Monday, June 6, 2022

SHIVARAMA KARANTHA VEDIKE - DR SHAREEFA

 ಭಾನುವಾರ, ಮೇ 29, 2022 

ತರಳ ಬಾಳು ಕೇಂದ್ರ, ಅರ್. ಟಿ ನಗರ, ಬೆಂಗಳೂರು 

ಶಿವರಾಮ ಕಾರಂತ ವೇದಿಕೆಯ ಮೇ ತಿಂಗಳ ಕಾರ್ಯಕ್ರಮಕ್ಕೆ ಡಾ ಕೆ ಶರೀಫಾ ಅವರನ್ನು ಉಪನ್ಯಾಸ ನೀಡಲು ಆಹ್ವಾನಿಸಲಾಗಿತ್ತು.


ಅವರು "ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ" ಎಂಬ ವಿಷಯದ ಬಗ್ಗೆ ಸುಮಾರು ಒಂದು ಗಂಟೆಯ ಕಾಲ, ಅವರ ಅನಿಸಿಕೆಗಳು, ಪ್ರಸ್ತುತ ವಿದ್ಯಮಾನ, ಮಹಿಳೆಯರ ಸಂವೇದನೆ ಇತ್ತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು.

ಡಾ ಷರೀಫಾ 

ಸತ್ಯಭಾಮ 

ಶ್ರೀಮತಿ ಶಶಿಕಲಾ ಅವರು ಸವಿಸ್ತಾರವಾಗಿ ಅವರ ಉಪನ್ಯಾಸದ ವಿಷಯವನ್ನು ಬರೆದಿರುವರು.

ಮೇ ತಿಂಗಳ  ಸಾಹಿತ್ಯ ಕಾರ್ಯಕ್ರಮ ದಿನಾಂಕ 29.05.2022.ರ ಸಂಜೆ 4 ಗಂಟೆ ಯಿಂದ ಜರುಗಿತು.

ಆತ್ಮೀಯರೆ,

ಶ್ರದ್ಧಾಂಜಲಿ - ಡಾ ಸೀತಾರಾಮ್ 

ನಮ್ಮ ವೇದಿಕೆಯ ಹಿರಿಯ ಸದಸ್ಯರಾಗಿದ್ದ, ಕ್ರಿಯಾಶೀಲ ಮಾರ್ಗದರ್ಶಕರು ಆಗಿದ್ದ ಶ್ರೀ ಸೀತಾರಾಮ ಭಟ್ ಸರ್  ರವರು  ಅಂದಿಗೆ ಮೂರು ದಿನಗಳ ಹಿಂದೆ ಅಗಲಿದ ನೋವು ವೇದಿಕೆಯನ್ನು ಬಾಧಿಸುತ್ತಿತ್ತು. ವೇದಿಕೆ ಒಂದು ನಿಮಿಷ ಮೌನಾಚರಣೆಯ ಗೌರವ ಶಾಂತಿ ಸಲ್ಲಿಸಿತು.


ಶಶಿಕಲಾ 

ಇಂದಿರಾ ಶರಣ್ 

ಎಂದಿನಂತೆ ವೇದಿಕೆಯ ಸಂಸ್ಥಾಪಕರು, ಪ್ರಸ್ತುತ ಕಾರ್ಯಧ್ಯಕ್ಷರಾದ ಶ್ರೀ ಪಾ. ಚಂದ್ರಶೇಖರ ಚಡಗ ರವರ   ಮಾರ್ಗದರ್ಶನದಲ್ಲಿ ಕಾರಣಾಂತರಗಳಿಂದ ಅವರ ಅನುಪಸ್ಥಿತಿಯಲ್ಲಿ , ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ದೀಪಾ ಪಡ್ಕೆಯವರು ಸಹ ಅಂದು ಮತ್ತೊಂದು ಕಡೆ ಹೋಗಲೇಬೇಕಾದ ಅನಿವಾರ್ಯ ಸಂದರ್ಭದಲ್ಲಿ ಅವರ ವೇದಿಕೆಯ ಹಿರಿಯರು ಶ್ರೀಮತಿ ಸತ್ಯಭಾಮಾ ರವರು ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವೇದಿಕೆಯ ಸದಸ್ಯರುಗಳಾದ ಶ್ರೀಮತಿ ಮಂಜುಳಾ ಭಾರ್ಗವಿಯವರಿಂದ ಪ್ರಾರ್ಥನೆ.

ಸ್ವಾಗತ, ಪ್ರಾಸ್ತಾವಿಕ, ನಿರೂಪಣೆ  ಜವಾಬ್ದಾರಿ ಶ್ರೀಮತಿ ಇಂದಿರಾ ಶರಣ್ ರವರಿಂದ

ವಂದನಾರ್ಪಣೆ ಶಶಿಕಲಾ ರವರಿಂದ ನಡೆಯಿತು.

 ಅತಿಥಿಗಳು : ಡಾ. ಕೆ. ಷರೀಫಾ 

ವಿಷಯ:"ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ" -  ಬಗ್ಗೆ ಉಪನ್ಯಾಸ 

ವೇದಿಕೆಯಲ್ಲಿ ನಿರೂಪಕರು ಅತಿಥಿಗಳ ಬದುಕು ಮತ್ತು ಸಾಹಿತ್ಯದ ಬಗ್ಗೆಯ ವಿಶೇಷತೆಗಳನ್ನು ಹಂಚಿಕೊಂಡರು.


ಸಮುದಾಯದ ಶೋಷಣೆಗಳ ಬಗ್ಗೆ ಬರೆದಿರುವವರು ಬಹಳ ಕಡಿಮೆ. ಆ ದೃಷ್ಟಿಯಲ್ಲಿ ಡಾ. ಷರೀಫಾ ಮೇಡಂ ರವರ ಹೆಸರು ಮುಖ್ಯವಾಗಿ ಕಣ್ಣ ಮುಂದೆ ಬರುತ್ತದೆ. ಈ ವಿಷಯವಾಗಿ ಅವರನ್ನು ಮೆಚ್ಚಲೇಬೇಕು‌. ಇದಕ್ಕೆ ಬಹಳ ಧೈರ್ಯ ಬೇಕಾಗುತ್ತದೆ.1957 ರಲ್ಲಿ ಗುಲ್ಬರ್ಗಾದಲ್ಲಿ ಹುಟ್ಟಿದ ಇವರ ಪ್ರಾಥಮಿಕ, ಮಾಧ್ಯಮಿಕ, ಪದವಿ ಶಿಕ್ಷಣ ಅಲ್ಲಿಯೇ ನಡೆಯಿತು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದಿದ್ದಾರೆ. ಮುಸ್ಲಿಂ ಮಹಿಳಾ ಸಂವೇದನೆಯ ವಿಷಯವಾಗಿ ಪ್ರೌಢ ಸಂಶೋಧನೆ ಮಾಡಿರುವ ಇವರು ಅನೇಕ ಕವನ ಸಂಕಲನಗಳನ್ನು ಹೊರತಂದಿದ್ದಾರೆ, ವಿಮರ್ಶಾ ಕೃತಿಗಳನ್ನು ಸಂಪಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಳಗೊಂಡಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾದವರು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೊಟ್ಟ ಮೊದಲ ಮುಸ್ಲಿಂ ಸಮಾಜದ ಮಹಿಳೆ ಎಂಬ ಪಾತ್ರಕ್ಕೆ ಭಾಜನರಾಗಿದ್ದಾರೆ. ಬಂಡಾಯ ಸಾಹಿತ್ಯ ಚಳುವಳಿಯಲ್ಲಿ ರಾಜ್ಯ ಸಂಚಾಲಕಿಯಾಗಿ ರಾಜ್ಯ, ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟದವರೆಗೂ ಕೆಲಸ ಮಾಡಿದ್ದಾರೆ. 

 ಉಪನ್ಯಾಸ  ಅನಾವರಣ ಡಾ. ಕೆ ಷರೀಫಾ ಮೇಡಂ ರವರಿಂದ

ಅವರು ಮಾತು ಆರಂಭಿಸುತ್ತಾ

ಇವತ್ತು ಚಡಗರವರ ಶಿವರಾಮ ಕಾರಂತ ವೇದಿಕೆ ನನಗೆ ಈ ವೇದಿಕೆಯಲ್ಲಿ ಅತಿಥಿಯಾಗಿ ಅಹ್ವಾನಿಸಿ ಮಾತನಾಡುವ ಅವಕಾಶ ಕೊಟ್ಟಿದ್ದಾರೆ.  ನನಗೆ  ಕೊಟ್ಟಿರುವ ವಿಷಯ "ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ"  ಎನ್ನುತ್ತಾ,  ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ ಹೇಗೆ ದಾಖಲಾದವು! ಭಾರತಕ್ಕೆ ಮುಸ್ಲಿಮರ ಪ್ರವೇಶ. ಸೂಫಿಗಳ, ಸಂತರ ಅಧ್ಯಾತ್ಮಿಕತೆ ಹೇಗೆ ಕನ್ನಡ  ಸಾಹಿತ್ಯವನ್ನು ತಲುಪಿದ್ದು, ಕನ್ನಡದಲ್ಲಿ ಬರೆಯಲು ಶುರುಮಾಡಿದ್ದು ಯಾವಾಗ? ಎನ್ನುವ ಪ್ರಶ್ನೆಗಳ ಮುಂದಿಡುತ್ತಾ

ಸಾಹಿತ್ಯ ಚಲನಶೀಲವಾದದ್ದು, ಚಳುವಳಿಗಳ ಮೂಲಕ ಸಾಹಿತ್ಯ, ಸಾಹಿತ್ಯದಲ್ಲಿಯೇ ರಾಜಾಶ್ರಯ ಪಡೆದು , ರಾಜರ ಆಶ್ರಯದಲ್ಲಿ ಅವರ ಹೊಗಳಿ ಅಟ್ಟಕ್ಕೇರಿಸಿ ಬರೆದಂತಹ ಸಾಹಿತ್ಯ, ಹಿಂದುಳಿದ, ಅಲ್ಪಸಂಖ್ಯಾತ ಹೀಗೆ ಅನೇಕ  ಸಾಹಿತ್ಯ ಸಂವೇದನೆಗಳು ಸೇರಿಕೊಂಡು ಕನ್ನಡ ಸಾಹಿತ್ಯಕ್ಕೆ ವಿಶಾಲವಾದ ಆಯಾಮ ಕೊಟ್ಟಿದ್ದಾರೆ. 1945 ರಲ್ಲಿ ಮುಸ್ಲಿಂ ಮಹಿಳೆಯೊಬ್ಬರ ಸಾಹಿತ್ಯ ಬರಹ ಸಣ್ಣದಾಗಿ ದಾಖಲಾಗಿದೆ. ಅದು ಬಿಟ್ಟರೆ ಮುಸ್ಲಿಂ ಮಹಿಳೆಯರು ಬರೆಯಲು ಶುರು ಮಾಡಿ ಮೊಟ್ಟ ಮೊದಲ ಕಾದಂಬರಿ ಬಂದದ್ದು ಸಾರಾ ಅಬೂಬಕರ್  ರವರದು, ಅದು 1884 ರಲ್ಲಿ "ಚಂದ್ರಗಿರಿಯ ತೀರದಲ್ಲಿ", ಮುಸ್ಲಿಂ ಮೊದಲ ಕವಯತ್ರಿ ಷರೀಫಾ, ಮೊದಲ ಕಥೆಗಾರ್ತಿ ಮಮ್ತಾಜ್ ಬೇಗಂ.

ನನ್ನ ಬರವಣಿಗೆಯನ್ನು ನಾನು ಮುಸ್ಲಿಂ ಸಂವೇದನೆ ಅಂತ ಶುರು ಮಾಡಲಿಲ್ಲ.  ನಾನು ಕಂಡಿದ್ದನ್ನು ಬರೀತಾ ಹೋದೆ ಅಷ್ಟೆ. ಕನ್ನಡದಲ್ಲಿ ಮೊದಲ ಮಹಿಳಾ ಕಾದಂಬರಿ ಶಾಂತಾಬಾಯಿ ಎನ್ನುವವರು 1908 ರಲ್ಲಿ ಬರೆದಿದ್ದಾರೆ. ನಾನು ಕಂಡಿದ್ದನ್ನು ಅನುಭವಿಸಿದ್ದನ್ನು ಬರೆಯಬೇಕಾದರೆ ಜಾತಿ, ಧರ್ಮ, ಜನಾಂಗದ ಚೌಕಟ್ಟು ನನಗೆ ಬೇಕಾಗಿರಲಿಲ್ಲ. ನಾನು ಅನುಭವಿಸಿದ್ದನ್ನು ಬರೆದೆ. ಬಿಡುಗಡೆಯಾಗಿ ಹೊರಬಂದಾಗ ಅದೊಂದು ಚೌಕಟ್ಟು ಪಡೆದುಕೊಳ್ತಾ ಬಂತು.  ಇಂತಹದೇ ಧರ್ಮ ಅಂತ ಅಳತೆ ಮಾಡಿಕೊಂಡು ಹುಟ್ಟುವಂತಹ ಆಯ್ಕೆ ನಮಗಿಲ್ಲ. ಧರ್ಮದ ಚೌಕಟ್ಟು ಈ ಸಮಾಜ ನಿರ್ಮಿಸಿದೆ. ಎಂತಹವುದೇ ಧರ್ಮವಿರಲಿ ಅದರ ಸಾಂಸ್ಕೃತಿಕ ಧಾರ್ಮಿಕ ವಿಭಿನ್ನತೆಗಳಿವೆಯಲ್ಲಾ, ಆ ಭಿನ್ನತೆಗಳು ನಮ್ಮ ಬಹುತ್ವದ ಸಂಸ್ಕೃತಿಯನ್ನು ಪಡೆದುಕೊಳ್ಳುವಲ್ಲಿ ಇರುವಂತಹ ಅದ್ಭುತವಾದ ‌ಸಂಸ್ಕೃತಿಗೆ ಮುಸ್ಲಿಂ ಲೇಖಕರು ಬಹಳ ಬಹಳ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ವಿಶಿಷ್ಟವಾಗಿ ಬರೆದು ವಿಶಾಲವಾಗಿ ನೋಡುವಂತಹ ದೃಷ್ಟಿಕೋನಗಳು ಮುಂದಿನ ಚರಿತ್ರಕಾರರಿಗೂ ಉಪಯುಕ್ತವಾಗಿವೆ.

1971 ರಲ್ಲಿ ನಾನು ಗುಲ್ಬರ್ಗಾದಲ್ಲಿ ಬಂಡಾಯ ಸಂಚಾಲಕಿಯಾಗಿದ್ದೆ. ನಾವು ಮೂರು ನಾಲ್ಕು ಜನ ಮಹಿಳೆಯರು 15 ಪೈಸೆ ಪೋಸ್ಟ್ ಕಾರ್ಡ್ ನಲ್ಲಿ  ವಿಷಯ ಹಂಚಿಕೊಳ್ಳುತ್ತಿದ್ದುದ್ದರ ನೆನೆಯುತ್ತಾ ಸಾಮಾಜಿಕ ಸಾಂಸ್ಕೃತಿಕ ಒಂದು ಪ್ರಭಾವ ಹೇಗೆ ಸಾಹಿತ್ಯದ ಮೇಲೆ ಆಗುತ್ತದೆ ಅನ್ನುವ ಅಂಶ ಒತ್ತಿ ತಿಳಿಸಿದರು.  ಮತ್ತೊಂದು ಘಟನೆ ನಜ್ಮಾ ಎನ್ನುವವರು ಶಿಕ್ಷಕಿಯಾಗಿ ಕೆಲಸ ಮಾಡ್ತಾ ಇದ್ದರು. ಕುದಾಗವಾ ಸಿನಿಮಾ ಬಂದ ಸನ್ನಿವೇಶ. ಆ ಸಮಯದಲ್ಲಿ ಕುದಾಗವ ಚಲನಚಿತ್ರ ರಿಲೀಜ್ ಆಗಿತ್ತು. ಅದೇ ಸಮಯದಲ್ಲಿ ಸಮೂದಾಯದ ಒಂದಿಬ್ಬರು (ಪ್ರೀತಿ)  ಮಾಡಿ ಮನೆಬಿಟ್ಟು ಓಡಿಹೋಗಿದ್ದರು. ಆಗ ಅಲ್ಲಿಯ ಸಮುದಾಯದ ಹುಡುಗರು ಸೇರಿಕೊಂಡು ಮುಸ್ಲಿಂ ಮಹಿಳೆಯರಿಗೆ ಆ ಸಿನಿಮಾ  ನೋಡುವ ಹಕ್ಕಿಲ್ಲ ಅಂದರು.  ಕರೆಂಟ್ ಕಟ್ ಮಾಡಿದರು, ನೀರು ಕಟ್ ಮಾಡಿದರು. ಸಿನಿಮಾ  ನೋಡೋಕೆ ಬಂದರೆ ಮಚ್ ಹಿಡಿದು ಕೊಂದಾಕ್ತೇವೆ ಅಂದರು. ನಾವು ಪೋಲೀಷ್ ಸ್ಟೇಷನ್ ಗೆ ಹೋದರೆ, ಅವರನ್ನ ಅಲ್ಲಿಂದ ಹೊರಗೆ ಕಳುಹಿಸಿ. ಇಲ್ಲಾಂದ್ರೆ ಪೋಲಿಸ್ ಸ್ಟೇಶನ್ ಗೆ ಬೆಂಕಿ ಹಚ್ತೇವೆ ಅಂದರು. ಸಿನಿಮಾ ನೋಡೋದು ಬಿಡೋದು ನಮ್ಮ ಹಕ್ಕು. ಸಿನಿಮಾ ಮಹಿಳೆ ನೋಡಬಾರದು, ಆದರೆ ಪುರುಷ ನೋಡಬಹುದು. ಧರ್ಮದ ಹೆಸರಿನಲ್ಲಿ ಇಂತಹ ಲಿಂಗ ತಾರತಮ್ಯದ ಸತ್ಯ ಘಟನೆಯನ್ನು ಮನಮುಟ್ಟುವಂತೆ ಬಿಚ್ಚಿಟ್ಟರು. ಪುರುಷ ಸಿನಿಮಾ ನೋಡಬಹುದು, ಅಭ್ಯಂತರವಿಲ್ಲ. ಒಂದು ಸಮಾಜಕ್ಕೆ ಹೇಗೆ ಇದು ಹಕ್ಕು, ಇನ್ನೊಂದು ಸಮಾಜಕ್ಕೂ ಹಾಗೇ ಇರಬೇಕು ತಾನೆ? ಆದರೆ ಹೀಗೆಯೇ ಇರಬೇಕು, ಅಲ್ಲಿ ಹೋಗಬಾರದು, ಇಲ್ಲಿ ಹೋಗಬಾರದು. ಸಿನಿಮಾ ಗೆ ಹೋಗಬಾರದು. ಧರ್ಮದ ಹೆಸರಿನಲ್ಲಿ ಮುಸ್ಲಿಂ ಸಮುದಾಯದ ಮಹಿಳೆ ಸಿನಿಮಾ ನೋಡಲು ಬಂದರೆ ಮಚ್ಚು ಹಿಡಿದು ಕೊಚ್ಚಿ ಹಾಕುವುದು ಹೆದರಿಸುವುದು ತಡೆಯುವುದು ಯಾಕೆ? ಸಿನಿಮಾ ನೋಡುವುದು ಬಿಡುವುದು ನಮ್ಮ ಹಕ್ಕು. ಇದರ ಬಗ್ಗೆ ಸಾರಾ ಅಬೂಬಕರ್ ಹೀಗೆ ಬರೆದಿದ್ದಾರೆ "ಸಿನಿಮಾ ನೋಡೋಕೆ ರಾತ್ರಿ ಆಗಿತ್ತು, ಕರೆದುಕೊಂಡು ಹೋಗ್ತಾನೆ ಗಂಡ. ಅದೂ ಬುರ್ಕಾ ಹಾಕಿ. ಆಷ್ಟು ಕತ್ತಲೆಯ ರಾತ್ರಿಯಲ್ಲಿ ಯಾಕೆ ಕರೆದುಕೊಂಡು ಹೋದೆ, ಅದು ಹೇಗೆ ಕರೆದುಕೊಂಡು ಹೋದೆ ನೀನು. ಚಪ್ಪಲಿಗಳು ಎಲ್ಲಿ ಇಡಬೇಕೋ ಅಲ್ಲೇ ಇಡಬೇಕು". ಬಂಡಾಯದ ಮಾತುಗಳನ್ನು ಅನೇಕ ಲೇಖಕಿಯರು ಹೀಗೆ ಚಂದ ಬರೆದಿದ್ದಾರೆ ಅಂದರು.

ನಿಸಾರ್ ಅಹಮದ್ ರಂತಹವರು ಎರಡು ಸಂಸ್ಕೃತಿ ಗಳ ಮಧ್ಯೆ ನಿಂತು ಸಮಾಜ ಕಟ್ಟುವ ಕೆಲಸ ಇದೆಯಲ್ಲ, ಅದು ಬಹಳ ಕಷ್ಟ ಕರವಾದದ್ದು. ಅದನ್ನು ಮಾಡಿದರು.  ಹೆಂಡ್ತಿನಾ ಹೊರಗಡೆ ಕರೆದುಕೊಂಡು ಹೋಗಬೇಕು, ಚೆನ್ನಾಗಿ ಮೇಕಫ್ ಮಾಡಿಕೊಂಡು ಹೆಂಡತಿ ಬರ್ತಾಳೆ, ಬಂದೆ ಅಂತ ಮತ್ತೆ ಒಳಗೆ ಹೋಗಿ ಬುರ್ಕಾಹಾಕಿಕೊಂಡು ಬಂದಾಗ ಅವರು ಸುಸ್ತಾಗಿ ಬಿಡುತ್ತಾರೆ. ಇಂತಹ ಬಿಕ್ಕಟ್ಟನ್ನು ಅವರು ತಮ್ಮ ಕಾವ್ಯದಲ್ಲಿ ಹೇಳಿರುವುದನ್ನು ಮಾತನಾಡಿದರು. ಹೀಗೆ ಕನ್ನಡದ ಬಹುತೇಕ ಎಲ್ಲಾ ಕವಿಗಳು ಆಯಾ ಕಾಲಘಟ್ಟದಲ್ಲಿ ಎದುರಿಸಿದ ಸಾಂಸ್ಕೃತಿಕ ಭಿನ್ನತೆಗಳು, ಏಕತೆಯ ಬಿಕ್ಕಟ್ಟುಗಳ ಬಗ್ಗೆ ಮಾತನಾಡುತ್ತ ಸಾರಾ ಅಬೂಬಕರ್  ರ "ಚಂದ್ರಗಿರಿಯ ತೀರದಲ್ಲಿ"  ಕಾದಂಬರಿಯಲ್ಲಿ ಒಬ್ಬ ವಿದ್ಯಾವಂತ ಗಂಡ ಒಂದೇ ಬಾರಿಗೆ 3 ಬಾರಿ ತಲ್ಲಾಕ್ ಕೊಟ್ತಾನೆ, ಅವಳು ತವರು ಸೇರ್ತಾಳೆ.  8-10  ವರ್ಷ ದೂರವಿದ್ದು, ಒಂದೇ ಬಾರಿಗೆ 3 ಬಾರಿ ತಲ್ಲಾಕ್ ಕೊಡುವುದು, ಅದು ನಿಲ್ಲಲ್ಲ, ತಪ್ಪಾಗಿದೆ ಅಂತ ಆಫೀಸರ್ ಹಾಗಿದ್ದ ಗಂಡ ಮತ್ತೆ ಹೆಂಡತಿಯನ್ನು ಕರೆಸಿಕೊಂಡ ಸತ್ಯ ಘಟನೆ ನೆನೆಯುತ್ತ ಧಾರ್ಮಿಕ ಸಂಹಿತೆ ಗಳು, ಕಾನೂನು ತಡೆಯಾಜ್ಞೆ ಇತ್ಯಾದಿ ಮನುಷ್ಯನ ಅನುಕೂಲಕ್ಕಾಗಿ ಹುಟ್ಟಿದವು. ರಾಜಕೀಯ, ಧಾರ್ಮಿಕ ನಡೆಗಳ ಮಧ್ಯೆ ಮಹಿಳೆ ನರಳುತ್ತಿದ್ದಾಳೆ‌.  ಹೀಗೆ ಮುಸ್ಲಿಂರ ಬದುಕಿನ ವಿಶಿಷ್ಟ ಸಾಂಸ್ಕೃತಿಕ ಲೋಕ ಅನಾವರಣ ಮಾಡಿದವರು ಸಾರಾ ಅಬೂಬಕರ್ . ಕನ್ನಡ ಸಾಹಿತ್ಯದಲ್ಲಿ ಅನೇಕ ಮುಸ್ಲಿಂ ಸಂವೇದನೆ ಗಳು ದಾಖಲಾಗಬೇಕಾದ ಅವಶ್ಯಕತೆ ಬಗ್ಗೆ ಮಾತನಾಡಿದರು. ಧರ್ಮದ ಅಡಿಯಲ್ಲಿ ಅಧರ್ಮವನ್ನು ಪ್ರಶ್ನೆ ಮಾಡುವ ಕಸುವು. ಅದಕ್ಕೆ ಒಂದು ಜನಾಂಗದ (ಅದು ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು) ಒಟ್ಟು ಸಂವೇದನೆ ಚಳುವಳಿಗಳ ಮೂಲಕ ವಿಸ್ತಾರ ನೀಡುತ್ತದೆ.

ಮುಸ್ಲಿಂ ಸಾಹಿತಿಗಳು ಧರ್ಮದ ಒಳಗಿರುವ ಅಧರ್ಮವನ್ನು ಪ್ರಶ್ನೆ ಮಾಡುತ್ತಲೇ ಅವರು ಹೊರಗಿನ ಅನ್ಯಾಯವನ್ನು ಪ್ರತಿಭಟಿಸುವಂತಹ ಕೆಲಸವನ್ನು ಕೂಡ ಮಾಡಿದರು. ಆ ಕಾರಣಕ್ಕೆ ನಮಗೆಲ್ಲಾ ಒಂದು ಅಪಾದನೆ ಬರ್ತಾ ಇತ್ತು. ಅದೇನೆಂದರೆ ನೀವು ನಮ್ಮ ಧರ್ಮವನ್ನು ಅವಮಾನ ಮಾಡ್ತಾ ಇದ್ದೀರಾ, ನೀವು ನಿಮ್ಮದೇ ಯಾಕೆ ಬರೆಯುತ್ತೀರಾ? ನೀವು ಧರ್ಮದ ಪಕ್ಷಪಾತಿಗಳು. ಹೀಗೆ ನಮ್ಮಂತಹ ಬರಹಗಾರರ ಬದುಕು ತಂತಿಯ ಮೇಲಿನ ನಡುಗೆಯಾಗಿತ್ತು

ಹಿಜಾಬ್ ಹಾಕಿಕೊಂಡು ಬಂದರೆ ಅವರಿಗೆ ಬೇಜಾರು, ತೆಗೆದಿಟ್ಟು ಬಂದರೆ ಇವರಿಗೆ ಬೇಜಾರು. ಇವುಗಳ ಮಧ್ಯೆ ಯಾವ ರೀತಿ ಅವಳು ನಡೆದುಕೊಳ್ಳಬೇಕು? ಪ್ರಶ್ನೆ ಮಾರ್ಮಿಕವಾಗಿತ್ತು. ಮಾನವ ಪರವಾದ ಮೌಲ್ಯಗಳನ್ನು ಬರಹಗಾರ ಎತ್ತಿಹಿಡಿಯುತ್ತಾನೆ. ಅದನ್ನು ನಾನು ಸಹ ಬಯಸುತ್ತೇನೆ. ಇಂತಹ ಅನೇಕ ಹೋರಾಟಗಳನ್ನು ಮಾಡಿಕೊಂಡು ಬರ್ತಾ ಇರುವುದರ ಬಗ್ಗೆ ಮಾತನಾಡುತ್ತಾ ಪಿ. ರಾಜಶೇಖರ್ ರವರು ಬರೆದಿರುವ "ಈ ನಾಡಿನಲ್ಲಿ ಮುಸ್ಲಿಂ ರನ್ನು ಪಾಪ, ಕ್ರೌರ್ಯ, ದ್ರೋಹಗಳ ಸಂಕೇತಗಳನ್ನಾಗಿ ಪರಿವರ್ತಿಸುವ ಜನತೆಯ ವಿರುದ್ಧ ದಂಗೆ ಎದ್ದಿದ್ದಾನೆ. ಮುಸ್ಲಿಂ ರ ಸಾಮಾಜಿಕ, ಆರ್ಥಿಕ ಹಿಂದುಳುವಿಕೆಯನ್ನು ಇವರು ತಮ್ಮ ಬರಹಗಳಲ್ಲಿ ಎತ್ತಿ ತೋರಿಸುತ್ತಿದ್ದಾರೆ. ಮುಸ್ಲಿಂ ರನ್ನು ಪಾಕಿಸ್ತಾನಿ ಏಜೆಂಟರೆಂದು, ಹಿಂದೂ ದೇವಾಲಯಗಳನ್ನು ಹಿಂದೂ ಹೆಂಗಸರನ್ನು ಅಪಮಿತ್ರಗೊಳಿಸಲು ಸದಾ ಹೊಂಚು ಹಾಕುತ್ತಿರುವ ಕಳ್ಳರೆಂದು ಮುಂದೆ ಎಂದೋ ಒಂದು ದಿನ ಈ ದೇಶವನ್ನೆಲ್ಲ ತಮ್ಮ ಕೋಮಿನವರನ್ನೇ ತುಂಬಿಸಿಬಿಡಲು ಈಗಿನಿಂದಲೇ ನಾಲ್ಕಾರು ಮದುವೆ ಮಾಡಿಕೊಂಡು, ಒಂದೇ ಸಮನೆ ಮಕ್ಕಳನ್ನು ಹುಟ್ಟಿಸುತ್ತಿರುವ ಅತಿವೀರ್ಯರೆಂದು ಯೋಚಿಸಿ ಅಭ್ಯಾಸವಾಗಿರುವರಿಗೆ  ಈ ದೇಶದ ಬರಹಗಳನ್ನು ಪಾಲಿಸಲು ಮುಸ್ಲಿಂ ಬದುಕಿನ ಚಿತ್ರಣ ಅನಿರೀಕ್ಷಿತ ವಾದುದಾದರೂ ಆತ್ಮೀಯವಾದುದು" ಎಂದು ಹೇಳುವ ಇವರ ಮಾತುಗಳಲ್ಲಿ ಅತ್ಯಂತ ಸತ್ಯಾಂಶವಿದೆ ಅಂತ ನಾನು ಕೂಡ ಒಪ್ಪಿಕೊಂಡಿದ್ದೇನೆ.


ಫಕೀರ  ಮಹಮ್ಮದ್ ಕಟ್ಕಾಡಿ ಎಂಬ ಮುಸ್ಲಿಂ ಲೇಖಕರೊಬ್ಬರು  ದಾಖಲಿಸಿರುವ ರಂಜಾನ್ ಉಪವಾಸ ಕಥೆಯ ಸೂಕ್ಷ್ಮತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು, ಬೀಡಿ ಕಟ್ಟಿ ಜೀವನ ಸಾಗಿಸುವ ಬಡತನದ ಒಬ್ಬ ಮಗನಿಗೆ.ಮ ಮೊದಲ ರೋಜಾ. ಸ್ನಾನ, ಪೂಜೆ ಮಾಡಿ ಸಿದ್ಧನಾಗ್ತಾನೆ. 11-12 ಗಂಟೆಗೆಲ್ಲಾ ಹಸಿವಾಗ್ತಾದೆ. ಆಗ ಅವನಮ್ಮ ದೇವರನ್ನು ನೆನಸಿಕೊ ಏನೂ ಆಗಲ್ಲ, ರೋಜಾ ಇದ್ದೇನೆ ಅಂದುಕೊಂಡರೆ ಮತ್ತಷ್ಟು ಹಸಿವಾಗುತ್ತೆ, ಅದನ್ನು ನೆನಸಿಕೊಳ್ಳಬೇಡ ಅಂತಾಳೆ. ಶ್ರೀಮಂತ ಸ್ನೇಹಿತನ ಮನೆಗೆ ಹೋಗ್ತಾನೆ. ಅಲ್ಲಿ ಅಳಿಯ ಬಂದಿರುತ್ತಾನೆ. ಅಳಿಯ ಸಂಜೆ ರೋಜಾ ಬಿಟ್ಟಾಗ ಊಟಕ್ಕೆ ಅಂತ ಮೃಷ್ಟಾನ್ನ ಭೋಜನದ ಅಡುಗೆಗಳು ಮಾಡ್ತಾ ಇರ್ತಾರೆ. ಆ ಮಗುವಿನ ಮತ್ತಷ್ಟು ಹಸಿವಾಗುತ್ತೆ. ಆ ಅಳಿಯ ಅವನ ಕರೆದು ಯಾರಿಗೂ ಕಾಣದ ಹಾಗೆ ಸಿಗರೇಟ್ ತಂದುಕೊಡಲು ಹೇಳುತ್ತಾನೆ. ಹಾಗೆ ತಂದ ಸಿಗರೇಟ್ ನ್ನು ಮುಚ್ಚಿಕೊಂಡು ಸೇದುತ್ತಾನೆ. ಆಗ ಮಗುವಿಗೆ ಶ್ರೀಮಂತರ ಉಪವಾಸ ಹೀಗಿರುತ್ತಾ, ಬಡವರ ಉಪವಾಸ ಹಾಗಿರುತ್ತಾ ಭಾವನೆ ಮೂಡುತ್ತೆ. ಸಂಜೆ ಅಮ್ಮ ಬೀಡಿ ಕಟ್ಟಿ ಬಂದ ನಾಲ್ಕು ಕಾಸಿನಲ್ಲಿ ಅಡುಗೆ ಮಾಡಿ ಬಡಿಸಿ ಉಪವಾಸ ಬಿಡಪ್ಪಾ ಅಂತಾಳೆ. ಅಮ್ಮಾ ರೋಜಾ ಅಂದರೆ ಇಷ್ಟೆನಾ! ನಾವು ದಿನಾ ಹೀಗೆ ಉಪವಾಸ ಇರ್ತೇವೆ. ದಿನಾ ಎರಡೇ ಹೊತ್ತೇ ತಿನ್ನೋದು" ಅನ್ನುವ ಮುಗ್ಧ ಮಗುವಿನ ಸನ್ನಿವೇಶವನ್ನು ಮನಸ್ಸಿಗೆ ಮುಟ್ಟುವ ಹಾಗೆ ಕಟ್ಟಿಕೊಡ್ತಾರೆ.

ಮತ್ತೊಂದು ಕಾದಂಬರಿಯಲ್ಲಿ ಅವರು ದುಬೈ ಶೇಖ್ ಗಳು ಹೈದರಾಬಾದ್ ಗೆ ಬಂದು ಸಣ್ಣ ಸಣ್ಣ ಹುಡುಗಿಯರನ್ನು ತಾತ್ಕಾಲಿಕವಾಗಿ  ನಿಖಾ ಮಾಡಿಕೊಂಡು ಆಮೇಲೆ ಅವರಿಗೆ ತಲ್ಹಾಕ್ ಕೊಟ್ಟು ಹೋಗುವ ಪದ್ಧತಿ ಬಗ್ಗೆ ಬರೆಯುತ್ತಾ, ಆ ಹುಡುಗಿಯರಿಗೆ ಹುಟ್ಟುವ ಮಗುವಿಗೆ ಏನು ಹೆಸರಿಡಬೇಕು? ಅದಕ್ಕೆ ತಂದೆ ಯಾರು? ಅವನೇನನೊ ಒಂದಷ್ಟು ದುಡ್ಡುಕೊಟ್ಟು ಹೊರಟುಬಿಟ್ಟ, ಆಮೇಲೆ? ಅದರ ಜವಾಬ್ದಾರಿ, ದುಡ್ಡಿನಾಸೆಗೆ ತಮ್ಮ ಕರುಳಿನ ಕುಡಿಗಳನ್ನು ಮಾರಿಕೊಳ್ತಾ ಇದ್ದ ಪದ್ಧತಿ (ಈಗ ಅದಕ್ಕೆ ಸ್ವಲ್ಪ ಕಡಿವಾಣ ಬಿದ್ದಿದೆ) ಇದಕ್ಕೆ ಮೌಡ್ಯ ಮತ್ತು ರಾಜಕಾರಣದ ಇಚ್ಛಾಶಕ್ತಿಯ ಕೊರತೆ ಕಾರಣ ಎನ್ನುತ್ತಾರೆ.


ತನ್ನ ಜನರಿಗೆ ಬೇಕಾದ  ಶಿಕ್ಷಣ ಕೊಡೋದಕ್ಕೆ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕು. ವೈಜ್ಞಾನಿಕವಾಗಿ ಶಿಕ್ಷಣ ಕೊಡಬೇಕು. ಈಗಿನ ಹೊಸ ಸಿಲಬಸ್ ನಲ್ಲಿ ಗೋಪೂಜೆ ಹೋಮ ಮಾಡೋದು ಸೇರಿಸಿದ್ದಾರೆ. ಅದು ಬದುಕು ಕಟ್ಟಿಕೊಳ್ಳಲು ಉಪಯುಕ್ತವಿಲ್ಲ ಎನ್ನುತ್ತಾ ಕಥೆ, ಕಾದಂಬರಿ, ಕವನ, ವಿಮರ್ಶೆ ಈ ಎಲ್ಲಾ ಪ್ರಾಕಾರಗಳು ಸಹ ಇವತ್ತು ಕನ್ನಡ ಸಾಹಿತ್ಯಕ್ಕೆ ಸೇರಿ ಕನ್ನಡ ಸಾಹಿತ್ಯವನ್ನು  ಅತ್ಯಂತ ಶ್ರೀಮಂತ ಗೊಳಿಸುತ್ತಿರುವ ಕಾಲಘಟ್ಟ ಇದಾಗಿದೆ. ಇಂತಹ ಕಾಲಫಟ್ಟದಲ್ಲಿ ನಾವು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿವೆ. ಒಂದು ಕಡೆ ಹಿಜಾಬ್, ಇನ್ನೊಂದು ಕಡೆ ಹಿಂದೂ-ಮುಸ್ಲಿಂ ರಾಜಕಾರಣ. ಅದರ ಮಧ್ಯೆ ಮಹಿಳೆಯರು ಎದುರಿಸುತ್ತಿರುವ ಅನೇಕ ಸಮಸ್ಯೆಗಳು. ಅವಳು ಏನು ಹಾಕಬೇಕು, ಏನು ಹಾಕಬಾರದು, ಎಲ್ಲಿ ಹೋಗಬೇಕು ಎಲ್ಲಿ ಹೋಗಬಾರದು? ಹೀಗೆ. ಅವರು ಮಾತ್ರ ಎಲ್ಲಿ ಬೇಕಾದರೂ ಹೋಗಬಹುದು!  ಮಹಿಳೆಯರನ್ನು ಯಾವುದೊ ಒಂದು ಕಾಲಕ್ಕೆ ದೂಡುವ ಪರಿಸ್ಥಿತಿ ನಿರ್ಮಾಣ ಆಗ್ತಾ ಇರೋದನ್ನು ಕಾಣ್ತಾ ಇದ್ದೇವೆ. ಹಿಜಾಬ್ ಹಾಕ್ಕೊಳ್ಳೋದು ಬಿಡೋದು ನನ್ನಿಷ್ಠ, ಕುಂಕುಮ ಹಚ್ಚಿಕೊಳ್ಳೋದು ಬಿಡೋದು ನನ್ನ ಸ್ವಾತಂತ್ರ ಅನ್ನುವ ಧೋರಣೆಗೆ ಎಲ್ಲಾ ಮಹಿಳೆಯರು ಬರಬೇಕು. ಆಗ ಮಾತ್ರ ಈ ಕಂದಾಚಾರಗಳಿಗೆ ಸ್ವಲ್ಪ ಮಟ್ಟಿಗಾದರೂ ಮುಕ್ತಿ ದೊರೆಯಬಹುದು. ಚಡಗರವರ ಶಿವರಾಮ ಕಾರಂತ ವೇದಿಕೆಯಿಂದ ಇಂತಹ ಆತ್ಮೀಯ ಬಳಗ ಚಂದ ಮಾತನಾಡಲು ಅವಕಾಶ ಕೊಟ್ಟಿದ್ದೀರಿ. ಅದಕ್ಕೆ ಧನ್ಯವಾದಗಳು. ಮಾತು ಮುಗಿಸಿದರು

ದೀಪ ಫಡ್ಕೆ ಅವರಿಂದ ಪ್ರತಿಕ್ರಿಯೆ:

ತುಂಬಾ ಸುಂದರವಾದ, ಎಂದಿನಂತೆ ಸವಿವರವಾದ ವರದಿ, ಅಭಿನಂದನೆಗಳು ಶಶಿಕಲಾ. ಒಂದು ಕರೆಕ್ಷನ್, ರಂಜಾನ್ ಕತೆಯ ಕತೆಗಾರ, ಹಿರಿಯ ಕತೆಗಾರ ಫಕೀರ್ ಮಹಮ್ಮದ್ ಕಟ್ಪಾಡಿ ಆಗಬೇಕು. 

ಶಿವರಾಮ ಕಾರಂತ ವೇದಿಕೆಯ ಪರವಾಗಿ ಸಹ ಕಾರ್ಯದರ್ಶಿ ಶಶಿಕಲಾ ಅವರಿಗೆ ಧನ್ಯವಾದಗಳು.

No comments:

Post a Comment