Tuesday, April 28, 2026

ಮುಕೇಶ್ ಅವರ ಹಾಡು - ಶೋಭಾ ಸೋಮಯಾಜಿ

 ಭಾನುವಾರ, ಏಪ್ರಿಲ್ 26, 2026 


ಇವತ್ತು ಸಂಜೆ ಮುಕೇಶ್ ಅವರ ಹಾಡುಗಳನ್ನು ಕೇಳುತ್ತಿದ್ದೆ. ಎಂತಹ ಭಾವಪೂರ್ಣ ಸಲ್ಲಿಕೆ ಅವರದ್ದು! ಅನುಭವಿಸಿ ಹಾಡುವುದು ಒಂದು ಕಲೆ. ಯಾವುದೇ ಕೆಲಸವನ್ನು ಪ್ರೀತಿಸಿ, ಅನುಭವಿಸಿ, ಪ್ರಾಮಾಣಿಕತೆಯಿಂದ ಮಾಡುವುದು ಒಂದು ಕಲೆ. ಈ ರೀತಿ ‘ಒಳಗೊಂಡು’ ಮಾಡುವ ಕೆಲಸದ ಗುಣಮಟ್ಟ ಯಾವಾಗಲೂ ಉತ್ಕೃಷ್ಟವಾಗಿರುತ್ತದೆ. ಅಂತಹ ಉತ್ಕೃಷ್ಟತೆಯನ್ನು ನಾನು ಮುಕೇಶ್ ಅವರ ಕೆಲವು ಹಾಡುಗಳಲ್ಲಿ ಗಮನಿಸಿ ಆಸ್ವಾದಿಸಿದೆ. 


ಬಹಳ ವರ್ಷಗಳ ಹಿಂದೆ ಶ್ರೀಮತಿ ಪದ್ಮಾ ಸುಬ್ರಹ್ಮಣ್ಯಂ ಅವರ ನೃತ್ಯವನ್ನು ಬಹಳ ಹತ್ತಿರದಿಂದ ನೋಡುವ ಅವಕಾಶ ನನಗೆ ಸಿಕ್ಕಿತ್ತು. ಅವರ ನೃತ್ಯದಷ್ಟೇ ಉತ್ಕೃಷ್ಟತೆ ಅವರ ಹಿಮ್ಮೇಳಕ್ಕಿತ್ತು. ಅದೊಂದು ಅಭೂತಪೂರ್ವವಾದ ಕಾರ್ಯಕ್ರಮವಾಗಿತ್ತು. ಆ ಇಡೀ ತಂಡಕ್ಕೆ ಅವರವರು ಮಾಡುವ ಕೆಲಸದಲ್ಲಿ ತಾದಾತ್ಮ್ಯತೆ ಇತ್ತು ಹಾಗೂ ಅರ್ಪಣಾ ಮನೋಭಾವ ಕೂಡಾ ಇತ್ತು. ಈ ರೀತಿಯ ಮನಸ್ಥಿತಿ ಎಂತಹವರನ್ನೂ ಶ್ರೇಷ್ಠತೆಯತ್ತ ಕೊಂಡೊಯ್ಯುತ್ತದೆ ಎನ್ನುವ ವಿಷಯದಲ್ಲಿ ಅನುಮಾನವೇ ಇಲ್ಲ.

ಇವತ್ತು ದಿನಪತ್ರಿಕೆಯಲ್ಲಿ ಡಾಕ್ಟರ್ ರಾಜ್ ಕುಮಾರ್ ಅವರ ಬಗ್ಗೆ ಒಂದು ಲೇಖನವಿತ್ತು. ಅವರ ಯಾವ ಗುಣಗಳಿಂದಾಗಿ ಅವರು ಎಲ್ಲರೊಳಗೊಂದಾಗಿ ಒಂದು “ಲೆಜೆಂಡ್” ಎಂದು ಪರಿಗಣಿಸಲ್ಪಟ್ಟಿದ್ದಾರೆ ಎಂಬ ಬಗೆಗಿನ ಲೇಖನವದು. ಆ ಲೇಖನದ ವಿಷಯ ಹಾಗೂ ಬರಹ ಎರಡೂ ಮನಮುಟ್ಟುವಂತೆ ಇತ್ತು. ಎಷ್ಟೋ ಜನರಲ್ಲಿ ಅಪ್ರತಿಮ ಪ್ರತಿಭೆ ಇದ್ದರೂ ಅವರೆಲ್ಲರೂ ಎಲ್ಲರ ಮನದಾಳದೊಳಗಿಳಿಯಲು ಆಗದಿರುವುದು ಅವರ ಕೆಲವು ದೌರ್ಬಲ್ಯಗಳಿಂದ ಎನ್ನುವುದು ವಿದಿತವಾದದ್ದು. ಬರೀ ಪ್ರತಿಭೆಯೊಂದಿದ್ದರೆ ಸಾಲದು, ಅದರೊಡನೆ ಕೆಲಸದೊಡನೆಯ ತಾದಾತ್ಮ್ಯತೆ, ಪ್ರಾಮಾಣಿಕ ಪ್ರಯತ್ನ, ಮಾಡಲೇ ಬೇಕೆಂಬ ಉತ್ಕಟ ಭಾವವಿದ್ದಾಗ ಆ ವ್ಯಕ್ತಿ ಅಸಾಮಾನ್ಯನಾಗುವುದು ಖಂಡಿತ.

ಹೀಗಾಗಿ ನಮ್ಮಲ್ಲಿ ಅಸಾಮಾನ್ಯ ಹಾಗೂ ಅದ್ವಿತೀಯ ವ್ಯಕ್ತಿಗಳನ್ನು, ಕಲಾಕೃತಿಗಳನ್ನು, ಕಲಾವಿದರನ್ನು, ಲೇಖಕರನ್ನು, ಕಥೆ-ಕಾದಂಬರಿಗಳನ್ನು, ಸಿನೆಮಾ ಹಾಗೂ ನಾಟಕಗಳನ್ನು ನೋಡಲು ಸಾಧ್ಯವಾಗಿದೆ.

ಇದು ಬರೀ ಕಲೆಗೆ ಸಂಬಂಧಪಟ್ಟ ವಿಷಯವಲ್ಲ. ನಾವು ಪ್ರತಿದಿನ ಮಾಡುವ ಕೆಲಸದಲ್ಲೂ ಇಂತಹ ಅಂಶಗಳನ್ನು ಬಳಸಿದಾಗ ನಾವೂ ನಮ್ಮ ನಮ್ಮ ರಂಗದಲ್ಲಿ ಶ್ರೇಷ್ಠರಾಗಬಹುದು. ಅದು ಅಡುಗೆಯಾಗಿರಬಹುದು, ಪಾಲಕತ್ವವಾಗಿರಬಹುದು, ಮನೆಯ ಹಾಗೂ ನಮ್ಮ ಜೀವನೋಪಾಯದ ಕೆಲಸದ ನಿರ್ವಹಣೆಯಾಗಿರಬಹುದು…. ಇವೆಲ್ಲದರಲ್ಲೂ ನಾವು ಅರ್ಪಣಾ ಮನೋಭಾವದಿಂದ ಪ್ರಾಮಾಣಿಕ ಪ್ರಯತ್ನವನ್ನು ಹಾಕಿದಾಗ ಅದು ನಮ್ಮನ್ನು ಶ್ರೇಷ್ಠರನ್ನಾಗಿಸುವುದರಲ್ಲಿ ಸಂಶಯವಿಲ್ಲ. ಇದು ಶ್ರೇಷ್ಠತೆಯ ವ್ಯಸನವಾಗದಿದ್ದರೆ ನಾವು ಸಹ್ಯ ಹಾಗೂ ಸಭ್ಯ ಬದುಕನ್ನು ಬಾಳಲು ಸಾಧ್ಯ! 


Posted  29/4/2026

No comments:

Post a Comment