ಗುರುವಾರ , 14th March 2024
ಶೋಭಾಳ ಮನೆ - ಹೊಂಗಿರಣ ಶಾಲೆ, ಅಮಟೆಕೊಪ್ಪ, ಸಾಗರ
ನಾನು ಕ್ಯಾಂಪಸ್ಸಿನಲ್ಲಿ ಈಗಿರುವ ಮನೆ ಕಟ್ಟಿದ್ದು 2011ರಲ್ಲಿ. ಅಲ್ಲಿಯವರೆಗೆ ಮಣ್ಣಿನಿಂದ ಕಟ್ಟಲ್ಪಟ್ಟ ತಗ್ಗು ಮಾಡಿನ ಸಕಲವೂ ಒಂದೇ ಆಗಿದ್ದ ಹಾಲ್ ನಂತಹ ಒಂದು ಕಟ್ಟಡದಲ್ಲಿ ನಮ್ಮ ವಾಸವಾಗಿತ್ತು. ಇಲ್ಲಿ ನಿಂತರೆ ಅಡುಗೆಯ ಜಾಗ, ಅಲ್ಲಿ ನಿಂತರೆ ಮಲಗುವ ಜಾಗ, ಮಧ್ಯದಲ್ಲಿ ನಿಂತರೆ ಸಿಟ್ಟಿಂಗ್ ರೂಂ ಎಂದು ನಾವೇ ಮನಸ್ಸಿನಲ್ಲಿ ಆಕೃತಗೊಳಿಸಿಕೊಳ್ಳಬೇಕಾದ ಹಾಲ್ ಅದಾಗಿತ್ತು. ಅದರಲ್ಲಿ ವಾಸವಾಗಿದ್ದ ಎಂಟು ವರ್ಷಗಳು ಮಾತ್ರ ಬಹಳ ಸ್ಮರಣೀಯವಾದ ವರ್ಷಗಳು!
ರವಿಯ ಕಾಲಾನಂತರದಲ್ಲಿ ಕ್ಯಾಂಪಸ್ಸಿನ ಮೇಲ್ಭಾಗದಲ್ಲಿ ಒಂದು ಕಾಂಕ್ರೀಟಿನ ಮನೆ ಕಟ್ಟಿಸಿದೆ. ಒಂದು ಸಿಟ್ ಔಟ್, ಹಾಲ್, ಅಡುಗೆಮನೆ + ಊಟದ ಮನೆ, ಎರಡು ಬೆಡ್ ರೂಂಗಳು ಹಾಗೂ ಒಂದು ಸ್ಟೋರ್ ರೂಂ ಇರುವ ವಿಶಾಲವಾದ ಮನೆ. ನಮ್ಮ ಮನೆಯ ಹಾಲ್ ನಲ್ಲಿ ಇರುವ ‘ಚಾಚು ಕಿಟಕಿ’ ಎಲ್ಲರ ಆಕರ್ಷಣೆ. ಎಲ್ಲರೂ ಪೃಷ್ಠ ಊರಲು ಬಯಸುವ ಜಾಗವದು. ಹಾಗಾಗಿ ಕುಳಿತುಕೊಳ್ಳಲು ಒಂದು ದಿವಾನ್ ಕಾಟ್ ಹಾಗೂ ಒರಗು ಕುರ್ಚಿ ಬಿಟ್ಟರೆ ಬೇರೆ ಪೀಠೋಪಕರಣಗಳನ್ನು ನಾನು ಮಾಡಿಸಲು ಹೋಗಲಿಲ್ಲ.
ಊಟದ ಮನೆಯಲ್ಲೂ ಮೊದಲಿಗೆ ಮೇಜು, ಕುರ್ಚಿ ಏನೂ ಇರಲಿಲ್ಲ. ನನ್ನಮ್ಮ ಬಂದು ನನ್ನೊಡನೆ ಕೆಲವು ಕಾಲ ಉಳಿಯಲು ಶುರು ಮಾಡಿದ ಮೇಲೆ ಒಂದು ದುಂಡನೆಯ ಮೇಜನ್ನು ಮಾಡಿಸಿ ಅದಕ್ಕೆ ಮೂರು ಫೈಬರ್ ಕುರ್ಚಿಗಳನ್ನು ತಂದಿರಿಸಿದೆ. ಅದನ್ನು ಊಟದ ಮನೆಯ ದೊಡ್ಡ ಕಿಟಕಿಯ ಪಕ್ಕದಲ್ಲಿ ಇರಿಸಲಾಯಿತು. ಅದೊಂದು ಬರೀ ತಿನ್ನುವ ಜಾಗವಾಗಿ ಉಳಿಯದೆ ಗಹನವಾದ, ಲಘುವಾದ, ಸುದೀರ್ಘವಾದ, ಮನೋಲ್ಲಾಸಕರವಾದ ಮಾತುಕತೆಯ ಜಾಗವಾಗಿ ಮಾರ್ಪಾಟಾಯಿತೆಂದರೆ ಸುಳ್ಳಲ್ಲ. ಎಂತೆಂತಹ ಅದ್ಭುತ ವಿಚಾರಗಳು, ಪರಿಕಲ್ಪನೆಗಳು ಅಲ್ಲಿಯ ಮಾತುಕತೆಯಲ್ಲಿ ಉದ್ಭವವಾಗಿವೆ ಹಾಗೂ ವಿಕಸನಗೊಂಡಿವೆ ಎಂದರೆ ಯಾರೂ ನಂಬಲಾರರು. ನಮ್ಮಲ್ಲಿ ಐಡಿಯಾಗಳು ಹುಟ್ಟಿದ್ದು ಏರ್ ಕಂಡೀಷನರ್ ಮೀಟಿಂಗ್ ಹಾಲ್ ನಲ್ಲಲ್ಲ; ಬದಲಿಗೆ ಊಟದ ಮನೆಯ ದೊಡ್ಡ ಕಿಟಕಿಯ ಪಕ್ಕದಲ್ಲಿರುವ ದುಂಡನೆಯ ಮೇಜಿನ ಸುತ್ತ! ಆ ಕಿಟಕಿಗೆ ಮಿದುಳು ಇದ್ದಿದ್ದಲ್ಲಿ ಅದೀಗ ಒಂದು ಶ್ರೇಷ್ಠ ಶಿಕ್ಷಣ ತಜ್ಞನಾಗಿ ಬೆಳೆದು ಬಿಟ್ಟಿರುತ್ತಿತ್ತೇನೊ?
ಆ ಕಿಟಕಿಗೆ ಮೂರು ಬಾಗಿಲುಗಳು. ಆ ಬಾಗಿಲನ್ನು ತೆಗೆದರೆ ಹೊರಗಿನ ಹಸಿರು ಹಾಗೂ ತಂಪು ಗಾಳಿಯ ದೃಶ್ಯ ಮತ್ತು ಸ್ಪರ್ಶಾನುಭವ. ಅಲ್ಲಿ ಕುಳಿತು ಅಡುಗೆ ಕಟ್ಟೆಯಿಂದ ಬರುವ ಬಿಸಿ ಬಿಸಿ ದೋಸೆಯನ್ನು ತಿನ್ನುವುದು ಒಂದು ಸುಖಾನುಭವ. ಸಂಜೆಯ ವೇಳೆಗೆ ಮನೆಗೆ ಬರುವ ಆತ್ಮೀಯರೊಂದಿಗೆ ಸಣ್ಣ ಲೋಟದಲ್ಲಿ ಚಹಾವನ್ನು ಹೀರುವುದು ಖುಷಿಯ ವಿಷಯ. ನಮ್ಮಲ್ಲಿಗೆ ಬಂದಿರುವ ಹಲವಾರು ಮಹಾನ್ ಚೇತನಗಳು ಅಲ್ಲಿ ಕುಳಿತು ನಮ್ಮ ಮನೆಯ ಸರಳ ಆಹಾರವನ್ನು ಸವಿದಿದ್ದಾರೆ ಎನ್ನುವುದು ಹೆಮ್ಮೆಯ ವಿಷಯ!
“ಚಾಯ್ ಪೇ ಚರ್ಚಾ” ಇದ್ದ ಹಾಗೆ ನಮ್ಮದು ಚಹಾದೊಂದಿಗೆ ಹರಟೆ. ಆ ಕಿಟಕಿಯು ಮೂಕ ಪ್ರೇಕ್ಷಕನಾಗಿ ನಮ್ಮ ಎಲ್ಲಾ ರೀತಿಯ ಮಾತುಕತೆಗೆ ಸಾಕ್ಷಿ! ನಮ್ಮ ಮನೆಯನ್ನು ಸ್ವಲ್ಪ ವಿಸ್ತರಿಸಲು ಹೊರಟಿರುವ ಕಾರಣ ಕೆಲವೇ ದಿವಸಗಳಲ್ಲಿ ಆ ಕಿಟಕಿ ಮಾಯವಾಗಿ ಅದರಾಚೆ ಇರುವ ಒಂದು ಹಾಲ್ ಹಾಗೂ ರೂಂ ಗಳಿಗೆ ಅದು ಪ್ರವೇಶ ದ್ವಾರವಾಗಲಿದೆ. ಇನ್ನು ಮುಂದೆ ನಮ್ಮ ಹರಟೆಗೆ ಹೊಸದಾಗಿ ನಿರ್ಮಿಸುತ್ತಿರುವ ಹಾಲ್ ನ ದೊಡ್ಡ ಕಿಟಕಿ ಸಾಥ್ ನೀಡಲಿದೆ. ಹೊಸ ಕಿಟಕಿ ಸಿಕ್ಕಲಿದ್ದರೂ ಈ ಕಿಟಕಿ ಸ್ಥಿತ್ಯಂತರವಾಗುತ್ತಿರುವುದು ಸ್ವಲ್ಪ ಖೇದಕರ ವಿಷಯವೇ ಸರಿ!
Posted 16/3/2024
No comments:
Post a Comment