Friday, June 24, 2022

ಯಾವ ಸಂದರ್ಭದಲ್ಲಿ ಮೌನವಾಗಿರಬೇಕು?..

 ಯಾವ ಸಂದರ್ಭದಲ್ಲಿ ಮೌನವಾಗಿರಬೇಕು?...

ವಾಟ್ಸ್ ಆಪ್ ನಿಂದ:


ನಾವು ಮಾತನಾಡುವ ರೀತಿಗೆ ಸಂಬಂಧವನ್ನು ಉಳಿಸುವ ಅಥವಾ ಅಳಿಸುವ ಶಕ್ತಿ ಇರುತ್ತದೆ.

'ಮಾತು ಬೆಳ್ಳಿ, ಮೌನ ಬಂಗಾರ' ಈ ಮಾತು ಅಕ್ಷರಶಃ ಸತ್ಯ. ಯಾವಾಗ ಮಾತನಾಡಬೇಕು, ಯಾವಾಗ ಮೌನವಾಗಿರಬೇಕು ಎಂಬ ಪ್ರಜ್ಞೆಯನ್ನು ಬೆಳೆಸಿಕೊಂಡಿರುವುದೇ ಬುದ್ಧಿವಂತಿಕೆ. ಯಾಕೆಂದರೆ ಕೇವಲ ಮಾತಿನಿಂದಲೇ ಎಷ್ಟೋ ಸಂಬಂಧಗಳು ಕಡಿದುಕೊಳ್ಳುತ್ತವೆ. ಅದರಿಂದಲೇ ಹೇಳುವುದು 'ಮೌನಂ ಕಲಹ ನಾಸ್ತಿ'.

ಯಾವಾಗ ಮಾತನಾಡಬೇಕು, ಯಾವಾಗ ಮೌನವಾಗಿರಬೇಕು ಎಂಬುದರ ಅರಿವಿರಬೇಕು ನಮಗೆ. ಅದು ಅನುಭವದಿಂದ ಬರುವಂತದ್ದು, ಪಕ್ವತೆಯಿಂದ ಬರುವಂತದ್ದು.

ಪ್ರಶ್ನೆಗೆ ಉತ್ತರಿಸಿದ ಎಲ್ಲ ಸನ್ಮಿತ್ರ ಸದಸ್ಯರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಯಾವ ಯಾವ ಸಂದರ್ಭಗಳಲ್ಲಿ ಮೌನವಾಗಿರಬೇಕು ಎಂಬುದನ್ನು ಹೇಳುವುದಾದರೆ..... 👇

🔸 ಜ್ಞಾನಿಗಳ ಮುಂದೆ, ಗುರು-ಹಿರಿಯರ ಮುಂದೆ ನಮ್ಮ ಅಲ್ಪವಿದ್ಯೆ, ಅರ್ಧಂಬರ್ಧ ತಿಳುವಳಿಕೆಯ ಪಾಂಡಿತ್ಯ ಪ್ರದರ್ಶನ ಮಾಡದೇ ಮೌನವಾಗಿರುವುದು ಲೇಸು. 

🔸 ಪೂಜೆಯ ಸಮಯದಲ್ಲಿ, ಪ್ರಾರ್ಥನೆ ಸಲ್ಲಿಸುವಾಗ, ಧ್ಯಾನ ಮಾಡುವಾಗ ಮೌನವಾಗಿರಬೇಕು ಹಾಗೂ ಎದ್ದು ಓಡಾಡಬಾರದು. 

🔸 ದೇವಸ್ಥಾನಗಳಲ್ಲಿ, ದೇವರ ಸನ್ನಿಧಿಯಲ್ಲಿ ಮೌನವಾಗಿರಬೇಕು. ಆಶ್ರಮಗಳಲ್ಲಿ ಆದಷ್ಟೂ ಮೌನವಾಗಿರಬೇಕು.

🔸 ಮತ್ತೊಬ್ಬರ ಮನೆಯಲ್ಲಿ ನಡೆಯುವ ಪೂಜೆ, ದೈವಾರಾಧನೆ.. ಮುಂತಾದ ಶುಭಕಾರ್ಯಗಳಿಗೆ ಆಹ್ವಾನಿತರಾಗಿ ಹೋದಾಗ ಮೌನವಾಗಿರಬೇಕು.

🔸 ಆಧ್ಯಾತ್ಮಿಕ ಪ್ರವಚನ ನಡೆಯುವಲ್ಲಿ, ಪುರಾಣ, ಹರಿಕಥೆ ನಡೆಯುವಲ್ಲಿ ಮನಸ್ಸು ಕೊಟ್ಟು ಆಲಿಸಬೇಕು. ಅಲ್ಲಿ ಕಿವಿಗಳಿಗೆ ಮಾತ್ರ ಕೆಲಸ. ಹರಟೆಗೆ ಆಸ್ಪದ ಕೊಡದೇ ಮೌನವಾಗಿರಬೇಕು.

🔸 ನಮ್ಮ ಮಾತಿಗೆ ಬೆಲೆ, ಗೌರವ ಸಿಗದ ಕಡೆ ಮೌನವಾಗಿರಬೇಕು. ಎದುರಿಗಿರುವ ವ್ಯಕ್ತಿಯಿಂದ ನಮ್ಮ ಮಾತಿಗೆ ಸ್ಪಂದನೆ ಸಿಗದೇ ಇದ್ದಾಗ ಮೌನದಿಂದಿರಬೇಕು ಎದ್ದು ಹೊರ ಬಂದರೂ ಆದೀತು.

🔸 ಅಜ್ಞಾನಿಗಳ ಜೊತೆಯಲ್ಲಿ, ಮೂರ್ಖರ ಜೊತೆಯಲ್ಲಿ, ವಿತಂಡವಾದಿಗಳ ಜೊತೆಯಲ್ಲಿ ವಾದ ಮಾಡದೇ ಮೌನವಾಗಿರುವುದೇ ಲೇಸು.

🔸 ಎಲ್ಲಿ ಮಾತಿನಿಂದ ಕಲಹ ಉಂಟಾಗುವ ಸಂಭವವಿರುತ್ತದೆಯೋ ಅಲ್ಲಿ ಮೌನವಹಿಸಬೇಕು.

🔸 ಮನೆಯಲ್ಲಿ ಇಬ್ಬರು ಸ್ತ್ರೀಯರ ಮಧ್ಯೆ (ಅತ್ತೆ-ಸೊಸೆ) ಮಾತಿನ ವಾಗ್ವಾದ ನಡೆವಾಗ ಯಾರ ಪರ ವಹಿಸದೇ ಸುಮ್ಮನಿರುವುದು ಒಳ್ಳೆಯದು. 

🔸 ನಮ್ಮನ್ನು ಕೆಣಕುವ ಉದ್ದೇಶದಿಂದಲೇ ಕಾಲುಕೆರೆದು ಜಗಳಕ್ಕೆ ಬರುವವರಿಗೆ ಮೌನವೇ ನಮ್ಮ ಉತ್ತರವಾಗಬೇಕು. ಅವರಿಗೆ ಅಸ್ತ್ರ ಸಿಗುವಂತಾಗಬಾರದು.

🔸 ಸಾವಿನ ಮನೆಯಲ್ಲಿ, ಸೂತಕದ ಛಾಯೆ ಆವರಿಸಿರುವ ವಾತಾವರಣದಲ್ಲಿ ಮೌನವಹಿಸಬೇಕು.

🔸 ಕೇಳದೆಯೇ ಯಾರಿಗೂ ಸಲಹೆ ಕೊಡುವ, ಉಪದೇಶ ಮಾಡುವ ಕೆಲಸವನ್ನು ಮಾಡಬಾರದು.

🔸 ಸಿಟ್ಟು ಬಂದಾಗ ಮಾತನಾಡದೇ ಮೌನವಾಗಿರಬೇಕು.. ಯಾವುದೇ ವಿಷಯಕ್ಕೂ ಕೋಪದಿಂದ ಪ್ರತಿಕ್ರಿಯೆ ನೀಡಲೇಬಾರದು. ಅಂತಹ ಸಂದರ್ಭಗಳಲ್ಲಿ ಮಾತನಾಡುವಾಗ ನಾವು ನಮ್ಮ ವಿವೇಚನೆ ಕಳೆದುಕೊಂಡಿರುತ್ತೇವೆ. ಕ್ರೋಧದಿಂದ ಗಟ್ಟಿಧ್ವನಿಯಲ್ಲಿಮತ್ತೊಬ್ಬರ ಮೇಲೆ ರೇಗಾಡಿಬಿಡುತ್ತೇವೆ. ಇದು ಕೇವಲ ಇಬ್ಬರ ನಡುವಿನ ಸಂವಹನವನ್ನು ಮಾತ್ರವಲ್ಲ, ಸಂಬಂಧವನ್ನೇ ಹಾಳು ಮಾಡಿಬಿಡುತ್ತದೆ.

🔸 ಸತ್ಯ ಏನು ಎಂಬುದು ಗೊತ್ತಿಲ್ಲದೇ ಇದ್ದಾಗ ಮಾತನಾಡದೇ ಮೌನದಿಂದಿರುವುದು ಇರುವುದು ಒಳ್ಳೆಯದು. ಕೆಲವೊಂದು ಸಂದರ್ಭಗಳಲ್ಲಿ ಘಟನೆ ಏನು, ನಿಜವಾಗಿಯೂ ಏನಾಗಿದೆ ಎಂಬುದು ತಿಳಿಯದೆಯೂ ಕೆಲವರು ಮಾತನಾಡುವುದಿದೆ. ವಿನಾಃ ಕಾರಣ ಹಬ್ಬಿದ ವದಂತಿಗಳೂ ಅದಾಗಿರಬಹುದು. ಹೀಗೆ ಗೊತ್ತಿಲ್ಲದ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವುದರಿಂದ ಅನಗತ್ಯ ಮನಸ್ತಾಪಗಳಿಗೆ ಕಾರಣವಾಗುವುದರಿಂದ ಮೌನವಾಗಿರುವುದೇ ಲೇಸು. 

🔸 ಎದುರಿಗಿದ್ದವರಿಗೆ ನಮ್ಮ ಮಾತಿನಿಂದ ನೋವುಂಟಾಗುತ್ತದೆ ಅಂತಾದರೆ ಮೌನವಾಗಿರುವುದೇ ಒಳ್ಳೆಯದು. ನಮ್ಮ ಮಾತಿನಿಂದ ಆ ವ್ಯಕ್ತಿಯ ಮನಸ್ಥಿತಿ ಕುಗ್ಗಿ ಹೋಗಬಹುದು. ಅಂತಹ ಸಂದರ್ಭದಲ್ಲಿ ಮೌನವಾಗಿರುವುದೇ ಲೇಸು.

🔸 ಇತರರು ಮಾತನಾಡುವಾಗ ಮೌನವಾಗಿದ್ದುಕೊಂದು ಅವರ ಮಾತು ಮುಗಿಯುವವರೆಗೂ ಕೇಳಿಸಿಕೊಳ್ಳಬೇಕು. ಒಳ್ಳೆಯ ಕೇಳುಗ ಒಳ್ಳೆಯ ಮಾತುಗಾರನೂ ಆಗಬಲ್ಲ. 

🔸 ನಿರಂತರವಾಗಿ ಮಾತನಾಡುತ್ತಿದ್ದರೆ ಎದುರಿಗಿದ್ದವರಿಗೆ ಸಹಿಸಿಕೊಳ್ಳಲೂ ಅಸಾಧ್ಯವಾಗಬಹುದು. ಎಷ್ಟು ಬೇಕೋ ಅಷ್ಟು ಮಾತನಾಡಿ ಮೌನವಾಗಿರುವುದು ಒಳ್ಳೆಯದು.  

🔸 ಇನ್ನೊಬ್ಬರ ನಡವಳಿಕೆಯ ಬಗ್ಗೆ ತೀರ್ಪು ನೀಡಲು ಹೋಗದೇ ಮೌನವಾಗಿರುವುದು ಒಳ್ಳೆಯದು.  

🔸 ಗುಂಪಿನಲ್ಲಿ ಒಂದಷ್ಟು ಜನ ಯಾವುದೋ ವಿಚಾರಕ್ಕೆ ಮಾತನಾಡುತ್ತಿರುತ್ತಾರೆ, ಏನು ಎಂಬುದು ತಿಳಿದಿರುವುದಿಲ್ಲ. ಆದರೂ ಅವರ ಮಧ್ಯೆ ಹೋಗಿ ಸೇರಿಕೊಂಡಾಗ ಎಲ್ಲವೂ ಗೊತ್ತಿದ್ದವರಂತೆ ವರ್ತಿಸಬಾರದು. ಯಾವ ರೀತಿ ಮಾತನಾಡಬೇಕು, ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು ಎಂಬುದರ ಅರಿವು ಇರಬೇಕು. ನಮ್ಮ ಮಾತಿನ ಅಗತ್ಯ ಇಲ್ಲದಿದ್ದರೂ ಅನಗತ್ಯವಾಗಿ ಮಾತನಾಡಿ ಮುಜುಗರಕ್ಕೀಡಾಗಬಾರದು.

🔸 ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವುದು. ಹೀಗೆ ಮಾಡುವುದರಿಂದ ಕೇಳಿಸಿಕೊಳ್ಳುವವರಿಗೂ ಬೇಸರವಾಗುತ್ತದೆ. ಹೇಳಿದ್ದನ್ನೇ ಹೇಳಿದರೆ ಸುಳ್ಳು ಹೇಳುತ್ತಿದ್ದಾರೋ ಏನೋ ಎಂದೆಣಿಸಬಹುದು. ಮಾತಾನಾಡುವಾಗ ಇತರರು ನಮ್ಮ ಮಾತನ್ನು ತುಂಡರಿಸುವ ಮೊದಲು ನಾವೇ ಮಾತಿಗೆ ಪೂರ್ಣ ವಿರಾಮ ಹಾಕಿ ಮೌನವಹಿಸುವುದು ಒಳ್ಳೆಯದು.

ನಾವು ಮಾತನಾಡುವ ರೀತಿಗೆ ಸಂಬಂಧವನ್ನು ಉಳಿಸುವ ಅಥವಾ ಅಳಿಸುವ ಶಕ್ತಿ ಇರುತ್ತದೆ. ಹಾಗಾಗಿ ಅನುಕಂಪ, ಪ್ರೀತಿ, ಸಕಾರಾತ್ಮಕತೆ, ಇತರರನ್ನು ಪ್ರೇರೇಪಿಸುವ, ಪ್ರೋತ್ಸಾಹಿಸುವ ಮಾತುಗಳನ್ನೇ ಆಡಬೇಕು. ಇಲ್ಲವಾದರೆ ಮೌನವಾಗಿರುವುದೇ ಲೇಸು.

ಶಿವಾರ್ಪಣಮಸ್ತು 

ಸದ್ವಿಚಾರ ತರಂಗಿಣಿ.

No comments:

Post a Comment