26 ನವಂಬರ್ 2023
ಇವತ್ತು ಸಮೀಪದ ‘ಉಷಾ ಕಿರಣ’ದಲ್ಲಿ ಹಿನ್ನೀರ ಓದುಗರ ಸಿಟ್ಟಿಂಗ್ ಇತ್ತು. ಕಾರಣಾಂತರಗಳಿಂದ ನಾನು ಅವರ ಜೊತೆಗೂಡಲಾಗಲಿಲ್ಲ. ಆ ಸಮಯದಲ್ಲಿ ನಾನು ಮನೆಯಲ್ಲೇ ಭಾರತ - ಭಾರತಿಯ “ಅಗಸ್ತ್ಯ” ಪುಸ್ತಕವನ್ನು ಓದಿದೆ. ತುಂಬಾ ಓದುವ ಗೀಳಿದ್ದ ನಾನು ಬಾಲ್ಯದಲ್ಲಿ ಭಾರತ - ಭಾರತಿಯ ನೂರಾರು ಪುಸ್ತಕಗಳನ್ನು ಓದಿದ್ದೆ. ಬಹಳ ಕಾಲಾನಂತರದಲ್ಲಿ ಇನ್ನೊಂದು ಪುಸ್ತಕ ಇಂದು ಓದಿದೆ.
ಮಕ್ಕಳಲ್ಲಿ ಓದಿನ ಆಸಕ್ತಿ ಬೆಳೆಸಲು ಭಾರತ - ಭಾರತಿ ಪುಸ್ತಕಗಳು ಬಹಳ ಸೂಕ್ತವಾದವುಗಳು! ಈ ಪುಸ್ತಕಗಳನ್ನು ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸುತ್ತದೆ. 1965 ರಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯವು ಭಾರತೀಯ ಜೀವನ ಮೌಲ್ಯಗಳನ್ನು ಜನರ ಹೃದಯ ಮತ್ತು ಮನಸ್ಸಿನಲ್ಲಿ ಪ್ರತಿಪಾದಿಸುವ ಸಾಹಿತ್ಯವನ್ನು ರಚಿಸಲು, ಉತ್ತೇಜಿಸಲು ಮತ್ತು ಪ್ರಕಟಿಸಲು ಮತ್ತು ಭಾರತದ ನಿಜವಾದ ಇತಿಹಾಸ, ಅದರ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಜೀವನಶೈಲಿಯನ್ನು ನೆನಪಿಸಲು ಪುಸ್ತಕ ಪ್ರಕಟಣೆ ಪ್ರಾರಂಭಿಸಿತು. ಇತಿಹಾಸ, ಸಂಸ್ಕೃತಿ, ಸಂಪ್ರದಾಯಗಳು, ಸಾಹಿತ್ಯ, ಆರೋಗ್ಯ, ಜೀವನಚರಿತ್ರೆ, ಆರ್ಥಿಕತೆ, ಪರಿಸರ, ವಿಜ್ಞಾನ, ಗಣಿತ. ವ್ಯಕ್ತಿತ್ವ ವಿಕಸನ ಇತ್ಯಾದಿಗಳು ಪ್ರಕಟಣೆಗಳ ಹಲವು ವಿಷಯಗಳಾಗಿವೆ. ರಾಷ್ಟ್ರೋತ್ಥಾನ ಸಾಹಿತ್ಯದ ಭಾರತ - ಭಾರತಿ ಪುಸ್ತಕ ಸಂಪದವು ಕಂದಮ್ಮಗಳ ಹಿರಿದಾದ ಸಂಪತ್ತು. ಅದರ ವಿಶೇಷತೆಗಳು ಹಲವಾರು : ಮಕ್ಕಳ ಸಾಹಿತ್ಯಲೋಕದಲ್ಲಿ ಹೊಸಶಕೆ ಪ್ರಾರಂಭಿಸಿದ ಕೀರ್ತಿ ‘ಭಾರತ-ಭಾರತಿ ಪುಸ್ತಕ ಮಾಲೆ’ಯದ್ದು.
ಮಾಹಿತಿಗಳೇ ದುರ್ಲಭವಾಗಿದ್ದ ೭೦ರ ದಶಕದಲ್ಲಿ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರ ಸಂಪಾದಕತ್ವದಲ್ಲಿ ೫ ವರ್ಷಗಳಲ್ಲಿ ೫೧೦ (ವಾಲ್ಮೀಕಿಯಿಂದ ಜೆ.ಪಿ. ವರೆಗೆ) ರಾಷ್ಟ್ರೀಯ ಮಹಾಪುರುಷರ ಶೀರ್ಷಿಕೆಯ ಪುಸ್ತಕಗಳ ಪ್ರಕಟಣೆ.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲ ಪ್ರಾಂತಗಳಿಗೂ ಸೇರಿದ ಸಂತರು, ವಿಜ್ಞಾನಿಗಳು, ಕಲಾವಿದರು, ಸಂಗೀತಗಾರರು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಯೋಧರು, ರಾಜರು ಮತ್ತು ಕ್ರೀಡಾಪಟುಗಳು ಹೀಗೆ ಸಮಾಜದ ಎಲ್ಲಾ ಕ್ಷೇತ್ರಗಳನ್ನು ಪ್ರತಿನಿಧಿಸಿದ ಮಹಾಪುರುಷರ ಬಗ್ಗೆ ಪುಸ್ತಕಗಳು.
ಮೊದಲ ಸರಣಿಯ ಬಿಡುಗಡೆಯ ದಿನದಂದೇ ೧,೩೦,೦೦೦ಕ್ಕೂ ಹೆಚ್ಚು ಪುಸ್ತಕಗಳ ಮಾರಾಟ.
ಹಿಂದಿ, ಇಂಗ್ಲೀಷ್, ಮರಾಠಿ, ಮಲೆಯಾಳಂ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದ.
ಇಲ್ಲಿಯವರೆಗೂ ಸುಮಾರು ಎರಡು ಕೋಟಿಗೂ ಹೆಚ್ಚು ಪುಸ್ತಕಗಳ ಮಾರಾಟ.
ಕನ್ನಡ ಸಾಹಿತ್ಯ ಲೋಕದ ಅತ್ಯಂತ ಹಿರಿಯ ಲೇಖಕರಾದ ದ.ರಾ. ಬೇಂದ್ರೆ, ದೇಜಗೌ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ತ.ಸು. ಶಾಮರಾವ್, ರಂ.ಶ್ರೀ. ಮುಗಳಿ, ಜಿ.ಎಸ್. ಶಿವರುದ್ರಪ್ಪ, ಎಂ.ವಿ. ಸೀತಾರಾಮಯ್ಯ, ವಿ.ಎಂ. ಇನಾಂದಾರ್, ಪಾ.ವೆಂ. ಆಚಾರ್ಯ, ತಿ.ತಾ. ಶರ್ಮ, ವ್ಯಾಸರಾಯ ಬಲ್ಲಾಳ, ಎಸ್.ಕೆ. ರಾಮಚಂದ್ರರಾವ್, ನಾ. ಡಿ’ಸೋಜಾ, ಎಚ್ಚೆಸ್ಕೆ, ಹಾಮಾನಾ, ಎಚ್.ಎಸ್. ಪಾರ್ವತಿ, ಟಿ.ಸುನಂದಮ್ಮ, ಹೊ.ವೆ. ಶೇಷಾದ್ರಿ, ಖಾದ್ರಿ ಶಾಮಣ್ಣ, ಎನ್. ರಂಗನಾಥ ಶರ್ಮಾ ಮೊದಲಾದವರು ಈ ಮಾಲೆಯ ಬರಹಗಾರರು ಎಂಬ ಹೆಮ್ಮೆ.
200 ಶೀರ್ಷಿಕೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಪ್ರಕಟಣೆ
ಕಳೆದ ನಾಲ್ಕು ದಶಕದಲ್ಲಿ ದಾಖಲೆ ಮಾರಾಟ ಕಂಡ ಮಕ್ಕಳ ಸಾಹಿತ್ಯ .
ನಿಮ್ಮ ಮನೆಯ ಮಕ್ಕಳಲ್ಲಿ “ಓದಿನ ಹವಾ” ಬೆಳೆಸಬೇಕೆಂದರೆ ಈ ಪುಸ್ತಕಗಳನ್ನು ಮಕ್ಕಳಿಗೆ ಪರಿಚಯಿಸಿ .