Monday, September 6, 2021

ಪದ್ಮನಾಭ ಸೋಮಯಾಜಿ

 ನನ್ನ ಅಪ್ಪ ಅಂದ್ರೆ ನನಗಿಷ್ಟ. ಅವರು ಬದುಕಿದ್ದಿದ್ದರೆ ಈಗ ಅವರಿಗೆ ತೊಂಬತ್ತ ಮೂರು ವರ್ಷವಾಗಿರುತ್ತಿತ್ತು. 1997ರಲ್ಲಿ ಮಿದುಳು ರಕ್ತಸ್ರಾವದಿಂದ ಅವರು ತೀರಿಕೊಂಡಾಗ ನಮ್ಮೆಲ್ಲರಲ್ಲೂ ಒಂದು ನಿರ್ವಾತ ಸೃಷ್ಟಿಯಾಗಿತ್ತು. ನಮ್ಮ ಬಿರ್ತಿ ಫ್ಯಾಮಿಲಿಯ ಬೈಂಡಿಂಗ್ ಫೋರ್ಸ್ ಆಗಿದ್ದ ನನ್ನಪ್ಪ ಇದ್ದಲ್ಲಿ ಒಂದು ವಿಚಿತ್ರ ಜೀವಂತಿಕೆ, ಸಕಾರಾತ್ಮಕ ಮನಸ್ಥಿತಿ ಸಹಜವಾಗಿ ನೆಲೆಸಿರುತ್ತಿತ್ತು. ಅವರ ಜೀವನ ಸ್ಫೂರ್ತಿ ಎಲ್ಲರಿಗೂ ಆದರ್ಶಪ್ರಾಯವಾಗಿತ್ತು.


ಸೆಪ್ಟೆಂಬರ್ 4ರಂದು ಹುಟ್ಟಿದ್ದ ನನ್ನಪ್ಪ ನನಗಿಂತ ಮೂವತ್ತೆಂಟು ವರ್ಷ ದೊಡ್ಡವರು. ನನಗೆ ಅವರು ಕೇವಲ ಅಪ್ಪನಾಗಿ ಉಳಿಯದೆ ಒಬ್ಬ ಮಾರ್ಗದರ್ಶಿಯಾಗಿ, ಸುಗಮಕಾರರಾಗಿ, ಸ್ನೇಹಿತರಾಗಿ, ಶಿಕ್ಷಕರಾಗಿ...ಹೀಗೆ ಹತ್ತು ಹಲವು ಪಾತ್ರಗಳನ್ನು ನಿರ್ವಹಿಸಿದವರು. ನನ್ನ ಜೀವನದ ಮೊದಲ ಗುರು ನನ್ನಪ್ಪ ಅಂದರೆ ತಪ್ಪಿಲ್ಲ. ಶಿಕ್ಷಕರ ದಿನಾಚರಣೆಯ ಈ ದಿನದಂದು ನನ್ನ ಅಪ್ಪನನ್ನು ನನ್ನ ಗುರುವಾಗಿ ನೆನಪಿಸಿಕೊಳ್ಳುತ್ತಾ ಅವರ ಬಗ್ಗೆ ನನ್ನೊಳಗಿನ ಅನಿಸಿಕೆಗಳನ್ನು ಹಂಚಿಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡುತ್ತಿದ್ದೇನೆ.
ನಮ್ಮಪ್ಪ ಅಮ್ಮನಿಗೆ ನಾವು ಮೂವರು ಮಕ್ಕಳು. ನನ್ನಣ್ಣ ಐವತ್ತರ ದಶಕದವನು. ನಾನು ಅರವತ್ತರ ದಶಕದವಳಾದರೆ ನನ್ನ ತಂಗಿ ಎಪ್ಪತ್ತರ ದಶಕದವಳು. ಆಗಿನ ಕಾಲದ ಕುಟುಂಬ ವ್ಯವಸ್ಥೆ ಈಗಿನದಕ್ಕಿಂತ ಭಿನ್ನವಾಗಿತ್ತು. ಮನೆಯ ಯಜಮಾನನ ಬಿಗಿ ಮುಷ್ಟಿಯಲ್ಲಿ ಹೆಚ್ಚಿನ ಕುಟುಂಬಗಳಿದ್ದ ಕಾಲವದು. ಅಪ್ಪ ಮನೆಯಲ್ಲಿ ಇದ್ದರೆ ಮಕ್ಕಳು ಏನೂ ಶಬ್ದ ಮಾಡದೆ, ಉಸಿರೆತ್ತದೆ ಇರಬೇಕಾಗಿದ್ದ ವ್ಯವಸ್ಥೆಯದು. ಅಪ್ಪನ ಮುಂದೆ ಮಕ್ಕಳ ಬೇಡಿಕೆಗಳ ಧ್ವನಿಯಾಗುತ್ತಿದ್ಜವಳು ಹೆತ್ತಮ್ಮ. ಹೀಗಾಗಿ ತಂದೆಗೂ ಮಕ್ಕಳಿಗೂ ಮುಕ್ತ ಮಾತುಕತೆಗೆ ಹೆಚ್ಚಿನ ಅವಕಾಶವಿರುತ್ತಿರಲಿಲ್ಲ. ಆದರೆ ಈ ಕಟ್ಟುಕಟ್ಟಳೆಗೆ ಹೊರತಾಗಿದ್ದವರು ನನ್ನಪ್ಪ. ಎಷ್ಟೇ ಒತ್ತಡವಿದ್ದರೂ ಸದಾ ಹಸನ್ಮುಖಿಯಾಗಿರುತ್ತಿದ್ದ ನನ್ನಪ್ಪ ಮಕ್ಕಳೊಡನೆ ಮಕ್ಕಳಾಗಿ ಇರುತ್ತಿದ್ದವರು. ಆಗಿನ ಕಾಲದಲ್ಲೇ ಅವರು ಮಕ್ಕಳೊಡನೆ ಮುಕ್ತವಾಗಿ ಇರುತ್ತಿದ್ದದ್ದು ಅನುಕರಣೀಯವಾಗಿತ್ತು.
ಯಾವುದೇ ಆಚರಣೆಗಳನ್ನು ಪಾಲಿಸಬೇಕೆಂದು ನಮ್ಮ ಮೇಲೆ ವೃಥಾ ಹೇರಿಕೆ ಮಾಡದೆ ಬದುಕಿನಲ್ಲಿ ಅಂಧಾನುಕರಣೆಗೆ ಆದ್ಯತೆ ನೀಡದೆ ಉತ್ತಮ ಮೌಲ್ಯಗಳನ್ನು ಪಾಲಿಸಬೇಕೆಂದು ತೋರಿಸಿಕೊಟ್ಟವರವರು. ಕರ್ತವ್ಯವೇ ದೇವರು ಎಂಬ ಸತ್ಯವನ್ನು ತಿಳಿಸಿದವರವರು. ಜೀವನ ಪ್ರೀತಿ, ವರ್ತಮಾನದಲ್ಲಿದ್ದು ಬದುಕುವುದು, ಎಲ್ಲರನ್ನೂ ಸಮಾನವಾಗಿ ನಡೆಸಿಕೊಳ್ಳುವುದು...ಇದೆಲ್ಲಾ ಅಪ್ಪನಿಂದ ನಾನು ಕಲಿತ ಪಾಠ. ಅವರು ನಮ್ಮಲ್ಲಿ ಯಾವುದೇ ನಿರೀಕ್ಷೆ ಗಳನ್ನು ಇಟ್ಟುಕೊಳ್ಳದೆ ನಮಗೆ ನಮ್ಮಲ್ಲಿರುವ ಶಕ್ತಿ, ಸಾಮರ್ಥ್ಯವನ್ನು ಅರಿತುಕೊಂಡು ಅದನ್ನು ಬಲಗೊಳಿಸಿಕೊಳ್ಳುವ ಬಗ್ಗೆ ತಿಳಿಸಿದವರವರು. ಹೀಗಾಗಿ ಮನೆಯಲ್ಲಿ ಯಾವುದೇ ಅಸಹಜ ಒತ್ತಡವಿಲ್ಲದೆ ಓದುವ ಭಾಗ್ಯ ನಮಗೆ ಸಿಕ್ಕಿತ್ತು. ಇಷ್ಟೇ ಅಲ್ಲ, ನಮ್ಮ ಯಶಸ್ಸನ್ನು ಹಾಗೂ ಸೋಲನ್ನು ಸಮಾನವಾಗಿ ಸ್ವೀಕರಿಸಿ ನೋಡಿದವರು ನನ್ನಪ್ಪ. ಆರಕ್ಕೆ ಏರದೆ ಮೂರಕ್ಕೆ ಕುಗ್ಗದೆ ಬದುಕನ್ನು ಸಮತೋಲಿತವಾಗಿ ಸಾಗಿಸುವ ಪಾಠ ಕಲಿಸಿದವರು ನನ್ನಪ್ಪ. ಸರಳ ಬದುಕಿನ ಅನುಸರಣೆಯ ಪಾಠವನ್ನು ತಿಳಿಸಿಕೊಟ್ಟವರು ನನ್ನಪ್ಪ. ಯಾವುದನ್ನೇ ಆಗಲಿ ಹಿತಮಿತವಾಗಿ ಬಳಸುವುದು, ಅನಗತ್ಯ ದುರ್ಬಳಕೆ ಮಾಡದಿರುವುದು ನನ್ನಪ್ಪನ ಪಾಲಕತ್ವದ ಪಾಠ.
ನನ್ನಪ್ಪ ಒಳ್ಳೆಯ ಓದುಗಾರರಾಗಿದ್ದರು. ಹೀಗಾಗಿ ನಮಗೆಲ್ಲ ಓದುವ ಹವ್ಯಾಸ ಬೆಳೆಸಿಕೊಳ್ಳಲು ಅನುಕೂಲವಾಯಿತು. ಅವರ ಓದಿನ ಅರಿವು ಬರಿಯ ಪುಸ್ತಕದ ಬದನೆಕಾಯಿಯಾಗಿ ಉಳಿಯದೆ ಅವರ ಬದುಕಿನ ಪುಸ್ತಕದ ಪುಟಗಳಲ್ಲಿ ಛಾಯಾಪ್ರತಿಯಾದದ್ದು ನಿಜ. ಅವರ ಜೀವನಾನುಭವ ಹಾಗೂ ಓದಿನ ಜ್ಞಾನಾನುಭವ ಅವರನ್ನು ಸರ್ವರಿಂದ ವಿಭಿನ್ನವಾಗಿ ರೂಪಿಸಿದ್ದು ಅಕ್ಷರಶಃ ಸತ್ಯ. ಅವರು ತಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಂಡದ್ದಲ್ಲದೆ ತಮ್ಮೊಡನಿರುವವರ ಬದುಕು ಹಸನಾಗಿಸಲು ಬೆಂಬಲ ಕೊಟ್ಟವರು.
ಸಹಜವಾಗಿ ಬದುಕಲು ಹೇಳಿಕೊಟ್ಟವರು ಹಾಗೆಯೇ ಬದುಕಿ ತೋರಿಸಿದವರು ನನ್ನಪ್ಪ. ಈ ಸಹಜತೆ ಎನ್ನುವುದು ಬದುಕನ್ನು ಕಗ್ಗಂಟಾಗಿಸದೆ ಸುಗಮವಾಗಿ ಸಾಗುವಂತೆ ಮಾಡುತ್ತದೆ ಎನ್ನುವ ಸತ್ಯ ದರ್ಶನವನ್ನು ಮಾಡಿಸಿದವರು ನನ್ನಪ್ಪ. ಬದುಕಿನ ಜಟಿಲತೆ ನಮ್ಮ ಸ್ವಯಂ ಸೃಷ್ಟಿ ಎನ್ನುವುದನ್ನು ತಿಳಿಯ ಪಡಿಸಿದವರು ನನ್ನಪ್ಪ.
ಒಂದು ರೀತಿಯಲ್ಲಿ ನನಗರಿವಿಲ್ಲದೆ ಬದುಕಿನ ಒಂದೊಂದೇ ಪಾಠಗಳನ್ನು ಮನವರಿಕೆ ಮಾಡಿಕೊಟ್ಟವರು ನನ್ನಪ್ಪ. ಆಗ ಅರ್ಥವಾಗಿರದಿದ್ದ ಅವರ ಮಾತುಗಳು ಈಗ ಜೀವನಾನುಭವದಿಂದಾಗಿ ಸಂಪೂರ್ಣ ಅರಿವಿಗೆ ಬಂದು ನನ್ನಲ್ಲಿ ಚಿಂತನಾ ಪಕ್ವತೆ ಬಂದಿರುವುದು ನನ್ನಪ್ಪ ನನಗೆ ಒದಗಿಸಿದ ಗುರು ತತ್ವದಿಂದ ಎನ್ನುವುದು ಎಲ್ಲರೂ ಒಪ್ಪುವ ವಿಷಯ ತಾನೆ?!

ಶೋಭಾ ಸೋಮಯಾಜಿ
ಸೆಪ್ಟಂಬರ 3, 2021

ಪ್ರತಿಕ್ರಿಯೆಗಳು:

ಜಯರಾಮ ಸೋಮಯಾಜಿ:
ಶೋಭಾಳ ಅಪ್ಪ ನನ್ನ ಅಣ್ಣಯ್ಯ. ನನ್ನಿಂದ ಸುಮಾರು 20 ವರ್ಷ ದೊಡ್ಡವರು. ಅವರು ನನ್ನ ಮಾರ್ಗದರ್ಶಕರೂ, ಹಿತಚಿಂತಕರೂ ಆಗಿದ್ದರು.
ನಳಿನಿ ಸೋಮಯಾಜಿ:
ನನಗೂ ಜೀವನ ಮಾರ್ಗದರ್ಶಕರಾಗಿದ್ದು ನಿನ್ನಪ್ನ.. ಒಂದು ರೀತಿಯ ಧನ್ಯತಾಭಾವ. (ನನ್ನ ಬಾವ).
ಅಪ್ಪನ ಬರಹ ಮನ ಮುಟ್ಟು ವಂತಿದೆ ಶೋಭಾ..
ತಿರುಮಲ ರಾವ್:
ಮನಮುಟ್ಟುವ ಸುಂದರ ಬರಹ.
ಎಷ್ಟು ಸಹಜ ಆಲೋಚನಾ ಲಹರಿ.ಎಲ್ಲ ಮಕ್ಕಳ ಬಗ್ಗೆ ಸಂಕಷ್ಟದಲ್ಲಿ ತಂದೆ ಮುಂದೆ ವಕಾಲತ್ತು ವಹಿಸುವವಳೇ ತಾಯಿ
ಮಾನ್ಯುಯಲ್ ಕಾಂತರಾಜ್:
ಅಪ್ಪನ ಬಗ್ಗೆ ಬರೆದ ಬರಹ ತುಂಬಾ ಸುಂದರವಾಗಿ ಮನಸಿಗೆ ಮುದ ನೀಡುವಂತಿತ್ತು . ಶಿಕ್ಷಕರ ದಿನದ 
ಶುಭಾಶಯಗಳು
 ಮೇಡಂ
ಮಾಲತಿ ಹಂದೆ:
ಚಂದದ ಬರಹ.... ಶಿಕ್ಷಕರ ದಿನದ 
ಶುಭಾಶಯಗಳು
.. ಶೋಭ....💐💐💐💐

ಅಶ್ವಿನ್ ಕುಮಾರ್ ನೆತ್ರಬೈಲ್ 
Very straightforward yet so simple genuine kind soul he was 🙏

ಪ್ರಶಾಂತ್ ಕುಮಾರ್::
My Doddappa .... The energy Power house... Always carried the Positive Attitude.... And was able to induce positivity among others....
I still remember going to a movie with him ...Pushpaka Vimana
I was just around 15 years old... and he used to never treat us like kids... With lot of laughter when he is auound... My mother always keeps remembering him..

ಎಚ್. ನಾರಾಯಣ ಶೆಣೈ :
ಚೆನ್ನಾಗಿ ಬರೆದಿದ್ದಿ ಶೋಭಾ, ಓದಿ ಖುಷಿ ಆಯಿತು. ನನಗೂ ಹಳೇ ನೆನಪು ಗಳು ಮರುಕಳಿಸಿದವು.

ನಾಗರಾಜ್ ಐತಾಳ್:
We fondly call him "Gudu gudu Mava". He has helped our family immensely to take shape. Great Personality. Effervescent and Adamya Jeevana Preeti ullavaru. He is always alive and kicking in my Heart. I bow my head to this Great Soul.
Very well written Shobha. You have inherited his Positive attitude towards Life. God Bless.🙏🙏


ಉಷಾ ಸುರೇಶ್:
Neenu Sundari, ninna Appa, nanna Chikkappa was my friend.

ಅಭಿಲಾಷ ಹಂದೆ:
ಚಂದದ ಆಪ್ತ ಬರೆಹ.

ಜನಾರ್ಧನ ಹಂದೆ:
ಚೆನ್ನಾಗಿದೆ..ಸ ಚಿತ್ರ

ಶ್ರೀರಾಮ್ ಶಿವಮೊಗ್ಗ:
Yes....he was....Listening to him is no way short of hearing an orator..The accuracy of the words he was using at every point was amazingly worth pondering...He used to come & sit at our home sometimes for want of key of your house...In a way, he is my Guru too...Pranaams to him..

No comments:

Post a Comment