Friday, April 24, 2020

ಶೋಭಾಳ ಬರಹಗಳು (ಭಾಗ 1) - ವ್ಯಕ್ತಿಗಳು

April- May 2020

ಶೋಭಾ, (3/9/1966) ಅಣ್ಣನ ಮಗಳು, ಸಾಗರ ಹೊಂಗಿರಣ ಸಂಸ್ಥೆಯ  ಸಂಸ್ಥಾಪಕಿ, ಪ್ರಾಂಶುಪಾಲೆ, ಈ ಗ್ರಹ ಬಂಧನದ (lockdown) ಸಮಯದಲ್ಲಿ ಹಲವಾರು ಲೇಖನಗಳನ್ನು ಬರದು ಬಾಲ್ಯ, ತನ್ನ ಹಿರಿಯರು, ಪರಿಸರ, ಜೀವನದ ಪಾಠಗಳು ಇತ್ಯಾದಿ ವಿಷಯಗಳನ್ನು ಸುಂದರವಾಗಿ, ಅರ್ಥಪೂರ್ಣವಾಗಿ ಬರದು ಫೆಸ್ಬುಕ್ , ಇನ್ಸ್ಟಗ್ರಾಂ ಖಾತೆಗಳಲ್ಲಿ ಹಂಚಿ ಕೊಂಡಿರುತ್ತಾಳೆ. ಅವಳ ಬರವಣಿಗೆಯ ವೈಖರಿ, ವಿಷಯಗಳ ನಿರೂಪಣೆ ಮನ ಮುಟ್ಟುವಂತಿದ್ದು, ನೆನಪಿಗೋಸ್ಕರ ಇಲ್ಲಿ ಇರಿಸಿಕೊಂಡಿದ್ದೇನೆ.
=======================


23. ಸೀತಮ್ಮ - ಶಿವಮೊಗ್ಗ 
ಸೀತಮ್ಮ ನನ್ನ ಫ್ರೆಂಡ್ ವಾಗ್ದೇವಿಯ ಅಮ್ಮ. ಅವರ ಪರಿಚಯ ನನಗಾದಾಗ ನನ್ನ ವಯಸ್ಸು ಸುಮಾರು ಹದಿನೆಂಟು ಹಾಗೂ ಅವರು ಸುಮಾರು ಐವತ್ತರ ಆಸುಪಾಸಿನಲ್ಲಿದ್ದರು. ನಮ್ಮಿಬ್ಬರಲ್ಲಿ ಆಪ್ತತೆ ಬೆಳೆಯಲು ವಯಸ್ಸಿನ ಅಂತರ ಅಡ್ಡಿ ಬರಲಿಲ್ಲ. ನಮ್ಮ ಬಾಡಿಗೆಯ ಮನೆಯ ಎದುರೇ ಅವರ ಬಾಡಿಗೆ ಮನೆಯಿತ್ತು. ನಾನು ನಮ್ಮ ಮನೆಯಲ್ಲಿ ಇರುತ್ತಿದ್ದದ್ದಕ್ಕಿಂತ ಅವರ ಮನೆಯಲ್ಲಿ ಇರುತ್ತಿದ್ದದ್ದೇ ಹೆಚ್ಚು. ಹೀಗಾಗಿ ಅವರ ನೆಂಟರಿಷ್ಟರಿಗೆಲ್ಲ ನಾನು ಬಹಳ ಪರಿಚಿತಳಾಗಿ ಬಿಟ್ಟಿದ್ದೆ.
ತುಂಬು ಕುಟುಂಬದ ಹಿರಿಯ ಮಗಳಾಗಿದ್ದ ಸೀತಮ್ಮ ಮದುವೆಯಾಗಿ ಸೇರಿದ್ದು ಇನ್ನೊಂದು ತುಂಬು ಕುಟುಂಬದ ಹಿರಿಯ ಸೊಸೆಯಾಗಿ. ಅವರ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಸಂಸಾರದ ನೊಗದ ಭಾರದಿಂದ ದಣಿದಿದ್ದರೂ ಸದಾ ಹಸನ್ಮುಖತೆಯಿಂದಿದ್ದು ಕಳೆಕಳೆಯಾದ ಮುಖ ಲಕ್ಷಣವುಳ್ಳವರಾಗಿದ್ದರು. ಒಳ್ಳೆಯ ಮೈಕಟ್ಟಿನ, ಒಳ್ಳೆಯ ಮೈಬಣ್ಣದ ಧೀಮಂತ ವ್ಯಕ್ತಿ ಸೀತಮ್ಮ. ಒಂದು ನಿಮಿಷವೂ ಸುಮ್ಮನೆ ಕೂರದೆ ಸಾಂಬಾರ್ ಪುಡಿ, ಸಾರಿನ ಪುಡಿ, ಚಟ್ನಿ ಪುಡಿ, ಲೇಹ...ಹೀಗೇ ಏನಾದರೊಂದನ್ನು ಮಾಡುತ್ತಲೇ ಇರುತ್ತಿದ್ದವರು. ಅವರ ಪುಡಿಗಳ ಘಮಘಮ ಸುವಾಸನೆ ಇನ್ನೂ ನನ್ನ ನಾಸಿಕದಲ್ಲಿದೆ. ಅವರ ಕೈ ರುಚಿಯ ಬಗ್ಗೆ ಎರಡು ಮಾತಿಲ್ಲ. ಅವರು ಕೆಲಸ ಮಾಡುತ್ತಿರುವಾಗ ಅವರ ಬೆನ್ನ ಹಿಂದಿದ್ದು ಅವರೊಡನೆ ಹರಟೆ ಹೊಡೆಯುವುದು ನನಗೆ ಇಷ್ಟದ ವಿಷಯವಾಗಿತ್ತು. ನಮ್ಮಿಬ್ಬರ ಸ್ನೇಹ ಸೊಗಸಾಗಿತ್ತು.
ಅವರ ಪತಿಯಾದ ಶ್ರೀ ಅನಂತಕೃಷ್ಣಮೂರ್ತಿಯವರು ಒಳ್ಳೆಯತನದ ಸಾಕಾರ ರೂಪ. ತುಂಬ ಶಾಂತ, ಸಾತ್ವಿಕ ಸ್ವಭಾವದ ಅವರು ಮಿತಭಾಷಿ. ಆದರ್ಶಪ್ರಾಯವಾದ ವ್ಯಕ್ತಿತ್ವವವರದ್ದು. ಅಶ್ವಿನ್, ರಾಜಿ, ಶ್ರೀರಾಮ, ವಾಗ್ದೇವಿ ಈ ದಂಪತಿಗಳ ಮಕ್ಕಳು. ಈಗ ಅವರ ಮಕ್ಕಳೆಲ್ಲರೂ ಅವರವರ ವೃತ್ತಿಯಲ್ಲಿ, ಕುಟುಂಬ ಜೀವನದಲ್ಲಿ ವ್ಯಸ್ತರಾಗಿ ಸಂತೃಪ್ತ ಬದುಕನ್ನು ನಡೆಸುತ್ತಿದ್ದಾರೆ. ಈಗ ಅನಂತಕೃಷ್ಣಮೂರ್ತಿಯವರು ಇಲ್ಲವಾದ ನೋವಿದ್ದರೂ ಎಂಬತ್ತರ ಹರೆಯದಲ್ಲಿರುವ ಸೀತಮ್ಮ ಮಕ್ಕಳು ಮೊಮ್ಮಕ್ಕಳೊಟ್ಟಿಗೆ ತಮ್ಮ ವೃದ್ಧಾಪ್ಯದ ದಿನಗಳನ್ನು ನೆಮ್ಮದಿಯಿಂದ ಕಳೆಯುತ್ತಿದ್ದಾರೆ.
ಈಗ್ಗ್ಯೆ ಎರಡು ವರ್ಷಗಳ ಹಿಂದೆ ಗೋವಾದಲ್ಲಿರುವ ಅವರ ಮಗ ರಾಮುವಿನ ಮನೆಯಲ್ಲಿ ಅವರನ್ನು ಕಂಡು ಮಾತನಾಡಿದಾಗ ಹಳೆಯ ನೆನಪುಗಳೆಲ್ಲ ಮರುಕಳಿಸಿದ್ದವು. ಪುನಃ ಕಾಲಚಕ್ರ ಹಿಂದಕ್ಕೆ ಹೋಗಿ ಆ ಹಳೆಯ ದಿನಗಳು ಮರಳಬಾರದೆ ಎಂದು ಒಂದರೆಕ್ಷಣ ಅನಿಸಿದ್ದಂತೂ ನಿಜ. ತಮ್ಮ ಜೀವನದ ಒಳ್ಳೆಯ ಹಾಗೂ ಕಷ್ಟ ಕಾರ್ಪಣ್ಯದ ದಿನಗಳನ್ನು ಸಮಾನವಾಗಿ ಸ್ವೀಕರಿಸಿದ ಸೀತಮ್ಮ ತಮ್ಮ ವೃದ್ಧಾಪ್ಯದ ದಿನಗಳನ್ನು ಹೀಗೆ ನೆಮ್ಮದಿಯಿಂದ ಕಳೆಯಲಿ ಎಂದು ತುಂಬು ಮನದಿಂದ ಹಾರೈಸುತ್ತೇನೆ.



22. ಚಿಕ್ಕಪ್ಪ 
ಚಿಕ್ಕವಳಿದ್ದಾಗ ಹೆಬ್ರಿಯಿಂದ ಉಡುಪಿಗೆ ಹೋಗುವಾಗ ಮಣಿಪಾಲದ ಎಂಐಟಿಯನ್ನು ನೋಡಿ ನಾನ್ಯಾವಾಗಲೂ "ಚಿಕ್ಕಪ್ಪ ಕಾಲೇಜು" ಅಂತ ಕರೆಯುತ್ತಿದ್ದೆ. ಏಕೆಂದರೆ ನನ್ನ ಚಿಕ್ಕಪ್ಪ ಜಯರಾಮ ಸೋಮಯಾಜಿ ಆ ಕಾಲೇಜಿನಲ್ಲಿ ಕೆಲವು ಕಾಲ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು.
ಆರು ಅಡಿಗೂ ಮೀರಿ ಎತ್ತರವಿರುವ ನನ್ನ ಚಿಕ್ಕಪ್ಪ ಬಹಳ ಬುದ್ಧಿವಂತರು. ಹಾರಾಡಿ ಶಾಲೆಯಲ್ಲಿ ಪ್ರೈಮರಿ, ಉಪ್ಪಿನಕೋಟೆ ಶಾಲೆಯಲ್ಲಿ ಮಿಡಲ್ ಸ್ಕೂಲ್, ಬ್ರಹ್ಮಾವರದಲ್ಲಿ ಹೈಸ್ಕೂಲ್, ಪಿಯುಸಿ ಓದಿದ ನನ್ನ ಚಿಕ್ಕಪ್ಪ ಉಡುಪಿಯ ಎಂಜಿಎಂ ನಲ್ಲಿ ಬಿ.ಎಸ್ಸಿಯನ್ನು rank ಪಡೆದು ಮುಗಿಸಿದರು. ತದನಂತರ ಮೈಸೂರು ಯೂನಿವರ್ಸಿಟಿ ಯಲ್ಲಿ rankನೊಂದಿಗೆ ಫಿಸಿಕ್ಸ್ ಎಂ.ಎಸ್ಸಿ ಮುಗಿಸಿ ಮಣಿಪಾಲದ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಅಪ್ಪನ ಸ್ನೇಹಿತರಾದ ಪದಕಣ್ಣಾಯರು ಆಫ್ರಿಕಾದಲ್ಲಿ ಇದ್ದ ಕಾರಣ ನನ್ನಪ್ಪ ಚಿಕ್ಕಪ್ಪನಿಗೆ ಹೊರದೇಶಕ್ಕೆ ಪ್ರಾಧ್ಯಾಪಕರಾಗಿ ಹೋಗಲು ಒತ್ತಾಸೆ ನೀಡಿದರು. ನಮ್ಮ ಕುಟುಂಬದಲ್ಲಿ ಹೊರದೇಶಕ್ಕೆ ಹೋದ ಪ್ರಪ್ರಥಮ ವ್ಯಕ್ತಿ ನನ್ನ ಚಿಕ್ಕಪ್ಪ. ಅವರನ್ನು ವಿಮಾನ ಹತ್ತಿಸಲು ನಾವೆಲ್ಲ ಬಜ್ಪೆ ಏರ್ ಪೋರ್ಟ್ ಗೆ ಹೋಗಿದ್ದದ್ದು ನನಗಿನ್ನೂ ನೆನಪಿದೆ. ಪ್ರಾಯಶಃ ಆಗ ನಾನಿನ್ನೂ ಮೂರ್ನಾಲ್ಕು ವರ್ಷದವಳಿರಬಹುದು. ಆಫ್ರಿಕಾದಲ್ಲಿ ತುಂಬಾ ವರ್ಷಗಳಿದ್ದ ಚಿಕ್ಕಪ್ಪ ಕೊನೆಗೆ ದುಬಾಯಿಗೆ ಬಂದು ಹತ್ತದಿನೈದು ವರುಷ ನೆಲೆಸಿ ಈಗ ಬೆಂಗಳೂರಿನಲ್ಲಿ ತಮ್ಮ ಪತ್ನಿ, ಮಕ್ಕಳೊಡನೆ ವಾಸವಾಗಿದ್ದಾರೆ.
ಎಂಟು ಮಕ್ಕಳಲ್ಲಿ ಕೊನೆಯವರಾದ ಚಿಕ್ಕಪ್ಪ ತುಂಬಾ ಮೃದು ಮನಸ್ಸಿನವರು. ಬಂಧು ಬಳಗದವರ ನಂಟು ಜಾಸ್ತಿ. ನನ್ನ ಅಪ್ಪನಿಗೆ ಅವರು ಮಗನಿದ್ದ ಹಾಗೆ. ಅವರಿಬ್ಬರ ನಡುವೆ ಸುಮಾರು ಇಪ್ಪತ್ತು ವರ್ಷಗಳ ಅಂತರವಿತ್ತು. ಅವರಿಬ್ಬರ ಮಧ್ಯೆ ಹಲವಾರು ವಿಷಯಗಳ ಬಗ್ಗೆ ಅಭಿಪ್ರಾಯ ಭೇದವಿದ್ದರೂ ಅವರಿಬ್ಬರ ಸಂಬಂಧ ಬಹಳ ಆಪ್ತವಾಗಿತ್ತು.
ಆ ಸಮಯದಲ್ಲಿ ಎರಡು ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದ ಚಿಕ್ಕಪ್ಪನನ್ನು ನಾವೆಲ್ಲ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆವು. ನನ್ನ ಕಸಿನ್ಸ್ ಗೆ ಸಣ್ಣಮಾವಯ್ಯನಾಗಿದ್ದ ಅವರು ಹೊರದೇಶದಿಂದ ತರುತ್ತಿದ್ದ ಬಟ್ಟೆಗಳು, ಚಾಕೊಲೇಟ್ ಗಳು, ಇತರೆ ವಸ್ತುಗಳು ನಮ್ಮ ಮುಂದೆ ಹೊಸ ಲೋಕವನ್ನು ತೆರೆದಿಡುತ್ತಿದ್ದವು. ಚಿಕ್ಕಪ್ಪ ಕೊಡುಗೈ ದೊರೆ. ಎಲ್ಲಾ ಮಕ್ಕಳಿಗೂ ಅವರವರಿಗೆ ಪ್ರಿಯವಾದ ವಸ್ತುಗಳನ್ನು ತರುತ್ತಿದ್ದರು. ನನ್ನ ಮೇಲೆ ಜಾಸ್ತಿ ಪ್ರೀತಿ ಇದ್ದ ಕಾರಣ ನನಗೆ ಸ್ವಲ್ಪ extra gifts ಸಿಗುತ್ತಿತ್ತು. ಅವರೊಮ್ಮೆ ತಂದು ಕೊಟ್ಟಿದ್ದ ಆಫ್ರಿಕನ್ನರ ದಿರಿಸನ್ನು ನಾನು ಸುಮಾರು ಹತ್ತು ವರ್ಷಗಳ ಕಾಲ ಬಳಸಿದ್ದೆ. ಆದರೂ ಅದು ಹೊಸದರ ಹಾಗೇ ಕಾಣುತ್ತಿತ್ತು. ಕಡು ನೀಲಿ ಬಣ್ಣದ ಆ ದಿರಿಸು ನನಗೆ ಬಹಳ ಪ್ರಿಯವಾಗಿತ್ತು.
ಮೊದಲಿನಿಂದಲೂ ತಿರುಗಾಟಪ್ರಿಯರಾದ ಚಿಕ್ಕಪ್ಪ ಈಗ ಎಪ್ಪತ್ತು ವರ್ಷ ದಾಟಿದರೂ ತಮ್ಮ ತಿರುಗಾಟವನ್ನು ನಿಲ್ಲಿಸಿಲ್ಲ. ಅವರ ಜೀವನೋತ್ಸಾಹವನ್ನು ಮೆಚ್ಚಲೇ ಬೇಕು. ಈಗಲೂ ಕೂಡ ನಮ್ಮೆಲ್ಲರ ಅದೇ ಹಳೆಯ ಚಿಕ್ಕಪ್ಪನಾಗಿ, ನನ್ನ ಕಸಿನ್ಸ್ ಗಳಿಗೆ ಅದೇ ಸಣ್ಣ ಮಾವಯ್ಯನಾಗಿ ನಮ್ಮೆಲ್ಲರೊಡನೆ ಒಡನಾಟವನ್ನಿಟ್ಟುಕೊಂಡಿರುವ ಚಿಕ್ಕಪ್ಪ ಇನ್ನಷ್ಟು ಕಾಲ ಸಂತೃಪ್ತವಾದ ತುಂಬು ಜೀವನವನ್ನು ನಡೆಸಲಿ ಎನ್ನುವ ಹಾರೈಕೆ ನಮ್ಮೆಲ್ಲರದು.

21. ರೇಖಾ-ಅಶೋಕ್ 
ಅಶೋಕ್, ರೇಖಾ, ನನ್ನ ಮತ್ತು ರವಿಯ ಗೆಳೆತನ ಸ್ನೇಹದ ಪರಿಭಾಷೆಗೆ ಮೀರಿದ್ದು. ನಾವು ದೂರವಿದ್ದರೂ ನಮ್ಮ ಸ್ನೇಹ ಯಾವತ್ತೂ ತನ್ನ ಸತ್ವ ಕಳಕೊಂಡಿದ್ದಿಲ್ಲ.
ನಾನು 1989ರಲ್ಲಿ ನವೋದಯ ಸೇರಿದರೆ ಅಶೋಕ್ ಸೇರಿದ್ದು 1990ರಲ್ಲಿ. ರವಿ ಮತ್ತು ರೇಖಾ ನವೋದಯದಲ್ಲಿ ಕೆಲಸಕ್ಕೆ ಸೇರಿದ್ದು 1993ರಲ್ಲಿ ಕೇವಲ ಒಂದೆರಡು ದಿನಗಳ ಅಂತರದಲ್ಲಿ. ಕೇರಳದ ರೇಖನಿಗೆ ಇನ್ನೂ ಮಾತು ಕಲಿಯುತ್ತಿದ್ದ ನನ್ನ ಒಂದು ವರ್ಷದ ಮಗ ವಿಜೇತ ಕನ್ನಡದ ಗುರು! ರೇಖಾ ಒಳ್ಳೆಯ ಟೀಚರ್. ಕೆಲಸ ಮಾಡಲು ಬಿಟ್ಟರೆ 24/7 ಕೆಲಸ ಮಾಡುವ ವ್ಯಕ್ತಿ. ಅವಳ ಹತ್ತಿರ ಫಿಸಿಕ್ಸ್ ಕಲಿತವರು ಎಂದೂ ಕಲಿತದ್ದನ್ನು ಮರೆಯಲು ಸಾಧ್ಯವಿಲ್ಲ! ಅಂತಹ ಪವರ್ ಫುಲ್ ಟೀಚಿಂಗ್ ಅವಳದ್ದು. ಅವಳ ವಿಷಯ ಜ್ಞಾನ ಹಾಗೂ ಕಲಿಸುವ ಮನಸ್ಸು, ಮಕ್ಕಳಿಗೆ ಉತ್ಕೃಷ್ಟವಾದದ್ದನ್ನು ಕೊಡಬೇಕೆಂಬ ಹಂಬಲ ಅವಳನ್ನು ಶಿಕ್ಷಕಿಯಾಗಿ ಬಹಳ ಎತ್ತರಕ್ಕೇರಿಸಿದೆ. ಏನನ್ನು ಮಾಡಿದರೂ ಅದು ಪರ್ಫೆಕ್ಟ್ ಆಗಬೇಕೆನ್ನುವುದು ಅವಳ ವಿಚಾರ. ಅವೆಲ್ಲವೂ ರಾಷ್ಟ್ರ ಮಟ್ಟದಲ್ಲಿ ಅವಳನ್ನು ಅತ್ಯುತ್ತಮ ಶಿಕ್ಷಕಿಯಾಗಿ ಗುರುತಿಸುವ ಹಾಗೆ ಮಾಡಿದೆ.
ನನ್ನ ತವರೂರ ಕಡೆಯವರಾದ ಅಶೋಕ್ ಸ್ನೇಹಮಯಿ. ಸ್ವಲ್ಪ ಸಂಕೋಚ ಪ್ರವೃತ್ತಿಯವರು. ಅವರಲ್ಲಿರುವ ವಿಷಯ ಜ್ಞಾನ ಅಪರಿಮಿತ. ಒಂದು ರೀತಿಯಲ್ಲಿ ಸಣ್ಣ ವಿಶ್ವಕೋಶ ಇದ್ದಂತೆ. ನವೋದಯದಲ್ಲಿ ಯಾವುದೇ ಟೆಕ್ನಿಕಲ್ ಸಮಸ್ಯೆಯಾದರೆ ಪರಿಹಾರ ನೀಡಲು ಅಶೋಕ್ ಬೇಕು ಎನ್ನುವ ಕಾಲವೊಂದಿತ್ತು. ತುಂಬಾ ಮೃದು ಮನಸ್ಸಿನವರು. ಯಾರು ದೇಹಿ ಅಂದರೂ ಸಹಾಯಕ್ಕೆ ಸದಾ ಸಿದ್ಧ ಅಶೋಕ್.
ಅವರಿಬ್ಬರ ವಿವಾಹ ಮಾಡಿಸಿದ ಕ್ರೆಡಿಟ್ ನನಗೆ ಹಾಗೂ ರವಿಗೆ ಸಲ್ಲುತ್ತದೆ. ವಿವಾಹದ ಇಪ್ಪತ್ತೈದು ವಸಂತಗಳನ್ನು ಈ ವರ್ಷ ಪೂರೈಸಿದ ಖುಷಿಯಲ್ಲಿರುವ ಅವರಿಗೆ ಆಲೇಖ, ಅವಿನಾಶ್ ಇಬ್ಬರು ಮಕ್ಕಳು. ವಿಜೇತ, ವಿಭಾ, ಆಲೇಖ, ಅವಿನಾಶರ ಬಾಂಧವ್ಯ ಒಡಹುಟ್ಟಿದವರಿಗಿಂತ ಗಟ್ಟಿಯಾದದ್ದು. ನಮಗೆ ನಾಲ್ಕು ಮಕ್ಕಳು ಅಂತ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದಂತ ಅಂಟು ಆ ಮಕ್ಕಳೊಟ್ಟಿಗೆ ನನಗೂ ಇದೆ, ಅವರಿಬ್ಬರಿಗೂ ಇದೆ.
ಹೊಂಗಿರಣದ ಮೂಲ ಕಲ್ಪನೆಯಲ್ಲಿ ಅಶೋಕ್ - ರೇಖಾರ ಸಮಪಾಲು ಇದೆ. ಪ್ರಾರಂಭದ ದಿನಗಳಲ್ಲಿ ನಾವೆಲ್ಲರೂ ಒಟ್ಟಿಗಿದ್ದು ನಡೆಸಿದ ಶಾಲಾ ಬೆಳವಣಿಗೆಯ ಪ್ರಯತ್ನಗಳು, ಕಟ್ಟಡ ಕಟ್ಟುವಾಗ ರವಿ - ಅಶೋಕ್ ಮಳೆ ಬಿಸಿಲೆನ್ನದೆ ನಿಂತು ಕೆಲಸ ಮಾಡಿಸುತ್ತಿದ್ದದ್ದು, ರಜೆಯಲ್ಲಿ ಭಟ್ಟರಿಲ್ಲದಾಗ ಏನೂ ಸರಿಯಾದ ವ್ಯವಸ್ಥೆ ಇಲ್ಲದ ಅಡುಗೆ ಮನೆಯಲ್ಲಿ ನೂರುಗಟ್ಟಲೆ ಜನರಿಗೆ ಅಡುಗೆ ಮಾಡುತ್ತಿದ್ದ ನನ್ನ ಮತ್ತು ರೇಖಾಳ ನಳಪಾಕ ಎಲ್ಲವೂ ಈಗ ನೆನೆಯಲು ಯೋಗ್ಯ.
ಸ್ನೇಹಕ್ಕೆ ಹೊಸ ಭಾಷ್ಯವನ್ನು ಕೊಡಬಹುದಾದಂತಹ ಮನವರಿಯುವ ಸಂಬಂಧ ನಮ್ಮದು ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ.



20. ಬಿ. ಕೆ. ಸುಮಿತ್ರ. (ನಿನಾದ)
ನಿನಾದ - ಸುಗಮ ಸಂಗೀತ ಕಾರ್ಯಾಗಾರ - ಇದು ಹೊಂಗಿರಣದ ಸಮಾಜಮುಖಿ ಚಟುವಟಿಕೆಗಳಲ್ಲೊಂದು. ಬರೀ ನಮ್ಮಲ್ಲಿ ಕಲಿಯುವ ಮಕ್ಕಳ ಸರ್ವತೋಮುಖ ಬೆಳವಣಿಗೆ ಮಾತ್ರ ನಮ್ಮ ಗುರಿಯಾಗದೆ ಉಳಿದ ಕಡೆಯ ಮಕ್ಕಳಿಗೂ ನಮ್ಮಿಂದಾದ ಸಾಂಸ್ಕೃತಿಕ ಕಲಿಕೆಯ ಅನುಭವ ಕೊಡೋಣ ಎನ್ನುವಲ್ಲಿ ನಿನಾದ ಯೋಜಿತಗೊಂಡದ್ದು. ಚಿತ್ರದುರ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ರಾಯಚೂರು, ತುಮಕೂರು... ಹೀಗೆ ಹಲವಾರು ಜಿಲ್ಲೆಗಳ ಅನೇಕ ಸ್ಥಳಗಳನ್ನು ಈ ಸಂದರ್ಭದಲ್ಲಿ ಭೇಟಿ ಮಾಡಿದಾಗ ಕೆಲವು ಕಡೆಗಳಲ್ಲಂತೂ ಮಕ್ಕಳಿಗೆ ಸಂಗೀತದ ಗಂಧಗಾಳಿಯಿಲ್ಲದಿರುವುದು ಗಮನಕ್ಕೆ ಬಂದಿತು. ಅಂತಹ ಮಕ್ಕಳಿಗೆ ನಮ್ಮ ನಿನಾದ ಒಂದು ವರದಾನವಾಯಿತು ಅಂದರೆ ತಪ್ಪಿಲ್ಲ. ನಮ್ಮೀ ಕಾರ್ಯಾಗಾರವನ್ನು ಆಯೋಜಿಸಲು ಆಯಾಯ ಸ್ಥಳಗಳಲ್ಲಿದ್ದ ನಮ್ಮ ಪಾಲಕರ ಸಹಾಯವನ್ನು ತೆಗೆದುಕೊಂಡು ನಾವು ಕೈಗೊಂಡ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ನಿನಾದವನ್ನು ನಾವು ಮುದ್ಗಲ್, ಬೆಲಗೂರು, ಹೊಸದುರ್ಗ, ಸಿದ್ದಾಪುರ, ಸಿರ್ಸಿ, ಶೃಂಗೇರಿ... ಇನ್ನೂ ಹಲವೆಡೆ ನಡೆಸಿದ್ದೇವೆ. ಹೆಚ್ಚಿನ ಬಾರಿ ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಬಂದವರು ಶ್ರೀಮತಿ ಬಿ. ಕೆ. ಸುಮಿತ್ರರವರು. ಅವರೊಬ್ಬ ಸರಳ ಸಜ್ಜನ ವ್ಯಕ್ತಿ. ತುಂಬಿದ ಕೊಡ ತುಳುಕುವುದಿಲ್ಲವೆನ್ನುವುದಕ್ಕೆ ಹೇಳಿ ಮಾಡಿಸಿದ ಉದಾಹರಣೆ. ಅಂತಹ ಇಳಿ ವಯಸ್ಸಿನಲ್ಲೂ ಅವರು ನೂರಾರು ಮಕ್ಕಳಿಗೆ ಸುಗಮ ಸಂಗೀತವನ್ನು ಕಲಿಸುವ ಪರಿ ವಿವರಣೆಗೆ ಮೀರಿದ್ದು. ಬೆಳಿಗ್ಗೆ ಯಾವ ತಾಜಾತನದಲ್ಲಿ ಕಲಿಸಲು ಪ್ರಾರಂಭಿಸುತ್ತಾರೋ ಸಾಯಂಕಾಲವಾದರೂ ಆದೇ ರೀತಿಯ ಹುಮ್ಮಸ್ಸು ಅವರಲ್ಲಿ ಕಾಣ ಸಿಗುತ್ತದೆ. ಸುಸ್ತಿನ ಛಾಯೆ ಅವರ ಬಳಿ ಸುಳಿಯುವುದಿಲ್ಲ. ಯಾವ ಆದರಾತಿಥ್ಯದ ನಿರೀಕ್ಷೆಯೂ ಅವರಿಗಿಲ್ಲ. ಬಹಳ ಅಪರೂಪದ ವ್ಯಕ್ತಿ ಆಕೆ. ಅವರಿಂದ ಸಂಗೀತದ ಜೊತೆ ಜೊತೆಗೆ ಬದುಕಿನ ಪಾಠ ಕಲಿಯುವುದು ಬಹಳಷ್ಟಿದೆ. ಅವರ ಜೊತೆ ಕೆಲವಾರು ದಿನಗಳನ್ನು ಕಳೆಯುವ ಸುಯೋಗ ನನಗೆ ಸಿಕ್ಕಿದ್ದು ನನ್ನ ಬದುಕಿನ ಅತ್ಯಮೂಲ್ಯ ಕ್ಷಣಗಳಲ್ಲೊಂದು. ಮಾಡುವ ಕೆಲಸದಲ್ಲಿ ಅವರ ಸಕ್ರಿಯ ತೊಡಗಿಕೊಳ್ಳುವಿಕೆ, ತನ್ನಲ್ಲಿರುವ ಕಲೆಯನ್ನು ಇನ್ನುಳಿದವರಿಗೆ ಕಲಿಸಬೇಕೆನ್ನುವ ನಿರ್ಮಲ ಹಂಬಲ, ಎಲ್ಲಾ ವರ್ಗದವರನ್ನು ಪ್ರೀತಿಯಿಂದ ಕಾಣುವ ರೀತಿ, ಆರದ ಕಲಾಪ್ರೇಮಾ, ಜೊತೆಯಲ್ಲಿರುವವರಿಗೆ ತೋರುವ ನಿರ್ವ್ಯಾಜ್ಯ ಪ್ರೀತಿ.... ಒಂದೇ ಎರಡೇ! ಅಂತಹ ಸರ್ವ ಕಲ್ಯಾಣ ಗುಣಗಳ ಖನಿ ಅವರು. ನಿನಾದ ನನಗೆ ಹಲವಾರು ಊರುಗಳ ದರ್ಶನ ಮಾಡುವ ಅವಕಾಶ ಕೊಟ್ಟಿದ್ದಲ್ಲದೆ ಸುಮಿತ್ರರವರಂತಹ ಮೇರುವ್ಯಕ್ತಿಗಳ ಸಾಂಗತ್ಯ ದೊರಕಿಸಿಕೊಟ್ಟಿತೆನ್ನುವುದು ಹೆಮ್ಮೆಯ ವಿಷಯ.


19. ಶಂಕರಿ 

'ಆಯಾ' ಎನ್ನುವ ಮಾಲ್ಗುಡಿ ಡೇಸ್ ಧಾರಾವಾಹಿಯ ಭಾಗವನ್ನು ಯೂ ಟ್ಯೂಬ್ ನಲ್ಲಿ ನೋಡಿದೆ. ಅದರಲ್ಲೊಂದು ದೃಶ್ಯವಿದೆ. ಆಯಾ ಊರಿಗೆ ಹೋದವಳು ಬಾರದೆ ಇದ್ದಾಗ ಮನೆಮಂದಿಯೆಲ್ಲ ಸಿಟ್ಟು ಮಾಡುವುದು, ಆತಂಕ ಪಡುವುದು ...ಹೀಗೆ ಎಲ್ಲಾ ರೀತಿಯ ಭಾವನೆಗಳನ್ನು ತೋರಿಸುತ್ತಾರೆ. ಏಕೆಂದರೆ ಆ ಆಯಾ ಆ ಮನೆಯ ಪ್ರತಿಯೊಬ್ಬರ ಬದುಕಿನ ಅನಿವಾರ್ಯ ಭಾಗವಾಗಿರುತ್ತಾಳೆ. ಹಾಗೆಯೇ ನಮ್ಮ ಶಂಕರಿ! ಅವಳು ಊರಿಗೆ ಹೋಗಿ ಹೇಳಿದ ಸಮಯಕ್ಕೆ ಬಾರದಿರುವಾಗ ನನ್ನೊಳಗೆ ಆಗುವ ಭಾವನೆಗಳ ವಿಪ್ಲವವೂ ಅಂತಹುದೆ! ಶಂಕರಿ ಮತ್ತು ನನ್ನ ಸಾಂಗತ್ಯ ಕಳೆದ ಇಪ್ಪತ್ತೆಂಟು ವರುಷಗಳದ್ದು. ನನ್ನ ಮಗ ವಿಜೇತ ಮೂರು ತಿಂಗಳ ಮಗುವಿದ್ದಾಗ ಅವನನ್ನು ನೋಡಿಕೊಳ್ಳಲು ಬಂದವಳು ನಮ್ಮ ಮನೆಯ ಅವಿಭಾಜ್ಯ ಅಂಗವೇ ಆಗಿದ್ದಾಳೆ ಅಂದರೆ ಸುಳ್ಳಲ್ಲ.
ತನ್ನದೇ ಓಘದಲ್ಲಿ ಕೆಲಸ ಮಾಡುವ ಶಂಕರಿಗೆ ಮಕ್ಕಳನ್ನು ತಾಳ್ಮೆಯಿಂದ, ನಿಷ್ಕಲ್ಮಶ ಪ್ರೀತಿಯಿಂದ ನಿಭಾಯಿಸುವ ಕಲೆ ಇದೆ. ಆದರೆ ಕೆಲವೊಮ್ಮೆ ಆವಳ ಅತಿ ಪ್ರೀತಿಯಿಂದ ಮಕ್ಕಳಿರಲಿ ನಮ್ಮ ಮನೆಯ ಪ್ರಾಣಿಗಳು ಕೂಡಾ ಅವಳ ಮಾತು ಕೇಳದೆ ಆವಳನ್ನು ಗೋಳು ಹೊಯ್ದುಕೊಳ್ಳುತ್ತಾವೆ.
ನನ್ನದು ಹಾಗೂ ಅವಳ ಸಂಬಂಧ ವಿಚಿತ್ರ. ನನ್ನ ಗಡಿಬಿಡಿಯ ಕೆಲಸಕ್ಕೆ ಅವಳ ನಿಧಾನ ಗತಿಯೇ ಮದ್ದು. ಹೀಗಾಗಿ ಅವಳು ನನ್ನ ಹತ್ತಿರ ಬೈಸಿಕೊಳ್ಳೋದು ಹೆಚ್ಚು. ಅದರ ಹಿಂದಿರುವ ಕಾಳಜಿಯ ಆರಿವು ಅವಳಿಗಿರುವ ಕಾರಣ ನಮ್ಮಿಬ್ಬರ ಜೋಡು ರಥ ಇನ್ನೂ ಸಾಗುತ್ತಿದೆ.
ನನ್ನ ಮಗಳಿಗೆ ಅವಳು ಎರಡನೇ ತಾಯಿ. ನಾನು ಎದೆಹಾಲು ಕುಡಿಸಿದ್ದು ಬಿಟ್ಟರೆ ಅವಳ ಉಳಿದೆಲ್ಲ ಕೆಲಸಗಳನ್ನು ಮಾಡುತ್ತಾ ಅವಳ ಸಂಪೂರ್ಣ ದೇಖಾರೇಖಿಯನ್ನು ಮಾಡಿದವಳು ಶಂಕರಿ.
ನಮ್ಮ ಮನೆಯ ವಸ್ತುಗಳು ಎಷ್ಟಿವೆ, ಎಲ್ಲಿವೆ ಅನ್ನುವುದು ಅವಳಿಗೆ ಗೊತ್ತಿರುವಷ್ಟು ನಮಗೆ ಗೊತ್ತಿರುವುದಿಲ್ಲ. ಆದರೆ ಅವಳ ಮರೆವು ಅಷ್ಟೇ ವಿಚಿತ್ರ. ದಿನದ ಅರ್ಧ ಸಮಯ ಅವಳಿಗೆ ತಾನಿಟ್ಟ ವಸ್ತುಗಳನ್ನು ಹುಡುಕುವುದರಲ್ಲೇ ಕಳೆದು ಹೋಗುತ್ತದೆ.
ಅವಳು ತಿಂಬೋಕಿಯಲ್ಲ. ಅವಳು ಆಸೆ ಪಟ್ಟು ಸೇವಿಸುವ ಒಂದೇ ವಸ್ತು ಸಿಹಿಯಾದ ಚಹಾ. ಉಳಿದಂತೆ ಯಾವತ್ತೂ ಯಾವುದಕ್ಕೂ ಆಸೆ ಪಟ್ಟವಳಲ್ಲ. ಗಾರ್ಡನಿಂಗ್ ಅವಳ ಪ್ರೀತಿಯ ಕೆಲಸ. ಹೂತೋಟಕ್ಕೆ ಇಳಿದರೆ ಆವಳಿಗೆ ತನ್ನ ಪ್ರೀತಿಯ ಚಹಾದ ನೆನಪೂ ಕೂಡ ಆಗುವುದಿಲ್ಲ. ಅಷ್ಟು ತನ್ಮಯತೆ ಆ ಕೆಲಸದಲ್ಲಿ!
ನಮ್ಮ ಮನೆಗೆ ಯಾವ ನೆಂಟರು ಬಂದರೂ ಮೊದಲಿಗೆ ವಿಚಾರಿಸುವುದು ಶಂಕರಿಯನ್ನು. ಅವಳಿಲ್ಲದ ಮನೆ ಭಣಭಣ. ಹೀಗಾಗಿ ಶಂಕರಿ ಊರಿಗೆ ಹೋಗಿ ತಡವಾಗಿ ಬಂದರೆ ನಮಗೆಲ್ಲ ಸಿಟ್ಟು. ಅವಳಿಗೂ ನಮ್ಮನ್ನು ಬಿಟ್ಟು ಹೆಚ್ಚು ದಿನ ಇರಲಾಗದ ಬಂಧ.
ಶಂಕರಿ ಒಳ್ಳೆಯ ಕಲಾವಿದೆ. ಚಿತ್ರಕಲೆಯಲ್ಲಿ, ರಂಗೋಲಿಯಲ್ಲಿ ಮುಂದು. ರಿಪೇರಿ ಮಾಡುವುದರಲ್ಲಿ ಸಿಧ್ಧಹಸ್ತಳು. ಸ್ವಲ್ಪ ನಾಟಿ ಔಷಧಿಗಳ ಜ್ಞಾನವೂ ಇದೆ. ಹೀಗಾಗಿ ನಾನು ಅವಳಿಗೆ "ನೀನು ಡಾಕ್ಟರ್ ಆಗಿದ್ದರೆ ಒಂದು ರೋಗಿಯೂ ಉಳಿಯುತ್ತಿರಲಿಲ್ಲ" ಅಂತ ತಮಾಷೆ ಮಾಡುತ್ತಿರುತ್ತೇನೆ.
ಹೊಂಗಿರಣದ ಪ್ರಾರಂಭದ ದಿನಗಳಲ್ಲಿ ಅಡುಗೆ ಭಟ್ಟರಿಲ್ಲದಿದ್ದಾಗ ನನ್ನ ಅಡುಗೆಯ ಕಾಯಕಕ್ಕೆ ಸಾಥ್ ಕೊಟ್ಟವಳು ಶಂಕರಿ. ಈಗ ನಮ್ಮ ಕ್ಯಾಂಪಸ್ಸಿನ ಎಲ್ಲರಿಗೂ ಶಂಕರಿ ಆಂಟಿಯಾಗಿ, ಶಂಕ್ರಕ್ಕನಾಗಿ ಪರಿಚಿತಳಾಗಿದ್ದಾಳೆ. ಸಂಬಂಧಗಳನ್ನು ಮೀರಿದ ಸಂಬಂಧವನ್ನು ಹೊಂದಿ ಶಂಕರಿ ನಮ್ಮಲ್ಲೊಬ್ಬಳಾಗಿ ಸ್ಥಾಪಿತಗೊಂಡಿದ್ದಾಳೆ ಅನ್ನುವುದು ಸತ್ಯಕ್ಕೆ ದೂರವಲ್ಲದ ವಿಷಯ.



18. ಶೈಲಾ  - ತಂಗಿ 
ನನ್ನ ತಂಗಿ ಶೈಲ ನಾನು ಹುಟ್ಟಿದ ಆರೂವರೆ ವರ್ಷಗಳ ನಂತರ ಹೆಬ್ರಿಯಲ್ಲಿ ಜನಿಸಿದವಳು. ನಾನಾಗ ಒಂದನೇ ಕ್ಲಾಸ್ ನಲ್ಲಿ ಇದ್ದೆ ಅಂತ ಅನಿಸುತ್ತದೆ. ಮಗು ಹುಟ್ಟಿದ್ದು ಗೊತ್ತಾದ ತಕ್ಷಣ ನಾನು ಮಗುವನ್ನು ನೋಡುವ ಬದಲು ಆನಮ್ಮನ ಮನೆಯ ಹೊರಗಿದ್ದ ಕ್ರೋಟನ್ ಗಿಡದ ಸಂಧಿಯೊಳಗೆ ಅಡಗಿ ಕುಳಿತಿದ್ದೆ. ನಂತರ ನನ್ನನ್ನು ಹುಡುಕಿ ಒಳಗೆ ಕರ್ಕೊಂಡು ಹೋಗಿ ಮಗುವನ್ನು ತೋರಿಸಿದ್ದರು. ಎಂತಹ ಚೆಂದದ ಮಗು ಅಂತೀರಿ! ತಲೆತುಂಬ ದಟ್ಟ ಕೂದಲಿದ್ದ ಮುದ್ದಾದ ಮಗು. ಎಲ್ಲರ ಗಮನ ಮಗುವಿನ ಕಡೆಗೆ ಹೋದಾಗ ನನಗೆ ಹೊಟ್ಟೆಕಿಚ್ಚಾದದ್ದು ನಿಜ🙄
ಶೈಲ ಬಹಳ ಮಿತಭಾಷಿ. ನಾನು ಎಷ್ಟು ಬಾಯಿ ಬಡುಕಿಯೋ ಅವಳು ಅಷ್ಟೇ ಕಡಿಮೆ ಮಾತಿನವಳು. ಅಮ್ಮನ ಮುದ್ದಿನ ಮಗಳು. ತಿನ್ನುವ ವಿಷಯದಲ್ಲಿ ಬಹಳ fussy. ನಾನಾದರೋ ಏನು ಕೊಟ್ಟರೂ ತಿಂದು ತೇಗುವವಳು. ಅವಳ ಪ್ರೀತಿಯ ಊಟ ಉಪ್ಪು ತುಪ್ಪದನ್ನ(ಈಗಲೂ ಕೂಡ). ತಿನ್ನುವುದರಲ್ಲಿ ಬಹಳ ನಿಧಾನಿ. ಅವಳು ಪಲ್ಯದನ್ನವನ್ನು ಕಲೆಸುವುದರೊಳಗೆ ನನ್ನ ಊಟವೇ ಮುಗಿದಿರುತ್ತಿತ್ತು. ಅವಳಿಗೆ ಗಟ್ಟಿ ಮೊಸರೇ ಬೇಕಿತ್ತು. ನನ್ನ ಊಟ ಬೇಗ ಆಗುತ್ತಿದ್ದ ಕಾರಣ ನಾನು ಮೊಸರನ್ನು ಕದಡಿ ಇಡುತ್ತಿದ್ದೆ. ಆಗ ಅಲ್ಲೇ ನನಗೂ ಅವಳಿಗೂ ಜಗಳ ಶುರುವಾಗಿ ಅಮ್ಮನ ಸಿಟ್ಟು ನೆತ್ತಿಗೇರಿ ಅಮ್ಮನ ಕೈಯಲ್ಲಿ ಏನಿದ್ದರೂ ಅದರಿಂದ ನನಗೆ ಎರಡು ಬಲವಾದ ಹೊಡೆತ ಬೀಳುತ್ತಿತ್ತು.
ಚಿಕ್ಕವಳಿದ್ದಾಗ ಒಮ್ಮೆ ನನಗೆ ಜಾಂಡೀಸ್ ಆಗಿ ನಾನು ಪಥ್ಯಾಹಾರದಲ್ಲಿದ್ದೆ. ಅಮ್ಮ ಮಾಡಿದ ತಿಂಡಿಗಳನ್ನು ಶೈಲ ನನಗೆ ತೋರಿಸಿ ತಿನ್ನುತ್ತಿದ್ದಳು. ನಾನು ಮೊದಲೇ ತಿಂಡಿಪ್ರಿಯೆ ಹಾಗೂ ತಿಮ್ಮಂಡಿ. ನನಗಂತೂ ಅವಳಿಗೆ ಬಾರಿಸಿ ಬಿಡುವಷ್ಟು ಸಿಟ್ಟು ಬಂದಿತ್ತು ಆಗ. ಅಮ್ಮನಿಂದ ಪ್ರಸಾದ ತಿನ್ನಬೇಕಲ್ಲ ಅನ್ನುವ ಹೆದರಿಕೆಗೆ ಬಾರಿಸದೆ ಸುಮ್ಮನಿರುತ್ತಿದ್ದೆ.
ಮನೆಗೆ ಯಾರೇ ನೆಂಟರು ಬಂದರೆ ಶೈಲ ಕೋಣೆಪಾಲು.! ಅಲ್ಲಿಂದಲೇ "ಬಂದವರು ಯಾವಾಗ ಹೋಗುತ್ತಾರೆ" ಅನ್ನುವ ಪ್ರಶ್ನೆ. ಅವಳಾಯಿತು ಅವಳ ಪಾಡಾಯಿತು ಎನ್ನುವುದು ಅವಳ ಸ್ವಭಾವವಾದರೆ ನಾನೋ ಊರೆಲ್ಲ friends ಹೊಂದಿರುವ "ಜನ" ಪ್ರಿಯಳಾಗಿದ್ದೆ. ಸಣ್ಣ ಕಿತಾಪತಿಯವಳಾದ ಶೈಲ ನಾನು ಮಲಗಿದಾಗ ನನ್ನ ಮುಖದ ಮೇಲೆಲ್ಲ ಚಿತ್ರ ಬರೆದಿಡುತ್ತಿದ್ದಳು. ಬೆಳಿಗ್ಗೆ ಎದ್ದು ಕನ್ನಡಿ ನೋಡಿದರೆ ಯಾವುದೋ ಅಪರಿಚಿತ ಮುಖ ಕನ್ನಡಿಯಲ್ಲಿ ಕಾಣುತ್ತಿತ್ತು. ನನ್ನ ಅವಳ ಜಗಳಗಳೆಲ್ಲ ವಿಚಿತ್ರವಾಗಿರುತ್ತಿದ್ದವು. ಹಾಗೆಯೇ ನಮ್ಮಿಬ್ಬರ ನಡುವೆ ನಿಗೂಢ ಪ್ರೀತಿಯೂ ಇತ್ತು. ಈಗಲೂ ನಾನು ಅವಳು ಒಟ್ಟಾದರೆ ಪರಸ್ಪರ ಕಾಲೆಳೆದುಕೊಳ್ಳುತ್ತೇವೆ. ನಮ್ಮ ಮಕ್ಕಳೊಡನೆ ನಮ್ಮ ಬಾಲ್ಯದ ಜಗಳದ ಪ್ರತಾಪ ಕೊಚ್ಚಿಕೊಂಡು ನಗುತ್ತೇವೆ.
ಶೈಕ್ಷಣಿಕವಾಗಿ ಅವಳ ಸಾಧನೆ ಉತ್ಕೃಷ್ಟವಾದುದು. ಗಣಿತದಲ್ಲಿ ಯಾವಾಗಲೂ ನೂರಕ್ಕೆ ನೂರು. ನಾನೋ ಗಣಿತ ಅಂದರೆ ಕಣ್ಣೀರು😭 ಏಕಗ್ರಾಹಿಯಾದ ಅವಳು ಎಂ ಟೆಕ್ ನಲ್ಲಿ ಗೋಲ್ಡ್ ಮೆಡಲಿಸ್ಟ್. ಆಫೀಸ್ ನಲ್ಲಿ ಸಮರ್ಥ ಲೀಡರ್. ಅವಳ ಪತಿ ಶ್ರೀ ಉದಯಕುಮಾರ್ ರವರು ಪ್ರತಿಷ್ಠಿತ ಐಐಎಸ್ ಸಿಯಲ್ಲಿ ವಿಜ್ಞಾನಿ. ಬಹಳ dedicated ಹಾಗೂ committed ಆಗಿ ವೃತ್ತಿಜೀವನವನ್ನು ಸ್ವೀಕರಿಸಿದವರು. ಸರಳ ವ್ಯಕ್ತಿ. ಈಗ ಎಲ್ಲರೊಡನೆ ಬೆರೆಯುವ, ಆದರಿಸಿ ಸತ್ಕರಿಸುವ ಗುಣದೊಂದಿಗೆ ಗಂಡ ಎರಡು ಮಕ್ಕಳೊಟ್ಟಿಗೆ ಸುಖೀ ಸಂಸಾರ ನಡೆಸುತ್ತಿರುವ ಶೈಲ ನನ್ನ ಕಣ್ಣಿಗೆ ಮಾತ್ರ ಅದೇ ಶೈಶವಾವಸ್ಥೆಯ ತಂಗಿಯಾಗಿಯೇ ಕಾಣುತ್ತಾಳೆ.



17. ಸ್ವೀಡನ್ ನ  ಕ್ಲಾರ 

ನಮ್ಮ ಆಪ್ತ, ವಿಶೇಷ ಸ್ನೇಹಿತರ ಪ್ರವರ್ಗಕ್ಕೆ ಸೇರುವ ಅತ್ಯಂತ ವಿಶಿಷ್ಟ ಸ್ನೇಹಿತೆ ಸ್ವೀಡನ್ನಿನ ಕ್ಲಾರ. ಈಗ್ಗೆ ಹದಿನಾಲ್ಕು ವರ್ಷಗಳ ಹಿಂದೆ ಸುಮಾರು ಹತ್ತೊಂಬತ್ತರ ಹರೆಯದಲ್ಲಿದ್ದ ಕ್ಲಾರ ಅಂತರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಡಿಯಲ್ಲಿ ನಮ್ಮಲ್ಲಿಗೆ ಒಂದು ವರ್ಷದ ಅವಧಿಗೆ ಬಂದಿದ್ದಳು. ಅಪರಿಚಿತಳಾಗಿ ಬಂದಿದ್ದ ಪರದೇಶದ ಕ್ಲಾರ ನಮ್ಮವಳಾಗಲು ಬಹಳ ಕಾಲ ಹಿಡಿಯಲಿಲ್ಲ. ನಮ್ಮ ಅರಿವಿಗೆ ಬರದಂತೆ ನಮ್ಮೆಲ್ಲರನ್ನು ಆವರಿಸಿಕೊಂಡು ಬಿಟ್ಟಳು. ನಮ್ಮ ಸಂಸ್ಥೆಯ ಚಟುವಟಿಕೆಗಳಲ್ಲಿ ಸಹಜವಾಗಿ ತನ್ನನ್ನವಳು ತೊಡಗಿಸಿಕೊಂಡದ್ದು ಅವಳ ವಿಶೇಷತೆ. ಅವಳಿಂದಾಗಿ ನಮ್ಮಲ್ಲಿ ಬಹಳಷ್ಟು ಜನರ ಇಂಗ್ಲಿಷ್ ಮಾತನಾಡುವಿಕೆ ಸುಧಾರಿಸಿತು ಎಂದರೆ ಸುಳ್ಳಲ್ಲ.
ಪರದೇಶದವರು ಅಂದರೆ ಬಹಳ free ಹಾಗೂ fast ಅನ್ನುವ ಅಭಿಪ್ರಾಯವನ್ನು ಸುಳ್ಳಾಗಿಸಿದಳು ಅವಳು. ಸ್ವೇಚ್ಛೆ ಅನ್ನುವುದು ಅವಳ ಹತ್ತಿರ ಸುಳಿಯುತ್ತಿರಲಿಲ್ಲ. ಅವಳ ವಯಸ್ಸಿಗೆ ಅವಳು ಬಹಳ ಪ್ರಬುಧ್ಧವಾಗಿ ಚಿಂತನೆ ಮಾಡುತ್ತಿದ್ದಳು. ಅವಳು ಪ್ರತಿ ವಿಷಯವನ್ನು ನೋಡುತ್ತಿದ್ದ ರೀತಿ ಹಾಗೂ ಪ್ರತಿಯೊಂದರ ಬಗ್ಗೆ ಆಲೋಚಿಸುತ್ತಿದ್ದ ರೀತಿ ವಿಭಿನ್ನವಾಗಿತ್ತು. Paying attention to the minute details was her speciality. ಅವಳು ವಿಷಯಗಳನ್ನು ಮಂಡಿಸುತ್ತಿದ್ದ ರೀತಿ ಹಾಗೂ ಖಂಡಿಸುತ್ತಿದ್ದ ರೀತಿ ವಿಶಿಷ್ಟವಾಗಿತ್ತು. ಬಹಳ ಖಂಡಿತವಾದಿ ಆಕೆ.
ಅವಳೊಡನೆ ನಮ್ಮ ಸಂಬಂಧ ಎಷ್ಟು ಗಟ್ಟಿಯಾಯಿತೆಂದರೆ ಆವಳು ತದನಂತರ ಪ್ರತೀ ಮೂರು ವರುಷಕ್ಕೊಮ್ಮೆ ನಮ್ಮೊಡನಿರಲಿಕ್ಕಾಗಿಯೇ ಭಾರತಕ್ಕೆ ಬಂದಿದ್ದಾಳೆ. ಅದಕ್ಕಾಗಿ ಎರಡ್ಮೂರು ವರ್ಷ ದುಡಿದು ಇಲ್ಲಿಗೆ ಬರುವ ಖರ್ಚಿಗೆ ಬೇಕಾದಷ್ಟು ದುಡ್ಡು ಒಟ್ಟಾದ ಕೂಡಲೇ ನಮ್ಮಲ್ಲಿಗೆ ಬಂದು ಒಂದೆರಡು ತಿಂಗಳಿದ್ದು ಹೋಗುತ್ತಾಳೆ. ಬದಲಾಗದ ಅದೇ ಪ್ರೀತಿ, ಅದೇ ಭಾವ, ಅದೇ ಒಡನಾಟ ಅವಳಲ್ಲಿ ಕಾಣುತ್ತದೆ. ಯುರೋಪಿನ ಬಹಳ ದೇಶಗಳನ್ನು ಸುತ್ತಿದ ಅವಳ ಮೂಲಕ ಅಲ್ಲಿನವರ ಜೀವನ ದರ್ಶನವಾಗುತ್ತದೆ. ಜನ ಯಾವ ದೇಶದವರಾದರೂ ಎಲ್ಲರ ಭಾವನೆಗಳು ಒಂದೇ ಎನ್ನುವುದು ಕ್ಲಾರಾಳಿಂದ ಕಂಡುಕೊಂಡ ಸತ್ಯ. ಮರೆತೇನೆಂದರೂ ಮರೆಯಲಾಗದ, ಬಿಟ್ಟಿರಲಾಗದ ಇಂತಹ ಸ್ನೇಹಕ್ಕೆ ವ್ಯಾಖ್ಯಾನದ ಅಗತ್ಯವಿದೆಯೆ?

16. ಡಾ. ಅನಿಲ್ ಹಾಗೂ ವೈದೇಹಿ

ಸಂಬಂಧಗಳೇ ವಿಚಿತ್ರ. ರಕ್ತ ಸಂಬಂಧಕ್ಕಿಂತಲೂ ಕೆಲವೊಮ್ಮೆ ಸ್ನೇಹ ಸಂಬಂಧವೇ ಹೆಚ್ಚು ಆಪ್ತವಾಗಿಬಿಡುತ್ತದೆ. ಅದಕ್ಕೆ long term acquaintance ಬೇಕಂತ ಇಲ್ಲ. It just happens.
ನನ್ನ ಜೀವನದಲ್ಲಿ ಇಂತಹ ಹಲವಾರು ಆಪ್ತರಿದ್ದಾರೆ. ಫೋನ್ ಇಲ್ಲ, chats ಇಲ್ಲ, ಆದರೂ ಪ್ರತಿ ಬಾರಿ ಭೇಟಿಯಾದಾಗಲೂ ಅದೇ ಆಪ್ತ ಭಾವ ನಮ್ಮ ನಡುವಿರುತ್ತದೆ. ವೈದೇಹಿ ಹಾಗೂ ಅನಿಲ್ ವೈದ್ಯ ದಂಪತಿಗಳು ನಮ್ಮೊಡನೆ ಇರವ ಸ್ನೇಹ ಅಂತಹುದು. ಅವರು ವೃತ್ತಿ ನಿಮಿತ್ತ ಶಿವಮೊಗ್ಗಕ್ಕೆ ಬಂದು ನೆಲೆಸುವುದಕ್ಕೂ ಊರಲ್ಲಾದ ನನ್ನ ಮೊದಲ ಹೆರಿಗೆಯಲ್ಲಿ ನನ್ನ ಆರೋಗ್ಯ ಏರುಪೇರಾಗುವುದಕ್ಕೂ, ಶಿವಮೊಗ್ಗದಲ್ಲಿ ಅನಿಲ್, ವೈದೇಹಿ ನನ್ನನ್ನು ಕಾಳಜಿಯಿಂದ attend ಮಾಡಿ ನನಗೆ ತಕ್ಕಮಟ್ಟಿಗೆ ನಿರೋಗಿಯಾಗಲಿಕ್ಕೆ ದಾರಿ ತೋರಿದ್ದಕ್ಕೂ ಎಲ್ಲಾ ತಾಳಮೇಳ ಕೂಡಿ ಬಂತು. ನಾನು ನನ್ನ or ನನ್ನವರ ಆರೋಗ್ಯ ಸಮಸ್ಯೆಯಿಂದ ಹೋದಾಗಲೆಲ್ಲ ಅವರು ನಮ್ಮನ್ನು attend ಮಾಡಿದ ರೀತಿ, ತೋರಿದ ಕಾಳಜಿ ಅಪ್ರತಿಮ!
ಸ್ತ್ರೀ ರೋಗ ತಜ್ಞೆಯಾದ ವೈದೇಹಿ ರೋಗಿಯ ದೇಹ ತಪಾಸಣೆ ಮಾಡುವ ರೀತಿಯಲ್ಲಿ ಒಂದು ಕಲಾತ್ಮಕತೆ ಇದೆ. ಅವರ ಮುಗ್ಧ ನಗುವಿನಲ್ಲಿ ವೈದ್ಯೆ - ರೋಗಿಯೊಂದಿಗಿನ ತಾದಾತ್ಮ್ಯತೆ ಇದೆ. ಅವರ ಮೃದು ಮಾತುಗಳಲ್ಲಿ ಜೀವರಸವಿದೆ. ಅವರ ಪುಟ್ಟ ಕೈಗಳು ನಮ್ಮ ದೇಹ ತಪಾಸಣೆ ಮಾಡುವಾಗ ಎಲ್ಲಿ ನಮಗೆ ನೋವಾಗುತ್ತದೇನೋ ಎಂಬ ಕಾಳಜಿಯಲ್ಲಿ ಮುಟ್ಟುವ ಮೃದುತ್ವವಿದೆ. ಎಷ್ಟೋ ಸಾರಿ ನಾನು ಕಾಯಿಲೆಗಳ ಪಟ್ಟಿಯೊಂದಿಗೆ ಅವರೆಡೆಗೆ ಹೋದಾಗಲೆಲ್ಲ ಅವರ ಹಿತವಾದ ನೋಟ ನನ್ನ ಕಾಯಿಲೆಗಳನ್ನು ಮರೆಸಿ ಬಿಡುತ್ತಿತ್ತು. 'ನಾನಿದ್ದೇನೆ ನಿನ್ನೊಡನೆ' ಎನ್ನುವ ಭರವಸೆ ಕೊಡುವ ಧೀಶಕ್ತಿ ಹೊಂದಿದಾಕೆ ವೈದೇಹಿ.
ಅನಿಲ್ ರವರ ಸದಾ ಹಸನ್ಮುಖತೆಯೇ ಅವರ strength. ನಾನೋ back pain patient. ಅವರ ತಲೆ ನಾನು ತಿಂದಷ್ಟು ಯಾರೂ ತಿಂದಿಲ್ಲವೇನೋ? ಆದರೂ ನನಗೆ ಧೈರ್ಯ ಕೊಡುತ್ತಾ, ಸರಳ ಚಿಕಿತ್ಸೆ ಕೊಡುತ್ತಾ ನನ್ನ ಬೆನ್ನು ಹುರಿಯನ್ನು ಸುಸ್ಥಿತಿಯಲ್ಲಿರಿಸಿದ credit ಅವರಿಗೆ ಹೋಗುತ್ತದೆ. ಎಷ್ಟೇ busy ಇದ್ದರೂ ಪ್ರತಿ ರೋಗಿಯೊಡನೆ ಲೋಕಾಭಿರಾಮವಾಗಿ ಮಾತನಾಡಿ, ಅವರ ಮನಸ್ಸನ್ನು ಹಗುರಗೊಳಿಸಿ, ಅವರಿಗೆ ಅರಿವಿಲ್ಲದಂತೆ ಕಾಯಿಲೆಯ ಮೂಲ ತಿಳಿದು ಚಿಕಿತ್ಸೆ ಕೊಡುವುದರಲ್ಲಿ ನಿಸ್ಸೀಮರು ಅನಿಲ್. ಎಷ್ಟೇ ಸುಸ್ತಾಗಿರಲಿ, ಹೊತ್ತಾಗಿರಲಿ ಅಸಹನೆಯ ಭಾವ ಅವರ ಮುಖದಲ್ಲಿ ನಾನು ಎಂದೂ ಕಂಡದ್ದಿಲ್ಲ. ನಮ್ಮಂತಹ ಸ್ನೇಹಿತರು ಸಿಕ್ಕಾಗ ಬಾಯಿ ಊರಗಲಾಗಿಸಿ ನಗುವ ಅವರ ಮುಖ ಅವರೊಳಗಿನ ಮಗುತನ ಹಾಗೂ ನಿಸ್ಪೃಹ ಸ್ನೇಹ ಭಾವವನ್ನು ತೋರಿಸುತ್ತದೆ ಎನ್ನುವುದು ನಿಸ್ಸಂಶಯ. ಕಾಯಿಲೆಯನ್ನು ಹೇಗೆ ಮೆಟ್ಟಿ ನಿಲ್ಲಬಹುದೆಂಬ ಪಾಠವನ್ನು ನನಗೆ ಕಲಿಸಿದವರು ಅನಿಲ್.
ಅನಿಲ್ - ವೈದೇಹಿ ಇಬ್ಬರಿಗೂ ಡಾಕ್ಟರಿಕೆ ಕೇವಲ ವ್ಯವಹಾರವಲ್ಲ; ಅದು ಅವರಿಬ್ಬರ passion. ರೋಗ ಮತ್ತು ರೋಗಿಯನ್ನು ಧೃತಿ ನೀಡಿ ಅವರು ಸಂಭಾಳಿಸುವ ರೀತಿ ಶ್ಲಾಘನೀಯ. ಅವರಿಬ್ಬರು ನಾನು ಕಂಡ ಅಪರೂಪದ ವೈದ್ಯರು. ಅಂತಹ ಸರಳ, ಸಹೃದಯ, ಸಜ್ಜನಿಕೆಯ ವೈದ್ಯ ಜೋಡಿಯ ವೈದ್ಯಕೀಯ ಸೇವೆ ಹೀಗೆ ಮುಂದುವರಿಯಲಿ ಹಾಗೂ ಸದಾ ಸುಖೀ ಬದುಕು ಅವರದಾಗಲಿ ಎನ್ನುವುದು ನನ್ನ ಹೃದಯಾಂತರಾಳದ ಹಾರೈಕೆ🙏

15. ಅಭಿಲಾಷ - ಅತ್ತಿಗೆ 
ಅಭಿಲಾಷ ನನ್ನ ಅತ್ತಿಗೆ/ಸ್ನೇಹಿತೆ/ಆಪ್ತ ಸಮಾಲೋಚಕಿ. ವಯಸ್ಸಿನಲ್ಲಿ ನನಗಿಂತ ಕಿವಳಾದರೂ ಅವಳು maturity ಹಾಗೂ ಜೀವನವನ್ನು ನೋಡುವ ದೃಷ್ಟಿ ಕೋನದಲ್ಲಿ ಹಿರಿಯಳು ಅಂದ್ರೆ ತಪ್ಪಲ್ಲ. ಅವಳು ನಮ್ಮ ಮನೆಗೆ ಸೊಸೆಯಾಗಿ ಬಂದಾಗ ಇನ್ನೂ ಹತ್ತೊಂಬತ್ತರ ಬಾಲೆ. ಅವಳದ್ದು ಒಂದು ರೀತಿಯಲ್ಲಿ ಬಾಲ್ಯ ವಿವಾಹ☺️ ಸಾಲಿಗ್ರಾಮ ಮಕ್ಕಳ ಮೇಳದ ಸಂಸ್ಥಾಪಕರಾದ ಶ್ರೀ ಶ್ರೀಧರ ಹಂದೆ ಹಾಗೂ ವಸುಮತಿಯವರ ಮೂವರು ಮಕ್ಕಳಲ್ಲಿ ಹಿರಿಯವಳು ಅಭಿಲಾಷ. ಬಾಲ್ಯದಿಂದಲೂ ಯಕ್ಷಗಾನ, ನಾಟಕ, ನೃತ್ಯ, ಸಂಗೀತ, ಭಾಷಣ, ಬರವಣಿಗೆ.... ಹೀಗೆ ಹಲವಾರು ಕಲಾಪ್ರಕಾರಗಳಲ್ಲಿ ಕೈಯಾಡಿಸುತ್ತಾ ಬಂದವಳು. ಕೋಟ ಹಂದಟ್ಟಿನ ಪಟೇಲರ ಮನೆಯ ತುಂಬು ಕುಟುಂಬದಲ್ಲಿ ಬೆಳೆದ ಅಭಿಲಾಷಳಿಗೆ ತಾಳ್ಮೆ ಹಾಗೂ ಹೊಂದಿಕೊಳ್ಳುವ ಗುಣ, ಜನರನ್ನು ಅನುಸರಿಸಿಕೊಂಡು ಹೋಗುವ ಮನೋಭಾವ ಜನ್ಮಜಾತವಾಗಿ ಬಂದಿತ್ತು. ಅವಳು ನಮ್ಮ ಮನೆಯ ಸೊಸೆಯಾಗಿ ಬಂದು ಈಗ 33 ವರ್ಷಗಳಾದರೂ ಈವರೆಗೆ ನಮ್ಮಲ್ಲಿ ಯಾರೊಡನೆಯೂ ನಿಷ್ಟುರವಾಗಿ ಮಾತನಾಡಿದವಳಲ್ಲ. ಅಂತಹ ಸಹನಾಶೀಲೆ ಆಕೆ! ನಮ್ಮ ಅಪ್ಪ ಹೇಳಿದಂತೆ ತಣ್ಣೀರನ್ನಾದರೂ ತಣಿಸಿ ಕುಡಿಯುವ ಗುಣ ಅವಳಲ್ಲಿ ಹಾಸು ಹೊಕ್ಕಾಗಿದೆ.
ಮದುವೆಯಾಗಿ ಬಂದಾಗ ಪ್ರಥಮ ಬಿ ಎಸ್ಸಿ ಮುಗಿಸಿದ್ದ ಆವಳು ತದನಂತರ ಉಡುಪಿಯ ಪಿ ಪಿ ಸಿಯಲ್ಲಿ ಬಿ ಎಸ್ಸಿ ಮುಗಿಸಿ, ಕುಂಜಿಬೆಟ್ಟಿನ ಟಿ ಎಂ ಎ ಪೈ ಕಾಲೇಜಿನಲ್ಲಿ ಬಿ ಎಡ್ ಮಾಡಿ, ದೂರ ಶಿಕ್ಷಣದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎಂ ಎ ಮಾಡಿ, ಎಂ ಎಡ್ ಮಾಡಿದ್ದು ಅವಳ ಕಲಿಯುವ ಹಸಿವನ್ನು ಹಾಗೂ ಹಿಡಿದದ್ದನ್ನು ಸಾಧಿಸುವ ಛಲವನ್ನು ತೋರಿಸುತ್ತದೆ. ಇದರೊಡನೆ ಅವಳ ಕಲಾಸಕ್ತಿ ಹಾಗೂ ಚಿಂತನಾಶೀಲತೆಯ ಬೆಳವಣಿಗೆಗೆ ನನ್ನಣ್ಣ ಇಂಬುಕೊಟ್ಟ. ಸಂಸಾರ ಅಂದರೆ ಏನು ಅನ್ನುವ ಅರಿವಿರದ ವಯಸ್ಸಿಗೆ ಸಂಸಾರ ನೌಕೆಯನ್ನೇರಿದ ಅಭಿಲಾಷ ಎಂತಹ ಪರಿಸ್ಥಿತಿಯಲ್ಲಿಯೂ ಅದರ ಹುಟ್ಟನ್ನು ಕೈ ಬಿಡದೆ ಹಾಕುತ್ತಾ ತನ್ನ ಬದುಕನ್ನು, ತನ್ನ ಮಕ್ಕಳ ಬದುಕನ್ನು ಸದೃಢವಾಗಿ ಕಟ್ಟುತ್ತಾ ನಮ್ಮ ಬಿರ್ತಿ ಮನೆಯ ಭೂಮಿಕೆಯಲ್ಲಿ ಪ್ರಮುಖ ಪ್ರಧಾನ ಪಾತ್ರ ವಹಿಸುತ್ತಿರುವುದು ಶ್ಲಾಘನೀಯ. ಅದಲ್ಲದೇ ಪ್ರಾಂಶುಪಾಲಳಾಗಿ ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಬರಹಗಾರ್ತಿ, ನಿರ್ದೇಶಕಿಯಾಗಿ ಸಾಹಿತ್ಯ, ನಾಟಕ ಕ್ಷೇತ್ರದಲ್ಲಿ ಬೃಹದೆತ್ತರಕ್ಕೆ ಬೆಳೆದು ನಿಂತಿರುವುದು ಅವಳ ಮಹತ್ತರ ಸಾಧನೆ. ಅವಳು ತನ್ನ ಶಾಲೆಯಲ್ಲಿ ಬರೀ ಪ್ರಾಂಶುಪಾಲಳಾಗಿರದೆ ಎಲ್ಲರ ಆಪ್ತರಕ್ಷಕಿಯಾಗಿರುವುದು ಅವಳ ಒಳಗೊಳ್ಳುವಿಕೆಯ ಮನೋಭಾವದ ದ್ಯೋತಕ. ಅವಳು ಬರೆದ ನಾಟಕಗಳು ಹೆಣ್ಣಿನ ಮನದೊಳಗಣ ಸುಪ್ತ ಭಾವಗಳ ಅನಾವರಣ ಮಾಡುತ್ತವೆ. ಅವಳು ನಿರ್ದೇಶಿಸಿದ ನಾಟಕಗಳು ಅವಳ ಪ್ರತಿಭೆಗೆ ಕೈಗನ್ನಡಿ. ಭಾಷಣಗಾರ್ತಿಯಾಗಿ ಅವಳಾಡುವ ಮಾತುಗಳು ಅವಳ ಪ್ರಬುಧ್ಧ ಚಿಂತನೆಯ ದ್ಯೋತಕ. ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಹಾಗೆ ಅಭಿಲಾಷ ಕೈಯಾಡಿಸದ ಕ್ಷೇತ್ರವಿಲ್ಲ ಎನ್ನುವುದು ಉತ್ಪ್ರೇಕ್ಷೆಯಾಗಲಾರದೇನೊ?
ಎಲ್ಲವನ್ನು, ಎಲ್ಲರನ್ನು ತಾಳ್ಮೆಯಿಂದ ತೂಗಿಸಿಕೊಂಡು ಹೋಗುವ ಅಪರೂಪದ ತಾಕತ್ತಿನ ಅಭಿಲಾಷಳೊಡನೆಯ ನನ್ನ ಸಂಬಂಧ ಅನೂಹ್ಯವಾದುದು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ.


14.ಲೀಲಾ ಸೋಮಯಾಜಿ (ಅಮ್ಮ)

ಇವತ್ತು ಮೇ 1. ನನ್ನ ಅಮ್ಮ ಲೀಲಾವತಿ ಹುಟ್ಟಿದ ದಿನ. ಈಗವಳು 85ರ ವಸಂತದಲ್ಲಿದ್ದಾಳೆ. ವಯೋಸಹಜ ಕೆಲವು ಸಣ್ಣಪುಟ್ಟ ಸಮಸ್ಯೆಗಳನ್ನು ಬಿಟ್ಟರೆ ಆರೋಗ್ಯವಾಗಿದ್ದಾಳೆ. ಆರೂರು ಮೀಸೆ ಗುಂಡುರಾವ್ ಹಾಗೂ ಸರಸ್ವತಮ್ಮನವರ ಆರು ಮಕ್ಕಳಲ್ಲಿ ಹಿರಿಯ ಮಗಳೀಕೆ. ನನ್ನ ಅಜ್ಜಿ ಹೆತ್ತದ್ದು ಒಂದು ಡಜನ್, ಉಳಿದದ್ದು ಆರು ಅಷ್ಟೇ! ಹೀಗಾಗಿ ಹಿರಿಯ ಮಗಳಾದ ನನ್ನಮ್ಮ ಕಿರಿಯ ವಯಸ್ಸಿನಲ್ಲಿಯೇ ತನ್ನ ತಮ್ಮತಂಗಿಯಂದಿರ ದೇಖಾರೇಖಿ ಮಾಡಬೇಕಾಯಿತು. ಮನೆಯನ್ನು ಸುಧಾರಿಸುವ ಜವಾಬ್ದಾರಿಯೂ ಅವಳ ಮೇಲಿತ್ತು. ಹೀಗಾಗಿ ಹುಟ್ಟಾ commanding nature ಅನ್ನು ನನ್ನಮ್ಮ ಬೆಳೆಸಿಕೊಂಡಿದ್ದಳು. ಅವಳು ಹುಟ್ಟಿ ಬೆಳೆದದ್ದೆಲ್ಲ ಮೂಡಿಗೆರೆ, ಭದ್ರಾವತಿಯಲ್ಲಿ ಆದ ಕಾರಣ ಒಂದು ರೀತಿಯ ಪಟ್ಟಣದ ಹುಡುಗಿ!
ಇಪ್ಪತ್ತನೆಯ ವಯಸ್ಸಿಗೆ ಮದುವೆ ಆಗಿ ಸೋಮಯಾಜಿಗಳ ತುಂಬು ಕುಟುಂಬಕ್ಕೆ ಬಂದಾಗ ಅವಳಿಗೆ ಹೊಂದಿಕೊಳ್ಳಲು ಕಷ್ಟ ಆಯಿತು. ನನ್ನ ಅಜ್ಜಿ ಯಾವಾಗಲೂ ಒದ್ದೆ ಬಟ್ಟೆ ಉಟ್ಟುಕೊಂಡು ಬಹಳ ಮಡಿಯಲ್ಲಿ ಅಡುಗೆ ಮಾಡುವಾಕೆ. ದೇವಸ್ಥಾನದ ಅರ್ಚಕರ ಮನೆ ಅಲ್ಲವೆ? ತುಂಬಾ ಶೀತ ಪ್ರಕೃತಿಯವರಾಕೆ. ನನ್ನ ಅಮ್ಮನೋ ಮಹಾ clean. ಹೋಟೆಲ್ ನಡೆಸುವವರ ಮನೆಯಿಂದ ಬಂದಾಕೆಯಾದ ಕಾರಣ ಸಿಕ್ಕಾಪಟ್ಟೆ ಬಾಯಿರುಚಿ ಬೇರೆ. ಘಟ್ಟದ ಕೆಳಗಿನ ಕೊಚ್ಚಕ್ಕಿ, ತಂಗಳನ್ನ, ಗಂಜಿ ನೋಡಿ ರೋಸಿ ಹೋದಳಾಕೆ. ಹೀಗಾಗಿ ನನ್ನ ಅಣ್ಣ ಹುಟ್ಟಿದಾಗ ನನ್ನಮ್ಮ ಒಂದು ವರ್ಷದ ಬಾಣಂತನ ಮುಗಿಸಿ ಬಂದಳು! ಆ ಬಾಣಂತನದಲ್ಲಿ ಅವಳ ಉದ್ದನೆಯ ಸೊಂಪಾದ ಕೇಶರಾಶಿ ಪೂರ್ತಿ ಉದುರಿ ಹೋದದ್ದೊಂದು ಬೇಸರದ ಸಂಗತಿ.
1/5/2020  ಬಿರ್ತಿ
ನನ್ನ ಅಮ್ಮನಿಗೆ ಚಿಕ್ಕವಳಿದ್ದಾಗಲಿಂದಲೂ ಒಸಡು ನೋವು ಇದ್ದ ಕಾರಣ ಅವಳ ಸೋದರ ಮಾವ ಹೊಗೆಸೊಪ್ಪಿನ ಅಭ್ಯಾಸ ಮಾಡಿಸಿದ್ರು. ಅದೊಂದು ರೂಢಿಯಾಗಿ ಅಮ್ಮನಿಗೆ ಕುಣಿಯದಂತಹ strong ಹೊಗೆಸೊಪ್ಪು ಇಲ್ಲದಿದ್ದರೆ ತಲೆ ಕೆಟ್ಟ ಹಾಗಾಗುತ್ತದೆ.
ಅಮ್ಮ ಕಡಕ್ ಹೆಂಗಸು. ಮನೆಯೊಳಗೇ ಕೂತು ಎಲ್ಲಾ ಕಾರುಬಾರು ನಡೆಸುವಾಕೆ. ರುಚಿಕಟ್ಟಾದ ತಿನಿಸು ಬಯಸುವಾಕೆ. ಅವಳು ಮಾಡುವ filter coffee world famous! ಆದರೆ ಆನಮ್ಮನ ಬೆಲ್ಲದ ಕಾಫಿಯ ರುಚಿ ಹತ್ತಿದ ನನ್ನ ಮೇಲೆ ಅಮ್ಮನ ಕಾಫಿ ಯಾವ ಪರಿಣಾಮವನ್ನೂ ಬೀರಲಿಲ್ಲ.
ಅಮ್ಮ ಸಣ್ಣ ನಾಟಿ ವೈದ್ಯ ಕೂಡಾ. ಅವಳ ನೋವಿನೆಣ್ಣೆ, ತೈಲ, ಕಷಾಯದ ಪುಡಿಗೆ ನಮ್ಮೆಲ್ಲರ great demand.
ಅವಳು ಏನು ಮಾಡುತ್ತಾಳೋ ಅದನ್ನೆಲ್ಲ ಒಂದೇ ಹದದಲ್ಲಿ ಮಾಡುವಾಕೆ. ಬಹಳ ಶಿಸ್ತಿನ ವ್ಯಕ್ತಿ. ಈ ವಯಸ್ಸಾದ ಕಾಲದಲ್ಲೂ ಅವಳೆಲ್ಲೂ ತನ್ನ ಆಹಾರ, ದಿರಿಸು, priorities ಬಗ್ಗೆ compromise ಮಾಡಿಕೊಳ್ಳುವವಳಲ್ಲ. ಅವಳ ದೊಡ್ಡ ಗುಣ ಎಂದರೆ ಏನಿದ್ದರೂ ತನ್ನ ಮಕ್ಕಳು ಇನ್ನೊಬ್ಬರ ಮಕ್ಕಳು ಎಂದು ಬೇಧವೆಣಿಸದೆ ಎಲ್ಲರಿಗೂ ಸಮಪಾಲು ಕೊಡುವುದು. ಈಗವಳ ಲೋಕ ಅಜ್ಜಯ್ಯನ ಮನೆಯಲ್ಲಿ ಸೊಸೆ ಅಭಿಲಾಷ, ಕೆಲಸದವರಾದ ಕಾವೇರಿ , ಗಿರಿಜ, ಗಣಪತಿಯವರ ಸುತ್ತ ಸುತ್ತುತ್ತಿದೆ. ಅಲ್ಲದೆ ಎಲ್ಲರೊಡನೆ ದೀರ್ಘ ಕಾಲ ಮಾತನಾಡುತ್ತ ಮೊಬೈಲ್ ಕಂಪನಿಯ ಲಾಭ ಹೆಚ್ಚಿಸುತ್ತಾಳೆ ಕೂಡಾ. ಅವಳ ವಯಸ್ಸಿಗೆ ಅವಳ ಜೀವನೋತ್ಸಾಹ, ಗಂಡ-ಮಗ-ಅಳಿಯನನ್ನು ಅಕಾಲದಲ್ಲಿ ಕಳಕೊಂಡರೂ ಅದನ್ನು ಅವಳು ಸ್ವೀಕರಿಸಿದ ರೀತಿ ಪ್ರಶಂಸನೀಯ. ಅವಳ next ಹುಟ್ಟುಹಬ್ಬವನ್ನು ಇದೇ ರೀತಿಯ ಆರೋಗ್ಯದೊಂದಿಗೆ ಅವಳು ಆಚರಿಸಲಿ ಎಂದು ನಮ್ಮೆಲ್ಲರ ಹಾರೈಕೆ.

13. ಕೆ.ಜಿ. ರವೀಂದ್ರ 

ಪಟೇಲ್ ಗಣೇಶ ರಾವ್ ಹಾಗೂ ಭವಾನಮ್ಮನವರ ಒಂಭತ್ತನೇ ಮಗು ರವಿ. ನನ್ನ , ಪತಿ. ನಮ್ಮಿಬ್ಬರ ಸಖ್ಯ ಪ್ರಾರಂಭವಾದದ್ದು 1984ರಲ್ಲಿ ಹಾಗೂ ನಾವು ದಂಪತಿಗಳಾದದ್ದು 1991ರಲ್ಲಿ. ಮನೆಯ ಕೊನೆಯ ಮಗುವಾಗಿ ಹುಟ್ಟಿ ಇಬ್ಬರು ಅಕ್ಕಂದಿರ, ಆರು ಜನ ಅಣ್ಣಂದಿರ ಮುದ್ದಿನ ಮಗುವಾಗಿ ಬೆಳೆದ ರವಿಯಲ್ಲಿ ತನ್ನ ಮಾತೇ ನಡೆಯಬೇಕೆಂಬ ಹಠ ಇತ್ತಾದರೂ ಇನ್ನೊಬ್ಬರನ್ನು ಪ್ರೀತಿಸುವ ಗುಣವೂ ಇತ್ತು. ಒಮ್ಮೆ ಅವನೊಡನೆ ಒಡನಾಡಿದವರು ಅವನನ್ನು ಮರೆಯಲಾರದಂತಹ ಪ್ರಭಾವ ಬೀರುತ್ತಿದ್ದ. ಅವನು ನೆಟ್ಟಗೆ ಶಾಲೆಗೆ ಹೋಗಿದ್ದಕ್ಕಿಂತ ಕಾಡು ಬೆಟ್ಟ ಸುತ್ತಿದ್ದೇ ಜಾಸ್ತಿ. ಹೀಗಾಗಿ ಸುತ್ತಲಿನದ್ದನ್ನು ಗಮನಿಸುವ ಅನ್ವೇಷಣಾ ಗುಣ ಅವನಲ್ಲಿತ್ತು. ನಾನು ಅವನಿಗೆ ಯಾವಾಗಲೂ ಹೇಳುತ್ತಿದ್ದೆ - ನೀನು ಟೀಚರ್ ಆಗುವುದಕ್ಕಿಂತ CBI Officer ಆಗುವುದು ಒಳ್ಳೆಯದಿತ್ತು ಅಂತ. ಅಂತಹ ಸೂಕ್ಷ್ಮಾವಲೋಕನ ಶಕ್ತಿ ಅವನಿಗಿತ್ತು. ಪುರಪ್ಪೆಮನೆಯ ಸ ಹಿ ಪ್ರಾ ದಲ್ಲಿ ಏಳನೇ ತರಗತಿ, ಕೇಡಲಸರದ ವಿ ಸಂ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್, ಬ್ರಹ್ಮಾವರದ SMS PU Collegeನಲ್ಲಿ ಪಿಯುಸಿ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಡಿಗ್ರಿ, ಕೊಲ್ಹಾಪುರದ ಶಿವಾಜಿ ಯೂನಿವರ್ಸಿಟಿಯಲ್ಲಿ ಎಂ ಎ ಮಾಡಿದ ರವಿ 1992ರಲ್ಲಿ ನವೋದಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರನಾಗಿ ಕೆಲಸಕ್ಕೆ ಸೇರಿದ.
ಅಧ್ಯಪನಕ್ಕಿಂತ ಅವನ ಹೆಚ್ಚಿನ ಒಲವು ಕಲಾಪ್ರಕಾರಗಳ ಕಡೆಗಿತ್ತು. ಮನೆಯಲ್ಲಿ ಯಕ್ಷಗಾನ ಹಾಸುಹೊಕ್ಕಾಗಿದ್ದ ಕಾರಣ ಒಳ್ಳೆಯ ಯಕ್ಷಗಾನ ಕಲಾವಿದನಾಗಿದ್ದ. ಅವನ ಜೀವಿತ ಕಾಲದಲ್ಲಿ ನೂರಾರು ಯಕ್ಷಗಾನ ಪ್ರಸಂಗಗಳಲ್ಲಿ ಪಾತ್ರ ವಹಿಸಿದ್ದ. ಅವನ ಚಕ್ರವ್ಯೂಹದ ಅಭಿಮನ್ಯುವಿನ ಅಭಿನಯ ಬಹಳ ಕಾಲ ಎಲ್ಲರನ್ನು ಕಾಡಿತ್ತು.
ಹೆಗ್ಗೋಡಿನ ಪ್ರಭಾವ ಇದ್ದ ಕಾರಣ ಒಬ್ಬ ನಟನೂ ಅವನೊಳಗಿದ್ದ. ಹೈಸ್ಕೂಲ್ ನ ದಿನಗಳಿಂದಲೇ ಪ್ರಾರಂಭವಾದ ಅವನ ನಾಟಕದ ಪಾತ್ರಧಾರಿಕೆ ಬಹಳ ಕಾಲ ನಡೆದಿತ್ತು. ಅದು ಅವನ ಕಾಲೇಜು ದಿನಗಳಲ್ಲಿ ಉತ್ತುಂಗದಲ್ಲಿತ್ತು. ಪಿಪಿಸಿಯಲ್ಲಿ ರವಿ, ವೀಣಾ ಬನ್ನಂಜೆ, ವಿನಯಾ ಪ್ರಸಾದ್ ರೊಡಗೂಡಿದ ಒಂದು ರಂಗತಂಡವೇ ಇತ್ತು.
ಉತ್ತಮ ಕ್ರೀಡಾಪಟುವಾಗಿದ್ದ ರವಿಗೆ ವಾಲಿಬಾಲ್ ನೆಚ್ಚಿನ ಆಟವಾಗಿತ್ತು.
ತನ್ನ ಸುತ್ತಲಿನ ಎಲ್ಲರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಿ ನಿಸ್ಪೃಹವಾಗಿ ಪ್ರೀತಿಸುವ ಗುಣವೂ ಅವನಲ್ಲಿ ಇತ್ತು. ತನ್ನ ಜೊತೆಗಿರುವವರ ಅಗತ್ಯಗಳನ್ನು ಅರಿಯುವ ಸೂಕ್ಷ್ಮತೆ ಇತ್ತು. ಹಾಗೆಯೇ ಮೂಗಿನ ತುದಿಯಲ್ಲಿ ಸಿಟ್ಟೂ ಇತ್ತು. ಮಕ್ಕಳೊಡನೆ ಮಕ್ಕಳಾಗಿರುವ ಗುಣವೂ ಅವನಲ್ಲಿತ್ತು. ನವೋದಯದಲ್ಲಿ ಯಾವುದೇ ಮಕ್ಕಳು ಓಡಿ ಹೋದರೂ ನಟ್ಟ ನಡು ರಾತ್ರಿಯಲ್ಲಾದರೂ ಅವರನ್ನು ಹುಡುಕಿಕೊಂಡು ಬರುವ ಚಾಕಚಕ್ಯತೆ ಅವನಲ್ಲಿತ್ತು. ಯಾವುದೇ crisis ಬಂದರೂ ಅದನ್ನು ನಿಭಾಯಿಸುವ ಧೈರ್ಯ ಅವನಲ್ಲಿತ್ತು.
ಮಕ್ಕಳಿಗೆ ಮನೆಗಿಂತಲೂ ಮಿಗಿಲಿನ ಆಪ್ತತೆಯ ಭಾವ ಮೂಡಿಸುವ ಶಾಲೆಯನ್ನು ಪ್ರಾರಂಭಿಸಬೇಕೆಂಬುದು ನಮ್ಮ ಕನಸಾಗಿತ್ತು. ಅಂತಹ ಕನಸಿನ ಕೂಸೇ ಹೊಂಗಿರಣ. ಅದೊಂದು ಉತ್ತಮ ಆಕಾರ ಪಡೆಯುವುದರೊಳಗೆ ರವಿ ನಮ್ಮನ್ನೆಲ್ಲ ಅಕಾಲವಾಗಿ ಅಗಲಿ ಹೋದದ್ದು ಒಂದು ನಿರ್ವಾತವನ್ನು ಸೃಷ್ಟಿಸಿತೆಂದರೆ ಸುಳ್ಳಲ್ಲ. ರವಿ ಈಗ ನಮ್ಮೊಡನಿಲ್ಲ. ಆದರೆ ನಮ್ಮೆಲ್ಲರ ಕನಸಿನ ಕೂಸು ಹೊಂಗಿರಣ ಈಗ ಅಗಾಧವಾಗಿ ಬೆಳೆದು ನಿಂತಿರುವುದು ರವಿಗೆ ನಾವು ಸಲ್ಲಿಸುವ ನಮನ ಎಂದರೆ ತಪ್ಪಾಗಲಾರದು.

12 ಶ್ರೀಕಾಂತ ಸೋಮಯಾಜಿ (ಅಣ್ಣ)
ಬಿ.ಪಿ. ಸೋಮಯಾಜಿ ಹಾಗೂ ಲೀಲಾವತಿ ದಂಪತಿಗಳ ಮೂರು ಮಕ್ಕಳಲ್ಲಿ ದೊಡ್ಡವನು ಶ್ರೀಕಾಂತ, ಅವನು ಹುಟ್ಟಿದ ಒಂಭತ್ತು ವರ್ಷಗಳ ನಂತರ ಹುಟ್ಟಿದವಳು ಶೋಭಾ ಹಾಗೂ ಏಳು ವರ್ಷಗಳ ನಂತರ ಹುಟ್ಟಿದವಳು ಶೈಲ. ನನ್ನ ಅಣ್ಣ ಹಾಗೂ ತಂಗಿ ಒಂದು ರೀತಿಯ introverts. ನಾನಾದರೋ ಬಾಯಿಬಡುಕಿ. ಅಮ್ಮ ಯಾವಾಗಲೂ ಬೈಯ್ಯುವುದಿತ್ತು " ಮರದ ಬಾಯಾದರೆ ಇಷ್ಟರೊಳಗೆ ಒಡೆದು ಹೋಗುತ್ತಿತ್ತು" ಅಂತ.
ಅಷ್ಟು ಬಾಯಿಬಡುಕಿಯಾದ ನನ್ನದು ಅಣ್ಣನೊಂದಿಗೆ official talkಗಷ್ಟೇ ಮೀಸಲಾದ ಮಾತುಕತೆ. ಅವನ ಸ್ನೇಹಿತರೊಟ್ಟಿಗೆ ಹರಟುತ್ತಿದ್ದೆ. ಆದರೆ ಅಣ್ಣನೊಟ್ಟಿಗೆ ಮಾತನಾಡಲು ಆಗುತ್ತಲೇ ಇರಲಿಲ್ಲ. ಹಾಗಂತ ಅವನು ನನ್ನ ಗಂಡ ಮಕ್ಕಳೊಟ್ಟಿಗೆ ಒಳ್ಳೆ ರೀತಿಯಲ್ಲಿ ಬೆರೆಯುತ್ತಿದ್ದ.
ಅವನು ಪಿಯು ದಿನಗಳಿಂದಲೇ ಅಜ್ಜಯ್ಯನ ಮನೆಯಲ್ಲಿದ್ದ. ಉಪ್ಪರಿಗೆಯ ಬಲಪಕ್ಕದ ರೂಂ ಗೆ ಅವನು ತನ್ನದು ಅಂತ seal ಒತ್ತಿ ಬಿಟ್ಟಿದ್ದ. ಅದು ಆವನ ರೂಂ ಆಗಿಯೇ ಉಳಿಯಿತು.
ಪಿಯುಸಿ ಯಲ್ಲಿ ಸೈನ್ಸ್ ಸ್ಟ್ರೀಂ ತಗೊಂಡು ಗಣಿತದಲ್ಲಿ ನಪಾಸಾದ. ಅಪ್ಪ ಪ್ರವಚನ ಮಾಡಿದರೇ ವಿನಃ ಬೈಯ್ಯಲಿಲ್ಲ. ನಂತರ ಪಾಸ್ ಆಗಿ ಉಡುಪಿಯ ಎಂ ಜಿ ಎಂ ಕಾಲೇಜಿನಲ್ಲಿ ಇಂಗ್ಲಿಷ್ ಮೇಜರ್ ನಲ್ಲಿ ಆರ್ಟ್ಸ್ ನಲ್ಲಿ ಡಿಗ್ರಿ ಮಾಡುವಾಗ ತನ್ನ ಸಂಗೀತದ ಟ್ಯಾಲೆಂಟಿನಿಂದ ಪ್ರಖ್ಯಾತನಾದ. ಅವನೊಬ್ಬ ಅಭಿಜಾತ ಕಲಾವಿದನಾಗಿದ್ದ. ಗೊತ್ತಾದದ್ದು ಅವನು ಡಿಗ್ರಿ ಮಾಡುವಾಗ. ತದನಂತರದಲ್ಲಿ ಅವನು ಮೈಸೂರಿನಲ್ಲಿ ಎಂ ಎ ಮಾಡುತ್ತಾ ದಕ್ಷಿಣಾದಿ, ಉತ್ತರಾದಿ ಸಂಗೀತ ಹಾಗೂ ಕೊಳಲು, ಹಾರ್ಮೋನಿಯಂ, ತಬಲ ಎಲ್ಲದರಲ್ಲೂ ನೈಪುಣ್ಯತೆ ಪಡೆದ. ಸಂಗೀತ ಸರಸ್ವತಿ ಅವನನ್ನು ಆವಾಹಿಸಿ ಬಿಟ್ಟಿದ್ದಳು ಅಂದ್ರೆ ಸುಳ್ಳಲ್ಲ. ಹೀಗಾಗಿ ಅವನಿಗೆ ಸಂಗೀತದ ಹುಚ್ಚು ಎಷ್ಟಿತ್ತೆಂದರೆ ಎಷ್ಟೋ ರಾತ್ರಿ ನಿದ್ದೆ ಮಾಡದೆ ರಾಗಗಳ ಹಿಂದೆ ಬಿದ್ದರುತ್ತಿದ್ದ. ಅಂತಹ passionate musician ಆತ!
ಶಿರ್ವದ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿದ್ದ. ಬಹಳ ಒಳ್ಳೆಯ ಶಿಕ್ಷಕನಾಗಿದ್ದ. ಅಲ್ಲಿನ ಮಕ್ಕಳಿಗಾಗಿ ಇಂಗ್ಲಿಷ್ ಪಾಠವನ್ನು ತುಳುವಿನಲ್ಲಿ ಕೂಡಾ ಮಾಡುತ್ತಿದ್ದ. ಮನೆಯ ಅಂಟು ಬಹಳವಿದ್ದ ಕಾರಣ ದಿನಾ 80km ಬೈಕಿನಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದ. ಮಂಗಳೂರು ಆಕಾಶವಾಣಿಯಲ್ಲಿ A ಗ್ರೇಡ್ ಕಲಾವಿದನಾಗಿದ್ದ. ಮಳೆ ಬಂತು ಮಳೆ ಹಾಗೂ ಹಾಲು ಉಕ್ಕಿತೋ ರಂಗ ಎನ್ನುವ ಎರಡು cassettes ಹೊರತಂದ. ಅದರಲ್ಲಿ ಉದಯೋನ್ಮುಖ ಕಲಾವಿದರು ಹಾಗೂ ನಾಡಿನ ಖ್ಯಾತ ಕಲಾವಿದರು ಹಾಡಿದ್ದರು. ಅಣ್ಣ ಭಾವ ತುಂಬಿ ಹಾಡುವ ಅಧ್ಬುತ ಹಾಡುಗಾರ ಮತ್ತು ಅತ್ಯುತ್ತಮ composer ಕೂಡಾ. ಅವನ ಹಾಡಿನ ಆಯ್ಕೆ ಅವನ ವಿಶೇಷತೆಯನ್ನು ಸೂಚಿಸುತ್ತಿತ್ತು. ಉತ್ತಮ ಹೊಂದಾಣಿಕೆಯುಳ್ಳ ಪ್ರತಿಭಾವಂತ ಪತ್ನಿ ಹಾಗೂ ಒಬ್ಬ ಮಗ, ಒಬ್ಬ ಮಗಳನ್ನು ಅಗಲಿ 2004 ಮಾರ್ಚ್ ತಿಂಗಳಲ್ಲಿ ಕಾರ್ ಅಪಘಾತದಲ್ಲಿ ಕಾಲವಶನಾದ. ಆಗ ಅವನಿಗೆ ಸಮಾರು 47 ವರ್ಷವಾಗಿತ್ತಷ್ಟೇ. ಅವನು ನಮ್ಮಿಂದ ದೂರಾದರೂ ಅವನು ರಾಗ ಸಂಯೋಜಿಸಿದ ಹಾಡುಗಳು ನಮ್ಮೊಳಗೆ ಗುಣುಗಣಿಸುತ್ತಿರುವುದು ನೂರಕ್ಕೆ ನೂರು ಸತ್ಯ!

11. ದಿಗಂತ (ಡಿಂಗ )
ನಮ್ಮ ಶಂಕರಿಯ ಮಗ ದಿಗಂತ ಗೌಡ ಅಲಿಯಾಸ್ ಡಿಂಗ ನನ್ನ ಭಂಟ. ಮಣ್ಣಿನ ಮಗ. ಯಾಕೆಂದರೆ ನಮ್ಮ campusನ ಮಣ್ಣನ್ನು ಇಂಚಿಂಚು ಅಳೆವವನು. ಪ್ರಾಣಿ ಪ್ರೇಮಿ. ನಮ್ಮ ಮನೆಯಲ್ಲಿದ್ದ Flexy ಅನ್ನುವ ಬೆಕ್ಕಿನ ಮೇಲೆ ಅತ್ಯುನ್ನತ ಪ್ರಯೋಗಗಳನ್ನು ಮಾಡಿದವನು. ಅದೊಂದು ದೇವರಂತಹ ಬೆಕ್ಕು. ಅವನ ಪ್ರಯೋಗ ಪಶು ಅದಾಯಿತೇ ವಿನಃ ಅವನ ಮೇಲೆ ತನ್ನ ಬಲ ಪ್ರಯೋಗ ಅದೆಂದೂ ಮಾಡಿರಲಿಲ್ಲ.
ನಮ್ಮ ಮನೆಯಲ್ಲಿದ್ದ ಐದಾರು ನಾಯಿಗಳೊಟ್ಟಿಗೆ ಕೂಡಾ ಅವನ ಸಂಬಂಧ ಬಹಳ ಅನ್ಯೋನ್ಯವಾಗಿದೆ. ಅವನ ಸಂಬಂಧ ಸ್ವಲ್ಪ ಹಳಸಿದ್ದು ನಮ್ಮ Rottweiler ಬುಜ್ಜಿ ಹತ್ರ ಮಾತ್ರ. ಅದಕ್ಕೂ ಕಾರಣವಿದೆ. ಅದು ಸಣ್ಣ ಮರಿಯಾಗಿದ್ದಾಗ ಡಿಂಗ(ಅವನೂ ಸಣ್ಣವನಿದ್ದ) ಅದರ ಊಟದ ಪ್ಲೇಟಿಗೆ ಬಾಯಿ ಹಾಕಿದ್ದ. ಆಗ ಅದು ಸಿಟ್ಟಿನಿಂಧ ಅವನ ಕೆನ್ನೆಯನ್ನು ಚುಂಬಿಸಿ ಗಾಯ ಮಾಡಿತ್ತು!
ನಮ್ಮಲ್ಲಿದ್ದ ಬಂಪಿ ಎನ್ನುವ ಡಾಬರ್ಮನ್ ನಾಯಿಗೂ ಡಿಂಗನಿಗೂ thick friendship ಇತ್ತು. ಚಪ್ಪಲಿ ದ್ವೇಷಿಯಾಗಿದ್ದ ಡಿಂಗ ಅದು ಹೋದಲ್ಲೆಲ್ಲ ಬರಿಗಾಲಲ್ಲಿ ಹೋಗುತ್ತಿದ್ದ. ಅವನು ಸುಮಾರು ಮೂರ್ನಾಲ್ಕು ವರ್ಷದವನಾಗಿದ್ದಾಗ ನಡೆದ ಘಟನೆ. ಬೆಳಿಗ್ಗೆ ಮನೆ ಬಿಟ್ಟ ಮಗು ಮಧ್ಯಾಹ್ನವಾದರೂ ನಾಪತ್ತೆ. ಹುಡುಕಿಕೊಂಡು ಹೋದಾಗ ನಮ್ಮ campusನ ಮುಳ್ಳಿನ ಬೇಲಿಗೆ ಅಂಗಿ ಸಿಕ್ಕಾಕಿಕೊಂಡು ನೇತಾಡುತ್ತಿದ್ದ ಸ್ಥಿತಿಯಲ್ಲಿ ಸಿಕ್ಕಿದ. ಅವನು ಬಂಪಿಯಂತೆ ಬೇಲಿ ದಾಟಲು ಹೋಗಿ ಮಾಡಿಕೊಂಡ ಅಧ್ವಾನವದು. ಅವನು ಬಂಪಿ ಕುತ್ತಿಗೆ ಪಟ್ಟಿಯನ್ನು ಹಿಡಿದುಕೊಂಡು ಬರುತ್ತಿದ್ದರೆ ಯಾವುದೋ ಮಹಾರಾಜ ತನ್ನ ಕುದುರೆ ಹಿಡ್ಕೊಂಡು ಬರುವಂತೆ ತೋರುತ್ತಿತ್ತು. ಅವರಿಬ್ಬರ ಜೋಡಿ ಅಷ್ಟು ಚೆಂದ!
ನಮ್ಮ ಮನೆಯ ಇನ್ನೊಂದು ನಾಯಿ ಬಾಲಿ ನೋಡಲು ಥೇಟ್ ಕರಡಿಯಂತೆ. ಆಕಾರದಲ್ಲಿ ಬೃಹತ್ ಆದರೂ ಸಣ್ಣ ಮಗುವಿನ ಬುಧ್ಧಿ. ಅದೂ ಕೂಡ ಡಿಂಗನ ಉಪದ್ರವವನ್ನು ಹಲ್ಲುಮಟ್ಟೆ ಕಚ್ಚಿ ಸಹಿಸುತ್ತಿತ್ತು. ಒಮ್ಮೆ ಸಹಿಸಲು ಆಗದೇ ಇದ್ದ ಪ್ರಸಂಗ ಬಂದಾಗ ಅವನನ್ನು ಚರಂಡಿಗೆ ದೂಡಿತ್ತು ಅಷ್ಟೇ!
ಡಿಂಗನ ಕಿತಾಪತಿಗಳು ಹಲವಾರು. ಆದರೆ ಅವನ ಪ್ರಾಣಿಗಳೊಡನಾಟದ ಗುಣ ಮಾತ್ರ ಬಹಳ ಶ್ಲಾಘನೀಯ. ಅವನ ಒರಟೊರಟಾದ ವರ್ತನೆಯ ನಿಷ್ಕಲ್ಮಶ ಪ್ರೀತಿಯನ್ನು ಅವು ಅರಿತುಕೊಳ್ಳುವುದು ಹೇಗೆ ಅನ್ನುವುದು ಒಂದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಅರ್ಥ ಮಾಡಿಕೊಳ್ಳುವ ಮನಸ್ಸಿದ್ದಲ್ಲಿ ಅನರ್ಥಗಳಾಗಲಾರವು ಅನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ?

10. ಸುರೇಶ್ ಕುಮಾರ್ 
ನನ್ನ ದೊಡ್ಡತ್ತೆಯ ಎರಡನೇ ಮಗ ಸುರೇಶ. ಬೆಳೆದದ್ದೆಲ್ಲ ಅಜ್ಜಯ್ಯನ ಮನೆಯಲ್ಲಿ ಅಜ್ಜಿಯ ಪ್ರೀತಿಯ ಮಡಿಲಲ್ಲಿ. ಮನೆಯವರೆಲ್ಲರ ಪ್ರೀತಿಯಿಂದಾಗಿ ತುಂಟಾಟ ಮೈಗೂಡಿ ಬಿಟ್ಟಿತ್ತು. ಮಾಡುವ ಕೆಲಸದಲ್ಲೇ ಕಿತಾಪತಿ ಮಾಡಿ ಖುಷಿ ಪಡುವ ಸ್ವಭಾವ. ಅವನೊಂದಿಗೆ ಜೊತೆಗೂಡುತ್ತಿದ್ದವರು ನನ್ನಣ್ಣ ಶ್ರೀಕಾಂತ ಮತ್ತು ಆಚೆಮನೆ ಸಣ್ಣಮಾಣಿ.
ಸುರೇಶನಿಗೆ ಓದಿನ ಹಸಿವು ಅಪಾರ. Surface level reading ಅಲ್ಲ. ವಿಷಯದ ಆಳಕ್ಕಿಳಿದು ಓದುತ್ತಿದ್ದ. ಹೀಗಾಗಿ ಅವನು ಓದಿದ ಹಾರಾಡಿ ಶಾಲೆ, ಉಪ್ಪಿನಕೋಟೆ ಶಾಲೆ ಹಾಗೂ SMS ಶಾಲೆಗಳಲ್ಲಿ ಅವನ ತುಂಟಾಟಕ್ಕೆ ಕ್ಷಮೆ ಇತ್ತು. ಆಗೀಗ ಪೆಟ್ಟು ಬೀಳುತ್ತಿದ್ದರೂ ಅದು ಪ್ರೀತಿಯ ಹೊಡೆತವಾಗಿತ್ತು. ಅವನು ಯಾವಾಗಲೂ ಕ್ಲಾಸ್ ಗೆ ಫರ್ಸ್ಟ್ ಬರುತ್ತಿದ್ದ.
ಬ್ರಹ್ಮಾವರದಲ್ಲಿ ಪಿ ಯು ಸಿ ಮುಗಿದ ಮೇಲೆ ಅವನ ಮುಂದಿನ ಓದು ಉಡುಪಿಯ MGM College ನಲ್ಲಿ. ದಿನಾ ಸುಮಾರು 40km ಸೈಕಲ್ ತುಳಿಯುತ್ತಿದ್ದ - ಮನೆಯಿಂದ ಕಾಲೇಜಿಗೆ - ಕಾಲೇಜಿನಿಂದ ಮಧ್ಯಾಹ್ನ ಉಡುಪಿಯ ಕೃಷ್ಣ ಮಠಕ್ಕೆ ಊಟ ಬಡಿಸಲಿಕ್ಕೆ, ಊಟ ಮಾಡಲಿಕ್ಕೆ - ಪುನಃ ಕಾಲೇಜಿಗೆ ಮತ್ತು ನಂತರ ಮನೆಗೆ. ಉಡುವ ದಿರಿಸು ಪಂಚೆ ಮತ್ತು ಚಪ್ಪಲಿ ಇಲ್ಲದ ಕಾಲುಗಳು. ಇಂತಹ ಪರಿಸ್ಥಿತಿಯಲ್ಲೂ ಮುಂದುವರಿದ ಓದು. ಆಗಲೇ ಪ್ರಥಮ BScಯಲ್ಲಿ ಇದ್ದಾಗ ಪ್ರಾಧ್ಯಾಪಕರ ಆದೇಶದಂತೆ ಫೈನಲ್ year BSc ರವರಿಗೆ Math ಪಾಠ ಮಾಡುತ್ತಿದ್ದ. ಅಂತಹ ಮೇಧಾಶಕ್ತಿ. BScಯನ್ನು rank ಪಡೆದು ಮುಗಿಸಿ ಬೆಃಗಳೂರಿನ ಪ್ರತಿಷ್ಠಿತ IIScಯಲ್ಲಿ ಬಿ ಟೆಕ್ ಮತ್ತು ಎಂ ಟೆಕ್ ಗಳನ್ನು ಅತ್ಯುನ್ನತ ಶ್ರೇಣಿಯಲ್ಲಿ ಮುಗಿಸಿ ತದನಂತರ ಕೆಲಸಕ್ಕಾಗಿ ವಿದೇಶವಾಸ. ಅಮೆರಿಕೆಯಲ್ಲಿ 20 -25 ವರ್ಷಗಳ ಕಾಲ ಸ್ವಂತ ಕಂಪನಿ ನಡೆಸಿ ವ್ಯವಹಾರದಲ್ಲಿ ಅತ್ಯಂತ ಉತ್ತುಂಗ ಸ್ಥಿತಿಯಲ್ಲಿ ಇದ್ದಾಗ ತಾಯ್ನಾಡಿಗೆ ಹಿಂದಿರುಗುವ ತೀರ್ಮಾನ. ಇದು ಅಷ್ಟು ಸುಲಭದ ಮಾತಲ್ಲ. ಬೆಂಗಳೂರಿನಲ್ಲಿ ಸ್ವಂತ ಐಟಿ ಕಂಪನಿ ಸ್ಥಾಪನೆ. ಸ್ಥಾಪಿತವಾದ ಸ್ವಲ್ಪ ಸಮಯದಲ್ಲೇ ಅತೀ ಉತ್ತಮ ಕಂಪನಿ ಎಂಬ ಹೆಸರು ಪಡೆದ ಹೆಗ್ಗಳಿಕೆ. ಸ್ಥಳೀಯ ಪ್ರತಿಭೆಗಳನ್ನು ಬೆಳೆಸಿದ ತೃಪ್ತತೆ. ಇದೆಲ್ಲ ನೋಡಲು - ಓದಲು ಚೆಂದ. ಯಾವುದೇ ಬೆಂಬಲವಿಲ್ಲದೆ, ಬಂದ crisisಗಳನ್ನು ಸ್ವತಃ ಎದುರಿಸುತ್ತಾ ಯಾವುದಕ್ಕೂ ಜಗ್ಗದೆ ಕಂಪನಿಯನ್ನು ಸದೃಢವಾಗಿ ಬೆಳೆಸಿದ್ದು ಅನುಕರಣೀಯ.
ಸುರೇಶನ ಕಠಿಣ ಪರಿಶ್ರಮ, ಸೃಜನಶೀಲತೆ, ಹೊಸತನ್ನು explore ಮಾಡುವ ನಿರಂತರ ತುಡಿತ, ನಿಸ್ಪೃಹತೆ, ಮಾಡುವ ಕೆಲಸದಲ್ಲಿನ ಬದ್ಧತೆ ಮತ್ತು ಕೆಲಸದೊಂದಿಗಿನ ತಾದಾತ್ಮ್ಯತೆ ಅನುಕರಣೀಯ. ಅವನು ತಾನು ನಡೆದು ಬಂದ ದಾರಿಯ ಮತ್ತು ಎದುರಿಸಿದ ಸವಾಲು/ಸಮಸ್ಯೆಗಳ positive sideನ್ನು ಮಾತ್ರ ನೋಡುತ್ತಾ ಆಶಾವಾದಿಯಾಗಿ ಬೆಳೆದವನು. ವೃತ್ತಿಯಲ್ಲಾಗಲಿ ಹಾಗೂ ವ್ಯಕ್ತಿತ್ವದಲ್ಲಾಗಲಿ ಅವನೇರಿರುವ ಎತ್ತರ ಅಪಾರವಾದುದು.
ಇಷ್ಟಾದರೂ ಅವನು ಆಪ್ತನಾಗಿ ಉಳಿಯುವುದು ಅವನ ಸರಳತೆಯಿಂದ, ನೇರ ನಿಷ್ಟುರ ನುಡಿಗಳಿಂದ ಹಾಗೂ ಅವನ ಮಗುವಿನಂತಹ ಭಾವುಕ ಮನಸ್ಸಿನಿಂದ. ಅಣ್ಣನಿಗಿಂತಲೂ ಹೆಚ್ಚಾಗಿ ನನ್ನ ಪ್ರತಿ ಹೆಜ್ಜೆಗೆ ಹೆಜ್ಜೆ ಜೋಡಿಸುತ್ತಾ, ಎಡವಿದಾಗ ಎಚ್ಚರಿಸುತ್ತಾ, ಎಲ್ಲೂ ಹಳಿ ತಪ್ಪದಂತೆ ಎಚ್ಚರಿಕೆ ನೀಡುತ್ತಾ ಹೊಂಗಿರಣದ ಬೆಳವಣಿಗೆಯಲ್ಲಿ ತೆರೆಯ ಹಿಂದಿದ್ದು ಜೊತೆಯಾಗಿರುವವನು ಸುರೇಶ.


9. ಆರೂರು ಗುಂಡು ರಾವ್ (ಅಮ್ಮನ ಅಪ್ಪ)

ಮೀಸೆ ಗುಂಡುರಾಯರು ನನ್ನ ಅಮ್ಮನ ಅಪ್ಪ. ಆರೂರಿನವರು. ಮೂಗಿನ ತುದಿಯಲ್ಲಿ ಸಿಟ್ಟಿದ್ದವರು. ಬೆಳ್ಳಗಿನ ಮೈ ಬಣ್ಣದ ದಪ್ಪ ಮೀಸೆಯ ಚಂದದ ವ್ಯಕ್ತಿ. ನನಗೆ ಅವರ ಬಳಕೆ ಅಷ್ಟಿಲ್ಲ. ನಾನು ಸಣ್ಣವಳಿದ್ದಾಗ ಆಜ್ಜ ಯಾವುದೋ ಕಾರಣಕ್ಕೆ ಬೈದಿದ್ದರು. ಹೀಗಾಗಿ ನಾನು ಆರೂರಿಗೆ ಜಾಸ್ತಿ ಹೋಗುತ್ತಿರಲಿಲ್ಲ.
ಅವರು ತಮ್ಮ ಪ್ರಾಯ ಕಾಲದಲ್ಲಿ ಭದ್ರಾವತಿ, ಮೂಡಿಗೆರೆ.... ಇಂತಲ್ಲೆಲ್ಲ ಹೋಟೆಲ್ ಇಟ್ಟವರು. ವಯಸ್ಸಾಗುತ್ತಿದ್ದಂತೆಯೇ ತಮ್ಮ ಹುಟ್ಟೂರಿಗೆ ಮರಳಿದರು. ಅವರಿಗೆ ಮೂರು ಗಂಡು ಹಾಗೂ ಮೂರು ಹೆಣ್ಣು ಮಕ್ಕಳು.
ಅಜ್ಜ ಬಹಳ ಖಡಕ್ ಜನ. ಆ ಗಿರಿಜಾಮೀಸೆ ಅವರ ಖಡಕ್ look ಅನ್ನು ಇನ್ನೂ ಜಾಸ್ತಿ ಮಾಡುತ್ತಿತ್ತು. ಭಾರೀ ಬಾಯಿ ರುಚಿಯವರು.
ನನ್ನ ಅಜ್ಜಿ ಬಹಳ ಪಾಪದ ಮೃದು ಸ್ವಭಾವದ ಜನ. ಗಂಡನಿಗೆ ಎಂದೂ ಎದುರಾಡದ ಆದರ್ಶ ಗೃಹಿಣಿ.
ಆರೂರಿಗೆ ಮಳೆಗಾಲದಲ್ಲಿ ಹೋಗುವುದೆಂದರೆ ಹರ ಸಾಹಸ. ಜೋರು ಮಳೆ ಬಂದರೆ ಅಜ್ಜನ ಮನೆ ಜಗುಲಿಯ ತನಕ ನೆರೆ ಬರುತ್ತಿತ್ತು. ದೋಣಿಯಲ್ಲಿ ಅವರ ಮನೆಗೆ ಹೋಗಬೇಕಿತ್ತು. ಗುಡ್ಡದಲ್ಲಿ ಕಾಡು ಹಣ್ಣುಗಳನ್ನು ತಿಂದು ಗುಡ್ಡ ಇಳಿದು ಅಜ್ಜನ ಮನೆಗೆ ಹೋಗುವುದು ಒಃದು ಖುಷಿಯ ಅನುಭವವಾದರೆ ಅಲ್ಲಿ ಗಲಾಟೆ ಮಾಡಿದಾಗ ಅಜ್ಜನ ಉರಿನೋಟ ಹಾಗೂ ಬೈಗಳು ಕಿರಿಕಿರಿಯ ವಿಷಯವಾಗಿತ್ತು.
ಈಗ ಅಜ್ಜ ಅಜ್ಜಿ ಯಾರೂ ಇಲ್ಲ. ಆದರೆ ಅವರ ಬಗೆಗಿನ ನಮ್ಮದೇ ಆದ ನೆನಪುಗಳಿವೆ. ಅತ್ತೆ ಮಾವ, ಚಿಕ್ಕಪ್ಪ ಚಿಕ್ಕಮ್ಮ ಹಾಗೂ ಅವರ ಮಕ್ಕಳೊಟ್ಟಿಗೆ ಒಡನಾಟವಿದೆ. ಸುಮ್ಮನೆ ಕೂತಾಗ ಸಮಯ ಕಳೆಯಲು 
ಖಾಲಿಯಾಗದ ನೆನಪಿನ ಬುತ್ತಿ ಇದೆ.


8. ಬೈಕಾಡಿ ವೆಂಕಟಕ್ರಷ್ಣ ರಾವ್ 

ಆಚೆಮನೆ ಎನ್ನುವುದು ಹೆಸರಿಗಷ್ಟೇ! ನಮ್ಮ ಮನೆ ಮತ್ತು ಆಚೆಮನೆಯ ಮಧ್ಯ ಒಂದು ನಿಮಿತ್ತ ಮಾತ್ರ ಗೋಡೆ. ಆಚೆಮನೆಯ ಮಕ್ಕಳೆಲ್ಲ ಇರುತ್ತಿದುದು ಈಚೆಮನೆಯಲ್ಲೇ!

ಆಚೆಮನೆ ಮಾಸ್ಟ್ರು ಬೈಕಾಡಿ ವೆಂಕಟಕೃಷ್ಣ ರಾವ್ ಅವರು. ಅವರ ಧರ್ಮಪತ್ನಿ ವಸಂತಕ್ಕ. ಮೂರು ಗಂಡು, ಮೂರು ಹೆಣ್ಣು ಮಕ್ಕಳ ಸಂಸಾರ. ಎಲ್ಲರಿಗೂ ಅಡ್ಡ ಹೆಸರು - ಅಣ್ಣ, ಬಾಬು, ಬುಳ್ಳಿ, ಸಣ್ಣಮಾಣಿ, ಪುಟ್ಟ. ಗೌರಿಗೊಂದು ಮಾತ್ರ ಅಡ್ಡ ಹೆಸರು ಇರಲಿಲ್ಲ. ನಮ್ಮದು ಅವರದ್ದು ಒಂದು ಅನೂಹ್ಯ ಸಂಬಂಧ. ನೆಂಟರಲ್ಲ. ಆದರೆ ಅದಕ್ಕೂ ಮೀರಿದ ನಂಟು.
ಆಚೆಮನೆ ಮಾಸ್ಟ್ರು ಮನೆಯಲ್ಲೂ ಬಹಳ strict. ಆತ ಒಳ್ಳೆಯ ಬರಹಗಾರ, ವಾಗ್ಮಿ. ಅವರ ಮನೆಗೆ ಆಗಿನ ಕಾಲದ ದೊಡ್ಡ ಸಾಹಿತಿಗಳೆಲ್ಲ ಬರುತ್ತಿದ್ದರು. ಬಹಳ ಚರ್ಚೆ ಆಗುತ್ತಿದ್ದವು. ಶಿವರಾಮ ಕಾರಂತರು regular ಆಗಿ ಬರುತ್ತಿದ್ದರು. ಆಚೆಮನೆಗೆ ಅವರೆಲ್ಲರ entry ನಮ್ಮ ಮನೆಯ ಮೂಲಕ. ಹೀಗಾಗಿ ಅವರೆಲ್ಲರ ದರ್ಶನ ಭಾಗ್ಯ ನಮಗೆ ಸಿಗುತ್ತಿತ್ತು. ಹೂವಿನೊಂದಿಗೆ ನಾರೂ ಸ್ವರ್ಗಕ್ಕೆ ಸೇರುತ್ತಿತ್ತು.😊
ನನ್ನ ಒಡನಾಟ ಹೆಚ್ಚು ಇದ್ದದ್ದು ಸಣ್ಣಮಾಣಿಯೊಟ್ಟಿಗೆ. ನನ್ನ ಮದುವೆಯ ಅಷ್ಟೂ ತಯಾರಿ, ಓಡಾಟ ಮಾಡಿದ್ದು ಸಣ್ಣಮಾಣಿಯೇ! ಅವನ ಮಗ ಹರ್ಷ ನನ್ನ ಬಾಲ. "ಶೋಭಕ್ಕ, ದೂಲಿ ಮನೆಗೆ ಹೋಗಿ ದೂಸ್ ಕುಡಿಯುವ" ಎನ್ನುವುದು ಅವನ regular demand. ಅವನಿಗೆ ಜ ಕಾರ ಬರುತ್ತಿರಲಿಲ್ಲ. ಹೀಗಾಗಿ ಅವನ ಬಾಯಲ್ಲಿ ನನ್ನ friend ಜೂಲಿ ದೂಲಿ ಆಗಿದ್ದಳು.
ಆಚೆಮನೆ ಈಗ ಇಲ್ಲ. ಎಲ್ಲರೂ ಅವರವರ ಕಾರ್ಯ ಬಾಹುಳ್ಯದಲ್ಲಿ ಬೇರೆ ಬೇರೆ ಕಡೆ ಇದ್ದಾರೆ. ಆದರೆ ಅವರ ಮನೆಯ ಈ ತಲೆಮಾರಿನವರ ಜೊತೆ ಕೂಡಾ ನಮ್ಮ ಪ್ರೀತಿ ವಿಶ್ವಾಸ ಹಾಗೆಯೇ ಇದೆ. ಕೆಲವೊಮ್ಮೆ ನಾವು ಹತ್ತಿರವಿದ್ದೂ ದೂರ ಇರ್ತೇವೆ. ಇಲ್ಲಿ ಹಾಗಲ್ಲ. ದೂರವಿದ್ದರೂ ಸಾಮಿಪ್ಯವಿದೆ. ನಾವು ನಮ್ಮವರು ಎನ್ನುವುದು ಒಂದು ಭಾವ. ಅದಕ್ಕೆ ಮನಸ್ಸಿನ ಭಾಷೆ ಅರ್ಥವಾದರೆ ಸಾಕು. ಅಲ್ಲವೇ?


7. ಭಾಗೀರಥಿ (ವಾರಗಿತ್ತಿ)

ನನ್ನ ಮೇಲೆ ಪ್ರಭಾವ ಬೀರಿದ ಕೆಲವು ವ್ಯಕ್ತಿಗಳಲ್ಲಿ ಒಬ್ಬರು ನನ್ನ ದೊಡ್ಡಕ್ಕ(ವಾರಗಿತ್ತಿ) ಭಾಗೀರಥಿ. ಯಾವುದೇ ತೋರಿಕೆ ಇಲ್ಲದ, ಕಪಟವಿಲ್ಲದ, ನಿಸ್ವಾರ್ಥತೆಯಿಂದಿರುವ ವ್ಯಕ್ತಿ ಅವರು. ನನ್ನ ಅವರ ಸಂಬಂಧ ಬಹಳ ಅರ್ಥಪೂರ್ಣವಾದದ್ದು.

ಅಪ್ಪಟ ಕರಾವಳಿಯ ಆಧುನಿಕ ಜಗತ್ತಿನ ಹೆಣ್ಣಾದ ನಾನು ಮಲೆನಾಡಿನ 19ನೇ ಶತಮಾನದ ಕುರುಹುಗಳು ಇನ್ನೂ ಇದ್ದ ಮನೆಗೆ ಸೊಸೆಯಾಗಿ ಈಗ್ಗೆ 29 ವರ್ಷಗಳ ಹಿಂದೆ entry ಆದೆ. ಮನೆ ತುಂಬಾ ಜನ(ಜನಜಂಗುಳಿ ನನಗೆ ಹೊಸತೇನೂ ಅಲ್ಲ). ತುಂಬಾ ಸಾಂಪ್ರದಾಯಿಕ ವಾತಾವರಣ. ನನ್ನದಲ್ಲದ ಬದುಕಿನ ಶೈಲಿ. ಎಲ್ಲೋ ಕಳೆದು ಹೋಗುತ್ತಿರುವ ಮನಸ್ಥಿತಿಯಲ್ಲಿದ್ದಾಗ ನನಗೆ ಊರುಗೋಲಾದವರು ನನ್ನಕ್ಕ. ನನ್ನ ಅಮ್ಮನಲ್ಲೂ ಕಾಣದ ಅದಮ್ಯ ಪ್ರೀತಿಯನ್ನು ನಾನವರಲ್ಲಿ ಕಂಡೆ. ಯಾವುದೇ ಫಲಾಪೇಕ್ಷೆ ಇಲ್ಲದೆ ತುಂಬು ಮನದಿಂದ ಇನ್ನೊಬ್ಬರ ಕಷ್ಟಕ್ಕಾಗುವ ಅವರ ಗುಣವನ್ನು ಗಮನಿಸಿದೆ. ಒಬ್ಬ ಉತ್ತಮ ಗೃಹಿಣಿಯಾಗಿ ತುಂಬು ಸಂಸಾರವನ್ನು ನಿಭಾಯಿಸುವ ಅವರ ಕಲೆಯನ್ನು ಕಂಡೆ.. ತನಗೆ ಮಕ್ಕಳಿಲ್ಲದಿದ್ದರೂ ಆ ನೋವನ್ನು ಎಲ್ಲೂ ತೋರಿಸದೆ ನಮ್ಮೆಲ್ಲರ ಮಕ್ಕಳನ್ನು ತುಂಬು ಪ್ರೀತಿಯಿಂದ ಆಕೆ ಸಲಹಿದ್ದನ್ನು ನೋಡಿದೆ.ಒಂದೂ ಕುಂದನ್ನೂ ಕಾಣಲಾಗದ ವ್ಯಕ್ತಿತ್ವ ಅವರದ್ದು. ಅಂತಹ ತುಂಬು ವ್ಯಕ್ತಿತ್ವದ ಲಕ್ಷಣವಾದ graceful lady ನನ್ನಕ್ಕ.
ನನ್ನ ಬದುಕಿನಲ್ಲಿ ಅವರ ಪಾತ್ರ ಮಹತ್ತರವಾದುದು.ನಾನು ನನ್ನ ಮಗನ ಬಸುರಿಯಲ್ಲಿ ಯಾವುದೇ facility ಇಲ್ಲದೆ(ನೆಟ್ಟಗೆ toilet ಕೂಡಾ ಇಲ್ಲದ) ಗಾಜನೂರಿನ ವಿದ್ಯಾಪೀಠದಲ್ಲಿದ್ದಾಗ ಅಕ್ಕ ನನ್ನೊಟ್ಟಿಗಿದ್ದರು. ನಾನು ಹೆತ್ತು ಆಸ್ಪತ್ರೆಯಲ್ಲಿದ್ದಾಗ ಅವರು ನನ್ನ ಜೊತೆಗಿದ್ದರು. ನನ್ನ ಮಗ ಮಗುವಾಗಿದ್ದಾಗ ಒಂದು ವರ್ಷದ ಕಾಲ ನನ್ನೊಟ್ಟಿಗೆ ಇದ್ದರು. ನನ್ನ ಎಲ್ಲಾ ಅಗತ್ಯದ ಸಮಯದಲ್ಲಿ ಅವರು ನನ್ನೊಡನಿದ್ದರು. ಅವರ ಒಡನಾಟ, ಅವರ ಶಾಂತಭಾವದ ನೋಟ ಕಂದಿ ಹೋಗುತ್ತಿದ್ದ ಜೀವನಾಸಕ್ತಿಯನ್ನು ನನ್ನಲ್ಲಿ instil ಮಾಡುತ್ತಿತ್ತು.
ಆಕೆ ಮಿತಭಾಷಿ. ಆದರೆ ಆಡುವ ಒಂದೆರಡು ಮಾತುಗಳು ತೂಕದವಾಗಿದ್ದವು. ಅವರ ಆಪ್ತ ನೋಟವೇ ನೂರಾರು ಮಾತುಗಳನ್ನಾಡುತ್ತಿದ್ದವು. ಅಂತಹ ಮೌನ ಸಂವಹನಕಾರ್ತಿ ಆಕೆ. ಅಕ್ಕನ ಬಗ್ಗೆ ಬರೀತಾ ಹೋದರೆ ಕಾದಂಬರಿ ಬರೆಯುವಷ್ಟು stuff ಇದೆ. ಅಮ್ಮನಲ್ಲದ ಆಕೆಯಲ್ಲಿ ಅಮ್ಮನಿಗೆ ಮೀರಿದ ಪ್ರೀತಿಯನ್ನು ಕಂಡ ಧನ್ಯತಾ ಭಾವ ನನ್ನಲ್ಲಿದೆ. ಆಸೆಗಳನ್ನೇ ಮೀರಿದ ಅವರಂತಹವರು ನಮ್ಮ ಸಮಾಜದಲ್ಲಿರುವುದು ಬಹಳ ವಿರಳ. ನಮಗೆಲ್ಲರಿಗೂ ಅವರಂತಹ ಮಾದರಿಗಳು ಸ್ಪೂರ್ತಿ ತುಂಬಲಿ ಎಂದು ಆಶಿಸುತ್ತೇನೆ.


6. ಕಾಶಿ (ಅಪ್ಪನ ತಂಗಿ)

ಅಪ್ಪನ ಕೊನೆಯ ತಂಗಿ ಕಾಶಿ. ನಮಗೆಲ್ಲ ಕಾಶತ್ತೆ. ಚೆಂದದ, ಲಕ್ಷಣದ ವ್ಯಕ್ತಿ. ಸಣ್ಣ ನಗುವಿದ್ದ ದುಂಡನೆಯ ಮುಖ. ಆದರೆ ಅವರ ಎಡಗೈ ಬೆಳವಣಿಗೆ ಸರಿ ಇರದ ಕಾರಣ ಹಾಗೂ ಅಪಸ್ಮಾರ ಕಾಯಿಲೆ ಇದ್ದ ಕಾರಣ ಅವರ ಮದುವೆ ಆಗಿರಲಿಲ್ಲ. ಅಜ್ಜಯ್ಯನ ಮನೆಯಲ್ಲೇ ಇದ್ದರು.
ಕೈ ಸರಿ ಇರಲಿಲ್ಲ ಅಂತ ಸುಮ್ಮನೆ ಕೂತವರಲ್ಲ. ಬಾವಿಯಿಂದ ನೀರು ಎತ್ತುವುದರಿಂದ ಹಿಡಿದು ಒಂದೇ ಕೈಯಲ್ಲಿ ದೊಡ್ಡ ಚರಿಗೆಯ ಅನ್ನ ಕೂಡಾ ಬಾಗುತ್ತಿದ್ದರು. ಅಷ್ಟು ದೊಡ್ಡ ಮನೆಯ ಕಸ ಗುಡಿಸಿ ಒರೆಸಲಿಕ್ಕೂ ಸೈ. ತನ್ನ ಅಂಗ ವೈಕಲ್ಯವನ್ನು ಅವರು ಯಾವತ್ತೂ ಒಂದು excuse ಮಾಡಿಕೊಂಡು ಕೆಲಸ ಮಾಡದೆ ಕುಳಿತದ್ದೇ ಇಲ್ಲ. ಅವರ ಒಂದು ವಿಶೇಷವೆಂದರೆ ಊಟಕ್ಕೆ ಅವರಿಗೆ ಅತೀ ಹುಳಿ ಮಜ್ಜಿಗೆ ಬೇಕೇ ಬೇಕಿತ್ತು. ಅದಿಲ್ಲದಿದ್ದರೆ ಅವರಿಗೆ ಊಟ ಮಾಡಿದ ಸಮಾಧಾನವೇ ಇರುತ್ತಿರಲಿಲ್ಲ. ಅವರಿಗೆ ಆಗಾಗ ಫಿಟ್ಸ್ ಬರುತ್ತಿತ್ತು. ಆಗ ಅವರನ್ನು ಹಿಡೀಲಿಕ್ಕೆ ಕಷ್ಟ ಆಗುತ್ತಿತ್ತು. ಅವರು ಚಿಕ್ಕವರಿದ್ದಾಗ ಬಾವಿ ನೀರು ಸೇದುವಾಗ ಫಿಟ್ಸ್ ಬಂದು ಬಾವಿಗೆ ಬಿದ್ದಿದ್ದರಂತೆ. ಕೂಡಲೇ ನನ್ನ ಅಪ್ಪ ಬಾವಿಗೆ ಹಾರಿ ಹಗ್ಗದ ಮೂಲಕ ಅವರನ್ನು ಮೇಲೆತ್ತಿದ್ದರಂತೆ.
ಅವರನ್ನು ನಾವೆಲ್ಲ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೆವು. ಆದರೆ ನಾವೆಲ್ಲ ದೊಡ್ಡವರಾಗುತ್ತಿದ್ದಂತೆ ನಮ್ಮ ನಮ್ಮ ಜಗತ್ತಿನೊಳಗಿಂದ ಅವರನ್ನು ದೂರ ಇಟ್ಟೆವೇನೋ ಅಂತ ಈಗ ಅನಿಸುತ್ತಿದೆ. ಅವರು ನಂತರದ ದಿನಗಳಲ್ಲಿ ನಮ್ಮೊಂದಿಗಿದ್ದಿದ್ದರಷ್ಟೇ ಏನೋ ಅಂತ ಈಗ ಅನಿಸುತ್ತಿದೆ. ಸುಮಾರು 55 ವರ್ಷಗಳ ಕಾಲ ಬದುಕಿ, ಹಾಸಿಗೆ ಹಿಡಿಯದೇ ಒಂದು ದಿನ ಕಾಲಾಧೀನರಾದರು. ಅವರ ಕೊನೆಗಾಲದಲ್ಲಿ ನನ್ನ ಅತ್ತಿಗೆ ಅವರನ್ನು ಚೆನ್ನಾಗಿ ನೋಡಿಕೊಂಡಿದ್ದಳು. ಅದೊಂದು ತೃಪ್ತಿಯ ವಿಷಯ. ಈಗ ಅವರೊಂದು ನೆನಪಷ್ಟೇ!


5.ಅಚ್ಚಿ (ವನಜಾಕ್ಷಿ - ಅಪ್ಪನ ತಂಗಿ )


ಅಚ್ಚಿ ಎಂದೇ ಎಲ್ಲರಿಂದ ಕರೆಯಲ್ಪಟ್ಟವರು ನನ್ನ ದೊಡ್ಡ ಅತ್ತೆ ವನಜಾಕ್ಷಿ. ನನ್ನ ಅಪ್ಪನ ದೊಡ್ಡ ತಂಗಿ. She's a role model to us. ಸ್ವಾಭಿಮಾನಿ, ಧೈರ್ಯಸ್ಥೆ, ಸ್ವತಂತ್ರ ಮನೋಧರ್ಮದವರು. ಅವರ ಬದುಕೇ ಸಿನೆಮಾದ ಕಥೆಯಂತಿದೆ. ಹದಿಮೂರನೇ ವಯಸ್ಸಿಗೆ ಮದುವೆ. ಸಾಲಾಗಿ ಐದು ಗಂಡು ಮಕ್ಕಳು. ಕೊನೆಯ ಮಗ ಐದಾರು ವರ್ಷದವನಿದ್ದಾಗ ವೈಧವ್ಯ. ಕಡು ಬಡತನ. ಐದೈದು ಮಕ್ಕಳಿಗೆ ಹೊಟ್ಟೆ ಹೊರೆಯಬೇಕಾದ ಪರಿಸ್ಥಿತಿ. ತಂದೆಯ ಮನೆಯಿಂದ ಸಹಾಯ ನಿರೀಕ್ಷಿಸಲು ಆಗದ ಸ್ಥಿತಿ. ಏಕೆಂದರೆ they were also sailing in the same boat of poverty. ಆಗಿನ ಕಾಲವೇ ಹಾಗಿತ್ತು. ಸುಖ ಸಮೃದ್ಧಿ ಎನ್ನುವುದು ಕನಸಿನ ಮಾತಾಗಿತ್ತು.

ನನ್ನ ಅತ್ತೆ ಚೆಂದದ ಹೆಂಗಸು. ಗಟ್ಟಿಗಿತ್ತಿ. ಖಡಕ್ ಹೆಂಗಸು. ಇದ್ದ ಗೂಡಿನಂತಹ ಮನೆಯಲ್ಲಿ ಐದು ಮಕ್ಕಳನ್ನು ಬೆಳೆಸುತ್ತ, ಅಲ್ಪಸ್ವಲ್ಪ ಗದ್ದೆಯಲ್ಲಿ ಗೇಯುತ್ತ, ಯಾರ ಬಳಿಯೂ ಕೈ ಚಾಚದೆ ತನ್ನ ಬದುಕನ್ನಲ್ಲದೇ ತನ್ನ ಮಕ್ಕಳ ಬದುಕನ್ನೂ ಕೂಡಾ ಕಟ್ಟಿದ ಧೀರೆ. ಎಲ್ಲರೂ ಕಲಿಯಲಿಕ್ಕೆ ಚೆನ್ನಾಗಿದ್ದ ಕಾರಣ scholarship ಪಡೆದು ಓದಿ ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದಾರೆ. ಐವರಲ್ಲಿ ಒಬ್ಬನಾದ ನಾಲ್ಕನೇ ಮಗ ಸತೀಶ ಅಕಾಲ ಮರಣಕ್ಕೆ ತುತ್ತಾದಾಗಲೂ ಗಟ್ಟಿತನದಿಂದ ಎದುರಿಸಿದ ಧೀರೆ.ಬದುಕನ್ನು ಬಂದ ಹಾಗೆ ಸ್ವೀಕರಿಸಿದ ವ್ಯಕ್ತಿ ಆಕೆ. ಕನ್ನಡ ಹೊರತು ಪಡಿಸಿ ಬೇರೆ ಯಾವ ಭಾಷೆ ಬಾರದಿದ್ದರೂ ತನ್ನ ಎರಡನೇ ಮಗ ಸುರೇಶ ಅಮೇರಿಕಾದಲ್ಲಿದ್ದಾಗ 2- 3 ಬಾರಿ ಒಬ್ಬರೇ ಪರದೇಶ ಪ್ರಯಾಣ ಮಾಡಿದ credit ಅವರಿಗೆ ಸಲ್ಲುತ್ತದೆ.
ಅತ್ತೆ ಈಗಿಲ್ಲ. ಆದರೆ ಅವರ ಜೀವನ ಪ್ರೀತಿ, ಜನಬಳಕೆ, ಸಕಾರಾತ್ಮಕ ಮನೋಭಾವ, ಎಲ್ಲರನ್ನು ಒಳಗೊಳ್ಳುವ ಸ್ವಭಾವ, ನಿಷ್ಕಲ್ಮಶ ಪ್ರೀತಿ, ಸ್ವಾಭಿಮಾನೀ ಸ್ವತಂತ್ರ ಪ್ರವೃತ್ತಿ ನಮ್ಮ ಮುಂದಿದೆ. ಅವರು ಯಾವ " ism " ಗಳನ್ನು ಇಟ್ಟುಕೊಳ್ಳದೆ ಎಲ್ಲಾ ಕಷ್ಟಗಳ ನಡುವೆಯೂ ಸುಖೀ ಬದುಕನ್ನು ಸುಮಾರು 80 ವರ್ಷಗಳ ಕಾಲ ಬದುಕಿದರು. ಜೀವನ ಪ್ರೀತಿ ಇದ್ದಲ್ಲಿ ಬದುಕನ್ನು ಎಷ್ಟು ಚೆನ್ನಾಗಿ ಆಸ್ವಾದಿಸಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆ ನಮ್ಮೆಲ್ಲರ ಅಚ್ಚಿ.

4. ನಾಗೇಶ ರಾವ್ (ಗಂಡನ ಅಣ್ಣ )
ನನ್ನ ಭಾವ - ಸುತ್ತಮುತ್ತಲೆಲ್ಲ ಕೆಳಮನೆ ನಾಗೇಶಣ್ಣ ಎಂದೇ ಪ್ರಖ್ಯಾತ. ರವಿಯ ಹಿರಿಯಣ್ಣ. ಪಟೇಲ್ ಗಣೇಶ ರಾವ್ ಹಾಗೂ ಭವಾನಮ್ಮನವರ 9 ಮಕ್ಕಳಲ್ಲಿ ಹಿರಿಯರು.

ಅವರು ಹುಟ್ಟಿದ್ದು ಸಿಗಂದೂರಿನ ಸಮೀಪದ ಕಳಸವಳ್ಳಿಯಲ್ಲಿ. ನಮ್ಮ ಮಾವ ಅಲ್ಲಿ ಪಟೇಲರಾಗಿದ್ದರು. ಅಲ್ಲಿನ ಮನೆ ತಗ್ಗಿನಲ್ಲಿ ಇತ್ತು. ಆ ದಾರಿಯ ಮೂಲಕ ಬಂದು ಕೆಳಗಿಳಿದು ದೋಣಿಯ ಮೂಲಕ ಜನ ಪಯಣಿಸುತ್ತಿದ್ದ ಕಾರಣ ಮನೆಗೆ ಕೆಳಮನೆ ಎಂದು ನಾಮಕರಣವಾಯಿತು. ಮಡೆನೂರು ಡ್ಯಾಂ ಕಟ್ಟಿದಾಗ ಅಲ್ಲಿದ್ದ 5 ಎಕರೆ ತೋಟ ಮುಳುಗಿಹೋಯಿತು. ಮುಳುಗಡೆಯಾದ ಮೇಲೆ ನಮ್ಮ ಮಾವ ಸಂಸಾರ ಸಮೇತರಾಗಿ ಈಗಿರುವ ತುಂಬಿನಕೆರೆಗೆ ಬಂದರು. ತುಂಬು ಸಂಸಾರದ ಹೊಟ್ಟೆ ಹೊರೆಯುವ ಜವಾಬ್ದಾರಿ, ಕಡು ಬಡತನ. ಆಗ ಬರೀ ಹತ್ತು ಹನ್ನೆರಡು ವರ್ಷದವರಾಗಿದ್ದ ಭಾವ ತನ್ನ ತಂದೆಯ ಜೊತೆ ಕೈ ಜೋಡಿಸಿ ಸಂಸಾರದ ನೊಗವನ್ನು ಹೊತ್ತ ಎತ್ತಾದರು. ಲಿಂಗನಮಕ್ಕಿ ಡ್ಯಾಂ ಆಗುವ ತನಕ ಕಳಸವಳ್ಳಿಯ ತೋಟದ ಅಡಿಕೆ ಮರಗಳ ತಲೆ ನೀರಿನ ಮೇಲಿತ್ತು. ಭಾವ ದೋಣಿಯಲ್ಲಿ ಹೋಗಿ ಅಡಿಕೆ ಕೊಯ್ಲು ಮಾಡಿಕೊಂಡು ಬರುತ್ತಿದ್ದರು. ನಂತರದಲ್ಲಿ ತೋಟ ಸಂಪೂರ್ಣವಾಗಿ ಮುಳುಗಡೆಯಾಯಿತು; ದೋಣಿ ವಿಹಾರ ನಿಂತಿತು.ತಂದೆಯೊಡನೆ ತನ್ನ ವಯಸ್ಸಿಗೂ ಮೀರಿ ದುಡಿದ ಭಾವ ಬಂದು ನೆಲೆಯೂರಿ ನಿಂತ ಈ ಊರಲ್ಲಿ ಒಂದು ತುಂಬು ಕುಟುಂಬವನ್ನು ಬೆಳೆಸಿದ ತೃಪ್ತ ಭಾವದಲ್ಲಿದ್ದಾರೆ.75ರ ಹೊಸ್ತಿಲಲ್ಲಿ ಇರುವ ನನ್ನ ಭಾವ ಈಗಲೂ ಕೂಡ ಒಂದು ಘಳಿಗೆ ಸುಮ್ಮನೆ ಕೂರುವುದಿಲ್ಲ.
ಕೆಳಮನೆ typical ಮಲೆನಾಡು ಶೈಲಿಯ ಅಂಕಣಗಳ ದೊಡ್ಡ ಮನೆ. ನಮ್ಮ ಮಾವ ಹಾಗೂ ಭಾವ ತಮಗಾದಾಗಲೆಲ್ಲ ಒಂದೊಂದು ಅಂಕಣವನ್ನು ಸೇರಿಸಿಕೊಂಡು ಹೋದ ದಪ್ಪಮಣ್ಣಿನ ಗೋಡೆಗಳಿರುವ ತಂಪಾದ ಮನೆ. ಭಾವ ಮನೆಯಲ್ಲಿ ಇಲ್ಲ ಅಂದರೆ ಮನೆ ಭಣಭಣ ಅನಿಸುತ್ತದೆ. ಯಾರೇ ಮನೆಗೆ ಬಂದರೂ ತತ್ ಕ್ಷಣದಲ್ಲಿ ಅವರನ್ನು attend ಮಾಡಿ ಅವರ ದೇಖಾರೇಖಿಯನ್ನು ನೋಡಿಕೊಳ್ಳುವುದು ಭಾವನ ಅಭ್ಯಾಸ. ಮನೆಯಲ್ಲಿ ಬಾಳೆಗೊನೆ ಇದ್ದರೆ ಬಂದ ನೆಂಟರೆದುರು ಇಡೀ ಬಾಳೆಗೊನೆಯೇ ಪ್ರತ್ಯಕ್ಷ. ಒಂದೆರಡು ಹಣ್ಣು ಕೊಟ್ಟು ಅವರಿಗೆ ಗೊತ್ತೇ ಇಲ್ಲ. ಒಂದು ರೀತಿಯ ಕೊಡುಗೈ ಮನುಷ್ಯ. ಅವರಿಗೆ ಜನ ಬೇಕು. ಮಕ್ಕಳೆಂದರೆ ಪ್ರಾಣ. ಬೈಯ್ದು ಮುದ್ದಿಸುವುದು ಅವರ ಪ್ರೀತಿಯ ಅಭಿವ್ಯಕ್ತಿ. ಪಪ್ಪಪ್ಪನ ಹತ್ತಿರ ಬೈಸಿಕೊಂಡ ನಮ್ಮ ಮಕ್ಕಳು ಯಾವತ್ತೂ ಬೇಸರಿಸಿಕೊಂಡದ್ದೇ ಇಲ್ಲ. ಎಲ್ಲರ ಬಗ್ಗೆಯೂ ಅವರಿಗೆ ಅತೀವ ಕಾಳಜಿ. ನಾಲ್ಕು ಸಲ ಮನೆಯವರು ಯಾರಾದರೂ ಸೀನಿದರೆ ಕೈಕಾಲು ಬಿಡುವ ವ್ಯಕ್ತಿ. ಎಲ್ಲರ ಬಗ್ಗೆ ಅಷ್ಟು ಕಾಳಜಿ, ಪ್ರೀತಿ.
ಸಣ್ಣ ಆಳ್ತನದ ಭಾವ ಸಮಾಜದಲ್ಲಿ ತನ್ನ ಸೇವಾಮನೋಭಾವದಿಂದ, ಒಳಗೊಳ್ಳುವಿಕೆಯ ಸ್ವಭಾವದಿಂದ ದೊಡ್ಡದಾಗಿ ಕಾಣುತ್ತಿರುವವರು. ಎಲ್ಲರಿಗೂ ಅಣ್ಣನಾಗಿ, ಭಾವನಾಗಿ, ಮಾವನಾಗಿ, ಪಪ್ಪಪ್ಪನಾಗಿ, ತಾತನಾಗಿ ಪರಿಚಿತರಾದವರು. ಇದ್ದದ್ದನ್ನು ಹಂಚಿ ತಿನ್ನುವವರು. ಸ್ವಲ್ಪ Anxiety ಇರುವ ವ್ಯಕ್ತಿಯಾದರೂ ಸದಾ ಚಟುವಟಿಕೆಯಿಂದಿದ್ದು ಎಲ್ಲರ ಕಷ್ಟಕ್ಕೆ ಸ್ಪಂದಿಸುವ ಭಾವ ಹೀಗೆ ಸಮಾಜಮುಖಿಯಾಗಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರಲಿ ಎಂದು ನಮ್ಮೆಲ್ಲರ ಹಾರೈಕೆ.

3. ದೊಡ್ಡಪ್ಪ (ಸೀತಾರಾಮ ಸೋಮಯಾಜಿ)
ಬಿರ್ತಿಯ ವೆಂಕಟರಮಣ ಸೋಮಯಾಜಿ ಹಾಗೂ ಕಾವೇರಮ್ಮ ದಂಪತಿಗಳಿಗೆ ಮೂರು ಗಂಡು, ಐದು ಹೆಣ್ಣು ಮಕ್ಕಳು. ದೊಡ್ಡಪ್ಪ, ಅಪ್ಪ ಆದ ಮೇಲೆ ವನಜಾಕ್ಷಿ, ಭಾಗೀರಥಿ, ನಾಗವೇಣಿ, ಕಮಲಾಕ್ಷಿ, ಕಾಶಿ. ಕಡೆಯ ಗಂಡು ಜಯರಾಮ. ಅವರಲ್ಲಿ ಈಗಿರುವವರು ಜಯರಾಮ ಸೋಮಯಾಜಿ ಮಾತ್ರ.


ಹಿರಿಯರಾದ ಸೀತಾರಾಮ ಸೋಮಯಾಜಿಯವರು ಹುಬ್ಬಳ್ಳಿ ಹಾಗೂ ಶಿವಮೊಗ್ಗದಲ್ಲಿ ಹೋಟೆಲ್ಗಳಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದವರು. ಶಿವಮೊಗ್ಗದ ಬೃಂದಾವನ ಹೋಟೆಲ್ನಲ್ಲಿ 25 ವರ್ಷ ನಿಸ್ಪ್ರಹವಾಗಿ ಸೇವೆ ಸಲ್ಲಿಸಿದವರು. ದೇವರ ತಲೆ ಮೇಲಿನ ಹೂವು ತಪ್ಪಿದರೂ ಇವರು ಸಮಯ ತಪ್ಪದವರು. ಅಷ್ಟು meticulous and dedicated worker!
ದೊಡ್ಡಪ್ಪ ಅಂತರ್ಮುಖಿ. ಹೆಚ್ಚು ಮಾತನಾಡುವವರಲ್ಲ. ಹಿಂದಿ film star ಶತ್ರುಘ್ನ ಸಿನ್ಹಾನ ಹಾಗಿದ್ದರು. ಅವರಿಗೆ ಅವರದ್ದೇ ಆದ routine ಇತ್ತು.ಅದನ್ನು ಯಾವತ್ತೂ ತಪ್ಪಿಸುತ್ತಿರಲಿಲ್ಲ. ಸೀತಾರಾಮ ಶೀತರಾಮ ಆಗಿದ್ದ ಕಾರಣ ಪ್ರತಿದಿನ ಬೆಳಿಗ್ಗೆ ತಪ್ಪದೇ ಯೋಗಾಭ್ಯಾಸ ಮಾಡುತ್ತಿದ್ದರು.ದಿನಪತ್ರಿಕೆಯನ್ನು ಜಗಿದು ಜಗಿದು ಓದುತ್ತಿದ್ದರು. ಅವರ ಅರ್ಧಾಂಗಿ ಸುನಂದಮ್ಮ ಅವರಿಗೆ ತದ್ವಿರುದ್ಧ. ಬಾಯಿ ತುಂಬಾ ಮಾತನಾಡುವಾಕೆ. ಮನೆಗೆ ಜನ ಬಂದಷ್ಟು ಕಡಿಮೆ. ಜನಾನುರಾಗಿ. ಅಡುಗೆ ಮಾಡಿ ಹಾಕುವುದರಲ್ಲಿ ಎತ್ತಿದ ಕೈ. ಅವರು ಬಡಿಸುವ ಮೊದಲೇ ಸಾಕು ಎಂದರೆ ತಿನ್ನುವವರು ಬಚಾವ್. ಅಷ್ಟು ದೊಡ್ಡ ಕೈಯವರು. ಕಡಿಮೆ ಆದಾಯ ಅವರ ಕೈಯೆತ್ತಿ ಬಡಿಸುವ ಗುಣವನ್ನು ಕಡಿಮೆ ಮಾಡಿರಲಿಲ್ಲ.
ಶಿವಮೊಗ್ಗದ ದೊಡ್ಡಪ್ಪನ ಮನೆಯಲ್ಲಿ ನಾನು 3ನೇ ತರಗತಿ ಅರ್ಧದಿಂದ 6ನೇ ತರಗತಿ ಅರ್ಧದವರೆಗಿದ್ದೆ. ಅಕ್ಕಂದಿರಾದ ಉಷಾ ಸಂಧ್ಯಾ ನನ್ನನ್ನು ಅವರೊಂದಿಗಳಾಗಿ ನೋಡಿಕೊಂಡರು. ದೊಡ್ಡಪ್ಪ ಪ್ರತಿ ಭಾನುವಾರ ಕೊಡುತ್ತಿದ್ದ ನಾಲ್ಕಾಣೆಯಲ್ಲಿ ನಾನು ಮಿಠಾಯಿ ತಗೊಂಡು ತಿನ್ನುತ್ತಿದ್ದೆ. ಜ್ವರ ಬಂದಾಗ ದೊಡ್ಡಮ್ಮ ದೊಡ್ಡ ಪಾತ್ರೆಯಲ್ಲಿ ಗಂಜಿ ಮಾಡಿ "ಉಣ್ಣು ಮಗ" ಅಂತ ಒತ್ತಾಯದಿಂದ ತಿನ್ನುವಂತೆ ಮಾಡುತ್ತಿದ್ದರು. ಅಕ್ಕಂದಿರೊಂದಿಗೆ ನಾನು ಆಗಾಗ ಸಿನಿಮಾಕ್ಕೆ ಹೋಗುತ್ತಿದ್ದೆ. ವಾರಕ್ಕೊಮ್ಮೆ ಸಮೀಪದ ಹೊಟೆಲ್ನಿಂದ ಮಸಾಲೆ ದೋಸೆ ತಂದು ತಿನ್ನುತ್ತಿತ್ತು.
ಅವರಿದ್ದದ್ದು ವಠಾರದ ಪುಟ್ಟ ಮನೆಯಲ್ಲಿ. ಆ ಮನೆಯ ವಿಶೇಷವೇನೆಂದರೆ ಎಷ್ಟು ಜನ ಬಂದರೂ ಅದರಲ್ಲಿ ಹಿಡಿಸುತ್ತಿತ್ತು. ಅಲ್ಲಿ ಮನೆಯ ವಿಸ್ತೀರ್ಣಕ್ಕಿಂತ ಮನದ ವಿಸ್ತೀರ್ಣ count ಆಗುತ್ತಿತ್ತು.
ಅಕ್ಕಂದಿರಿಬ್ಬರು ಈಗ well settled. ದೊಡ್ಡಪ್ಪ ಈಗಿಲ್ಲ. ದೊಡ್ಡಮ್ಮ bed ridden. ಅಕ್ಕಂದಿರಿಬ್ಬರೂ ಬಹಳ ಪ್ರೀತಿಯಿಂದ ಅಪ್ಪ ಅಮ್ಮನನ್ನು ನೋಡಿಕೊಂಡಿದ್ದಾರೆ - ನೋಡಿಕೊಳ್ಳುತ್ತಿದ್ದಾರೆ. 90 ವರ್ಷ ಬದುಕಿದ ನಂತರ ಮರೆವಿನ ಕಾಯಿಲೆಗೆ ದೊಡ್ಡಪ್ಪ ತುತ್ತಾದರು. ದೊಡ್ಡಮ್ಮನಿಗೂ ಮರೆವಿನ ಕಾಯಿಲೆ. ಅವರಿಗೆ ಮರೆವಿರಬಹುದು. ಆದರೆ ಅವರು ಮಾಡಿದ್ದನ್ನು, ಅವರ ಪ್ರೀತಿಯನ್ನು ನಾವ್ಯಾರು ಮರೆತಿಲ್ಲ.

2. ಅಪ್ಪಯ್ಯ (ಪದ್ಮನಾಭ ಸೋಮಯಾಜಿ)

ನನ್ನಪ್ಪ ಬಿ.ಪಿ. ಸೋಮಯಾಜಿ ಯವರು. LICಯಲ್ಲಿ branch manager ಆಗಿ retire ಆದವರು. ಬ್ರಹ್ಮಾವರದ ಆಸುಪಾಸಿನಲ್ಲಿ ಎಲ್ಲರಿಗೂ ಚಿರಪರಿಚಿತ ವ್ಯಕ್ತಿ. ಜೀವನೋತ್ಸಾಹವನ್ನು ಅವರ ಹತ್ತಿರ ಕಲಿಯಬೇಕು. ಸಕಾರಾತ್ಮಕ ಮನೋಧರ್ಮಕ್ಕೆಅವರು ಒಂದು ಒಳ್ಳೆಯ ಉದಾಹರಣೆಯಾಗಿದ್ದರು. ಸದಾ ಲವಲವಿಕೆಯಿಂದಿರುವ ವ್ಯಕ್ತಿ. ಯಾವತ್ತೂ ಕೂಡಾ ಯಾರಿಗೂ discourage ಮಾಡಿದವರಲ್ಲ. Very motivating person. ಯಾವತ್ತೂ ನಮಗ್ಯಾರಿಗೂ ಬೈದವರಲ್ಲ. "ತಣ್ಣೀರನ್ನಾದರೂ ತಣಿಸಿ ಕುಡಿಯಬೇಕು, ಮಗಳೇ" ಎಂದು ಯಾವಾಗಲೂ ತಾಳ್ಮೆಯ ಬಗ್ಗೆ ಅವರ ಪ್ರವಚನ. ಜೀವನದಲ್ಲಿ ಬಹಳ ಜವಾಬ್ದಾರಿ ತಗೊಂಡು ನಿಭಾಯಿಸಿದವರು. ಎಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಧೃತಿಗಡದವರು. ಸಹಾಯ ಮಾಡಲು ಸದಾ ಸಿಧ್ಧ. ಸಕಲ ಕಲಾ ವಲ್ಲಭ. ಅವರಿಗೆ ಗೊತ್ತಿಲ್ಲದ ವಿದ್ಯೆಯೇ ಇರಲಿಲ್ಲ. ಒಳ್ಳೆಯ ಚಿತ್ರಕಾರ, ಮಾತುಗಾರ, ಭಾಷಣಕಾರ, ಸಂವಹನಕಾರ..... ಅವರ ಕಾರನ್ನು ಅವರೇ ರಿಪೇರಿ ಮಾಡುವಷ್ಟು ಪರಿಣತಿ ಅವರಿಗಿತ್ತು. ಮನೆಯ ಯಾವುದೇ gadgets ಹಾಳಾದಾಗ ಅವರೇ ರಿಪೇರಿ ಮಾಡುತ್ತಿದ್ದರು. ತನ್ನ ಮಕ್ಕಳನ್ನು, ತನ್ನ ಅಣ್ಣ ತಂಗಿಯರ ಮಕ್ಕಳನ್ನು ಒಂದೇ ತಕ್ಕಡಿಯಲ್ಲಿ ತೂಗುತ್ತಿದ್ದರು. ಈ inclusiveness ನಮಗೊಂದು ದೊಡ್ಡ ವರ. ಅವರ ಬಗ್ಗೆ ಬರೆದಷ್ಟೂ ವಿಷಯವಿದೆ. ಅಪ್ಪ ಎಂದರೆ ನನಗೆ ಬಹಳ ಇಷ್ಟ.



1. ಅಜ್ಜಯ್ಯ (ವೆಂಕಟರಮಣ ಸೋಮಯಾಜಿ)
ನನ್ನ ಅಜ್ಜಯ್ಯ ಸಾಯುವಾಗ ಅವರ ವಯಸ್ಸು 91. ನನಗೆ ನೆನಪು ಇರುವ ಹಾಗೆ ಅವರ ಚಿತ್ರಣ ಒಂದೇ ರೀತಿಯದಾಗಿತ್ತು. ಹದವಾದ ಮೈ ಕಟ್ಟು, ಕಂದು ಮೈ ಬಣ್ಣ, ಸಾಧಾರಣ ಎತ್ತರದ ನಿಲುವು, ಬೋಳುಮಂಡೆ, ಸಣ್ಣ ಪಿಳ್ಳೆ ಜುಟ್ಟು, ಬರೀ ಮೈ, ಕೋಮಣ ಕವರ್ ಮಾಡುವ ಒಂದು ಬೈರಾಸ, ಅಲ್ಲಲ್ಲಿ ಕಾಣುವ ಒಂದೆರಡು ಹಲ್ಲುಗಳು. ಮನೆಯಲ್ಲಿ ಎಷ್ಟೇ ಸಾವುನೋವಾದರೂ ನಿರ್ಲಿಪ್ತ ಭಾವ.

ಒಂದು ಘಳಿಗೆ ಕೂಡಾ ಸುಮ್ಮನೆ ಕೂರುವವರಲ್ಲ. ಗದ್ದೆಯಲ್ಲಿ, ಅಂಗಳದಲ್ಲಿ ತರಕಾರಿ ಕೃಷಿ. ಇಲ್ಲವೇ ಜನಿವಾರ ಮಾಡುವುದು. ಜನಿವಾರ ಹಿಡಿಯಲು ನಮ್ಮನ್ನು ಕರೆಯುವುದು. ನಾವು ಹೋಗಿ ಹಿಡಿಯದಿದ್ದಲ್ಲಿ ಅಲ್ಲೇ ಒಂದರಗಳಿಗೆಯ ಸಿಟ್ಟು. ಬ್ರಹ್ಮಾವರದ ಲೈಬ್ರರಿಯಿಂದ ಪುಸ್ತಕ ತಂದು ಓದುವುದು. ಕೀಟಲೆಗಾಗಿ ನಾವು ಅವರು ಗುರುತಿಗೆ ಇಟ್ಟ ಕಾಗದದ ತುಂಡನ್ನು ಬೇರೆ ಪುಟಕ್ಕೆ ಹಾಕಿಡುವುದು. ಮಾರನೆ ದಿನ ಅವರು ಪುನಃ ನಾವು ಗುರುತಿಗಿಟ್ಟ ಪುಟದಿಂದಲೇ ಓದನ್ನು ಮುಂದುವರಿಸುವುದು. ಹೀಗೇ ಅಜ್ಜಯ್ಯನ ಬಗ್ಗೆ ಸಾಲು ಸಾಲು ನೆನಪುಗಳು.
ದೇವಸ್ಥಾನದ ಅರ್ಚಕರಾಗಿದ್ದರೂ ಜಾತಿಪಾತಿಯ ಬಗ್ಗೆ ಅಷ್ಟು ಮುಗಮ್ಮಾಗಿ ಇದ್ದವರಲ್ಲ. ಹೀಗಾಗಿ ಬೇರೆ ಜಾತಿಯ ನನ್ನ ಸ್ನೇಹಿತರಿಗೆ ಆರಾಮಾಗಿ ನಮ್ಮ ಮನೆಯಲ್ಲಿ ಎಲ್ಲಾ ಕಡೆಯೂ ಪ್ರವೇಶವಿತ್ತು. ಜಾತಕದ ಬಗ್ಗೆಯೂ ಅವರಿಗೆ ಅಷ್ಟು ಒಲುಮೆ ಇರಲಿಲ್ಲ. "ಮದುವೆಗೆ ಮನಸ್ಕೂಟ ಮುಖ್ಯ" ಎನ್ನುತ್ತಿದ್ದರು. ಸರಳ ಜೀವನ ನಡೆಸುತ್ತಿದ್ದ ಅವರು ಒಂದು character ಆಗಿದ್ದರು ಅಂದರೆ ತಪ್ಪಿಲ್ಲ.



No comments:

Post a Comment