Saturday, April 18, 2026
ಖಾಲಿ ಕೂತಿದ್ದೆ. ಈ ರೀತಿ ‘ಖಾಲಿ’ ಕೂರುವುದು ನನ್ನಂತಹ ಮನಸ್ಥಿತಿಯವರಿಗೆ ಕಷ್ಟ. ತಲೆಯಲ್ಲಿ ನೂರೆಂಟು ವಿಚಾರಗಳು ಗಿರಿಗಿಟ್ಟಲೆಯಂತೆ ತಿರುಗುವ ನನ್ನ ತಲೆ ‘ಖಾಲಿ’ ಮಾಡಿಕೊಂಡು ಕೂರುವುದು ನನ್ನ ಪಾಲಿಗೆ ಒಂದು ಸಾಧನೆಯೇ ಸೈ!
ವಿಶಾಲವಾದ ಆಟದ ಮೈದಾನದಲ್ಲಿ ಮೂರ್ನಾಲ್ಕು ರೌಂಡ್ ವಾಕಿಂಗ್ ಮಾಡಿದೆ. ಒಂದು ಕಟ್ಟೆಯ ಮೇಲೆ ಕುಳಿತು ಒಂದಿಷ್ಟು ಮೊಬೈಲ್ ಸ್ಕ್ರಾಲ್ ಮಾಡಿದೆ. ಇನ್ನೂ ಬೆಳಕು ಸಾಕಷ್ಟು ಇದ್ದ ಕಾರಣ ಸುತ್ತಲೂ ನೋಡುತ್ತಾ ಕುಳಿತೆ. ನಮ್ಮ ನಾಯಿ ಸುಕ್ಕು ತನ್ನ ಬೆನ್ನಿನ ಮೇಲಿದ್ದ ಗಾಯಕ್ಕೆ ಮುತ್ತುತ್ತಿದ್ದ ನೊಣಗಳನ್ನು ಓಡಿಸುವುದರಲ್ಲಿ ಮಗ್ನವಾಗಿತ್ತು. ನಾನು ಅದರ ಹತ್ತಿರ ಹೋಗಿ ಫೋಟೊ ತೆಗೆದರೂ ಅದು ನನ್ನನ್ನು ಗಮನಿಸದೆ, ನನ್ನ ಕರೆಗೆ ಸ್ಪಂದಿಸದೆ ತನ್ನ ಮೈಮೇಲೆ ಬರುತ್ತಿದ್ದ ನೊಣಗಳ ಜೊತೆಗಿನ ಹೋರಾಟದಲ್ಲೇ ಮುಳುಗಿ ಹೋಗಿತ್ತು. ಅದು ನನಗೆ ಸ್ಪಂದಿಸದೇ ಇದ್ದಾಗ ಅದರ ನಿರ್ಲಕ್ಷ್ಯವನ್ನು ತಡೆದುಕೊಳ್ಳಲಾರದೆ ಪುನಃ ಅತ್ತಿತ್ತ ನೋಡತೊಡಗಿದೆ. ಬೇಲಿ ಸಾಲಿನ ಮೇಲೆ ಬೆಳೆದಿದ್ದ ಬಳ್ಳಿಯಲ್ಲಿ ಸುಂದರವಾದ ತಿಳಿ ನೇರಳೆ ಬಣ್ಣದ ಹೂವೊಂದನ್ನು ಕಂಡೆ. ಹತ್ತಿರ ಹೋಗಿ ನೋಡಿದಾಗ ಅದರ ಮೇಲೊಂದು ಚಿಗಳಿ(ಇರುವೆ) ಕಂಡಿತು. ಇರುವೆ ಓಡಾಡುತ್ತಿದ್ದರೂ ಹೂವು ಸುಮ್ಮನಿತ್ತು. ನೊಣದೊಡನೆ ಹೋರಾಡುತ್ತಿದ್ದ ಸುಕ್ಕುವಿನ ಭಾವಾರೋಷ ಆ ಹೂವಲ್ಲಿ ನನಗೆ ಕಾಣಲಿಲ್ಲ. ಒಂದು ರೀತಿಯ ನಿರ್ಲಿಪ್ತ ಭಾವವನ್ನು ಆ ಹೂವಿನಲ್ಲಿ ನಾ ಕಂಡೆ. “ಇರುವೆ, ಕ್ರಿಮಿ, ಕೀಟಗಳು ಏನೇ ತನ್ನ ಮೇಲೆ ಬಂದರೂ ನಾನೇನು ತಲೆಕೆಡಿಸಿಕೊಳ್ಳುವುದಿಲ್ಲ” ಎನ್ನುವ ಮನಸ್ಥಿತಿ ಅದು ಹೊಂದಿದೆಯೇನೊ ಎಂದು ನನಗನಿಸಿತು. ವಿರೋಧಿಸಿದರೆ ಮಾತ್ರ ಹೋರಾಡುವ ಅಗತ್ಯ ಹುಟ್ಟುತ್ತದೆ; ಇರುವುದನ್ನು ಇರುವ ಹಾಗೆ ಸ್ವೀಕರಿಸಿದರೆ ಹೋರಾಟದ ಪ್ರಶ್ನೆಯೇ ಬರುವುದಿಲ್ಲ ಎನ್ನುವ ಬೋಧನೆ ಅದು ಮಾಡುತ್ತಿದೆಯೇನೊ ಎಂದನಿಸಿತು. ಪ್ರತಿರೋಧ ಹಾಗೂ ನಿರ್ಲಿಪ್ತತೆ ಇವೆರಡನ್ನು ದೃಶ್ಯಿಸುವ ಅವಕಾಶ ನನಗೆ ಸಿಕ್ಕಿತು. ಅಥವಾ ಕಂಡ ದೃಶ್ಯಗಳೆರಡಕ್ಕೆ ನನ್ನ ಆಖ್ಯಾಯಿಕೆ ಇದಾಗಿರಬಹುದು. ಎಲ್ಲವೂ ಕಾಣುವುದು “ಅವರವರ ಭಾವಕ್ಕೆ ತಕ್ಕಂತೆ ತಾನೆ?”
Posted 19/4/2026

No comments:
Post a Comment