ್ಲ. ಹೀಗಾಗಿ ಮೈನ್ ರಸ್ತೆಯಿಂದ ಸ್ವಲ್ಪ ಒಳಗಿರುವ ಜಾಗ ಹುಡುಕತೊಡಗಿತು. ಆಗ ಕಂಡದ್ದು ಹೆಗ್ಗೋಡಿನ ಹಿರಿಯಣ್ಣ ಭಾಗಿಯವರ ಆರು ಎಕರೆ ಜಾಗ. ಮುಖ್ಯ ರಸ್ತೆಯಿಂದ ಒಳಗಿದ್ದ ಕಾರಣ ಅದಕ್ಕೆ ಅಪ್ರೋಚ್ ರೋಡಿನ ಅಗತ್ಯವಿತ್ತು. ಹೀಗಾಗಿ ಮತ್ತಿಕೊಪ್ಪದ ಜಯಪ್ರಕಾಶ್ ಹೆಗ್ಡೆಯವರಿಂದ ಅಪ್ರೋಚ್ ರಸ್ತೆಗಾಗಿ ಹತ್ತು ಗುಂಟೆ ಜಾಗ ಖರೀದಿಸಲಾಯಿತು. ತದನಂತರ ಭಾಗಿಯವರ ಆರು ಎಕರೆ ಜಮೀನನ್ನು ಖರೀದಿ ಮಾಡಿದೆವು. ಅದೊಂದು ಸಹಜವಾಗಿ ಇಳಿಜಾರಿದ್ದ ಜಾಗವಾಗಿತ್ತು. ಮಳೆನೀರು ಹರಿದು ಹೋಗುತ್ತಾ ಮಣ್ಣಿನ ಫಲವತ್ತತೆಯನ್ನೂ ತೆಗೆದುಕೊಂಡು ಹೋಗಿತ್ತು. ಜಾಗದ ಜಾರಿಕೆ ಜಾಸ್ತಿ ಇತ್ತು. ಆದರೆ ಅದೊಂದು ಸಹಜ ಸುಂದರವಾದ ಜಾಗವಾಗಿತ್ತು. ಸೊಪ್ಪಿನ ಬೆಟ್ಟವಾಗಿದ್ದ ಕಾರಣ ಮರಗಳೆಲ್ಲ ಮೋಟಾಗಿದ್ದವು. ಕವಲು ಮರಗಳೇ ಹೆಚ್ಚಿದ್ದವು. ಹೀಗಾಗಿ ನಾವು ಕಟ್ಟಡ ಕಟ್ಟುವಾಗ ಮರಗಳನ್ನು ಕಡಿಯುವ ಪ್ರಸಂಗ ಬಂದದ್ದು ಕಡಿಮೆ. ನಾವು ಕಟ್ಟಡ ಕಟ್ಟುವುದರ ಜೊತೆಗೆ ಬರಡಾಗಿದ್ದ ಆ ಜಾಗದಲ್ಲಿ ಗಿಡಮರ ಬೆಳೆಸಿ ಹಸಿರಾಗಿಸಿದ ತೃಪ್ತಿ ನನಗಿದೆ.
ಜಾಗದ ಖರೀದಿ ಆದ ಮೇಲೆ ನೀರಿಗಾಗಿ ಬಾವಿ ತೋಡಿಸಿದ್ದಾಯಿತು. ತದನಂತರ ಜಾಗದ ಮೇಲ್ತಟ್ಟಿನ ಎಡ ಪಕ್ಕದಲ್ಲಿ ಅಷ್ಟ ಭುಜಾಕೃತಿಯ ಆರು ತರಗತಿಯ ಕೋಣೆಗಳನ್ನು ಕಟ್ಟಲು ಪ್ರಾರಂಭಿಸಿತು. ಜೊತೆ ಜೊತೆಗೆ ಬಲ ಭಾಗದಲ್ಲಿ 24/20ರ ಅಳತೆಯ ಐದು ತರಗತಿಗಳಿದ್ದ ಉದ್ದನೆಯ ಕಟ್ಟಡವನ್ನು ಸಿಮೆಂಟಿಗೆ ಬದಲು ಜಂಬಿಟ್ಟಿಗೆ ಹಾಗೂ ಮಣ್ಣು ಬಳಸಿ ಕಟ್ಟಲಾಯಿತು. ಅದಕ್ಕೆ ಅಕೇಶಿಯ ಮರದ ಬೊಡ್ಡೆಯಿಂದ ಮಾಡನ್ನು ಮಾಡಿ ಹೆಂಚು ಹೊದಿಸಲಾಯಿತು. ಅಷ್ಟ ಭುಜಾಕೃತಿಯ ಕಟ್ಟಡಗಳ ಕೆಳತಟ್ಟಿನಲ್ಲಿ ಮಣ್ಣು, ಜಂಬಿಟ್ಟಿಗೆ, ಅಕೇಶಿಯ ಮರದ ತುಂಡುಗಳನ್ನು ಬಳಸಿ ಒಂದು ಸಣ್ಣ ಅಡುಗೆ ಮನೆ ಹಾಗೂ ಅಡಿಕೆ ಸೋಗೆ ಬಳಸಿ ಮಾಡಿದ ಊಟದ ಮನೆ ಹಾಗೂ ನಾನು, ರವಿ, ಮಕ್ಕಳು ಉಳಿಯಲು ಅದಕ್ಕೆ ತಾಗಿಕೊಂಡಂತೆ ಮಣ್ಣು, ಜಂಬಿಟ್ಟಿಗೆ, ಕಲ್ಲಿನ ಕಂಬ ಬಳಸಿ ಕಟ್ಟಿದ 15/20 ಅಡಿಯ ಒಂದು ಹಾಲ್ ಕಟ್ಟಿ ನೆಲಕ್ಕೆ ಕಡಪ ಕಲ್ಲನ್ನು ಹಾಸಲಾಯಿತು. ಹೀಗೆ 2004ರ ಜುಲೈ ತಿಂಗಳಲ್ಲಿ ನರ್ಸರಿಯಿಂದ ಏಳನೇ ತರಗತಿಯವರೆಗೆ ಸುಮಾರು 160 ಮಕ್ಕಳಿದ್ದ ಹಾಗೂ ಹಾಸ್ಟೆಲ್ ನಲ್ಲಿ ಉಳಿಯುವ ಹನ್ನೆರಡು ಮಕ್ಕಳು ಎಂಟ್ಹತ್ತು ಟೀಚರ್ಸ್ ಇದ್ದ "ಹೊಂಗಿರಣ" ತನ್ನದೇ ಸ್ವಂತ ಸ್ಥಳದಲ್ಲಿ ಕಾರ್ಯ ಪ್ರವೃತ್ತವಾಯಿತು.
80. ಪರಿಸರ - ಭೀಮೇಶ್ವರ
ಕೋಗಾರು ಘಾಟಿಯಲ್ಲಿರುವ ಭೀಮೇಶ್ವರ ನಮ್ಮಲ್ಲಿಂದ ಸುಮಾರು 80 ಕಿಮೀ ದೂರದಲ್ಲಿದೆ. ಅದೊಂದು ಅದ್ಭುತವಾದ ಸ್ಥಳ. ಕಾರ್ಗಲ್ ನಿಂದ ಮುಂದೆ ಅರಲಗೋಡು, ಸಂಪ, ಮುಪ್ಪಾನೆ, ಕಾನೂರು... ಈ ಎಲ್ಲಾ ಊರುಗಳನ್ನು ದಾಟುತ್ತಾ ಆ ರಸ್ತೆಯಲ್ಲಿ ಸಾಗುವಾಗ ಇಕ್ಕೆಲದಲ್ಲಿರುವ ದಟ್ಟ ಕಾಡುಗಳು ಕಣ್ತಣಿಸುತ್ತವೆ. ಹಾಗೇ ಸಾಗುತ್ತಾ ಮುಂದೆ ಹೋಗುವಾಗ ಬಲಗಡೆಯಲ್ಲೊಂದು "ಭೀಮೇಶ್ವರಕ್ಕೆ ದಾರಿ" ಎನ್ನುವ ಸಣ್ಣ ನಾಮ ಪಲಕ ಕಾಣಸಿಗುತ್ತದೆ. ಅಲ್ಲಿ ಮಣ್ಣ ರಸ್ತೆಯಲ್ಲಿ ಬಲಕ್ಕೆ ತಿರುಗಿ ಮೂರ್ನಾಲ್ಕು ಕಿಮೀ ಸಾಗಿದರೆ ಭೀಮೇಶ್ವರ ಸಿಗುತ್ತದೆ. ಅಲ್ಲಿ ಅರೆ ಕಾಮಗಾರಿಯಾದ ಸೇತುವೆಯ ಸಮೀಪ ವಾಹನ ನಿಲ್ಲಿಸಿ ಎರಡು ಕಿಮೀ ದೂರವನ್ನು ದಟ್ಟಕಾನನದ ನಡುವಿನ ಏರಿಳಿತದ ರಸ್ತೆಯಲ್ಲಿ ನಡೆಯುತ್ತಾ ಸಾಗುವುದೇ ಚಂದ. ಮೌನ ಸದೃಶವಾದ ಆ ದಾರಿಯಲ್ಲಿ ಸಾಗುವಾಗ ಹಕ್ಕಿಗಳ ಕಲರವ, ಚಿಟ್ಟೆಗಳ ಹಾರಾಟ, ಕಾಲ್ಕೆಳಗಿನ ಒಣ ಎಲೆಗಳ ಶಬ್ದ ಮನಸ್ಸಿಗೆ ಹಿತ ನೀಡುತ್ತದೆ. ಮಳೆಗಾಲದಲ್ಲಾದರೆ ಜಿಗಣೆಗಳು ನಮಗೆ ಗೊತ್ತಿಲ್ಲದ ಹಾಗೆ ನಮ್ಮ ಕಾಲ್ಗಳನ್ನು ಅಲಂಕರಿಸಿ ಬಿಟ್ಟಿರುತ್ತವೆಭೀಮೇಶ್ವರದ ಭಟ್ಟರ ಮನೆಯಿಂದ ಮುಂದಿರುವುದು ಕೇವಲ ಏರು ನಡಿಗೆ. ಏದುಸಿರು ಬಿಡುತ್ತಾ ಮೇಲೇರಿದರೆ ಎಡಕ್ಕೆ ಕಾಣುವುದು ಶಿಲೆಗಲ್ಲಿನ ಒಂದು ಪುರಾತನ ದೇವಸ್ಥಾನ ಹಾಗೂ ಬಲಕ್ಕಿರುವುದು ಬಂಡೆಯ ಮೇಲಿಂದ ಅಗಾಧವಾಗಿ ಚಿಮ್ಮುವ ಜಲರಾಶಿ. ಅದೊಂದು ಅದ್ಬುತ ಸುಮನೋಹರ ದೃಶ್ಯ. ಸ್ವಲ್ಪ ಸರ್ಕಸ್ ಮಾಡಿ ಗುಡ್ಡವನ್ನೇರಿ ಜಲರಾಶಿ ಮೈಗೆ ರಾಚುವ ಸುಖವನ್ನು ಅನುಭವಿಸಬಹುದು ಕೂಡಾ. ಆ ಜಲಪಾತದಲ್ಲಿ ಉರಿ ಬೇಸಿಗೆಯಲ್ಲೂ ಸ್ವಲ್ಪವಾದರೂ ನೀರು ಇದ್ದೇ ಇರುತ್ತದೆ. ಅಲ್ಲಿ ನಾವು ಮಾತ್ರ ಇರುವುದಲ್ಲ; ಮಂಗಗಳ ಸೈನ್ಯವೇ ಇರುತ್ತದೆ. ಉಳಿದಂತೆ ದೇವಸ್ಥಾನದ ಭಟ್ಟರು ಬಿಟ್ಟರೆ ಮತ್ತಾವ ನರಪಿಳ್ಳೆಯೂ ಕಣ್ಣಿಗೆ ಕಾಣುವುದಿಲ್ಲ. ನಾನು ಇತ್ತೀಚಿನ ವರ್ಷಗಳಲ್ಲಿ ಅಲ್ಲಿಗೆ ಹೋಗಿಲ್ಲ. ನಾಲ್ಕಾರು ಬಾರಿ ಹೋದದ್ದು ಕೂಡಾ ಈಗ್ಗ್ಯೆ ನಾಲ್ಕೈದು ವರ್ಷಗಳ ಹಿಂದೆ. ಈಗೇನಾದರೂ ರಸ್ತೆ ಅಭಿವೃದ್ಧಿ ಆಗಿರಬಹುದು. ಅದೇನೆ ಇರಲಿ, ನಾನು ಪ್ರತಿ ಬಾರಿ ಹೋದಾಗಿನ ನನ್ನ ಅನುಭವ ಅವಿಸ್ಮರಣೀಯವಾಗಿತ್ತು ಅಂದರೆ ಆಶ್ಚರ್ಯಪಡಬೇಕಾದ್ದಿಲ್ಲ. ಎಲ್ಲರೂ ತಪ್ಪದೆ ನೋಡಲೇಬೇಕಾದ ಬಹಳ ವಿಶಿಷ್ಟವಾದ ಜಾಗವದು!
79. ಹೊಂಗಿರಣ - ನೆನಪುಗಳು.
ನಾವು ಶಾಲೆ ಪ್ರಾರಂಭಿಸಿದ ವರ್ಷ. ಕಾಕಾಲ್ ಉಪ್ಪಿನಕಾಯಿ ಫ್ಯಾಕ್ಟರಿಯ ಗೋಡೌನ್ ನ್ನು ನಮಗೆ ಬೇಕಾದ ಹಾಗೆ ವ್ಯವಸ್ಥೆ ಮಾಡಿಕೊಂಡು ಶಾಲೆಯ ಹೆಸರನ್ನು ಕಟ್ಟಡದ ಹೊರಗೆ ಬರೆಸಿಯೂ ಆಯಿತು. ಮೇ ತಿಂಗಳಲ್ಲಿ ಕೇವಲ ಆಫೀಸ್ ರೂಮ್ ನ ವ್ಯವಸ್ಥೆ ಮಾಡಿಕೊಂಡು ಹೆಗ್ಗೋಡಿನ ಸುತ್ತಮುತ್ತದ ಹಳ್ಳಿಗಳಿಗೆ ನಮ್ಮ ಅಂಬಾಸಿಡರ್ ಕಾರಿನಲ್ಲಿ ಪಬ್ಲಿಸಿಟಿಗಾಗಿ ತಿರುಗಾಟ ಶುರು ಮಾಡಿದ್ದಾಯಿತು. ಮಕ್ಕಳಿರಲಿ ಬಿಡಲಿ ಎಲ್ಲಾ ಮನೆಗಳಿಗೂ ಭೇಟಿ ನೀಡಿ ನಾವು ಶಾಲೆ ಪ್ರಾರಂಭಿಸುತ್ತಿರುವುದರ ಬಗ್ಗೆ ತಿಳಿಸಿ ಮಕ್ಕಳ ದಾಖಲಾತಿಗಾಗಿ ಅವರ ಸಹಾಯ ಹಸ್ತ ಕೇಳಿದ್ದಾಯಿತು. ಆಸಕ್ತ ಪಾಲಕರಿರುವ ಹಳ್ಳಿಗಳ ಯಾರದಾದರೂ ಒಬ್ಬರ ಮನೆಯಲ್ಲಿ ಎಲ್ಲರನ್ನು ಸೇರಿಸಿ ಮೀಟಿಂಗ್ ಮಾಡಿದ್ದಾಯಿತು. ಮೇ ತಿಂಗಳು ಕಳೆಯುತ್ತಾ ಬಂದರೂ ಒಂದೂ ಅಪ್ಲಿಕೇಶನ್ ತಗೊಂಡು ಹೋದವರಿಲ್ಲ, ಅಡ್ಮಿಷನ್ ಮಾಡಿಸಿದವರಿಲ್ಲ. ಈ ರೀತಿಯ ಪ್ರತಿಕ್ರಿಯೆ ಸ್ವಲ್ಪ ಮಟ್ಟಿಗೆ ನಮ್ಮ ಧೃತಿಗೆಡಿಸಿದ್ದಂತೂ ನಿಜ. ಏನಾದರೂ ಸರಿ ಎಂದು ಒಂದೈವತ್ತು ಮಕ್ಕಳಿಗಾಗುವಷ್ಟು ಡೆಸ್ಕ್ ಮಾಡಿಸಿ ಪುಟಾಣಿ ಖುರ್ಚಿಗಳನ್ನು ತರಿಸಿದೆವು. ನಾಲ್ಕು ಜನ ಟೀಚರ್ಸ್ ನ್ನು ಅಪಾಯಿಂಟ್ ಮಾಡಿದೆವು. ಜೂನ್ ಒಂದನೇ ತಾರೀಖು ಬಂದರೂ ಒಂದು ಮಗುವಿನ ದಾಖಲಾತಿ ಕೂಡಾ ಆಗಲಿಲ್ಲ. ಹೊರಗಿನ ಗೇಟ್ ಸ್ವಲ್ಪ ಶಬ್ದವಾದರು ಕೂಡಾ ಆಫೀಸಿನ ಒಳಗೆ ನಾವು ಅಲರ್ಟ್ ಆಗಿ ಬಂದವರನ್ನು ಎದುರುಗೊಳ್ಳಲು ತಯಾರಾಗಿ ಕುಳಿತುಕೊಳ್ಳುತ್ತಿದ್ದುದನ್ನು ಜ್ಞಾಪಿಸಿಕೊಂಡರೆ ಈಗ ನಗು ಬರುತ್ತದೆ. ಗೇಟ್ ಶಬ್ದವಾಗುತ್ತಿತ್ತೇ ವಿನಃ ಒಳಗೆ ಬರುವವರು ಯಾರೂ ಇರುತ್ತಿರಲಿಲ್ಲ ಏನಾದರಾಗಲಿ ಅಂತ "ಜೂನ್ 4ಕ್ಕೆ ತರಗತಿಗಳು ಪ್ರಾರಂಭವಾಗಲಿದೆ" ಎಂಬ ನೋಟ್ ಒಂದನ್ನು ಆಸಕ್ತ ಪಾಲಕರಿಗೆ ಕಳಿಸಿದೆವು. ಕೊನೆಗೂ ಆ ನೋಟ್ ಕೆಲಸ ಮಾಡಿತು ಅಂತ ಆಯಿತು. ಜೂನ್ ನಾಲ್ಕರಂದು ಸುಮಾರು ನಲವತ್ತು ಮಕ್ಕಳ ದಾಖಲಾತಿಯಾಯಿತು. ಸಣ್ಣ ಪೂಜೆ ಮಾಡಿ ಅಂದು ಪಾಠಪ್ರವಚನವನ್ನು ಪ್ರಾರಂಭಿಸಿದೆವು. ತದನಂತರದಲ್ಲಿ ಏಳೆಂಟು ಮಕ್ಕಳ ದಾಖಲಾತಿಯಾಗಿ ಶಾಲೆ ತನ್ನ ಕಾರ್ಯ ಚಟುವಟಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿತು.
ಆ ಒಂದೆರಡು ತಿಂಗಳುಗಳ ಆತಂಕದ ಕಾಯುವಿಕೆ ತುಂಬಾ ತಾಳ್ಮೆಯನ್ನು ಕಲಿಸಿತು. ಕಾಯುವಿಕೆಗಿಂತ ತಪವು ಬೇರೆ ಇಲ್ಲ; ತಾಳಿದವನು ಬಾಳಿಯಾನು ಎಂಬೆಲ್ಲ ವಿಷಯಗಳ ನಿಜರೂಪದ ಅರ್ಥವಾದದ್ದಂತೂ ಸತ್ಯ. ಯಾವುದೇ ಕೆಲಸವನ್ನು ನಾವು ಮಾಡುವಾಗ ನಮ್ಮ ಶ್ರಮ ಎಷ್ಟೇ ಇರಲಿ ಅದು ನಮ್ಮೆಣಿಕೆಯಂತೆಯೇ ಆಗದೆ ಅದರದ್ದೇ ಆದ ಓಘದಲ್ಲಿ, ರೀತಿಯಲ್ಲಿ ಆಗುತ್ತದೆನ್ನುವುದನ್ನು ನಾನು ಇಷ್ಟು ವರ್ಷಗಳ ಅನುಭವದಲ್ಲಿ ಅರಿತು ಕೊಂಡಿದ್ದೇನೆ. ಆದರೂ ಹಿಡಿದ ಕೆಂಕರ್ಯವನ್ನು ಮುಂದುವರಿಸುತ್ತಾ "ಬಿಡದೆ ಯತ್ನವ ಮಾಡು" ಎನ್ನುವ ಧ್ಯೇಯ ವಾಕ್ಯದೊಂದಿಗೆ ಮುಂದುವರಿದ ಹೊಂಗಿರಣ ಈಗ ತನ್ನ ಹದಿನೆಂಟನೆಯ ಹರೆಯಕ್ಕೆ ಕಾಲಿಟ್ಟಿದೆ.
78. ಕವಲೇ ದುರ್ಗ - ಅನುಭವ
ಕವಲೇದುರ್ಗ ನಮ್ಮಲ್ಲಿಂದ ಸುಮಾರು 70 ಕಿಮೀ ದೂರದಲ್ಲಿರುವ ಪ್ರವಾಸಿತಾಣ. 2017ರಲ್ಲಿ ನಾನು, ನನ್ನ ಮಕ್ಕಳು, ನನ್ನ ಕಸಿನ್ಸ್ ಎಲ್ಲಾ ಸೇರಿ ಸುಮಾರು ಹತ್ತನ್ನೆರಡು ಜನ ಬೆಳಿಗ್ಗೆ ತಿಂಡಿ ತಿಂದು, ಊಟ ಕಟ್ಟಿಕೊಂಡು ಮೂರು ಕಾರುಗಳಲ್ಲಿ ಕವಲೆದುರ್ಗದತ್ತ ಪಯಣಿಸಿತು. ಎರಡು ಗಂಟೆಗಳ ಪಯಣ. ಸೆಪ್ಟೆಂಬರ್ ನ ಮಳೆ ಸುರಿಯುತ್ತಿದ್ದ ಸಮಯ. ಮಳೆಯಲ್ಲಿಯೇ ಪಯಣ ಸಾಗಿತು. ಕವಲೆದುರ್ಗದ ಎರಡು ಕಿಮಿ ಹಿಂದೆ ವೆಹಿಕಲ್ ಪಾರ್ಕಿಂಗ್ ನಲ್ಲಿ ಕಾರುಗಳನ್ನು ನಿಲ್ಲಿಸಿ ಗದ್ದೆಯ ಅಂಚುಕಟ್ಟಿನ ಮೇಲೆ ನಮ್ಮ ನಡಿಗೆ ಪ್ರಾರಂಭವಾಯಿತು. ಆ ಅಂಚುಕಟ್ಟು ಊರಿನ ನೆನಪನ್ನು ತರಿಸಿತು. ಕವಲೆದುರ್ಗದ ಬುಡ ತಲುಪಿದಾಗ ನನ್ನನ್ನೂ ಸೇರಿ ನಮ್ಮಲ್ಲಿ ಕೆಲವರ ಶಕ್ತಿ ಉಡುಗಿ ಹೋಗಿತ್ತು. ಆದರೂ ಉಮೇದಿನಿಂದ ಮುಕ್ಕಾಲು ಕೋಟೆ ಹತ್ತಿದೆವು. ತದನಂತರ ನಾನು, ಜ್ವರ ಬಂದಿದ್ದ ನನ್ನ ಮಗಳು, ನನ್ನ ಅಕ್ಕ, ತಂಗಿ ದೇವಸ್ಥಾನದ ಕಟ್ಟೆಯಲ್ಲಿ ಕೈಲಾಗದೆ ಕುಳಿತು ಬಿಟ್ಟೆವು. ನಮ್ಮ ಡಿಂಗನಾದಿಯಾಗಿ ಉಳಿದವರೆಲ್ಲ ಕವಲೆದುರ್ಗದ ತುತ್ತತುದಿಯವರೆಗೆ ಹೋಗಿ ಅಲ್ಲಿನ ಅಭೂತಪೂರ್ವ ಸೌಂದರ್ಯವನ್ನು ಆಸ್ವಾದಿಸಿ ಬಂದರು. ನಾವು ಆ ದೇವಸ್ಥಾನದ ಸುತ್ತಮುತ್ತಲಿನ ಸೌಂದರ್ಯವನ್ನು ನೋಡಿ ತೃಪ್ತಿ ಪಟ್ಟೆವು.
ಕೋಟೆಯಲ್ಲಿದ್ದ ಅಲ್ಲಲ್ಲಿನ ದಿಡ್ಡಿ ಬಾಗಿಲುಗಳು, ಕೆರೆಗಳು, ಅಗಲವಾದ ಮೆಟ್ಟಿಲುಗಳು, ಕಾವಲುಗಾರರ ಕಾವಲು ಕೊಠಡಿಗಳು, ಚಿತ್ತಾರದ ದೊಡ್ಡ ಗೋಡೆಗಳು, ಕಣ್ತಣಿಯುವ ಹಸಿರ ಸಿರಿ, ಮೇಲೇರುತ್ತಿದ್ದಂತೆ ಕೆಳಗೆ ಕಾಣುವ ಬಳುಕುತ್ತಾ ಹರಿಯುವ ನದಿ, ತೋಟಗಳು, ಪುಟ್ಟಪುಟ್ಟದಾಗಿ ಕಾಣುವ ಊರುಗಳು, ಮೋಡಾವೃತ ಗುಡ್ಡಗಳು... ಒಂದೇ ಎರಡೇ! ಬಣ್ಣನೆಗೆ ಮೀರಿದ ಸೌಂದರ್ಯದ ಕಣಜವದು. ದುರ್ಗದ ತುತ್ತತುದಿಗೆ ಹೋದವರಿಗೆ ಸ್ವರ್ಗ ಲೋಕವನ್ನೇ ಕಂಡ ಅನುಭವ.ಅದೊಂದು ರೀತಿ ಧರೆಗಿಳಿದ ಸ್ವರ್ಗ ಅಂದರೆ ತಪ್ಪಾಗಲಾರದು.
77. ಅನುಭವ - ನೆನಪುಗಳು (ಮೇಘಾಲಯ)
ನನ್ನ ಶಿಕ್ಷಣ ಮಿತ್ರೆಯಾದ ಮಾಲತಿಯ ಒತ್ತಾಯಕ್ಕೆ ಮಣಿದು ಮೇಘಾಲಯದ ತುರಾದಲ್ಲಿ 2018ರ ನವೆಂಬರ್ ನಲ್ಲಿ ಅಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕರ ತರಬೇತು ಕಾರ್ಯಾಗಾರಕ್ಕೆ ತರಬೇತುದಾರಳಾಗಿ ಹೋಗಿದ್ದೆ. ಶಿಕ್ಷಕರಿಗೆ ತರಬೇತಿಗಿಂತ ಬೇಕಾದುದು ಕಲಿಕೆಯ ಪ್ರಕ್ರಿಯೆಯನ್ನು ಗ್ರಹಿಸುವ ಮನಸ್ಥಿತಿ ಎಂಬುದು ಒಬ್ಬ ಶಿಕ್ಷಕಿಯಾಗಿ ನನ್ನ ಅನಿಸಿಕೆಯಾದರೂ ತರಬೇತಿ ನೀಡಲು ಒಪ್ಪಿದ್ದೆ.
ಭಾರತದ ಈಶಾನ್ಯ ರಾಜ್ಯಕ್ಕೆ ನನ್ನ ಪ್ರಥಮ ಭೇಟಿ ಅದು. ನನ್ನ ಜೊತೆಗೆ ನನಗೆ ಹಿಂದೆ ನವೋದಯದಲ್ಲಿ ಪ್ರಾಂಶುಪಾಲರಾಗಿದ್ದ ಶ್ರೀಮತಿ ಶೋಭಾ ಡವ್ ರವರೂ ಇದ್ದರು. ಗೌಹಾತಿಯ ಏರ್ ಪೋರ್ಟಿನಿಂದ ನಮ್ಮನ್ನು ತುರಾಕ್ಕೆ ಕರೆದೊಯ್ಯಲು ಟ್ಯಾಕ್ಸಿಯ ವ್ಯವಸ್ಥೆ ಇತ್ತು. ಸುಮಾರು 4 ಘಂಟೆಯ ಪ್ರಯಾಣ. ಪಯಣ ಸಾಗುತ್ತಿದ್ದಂತೆ ನನಗೆ ನಾನು ಮಲೆನಾಡಿನ ಯಾವುದೋ ಪ್ರದೇಶದಲ್ಲಿ ಇದ್ದಂತಹ ಅನುಭವ. ತಿರುವು ಮುರುವಿನ ಒಳ್ಳೆಯ ಗುಣಮಟ್ಟದ ಘಾಟ್ ರಸ್ತೆ. ಕಾಡಿನೊಳಗೆ ಸಹಜವಾಗಿ ಬೆಳೆದ ಅಡಿಕೆ ಮರಗಳು. ರಸ್ತೆಯ ಇಕ್ಕೆಲದಲ್ಲೂ ದಟ್ಟವಾದ ಕಾಡುಗಳು. ಪ್ರತಿ ತಿರುವಿನಲ್ಲೂ ಕಾಣುವ ಸುಂದರ ಬೆಟ್ಟದ ಸಾಲುಗಳು, ಕಣಿವೆಗಳು. ಆಚೀಚೆಯ ಪ್ರಕೃತಿ ಸೌಂದರ್ಯವನ್ನು ನೋಡುತ್ತಾ ದಾರಿ ಸವೆದದ್ದೇ ಗೊತ್ತಾಗಲಿಲ್ಲ. ಅಲ್ಲಿ ಸಂಜೆ ನಾಲ್ಕೈದು ಗಂಟೆಗೆಲ್ಲ ಸೂರ್ಯಾಸ್ತವಾಗುವ ಕಾರಣ ನಮ್ಮ ಪಯಣದ ಬಹಳ ಭಾಗ ಸೂರ್ಯಾಸ್ತಮಾನದ ಕಿತ್ತಳೆ ವರ್ಣದ ಆಕಾಶವನ್ನು ನೋಡುವ ಭಾಗ್ಯ ನಮಗೆ ಸಿಕ್ಕಿತು. ಊರಿದ್ದಲ್ಲಿ ರಸ್ತೆಯ ಪಕ್ಕದಲ್ಲಿ ನೀರಿನ ಹರವು, ಆದರ ಮೇಲೊಂದು ಬಿದಿರಿನ ಸಂಕ, ನಂತರದಲ್ಲಿ ಮನೆಗಳು. ಆ ನೀರಿನಲ್ಲಿ ತಾವರೆ ಹೂವುಗಳು , ತಾವರೆಯ ಅಗಲವಾದ ಎಲೆಗಳು. ಒಂದು ರೀತಿಯ ಸಸ್ಯ ಸಮೃದ್ಧತೆ. ಒಟ್ಟಿನಲ್ಲಿ ಹೇಳುವುದಾದರೆ ಎಲ್ಲಿ ನೋಡಿದರೂ ಅಲ್ಲಿ ಕಣ್ಣಿಗೆ ಹಿತವಾಗಿ ಕಾಣುವ ಪರಿಸರ.
ಉಳಿಯಲು ವ್ಯವಸ್ಥೆ ಮಾಡಿದ ಜಾಗವೂ ಚೆನ್ನಾಗಿತ್ತು. ಗೌಜು ಗದ್ದಲದಿಂದ ದೂರವಿದ್ದ ಹಸಿರಿನ ತಪ್ಪಲಲ್ಲಿದ್ದ ಜಾಗವದು. ತರಬೇತು ಕೇಂದ್ರ ಮಾತ್ರ ನಗರದ ನಡುವಿನಲ್ಲಿತ್ತು. ಸ್ವಲ್ಪ ಅಳುಕಿನಲ್ಲಿಯೇ ನನಗೆ ಕೊಟ್ಟಿದ್ದ ಐವತ್ತು ಶಿಕ್ಷಕರೊಡನೆ ಸಂವಹನ ಮಾಡಲು ತೊಡಗುತ್ತಿದ್ದಂತೆಯೆ ಅವರ ಮುಗ್ಧ ಮನಸ್ಸು, ಪಾಠ ಪ್ರವಚನಗಳಲ್ಲಿ ಅವರಿಗಿದ್ದ ಸೀಮಿತ ಅನುಭವ, ತಂತ್ರಜ್ಞಾನದ ಉಪಯೋಗಿಸುವಿಕೆಯ ಅನನುಭವ, ಶಿಕ್ಷಣ ಕ್ಷೇತ್ರದ ನವನವೀನ ವಿಧಾನಗಳ ಪರಿಚಯದ ಕೊರತೆಗಳ ಅರಿವಾಯಿತು. ಪ್ರಪ್ರಥಮ ಬಾರಿಗೆ ಅವರಿಗೆ ತರಬೇತಿ ಸಿಗುತ್ತಿದ್ದ ಕಾರಣ ಅದನ್ನವರು ಹಾರ್ದಿಕವಾಗಿ ಸ್ವೀಕರಿಸಿದ್ದರು. ನಮ್ಮಲ್ಲಿರುವ ವಿಪುಲ ಅವಕಾಶಗಳಿಗೂ ಯಾವುದೇ ಅವಕಾಶಗಳು ಸಿಗದೇ ಇರುವ ಅವರ ಸ್ಥಿತಿಗೂ ಇರುವ ಅಗಾಧ ಅಂತರವನ್ನು ಕಂಡು ಖೇದವಾಯಿತು. ಮೊದಲ ದಿನ ಅಪರಿಚಿತರಾಗಿದ್ದ ಅವರೆಲ್ಲ ಆರನೇ ದಿನಕ್ಕೆ ನನ್ನವರಾಗಿದ್ದರು. ಅವರು ತರಬೇತಿಯಲ್ಲಿ ಒಳಗೊಳ್ಳುತ್ತಿದ್ದ ರೀತಿ, ಅವರ ಮುಕ್ತ ಹಾಗೂ ನೇರ ನಡೆನುಡಿಯಿಂದಾಗಿ ಅವರು ನನಗೆ ಇನ್ನಷ್ಟು ಹತ್ತಿರವಾದರು. ಆರ್ಥಿಕವಾಗಿ ಅಷ್ಟು ಸಬಲರಲ್ಲದ ಅವರೆಲ್ಲ ಬೀಳ್ಕೊಡುಗೆಯ ದಿನ ನನಗೆ ಕೊಟ್ಟ ನೆನಪಿನ ಕಾಣಿಕೆಗಳು ಹಾಗೂ ತೋರಿಸಿದ ನಿಷ್ಕಲ್ಮಶ ಪ್ರೀತಿ ನನ್ನ ಮನಸ್ಸನ್ನು ದ್ರವೀಕರಿಸಿ ಬಿಟ್ಟಿತು. ತುಂಬು ಪ್ರೀತಿಯ ಮುಂದೆ ಸೋಲದವರಾರು? ಅಲ್ಲಿ ನಾನು ಕಲಿಸಿದ್ದಕ್ಕಿಂತ ಕಲಿತದ್ದೇ ಜಾಸ್ತಿ ಎನ್ನುವುದು ನನ್ನೊಳಗಿನ ಸತ್ಯ!
76. ನೆನಪುಗಳು - ಕಿಪ್ಪಡಿ (ಹಿನ್ನೀರಿನ ನಡುಗುಡ್ಡೆ )
ಕಿಪ್ಪಡಿ ಶರಾವತಿ ಹಿನ್ನೀರಿನ ನಡುಗಡ್ಡೆ. ನಮ್ಮ ಹೊಂಗಿರಣದಿಂದ ಸುಮಾರು ಇಪ್ಪತ್ತೈದು ಕಿಮೀ ದೂರದಲ್ಲಿದೆ. ಅಲ್ಲಿನ ಜಲ ಸಾಹಸ ಚಟುವಟಿಕೆ ನಡೆಸುವವರು ಶ್ರೀಯುತ ಗಂಗಾಧರ್. ಹೆಗ್ಗೋಡಿನ ಹತ್ತಿರದ ಜಳ್ಳಾರೆಯವರು. ಸರಳ, ಸಜ್ಜನ, ಕವಿ ಹೃದಯದ ವ್ಯಕ್ತಿ. ಅದು ಡಿಸೆಂಬರ್ 30, 2017. ನನ್ನ ಮಗ, ಮಗಳು, ಅವರ ಹಾಗೂ ನನ್ನ ಸ್ನೇಹಿತರು, ನನ್ನ ಕಸಿನ್ಸ್ ಎಲ್ಲಾ ಸೇರಿ ಸುಮಾರು ಹದಿನಾರು ಜನ ಹಿನ್ನೀರಿನ ನಡುಗಡ್ಡೆಯಲ್ಲಿ ಒಂದಿರುಳು ಉಳಿಯುವ ಯೋಜನೆ ಹಾಕಿ ಗಂಗಣ್ಣನವರಿಗೆ ತಿಳಿಸಿ ಕಿಪ್ಪಡಿಯ ತಟ ತಲುಪಿದೆವು. ಗಂಗಣ್ಣ ಕೊಟ್ಟ ಲೈಫ್ ಜಾಕೆಟ್ ಧರಿಸಿ ಎರಡು ಕಿಮೀ ದೂರವಿದ್ದ ನಡುಗಡ್ಡೆ ತಲುಪಲು ಈಜಲು ಪ್ರಾರಂಭಿಸಿದೆವು. ನಮ್ಮಲ್ಲಿ ಕೆಲವರಿಗೆ ನೀರ ಭಯ. ಇನ್ನು ಕೆಲವರಿಗೆ ಆ ಹಿನ್ನೀರಿನ ಆಳ, ವಿಸ್ತಾರವನ್ನು ನೋಡಿ ಅಳುಕು. ಅಂತಹವರ ಭಯವನ್ನು ತನ್ನ ನಯವಾದ ಮಾತುಗಳಲ್ಲಿ ಹೋಗಲಾಡಿಸಿ, ಅವರಲ್ಲಿ ಧೈರ್ಯ ಸ್ಥೈರ್ಯ ತುಂಬಿ ಗಂಗಣ್ಣ ಮುನ್ನಡೆಸಿದರು. ನೀರಸ್ನೇಹಿಯಾದ ನಮ್ಮಂತವರು ಉತ್ಸಾಹದಿಂದ ಈಜಿದ್ದೇ ಈಜಿದ್ದು. ನಡುಗಡ್ಡೆ ತಲುಪಲು ಸುಮಾರು ಎರಡು ಗಂಟೆ ತಗುಲಿತು. ಮಧ್ಯಾಹ್ನ ಮೂರಕ್ಕೆ ಹೊರಟ ನಾವು ಐದರ ಆಸುಪಾಸು ಅಲ್ಲಿಗೆ ತಲುಪಿದೆವು. ನಂತರವೂ ಬಹಳಷ್ಟು ಹೊತ್ತು ನೀರಾಟವಾಡಿ ಭೂಸ್ಪರ್ಶ ಮಾಡಿದೆವು. ನಂತರದಲ್ಲಿ ಮಟ್ಟಿ ಸಂಧಿಯಲ್ಲಿ ಬಟ್ಟೆ ಬದಲಿಸಿ ಆ ನಡುಗಡ್ಡೆಯಲ್ಲಿ ವಾಕಿಂಗ್ ಮಾಡಿ ಟೆಂಟ್ ಹಾಕಿ ಶಿಬಿರಾಗ್ನಿಯ ಮುಂದೆ ಗಂಗಣ್ಣ ವ್ಯವಸ್ಥೆ ಮಾಡಿದ ಊಟ ಮಾಡಿದಾಗ ಹಸಿದ ಹೊಟ್ಟೆ ತುಂಬಿ ತೃಪ್ತಿಯಾದದ್ದಂತೂ ಹೌದು. ರಾತ್ರಿ ಬಹಳ ಹೊತ್ತು ನಮ್ಮ ಹರಟೆ, ಹಾಡು, ಕುಣಿತ ನಡೆದು ಟೆಂಟಿನೊಳಗೆ ಪವಡಿಸಿದಾಗ ಅಡಿಯಿಂದ ಒತ್ತುತ್ತಿದ್ದ ಕಲ್ಲುಗಳ ಆಕ್ಯುಪಂಚರ್ ನೊಂದಿಗೆ ಸೊಗಸಾದ(?) ನಿದ್ದೆ ಮಾಡಿದೆವು. ಬೆಳಗ್ಗೆ ಎದ್ದು ನಿಸರ್ಗದ ಮಡಿಲಲ್ಲಿ ಬಹಿರ್ದೆಸೆಗೆ ಹೋದದ್ದು ಇನ್ನೊಂದು ಕಥೆ ತದನಂತರ ಗಂಗಣ್ಣ ತರಿಸಿದ ಇಡ್ಲಿ, ಚಟ್ನಿ, ಅವಲಕ್ಕಿ ತಿಂದು ಚಹಾ ಕುಡಿದು ಮತ್ತೊಮ್ಮೆ ನೀರಿಗೆ ಬಿದ್ದ ನಾವೆಲ್ಲ ಮೈನ್ ಲ್ಯಾಂಡ್ ತಲುಪಿದಾಗ ಸೂರ್ಯ ನೆತ್ತಿಯ ಮೇಲೆ ಬಂದಾಗಿತ್ತು. ನಂತರ ಯಥಾಪ್ರಕಾರ ಮನೆಯ ಕಡೆಗೆ ಪಯಣ ..... ಜಲಸಾಹಸಿಗರು, ಪ್ರಕೃತಿ ಪ್ರೇಮಿಗಳು ಇಷ್ಟ ಪಡಬಹುದಾದ ಜಾಗ ಕಿಪ್ಪಡಿ.
75. ಅನುಭವ - ನೆನಪುಗಳು
ನನ್ನ ಅಣ್ಣನ ನೆನಪಿಗಾಗಿ ಹಾಗೂ ಆ ನೆಪದಲ್ಲಿ ಕುಟುಂಬಸ್ಥರು, ಸ್ನೇಹಿತ ವರ್ಗ, ಊರವರು ಒಟ್ಟು ಸೇರಲು ಪ್ರತಿ ವರ್ಷ ಡಿಸೆಂಬರ್ ನಲ್ಲಿ ಅಭಿ ಒಂದು ಸಂಗೀತ ಸಂಜೆಯನ್ನು ಆಯೋಜಿಸುತ್ತಾಳೆ. ನಾವೆಲ್ಲ ಆ ಕಾರ್ಯಕ್ರಮಕ್ಕೆ ತಪ್ಪದೆ ಹೋಗುತ್ತೇವೆ. ಈಗ್ಗ್ಯೆ ಎರಡು ವರ್ಷಗಳ ಹಿಂದೆ ಅಂತಹ ಕಾರ್ಯಕ್ರಮ ಮುಗಿಸಿ ರಾತ್ರಿ ಊಟ ಮಾಡಿ ನಾವೊಂದಿಷ್ಟು ಜನ ಆರೂರಿನಲ್ಲಿ ನಡೆದಿದ್ದ ಕೋಲಕ್ಕೆ ಹೋಗಿತ್ತು. ನಾನು ಸುಮಾರು ಮೂವತ್ತೈದು ವರ್ಷಗಳ ನಂತರ ನೋಡಿದ ಕೋಲವದು. ಇದು ರಾತ್ರಿಯಿಡೀ ನಡೆಯುವ ಕಾರ್ಯಕ್ರಮ. ನಾವು ರಾತ್ರಿ ಸುಮಾರು ಒಂದು ಗಂಟೆಯವರೆಗೆ ಕೋಲ ನೋಡಿ ಹಿಂದಿರುಗಿತು. ಮರೆತು ಹೋದದ್ದೆಲ್ಲವನ್ನು ಪುನಃ ರಿಫ್ರೆಶ್ ಮಾಡಿದ ಕೋಲವದು. ಚೆಂದದ ವೇಷಭೂಷಣ, ಚಂಡೆವಾದನ, ಲಯಬದ್ಧ ಕುಣಿತ, ನೋಡುಗರಿಗೆ ಬಿಸಿ ಬಿಸಿ ಚಹಾ, ಅಂಬೊಡೆ, ಅಲ್ಲಿನ ಸ್ಥಳಾಲಂಕಾರವೆಲ್ಲ ಖುಷಿ ಕೊಟ್ಟಿತು.
ಮಾರನೇ ದಿನ ನಮ್ಮೆಲ್ಲರ ಪಯಣ ಸೋಮೇಶ್ವರದ ಬಳಿ ಇರುವ ಕೂಡ್ಲು ಫಾಲ್ಸ್ ಗೆ. ಕೊಟ್ಟೆ ಕಡುಬು, ಚಟ್ನಿ, ಬಾಯಾಡಲು ಒಂದಿಷ್ಟು ತಿಂಡಿ ತೆಗೆದುಕೊಂಡು ಆರೇಳು ಕಾರುಗಳಲ್ಲಿ ನಾವು ಸುಮಾರು ಇಪ್ಪತ್ತೈದು ಜನ ಹೋಗಿತ್ತು. ನಮ್ಮಲ್ಲಿ ವಯಸ್ಸಿನಲ್ಲಿ ಕಿರಿಯರು ತಿಂಡಿಯ ಚೀಲಗಳನ್ನು ಹಿಡಿದುಕೊಂಡು ನಡೆದರೆ ಇನ್ನು ಕೆಲವರು ಪ್ರಾಯ ಸಂದ ನಮ್ಮಂತವರನ್ನು ಸಂಭಾಳಿಸಿ ಕರಕೊಂಡು ಹೋಗುವವರು. ಕಾರಿನಿಂದಿಳಿದ ಮೇಲೆ ಸುಮಾರು ಎರಡು ಕಿಮೀ ದೂರ ಮೇಲೆ ಕೆಳಗೆ ಹತ್ತಿ ಇಳಿದು ಕ್ರಮಿಸಬೇಕಾದ ದುರ್ಗಮ ದಾರಿಯದು. ಪ್ರಯಾಸಪಟ್ಟುಕೊಂಡು ನಡೆದುಕೊಂಡು 'ಇನ್ನು ನನ್ನಿಂದಾಗದು' ಎನ್ನುವ ಮನಸ್ಥಿತಿ ತಲುಪುವ ಹೊತ್ತಿಗೆ ಆಗುವ ಆ ಜಲಪಾತ ದರ್ಶನ ಆವರೆಗಿನ ಕಷ್ಟಗಳೆನ್ನೆಲ್ಲ ಐಸಿನಂತೆ ಕರಗಿಸಿ ನೀರಾಗಿಸುವುದಂತೂ ನಿಜ. ಎತ್ತರವಾದ ಕೋಡುಗಲ್ಲಿಂದ ಬೀಳುವ ನೀರಿನಡಿ ನಿಂತಾಗ ಛಡಿಯೇಟು ಹೊಡೆದಂತಹ ಅನುಭವ. ತಣ್ಣನೆಯ, ಶುಭ್ರವಾದ ನೀರಹೊಂಡದಲ್ಲಿ ಈಜುವುದೊಂದು ಮೋಜು. ನೀರಿನ ಮೇಲೆ ಅಂಗಾತವಾಗಿ ಮಲಗಿ ತೇಲುತ್ತಾ ಮೇಲೆ ನೋಡಿದರೆ ಬೀಳುತ್ತಿರುವ ನೀರ ಹರವಿನ ಹಚ್ಚಹಸಿರಿನ ಗುಡ್ಡ ಒಂದು ಕಡೆ, ಶುಭ್ರ ಆಕಾಶ ಮತ್ತೊಂದು ಕಡೆ. ಭುವಿಯ ಮೇಲಿನ ಸ್ವರ್ಗ ಇದೇ ಏನೋ ಅಂತನಿಸುವ ಅನುಭವ. ನಿಜಕ್ಕೂ ಅಲ್ಲಿಗೆ ಹೋಗಿ ಪ್ರಕೃತಿ ಸೌಂದರ್ಯ ನೀಡುವ ಸುಖದ ಸುಕೂನತೆಯ ಅನುಭವಿಸಬೇಕಾದ ಅದ್ಭುತ ಜಾಗವದು!
74. ಪ್ರವಾಸ (ಗೋವಾ) - ಅನುಭವ
ನಾನು ಈವರೆಗೆ ನಾಲ್ಕಾರು ಬಾರಿ ಗೋವಾಕ್ಕೆ ಹೋಗಿದ್ದೇನೆ. ಒಂದು ಬಾರಿ ಉಡುಪಿಯಿಂದ ರೈಲಿನಲ್ಲಿ, ಇನ್ನೊಂದು ಬಾರಿ ಸಾಗರದಿಂದ ಬಸ್ಸಿನಲ್ಲಿ, ಉಳಿದೆಲ್ಲಾ ಬಾರಿ ಕಾರಿನಲ್ಲಿ ಹೋದದ್ದು.
ಉಡುಪಿಯಿಂದ ರೈಲಿನಲ್ಲಿ ಹೋದದ್ದು ದೂದ್ ಸಾಗರ್ ನೋಡಲು ಸಿಗುತ್ತದೆಂಬ ನಿರೀಕ್ಷೆಯಲ್ಲಿ. ನಾವು ಒಟ್ಟಿಗೆ ಏಳು ಜನರಿದ್ದ ಕಾರಣ ರೈಲು ಪಯಣವನ್ನು ಎಂಜಾಯ್ ಮಾಡಿದೆವು. ದೂದ್ ಸಾಗರ್ ಆ ರೂಟಿನಲ್ಲಿ ಇಲ್ಲವೆಂದು ಗೊತ್ತಾದಾಗ ಬೇಜಾರಾದರೂ ದಾರಿಯಲ್ಲಿ ಸಿಗುವ ಟನಲ್ ಗಳು ಖುಷಿ ಕೊಟ್ಟವು. ಮಳೆಗಾಲವಾಗಿದ್ದ ಕಾರಣ ಇಕ್ಕೆಲದ ಹಸಿರಿನ ಸಿರಿ ಕಣ್ತಣಿಯುವಂತಿತ್ತು. ದಾರಿ ಸಾಗಿದ್ದೇ ಗೊತ್ತಾಗಲಿಲ್ಲ.
ಇನ್ನೊಮ್ಮೆ ಹೋದದ್ದು ಸಾಗರದಿಂದ, ನಮ್ಮ ಸಿಯಾಜ್ ಕಾರಿನಲ್ಲಿ, ಅದೂ ಮಳೆಗಾಲದಲ್ಲಿ, ಅದು ನೆನಪಿನಲ್ಲಿ ಉಳಿಯುವಂತಹ ಪಯಣ. ದಾರಿಯುದ್ದಕ್ಕೂ ಮರಗಳ ಸಾಲು. ಆಚೀಚೆಗೆ ದಟ್ಟವಾದ ಕಾಡು. ಜೊತೆಗೆ ಮಳೆರಾಯನ ಪ್ರತಾಪ. ಅಲ್ಲಲ್ಲಿ ಮೋಡಾವೃತ ಜಾಗ, ಸಣ್ಣ ಸಣ್ಣ ಜಲಪಾತಗಳು. ಎರಡೂ ಕಡೆ ಗುಡ್ಡಗಳಿದ್ದು ನಾವು ಅದರ ನಡುವೆ ಪಯಣಿಸಿದಾಗ "ಆಲಿಸ್ ಇನ್ ವಂಡರ್ ಲಾ" ನಲ್ಲಿ ಇದ್ದಂತಹ ಬೇರಾವುದೋ ನಾಡಿನಲ್ಲಿ ಸಾಗುವಂತಹ ಅನುಭವ. ಸಾಗುವ ದಾರಿ ಯಾವುದೋ ನಿಗೂಢವಾದ ಗಮ್ಯಸ್ಥಾನಕ್ಕೆ ಹೋಗುತ್ತಿರುವಂತಿತ್ತು. ದಾರಿಯಲ್ಲಿ ಸಿಕ್ಕ ಮಿರ್ಜಾನ ಕೋಟೆಯ ಭೇಟಿ ಮನಕ್ಕೆ ಮುದ ಕೊಟ್ಟಿತು. ತೆಳುವಾದ ಹಸಿರು ಹುಲ್ಲು ಹಾಸಿನಿಂದ ಆವರಿಸಿದ್ದ ಅದರ ಗೋಡೆಗಳು, ಕಲ್ಲು ಬಂಡೆಗಳು ಆ ಜಾಗವನ್ನು ಬಿಟ್ಟು ಬರಲು ಕಷ್ಟವಾಗುವಂತಹ ಸೆಳೆತ ಹುಟ್ಟಿಸಿದವು. ಒಟ್ಟಿನಲ್ಲಿ ಮತ್ತೊಮ್ಮೆ, ಮಗದೊಮ್ಮೆ ಆ ರೀತಿಯ ಪಯಣ ಮಾಡಬೇಕು ಎನ್ನುವ ಹಂಬಲ ಹುಟ್ಟಿಸಿದ ಪಯಣವದು.
ಗೋವಾಕ್ಕೆ ಅದರದ್ದೇ ಆದ ವಿಭಿನ್ನ ಭೌಗೋಳಿಕ ಲಕ್ಷಣಗಳಿದ್ದು ನೋಡಲು ಬಹಳ ಚೆಂದ. ಹಳೆಯ ಕಾಲದ ಕಟ್ಟಡಗಳು, ಹಳ್ಳಿಯ ಸಣ್ಣದಾದ ಆದರೆ ಉತ್ತಮ ಸ್ಥಿತಿಯಲ್ಲಿರುವ ರಸ್ತೆಗಳು, ಸ್ವಚ್ಛವಾದ ಊರುಗಳು, ಒಂದೆಡೆ ಕಡಲತಡಿ ಇದ್ದರೆ ಮತ್ತೆಲ್ಲೋ ಗುಡ್ಡವಿರುವ ಪ್ರದೇಶ. ಹಳೆಯ ತಲೆಮಾರಿನವರ ವಿಭಿನ್ನ ವೇಷಭೂಷಣ ಎಲ್ಲವೂ ಮನಾಕರ್ಷಕ. ಗೋವಾದಲ್ಲಿರುವ ನಮ್ಮ ಕುಟುಂಬ ಸ್ನೇಹಿತ ಶ್ರೀರಾಮ, ನನ್ನ ಹಳೆಯ ವಿದ್ಯಾರ್ಥಿನಿ ಸಗ್ಗೂಬಾಯಿ, ನನ್ನ ಶಿಕ್ಷಣ ಮಿತ್ರೆ ಸುಜಾತ ನೊರೋನ್ಹಾ.. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪ್ರತಿ ಬಾರಿಯ ನಮ್ಮ ಗೋವಾದ ಉಳಿಕೆಯನ್ನು ಹಿತವಾಗಿಸಿದವರು.
ಅಲ್ಲಿನ ಹಳೆ ಚರ್ಚುಗಳು, ಮ್ಯೂಸಿಯಂ ಗಳು, ದೇವಸ್ಥಾನಗಳು ಮತ್ತು ಎಲ್ಲದ್ದಕ್ಕಿಂತ ಮುಖ್ಯವಾದುದು ಅಲ್ಲಿನ ಕಡಲತೀರ. ಎಷ್ಟೇ ದೂರ ನೀರೊಳಗೆ ಸಾಗಿದರೂ ಆಳವಿಲ್ಲದ ಕಡಲು. ಕಡಲ ನೀರಾಟಕ್ಕೆ ಹೇಳಿ ಮಾಡಿಸಿದ ಸ್ಥಳವದು. ಹೀಗೆ ತನ್ನದೇ ಆದ ಸರಳತೆ, ಭೌಗೋಳಿಕ ಸಮೃದ್ಧತೆಯಿಂದಾಗಿ ಸದಾ ಎಲ್ಲರನ್ನು ತನ್ನೆಡೆಗೆ ಸೆಳೆಯುತ್ತದೆ ಗೋವಾ!
73. ನೆನಪುಗಳು - ಪ್ರವಾಸ
ನಾನು 1984ರಲ್ಲಿ ರೈಲಿನಲ್ಲಿ ಅಪ್ಪ, ಅಮ್ಮ, ತಂಗಿಯೊಟ್ಟಿಗೆ ಉತ್ತರ ಭಾರತ ಪ್ರವಾಸ ಮಾಡಿದ್ದು ಬಿಟ್ಟರೆ ಇತ್ತೀಚಿನ ಆರೇಳು ವರ್ಷಗಳವರೆಗೆ ಆ ದಿಕ್ಕಿಗೆ ತಲೆ ಹಾಕಿಯೂ ಮಲಗಿರಲಿಲ್ಲ ಆ ಪ್ರವಾಸವು ಬಹಳ ಚೆನ್ನಾಗಿತ್ತು. ಡೆಲ್ಲಿ, ಆಗ್ರಾ, ಡೆಹ್ರಾಡೂನ್... ಹೀಗೆ ನಮ್ಮ ತಿರುಗಾಟ. ಎಲ್ಲಾ ಕಡೆಯೂ ನೆಂಟರ ಮನೆ ಇದ್ದಿದ್ದ ಕಾರಣ ಉಳಿಕೆ ಮತ್ತು ಆಹಾರದ ಸಮಸ್ಯೆ ಆಗಿರಲಿಲ್ಲ. ವಾಪಾಸು ಹಿಂದಿರುಗುವಾಗ ನಾವು ಬೆಂಗಳೂರಿಗೆ ತಲುಪುವುದು ಎಂಟ್ಹತ್ತು ಗಂಟೆ ಬಾಕಿ ಇದ್ದಾಗ ಶ್ರೀಮತಿ ಇಂದಿರಾಗಾಂಧಿಯವರ ಹತ್ಯೆಯಾಗಿ ನಾವು ತದನಂತರದ ಗೊಂದಲಮಯ ವಾತಾವರಣದಲ್ಲಿ ಊರು ತಲುಪಿದ್ದೇ ದೊಡ್ಡ ಪವಾಡ. ಆ ಪ್ರವಾಸ ಕಾಲದಲ್ಲಿ ನಾನಿನ್ನೂ ಚಿಕ್ಕವಳಿದ್ದ ಕಾರಣ ನನ್ನ ಗಮನ ಸೆಳೆದದ್ದು ಅಲ್ಲಿನ ಬದುಕಲ್ಲ ಸ್ಮಾರಕಗಳು ಮಾತ್ರ! ಈಗ್ಗ್ಯೆ ಆರೇಳು ವರ್ಷಗಳ ಹಿಂದೆ ನಾನು ಮತ್ತು ಅಭಿ ಲಖ್ನೋಗೆ ವಿಮಾನದಲ್ಲಿ ಹೋಗಿತ್ತು. ಉಳಿದಿದ್ದ ಜಾಗ, ಕಾರ್ಯಾಗಾರವಿದ್ದ ಜಾಗ ಎಲ್ಲಾ ಹೈಫೈ ವ್ಯವಸ್ಥೆಯ ಜಾಗವಾಗಿತ್ತು. ಕೊನೆಯ ದಿನ ನಾನು, ಅಭಿ ಅವಳಿಗೆ noise reducer ತರಲು ಹೊರ ಹೋದಾಗ ಅಲ್ಲಿನ ಜನಜೀವನವನ್ನು ಹತ್ತಿರದಿಂದ ನೋಡುವ ಅವಕಾಶವಾಯಿತು. ನಮ್ಮ ವಿಮಾನ ಮಧ್ಯಾಹ್ನ ಒಂದು ಗಂಟೆಗೆ ಇದ್ದ ಕಾರಣ ನಾವು ಒಂಬತ್ತು ಗಂಟೆಯೊಳಗೆ ಲಖ್ನೋದ ಬಜಾರಿಗೆ ಹೊರಟೆವು. ನಾವಿದ್ದ ಜಾಗದಿಂದ ಒಂದು ಶೇರಿಂಗ್ ರಿಕ್ಷಾದಲ್ಲಿ ಅಲ್ಲಿಂದ ಹತ್ತಿರವಿದ್ದ ಬಜಾರಿಗೆ ಹೋದೆವು. ಯಾವ ಅಂಗಡಿಯೂ ತೆರೆದಿರಲಿಲ್ಲ. ಅಲ್ಲಿ ಎಲ್ಲೂ ಕಾಲಿಡಲಾಗದಂತಹ ಕೊಳಕು. ಅದರ ಮಧ್ಯೆಯೇ ಕೂಲಿ ಮಾಡುವವರು ಮಲಗಿದ್ದರು. ಅದನ್ನು ನೋಡಿ ಮನ ಮರುಗಿತು. ನಂತರ ಒಂದು ಸೈಕಲ್ ರಿಕ್ಷಾ ಹತ್ತಿ ಬಟ್ಟೆ ಖರೀದಿಗೆ ಹೋಯಿತು. ಸೈಕಲ್ ತುಳಿಯುತ್ತಾ ಸೈಕಲ್ ರಿಕ್ಷದಾತ ತನ್ನ ಬಡತನದ ಬೇಗೆಯನ್ನು ನಮ್ಮಲ್ಲಿ ಹೇಳಿಕೊಂಡ. ಬಟ್ಟೆ ಖರೀದಿ ಮಾಡಿದ ನಂತರ ಬಿಲ್ಲನ್ನು ತನಗೆ ಕೊಡಲು ಹೇಳಿದ. ಕೇಳಲಾಗಿ ಆ ಬಿಲ್ ಅಂಗಡಿಯವರಿಗೆ ಕೊಟ್ಟರೆ ಆವರು ಅವನಿಗೆ ಒಂದು ಕೆಜಿ ಅಕ್ಕಿ ಕೊಡುತ್ತಾರೆಂದು ಹೇಳಿದ. ಅಯ್ಯೋ ಪಾಪ ಎಂದೆನಿಸಿತು. ಅಲ್ಲಿಯವರಿಗೆ ಒಂದು ಹೊತ್ತಿನ ಕೂಳಿಗೂ ಬರ. ಅಂತಹ ಬಡತನ ಅಲ್ಲಿದೆ! ನಂತರ ಬಸ್ಸಿನಲ್ಲಿ ಹೋಗುವಾಗ ಕೆಲಸಕ್ಕೆ ಹೋಗುವ ಹುಡುಗಿಯೊಬ್ಬಳ ಪರಿಚಯ ಆಯಿತು. ಅವಳು ಮಾತನಾಡುತ್ತಾ ಅಲ್ಲಿನ ಹೆಣ್ಣು ಮಕ್ಕಳ ಆಭದ್ರತೆಯ ಬಗ್ಗೆ ಹೇಳಿದಳು. ಪೇಟೆಯಾದರೆ ಸ್ವಲ್ಪ ಪರವಾಗಿಲ್ಲ; ಹಳ್ಳಿಗಳಲ್ಲಿ ಹೆಣ್ಣು ಮಕ್ಕಳಿಗೆ ಅಭದ್ರತೆ, ಶೋಷಣೆ ಹೆಚ್ಚು ಅಂತ ಹೇಳಿದಳು. ವರದಕ್ಷಿಣೆಯಿಂದಾಗಿ ಹೆಣ್ಣು ಹೆತ್ತವರ ಗೋಳು ಹೇಳಲಸಾಧ್ಯವೆಂದಳು. ನಮ್ಮ ಖರೀದಿ ಎಲ್ಲಾ ಮುಗಿಸಿ ರಿಕ್ಷಾದಲ್ಲಿ ಬರುವಾಗ ಟ್ರಾಫಿಕ್ ಜಾಮ್ ಆದ ಕಾರಣ ಆ ರಿಕ್ಷಾ ಡ್ರೈವರ್ ಜೊತೆ ಕಥೆ ಹೊಡೆಯುವ ಅವಕಾಶ ಸಿಕ್ಕಿತು. ಅವನು ಅಲ್ಲಿನ ಹೊಲಸು ರಾಜಕೀಯದ ಬಗ್ಗೆ ಒಂದಿಷ್ಟು ಮಾತನಾಡಿ ತನ್ನ ಬದುಕಿನ ಕಷ್ಟಗಳನ್ನು ಹೇಳಿಕೊಂಡ. ಅದನ್ನೆಲ್ಲ ನೋಡಿದಾಗ, ಕೇಳಿದಾಗ ನಾವು ದಕ್ಷಿಣ ಭಾರತದವರು ಅದರಲ್ಲೂ ಕರ್ನಾಟಕದವರು ಪುಣ್ಯ ಮಾಡಿದವರು ಅಂತನಿಸಿದ್ದು ನಿಜ. ನಮ್ಮ ನಮ್ಮ ಜಾಗದ, ಜನರ ಬೆಲೆ ಗೊತ್ತಾಗುವುದು ನಾವು ನಾವಿರುವಲ್ಲಿಂದ ಹೊರಗೆ ಕಾಲಿಟ್ಟಾಗ ತಾನೇ?
72. ಅನುಭವ - ಸ್ವಚಿಂತನೆ
ಎಷ್ಟೋ ಬಾರಿ ನಮಗೆ ನಾವೇನು, ನಮ್ಮಲ್ಲಿರುವ ತಾಕತ್ತೇನು ಎಂದು ಗೊತ್ತಿರುವುದೇ ಇಲ್ಲ. ನನ್ನ ಅಂತಹ ತಾಕತ್ತಿನ ಪರಿಚಯ ನನಗೆ ಮಾಡಿಸಿದವಳು ಅಭಿ. ನಾವಿಬ್ಬರು ಈಗ್ಗ್ಯೆ ಆರೇಳು ವರ್ಷಗಳ ಹಿಂದೆ ಒಂದು ತರಬೇತಿಯಲ್ಲಿ ಭಾಗವಹಿಸುವುದಕ್ಕೆ ಲಖ್ನೋಗೆ ಹೋಗಿತ್ತು. ಅದು ನನ್ನ ಪ್ರಥಮ ವಿಮಾನಯಾನ. ಏನೇನೋ ಕಲ್ಪಿಸಿ ವಿಮಾನ ಹತ್ತಿದ್ದೆ. ಮೋಡದೊಳಗಣ/ಮೋಡದ ಮೇಲಿನ ಪಯಣ ಸ್ವಲ್ಪ ಹೊತ್ತು ಖುಷಿ ಕೊಟ್ಟರೂ ವಿಮಾನದೊಳಗಿನ ಸ್ತಬ್ಧ ವಾತಾವರಣ ಬೇಸರ ತರಿಸಿತು. ಆದರೆ ಕೇವಲ ಎರಡ್ಮೂರು ಗಂಟೆಯೊಳಗೆ ಲಖ್ನೊ ತಲುಪಿದ್ದು ಖುಷಿಯ ವಿಷಯ. ವಿಮಾನ ಟೇಕಾಫ್ ಆಗುವಾಗ/ಲ್ಯಾಂಡ್ ಆಗುವಾಗ ಅಭಿಗೆ ಜೀವ ಹೋಗುವಷ್ಟು ಕಿವಿ ನೋವು ಬರುತ್ತಿತ್ತು. ನೋವಿನಿಂದ ಅವಳು ಬಿಳಿಚಿಕೊಳ್ಳುತ್ತಿದ್ದಳು. ಅವಳ ಯಾತನೆ ನೋಡಿ ನನಗೆ ಸಂಕಟವಾಗುತ್ತಿತ್ತು. ನನ್ನ ಹೋಮಿಯೋಪತಿ ಡಾಕ್ಟರ್ ಗೆ ಫೋನ್ ಮಾಡಿ ಪರಿಹಾರ ಕೇಳಿದಾಗ noise reducer ಹಾಕಿಕೊಂಡರೆ ನೋವು ಸ್ವಲ್ಪ ಪ್ರಮಾಣದಲ್ಲಿ ಶಮನವಾಗುತ್ತದೆ ಎಂದು ಹೇಳಿದರು. ಸರಿ. ಟ್ರೈನಿಂಗ್ ನ ಕೊನೆಯ ದಿನ ನಮ್ಮ ವಿಮಾನ ಮಧ್ಯಾಹ್ನ ಒಂದು ಗಂಟೆಗಿತ್ತು. ಬೆಳಿಗ್ಗೆ ನಾವಿಬ್ಬರು noise reducerನ್ನು ಹುಡುಕುತ್ತಾ ಮೊದಲು ಶೇರಿಂಗ್ ರಿಕ್ಷಾದಲ್ಲಿ ನಂತರ ಸೈಕಲ್ ರಿಕ್ಷಾದಲ್ಲಿ ತದನಂತರ ಬಸ್ಸಿನಲ್ಲಿ ಪಯಣಿಸಿ ನಮಗರಿವಿಲ್ಲದೆ ನಾವಿದ್ದ ಜಾಗದಿಂದ ಸುಮಾರು ಇಪ್ಪತ್ತೈದು ಕಿಮೀ ದೂರ ಬಂದು ಬಿಟ್ಟಿದ್ದೆವು. ಬೆಳಗಿನ ಹನ್ನೊಂದು ಗಂಟೆಯಾದರೂ ಅಂಗಡಿ ತೆಗೆಯುವ ಯಾವ ಲಕ್ಷಣವೂ ಕಾಣಲಿಲ್ಲ. ಕಾದು ಕಾದು ಸುಸ್ತಾಗಿ ಸುಮಾರು ಹನ್ನೊಂದು ಮುಕ್ಕಾಲಿಗೆ ಅಂಗಡಿ ತೆರೆದು ನಾವು ಖರೀದಿ ಮುಗಿಸಿ ಹಿಂದಿರುಗುವಾಗ ಬೇರಾವ ವಾಹನಕ್ಕೂ ಕಾಯದೆ ಸೀದಾ ರಿಕ್ಷಾ ಹತ್ತಿದ್ದೆ! ಆದರೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ನಾವು ಉಳಿದುಕೊಂಡಿದ್ದ ಜಾಗ ತಲುಪಿ ನಂತರದಲ್ಲಿ ಏರ್ ಪೋರ್ಟ್ ಮುಟ್ಟಿದ್ದು ಒಂದು ಸಾಹಸವೇ ಸರಿ.
ಇದನ್ನೆಲ್ಲ ನೋಡಿ ಅಭಿ ಹೇಳಿದ ಮಾತು, "Noise reducer ತೆಗೆದುಕೊಳ್ಳಲೇ ಬೇಕು ಅನ್ನುವ ನಿನ್ನ ಹಠ, ಅದಕ್ಕಾಗಿ ಎಡೆಬಿಡದೆ ಹುಡುಕಾಡಿದ್ದು, ಗುರುತು ಪರಿಚಯ ಇರದ ಊರಿನಲ್ಲಿ ಸಮಯದ ಅಭಾವದ ನಡುವೆಯೂ noise reducerನ್ನು ಖರೀದಿಸಿಯೇ ಬಿಟ್ಟದ್ದು ಎಲ್ಲವೂ ಕೈಗೆತ್ತಿಕೊಂಡ ಕೆಲಸವನ್ನು ನೀನು ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಮಾಡುವ ನಿನ್ನ ಛಾತಿಯನ್ನು ತೋರಿಸುತ್ತದೆ. ನೀನು ಹೊಂಗಿರಣದಂತಹ ಶಾಲೆ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದುದರಲ್ಲಿ ಆಶ್ಚರ್ಯವಿಲ್ಲ" ಎಂದು.
ಹೀಗೆ ನನ್ನ ಗುಣವೊಂದರ ಅರಿವನ್ನು ಅಭಿ ನನ್ನೊಳಗೆ ಮೂಡಿಸಿದ್ದಳು. ಏಕೆಂದರೆ ನಾವು ನಮ್ಮ ಕೆಲಸವನ್ನು meticulous ಆಗಿ ಮಾಡುತ್ತಿರುತ್ತೇವೆಯೇ ಹೊರತು ನಮಗೆ ನಮ್ಮ ಗುಣಾವಗುಣಗಳ ಅವಲೋಕನ ಮಾಡುವ ವ್ಯವಧಾನ ಇರುವುದಿಲ್ಲ. ಇನ್ನೊಬ್ಬರು ಅದನ್ನು ಗುರುತಿಸಿ ತಿಳಿಸಿದಾಗ ಮಾತ್ರ ನಮಗದರ ಅರಿವಾಗುವುದೆನ್ನುವುದು ನಿಜ ತಾನೆ?
71. ಅನುಭವ - ಕಡಲು, ಕಡಲುತೀರ
ನಾನು ಕಡಲತೀರದ ಕುವರಿ. ಹೀಗಾಗಿ ಕಡಲೆಂದರೆ ನನಗಿಷ್ಟ. ಕಡಲಿನ ಅಗಾಧತೆ, ಅಲೆಗಳ ನರ್ತನ, ಸುಂಯ್ಗುಡುವ ಗಾಳಿ ನನ್ನನ್ನು ಯಾವಾಗಲೂ ಸೆಳೆಯುತ್ತದೆ. ಕಡಲ ನೀರಿನಾಟವಾಡಿ ಮರಳ ಬಿಸುಪಿನ ಸುಖ ಆನುಭವಿಸುತ್ತಾ ಮಲಗಿದರೆ ವರ್ಣಮಯ ಆಕಾಶ ದರ್ಶನ, ಸೂರ್ಯಾಸ್ತಮಾನದ ಕೆಂಬಣ್ಣದ ದಿಗಂತ ದರ್ಶನ ಆವರ್ಣನೀಯ. ವಿವರಣೆಗೆ ಮೀರಿದ ಸೌಂದರ್ಯವದರದ್ದು.
ಕುಂದಾಪುರದಲ್ಲಿದ್ದಾಗ ನಾವು ಔಟಿಂಗ್ ಅಂತ ಕೆಲವೊಮ್ಮೆ ಸಾಯಂಕಾಲದ ಸಮಯ ಹೋಗುತ್ತಿದ್ದದ್ದು ಮರವಂತೆಗೆ. ಅಲ್ಲಿ ಒಂದು ಬದಿ ಸಮುದ್ರವಾದರೆ ಇನ್ನೊಂದು ಬದಿ ನದಿ. ಅವೆರಡರ ಮಧ್ಯೆ ತಲೆಯ ಮೇಲಿನ ಬೈತಲೆಯಂತೆ ನ್ಯಾಶನಲ್ ಹೈವೆ. ಸುರ ಸುಂದರ ಸ್ಥಳವದು. ಅದು ಆಳವಾದ ಕಡಲು. ಅಲೆಗಳ ರಭಸವೂ ಜಾಸ್ತಿ. ಅದರ ನೀರಿನಲ್ಲಿ ತುಂಬಾ ಮುಂದೆ ಹೋಗಲು ಆಗುವುದಿಲ್ಲ. ಆದರೂ ಅದರ ತೀರದಲ್ಲಿ ಆಟವಾಡುವುದು ಸೊಗಸೇ ಸೈ. ಸಣ್ಣವರಿದ್ದಾಗ ಮರಳ ರಾಶಿಯಲ್ಲಿ ಗೂಡು ಮಾಡುವುದೊಂದು ಮೋಜು. ಪಾದವನ್ನು ಮರಳಿನ ಒಳಗಿಟ್ಟು ಮೇಲೆ ಮರಳನ್ನು ಒತ್ತಿ ಇಟ್ಟು ನಂತರ ನಿಧಾನವಾಗಿ ಕಾಲನ್ನು ತೆಗೆಯಬೇಕು. ಸ್ವಲ್ಪ ಏಮಾರಿದರೂ ಗೂಡು ಮಟಾಷ್. ಗೂಡು ಹಾಳಾಗದೆ ಚೆಂದ ಇದ್ದರೆ ಅದರ ಸುತ್ತ ಮನೆಯಾಟವಾಡುತ್ತಿತ್ತು. ನಂತರ ಬೇಕಂತಲೇ ಇನ್ನೊಬ್ಬರ ಗೂಡನ್ನು ತುಳಿದು ಹಾಳು ಮಾಡುತ್ತಿತ್ತು. ಜಗಳ ತಾರಕಕ್ಕೆ ಹೋದಾಗ ಹಿರಿಯರ ಮಧ್ಯಸ್ಥಿಕೆಯ ಅಗತ್ಯ ಹುಟ್ಟುತ್ತಿತ್ತು ಇನ್ನೊಂದು ಮೋಜಿನ ವಿಷಯವೆಂದರೆ ಕವಡೆ, ಕಪ್ಪೆಚಿಪ್ಪುಗಳನ್ನು ಹೆಕ್ಕಿ ಒಟ್ಟು ಮಾಡುವುದು. ಆ ಚಿಪ್ಪುಗಳ ಮೇಲೆ ವಿಚಿತ್ರವಾದ ಡಿಸೈನ್ ಇದ್ದರೆ ನಮಗೆ ಖುಷಿ. ತುಂಬಾ ಚಿತ್ತಾರದ ಚಿಪ್ಪುಗಳನ್ನು ಒಟ್ಟು ಮಾಡಿ ಮನೆಗೆ ತಗೊಂಡು ಹೋಗಿ ಅಮ್ಮನತ್ರ ಬೈಸಿಕೊಂಡದ್ದಿದೆ. ಆ ಚಿಪ್ಪುಗಳನ್ನು ರಟ್ಟಿನ ಮೇಲೆ ಅಂಟಿಸಿ ಚೆಂದದ ಡಿಸೈನ್ಸ್ ಮಾಡಿದ್ದಿದೆ.
ನಾವು ಸಮುದ್ರದಲ್ಲಿ ನೀರಾಟವಾಡುವಾಗ ಆಪ್ಪನೂ ಕೂಡ ಜೊತೆ ಸೇರುತ್ತಿದ್ದರು. ನೀರಿನೊಳಗೆ ಚಂಡಾಟ ಆಡುತ್ತಿತ್ತು ಕೂಡಾ. ಆ ಅಲೆಗಳ ಹೊಡೆತಕ್ಕೆ ಬೆನ್ನು ಮಾಡಿ ನಿಂತಾಗ, ಎತ್ತರದ ಅಲೆ ಬಂದು ಆದರೊಡನೆ ಹಾರುವಾಗ, ನಂತರದಲ್ಲಿ ನೆಲದಲ್ಲಿ ಕಾಲೂರಲಾಗದೆ ನೀರಿನೊಳಗೆ ಮುಳುಗಿ ಉಪ್ಪು ನೀರು ಮೂಗಿನೊಳಗೆ ಹೋಗಿ ಉರಿ ಹತ್ತುವುದೆಲ್ಲ ಒಂದು ರೀತಿಯ ಥ್ರಿಲ್! ನಾವು ತುಂಬ ಜನ ಹೋದಾಗ ನಮ್ಮನ್ನು ಹಿಡಿಯುವವರೇ ಇಲ್ಲ. ಒಂದು ರೀತಿಯ ಕ್ರೇಜಿವರ್ಲ್ಡ್ ಸೃಷ್ಟಿಯಾಗುತ್ತಿತ್ತಾಗ!
ಕೆಲವೊಮ್ಮೆ ಕೆಲವೇ ಕೆಲವು ಮಂದಿ ಹೋಗಿ ನಿಶ್ಶಬ್ದವಾಗಿ ಕುಳಿತು ಸಮುದ್ರದಲೆಗಳ ಸಪ್ಪಳ ಕೇಳುವುದೂ ಅಷ್ಟೇ ಚೆಂದ. ಬೇಸರಾದಾಗ ಸಮುದ್ರ ತೀರಕ್ಕೆ ಹೋಗಿ ಮುಳುಗುವ ಸೂರ್ಯನನ್ನು ನೋಡಿದರೆ ಆ ಬಣ್ಣಗಳ ಓಕುಳಿಯಾಟ ಮನಸ್ಸಿನ ದುಗುಡವನ್ನು ಓಡಿಸುವುದು ನಿಸ್ಸಂಶಯ. ಕತ್ತಲಾಗುತ್ತಿದ್ದಂತೆ ಬಹು ದೂರದಲ್ಲಿ ಕಾಣುವ ಹಡಗುಗಳ ಮಿಣುಕು ದೀಪ ಸಮುದ್ರದ ನಿಗೂಢತೆಗೆ ಕನ್ನಡಿ ಹಿಡಿದಂತೆನಿಸುತ್ತದೆ. ಮನೆಗೆ ಮರಳಿದ ನಂತರ ಬಾವಿಕಟ್ಟೆಯಲ್ಲಿ ಬಾವಿಯಿಂದ ನೀರೆಳೆದು ತಣ್ಣನೆಯ ನೀರನ್ನು ಹೊಯ್ದುಕೊಳ್ಳುತ್ತಾ ಮೈಗಂಟಿದ ಮರಳನ್ನು ತೊಳೆಯುತ್ತಾ ಬಂದಂತೆ ಮನಕ್ಕಂಟಿದ ಚಿಂತೆಗಳು ತೊಳೆದು ಹೋಗುತ್ತಾ ಮನ ಹಗುರವಾಗುತ್ತಾ ಹೋಗುವ ಅನುಭವ ಹಿತವಾದದ್ದು.
ಕಡಲ ತೀರವೇ ಹಾಗೆ. ಮನದಲ್ಲಿದ್ದ ಯೋಚನೆಗಳ ಭಾರ ತಗ್ಗಿಸಿ ನಿರ್ಯೋಚನಾ ಸ್ಥಿತಿ ತಲುಪಿಸುತ್ತದೆ. ಕಡಲ ಕರೆಯೇ ಮೋಹಕ. ಆದರೀಗ ಘಟ್ಟದ ಮೇಲಿರುವ ನನಗೆ ಕಲ್ಪನೆಯ ಕಡಲೇ ಗತಿ
70. ಅನುಭವ - ಸ್ವಚಿಂತನೆ
ಅಭಿ ಯಾವಾಗಲೂ ನನಗೆ ಹೇಳ್ತಾ ಇರ್ತಾಳೆ, "ಶೋಭಾ, ನಿನ್ನಲ್ಲಿರುವ ಮಗುತನ ನಿನ್ನನ್ನು ಉಳಿದವರಿಗಿಂತ ವಿಭಿನ್ನವಾಗಿಸುತ್ತದೆ. ಅದು ನಿನ್ನ ಶಕ್ತಿ" ಎಂದು. ಇಂತಹುದರ ಬಗ್ಗೆ ಅಷ್ಟಾಗಿ ಯೋಚಿಸಿರದ ನಾನು ನನ್ನಲ್ಲಿರುವ ಗುಣಸ್ವಭಾವಗಳ ಬಗ್ಗೆ ಗಮನಿಸತೊಡಗಿದಾಗ ನನ್ನಲ್ಲಿ ಮಗುವಿನಂತೆ ಸಣ್ಣ ಸಣ್ಣ ವಿಷಯಗಳಿಂದ ಸಂತಸ ಪಡೆದುಕೊಳ್ಳುವ ಗುಣ, ಥಟ್ಟನೆ ಎಲ್ಲರನ್ನು ನಂಬುವ ಮುಗ್ಧತೆ, ಮಕ್ಕಳಂತೆ ಕಲ್ಪನಾಲೋಕದಲ್ಲಿ ವಿಹರಿಸುವ ಮನಸ್ಥಿತಿ, ಸಣ್ಣ ವಿಷಯಗಳಲ್ಲಿ ಪಡೆಯುವ ತೃಪ್ತಿ(ಸ್ವಂತ ಬದುಕಿನಲ್ಲಿ), ಮಕ್ಕಳೊಂದಿಗೆ ಒಂದಾಗುವ ಗುಣ, ಉಳಿದವರ ಬಗ್ಗೆ ನನ್ನೊಳಗೆ ಹುಟ್ಟುವ ಸಹಜ ಪ್ರೀತಿಯ ಭಾವ, ಮಕ್ಕಳಂತೆ ವಿಪರೀತ ಉಮೇದಿನ ಸ್ವಭಾವ... ಈ ಎಲ್ಲಾ ಗುಣಗಳಿರುವುದು ಅರಿವಿಗೆ ಬಂದಿತು. ಪ್ರಾಯಶಃ ಇವೆಲ್ಲವುದರಿಂದಾಗಿ ನನ್ನ ಬದುಕಿನ ಕಟು ಸಮಸ್ಯೆಗಳು/ಪರೀಕ್ಷೆಗಳು ನನ್ನ ಬದುಕನ್ನು ಯಾವತ್ತೂ ಅಸಹನೀಯವಾಗಿಸಲೇ ಇಲ್ಲವೇನೋ ಎಂದನಿಸಿತು.
ಜೀವನವನ್ನು, ಸಂಬಂಧಗಳನ್ನು ಅನಗತ್ಯವಾಗಿ ಕಾಂಪ್ಲಿಕೇಟ್ ಮಾಡಿಕೊಳ್ಳುವ ಮನಸ್ಥಿತಿಯ ಪ್ರತಿಯೊಬ್ಬರೂ ಇಂತಹ ಮಗುತನದಿಂದ ತುಂಬು ಬದುಕನ್ನು ಬದುಕಬಹುದು ಎನ್ನುವುದು ನಾನು ಈವರೆಗೆ ಕಂಡುಕೊಂಡ ಸತ್ಯ. ಖುಷಿಯಾಗಿರಲು ಮನಸ್ಥಿತಿ ಮುಖ್ಯವೇ ವಿನಃ ಪರಿಸ್ಥಿತಿಯಲ್ಲ. ನನ್ನ ಜೀವನದ ಅತ್ಯಂತ ನಿರ್ಣಾಯಕ ಪರಿಸ್ಥಿತಿಯಲ್ಲೂ ನನ್ನನ್ನು ನನ್ನ ಈ ಮಗುತನ ಕುಸಿದು ಹೋಗಲು ಬಿಟ್ಟಿಲ್ಲ ಅನ್ನುವುದಂತೂ ನಿಜ.
ಖುಷಿಯಾಗಿರಲಿಕ್ಕೆ ದೊಡ್ಡಂತಸ್ತಿನ ಅರಮನೆ ಬೇಕೆಂದಿಲ್ಲ. ಸಹಜ ಕುತೂಹಲವಿದ್ದರೆ ಒಂದು ಇರುವೆಯ ಸಾಲು, ಚೆಂದದ ಹಕ್ಕಿ, ಪ್ರಾಣಿಗಳ ಮರಿಗಳು, ಹಳ್ಳಿಯ ಬೊಚ್ಚುಬಾಯಿಯ ಮುಗ್ದ ವೃದ್ಧರ ನಗು ಕೂಡಾ ಖುಷಿ ಕೊಡುತ್ತದೆ. ಜೀವನದಲ್ಲಿ ಸರಳತೆಯಿದ್ದಲ್ಲಿ ಮರಗಿಡ, ಗುಡ್ಡಬೆಟ್ಟ, ನದಿ ಸಮುದ್ರ ತಟಗಳು ಸಹಜ ಸುಖದ ಸುಷುಪ್ತಿಯೊಳಗೆ ನಮ್ಮನ್ನು ಒಯ್ಯುತ್ತವೆ. ನಮ್ಮೊಳಗಿನ ಮಗುತನ ಸಕಾರಾತ್ಮಕ ಭಾವದ ಬೆಳವಣಿಗೆಗೆ ಒತ್ತು ಕೊಟ್ಟು ನಮ್ಮನ್ನೆಲ್ಲ ಒಳಿತಿನೆಡೆಗೆ ಕೊಂಡೊಯ್ದರೆ ಬದುಕು ಸ್ವಾರಸ್ಯಕರವಾಗುವುದು ನಿಜವಲ್ಲವೆ?
69. ನೆನಪುಗಳು
ಇತ್ತೀಚಿನ ದಿನಗಳಲ್ಲಿ ನನಗೆ ಒಲಿದು ಬಂದದ್ದು ಬರವಣಿಗೆಯ ಹವ್ಯಾಸ. ಅದರಿಂದ ಮೂಡಿ ಬಂದ ಲೇಖನಗಳಿಗೆ ಪೂರಕವಾದ ಹಳೆಯ ಫೋಟೊಗಳನ್ನು ಹುಡುಕುವಾಗ ಕಳೆದುಹೋದ ಸಮಯದ ನಿಚ್ಚಳರೂಪ ಕಾಣತೊಡಗಿತು. ಹಳೆಯ ಫೋಟೊಗಳು ಹಳೆಯ ನೆನಪುಗಳನ್ನು, ತಾರುಣ್ಯದ ದಿನಗಳನ್ನು ನನ್ನ ಯೋಚನೆಯ ಮುಂಚೂಣಿಗೆ ತಂದವು. ಆ ಹಳೆಯ ನೆನಪುಗಳೆಲ್ಲ ಮರುಕಳಿಸಿ ಸುತ್ತುತ್ತಾ ನಿಜಕ್ಕೂ ಒಂದು ಹಂತದಲ್ಲಿ ನನ್ನನ್ನು ಒಳಗೊಳಗೆ ಅಲ್ಲಾಡಿಸಿ ಬಿಟ್ಟವು ಅಂದರೆ ಸುಳ್ಳಲ್ಲ. ತಾರುಣ್ಯದ ಆ ಕನಸುಗಣ್ಣಿನ ಹೊಳಪು, ಬಳಕುವ ದೇಹಾಕೃತಿ, ತಲೆಬಿಸಿ ಇಲ್ಲದ ಸ್ವಚ್ಛಂದ ಬದುಕು...... ಹೀಗೆ ಮನಕ್ಕೆ ಮುದ ನೀಡುವ ನೆನಪುಗಳು ಖುಷಿ ಕೊಟ್ಟರೆ ಹುಡುಗಾಟಿಕೆಯಲ್ಲಿ ನನ್ನವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಸ್ಪಂದಿಸದೆ ಇರುವ ಅಪರಾಧಿ ಭಾವ ಕೂಡ ಕಾಡತೊಡಗಿತು. ಬರೀ ಕಳಕೊಂಡಿದ್ದು ಮಾತ್ರವಲ್ಲ ಪಡಕೊಂಡಿದ್ದು ಹಲವಾರಿವೆ ಎನ್ನುವ ಸತ್ಯ ಸಾಕ್ಷಾತ್ಕಾರವಾಯಿತು ಕೂಡಾ. ಯೌವ್ವನ ಕಳೆದು ಹೋದರೂ ಚಿಂತನೆಯ ಪ್ರೌಢಿಮೆ ದೊರೆತಿದೆ; ವ್ಯಕ್ತಿಗಳನ್ನು ಕಳಕೊಂಡರೂ ಅವರೊಡನೆ ಕಳೆದ ಕ್ಷಣಗಳ ಭಂಡಾರವಿದೆ; ಊರು ಬಿಟ್ಟು ಹೊರಬಂದರೂ ಅದರೊಟ್ಟಿಗಿನ ನಂಟಿನ ಅಂಟಿನ ಅನುಭವವಿದೆ; ಜೀವನದ ಪಯಣದ ದಾರಿಯಲ್ಲಿ ಸಿಕ್ಕ ಹೊಸ ಆಪ್ತರ ಸಹವಾಸವಿದೆ; ನಮ್ಮ ಮಕ್ಕಳ ಆರೋಗ್ಯಕರ ಬೆಳವಣಿಗೆಯನ್ನು, ಅವರ ಚಿಂತನೆಯ ಮಾಗುವಿಕೆಯನ್ನು ನೋಡುವ ಭಾಗ್ಯವಿದೆ. ಕಳೆದುಕೊಳ್ಳವುದು, ಪಡೆದುಕೊಳ್ಳುವುದು ಬದುಕಿನ ಹಾಸಿನ ದಾಳದಾಟ ಎನ್ನುವ ಅರಿವೂ ಮೂಡಿದೆ.
ಇಲ್ಲಿ ತಿಳಿದುಕೊಂಡ ಇನ್ನೊಂದು ಸತ್ಯವೇನೆಂದರೆ ತಲೆಕೂದಲು ಹಣ್ಣಾಗುವುದಕ್ಕೂ ಜೀವನಾಸಕ್ತಿ ಉಳಿಸಿಕೊಳ್ಳುವುದಕ್ಕೂ ಯಾವುದೇ ತಾಳಮೇಳ ಇಲ್ಲವೆನ್ನುವುದು. ಇದು ಕನಕದಾಸರು ಹೇಳಿದ " ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊll ನೀ ದೇಹದೊಳಗೊ ನಿನ್ನೊಳು ದೇಹವೊll" ಎಂಬಂತೆ ವಿಶ್ಲೇಷಣೆಗೆ ಮೀರಿದ ವಿಷಯ. ಕಾಲ ಸಾಗುತ್ತಿರುತ್ತದೆ; ಅದರೊಟ್ಟಿಗೆ ಸಾಗುವ ನಾವು ಎಲ್ಲೋ ಒಂದು ಕಾಲಘಟ್ಟದಲ್ಲಿ ಬಿಡುವು ತೆಗೆದುಕೊಂಡು ಹಿಂದಿರುಗಿ ನೋಡಿದಾಗ ನಾವು ನಡೆದು ಬಂದ ಜೀವನ ದರ್ಶನವಾಗುತ್ತದೆ. ಹಾಗೆಯೇ ಮುಂದೆ ಸಾಗಲಿರುವ ದಾರಿಯೂ ಕಾಣತೊಡಗುತ್ತದೆ. ಈ ಪಯಣದಲ್ಲಿ ಸಾಗುತ್ತಿರುವುದಷ್ಟೇ ನಮ್ಮ ಆಯ್ಕೆಯೇನೋ ಅಂತ ಕೆಲವೊಮ್ಮೆ ಅನಿಸುತ್ತದೆ. ಆದರೂ ಮನದ ಮೂಲೆಯಲ್ಲೆಲ್ಲೋ ನಾನು ನನ್ನ ತಾರುಣ್ಯದಲ್ಲೇ ಇದ್ದಿದ್ದಿದ್ದರೆ ಎಂಬ ಭಾವ ಕಾಡುತ್ತಿರುತ್ತದೆ!?
68. ಪರಿಸರ - ಅನುಭವ (ಗ್ರಹಣ)
1980ರ ಫೆಬ್ರವರಿ 16ರಂದು ಕುಂದಾಪುರದಲ್ಲಿ ಕಂಡ ಸಂಪೂರ್ಣ ಸೂರ್ಯಗ್ರಹಣ ಹಾಗೂ 2019 ಡಿಸೆಂಬರ್ 26ರಂದು ಮಂಗಳೂರಿನಲ್ಲಿ ಕಂಡ ಕಂಕಣ ಸೂರ್ಯಗ್ರಹಣವನ್ನು ನೋಡಿದ ಭಾಗ್ಯಶಾಲಿ ನಾನು.
ನಾನಾಗ 8ನೇ ತರಗತಿಯಲ್ಲಿ ಕುಂದಾಪುರದಲ್ಲಿ ಓದುತ್ತಿದ್ದೆ. ಫೆಬ್ರವರಿ 16ರಂದು ಸಂಪೂರ್ಣ ಸೂರ್ಯಗ್ರಹಣ ಎಂದು ನಾವೆಲ್ಲ ಮನೆಯೊಳಗೆ ಇದ್ದೆವು. ನನ್ನಪ್ಪ ಕಿಟಕಿಯ ಬಳಿ ಸಣ್ಣ ಕನ್ನಡಿಯನ್ನಿಟ್ಟು ಗ್ರಹಣದ ಪ್ರತಿಫಲನ ಮನೆಯೊಳಗೆ ಬೀಳುವ ಏರ್ಪಾಡು ಮಾಡಿದ್ದರು. ಆದರೂ ನಾನು, ನನ್ನ ತಂಗಿ ಕಿಟಕಿಯ ಸಂಧಿಯಿಂದ ಎಕ್ಸ್ ರೆ ಶೀಟ್ ಹಿಡಿದುಕೊಂಡು ಹೊರಗೆ ನೋಡುವ ಪ್ರಯತ್ನ ಮಾಡಿದ್ದೆವು. ಮಧ್ಯಾಹ್ನ ಸುಮಾರು ಹನ್ನೆರಡುವರೆಯ ಆಸುಪಾಸು. ಕೆಲವು ನಿಮಿಷಗಳು ಸಂಪೂರ್ಣ ಸಂಜೆಗತ್ತಲು ಆವರಿಸಿ ಹಕ್ಕಿಗಳೆಲ್ಲ ಚಿಲಿಪಿಲಿಗುಡುತ್ತಾ ಗೂಡಿಗೆ ಹಿಂದಿರುಗುವ ದೃಶ್ಯ ಇನ್ನೂ ನನ್ನ ಕಣ್ಣು ಕಟ್ಟಿದಂತಿದೆ(ಅರೆತೆರೆದ ಕಿಟಕಿಯ ಸಂಧಿಯಿಂದ ನೋಡಿದ್ದು ಮತ್ತೇ!) ಸುಮಾರು ನಾಲ್ಕೈದು ಘಂಟೆಗಳ ಕಾಲ ಇದ್ದ ಗ್ರಹಣವದು. ಗ್ರಹಣ ಮುಗಿದ ಮೇಲೆ ಸಂಜೆ ಅಪ್ಪ ಅಷ್ಟು ಹೊತ್ತು ಒಳಗಿದ್ದ ಬೇಸರ ಕಳೆಯಲು ಕಾರಿನಲ್ಲಿ ನದಿತೀರಕ್ಕೆ ಕರೆದುಕೊಂಡು ಹೋಗಿದ್ದರು. ತದನಂತರದ ದಿನಗಳಲ್ಲಿ ವಾರ್ತಾ ಮತ್ತು ಪ್ರಸಾರ ಇಲಾಖೆಯವರು ಗ್ರಹಣ ಕಾಲದ ಒಂದು ಗಂಟೆಯ ಡಾಕ್ಯುಮೆಂಟರಿಯನ್ನು ಮೊಬೈಲ್ ವ್ಯಾನಿನಲ್ಲಿ ಬಂದು ಊರೂರುಗಳಲ್ಲಿ ತೋರಿಸಿದ್ದರು. ವಜ್ರದುಂಗುರದಂತೆ ಕಾಣುತ್ತಿದ್ದ ಆ ಗ್ರಹಣದ ಚಿತ್ರಣ ಅದ್ವಿತೀಯವಾಗಿತ್ತು. ಆ ಗ್ರಹಣ ಸಂಪೂರ್ಣವಾಗಿ ಕಾಣುವ ಸ್ಥಳಗಳಲ್ಲಿ ಒಂದು ಸ್ಥಳ ಕುಂದಾಪುರವೂ ಆಗಿತ್ತು.
2019ರ ಡಿಸೆಂಬರ್ 26ರ ಕಂಕಣ ಸೂರ್ಯಗ್ರಹಣವನ್ನು ನಾನು, ನನ್ನ ಮಗಳು ಹಾಗೂ ಡಿಂಗ ಮಂಗಳೂರಿನ ನವೋದಯ ಕ್ಯಾಂಪಸ್ಸಿನಲ್ಲಿ ನೋಡಿತು. ರೇಖಾ - ಅಶೋಕರನ್ನು ಭೇಟಿಯಾಗಲು ಹೋದ ನಮಗೆ ಅಲ್ಲೇ ಗ್ರಹಣ ನೋಡುವ ಅವಕಾಶ ಸಿಕ್ಕಿತು. ನಮ್ಮ ಬಳಿ ಟಿನ್ ಫಾಯಿಲ್ ನ ಸೌರ ಕನ್ನಡಕ ಇದ್ದ ಕಾರಣ ನಾವು ಇಡೀ ಗ್ರಹಣವನ್ನು ಮನೆಯ ಹೊರಗಿನಂಗಳದಲ್ಲಿ ನೋಡಿ ಖುಷಿ ಪಟ್ಟಿತು. ಅದೊಂತರ ಥ್ರಿಲ್ಲಿಂಗ್ ಎಕ್ಸ್ಪೀರಿಯನ್ಸ್! ದುಡ್ಡು ಕೊಟ್ಟರೂ ಸಿಗುವ ಅನುಭವ ಅದಲ್ಲ. ಈ ಬಾರಿ ಗ್ಧಹಣದ ಸಮಯದಲ್ಲಿ ಸ್ವಲ್ಪ ಬೆಳಕು ಕಡಿಮೆ ಆಯಿತೇ ಹೊರತು ಕತ್ತಲಾಗಲಿಲ್ಲ. ಆದರೂ ಗ್ರಹಣ ಹಿಡಿಯುವ, ಸಂಪೂರ್ಣವಾಗಿ ಆವರಿಸುವ ಹಾಗೂ ಗ್ರಹಣ ಬಿಡುವ ಪ್ರತಿಯೊಂದು ಕ್ಷಣವೂ ಅಪರೂಪದ ಅನುಭವ. ಇದೊಂದು ದೊಡ್ಡ ಸುಯೋಗವೇ ಸರಿ!
ನನಗೆ 2018ರ ಜುಲೈ 27ರಂದು ನಡೆದ ಶತಮಾನದ ಸಂಪೂರ್ಣ ಸುದೀರ್ಘ ರಕ್ತ ಚಂದ್ರಗ್ರಹಣವನ್ನು ಕೊಯಮತ್ತೂರಿನ ಆದಿಯೋಗಿಯ ಸನ್ನಿಧಿಯಲ್ಲಿ ಸದ್ಗುರುವಿನ ಜೊತೆ ನೋಡಿದ ಸ್ಮರಣೀಯ ಅನುಭವವೂ ಇದೆ. ಅದು ಸುಮಾರು ಒಂದೂ ಮುಕ್ಕಾಲು ಘಂಟೆ ನಡೆದ ಗ್ರಹಣ. ಹೊರಾಂಗಣದಲ್ಲಿ ನೂರಾರು ಜನ ಭಕ್ತ ಸಮೂಹದಲ್ಲಿ ಅಂತಹ ಭಕ್ತರಲ್ಲದ ನಾನು ಮತ್ತು ನನ್ನ ತಂಗಿ ತಾಸುಗಟ್ಟಲೆ ಕೂತು ನೋಡಿದ ಆ ಚಂದ್ರಗ್ರಹಣವನ್ನು ಮರೆಯಲು ಸಾಧ್ಯವೇ ಇಲ್ಲ. ವೆಳ್ಳಿಯಂಗಿರಿ ಪರ್ವತ ಸಾಲಿನ ಹಿನ್ನೆಲೆಯಲ್ಲಿ ಆದಿಯೋಗಿಯ ಬೃಹತ್ ವಿಗ್ರಹದ ಪಕ್ಕದಲ್ಲಿ ಗ್ರಹಣದ ಬಗ್ಗೆ ಸದ್ಗುರುವಿನ ನಿರೂಪಣೆಯನ್ನು ಕೇಳುತ್ತಾ ನೋಡಿದ ಆ ಚಂದ್ರಗ್ರಹಣ ನನ್ನ ಜೀವನದ ಅಪರೂಪದ ಘಳಿಗೆಗಳಲ್ಲೊಂದು.
ಗ್ರಹಣದ ಬಗ್ಗೆ ಯಾರ್ಯಾರ ಕಲ್ಪನೆ ಹೇಗೋ ನಾನರಿಯೆ. ನನಗಂತೂ ಅದೊಂದು ತಪ್ಪದೆ ನೋಡಲೇಬೇಕಾದ ದೃಶ್ಯ ಅಂತ ಅನಿಸುವುದಂತು ನಿಜ.
67. ಹೊಂಗಿರಣ ಶಾಲೆ - ಪ್ರಾರಂಭದ ನೆನಪುಗಳು.
ಹೊಂಗಿರಣವನ್ನು ನಾವು ಪ್ರಾರಂಭಿಸಿದ್ದೇ ಮುಕ್ತ ವಾತಾವರಣದಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ. ಆ ಮುಕ್ತ ವಾತಾವರಣದ ಸೃಷ್ಟಿ ಸುಲಭವಲ್ಲ. ಹೀಗಾಗಿ ಪ್ರಾರಂಭಿಕ ವರ್ಷದಿಂದಲೂ ಹೊಂಗಿರಣ ಹಲವಾರು ಪ್ರಯತ್ನಗಳನ್ನು/ಪ್ರಯೋಗಗಳನ್ನು ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಮಾಡತೊಡಗಿತು. ಮೊದಲ ವರ್ಷದಲ್ಲಿ ಇದ್ದ 47 ಮಕ್ಕಳಿಗೆ ಹಾಗೂ 4 ಟೀಚರ್ಸ್ ಗಳಿಗೆ ಜೀರ್ಣಿಸಿಕೊಳ್ಳಲಾರದಷ್ಟು ಕಲಿಯುವ ಅವಕಾಶ ಸಿಕ್ಕಿದವು. ಶಾಲೆ ಬಿಟ್ಟ ಮೇಲೂ ಆ ದಿನದ ಕಾರ್ಯ ಚಟುವಟಿಕೆಗಳ ಅವಲೋಕನವನ್ನು ಟೀಚರ್ಸ್ ಗಳ ಜೊತೆಗೆ ಕುಳಿತು ಮಾಡುತ್ತಿದ್ದೆ.
ನಮ್ಮ ಪ್ರಯೋಗಗಳಿಗೆ ಮೊಟ್ಟ ಮೊದಲ ಸಹಾಯ ಪಡಕೊಂಡಿದ್ದು ನನ್ನ ಸ್ನೇಹಿತೆಯಾದ ಮೈಸೂರಿನ ಡೆಮಾನ್ಸ್ಟ್ರೇಶನ್ ಶಾಲೆಯ ಇಂಗ್ಲಿಷ್ ಶಿಕ್ಷಕಿ ಶ್ರೀಮತಿ ತ್ರಿವೇಣಿ ಯವರಿಂದ ಮಕ್ಕಳಿಗೆ ಹಾಗೂ ಟೀಚರ್ಸ್ ಗಳಿಗೆ ಬರವಣಿಗೆಯ ಸರಿಯಾದ ಕ್ರಮದ ಬಗ್ಗೆ ನಾಲ್ಕೈದು ದಿನಗಳ ಕಾರ್ಯಾಗಾರ ಮಾಡಿಸುವುದರ ಮೂಲಕ. ತದನಂತರದಲ್ಲಿ ಐ.ಕೆ. ಬೋಳುವಾರರಿಂದ ನಾಲ್ಕೈದು ದಿನಗಳ activity based learning ಬಗೆಗಿನ ಕಾರ್ಯಾಗಾರದಲ್ಲಿ ಥ್ರೋಬಾಲ್ ಆಡುತ್ತಾ ಚರಿತ್ರೆ ಪಾಠ ಮನನ ಮಾಡುವುದು, ವ್ಯಾಕರಣ ಕಲಿಯುವುದು, ಜಿಬಲಿ/ಜುಬುಲಿ ಆಟವಾಡುತ್ತಾ ಭೂಗೋಳ ಕಲಿಯುವುದು, ಕೈ ತೋಟದ ಮಧ್ಯೆ ಹಾಡುತ್ತಾ ಪರಿಸರ ಅಧ್ಯಯನ ಮಾಡುವುದು.... ಇವೆಲ್ಲವನ್ನು ತಿಳಿದುಕೊಳ್ಳುವ ಅವಕಾಶ ಸಿಕ್ಕಿತು. ಅವುಗಳನ್ನು ನಾವು ರೂಢಿಸಿಕೊಂಡಿದ್ದೆವು ಕೂಡಾ. ಬಂದಗದ್ದೆ ರಾಧಾಕೃಷ್ಣರ ಕಥೆ ಹೇಳುವ ಹಾಗೂ ನೈಸರ್ಗಿಕ ಬಣ್ಣ ಉಪಯೋಗಿಸಿ ಮಾಡುವ ಹಸೆ ಚಿತ್ರದ ಕಾರ್ಯಾಗಾರ ಇನ್ನೂ ಅಚ್ಚಳಿಯದ ನೆನಪಾಗಿ ಉಳಿದಿದೆ. ಆಗಿನ ಸಂಗೀತ ಶಿಕ್ಷಕರಾಗಿದ್ದ ಅನನ್ಯ ಭಾರ್ಗವರವರು ಕಲಿಸಿದ "ಆಕಾಶದವರೆಗೂ ನಾ ಹೋಗಿ... ಹಾಗೂ ತುಂಗೆಯ ತೀರದಲ್ಲಿ ಕನ್ನಡ ನಾಡಿನಲ್ಲಿ..." ಹಾಡುಗಳು ಇನ್ನೂ ಕಿವಿಯಲ್ಲಿ ರಿಂಗಣಿಸುತ್ತಿವೆ. ಆ ವರ್ಷದ ಗಾಂಧಿಜಯಂತಿಯಂದು ನಮ್ಮ ಪುಟ್ಟ ಮಕ್ಕಳು ನೀಡಿದ ಮುಕ್ಕಾಲು ಘಂಟೆಯ ಮೌಲ್ಯಾಧಾರಿತ ಕಾರ್ಯಕ್ರಮ ಹೊಂಗಿರಣದ ಹೊಸಹವೆಯನ್ನು ಜನರಿಗೆ ಪೂರ್ಣ ಪ್ರಮಾಣದಲ್ಲಿ ಪರಿಚಯಿಸಿತೆಂದರೆ ಸುಳ್ಳಲ್ಲ. ಪ್ರತಿಭಾಕಾರಂಜಿಯಲ್ಲಿ ನಮ್ಮ ಮಕ್ಕಳು ಭಾಗವಹಿಸಿದ ಹೆಚ್ಚಿನ ಸ್ಪರ್ಧೆಗಳಲ್ಲಿ ವಿಜೇತರಾಗಿ ಹೊಂಗಿರಣದ ಇರುವನ್ನು ಎಲ್ಲೆಡೆ ಪ್ರಚುರ ಪಡಿಸಿದರು.
ಆ ವರ್ಷದ ವಾರ್ಷಿಕೋತ್ಸವವಂತೂ ಮರೆಯಲಾಗದ್ದು. "ವಿಜಯನಗರ ವೈಭವ" ಎನ್ನುವ ಒಂದು ಕಥೆಯೊಳಗೆ ಚರಿತ್ರೆಯ ಪುಟಗಳನ್ನು ತಿರುವುತ್ತಾ ಮಕ್ಕಳಿಗೆ ಬೇಕಾದ ನೃತ್ಯ, ಹಾಡುಗಳನ್ನು ಸೇರಿಸಿ ಗದ್ದೆಮನೆ ರಾಘುವಿನಿಂದ ನಿರ್ದೇಶಿಸಲ್ಪಟ್ಟ ಒಂದೂವರೆ ಘಂಟೆಯ ಆ ನಾಟಕ ಪಾಲಕ - ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿತು. ಆ ವರ್ಷದ ನಮ್ಮ ಶ್ರಮ ವ್ಯರ್ಥವಾಗದೆ ಮಕ್ಕಳ ಕಲಿಕೆಗೆ ಪೂರಕವಾದ ಮುಕ್ತ ವಾತಾವರಣದ ಸೃಷ್ಟಿ ಕಾರ್ಯ ಪ್ರಾರಂಭವಾಯಿತು ಎಂದರೆ ತಪ್ಪಿಲ್ಲ. ನಮ್ಮ ಶಾಲೆಗೆ ಸೇರಿಸಿದ ಪಾಲಕರ ಮುಖದಲ್ಲಿ ತೃಪ್ತಿಯನ್ನು ಕಂಡಾಗ ನಮ್ಮಲ್ಲಿ ಹುಟ್ಟಿದ ಧನ್ಯತಾ ಭಾವ ನಮ್ಮ ಮುಂದಿನ ಹೆಜ್ಜೆಯನ್ನು ಇನ್ನೂ ಧೃಡವಾಗಿ ಇಡಲು ಒತ್ತು ನೀಡಿ ನಮ್ಮ ಕಾರ್ಯಕ್ಷೇತ್ರದ ವಿಸ್ತರತೆ ಹೆಚ್ಚಿಸಿತು.
66. ಹೊಂಗಿರಣ - ನೆನಪುಗಳು.
ನಾವು ಹೊಂಗಿರಣ ಪ್ರಾರಂಭಿಸಿದಾಗ ಶಾಲೆ ನಡೆಸಲು ಕಾಕಾಲ್ ಉಪ್ಪಿನಕಾಯಿ ಫ್ಯಾಕ್ಟರಿ ಗೋಡೌನ್ ಸಿಕ್ಕಿತಷ್ಟೇ! ಹಾಗಾದರೆ ನಮ್ಮ ಉಳಿಕೆಯ ಕಥೆ? ಹಳ್ಳಿಯಾಗಿದ್ದರಿಂದ ಬಾಡಿಗೆ ಮನೆ ಸಿಗುವ ಛಾನ್ಸ್ ಇರಲಿಲ್ಲ. ಆಗ ನಮ್ಮ ಉಳಿಕೆಗೆ ಮುಫತ್ತಾಗಿ ಜಾಗ ಕೊಟ್ಟವರು ಶ್ರೀ ಪ್ರಸನ್ನರವರು. ಉಪ್ಪಿನಕಾಯಿ ಫ್ಯಾಕ್ಟರಿಯ ರಸ್ತೆಯ ಆಚೆ ಪಕ್ಕದಲ್ಲಿದ್ದ ಅವರ ಮನೆಯ ಆಚೀಚೆಗೆ ಎರಡು ಔಟ್ ಹೌಸ್ ಗಳಿದ್ದವು. ಎರಡೂ ಕೂಡ ಟಾಯ್ಲೆಟ್, ಬಾತ್ರೂಂಗಳನ್ನು ಹೊಂದಿದ ಸುಮಾರು ಹತ್ತು/ಹನ್ನೆರಡು ಅಡಿ ಆಯಳತೆಯ ಕೊಠಡಿಗಳಾಗಿದ್ದವು. ನಾನು ಇರುತ್ತಿದ್ದ ರೂಂ ರಸ್ತೆಯ ಪಕ್ಕಕ್ಕಿತ್ತು. ನಾನಿರುತ್ತಿದ್ದ ರೂಮಿನ ಹಿಂಬಾಗಿಲು ತೆರೆದರೆ ಬಲಪಕ್ಕದಲ್ಲಿ ಟಾಯ್ಲೆಟ್ ಮತ್ತು ಬಾತ್ರೂಂ. ಅಲ್ಲೇ ಎಡ ಪಕ್ಕದಲ್ಲಿದ್ದ ಎರಡು x ಮೂರಡಿ ಅಳತೆಯ ಖಾಲಿ ಜಾಗದ ಕಟ್ಟೆಯ ಮೇಲೆ ನಮ್ಮ ಅಡುಗೆ ತಯಾರಾಗುತ್ತಿತ್ತು. ಇನ್ನೊಂದು ಪಕ್ಕಕ್ಕಿದ್ದ ರೂಮಿನಲ್ಲಿ ಮೂರ್ನಾಲ್ಕು ಜನ ಲೇಡಿ ಟೀಚರ್ಸ್ ಉಳಿಯುತ್ತಿದ್ದರು. ಇದ್ದ ಇಬ್ಬರು ಮೇಲ್ ಟೀಚರ್ಸ್ ಶಾಲಾ ಕಟ್ಟಡದಲ್ಲಿಯೇ ಉಳಿಯುತ್ತಿದ್ದರು. ಎಲ್ಲರಿಗೂ ಊಟತಿಂಡಿಯ ತಯಾರಿ ಆ ಪುಟ್ಟ ಕಟ್ಟೆಯ ಮೇಲೆಯೆ! ಒಮ್ಮೊಮ್ಮೆ ಅಶೋಕ್, ರೇಖಾ ಮತ್ತು ಮಕ್ಕಳು, ಸುರೇಶ, ಉಷಕ್ಕ ಮತ್ತು ಮಕ್ಕಳು ಬಂದಾಗ ನಾವಷ್ಟೂ ಜನ ಆ ಪುಟ್ಟ ರೂಮಿನ ಇಕ್ಕಟ್ಟಿನಲ್ಲಿ ಮಲಗಿದ್ದಿದೆ. ಒಟ್ಟಿಗಿರುವ ಮನಸ್ಸಿದ್ದಲ್ಲಿ ಜಾಗದ ಅಳತೆ ಒಂದು ದೊಡ್ಡ ವಿಷಯವೇ ಆಗುವುದಿಲ್ಲ ಎನ್ನುವ ಸತ್ಯವನ್ನು ತೋರಿಸಿದ ಜಾಗವದು.
ಪ್ರಸನ್ನರವರು ಊರಿನಲ್ಲಿ ಇರುತ್ತಿದ್ದದ್ದು ಕಡಿಮೆ ಇದ್ದ ಕಾರಣ ಆ ಇಡೀ ವಠಾರವೇ ನಮ್ಮ ಸಾಮ್ರಾಜ್ಯವಾಗಿತ್ತು.
ನಮ್ಮೆಲ್ಲರ ಅಡುಗೆಗೆ ನಾನು ಹೆಡ್ ಕುಕ್. ನಮ್ಮ ಲೇಡಿ ಟೀಚರ್ಸ್ ನನ್ನ ಹೆಲ್ಪರ್ಸ್ ಆಗಿದ್ದರು. ಬಗೆಬಗೆಯ ಸರಳ ಅಡುಗೆ ಮಾಡುವುದು ನಮ್ಮ ವಿಶೇಷವಾಗಿತ್ತು. ಬೆಳಿಗ್ಗೆ ವೆರೈಟಿ ದೋಸೆಗಳು, ಇಡ್ಲಿ, ಅವಲಕ್ಕಿ, ಉಪ್ಪಿಟ್ಟಾದರೆ ಸಂಜೆ ಒಂದು ಚಾ, ರಾತ್ರಿ ಸಾಂಬಾರ್/ಸಾರು/ ತಂಬುಳಿ/ಪಲ್ಯ/ ಗೊಜ್ಜನ್ನೊಳಗೊಂಡ ಸರಳ ಊಟ ಆ ರೂಮಿನ ಕಟ್ಟೆಯಡುಗೆಮನೆಯಲ್ಲಿ ತಯಾರಾಗುತ್ತಿತ್ತು. ನಂತರ ಉಂಡವರೆಲ್ಲ ಸೇರಿ ಪಾತ್ರೆ ಪರಡಿ ತೊಳೆದು ಸೇರಿಸಿಡುತ್ತಿದ್ದರು. ಮಧ್ಯಾಹ್ನದ ಊಟ ಶಾಲೆಯಲ್ಲಿ. ಎಲ್ಲರಿಗೂ ಹೆಗ್ಗೋಡಿನ ಅನುಪಮಾ ಎನ್ನುವವರಿಂದ ಪ್ಲೇಟಿಗೆ ಇಂತಿಷ್ಟು ಎನ್ನುವ ಲೆಕ್ಕಾಚಾರದಲ್ಲಿ ರೆಡಿ ಫುಡ್ ತರಿಸುತ್ತಿತ್ತು.
ಯಾವುದೇ ಮೂಲಭೂತ ಸೌಕರ್ಯಗಳು ಸರಿಯಿಲ್ಲದಿದ್ದರು ಅದನ್ನು ಅರಿತು ಬಾಳುವ ಮನಸ್ಥಿತಿ ಸರಿಯಿದ್ದ ಆ ಕಾಲಘಟ್ಟ ಬದುಕಿನ ಬದಲಾವಣೆಗೆ ಹೊಂದಿಕೊಳ್ಳುವುದನ್ನು ಕಲಿಸಿತೇ ವಿನಃ ಗೊಣಗುಟ್ಟುವುದನ್ನು ಕಲಿಸಲಿಲ್ಲ. ಎಷ್ಟೋ ಬಾರಿ ನಾವೆಲ್ಲ ಒಟ್ಟಿಗೆ ಹೋಗಿ ದಾರಿಯುದ್ದಕ್ಕೂ ಬಿದ್ದಿರುತ್ತಿದ್ದ ಕಟ್ಟಿಗೆಯನ್ನು ಆರಿಸಿ ತಂದು ನೀರನ್ನು ಕಾಯಿಸಿದ ದಿನಗಳಿವೆ. ನಮ್ಮ ಒದ್ದಾಟ ನೋಡಲಾಗದೆ ನಮಗೆ ಹಾಲು ಕೊಡುತ್ತಿದ್ದ ಅಮಟೆಕೊಪ್ಪದ ಶ್ರೀಧರ್ ರವರು ಒಂದು ಲೋಡ್ ಕಟ್ಟಿಗೆಯನ್ನು ನಮಗೆ ಮುಫತ್ತಾಗಿ ಕೊಟ್ಟ ಘಟನೆಗಳೂ ಇವೆ. ಬೇಸಿಗೆಯಲ್ಲಿ ಬಾವಿಯಲ್ಲಿ ನೀರಿಲ್ಲದೆ ಬುಡದಲ್ಲಿರುತ್ತಿದ್ದ ಹುಳ ಬಂದಿರುತ್ತಿದ್ದ ನೀರನ್ನು ಸೋಸಿ ಬಳಸಿದ್ದಿದೆ. ಈಗ ಇವನ್ನೆಲ್ಲ ನೆನಪಿಸಿಕೊಂಡಾಗ ಬದುಕು ಹೀಗೂ ಇತ್ತೇ ಎಂದು ಆಶ್ಚರ್ಯವಾಗುತ್ತದೆ. ಅಂತಹ ಬದುಕನ್ನೂ ಆಸ್ವಾದಿಸಿ ಖುಷಿಯಿಂದಿದ್ದ ಆ ಶಿಕ್ಷಕರ ಬಗ್ಗೆ ಹೆಮ್ಮೆ ಎನಿಸುತ್ತದೆ.
65. ಶಾಲೆ ನೆನಪುಗಳು
ಶಾಲೆ ಅಂದ ಕೂಡಲೆ ನೆನಪಾಗುವುದು ಪಾಠ ಹಾಗೂ ಪಠ್ಯ ಪೂರಕ ಚಟುವಟಿಕೆಗಳು. ಆಗೆಲ್ಲ ಈಗಿನಂತೆ ಸ್ಕೂಲ್ ಡೇ ಪ್ರತಿ ವರ್ಷ ಮಾಡುತ್ತಿರಲಿಲ್ಲ ಅಂತ ಕಾಣುತ್ತದೆ. ಏಕೆಂದರೆ ಒಂದರಿಂದ ಮೂರನೇ ತರಗತಿಯವರೆಗೆ ಹೆಬ್ರಿಯ ಸ.ಕಿ.ಪ್ರಾ. ಶಾಲೆಯಲ್ಲಿ ಕಲಿತ ನಾನು ಸ್ಟೇಜ್ ಮೇಲೆ ಒಮ್ಮೆ ಸಮೂಹ ನೃತ್ಯ ಮಾಡಿದ ನೆನಪಿದೆ. ನಂತರದಲ್ಲಿ ಆರನೇ ತರಗತಿಯವರೆಗೆ ಶಿವಮೊಗ್ಗದ ಸೈಂಟ್ ಮೇರೀಸ್ ಕಾನ್ವೆಂಟ್ ನಲ್ಲಿ ಓದಿದ ನನಗೆ ಒಮ್ಮೆಯೂ ಸ್ಟೇಜ್ ಪರ್ಫಾಮೆನ್ಸ್ ಕೊಟ್ಟ ನೆನಪಿಲ್ಲ. ನಂತರ ಕುಂದಾಪುರದಲ್ಲಿ ಒಂಬತ್ತನೆಯ ಕ್ಲಾಸ್ ನಲ್ಲಿ ಓದುವಾಗ ಸ್ಕೂಲ್ ಡೇಯಲ್ಲಿ ಒಂದು ನಾಟಕ ಮಾಡಿದ ನೆನಪಿದೆ. ನಮಗೆ ಲೆಕ್ಕ ಹೇಳಿಕೊಡುತ್ತಿದ್ದ ವಾಲ್ಟರ್ ಮಾಸ್ಟರ್ ಒಂದು ನಾಟಕ ಮಾಡಿಸಿದ್ದರು. ಅದರಲ್ಲಿ ನನ್ನದು ಹುಡುಗನ ಪಾರ್ಟ್. ಅದಕ್ಕಾಗಿ ಒಂದು ಕಪ್ಪು ಪ್ಯಾಂಟ್, ಗೆರೆ ಗೆರೆ ಶರ್ಟ್ ಹೊಲಿಸಿದ್ದೆ. ನನ್ನ ಕೈಕಾಲುಗಳು ಯಾವಾಗಲೂ move ಆಗುತ್ತಿದ್ದ ಕಾರಣ ಮಾಸ್ಟರ್ ನನ್ನ ಎಡಗೈಯನ್ನು ಹೆಚ್ಚು ಅಲ್ಲಾಡಿಸದೆ ಮಡಚಿ ಇರಿಸುವಂತೆ ಮಾಡುತ್ತಿದ್ದರು. ನಾಟಕದ ದಿವಸ ನನಗರಿವಿಲ್ಲದೆ ಅಭ್ಯಾಸಬಲದಿಂದ ಎಡಗೈಯನ್ನು ಮಡಚಿ ಇಟ್ಟುಕೊಂಡು ಬಲಗೈಯೊಂದನ್ನೇ ಉಪಯೋಗಿಸುತ್ತಾ ನಾಟಕ ಮಾಡಿದ್ದು ನೆನಪಿದೆ ನಂತರ ನಾಟಕ ಮಾಡಿದ್ದು ಪಿಯುಸಿಯಲ್ಲಿ. ಅಲಿಬಾಬಾ ಮತ್ತು ನಲವತ್ತು ಜನ ಕಳ್ಳರು ನಾಟಕದಲ್ಲಿ ಮರ್ಜೀನಳ ಪಾತ್ರ.ಶಿವಮೊಗ್ಗದಲ್ಲಿ ಡಿಗ್ರಿ ಮಾಡುವಾಗ ನಾವೊಂದಿಷ್ಟು ಫ್ರೆಂಡ್ಸ್ ಬೀದಿ ನಾಟಕ ಮಾಡುತ್ತಿದ್ದೆವು. ಉಡುಪಿಯ ಎಂಜಿಎಂ ನಲ್ಲಿ ಫೈನಲ್ ಡಿಗ್ರಿ ಮಾಡುವಾಗ ಯೂನಿಯನ್ ಡೇ ಗೆ ನಾವೊಂದಿಷ್ಟು ಹುಡುಗಿಯರು ಫ್ಯಾಷನ್ ಶೋ ಮಾಡಿದ್ದೆವು. ತದನಂತರ ನನ್ನ ಸ್ಟೇಜ್ ಪರ್ಫಾಮೆನ್ಸ್ ಇದ್ದದ್ದು ಬಿಎಡ್ ಕಾಲೇಜಿನಲ್ಲಿ. ಇದಿಷ್ಟು ಪಾಠಕ್ಕೆ ಹೊರತಾಗಿ ಸಾಂಸ್ಕೃತಿಕವಾಗಿ ನನಗೆ ಸಿಕ್ಕ ಸೀಮಿತ ಅವಕಾಶಗಳು.
ಮಕ್ಕಳಿಗೆ ಇಂತಹ ಅವಕಾಶಗಳು ಸೀಮಿತವಾಗದಿರಲೆಂದು ಹೊಂಗಿರಣದಲ್ಲಿ ನಾವು ಪ್ರತಿ ವರ್ಷ 3 ದಿನಗಳ ಕಾಲ ಹೊಂಗಿರಣೋತ್ಸವ ಮಾಡಿ ಪ್ರತಿ ಮಗುವೂ ಸ್ಟೇಜಿನಲ್ಲಿ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ಹಾಗೂ ಅದಕ್ಕಾಗಿ ನಡೆಯುವ ಹತ್ತು ಹದಿನೈದು ದಿನಗಳ ಪ್ರಾಕ್ಟೀಸ್ನಲ್ಲಿ passive ಆಗಿ ಅನೇಕ ಕೌಶಲ್ಯಗಳನ್ನು ಕಲಿಯುವ ಅವಕಾಶ ಕಲ್ಪಿಸಿ ಕೊಡುತ್ತೇವೆ. ನನಗನಿಸುವ ಪ್ರಕಾರ ಈ ರೀತಿಯ ಅನುಭವಗಳು ಕ್ಲಾಸ್ ರೂಂ ಕಲಿಕೆಗಿಂತ ನಮ್ಮ ನೆನಪಿನಲ್ಲಿ ಹೆಚ್ಚಾಗಿ ಉಳಿಯುವಂತಹವು. ನಮ್ಮ ಹೊಂಗಿರಣದ ಮಕ್ಕಳು ಆ ಸಮಯದಲ್ಲಿ ತೋರಿಸುವ ಲವಲವಿಕೆ ಹಾಗೂ ಕಲೆಯನ್ನು ಕಲಿಯುವ ಪ್ರಕ್ರಿಯೆಯಲ್ಲಿ ಒಳಗೊಳ್ಳುವ ರೀತಿ ತದನಂತರ ಅವರ ವ್ಯಕ್ತಿತ್ವದಲ್ಲಾಗುವ ಬದಲಾವಣೆ ಎಲ್ಲವೂ ಇಂತಹ ಪಠ್ಯ ಪೂರಕ ಚಟುವಟಿಕೆಗಳ ಪರಿಣಾಮವನ್ನು ಸ್ಪಷ್ಟವಾಗಿ ತೋರಿಸುತ್ತವೆ. ನನಗೆ ಯಾರಾದರೂ "ನೀನು ನಿನ್ನ ಶಾಲಾ ದಿನಗಳಲ್ಲಿ ಏನು ಕಲಿತೆ?" ಎಂದು ಕೇಳಿದರೆ ನೆನಪಾಗುವುದು ಕಲಿತ ಪಾಠಗಳಲ್ಲ; ಅನುಭವಯುಕ್ತವಾಗಿ ಕಳೆದ ಕ್ಷಣಗಳಷ್ಟೆ! ಪ್ರತಿಯೊಬ್ಬರೂ ಇದನ್ನು ಅರಿತುಕೊಂಡು ಅಂತಹ ಅನುಭವಗಳನ್ನು ಕಟ್ಟಿಕೊಡುವಂತಹ ವಾತಾವರಣವನ್ನು ತಮ್ಮ ಶಾಲೆಗಳಲ್ಲಿ ಏಕೆ ಸೃಷ್ಟಿಸಬಾರದು? ಮಗು ಕೇವಲ ನಾಲ್ಕು ಗೋಡೆಯ ನಡುವೆ ಸಿಕ್ಕಿ ಹಾಕಿಕೊಂಡು ಬರೀ ಪಠ್ಯ ಕಲಿಕೆಯ ಹೊರೆಯಲ್ಲಿ ನಲುಗುವ ಬದಲು ಇಂತಹ ಮುಕ್ತ ವಾತಾವರಣ ಕೊಟ್ಟಾಗ ಮಗುವಿನ ಸಮಗ್ರ ವ್ಯಕ್ತಿತ್ವದ ಬೆಳವಣಿಗೆ ಆಗುವುದು ಸಹಜ ತಾನೆ?
64. ಪರಿಸರ - ನೆನಪುಗಳು (ಬಸ್ಸಿನ ಪ್ರಯಾಣ)
ನಾನು ಸುಮಾರು ಮೂರು ವರುಷ ನಮ್ಮೂರಿನಿಂದ ಉಡುಪಿಗೆ ಓದಿಗಾಗಿ ಪಯಣಿಸುವಾಗಿನ ಅನುಭವ. ಉಡುಪಿಯಲ್ಲಿ ಸಿಟಿ ಬಸ್ ಸ್ಟ್ಯಾಂಡ್ ಹಾಗೂ ಸರ್ವಿಸ್ ಬಸ್ ಸ್ಟ್ಯಾಂಡ್ ಅಂತ ಎರಡು ಬಸ್ ಸ್ಟ್ಯಾಂಡ್ ಗಳಿದ್ದವು. ನಾನು ಬೆಳಿಗ್ಗೆ ಊರಿನಿಂದ ಬಂದವಳು ಸಿಟಿ ಬಸ್ ಸ್ಟ್ಯಾಂಡ್ ಗೆ ಹೋಗದೆ ಕಲ್ಸಂಕದಲ್ಲಿ ಇಳಿದು ಸಿಟಿಬಸ್ ಹಿಡಿದು ಕಾಲೇಜಿಗೆ ಹೋಗುತ್ತಿದ್ದೆ. ಮಣಿಪಾಲಕ್ಕೆ ಹೋಗುವ ರೂಟ್ ಆದ ಕಾರಣ ಆ ಬಸ್ಸುಗಳಲ್ಲಿ ಬಹಳ ರಶ್ ಇರುತ್ತಿತ್ತು. ಎಷ್ಟೋ ಬಾರಿ ಫುಟ್ ಬೋರ್ಡಿನ ಮೇಲೆ ನಿಂತು ಕಾಲೇಜಿನ ತನಕ ಜೋತಾಡಿಕೊಂಡು ಹೋದದ್ದಿದೆ. ಬಸ್ಸಿನೊಳಗೆ ಇದ್ದರೆ ಆ ಇಕ್ಕಟ್ಟಿನಲ್ಲಿ ನಮಗೆ ಉಪದ್ರ ಕೊಡುವ ಒಂದು ವರ್ಗವೇ ಇತ್ತು. ಸುಮಾರು ಹತ್ತು ಹದಿನೈದು ನಿಮಿಷಗಳ ಪ್ರಯಾಣದಲ್ಲಿ ನಮಗೆ ವಿಚಿತ್ರ ಪ್ರಪಂಚ ದರ್ಶನವೇ ಆಗುತ್ತಿತ್ತು. ಒಮ್ಮೆಯಂತೂ ನನ್ನ ಗೆಳತಿಯೊಬ್ಬಳು ಉಪದ್ರ ಕೊಟ್ಟ 60ರ ಮುದುಕನಿಗೆ ಹೊಡೆದೇ ಬಿಟ್ಟಿದ್ದಳು ಸಂಜೆ ಹಿಂದಿರುಗುವಾಗ ಸರ್ವಿಸ್ ಸ್ಟ್ಯಾಂಡ್ ಗೆ ಹೋಗಿ ಊರಿನ ಬಸ್ ಹಿಡಿಯಬೇಕಿತ್ತು. ಅಲ್ಲೋ ಭಿಕ್ಷುಕರದ್ದೇ ದಂಡು. ನಮ್ಮ ಬಸ್ ಹೊರಡುವ ತನಕ ಅವರು ಬಸ್ಸಿನಿಂದ ಇಳಿಯುತ್ತಿರಲಿಲ್ಲ. ಮಕ್ಕಳನ್ನು ಬಗಲಲ್ಲಿ ಇರಿಸಿಕೊಂಡು ಹಾಡುತ್ತಾ ಅವರು ಭಿಕ್ಷೆ ಬೇಡುವ ಪರಿ ವಿಶಿಷ್ಟವಾಗಿತ್ತು. ನನ್ನ ಕಿವಿಯಲ್ಲಿ ಈಗಲೂ ರಿಂಗಣಿಸುವ ಅವರ ಹಾಡುಗಳಲ್ಲೊಂದು "ಸಾಯದ ಮೇರಾ ಸಾದಿ ಕಾ ಕಯಾಲ್ ದಿಲ್ ಮ ಆಯಾ ಹೆ". 'ಶ' ಕಾರ ಅವರ ಬಾಯಿಯಲ್ಲಿ 'ಸ' ಕಾರವಾಗುತ್ತಿತ್ತು. ಅವರದ್ದೇ ಆದ shrill voiceನಲ್ಲಿ ಹಾಡುತ್ತಾ ಭಿಕ್ಷೆ ಕೇಳುವ ಅವರ ರೀತಿ ಕೆಲವೊಮ್ಮೆ ಕಿರಿಕಿರಿ ಎನಿಸಿದರೂ ಅವರ "ಬಿಡದೆ ಯತ್ನವ ಮಾಡು" ಎನ್ನುವ ಮನಸ್ಥಿತಿ ಕಂಡು ಖುಷಿ ಆಗುತ್ತಿತ್ತು. ನಾವು ಭಿಕ್ಷೆ ಕೊಡದಾಗ ನಮ್ಮನ್ನು ಮುಟ್ಟಿ ಮುಟ್ಟಿ ಚೊರೆ ಮಾಡಿಯಾದರೂ ಭಿಕ್ಷೆ ಸಿಗುವ ಹಾಗೆ ಮಾಡುತ್ತಿದ್ದರು.
ನಾನಂತು ಅವರ ರಗಳೆಯೇ ಬೇಡವೆಂದು ಒಂದಿಷ್ಟು ಚಿಲ್ಲರೆ ರೆಡಿ ಇಟ್ಟುಕೊಂಡು ಭಿಕ್ಷೆ ಹಾಕಿ ಬಿಡುತ್ತಿದ್ದೆ. ಸಂಗೀತದ ಗಂಧಗಾಳಿಯಿಲ್ಲದ, ವಿದ್ಯೆ ನೈವೇದ್ಯವಾಗಿದ್ದ ಆ ವರ್ಗ ಬರೀ ಕೇಳಿ ಕೇಳಿ ಹಾಡುಗಳನ್ನು ಕಲಿತು ಹಾಡುತ್ತಿದ್ದದ್ದು ಅವರ ಬದುಕುವ ಕಲೆಯ ಒಂದು ಸಾಮರ್ಥ್ಯವೇ ತಾನೆ?
ಹೀಗೆ ಮೂರು ವರ್ಷಗಳ ಉಡುಪಿಯ ಪಯಣ ನೂರಾರು ಅನುಭವಗಳನ್ನು ಕಟ್ಟಿ ಕೊಟ್ಟಿದೆ. ಸಿಟಿ ಬಸ್ಸಿನ ನುಗ್ಗು ಪಯಣ, ಸರ್ವಿಸ್ ಬಸ್ಸಿನಲ್ಲಿ ಜಾಗಕ್ಕಾಗಿ ಹೋರಾಟ, ಭಿಕ್ಷುಕರ ಎಡೆಬಿಡದ ಗಾಯನ, ಫ್ರೆಂಡ್ಸ್ ಜೊತೆಗಿನ ಮೋಜುಮಸ್ತಿ, ಗುಂಡಿ ಬಿದ್ದ ರಸ್ತೆಯಲ್ಲಿನ ಕುಲುಕಾಟದ ಪಯಣ, ಸಹ ಪಯಣಿಗರ ವರ್ತನೆ... ಇವೆಲ್ಲವೂ ನನ್ನ ನೆನಪಿನ ಬುತ್ತಿಯನ್ನು ತುಂಬಿಸಿರುವ ಮರೆಯಲಾಗದ ಅಂಶಗಳು. ಪ್ರಾಯಶಃ ಬದುಕಿನ ಈ ಪಯಣದಲ್ಲೇ ನಾನು ಬಹಳಷ್ಟು ಜೀವನ ಕೌಶಲ್ಯಗಳನ್ನು ಕಲಿತೆನೇನೋ ಅಂತ ಕೆಲವೊಮ್ಮೆ ಅನಿಸುವುದಂತೂ ಸತ್ಯ!
63. ದೊಂಬರಾಟ - ನೆನಪುಗಳು
ದೊಂಬರಾಟ ನನ್ನ ಬಾಲ್ಯದ ನೆನಪುಗಳಲ್ಲೊಂದು. ದೊಂಬರ ಕುಟುಂಬವೊಂದು ಇಡೀ ಪ್ರದರ್ಶನವನ್ನು ನೀಡುತ್ತಿತ್ತು. ನನ್ನ ನೆನಪಿನಲ್ಲಿ ಹೆಚ್ಚಾಗಿ ಉಳಿದಿರುವುದು ಒಬ್ಬ ಬಾಲೆ ತಂದೆಯ ಆದೇಶದ ಪ್ರಕಾರ ಹಗ್ಗ/ಬಿದಿರಿನ ಕೋಲಿನ ಮೇಲೆ ನಡೆಯುವುದು, ಬಿದಿರಿನ ಕೋಲಿನ ತುದಿಯಲ್ಲಿ ಹೊಟ್ಟೆಯ ಮೇಲೆ ಮಲಗುವುದು, ನಂತರ ಜರ್ರನೆ ಅದರ ತುದಿಯಿಂದ ಕೆಳಗಿಳಿಯುವುದು, ಬಿದಿರಿನ ಬೊಂಬನ್ನು ಹಿಡಿದುಕೊಂಡು ಲಾಗ ಹಾಕುವುದು, ಮರಗಾಲುಗಳನ್ನು ಕಟ್ಟಿ ನಡೆಯುವುದು, ಕಬ್ಬಿಣದ ಸಣ್ಣ ಬಳೆಯೊಳಗೆ ನುಸುಳುವುದು. ತಂದೆಯಾದವನು ನೆಲದ ಮೇಲೆ ಅಂಗಾತ ಮಲಗಿ ಭಾರವಾದ ಗುಂಡುಕಲ್ಲುಗಳನ್ನು ಎದೆಯ ಮೇಲೆ ಇರಿಸಿಕೊಳ್ಳುವುದು, ಎತ್ತಿನ ಬಂಡಿಯನ್ನು ತನ್ನ ಕೂದಲಿಗೆ ಕಟ್ಟಿ ಎಳೆಯುವುದು, ನೀರು ತುಂಬಿದ ಕೊಡಗಳನ್ನು ಹಲ್ಲುಗಳಿಂದ ಎತ್ತುವುದು, ನಾಲ್ಕೈದು ಇಟ್ಟಿಗೆಗಳನ್ನು ಒಂದರ ಮೇಲೆ ಒಂದನ್ನಿರಿಸಿ ಒಂದೇ ಏಟಿಗೆ ತುಂಡರಿಸುವುದು, ಮಗುವೊಂದನ್ನು ಬಿದಿರಿನ ಕೋಲಿನ ತುದಿಗಿರಿಸಿ ಅದನ್ನು ಆಕಾಶದೆತ್ತರಕ್ಕೇರಿಸಿ ಸರಕ್ಕನೆ ಕೋಲನ್ನೆಸೆದು ಮೇಲಿನಿಂದ ಬೀಳುವ ಮಗುವನ್ನು ಹಿಡಿಯುವುದು. ಎಂತಹ ಮೈ ಝಂ ಎನ್ನುವ ಕಸರತ್ತುಗಳಿವು! ಇವೆಲ್ಲ ಆಗುವಾಗ ತಾಯಿ ಮಗುವೊಂದನ್ನು ಹಿಡಿದುಕೊಂಡು ಹಾಡುತ್ತಾ ಎಲ್ಲರ ಬಳಿ ಹೋಗಿ ಹಣಕ್ಕಾಗಿ ಕೈ ಚಾಚುವುದು. ದೊಂಬರಾಟದ ನೆನಪಾದಾಗ ನನ್ನ ಕಣ್ಣ ಮುಂದೆ ಬರುವ ದೃಶ್ಯಗಳಿವು.
ದೊಂಬರು ಜೀವನ ನಡೆಸಲಿಕ್ಕಾಗಿ ರೂಢಿಸಿಕೊಂಡ ಮನೋರಂಜನಾ ಕಲೆ ಈ ದೊಂಬರಾಟ. ಇದು ಸಾಮಾನ್ಯವಾಗಿ ಎರಡು ರಸ್ತೆ ಸೇರುವಲ್ಲಿ ಅಥವಾ ಹಳ್ಳಿಯ ಮಧ್ಯಭಾಗದಲ್ಲಿ ನಡೆಯುತ್ತದೆ. ಹೆಬ್ರಿಯ ಬಸ್ ಸ್ಟ್ಯಾಂಡ್ ಬಳಿಯ ಸರ್ಕಲ್ ಅದಕ್ಕೆ ಸೂಕ್ತ ಜಾಗವಾಗಿತ್ತು. ನಮ್ಮಂತಹ ಮಕ್ಕಳಿಗಂತೂ ಅದೊಂದು ಅದ್ಭುತ ಪ್ರಪಂಚ. ಪ್ರದರ್ಶನ ನೀಡುವ ಹೆಣ್ಣುಮಕ್ಕಳು ಬಣ್ಣಬಣ್ಣದ ದಿರಿಸು ಧರಿಸಿ ಮಣಿಸರಗಳನ್ನು ಹಾಕಿಕೊಂಡು ಕಸರತ್ತು ಮಾಡುವುದನ್ನು ನೋಡಲು ಎರಡು ಕಣ್ಣುಗಳು ಸಾಲವು. ಕಸರತ್ತಿನ ನಡು ನಡುವೆ ಇರುವ ಅವರ ಕುಣಿತವೂ ಚೆಂದ. ಕೋಡಂಗಿಯ ಮಂಗಾಟಗಳು ನಮ್ಮನ್ನು ನಗೆಗಡಲಲ್ಲಿ ಮುಳುಗಿಸುತ್ತಿತ್ತು. ಹೀಗೆ ಬಗೆಬಗೆಯ ಪ್ರದರ್ಶನ ನೀಡಿ ನಮ್ಮೆಲ್ಲರನ್ನು ಒಂದು ಜಾದು ಲೋಕಕ್ಕೆ ಕರೆದೊಯ್ಯುವ ಶಕ್ತಿ ದೊಂಬರಾಟಕ್ಕಿತ್ತು. ಅವರು ಮಾಡುತ್ತಿದ್ದ ಅಷ್ಟೂ ಕಸರತ್ತುಗಳು ಪ್ರಾಣಾಂತಿಕವಾಗಿದ್ದರೂ ಅವರುಗಳ ಮುಖದಲ್ಲಿ ಎಳ್ಳಷ್ಟು ಅಂಜಿಕೆಯನ್ನು ನೋಡಿದ ನೆನಪು ನನಗಿಲ್ಲ. ತುತ್ತಿನ ಚೀಲ ತುಂಬಲು ಏನೆಲ್ಲ "ದೊಂಬರಾಟ"ವಲ್ಲವೆ? ಆದರೆ ಅದನ್ನವರು ಆರಾಧಿಸುತ್ತಿದ್ದರು, ಪ್ರೀತಿಸುತ್ತಿದ್ದರು. ಅದರೊಡನೆ ಅವರ ಭಾವನಾತ್ಮಕ ಬಂಧವಿದ್ದದ್ದಕ್ಕೆ ತಮ್ಮ ಪ್ರದರ್ಶನಗಳಲ್ಲಿ ಅವರು ತೋರುತ್ತಿದ್ದ ತಾದಾತ್ಮ್ಯತೆ ಸಾಕ್ಷಿ. ಅಂತಹ ಪೂರ್ಣ ಪ್ರಮಾಣದ ದೊಂಬರಾಟಗಳು ಈಗ ಕಾಣ ಸಿಗುತ್ತಿಲ್ಲ. ನಮ್ಮ ನಮ್ಮ ಧಾವಂತದ ಬದುಕಿನ ದೊಂಬರಾಟದಲ್ಲಿ ನಾವು ನಿಜವಾದ ದೊಂಬರ ಆಟವನ್ನೇ ಮರೆತು ಬಿಟ್ಟಿರುವುದು ಬದುಕಿನ ಕಟು ವಾಸ್ತವವಲ್ಲವೆ?
62. ಪರಿಸರ - ನೆನಪುಗಳು
ನಾನು ಚಿಕ್ಕವಳಿದ್ದಾಗ ನೋಡಿದ ಹಾಗೂ ಮರೆಯಲಾಗದ ಒಂದು ಅದ್ಭುತ ವಿಷಯ ಸೈಕಲ್ ಸರ್ಕಸ್. ಹೆಬ್ರಿಯ ಪೋಲಿಸ್ ಸ್ಟೇಶನ್ ನ ಮೇಲ್ಭಾಗದಲ್ಲಿ ಒಂದು ಖಾಲಿ ಜಾಗ ಇದ್ದ ನೆನಪು. ಅಲ್ಲಿಯೇ ವರ್ಷದಲ್ಲಿ ಒಂದೆರಡು ಬಾರಿ ಹತ್ತು ಹದಿನೈದು ದಿನಗಳ ಕಾಲ ಸೈಕಲ್ ಸರ್ಕಸ್ ನಡೆಯುತ್ತಿತ್ತು. ಆ ಸರ್ಕಸ್ ಮಾಡುವ ವ್ಯಕ್ತಿ ಒಮ್ಮೆ ಸೈಕಲ್ ಏರಿದರೆ ಅದರಿಂದ ಇಳಿಯುತ್ತಿದ್ದದ್ದು ಹತ್ತು ಹನ್ನೆರಡು ದಿನಗಳ ನಂತರವೇ ಅಂತ ನಮಗೆ ಹೇಳುತ್ತಿದ್ದರು. ಆ ಸೈಕಲ್ ಮೇಲೆಯೇ ಆತ ಮಲಗುತ್ತಿದ್ದ. ಆದರೆ ಬಹಿರ್ದೆಸೆಗೆ ಅವನು ಏನು ಮಾಡುತ್ತಿದ್ದ ಎನ್ನುವುದು ನಮಗೆಲ್ಲ ಒಂದು ಯಕ್ಷಪ್ರಶ್ನೆಯಾಗಿತ್ತು ಸುಮಾರು ಇಪ್ಪತ್ತೈದು ಅಡಿ ವ್ಯಾಸದ ಜಾಗಕ್ಕೆ ವೃತ್ತಾಕಾರವಾಗಿ ಹಗ್ಗ ಕಟ್ಟಿ ಜನ ಒಳ ನುಗ್ಗದಂತೆ ವ್ಯವಸ್ಥೆ ಮಾಡಿಕೊಂಡು ಅದರೊಳಗೆ ಅತ್ಯಾಕರ್ಷಕ ರೀತಿಯ ಚಮತ್ಕಾರಿಕ ಸರ್ಕಸ್ ನ್ನು ಸೈಕಲ್ ಮೇಲಿಂದಳಿಯದೆ ಮಾಡುವುದನ್ನು ನಾವೆಲ್ಲ ಬಾಯಿಬಿಟ್ಟುಕೊಂಡು ನೋಡುತ್ತಿತ್ತು. ಟ್ಯೂಬ್ ಲೈಟ್ ಒಡೆಯುವುದು, ಕಬ್ಬಿಣ ತಿನ್ನುವುದು, ಬೆಂಕಿಯೊಂದಿಗೆ ಸರಸಾಟ ಇದನ್ನೆಲ್ಲಾ ಮಾಡುತ್ತಿದ್ದ ನೆನಪು. ಆ ವ್ಯಕ್ತಿ ಮಾಡುವ ಎಲ್ಲಾ ಕಸರತ್ತಿಗೆ ಇನ್ನೊಬ್ಬ ವ್ಯಕ್ತಿ ಮೈಕ್ ನಲ್ಲಿ ಕಮೆಂಟರಿ ಹೇಳುತ್ತಿದ್ದ. ಕೊನೆಯ ದಿನ ಅವನು ಸೈಕಲ್ ನಿಂದ ಇಳಿದು ಒಂದು ಗುಂಡಿಯೊಳಗೆ ಕುಳಿತ ಕೂಡಲೆ ಆ ಗುಂಡಿಯನ್ನು ಮಣ್ಣು ಹಾಕಿ ಮುಚ್ಚುತ್ತಿದ್ದರು. ಅದರೊಳಗೆ ಅವನು ಹಾಗೆಯೆ ಹಲವಾರು ಗಂಟೆಗಳ ಕಾಲ ಕುಳಿತಿರುತ್ತಿದ್ದ. ಅವನು ಹೊರಬಂದ ಮೇಲೆ ಅವನನ್ನು ದುಡ್ಡಿನ ಹಾರ ಹಾಕಿ ಸನ್ಮಾನಿಸಲಾಗುತ್ತಿತ್ತು. ನಮಗೆಲ್ಲ ಅವನು ಪವಾಡ ಪುರುಷನ ತರಹ ಕಾಣಿಸುತ್ತಿದ್ದ. ಆ ವ್ಯತ್ತದ ಸುತ್ತ ಹಾಗೂ ನಟ್ಟ ನಡುವೆ ಇರುತ್ತಿದ್ದ ನಾಲ್ಕೈದು ಟ್ಯೂಬ್ ಲೈಟ್ ಗಳ ಬೆಳಕು, ಸುತ್ತಲೂ ಇದ್ದ ಡೆಕೊರೇಟಿವ್ ಲೈಟ್ಸ್ , ಧ್ವನಿ ಪೆಟ್ಟಿಗೆಯಿಂದ ದೊಡ್ಡ ಸ್ವರದಲ್ಲಿ ಬರುತ್ತಿದ್ದ ಹಳೆ ಸಿನಿಮಾ ಹಾಡುಗಳು, ಸೈಕಲ್ ಮೇಲೆಯೇ ಇರುತ್ತಿದ್ದ ಸವಾರ, ಅವನ ಜೊತೆ ಇರುತ್ತಿದ್ದ ಅವನ ಪಟಾಲಂ.... ಇವೆಲ್ಲ ನಮಗೊಂದು ಆಕರ್ಷಕ ಹಾಗೂ ಅಷ್ಟೇ ನಿಗೂಢವಾಗಿ ಕಾಣುತ್ತಿದ್ದ ವಿಷಯಗಳು. ಅದೊಂದು ವಿಸ್ಮಯೀ ದುನಿಯವಾಗಿತ್ತು. ನಮ್ಮಂತ ಪೋರ ಪೋರಿಯರಿಗೆ ಸಮಯ ಕಳೆಯಲು, ಮಾತನಾಡಿಕೊಳ್ಳಲು ಸೈಕಲ್ ಸರ್ಕಸ್ ಒಳ್ಳೆಯ ಸರಕಾಗಿತ್ತು.
ಆ ಸವಾರ ಜೀವನ ನಡೆಸುವುದಕ್ಕಾಗಿ ಮಾಡುತ್ತಿದ್ದ ಬದುಕಿನ ಹೋರಾಟದ ಸರ್ಕಸ್ ಅದಾಗಿತ್ತು ಎನ್ನುವುದು ಈಗ ಅದರ ಬಗ್ಗೆ ಯೋಚಿಸಿದಾಗ ಅರಿವಾಗುತ್ತದೆ. ಹೊಟ್ಟೆಪಾಡಿಗಾಗಿ ಎಂತೆಂತಹ ಸರ್ಕಸ್ ಮಾಡಬೇಕಲ್ಲವೆ?
61. ಪರಿಸರ - ರಸ್ತೆಗಳು
ಇತ್ತೀಚಿನ ವರ್ಷಗಳಲ್ಲಿ ಎಲ್ಲಿಂದೆಲ್ಲಿಗೆ ಪಯಣಿಸುವುದು ಒಂದು ಸಮಸ್ಯೆಯೇ ಅಲ್ಲ. ಸ್ವಂತ ವಾಹನವಿದ್ದರಂತೂ ಇನ್ನೂ ಆರಾಮ. ಅತ್ಯುತ್ತಮ ರಸ್ತೆ, ವಾಹನ ವ್ಯವಸ್ಥೆ, ಸೀಟ್ ಬುಕಿಂಗ್ ವ್ಯವಸ್ಥೆ ಎಲ್ಲವೂ ನಮ್ಮ ಪಯಣದ ಸಮಯವನ್ನು ಕಡಿತಗೊಳಿಸಿವೆ ಹಾಗೂ ಆರಾಮದಾಯಕವಾಗಿಸಿವೆ.
ನಾವು ಶಾಲೆ ಪ್ರಾರಂಭಿಸಿದ ಶುರುವಿನ ವರ್ಷಗಳಲ್ಲಿ ಪಬ್ಲಿಸಿಟಿಗಾಗಿ ನಾನು, ರವಿ ನಮ್ಮ ಅಂಬಾಸಿಡರ್ ಕಾರಿನಲ್ಲಿ ಸುತ್ತಮುತ್ತಲ ಹಳ್ಳಿಗಳಲ್ಲಿ ಮನೆಮನೆಗೂ ಹೋಗುತ್ತಿತ್ತು. ಆಗಿನ ರಸ್ತೆಗಳ ಅವಸ್ಥೆ ನೆನಪಿಸಿಕೊಂಡರೆ ಮೈ ಝಮ್ ಅನ್ನುತ್ತದೆ. ಆಗ ಹಳ್ಳಿಯ ರಸ್ತೆ ಬಿಡಿ ಮೈನ್ ರೋಡಿನಲ್ಲೂ ಸರಿಯಾದ ಸ್ಥಿತಿಯಲ್ಲಿದ್ದ ರಸ್ತೆಗಳನ್ನು ಹಾಡುಹಗಲು ಟಾರ್ಚ್ ಹಿಡಿದುಕೊಂಡು ಹುಡುಕುವ ಸ್ಥಿತಿ! ಹೊಂಡಗಳ ಸಮೂಹದಲ್ಲಿ ದಾರಿ ಮಾಡಿಕೊಂಡು ಮುಂದೆ ಸಾಗುವುದೇ ಒಂದು ಸವಾಲಾಗಿತ್ತು. ಹೀಗಾಗಿ ಒಂದು ದಿನದ ತಿರುಗಾಟ ಮುಗಿದು ಸಂಜೆಯಾಗುತ್ತಲೇ ಮೈಯ್ಯ ಮೂಳೆಗಳೆಲ್ಲ ನೋವಿನಲ್ಲಿ ತಾವೆಲ್ಲಿದ್ದೇವೆ ಎಂದು ತಿಳಿಸುತ್ತಿದ್ದವು. ನಾನೋ ಮೊದಲೇ ಸೊಂಟ ನೋವಿನ ಪ್ರಾಣಿ. ಗಾಡಿಯ ಕುಲುಕುವಿಕೆಯಿಂದಾಗಿ ಎಷ್ಟೋ ಬಾರಿ ಸೊಂಟನೋವು ಜಾಸ್ತಿಯಾಗಿ ನನ್ನ ಕಾಲು ಮರಗಟ್ಟಿ ಸ್ಪರ್ಶ ಜ್ಞಾನ ಕಳಕೊಂಡದ್ದಿದೆ. ಮಾರನೇ ದಿನ ಪುನಃ ಟೊಂಕಕಟ್ಟಿ ಮರಳಿಯತ್ನವ ಮಾಡು ಎಂದು ಕಾರ್ಯ ಸನ್ನಧ್ಧವಾಗುತ್ತಿದ್ದ ದಿನಗಳವು.
ಈಗಿನ ರಸ್ತೆಗಳಿಗೂ ಆಗಿನ ರಸ್ತೆಗಳಿಗೂ ಅಜಗಜಾಂತರ ವ್ಯತ್ಯಾಸ. ಆಗಿದ್ದ ಕೊಳಕು ರಸ್ತೆಗಳಿಂದಾಗಿ ನಮ್ಮ ಶಾಲಾ ವಾಹನಗಳು ಯಾವಾಗಲೂ ಗ್ಯಾರೇಜ್ ಕಡೆಗೆ ಮುಖ ಮಾಡಿ ಇರುತ್ತಿದ್ದದ್ದಂತೂ ನಿಜ. ಆಗಿದ್ದ ಹೊಂಡಯುಕ್ತ ರಸ್ತೆಗಳಿಂದಾಗಿ ಬಸ್ಸುಗಳು ದಾರಿಯಲ್ಲಿ "ಕರು"() ಹಾಕುತ್ತಿದ್ದ ಕಾರಣ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ಬರುವುದು ಮತ್ತು ಸರಿಯಾದ ಸಮಯಕ್ಕೆ ಮನೆಗೆ ಹಿಂದಿರುಗುವುದು ದೊಡ್ಡ ಸಮಸ್ಯೆಯೇ ಆಗಿತ್ತು. ಈಗ ಹಾಗಿಲ್ಲ. ಮುಖ್ಯ ರಸ್ತೆಗಳಲ್ಲದೆ ಹಳ್ಳಿ ಹಳ್ಳಿಗಳಲ್ಲಿಯ ಹೆಚ್ಚಿನ ರಸ್ತೆಗಳು ಸರ್ಕಾರದ ಕೃಪೆಯಿಂದ ಉತ್ತಮ ಸ್ಥಿತಿಯಲ್ಲಿವೆ. ಹೀಗಾಗಿ ನಮ್ಮ ಶಾಲಾ ವಾಹನಗಳು ತಲೆನೋವಿಲ್ಲದೆ ಕಾರ್ಯ ನಿರ್ವಹಿಸುತ್ತಿವೆ. ಆ ರಸ್ತೆಗಳನ್ನು ಉತ್ತಮ ರೀತಿಯಲ್ಲಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಸರ್ಕಾರ ಕಲ್ಪಿಸಿದ ಉತ್ತಮ ಸೌಕರ್ಯಗಳನ್ನು ಅದೇ ಸ್ಥಿತಿಯಲ್ಲಿ ಉಳಿಸಿಕೊಂಡು ಸದ್ಬಳಕೆ ಮಾಡುವ ಮನಸ್ಥಿತಿ ನಮ್ಮೆಲ್ಲರಲ್ಲೂ ಬೆಳೆದರೆ ಅದೇ ನಾವು ಮಾಡುವ ದೊಡ್ಡ ದೇಶಸೇವೆಯಲ್ಲವೆ?
60. ಪರಿಸರ - ನೆನಪುಗಳು
ಅಜ್ಜಯ್ಯನ ಮನೆಯ ಸುತ್ತಮುತ್ತ ನಮಗೆ ನಮ್ಮದೇ ಆದ 3 - 4 ತುಂಡು ಗದ್ದೆಗಳಿವೆ. ಅದರ ಅಡಿ ಅಳತೆಗಳು ನನಗೆ ಗೊತ್ತಿಲ್ಲ. ಅಜ್ಜಯ್ಯ ಇದ್ದಾಗ ಹಾಗೂ ಅಜ್ಜಯ್ಯ ಹೋದ ಮೇಲೂ ಕೆಲವು ವರ್ಷ ಬೇಸಾಯ ಮಾಡುತ್ತಿದ್ದೆವು. ನಾವು ಬೇಸಾಯ ಮಾಡುವುದನ್ನು ಬಿಟ್ಟ ಮೇಲೆ ಕಾಸಾನ್ ಹಿತ್ಲು ನಾಯಕರಿಗೆ ಗೇಣಿಗೆ ಕೊಟ್ಟಿದ್ದೆವು. ಈಗ ಗೇಣಿ ಮಾಡುವವರು ಕೂಡಾ ಯಾರೂ ಇಲ್ಲ.
ಈ ಕೃಷಿ ಕಾಯಕದ ಬಗ್ಗೆ ನನ್ನ ಅನುಭವ ಸೊನ್ನೆ. ಆದರೆ ಮಳೆಯ ಪ್ರಾರಂಭದಲ್ಲಿ ಕೋಣ/ಎತ್ತುಗಳನ್ನಿಟ್ಟು ಗದ್ದೆ ಹೂಡುವುದು, ಹೂಡುವಾಗಿನ ಲಯಬಧ್ಧ ಹೈ ಹಚ್ ಎನ್ನುವ ಹೂಡುವವನ ವಿಚಿತ್ರ ಧ್ವನಿಗಳು, ಗೊರ್ಬು, ಹಾಳೆ ಟೋಪಿ ಹಾಕಿಕೊಂಡು ಸೀರೆಯನ್ನು ಮೇಲಕ್ಕೆತ್ತಿ ಕಟ್ಟಿ ಬಗ್ಗಿ ನಟ್ಟಿ ಮಾಡುವ ಹೆಂಗಸರು, ಕೇಯ್ ಹೊರುವ ಅರೆನಗ್ನ ಗಂಡಸರು..... ಹೀಗೇ ಮಳೆಗಾಲದ ಸಾಗುವಳಿ ಚಿತ್ರಣವನ್ನಷ್ಟೆ ನಾನು ಬಲ್ಲೆ. ವಿಸ್ತಾರವಾದ ಗದ್ದೆ ಬೈಲಿನಲ್ಲಿ ಅಂಚುಕಟ್ಟಿನ ಮೇಲೆ ನಡೆಯುತ್ತಾ ಶಾಲೆಗೆ ಹೋಗುವಾಗ ಮಳೆಗಾಲದಲ್ಲಿ ಕಾಣುತ್ತಿದ್ದ ಸರ್ವೇ ಸಾಮಾನ್ಯ ಕೃಷಿ ದೃಶ್ಯವಿದು. ಮಧ್ಯ ವಯಸ್ಸಿನ ಹೆಂಗಸರು, ಗಂಡಸರು ಭಾರ ಹೊರುತ್ತಾ, ಭಾರ ಇಳಿಸುತ್ತಾ, ತಾಸುಗಟ್ಟಲೇ ಬಗ್ಗಿಯೇ ಕೆಲಸ ಮಾಡುತ್ತಿದ್ದರೂ ಅವರ ಮುಖಗಳಲ್ಲಿ ಮಾಸದ ಮಂದಹಾಸವಿರುತ್ತಿತ್ತು. ಕೆಲಸ ಮಾಡುತ್ತಲೇ ಕೆಲಸದ ಬಿಸಿ ತಾಗದಿರಲೆಂದು ಸಣ್ಣಗೆ ಗುನುಗುತ್ತಿದ್ದ ಹಾಡುಗಳು ನಮ್ಮ ಕಿವಿಗಳಿಗೆ ದುಂಬಿಯ ಗುಂಯ್ ಗುಡುವಿಕೆಯಂತೆ ಕೇಳಿಸುತ್ತಿತ್ತು. ಸಂಜೆ ತಮ್ಮತಮ್ಮ ಮನೆಗಳತ್ತ ಬಿರು ಬಿರುಸಿನಲ್ಲಿ ಹೋಗುವ ಅವರ ನಡಿಗೆಯಲ್ಲಿ ದಣಿವಿರದ ಜೀವಂತಿಕೆಯಿರುತ್ತಿತ್ತು. ಕೊಯ್ಲು ಸಮಯದಲ್ಲಿ ಹೊರೆಹೊತ್ತು ತರುವ ಗಂಡಸರು ಒಂದೆಡೆಯಾದರೆ ಹಡಿಮಂಚದಲ್ಲಿ ಹುಲ್ಲಿನ ಹೊರೆಯನ್ನು ಜಪ್ಪುವವರು ಇನ್ನೊಂದೆಡೆ. ಬತ್ತವನ್ನು ಗಾಳಿಗೆ ಹಿಡಿದು ತೂರುವವರು ಮತ್ತೊಂದೆಡೆ. ಅಂಗಳದ ತುಂಬಾ ಆಳುಕಾಳುಗಳದೇ ಕಾರುಬಾರು. ಅವರಿಗೆ ಕಾಫಿ ಚಾ ವ್ಯವಸ್ಥೆ ಮಾಡುವ ತರಾತುರಿಯಲ್ಲಿ ಮನೆಯವರು. ನಂತರ ಬತ್ತವನ್ನು ಹುಲ್ಲುಕುತ್ರೆಯೊಳಗೆ ಶೇಖರಿಸಿ ಇಡುವ ರೀತಿಯೂ ನೋಡುವಂತಿತ್ತು. ಆ ಹುಲ್ಲುಕುತ್ರೆ ಅಂಗಳಕ್ಕೆ ಶೋಭೆಯನ್ನು ತರುತ್ತಿತ್ತು. ನಮ್ಮ ಕಣ್ಣಾಮುಚ್ಚಾಲೆ ಆಟಕ್ಕೆ ಆ ಹುಲ್ಲುಕುತ್ರೆ ಹೇಳಿ ಮಾಡಿಸಿದ ಜಾಗವಾಗಿತ್ತು.
ಬೇಸಾಯ ಅಂದ ಕೂಡಲೆ ನೆನಪಾಗುವುದು ಆಚೆಮನೆ ಸಣ್ಣಮಾಣಿ. ಅವನು ಬ್ಯಾಂಕ್ ನೌಕರನಾಗಿದ್ದರೂ ಕೃಷಿಪ್ರೇಮಿ. ಬೆಳಿಗ್ಗೆ ಬೇಗ ಎದ್ದು ಕೃಷಿ ಸಂಬಂಧಿ ಕೆಲಸ ಮುಗಿಸಿಯೇ ಅವನು ಬ್ಯಾಂಕ್ ಗೆ ಹೋಗುತ್ತಿದ್ದದ್ದು. ಭಾನುವಾರ ಹಾಗೂ ರಜಾದಿನಗಳಲ್ಲಿ ಅವನು ತನ್ನ ಇಡೀ ದಿನವನ್ನು ವ್ಯಯಿಸುತ್ತಿದ್ದದ್ದು ಗದ್ದೆಗಳಲ್ಲಿಯೇ. ಕೃಷಿ ಹಾಗೂ ಕೊಟ್ಟಿಗೆ ಕೆಲಸ, ಜಾನುವಾರುಗಳ ಆರೈಕೆ ಅವನ ಪ್ರೀತಿಯ ಕೆಲಸಗಳಾಗಿದ್ದವು. ಅವನೊಬ್ಬ passionate ಕೃಷಿಕನಾಗಿದ್ದ. ಆದರೆ ನಮ್ಮ ಮನೆಯಲ್ಲಿ ಅದೊಂದು ಬೆಳೆ ಬೆಳೆಯುವ ಪ್ರಕ್ರಿಯೆಯಷ್ಟೇ!
ಈಗ ಹಾಳೆ ಟೋಪಿ, ಗೊರ್ಬುಗಳಿಲ್ಲ. ಅವುಗಳನ್ನು ಚಿತ್ರಗಳಲ್ಲಿ ಕಂಡಾಗ ನನ್ನ ಮನದ ಮೂಲೆಯೊಳಗೆ ಗೊರ್ಬಿನೊಳಗೇ ಜೀವಂತಿಕೆ ಸ್ಫುರಿಸುತ್ತಿದ್ದ ಕೃಷಿಕರ್ಮಿಗಳು ಎದ್ದು ಇಣುಕು ಹಾಕುತ್ತಾರೆ. ಈಗ ಎಲ್ಲೆಡೆಯು ಕೃಷಿ ಚಟುವಟಿಕೆಗಳಿಲ್ಲದೆ ಪಾಳು ಬಿದ್ದ ಗದ್ದೆಗಳು ನಮ್ಮ ಬರಡು ಮನಸ್ಥಿತಿಯನ್ನು ಬಿಂಬಿಸುತ್ತಿವೆಯೇನೋ ಎಂದೆನಿಸುತ್ತದೆ!
59. ಪರಿಸರ - ಆಚರಣೆಗಳು
ನನ್ನ ಅಜ್ಜಯ್ಯ ಈಗ್ಗೆ ಐವತ್ತು ಅರವತ್ತು ವರ್ಷಗಳ ಹಿಂದೆ ಸಾಲಿಕೇರಿಯ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕರಾಗಿದ್ದರು. ಸಾಲಿಕೇರಿಯ ದೊಡ್ಡ ದೇವಸ್ಥಾನವದು. ಆ ದೇವಸ್ಥಾನದೊಡನೆ ನನ್ನ ನೆನಪುಗಳು ಹೆಣೆದಿರುವುದು ಅಲ್ಲಿನ ವಾರ್ಷಿಕ ಜಾತ್ರೆಯಲ್ಲಿ ನಡೆಯುವ ಢಕ್ಕೆಬಲಿಯೊಂದಿಗೆ. ನನಗೆ ಮೊದಲಿನಿಂದಲೂ ಡೊಳ್ಳಿನ ಸದ್ದು, ಅದರೊಟ್ಟಿಗಿನ ಕುಣಿತ ಒಂದು ಮನ ಸೆಳೆಯುವ ವಿಷಯ. ಅಂತಹ ಸೆಳೆತವನ್ನು ಹೊಂದಿದ ಢಕ್ಕೆಬಲಿ ನಡೆಯುವುದು ರಾತ್ರಿ ಹೊತ್ತಿನಲ್ಲಿ. ತುಳುನಾಡಿನಲ್ಲಿ ದೈವಾರಾಧನೆ ವಿಶೇಷ. ಢಕ್ಕೆಬಲಿ ಈ ದೈವಾರಾಧನೆಯ ಒಂದು ಆಚರಣೆ. ಅದಕ್ಕಾಗಿಯೆ ಇರುವ ಪಾತ್ರಿಯನ್ನು ವಿಶೇಷವಾಗಿ ಸೇವಂತಿಗೆ, ಸಿಂಗಾರದ ಹೂವುಗಳಿಂದ ಅಲಂಕರಿಸಿ ಪೂಜೆಗೆ ಏರ್ಪಾಡು ಮಾಡುತ್ತಾರೆ. ಗೆಜ್ಜೆ, ಚಲ್ಲಣ ತೊಟ್ಟು ವರ್ಣರಂಜಿತ ಮುಖಾಲಂಕಾರ ಮಾಡಿಕೊಂಡ ಪಾತ್ರಿಗೆ ತೀರ್ಥಪ್ರೋಕ್ಷಣೆ ಮಾಡಿದಾಗ ಮೈಮೇಲೆ ದೈವ ಬಂದು ಥರಥರನೆ ನಡುಗಿ ಕುಣಿಯತೊಡಗುತ್ತಾನೆ. ವಾದ್ಯ ಹಾಗೂ ಢಕ್ಕೆಯ ಧ್ವನಿಯೊಂದಿಗೆ ಆ ಪಾತ್ರಿ ಕುಣಿಯುವ ರೀತಿ, ಅವನನ್ನು ಉಪಚರಿಸಲು ತಯಾರಾಗಿ ನಿಂತಿರುವ ಅವನ ಪರಿಚಾರಕರ ಚುರುಕು ನಡೆಯ ಓಡಾಟ, ಅಲ್ಲಿ ನಮ್ಮಂತೆ ಕುತೂಹಲಭರಿತ ಆಸಕ್ತಿಯಿಂದ ನೋಡುವ ಜನಸಮೂಹದ ನಡುವೆ ನಾವು ಮಂತ್ರಮುಗ್ಧರಾಗಿ ಕಳೆದು ಹೋಗುವ ಪರಿ ಇನ್ನೂ ನನ್ನೊಳಗೆಲ್ಲೋ ಇಣುಕು ಹಾಕುತ್ತಿದೆ. ಇದು ಬೆಳಗಿನ ಜಾವದ ತನಕ ನಡೆಯುವ ಪ್ರಕ್ರಿಯೆ. ಆ ಪಾತ್ರಿಗೆ ಕುಣಿದು ಸುಸ್ತಾದಾಗ ಎಳನೀರು ಕುಡಿದು ಖಾಲಿ ಬುರುಡೆಯನ್ನು ಸುಯ್ಯನೆ ಎಸೆದಾಗ ನಮ್ಮ ತಲೆಬುರುಡೆಗೆ ಹೊಡೆದು ಬಿಡುತ್ತದೇನೋ ಅನ್ನುವ ಭಯ ಕೂಡಾ ಕಾಡುತ್ತಿದ್ದ ನೆನಪು.
ಒಟ್ಟಾರೆಯಾಗಿ ಢಕ್ಕೆಬಲಿಗಾಗಿ ತಯಾರಾದ ಪ್ರಾಂಗಣ, ರಂಗಸ್ಥಳ, ಸುತ್ತಲಿನ ಅಲಂಕಾರ, ದೀಪಜ್ವಾಲೆ, ಜನರ ಕಲರವ, ಪ್ರಾರ್ಥನೆ, ಪಾತ್ರಿಯ ಅಲಂಕಾರ, ಮೈಮೇಲೆ ಬಂದಾಗ ಪಾತ್ರಿಯ ಕೂಗು ಹಾಗೂ ಕುಣಿತ, ಪರಿಚಾರಕರ ಓಡಾಟ..... ಇವೆಲ್ಲ ನಮಗೆ ಗೊತ್ತಿರದಂತೆ ಅದಕ್ಕೆ ಬೇಕಾದ ಪೂರಕ ಸನ್ನಿವೇಶವನ್ನು, ಭಯಭಕ್ತಿಯನ್ನು ಸೃಷ್ಟಿಸಿ ಬಿಡುತ್ತದೆ ಅಂದರೆ ಸುಳ್ಳಲ್ಲ. ತುಂಬಾ ಜೀವಂತಿಕೆಯಿಂದ ಕೂಡಿದ ವರ್ಣಮಯ ಆಚರಣೆಯಿದು.
ಇದರೊಡನೆ ಸಾಲಿಕೇರಿ ಜಾತ್ರೆಯಲ್ಲಿ ತಿರುಗುವುದು ಇನ್ನೊಂದು ಆಕರ್ಷಣೆ. ದೊಡ್ಡ ಜಾತ್ರೆಯೇನಲ್ಲ. ಆದರೆ ಎಲ್ಲಾ ಕಡೆಯ ಜಾತ್ರೆಯಂತೆ ಸಣ್ಣ ತೊಟ್ಟಿಲುಗಳು, ತಿರುಗುವ ಆಟಗಳು, ಬೆಂಡು ಬತ್ತಾಸು, ಜಿಲೇಬಿ, ಬಳೆ, ರಬ್ಬರ್ ಬ್ಯಾಂಡ್, ತರಹೇವಾರಿ ಕ್ಲಿಪ್ ಗಳು, ಆಟಿಕೆಗಳು ಇರುತ್ತಿದ್ದ ಜಾತ್ರೆಯದು. ಮಕ್ಕಳಾಗಿದ್ದ ನಮ್ಮನ್ನು ಅವೆಲ್ಲ ಒಂದು ರೀತಿಯಾಗಿ ಸೆಳೆಯುತ್ತಿದ್ದವು. ಮನೆಮಂದಿಯೊಂದಿಗೆ ಜಾತ್ರೆಗುಡ್ಡೆ ತಿರುಗುವುದೇ ಒಂದು ಮೋಜು.
ಒಂದು ಊರು, ಅದರ ದೇವಸ್ಥಾನವೊಂದು ಇಷ್ಟೆಲ್ಲಾ ಅನುಭವಗಳನ್ನು ಕಟ್ಟಿ ಕೊಡುತ್ತದೆನ್ನುವುದೇ ಸೋಜಿಗದ ವಿಷಯವಲ್ಲವೇ?
58. ಸಾಲಿಕೇರಿ - ನೆನಪುಗಳು
ಅಜ್ಜಯ್ಯನ ಮನೆ ಇರುವುದು ಸಾಲಿಕೇರಿಯಲ್ಲಿ. ಆ ಊರಿಗೆ ಆ ಹೆಸರು ಬರಲು ಕಾರಣ ಅಲ್ಲಿನ ನೇಯ್ಕಾರರು. ಸಾಲೇರ ಕೇರಿ ಎನ್ನುವುದು ಸಾಲಿಕೇರಿ ಆಯ್ತೆಂದು ಬಲ್ಲವರ ಅಂಬೋಣ. ಆ ನೇಯ್ಕಾರರಿಗೆ ಶೆಟ್ಟಿಗಾರ್ ಎನ್ನುವ surname ಇದೆ. ಅಪ್ಪನ ವರ್ಗಾವಣೆಯಿಂದಾಗಿ
ಊರಿನಲ್ಲಿ ನಾನಿದ್ದದ್ದು ಕೆಲವೇ ವರ್ಷಗಳಾದರೂ ಅಲ್ಲಿನ ಪ್ರತಿ ಮನೆಗಳಿಂದ ಬರುತ್ತಿದ್ದ ಮಗ್ಗದ ಟಕ್ ಟಕಾ ಟಕ್ ಶಬ್ದ ಇನ್ನೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ. ಅಲ್ಲಿ ತಯಾರಾಗುತ್ತಿದ್ದ ಪಾಣಿಪಂಚೆ, ಬೈರಾಸ, ಚೆಕ್ಸ್ ಸೀರೆಗಳು ಇನ್ನೂ ಕಣ್ಣಿಗೆ ಕಟ್ಟಿದಂತಿವೆ.
ಅಜ್ಜಯ್ಯನ ಮನೆ ಇದ್ದದ್ದು ಮೈನ್ ರಸ್ತೆಯಿಂದ ಸ್ವಲ್ಪ ದೂರದ ಗದ್ದೆಗಳ ಮಧ್ಯೆ. ಹೀಗಾಗಿ ಬಸ್ ಇಳಿದು ಮನೆಗೆ ಹೋಗಬೇಕೆಂದರೆ ದಾರಿ ಬದಿಯಲ್ಲಿದ್ದ ಶೆಟ್ಟಿಗಾರರ ಮನೆಗಳನ್ನು ದಾಟಿ ಗದ್ದೆಯ ಅಂಚುಕಟ್ಟಿನ ಮೇಲೆ ಹೋಗಬೇಕಿತ್ತು. ಬಸ್ಸಿಗೆ ಕಾಯುವಾಗಲೂ ಕೂಡ ರಸ್ತೆ ಬದಿಯ ಶೆಟ್ಟಿಗಾರರ ಮನೆಯ ಪಕ್ಕ ನಿಲ್ಲಬೇಕಿತ್ತು. ಹೀಗಾಗಿ ಆ ಮನೆಗಳಿಂದ ಬರುತ್ತಿದ್ದ ಮಗ್ಗದ ನಿರಂತರ ಶಬ್ದ ಮನದಲ್ಲಿ ಅಚ್ಚೊತ್ತಿ ನಿಂತಿದೆ. ಪುರುಸೊತ್ತು ಇದ್ದಾಗ ಆವರ ನೇಯುವಿಕೆಯನ್ನು ಆಸಕ್ತಿಯಿಂದ ನೋಡುತ್ತಿತ್ತು ಕೂಡಾ. ಆ ನೇಯುವಿಕೆಯಲ್ಲಿರುವ rhythm ತುಂಬಾ ಕೌತುಕಮಯವಾಗಿತ್ತು. ವಿದ್ಯುತ್ತನ್ನು ಬಳಸದೆ ಒಬ್ಬನೇ ನೇಕಾರ ಮಗ್ಗದ ಮುಂದೆ ಕುಳಿತು ಕೈಕಾಲುಗಳ ಬಲವನ್ನಷ್ಟೇ ಪ್ರಯೋಗಿಸಿ ನೇಯಬಹುದಾಗಿದ್ದ ಕೈ ಮಗ್ಗ ಅದಾಗಿತ್ತು. ಬಿಗಿದಿಟ್ಟ ಹಾಸು ನೂಲುಗಳ ನಡುವೆ ಹೊಕ್ಕು ಎಳೆಗಳನ್ನು ನುಸುಳಿಸಿ ಬಟ್ಟೆಯನ್ನು ನೇಯುವ ಆ ಪರಿ ನೋಡುವ ನಮ್ಮಂತವರ ಮನಸ್ಸನ್ನು ಸೆಳೆದು ಬಿಡುತ್ತಿತ್ತು.
ಟಕ್ ಟಕಾ ಟಕ್ ಎನ್ನುವ ಶಬ್ದ ಬರುವುದು ಕಾಲುಗಳನ್ನು ಇಟ್ಟು ಕಾಲುಮಣೆಯನ್ನು ಒತ್ತಿದಾಗ ಹಾಸು ನೂಲುಗಳ ಒಂದು ಸಮೂಹ ಮೇಲಕ್ಕೆ ತಳ್ಳಲ್ಪಟ್ಟು ಇನ್ನೊಂದು ಕೆಳಗುಳಿಯುವ ಆ ಪ್ರಕ್ರಿಯೆಯಲ್ಲಿ. ಆ ಇಡೀ ನೇಯುವಿಕೆಯನ್ನು ವಿವರಿಸುವುದು ಕಷ್ಟ. ಆದರೆ ನೇಯುವುದನ್ನು ನೋಡುವುದು ರೋಮಾಂಚಕ.
ಅಲ್ಲಿನ ಜನರ ಇನ್ನೊಂದು ಮುಖ್ಯ ಕಸುಬು ಬೀಡಿ ಕಟ್ಟುವುದಾಗಿತ್ತು. ಅದಕ್ಕಾಗಿಯೆ ಇರುವ ಒಣಗಿದ ಎಲೆಗಳನ್ನು ಒಂದೇ sizeನಲ್ಲಿ ತುಂಡರಿಸಿ ಅದರೊಳಗೆ ತಂಬಾಕಿನ ಪುಡಿಯನ್ನು ತುಂಬಿ ಅದನ್ನು ಕೈ ಬೆರಳಿಗೆ ಸಿಕ್ಕಿಸಿದ ಚೂಪಾದ ಮೆಟಲ್ ತುಂಡಿನಿಂದ ಒತ್ತಿ ಮುಚ್ಚಿ ಅದಕ್ಕಾಗೇ ಇರುವ ನೂಲಿನಿಂದ ಮಧ್ಯದಲ್ಲಿ ಸುತ್ತಿ ಕಟ್ಟುತ್ತಿದ್ದರು. ಅದು ಕೂಡಾ ನಾವು ಕುತೂಹಲದಿಂದ ನೋಡುತ್ತಿದ್ದ ಇನ್ನೊಂದು ವಿಷಯವಾಗಿತ್ತು. ಈಗ ಅಲ್ಲಿ ನೇಯುವಿಕೆಯೂ ಇಲ್ಲ; ಬೀಡಿ ಕಟ್ಟುವಿಕೆಯೂ ಇಲ್ಲ. ಆದರೆ ಅದರ ನೆನಪುಗಳು ನಮ್ಮೊಳಗೆ ಜ್ವಲಂತವಾಗಿ ಉಳಿದಿವೆ.
57. ಅನುಭವ - ನಿರೀಕ್ಷೆ
ಕಳೆದ ಭಾನುವಾರದ ವಿಜಯವಾಣಿಯಲ್ಲಿ ರವಿ ಬೆಳಗೆರೆಯವರ "ಸಂಬಂಧಗಳ ಮರು ಜೋಡಣೆಯಾಗುತ್ತಿರಬೇಕು" ಎನ್ನುವ ಲೇಖನ ಓದಿದೆ. ಮಕ್ಕಳು ಬೆಳೆಯುತ್ತಿದ್ದಂತೆಯೆ ಅಪ್ಪ ಅಮ್ಮನಿಗೆ ತಿರುಗಿ ಬೀಳುವ ಕ್ಷಣ, ಪಾಲಕರಿಗಾಗುವ ನೋವು, ಅದರ ಹಿಂದಿರುವ ಕಾರಣಗಳು, ಪ್ರಜ್ಞಾವಂತ ಪಾಲಕರು ಅದನ್ನು ಮರು ಜೋಡಿಸುವ ಪ್ರಯತ್ನ ಮಾಡುವ ರೀತಿ... ಇದೆಲ್ಲದರ ಬಗ್ಗೆ ಚೆಂದವಾಗಿ ಬರೆದಿದ್ದಾರೆ. ಸಂಬಂಧ ನಿರ್ವಹಣೆಯೇ ದೊಡ್ಡ ಸವಾಲು. ಅದರಲ್ಲಿ ನಿರೀಕ್ಷೆಗಳೇ ದೊಡ್ಡ blockಗಳು. ಇದು ಗೊತ್ತಿದ್ದೂ ನಿರೀಕ್ಷೆ ಮಾಡುವುದನ್ನು ನಿಲ್ಲಿಸಲಾಗದ ಮನಸ್ಥಿತಿಯಲ್ಲಿ ನಾವಿರುತ್ತೇವೆ. ನಿರೀಕ್ಷೆ ಮಾಡುವ ಗುಣ ನಮ್ಮೆಲ್ಲರೊಳಗೆ ಸಹಜವಾಗಿ ಹಾಸುಹೊಕ್ಕಾಗಿ ಬೆಳೆದು ಬಿಟ್ಟಿದೆ.
ಮಕ್ಕಳ ಬಗ್ಗೆ ಪಾಲಕರ ನಿರೀಕ್ಷೆ ಎನ್ನುವುದು ಮಕ್ಕಳು ಅವರಿಗೆ ತಲೆನೋವಾಗಿ ಪರಿವರ್ತಿಸುವಂತೆ ಮಾಡುತ್ತದೆ. ನನ್ನ ಬಳಿ ಬಹಳಷ್ಟು ಪಾಲಕರು ಕೊಡುವ ದೂರು - "ಮೇಡಂ, ನನ್ನ ಮಗ 7ರ ತನಕ ಹೇಳಿದ ಮಾತು ಕೇಳುತ್ತಿದ್ದ. ಒಳ್ಳೆಯ ಅಂಕ ಗಳಿಸುತ್ತಿದ್ದ. ಈಗ ಏನು ಹೇಳಿದರೂ ಎದುರು ಮಾತನಾಡುತ್ತಾನೆ. ಸಿಟ್ಟು ಮಾಡುತ್ತಾನೆ. ನಮ್ಮನ್ನು avoid ಮಾಡುತ್ತಾನೆ. ಓದೋ ಮಗನೆ ಅಂದರೆ ನನಗೆ ಗೊತ್ತಿದೆ; ನೀವು ಹೇಳುವುದೇನು ಬೇಡ ಅಂತ ಅನ್ನುತ್ತಾನೆ" ಅಂತ. ಹೆಣ್ಣು ಮಕ್ಕಳದ್ದು ಸ್ವಲ್ಪ cold protest. ಈ ದೂರನ್ನು ಪ್ರತಿ ಬಾರಿ ಕೇಳಿದಾಗಲೂ ನನಗೆ ನಮ್ಮ adulthoodನ ಪ್ರೌಢಿಮೆಯ ಕೊರತೆ ಎದ್ದು ಕಾಣುತ್ತದೆ. ಮಗು ಮಗುವೇ. ಇನ್ನೂ ಬಾಲಿಶತೆಯ ಮುಸುಕಿನಲ್ಲಿರುವ ಮಕ್ಕಳಿಗೆ ಅರಿವು ಮೂಡಿಸಬೇಕಾದ ನಾವುಗಳು ಎಷ್ಟರ ಮಟ್ಟಿಗೆ ನಮ್ಮ ಮಕ್ಕಳು ಬೆಳೆಯುತ್ತಾ ಅವರ prioritiesಗಳು ಬದಲಾಗುವುದನ್ನು ಗಮನಿಸುತ್ತೇವೆ; ಅವರ ಮೇಲಿರುವ peer pessureನ್ನು ಗಮನಿಸುತ್ತೇವೆ; ಸ್ವ ನಿರ್ಧಾರಗಳನ್ನು ತೆಗೆದುಕೊಳ್ಳುವ ತಾಕತ್ತು ಆವರೊಳಗೆ ಬೆಳೆಯುತ್ತಿರುವುದನ್ನು ಗಮನಿಸುತ್ತೇವೆ ಎನ್ನುವ ವಿಷಯಗಳನ್ನು ನಾವು reflect ಮಾಡಬೇಕು. "ನನ್ನ ಮಗು" ಅನ್ನುವ possessive feelingನಿಂದ ನಾವು ಹೊರ ಬಂದು ಅವರನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿ ಸಂಯಮದಿಂದ ವರ್ತಿಸಿದಾಗ ಸಮಸ್ಯೆಗಳು ಉದ್ಭವಿಸುವುದೇ ಇಲ್ಲವೇನೋ? ಇದಕ್ಕೆ ಬೇಕಾಗುವುದು ನಮ್ಮ ಮನಸ್ಥಿತಿ ಹಾಗೂ ದೃಷ್ಟಿಕೋನದಲ್ಲಾಗಬೇಕಾದ ಸಣ್ಣ ಬದಲಾವಣೆಗಳು. ಮಕ್ಕಳ ಅಭಿಪ್ರಾಯಗಳಿಗೂ ಬೆಲೆ ಕೊಟ್ಟು, ಅವರಿಗೂ ಅವರದೇ ಆದ space ಕೊಟ್ಟು, ಅವರ ಜವಾಬ್ದಾರಿಯ ಅರಿವು ಮೂಡಿಸಿ ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿದರೆ ನಿಸ್ಸಾರವಾಗುತ್ತಿರುವ ಸಂಬಂಧಗಳ ಮರು ಜೋಡಣೆಯಾಗಿ ಭಾವನೆಗಳ ಸಾರವನ್ನು ತುಂಬಬಹುದೇನೋ?
56. ಕಾಲೇಜು ದಿನಗಳು - ನೆನಪು
ಶಿವಮೊಗ್ಗದ ನನ್ನ ಸ್ನೇಹಿತರ ಕೂಟದಲ್ಲಿ ವಾಗ್ದೇವಿ ಪಕ್ಕದ ಮನೆಯ ಸ್ನೇಹಿತೆಯಾದರೆ ಕಾಲೇಜಿನಲ್ಲಿ ಚೆನ್ನಿ, ಮಲ್ಲಿ, ಪ್ರಭಾ ನನ್ನ ಆಪ್ತ ಸ್ಹೇಹಿತೆಯರು. ಇವರೊಟ್ಟಿಗೆ ಹರಿ, ಪ್ರವೀಣ ಕೂಡಾ ಅಷ್ಟೇ ಕ್ಲೋಸ್. ಇದು ಅತೀ ಒಳವಲಯದ ಸ್ನೇಹ. ಇದಕ್ಕೆ ಮೀರಿ ಎರಡನೇ ವಲಯದ ಸ್ನೇಹಿತರು ಇನ್ನಷ್ಟು - ಶಾರಿ, ಆರತಿ, ಕಿಟ್ಟಿ, ಅಂಚಿ, ಬದರಿ, ಜೀತು, ಜಯು... ಹೀಗೆ. ನನ್ನ ಸ್ನೇಹಿತರ ಪಟ್ಟಿ ಸ್ವಲ್ಪ ದೊಡ್ಡದೆ! ವಾಗ್ದೇವಿ ನನಗಿಂತ ಒಂದು ವರ್ಷ ಚಿಕ್ಕವಳು. ಹೀಗಾಗಿ ಕಾಲೇಜಿನಲ್ಲಿ ಅವಳೊಡನಾಟ ಕಡಿಮೆ. ಅವಳು ಸ್ವಲ್ಪ ಮೃದು ಸ್ವಭಾವದವಳು. ನೋಡಲು ಸುರಸುಂದರಿ. ಅವಳ ಕೃಪಾದೃಷ್ಟಿಗೆ ಬೀಳಲು ಬಹಳ ಜನ ಹಾತೊರೆಯುತ್ತಿದ್ದರು. ಆದರವಳು ಅದ್ಯಾವುದರ ಗೊಡವೆಗೂ ಹೋಗದ ಸಜ್ಜನಿ.
ನಾನು, ಚೆನ್ನಿ, ಮಲ್ಲಿ, ಪ್ರಭಾ ಯಾವಾಗಲೂ ಜೊತೆಯಾಗಿರುತ್ತಿದ್ದೆವು. ನಾವೆಲ್ಲ ಒಂದು ರೀತಿಯ ಸಿಡಿಮದ್ದುಗಳಿದ್ದಂತೆ. ನಮ್ಮ ಸುದ್ದಿಗೆ ಯಾರಾದರೂ ಬಂದರೆ ಢಂ ಅಂತ ಸ್ಫೋಟಿಸಿ ಬಿಡುತ್ತಿದ್ದೆವು. ಹೀಗಾಗಿ ಎಲ್ಲರೂ ನಮಗೆ ದೂರದಿಂದಲೇ ನಮಸ್ಕಾರ ಮಾಡುತ್ತಿದ್ದರು. ನಮ್ಮ ಕ್ಲಾಸ್ ನವರಲ್ಲಿ ಒಳ್ಳೆಯ ಒಗ್ಗಟ್ಟಿತ್ತು. ನಮ್ಮ ಕ್ಲಾಸ್ ನ ಹುಡುಗರು ನಮ್ಮ ರಕ್ಷಕರಾಗಿದ್ದರು. ಹೀಗಾಗಿ ನಾವೆಲ್ಲ ನಿರ್ಬೀಢೆಯಿಂದ ಇರುತ್ತಿದ್ದೆವು.
ನಮ್ಮೆಲ್ಲರ ಸಂಬಂಧದಲ್ಲಿ ಒಂದು ನಿಷ್ಕಲ್ಮಶ ಭಾವವಿತ್ತು. ಸ್ನೇಹದಲ್ಲಿ ಮುಕ್ತತೆ ಇತ್ತು. ಹುಡುಗರು ಹುಡುಗಿಯರ ನಡುವೆ ಲಿಂಗ ತಾರತಮ್ಯತೆ ಇಲ್ಲದ ಬಂಧವಿತ್ತು. ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಸ್ಪಂದಿಸುವ ಮನಸ್ಸಿತ್ತು. ಅದೊಂದು ವಿವರಣೆಗೆ ಮೀರಿದ ಸಂಬಂಧವಿದ್ದ ಹದುಳವಾದ ಸ್ನೇಹ ವಲಯವಾಗಿತ್ತು. ಈಗಲೂ ಕೂಡ ಅದೇ ಮೃದು ಮಧುರ ಭಾವನೆ ನನ್ನೆಲ್ಲ ಸ್ನೇಹಿತರೊಟ್ಟಿಗಿರುವುದು ಮನಸ್ಸಿಗೆ ಮುದ ನೀಡುವ ಸಂಗತಿ. ನಮ್ಮೆಲ್ಲರ ಭೇಟಿ ಅಪರೂಪದ್ದಾದರೂ ಭಾವ ಬಹುರೂಪದ್ದಾಗಿ ಉಳಿದಿದೆ
55. ನೆನಪುಗಳು - ಪರಿಸರ
80ರ ದಶಕದಲ್ಲಿ ಶಿವಮೊಗ್ಗದಲ್ಲಿ ನಾವಿದ್ದದ್ದು ಹೊಸಮನೆ ಎಕ್ಸ್ಟೆನ್ಶನ್ ನಲ್ಲಿ. ಓನರ್ ಮನೆಯ ಮೇಲಿದ್ದ ಬಾಡಿಗೆ ಮನೆಯಲ್ಲಿ. ಕಾಂಪೌಂಡಿನೊಳಗೆ ಓನರ್ ಮನೆಯ ಪಕ್ಕದ ಸಣ್ಣ ಓಣಿಯಲ್ಲಿ ಹದಿನೈದು ಇಪ್ಪತ್ತು ಹೆಜ್ಜೆ ನಡೆದರೆ ಮನೆಯ ಹಿಂದೆ ಮೇಲೇರಲು ಸಣ್ಣ ಮೆಟ್ಟಿಲುಗಳ ಸಾಲು. ಆದನ್ನೇರಿ ಬಂದರೆ ಒಂದು ಸಾಧಾರಣ ಹಾಲ್, ಎರಡು ಬೆಡ್ ರೂಂ, ಒಂದು ಡೈನಿಂಗ್ ರೂಂ ಹಾಗೂ ಅಡುಗೆ ಮನೆ ಇದ್ದ ತಾರಸಿ ಮನೆ. ಇರಲು ಆರಾಮವಾಗಿತ್ತು. ನಾನು ನನ್ನ ತಂಗಿ ರಸ್ತೆ ಪಕ್ಕಕ್ಕಿದ್ದ ರೂಂನಲ್ಲಿ ಮಲಗುತ್ತಿದ್ದೆವು. ನನ್ನ ತಂಗಿ ಎಷ್ಟು ಹೆದರು ಪುಕ್ಕಲಿಯಾಗಿದ್ದಳೆಂದರೆ ಹಾಲಿಗೆ ತಾಗಿಯೇ ರೂಂ ಇದ್ದರೂ ಒಬ್ಬಳೇ ಮಲಗಲು ಹೋಗುತ್ತಿರಲಿಲ್ಲ. ಜೊತೆಗೆ ಜನ ಬೇಕೇ ಬೇಕಾಗಿತ್ತವಳಿಗೆ. ಅವಳು ನನ್ನನ್ನು ಮಲಗಲು ಕರೆದಾಗ ನಾನು ಕೂಡಲೇ ಹೋಗದೆ ಅವಳನ್ನು ಸರೀ ಸತಾಯಿಸುತ್ತಿದ್ದೆ ನಮ್ಮ ಮನೆಯ ಎದುರಿನಲ್ಲಿ ಸಾಲು ಸಾಲು ಬಾಡಿಗೆಮನೆಗಳಿದ್ದವು. ಇಲ್ಲಿ ನನಗೆ ಸಿಕ್ಕ ಅಕ್ಕಪಕ್ಕದ ಮನೆಯವರೆಲ್ಲ ಹುಡುಗಿಯರೇ. ಎದುರು ಮನೆಯಲ್ಲಿದ್ದ ನನ್ನ ಓರಗೆಯ ವಾಗ್ದೇವಿ ನನ್ನ ಆಪ್ತ ಸ್ನೇಹಿತೆಯಾದಳು. ಅವಳೇನು ಅವಳ ಅಮ್ಮ ಸೀತಮ್ಮ, ಅವಳ ಅಪ್ಪ, ಅವಳ ಅಣ್ಣಂದಿರು, ಅವಳ ನೆಂಟರಿಷ್ಟರು ಎಲ್ಲರೂ ನನ್ನ ಆಪ್ತರಾದರೆಂದರೆ ಸುಳ್ಳಲ್ಲ. ಬಹಳ ಒಳ್ಳೆಯ ಸುಸಂಸ್ಕೃತ ಕುಟುಂಬ. ನಾನು ನಮ್ಮ ಮನೆಯಲ್ಲಿ ಇದ್ದದ್ದಕ್ಕಿಂತ ಅವರ ಮನೆಯಲ್ಲಿಯೇ ಇರುತ್ತಿದ್ದದ್ದು ಹೆಚ್ಚು. ಅವರೆಲ್ಲರಿಗೂ ಅಷ್ಟೆ ನಾನು ಒಂದು ದಿನ ಅವರ ಮನೆಗೆ ಹೋಗಲಿಲ್ಲವೆಂದರೆ ಬೇಸರ. ಈಗಲೂ ಕೂಡ ಅವರ ಮನೆಮಂದಿಯೊಟ್ಟಿಗೆ ನನಗೆ ಅದೇ ಆಪ್ತ ಸಂಬಂಧವಿದೆ. ಊರು ಬಿಟ್ಟರೂ ಸ್ನೇಹ ಬಿಟ್ಟಿಲ್ಲ.
ನಮ್ಮ ಮನೆಯ ತಾರಸಿಯ ಮೇಲೆ ನಾನು ವಾಗ್ದೇವಿ ಕಂಬೈಂಡ್ ಸ್ಟಡಿ ಮಾಡುತ್ತಿತ್ತು. ಅದಕ್ಕಾಗಿ ನನ್ನ ಅಪ್ಪ ಲೈಟ್ ವ್ಯವಸ್ಥೆ ಮಾಡಿಕೊಟ್ಟಿದ್ದರು. ನಿದ್ರೆ ಬರಬಾರದು ಅಂತ ಚಾ ಕುಡಿಯುವುದು, ಈರುಳ್ಳಿ ಮೂಸುವುದು, ಹರಟೆ ಹೊಡೆಯುವುದರಲ್ಲೇ ನಮ್ಮ ಸ್ಟಡಿ ಮುಗಿದು ಹೋಗುತ್ತಿತ್ತು. ನಿದ್ದೆ ಬಿಟ್ಟದ್ದೊಂದೇ ಭಾಗ್ಯ!
ನಾನಾಗ ಪ್ರಥಮ ಬಿ.ಎ.ಯಲ್ಲಿದ್ದೆ. ಓದಿನ ಗಂಭೀರತೆಯ ಕೊರತೆ ಇತ್ತು. ಎದ್ದುಬಿದ್ದು ಓದುತ್ತಿರಲಿಲ್ಲ. ಒಮ್ಮೆ ಓದಿದರೆ ಸಾಕಷ್ಟು ಗ್ರಹಿಸುವ ಬುಧ್ಧಿಮತ್ತೆ ಇದ್ದ ಕಾರಣ ಅಕಾಡೆಮಿಕ್ ಪರ್ಫಾಮೆನ್ಸ್ ಚೆನ್ನಾಗಿತ್ತು. ಅಲ್ಲದೆ ಒಂದು ವಿಷಯದ ಪರೀಕ್ಷೆ ಮುಗಿದ ಮೆಲೆ ಇನ್ನೊಂದು ವಿಷಯಕ್ಕೆ ವಾರಗಟ್ಟಲೆ ಬಿಡುವು ಇರುತ್ತಿತ್ತು ಕೂಡಾ. ಕೆಲವೊಮ್ಮೆ ಈ long gap ನನ್ನನ್ನು ರಜೆಯ ಮೂಡ್ ಗೆ ತಗೊಂಡು ಹೋಗಿ ಬಿಡುತ್ತಿತ್ತು. ಮನೆಯಲ್ಲಿ ಅಪ್ಪ ಅಮ್ಮ ನನ್ನ ಓದಿನ ಜವಾಬ್ದಾರಿ ನನಗೇ ಬಿಟ್ಟಿದ್ದ ಕಾರಣ ನನ್ನ ಓದಿನ ಹೊಣೆಗಾರಿಕೆಯ ಅರಿವು ನನಗಿತ್ತು. ಹೀಗಾಗಿ ನನ್ನದೇ ಓಘದಲ್ಲಿ ನನ್ನ ಓದು ಸಾಗಿತು.
ನಮ್ಮ ಬಾಡಿಗೆ ಮನೆ ಲೊಕೇಶನ್ ಚೆನ್ನಾಗಿತ್ತು. ಹತ್ತಿರದಲ್ಲೇ ಟೈಪ್ ರೈಟಿಂಗ್ ಹಾಗೂ ಶಾರ್ಟ್ ಹ್ಯಾಂಡ್ ಸೆಂಟರ್ ಇತ್ತು. ಅದನ್ನೂ ಕಲಿತಾಯ್ತು. ಸುತ್ತಮುತ್ತಲು ಹುಡುಗಿಯರ ಪಾಳ್ಯ ಇದ್ದ ಕಾರಣ ಆಡಲು ಬರ ಇರಲಿಲ್ಲ. ವಾಗ್ದೇವಿಯಂತಹ ಸ್ನೇಹಿತೆ ಹಾಗೂ ಅವಳ ಮನೆಯವರೆಲ್ಲ ನನ್ನ ಶಿವಮೊಗ್ಗದ ದಿನಗಳನ್ನು ಸ್ಮರಣೀಯವಾಗಿಸಿದರು. ಅಲ್ಲಿ ಕಳೆದ ಎರಡು ವರ್ಷ ಎರಡು ಕ್ಷಣಗಳಂತೆ ಕಳೆದುಹೋದವು. ಒಳ್ಳೆಯ ನೆರೆಹೊರೆಯವರು, ಸ್ನೇಹಿತರು ನಮ್ಮ ಜೀವನವನ್ನು ಹಸನಾಗಿಸುತ್ತಾರೆ ಎನ್ನುವುದು ಸತ್ಯವಲ್ಲವೆ?
54. ನೆನಪು - ಕಾಲೇಜು ದಿನಗಳು
ನಾನು ನನ್ನ ಫೈನಲ್ ಡಿಗ್ರಿ ಮಾಡಿದ್ದು ಉಡುಪಿಯ ಎಂ ಜಿ ಎಂ ಕಾಲೇಜಿನಲ್ಲಿ. ಶಿವಮೊಗ್ಗದ ಡಿವಿಎಸ್ ಕಾಲೇಜಿನ ಸ್ನೇಹಿತರನ್ನು ಬಿಟ್ಟು ಬರುವಾಗ ಬಹಳ ಬೇಸರವಾಗಿತ್ತು. ನಮ್ಮೆಲ್ಲರಲ್ಲಿ ಒಂದು ನಿಷ್ಕಳಂಕ ಸ್ನೇಹವಿತ್ತು. ಡಿವಿಎಸ್ ನ ಪರಿಸರಕ್ಕೂ ಎಂಜಿಎಂ ನ ಪರಿಸರಕ್ಕೂ ಅಜಗಜಾಂತರ ವ್ಯತ್ಯಾಸ. ನಾನು ಕರ್ನಾಟಕದಲ್ಲಿದ್ದೇನೋ ಇಲ್ಲವೇ ಫಾರಿನ್ ನಲ್ಲಿ ಇದ್ದೇನೋ ಎಂದು ಸಂದೇಹ ಬರುವಷ್ಟು ಆಂಗ್ಲ ವಾತಾವರಣವಿದ್ದ ಕಾಲೇಜು ಅದಾಗಿತ್ತು. ಒಂದೇ ಆಂಗ್ಲ ಭಾಷೆ, ಇಲ್ಲವೆ ತುಳು. ಇವೆರಡೇ ಅಲ್ಲಿ ಹೆಚ್ಚು ಬಳಕೆಯಲ್ಲಿದ್ದವು.
ಫೈನಲ್ ಇಯರ್ ಆಗಿದ್ದ ಕಾರಣ, ಎಲ್ಲರಿಗೂ ಅವರವರ ಫ್ರೆಂಡ್ಸ್ ಈಗಾಗಲೇ ಇದ್ದ ಕಾರಣ ನಾನು ಬಹಳ ದಿನಗಳು ಅಲ್ಲಿ ಪರಕೀಯಳಾಗಿ ಉಳಿದೆ. ಅಲ್ಲಿನ ಹೈಫೈ ಸಂಸ್ಕೃತಿಗೆ ಹೊಂದಿಕೊಳ್ಳಲು ಒದ್ದಾಡಿದೆ. ಆಗಿನ ಕಾಲದಲ್ಲೇ ಕಾಲೇಜಿಗೆ ಮಿನಿ ಡ್ರೆಸ್ ಹಾಕಿಕೊಂಡು ಬರುವವರನ್ನು ಕಂಡು ಆಶ್ಚರ್ಯ ಪಟ್ಟೆ.
ಸಮಯ ಎಲ್ಲವನ್ನು ಸರಿಪಡಿಸುತ್ತದೆ. ತರಗತಿಯಲ್ಲಿ ನನ್ನ ಒಳ್ಳೆಯ ಅಕಾಡೆಮಿಕ್ ಪರ್ಫಾಮೆನ್ಸ್ ನಿಂದಾಗಿ ನಿಧಾನವಾಗಿ ಎಲ್ಲರೂ ನನ್ನತ್ತ ಸ್ನೇಹ ಹಸ್ತ ನೀಡತೊಡಗಿದರು. ಅವರ ಕಲಿಕೆಗೆ ನನ್ನ ಸಹಾಯ ಪಡೆಯತೊಡಗಿದರು. ಸ್ಪೋಕನ್ ಇಂಗ್ಲಿಷ್ ಮೇಲೆ ಅಷ್ಟು ಹಿಡಿತ ಇರದ ನಾನು ಕನ್ನಡ ಬಾರದವರಿಗೆ ಕನ್ನಡ ಮಾತನಾಡಲು ಕಲಿಸಿದೆ. ಆತ್ಮೀಯ ಭಾವ ಹುಟ್ಟುವುದೇ ನಮ್ಮ ಮಾತೃಭಾಷೆಯಲ್ಲಿ ಮಾತನಾಡಿದಾಗಲ್ಲವೇ? ಸ್ನೇಹಿತರ ಜೊತೆ ಕನ್ನಡದಲ್ಲಿ ಮಾತನಾಡಿದಾಗ ಸಿಗುವ ಖುಷಿ, ಆಪ್ತತೆ ಆಂಗ್ಲ ಭಾಷೆಯಲ್ಲಿ ಮಾತನಾಡಿದಾಗ ನನಗಂತೂ ಸಿಗುವುದಿಲ್ಲ. ಆವರ ಶೋಕಿಯನ್ನು ನೋಡಿ ದಂಗಾಗಿದ್ದ ನಾನು ಅದರ ಹಿಂದಿರುವ ಸರಳ ಮನಸ್ಸನ್ನು ಅರಿತೆ. ಧರಿಸುವ ಬಟ್ಟೆಗೂ ಮನಸ್ಸಿನ ಭಾವಕ್ಕೂ ತಾಳಮೇಳವಿಲ್ಲ ಅನ್ನುವುದನ್ನು ಅಲ್ಲಿ ಕಂಡುಕೊಂಡೆ. ಪ್ರಪಂಚವನ್ನು ನೋಡುವ ನನ್ನ ದೃಷ್ಟಿಕೋನವನ್ನು ಸರಿಪಡಿಸಿಕೊಂಡೆ. ಇನ್ನೊಬ್ಬರ ಬದುಕಿನ ಕ್ರಮವನ್ನು judgemental ಆಗಿ ನೋಡುವುದನ್ನು ಕಡಿಮೆಗೊಳಿಸಿದೆ. ನಮಗೆ ಬೇಕಾದಲ್ಲಿ ಎಲ್ಲರನ್ನು ಅವರವರು ಇರುವ ಹಾಗೆ ಸ್ವೀಕರಿಸಬೇಕಾದ ಅನಿವಾರ್ಯತೆಯನ್ನು ಅರಿತುಕೊಂಡೆ. ಅಲ್ಲಿನ ಒಂದು ವರ್ಷದ ಓದು ನನಗೆ ಒಳ್ಳೆಯ ಗುರುಗಳ ಪಾಠ ಕೇಳುವ ಅವಕಾಶ ಕಲ್ಪಿಸಿತು. ನನ್ನ ಓದನ್ನು ಇನ್ನಷ್ಟು ಪುಷ್ಟೀಕರಿಸಿ ಅಂತಿಮ ಪರೀಕ್ಷೆಯಲ್ಲಿ ನಾನು ಕಾಲೇಜಿಗೆ ಪ್ರಥಮ ಸ್ಥಾನ ಪಡೆಯುವಂತಾಯಿತು. ವಿಭಿನ್ನ ವಾತಾವರಣದ ಜಾಗದಲ್ಲಿ ಹೊಂದಿಕೊಳ್ಳುವುದನ್ನು ಕಲಿಸಿತು. ಒಂದು ಅಪರಿಚಿತ ವಾತಾವರಣದಲ್ಲಿ ಪರಿಚಿತತೆ ಬೆಳೆಸಿಕೊಳ್ಳುವುದನ್ನು ಕಲಿಸಿತು. ಅಲ್ಲಿ ಕಳೆದ ಆ ಒಂದು ವರ್ಷ ನನ್ನ ವ್ಯಕ್ತಿತ್ವದಲ್ಲಿ, ಚಿಂತನೆಯಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿತೆಂದರೆ ಸುಳ್ಳಲ್ಲ. "ಬದಲಾವಣೆ" ಬದುಕಿನ ನಿತ್ಯ ನಿರಂತರ ಸತ್ಯವಲ್ಲವೆ?
53. ನೆನಪುಗಳು - ಅನುಭವ
Facebook ನಲ್ಲಿ ಯಾರೋ ರುಬ್ಬುವಕಲ್ಲಿನ ಫೋಟೊವನ್ನು ಪೋಸ್ಟ್ ಮಾಡಿದ್ದರು. "ನೀವು ಇದನ್ನು ಬಳಸಿದವರಾದರೆ ಶೇರ್ ಮಾಡಿ" ಅನ್ನುವ ವಾಕ್ಯ ಕೂಡಾ ಅದರೊಂದಿಗೆ ಇತ್ತು. ತಕ್ಷಣ ನನಗೆ ಅಜ್ಜಯ್ಯನ ಮನೆಯ ರುಬ್ಬುವಕಲ್ಲಿನ ನೆನಪಾಯಿತು. ಥೇಟ್ ಆ ಫೋಟೊದಲ್ಲಿರುವ ಕಲ್ಲಿನಂತೆಯೆ ಇತ್ತದು. ಆ ಕಲ್ಲಿನಲ್ಲಿ ರುಬ್ಬದ ಯಾವ ವ್ಯಕ್ತಿಯೂ ನಮ್ಮ ಮನೆಯಲ್ಲಿ ಇರಲಿಲ್ಲ. ಒಂದಲ್ಲ ಒಂದು ಸಂದರ್ಭದಲ್ಲಿ ನಾವೆಲ್ಲ ಅದರಲ್ಲಿ ರುಬ್ಬಿದವರೇ! ನಂತರ ಜೀವನದ ರುಬ್ಬುಕಲ್ಲಿನಲ್ಲಿ ರುಬ್ಬಲ್ಪಟ್ಟದ್ದು ಬೇರೆ ಬಿಡಿ ನಾನು ಪ್ರಾಯಶಃ ಹೈಸ್ಕೂಲಿನ ದಿನಗಳಲ್ಲಿ ರುಬ್ಬಲು ಕಲಿತೆ ಅಂತ ಕಾಣಿಸುತ್ತದೆ. ಮನೆಯಲ್ಲಿದ್ದ ನನ್ನ ಸೋದರತ್ತೆ ನನ್ನ ಗುರುವಿರಬೇಕು? ಮೊದಮೊದಲಿಗೆ ಉದ್ದನ್ನು ಹಾಕಿ ಆ ದೊಡ್ಡ ಕಲ್ಲನ್ನು ತಿರುಗಿಸುವಾಗ ಇಡೀ ಮೈ ಅದರೊಡನೆ ತಿರುಗುತ್ತಿತ್ತು. ಒಂದು ಕೈ ಕಲ್ಲನ್ನು ತಿರುಗಿಸುವಾಗ ಇನ್ನೊಂದು ಕೈಯಿಂದ ನುರಿಯುತ್ತಿರುವ ಉದ್ದನ್ನು ಕಲ್ಲೊಳಗೆ ದೂಡಬೇಕು. ಅದು ನೋಡಲು ಸುಲಭ. ಮಾಡಲು ಕಷ್ಟ. ಮೊದಮೊದಲು ರುಬ್ಬುವಾಗ ಆ ಎರಡು actions ಒಟ್ಟಿಗೆ ಆಗುವುದೇ ಇಲ್ಲ. ಕೆಲವೊಮ್ಮೆ ಉದ್ದಿನ ಬದಲು ಕೈಬೆರಳು ಕಲ್ಲಿನಡಿ ಹೋಗಿ ಚಟ್ನಿಯಾದದ್ದಿದೆ. ಆ ನೋವು ಬಹಳ ದಿನ ಉಳಿಯುತ್ತದೆ. ಹಾಗೆಯೇ ನೀರು ಜಾಸ್ತಿ ಹಾಕಿಕೊಂಡರೆ ರುಬ್ಬುವಾಗ ಪಚಪಚನೆ ಹಾರಿ ಮೈಮುಖವೆಲ್ಲ ಹಿಟ್ಟುಮಯ. ಹಾಕಿದ ಬಟ್ಟೆ ಬದಲಿಸಲೇ ಬೇಕಾದ ಅನಿವಾರ್ಯತೆ ಉಂಟಾಗುತ್ತಿತ್ತು. ತುಂಬಾ ರುಬ್ಬುವ ಪ್ರಸಂಗ ಬಂದಾಗ ಕೈ,ಭುಜವೆಲ್ಲ ಸೋತು ಬರುತ್ತಿತ್ತು. ಆದರೆ ಆ ಕಲ್ಲಿನಲ್ಲಿ ರುಬ್ಬಿ ಮಾಡಿದ ತಿಂಡಿ ಹಾಗೂ ಅಡುಗೆಗೆ ರುಚಿ ಜಾಸ್ತಿ ಇರುವುದಂತೂ ನಿಜ. ಹಾಗೆಯೆ ಇನ್ನೊಂದು ನೆನಪೆಂದರೆ ಆ ಕಲ್ಲನ್ನು ತೊಳೆದು ಕ್ಲೀನ್ ಮಾಡಿದ ನೀರು ತೆಗೆಯಲಿಕ್ಕೆ ಗೆರಟೆಯನ್ನು ಕೆರೆದು ನುಣುಪಾಗಿ ಮಾಡಿಡುವುದು.
ಸಾಗರದಲ್ಲಿ ನನ್ನ ಗಂಡನ ಮನೆಯಲ್ಲಿದ್ದ ರುಬ್ಬುಗುಂಡಿಗೆ ಗೂಟ ಇರಲಿಲ್ಲ. ಬೋಳು ಬೋಳು. ಅದರಲ್ಲಿ grip ಇಟ್ಟುಕೊಂಡು ರುಬ್ಬುವುದು ಬಹಳ ಕಷ್ಟ. ನಾವು ಸೊಸೆಯಂದಿರೆಲ್ಲ ಅಂತಹ ರುಬ್ಬುವಕಲ್ಲಿನಲ್ಲಿ ಹಲಸಿನ ಹಪ್ಪಳಕ್ಕೆ ರುಬ್ಬಿ ಸಾವಿರಾರು ಹಪ್ಪಳ ಮಾಡಿದ ದಾಖಲೆ ಇದೆ. ಹಲಸಿನ ಹಪ್ಪಳದ ಹಿಟ್ಟನ್ನು ನೀರು ಹಾಕಿಕೊಳ್ಳದೆ ರುಬ್ಬಿ ready ಮಾಡುವುದು ಬಹಳ ತ್ರಾಸದಾಯಕವೇ ಸರಿ. ಆದರೆ ಹಪ್ಪಳವನ್ನು ಕರಿದು ತಿನ್ನುವುದು ಕ್ಷಣಮಾತ್ರದ ಕೆಲಸ ಹಳೆಯ ಇಂತಹ ವಸ್ತುಗಳನ್ನು ನೋಡಿದಾಗ ನನ್ನ ನೆನಪಿನ ಧಾರೆ ಹಾಗೆಯೆ ಹರಿದು ಬರುತ್ತದೆ. ಈಗ ಕೂತು ಒಮ್ಮೆ ಅವಲೋಕನ ಮಾಡಿದಾಗ ಆಗ ಗೊಣಗುತ್ತಾ ಮಾಡುತ್ತಿದ್ದ ಆ ಕೆಲಸಗಳೆಲ್ಲ ನಮ್ಮೊಳಗೆ ನೆನಪಿನ ಮೂಟೆಯನ್ನೇ ಕಟ್ಟಿರುವ ಅರಿವು ಉಂಟಾಗುತ್ತದೆ. ಅದನ್ನು ಸಕಾರಾತ್ಮಕವಾಗಿ ನೋಡಿದಾಗ ಬದುಕಿನ ಸುಪ್ತ ಸತ್ಯಗಳು ಅದರೊಳಗೆ ಅಡಗಿರುವುದು ಗೊತ್ತಾಗುತ್ತದೆ. ಅಂತಹ ರುಬ್ಬುವಿಕೆ, ಮಜ್ಜಿಗೆ ಕಡೆಯುವಿಕೆ, ನೀರನ್ನು ಬಾವಿಯಿಂದ ಸೇದುವ ಕೆಲಸ... ಹೆಂಗಸರನ್ನು ಒಂದಲ್ಲ ಒಂದು ರೀತಿಯಲ್ಲಿ ವ್ಯಸ್ತರನ್ನಾಗಿಸಿ ಅವರ ಜೀವನವನ್ನು ಸಹ್ಯವಾಗಿಸುತ್ತಿದ್ದವೋ ಏನೋ? ಅಂತಹ ದೈಹಿಕ ಕೆಲಸಗಳು ಅವರನ್ನು ಆರೋಗ್ಯವಂತರನ್ನಾಗಿಯೂ ಇಟ್ಟಿರಬಹುದು. ಪುನಃ ಹೇಳುತ್ತೇನೆ ಇಂತಹ ಹೊಳಹು ಸಿಗುವುದು ಅವುಗಳ positive side ನೋಡಿದಾಗ ಮಾತ್ರ!
52. ಬಾಲ್ಯ - ನೆನಪುಗಳು
ನಮ್ಮ ಮನೆಯಲ್ಲಿ ಅಮ್ಮ ಮಾಡುತ್ತಿದ್ದ ವಿಶೇಷವಾದ ತಿಂಡಿ ಬಾಳೆಹಣ್ಣು ಮತ್ತು ಹೀರೆಕಾಯಿ ದೋಸೆ. ನಾವೆಲ್ಲ ಬಾಯಿಬಿಟ್ಟುಕೊಂಡು ತಿನ್ನಲು ಕಾಯುತ್ತಿದ್ದ ಬಹಳ ರುಚಿಯಾದ ತಿಂಡಿಯದು. ಅದನ್ನು ಮಾಡುವುದು ಒಂದು lengthy process. ಹಿಟ್ಟು ferment ಆಗುವ ಅಗತ್ಯವಿಲ್ಲ. ನೆನೆಸಿದ ಅಕ್ಕಿಯೊಟ್ಟಿಗೆ ಕಾಯಿಗೆ ಕುತ್ತುಂಬರಿ, ಕೆಂಪು ಮೆಣಸು, ಹುಣಸೆ ಹುಳಿ ...ಅಗತ್ಯವಿರುವ ಮಸಾಲೆ ಸೇರಿಸಿ ಹದವಾಗಿ ರುಬ್ಬಬೇಕು. ಆ ಹಿಟ್ಟು ಸ್ವಲ್ಪ ಸಿಹಿ, ಸ್ವಲ್ಪ ಖಾರ, ಸ್ವಲ್ಪ ಉಪ್ಪು, ಸ್ವಲ್ಪ ಮಸಾಲೆಯ ಸವಿಯನ್ನು ಹೊಂದಿರುತ್ತದೆ. ಹಿಟ್ಟೇನೊ ತಯಾರಾಯಿತು. ಇನ್ನು ದೋಸೆ ಮಾಡಿ ತಿಂದರಾಯಿತು ಅಂತ ಖುಷಿ ಪಡುವ ಹಾಗಿಲ್ಲ. ಹೀರೆಕಾಯಿಯ ಸಿಪ್ಪೆಯನ್ನು ತೆಳುವಾಗಿ ತೆಗೆದು, ಕಹಿ ಇದೆಯೋ ಇಲ್ಲವೋ ಎಂದು ರುಚಿ ನೋಡಿ, ಕಹಿ ಇಲ್ಲದ ಹೀರೆಕಾಯಿಯನ್ನು ತೆಳುವಾಗಿ ಹೆಚ್ಚಿಟ್ಟುಕೊಳ್ಳಬೇಕು. ಬಾಳೆಹಣ್ಣಾದರೆ ಪಚ್ಚಬಾಳೆ ಅಥವಾ ಮೈಸೂರು ಬಾಳೆಹಣ್ಣನ್ನು ಬಳಸಬೇಕು. ಗಳಿತ ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದು ಹಣ್ಣನ್ನು ಉರುಟುರುಟಾಗಿ ಹೆಚ್ಚಿಟ್ಟುಕೊಳ್ಳಬೇಕು. ನಂತರದಲ್ಲಿ ಕಾವಲಿ ಕಾದ ಮೇಲೆ ತಯಾರಿಸಿಟ್ಟ ಹಿಟ್ಟಿಗೆ ಕತ್ತರಿಸಿಟ್ಟ ಹೀರೆಕಾಯಿಯನ್ನು ಅದ್ದಿ ಒಂದರ ಪಕ್ಕಕ್ಕೆ ಒಂದರಂತೆ ಜೋಡಿಸಿಡಬೇಕು. ಬಾಳೆಹಣ್ಣು ದೋಸೆ ಬೇಕೆಂದರೆ ಕತ್ತರಿಸಿದ ಬಾಳೆಹಣ್ಣನ್ನು ಹಿಟ್ಟಿಗೆ ಅದ್ದಿ ಕಾವಲಿಯ ಮೇಲೆ ಇಟ್ಟರಾಯಿತು. ನಂತರ ಸಣ್ಣ ಬೆಂಕಿಯಲ್ಲಿ ಒಂದೊಂದು ದೋಸೆಯನ್ನೂ ಸುಮಾರು ಹತ್ತು ನಿಮಿಷಗಳ ಆಸುಪಾಸು ಎಣ್ಣೆ ಹಾಕಿ ಕಾಯಿಸಬೇಕು. ಬಿಸಿಬಿಸಿಯಾದ ದೋಸೆಯನ್ನು ಬೆಣ್ಣೆಯೊಟ್ಟಿಗೆ ತಿನ್ನಲು ಬಹಳ ರುಚಿ. ಆ ದೋಸೆಯ ಸ್ವಾದ ತಿಂದವನೇ ಬಲ್ಲ.
ನಾವು ಸಣ್ಣವರಿದ್ದಾಗ ನಮಗೆ ತಿನ್ನುವುದನ್ನು ನಿಲ್ಲಿಸಲಿಕ್ಕೆ ಗೊತ್ತಾಗುತ್ತಿರಲಿಲ್ಲ. ರುಚಿರುಚಿಯಾದ ತಿಂಡಿಯಾದರೆ ಅಮ್ಮನೇ "ಇನ್ನು ತಿಂದದ್ದು ಸಾಕು" ಅನ್ನುವವರೆಗೆ ತಿನ್ನುತ್ತಿತ್ತು. ಕಸಿನ್ಸ್ ಎಲ್ಲ ಬಂದರೆ ತಿನ್ನುವುದರಲ್ಲಿ ಸ್ಪರ್ಧೆ. ಎಲ್ಲರೂ ಕಲಿಯಲು, ಆಡಲು ಸ್ಪರ್ಧೆ ನಡೆಸಿದರೆ ನಾವು ತಿನ್ನಲು ಸ್ಪರ್ಧೆ ಮಾಡುತ್ತಿತ್ತು. ಮಾಡಿ ಹಾಕುವವರಿಗೆ ಸುಸ್ತಾಗಬೇಕಿತ್ತೇ ವಿನಃ ನಮಗೆ ತಿಂದು ತೃಪ್ತಿ ಆಗುತ್ತಿರಲಿಲ್ಲ. ಹುರುಪಿನಲ್ಲಿ ಹೊಟ್ಟೆ ಬಿರಿಯುವಷ್ಟು ತಿಂದ ಮೇಲೆ ಹೊಟ್ಟೆ ತುಂಬಿದ ಹೆಬ್ಬಾವಿನ ಸ್ಥಿತಿ! ಎಷ್ಟೋ ಸಾರಿ ತಿಂಡಿ ತಿಂದದ್ದು ಜಾಸ್ತಿಯಾಗಿ ನಾವು ಬೆಳಗ್ಗೆಯೇ ನಿದ್ರಿಸಿ ಗೊರೆದದ್ದಿದೆ. ನಿದ್ದೆಯಿಂದ ಎದ್ದ ಮೇಲೆ ಪುನಃ ತಿನ್ನಲು ಹುಡುಕಾಟ. ಒಮ್ಮೆಯೂ ಅಜೀರ್ಣ ಆದದ್ದಿಲ್ಲ; ಹೊಟ್ಟೆ ನೋವು ಬಂದದ್ದಿಲ್ಲ. ಆದರೀಗ? ಆರತಿ ತಗೊಂಡ್ರೆ ಉಷ್ಣ, ತೀರ್ಥ ತಗೊಂಡ್ರೆ ಶೀತ ಅನ್ನುವ ಸ್ಥಿತಿ. ತಿನ್ನಲು ವಿವಿಧ ತಿಂಡಿ ತಿನಿಸುಗಳಿದ್ದರೂ ತಿಂದು ಅರಗಿಸಿಕೊಳ್ಳುವ ತಾಕತ್ತಿಲ್ಲ. ಹೊಟ್ಟೆಬಟ್ಟೆಗಾಗಿಯೇ ದುಡಿಯುತ್ತಿದ್ದರೂ ಅದನ್ನೇ ಸರಿಯಾಗಿ ನಿರ್ವಹಿಸದ ಧಾವಂತದ ಜೀವನ ಎಲ್ಲರದ್ದಾಗಿದೆ. ಎಲ್ಲರೂ ಒಟ್ಟಿಗೆ ಕೂತು ತಿನ್ನುವ ಅವಕಾಶ ಕಡಿಮೆಯಾಗುತ್ತಿದೆ. ತಿನ್ನುತ್ತಿರುವುದನ್ನು ಸವಿಯುವ ಮನಸ್ಥಿತಿ ಇಲ್ಲದಾಗುತ್ತಿದೆ. ತಿನ್ನುವ ತಿಂಡಿಗಳ ಗ್ರಾಮ್ಯತೆಯ ಸೊಗಡು ಮಾಯವಾಗುತ್ತಿದೆ. ತಿಂಡಿ ತಿನ್ನುವ ವೇಳೆಯಲ್ಲಾದರೂ ನಡೆಯುತ್ತಿದ್ದ ಸಂವಾದ - ಸಂವಹನ ಮರೆಯಾಗುತ್ತಿದೆ. ಕಾಲ ಮಿಂಚಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಕಳೆದುಕೊಂಡದ್ದನ್ನು ಹಿಂಪಡೆಯೋಣವಲ್ಲವೆ?
51. ಕಾಲೇಜು ದಿನಗಳು - ನೆನಪು
ನಾನು ಬಿ.ಎಡ್ ಮಾಡಿದ್ದು ಕುಂಜಿಬೆಟ್ಟಿನ ಟಿ.ಎಂ.ಎ. ಪೈ ಕಾಲೇಜ್ ಆಫ್ ಎಜುಕೇಶನ್ ನಲ್ಲಿ. ನಾನು, ಜೂಲಿಯೆಟ್, ಜಾನೆಟ್, ರೋಹಿಣಿ, ನಯನ... ಹೀಗೆ ಬ್ಯಾಚಲರ್ಸ್ ಡಿಗ್ರಿ ಫ್ರೆಶ್ ಆಗಿ ಮುಗಿಸಿದ ಬಹಳಷ್ಟು ಜನ ಆ ವರ್ಷ ಬಿ.ಎಡ್ ಕೋರ್ಸ್ ಗೆ ಸೇರಿತ್ತು. ಸಿಕ್ಕಾಪಟ್ಟೆ ಹುಡುಗಾಟದ ಬುಧ್ಧಿ ಇನ್ನೂ ಕೆಲಸ ಮಾಡುತ್ತಿದ್ದ ವಯಸ್ಸದು. ಇದರೊಂದಿಗೆ ಶಿಕ್ಷಕರಾಗಬೇಕೆಂಬ ಕನಸೂ ಇತ್ತು. ಸುಮಾರು ನೂರ ಹತ್ತು ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ ಕುಳಿತು ಪಾಠ ಕೇಳುವ ವಾತಾವರಣವಿದ್ದ ತರಗತಿಯ ಕೊಠಡಿ ಅದಾಗಿತ್ತು. ಮೆಥಡಾಲಜಿಗಳಿಗೆ ಮಾತ್ರ ಬೇರೆ ಬೇರೆ ತರಗತಿಯ ಕೊಠಡಿಗಳಿದ್ದವು. ಅದೃಷ್ಟವಶಾತ್ ನಮ್ಮ ಬ್ಯಾಚಿನಲ್ಲಿ ದಾಖಲಾತಿ ಪಡೆದ ಹೆಚ್ಚಿನವರು ಫ್ರೆಶರ್ಸ್. 30+ ನವರ ಸಂಖ್ಯೆ ಕಡಿಮೆ ಇತ್ತು. ಹೀಗಾಗಿ ಜೀವಂತಿಕೆ ಉಕ್ಕಿ ಹರಿಯುತ್ತಿದ್ದ ತರಗತಿ ನಮ್ಮದಾಗಿತ್ತು. ಉತ್ತಮ ಉಪನ್ಯಾಸಕರ ಆಸಕ್ತ ಉಪನ್ಯಾಸಗಳನ್ನು ಕೇಳುವ ಯೋಗ ನಮ್ಮದಾಗಿತ್ತು. ಆಗ ನಮ್ಮ ಕಾಲೇಜಿನ ಪ್ರಾಂಶುಪಾಲರಾಗಿದ್ದ ಶ್ರೀ ವಿಶ್ವನಾಥರವರ ಸೈಕಾಲಜಿ ಪಾಠಗಳಂತೂ ಅದ್ವಿತೀಯವಾಗಿದ್ದವು. ಕಾರಂತ ಮಾಸ್ಟರ್ ರ ಇತಿಹಾಸದ ಕ್ಲಾಸ್ಗಳೂ ಬಹಳ ಆಸಕ್ತದಾಯಕವಾಗಿದ್ದವು. ಇನ್ನು ಫಿಲಾಸಫಿ, ಇಂಗ್ಲಿಷ್.. ಇತ್ಯಾದಿ ವಿಷಯಗಳಿಗೂ ಒಳ್ಳೆಯ ಉಪನ್ಯಾಸಕರಿದ್ದರು. ಬಿ.ಎಡ್ ನಲ್ಲಿ ಮಾಡಿ ಮುಗಿಯದಷ್ಟು ಕೆಲಸ ಇರುತ್ತದೆ. ಬರೆದು ಮುಗಿಯಲಾರದಷ್ಟು ಅಸೈನ್ಮೆಂಟುಗಳ ಹೊರೆ. ನಮ್ಮ ಬ್ಯಾಚಿನಲ್ಲಿದ್ದ ನಾವೊಂದಿಷ್ಟು ಜನ ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಹೊರೆಯನ್ನು ಹಂಚಿಕೊಂಡು ಕೆಲಸವನ್ನು ಹಗುರಗೊಳಿಸಿಕೊಂಡು ಬಿ.ಎಡ್ ಅನ್ನು ತಲೆಬಿಸಿ ಇಲ್ಲದೆ ಯಶಸ್ವಿಯಾಗಿ ಮುಗಿಸಿದ ಕೀರ್ತಿಗೆ ಭಾಜನರಾಗಿದ್ದೇವೆ ನಾವು ಕಲಿಕೆಯಲ್ಲೂ ಮುಂದು ಹಾಗೂ ಉಳಿದೆಲ್ಲ ವಿಚಾರಗಳಲ್ಲೂ ಮುಂದು(ತರಲೆಯಲ್ಲಿ ಕೂಡಾ). ಏನೇ ಕಾರ್ಯಕ್ರಮವಿರಲಿ ಅಲ್ಲಿ ಭಾಗವಹಿಸಲು, ಜವಾಬ್ದಾರಿ ತೆಗೆದುಕೊಳ್ಳಲು ನಾವಿದ್ದೇವೆ ಎಂಬುದು ಸರ್ವ ವಿದಿತ. ನಾಟಕ, ಆಟ, ನೃತ್ಯ, ಹಾಡು, ಭಾಷಣ.... ಪ್ರೈಜ್ ಬರುತ್ತೋ ಬಿಡುತ್ತೋ ನಾವೊಂದಿಷ್ಟು ಜನ participate ಮಾಡುತ್ತಿತ್ತು. ನಮ್ಮ ಹತ್ತು ದಿನಗಳ ಟೂರ್ ಆಗಲಿ, ಶಿಬಿರಗಳಾಗಲಿ ಎಲ್ಲೆಡೆಯೂ ನಮ್ಮ ಛಾಪನ್ನು ಒತ್ತಿಯೇ ಬಿಡುತ್ತಿತ್ತು. ಇನ್ನೂ ಮಗುತನವನ್ನು ಉಳಿಸಿಕೊಂಡಿದ್ದ ನಮ್ಮಂತವರಿಂದ ಕ್ಲಾಸಿನಲ್ಲಿ ಜೀವ ಇರುತ್ತಿತ್ತು. ಹೀಗಾಗಿ ಲೆಕ್ಚರರ್ಸ್ ಯಾರೂ ನಮ್ಮನ್ನು academic bent mindನವರು ಎಂದು ಪರಿಗಣಿಸಿರಲಿಲ್ಲ. ಪರೀಕ್ಷೆ ಮುಗಿದು ಫಲಿತಾಂಶ ಬಂದಾಗ ನಾನು rank ಪಡೆದದ್ದು ನೋಡಿ ನಮ್ಮ ಉಪನ್ಯಾಸಕರು ಆಶ್ಚರ್ಯಪಟ್ಟರು. ಪುಸ್ತಕದ ಬದನೆಕಾಯಿಯಾಗಿರದೆ ಜೀವನಪ್ರೀತಿ ಇದ್ದು ಎಲ್ಲಾ ಚಟುವಟಿಕೆಗಳಲ್ಲಿ ಇರುವವರು ಸಹಾ rank ಪಡೆಯಬಹುದು ಎಂದು ಅವರಿಗಂದು ಮನದಟ್ಟಾಯಿತೇನೋ! ಗ್ರಹಿಕಾ ಮಟ್ಟ ಮತ್ತು ಗ್ರಹಣ ಶಕ್ತಿ ಎನ್ನುವುದು ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿರುತ್ತದೆ ಹಾಗೂ ಅದನ್ನು ವ್ಯಕ್ತ ಪಡಿಸುವ ರೀತಿಯೂ ಬೇರೆ ಬೇರೆ ರೀತಿಯಲ್ಲಿ ಇರುತ್ತದೆ ಎನ್ನುವ ಸತ್ಯ ದರ್ಶನವನ್ನು ಪ್ರತಿ ಶಿಕ್ಷಕರು ಮಾಡಿಕೊಂಡರೆ ನಾವು ಮಕ್ಕಳೊಡನೆ ಹೇಗೆ ವ್ಯವಹರಿಸಬೇಕೆಂಬ ಸರಿಯಾದ ಅರಿವು ನಮ್ಮಲ್ಲಿ ಮೂಡುತ್ತದೆ ಎನ್ನುವುದು ನಿಜವಲ್ಲವೆ?
50. ಬಾಲ್ಯ - ನೆನಪುಗಳು.
ನಾನು ಸಣ್ಣವಳಿದ್ದಾಗಿನಿಂದಲೂ ಆಚೆಈಚೆಯ ಮನೆಗಳ ಮಕ್ಕಳ ಠೋಳಿಯೊಟ್ಟಿಗೇ ಬೆಳೆದವಳು. ಸಂಘ ಜೀವಿ ನಮ್ಮ ಠೋಳಿಯಲ್ಲಿ ಹುಡುಗರ ಸಂಖ್ಯೆ ಜಾಸ್ತಿ ಇದ್ದ ಕಾರಣ ಆಡುತ್ತಿದ್ದದ್ದು ಬರೀ ಹುಡುಗರ ಆಟಗಳನ್ನು. ಆಗೆಲ್ಲ ನಾವು ಹೆಚ್ಚಾಗಿ ಆಡುತ್ತಿದ್ದ ಆಟ - ಚಿನ್ನಿದಾಂಡು, ಲಗೋರಿ, ಗೋಲಿ ಮತ್ತು ಮರಕೋತಿ. ಯಾವ ಆಟ ಆಡಿದರೂ ನನ್ನನ್ನು ಎಲ್ಲಾ ಸೇರಿ ಮಂಗ ಮಾಡಿ ಆಟದಿಂದ ಹೊರಗಿಡುತ್ತಿದ್ದರು. ನಾನೋ ಗಟ್ಟಿಗಿತ್ತಿ. ಹಾಗೆಲ್ಲ ಸಣ್ಣಪುಟ್ಟ ಮಂಗಾಟಕ್ಕೆಲ್ಲ ಜಗ್ಗುತ್ತಿರಲಿಲ್ಲ. ಹಠಮಾಡಿಯಾದರೂ ಆಟದೊಳಗೆ ವಾಪಾಸ್ ಸೇರುತ್ತಿದ್ದೆ. ಮರಕೋತಿ ಆಡುವಾಗ ಮರದ ಮೇಲಿನಿಂದ ಬಹಳಷ್ಟು ಸಲ ಬಿದ್ದದ್ದಿದೆ. ಗಾಯ ದೊಡ್ಡದಾಗಿದ್ದಾಗ ಮಾತ್ರ ಅದು ಅಮ್ಮನ ಗಮನಕ್ಕೆ ಬರುತ್ತಿತ್ತೇ ವಿನಃ ಉಳಿದಂತೆ ವಿಷಯ ಮುಚ್ಚಿ ಹೋಗಿ ಬಿಡುತ್ತಿತ್ತು. ಮಳೆಗಾಲದಲ್ಲಿ ನಾವು ಆಡುತ್ತಿದ್ದ ಆಟ ಕಾಗದದ ದೋಣಿಯಾಟ. ಎರಡು ಮೂರು ರೀತಿಯ ದೋಣಿ ಮಾಡುತ್ತಿದ್ದದ್ದು ನೆನಪು - ಕತ್ತಿ ದೋಣಿ, ಸಣ್ಣ ದೋಣಿ, ದೊಡ್ಡ ದೋಣಿ, ಹಾಯಿ ದೋಣಿ.... ಹೀಗೆ ಏನೇನೋ ಮಾಡುತ್ತಿತ್ತು. ನಂತರ ಹತ್ತಿರದಲ್ಲಿರುವ ತೋಡಿನಲ್ಲಿ ದೋಣಿ ಬಿಡುವಾಟ. ಯಾರ ದೋಣಿ ಎಷ್ಟು ಬೇಗ ಎಷ್ಟು ದೂರ ಮುಳುಗದೆ ಹೋಗುತ್ತದಂತ ಸ್ಪರ್ಧೆ ಬೇರೆ. ಕೆಲವೊಮ್ಮೆ ದೋಣಿಗಳು ಡಿಕ್ಕಿ ಹೊಡೆದಾಗ ಅವುಗಳನ್ನು ಅನುಸರಿಸಿಕೊಂಡು ಬರುವ ನಾವುಗಳು ಜಗಳ ಮಾಡಿಕೊಂಡ ಪ್ರಸಂಗಗಳು ಹಲವಾರಿವೆ. ಕೆಲವೊಮ್ಮೆ ಮಾಡಿನ ನೀರು ಬಿದ್ದು ನೀರು ಹರಿಯುವ ಜಾಗದಲ್ಲಿ ಸಣ್ಣಸಣ್ಣ ದೋಣಿ ಬಿಟ್ಟು ಖುಷಿ ಪಟ್ಟದ್ದಿದೆ. ಈಗ ಅದೆಲ್ಲ ಎಣಿಸಿದರೆ ನಗು ಬರುತ್ತದೆ. ಆದರೆ ಆಗ ಆ ಕಾಗದದ ದೋಣಿಗಳು ನಮ್ಮ ಮುಂದೆ ಒಂದು ಹೊಸ ಪ್ರಪಂಚವನ್ನು ತೆರೆದಿಡುತ್ತಿದ್ದುದಂತೂ ನಿಜ.
ಎಷ್ಟೋ ಬಾರಿ ಆ ದೋಣಿಯೊಳಗೆ ಜೀವಂತ ಇರುವೆಗಳನ್ನು ಇಟ್ಟು ದೋಣಿ ಬಿಟ್ಟದ್ದಿದೆ. ಹಾಗಂತ ಇರುವೆಗಳನ್ನು ಸಾಯಲು ಬಿಡುತ್ತಿರಲಿಲ್ಲ. ಪ್ರಾಣಿ, ಕೀಟ, ಪಕ್ಷಿಗಳ ಬಗ್ಗೆ ನಮಗೆ ಕಾಳಜಿ ಇತ್ತು. ಆದರೂ ಕೀಟಲೆಗೆ ಮೆತ್ತಗೆ ಇರುವೆಗಳನ್ನು ಹಿಡಿದು ದೋಣಿಯೊಳಗೆ ಬಿಡುತ್ತಿದ್ದೆವಷ್ಟೇ!
ಮಳೆಗಾಲದ ಇನ್ನೊಂದು ವಿಶೇಷ ಆಕರ್ಷಣೆ ಎಂದರೆ ವಿಶೇಷ ಜಂತುಗಳಾದ ನರ್ಕುಳ(ಎರೆಹುಳ) ಮತ್ತು ಚಾರಟೆ(centipede). ನಮಗೆಲ್ಲ ನರ್ಕುಳ ಅಂದರೆ ಅಷ್ಟಕ್ಕಷ್ಟೇ. ಆದರೆ ಚಾರಟೆ ಮುಟ್ಟಿ ಅದು ಚಕ್ಕುಲಿ ತರ ಸುತ್ತಿಕೊಳ್ಳುವುದನ್ನು ನೋಡಲು ಖುಷಿ. ದೊಡ್ಡ ಚಾರಟೆಯನ್ನು ಕೈಯಲ್ಲಿ ಹಿಡಿದವರನ್ನು ಮಹಾ ಸಾಧಕರ ತರ ನಾವೆಲ್ಲ ನೋಡುತ್ತಿತ್ತು. ಹೀಗೆ ಕಾಗದದ ದೋಣಿ, ಈ ರೀತಿಯ ಕ್ರಿಮಿಕೀಟಗಳೆಲ್ಲ ನಮ್ಮ ಬಾಲ ಪ್ರಪಂಚದ ರೋಚಕತೆಯನ್ನು ಹೆಚ್ಚಿಸುತ್ತಾ ನಮ್ಮನ್ನೆಲ್ಲ ಒಂದಲ್ಲ ಒಂದು ರೀತಿಯಲ್ಲಿ ವ್ಯಸ್ತವಾಗಿಟ್ಟು ನಮ್ಮ ಸಂತಸವನ್ನು ಹೆಚ್ಚಿಸುತ್ತಿದ್ದವು.
49. ನೆನಪುಗಳು - ಅನುಭವ
ಮೂರ್ನಾಲ್ಕು ದಿನಗಳಿಂದ ಬೆಳಿಗ್ಗೆಯಿಂದ ರಾತ್ರಿಯವರೆಗೆ ಒಂದೇ ಹದವಾದ ಸೋನೆಮಳೆ ಹೊಯ್ಯುತ್ತಿದೆ. ಹೊರಗೆ ಬರುತ್ತಿರುವ ಮಳೆಯಂತೆ ಹಳೆ ನೆನಪುಗಳು ಕೂಡಾ ನನ್ನೊಳಗೆ ಮಳೆಗರೆಯತೊಡಗಿದ್ದಾವೆ.
1988ರಲ್ಲಿ ನಾನು BEd ಮುಗಿಸಿದ ತಕ್ಷಣ ಅದೇ ಕಾಲೇಜಿನ ಡೆಮಾನ್ಸ್ಟ್ರೇಶನ್ ಸ್ಕೂಲ್ ನಲ್ಲಿ ನನಗೆ ಕೆಲಸ ಸಿಕ್ಕಿತು. ಆದರದು morning school. ಬೆಳಿಗ್ಗೆ 7.45 ರಿಂದ 1.30ರವರೆಗೆ ಶಾಲೆ. ನಾನಾದರೋ ಬೆಳಿಗ್ಗೆ ಆರು ಕಾಲಿಗೆ ಮನೆಬಿಟ್ಟು ಸುಮಾರು ಒಂದೂವರೆ ಕಿಮೀ ದೂರದಲ್ಲಿರುವ ಉಪ್ಪಿನಕೋಟೆಗೆ ನಡೆದುಕೊಂಡು ಹೋಗಿ ರೂಟ್ ಬಸ್ಸು ಹತ್ತಿ ಕಲ್ಸಂಕದಲ್ಲಿ ಇಳಿದು ಸಿಟಿ ಬಸ್ಸಲ್ಲಿ ಹೋಗಿ ಶಾರದಾ ಕಲ್ಯಾಣ ಮಂಟಪ ಸ್ಟಾಪ್ ನಲ್ಲಿ ಇಳಿದು ನಡೆದು ಶಾಲೆ ತಲುಪುವಾಗ 7.30ರ ಆಸುಪಾಸು ಆಗುತ್ತಿತ್ತು. ಸ್ವಲ್ಪ ತ್ರಾಸದಾಯಕ ಪಯಣವೇ ಅದು. ಆ ವರ್ಷ ಮಳೆಯ ವೈಭವ ಹೇಳಲಸದಳ! ಹುಚ್ಚು ಮಳೆ. ನಾನು ಆರು ಕಾಲಕ್ಕೆ ಮನೆ ಬಿಡುವುದು ಗೊತ್ತಾದಂತೆ ಮಳೆ ರೊಯ್ಯನೆ ಹೊಯ್ಯಲಿಕ್ಕೆ ಶುರುಮಾಡುತ್ತಿತ್ತು. ಉಪ್ಪಿನಕೋಟೆ ಮುಟ್ಟುವಾಗ ಮುಕ್ಕಾಲು ಮೈ ಒದ್ದೆಯಾಗುತ್ತಿತ್ತು. ಅದೇ ಒದ್ದೆ ಬಟ್ಟೆಯಲ್ಲಿಯೇ ಪಯಣಿಸಿ, ಶಾಲೆಯಲ್ಲೂ ಅದೇ ಅರ್ಧಂಬರ್ಧ ಒದ್ದೆ ಬಟ್ಟೆಯಲ್ಲೇ ಪಾಠ ಮಾಡಿ, ಪುನಃ ಮಧ್ಯಾಹ್ನ ಉಡುಪಿ ಮೇನ್ ಬಸ್ ಸ್ಟ್ಯಾಂಡ್ ಗೆ ಬಂದು ಸಿಪಿಸಿ ಬಸ್ಸು ಹತ್ತಿ ಉಪ್ಪಿನಕೋಟೆಯಲ್ಲಿ ಇಳಿದು ಮಳೆಯಲ್ಲಿ ಕೊಡೆ ಹಿಡಿದು ಮನೆ ತಲುಪುವಾಗ ಗಂಟೆ ಮೂರೂವರೆಯಾಗಿರುತ್ತಿತ್ತು. ನಂತರ ಬೆಚ್ಚಗಿನ ಬಟ್ಟೆ ಹಾಕಿಕೊಂಡು ಊಟ ಮುಗಿಸುವಾಗ ಗಂಟೆ ನಾಲ್ಕಾಗಿರುತ್ತಿತ್ತು. ಆ ವರ್ಷ ನನ್ನ ದುರಾದೃಷ್ಟಕ್ಕೋ ಏನೋ ಮಳೆ ಜಾಸ್ತಿಯಾಗಿ ಸುಮಾರು ಅಕ್ಟೋಬರ್ ತಿಂಗಳು ಮುಗಿಯುವ ತನಕವೂ ಮಳೆ ಹೊಡೆದಿತ್ತು. ಮೂವತ್ತೆರಡು ವರ್ಷಗಳ ಹಿಂದಿನ ಅನುಭವ ಇಂದೋ ನಿನ್ನೆಯದೋ ಅಂತ ಅನಿಸುತ್ತಿದೆ. ನನಗೆ ಕೆಲಸ ಮಾಡುವ ಅನಿವಾರ್ಯತೆ ಇಲ್ಲದಿದ್ದರೂ ನಾನು ಊಟ ತಿಂಡಿ ಹೊತ್ತಿಗೆ ಸರಿಯಾಗಿ ಸಿಗದೆ ಅಷ್ಟು ಒದ್ದಾಡಿ ಕೆಲಸಕ್ಕೆ ಹೋದ ಪರಿ ಆಶ್ಚರ್ಯಕರ! ಪ್ರಾಯಶಃ ಅದು ಕೆಲಸದ ಬಗ್ಗೆ ನನಗಿದ್ದ ಬಧ್ಧತೆಯಾಗಿತ್ತೇನೋ?
ಒಮ್ಮೆ ಹೀಗೆಯೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ನಾನು ಬಸ್ಸಿನ ಕಿಟಕಿ ಬಳಿ ಕಣ್ಣು ಮುಚ್ಚಿ ಕುಳಿತಿದ್ದೆ. ಟೈರ್ ನ ಹಿಂದಿನ ಸೀಟ್. ಮುಖಕ್ಕೆ ತುಂತುರು ಹನಿ ಬೀಳುತ್ತಿತ್ತು. ಮಳೆಯ ಹನಿ ಮುಖದ ಮೇಲೆ ಹನಿಯುತ್ತಿದೆ ಎಂದು ಅದರ ಸುಖವನ್ನು ಕಣ್ಣು ಮುಚ್ಚಿ ಅನುಭವಿಸುತ್ತಿದ್ದೆ. ನಂತರ ಕಣ್ಣು ಬಿಟ್ಟಾಗ ನನ್ನ ಮುಖಕ್ಕೆ ಹನಿದಿದ್ದೆಲ್ಲ ಟೈರ್ ನಿಂದ ಹಾರಿದ ರಸ್ತೆಯ ಪವಿತ್ರ ನೀರು ಅಂತ ಗೊತ್ತಾದಾಗ ನನ್ನ ಕಥೆ ಹೈಲಾಗಿತ್ತು! ಸಣ್ಣವಳಿದ್ದಾಗ ಶಾಲೆಗೆ ಮಳೆಗಾಲದಲ್ಲಿ ನೆನೆಯುತ್ತಾ(ಕೈಯಲ್ಲಿ ಕೊಡೆ ಇದ್ದರೂ) ನಡೆದುಕೊಂಡು ಹೋಗುವಾಗ ಆಗುತ್ತಿದ್ದ ಗಮ್ಮತ್ತೇ ಬೇರೆ. ಮಳೆಯಲ್ಲಿ ನೆನೆದು ಜ್ವರ ಗಿರ ಬಂದ ನೆನಪೇ ಇಲ್ಲ. ಜೋರು ಗಾಳಿಮಳೆ ಬರುವಾಗ ನಮ್ಮ ಸ್ಕರ್ಟ್ ಹಾರುವುದು, ಕೊಡೆ ಮಡಚಿ ಹೋಗುವುದು, ಕೊಡೆ ಕಡ್ಡಿ ತುಂಡಾಗುವುದು... ಇವೆಲ್ಲ ನಿತ್ಯ ನಿರಂತರ ಅನುಭವಗಳಾಗಿದ್ದವು. ಕೊಡೆ ಹಾಳಾದರೆ ಅದನ್ನೇ ರಿಪೇರಿ ಮಾಡಿಸಿ ಉಪಯೋಗಿಸಬೇಕಿತ್ತೇ ವಿನಃ ಹೊಸ ಕೊಡೆ ತೆಗೆಸಿಕೊಡುತ್ತಿರಲಿಲ್ಲ. ಸಣ್ಣಪುಟ್ಟ ರಿಪೇರಿಯನ್ನು ನಾವೇ ಮಾಡಿಕೊಳ್ಳುವಷ್ಟು ಸಾಮರ್ಥ್ಯ ನಮ್ಮ ಕಾಲದವರಿಗಿತ್ತು. ಹೀಗೆ ಮಳೆಗಾಲ ಆಂದರೆ ಸಾಲುಸಾಲಾಗಿ ಬರುವ ನೆನಪುಗಳ ಬುತ್ತಿ.
48. ಅನುಭವ - ಗಾಜನೂರು ಶಾಲೆ
ಗಾಜನೂರಿನ ನಮ್ಮ ಕ್ವಾರ್ಟರ್ಸ್ ಅಂದರೆ ಒಂದು ರೀತಿಯ ಜನರ ಸಂತೆ ಇದ್ದ ಹಾಗಿತ್ತು. ಮನೆಯಲ್ಲಿ ಜನ ತಪ್ಪಿದ್ದೇ ಇಲ್ಲ. ಹೊಸ್ತೋಟ ಮಂಜುನಾಥ ಭಾಗವತರ ಯಕ್ಷಗಾನ ಕಾರ್ಯಗಾರ ನಡೆದ ಎರಡು ವರ್ಷಗಳಂತೂ ನನಗೆ ನಮ್ಮ ಮನೆಯೇ ಒಂದು ಚೌಕಿಮನೆಯಾದ ಅನುಭವ. ಅಷ್ಟು ಜನ, ಅಷ್ಟು ಗದ್ದಲ. ಭಾಗವತರಂತೂ ದೇವರಂತಹ ಮನುಷ್ಯ. ಅವರು ನಮ್ಮೊಡನೆ ಒಂದೆರಡು ವರ್ಷ ಇದ್ದ ಬಗ್ಗೆ ನನಗೆ ತುಂಬಾ ಖುಷಿ ಇದೆ. ಅಂತಹವರ ಒಡನಾಟ, ನಮ್ಮ ಕಲಾಸಕ್ತಿ, ನವೋದಯದಲ್ಲಿ ಶ್ರೀ ಜತಿನ್ ದಾಸ್ ರವರ ನಿರ್ದೇಶನಲ್ಲಿ ನಡೆದ ಹದಿನೈದು ದಿನಗಳ ರಾಷ್ಟ್ರೀಯ ಮಟ್ಟದ ಕಲಾ ಕಾರ್ಯಗಾರ, ಶಿಕ್ಷಣರಂಗದ ಚಿಂತಕರ ಸ್ನೇಹ...ಎಲ್ಲವೂ ನಮ್ಮೊಳಗೆ ಶಿಕ್ಷಣದ ಬಗೆಗೆ ವಿನೂತನ ವಿಚಾರಗಳ ಹೊಳಹನ್ನು ಹುಟ್ಟಿಸಿದ್ದವು. ಪಠ್ಯ ಮತ್ತು ಪಠ್ಯೇತರ(?) ಚಟುವಟಿಕೆಗಳ ಮಿಳಿತ ಮಗುವಿನ ಮೇಲೆ ಎಂತಹ ಪರಿಣಾಮ ಬೀರಬಹುದು ಎಂದು ನಾನು, ರವಿ, ಅಶೋಕ್, ರೇಖಾ ಎಲ್ಲಾ ಆಗಾಗ ಕೂತು ಹರಟುವಾಗ ವಿಚಾರ ಮಾಡುತ್ತಿದ್ದೆವು. ಅದಕ್ಕೆ ಸರಿಯಾಗಿ ನಮ್ಮ ಇಬ್ಬರು ಮಕ್ಕಳು ಶಾಲೆಯ ಬಗ್ಗೆ ವಿಮುಖತೆ ತೋರಿಸುತ್ತಿದ್ದುದು ಕೂಡಾ ಶಾಲಾ ಕಲಿಕಾ ಕ್ರಮ ಮತ್ತು ಕಲಿಕಾ ವಾತಾವರಣದ ಬಗೆಗಿನ ನಮ್ಮ ಚಿಂತನೆಯನ್ನು ತ್ವರಿತಗೊಳಿಸಿತು ಅಂದರೆ ಸುಳ್ಳಲ್ಲ. ವಿಜೇತ ಸುಮಾರು ಐದನೆ ತರಗತಿಯ ತನಕ ಅವನು ಹೋಗುತ್ತಿದ್ದ ಶಾಲೆಗೆ 'ಅತಿಥಿ' ವಿದ್ಯಾರ್ಥಿಯಾಗಿದ್ದ. ವಿಭಾನನ್ನು ಶಾಲೆಯ ಮೆಟ್ಟಿಲಿನ ತನಕವೂ ಕರೆದೊಯ್ಯಲಾಗುತ್ತಿರಲಿಲ್ಲ. ಆದರೆ ಶಾಲೆಗೆ ಹೋಗದಿದ್ದರೂ ಇಬ್ಬರಿಗೂ ಕಲಿಕಾ ಸಮಸ್ಯೆ ಇರಲಿಲ್ಲ. ಶಾಲೆಗೆ ಹೋಗದೆಯು ಕೂಡಾ ಅವರಿಬ್ಬರ ಕಲಿಕಾ ಸಾಮರ್ಥ್ಯ ಅತ್ಯುತ್ಕೃಷ್ಟವಾಗಿತ್ತು. ಹೀಗಾಗಿ ಶಾಲೆ ಹೇಗಿರಬೇಕು, ಏನನ್ನು ಕೊಡಬೇಕು, ಎಂತಹ ಪರಿಸರವನ್ನು ನಿರ್ಮಿಸಬೇಕು... ಎನ್ನುವ ವಿಷಯಗಳು ನಮ್ಮನ್ನು ಎಡೆಬಿಡದೆ ಕಾಡತೊಡಗಿದವು. ಈ ಬಗ್ಗೆ ನಮ್ಮ ಸತತ ಮಾತುಕತೆಗಳು, ಶಿಕ್ಷಣ ರಂಗದ ಸಂಪನ್ಮೂಲ ವ್ಯಕ್ತಿಗಳೊಡನಾಟ, ತೊತ್ತೋಚಾನ್ ಹಾಗೂ ಹಗಲುಗನಸಿನಂತಹ ಶಿಕ್ಷಣ ಸಂಬಂಧಿ ಪುಸ್ತಕಗಳ ಓದು, ಪರ್ಯಾಯ ಶಿಕ್ಷಣ ಕ್ರಮವನ್ನನುಸರಿಸುತ್ತಿರುವ ಶಾಲೆಗಳ ಭೇಟಿ... ಇವೆಲ್ಲವೂ ಮಕ್ಕಳು ಆನಂದದಿಂದ ಕಲಿಯುವಂತಹ ಒಂದು ಸಕಾರಾತ್ಮಕ ಪರಿಸರ ಹೊಂದಿರುವ ಶಾಲೆಯ ಪರಿಕಲ್ಪನೆಗೆ ಮೂರ್ತ ರೂಪು ಕೊಟ್ಟವು ಅಂದರೆ ಸುಳ್ಳಲ್ಲ. ನವೋದಯದ ನಮ್ಮ 24/7 ಕೆಲಸ, ಮಕ್ಕಳೊಟ್ಟಿಗಿನ ನಿರಂತರ ಒಡನಾಟ, ಸೃಜನಶೀಲತೆಯ ಬಗ್ಗೆ ನಮಗಿದ್ದ ಒಲವು, ಮಕ್ಕಳ ಕಲಿಕೆಯನ್ನು ಖುಷಿಯ ಪ್ರಕ್ರಿಯೆಯನ್ನಾಗಿಸಬೇಕೆಂಬ ನಮ್ಮ ಹಂಬಲ ಹೊಂಗಿರಣದ ಹುಟ್ಟಿಗೆ ಕಾರಣವಾಯಿತು. ಕಳೆದ ಹದಿನೇಳು ವರುಷಗಳಿಂದ ಹೊಂಗಿರಣ ಅಂತಹ ವಾತಾವರಣ ನಿರ್ಮಾಣದಲ್ಲಿ ವ್ಯಸ್ತವಾಗಿದೆ ಹಾಗೂ ತನ್ನ ಮೂಲ ಪರಿಕಲ್ಪನೆಯನ್ನು ಬಹಳಷ್ಟು ಮಟ್ಟಿಗೆ ಸಾಕಾರಗೊಳಿಸಿದೆ ಅಂದರೆ ತಪ್ಪಲ್ಲ. ಕಲಿಕೆ ಎನ್ನುವುದು ಒಂದು ನಿರಂತರ ಪ್ರಕ್ರಿಯೆ. ಹೀಗಾಗಿ ಈ ಬಗೆಗಿನ ಕಾರ್ಯ ಯೋಜನೆಗಳು ಕೂಡಾ ನಿತ್ಯ ನವೀನ. ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ಮಕ್ಕಳ ಅಗತ್ಯಕ್ಕೆ ಸ್ಪಂದಿಸುತ್ತಾ ಸಾಗುತ್ತಿರುವ ಹೊಂಗಿರಣದ ಮುಂದಿರುವ ಸವಾಲುಗಳು ಹಲವಾರು. ಹೊಂಗಿರಣ ಅದಕ್ಕೆ ಉತ್ತರ ಕಂಡುಕೊಳ್ಳುತ್ತಾ ಸಾಗುತ್ತಾ ಇದೆ......