Wednesday, August 2, 2023

"ಹಿನ್ನೀರ ಓದುಗರು" - ಶೋಭಾ

"ಹಿನ್ನೀರ ಓದುಗರು" 

30/7/2023ರ ಭಾನುವಾರ ವಿಭಾ ಹಾಗೂ ಐಶ್ವರ್ಯಾ ಜೊತೆಯಾಗಿ ಹುಟ್ಟು ಹಾಕಿದ "ಹಿನ್ನೀರ ಓದುಗರು" ವೇದಿಕೆಯ ಪ್ರಾರಂಭ. ನಾವೊಂದು ಎಂಟ್ಹತ್ತು ಮಂದಿ ಓದುಗರು ಹೊಂಗಿರಣ ಕ್ಯಾಂಪಸ್ ನ ಗ್ರಂಥಾಲಯದಲ್ಲಿ ಸೇರಿ ಇಂದಿನ ಮಾತು ಹಾಗೂ ಓದು ನಡೆಯಿತು. ಪರಸ್ಪರ ಪರಿಚಯ, ಇಷ್ಟದ ಪುಸ್ತಕದ ಬಗ್ಗೆ ನಾಲ್ಕು ಮಾತುಗಳು ಹಾಗೂ ನಂತರ ಓದು. ಒಂದೆರಡು ಗಂಟೆಗಳನ್ನು ಅರ್ಥಪೂರ್ಣವಾಗಿ ಕಳೆದ ಖುಷಿ. ನನ್ನ ಹಳೆಯ ಓದುವಿಕೆಯ ಕಾಲವನ್ನು ನೆನಪಿಸಿತು.

ಚಿಕ್ಕವಳಿದ್ದಾಗ ಒಳ್ಳೆಯ ಓದುಗಳಾಗಿದ್ದ ನಾನು ಏನೇನು ಓದಿದ್ದೆ ಎನ್ನುವ ನೆನಪು ಮಸಕು ಮಸಕಾಗಿದೆ. ಆದರೆ ಆಗ ಓದಿದ ಪುಸ್ತಕಗಳಿಂದ ಪಡೆದ ಕನ್ನಡದ ಶಬ್ದ ಸಂಪತ್ತು ನನ್ನೊಳಗೆ ಸುಪ್ತವಾಗಿ ಹುದುಗಿದ್ದು ನನಗೆ ಅಗತ್ಯವಿದ್ದಾಗ ಅಗೋಚರತೆಯಿಂದ ಗೋಚರತೆಗೆ ಬರುವ ಅನುಭವ ನನಗೆ ಬಹಳಷ್ಟು ಬಾರಿ ಆಗಿದೆ. ಪುಸ್ತಕವನ್ನು ಓದಿ ಆನಂದಿಸುವ ನಾನು ಪುಸ್ತಕವನ್ನು ವಿಮರ್ಶಿಸುವುದರಲ್ಲಿ ಅಷ್ಟು ಶಕ್ತಳಲ್ಲ. ಆದರೆ ಪರಿಚಯಿಸಬಲ್ಲೆ.
ನನ್ನ ಮೇಲೆ ಬಹಳ ಪ್ರಭಾವ ಬೀರಿದ ತೊತ್ತೊ - ಚಾನ್ ನ ಬಗ್ಗೆ ನಾನಿಲ್ಲಿ ಬರೆಯುತ್ತಿದ್ದೇನೆ. ಶಿಕ್ಷಣದ ಬಗೆಗಿನ ನನ್ನ ಪರಿಕಲ್ಪನೆಯನ್ನು ಬದಲಿಸಿದ ಹಾಗೂ ಮಗು ಶಿಕ್ಷಣವನ್ನು ಯಾವ ದೃಷ್ಟಿಕೋನದಿಂದ ನೋಡುತ್ತದೆ ಎಂಬ ಒಳನೋಟವನ್ನು ನನಗೆ ಕೊಟ್ಟ ಜಪಾನಿನ ಟಿ ವಿ ಕಲಾವಿದೆ ತೆತ್ಸುಕೊ ಕುರೊಯಾನಾಗಿ ಅವಳ ಶಾಲಾ ಅನುಭವದ ಬಗ್ಗೆ ಬರೆದ ಪುಸ್ತಕ ತೊತ್ತೊ - ಚಾನ್.
ಮಕ್ಕಳನ್ನು ನಿಜವಾಗಿಯೂ ಪ್ರೀತಿಸುತ್ತಿದ್ದ, ಅವರಲ್ಲಿ ಅಪಾರ ನಂಬಿಕೆ ಇರಿಸಿದ್ದ ಸಮರ್ಪಣಾಭಾವದ ವ್ಯಕ್ತಿಯಾಗಿದ್ದ ಸೊಸಾಕು ಕೊಬಾಯಾಶಿಯವರು 1937ರಲ್ಲಿ ನಿರ್ಮಿಸಿದ ರೈಲು ಬೋಗಿಗಳ ಶಾಲೆ ತೊಮೊಯೆ. ಬಡ ರೈತನ ಮಗನಾಗಿದ್ದ ಕೊಬಾಯಾಶಿ ಸದಾ ಪ್ರಕೃತಿಯ ಒಡನಾಟದಲ್ಲಿದ್ದವರು ಹಾಗೂ ಸಂಗೀತದ ಗೀಳು ಹೊಂದಿದವರು. ಅವರು ಮಗುವಿನಲ್ಲಿನ ತನ್ನತನವನ್ನು ಹೊರತಂದು ಆತ್ಮಾಭಿಮಾನವನ್ನು ಉತ್ತೇಜಿಸಲು ಸಾಧ್ಯವಾಗುವಂತಹ ಮುಕ್ತ ಪಠ್ಯಕ್ರಮವನ್ನು ತೊಮೊಯೆದಲ್ಲಿ ಪಾಲಿಸುತ್ತಿದ್ದರು. ಬೆಳಗಿನ ಸಮಯದಲ್ಲಿ ಪಾಠಗಳಿರುತ್ತಿದ್ದವು. ಮಧ್ಯಾಹ್ನದ ಸಮಯವನ್ನು ವಾಯುವಿಹಾರ, ಸಸ್ಯ ಸಂಗ್ರಹಣೆ, ಚಿತ್ರ ಬರೆಯುವುದು, ಹಾಡುವುದು ಹಾಗೂ ಉಪನ್ಯಾಸಗಳಿಗೆ ಮೀಸಲಾಗಿಡುತ್ತಿದ್ದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ತೊಮೊಯೆ ಸುಟ್ಟು ಹೋಗಿ ಜಗತ್ತು ಮಹತ್ತರವಾದುದೊಂದನ್ನು ಕಳೆದುಕೊಳ್ಳುವಂತೆ ಆದದ್ದು ಖೇದಕರ ಸಂಗತಿ.
ಕಲಿಕಾ ಸಮಸ್ಯೆಯಿದ್ದ ತೆತ್ಸುಕೊ ಕುರೊಯಾನಾಗಿಯಂತಹ ಹುಡುಗಿ ತಾನು ತೊಮೊಯೆಯಲ್ಲಿ ಪಡೆದ ಅನುಭವಗಳನ್ನು ಹಾಗೂ ಕಂಡ ಘಟನೆಗಳನ್ನು ತನ್ನ ನೆನಪಿನಂಗಳದಿಂದ ಹಾಗೂ ಹೃದಯಾಂತರಾಳದಿಂದ ಬರೆದು 1982ರಲ್ಲಿ ಬರೆದು ಪ್ರಕಟಿಸಿದ ಪುಸ್ತಕವಿದು. ಎಲ್ಲಾ ವಯೋವರ್ಗದವರು ಓದಿ ತಮ್ಮನ್ನು ಅದರೊಂದಿಗೆ ರಿಲೇಟ್ ಮಾಡಿಕೊಳ್ಳುವಂತೆ ಮಾಡುವ ಪುಸ್ತಕವಿದು. ಈ ಪುಸ್ತಕ ಹೊರಬಂದ ಸಂದರ್ಭದಲ್ಲಿ ಅನೇಕ ಶಿಕ್ಷಕರು ಬಿಡುವಿನ ವೇಳೆಯಲ್ಲಿ ಈ ಪುಸ್ತಕವನ್ನು ಮಕ್ಕಳಿಗೆ ಗಟ್ಟಿಯಾಗಿ ಓದಿ ಹೇಳಿ ಎಲ್ಲರಲ್ಲೂ ಸಂವೇದನೆ ಬೆಳೆಯುವಂತೆ ಮಾಡಿದ ಪುಸ್ತಕವಿದು. ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಸಂಪೂರ್ಣ ಬೇಸತ್ತು ಶಿಕ್ಷಕ ವೃತ್ತಿಯನ್ನೇ ತ್ಯಜಿಸ ಬಯಸಿದ ಬಹಳಷ್ಟು ಶಿಕ್ಷಕರು ಕೊಬಾಯಾಶಿಯವರ ಆಲೋಚನೆಗಳಿಂದ ಸ್ಫೂರ್ತಿಗೊಂಡು ತಮ್ಮ ವೃತ್ತಿಯಲ್ಲಿ ಮುಂದುವರಿಯುವಂತೆ ಮಾಡಿದ ಶಕ್ತಿ ಇರುವ ಪುಸ್ತಕವಿದು. ಓದಿ, ಆನಂದಿಸಿ. 

Posted 3/8/2023

No comments:

Post a Comment