Thursday, March 21, 2024

ಪ್ರೀತಿಯ ಭಾಮ - ಓಂ ಶಾಂತಿ

 21/3/2024 

ಪ್ರೀತಿಯ ಭಾಮ - ಓಂ ಶಾಂತಿ 


ಇವತ್ತು ದಿನಾಂಕ 21 ಮಾರ್ಚ್; ಭಾಮಾ ಇಲ್ಲವಾಗಿ ಸುಮಾರು ಏಳೆಂಟು ಗಂಟೆಗಳೇ ಕಳೆದಿವೆ. ಬೆಳಿಗ್ಗೆಯಿಂದ ನೀರನ್ನು ಕೂಡಾ ಸೇವಿಸಲು ಅಸಮರ್ಥವಾಗಿ ಮಲಗಿದಲ್ಲಿಂದ ಅಲ್ಲಾಡದೇ ಅದು ಬಿದ್ದುಕೊಂಡದ್ದನ್ನು ನೋಡಿ ನಾವು ಅದರ ಕೊನೆಯ ಕ್ಷಣ ಬಂದಿದೆ ಎಂದು ಅಂದಾಜು ಮಾಡಿದ್ದೆವು. ನಾವು ಹತ್ತಿರ ಹೋಗಿ ‘ಭಾಮಾ’ ಎಂದು ಕರೆದಾಗ ಆ ಸ್ಥಿತಿಯಲ್ಲೂ ಅದು ಅಲ್ಪ ಪ್ರಮಾಣದಲ್ಲಿ ಬಾಲ ಅಲ್ಲಾಡಿಸುತ್ತಿತ್ತು. ನಮ್ಮ ಕಾರ್ ಶೆಡ್ಡಿನ ಹೊರಗೆ ಮಲಗಿದ್ದ ಭಾಮಾ ಮಧ್ಯಾಹ್ನದ ಬಿಸಿಲು ಜಾಸ್ತಿಯಾದಾಗ ಹಾಗೆಯೇ ತೆವಳಿಕೊಂಡು ಅಲ್ಲಿಯೇ ಸ್ವಲ್ಪ ನೆರಳಿದ್ದ ಜಾಗಕ್ಕೆ ಹೋಗಿತ್ತು. ಮೂರು ಗಂಟೆಯ ಹೊತ್ತಿಗೆ ಅಲ್ಲಿಯೇ ಕೊನೆಯುಸಿರೆಳೆಯಿತು. ಬಹಳ ಶಾಂತಿಯುತವಾಗಿ ತನ್ನ ಇಹಲೋಕದ ಯಾತ್ರೆಯನ್ನು ಭಾಮಾ ಮುಗಿಸಿತು!

ಭಾಮನಿಗೆ ಸುಮಾರು ಹನ್ನೆರಡು ವರುಷ. ಈವರೆಗೆ 50ರಿಂದ 60 ಮರಿಗಳಿಗೆ ಅದು ಜನ್ಮ ನೀಡಿರಬಹುದು.  ತಾನು ಮರಿ ಹಾಕಿದಾಗ ನಮ್ಮ ಬೇರೆ ಹೆಣ್ಣು ನಾಯಿ ಮರಿ ಹಾಕಿದ್ದರೆ ಅದಕ್ಕೂ ಕೂಡಾ ತಾನೇ ಮೊಲೆಯುಣಿಸುತ್ತಿದ್ದ ಜೀವಿ ಭಾಮಾ. ಕೆಲವೊಮ್ಮೆ ಬೇರೆ ನಾಯಿಯ ಮರಿಗಳಿಗೆ ತನ್ನ ಬರಡು ಮೊಲೆಗಳನ್ನು ಉಣಿಸುವಷ್ಟು ಮಾತೃಪ್ರೇಮ ಭಾಮಾನದ್ದು. ಹೀಗಾಗಿ ನಾವೆಲ್ಲ ಭಾಮಾನಿಗೆ ‘ಮಹಾ ತಾಯಿ’ ಎಂದು ಕರೆಯುತ್ತಿದ್ದೆವು!

ಅದಕ್ಕೆ ವಯಸ್ಸಾದಂತೆ ಪ್ರತಿ ಬಾರಿ ಮರಿ ಹಾಕಿದಾಗ ಅದರ ಮೈ ನಂಜೇರಿ ಮೈ ಕೊಳೆಯುತ್ತಿತ್ತು. ಆಗ ವೈದ್ಯರಿಂದ ಅದಕ್ಕೆ ಔಷಧೋಪಚಾರ ನಡೆಸುವುದಲ್ಲದೇ ಕೆಲವೊಮ್ಮೆ ಅದರ ಮರಿಗಳಿಗೆ ಬಾಟಲಿಯಲ್ಲಿ ಹಾಲುಣಿಸಿ ಬೆಳೆಸುವ ಪ್ರಮೇಯ ಒದಗಿ ಬರುತ್ತಿತ್ತು. ಆಗೆಲ್ಲ ಅದರ ಆರೈಕೆಯನ್ನು ಶೃದ್ಧೆಯಿಂದ ಮಾಡಿದ ಮನ್ನಣೆ ಶಂಕರಿಗೆ ದೊರೆಯುತ್ತದೆ; ಮರಿಗಳಿಗೆ ಬಾಟಲಿಯಲ್ಲಿ ಹಾಲೂಡಿಸಿ ಬೆಳೆಸಿದ ಮನ್ನಣೆ ವಿಭಾನಿಗೆ ಸಿಗುತ್ತದೆ. ಅದರ ಕೊನೆಯ ಮರಿಯೇ ನಮ್ಮ ಪಡ್ಡು. ಅದು ಕೇವಲ ಮರಿ ಹಾಕಿದ್ದಷ್ಟೇ! ಆದರೆ ಪಡ್ಡುವನ್ನು ಬೆಳೆಸಿದ ಶ್ರೇಯಸ್ಸನ್ನು ವಿಭಾ ಮತ್ತು ಶಂಕರಿಗೆ ಕೊಡಬೇಕು.

ಬೆಳಿಗ್ಗೆ ಮನೆಯ ಬಾಗಿಲು ತೆರೆಯುತ್ತಿದ್ದಂತೆ ಬಾಲ ಉದುರಿ ಹೋಗುವಷ್ಟು ಅಲ್ಲಾಡಿಸುತ್ತಾ, ಕೂಗುತ್ತಾ ಬಿಸ್ಕತ್ ಹಾಕುವಂತೆ ಭಾಮಾ ಕೇಳುತ್ತಿದ್ದದ್ದು ನಮ್ಮ ದಿನಚರಿಯ ಸರ್ವೇ ಸಾಮಾನ್ಯ ವಿಷಯ. ಭಾಮಾ ತಿಂಬೋಕಿ. ಎಷ್ಟು ಹೊತ್ತಿಗೆ ಏನನ್ನು ಕೊಟ್ಟರೂ ತಿನ್ನುತ್ತಿತ್ತು. ನಮ್ಮ ಹಳ್ಳಿಯ ಆಡುಭಾಷೆಯಲ್ಲಿ ಹೇಳುವುದಾದರೆ ಭಾಮಾನಿಗೆ ತಿನ್ನುವ ಬಗ್ಗೆ ಬಹಳ “ಆಂಕ್ರ” ಇತ್ತು. ಹೊಟ್ಟೆಗೆ ಎಷ್ಟು ಹಾಕಿದರೂ ಸಾಲದು ಎಂಬಂತೆ ತಿನ್ನುತ್ತಿದ್ದ ಜೀವಿ ಭಾಮಾ!

ಕೋವಿಡ್ ನಂತರದಲ್ಲಿ ಭಾಮಾನ ಜೊತೆಗಿದ್ದ ಉಳಿದ ನಾಲ್ಕು ನಾಯಿಗಳು ವಿಭಿನ್ನ ಕಾರಣಗಳಿಗೆ ಸತ್ತಾಗ ಭಾಮಾ ಮಾನಸಿಕವಾಗಿ ಕುಗ್ಗಿ ಹೋಗಿತ್ತು. ಅದಕ್ಕೆ ಸಾಂಗತ್ಯ ನೀಡಲು ಕೂಡಲೇ ಹತ್ತಿರದ ಒಬ್ಬರ ಮನೆಯಿಂದ ಒಂದು ಊರು ನಾಯಿಯನ್ನು ತಂದದ್ದಾಯಿತು. ಅದು ಬಂದ ನಂತರದಲ್ಲಿ ಭಾಮಾ ಪುನಃ ಚಿಗುರಿಕೊಂಡಿತು. ಉಳಿದ ನಾಯಿಗಳೊಡನೆ ಅಂತಹ ಬಾಂಧವ್ಯ ಹೊಂದಿದ್ದ ಜೀವಿ ಭಾಮಾ. ಎಲ್ಲರನ್ನೂ/ಎಲ್ಲವನ್ನೂ ನಿಷ್ಪಕ್ಷಪಾತವಾಗಿ ಪ್ರೀತಿಸುವ ಗುಣವಿದ್ದ ಭಾಮಾನನ್ನು ನಾವು ಸದಾ ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕಲ್ಲವೆ???. 

Posted 22/3/2024 

No comments:

Post a Comment